“ಖಂಡಿತವಾಗಿಯೂ ಆಕಾಶವು ತೆರೆದಿದೆ”!
“ಹಾರುವ ಆಶೆಯು, ಮಾನವಕುಲದಷ್ಟೇ ಹಳೆಯದ್ದಾಗಿದೆ” ಎಂದು, ವಾಯುಯಾನದ ಪೂರ್ವ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಇತಿಹಾಸಕಾರ ಬರ್ಟಾಲ್ಟ್ ಲಾಫರ್ ಹೇಳಿದರು. ಪ್ರಾಚೀನ ಗ್ರೀಕ್, ಐಗುಪ್ತ, ಅಶ್ಶೂರ್ಯ, ಮತ್ತು ಪೌರಾತ್ಯ ಪೌರಾಣಿಕ ಕಥೆಗಳಲ್ಲಿ, ಹಾರಲು ಪ್ರಯತ್ನಿಸಿದಂತಹ ರಾಜರು, ದೇವತೆಗಳು, ಮತ್ತು ವೀರನಾಯಕರುಗಳ ಅಸಂಖ್ಯಾತ ಪುರಾಣ ಕಥೆಗಳಿವೆ. ಬಹುಮಟ್ಟಿಗೆ ಪ್ರತಿಯೊಂದು ಕಥೆಯಲ್ಲಿ, ಮನುಷ್ಯರು ಪಕ್ಷಿಗಳಂತೆ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಲು ಪ್ರಯತ್ನಿಸುವ ಸಂಗತಿಯು ಒಳಗೂಡಿರುತ್ತದೆ.
ಉದಾಹರಣೆಗಾಗಿ, ಯೇಸು ಕ್ರಿಸ್ತನ ಜನನದ 2,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಜೀವಿಸಿದನೆಂದು ಭಾವಿಸಲಾಗುವ, ಬುದ್ಧಿವಂತ ಮತ್ತು ಸಾಹಸಿ ಸಾಮ್ರಾಟ ಶೂನ್ ಕುರಿತಾಗಿ ಚೀನೀ ಜನರು ಹೇಳುತ್ತಾರೆ. ಪುರಾಣ ಕಥೆಗನುಸಾರ, ಒಂದು ಸಲ ಶೂನ್, ಉರಿಯುತ್ತಿದ್ದ ಉಗ್ರಾಣವೊಂದರ ಮೇಲೆ ಸಿಕ್ಕಿಬಿದ್ದಿದ್ದನು. ಅವನು ಗರಿಗಳನ್ನು ಧರಿಸಿ ಹಾರುವ ಮೂಲಕ ಅಲ್ಲಿಂದ ತಪ್ಪಿಸಿಕೊಂಡನು. ಇನ್ನೊಂದು ವೃತ್ತಾಂತವು, ಅವನು ಒಂದು ಗೋಪುರದ ಮೇಲಿಂದ ಹಾರಿ, ಸುರಕ್ಷಿತವಾಗಿ ನೆಲವನ್ನು ತಲಪಲು ದಂಟುಗಳಿಂದ ತಯಾರಿಸಲ್ಪಟ್ಟ ಎರಡು ದೊಡ್ಡ ಟೋಪಿಗಳನ್ನು ಉಪಯೋಗಿಸಿದನೆಂದು ಹೇಳುತ್ತದೆ.
ಗ್ರೀಕರ ನಡುವೆ, ಒಬ್ಬ ಮಹಾನ್ ಕಲಾಕಾರ ಮತ್ತು ಆವಿಷ್ಕಾರಕನಾದ, ಡೆಡಲಸ್ನ ಕುರಿತಾದ 3,000 ವರ್ಷ ಹಳೆಯ ಕಥೆಯಿದೆ. ಅವನು ಮತ್ತು ಅವನ ಮಗನಾದ ಇಕರಸನು, ಕ್ರೀಟ್ನಲ್ಲಿ ಬಂಧಿಗಳಾಗಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲು ಅವನು ಗರಿಗಳು, ಹುರಿ, ಮತ್ತು ಮೇಣವನ್ನು ಉಪಯೋಗಿಸುತ್ತಾ ರೆಕ್ಕೆಗಳನ್ನು ತಯಾರಿಸಿದನು. “ಖಂಡಿತವಾಗಿಯೂ ಆಕಾಶವು ತೆರೆದಿದೆ, ಮತ್ತು ನಾವು ಆ ಮಾರ್ಗದಿಂದಲೇ ಹೋಗುವೆವು” ಎಂದು ಡೆಡಲಸನು ಘೋಷಿಸಿದನು. ಆರಂಭದಲ್ಲಿ ರೆಕ್ಕೆಗಳು ಸರಾಗವಾಗಿ ಕೆಲಸನಡಿಸಿದವು. ಆದರೆ, ಆಕಾಶದಲ್ಲಿ ತೇಲುವ ತನ್ನ ಸಾಮರ್ಥ್ಯದಿಂದ ಪರವಶನಾದ ಇಕರಸನು, ಇನ್ನೂ ಹೆಚ್ಚು ಹೆಚ್ಚು ಮೇಲಕ್ಕೆ ಹಾರಿದನು. ಆಗ ಸೂರ್ಯನ ಕಾವು, ಅವನ ರೆಕ್ಕೆಗಳನ್ನು ಬಂಧಿಸಿಟ್ಟಿದ್ದ ಮೇಣವನ್ನು ಕರಗಿಸಿತು. ಅವನು ಕೆಳಗಿದ್ದ ಸಮುದ್ರದೊಳಗೆ ಬಿದ್ದು ಸತ್ತುಹೋದನು.
ಇಂತಹ ಕಥೆಗಳು, ನಿಜವಾಗಿಯೂ ಹಾರಲು ಹಾತೊರೆಯುತ್ತಿದ್ದ ಆವಿಷ್ಕಾರಕರ ಮತ್ತು ತತ್ವಜ್ಞಾನಿಗಳ ಕಲ್ಪನಾಶಕ್ತಿಗೆ ಸ್ಫೂರ್ತಿ ನೀಡಿದವು. ಸಾ.ಶ. ಮೂರನೆಯ ಶತಮಾನದಷ್ಟು ಹಿಂದೆ, ಚೀನೀ ಜನರು ಗಾಳಿಪಟಗಳನ್ನು ತಯಾರಿಸಿ ಅವುಗಳೊಂದಿಗೆ ಪ್ರಯೋಗಗಳನ್ನು ನಡಿಸುತ್ತಿದ್ದರು. ಈ ರೀತಿಯ ಪ್ರಯೋಗವು ಯೂರೋಪಿನಲ್ಲಿ ಆರಂಭವಾಗುವುದಕ್ಕಿಂತಲೂ ಮುಂಚೆಯೇ, ಅವರಿಗೆ ವಾಯುಯಾನ ಶಾಸ್ತ್ರದ ನಿರ್ದಿಷ್ಟ ಸೂತ್ರಗಳು ತಿಳಿದಿದ್ದವೆಂಬುದನ್ನು ಅದು ತೋರಿಸಿತು. 15ನೆಯ ಶತಮಾನದಲ್ಲಿ, ವೆನಿಸ್ ನಗರದ ಒಬ್ಬ ವೈದ್ಯ ಜೊವಾನಿ ಡಾ ಫೊಂಟಾನಾ, ಕೋವಿಮದ್ದನ್ನು ಸ್ಪೋಟಿಸುವ ಮೂಲಕ ಹಾರಿಸಲ್ಪಟ್ಟ ಮರ ಮತ್ತು ಕಾಗದದ ಸರಳವಾದ ರಾಕೆಟ್ಗಳೊಂದಿಗೆ ಪ್ರಯೋಗ ನಡಿಸಿದನು. ಸುಮಾರು 1420ರಷ್ಟಕ್ಕೆ, ಫೊಂಟಾನಾ ಬರೆದುದು: “ಕೃತಕವಾಗಿ ಚಲಿಸುವಂತೆ ಮಾಡಬಹುದಾದ ರೆಕ್ಕೆಗಳನ್ನು ಮನುಷ್ಯನಿಗೆ ಜೋಡಿಸಲು ಸಾಧ್ಯವಿದೆಯೆಂಬುದರ ವಿಷಯದಲ್ಲಿ ನನಗೆ ಖಂಡಿತವಾಗಿಯೂ ಯಾವುದೇ ಸಂದೇಹವಿಲ್ಲ. ಆ ರೆಕ್ಕೆಗಳಿಂದಾಗಿ ಅವನು ಗಾಳಿಯಲ್ಲಿ ಹಾರಬಹುದು ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದು, ಗೋಪುರಗಳನ್ನು ಹತ್ತಬಹುದು ಮತ್ತು ಜಲಾಶಯಗಳನ್ನು ದಾಟಬಹುದು.”
16ನೆಯ ಶತಮಾನದ ಆದಿ ಭಾಗದಲ್ಲಿ, ಒಬ್ಬ ಕಲಾಕಾರ, ಶಿಲ್ಪಿ, ಹಾಗೂ ಕುಶಲ ಮೆಕ್ಯಾನಿಕಲ್ ಇಂಜಿನಿಯರನಾಗಿದ್ದ ಲಿಯೊನಾರ್ಡೊ ಡವಿಂಚಿ, ಹೆಲಿಕಾಪ್ಟರ್ಗಳು ಮತ್ತು ಪ್ಯಾರಶೂಟ್ಗಳು ಹಾಗೂ ಮೇಲೆಕೆಳಗೆ ಆಡಿಸಬಲ್ಲ ರೆಕ್ಕೆತುದಿಗಳುಳ್ಳ ಗ್ಲೈಡರ್ಗಳಿಗಾಗಿ ಒಡ್ಡೊಡ್ಡಾದ ವಿನ್ಯಾಸಗಳನ್ನು ಬಿಡಿಸಿದನು. ಅವನು ಯೋಜಿಸಿದಂತಹ ಹಾರುವ ಯಂತ್ರಗಳಲ್ಲಿ ಕಡಿಮೆಪಕ್ಷ ಕೆಲವೊಂದು ಯಂತ್ರಗಳ ನಮೂನೆಗಳನ್ನಾದರೂ ಅವನು ತಯಾರಿಸಿರಬಹುದೆಂದು ರುಜುವಾತು ಸೂಚಿಸುತ್ತದೆ. ಆದರೆ, ಡವಿಂಚಿಯ ಯಾವುದೇ ವಿನ್ಯಾಸಗಳು ಪ್ರಾಯೋಗಿಕವಾಗಿರಲಿಲ್ಲ.
ತದನಂತರದ ಮುಂದಿನ ಎರಡು ಶತಮಾನಗಳಲ್ಲಿ, ತಮ್ಮ ದೇಹಗಳಿಗೆ ಕೃತಕವಾದ ರೆಕ್ಕೆಗಳನ್ನು ಕಟ್ಟಿಕೊಂಡು, ಬೆಟ್ಟಗಳು ಮತ್ತು ಗೋಪುರಗಳಿಂದ ಜಿಗಿದು ಆ ರೆಕ್ಕೆಗಳನ್ನು ಬಡಿಯಲು ಪ್ರಯತ್ನಿಸಿದ ಧೀರ ಪುರುಷರ ವೃತ್ತಾಂತಗಳು ಹಲವಾರು ಇವೆ. ಆ ಆರಂಭದ ‘ಟೆಸ್ಟ್ ಪೈಲಟರು’ ಧೈರ್ಯಶಾಲಿ ಮತ್ತು ಸಾಹಸಮಯ ಜನರಾಗಿದ್ದರೂ, ಅವರ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿದ್ದವು.
ಬೆಂಕಿ ಬಲೂನುಗಳು ಮತ್ತು “ದಹನಶೀಲ ಗಾಳಿ”
1783ರಲ್ಲಿ, ವಾಯುಯಾನ ಶಾಸ್ತ್ರದ ದೊಡ್ಡ ಸಾಧನೆಯ ಕುರಿತಾದ ಸ್ತಬ್ಧಗೊಳಿಸುವಂತಹ ಸುದ್ದಿಯು, ಪ್ಯಾರಿಸ್ ಮತ್ತು ಫ್ರಾನ್ಸ್ನ ರಾಜ್ಯಗಳಾದ್ಯಂತ ಹಬ್ಬಿತು. ಕಾಗದದ ಚಿಕ್ಕ ಬಲೂನುಗಳಲ್ಲಿ ಬಿಸಿ ಗಾಳಿಯನ್ನು ತುಂಬಿಸಿ ಉಬ್ಬಿಸಿಕೊಳ್ಳುವ ಮೂಲಕ, ಅವು ವೇಗವಾಗಿ ಮತ್ತು ಸಲೀಸಾಗಿ ಆಕಾಶಕ್ಕೆ ಏರುವಂತೆ ಮಾಡಸಾಧ್ಯವಿದೆ ಎಂದು ಸೋಸೇಫ್-ಮೀಶೆಲ್ ಮತ್ತು ಸಾಕ್ಏಟ್ಯನ್ ಮಾಂಟ್ಗಾಲ್ಫ್ಯರ್ ಎಂಬ ಇಬ್ಬರು ಸಹೋದರರು ಕಂಡುಹಿಡಿದರು. ಬೆಂಕಿ ಬಲೂನು ಎಂದು ಕರೆಯಲಾದ ಅವರ ಪ್ರಪ್ರಥಮವಾದ ದೊಡ್ಡ ಬಲೂನು, ಕಾಗದ ಮತ್ತು ಬಟ್ಟೆಯಿಂದ ತಯಾರಿಸಲ್ಪಟ್ಟಿದ್ದು, ದೊಡ್ಡ ಬೆಂಕಿಯಿಂದ ಬಂದ ದುರ್ಗಂಧಭರಿತ ಹೊಗೆಯಿಂದ ಉಬ್ಬಿಸಲ್ಪಟ್ಟಿತು. ಜನರಿಲ್ಲದ ಆ ಬಲೂನು, ತನ್ನ ಪ್ರಪ್ರಥಮ ಹಾರಾಟದಲ್ಲಿ, 1,800 ಮೀಟರುಗಳಿಗಿಂತಲೂ ಹೆಚ್ಚು ಎತ್ತರಕ್ಕೇರಿತು. 1783ರ ನವೆಂಬರ್ 21ರಂದು, ಆ ಬಲೂನಿನಲ್ಲಿ ಇಬ್ಬರು ಪ್ರಯಾಣಿಕರು, ಪ್ಯಾರಿಸ್ನಾದ್ಯಂತ 25 ನಿಮಿಷಗಳ ವರೆಗೆ ಸವಾರಿ ಮಾಡಿದರು. ಆ ಪ್ರಯಾಣಿಕರನ್ನು ಸಾರ್ವಜನಿಕರು ವಾಯುಪಯಣಿಗರು (ಏರೋನಾಟ್ಸ್) ಎಂದು ಹೆಸರಿಸಿದರು. ಅದೇ ವರ್ಷದಲ್ಲಿ ಇನ್ನೊಬ್ಬ ಆವಿಷ್ಕಾರಕನಾದ ಸಾಕ್ ಶಾರ್ಲ್, ಆ ಸಮಯದಲ್ಲಿ “ದಹನಶೀಲ ಗಾಳಿ” ಎಂದು ಕರೆಯಲಾಗುತ್ತಿದ್ದ ಹೈಡ್ರೊಜನ್ನಿಂದ ತುಂಬಿಸಿ ಉಬ್ಬಿಸಲ್ಪಟ್ಟ ಪ್ರಥಮ ಗ್ಯಾಸ್ ಬಲೂನನ್ನು ಅನಾವರಣಮಾಡಿದನು.
ಬಲೂನ್ ತಂತ್ರಜ್ಞಾನವು ಹೆಚ್ಚೆಚ್ಚು ಉತ್ತಮಗೊಂಡಂತೆ, ಆಕಾಶವು ಸಾಹಸಮಯ ವಾಯುಪಯಣಿಗರಿಗೆ ಕ್ಷಿಪ್ರವಾಗಿ ‘ತೆರೆಯ’ಲಾರಂಭಿಸಿತು. 1784ರೊಳಗೆ ಬಲೂನುಗಳು, 3,400 ಮೀಟರುಗಳಿಗಿಂತಲೂ ಎತ್ತರದಲ್ಲಿ ಹಾರುತ್ತಿದ್ದವು. ಕೇವಲ ಒಂದು ವರ್ಷದ ಬಳಿಕ, ಸಾನ್ ಪ್ಯೇರ್ ಫ್ರಾನ್ಸ್ವಾ ಬ್ಲಾಂಶಾರ್ಡ್, ಜಗತ್ತಿನ ಪ್ರಥಮ ಏರ್ಮೇಲ್ ಪತ್ರಗಳನ್ನು ಒಯ್ಯುವ ಹೈಡ್ರೊಜನ್ ಬಲೂನಿನಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಯಶಸ್ವಿಯಾಗಿ ದಾಟಿದನು. 1862ರೊಳಗೆ, ವಾಯುಪಯಣಿಗರು ಯೂರೋಪಿನಾಚೆಗೆ ಮತ್ತು ಅಮೆರಿಕದಾದ್ಯಂತ ಪ್ರಯಾಣಿಸಿದ್ದರು ಮತ್ತು ಸುಮಾರು ಎಂಟು ಕಿಲೋಮೀಟರ್ಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹಾರಲು ಶಕ್ತರಾದರು.
ಆದರೆ, ಆ ಆರಂಭದ ವಾಯುಪಯಣಿಗರು ಗಾಳಿಯ ಹತೋಟಿಯಲ್ಲಿದ್ದರು. ಬಲೂನು ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ವೇಗವಾಗಿ ಚಲಿಸಬೇಕೆಂಬುದನ್ನು ನಿಯಂತ್ರಿಸಲು ಯಾವುದೇ ಸಾಧನಗಳಿರಲಿಲ್ಲ. 19ನೆಯ ಶತಮಾನದ ಕೊನೆಯ ಅರ್ಧ ಭಾಗದಲ್ಲಿ, ಗ್ಯಾಸೊಲಿನ್ ಮತ್ತು ವಿದ್ಯುತ್ತಿನ ಶಕ್ತಿಯಿಂದ ನಡೆಸಲ್ಪಡುತ್ತಿದ್ದ ವಾಯುನೌಕೆಗಳು, ಆಕಾಶದಲ್ಲಿ ವಾಯುಯಾನವನ್ನು ಹೆಚ್ಚು ಮಟ್ಟಿಗೆ ಸಾಧ್ಯವನ್ನಾಗಿಸಿತು. ಆದರೆ, ಸಾಸೆಜ್ ಆಕಾರದಲ್ಲಿದ್ದು, ಗಾಳಿಗಿಂತಲೂ ಹಗುರವಾದ ಆ ವಾಯುನೌಕೆಗಳು ಸಾಮಾನ್ಯವಾಗಿ ಒಂದು ತಾಸಿಗೆ, ಹತ್ತರಿಂದ ಮೂವತ್ತು ಕಿಲೊಮೀಟರ್ಗಳ ವೇಗದಲ್ಲಿ ತುಂಬ ನಿಧಾನವಾಗಿ ಚಲಿಸಿದವು. ಡಾ ಫಾಂಟಾನಾ ಮುಂತಿಳಿಸಿದಂತೆ, ಮನುಷ್ಯನು “ಗಾಳಿಯಲ್ಲಿ ಏರಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಬೇಕಾದಲ್ಲಿ” ಒಂದು ಹೊಸ ಉಪಾಯದ ಅಗತ್ಯವಿತ್ತು.
[ಪುಟ 4 ರಲ್ಲಿರುವಚಿತ್ರಗಳು]
ಐತಿಹ್ಯ ಡೆಡಲಸ್ ಮತ್ತು ಇಕರಸ್
[ಪುಟ 4 ರಲ್ಲಿರುವಚಿತ್ರಗಳು]
ಲಿಯೊನಾರ್ಡೊ ಡವಿಂಚಿ
[ಕೃಪೆ]
From the book Leonardo da Vinci, 1898
[ಪುಟ 4 ರಲ್ಲಿರುವಚಿತ್ರಗಳು]
ಮಾನ್ಗಾಲ್ಫಿಯೆರ್ ಸಹೋದರರು, ಪ್ರಯಾಣಿಕರನ್ನು ಕೊಂಡೊಯ್ಯುವ ಪ್ರಥಮ ಬಿಸಿಗಾಳಿಯ ಬಲೂನನ್ನು ರಚಿಸಿದರು