ಕಮೀನಿಯಸ್—ಆಧುನಿಕ ಶಿಕ್ಷಣದ ಪಿತಾಮಹ
ಚೆಕ್ರಿಪಬ್ಲಿಕ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಒಬ್ಬಶಿಕ್ಷಕನೋಪಾದಿ, ಜಾನ್ ಕಮೀನಿಯಸ್ ತಾನು ಸೇವೆಸಲ್ಲಿಸುತ್ತಿದ್ದ 17ನೇ ಶತಮಾನದ ಶೈಕ್ಷಣಿಕ ವ್ಯವಸ್ಥೆಯ ಕುಂದುಕೊರತೆಗಳನ್ನು ಚೆನ್ನಾಗಿ ಅರಿತಿದ್ದನು. ಯಾವ ಶೈಕ್ಷಣಿಕ ವ್ಯವಸ್ಥೆಯೂ ಎಂದೂ ಸಮಗ್ರವಾಗಿದ್ದಿಲ್ಲ ಎಂಬುದೇನೋ ಸತ್ಯ, ಆದರೂ 17ನೇ ಶತಮಾನದ ಯೂರೋಪಿನ ಶೈಕ್ಷಣಿಕ ವ್ಯವಸ್ಥೆಯು ಭಯಂಕರವಾಗಿತ್ತು.
ಆರೋಪಗಳ ಅಥವಾ ಆಪಾದನೆಗಳ ಸುರಿಮಳೆಗೈಯುವ ಬದಲು, ಕಮೀನಿಯಸ್ ಅದರ ಬಗ್ಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದನು. ಅವನು ಮಾಡಿದ್ದಾದರೂ ಏನು ಮತ್ತು ಅವನು ಅದನ್ನು ಏಕೆ ಮಾಡಿದನು? ಅದಕ್ಕಿಂತಲೂ ಮಿಗಿಲಾಗಿ, ಆಧುನಿಕ ದಿನದ ಪಿತಾಮಹ ಎಂದು ಕರೆಯಲ್ಪಡುವ ಈ ವ್ಯಕ್ತಿಯಿಂದ ನಾವೇನು ಕಲಿತುಕೊಳ್ಳಸಾಧ್ಯವಿದೆ?
ಬೆಳೆಸುವುದು ಮತ್ತು ಶಿಕ್ಷಣಕೊಡುವುದು
ಜಾನ್ ಆಮೋಸ್ ಕಮೀನಿಯಸ್ (ಅವನ ಮಾತೃಭಾಷೆಯಾದ ಚೆಕ್ನಲ್ಲಿ, ಯಾನ್ ಆಮಾಸ್ ಕಾಮೆನ್ಸ್ಕೀ) ಈಗ ಚೆಕ್ ರಿಪಬ್ಲಿಕ್ ಎಂದು ಪ್ರಸಿದ್ಧವಾಗಿರುವ ಪ್ರದೇಶವಾದ ಮರೇವೀಯ ಎಂಬ ಸ್ಥಳದಲ್ಲಿ 1592, ಮಾರ್ಚ್ 28ರಂದು ಹುಟ್ಟಿದನು. ಅವನು ಐದು ಮಕ್ಕಳಲ್ಲಿ ಕಿರಿಯವನಾಗಿದ್ದರೂ ಸುಸ್ಥಿತಿಯಲ್ಲಿದ್ದ ರೈತವರ್ಗದ ದಂಪತಿಗಳ ಒಬ್ಬನೇ ಮಗನಾಗಿದ್ದನು.
ಅವನ ಹೆತ್ತವರು ಯೂನಿಟಿ ಆಫ್ ಬ್ರೆದ್ರನ್ನ (ಅನಂತರ ಅದು ಬೊಹೀಮಿಯಾ ಬ್ರೆದ್ರನ್ ಅಥವಾ ಮರೇವಿಯನ್ ಚರ್ಚ್ ಎಂದು ಪ್ರಸಿದ್ಧವಾಯಿತು) ಸದಸ್ಯರಾಗಿದ್ದರು. ಇದು ವಾಲ್ಡೆನ್ಸಸ್ ಮತ್ತು ಪೀಟರ್ ಕೆಲ್ಚೀಡ್ಸ್ಕಿ ಎಂಬಂತಹ ಇತರ ಸುಧಾರಕ ಪ್ರಭಾವದ ಕೆಳಗೆ 15ನೇ ಶತಮಾನದ ಮಧ್ಯಭಾಗದಲ್ಲಿ ಉಂಟಾದ ಒಂದು ಧಾರ್ಮಿಕ ಗುಂಪಾಗಿತ್ತು. ಜರ್ಮನಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ, ಕಮೀನಿಯಸ್ ತನ್ನ ತಾಯ್ನಾಡಿಗೆ ಮರಳಿ ಬಂದನು. ಅನಂತರ, 24 ವರ್ಷ ಪ್ರಾಯದಲ್ಲಿ, ಅವನನ್ನು ಯೂನಿಟಿ ಆಫ್ ಬ್ರೆದ್ರನ್ನ ಪಾದ್ರಿಯಾಗಿ ನೇಮಕಗೊಳಿಸಲಾಯಿತು.
ಅವನು ದೇಶಭ್ರಷ್ಟನಾದ ಕಾರಣ
ಸುಮಾರು 1618ರಲ್ಲಿ ಕಮೀನಿಯಸ್, ಪ್ರಾಗ್ನ ಸುಮಾರು 240 ಕಿಲೊಮೀಟರುಗಳಷ್ಟು ಪೂರ್ವದಿಕ್ಕಿನಲ್ಲಿರುವ, ಫೂಲ್ನೆಕ್ ಎಂಬ ಚಿಕ್ಕ ಪ್ಯಾರಿಷ್ನಲ್ಲಿ ಅಧಿಕಾರವನ್ನು ವಹಿಸಿಕೊಂಡನು. ಆ ಸಮಯದಲ್ಲಿ, ಪ್ರಾಟೆಸ್ಟಂಟ್ ಧರ್ಮದ ವಿರುದ್ಧವಾಗಿ ಕ್ಯಾಥೊಲಿಕ್ ಸುಧಾರಕ-ಪ್ರತಿಪ್ರಹಾರವು ಯೂರೋಪಿನಲ್ಲಿ ನಡೆಯುತ್ತಿತ್ತು. ಮೂವತ್ತು ವರ್ಷಗಳ ಯುದ್ಧವು (1618-48) ಭುಗಿಲೇಳುವ ವರೆಗೂ, ಕ್ಯಾಥೊಲಿಕ್ ಹಾಗೂ ಪ್ರಾಟೆಸ್ಟಂಟರ ಮಧ್ಯೆ ಉದ್ರಿಕ್ತ ಪರಿಸ್ಥಿತಿಗಳಿದ್ದವು.
ಯುದ್ಧದ ಸುಮಾರು ಒಂದು ದಶಕದ ಬಳಿಕ, ಮರಿವಿಯದಲ್ಲಿ ಏಕಮಾತ್ರ ಕಾನೂನುಬದ್ಧ ಧರ್ಮವು ಕ್ಯಾಥೊಲಿಕ್ ಧರ್ಮವಾಗಿದೆ ಎಂದು ಘೋಷಿಸಲಾಯಿತು. ಕಮೀನಿಯಸ್ ಮತ್ತು ಉಚ್ಚಮಟ್ಟದ ಸದಸ್ಯರಿಗೆ ಆಯ್ಕೆಯೊಂದನ್ನು ಕೊಡಲಾಯಿತು. ಅದೇನೆಂದರೆ, ಒಂದೋ ಕ್ಯಾಥೊಲಿಕ್ ಧರ್ಮವನ್ನು ಸ್ವೀಕರಿಸಿ ಇಲ್ಲವೇ ದೇಶವನ್ನು ಬಿಟ್ಟು ತೊಲಗಿ. ಕಮೀನಿಯಸ್ ಮತಾಂತರ ಹೊಂದಲು ಇಷ್ಟಪಡದಿದ್ದುದರಿಂದ, ಅವನು ಮತ್ತು ಅವನ ಕುಟುಂಬವು, ಪೋಲೆಂಡ್ನಲ್ಲಿ ಯೂನಿಟಿ ಆಫ್ ಬ್ರೆದ್ರನ್ನ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವ ಲೆಶ್ನಾ ಎಂಬ ಪುಟ್ಟ ಪಟ್ಟಣಕ್ಕೆ ಸ್ಥಳಾಂತರಿಸಿತು. 42 ವರ್ಷಗಳ ವರೆಗೆ ಇರಬೇಕಾದಂತಹ ಗಡೀಪಾರಿನ ಪ್ರಾರಂಭವು ಇದಾಗಿತ್ತು. ಅವನು ಮತ್ತೆಂದೂ ತನ್ನ ತಾಯ್ನಾಡಿಗೆ ಕಾಲಿಡಲೇ ಇಲ್ಲ.
“ಮನಸ್ಸಿನ ಕಸಾಯಿಖಾನೆಗಳು”
ಲೆಶ್ನಾ ವಿದ್ಯಾಶಾಲೆಯಲ್ಲಿ ಲ್ಯಾಟಿನ್ ಭಾಷೆಯನ್ನು ಕಲಿಸಿಕೊಡುವ ಕೆಲಸ ಕಮೀನಿಯಸ್ಗೆ ಸಿಕ್ಕಿತು. ಇದು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಇರುವ ಪೂರ್ವಭಾವಿ ಶಾಲೆಯಾಗಿತ್ತು. ಆದರೆ ಸ್ವಲ್ಪವೇ ಸಮಯದಲ್ಲಿ, ಅವನು ಅಲ್ಲಿನ ಅಸಮಂಜಸ ಶಿಕ್ಷಣಾ ವಿಧಾನಗಳಿಂದ ಅಸಂತೃಪ್ತನಾದನು. ಮತ್ತು ಅದು ಒಪ್ಪತಕ್ಕ ವಿಷಯವೇ ಆಗಿತ್ತು.
ಕಮೀನಿಯಸ್ನ ದಿನಗಳ ಶೈಕ್ಷಣಿಕ ವ್ಯವಸ್ಥೆಯು ತೀರ ಹದಗೆಟ್ಟ ಸ್ಥಿತಿಯಲ್ಲಿತ್ತು. ಉದಾಹರಣೆಗೆ, ಕೇವಲ ಹುಡುಗರು ಮಾತ್ರ ಶಿಕ್ಷಣವನ್ನು ಪಡೆಯಲು ಅರ್ಹರಾಗಿದ್ದರು. ಆದರೆ ಬಡತನದಲ್ಲಿ ಹುಟ್ಟಿದ ಹುಡುಗರನ್ನು ಶಾಲೆಗೆ ಸೇರಿಸಿಕೊಳ್ಳಲಾಗುತ್ತಿರಲಿಲ್ಲ. ಲ್ಯಾಟಿನ್ ಪದಗಳನ್ನು, ವಾಕ್ಯಗಳನ್ನು ಮತ್ತು ಪದ ಜೋಡಣೆಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿಸುವುದೇ ತರಗತಿಯ ಮುಖ್ಯ ಬೋಧನೆಯಾಗಿತ್ತು. ಕೇವಲ ಲ್ಯಾಟಿನ್ ಭಾಷೆಯಲ್ಲಿಯೇ ಏಕೆ? ಮಧ್ಯಯುಗದ ಅನೇಕ ಶಾಲೆಗಳು, ಲ್ಯಾಟಿನ್ ಭಾಷೆಯಲ್ಲಿ ಸಂಸ್ಕಾರವನ್ನು ನಡೆಸುತ್ತಿದ್ದ ಕ್ಯಾಥೊಲಿಕ್ ಚರ್ಚಿನ ಅಧೀನದಲ್ಲಿದ್ದವು. ಹೀಗೆ, ಪಾದ್ರಿವರ್ಗಕ್ಕೆ ನೇಮಕಮಾಡಲು ಜನರು ಇದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಲ್ಯಾಟಿನ್ ಭಾಷೆಯನ್ನು ಕಲಿಸುವುದು ತುಂಬ ಪ್ರಾಮುಖ್ಯವಾಗಿತ್ತು.
ಅಷ್ಟುಮಾತ್ರವಲ್ಲದೆ, ಕಲಿಯುವುದಕ್ಕಾಗಿ ನಿರ್ದಿಷ್ಟ ಗುರಿಗಳನ್ನು ಸ್ಥಾಪಿಸಲು ಯಾವುದೇ ಪರಿಗಣನೆಯನ್ನು ನೀಡಲಿಲ್ಲ ಇಲ್ಲವೇ ವಿದ್ಯಾರ್ಥಿಗಳನ್ನು ಸರಳವಾದ ವಿಚಾರಗಳಿಂದ ಜಟಿಲವಾದ ವಿಚಾರಗಳಿಗೆ ಕ್ರಮೇಣವಾಗಿ ನಡೆಸಿಕೊಂಡು ಹೋಗಲು ಯಾವುದೇ ಶಿಕ್ಷಣವು ರಚಿಸಲ್ಪಡಲಿಲ್ಲ. ಶಿಸ್ತು ತುಂಬ ಕಟ್ಟುನಿಟ್ಟಿನದ್ದಾಗಿತ್ತು, ಕೆಲವೊಮ್ಮೆ ಇದು ಕ್ರೂರ ರೀತಿಯದ್ದಾಗಿತ್ತು ಮತ್ತು ನೈತಿಕ ವಾತಾವರಣವು ದಿಗಿಲುಗೊಳಿಸುವಂತಿತ್ತು.
ಸ್ಕಾಟಿಷ್ ಶಿಕ್ಷಕನಾದ ಸೈಮನ್ ಲಾರೀ 17ನೇ ಶತಮಾನದ ಶಾಲೆಗಳನ್ನು “ತೀರ ಅವ್ಯವಸ್ಥಿತ” ಮತ್ತು “ಆಸಕ್ತಿರಹಿತ” ಎಂದು ಒಮ್ಮೆ ವರ್ಣಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಕಮೀನಿಯಸ್ನ ಮಾತು ಇನ್ನೂ ಹೆಚ್ಚು ಸುಸಂಗತವಾಗಿತ್ತು. ಅವನು ಶಾಲೆಗಳನ್ನು “ಮನಸ್ಸಿನ ಕಸಾಯಿಖಾನೆಗಳು” ಎಂದು ಕರೆದನು.
ಒಂದು ನವೀನ ಕಲಿಸುವಿಕೆಯ ವಿಧಾನವು ಮೈದಳೆಯುತ್ತದೆ
ಶೈಕ್ಷಣಿಕ ಸುಧಾರಣೆಯ ಅಗತ್ಯದ ಬಗ್ಗೆ ಚಕಾರವೆತ್ತುವುದರಲ್ಲಿ ಕಮೀನಿಯಸ್ ಪ್ರಥಮ ವ್ಯಕ್ತಿಯಾಗಿರಲಿಲ್ಲ. ಇಂಗ್ಲೆಂಡಿನಲ್ಲಿ ಫ್ರ್ಯಾನ್ಸಿಸ್ ಬೇಕನ್ ಲ್ಯಾಟಿನ್ ಭಾಷೆಗೆ ಮಹತ್ವ ಕೊಡುವುದನ್ನು ನಿಂದಿಸಿ, ಪ್ರಾಕೃತಿಕ ಅಧ್ಯಯನಕ್ಕೆ ಹಿಂದಿರುಗುವಂತೆ ಸಲಹೆನೀಡಿದನು. ಜರ್ಮನಿಯಲ್ಲಿದ್ದ ವಾಲ್ಫ್ಗಾಂಗ್ ರಾಟ್ಕ ಮತ್ತು ಯೋಹಾನ್ ವಾಲೆಂಟೀನ್ ಆಂಡ್ರೇ ಮತ್ತು ಇನ್ನಿತರರು ಸಹ ಸುಧಾರಣೆಗಳಿಗಾಗಿ ಪ್ರಯಾಸಪಟ್ಟರು. ಇಷ್ಟೆಲ್ಲ ಪ್ರಯತ್ನಪಟ್ಟರೂ ಇವರ ವಿಚಾರಗಳಿಗೆ ಅಧಿಕೃತ ಬೆಂಬಲವು ಸಿಗಲೇ ಇಲ್ಲ.
ಒಂದು ಆಸಕ್ತಿಕರವಾದ—ಬೇಸರಗೊಳಿಸುವಂತಹದ್ದಲ್ಲ—ಕಲಿಕೆಯ ವ್ಯವಸ್ಥೆಯನ್ನು ಕಮೀನಿಯಸನು ಪ್ರಸ್ತಾಪಿಸಿದನು. ಈ ಶೈಕ್ಷಣಿಕ ಯೋಜನೆಯನ್ನು ಪಾಂಪಿತೀಯ ಎಂದು ಕರೆದನು. ಇದರ ಅರ್ಥ “ಸಾರ್ವತ್ರಿಕ ಶಿಕ್ಷಣ” ಎಂದಾಗಿತ್ತು. ಪ್ರತಿಯೊಬ್ಬರೂ ಆನಂದಿಸಸಾಧ್ಯವಾಗುವಂತಹ ಒಂದು ಪ್ರಗತಿಪರ ಕಲಿಕೆಯ ವ್ಯವಸ್ಥೆಯನ್ನು ಸ್ಥಾಪಿಸುವುದೇ ಅವನ ಮುಖ್ಯ ಗುರಿಯಾಗಿತ್ತು. ಪ್ರಾಥಮಿಕ ವಿಚಾರಗಳಿಂದ ಕ್ರಮೇಣವಾಗಿ ಜಟಿಲತೆಗೆ ಕೊಂಡೊಯ್ಯುವ ರೀತಿಯಲ್ಲಿ ಒಂದು ಮೆಟ್ಟಲಿನ ಅನಂತರ ಇನ್ನೊಂದು ಮೆಟ್ಟಲನ್ನು ಏರುವ ವಿಧದಲ್ಲಿ ಮಕ್ಕಳಿಗೆ ಕಲಿಸಿಕೊಡಬೇಕೆಂಬುದು ಅವನ ವಿಚಾರವಾಗಿತ್ತು. ಲ್ಯಾಟಿನ್ ಭಾಷೆಯಲ್ಲಿ ಕಲಿಸುವುದಕ್ಕೆ ಬದಲು ಶಾಲೆಯ ಮೊದಲ ಕೆಲವು ವರ್ಷಗಳ ವರೆಗೆ, ಮಾತೃಭಾಷೆಯನ್ನು ಉಪಯೋಗಿಸಬೇಕು ಎಂದು ಕಮೀನಿಯಸ್ ಹೇಳಿದನು.
ಆದರೂ, ಶಿಕ್ಷಣವು ತಾರುಣ್ಯಕ್ಕೆ ಮಾತ್ರ ಸೀಮಿತವಾಗಿರಕೂಡದು ಬದಲಿಗೆ, ವ್ಯಕ್ತಿಯೊಬ್ಬನ ಇಡೀ ಜೀವಿತವನ್ನು ಅದು ಆವರಿಸಬೇಕು. ಅಧ್ಯಯನವು “ಸಂಪೂರ್ಣವಾಗಿ ಪ್ರಾಯೋಗಿಕವೂ, ಆನಂದದಾಯಕವೂ, ಶಾಲೆಯನ್ನು ಒಂದು ರೀತಿಯ ವಿನೋದವನ್ನಾಗಿ ಮಾಡುವಂತಹ, ಅಂದರೆ, ನಮ್ಮ ಇಡೀ ಜೀವಿತಕ್ಕೆ ಸುಖಮಯ ಮುನ್ನುಡಿ” ಆಗಿರಬೇಕು ಎಂದು ಕಮೀನಿಯಸ್ ಬರೆದನು. ಶಾಲೆಯು ಕೇವಲ ಮನಸ್ಸಿಗೆ ಶಿಕ್ಷಣ ಕೊಡುವುದರ ಮೇಲೆ ಕೇಂದ್ರೀಕರಿಸಬಾರದು, ಬದಲಿಗೆ ಅದು ಇಡೀ ವ್ಯಕ್ತಿಗೆ ಶಿಕ್ಷಣ ಕೊಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು, ಅಂದರೆ ಅದು ನೈತಿಕ ಹಾಗೂ ಆತ್ಮಿಕ ಶಿಕ್ಷಣವನ್ನು ಸಹ ಒಳಗೊಳ್ಳಬೇಕು ಎಂದು ಅವನು ನಂಬಿದನು.
ಜಾನ್ ಕಮೀನಿಯಸ್ನ ಪರಿಶ್ರಮಗಳು
ಕಲಿಸುವ ಕ್ಷೇತ್ರದಲ್ಲಿ ಪ್ರಕಾಶಿಸಲ್ಪಟ್ಟ ಕಮೀನಿಯಸ್ನ ಪುಸ್ತಕವು 1630ರಲ್ಲಿa ಶೈಶವಾವಸ್ಥೆಯ ಶಾಲೆ ಎಂಬುದಾಗಿತ್ತು. ತಾಯಂದಿರು ಮತ್ತು ಮಕ್ಕಳನ್ನು ನೋಡಿಕೊಳ್ಳುವವರು, ಮನೆಯಲ್ಲಿ ಮಕ್ಕಳಿಗೆ ಕಲಿಸುವಾಗ ಉಪಯೋಗಕ್ಕೆ ಬರುವಂತಹ ರೀತಿಯಲ್ಲಿ ರಚಿಸಲ್ಪಟ್ಟ ಪುಸ್ತಕವು ಇದಾಗಿತ್ತು. ಇದರ ನಂತರ 1631ರಲ್ಲಿ ಪ್ರಕಾಶಿಸಲ್ಪಟ್ಟ ದ ಗೇಟ್ ಆಫ್ ಲ್ಯಾಂಗ್ವೇಜಸ್ ಅನ್ಲಾಕ್ಡ್ ಎಂಬ ಪುಸ್ತಕವು ಹೆಚ್ಚುಕಡಿಮೆ, ಲ್ಯಾಟಿನ್ ಭಾಷೆಯಲ್ಲಿ ಕಲಿಸುವುದರ ಕುರಿತಾಗಿ ಕ್ರಾಂತಿಯನ್ನು ಎಬ್ಬಿಸಿತು. ಇದು ಸಮಾನಾಂತರ ಉದ್ದಸಾಲುಗಳಲ್ಲಿತ್ತು, ಅಂದರೆ ಒಂದು ಚೆಕ್ ಭಾಷೆಯಲ್ಲಿ ಮತ್ತು ಇನ್ನೊಂದು ಲ್ಯಾಟಿನ್ ಭಾಷೆಯಲ್ಲಿ. ಹೀಗೆ ಎರಡು ಭಾಷೆಗಳನ್ನು ಹೋಲಿಸಸಾಧ್ಯವಿತ್ತು ಮತ್ತು ಇದು ಕಲಿಯುವುದನ್ನು ಇನ್ನೂ ಸುಲಭಗೊಳಿಸಿತು. ಈ ಕಲಿಸುವಿಕೆಯ ಪರಿಷ್ಕರಿಸಲ್ಪಟ್ಟ ಮುದ್ರಣವು ಎಷ್ಟು ಸ್ವೀಕೃತಗೊಂಡಿತೆಂದರೆ, ಇದು ಕೊನೆಗೆ ಸುಮಾರು 16 ಭಾಷೆಗಳಲ್ಲಿ ಭಾಷಾಂತರಗೊಂಡಿತು.
ಕಮೀನಿಯಸ್ನ ಅತ್ಯಂತ ಪ್ರಖ್ಯಾತ ಹಾಗೂ ಅತ್ಯಂತ ಸರಳವಾದ ಕೃತಿಯು, ದೃಶ್ಯ ಲೋಕ ಆಗಿತ್ತು. ಇದು ಮಕ್ಕಳಿಗಾಗಿ ತಯಾರಿಸಿದ ಚಿತ್ರಗಳುಳ್ಳ ಅಧ್ಯಯನ ಕೈಪಿಡಿ ಆಗಿತ್ತು. ಇದು ಸಹ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿತ್ತು. ಶಿಕ್ಷಣದ 20ನೇ ಶತಮಾನದ ಪ್ರೊಫೆಸರರಾದ ಎಲ್ವುಡ್ ಕಬರ್ಲೀ ಹೇಳುವುದೇನೆಂದರೆ, ಇದು “ಸುಮಾರು ನೂರಹದಿನೈದು ವರ್ಷಗಳ ತನಕ ಪ್ರತಿಸ್ಪರ್ಧಿಗಳಿಲ್ಲದೆ ಇತ್ತು, ಮತ್ತು ಹತ್ತಿರಹತ್ತಿರ ಇನ್ನೂರು ವರ್ಷಗಳ ತನಕ ಪ್ರಾರಂಭಿಕ ಪಠ್ಯಪುಸ್ತಕವಾಗಿ ಬಳಸಲಾಯಿತು.” ಇಂದಿನ ಸಚಿತ್ರ ಪಠ್ಯಪುಸ್ತಕಗಳಲ್ಲಿ ಅನೇಕ ಪುಸ್ತಕಗಳು, ಕಲಿಸುವುದಕ್ಕಾಗಿ ಚಿತ್ರಗಳನ್ನು ಉಪಯೋಗಿಸುವುದರ ಮೂಲಕ, ಕಮೀನಿಯಸ್ನ ಕೃತಿಯನ್ನು ಇನ್ನೂ ಅನುಸರಿಸುತ್ತಿವೆ.
ಕಮೀನಿಯಸನನ್ನು ಪ್ರತಿಭಾವಂತನೆಂದು ಹೊಗಳಲಾಯಿತು. ಯೂರೋಪಿನಾದ್ಯಂತ ವಿದ್ವಾಂಸರು ಕಮೀನಿಯಸನನ್ನು ನಾಯಕನೋಪಾದಿ ಗೌರವಿಸಿದರು ಮತ್ತು ಸಲಹೆಗಾಗಿ ಮರೆಹೊಕ್ಕರು. ಮಾಗ್ನಾಲ್ಯಾ ಕ್ರಿಸ್ಟೀ ಆಮೆರೀಕಾನಾ (ಲ್ಯಾಟಿನ್) ಪುಸ್ತಕಕ್ಕನುಸಾರ, ಕಮೀನಿಯಸ್ನ ಕೀರ್ತಿಯು ಹೇಗೆ ಹೆಮ್ಮರವಾಗಿ ಬೆಳೆಯಿತೆಂದರೆ, 1654ರಲ್ಲಿ ಅವನನ್ನು ಮ್ಯಾಸಚೂಸೆಟ್ಸ್ ಸ್ಟೇಟ್ನ್ ಕೇಂಬ್ರಿಡ್ಜ್ನಲ್ಲಿರುವ, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವಂತೆ ಆಹ್ವಾನವನ್ನು ನೀಡಲಾಯಿತು. ಆದರೆ, ಕಮೀನಿಯಸ್ ಅದನ್ನು ನಿರಾಕರಿಸಿದನು, ಏಕೆಂದರೆ ಅವನು ಕೀರ್ತಿ, ಯಶಸ್ಸು, ಉನ್ನತ ಪದವಿಗಾಗಿ ಹೋರಾಡುತ್ತಿರಲಿಲ್ಲ.
ಅವನನ್ನು ಯಾವುದು ಪ್ರಚೋದಿಸಿತು?
ಕಮೀನಿಯಸ್ನ ಜೀವನ ಕ್ರಮವನ್ನು ನೋಡುವಾಗ, ಅವನನ್ನು ಯಾವುದು ಪ್ರಚೋದಿಸಿತು ಎಂಬ ಕುತೂಹಲಕ್ಕೆ ಒಬ್ಬನು ಒಳಗಾಗುವುದರಲ್ಲಿ ಆಶ್ಚರ್ಯವಿಲ್ಲ. ಶಿಕ್ಷಣಕ್ಕೆ ಮಾನವಕುಲವನ್ನು ಐಕ್ಯಗೊಳಿಸುವ ಶಕ್ತಿಯಿದೆ ಎಂದು ಕಮೀನಿಯಸ್ ನೆನಸಿದನು. ಸಾರ್ವತ್ರಿಕ ಶಿಕ್ಷಣವು ವಿಶ್ವ ಶಾಂತಿಯನ್ನು ಕಾಪಾಡಲು ಸಹಾಯಮಾಡಬೇಕು ಎಂಬ ವಿಚಾರವು ಅವನಿಗಿತ್ತು.
ಕಮೀನಿಯಸ್ ಜ್ಞಾನವನ್ನು ಧಾರ್ಮಿಕತೆಗೂ ಸಂಬಂಧಿಸಿದನು. ಜ್ಞಾನವನ್ನು ಪಡೆದುಕೊಳ್ಳುವ ಮೂಲಕ, ಮಾನವಕುಲವು ದೇವರ ಕಡೆಗೆ ಮಾರ್ಗದರ್ಶಿಸಲ್ಪಡುತ್ತದೆ ಎಂಬುದು ಅವನ ನಂಬಿಕೆಯಾಗಿತ್ತು. ಅದು ಅವನ ಪ್ರಾಥಮಿಕ ಉದ್ದೇಶವಾಗಿದ್ದಿರಬಹುದು.
ಶಿಕ್ಷಣದ ಕುರಿತಾದ ಕಮೀನಿಯಸ್ನ ಅಂತರ್ದೃಷ್ಟಿಗಳು ಇಂದಿಗೂ ಪ್ರಾಯೋಗಿಕವಾಗಿವೆ. ದೃಷ್ಟಿಗೋಚರಗಳ ಉಪಯೋಗವನ್ನು ಒಳಗೊಂಡ, ಅವನ ಕ್ರಮಬದ್ಧ ಕಲಿಕೆಯ ವಿಧಾನಗಳು ಲೋಕದಾದ್ಯಂತ ಉಪಯೋಗಿಸಲ್ಪಡುತ್ತಿವೆ. ಉದಾಹರಣೆಗೆ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಡುವ ಸಾಹಿತ್ಯಗಳು. ವೈಯಕ್ತಿಕವಾಗಿ ಬೈಬಲ್ ಅಧ್ಯಯನ ಮಾಡುವಾಗ ಅಥವಾ ಕುಟುಂಬ ಬೈಬಲ್ ಅಭ್ಯಾಸವನ್ನು ಮಾಡುವಾಗ, ಅವನ ವಿಧಾನಗಳನ್ನು ಉಪಯೋಗಿಸುವ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರು ವೈಯಕ್ತಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ಅದು ಹೇಗೆ?
“ವಿದ್ಯಾರ್ಥಿಗಳ ವಯಸ್ಸು, ಗ್ರಹಿಕೆ, ಮತ್ತು ಸ್ಥಿತಿಗೆ ಅನುಗುಣವಲ್ಲದ ವಿಷಯಗಳಿಂದ ಅವರ ಮೇಲೆ ಹೊರೆಯನ್ನು ಹೇರಬಾರದು” ಎಂದು ಕಮೀನಿಯಸ್ ಬರೆದನು. ಆದುದರಿಂದ ಬೈಬಲಿನ ಅಥವಾ ಇನ್ನಿತರ ವಿಷಯಗಳ ಕುರಿತಾಗಿ ನಿಮ್ಮ ಮಕ್ಕಳಿಗೆ ಕಲಿಸುವಾಗ, ಅವರಿಗೆ ಅರ್ಥವಾಗುವಂಥ ರೀತಿಯಲ್ಲಿ ಕಲಿಸಬೇಕು. ಮಾಮೂಲಿಯಂತೆ, ಪ್ರಶ್ನೋತ್ತರಗಳ ವಿಧಾನದಲ್ಲಿ ಕಲಿಸುವುದಕ್ಕೆ ಬದಲು ಬೈಬಲ್ ವ್ಯಕ್ತಿಗಳ ಕುರಿತಾಗಿ ಅವರಿಗೆ ಕಥೆಗಳನ್ನು ಹೇಳುವ ಮೂಲಕ ಏಕೆ ಕಲಿಸಬಾರದು? ಬೈಬಲ್ ಘಟನೆಗಳ ಚಿತ್ರಗಳನ್ನು ಬರೆಯುವಂತೆ ಅವರಿಗೆ ಹೇಳುವ ಮೂಲಕ ಅಥವಾ ಬೈಬಲ್ ಡ್ರಾಮಗಳನ್ನು ಅಭಿನಯಿಸಿ ತೋರಿಸುವಂತೆ ಅವರನ್ನು ಉತ್ತೇಜಿಸುವ ಮೂಲಕ ಅವರನ್ನು ಒಳಗೂಡಿಸಸಾಧ್ಯವಿದೆ. ನಿಮ್ಮ ಕಲ್ಪನಾಶಕ್ತಿಯನ್ನು ಕಾರ್ಯರೂಪಕ್ಕೆ ತನ್ನಿರಿ! ಅದರಿಂದ ಹೊರಬರುವ ಫಲಿತಾಂಶಗಳು ನೀವು ಮಾಡುವ ಪ್ರಯತ್ನಕ್ಕೆ ಸಾರ್ಥಕವಾಗಿರುವುದು—ಜ್ಞಾನೋಕ್ತಿ 22:6.
ಯುವ ಜನರಿಗೆ ಪ್ರಗತಿಪರವಾಗಿ ಕಲಿಸಲಿಕ್ಕಾಗಿಯೇ ವಿಶೇಷವಾಗಿ ತಯಾರಿಸಿರುವಂತಹ ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳುb ಎಂಬಂತಹ ಸಚಿತ್ರ ಸಾಹಿತ್ಯದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ. ಮತ್ತು ಯಾವುದೇ ವಯಸ್ಸಿನ ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ, ಅವರ ಅನುಭವವನ್ನು “ಸಂಪೂರ್ಣವಾಗಿ ಪ್ರಾಯೋಗಿಕವೂ, ಆನಂದದಾಯಕವೂ” ಆಗಿರುವಂತೆ ಮಾಡಲಿಕ್ಕಾಗಿ ಪ್ರಯತ್ನಪಡಿರಿ.
ಚಿರವಾದ ಸ್ವತ್ತು
1656ರಲ್ಲಿ ಲೆಶ್ನಾ ಪಟ್ಟಣದಲ್ಲಿ ಬೆಂಕಿಯ ಅನಾಹುತವಾದಾಗ, ಕಮೀನಿಯಸ್ನ ಹೆಚ್ಚುಕಡಿಮೆ ಎಲ್ಲ ಸ್ವತ್ತುಗಳು ಸುಟ್ಟುಹೋದವು. ಆದರೆ, ಸಂತೋಷಕರವಾಗಿ ಅವನು ಇನ್ನೊಂದು ರೀತಿಯ ಸಂಪತ್ತನ್ನು ನಮಗೆ ಬಿಟ್ಟುಹೋದನು. ಶಿಕ್ಷಣದ ಒಂದು ಸಂಕ್ಷಿಪ್ತ ಇತಿಹಾಸ ಎಂಬ ಪುಸ್ತಕವು ಹೇಳುವುದು: “ಕಮೀನಿಯಸ್ . . . ಶಿಕ್ಷಣದಲ್ಲಿ ಒತ್ತನ್ನು ಪದಗಳಿಂದ ವಸ್ತುಗಳಿಗೆ ಬದಲಾಯಿಸಿ ವಿಜ್ಞಾನದ ಶಿಕ್ಷಣ ಮತ್ತು ಉಪಯೋಗಕರವಾದ ಬೋಧಪ್ರದ ಮಾಹಿತಿಯನ್ನು ತನ್ನ ಕೃತಿಯ ಮುಖ್ಯವಿಷಯವನ್ನಾಗಿ ಮಾಡಿದನು.”
ಕಲಿಸುವಿಕೆಯನ್ನು ವ್ಯವಸ್ಥಿತ ಜ್ಞಾನವನ್ನಾಗಿ ಪರಿವರ್ತಿಸಿದುದಕ್ಕಾಗಿ ಕಮೀನಿಯಸ್ಗೆ ಪ್ರಶಂಸೆಯು ಸಲ್ಲಬೇಕು. ಅವನ ಕಲಿಸುವ ವಿಧಾನಗಳು ಹೆಚ್ಚುಕಡಿಮೆ ತರಗತಿಯ ಕಲಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಅಮೆರಿಕದ ಶಿಕ್ಷಕ ನಿಕಲಸ್ ಬಟ್ಲರ್ ಹೇಳಿದ್ದು: “ಶಿಕ್ಷಣದ ಇತಿಹಾಸದಲ್ಲಿ ಕಮೀನಿಯಸ್ನ ಸ್ಥಾನವು ಬಹಳ ಪ್ರಾಮುಖ್ಯವಾಗಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದ ಕ್ಷೇತ್ರದಲ್ಲಿನ ಇಡೀ ಆಧುನಿಕ ಕಾರ್ಯವನ್ನು ಅವನು ಪರಿಚಯಿಸಿ ಪ್ರಭಾವಿಸುತ್ತಾನೆ.” ಬೈಬಲಿನ ಉತ್ಸಾಹಿ ವಿದ್ಯಾರ್ಥಿಗಳಾದ ಯೆಹೋವನ ಸಾಕ್ಷಿಗಳು ಸಹ ಆಧುನಿಕ ಶಿಕ್ಷಣದ ಪಿತಾಮಹನಿಗೆ ಆಭಾರಿಗಳಾಗಿದ್ದಾರೆ.
[ಅಧ್ಯಯನ ಪ್ರಶ್ನೆಗಳು]
a 1657ರಲ್ಲಿ ಕಮೀನಿಯಸ್ ಒಪೆರಾ ಡಿಡ್ಯಾಕ್ಟಿಕಾ ಓಮ್ನಿಯಾ ಪುಸ್ತಕದ ಭಾಗದೋಪಾದಿ ದ ಗ್ರೇಟ್ ಡಿಡ್ಯಾಕ್ಟಿಕ್ ಎಂಬ ಪುಸ್ತಕವನ್ನು ಲ್ಯಾಟಿನ್ ಭಾಷೆಯಲ್ಲಿ ಪ್ರಕಾಶಿಸಿದನು.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ
[ಪುಟ 16ರಲ್ಲಿರುವಚೌಕ]
ಜಾನ್ ಕಮೀನಿಯಸ್ನ ಕೆಲವು ಕಲಿಕೆಯ ತತ್ತ್ವಗಳು
ಕಲಿಸುವ ವಿಷಯದ ಪ್ರಮಾಣದ ಕುರಿತಾಗಿ: “ಶಿಕ್ಷಕನು ತನಗೆ ಎಷ್ಟು ಕಲಿಸಲಿಕ್ಕೆ ಆಗುತ್ತದೋ ಅಷ್ಟರ ಮಟ್ಟಿಗೆ ಕಲಿಸಬಾರದು ಬದಲಿಗೆ ಕಲಿಯುವವನು ಎಷ್ಟು ಗ್ರಹಿಸಬಲ್ಲನೋ ಅಷ್ಟರ ಮಟ್ಟಿಗೆ ಕಲಿಸಬೇಕು.”
ಕಲಿಸುವ ವಿಧಾನಗಳ ಕುರಿತಾಗಿ: “ಚೆನ್ನಾಗಿ ಕಲಿಸುವುದರ ಅರ್ಥ, ಒಬ್ಬನು ಕ್ಷಿಪ್ರವಾಗಿ, ಸಂತೋಷಕರವಾಗಿ, ಮತ್ತು ಸಮಗ್ರವಾಗಿ ಕಲಿತುಕೊಳ್ಳುವಂತೆ ಸಹಾಯಮಾಡುವುದೇ ಆಗಿದೆ.”
“ತನ್ನ ವಿದ್ಯಾರ್ಥಿಗಳ ಅಜ್ಞಾನವನ್ನು ಸಹಿಸಿಕೊಂಡು, ಆ ಅಜ್ಞಾನವನ್ನು ಪರಿಣಾಮಕಾರಿಯಾಗಿ ಹೇಗೆ ಹೋಗಲಾಡಿಸಬೇಕು ಎಂಬುದನ್ನು ತಿಳಿದಿರುವವನೇ ಒಬ್ಬ ಸಮರ್ಥ ಶಿಕ್ಷಕನು [ಆಗಿದ್ದಾನೆ].”
“ಕಲಿಸುವುದರ ಅರ್ಥವು, ವಿಷಯಗಳು ಹೇಗೆ ತಮ್ಮ ಉದ್ದೇಶಗಳು, ರೂಪಗಳು, ಮತ್ತು ಮೂಲಗಳಲ್ಲಿ ಭಿನ್ನವಾಗಿವೆ ಎಂಬುದನ್ನು ತೋರಿಸುವುದಕ್ಕಿಂತಲೂ ಹೆಚ್ಚಾಗಿದೆ. . . . ಆದುದರಿಂದ, ವಿಷಯಗಳ ನಡುವಿನ ಭಿನ್ನತೆಯನ್ನು ವಿವರಿಸುವವನು ಚೆನ್ನಾಗಿ ಕಲಿಸುವವನಾಗಿದ್ದಾನೆ.”
ತಾರ್ಕಿಕ ಸಂಬಂಧದಲ್ಲಿ: “ಅರ್ಥವನ್ನು ಕೊಡದ ಯಾವುದೇ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಇಲ್ಲವೇ ಗುಣವಿಮರ್ಶೆಯನ್ನು ಮಾಡಲು ಆಗುವುದಿಲ್ಲ ಮತ್ತು ಹೀಗೆ ಜ್ಞಾಪಕದಲ್ಲಿ ಉಳಿಯುವುದಿಲ್ಲ.”
“ನಿರ್ದಿಷ್ಟ ವಿಷಯಗಳ ಕೊರತೆಯಿರುವಲ್ಲಿ, ವಿಷಯವನ್ನು ಅರ್ಥಮಾಡಿಕೊಳ್ಳಲು ಅಥವಾ ತೀರ್ಮಾನಿಸಲು ಅಸಾಧ್ಯವಾಗಿರುತ್ತದೆ ಮತ್ತು ಅದೇ ರೀತಿಯಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಲು ಸಹ ಅಸಾಧ್ಯವಾಗಿರುತ್ತದೆ.”
ಗ್ರಹಿಕೆಯ ಕುರಿತಾಗಿ: “ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವುದು, ಒಂದು ವಿಷಯದ ಭಾಗಗಳಲ್ಲಿ ಯಾವುದಾದರೊಂದು ಭಾಗವು ಏಕೆ ಮತ್ತು ಹೇಗೆ ಇನ್ನೊಂದಕ್ಕೆ ಸಂಬಂಧಿಸಿದೆ ಮತ್ತು ಅದು ತದ್ರೀತಿಯದ್ದಾದ ಇತರ ವಿಷಯಗಳಿಂದ ಹೇಗೆ ಮತ್ತು ಎಷ್ಟರ ಮಟ್ಟಿಗೆ ಭಿನ್ನವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳುವುದರ ಮೇಲೆ ಹೊಂದಿಕೊಂಡಿರುತ್ತದೆ.”
“ವಿಷಯದಲ್ಲಿ ಏನು ಒಳಗೂಡಿದೆ ಎಂಬುದನ್ನು ಕಂಡುಕೊಳ್ಳಲು ಮೊದಲ ಬಾರಿ ಓದಬೇಕು; ಅದನ್ನು ಅರ್ಥಮಾಡಿಕೊಳ್ಳಲು ಎರಡನೆಯ ಬಾರಿ ಓದಬೇಕು; ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಲು ಮೂರನೆಯ ಬಾರಿ ಓದಬೇಕು; ಅದರಲ್ಲಿ ನಾವು ಕರಗತರಾಗಿದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಮೌನವಾಗಿ ಅದನ್ನು ಪುನರಾವರ್ತಿಸಲು ನಾಲ್ಕನೆಯ ಬಾರಿ ಓದಬೇಕು ಎಂದು ಯೋಗ್ಯವಾಗಿಯೇ ಹೇಳಲಾಗಿದೆ.”
[ಚಿತ್ರ]
“ದೃಶ್ಯ ಲೋಕ” 1883ರ ಸಂಪುಟದಿಂದ ಒಂದು ಪುಟ
[ಪುಟ 17 ರಲ್ಲಿರುವ ಚಿತ್ರ]
ಕಮೀನಿಯಸ್ನ ಕಲಿಕೆಯ ತತ್ತ್ವಗಳನ್ನು ಒಂದುಗೂಡಿಸುವ, 1775ರಲ್ಲಿನ ಒಂದು ಜರ್ಮನ್ ಪಠ್ಯಪುಸ್ತಕ