ಹೆಚ್ಚು ಕಾಲ ಬದುಕಲಿಕ್ಕಾಗಿ ಮಾಡಲ್ಪಡುತ್ತಿರುವ ಹುಡುಕಾಟವು ಹೇಗೆ ಸಫಲವಾಗಬಲ್ಲದು?
ಹೊಸ ಸಹಸ್ರವರ್ಷವು, ದೀರ್ಘವಾಗಿ ಜೀವಿಸಲಿಕ್ಕಾಗಿರುವ ಮನುಷ್ಯನ ಪ್ರಯತ್ನಗಳಲ್ಲಿ ಅದ್ಭುತ ಪ್ರಗತಿಯನ್ನು ಕಾಣುವುದು ಎಂಬ ನಿರೀಕ್ಷೆಯಲ್ಲಿ ಕೆಲವರು ನಂಬಿಕೆಯನ್ನಿಟ್ಟಿದ್ದಾರೆ. ಡಾ. ರಾನಲ್ಡ್ ಕ್ಲಾಟ್ಸ್ ಅವರಲ್ಲಿ ಒಬ್ಬರಾಗಿದ್ದಾರೆ. ಅವರು ಅಮೆರಿಕನ್ ಅಕ್ಯಾಡೆಮಿ ಆಫ್ ಆ್ಯಂಟಿ-ಏಜಿಂಗ್ ಮೆಡಿಸಿನ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು, ಮಾನವ ಜೀವನಾಯುಷ್ಯವನ್ನು ಹೆಚ್ಚಿಸಲಿಕ್ಕಾಗಿ ತಮ್ಮನ್ನು ನೀಡಿಕೊಂಡಿರುವ ವೈದ್ಯರು ಹಾಗೂ ವಿಜ್ಞಾನಿಗಳಿಂದ ರಚಿತವಾಗಿದೆ. ಅವರು ಹಾಗೂ ಅವರ ಸಹಕರ್ಮಿಗಳಿಗೆ ದೀರ್ಘಕಾಲ ಜೀವಿಸುವ ಯೋಜನೆಯಿದೆ. “ಕಡಿಮೆಪಕ್ಷ 130 ವರ್ಷಗಳ ವರೆಗಾದರೂ ಜೀವಿಸಬೇಕೆಂಬ ನಿರೀಕ್ಷೆ ನನಗಿದೆ” ಎಂದು ಡಾ. ಕ್ಲಾಟ್ಸ್ ಹೇಳುತ್ತಾರೆ. “ವಯಸ್ಸಾಗುವಿಕೆಯು ಅನಿವಾರ್ಯವಲ್ಲ ಎಂಬುದನ್ನು ನಾವು ನಂಬುತ್ತೇವೆ. ಇಂದು ಎಂತಹ ತಾಂತ್ರಿಕತೆಯು ಅಸ್ತಿತ್ವದಲ್ಲಿದೆಯೆಂದರೆ, ಈಗ ಸ್ವಾಭಾವಿಕವಾದ ವಯಸ್ಸಾಗುವಿಕೆಯೆಂದು ಕರೆಯಲ್ಪಡುವ ಶಾರೀರಿಕ ಕ್ಷೀಣಿಸುವಿಕೆ ಮತ್ತು ರೋಗಗಳನ್ನು ಸಹ ಅದು ನಿಧಾನಗೊಳಿಸಬಲ್ಲದು, ನಿಲ್ಲಿಸಬಲ್ಲದು ಮತ್ತು ಬಹುಶಃ ವಿಶೇಷವಾಗಿ ತದ್ವಿರುದ್ಧಗೊಳಿಸಬಲ್ಲದು.” ದೀರ್ಘಕಾಲ ಜೀವಿಸುವ ಬಯಕೆಯನ್ನು ಪೂರೈಸಲಿಕ್ಕಾಗಿ, ಪ್ರತಿ ದಿನ ಡಾ. ಕ್ಲಾಟ್ಸ್ ಸುಮಾರು 60 ಮಾತ್ರೆಗಳನ್ನು ನುಂಗುತ್ತಾರೆ.
ಹಾರ್ಮೋನ್ ಚಿಕಿತ್ಸೆ ಮತ್ತು ಆನುವಂಶಿಕತೆ—ನಿರೀಕ್ಷೆಯ ಕಾರಣಗಳಾಗಿವೆಯೊ?
ಹಾರ್ಮೋನ್ ಚಿಕಿತ್ಸೆಯು ನಿರೀಕ್ಷೆಯನ್ನು ಮೂಡಿಸುವಂತಹ ಒಂದು ಕ್ಷೇತ್ರವಾಗಿದೆ. ಡಿಏಚ್ಇಏ (DHEA) ಎಂದು ಪ್ರಸಿದ್ಧವಾಗಿರುವ ಹಾರ್ಮೋನ್ಗಳೊಂದಿಗೆ ನಡೆಸಿದ ಪ್ರಯೋಗಗಳು, ಪ್ರಯೋಗಶಾಲೆಯ ಪ್ರಾಣಿಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತೆ ತೋರುತ್ತದೆ.
ಕೈನೆಟಿನ್ ಎಂಬ ಸಸ್ಯ ಹಾರ್ಮೋನ್ನ ಕುರಿತು, ಡೆನ್ಮಾರ್ಕಿನಲ್ಲಿರುವ ಆರ್ಹೂಸ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರರಾಗಿರುವ ಡಾ. ಸುರೇಶ್ ರಾಟಾನ್ ಈ ಕೆಳಗಿನಂತೆ ಹೇಳಿದರೆಂದು, ಸ್ವೀಡನ್ನ ಆಫ್ಟಾನ್ಬ್ಲಾಡೆಟ್ ಎಂಬ ದಿನಪತ್ರಿಕೆಯು ತಿಳಿಯಪಡಿಸಿತು: “ನಮ್ಮ ಪ್ರಯೋಗಶಾಲೆಯ ಪರೀಕ್ಷೆಗಳು ತೋರಿಸುವುದೇನೆಂದರೆ, ಕೈನೆಟಿನ್ನಲ್ಲಿ ಬೆಳೆಸಲ್ಪಟ್ಟ ಮಾನವ ಚರ್ಮದ ಜೀವಕೋಶಗಳು, ಸಹಜವಾದ ರೀತಿಯಲ್ಲಿ ವಯಸ್ಸಿನ ಬದಲಾವಣೆಯನ್ನು ಹೊಂದುವುದಿಲ್ಲ. ತಮ್ಮ ಜೀವಮಾನಕಾಲದಲ್ಲೆಲ್ಲ ಅವು ಎಳೆಯ ಜೀವಕೋಶಗಳಾಗಿಯೇ ಉಳಿಯುತ್ತವೆ.” ಈ ಹಾರ್ಮೋನ್ಗಳ ಚಿಕಿತ್ಸೆ ನೀಡಲ್ಪಟ್ಟ ಕೀಟಾಣುಗಳು, ಸಾಮಾನ್ಯವಾಗಿ ಬದುಕುವುದಕ್ಕಿಂತಲೂ 30ರಿಂದ 45 ಪ್ರತಿಶತದಷ್ಟು ಹೆಚ್ಚು ಕಾಲ ಬದುಕುತ್ತವೆ ಎಂದು ಹೇಳಲಾಗಿದೆ.
ಮೆಲಟೋನಿನ್ ಚಿಕಿತ್ಸೆಗಳು, ಇಲಿಗಳ ಜೀವನಾಯುಷ್ಯವನ್ನು 25 ಪ್ರತಿಶತದಷ್ಟು ಹೆಚ್ಚಿಸಿವೆ ಎಂದು ಹೇಳಲಾಗಿದೆ. ಅಷ್ಟುಮಾತ್ರವಲ್ಲ, ಇಲಿಗಳು ಹೆಚ್ಚು ಎಳೆಯವುಗಳಾಗಿ, ಆರೋಗ್ಯಭರಿತವಾಗಿ, ಮತ್ತು ಹೆಚ್ಚು ಶಕ್ತಿಭರಿತವಾಗಿ ಕಂಡುಬಂದಿವೆ.
ದೇಹದ ಬೆಳವಣಿಗೆಯನ್ನು ಉಂಟುಮಾಡುವ ಹಾರ್ಮೋನ್, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಗಟ್ಟಿಮುಟ್ಟಾದ ಮಾಂಸಖಂಡಗಳನ್ನು ಉಂಟುಮಾಡುತ್ತದೆ, ಕಾಮಪ್ರಚೋದನೆಯನ್ನು ಉಂಟುಮಾಡುತ್ತದೆ, ಉಲ್ಲಾಸಮಯ ಮನೋಭಾವವನ್ನು ಉಂಟುಮಾಡುತ್ತದೆ, ಮಾನಸಿಕ ಬುದ್ಧಿಯನ್ನು ಚುರುಕುಗೊಳಿಸುತ್ತದೆ, ಮತ್ತು ಒಬ್ಬ ಹದಿವಯಸ್ಕನಲ್ಲಿರುವ ಜೀವದ್ರವ್ಯ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹ್ಯೂಮನ್ ಗ್ರೋತ್ ಹಾರ್ಮೋನ್ (hGH)ನ ಸಮರ್ಥಕರು ಪ್ರತಿಪಾದಿಸುತ್ತಾರೆ.
ಅನೇಕರು ಆನುವಂಶಿಕತೆಯ ಮೇಲೂ ಭರವಸೆಯಿಡುತ್ತಾರೆ. ವಂಶವಾಹಿಗಳನ್ನು ಕೌಶಲದಿಂದ ಉಪಯೋಗಿಸುವ ಮೂಲಕ ತಾವು ದುಂಡುಹುಳುವಿನ ಜೀವನಾಯುಷ್ಯವನ್ನು ನಿಯಂತ್ರಿಸಸಾಧ್ಯವಿದೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ವಾಸ್ತವದಲ್ಲಿ, ಅವುಗಳಲ್ಲಿ ಕೆಲವನ್ನು ಸಾಮಾನ್ಯ ಜೀವನಾಯುಷ್ಯಕ್ಕಿಂತಲೂ ಆರು ಪಟ್ಟು ಹೆಚ್ಚು ಕಾಲದ ವರೆಗೆ ಸಜೀವವಾಗಿಡುವುದರಲ್ಲಿ ಅವರು ಸಫಲರಾಗಿದ್ದಾರೆ. ಮಾನವರಲ್ಲಿಯೂ ಈ ರೀತಿಯ ವಂಶವಾಹಿಗಳನ್ನು ಕಂಡುಹಿಡಿದು ಪ್ರಯೋಗಿಸುವ ನಿರೀಕ್ಷೆಗಳನ್ನು ಇದು ಹೆಚ್ಚಿಸಿದೆ. ಮಾಂಟ್ರಿಯಲ್ನ ಮೆಗಿಲ್ ವಿಶ್ವವಿದ್ಯಾನಿಲಯದ ಡಾ. ಸಿಗ್ಫ್ರೀಡ್ ಹೆಕೀಮಿ ಹೀಗೆ ಹೇಳಿದರೆಂದು ಟೈಮ್ ಪತ್ರಿಕೆಯು ಉದ್ಧರಿಸಿತು: “ಮಾನವ ಆಯುಷ್ಯವನ್ನು ನಿರ್ಧರಿಸುವ ಎಲ್ಲ ವಂಶವಾಹಿಗಳನ್ನು ನಾವು ಕಂಡುಕೊಳ್ಳುವಲ್ಲಿ, ಬಹುಶಃ ಅವುಗಳ ಚಟುವಟಿಕೆಯನ್ನು ನಿಧಾನಗೊಳಿಸಿ, ಆಯುಷ್ಯವನ್ನು ಹೆಚ್ಚಿಸಸಾಧ್ಯವಿದೆ.”
ಪ್ರತಿ ಬಾರಿ ಜೀವಕೋಶವು ವಿಭಜನೆಗೊಂಡಾಗ, ಟೆಲಮಿರ್ ಎಂದು ಕರೆಯಲ್ಪಡುವ ವರ್ಣತಂತುಗಳ ತುದಿಭಾಗವು ಚಿಕ್ಕದಾಗುತ್ತಾ ಬರುತ್ತದೆ ಎಂಬುದು ಜೀವಶಾಸ್ತ್ರಜ್ಞರಿಗೆ ಬಹಳ ಸಮಯದಿಂದ ತಿಳಿದಿದೆ. ಟೆಲಮಿರ್ನ ಉದ್ದವು ಸುಮಾರು 20 ಪ್ರತಿಶತದಷ್ಟು ಕಡಿಮೆಯಾದಾಗ, ಜೀವಕೋಶದ ವಿಭಜನಾ ಸಾಮರ್ಥ್ಯವು ನಿಂತುಹೋಗುತ್ತದೆ ಮತ್ತು ಅದು ಸಾಯುತ್ತದೆ. ಟೆಲಮಿರೇಸ್ ಎಂದು ಕರೆಯಲ್ಪಡುವ ವಿಶೇಷ ಕಿಣ್ವವು ಮಾತ್ರ ಟೆಲಮಿರನ್ನು ಪುನಃ ಅಷ್ಟೇ ಉದ್ದದ್ದಾಗಿ ಮಾಡಿ, ಜೀವಕೋಶ ವಿಭಜನೆಯ ಪ್ರಕ್ರಿಯೆಯನ್ನು ಮುಂದುವರಿಸಬಲ್ಲದು. ಬಹುತೇಕ ಜೀವಕೋಶಗಳಲ್ಲಿ ಈ ಕಿಣ್ವವು ನಿಗ್ರಹಿಸಲ್ಪಟ್ಟಿರುತ್ತದೆ ಮತ್ತು ನಿಷ್ಕ್ರಿಯವಾಗಿರುತ್ತದೆ. ಆದರೆ ಸಕ್ರಿಯವಾಗಿರುವ ಟೆಲಮಿರೇಸನ್ನು ಕೆಲವು ಜೀವಕೋಶಗಳಲ್ಲಿ ಸೇರಿಸಿ, ಅವುಗಳು ಬೆಳೆದು, ಸಹಜ ಸಂಖ್ಯೆಗಿಂತಲೂ ಹೆಚ್ಚು ಬಾರಿ ವಿಭಜನೆಗೊಳ್ಳುತ್ತಾ ಇರುವಂತೆ ಮಾಡಲಾಗಿದೆ.
ಸಂಶೋಧಕರಿಗನುಸಾರ, ವಯಸ್ಸಾಗುವಿಕೆಗೆ ಸಂಬಂಧಿಸಿದ ರೋಗಗಳನ್ನು ಹೊಡೆದೋಡಿಸುವುದರಲ್ಲಿ ಇದು ಆಶ್ಚರ್ಯಕರ ಸಾಧ್ಯತೆಗಳನ್ನು ಉಂಟುಮಾಡುತ್ತದೆ. ದೇಹದ ಮೂಲ ಜೀವಕೋಶಗಳನ್ನು (ದೇಹದ ಅಂಗಾಂಶದ ಪುನರುತ್ಪಾದನೆಗೆ ಸಹಾಯ ಮಾಡುವ ಜೀವಕೋಶಗಳು), ಸಕ್ರಿಯ ಟೆಲಮಿರೇಸಿನಿಂದ “ಅಮರಗೊಳಿಸಲ್ಪಟ್ಟಿರುವ” ಮೂಲ ಜೀವಕೋಶಗಳಿಂದ ಭರ್ತಿಮಾಡುವುದರ ಕುರಿತಾಗಿ ಏನು? ಡಾ. ವಿಲಿಯಮ್ ಎ. ಹೇಸಲ್ಟೀನ್ ಹೇಳುವುದು: “ಇದು ಮಾನವ ಅಮರತ್ವದ ಕುರಿತು ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿರುವ ವಿಚಾರಧಾರೆಯಾಗಿದ್ದು, ಮುಂದಿನ 50 ವರ್ಷಗಳೊಳಗೆ ನಿಧಾನವಾಗಿ ಕಾರ್ಯರೂಪಕ್ಕೆ ತರಲ್ಪಡುವುದು.”—ದ ನ್ಯೂ ಯಾರ್ಕ್ ಟೈಮ್ಸ್.
ನ್ಯಾನೊಟೆಕ್ನಾಲಜಿ ಮತ್ತು ಕ್ರೈಯಾನಿಕ್ಸ್ಗಳು ಪರಿಹಾರವನ್ನು ನೀಡುತ್ತವೊ?
ನ್ಯಾನೊಟೆಕ್ನಾಲಜಿ, ಅಂದರೆ ನ್ಯಾನೊಮೀಟರ್ (ಒಂದು ಮೀಟರ್ನ ಶತಕೋಟಿಯ ಒಂದು ಭಾಗ)ನಷ್ಟು ಚಿಕ್ಕವುಗಳಾಗಿರುವ ಘಟಕಗಳನ್ನು ಹೇಗೆ ವಿನ್ಯಾಸಿಸುವುದು ಎಂಬುದರ ಕುರಿತಾದ ಅಧ್ಯಯನವು ಸಹ ಜನರಲ್ಲಿ ಆಶಾಕಿರಣವನ್ನು ಉಂಟುಮಾಡಿದೆ. ಭವಿಷ್ಯತ್ತಿನಲ್ಲಿ, ಜೀವಕೋಶಗಳಿಗಿಂತಲೂ ಅತಿ ಚಿಕ್ಕದಾಗಿರುವ ಕಂಪ್ಯೂಟರೀಕೃತ ಯಂತ್ರಗಳು, ಅತ್ಯಂತ ಸೂಕ್ಷ್ಮ ಕಣದ ಮಟ್ಟದಲ್ಲಿ ಕಾರ್ಯನಡಿಸುವಂತೆ ಏರ್ಪಡಿಸಲ್ಪಡಬಹುದು; ಇವು ಜೀವಕೋಶಗಳನ್ನು, ಅಂಗಾಂಶಗಳನ್ನು ಹಾಗೂ ಅಂಗಗಳನ್ನು ಸರಿಪಡಿಸಿ, ನವೀಕರಿಸಬಲ್ಲವು ಎಂದು ಆ ಕ್ಷೇತ್ರದಲ್ಲಿರುವ ದಾರ್ಶನಿಕರು ಪ್ರತಿಪಾದಿಸುತ್ತಾರೆ. ಮನುಷ್ಯನನ್ನು ಶಾರೀರಿಕವಾಗಿ ಅಮರನನ್ನಾಗಿ ಮಾಡಲಿಕ್ಕಾಗಿ, 21ನೆಯ ಶತಮಾನದ ವೈದ್ಯರು ನ್ಯಾನೊಟೆಕ್ನಾಲಜಿಯನ್ನು ಉಪಯೋಗಿಸಬಹುದು ಎಂದು, ವಯಸ್ಸಾಗುವಿಕೆಯನ್ನು ವಿರೋಧಿಸುವ ಒಂದು ಸಂಮೇಳನದಲ್ಲಿ ಸಂಶೋಧಕನೊಬ್ಬನು ಸೂಚಿಸಿದನು.
ವಿಜ್ಞಾನವು ಮೃತ ಜೀವಕೋಶಗಳನ್ನು ಪುನರುಜ್ಜೀವಿಸಲು ಮತ್ತು ಪುನಃ ಸಕ್ರಿಯಗೊಳಿಸಲು ಶಕ್ತವಾಗುವುದು ಎಂಬ ನಿರೀಕ್ಷೆಯಿಂದ, ಮಾನವ ದೇಹಗಳನ್ನು ಘನೀಭವಿಸಿಡುವ ಪದ್ಧತಿಯೇ ಕ್ರೈಯಾನಿಕ್ಸ್ ಆಗಿದೆ. ಇಡೀ ದೇಹವನ್ನು ಅಥವಾ ಕೇವಲ ಮಿದುಳನ್ನು ಘನೀಭವಿಸಸಾಧ್ಯವಿದೆ. ಒಬ್ಬ ಮನುಷ್ಯನು ಒಂದು ಬೆಡ್ಷೀಟನ್ನು ಸಹ ಘನೀಭವಿಸಿದನು. ಬೆಡ್ಷೀಟನ್ನು ಏಕೆ ಘನೀಭವಿಸಿದನು? ಅದು ಕಾಣೆಯಾಗಿಹೋಗಿದ್ದ ಒಬ್ಬ ಸ್ನೇಹಿತನಿಗೆ ಸೇರಿದ್ದಾಗಿದ್ದು, ಕೆಲವು ಚರ್ಮದ ಜೀವಕೋಶಗಳು ಹಾಗೂ ಕೆಲವಾರು ಕೂದಲುಗಳು ಅದರಲ್ಲಿದ್ದವು. ಒಂದೇ ಒಂದು ಜೀವಕೋಶದಿಂದ ಅಥವಾ ಕೆಲವಾರು ಜೀವಕೋಶಗಳಿಂದ ಜನರನ್ನು ಪುನರುಜ್ಜೀವಿಸುವ ಮಟ್ಟವನ್ನು ವಿಜ್ಞಾನವು ತಲಪುವುದಾದರೆ, ತನ್ನ ಸ್ನೇಹಿತನಿಗೆ ಪುನಃ ಬದುಕುವ ಅವಕಾಶವನ್ನು ಕೊಡುವ ಸಲುವಾಗಿ ಅವನು ಅವುಗಳನ್ನು ಘನೀಭವಿಸಲು ಬಯಸಿದನು.
ನಾವು ಯಾವುದರ ಮೇಲೆ ಭರವಸೆಯಿಡಬೇಕು?
ಸಾಮಾನ್ಯವಾಗಿ ಮನುಷ್ಯನು ಸಾಯಲು ಬಯಸುವುದಿಲ್ಲ, ಬದಲಾಗಿ ತಾನು ಬದುಕಬೇಕೆಂಬ ಸಹಜ ಬಯಕೆ ಅವನಿಗಿರುತ್ತದೆ. ಆದುದರಿಂದ, ಈ ಕ್ಷೇತ್ರದಲ್ಲಿ ಮಾಡಲ್ಪಟ್ಟಿರುವ ವೈಜ್ಞಾನಿಕ ಪ್ರಗತಿಯು ಖಂಡಿತವಾಗಿಯೂ ಅತ್ಯುತ್ಸಾಹದಿಂದ ಅಂಗೀಕರಿಸಲ್ಪಟ್ಟಿದೆ ಮತ್ತು ಅತ್ಯಧಿಕ ನಿರೀಕ್ಷಣೆಗಳೂ ಇದರಲ್ಲಿ ಒಳಗೂಡಿವೆ. ಆದರೆ ಕೈನೆಟಿನ್, ಮೆಲಟೋನಿನ್, ಏಚ್ಜಿಏಚ್, ಅಥವಾ ಬೇರೆ ಯಾವುದೇ ವಸ್ತುವು ನಿಜವಾಗಿಯೂ ಮಾನವರಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ ಎಂಬುದಕ್ಕೆ ಇಷ್ಟರ ತನಕ ಯಾವುದೇ ನೈಜ ಪುರಾವೆಯು ದೊರೆತಿರುವುದಿಲ್ಲ. ಜೀವಕೋಶಗಳಲ್ಲಿ ಟೆಲಮಿರೇಸನ್ನು ಸೇರಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ, ಬದಲಾಗಿ ಅದರಿಂದ ಕ್ಯಾನ್ಸರ್ ರೋಗಬರಿಸುವಂತಹ ಜೀವಕೋಶಗಳು ಉಂಟಾಗುವವು ಎಂದು ಸಂದೇಹವಾದಿಗಳು ಭಯಪಡುತ್ತಾರೆ. ಮತ್ತು ನ್ಯಾನೊಟೆಕ್ನಾಲಜಿ ಮತ್ತು ಕ್ರೈಯಾನಿಕ್ಸ್ನ ಉಪಯೋಗವು ಇದುವರೆಗೂ ವಾಸ್ತವಿಕತೆಯಾಗಿಲ್ಲ, ಕೇವಲ ಕಲ್ಪನಾ ಕಥೆಯಾಗಿ ಉಳಿದಿದೆ.
ವಿಜ್ಞಾನವು ಕೆಲವರಿಗೆ ದೀರ್ಘಕಾಲ ಬದುಕಲು, ಹೆಚ್ಚು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಹಾಯ ಮಾಡಿದೆ ಮತ್ತು ಇನ್ನೂ ಮಾಡುತ್ತಾ ಇದೆಯಾದರೂ, ಅದು ಯಾರಿಗೂ ನಿತ್ಯಜೀವವನ್ನು ಕೊಡುವುದಿಲ್ಲ. ಏಕೆ? ಸರಳವಾಗಿ ಹೇಳುವುದಾದರೆ, ವಯಸ್ಸಾಗುವಿಕೆ ಮತ್ತು ಮರಣದ ಮೂಲ ಕಾರಣವು, ಮಾನವ ವಿಜ್ಞಾನದ ಕ್ಷೇತ್ರಕ್ಕೆ ನಿಲುಕದ ಒಂದು ಸಂಗತಿಯಾಗಿದೆ.
ವಯಸ್ಸಾಗುವಿಕೆ ಮತ್ತು ಮರಣದ ಮೂಲ ಕಾರಣ
ಒಂದಲ್ಲ ಒಂದು ರೀತಿಯಲ್ಲಿ ವಯಸ್ಸಾಗುವಿಕೆ ಮತ್ತು ಮರಣವು ನಮ್ಮ ವಂಶವಾಹಿಗಳಲ್ಲಿ ಮುಂದಾಗಿಯೇ ಯೋಜಿಸಲ್ಪಟ್ಟಿದೆ ಎಂಬುದನ್ನು ಅಧಿಕಾಂಶ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಪ್ರಶ್ನೆಯೇನೆಂದರೆ: ಯಾವಾಗ, ಹೇಗೆ, ಮತ್ತು ಏಕೆ ಅವು ನಮ್ಮ ಆನುವಂಶಿಕ ನಿಯಮಾವಳಿಯನ್ನು ಪ್ರವೇಶಿಸಿದವು?
ಬೈಬಲು ನಮಗೆ ತುಂಬ ಸರಳವಾದ ಉತ್ತರವನ್ನು ಕೊಡುತ್ತದೆ—ಆದರೆ ಅದು ಆನುವಂಶಿಕತೆ ಅಥವಾ ಡಿಎನ್ಏಯ ಪರಿಭಾಷೆಯಲ್ಲಿ ಅದನ್ನು ಸ್ಪಷ್ಟಪಡಿಸುವುದಿಲ್ಲ. ರೋಮಾಪುರ 5:12 ಹೀಗೆ ಹೇಳುತ್ತದೆ: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”
ಮೊದಲ ಮಾನವನಾದ ಆದಾಮನಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯಿತ್ತು. ಶಾಶ್ವತವಾಗಿ ಜೀವಿಸುತ್ತಾ, ಜೀವನದಲ್ಲಿ ಆನಂದವನ್ನು ಅನುಭವಿಸಲು ಅಗತ್ಯವಾಗಿರುವ ಸಾಮರ್ಥ್ಯಗಳಿಂದ ಅವನ ದೇಹವು ರಚಿಸಲ್ಪಟ್ಟಿತ್ತು. ಆದರೂ, ನಿತ್ಯಜೀವವು ನಿಯಮಾಧೀನವಾಗಿತ್ತು. ಆದಾಮನು ಶಾಶ್ವತವಾಗಿ ಬಾಳಬೇಕಾದರೆ, ಜೀವದ ಮೂಲನೂ, ತನ್ನ ಸೃಷ್ಟಿಕರ್ತನೂ ಆಗಿರುವಾತನಿಗೆ ವಿಧೇಯನಾಗಿರಬೇಕಿತ್ತು ಮತ್ತು ಆತನೊಂದಿಗೆ ಸಹಕರಿಸಬೇಕಾಗಿತ್ತು.—ಆದಿಕಾಂಡ 1:31; 2:15-17.
ಆದಾಮನು ಸೃಷ್ಟಿಕರ್ತನಿಗೆ ಅವಿಧೇಯತೆಯನ್ನು ತೋರಿಸುವ ಮಾರ್ಗವನ್ನು ಆಯ್ದುಕೊಂಡನು. ಇದರ ಫಲವಾಗಿ, ಒಂದುವೇಳೆ ಮನುಷ್ಯನು ದೇವರಿಂದ ಸ್ವತಂತ್ರನಾಗಿರುವಲ್ಲಿ, ಖಂಡಿತವಾಗಿಯೂ ಅವನು ಮೊದಲಿಗಿಂತ ಉತ್ತಮ ಸ್ಥಿತಿಯಲ್ಲಿರುವನು ಎಂದು ಆದಾಮನು ಪ್ರತಿಪಾದಿಸಿದನು. ಹೀಗೆ ಅವನು ಪಾಪಮಾಡಿದನು. ಆ ಹಂತದಿಂದಲೇ ಅವನ ಆನುವಂಶಿಕ ನಿಯಮಾವಳಿಯು ಬದಲಾದ ಸ್ಥಿತಿಯನ್ನು ಮುಟ್ಟಿತು. ತನ್ನ ಸಂತತಿಯವರಿಗೆ ನಿತ್ಯಜೀವವನ್ನು ಬಾಧ್ಯತೆಯಾಗಿ ಕೊಡುವುದಕ್ಕೆ ಬದಲಾಗಿ, ಆದಾಮನು ಪಾಪ ಮತ್ತು ಮರಣವನ್ನು ಬಳುವಳಿಯಾಗಿ ಕೊಟ್ಟನು.—ಆದಿಕಾಂಡ 3:6, 19; ರೋಮಾಪುರ 6:23.
ನಿಜ ನಿರೀಕ್ಷೆ
ಆದರೂ, ಆ ಸನ್ನಿವೇಶವು ಶಾಶ್ವತವಾಗಿರಲಿಲ್ಲ. ರೋಮಾಪುರ 8:20 ಹೇಳುವುದು: “ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ.” ಮಾನವರು ತನ್ನ ವಿರುದ್ಧ ಪಾಪಮಾಡಿದ್ದರಿಂದ, ಮನುಷ್ಯನ ಸೃಷ್ಟಿಕರ್ತನಾಗಿರುವ ಯೆಹೋವ ದೇವರು ಅವರನ್ನು ಮರಣಕ್ಕೆ ಅಧೀನಪಡಿಸಿದನಾದರೂ, ಹೀಗೆ ಮಾಡುವಾಗ ಆತನು ನಿರೀಕ್ಷೆಗಾಗಿ ಒಂದು ಆಧಾರವನ್ನು ಸಹ ಸ್ಥಾಪಿಸಿದನು.
ಯೇಸು ಕ್ರಿಸ್ತನು ಭೂಮಿಗೆ ಬಂದಾಗ ಈ ಆಧಾರವು ಸ್ಪಷ್ಟವಾಗಿ ಗುರುತಿಸಲ್ಪಟ್ಟಿತು. ಯೋಹಾನ 3:16 ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಆದರೂ, ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದು, ಮರಣದಿಂದ ನಮ್ಮನ್ನು ಹೇಗೆ ಕಾಪಾಡಸಾಧ್ಯವಿದೆ?
ಒಂದುವೇಳೆ ಮರಣಕ್ಕೆ ಪಾಪವೇ ಕಾರಣವಾಗಿರುವಲ್ಲಿ, ಮರಣವನ್ನು ಇಲ್ಲವಾಗಿಸುವುದಕ್ಕೆ ಮೊದಲು ಪಾಪವನ್ನು ತೆಗೆದುಹಾಕಲೇಬೇಕು. ಕ್ರಿಸ್ತನೋಪಾದಿ ಯೇಸುವಿನ ಶುಶ್ರೂಷೆಯ ಆರಂಭದಲ್ಲಿ, ಸ್ನಾನಿಕನಾದ ಯೋಹಾನನು ಹೇಳಿದ್ದು: “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು”! (ಯೋಹಾನ 1:29) ಯೇಸು ಕ್ರಿಸ್ತನು ಸಂಪೂರ್ಣವಾಗಿ ಪಾಪರಹಿತನಾಗಿದ್ದನು. ಹೀಗೆ, ಪಾಪಕ್ಕೆ ಶಿಕ್ಷೆಯಾಗಿರುವ ಮರಣಕ್ಕೆ ಅವನು ಒಳಪಡಲಿಲ್ಲ. ಆದರೂ, ಇತರರು ತನ್ನನ್ನು ಮರಣಕ್ಕೊಪ್ಪಿಸುವಂತೆ ಅವನು ಬಿಟ್ಟುಕೊಟ್ಟನು. ಏಕೆ? ಏಕೆಂದರೆ, ತನ್ನ ಪ್ರಾಣವನ್ನು ಕೊಡುವ ಮೂಲಕ ಅವನು ನಮ್ಮ ಪಾಪಗಳಿಗಾಗಿ ಬೆಲೆಯನ್ನು ತೆತ್ತನು.—ಮತ್ತಾಯ 20:28; 1 ಪೇತ್ರ 3:18.
ಆ ಬೆಲೆಯನ್ನು ತೆರುವ ಮೂಲಕ, ಯಾರು ಯೇಸುವಿನಲ್ಲಿ ನಂಬಿಕೆಯಿಡುತ್ತಾರೋ ಅವರಿಗೆ, ಸದಾಕಾಲ ಜೀವಿಸುವ ಸಾಧ್ಯತೆಯು ಲಭ್ಯಗೊಳಿಸಲ್ಪಟ್ಟಿತು. ಯಾವುದೋ ಒಂದು ಮಿತಿಯ ವರೆಗೆ ನಮ್ಮ ಆಯುಷ್ಯವನ್ನು ಹೆಚ್ಚಿಸಲು ವಿಜ್ಞಾನವು ನಮಗೆ ಸಹಾಯ ಮಾಡಬಹುದಾದರೂ, ಯೇಸುವಿನಲ್ಲಿ ನಂಬಿಕೆಯಿಡುವುದೇ ನಿತ್ಯಜೀವಕ್ಕೆ ನಡಿಸುವ ನಿಜ ಮಾರ್ಗವಾಗಿದೆ. ಅಂತಹ ಜೀವಿತವನ್ನು ಯೇಸು ಸ್ವರ್ಗದಲ್ಲಿ ಪಡೆದುಕೊಂಡನು, ಅವನ ನಂಬಿಗಸ್ತ ಅಪೊಸ್ತಲರಿಗೆ ಮತ್ತು ಇನ್ನಿತರರಿಗೆ ಸಹ ಅಂತಹದ್ದೇ ನಿರೀಕ್ಷೆಯಿದೆ. ಆದರೆ, ಯೆಹೋವ ದೇವರು ಭೂಪ್ರಮೋದವನವನ್ನು ಪುನಸ್ಸ್ಥಾಪಿಸುವಾಗ, ಯೇಸುವಿನಲ್ಲಿ ನಂಬಿಕೆಯಿಡುವಂತಹ ಅಧಿಕಾಂಶ ಮಂದಿಗೆ ಭೂಮಿಯ ಮೇಲೆ ನಿತ್ಯಜೀವವು ದೊರಕುವುದು.—ಯೆಶಾಯ 25:8; 1 ಕೊರಿಂಥ 15:48, 49; 2 ಕೊರಿಂಥ 5:1.
ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯಜೀವ
ಒಬ್ಬ ವ್ಯಕ್ತಿಯು ಕೇಳಿದ್ದು: “ಜನರು ಇನ್ನೆಂದಿಗೂ ಸಾಯಬೇಕಾಗಿಲ್ಲದಿರುವಾಗ, ಎಷ್ಟು ಜನರು ನಿಜವಾಗಿಯೂ ತಮ್ಮ ಜೀವಿತಗಳನ್ನು ಅಮೂಲ್ಯವಾದದ್ದಾಗಿ ಪರಿಗಣಿಸುವರು?” ಮರಣವಿಲ್ಲದ ಜೀವಿತವು ಬೇಸರಕರವಾಗಿರುವುದೋ? ಖಂಡಿತವಾಗಿಯೂ ಬೇಸರಕರವಾಗಿರುವುದಿಲ್ಲ ಎಂದು ಬೈಬಲು ನಮಗೆ ಆಶ್ವಾಸನೆ ಕೊಡುತ್ತದೆ. “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” (ಪ್ರಸಂಗಿ 3:11) ಯೆಹೋವ ದೇವರ ಸೃಷ್ಟಿಯು ಎಷ್ಟು ಸಮೃದ್ಧವೂ ಜಟಿಲವೂ ಆಗಿದೆಯೆಂದರೆ, ನಾವು ಜೀವಿಸುವಷ್ಟು ಕಾಲ, ಅಂದರೆ ಸದಾಕಾಲಕ್ಕೂ ಇದು ನಮ್ಮ ಕುತೂಹಲವನ್ನು ಕೆರಳಿಸುವುದು, ನಮ್ಮನ್ನು ಪ್ರಚೋದಿಸುವುದು, ಮತ್ತು ನಮ್ಮನ್ನು ಸಂತೋಷಪಡಿಸುವುದು.
ಸೈಬೀರಿಯನ್ ಜೇ ಎಂದು ಪ್ರಸಿದ್ಧವಾಗಿರುವ ಪಕ್ಷಿಯ ಬಗ್ಗೆ ಅಧ್ಯಯನ ನಡೆಸಿದ ಒಬ್ಬ ಮನುಷ್ಯನು ಅದನ್ನು, “ಅಸಾಮಾನ್ಯವಾದ, ಕಣ್ಮನಸೆಳೆಯುವ ಒಡನಾಡಿ” ಎಂದು ಕರೆದನು. ಮತ್ತು ಆ ಪಕ್ಷಿಯನ್ನು ಸೂಕ್ಷ್ಮವಾಗಿ ಗಮನಿಸುವುದು ನನ್ನ ಜೀವಿತದ ಅತಿ ಆನಂದಮಯ ಅನುಭವಗಳಲ್ಲಿ ಒಂದಾಗಿತ್ತು ಎಂದು ಅವನು ಹೇಳಿದನು. ಆ ಪಕ್ಷಿಯ ಬಗ್ಗೆ ಅವನು ಹೆಚ್ಚೆಚ್ಚು ಅಧ್ಯಯನ ನಡೆಸಿದಂತೆ, ಅದು ಅವನಿಗೆ ಹೆಚ್ಚೆಚ್ಚು ಆಸಕ್ತಿಯನ್ನು ಕೆರಳಿಸುವಂತಹದ್ದಾಗಿ ಕಂಡುಬಂತು. 18 ವರ್ಷಗಳ ಬಳಿಕವೂ ತನ್ನ ಅಧ್ಯಯನವು ಮುಗಿಯಲಿಲ್ಲ ಎಂದು ಅವನು ಹೇಳಿದನು. 18 ವರ್ಷಗಳಷ್ಟು ದೀರ್ಘಕಾಲದ ಶ್ರದ್ಧಾಪೂರ್ವಕವಾದ ಅಧ್ಯಯನದ ಸಮಯದಲ್ಲಿ, ಕೇವಲ ಒಂದು ಜಾತಿಯ ಪಕ್ಷಿಯು ಒಬ್ಬ ಬುದ್ಧಿವಂತ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಿ, ಪ್ರಚೋದಿಸಿ, ಅವನ ಮನಸ್ಸಿಗೆ ಸಂತೋಷ ನೀಡಸಾಧ್ಯವಿದೆಯೆಂದರೆ, ಭೂಮಿಯಲ್ಲಿರುವ ಎಲ್ಲ ಸೃಷ್ಟಿಜೀವಿಗಳ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಸಿಗಬಹುದಾದ ಆನಂದ ಹಾಗೂ ಸಂತೃಪ್ತಿಯನ್ನು ಸ್ವಲ್ಪ ಊಹಿಸಿ ನೋಡಿರಿ.
ಸಮಯದ ಕಟ್ಟುಪಾಡಿಗೆ ಒಳಗಾಗದ ವ್ಯಕ್ತಿಯೊಬ್ಬನ ಮುಂದಿರುವ ವಿಜ್ಞಾನದ ಎಲ್ಲ ಆಸಕ್ತಿಭರಿತ ಕ್ಷೇತ್ರಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಸುತ್ತಿನೋಡಲಿಕ್ಕಿರುವ ಎಲ್ಲ ಆಕರ್ಷಣೀಯ ಸ್ಥಳಗಳು ಹಾಗೂ ಭೇಟಿಯಾಗಲು ಬಯಸುವ ಎಲ್ಲ ಆಸಕ್ತ ಜನರು ಅಲ್ಲಿರುವುದನ್ನು ಕಲ್ಪಿಸಿಕೊಳ್ಳಿರಿ. ಊಹಿಸಿಕೊಳ್ಳಲು, ರೂಪಿಸಲು, ಮತ್ತು ನಿರ್ಮಿಸಲಿಕ್ಕಾಗಿರುವ ಅನಂತ ಸಾಧ್ಯತೆಗಳನ್ನು ಗ್ರಹಿಸಲು ಪ್ರಯತ್ನಿಸಿರಿ. ನಮ್ಮ ಸೃಜನಶೀಲತೆಯನ್ನು ವಿಕಸಿಸಿ, ಅದನ್ನು ಉಪಯೋಗಿಸಲು ದೊರಕುವ ಅವಕಾಶಗಳಿಗೆ ಕೊನೆಯೇ ಇರುವುದಿಲ್ಲ. ಅಪಾರ ಸೃಷ್ಟಿಯ ಬಗ್ಗೆ ನಾವು ಪರ್ಯಾಲೋಚಿಸುವಾಗ, ನಿತ್ಯತೆಯು ಮಾತ್ರವೇ ಜೀವನದ ಸಾಧ್ಯತೆಗಳನ್ನು ಪೂರೈಸಸಾಧ್ಯವಿರುವ ಕಾಲಾವಧಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಯಾರು ಮೃತಪಟ್ಟಿದ್ದಾರೋ ಅವರನ್ನು ಪುನರುತ್ಥಾನಗೊಳಿಸುವ ಮೂಲಕ, ಅವರಿಗೂ ಸದಾಕಾಲ ಜೀವಿಸುವ ಅವಕಾಶವು ಕೊಡಲ್ಪಡುವುದು ಎಂದು ಬೈಬಲು ತೋರಿಸುತ್ತದೆ. (ಯೋಹಾನ 5:28, 29) ಯಾರಿಗೆ ಇತಿಹಾಸದ ರಹಸ್ಯಗಳು ಗೊತ್ತಿವೆಯೋ ಅವರು, ಎಲ್ಲವನ್ನೂ ವಿವರವಾಗಿ ತಿಳಿಸಿ, ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವಾಗ, ಆ ರಹಸ್ಯಗಳೆಲ್ಲ ನಮಗೆ ಸ್ಪಷ್ಟವಾಗಿ ಅರ್ಥವಾಗಬಹುದು. ಇತಿಹಾಸದ ಬೇರೆ ಬೇರೆ ಕಾಲಾವಧಿಗಳ ಬಗ್ಗೆ ಪುನರುತ್ಥಿತ ಜನರು ಒದಗಿಸುವ ಇಡೀ ಒಳನೋಟದ ಕುರಿತು ತುಸು ಆಲೋಚಿಸಿರಿ.—ಅ. ಕೃತ್ಯಗಳು 24:15.
ಆ ಸಮಯದ ಕುರಿತು ಅವಲೋಕಿಸುವಾಗ, ಪುನರುತ್ಥಾನಗೊಳಿಸಲ್ಪಟ್ಟ ಯೋಬನು, ಯೋಬ 14:1ರಲ್ಲಿ ಕಂಡುಬರುವ ಹೇಳಿಕೆಯನ್ನು ಸರಿಪಡಿಸಲು ಬಯಸಬಹುದು ಎಂಬುದನ್ನು ನೀವು ಗಣ್ಯಮಾಡಸಾಧ್ಯವಿದೆ. ಈ ಹಿಂದಿನ ಹೇಳಿಕೆಗೆ ಬದಲಾಗಿ ಅವನು ಹೀಗೆ ಸೂಚಿಸುವನು: ‘ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಈಗ ಸದಾಕಾಲ ಜೀವಿಸುವನು ಮತ್ತು ಸಂತೃಪ್ತಿಯಿಂದ ತುಂಬಿದವನಾಗಿರುವನು.’
ಯೆಹೋವನಲ್ಲಿ ಭರವಸೆಯಿಟ್ಟು, ಯೇಸುವಿನಲ್ಲಿ ನಂಬಿಕೆಯನ್ನಿಡುತ್ತಾ ಮುಂದುವರಿಯುವವರಿಗಾದರೋ, ಸಮಯದ ಮಿತಿಯೇ ಇಲ್ಲದೆ ಸದಾಕಾಲ ಜೀವಿಸುವುದು ಕೇವಲ ಒಂದು ಕನಸಲ್ಲ. ಅತಿ ಬೇಗನೆ ಅದು ನಿಜವಾಗುವುದು. ವಯಸ್ಸಾಗುವಿಕೆ ಮತ್ತು ಮರಣವು ಇರುವುದಿಲ್ಲ. ಇದು ಕೀರ್ತನೆ 68:20ಕ್ಕೆ ಹೊಂದಿಕೆಯಲ್ಲಿದೆ. ಅದು ಹೀಗೆ ಹೇಳುತ್ತದೆ: “ನಮ್ಮ ದೇವರು ನಮ್ಮನ್ನು ವಿಮೋಚಿಸುವದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.”—ಪ್ರಕಟನೆ 21:3, 4.
[ಪುಟ 4 ರಲ್ಲಿರುವಚಿತ್ರಗಳು]
ವಿಜ್ಞಾನವು ಮಾಡಿರುವ ಪ್ರಗತಿಯು, ಹೆಚ್ಚು ಕಾಲ ಬದುಕುವ ಸಾಧ್ಯತೆಯ ಕುರಿತಾದ ನಿರೀಕ್ಷೆಗಳನ್ನು ಅಧಿಕಗೊಳಿಸಿದೆ
[ಪುಟ 7 ರಲ್ಲಿರುವ ಚಿತ್ರ]
ನಿತ್ಯತೆಯು ಮಾತ್ರವೇ ಜೀವನದ ಸಾಧ್ಯತೆಗಳನ್ನು ಪೂರೈಸಸಾಧ್ಯವಿರುವ ಕಾಲಾವಧಿಯಾಗಿದೆ