ನಿಮ್ಮ ಭವಿಷ್ಯತ್ತನ್ನು ನೀವೇ ಆಯ್ಕೆಮಾಡಿಕೊಳ್ಳಬಲ್ಲಿರಿ
ಕಣಿಕೇಳುವಿಕೆಯನ್ನು “ಪ್ರಾಚೀನ ಲೋಕದಲ್ಲೆಲ್ಲ ಒಂದು ಪ್ರಮುಖ ಬೌದ್ಧಿಕ ಸಾಧನೆ” ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ, ಅದು “ಹೀಬ್ರೂ ಪ್ರವಾದಿಗಳು ತಿರಸ್ಕಾರದಿಂದ ಕಾಣುತ್ತಿದ್ದ ಒಂದು ಕೌಶಲವಾಗಿತ್ತು” ಎಂದು ಅಗೆತಶಾಸ್ತ್ರಜ್ಞೆ ಜೋನ್ ಓಟ್ಸ್ ಗಮನಿಸುತ್ತಾರೆ. ಏಕೆ?
ಪ್ರಾಚೀನ ಇಸ್ರಾಯೇಲ್ಯರು, ಜೀವಿತದ ಕುರಿತಾಗಿ ಅದೃಷ್ಟವಾದಿ ದೃಷ್ಟಿಕೋನವುಳ್ಳ ರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಿದ್ದರೂ, ಒಂದು ಕುರುಡು ಶಕ್ತಿಯು ತಮ್ಮ ಜೀವಿತಗಳನ್ನು ರೂಪಿಸುತ್ತದೆಂಬ ವಿಚಾರವನ್ನು ತಿರಸ್ಕರಿಸಿದರು. ಆ ಜನಾಂಗಕ್ಕೆ ಕೊಡಲ್ಪಟ್ಟ ಸೂಚನೆಗಳಲ್ಲಿ ದೇವರು ಅವರಿಗೆ ಹೀಗೆ ಹೇಳಿದನು: “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, . . . ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋಪದೇಶಕಾಂಡ 18:10, 11.
ವಿಧಿಯ ಕುರಿತಾದ ವಿಚಾರವನ್ನು ನಂಬದೇ ಅಥವಾ ಶಕುನ ಹೇಳುವವರನ್ನು ಉಪಯೋಗಿಸದೆಯೇ, ಇಸ್ರಾಯೇಲ್ಯರು ಭವಿಷ್ಯತ್ತಿನ ಕುರಿತಾಗಿ ಭರವಸೆಯಿಂದಿರಸಾಧ್ಯವಿತ್ತು. ಅದಕ್ಕೆ ಕಾರಣವನ್ನು ವಿವರಿಸುತ್ತಾ ಫ್ರೆಂಚ್ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಟೇಓ ಹೇಳುವುದೇನೆಂದರೆ, “ಮನುಷ್ಯ ಮತ್ತು ಜಗತ್ತು ಯಾವುದೊ ಕುರುಡು ಶಕ್ತಿಯ ಬೇಟೆಯ ಪಶುಗಳಾಗಿರಲಿಲ್ಲ” ಎಂದು ಆ ರಾಷ್ಟ್ರವು ನಂಬುತ್ತಿತ್ತು. “ದೇವರು ಮನುಷ್ಯರಿಗಾಗಿ ಒಂದು ಉದ್ದೇಶವನ್ನಿಟ್ಟಿದ್ದನು.” ಆ ಉದ್ದೇಶವೇನಾಗಿತ್ತು?
ಅದೃಷ್ಟ ಮತ್ತು ಇಚ್ಛಾ ಸ್ವಾತಂತ್ರ್ಯ
ಇಸ್ರಾಯೇಲ್ಯರು ತನ್ನ ಆಜ್ಞೆಗಳಿಗೆ ವಿಧೇಯರಾಗಿರುವಲ್ಲಿ ಅವರಿಗೆ ಶಾಂತಿ ಮತ್ತು ಸಮೃದ್ಧಿ ಇರುವುದೆಂದು ದೇವರು ಮಾತುಕೊಟ್ಟನು. (ಯಾಜಕಕಾಂಡ 26:3-6) ಇದಕ್ಕೆ ಕೂಡಿಸಿ, ಭೂಮಿಯ ಮೇಲೆ ನೀತಿಯುತ ಪರಿಸ್ಥಿತಿಗಳನ್ನು ಸ್ಥಾಪಿಸಲಿದ್ದ ಒಬ್ಬ ಮೆಸ್ಸೀಯನಿಗಾಗಿ ಅವರು ಎದುರುನೋಡುತ್ತಿದ್ದರು. (ಯೆಶಾಯ ಅಧ್ಯಾಯ 11) ಆದರೆ ದೇವರು ಈ ಎಲ್ಲ ವಿಷಯಗಳನ್ನು ವಾಗ್ದಾನಿಸಿರುವುದರಿಂದ, ಅವರೆಲ್ಲರೂ ಸುಮ್ಮನೆ ಕೈಕಟ್ಟಿ ಕುಳಿತುಕೊಂಡು ವಿಷಯಗಳು ಸಂಭವಿಸುವಂತೆ ಬಿಡಬೇಕೆಂಬುದನ್ನು ಇದು ಅರ್ಥೈಸಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವರಿಗೆ ಹೀಗೆ ಹೇಳಲಾಯಿತು: “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು.”—ಪ್ರಸಂಗಿ 9:10.
ಇದರಲ್ಲಿ ಪ್ರಮುಖ ವಿಷಯವು, ಇಚ್ಛಾ ಸ್ವಾತಂತ್ರ್ಯದ ವಿಚಾರವಾಗಿತ್ತು. ಇಸ್ರಾಯೇಲ್ಯರು ದೇವರಿಗೆ ಸೇವೆಸಲ್ಲಿಸಿ, ತಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಸ್ವತಂತ್ರರಾಗಿದ್ದರು. ದೇವರು ಅವರಿಗೆ ಹೀಗೆ ವಾಗ್ದಾನಿಸಿದನು: “ನಾನು ಈಗ ನಿಮಗೆ ಬೋಧಿಸುವ ಆಜ್ಞೆಗಳಿಗೆ ನೀವು ಲಕ್ಷ್ಯಕೊಟ್ಟು ನಿಮ್ಮ ದೇವರಾದ ಯೆಹೋವನನ್ನು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಪ್ರೀತಿಸಿ ಆತನನ್ನು ಸೇವಿಸಿದರೆ ನಿಮಗೆ ಗೋದಿ, ದ್ರಾಕ್ಷೆ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಉಂಟಾಗುವಂತೆ ಆತನು ನಿಮ್ಮ ಭೂಮಿಗೆ ಬೇಕಾದ ಮುಂಗಾರು ಹಿಂಗಾರುಗಳನ್ನು ಸರಿಯಾಗಿ ನಡಿಸುವನು.” (ಧರ್ಮೋಪದೇಶಕಾಂಡ 11:13, 14) ಇಸ್ರಾಯೇಲ್ಯರು ದೇವರಿಗೆ ವಿಧೇಯರಾಗಿದ್ದಾಗ, ಅವರಿಗೆ ಆತನ ಆಶೀರ್ವಾದಗಳು ದೊರೆತವು.
ಇಸ್ರಾಯೇಲ್ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸುವ ಸ್ವಲ್ಪ ಸಮಯದ ಮುಂಚೆ, ದೇವರು ಅವರ ಮುಂದೆ ಈ ಆಯ್ಕೆಯನ್ನಿಟ್ಟನು: “ನೋಡಿರಿ; ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ.” (ಧರ್ಮೋಪದೇಶಕಾಂಡ 30:15) ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯತ್ತು, ಅವನ ಸ್ವಂತ ಕ್ರಿಯೆಗಳು ಮತ್ತು ನಿರ್ಣಯಗಳ ಮೇಲೆ ಹೊಂದಿಕೊಂಡಿತ್ತು. ದೇವರಿಗೆ ಸೇವೆಸಲ್ಲಿಸುವಲ್ಲಿ ಜೀವ ಮತ್ತು ಆಶೀರ್ವಾದಗಳು ಸಿಗಲಿದ್ದವು, ಆದರೆ ಹಾಗೆ ಮಾಡಲು ನಿರಾಕರಿಸುವಲ್ಲಿ ಕಷ್ಟಕಾರ್ಪಣ್ಯಗಳೇ ಅವರ ಗತಿಯಾಗಿರಲಿತ್ತು. ಆದರೆ ಇಂದಿನ ಕುರಿತಾಗಿ ಏನು?
ಕಾರ್ಯಕಾರಣ ಭಾವ
ನಮ್ಮ ಒಳಿತಿಗಾಗಿಯೇ ಸ್ಥಾಪಿಸಲ್ಪಟ್ಟಿರುವ ಅನೇಕ ನೈಸರ್ಗಿಕ ನಿಯಮಗಳಿಂದ ನಾವು ನಿರ್ಬಂಧಿಸಲ್ಪಡುತ್ತೇವೆ. ಇವುಗಳಲ್ಲಿ ಒಂದು, ಕಾರ್ಯಕಾರಣ ಭಾವ ನಿಯಮವಾಗಿದೆ ಅಥವಾ ಬೈಬಲ್ ಹೇಳುವಂತೆ, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ನಾವು ಈ ತತ್ವವನ್ನು ಗ್ರಹಿಸಿಕೊಳ್ಳುವಲ್ಲಿ, ಭವಿಷ್ಯದಲ್ಲಿ ಸಂಭವಿಸಬಹುದಾದ ನಿರ್ದಿಷ್ಟ ಘಟನೆಗಳ ಸಂಭವನೀಯತೆಯನ್ನು ಪರಿಗಣಿಸಲು ಸಾಧ್ಯವಿದೆ.
ಸಾವಕಾಶವಾಗಿ ಜಾಗರೂಕತೆಯಿಂದ ವಾಹನವನ್ನು ಚಲಾಯಿಸುವ ಬದಲಿಗೆ, ನಾವು ಅತಿ ವೇಗದಿಂದ ಸಿಕ್ಕಾಬಟ್ಟೆ ವಾಹನವನ್ನು ಓಡಿಸುವಲ್ಲಿ, ಅಪಘಾತಕ್ಕೀಡಾಗುವ ಸಂಭಾವ್ಯತೆಯು ಹೆಚ್ಚು. ನಾವು ಸಿಗರೇಟನ್ನು ಸೇದುವಲ್ಲಿ, ಕ್ಯಾನ್ಸರನ್ನು ಅಂಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಲೇಖನಮಾಲೆಯ ಆರಂಭದಲ್ಲಿ ತಿಳಿಸಲ್ಪಟ್ಟಿರುವಂತಹ ರೀತಿಯ ಭಯೋತ್ಪಾದಕರ ಆಕ್ರಮಣವು ನಾವಿರುವ ಸ್ಥಳದಲ್ಲಿ ಸಂಭವಿಸಲಿಕ್ಕಿಲ್ಲ ಮತ್ತು ಅವುಗಳು ಸಂಭವಿಸುವವೊ ಇಲ್ಲವೊ ಎಂದು ಯೋಚಿಸುತ್ತಾ ಕುಳಿತುಕೊಳ್ಳುವುದು ಅರ್ಥಹೀನವಾಗಿದೆ ಎಂಬುದು ನಿಜ. ಆದರೆ ವಿಧಿಯ ಕುರಿತಾದ ವಿಚಾರವನ್ನು ಆಶ್ರಯಿಸುವುದು ನಿಷ್ಪ್ರಯೋಜಕವಾದ ಸಂಗತಿಯಾಗಿದೆ. ಅದು ಸದ್ಯದ ಕುರಿತಾಗಲಿ ಭವಿಷ್ಯತ್ತಿನ ಕುರಿತಾಗಲಿ ನಮಗೆ ಏನನ್ನೂ ತಿಳಿಸಲಾರದು. ಒಂದು ಸುಳ್ಳು ವಿಚಾರದಲ್ಲಿ ನಂಬಿಕೆಯಿಡುವುದು, ಭವಿಷ್ಯತ್ತಿಗಾಗಿ ನಮಗೆ ಯಾವುದೇ ನಿಜವಾದ ಆಶ್ವಾಸನೆಯನ್ನು ಕೊಡುವುದಿಲ್ಲ. ಪ್ರತಿಯೊಂದು ಘಟನೆಯನ್ನೂ ದೇವರೇ ನಿರ್ಧರಿಸುತ್ತಾನೆಂದು ನಂಬುವುದರಿಂದಲೂ ಯಾವುದೇ ಪ್ರಯೋಜನವಿಲ್ಲ.
ನಿಮ್ಮ ಭವಿಷ್ಯತ್ತು ಏನಾಗಿರುವುದು?
ನಮ್ಮ ಭವಿಷ್ಯತ್ತು ಮುಂಚಿತವಾಗಿಯೇ ಬರೆದಿಡಲ್ಪಟ್ಟಿಲ್ಲ, ಬದಲಾಗಿ ವರ್ತಮಾನಕಾಲಕ್ಕನುಸಾರ ರೂಪಿಸಲ್ಪಡುತ್ತದೆ. ಜೀವವು ದೇವರಿಂದ ಒಂದು ಕೊಡುಗೆಯಾಗಿರುವುದಾದರೂ, ನಮ್ಮ ಸದ್ಯದ ಹಾಗೂ ಭವಿಷ್ಯತ್ತಿನ ಜೀವಿತವನ್ನು ಯೋಜಿಸುವುದರಲ್ಲಿ, ನಮಗೆ ಒಂದು ಪ್ರಮುಖ ಪಾತ್ರವನ್ನು ವಹಿಸಲಿಕ್ಕಿದೆಯೆಂದು ಬೈಬಲ್ ಸ್ಪಷ್ಟವಾಗಿ ಸೂಚಿಸುತ್ತದೆ. ದೇವರನ್ನು ಸಂತೋಷಪಡಿಸುವ ಅಥವಾ ಆತನನ್ನು ದುಃಖಪಡಿಸುವ ಆಯ್ಕೆಯು ನಮಗಿದೆಯೆಂಬ ವಾಸ್ತವಾಂಶವೇ, ನಮ್ಮ ಜೀವಿತಗಳ ಮೇಲೆ ದೇವರು ನಮಗೆ ಒಂದಿಷ್ಟು ನಿಯಂತ್ರಣವನ್ನು ಕೊಟ್ಟಿದ್ದಾನೆಂಬುದನ್ನು ತೋರಿಸುತ್ತದೆ.—ಆದಿಕಾಂಡ 6:6; ಕೀರ್ತನೆ 78:40; ಜ್ಞಾನೋಕ್ತಿ 27:11.
ಇದಕ್ಕೆ ಕೂಡಿಸುತ್ತಾ ನಮ್ಮ ಭವಿಷ್ಯತ್ತು, ನಮ್ಮ ತಾಳ್ಮೆ ಮತ್ತು ಜೀವನ ಕ್ರಮದೊಂದಿಗೆ ಜೋಡಿಸಲ್ಪಟ್ಟಿದೆಯೆಂದು ಪವಿತ್ರ ಶಾಸ್ತ್ರವಚನಗಳು ಪದೇ ಪದೇ ಎತ್ತಿ ತೋರಿಸುತ್ತವೆ. ಎಲ್ಲವೂ ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟಿರುವಲ್ಲಿ, ಇದಕ್ಕೆ ಯಾವುದೇ ಅರ್ಥವಿರುತ್ತಿರಲಿಲ್ಲ. (ಮತ್ತಾಯ 24:13; ಲೂಕ 10:25-28) ಹಾಗಾದರೆ ನಾವು ದೇವರಿಗೆ ವಿಧೇಯರೂ ನಂಬಿಗಸ್ತರೂ ಆಗಿರಲು ಆರಿಸಿಕೊಳ್ಳುವಲ್ಲಿ, ನಮಗೆ ಯಾವ ರೀತಿಯ ಭವಿಷ್ಯತ್ತು ಇರಬಲ್ಲದು?
ಮಾನವಕುಲಕ್ಕೆ ತುಂಬ ಉಜ್ವಲವಾದ ಭವಿಷ್ಯತ್ತಿದೆಯೆಂದು ಬೈಬಲ್ ತೋರಿಸುತ್ತದೆ. ಭೂಮಿಯು ಒಂದು ಪ್ರಮೋದವನವಾಗಿ ಮಾರ್ಪಟ್ಟು, ಶಾಂತಿ ಮತ್ತು ಭದ್ರತೆಯು ಆಳುವವು. (ಕೀರ್ತನೆ 37:9-11; 46:8, 9) ಈ ಭವಿಷ್ಯತ್ತು ನಿಶ್ಚಿತ, ಯಾಕಂದರೆ ಸರ್ವಶಕ್ತನಾದ ಸೃಷ್ಟಿಕರ್ತನು ತನ್ನ ವಾಗ್ದಾನಗಳನ್ನು ಖಂಡಿತವಾಗಿಯೂ ನೆರವೇರಿಸುವನು. (ಯೆಶಾಯ 55:11) ಆದರೆ ನಾವು ಪ್ರಮೋದವನದಲ್ಲಿನ ಜೀವಿತದ ಆಶೀರ್ವಾದವನ್ನು ಪಡೆದುಕೊಳ್ಳುವುದು ವಿಧಿಯ ಮೇಲೆ ಅವಲಂಬಿತವಾಗಿರುವುದಿಲ್ಲ. ನಾವು ವಿಧೇಯತೆಯಿಂದ ಈಗಲೇ ದೇವರ ಚಿತ್ತವನ್ನು ಮಾಡುವುದರ ಮೂಲಕ ಅದನ್ನು ಅನುಭವಿಸಬಹುದು. (2 ಥೆಸಲೊನೀಕ 1:6-8; ಪ್ರಕಟನೆ 7:14, 15) ದೇವರು ನಮಗೆ ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆತನು ಉತ್ತೇಜಿಸುವುದು: “ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.” (ಧರ್ಮೋಪದೇಶಕಾಂಡ 30:19) ನೀವು ಏನನ್ನು ಆರಿಸಿಕೊಳ್ಳುವಿರಿ? ನಿಮ್ಮ ಭವಿಷ್ಯತ್ತು ವಿಧಿಯ ವಶದಲ್ಲಿಲ್ಲ, ಅದು ನಿಮ್ಮ ಕೈಯಲ್ಲೇ ಇದೆ.
[ಪುಟ 10 ರಲ್ಲಿರುವ ಚಿತ್ರಗಳು]
ವಿಧೇಯ ಮಾನವಕುಲಕ್ಕಾಗಿ ದೇವರು ಒಂದು ಅದ್ಭುತಕರ ಭವಿಷ್ಯತ್ತನ್ನು ಉದ್ದೇಶಿಸಿದ್ದಾನೆ