ಮನುಷ್ಯನ ಅದೃಷ್ಟದ ಅನ್ವೇಷಣೆಯಲ್ಲಿ
ವಿಧಿಯಲ್ಲಿನ ನಂಬಿಕೆಯು ಇಷ್ಟೊಂದು ವ್ಯಾಪಕವಾಗಿರುವುದೇಕೆ? ಯುಗಗಳಾದ್ಯಂತ ಮನುಷ್ಯನು ಜೀವನದ ರಹಸ್ಯಗಳನ್ನು ಬಿಡಿಸಲು ಮತ್ತು ನಡೆಯುತ್ತಿರುವ ಘಟನೆಗಳ ಹಿಂದಿರುವ ಉದ್ದೇಶವೇನೆಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾನೆ. “ಘಟನೆಗಳು ವ್ಯಕ್ತಿಸ್ವರೂಪವುಳ್ಳ ಒಂದು ಶಕ್ತಿಯಿಂದ, ವ್ಯಕ್ತಿಸ್ವರೂಪವಿಲ್ಲದ ಒಂದು ಏರ್ಪಾಡಿನಿಂದ ಅಥವಾ ಯಾವುದೇ ಏರ್ಪಾಡಿಲ್ಲದೆ ನಡೆದಿರುವುದರ ಮೇಲೆ ಅವಲಂಬಿಸುತ್ತಾ, ‘ದೈವ,’ ‘ಅದೃಷ್ಟ’ ಮತ್ತು ‘ಆಕಸ್ಮಿಕ ಘಟನೆ’ ಎಂಬಂತಹ ಕಲ್ಪನೆಗಳು ಉದ್ಭವಿಸಿದ್ದು ಇಲ್ಲಿಯೇ” ಎಂದು ಇತಿಹಾಸಕಾರ ಹೆಲ್ಮರ್ ರಿಂಗ್ಗ್ರೆನ್ ವಿವರಿಸುತ್ತಾರೆ. ವಿಧಿ ಮತ್ತು ಅದೃಷ್ಟದೊಂದಿಗೆ ಸಂಬಂಧಿಸಿರುವ ನಂಬಿಕೆಗಳು, ಪುರಾಣಕಥೆಗಳು ಮತ್ತು ಮಿಥ್ಯೆಗಳಿಂದ ಇತಿಹಾಸವು ತುಂಬಿದೆ.
ಅಸಿರಿಯಾ ದೇಶವಿದ್ಯಾಶಾಸ್ತ್ರಜ್ಞನಾದ ಸಾನ್ ಬಾಟೇರಾ ಹೇಳುವುದು: “ನಮ್ಮ ಸಂಸ್ಕೃತಿಯ ಎಲ್ಲ ಅಂಶಗಳು ಬಹುಮಟ್ಟಿಗೆ ಮೆಸಪಟೇಮಿಯದ ನಾಗರಿಕತೆಯಿಂದ ರೂಪಿಸಲ್ಪಟ್ಟಿವೆ.” ಮತ್ತು, “ಗುರುತಿಸಬಹುದಾದ ಅತಿ ಪ್ರಾಚೀನ ಧಾರ್ಮಿಕ ವ್ಯವಸ್ಥಾಪನೆಯಾಗಿರುವ ಅತಿಲೌಕಿಕವಾದದ ಕುರಿತಾಗಿ, ಮಾನವಕುಲದ ಗ್ರಹಿಸಸಾಧ್ಯವಿರುವ ಅಭಿಪ್ರಾಯಗಳನ್ನು ಮತ್ತು ವಿಚಾರಗಳನ್ನು” ಪುರಾತನ ಮೆಸಪಟೇಮಿಯ ಅಥವಾ ಬಾಬಿಲೋನಿಯದಲ್ಲಿ ಕಂಡುಕೊಳ್ಳುತ್ತೇವೆಂದು ಅವರು ಕೂಡಿಸಿ ಹೇಳುತ್ತಾರೆ. ವಿಧಿಯ ಬೋಧನೆಯ ಕುರಿತ ಮೂಲ ಬೇರುಗಳನ್ನು ಸಹ ನಾವು ಇಲ್ಲಿಯೇ ಕಂಡುಕೊಳ್ಳುತ್ತೇವೆ.
ವಿಧಿಯ ಪ್ರಾಚೀನ ಮೂಲಗಳು
ಈಗ ಇರಾಕ್ ಎಂದು ಕರೆಯಲ್ಪಡುವ, ಮೆಸಪಟೇಮಿಯದಲ್ಲಿರುವ ಪ್ರಾಚೀನ ಅವಶೇಷಗಳಲ್ಲಿ, ಮನುಷ್ಯನ ಬರವಣಿಗೆಗಳಲ್ಲಿಯೇ ಅತಿ ಹಳೆಯ ಬರಹಗಳನ್ನು ಅಗೆತಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಬೆಣೆಲಿಪಿಯುಳ್ಳ ಸಾವಿರಾರು ಶಿಲಾಫಲಕಗಳು, ಸೂಮರ್ ಮತ್ತು ಆಕಾಡ್ ಎಂಬ ಪ್ರಾಚೀನ ನಾಗರಿಕತೆಗಳಲ್ಲಿನ ಮತ್ತು ಪ್ರಸಿದ್ಧ ಬಬಿಲೋನ್ ನಗರದಲ್ಲಿನ ಜೀವನ ರೀತಿಯ ಸ್ಪಷ್ಟವಾದ ಚಿತ್ರಣವನ್ನು ನಮಗೆ ಕೊಡುತ್ತವೆ. ಅಗೆತಶಾಸ್ತ್ರಜ್ಞ ಸಾಮ್ಯುವೆಲ್ ಎನ್. ಕ್ರೇಮರ್ರವರಿಗನುಸಾರ ಸೂಮೇರಿಯದ ಜನರು “ಮಾನವ ಕಷ್ಟಾನುಭವದ ಸಮಸ್ಯೆಯಿಂದ, ವಿಶೇಷವಾಗಿ ಅದರ ನಿಗೂಢವಾದ ಕಾರಣಗಳ ಸಂಬಂಧದಲ್ಲಿ ವ್ಯಥೆಗೊಂಡಿದ್ದರು.” ಇದನ್ನು ಬಗೆಹರಿಸಲು ಅವರು ನಡೆಸಿದಂತಹ ಅನ್ವೇಷಣೆಯು ಅವರನ್ನು ವಿಧಿಯ ಕಲ್ಪನೆಗೆ ನಡಿಸಿತು.
“ಬಾಬಿಲೋನಿನ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸ್ವಂತ ವೈಯಕ್ತಿಕ ದೇವದೇವತೆಗಳು ಇರುತ್ತಿದ್ದವು” ಎಂದು ಅಗೆತಶಾಸ್ತ್ರಜ್ಞೆ ಜೋನ್ ಓಟ್ಸ್, ಬಾಬಿಲೋನ್ ಎಂಬ ಶೀರ್ಷಿಕೆಯ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ದೇವತೆಗಳು, “ಇಡೀ ಮಾನವಕುಲದ ಅದೃಷ್ಟಗಳನ್ನು, ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ರೂಪಿಸುತ್ತಾರೆ” ಎಂದು ಬಾಬಿಲೋನಿನವರು ನಂಬಿದರು. ಕ್ರೇಮರ್ರವರಿಗನುಸಾರ, “ಈ ವಿಶ್ವವನ್ನು ನಿಯಂತ್ರಿಸುವ ದೇವತೆಗಳು, ದುಷ್ಟತನ, ಮೋಸ ಮತ್ತು ಹಿಂಸಾಚಾರವನ್ನು ನಾಗರಿಕತೆಯ ಸಹಜವಾದ ಭಾಗವಾಗಿರುವಂತೆ ಯೋಜಿಸಿ, ಸ್ಥಾಪಿಸಿದರು” ಎಂದು ಸೂಮೇರಿಯದವರು ನಂಬಿದರು. ವಿಧಿಯಲ್ಲಿನ ನಂಬಿಕೆಯು ವ್ಯಾಪಕವಾಗಿ ಹರಡಿಕೊಂಡಿತು, ಮತ್ತು ಅದಕ್ಕೆ ತುಂಬ ಮಹತ್ವವನ್ನು ಕೊಡಲಾಯಿತು.
“ದೇವತೆಗಳೊಂದಿಗೆ ಸಂವಾದಿಸುವ ಒಂದು ವಿಧಾನ,” ಅಂದರೆ ಕಣಿಹೇಳುವಿಕೆಯ ಮೂಲಕ ದೇವತೆಗಳ ಯೋಜನೆಗಳೇನೆಂಬುದನ್ನು ಪತ್ತೆಹಚ್ಚಲು ಸಾಧ್ಯವಿದೆಯೆಂದು ಬಾಬಿಲೋನಿನವರು ನೆನಸಿದರು. ಕಣಿಕೇಳುವಿಕೆಯಲ್ಲಿ, ವಸ್ತುಗಳನ್ನು ಮತ್ತು ಘಟನೆಗಳನ್ನು ಅವಲೋಕಿಸುವ, ಅವುಗಳ ಅರ್ಥ ಗ್ರಹಿಸುವ ಮತ್ತು ವಿವರಿಸುವ ಮೂಲಕ ಭವಿಷ್ಯತ್ತನ್ನು ಮುಂತಿಳಿಸಲು ಪ್ರಯತ್ನಿಸುವುದು ಒಳಗೂಡಿತ್ತು. ಕನಸುಗಳು, ಪ್ರಾಣಿಗಳ ನಡವಳಿಕೆ ಹಾಗೂ ಅವುಗಳ ಒಳಭಾಗಗಳನ್ನು ಸಹ ಪರೀಕ್ಷಿಸಲಾಗುತ್ತಿತ್ತು. (ಯೆಹೆಜ್ಕೇಲ 21:21; ದಾನಿಯೇಲ 2:1-4ನ್ನು ಹೋಲಿಸಿರಿ.) ಭವಿಷ್ಯತ್ತನ್ನು ಮುಂತಿಳಿಸುವುದೆಂದು ಹೇಳಲಾಗುತ್ತಿದ್ದ ಅನಿರೀಕ್ಷಿತ ಅಥವಾ ಅಸಾಮಾನ್ಯ ಘಟನೆಗಳನ್ನು ಮಣ್ಣಿನ ಫಲಕಗಳ ಮೇಲೆ ದಾಖಲಿಸಲಾಗುತ್ತಿತ್ತು.
ಪ್ರಾಚೀನ ಸಂಸ್ಕೃತಿಗಳ ಫ್ರೆಂಚ್ ವಿದ್ವಾಂಸ ಏಡ್ವಾರ್ ಡಾರ್ಮ್ ಅವರಿಗನುಸಾರ, “ನಾವು ಮೆಸಪಟೇಮಿಯದ ಇತಿಹಾಸದಲ್ಲಿಯೂ ಸಾಕಷ್ಟು ಹಿಂದೆ ಹೋಗುವಾಗ, ಕಣಿಗಾರ ಮತ್ತು ಕಣಿಕೇಳುವಿಕೆಯ ವಿಚಾರವನ್ನು ಅದರಲ್ಲಿ ಕಂಡುಕೊಳ್ಳುತ್ತೇವೆ.” ಕಣಿಹೇಳುವಿಕೆಯು, ಜೀವಿತದ ಒಂದು ಅವಿಭಾಜ್ಯ ಅಂಗವಾಗಿತ್ತು. “ಪ್ರತಿಯೊಂದೂ ಘಟನೆಯನ್ನು ಪರೀಕ್ಷೆಗೆ ಮತ್ತು ಕಣಿಹೇಳುವಿಕೆಗೆ ಗುರಿಮಾಡಸಾಧ್ಯವಿರುವ ವಿಷಯವಾಗಿ ಪರಿಗಣಿಸಬಹುದಿತ್ತು . . . ಇಡೀ ಭೌತಿಕ ವಿಶ್ವವನ್ನು, ಜಾಗರೂಕ ಅಧ್ಯಯನ ಮಾಡಿ ಯಾವುದೊ ರೀತಿಯಲ್ಲಿ ಭವಿಷ್ಯತ್ತಿನ ಕುರಿತಾದ ಜ್ಞಾನವನ್ನು ಹೊರಸೆಳೆಯಸಾಧ್ಯವಿರುವ ಪುರಾವೆಯಾಗಿ ಎಣಿಸಲಾಗುತ್ತಿತ್ತು” ಎಂದು ಪ್ರೊಫೆಸರ್ ಬಾಟೆರಾ ಹೇಳುತ್ತಾರೆ. ಈ ರೀತಿಯಲ್ಲಿ ಮೆಸಪಟೇಮಿಯದವರು, ಜ್ಯೋತಿಶ್ಶಾಸ್ತ್ರವನ್ನು ಹುರುಪಿನಿಂದ ಬಳಸುವವರಾಗಿದ್ದರು. ಭವಿಷ್ಯತ್ತನ್ನು ಮುಂತಿಳಿಸಲು ಅದನ್ನು ಒಂದು ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು.—ಯೆಶಾಯ 47:13ನ್ನು ಹೋಲಿಸಿರಿ.
ಇದಕ್ಕೆ ಕೂಡಿಸಿ, ಬಾಬಿಲೋನಿಯದವರು ಕಣಿಕೇಳುವಿಕೆಯಲ್ಲಿ ಪಗಡೆಯಾಟ ಅಥವಾ ಚೀಟಿ ಎತ್ತುವಿಕೆಯನ್ನು ಉಪಯೋಗಿಸಿದರು. ಡೆಬರ ಬೆನೆಟ್, ಗೊತ್ತುಗುರಿಯಿಲ್ಲದಿರುವಿಕೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ವಿವರಿಸುವುದೇನೆಂದರೆ ಇವುಗಳ ಉದ್ದೇಶವು, ಯಾವುದೇ ಘಟನೆಯಲ್ಲಿ “ಮಾನವನ ಕೈವಾಡವಿರುವ ಸಾಧ್ಯತೆಯನ್ನು ತೆಗೆದುಹಾಕಿ, ಹೀಗೆ ದೇವತೆಗಳು ತಮ್ಮ ದೈವಿಕ ಇಚ್ಛೆಯನ್ನು ಪ್ರಕಟಪಡಿಸಲು ತೊಡಕಿಲ್ಲದ ಮಾಧ್ಯಮವನ್ನು ಕೊಡುವುದು” ಆಗಿತ್ತು. ಆದರೆ ದೇವತೆಗಳ ನಿರ್ಣಯಗಳನ್ನು ತಪ್ಪಿಸಿಕೊಳ್ಳಲು ಅಸಾಧ್ಯವಾದವುಗಳೆಂದು ಪರಿಗಣಿಸಲಾಗುತ್ತಿರಲಿಲ್ಲ. ಒಂದು ದುರದೃಷ್ಟವನ್ನು ತಪ್ಪಿಸಲಿಕ್ಕಾಗಿ ದೇವತೆಗಳಿಗೆ ಬೇಡಿಕೊಳ್ಳುವ ಮೂಲಕ ಸಹಾಯವನ್ನು ಪಡೆದುಕೊಳ್ಳಸಾಧ್ಯವಿತ್ತು.
ಪ್ರಾಚೀನ ಐಗುಪ್ತದಲ್ಲಿ ವಿಧಿಯ ವಿಚಾರ
ಸಾ.ಶ.ಪೂ. 15ನೆಯ ಶತಮಾನದಲ್ಲಿ, ಬಾಬಿಲೋನ್ಯ ಮತ್ತು ಐಗುಪ್ತದ ನಡುವೆ ತುಂಬ ಸಂಪರ್ಕವಿತ್ತು. ಇದರಿಂದ ಫಲಿಸಿದಂತಹ ಸಾಂಸ್ಕೃತಿಕ ವಿನಿಮಯದಲ್ಲಿ, ವಿಧಿಯೊಂದಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳು ಒಳಸೇರಿಸಲ್ಪಟ್ಟವು. ವಿಧಿಯಲ್ಲಿನ ನಂಬಿಕೆಯನ್ನು ಐಗುಪ್ತದವರು ಸ್ವೀಕರಿಸಿದ್ದೇಕೆ? ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಐಗುಪ್ತಶಾಸ್ತ್ರದ ಪ್ರೊಫೆಸರರಾದ ಜಾನ್ ಆರ್. ಬೇನ್ಸ್ರವರಿಗನುಸಾರ, “[ಐಗುಪ್ತ] ಧರ್ಮದಲ್ಲಿ ಹೆಚ್ಚಿನದ್ದು, ಮುಂತಿಳಿಸಲಾಗದಂತಹ ಮತ್ತು ದುರದೃಷ್ಟಕರವಾದ ಘಟನೆಗಳನ್ನು ಗ್ರಹಿಸಿ ಅವುಗಳಿಗೆ ಪ್ರತಿಕ್ರಿಯಿಸುವ ಪ್ರಯತ್ನಗಳೊಂದಿಗೆ ಸಂಬಂಧಿಸಲ್ಪಟ್ಟಿತ್ತು.”
ಐಗುಪ್ತದ ಅನೇಕ ದೇವತೆಗಳ ಪೈಕಿ, ಐಸಿಸ್ಳನ್ನು “ಜೀವದ ಒಡತಿ, ವಿಧಿ ಮತ್ತು ಅದೃಷ್ಟದ ಅಧಿದೇವತೆ” ಎಂದು ವರ್ಣಿಸಲಾಗಿದೆ. ಐಗುಪ್ತದವರು ಕಣಿಕೇಳುವಿಕೆ ಮತ್ತು ಜ್ಯೋತಿಶ್ಶಾಸ್ತ್ರವನ್ನು ಸಹ ಬಳಸಿದರು. (ಯೆಶಾಯ 19:3ನ್ನು ಹೋಲಿಸಿರಿ.) ಒಬ್ಬ ಇತಿಹಾಸಕಾರ್ತಿ ಹೇಳುವುದು: “ದೇವತೆಗಳನ್ನು ಪ್ರಶ್ನಿಸುವುದರಲ್ಲಿ ಅವರ ಕಲ್ಪನಾ ಚಾತುರ್ಯಕ್ಕೆ ಸೀಮೆಯೇ ಇರಲಿಲ್ಲ.” ಆದರೆ ವಿಧಿಯ ವಿಚಾರವನ್ನು ಬಬಿಲೋನಿನಿಂದ ತೆಗೆದುಕೊಂಡಂತಹ ನಾಗರಿಕತೆಯು ಐಗುಪ್ತ ದೇಶವು ಮಾತ್ರವೇ ಆಗಿರಲಿಲ್ಲ.
ಗ್ರೀಸ್ ಮತ್ತು ರೋಮ್
ಧಾರ್ಮಿಕ ವಿಷಯಗಳ ಸಂಬಂಧದಲ್ಲಿ, “ಬಾಬಿಲೋನಿಯದ ದೂರ ವ್ಯಾಪ್ತಿಯ ತೀಕ್ಷ್ಣ ಪ್ರಭೆಯು ಪ್ರಾಚೀನ ಗ್ರೀಸ್ ದೇಶಕ್ಕೂ ತಟ್ಟದಿರಲಿಲ್ಲ,” ಎಂದು ಸಾನ್ ಬಾಟೆರಾ ಗಮನಿಸುತ್ತಾರೆ. ವಿಧಿಯ ವಿಷಯವಾದ ನಂಬಿಕೆಯು ಗ್ರೀಸ್ನಲ್ಲಿ ಏಕೆ ತುಂಬ ಜನಪ್ರಿಯವಾಗಿತ್ತೆಂಬುದನ್ನು ಪ್ರೊಫೆಸರ್ ಪೀಟರ್ ಗ್ರೀನ್ ವಿವರಿಸುತ್ತಾರೆ: “ಜನರು ತಮ್ಮ ಸ್ವಂತ ನಿರ್ಣಯಗಳಿಗೆ ಜವಾಬ್ದಾರರಾಗಿರಲು ಬಯಸದಿದ್ದಂತಹ ಮತ್ತು ತಾವು ವಿಧಿಯ ಭೇದಿಸಲಾಗದ ಮತ್ತು ಬದಲಾಯಿಸಲಾಗದಂತಹ ಆವಶ್ಯಕತೆಗಳಿಂದ ನಡೆಸಲ್ಪಡುತ್ತಿರುವ ಕೈಗೊಂಬೆಗಳಾಗಿದ್ದೇವೆಂದು ಭಾವಿಸುತ್ತಿದ್ದ ಅನಿಶ್ಚಿತವಾದ ಒಂದು ಜಗತ್ತಿನಲ್ಲಿ, ಒಬ್ಬ ವ್ಯಕ್ತಿಗಾಗಿ ಭವಿಷ್ಯತ್ತನ್ನು ವಿವರವಾಗಿ ಯೋಜಿಸುವ ಒಂದು ವಿಧವು, ದಿವ್ಯವಾಣಿಯ ಅಪ್ಪಣೆ [ದೇವತೆಗಳು ನಿರ್ಧರಿಸುವ ಅದೃಷ್ಟ] ಆಗಿತ್ತು. ಒಬ್ಬನ ಬಳಿ ವಿಶೇಷ ಕೌಶಲಗಳು ಅಥವಾ ಪರಿಜ್ಞಾನವು ಇರುವಲ್ಲಿ ವಿಧಿಯು ಸಂಕಲ್ಪಿಸಿದ ವಿಷಯವನ್ನು ಮುಂತಿಳಿಸಲು ಸಾಧ್ಯವಿತ್ತು. ಆ ವಿಷಯವು ಒಬ್ಬನು ಇಷ್ಟಪಡಬಹುದಾದಂತಹ ಸಂಗತಿಯಾಗಿರದೆ ಇರಬಹುದಿತ್ತಾದರೂ, ಅವನು ಕಡಿಮೆಪಕ್ಷ ಅದಕ್ಕಾಗಿ ಪೂರ್ವಸಜ್ಜಿತನಾಗಿರುತ್ತಿದ್ದನು.”
ವಿಧಿಯಲ್ಲಿನ ನಂಬಿಕೆಯು, ಭವಿಷ್ಯತ್ತಿನ ಕುರಿತಾಗಿ ವ್ಯಕ್ತಿಗಳಿಗೆ ಪುನರಾಶ್ವಾಸನೆಯನ್ನು ಕೊಡುವುದರ ಜೊತೆಗೆ ಹೆಚ್ಚು ದುಷ್ಟ ಉದ್ದೇಶಗಳನ್ನು ಸಹ ಪೂರೈಸುತ್ತಿತ್ತು. ವಿಧಿಯ ಕುರಿತಾದ ವಿಚಾರವು, ಜನಸಮೂಹಗಳನ್ನು ಅದುಮಿ ಇಡಲಿಕ್ಕಾಗಿಯೂ ಸಹಾಯಮಾಡಿತು. ಇತಿಹಾಸಕಾರ ಎಫ್. ಏಚ್. ಸ್ಯಾಂಡ್ಬಾಕ್ರವರಿಗನುಸಾರ, ಈ ಕಾರಣಕ್ಕಾಗಿಯೇ “ವಿಧಿಯು ಲೋಕವನ್ನು ಸಂಪೂರ್ಣವಾಗಿ ಆಳುತ್ತಿದೆಯೆಂಬ ನಂಬಿಕೆಯು, ಜನರನ್ನು ಆಳುತ್ತಿದ್ದ ಅಧಿಕಾರ ವರ್ಗದವರ ಮನಸ್ಸಿಗೆ ಹಿಡಿಸುತ್ತಿತ್ತು.”
ಏಕೆ? ಈ ನಂಬಿಕೆಯು, “ಸಾಮಾಜಿಕ ಮತ್ತು ರಾಜಕೀಯ ಸ್ಥಿರ ವ್ಯವಸ್ಥೆಗೆ, ನೈತಿಕ, ದೇವತಾಶಾಸ್ತ್ರ ಮತ್ತು ಭಾಷಾಶಾಸ್ತ್ರದ ಅಂಗಭೂತ ಸಮರ್ಥನೆಯಾಗಿತ್ತು: ಅದು, ಗ್ರೀಕರೊಳಗೆ ಅಧಿಕಾರವರ್ಗದವರು ತಮ್ಮ ಅಧಿಕಾರವನ್ನು ಕಾಯ್ದಿಡಲಿಕ್ಕಾಗಿ, ಅಂದಿನ ವರೆಗೆ ರಚಿಸಿದ ಸಾಧನಗಳಲ್ಲೇ ಅತಿ ಪ್ರಭಾವಶಾಲಿ ಮತ್ತು ನವಿರಾದ ಸಾಧನವಾಗಿತ್ತು. ಏನೇ ಸಂಭವಿಸಿದರೂ ಅದು ವಿಧಿಲಿಖಿತವಾಗಿತ್ತು; ಮತ್ತು ಪ್ರಕೃತಿದೇವಿಯು ಮಾನವಕುಲದೊಂದಿಗೆ ಪ್ರಸನ್ನಚಿತ್ತಳಾಗಿರುವುದರಿಂದ, ವಿಧಿಲಿಖಿತವಾದದ್ದೆಲ್ಲವೂ ಒಳ್ಳೆಯದಕ್ಕಾಗಿದೆ.” ವಾಸ್ತವದಲ್ಲಿ ಈ ನಂಬಿಕೆಯು, “ನಿರ್ದಯವಾದ ಸ್ವಾರ್ಥಾಸಕ್ತಿಗಾಗಿ ಸಮರ್ಥನೆಯನ್ನು” ಒದಗಿಸಿತು.
ವಿಧಿಯು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟಿದ್ದ ಸಂಗತಿಯಾಗಿತ್ತೆಂಬುದು ಗ್ರೀಕ್ ಸಾಹಿತ್ಯದಿಂದ ತೋರಿಬರುತ್ತದೆ. ಪ್ರಾಚೀನ ಸಾಹಿತ್ಯಿಕ ಶೈಲಿಗಳಲ್ಲಿ, ಮಹಾಕಾವ್ಯ, ಪುರಾಣಶಾಸ್ತ್ರ ಮತ್ತು ದುರಂತಕಥೆಗಳು ಒಳಗೂಡಿದ್ದವು. ಇದರಲ್ಲೆಲ್ಲ ವಿಧಿಯು ಒಂದು ಮುಖ್ಯ ಪಾತ್ರವನ್ನು ವಹಿಸಿತು. ಗ್ರೀಕ್ ಪುರಾಣ ಸಾಹಿತ್ಯದಲ್ಲಿ ಮನುಷ್ಯನ ಅದೃಷ್ಟವು, ಮಾಯ್ರಾಯ್ ಎಂದು ಕರೆಯಲ್ಪಡುತ್ತಿದ್ದ ಮೂವರು ದೇವತೆಗಳಿಂದ ಪ್ರತಿನಿಧಿಸಲ್ಪಟ್ಟಿತ್ತು. ಅದರಲ್ಲಿ ಕ್ಲಾಥಾ ಎಂಬವಳು ಜೀವಿತದ ದಾರವನ್ನು ನೂಲುವಳು, ಜೀವವು ಎಷ್ಟು ಉದ್ದವಾಗಿರಬೇಕೆಂಬುದನ್ನು ಲಾಕೆಸಿಸ್ ನಿರ್ಧರಿಸುವಳು ಮತ್ತು ನಿಗದಿತ ಸಮಯವು ಕೊನೆಗೊಂಡಾಗ, ಆಟ್ರೋಪೋಸ್ ಜೀವವನ್ನು ನಿಲ್ಲಿಸಿಬಿಡುವಳು. ರೋಮನರಲ್ಲೂ, ಪಾರ್ಕೈ ಎಂದು ಕರೆಯಲಾಗುತ್ತಿದ್ದ ಅದೇ ರೀತಿಯ ದೇವತೆಗಳ ತ್ರಿಕೂಟವಿತ್ತು.
ರೋಮನರು ಮತ್ತು ಗ್ರೀಕರು ತಮ್ಮ ಮುಂದಿನ ಊಹಿತ ಅದೃಷ್ಟವು ಏನಾಗಿತ್ತೆಂಬುದನ್ನು ತಿಳಿದುಕೊಳ್ಳಲು ಕಾತುರರಾಗಿದ್ದರು. ಈ ಕಾರಣದಿಂದ, ಅವರು ಜ್ಯೋತಿಶ್ಶಾಸ್ತ್ರ ಮತ್ತು ಕಣಿಕೇಳುವಿಕೆಯನ್ನು ಬಬಿಲೋನಿನಿಂದ ತಂದು, ಅವುಗಳನ್ನು ಇನ್ನೂ ಹೆಚ್ಚು ವಿಕಸಿಸಿದರು. ಭವಿಷ್ಯತ್ತನ್ನು ಮುಂತಿಳಿಸಲು ಉಪಯೋಗಿಸಲಾಗುತ್ತಿದ್ದ ಘಟನೆಗಳನ್ನು ರೋಮನರು, ಪೋರ್ಟೆಂಟ ಅಥವಾ ಚಿಹ್ನೆಗಳು ಎಂದು ಕರೆಯುತ್ತಿದ್ದರು. ಈ ಚಿಹ್ನೆಗಳಿಂದ ಸಿಗುತ್ತಿದ್ದ ಸಂದೇಶಗಳನ್ನು ಓಮಿನ ಎಂದು ಕರೆಯಲಾಗುತ್ತಿತ್ತು. ಸಾ.ಶ.ಪೂ. ಮೂರನೆಯ ಶತಮಾನದೊಳಗೆ, ಜ್ಯೋತಿಶ್ಶಾಸ್ತ್ರವು ಗ್ರೀಸ್ ದೇಶದಲ್ಲಿ ಜನಪ್ರಿಯವಾಗಿತ್ತು, ಮತ್ತು ಸಾ.ಶ.ಪೂ. 62ರಲ್ಲಿ, ಅತ್ಯಾರಂಭದ ಗ್ರೀಕ್ ಜಾತಕವು ಪ್ರಕಟವಾಯಿತು. ಗ್ರೀಕ್ ಜನರು ಜ್ಯೋತಿಶ್ಶಾಸ್ತ್ರದಲ್ಲಿ ಎಷ್ಟು ಆಸಕ್ತರಾಗಿದ್ದರೆಂದರೆ, ಪ್ರೊಫೆಸರ್ ಗಿಲ್ಬರ್ಟ್ ಮರೀ ಅವರಿಗನುಸಾರ, “ಒಂದು ಹೊಸ ರೋಗವು ದೂರದಲ್ಲಿರುವ ದ್ವೀಪವೊಂದರಲ್ಲಿನ ಜನರನ್ನು ಬಾಧಿಸುವಂತೆಯೇ,” ಜ್ಯೋತಿಶ್ಶಾಸ್ತ್ರವು “ಗ್ರೀಕರ ಮನಸ್ಸುಗಳ ಮೇಲೆ ಪರಿಣಾಮ ಬೀರಿತು.”
ಭವಿಷ್ಯತ್ತಿನ ಕುರಿತಾಗಿ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಗ್ರೀಕರು ಮತ್ತು ರೋಮನರು, ದಿವ್ಯವಾಣಿಗಳನ್ನು ನೀಡುತ್ತಿದ್ದ ಪೂಜಾರಿಗಳನ್ನು ಮತ್ತು ಭೂತ ಮಾಧ್ಯಮಗಳನ್ನು ವ್ಯಾಪಕವಾಗಿ ಉಪಯೋಗಿಸಿದರು. ಇವರ ಮೂಲಕ ದೇವತೆಗಳು ಮಾನವರನ್ನು ಸಂಪರ್ಕಿಸುತ್ತಾರೆಂದು ಹೇಳಲಾಗುತ್ತಿತ್ತು. (ಅ. ಕೃತ್ಯಗಳು 16:16-19ನ್ನು ಹೋಲಿಸಿರಿ.) ಈ ನಂಬಿಕೆಗಳು ಯಾವ ಪರಿಣಾಮವನ್ನು ಬೀರಿದವು? ತತ್ವಜ್ಞಾನಿ ಬರ್ಟ್ರಂಡ್ ರಸಲ್ ಹೇಳಿದ್ದು: “ನಿರೀಕ್ಷೆಯ ಸ್ಥಾನವನ್ನು ಭಯ ಆವರಿಸಿಕೊಂಡಿತು; ಜೀವನದ ಉದ್ದೇಶವು, ಸಕಾರಾತ್ಮಕ ರೀತಿಯಲ್ಲಿ ಒಳಿತನ್ನು ಸಾಧಿಸುವುದಕ್ಕಿಂತಲೂ ಹೆಚ್ಚಾಗಿ ದುರದೃಷ್ಟವನ್ನು ತಪ್ಪಿಸುವುದೇ ಆಗಿತ್ತು.” ಈ ವಿಧದ ವಿಷಯಗಳು ಕ್ರೈಸ್ತಪ್ರಪಂಚದಲ್ಲಿ ವಾದವಿಷಯಗಳಾದವು.
ವಿಧಿಯ ಕುರಿತಾಗಿ “ಕ್ರೈಸ್ತ” ವಾದವಿವಾದಗಳು
ಆರಂಭದ ಕ್ರೈಸ್ತರು, ಅದೃಷ್ಟ ಮತ್ತು ವಿಧಿಯ ಕುರಿತಾದ ಗ್ರೀಕ್ ಹಾಗೂ ರೋಮನ್ ವಿಚಾರಗಳಿಂದ ಬಲವಾಗಿ ಪ್ರಭಾವಿಸಲ್ಪಟ್ಟಿದ್ದ ಸಂಸ್ಕೃತಿಯಲ್ಲಿ ಜೀವಿಸುತ್ತಿದ್ದರು. ಉದಾಹರಣೆಗಾಗಿ ಚರ್ಚ್ ಫಾದರ್ಗಳೆಂದು ಕರೆಯಲಾಗಿರುವ ಕ್ರೈಸ್ತ ಬರಹಗಾರರು, ಆ್ಯರಿಸ್ಟಾಟಲ್ ಮತ್ತು ಪ್ಲೇಟೊರಂತಹ ಗ್ರೀಕ್ ತತ್ವಜ್ಞಾನಿಗಳ ಕೃತಿಗಳ ಮೇಲೆ ತುಂಬ ಅವಲಂಬಿಸಿದರು. ಅವರು ಬಗೆಹರಿಸಲು ಪ್ರಯತ್ನಿಸಿದ ಒಂದು ಸಮಸ್ಯೆ ಇದಾಗಿತ್ತು: ‘ಆರಂಭದಲ್ಲಿಯೇ ಅಂತ್ಯವನ್ನು ತಿಳಿಸುವ’ ಸರ್ವಜ್ಞಾನಿಯೂ ಸರ್ವಶಕ್ತನೂ ಆದ ದೇವರೊಬ್ಬನು, ಪ್ರೀತಿಯ ದೇವರೆಂದು ಹೇಗೆ ಹೇಳಸಾಧ್ಯವಿದೆ? (ಯೆಶಾಯ 46:10; 1 ಯೋಹಾನ 4:8) ದೇವರಿಗೆ ಆದಿಯಲ್ಲೇ ಅಂತ್ಯವು ತಿಳಿದಿದ್ದರೆ, ಮನುಷ್ಯನು ಪಾಪಮಾಡಿ ಅದರಿಂದ ಬರುವ ವಿಪತ್ಕಾರಕ ಫಲಿತಾಂಶಗಳ ಕುರಿತಾಗಿ ಆತನಿಗೆ ಖಂಡಿತವಾಗಿಯೂ ಮುಂಚಿತವಾಗಿಯೇ ತಿಳಿದಿತ್ತೆಂದು ಅವರು ತರ್ಕಿಸಿದರು.
ಮನಸ್ಸಿನಲ್ಲಿಡಬೇಕಾದ ಪ್ರಮುಖ ಅಂಶಗಳಲ್ಲಿ ಒಂದು, ಇಚ್ಛಾ ಸ್ವಾತಂತ್ರ್ಯದ ವಿಚಾರವಾಗಿದೆಯೆಂದು, ಆರಂಭದ ಕ್ರೈಸ್ತ ಬರಹಗಾರರಲ್ಲಿ ಇತರರಿಗಿಂತ ಹೆಚ್ಚು ವಿಸ್ತೃತವಾಗಿ ಬರೆದಂತಹ ಆರಿಜನ್ ವಾದಿಸಿದನು. “ಇಚ್ಛಾ ಸ್ವಾತಂತ್ರ್ಯವು ಅಸ್ತಿತ್ವದಲ್ಲಿದೆ ಎಂಬುದನ್ನು ಅತಿ ಸ್ಪಷ್ಟವಾಗಿ ತೋರಿಸುವಂತಹ ಅಸಂಖ್ಯಾತ ಭಾಗಗಳು ಖಂಡಿತವಾಗಿಯೂ ಶಾಸ್ತ್ರವಚನಗಳಲ್ಲಿ ಇವೆ” ಎಂದು ಅವನು ಬರೆದನು.
ನಮ್ಮ ಕೃತ್ಯಗಳಿಗಾಗಿ ಯಾವುದೊ ಬಾಹ್ಯ ಶಕ್ತಿಯ ಮೇಲೆ ಜವಾಬ್ದಾರಿ ಹೊರಿಸುವುದು, “ಸತ್ಯವೂ ಅಲ್ಲ, ತರ್ಕಬದ್ಧವೂ ಅಲ್ಲ. ಇದಕ್ಕೆ ಬದಲಾಗಿ ಅದು, ಇಚ್ಛಾ ಸ್ವಾತಂತ್ರ್ಯದ ವಿಚಾರವನ್ನು ನಾಶಮಾಡಲು ಬಯಸುವವನ ಹೇಳಿಕೆಯಾಗಿದೆ ಅಷ್ಟೇ” ಎಂದು ಆರಿಜನ್ ಹೇಳಿದನು. ಘಟನೆಗಳು ಯಾವ ಕಾಲಾನುಕ್ರಮದಲ್ಲಿ ನಡೆಯುವವು ಎಂಬುದನ್ನು ದೇವರು ಮುಂಗಾಣಲು ಶಕ್ತನಾಗಿದ್ದರೂ, ಆತನೇ ಒಂದು ಘಟನೆಯನ್ನು ಸಂಭವಿಸುವಂತೆ ಮಾಡುತ್ತಾನೆ ಅಥವಾ ಅದು ನಡೆಯಲೇಬೇಕೆಂದು ಇದರ ಅರ್ಥವಲ್ಲ ಎಂದು ಆರಿಜನ್ ವಾದಿಸಿದನು. ಆದರೆ ಎಲ್ಲರೂ ಅವನೊಂದಿಗೆ ಒಪ್ಪಿಕೊಳ್ಳಲಿಲ್ಲ.
ಒಬ್ಬ ಪ್ರಭಾವಶಾಲಿ ಚರ್ಚ್ ಫಾದರ್ ಆಗಿದ್ದ ಆಗಸ್ಟೀನನು (ಸಾ.ಶ. 354-430), ಯಾವುದೇ ಘಟನೆಯಲ್ಲಿ ಇಚ್ಛಾ ಸ್ವಾತಂತ್ರ್ಯವು ವಹಿಸುವ ಪಾತ್ರವನ್ನು ತಗ್ಗಿಸುವ ಮೂಲಕ ಆ ವಾದವನ್ನು ಇನ್ನೂ ಹೆಚ್ಚು ಗೊಂದಲಮಯಗೊಳಿಸಿದನು. ಆಗಸ್ಟೀನನು ಪೂರ್ವಾದೃಷ್ಟದ ವಿಚಾರಕ್ಕೆ ಕ್ರೈಸ್ತಪ್ರಪಂಚದಲ್ಲಿ ದೇವತಾಶಾಸ್ತ್ರೀಯ ಆಧಾರವನ್ನು ಕೊಟ್ಟನು. ಪ್ರಮುಖವಾಗಿ ಡೆಲೀಬೆರೊ ಆರ್ಬೀಟ್ರೀಯೊ ಎಂಬ ಆತನ ಕೃತಿಗಳು ಮಧ್ಯ ಯುಗಗಳಲ್ಲಿನ ಚರ್ಚೆಗಳಿಗೆ ಪ್ರಧಾನವಾಗಿದ್ದವು. ಈ ವಾದವಿವಾದವು ಕೊನೆಗೆ ಸುಧಾರಣೆಯ ಸಮಯದಲ್ಲಿ ಪರಮಾವಧಿಗೇರಿ, ಪೂರ್ವಾದೃಷ್ಟದ ವಾದಾಂಶದ ಕುರಿತು ಕ್ರೈಸ್ತಪ್ರಪಂಚದಲ್ಲಿ ದೊಡ್ಡ ಬಿರುಕುಂಟಾಯಿತು.a
ವ್ಯಾಪಕವಾದ ನಂಬಿಕೆ
ಆದರೆ ವಿಧಿಯ ಕುರಿತಾದ ವಿಚಾರಗಳು, ಕೇವಲ ಪಾಶ್ಚಾತ್ಯ ಲೋಕಕ್ಕೆ ಸೀಮಿತವಾಗಿರುವುದಿಲ್ಲ. ಅನೇಕ ಮುಸಲ್ಮಾನರು ವಿಪತ್ತನ್ನು ಎದುರಿಸುವಾಗ, “ಮೆಕ್ಟೂಬ್” ಅಂದರೆ ಬರೆಯಲ್ಪಟ್ಟಿದೆ ಎಂದು ಹೇಳುವ ಮೂಲಕ ಅದೃಷ್ಟದಲ್ಲಿನ ತಮ್ಮ ನಂಬಿಕೆಯನ್ನು ಪ್ರಕಟಪಡಿಸುತ್ತಾರೆ. ಹೆಚ್ಚಿನ ಪ್ರಾಚ್ಯ ಧರ್ಮಗಳು, ವ್ಯಕ್ತಿಗತವಾದ ಅದೃಷ್ಟದಲ್ಲಿ ಒಬ್ಬೊಬ್ಬ ವ್ಯಕ್ತಿಯ ಪಾತ್ರವು ಮಹತ್ವವುಳ್ಳದ್ದೆಂದು ಹೇಳುತ್ತವಾದರೂ, ಆ ಧರ್ಮಗಳ ಬೋಧನೆಗಳಲ್ಲಿ ವಿಧಿವಾದದ ಅಂಶಗಳು ಇವೆ.
ಉದಾಹರಣೆಗಾಗಿ, ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಕರ್ಮಫಲದ ಕುರಿತಾಗಿ ಕಲಿಸಲಾಗುತ್ತದೆ. ಇದು, ಹಿಂದಿನ ಜನ್ಮವೊಂದರಲ್ಲಿನ ಕೃತ್ಯಗಳಿಂದಾಗಿ ಫಲಿಸುವ ತಪ್ಪಿಸಲಾಗದ ವಿಧಿ ಆಗಿದೆ. ಚೀನಾದಲ್ಲಿ ಕಂಡುಹಿಡಿಯಲ್ಪಟ್ಟಿರುವ ಅತಿ ಆದಿಯ ಬರಹಗಳು ಕಣಿಕೇಳುವಿಕೆಯಲ್ಲಿ ಉಪಯೋಗಿಸಲಾಗಿದ್ದ ಆಮೆಯ ಚಿಪ್ಪುಗಳ ಮೇಲೆ ಬರೆಯಲ್ಪಟ್ಟಿದ್ದವು. ಅಮೆರಿಕ ದೇಶಗಳ ಸ್ಥಳಿಕರ ನಂಬಿಕೆಗಳಲ್ಲೂ ವಿಧಿಯ ವಿಚಾರವು ಒಂದಾಗಿತ್ತು. ದೃಷ್ಟಾಂತಕ್ಕಾಗಿ ಆ್ಯಸ್ಟೆಕ್ ಜನಾಂಗದವರು, ವ್ಯಕ್ತಿಗಳ ಅದೃಷ್ಟವನ್ನು ತೋರಿಸಲಿಕ್ಕಾಗಿ ಕಣಿಹೇಳುವಿಕೆಯ ಕ್ಯಾಲೆಂಡರುಗಳನ್ನು ರಚಿಸಿದರು. ವಿಧಿ ಸಂಬಂಧಿತ ನಂಬಿಕೆಗಳು ಆಫ್ರಿಕದಲ್ಲೂ ಸರ್ವಸಾಮಾನ್ಯವಾಗಿವೆ.
ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿರುವ ವಿಧಿಯ ಕುರಿತಾದ ಈ ವಿಚಾರವು, ಮನುಷ್ಯನು ತನಗಿಂತಲೂ ಶ್ರೇಷ್ಠವಾದೊಂದು ಶಕ್ತಿಯಲ್ಲಿ ನಂಬುವ ಮೂಲಭೂತ ಅಗತ್ಯವಿದೆ ಎಂಬುದನ್ನು ವಾಸ್ತವವಾಗಿ ತೋರಿಸುತ್ತದೆ. ಜಾನ್ ಬಿ. ನಾಸ್ ಮನುಷ್ಯನ ಧರ್ಮಗಳು ಎಂಬ ತಮ್ಮ ಪುಸ್ತಕದಲ್ಲಿ ಅಂಗೀಕರಿಸುವುದು: “ಮನುಷ್ಯನು ಒಬ್ಬಂಟಿಗನಾಗಿ ನಿಲುವುದಿಲ್ಲ ಮತ್ತು ಹಾಗೆ ನಿಲ್ಲಲಾರನು ಎಂಬುದನ್ನು ಎಲ್ಲ ಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಹೇಳುತ್ತವೆ. ತನ್ನಿಂದ ಪ್ರತ್ಯೇಕವಾಗಿರುವ, ಪ್ರಕೃತಿಯಲ್ಲಿನ ಮತ್ತು ಸಮಾಜದಲ್ಲಿನ ಶಕ್ತಿಗಳೊಂದಿಗೆ ಅವನು ಖಂಡಿತವಾಗಿ ಸಂಬಂಧಿತನಾಗಿದ್ದಾನೆ ಮತ್ತು ಅವುಗಳ ಮೇಲೆ ಅವಲಂಬಿತನಾಗಿದ್ದಾನೆ. ಅವನು ಲೋಕದಿಂದ ಪ್ರತ್ಯೇಕವಾಗಿ ನಿಲ್ಲಲು ಸಮರ್ಥನಾಗಿರುವ ಸ್ವತಂತ್ರ ಶಕ್ತಿಯ ಕೇಂದ್ರವಲ್ಲವೆಂಬುದು ಅವನಿಗೆ ಅಸ್ಪಷ್ಟವಾಗಿ ಇಲ್ಲವೇ ಸ್ಪಷ್ಟವಾಗಿ ತಿಳಿದೇ ಇದೆ.”
ದೇವರೊಬ್ಬನಿದ್ದಾನೆಂದು ನಂಬುವುದರ ಜೊತೆಗೆ, ನಮ್ಮ ಸುತ್ತಲೂ ಏನು ಸಂಭವಿಸುತ್ತಿದೆಯೊ ಅದನ್ನು ಗ್ರಹಿಸಿಕೊಳ್ಳುವ ಮೂಲಭೂತ ಅಗತ್ಯವೂ ನಮಗಿದೆ. ಆದರೆ, ಒಬ್ಬ ಸರ್ವಶಕ್ತ ಸೃಷ್ಟಿಕರ್ತನನ್ನು ಅಂಗೀಕರಿಸುವುದು ಮತ್ತು ಆತನು ನಮ್ಮ ಅದೃಷ್ಟವನ್ನು ಬದಲಿಸಲಾಗದಂತಹ ರೀತಿಯಲ್ಲಿ ನಿರ್ಧರಿಸುತ್ತಾನೆಂಬುದನ್ನು ನಂಬುವುದರಲ್ಲಿ ಒಂದು ವ್ಯತ್ಯಾಸವಿದೆ. ನಮ್ಮ ಅದೃಷ್ಟವನ್ನು ರೂಪಿಸುವುದರಲ್ಲಿ ನಮ್ಮ ಪಾತ್ರವೇನು? ಮತ್ತು ದೇವರ ಪಾತ್ರವೇನು?
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು ಎಂಬ ನಮ್ಮ ಜೊತೆ ಪತ್ರಿಕೆಯ, ಫೆಬ್ರವರಿ 15, 1995ರ ಸಂಚಿಕೆಯಲ್ಲಿ 3-4ನೆಯ ಪುಟಗಳನ್ನು ನೋಡಿರಿ.
[ಪುಟ 5 ರಲ್ಲಿರುವ ಚಿತ್ರ]
ಬಬಿಲೋನಿನ ಜ್ಯೋತಿಶ್ಶಾಸ್ತ್ರ ಸಂಬಂಧಿತ ಕ್ಯಾಲೆಂಡರ್, ಸಾ.ಶ.ಪೂ. 1000
[ಕೃಪೆ]
Musée du Louvre, Paris
[ಪುಟ 7 ರಲ್ಲಿರುವ ಚಿತ್ರ]
ಮನುಷ್ಯನ ಅದೃಷ್ಟವನ್ನು ಮೂವರು ದೇವತೆಗಳು ನಿರ್ಧರಿಸುತ್ತಾರೆಂದು ಗ್ರೀಕ್ ಮತ್ತು ರೋಮನ್ ಜನರು ನಂಬಿದರು
[ಕೃಪೆ]
Musée du Louvre, Paris
[ಪುಟ 7 ರಲ್ಲಿರುವ ಚಿತ್ರ]
ಈಜಿಪ್ಟ್ನ ಐಸಿಸ್ ದೇವತೆ, “ವಿಧಿ ಮತ್ತು ಅದೃಷ್ಟದ ಅಧಿದೇವತೆ”
[ಕೃಪೆ]
Musée du Louvre, Paris
[ಪುಟ 8 ರಲ್ಲಿರುವ ಚಿತ್ರ]
ಆಮೆ ಚಿಪ್ಪುಗಳ ಮೇಲಿನ ಅತ್ಯಾರಂಭದ ಚೈನೀಸ್ ಬರಹಗಳು ಕಣಿಹೇಳುವಿಕೆಯಲ್ಲಿ ಉಪಯೋಗಿಸಲ್ಪಟ್ಟವು
[ಕೃಪೆ]
Institute of History and Philology, Academia Sinica, Taipei
[ಪುಟ 8 ರಲ್ಲಿರುವ ಚಿತ್ರ]
ಪರ್ಷಿಯದ ಈ ಪೆಟ್ಟಿಗೆಯ ಮೇಲೆ ರಾಶಿಚಕ್ರದ ಚಿಹ್ನೆಗಳಿವೆ
[ಕೃಪೆ]
Photograph taken by courtesy of the British Museum