ಸದಾಕಾಲ ಜೀವಿಸಲು ನೀವು ನಿರೀಕ್ಷಿಸಬಲ್ಲಿರೊ?
“ಗರಿಷ್ಠ ಜೀವನಾಯುಷ್ಯ 115ರಿಂದ 120 ವರ್ಷಗಳ ವರೆಗೆ ಮುಂದುವರಿಯುವಂತೆ ನಿರ್ಧರಿಸುವ ಯಾವುದೊ ವಿಷಯವು ಮಾನವ ದೇಹದೊಳಗೆ ನಡೆಯುತ್ತಾ ಇದೆ” ಎಂದು ಕೋಶ ಜೀವವಿಜ್ಞಾನದ ಪ್ರೊಫೆಸರರಾದ ಡಾಕ್ಟರ್ ಜೇಮ್ಸ್ ಆರ್. ಸ್ಮಿತ್ ಗಮನಿಸುತ್ತಾರೆ. “ಜೀವನಾಯುಷ್ಯಕ್ಕೆ ಒಂದು ಎಲ್ಲೆಯಿರುವುದಾದರೂ, ಅದನ್ನು ಯಾವುದು ನಿರ್ಧರಿಸುತ್ತದೆಂಬುದರ ಕುರಿತಾಗಿ ನಮಗೆ ಯಾವ ಕಲ್ಪನೆಯೂ ಇಲ್ಲ.” ಆದುದರಿಂದ, “ವಿಜ್ಞಾನಿಗಳು ಅಂತಿಮ ರೇಖೆಯನ್ನು ಮುಂದಕ್ಕೆ ದೂಡಲಿಕ್ಕಾಗಿ ಒಂದು ಮಾರ್ಗವನ್ನು ಇನ್ನೂ ಕಂಡುಹಿಡಿಯಲಿಕ್ಕಿರುವುದು ಮತ್ತು ಅವರಲ್ಲಿ ಯಾರೂ ಅದರ ಕುರಿತು ಚಿಂತಿಸುವುದೂ ಇಲ್ಲ” ಎಂಬುದರಲ್ಲಿ ಆಶ್ಚರ್ಯವಿಲ್ಲ ಎಂದು ಜೀವಶಾಸ್ತ್ರಜ್ಞ ಡಾಕ್ಟರ್ ರಾಜರ್ ಗಾಸ್ಡನ್ ಹೇಳುತ್ತಾರೆ. ಹಾಗಾದರೆ ಆ ವಿಷಯವು ಇನ್ನೇನು ಬದಲಾಗಲಿದೆಯೊ?
“ಅತ್ಯಂತ ಮಹತ್ವಪೂರ್ಣವಾದ ಪ್ರಶ್ನೆ”ಯನ್ನು ಎದುರಿಸುವುದು
ವಯಸ್ಸಾಗುವುದನ್ನು ನಿಲ್ಲಿಸುವುದಕ್ಕೆ ಮದ್ದಿದೆ ಎಂಬ ಭರವಸೆದಾಯಕ ವಾದಗಳಿಗೆ ಯಾವುದೇ ಕೊರತೆಯಿಲ್ಲದಿದ್ದರೂ, ಹೆಚ್ಚಿನ ಪರಿಣತರು ಡಾಕ್ಟರ್ ಜೀನ್ ಡಿ. ಕೋಹೆನ್ರೊಂದಿಗೆ ಸಮ್ಮತಿಸುತ್ತಾರೆ. ಇವರು ಅಮೆರಿಕದ ಮುಪ್ಪಿನ ಅಧ್ಯಯನ ನಡೆಸುವ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅವರು ಹೇಳಿದ್ದು: “ಈ ಎಲ್ಲ ದಿವ್ಯೌಷಧಗಳು ಪೊಳ್ಳಾಗಿ ಪರಿಣಮಿಸಿವೆ.” ಏಕೆ? ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ನಲ್ಲಿ, ವೈಜ್ಞಾನಿಕ ವಿಷಯಗಳ ಲೇಖಕಿ ನ್ಯಾನ್ಸಿ ಶೂಟ್ ಹೇಳಿದಂತೆ ಒಂದು ಕಾರಣವೇನೆಂದರೆ, “ವಯಸ್ಸಾಗುವಿಕೆ ಮತ್ತು ಅದರ ಅನಿವಾರ್ಯ ಫಲಿತಾಂಶವಾಗಿರುವ ಮರಣಕ್ಕೆ ಕಾರಣವೇನೆಂಬುದು ಇದುವರೆಗೆ ಯಾರಿಗೂ ತಿಳಿದಿರುವುದಿಲ್ಲ. ಮತ್ತು ರೋಗದ ಕಾರಣವೇನೆಂಬುದು ಗೊತ್ತಿಲ್ಲದೆ, ರೋಗಲಕ್ಷಣಗಳನ್ನು ಗುಣಪಡಿಸಲು ಪ್ರಯತ್ನಿಸುವುದು ನಿರರ್ಥಕವೇ ಸರಿ.” ವಯಸ್ಸಾಗುವಿಕೆಯು ಈಗಲೂ ಒಂದು ಒಗಟಾಗಿ ಉಳಿದಿದೆಯೆಂದು ಡಾಕ್ಟರ್ ಗಾಸ್ಡನ್ ಸಹ ಹೇಳುತ್ತಾರೆ: “ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ವಯಸ್ಸಾಗುವಿಕೆಯು ವ್ಯಕ್ತವಾಗುತ್ತದಾದರೂ, ಅದರ ಮೂಲಭೂತ ಸ್ವಭಾವವು ಈಗಲೂ ಒಂದು ರಹಸ್ಯವಾಗಿ ಉಳಿದಿದೆ.” ಅವರು ಅವಲೋಕಿಸಿದ್ದೇನೆಂದರೆ, “ಅದು ಏಕೆ ಸಂಭವಿಸುತ್ತದೆ ಎಂಬ ಅತ್ಯಂತ ಮಹತ್ವಪೂರ್ಣವಾದ ಪ್ರಶ್ನೆಗೆ” ಯಾವ ಮಹತ್ವವನ್ನೂ ಕೊಡಲಾಗುವುದಿಲ್ಲ.a
ಮನುಷ್ಯರು ಎಷ್ಟು ವೇಗದಿಂದ ಓಡಬಲ್ಲರು, ಎಷ್ಟು ಎತ್ತರ ಹಾರಬಲ್ಲರು, ಮತ್ತು ನೀರಿಗೆ ಹಾರಿ ಎಷ್ಟು ಆಳ ಮುಳುಗಬಲ್ಲರು ಎಂಬುದಕ್ಕೆ ಒಂದು ಎಲ್ಲೆ ಇರುವಂತೆಯೇ, ಕೇವಲ ಮಾನವ ಯೋಚನೆ ಮತ್ತು ವಿವೇಚನೆಯ ಮೂಲಕ ವಿವರಿಸಸಾಧ್ಯವಿರುವ ವಿಷಯಕ್ಕೂ ಒಂದು ಎಲ್ಲೆ ಇದೆಯೆಂಬುದು ವ್ಯಕ್ತ. ಮತ್ತು ‘ವಯಸ್ಸಾಗುವಿಕೆಯು ಏಕೆ ಸಂಭವಿಸುತ್ತದೆ ಎಂಬ ಅತ್ಯಂತ ಮಹತ್ವಪೂರ್ಣವಾದ ಪ್ರಶ್ನೆ’ಗೆ ಉತ್ತರವನ್ನು ಕೊಡುವುದು ಆ ಎಲ್ಲೆಯನ್ನು ಮೀರಿದೆ ಎಂಬುದು ಸುಸ್ಪಷ್ಟ. ಆದುದರಿಂದ, ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿರುವ ಏಕೈಕ ವಿಧಾನವು, ನೆರವಿಲ್ಲದ ಮಾನವ ಜ್ಞಾನದ ಎಲ್ಲೆಗಳನ್ನು ಮೀರುವ ಒಂದು ಮೂಲಕ್ಕೆ ತಿರುಗುವುದೇ ಆಗಿದೆ. ವಿವೇಕದಿಂದ ತುಂಬಿರುವ ಒಂದು ಪ್ರಾಚೀನ ಪುಸ್ತಕವಾದ ಬೈಬಲ್ ಅದನ್ನೇ ಮಾಡುವಂತೆ ಸೂಚಿಸುತ್ತದೆ. “ಜೀವದ ಬುಗ್ಗೆ” ಆಗಿರುವ ಸೃಷ್ಟಿಕರ್ತನ ಕುರಿತಾಗಿ ಮಾತಾಡುತ್ತಾ, ಬೈಬಲ್ ನಮಗೆ ಆಶ್ವಾಸನೆಯನ್ನೀಯುವುದು: “ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು.” (ಕೀರ್ತನೆ 36:9; 2 ಪೂರ್ವಕಾಲವೃತ್ತಾಂತ 15:2) ಹಾಗಾದರೆ, ದೇವರ ವಾಕ್ಯವಾದ ಬೈಬಲನ್ನು ಪರೀಕ್ಷಿಸುವಾಗ, ಮನುಷ್ಯನು ಏಕೆ ಸಾಯುತ್ತಾನೆಂಬುದರ ನಿಜವಾದ ಕಾರಣದ ಕುರಿತಾಗಿ ಯಾವ ವಿಷಯವು ಪ್ರಕಟವಾಗುತ್ತದೆ?
ಮರಣದ ಮೂಲ ಕಾರಣ
ದೇವರು ಪ್ರಥಮ ಮಾನವರನ್ನು ಸೃಷ್ಟಿಸಿದಾಗ ಆತನು ಅವರ “ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು” ಹಾಕಿದನೆಂದು ಬೈಬಲ್ ನಮಗೆ ಹೇಳುತ್ತದೆ. (ಪ್ರಸಂಗಿ 3:11) ಆದರೆ ಸೃಷ್ಟಿಕರ್ತನು ಮಾನವರ ಪ್ರಥಮ ಹೆತ್ತವರಿಗೆ ಕೇವಲ ಸದಾ ಜೀವಿಸುವ ಅಭಿಲಾಷೆಯನ್ನು ಕೊಡಲಿಲ್ಲ. ಆತನು ಅದಕ್ಕಿಂತಲೂ ಹೆಚ್ಚನ್ನು ಮಾಡಿದನು. ಸದಾಕಾಲ ಜೀವಿಸುವ ಒಂದು ಸಂದರ್ಭವನ್ನೂ ಅವರಿಗೆ ಕೊಟ್ಟನು. ಅವರಿಗೆ ಒಂದು ಪರಿಪೂರ್ಣ ದೇಹ ಮತ್ತು ಮನಸ್ಸನ್ನು ಕೊಡಲಾಯಿತು ಮತ್ತು ಅವರು ಒಂದು ಶಾಂತಿಪೂರ್ಣ ಪರಿಸರದಲ್ಲಿ ಜೀವನವನ್ನು ಅನುಭವಿಸಿದರು. ಈ ಪ್ರಥಮ ಮಾನವರು ಸದಾಕಾಲ ಜೀವಿಸಿ, ಸಮಯಾನಂತರ ಭೂಮಿಯು ಅವರ ಪರಿಪೂರ್ಣ ಸಂತತಿಯಿಂದ ತುಂಬಿಸಲ್ಪಡಬೇಕೆಂಬುದು ಸೃಷ್ಟಿಕರ್ತನ ಉದ್ದೇಶವಾಗಿತ್ತು.—ಆದಿಕಾಂಡ 1:28; 2:15.
ಆದರೆ ಯಾವುದೇ ಅಂತಿಮ ರೇಖೆಯಿಲ್ಲದ ಜೀವನಕ್ಕಾಗಿ ಒಂದು ಷರತ್ತು ಇತ್ತು. ಆ ಜೀವನವು, ದೇವರಿಗೆ ವಿಧೇಯತೆಯನ್ನು ತೋರಿಸುವುದರ ಮೇಲೆ ಆಧಾರಿತವಾಗಿತ್ತು. ಆದಾಮನು ದೇವರಿಗೆ ಅವಿಧೇಯನಾಗುವಲ್ಲಿ ‘ಸಾಯಲಿದ್ದನು.’ (ಆದಿಕಾಂಡ 2:16, 17) ದುರಂತಕರವಾಗಿ, ಆ ಪ್ರಥಮ ಮಾನವರು ಅವಿಧೇಯರಾದರು. (ಆದಿಕಾಂಡ 3:1-6) ಹೀಗೆ ಮಾಡುವ ಮೂಲಕ ಅವರು ಪಾಪಿಗಳಾದರು, ಯಾಕೆಂದರೆ “ಪಾಪವು ಅಧರ್ಮವೇ.” (1 ಯೋಹಾನ 3:4) ಫಲಿತಾಂಶವಾಗಿ, ಅವರಿಗೆ ಅಂದಿನಿಂದ ನಿತ್ಯ ಜೀವದ ಪ್ರತೀಕ್ಷೆಯಿರಲಿಲ್ಲ, ಏಕೆಂದರೆ “ಪಾಪವು ಕೊಡುವ ಸಂಬಳ ಮರಣ”ವಾಗಿತ್ತು. (ರೋಮಾಪುರ 6:23) ಆದುದರಿಂದ ಪ್ರಥಮ ಮಾನವರಿಗೆ ದಂಡನೆಯನ್ನು ವಿಧಿಸುವಾಗ ದೇವರು ಹೀಗೆ ಹೇಳಿದನು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.”—ಆದಿಕಾಂಡ 3:19.
ಹೀಗೆ, ಪ್ರಥಮ ಮಾನವರು ಪಾಪವನ್ನು ಮಾಡಿದ ಬಳಿಕ, ಮುಂಚಿತವಾಗಿಯೇ ತಿಳಿಸಲ್ಪಟ್ಟಿದ್ದ ಪಾಪದ ಪರಿಣಾಮವು ಅವರ ವಂಶವಾಹಿಗಳಲ್ಲಿ ಕೆತ್ತಲ್ಪಟ್ಟು, ಅಂತಿಮ ರೇಖೆಯು ಸ್ಥಾಪನೆಗೊಂಡಿತು. ಇದರಿಂದಾಗಿಯೇ ಅವರು ವೃದ್ಧಾಪ್ಯ ಮತ್ತು ಅದರ ಫಲಿತಾಂಶವಾಗಿ ಮರಣಕ್ಕೆ ತುತ್ತಾದರು. ಅಷ್ಟುಮಾತ್ರವಲ್ಲದೆ, ಅವರನ್ನು ಏದೆನ್ ಎಂದು ಕರೆಯಲ್ಪಟ್ಟಿದ್ದ ಅವರ ಮೂಲ ಪ್ರಮೋದವನ ಮನೆಯಿಂದ ಹೊರಹಾಕಿದ ಬಳಿಕ, ಆ ಪ್ರಥಮ ಮಾನವರ ಜೀವಿತಗಳನ್ನು ಪ್ರತಿಕೂಲವಾಗಿ ಬಾಧಿಸಿದ ಇನ್ನೊಂದು ಅಂಶವನ್ನು ಅವರು ಎದುರಿಸಬೇಕಾಯಿತು. ಅದು ಏದೆನಿನ ಹೊರಗಿದ್ದ, ತಡೆಯಂತಿದ್ದ ಪರಿಸರವೇ ಆಗಿತ್ತು. (ಆದಿಕಾಂಡ 3:16-19, 23, 24) ದೋಷಪೂರಿತ ಆನುವಂಶಿಕತೆ ಮತ್ತು ಕಠೋರವಾದ ಪರಿಸರದ ಪರಸ್ಪರ ಕ್ರಿಯೆಯು, ಪ್ರಥಮ ಮಾನವರನ್ನು ಮತ್ತು ಅವರ ಭಾವೀ ಸಂತತಿಯನ್ನು ಬಾಧಿಸಿತು.
ದಂಡನೆ ಮತ್ತು ವಾಗ್ದಾನ
ಪ್ರಥಮ ಮಾನವರಿಗೆ ಮಕ್ಕಳು ಹುಟ್ಟುವ ಮೊದಲೇ, ಅವರ ಜೀವಿತಗಳಲ್ಲಿ ಈ ಹಾನಿಕರವಾದ ಬದಲಾವಣೆಗಳಾದವು. ಆದುದರಿಂದ, ತಮ್ಮಂತೆಯೇ ಅಪರಿಪೂರ್ಣರೂ, ಪಾಪಿಗಳೂ, ವಯಸ್ಸಾಗುವಿಕೆಯ ಪ್ರಕ್ರಿಯೆಗೆ ತುತ್ತಾಗಿರುವ ಒಂದು ಸಂತಾನಕ್ಕೆ ಮಾತ್ರ ಜನ್ಮ ಕೊಡಲು ಅವರಿಗೆ ಸಾಧ್ಯವಾಯಿತು. “ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ಬೈಬಲ್ ಹೇಳುತ್ತದೆ. (ರೋಮಾಪುರ 5:12; ಹೋಲಿಸಿರಿ ಕೀರ್ತನೆ 51:5.) “ನಮ್ಮ ಕೋಶಗಳ ರಚನೆಯಲ್ಲೇ ನಮ್ಮ ಸ್ವಂತ ಮರಣದ ವಕಾಲತ್ತುನಾಮೆಗಳನ್ನು ಹೊತ್ತುಕೊಂಡಿದ್ದೇವೆ” ಎಂದು ದೇಹ ಯಂತ್ರ—ನಿಮ್ಮ ಆರೋಗ್ಯದ ಪರಿದೃಶ್ಯ (ಇಂಗ್ಲಿಷ್) ಎಂಬ ಪುಸ್ತಕವು ಅವಲೋಕಿಸುತ್ತದೆ.
ಅಂತಿಮ ರೇಖೆಯಿಲ್ಲದ ಜೀವನ, ಅಂದರೆ ವೃದ್ಧಾಪ್ಯ ಮತ್ತು ಮರಣವಿಲ್ಲದಂತಹ ಜೀವನದ ಯಾವುದೇ ನಿರೀಕ್ಷೆಯಿಲ್ಲವೆಂಬುದು ಇದರ ಅರ್ಥವಲ್ಲ. ಮನುಷ್ಯರ ಮತ್ತು ದಂಗುಬಡಿಸುವಂತಹ ವೈವಿಧ್ಯವುಳ್ಳ ಇತರ ಜೀವಿಗಳ ಸರ್ವವಿವೇಕಿ ಸೃಷ್ಟಿಕರ್ತನು, ಯಾವುದೇ ರೀತಿಯ ವಂಶವಾಹಿ ಲೋಪದೋಷಗಳನ್ನು ಗುಣಪಡಿಸಿ, ಮನುಷ್ಯನ ಜೀವನವು ಸದಾಕಾಲ ಮುಂದುವರಿಯುತ್ತಾ ಹೋಗಲು ಬೇಕಾಗಿರುವ ಶಕ್ತಿಯನ್ನು ಒದಗಿಸಶಕ್ತನೆಂದು ನಂಬುವುದು ನ್ಯಾಯೋಚಿತವಾಗಿದೆ. ಎರಡನೆಯದಾಗಿ, ಸೃಷ್ಟಿಕರ್ತನು ಇದನ್ನೇ ಮಾಡುವನೆಂದು ಮಾತುಕೊಟ್ಟಿದ್ದಾನೆ. ಪ್ರಥಮ ಮಾನವರಿಗೆ ಮರಣ ದಂಡನೆಯನ್ನು ವಿಧಿಸಿದ ಬಳಿಕ, ಮನುಷ್ಯರು ಭೂಮಿಯ ಮೇಲೆ ಸದಾ ಜೀವಿಸಬೇಕೆಂಬ ತನ್ನ ಉದ್ದೇಶವು ಬದಲಾಗಿಲ್ಲವೆಂದು ದೇವರು ಹಲವಾರು ಸಲ ಪ್ರಕಟಿಸಿದನು. ಉದಾಹರಣೆಗಾಗಿ, ಆತನು ಈ ಆಶ್ವಾಸನೆಯನ್ನು ಕೊಡುತ್ತಾನೆ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಈ ವಾಗ್ದಾನವು ನೆರವೇರುವುದನ್ನು ನೋಡಲು ನೀವೇನನ್ನು ಮಾಡಬೇಕು?
ಸದಾಕಾಲಕ್ಕಾಗಿ ನಿಮ್ಮ ಜೀವನವನ್ನು ವಿಸ್ತರಿಸುವ ವಿಧ
ಆಸಕ್ತಿಕರವಾದ ಸಂಗತಿಯೇನೆಂದರೆ, ವೈಜ್ಞಾನಿಕ ವಿಷಯಗಳ ಲೇಖಕ ರಾನಲ್ಡ್ ಕಾಟ್ಯೂಲಕ್ 300ಕ್ಕಿಂತಲೂ ಹೆಚ್ಚು ವೈದ್ಯಕೀಯ ಸಂಶೋಧಕರನ್ನು ಇಂಟರ್ವ್ಯೂ ಮಾಡಿದ ಬಳಿಕ ಹೇಳಿದ್ದು: “ವೇತನ, ಉದ್ಯೋಗ ಮತ್ತು ಶಿಕ್ಷಣವು ಜನರ ಆರೋಗ್ಯ ಮತ್ತು ಅವರು ಎಷ್ಟು ದೀರ್ಘಸಮಯದ ವರೆಗೆ ಜೀವಿಸುವರೆಂಬುದನ್ನು ಮುಂತಿಳಿಸುವ ಅತಿ ಪ್ರಮುಖ ಅಂಶಗಳಾಗಿವೆ. . . . ಆದರೆ ಅವುಗಳಲ್ಲಿ ಶಿಕ್ಷಣವು, ದೀರ್ಘಾಯುಷ್ಯವನ್ನು ಮುಂತಿಳಿಸುವ ಅತ್ಯಂತ ಪ್ರಮುಖ ಅಂಶವಾಗಿ ಕಾಣಿಸಿಕೊಳ್ಳುತ್ತಿದೆ.” ಅವರು ವಿವರಿಸಿದ್ದು: “ನಾವು ತಿನ್ನುವ ಆಹಾರವು, ನಮ್ಮ ಸೋಂಕು ರಕ್ಷಾ ವ್ಯವಸ್ಥೆಗಳಿಗೆ ಜೀವಘಾತಕ ಸಾಂಕ್ರಾಮಿಕ ಕ್ರಿಮಿಗಳೊಂದಿಗೆ ಹೋರಾಡಲು ಶಕ್ತಿಯನ್ನು ಕೊಡುವಂತೆಯೇ, ಶಿಕ್ಷಣವು ಹಾನಿಕರವಾದ ಆಯ್ಕೆಗಳನ್ನು ಮಾಡುವುದರ ವಿರುದ್ಧ ಸಹಾಯಮಾಡುತ್ತದೆ.” ಒಬ್ಬ ಸಂಶೋಧಕನು ಹೇಳಿದಂತೆ, “ಶಿಕ್ಷಣದೊಂದಿಗೆ ನೀವು ನಿಮ್ಮ ಜೀವನವನ್ನು ಹೇಗೆ ನಡೆಸುವುದು” ಎಂಬುದನ್ನು ಮತ್ತು “ಮುಂದೆ ಬರಬಹುದಾದ ತಡೆಗಳನ್ನು ಜಯಿಸುವುದು” ಹೇಗೆಂಬುದನ್ನು “ಕಲಿಯುತ್ತೀರಿ.” ಹೀಗೆ, ಲೇಖಕ ಕಾಟ್ಯೂಲಕ್ ಹೇಳಿದಂತೆ ಶಿಕ್ಷಣವು ಒಂದು ರೀತಿಯಲ್ಲಿ “ಹೆಚ್ಚು ಆರೋಗ್ಯಪೂರ್ಣ, ಹೆಚ್ಚು ದೀರ್ಘವಾದ ಜೀವನದ ಗುಟ್ಟಾಗಿದೆ.”
ಭವಿಷ್ಯತ್ತಿನಲ್ಲಿ ನಿತ್ಯಜೀವವನ್ನು ಪಡೆಯಲಿಕ್ಕಾಗಿಯೂ ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆಯು ಶಿಕ್ಷಣ, ಅಂದರೆ ಬೈಬಲ್ ಶಿಕ್ಷಣವಾಗಿದೆ. ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಸೃಷ್ಟಿಕರ್ತನಾದ ಯೆಹೋವ ದೇವರು, ಯೇಸು ಕ್ರಿಸ್ತನು, ಮತ್ತು ದೇವರು ಒದಗಿಸಿರುವ ಪ್ರಾಯಶ್ಚಿತ್ತ ಏರ್ಪಾಡಿನ ಕುರಿತಾಗಿ ಜ್ಞಾನವನ್ನು ತೆಗೆದುಕೊಳ್ಳುವುದು, ಒಬ್ಬ ವ್ಯಕ್ತಿಯು ನಿತ್ಯಜೀವಕ್ಕೆ ನಡೆಸುವ ಮಾರ್ಗದಲ್ಲಿ ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಲು ಅವನನ್ನು ಸಿದ್ಧಗೊಳಿಸುವ ಏಕಮಾತ್ರ ಶಿಕ್ಷಣವಾಗಿದೆ.—ಮತ್ತಾಯ 20:28; ಯೋಹಾನ 3:16.
ಈ ಜೀವದಾಯಕ ಬೈಬಲ್ ಜ್ಞಾನವನ್ನು ಪಡೆದುಕೊಳ್ಳಲು ನಿಮಗೆ ಸಹಾಯಮಾಡಬಲ್ಲ ಬೈಬಲ್ ಶಿಕ್ಷಣದ ಕಾರ್ಯಕ್ರಮವನ್ನು ಯೆಹೋವನ ಸಾಕ್ಷಿಗಳು ನಡೆಸುತ್ತಾರೆ. ಈ ಉಚಿತವಾದ ಕಾರ್ಯಕ್ರಮದ ಕುರಿತಾಗಿ ಹೆಚ್ಚನ್ನು ಕಲಿತುಕೊಳ್ಳಲು ಅವರ ರಾಜ್ಯ ಸಭಾಗೃಹಕ್ಕೆ ಭೇಟಿ ನೀಡಿರಿ, ಇಲ್ಲವೆ ನಿಮಗೆ ಅನುಕೂಲಕರವಾಗಿರುವ ಒಂದು ಸಮಯದಲ್ಲಿ ನಿಮ್ಮನ್ನು ಭೇಟಿಯಾಗಲು ಅವರನ್ನು ಕೇಳಿಕೊಳ್ಳಿರಿ. ಜೀವಿತವು, ತಡೆಗಳಿಂದ ಅಡ್ಡಗಟ್ಟಲ್ಪಡದ ಮತ್ತು ಒಂದು ಅಂತಿಮ ರೇಖೆಯಿಂದ ಸೀಮಿತಗೊಳಿಸಲ್ಪಡದ ಒಂದು ಸಮಯವು ಹತ್ತಿರವಿದೆ ಎಂಬುದರ ಕುರಿತಾಗಿ ಬೈಬಲಿನಲ್ಲಿ ದೃಢವಾದ ಪ್ರಮಾಣವಿದೆಯೆಂಬುದನ್ನು ನೀವು ನೋಡುವಿರಿ. ಮರಣವು ಸಾವಿರಾರು ವರ್ಷಗಳಿಂದ ರಾಜನೋಪಾದಿ ಆಳ್ವಿಕೆಯನ್ನು ನಡೆಸಿರುವುದಾದರೂ, ಅದು ಬೇಗನೆ ನಿತ್ಯಕ್ಕೂ ಸೋಲಿಸಲ್ಪಡುವುದು. ಆಬಾಲವೃದ್ಧರಿಗೆ ಇದು ಎಷ್ಟೊಂದು ರೋಮಾಂಚಕ ಪ್ರತೀಕ್ಷೆಯಾಗಿದೆ!
[ಅಧ್ಯಯನ ಪ್ರಶ್ನೆಗಳು]
a ವಯಸ್ಸಾಗುವಿಕೆಯು ಹೇಗೆ ಸಂಭವಿಸುತ್ತದೆಂಬುದನ್ನು ವರ್ಣಿಸುವ ವಿಭಿನ್ನವಾದ ಅಸಂಖ್ಯಾತ ವಾದಗಳನ್ನು (ಒಂದು ಲೆಕ್ಕಕ್ಕನುಸಾರ, 300ಕ್ಕಿಂತಲೂ ಹೆಚ್ಚು ವಾದಗಳು!) ವೃದ್ಧಾಪ್ಯ ತಜ್ಞರು ಮಂಡಿಸಿದ್ದಾರೆ. ಆದರೆ ಈ ವಾದಗಳು, ವಯಸ್ಸಾಗುವಿಕೆಯು ಏಕೆ ಸಂಭವಿಸುತ್ತದೆಂಬುದನ್ನು ಮೂಲತಃ ವಿವರಿಸುವುದಿಲ್ಲ.
[ಪುಟ 13 ರಲ್ಲಿರುವ ಚಿತ್ರಗಳು]
ನಿತ್ಯಜೀವವನ್ನು ಪಡೆದುಕೊಳ್ಳಲಿಕ್ಕಾಗಿ ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆಯು, ಬೈಬಲ್ ಶಿಕ್ಷಣವಾಗಿದೆ