ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 11/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೈತಿಕತೆಯು ಪುಟವೇಳುತ್ತಿದೆಯೆ?
  • ದಯೆಯ ರೇಖಾಪಟ್ಟಿಯನ್ನು ತಯಾರಿಸುವುದು
  • ಅಂಚೆ ಪಾರಿವಾಳ ಈಗಲೂ ಪ್ರಯೋಜನಕಾರಿ
  • ಮಕ್ಕಳಿಗೆ ಶಾಲೆಗಳಿಲ್ಲ
  • ವಿಪತ್ತಿನ ಪ್ರವೃತ್ತಿಯಿರುವ ಏಷ್ಯಾ
  • ನಿಮಗೆ ನೀವೇ ಕಚಗುಳಿ ಇಟ್ಟುಕೊಳ್ಳಲು ಏಕೆ ಸಾಧ್ಯವಿಲ್ಲ?
  • ಮಾರ್ಸ್‌ ಸಂಕೇತ ಭಾಷೆಯ ಉತ್ತರಾಧಿಕಾರಿ
  • ಪಾದರಕ್ಷೆಗಳಿಂದ ಆರೋಗ್ಯ ಸಮಸ್ಯೆಗಳು
  • ಚೀನಾದಲ್ಲಿ ಬೈಬಲ್‌ ಮುದ್ರಣ
  • ನೋಯುವ ಪಾದಗಳಿಗೆ ನೆರವು
    ಎಚ್ಚರ!—1997
  • ಜಗತ್ತನ್ನು ಗಮನಿಸುವುದು
    ಎಚ್ಚರ!—1991
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
  • ವರ್ಷಗಳ ಆಶಾಭಂಗಗೊಂಡ ಪ್ರಯತ್ನಗಳು
    ಕಾವಲಿನಬುರುಜು—1995
ಇನ್ನಷ್ಟು
ಎಚ್ಚರ!—1999
g99 11/8 ಪು. 28-29

ಜಗತ್ತನ್ನು ಗಮನಿಸುವುದು

ನೈತಿಕತೆಯು ಪುಟವೇಳುತ್ತಿದೆಯೆ?

ಚೀನಾದಲ್ಲಿ ನಡೆದ ಇತ್ತೀಚಿನ ಒಂದು ಸಮೀಕ್ಷೆಯು ಪ್ರಕಟಪಡಿಸಿದ್ದೇನೆಂದರೆ, “ವಿವಾಹೇತರ ಲೈಂಗಿಕ ಸಂಬಂಧಗಳ ಕುರಿತು ಚೀನಾದ ವಯಸ್ಕರು ಹೆಚ್ಚು ಸಹಿಷ್ಣುತರಾಗಿ ಪರಿಣಮಿಸಿದ್ದಾರಾದರೂ ಹೆಚ್ಚಿನ ಯುವಪ್ರಾಯದ ಮಕ್ಕಳು ಇಂಥ ನಡವಳಿಕೆಯನ್ನು ಈಗಲೂ ವಿರೋಧಿಸುವವರಾಗಿದ್ದಾರೆ,” ಎಂದು ಚೈನಾ ಟುಡೇ ಎಂಬ ಪತ್ರಿಕೆಯು ವರದಿಸುತ್ತದೆ. ಈ ಕಂಡುಹಿಡಿತವು ಸುಮಾರು 8,000 ಜನರು ಕೊಟ್ಟ ಅಭಿಪ್ರಾಯದ ಮೇಲಾಧಾರಿತವಾಗಿತ್ತು. “ವಿವಾಹೇತರ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ಇತರ ವ್ಯಕ್ತಿಗಳ ವೈವಾಹಿಕ ಜೀವನವನ್ನು ಹಾಳುಮಾಡುವವರಿಗೆ ಹಣದ ದಂಡ ಇಲ್ಲವೆ ಬೇರೆ ಯಾವುದಾದರೂ ಶಿಕ್ಷೆಯನ್ನು ವಿಧಿಸಬೇಕು ಎಂದು ಐದರಲ್ಲಿ ಮೂರು ಭಾಗದಷ್ಟು ಹದಿಪ್ರಾಯದವರು ಒಪ್ಪಿಕೊಂಡರು.” ಆದರೆ, “37ರಿಂದ 45 ವರ್ಷದ ವಯಸ್ಸಿನವರಲ್ಲಿ 70 ಪ್ರತಿಶತದಷ್ಟು ಜನರು ಇಂಥ ಕೃತ್ಯಗಳಿಗೆ ಯಾವುದೇ ರೀತಿಯ ಶಿಕ್ಷೆಯನ್ನು ವಿಧಿಸುವ ಅಗತ್ಯವಿಲ್ಲವೆಂದು ನೆನಸುತ್ತಾರೆ,” ಎಂದು ಆ ಸಮೀಕ್ಷೆಯು ತೋರಿಸಿತು.

ದಯೆಯ ರೇಖಾಪಟ್ಟಿಯನ್ನು ತಯಾರಿಸುವುದು

“ಮಕ್ಕಳು ಅನುಭೂತಿಯನ್ನು ವ್ಯಕ್ತಪಡಿಸಲು ವಿಕಾಸಾತ್ಮಕವಾಗಿ ಶಕ್ತರಾಗಲು ಕನಿಷ್ಟಪಕ್ಷ ನಾಲ್ಕು ವರ್ಷದಷ್ಟು ವಯಸ್ಸಿನವರಾದರೂ ಆಗಬೇಕು. ಅಲ್ಲಿಯವರೆಗೂ ಮೂಲತಃ ಅವರು ಹೆಚ್ಚು ಸ್ವಾರ್ಥ ಮನೋಭಾವದವರಾಗಿರುತ್ತಾರೆ,” ಎಂದು ದ ಟೊರಾಂಟೋ ಸ್ಟಾರ್‌ನಲ್ಲಿ ನೀಡಿದ ಉದ್ಧೃತ ಪ್ರಕರಣದ ವರದಿಯು ಹೇಳುತ್ತದೆ. ಮಕ್ಕಳು ಇತರರಿಗಾಗಿ ಚಿಂತೆಯನ್ನು ಬೆಳಸಿಕೊಳ್ಳಲು, ದಯಾಪರ ಕೃತ್ಯಗಳನ್ನು ಮನೆಯಲ್ಲಿ ಕಲಿಸುವಂತೆ ಸಲಹೆ ನೀಡಲಾಗಿದೆ. ಪ್ರಾಯಶಃ, ಕುಟುಂಬ ಸದಸ್ಯರು ಪ್ರತಿದಿನವೂ ತಾವು ಮಾಡುವ ಕನಿಷ್ಟಪಕ್ಷ ಎರಡು ಸ್ವಯಂಪ್ರೇರಿತ ಒಳ್ಳೇ ಕೃತ್ಯಗಳನ್ನು ರೇಖಾಪಟ್ಟಿಯಲ್ಲಿ ಬರೆದಿಡಬಹುದು. ತಮ್ಮ ಮಗು ಮಾಡುವ ದಯಾಪೂರ್ಣ ಕೃತ್ಯವನ್ನು ಗಮನಿಸುವ ಹೆತ್ತವರು ಅದನ್ನು ರೇಖಾಪಟ್ಟಿಯಲ್ಲಿ ಸೇರಿಸಬಹುದು. ಅನೇಕ ಶಾಲೆಗಳು, ದುರ್ಬಲ ಮಕ್ಕಳನ್ನು ಪೀಡಿಸುವ ವಿದ್ಯಾರ್ಥಿಗಳನ್ನು ಪ್ರತಿರೋಧಿಸಲು ಇಂತಹ ರೇಖಾಪಟ್ಟಿಗಳನ್ನು ಉಪಯೋಗಿಸುತ್ತವೆ. ಬೇರೆ ಮಕ್ಕಳು ಮಾಡುವಂಥ ದಯಾಪೂರ್ವ ಕ್ರಿಯೆಗಳಿಗೆ ಸಾಕ್ಷಿಯಾಗಿರುವ ವಿದ್ಯಾರ್ಥಿಗಳೂ ಅಂಥ ಕೃತ್ಯಗಳನ್ನು ರೇಖಾಪಟ್ಟಿಯಲ್ಲಿ ದಾಖಲುಮಾಡುವಂತೆ ಆಹ್ವಾನಿಸಲಾಗುತ್ತದೆ. ಈ ವರದಿಗನುಸಾರ, “ಇದು ಸಹಾನುಭೂತಿಯನ್ನು ಮಾನ್ಯಮಾಡುವಂತೆ ಮಕ್ಕಳಿಗೆ ಸಹಾಯಮಾಡುತ್ತದೆ ಮತ್ತು ಮಕ್ಕಳು ಸಹಾನುಭೂತಿಯ ಅನಿಸಿಕೆಯನ್ನು ತಾವೇ ಅನುಭವಿಸಿ ಅದನ್ನು ಅಭ್ಯಾಸಿಸುವುದು ಹೇಗೆ ಎಂಬುದನ್ನು ಕಲಿತುಕೊಳ್ಳಲು ಒಂದು ನಿರ್ಣಾಯಕ ಹೆಜ್ಜೆಯಾಗಿದೆ.”

ಅಂಚೆ ಪಾರಿವಾಳ ಈಗಲೂ ಪ್ರಯೋಜನಕಾರಿ

ಭಾರತದ ಒರಿಸ್ಸಾ ರಾಜ್ಯದಲ್ಲಿರುವ ಆರಕ್ಷಕ ಇಲಾಖೆಗೆ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆಯು ಇರುವುದಾದರೂ, ಸುಮಾರು 800 ಬಲಿಷ್ಠ ಪಾರಿವಾಳಗಳ ದಂಡನ್ನು ಹೊಂದಿರುವ “ಪಾರಿವಾಳ ವಿಭಾಗವನ್ನು” ಮಾತ್ರ ಮುಚ್ಚಲು ಅದಕ್ಕೆ ಮನಸ್ಸಿಲ್ಲ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಸುತ್ತದೆ. ಒರಿಸ್ಸಾ ಆರಕ್ಷಕ ಇಲಾಖೆಯ ಮಹಾನಿರ್ದೇಶಕರಾದ ಶ್ರೀಮಾನ್‌ ಬಿ. ಬಿ. ಪಾಂಡಾರವರಿಗನುಸಾರ, ಕಳೆದ 50 ವರ್ಷಗಳಿಂದ ನೆರೆ ಮತ್ತು ಚಂಡಮಾರುತಗಳ ಸಮಯಗಳಲ್ಲಿ ಪಾರಿವಾಳಗಳೇ ಜೀವನಾಡಿಗಳಾಗಿದ್ದವು ಮತ್ತು ಈಗಲೂ ನಿಸ್ತಂತು ಸಂಪರ್ಕ ಸಾಧನಗಳು ಕೆಟ್ಟುಹೋಗುವಾಗ ಅವು ಪ್ರಾಯೋಗಿಕವಾಗಿವೆ. ಉದಾಹರಣೆಗಾಗಿ, 1982ರಲ್ಲಿ ನೆರೆಯು ಬಾಂಕಿ ಎಂಬ ಪಟ್ಟಣವನ್ನು ಧ್ವಂಸಮಾಡಿದಾಗ, ಜಿಲ್ಲಾ ಕೇಂದ್ರವಾಗಿದ್ದ ಕಟಕ್‌ ಮತ್ತು ಬಾಂಕಿ ಪಟ್ಟಣದ ನಡುವೆ ಇದ್ದ ಒಂದೇ ಒಂದು ಸಂಪರ್ಕ ಮಾಧ್ಯಮವು ಪಾರಿವಾಳಗಳಾಗಿದ್ದವು. ಹೋಮರ್‌ (ಮನೆಗೆ ಹಿಂದಿರುಗುವ ಪಾರಿವಾಳ) ಎಂದು ಕರೆಯಲ್ಪಡುವ ಬೆಲ್ಜಿಯಮ್‌ನ ತಳಿಯ ಪಾರಿವಾಳದೊಂದಿಗೆ ಮೊದಲ ತಂಡವು 1946ರಲ್ಲಿ ಒರಿಸ್ಸಾದಲ್ಲಿ ಆರಂಭವಾಯಿತು. ಇವು ಒಂದು ತಾಸಿಗೆ 80ರಿಂದ 90 ಕಿಲೊಮೀಟರುಗಳಷ್ಟು ವೇಗದಲ್ಲಿ ಹಾರುತ್ತ, ಎಲ್ಲಿಯೂ ನಿಲ್ಲದೆ 800 ಕಿಲೊಮೀಟರುಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಸುಮಾರು 15ರಿಂದ 20 ವರ್ಷಗಳ ಕಾಲ ಬದುಕುವ ಈ ಹಕ್ಕಿಗಳು ಸದ್ಯಕ್ಕೆ 34 ಮಂದಿ ಪೊಲೀಸರ ಆರೈಕೆಯ ಕೆಳಗೆ ಮೂರು ಕೇಂದ್ರಗಳಲ್ಲಿ ಇಡಲ್ಪಟ್ಟಿವೆ. ಶ್ರೀಮಾನ್‌ ಪಾಂಡಾ ಹೇಳಿದ್ದೇನೆಂದರೆ: “ಸೆಲ್ಯುಲರ್‌ ಫೋನಿನ ಯುಗದಲ್ಲಿ ಪಾರಿವಾಳಗಳು ಹಳೇ ಕಾಲದವುಗಳಂತೆ ತೋರಬಹುದು, ಆದರೆ ಇಂದಿನ ವರೆಗೂ ಇವು ರಾಜ್ಯಕ್ಕೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿವೆ.”

ಮಕ್ಕಳಿಗೆ ಶಾಲೆಗಳಿಲ್ಲ

1948ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯು, ಶಿಕ್ಷಣಕ್ಕಾಗಿರುವ ಮೂಲಭೂತ ಹಕ್ಕನ್ನು ಸ್ಪಷ್ಟೀಕರಿಸಿತು. ಇದರ ಕುರಿತು ಅನೇಕ ಮೆಚ್ಚತಕ್ಕ ಪ್ರಯತ್ನಗಳು ಮಾಡಲ್ಪಟ್ಟಿವೆಯಾದರೂ, ಅದು ತನ್ನ ಗುರಿಯನ್ನು ಮುಟ್ಟುವುದರಲ್ಲಿ ಬಹಳ ಹಿಂದುಳಿದಿದೆ. “ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿ 50 ವರ್ಷಗಳಾಗಿದ್ದರೂ, ತರಗತಿಗಳಿಗೆ ಹೋಗದ 13 ಕೋಟಿಗಿಂತಲೂ ಹೆಚ್ಚು ಪ್ರಾಥಮಿಕ ಶಾಲೆಯ ವಯಸ್ಸಿನ ಮಕ್ಕಳಿದ್ದಾರೆ,” ಎಂದು ಜರ್ಮನಿಯ ದಿನಪತ್ರಿಕೆ ಆಲ್ಗೆಮೈನ ಟ್ಸೈಟುಂಗ್‌ ಮೈಂಟ್ಸ್‌ ವರದಿಸಿತು. “ಇದರ ಅರ್ಥ, ಜಗತ್ತಿನ ಶೇಕಡ 20ರಷ್ಟು ಮಕ್ಕಳಿಗೆ ಮೂಲಭೂತ ಶಿಕ್ಷಣವು ಸಿಕ್ಕಿಲ್ಲ.” ಜರ್ಮನಿಯಲ್ಲಿರುವ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಮುಖ್ಯಸ್ಥರಾದ ರೈನ್‌ಹಾರ್ಟ್‌ ಶ್ಲಾಗಿನ್ಟ್‌ವೈಟ್‌ರವರಿಗನುಸಾರ, ಜಗತ್ತಿನಾದ್ಯಂತವಿರುವ ಎಲ್ಲಾ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸಬೇಕಾದರೆ 700 ಕೋಟಿ ಡಾಲರುಗಳಷ್ಟು ಹಣ ಬೇಕಾಗಿರುವುದು. ಈ ಹಣವು, ಪ್ರತಿವರ್ಷ ಯೂರೋಪ್‌ ಐಸ್‌ಕ್ರೀಮಿಗಾಗಿ ಅಥವಾ ಅಮೆರಿಕವು ಸೌಂದರ್ಯ ಸಾಧನಗಳಿಗಾಗಿ ಖರ್ಚುಮಾಡುವ ಹಣಕ್ಕಿಂತಲೂ ತೀರ ಕಡಿಮೆಯಾಗಿದೆ ಮಾತ್ರವಲ್ಲ, ಲೋಕವು ಸಶಸ್ತ್ರ ಸಾಮಗ್ರಿಗಳಿಗಾಗಿ ಖರ್ಚುಮಾಡುವ ಹಣಕ್ಕೆ ಹೋಲಿಸುವಾಗ ಇದು ಕೇವಲ ಲೇಶಮಾತ್ರವಷ್ಟೇ ಆಗಿದೆ.

ವಿಪತ್ತಿನ ಪ್ರವೃತ್ತಿಯಿರುವ ಏಷ್ಯಾ

“ಕಳೆದ ವರ್ಷ ಲೋಕದ ಹತ್ತು ಪ್ರಧಾನ ವಿಪತ್ತುಗಳಲ್ಲಿ, ಆರು ವಿಪತ್ತುಗಳು ಏಷ್ಯಾದಲ್ಲೇ ಸಂಭವಿಸಿವೆ. ಇದರಲ್ಲಿ 27,000 ಜೀವಗಳು ಬಲಿಯಾಗುತ್ತಾ, 380 ಕೋಟಿ ಡಾಲರುಗಳ ನಷ್ಟ ಉಂಟಾಗಿವೆ,” ಎಂದು ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ ಎಂಬ ವಾರ್ತಾಪತ್ರಿಕೆಯು ಗಮನಿಸುತ್ತದೆ. ಇದರಲ್ಲಿ ಬಾಂಗ್ಲಾದೇಶ ಮತ್ತು ಚೀನಾದ ವಿಧ್ವಂಸಕಾರಿ ಪ್ರವಾಹಗಳೊಂದಿಗೆ, ನೆರೆಹೊರೆಯ ದೇಶಗಳಿಗೂ ಹರಡಿದ ಇಂಡೋನೇಷಿಯಾದ ಕಾಡ್ಗಿಚ್ಚುಗಳ ಹಾವಳಿಯು ಒಳಗೂಡಿದೆ. “ಪ್ರಪಂಚದ ಇನ್ನಾವುದೇ ಪ್ರದೇಶಗಳಿಗಿಂತ ಹೆಚ್ಚಾಗಿ ಏಷ್ಯಾ ಖಂಡವು ನೈಸರ್ಗಿಕ ವಿಪತ್ತುಗಳಿಂದ ಬಾಧಿಸಲ್ಪಟ್ಟಿದೆ,” ಎಂದು ಏಷ್ಯಾ ಮತ್ತು ಪೆಸಿಫಿಕ್‌ ರಾಜ್ಯಗಳ ವಿಶ್ವಸಂಸ್ಥೆಯ ಹಣಕಾಸು ಮತ್ತು ಸಾಮಾಜಿಕ ಆಯೋಗವು ತಿಳಿಸುತ್ತದೆ. “ವಿಶೇಷವಾಗಿ ಏಷ್ಯಾದಲ್ಲಿ, ಅಪಾಯವನ್ನು ಕಡಿಮೆಮಾಡುವುದು 21ನೇ ಶತಮಾನದ ದೊಡ್ಡ ಪಂಥಾಹ್ವಾನಗಳಲ್ಲಿ ಒಂದಾಗಿರುವುದು.”

ನಿಮಗೆ ನೀವೇ ಕಚಗುಳಿ ಇಟ್ಟುಕೊಳ್ಳಲು ಏಕೆ ಸಾಧ್ಯವಿಲ್ಲ?

“ಸರಿಯಾದ ಸ್ಥಳದಲ್ಲಿ ಇಡಲ್ಪಟ್ಟ ಕಚಗುಳಿಯು ಎಷ್ಟೇ ವಯಸ್ಸಾದ ವ್ಯಕ್ತಿಯನ್ನೂ ಅಸಹಾಯಕ ಸ್ಥಿತಿಗೆ ತರುವುದು. ಆದರೆ, ತನಗೆ ತಾನೇ ಕಚಗುಳಿ ಇಟ್ಟುಕೊಳ್ಳಸಾಧ್ಯವಿಲ್ಲ ಎಂಬ ಅರಿವಿನಿಂದ ತೀರ ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿಯೂ ಸಮಾಧಾನದಿಂದ ನಿಟ್ಟುಸಿರುಬಿಡಬಹುದಾಗಿದೆ,” ಎಂದು ಇಕಾನಮಿಸ್ಟ್‌ ಪತ್ರಿಕೆ ಹೇಳುತ್ತದೆ. ತನಗೆ ತಾನೇ ಕಚಗುಳಿ ಇಟ್ಟುಕೊಳ್ಳಲಿಕ್ಕಾಗುವುದಿಲ್ಲವೇಕೆ? ಇತ್ತೀಚಿನ ಒಂದು ಸಂಶೋಧನೆಗನುಸಾರ, ಚಾಲಕ ಚಟುವಟಿಕೆಗಳನ್ನು ಸುಸಂಘಟಿತಗೊಳಿಸುವ ಮಿದುಳಿನ ಒಂದು ಭಾಗವಾಗಿರುವ ಹಿಮ್ಮೆದುಳಿನಲ್ಲಿ ಇದಕ್ಕೆ ಉತ್ತರವು ಅಡಗಿದೆ. ಸಂಶೋಧಕರು ನಂಬುವುದೇನಂದರೆ, ಈ ಹಿಮ್ಮೆದುಳು, ಚಲನೆಗಳನ್ನು ಸುಸಂಘಟಿತಗೊಳಿಸುವುದು ಮಾತ್ರವಲ್ಲದೆ ಅದರಿಂದಾಗುವ ಸಂವೇದನೆಗಳ ಪರಿಣಾಮಗಳನ್ನು ಮುಂತಿಳಿಸುವ ಕೆಲಸವನ್ನೂ ಮಾಡುತ್ತದೆ. ಆದ್ದರಿಂದ, ವ್ಯಕ್ತಿಗಳು ತಮಗೆ ತಾವೇ ಕಚಗುಳಿ ಇಟ್ಟುಕೊಳ್ಳಲು ಪ್ರಯತ್ನಿಸಿದರೆ, ಹಿಮ್ಮೆದುಳು ಸಂವೇದನೆಯನ್ನು ನಿರೀಕ್ಷಿಸುತ್ತದೆ ಮತ್ತು ಅದನ್ನು ದಮನಮಾಡಿಬಿಡುತ್ತದೆ. ಆದರೆ ಬೇರೆಯವರಿಂದ ಕಚಗುಳಿಯಿಡಲ್ಪಟ್ಟಾಗ, ಉತ್ತೇಜಕದ ಮತ್ತು ಹಿಮ್ಮೆದುಳಿನ ಲೆಕ್ಕಚಾರಗಳು ಒಂದಕ್ಕೊಂದು ಸರಿಹೊಂದುವುದಿಲ್ಲ ಹಾಗೂ ಸಂವೇದನೆಗಳು ದಮನಮಾಡಲ್ಪಡುವುದಿಲ್ಲ. ದ ನ್ಯೂ ಯಾರ್ಕ್‌ ಟೈಮ್ಸ್‌ ತದ್ರೀತಿಯ ಒಂದು ಲೇಖನದಲ್ಲಿ ಅದನ್ನು ಈ ರೀತಿಯಾಗಿ ಸಾರಾಂಶಿಸಿತು: “ತನ್ನ ಸ್ವಂತ ಕ್ರಿಯೆಗಳಿಂದಾಗುವ ಕಚಗುಳಿಯ ಸಂವೇದನೆ ಯಾವುದು ಎಂದು ಮಿದುಳಿಗೆ ಗೊತ್ತಿದೆ ಮತ್ತು ಅದು ಅದಕ್ಕೆ ಕಡಿಮೆ ಆದ್ಯತೆಯನ್ನು ನೀಡುತ್ತದೆ. ಹೀಗೆ ಮಾಡುವ ಮೂಲಕ, ಹೆಚ್ಚು ತುರ್ತಿನದ್ದಾಗಿರಬಹುದಾದ ಹೊರಗಿನ ಮೂಲಗಳಿಂದ ಬರುವ ಸಂವೇದನೆಗಳನ್ನು ಸ್ವೀಕರಿಸಲು ಅದು ಹೆಚ್ಚು ಸಿದ್ಧವಾಗಿರಬಹುದಾಗಿದೆ.”

ಮಾರ್ಸ್‌ ಸಂಕೇತ ಭಾಷೆಯ ಉತ್ತರಾಧಿಕಾರಿ

ಮಾರ್ಸ್‌ ಸಂಕೇತ ಭಾಷೆಯನ್ನು 1832ರಲ್ಲಿ ಕಂಡುಹಿಡಿಯಲಾಯಿತು. ಇದು, “ಚರಿತ್ರೆ ಮತ್ತು ವ್ಯಾಪಾರದ ಬೆಳವಣಿಗೆಯಲ್ಲಿ ಒಂದು ಎಣಿಸಲಸಾಧ್ಯವಾದ ಪಾತ್ರವನ್ನು ನಿರ್ವಹಿಸಿದೆ,” ಎಂದು ಲೋಕದ ಹಡಗಿನ ಯಾತ್ರೆಯನ್ನು ನಿಯಂತ್ರಿಸುವ ವಿಶ್ವಸಂಸ್ಥೆಯ ನಿಯೋಗದ ರಾಜರ್‌ ಕೋನ್‌ ಅಂಗೀಕರಿಸುತ್ತಾರೆ. ಮೂರು ಚುಕ್ಕೆಗಳು, ಮೂರು ಗೆರೆಗಳು, ಮೂರು ಚುಕ್ಕೆಗಳ ಎಸ್‌ಓಎಸ್‌ ಎಂಬ ಸಂಕೇತ ಸುದ್ದಿಯನ್ನು, 1912ರಲ್ಲಿ ಟೈಟಾನಿಕ್‌ ಹಡಗು ಕಳುಹಿಸಿದ ವರ್ಷದಂದಿನಿಂದ, ಹಡಗುಗಳು ಸಂಕಷ್ಟದಲ್ಲಿರುವಾಗ ಇದನ್ನು ಅಂತಾರಾಷ್ಟ್ರೀಯ ಮಟ್ಟವಾಗಿ ಉಪಯೋಗಿಸಲಾಗುತ್ತಿತ್ತು ಎಂದು ಟೊರಾಂಟೋ ಸ್ಟಾರ್‌ ತಿಳಿಸುತ್ತದೆ. ಆದರೆ, ಫೆಬ್ರವರಿ 1, 1999ರಿಂದ ಅಂತಾರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯವರು ಹೊರತಂದಿರುವ ಒಂದು ಹೊಸ ಉಪಗ್ರಹ ವ್ಯವಸ್ಥೆಯು, ಹಡಗಿನ ಉಪಗ್ರಹದ ಟರ್ಮಿನಲ್‌ನಲ್ಲಿರುವ “ಯಾವ ಸಮಯದಲ್ಲಾದರೂ ಉಪಯೋಗಿಸಬಹುದಾದ ಕೀಲಿಬಟನ್‌” ಅನ್ನು ಒತ್ತಿದಾಗ, “ಲೋಕದಾದ್ಯಂತವಿರುವ ರಕ್ಷಣಾ ಸುಸಂಘಟನೆಯ ಕೇಂದ್ರಗಳ ಜಾಲಕ್ಕೆ” ದತ್ತಾಂಶಗಳ ಮಾಹಿತಿಯನ್ನು ಸ್ವಯಂಚಾಲಕವಾಗಿ ಕಳುಹಿಸುತ್ತದೆ. ಹಡಗಿನ ಒಂಬತ್ತು ಅಂಕೆಗಳನ್ನೊಳಗೊಂಡ ಗುರುತಿನ ಸಂಖ್ಯೆಯೊಂದಿಗೆ ಕಳುಹಿಸುವ ಸುದ್ದಿಯಲ್ಲಿ, “ಸಮಯ, ಹಡಗಿನ ಸ್ಥಾನ, ಸಂಕಷ್ಟದ ನಮೂನೆಯನ್ನು ಅನಿರ್ದಿಷ್ಟವಾಗಿ ತಿಳಿಸಬಹುದು ಇಲ್ಲವೆ ಬೆಂಕಿಯಿಂದ ಹಿಡಿದು ಹಡಗಿನ ಒಳಗೆ ನುಗ್ಗಿ ಬಂದಿರುವ ನೀರು, ಹಡಗಿನ ಓಲುವಿಕೆಯಿಂದ ಹಿಡಿದು ಕಡಲ್ಗಳ್ಳತನದ ವರೆಗಿರುವ 12 ವರ್ಗಗಳಲ್ಲಿ ಒಂದು ಇದರಲ್ಲಿ ಒಳಗೂಡಿರಸಾಧ್ಯವಿದೆ” ಎಂದು ಸ್ಟಾರ್‌ ಹೇಳುತ್ತದೆ. ಮನೋವ್ಯಥೆಯಿಂದ ಅದು ಕೂಡಿಸುವುದು: “ಜಗತ್ತಿನ ಕೆಲವು ಅತ್ಯುತ್ತಮ ಸುದ್ದಿಯನ್ನು ನೀಡಲು ಮಾರ್ಸ್‌ ಸಂಕೇತ ಭಾಷೆಯನ್ನು ಉಪಯೋಗಿಸಲಾಗುತ್ತಿತ್ತು: ಇದನ್ನು ಎರಡೂ ವಿಶ್ವ ಮಹಾಯುದ್ಧಗಳ ಕದನವಿರಾಮವನ್ನು ಪ್ರಸಾರಮಾಡುವುದಕ್ಕಾಗಿ ಉಪಯೋಗಿಸಲಾಯಿತು.”

ಪಾದರಕ್ಷೆಗಳಿಂದ ಆರೋಗ್ಯ ಸಮಸ್ಯೆಗಳು

“ವೈದ್ಯಕೀಯ ಅಭಿಪ್ರಾಯವು ಸಲಹೆ ನೀಡುವುದೇನೆಂದರೆ, ಆರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಗೆ ಗಂಭೀರವಾದ ಪಾದದ ಸಮಸ್ಯೆಗಳಿವೆ, ಅನೇಕವೇಳೆ ಈ ಸಮಸ್ಯೆಗಳಿಗೆ ಪಾದರಕ್ಷೆಗಳು ಕಾರಣವಾಗಿರಬಹುದು,” ಎಂದು ಟೊರಾಂಟೋ ಸ್ಟಾರ್‌ ವರದಿಸುತ್ತದೆ. ನೋಯುವ ಮಂಡಿಗಳು, ನೋಯುವ ನಿತಂಬಗಳು, ಸೊಂಟನೋವು ಮತ್ತು ತಲೆನೋವಿನ ಸಮಸ್ಯೆಗಳು ಕೂಡ ನೀವು ಹಾಕಿಕೊಂಡಿರುವ ಪಾದರಕ್ಷೆಯ ಕಡೆಗೆ ಗಮನ ಕೊಡುವಂತೆ ಸೂಚಿಸುತ್ತಿರಬಹುದು. “ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವು, ಷೂಗಳನ್ನು ಹೆಚ್ಚೆಚ್ಚು ಬಳಸಿದಂತೆ ಅವು ನಿಮ್ಮ ಪಾದಗಳಿಗೆ ಒಗ್ಗಿಬಿಡುವವು ಎಂದು ನೆನಸಬೇಡಿ. ಬದಲಿಗೆ, ನಿಮ್ಮ ಪಾದಗಳು ಷೂಗಳಿಗೆ ಒಗ್ಗಿಬಿಡುವವು,” ಎಂದು ಸ್ಟಾರ್‌ ತಿಳಿಸುತ್ತದೆ. ಆದ್ದರಿಂದ “ಷೂಗಳು ನಿಮ್ಮ ಪಾದಗಳಿಗೆ ಒಗ್ಗಿಹೋಗುವವೆಂಬ ಭರವಸೆಯ ಮೇಲೆ ಅವುಗಳನ್ನು ಖರೀದಿಸಬೇಡಿ. ಅಂಗಡಿಯಲ್ಲೇ ಅವು ನಿಮಗೆ ಹಿತಕರವೆನಿಸದಿದ್ದರೆ ಅವುಗಳನ್ನು ಖರೀದಿಸಬೇಡಿ.” ಷೂಗಳನ್ನು ಮಧ್ಯಾಹ್ನದ ವೇಳೆಯಲ್ಲಿ ಖರೀದಿಸಿ, ಏಕೆಂದರೆ “ಸಾಮಾನ್ಯವಾಗಿ ದಿನಕಳೆದಂತೆ ಪಾದಗಳು ಸ್ವಲ್ಪ ಊದಿಕೊಳ್ಳುತ್ತವೆ.” ಮತ್ತು “ನಿಮ್ಮ ಪಾದದ ಹಿಮ್ಮಡಿಗೆ ಷೂ ಅನ್ನು ಹೊಂದಿಸಿಕೊಳ್ಳುವ ಬದಲು ನಿಮ್ಮ ಹೆಬ್ಬೆರಳಿನ ಬುಡದ ಉಬ್ಬಿಗೆ ಷೂ ಅನ್ನು ಹೊಂದಿಸಿಕೊಳ್ಳಿ.” ಸಂಖ್ಯಾಸಂಗ್ರಹಣಕ್ಕನುಸಾರ ಪಾದಗಳ ಸಮಸ್ಯೆಗಳು ಮತ್ತು ವಿರೂಪತೆಗಳು ಹೆಂಗಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ. ಇವರಲ್ಲಿ 90 ಪ್ರತಿಶತ ಮಹಿಳೆಯರು, “ತಮ್ಮ ಪಾದಗಳಿಗೆ ತುಂಬ ಬಿಗಿಯಾದ ಇಲ್ಲವೆ ಚಿಕ್ಕ ಗಾತ್ರದ ಷೂಗಳನ್ನು ಧರಿಸುತ್ತಾರೆ” ಮತ್ತು “ಅತಿ ಗಂಭೀರವಾದ ಪಾದಗಳ ವಿರೂಪತೆಗಳಲ್ಲಿ ಹೆಚ್ಚಿನವುಗಳಿಗೆ ಎತ್ತರದ ಹಿಮ್ಮಡಿಯುಳ್ಳ ಷೂಗಳೇ ಅನೇಕವೇಳೆ ಕಾರಣವಾಗಿವೆ” ಎಂದು ಅಭಿಪ್ರಯಿಸಲಾಗುತ್ತದೆ. ವಾರ್ತಾಪತ್ರಿಕೆಯು ಕೂಡಿಸುವುದು: “ಪಾದಗಳಿಗೆ ಹಾನಿಯಾದ ನಂತರವೇ ನೋವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.”

ಚೀನಾದಲ್ಲಿ ಬೈಬಲ್‌ ಮುದ್ರಣ

“ಕಳೆದ ಎರಡು ದಶಕಗಳಲ್ಲಿ ಚೀನಾ, 2 ಕೋಟಿಗಳಿಗಿಂತಲೂ ಹೆಚ್ಚಿನ ಪವಿತ್ರ ಬೈಬಲಿನ ಪ್ರತಿಗಳನ್ನು ಮುದ್ರಿಸಿದೆ ಮತ್ತು 1990ರ ಆರಂಭದಿಂದ, ಬೈಬಲ್‌ ಆ ದೇಶದ ಅತಿ ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿ [ಪರಿಣಮಿಸಿದೆ]” ಎಂದು ಷಿನ್ಹ್‌ವಾ ವಾರ್ತಾ ಏಜೆನ್ಸಿಯು ತಿಳಿಸುತ್ತದೆ. ಚೀನಿಯರ ಸಮಾಜ ವಿಜ್ಞಾನ ಆ್ಯಕಾಡೆಮಿಯ ಕೆಳಗಿರುವ ಲೋಕದ ಧಾರ್ಮಿಕ ಸಂಸ್ಥೆಯ ಅಧ್ಯಾಪಕರಾಗಿರುವ ಫಂಗ್‌ ಜಿನ್ಯೂಆನ್‌ರಿಗನುಸಾರ, ಚೀನಾದಲ್ಲಿರುವ ಕ್ರೈಸ್ತರಿಗೆ ಬೈಬಲಿನ ಎರಡು ಪ್ರತಿಗಳನ್ನು ಕೊಂಡುಕೊಳ್ಳುವ ಅಧಿಕಾರವಿದೆ. 20ಕ್ಕಿಂತಲೂ ಹೆಚ್ಚಿನ ವಿವಿಧ ಮುದ್ರಣಗಳು ಈಗಾಗಲೇ ಪ್ರಕಾಶಿತಗೊಂಡಿವೆ. “ಇವುಗಳಲ್ಲಿ ಆಂಗ್ಲ ಮುದ್ರಣದೊಂದಿಗೆ ಚೀನೀ ಭಾಷೆಯ ಅನುವಾದಗಳು, ಸಾಂಪ್ರದಾಯಿಕ ಮತ್ತು ಸರಳೀಕರಿಸಿದ ಲಿಪಿಗಳನ್ನೊಳಗೊಂಡ ಚೀನಿ ಭಾಷೆಯ ಮುದ್ರಣಗಳು, ಅಲ್ಪಸಂಖ್ಯಾತರ ಭಾಷೆಗಳಲ್ಲಿರುವ ಮುದ್ರಣಗಳು ಹಾಗೂ ಒಯ್ಯಸಾಧ್ಯವಾದ ಮತ್ತು ಮೇಜಿನ ಮೇಲೆ ಇಡುವ ಮುದ್ರಣಗಳು ಒಳಗೂಡಿವೆ.” ಅಷ್ಟು ಮಾತ್ರವಲ್ಲದೆ, ಬೈಬಲ್‌ ಕಥೆಗಳನ್ನೊಳಗೊಂಡ ಅನೇಕ ಪುಸ್ತಕಗಳೂ ಮುದ್ರಿಸಲ್ಪಟ್ಟಿವೆ, ಇಂಥ ಪುಸ್ತಕಗಳ ವ್ಯಾಪಾರವು ಬೈಬಲ್‌ ಮಾರಾಟಕ್ಕಿಂತ ಅತ್ಯಧಿಕವಾಗಿರುವುದು ಎಂದು ನಿರೀಕ್ಷಿಸಲಾಗಿದೆ. “1990ರ ಆರಂಭದಿಂದ ಚೀನಾದ ಹೆಚ್ಚು ಪ್ರಭಾವಶಾಲಿ ಪುಸ್ತಕಗಳ ಪಟ್ಟಿಯಲ್ಲಿ ಬೈಬಲು 32ನೇ ದರ್ಜೆಯನ್ನು ಗಳಿಸಿದೆ.” ಆದರೆ “ಸಾಮಾನ್ಯವಾಗಿ ಹೇಳುವುದಾದರೆ, ಧರ್ಮವು ಪಾಶ್ಚಿಮಾತ್ಯ ದೇಶಗಳ ಜನರ ಮೇಲೆ ಬೀರುವ ಪ್ರಭಾವಕ್ಕಿಂತಲೂ ಚೀನಿಯರ ಮೇಲೆ ಬೀರುವ ಪ್ರಭಾವವು ಕಡಿಮೆ,” ಎಂದು ಲೇಖನವು ಹೇಳುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ