ವರ್ಷಗಳ ಆಶಾಭಂಗಗೊಂಡ ಪ್ರಯತ್ನಗಳು
“ವಿಶ್ವ ಸಂಸ್ಥೆಯ ಜನರಾದ ನಾವು, ನಮ್ಮ ಜೀವಮಾನಕಾಲದಲ್ಲಿ ಎರಡು ಸಾರಿ ಮಾನವಕುಲದ ಮೇಲೆ ಹೇಳಲಾಗದ ದುಃಖವನ್ನು ತಂದಿರುವ ಯುದ್ಧದ ಪೀಡೆಯಿಂದ ಮುಂದಿನ ಸಂತತಿಗಳನ್ನು ರಕ್ಷಿಸಲು, ಮತ್ತು ಮೂಲಭೂತ ಮಾನವ ಹಕ್ಕುಗಳಲ್ಲಿ, ಮಾನವ ವ್ಯಕ್ತಿಯ ಘನತೆ ಮತ್ತು ಮೌಲ್ಯದಲ್ಲಿ, ಪುರುಷರ ಮತ್ತು ಸ್ತ್ರೀಯರ ಮತ್ತು ದೊಡ್ಡ ಹಾಗೂ ಚಿಕ್ಕ ರಾಷ್ಟ್ರಗಳ ಸಮಾನ ಹಕ್ಕುಗಳಲ್ಲಿ . . . ನಂಬಿಕೆಯನ್ನು ಪುನರ್ದೃಢೀಕರಿಸಲು ನಿರ್ಧರಿತರು.”—ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನಕ್ಕೆ ಪ್ರಸ್ತಾವನೆ.
ಅಕ್ಟೋಬರ್ 24, 1995, ವಿಶ್ವ ಸಂಸ್ಥೆಯ 50ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಸದ್ಯದ ಎಲ್ಲಾ 185 ಸದಸ್ಯ ರಾಷ್ಟ್ರಗಳು ಆ ಲಿಖಿತ ಸಂವಿಧಾನದಲ್ಲಿ ವ್ಯಕ್ತಪಡಿಸಲಾದಂತೆ, ಆ ಸಂಘದ ಮೂಲ ತತ್ತಗ್ವಳು ಮತ್ತು ಗುರಿಗಳಿಗೆ ಬದ್ಧರಾಗಿದ್ದಾರೆ: ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು; ಲೋಕ ಶಾಂತಿಯನ್ನು ಬೆದರಿಸುವ ಕಲಹದ ಕೃತ್ಯಗಳನ್ನು ದಬಾಯಿಸುವುದು; ರಾಷ್ಟ್ರಗಳ ನಡುವೆ ಮೈತ್ರಿಯ ಸಂಬಂಧಗಳನ್ನು ಉತ್ತೇಜಿಸುವುದು; ಜಾತಿ, ಲಿಂಗ, ಭಾಷೆ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ಪಕ್ಷಪಾತವಿಲ್ಲದೆ ಎಲ್ಲಾ ಜನರ ಮೂಲಭೂತ ಸ್ವಾತಂತ್ರ್ಯಗಳನ್ನು ಸಂರಕ್ಷಿಸುವುದು; ಮತ್ತು ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಗಳಿಸುವುದು.
50 ವರ್ಷಗಳಲ್ಲಿ ಲೋಕ ಶಾಂತಿ ಮತ್ತು ಭದ್ರತೆಯನ್ನು ತರಲು ವಿಶ್ವ ಸಂಸ್ಥೆಯು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ವಾದಯೋಗ್ಯವಾಗಿ, ಅದು ಮೂರನೇ ಲೋಕ ಯುದ್ಧವನ್ನು ತಡೆಗಟ್ಟಿರಬಹುದು, ಮತ್ತು ನ್ಯೂಕ್ಲಿಯರ್ ಬಾಂಬುಗಳ ಬಳಕೆಯ ಮೂಲಕ ಮಾನವ ಜೀವದ ಒಟ್ಟುಗಟ್ಟಳೆ ನಾಶನವು ಪುನರಾವೃತ್ತಿಯಾಗಿಲ್ಲ. ವಿಶ್ವ ಸಂಸ್ಥೆಯು ಕೋಟಿಗಟ್ಟಲೆ ಮಕ್ಕಳಿಗೆ ಆಹಾರ ಮತ್ತು ಔಷಧವನ್ನು ಒದಗಿಸಿದೆ. ಇತರ ವಿಷಯಗಳೊಂದಿಗೆ, ಹೆಚ್ಚು ಸುರಕ್ಷಿತವಾದ ಕುಡಿಯುವ ನೀರು ಮತ್ತು ಅಪಾಯಕಾರಿ ರೋಗಗಳ ವಿರುದ್ಧ ಸೋಂಕು ರಕ್ಷೆಯನ್ನು ಒದಗಿಸುತ್ತಾ, ಅದು ಅನೇಕ ದೇಶಗಳಲ್ಲಿ ಹೆಚ್ಚು ಉತ್ತಮವಾದ ಆರೋಗ್ಯ ಮಟ್ಟಗಳಿಗೆ ನೆರವು ನೀಡಿದೆ. ಕೋಟಿಗಟ್ಟಲೆ ನಿರಾಶ್ರಿತರು ಮಾನವೀಯ ನೆರವನ್ನು ಪಡೆದಿದ್ದಾರೆ.
ಅದರ ಸಾಧನೆಗಳ ಅಂಗೀಕಾರವಾಗಿ, ವಿಶ್ವ ಸಂಸ್ಥೆಗೆ ಐದು ಸಲ ನೋಬೆಲ್ ಶಾಂತಿ ಪಾರಿತೋಷಕವು ಬಹುಮಾನಿಸಲ್ಪಟ್ಟಿದೆ. ಆದರೂ, ನಾವು ಇನ್ನೂ ಯುದ್ಧರಹಿತವಾದ ಲೋಕವೊಂದರಲ್ಲಿ ಜೀವಿಸುತ್ತಿಲ್ಲವೆಂಬುದೇ ಜೀವನದ ದುಃಖಕರ ವಾಸ್ತವಾಂಶವಾಗಿದೆ.
ಶಾಂತಿ ಮತ್ತು ಭದ್ರತೆ—ಅಪ್ರಾಪ್ಯಗೊಂಡಿರುವ ಗುರಿಗಳು
50 ವರ್ಷಗಳ ಪ್ರಯತ್ನಗಳ ಬಳಿಕ, ಶಾಂತಿ ಮತ್ತು ಭದ್ರತೆ ಇನ್ನೂ ಅಪ್ರಾಪ್ಯಗೊಂಡಿರುವ ಗುರಿಗಳಾಗಿವೆ. ವಿಶ್ವ ಸಂಸ್ಥೆಯ ಜೆನೆರಲ್ ಎಸೆಂಬ್ಲಿಗೆ ಕೊಡಲ್ಪಟ್ಟ ಇತ್ತೀಚಿನ ಒಂದು ಭಾಷಣದಲ್ಲಿ, ಅಮೆರಿಕದ ಅಧ್ಯಕ್ಷರು “ಇಷ್ಟೊಂದು ನಿರೀಕ್ಷೆ ಮತ್ತು ಅವಕಾಶ ಮತ್ತು ಸಾಧನೆಯಿಂದ ತುಂಬಿರುವ ಈ ಶತಮಾನವು, ತೀವ್ರ ನಾಶನ ಮತ್ತು ಹತಾಶೆಯ ಯುಗವೂ ಆಗಿರುತ್ತದೆ” ಎಂದು ಹೇಳುತ್ತಾ ತಮ್ಮ ಆಶಾಭಂಗವನ್ನು ವ್ಯಕ್ತಪಡಿಸಿದರು.
1994 ಕೊನೆಗೊಂಡಂತೆ, ದ ನ್ಯೂ ಯಾರ್ಕ್ ಟೈಮ್ಸ್ ಅವಲೋಕಿಸಿದ್ದು: “ಹತ್ತಿರಹತ್ತಿರ 150 ಯುದ್ಧಗಳು ಅಥವಾ ಕಾದಾಟಗಳು ನಡೆಯುತ್ತಾ ಇವೆ, ಅವುಗಳಲ್ಲಿ ಸಾವಿರಾರು ಜನರು—ಹೆಚ್ಚಿನ ಲೆಕ್ಕಗಳಿಗನುಸಾರ ಸೈನಿಕರಿಗಿಂತ ಹೆಚ್ಚು ಅಯೋಧರು—ಸಾಯುತ್ತಿದ್ದಾರೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗುತ್ತಿದ್ದಾರೆ.” 1945 ರಿಂದ ಎರಡು ಕೋಟಿಗಿಂತಲೂ ಹೆಚ್ಚು ಜನರು ಸಶಸ್ತ್ರ ಕಲಹಗಳ ಪರಿಣಾಮವಾಗಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆಂದು ವಿಶ್ವ ಸಂಸ್ಥೆಯ ಸಾರ್ವಜನಿಕ ಮಾಹಿತಿಯ ಇಲಾಖೆಯು ವರದಿಸಿತು. ವಿಶ್ವ ಸಂಸ್ಥೆಗೆ ಅಮೆರಿಕದ ರಾಯಭಾರಿ, ಮ್ಯಾಡಲೆನ್ ಆಲ್ಬ್ರೈಟ್ ಗಮನಿಸಿದ್ದೇನೆಂದರೆ “ಪ್ರಾದೇಶಿಕ ಕಲಹಗಳು ಈಗ ಅನೇಕ ವಿಧಗಳಲ್ಲಿ ಹೆಚ್ಚು ಪಾಶವೀಯವಾಗಿವೆ.” ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭೇದಭಾವವು ದಿನನಿತ್ಯ ಮಟ್ಟದಲ್ಲಿ ವಾರ್ತೆಗಳಲ್ಲಿ ತೋರಿಬರುತ್ತದೆ. ಅನೇಕ ರಾಷ್ಟ್ರಗಳು ಒಂದಕ್ಕೊಂದು ಸ್ನೇಹಮಯಿಗಳಾಗಿರುವುದರ ಬದಲಿಗೆ ಸಹಿಸುತ್ತಿರುವಂತೆ ತೋರುತ್ತದೆ.
“1980 ಗಳ ವರೆಗೆ ವಿಶ್ವ ಸಂಸ್ಥೆಯು, ಬಹುಮಟ್ಟಿಗೆ ಒಂದು ಸದುದ್ದೇಶವುಳ್ಳ ಸೋಲಾಗಿರುತ್ತದೆ” ಎಂದು ವಿಶ್ವ ಸಂಸ್ಥೆಗೆ ಬ್ರಿಟನಿನ ರಾಯಭಾರಿ, ಸರ್ ಡೇವಿಡ್ ಹಾನ್ನೆ ಒಪ್ಪಿದರು. ವಿಶ್ವ ಸಂಸ್ಥೆಯ ಸೆಕ್ರಿಟರಿ ಜೆನೆರಲ್ ಬೂಟ್ರೋಸ್ ಬೂಟ್ರೋಸ್-ಗಾಲಿ, ಶಾಂತಿಯನ್ನು ಕಾಪಾಡುವ ಕಾರ್ಯಾಚರಣೆಗಳ ವಿಷಯದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಔದಾಸೀನ್ಯ ಮತ್ತು ದಣಿವು ಇದೆಯೆಂದು ದುಃಖಿಸಿದರು. ಸದಸ್ಯ ರಾಷ್ಟ್ರಗಳಲ್ಲಿ ಅನೇಕವುಗಳಿಗೆ “ವಿಶ್ವ ಸಂಸ್ಥೆಯು ಪ್ರಥಮ ಆದ್ಯತೆಯದ್ದಾಗಿರುವುದಿಲ್ಲ” ವೆಂದು ಅವರು ಸಮಾಪ್ತಿಗೊಳಿಸಿದರು.
ವಾರ್ತಾಮಾಧ್ಯಮದ ಪ್ರಭಾವ
ವಿಶ್ವ ಸಂಸ್ಥೆಯು ಎಷ್ಟೇ ಶಕ್ತಿಶಾಲಿಯಾಗಿ ತೋರಿದರೂ, ಅದರ ಪ್ರಯತ್ನಗಳು ಹೆಚ್ಚಾಗಿ ರಾಜಕೀಯ ಮತ್ತು ವಾರ್ತಾಮಾಧ್ಯಮದಿಂದ ಅಡ್ಡಗಟ್ಟಲ್ಪಡುತ್ತವೆ. ತನ್ನ ಸದಸ್ಯರ ಬೆಂಬಲದ ಕೊರತೆಯಿರುವಲ್ಲಿ ವಿಶ್ವ ಸಂಸ್ಥೆಯು ಶಕಿಹ್ತೀನವಾಗಿದೆ. ಆದರೆ ಸಾರ್ವಜನಿಕರ ಸಮ್ಮತಿಯಿಲ್ಲದೆ, ಅನೇಕ ಯುಎನ್ ಸದಸ್ಯರು ವಿಶ್ವ ಸಂಸ್ಥೆಯನ್ನು ಬೆಂಬಲಿಸರು. ದೃಷ್ಟಾಂತಕ್ಕಾಗಿ, ದ ವಾಲ್ ಸ್ಟ್ರೀಟ್ ಜರ್ನಲ್ ಗನುಸಾರ “ಸೊಮಾಲಿಯಾ ಮತ್ತು ಬೋಸ್ನಿಯದಲ್ಲಿನ ಪ್ರೇಕ್ಷಣೀಯ ಅಪಜಯಗಳು, ಆ ಸಂಘವು ದುಂದುಮಾಡುವಂಥದ್ದು ಮಾತ್ರವಲ್ಲ, ವಾಸ್ತವವಾಗಿ ಅಪಾಯಕಾರಿಯಾಗಿದೆಯೆಂದು ಅನೇಕ ಅಮೆರಿಕನರಿಗೆ ಮನಗಾಣಿಸಿವೆ.” ಸಾರ್ವಜನಿಕರ ಈ ಮನೋಭಾವವು, ಸರದಿಯಾಗಿ, ಕೆಲವು ಅಮೆರಿಕದ ರಾಜಕಾರಣಿಗಳು, ವಿಶ್ವ ಸಂಸ್ಥೆಗೆ ಅಮೆರಿಕದ ಹಣಕಾಸಿನ ಬೆಂಬಲವನ್ನು ಕಡಿಮೆಗೊಳಿಸಲು ಪ್ರಸ್ತಾಪಿಸುವಂತೆ ಮನವೊಪ್ಪಿಸಿದೆ.
ವಿಶ್ವ ಸಂಸ್ಥೆಯನ್ನು ತೀಕ್ಷ್ಣವಾಗಿ ಟೀಕಿಸುವುದರ ವಿಷಯದಲ್ಲಿ ವಾರ್ತಾ ಸಂಘಗಳು ಹಿಂದೆಸರಿಯುವುದಿಲ್ಲ. ವಿಶ್ವ ಸಂಸ್ಥೆಯ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವರ್ಣಿಸುವಾಗ ಮೀಸಲಾತಿ ಇಲ್ಲದೆ “ಸಂಪೂರ್ಣ ಅಸಾಮರ್ಥ್ಯ,” “ಹೊರೆ,” “ತಕ್ಕ ಯೋಗ್ಯತೆಯಿಲ್ಲದ” ಮತ್ತು “ನಿಸ್ಸತ್ವಗೊಂಡ” ಎಂಬಂತಹ ಪದಗಳು ಉಪಯೋಗಿಸಲ್ಪಟ್ಟಿವೆ. “ವಿಶ್ವ ಸಂಸ್ಥೆಯು ಒಂದು ವಾಸ್ತವವಾದ ಲೋಕಕ್ಕೆ ಅಳವಡಿಸಿಕೊಳ್ಳಲು ಹೆಣಗಾಡುತ್ತಿರುವ ಒಂದು ನಿಧಾನ ಚಲನೆಯ ಪ್ರಭುತ್ವವಾಗಿ ಉಳಿದಿರುತ್ತದೆ” ಎಂದು ದ ವಾಶಿಂಗ್ಟನ್ ಪೋಸ್ಟ್ ನ್ಯಾಷನಲ್ ವೀಕ್ಲಿ ಎಡಿಷನ್ ಇತ್ತೀಚೆಗೆ ತಿಳಿಸಿತು.
ಇನ್ನೊಂದು ವಾರ್ತಾಪತ್ರವು ಸೆಕ್ರಿಟರಿ ಜೆನೆರಲ್ ಬೂಟ್ರೋಸ್ ಬೂಟ್ರೋಸ್-ಗಾಲಿಯವರು ರುಆಂಡದ ಹತ್ಯಾಕಾಂಡದೊಂದಿಗೆ ತಮ್ಮ ಆಶಾಭಂಗವನ್ನು ವ್ಯಕ್ತಪಡಿಸುತ್ತಿರುವುದಾಗಿ ಉಲ್ಲೇಖಿಸಿತು. ಅವರು ಅಂದದ್ದು: “ಅದು ಕೇವಲ ವಿಶ್ವ ಸಂಸ್ಥೆಗಾಗಿ ಒಂದು ಅಪಜಯವಾಗಿದೆ ಮಾತ್ರವಲ್ಲ; ಅಂತಾರಾಷ್ಟ್ರೀಯ ಸಮುದಾಯಕ್ಕೆ ಅದು ಒಂದು ಅಪಜಯವಾಗಿದೆ. ಮತ್ತು ನಾವೆಲ್ಲರೂ ಈ ಅಪಜಯಕ್ಕೆ ಜವಾಬ್ದಾರರಾಗಿದ್ದೇವೆ.” ಒಂದು ಜನಪ್ರಿಯ ಟೆಲಿವಿಷನ್ ವಾರ್ತಾ ವಿಶೇಷವು, ವಿಶ್ವ ಸಂಸ್ಥೆಯು “ಶಾಂತಿಗಾಗಿರುವ ಅತಿ ದೊಡ್ಡ ಬೆದರಿಕೆಯನ್ನು—ನ್ಯೂಕ್ಲಿಯರ್ ಶಸ್ತ್ರಗಳ ಹರಡುವಿಕೆಯನ್ನು—ನಿಲ್ಲಿಸಲು ತಪ್ಪಿಹೋಗಿದೆ” ಎಂದು 1993 ರಲ್ಲಿ ತಿಳಿಸಿತು. “ಹಲವಾರು ದಶಕಗಳಿಂದ ಹೆಚ್ಚಾಗಿ ಶಬಬ್ದಾಹುಳ್ಯದ್ದಾಗಿರುವ” ವಿಶ್ವ ಸಂಸ್ಥೆಯ ಕುರಿತಾಗಿ ಆ ಟಿವಿ ಕಾರ್ಯಕ್ರಮವು ಮಾತಾಡಿತು.
ಈ ಬಹುವ್ಯಾಪಕ ನಿರಾಶೆಯ ಅನಿಸಿಕೆಯು ವಿಶ್ವ ಸಂಸ್ಥೆಯ ಅಧಿಕಾರಿಗಳ ಮನಸ್ಸಿಗೆ ತುಂಬ ಚಿಂತೆಯ ವಿಷಯವಾಗಿದೆ ಮತ್ತು ಅವರ ಆಶಾಭಂಗಕ್ಕೆ ಕೂಡಿಸುತ್ತದೆ. ಆದರೂ, ಆ ಆಶಾಭಂಗಗಳ ಹೊರತೂ, ವಿಶ್ವ ಸಂಸ್ಥೆಯ 50ನೇ ವಾರ್ಷಿಕೋತ್ಸವದಲ್ಲಿ, ಅನೇಕರು ನವೀಕರಿಸಲ್ಪಟ್ಟ ಆಶಾವಾದವನ್ನು ಹೊಂದಿರುವಂತೆ ತೋರುತ್ತದೆ ಮತ್ತು ಒಂದು ಹೊಸ ಆರಂಭವನ್ನು ಅವರು ನಿರೀಕ್ಷಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ನ್ಯೂನತೆಗಳನ್ನು ಅಂಗೀಕರಿಸುತ್ತಿರುವುದಾದರೂ, ರಾಯಭಾರಿ ಆಲ್ಬ್ರೈಟ್ ಹೀಗೆ ಹೇಳಿದಾಗ ಅನೇಕರ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದರು: “ನಾವು ಗತಕಾಲದಲ್ಲಿ ಏನನ್ನು ಮಾಡಿದ್ದೇವೊ ಅದರ ಕುರಿತಾಗಿ ಮಾತಾಡುವುದನ್ನು ನಿಲ್ಲಿಸಿ, ನಾವು ಭವಿಷ್ಯದಲ್ಲಿ ಏನನ್ನು ಮಾಡುವೆವು ಎಂಬುದರ ಕುರಿತಾಗಿ ಮಾತಾಡುವ ಅಗತ್ಯವಿದೆ.”
ಹೌದು, ಲೋಕವು ಎಲ್ಲಿಗೆ ಹೋಗುತ್ತಿದೆ? ಯುದ್ಧರಹಿತವಾದ ಒಂದು ಜಗತ್ತು ಎಂದಾದರೂ ಇರುವುದೋ? ಹಾಗಿರುವಲ್ಲಿ, ವಿಶ್ವ ಸಂಸ್ಥೆಯು ಅದರಲ್ಲಿ ಯಾವ ಪಾತ್ರವನ್ನು ವಹಿಸುವುದು? ಇನ್ನೂ ಹೆಚ್ಚಾಗಿ, ನೀವು ದೇವಭಯವುಳ್ಳವರಾಗಿರುವಲ್ಲಿ, ನೀವು ಹೀಗೆ ಕೇಳಬೇಕು ‘ಅದರಲ್ಲಿ ದೇವರು ಯಾವ ಪಾತ್ರವನ್ನು ವಹಿಸುವನು?’
[ಪುಟ 4ರಲ್ಲಿರುವಚೌಕ]
ಆಶಾಭಂಗಗೊಂಡ ಪ್ರಯತ್ನಗಳು
ಎಷ್ಟರ ವರೆಗೆ ಯುದ್ಧ, ಬಡತನ, ಪಾತಕ ಮತ್ತು ಭ್ರಷ್ಟತನವಿರುವುದೊ, ಅಷ್ಟರ ತನಕ ಶಾಂತಿ ಮತ್ತು ಭದ್ರತೆಗಳು ಅಸ್ತಿತ್ವದಲ್ಲಿರಲಸಾಧ್ಯ. ಇತ್ತೀಚೆಗೆ ವಿಶ್ವ ಸಂಸ್ಥೆಯು ಈ ಮುಂದಿನ ಸಂಖ್ಯಾ ಸಂಗ್ರಹಣಗಳನ್ನು ಹೊರಡಿಸಿತು.
ಯುದ್ಧಗಳು: “1989 ಮತ್ತು 1992ರ ನಡುವಿನ 82 ಸಶಸ್ತ್ರ ಕಲಹಗಳಲ್ಲಿ, 79 ಕಲಹಗಳು ದೇಶೀಯವಾಗಿದ್ದವು, ಅನೇಕವು ಕುಲಸಂಬಂಧಿತ ಗುಂಪುಗಳ ನಡುವೆ; ಗಾಯಗೊಂಡವರಲ್ಲಿ 90 ಶೇಕಡ ಅಯೋಧರಾಗಿದ್ದರು.”—ವಿಶ್ವ ಸಂಸ್ಥೆಯ ಸಾರ್ವಜನಿಕ ಮಾಹಿತಿಯ ಇಲಾಖೆ (ಯುಎನ್ಡಿಪಿಐ)
ಶಸ್ತ್ರಗಳು: “48 ದೇಶಗಳಲ್ಲಿ 95 ಕ್ಕಿಂತಲೂ ಹೆಚ್ಚಿನ ಉತ್ಪಾದಕರು ಪ್ರತಿ ವರ್ಷ 50 ಲಕ್ಷ ಮತ್ತು 1 ಕೋಟಿಯ ನಡುವಿನ ಸಂಖ್ಯೆಯ ಜನಧ್ವಂಸಕಾರಿ ಸಿಡಿಮದ್ದುಗಳನ್ನು ಉತ್ಪಾದಿಸುತ್ತಿದ್ದಾರೆಂದು ಐಸಿಆರ್ಸಿ [ರೆಡ್ ಕ್ರಾಸಿನ ಅಂತಾರಾಷ್ಟ್ರೀಯ ಕಮಿಟಿ] ಅಂದಾಜು ಮಾಡುತ್ತದೆ.”—ನಿರಾಶ್ರಿತರಿಗಾಗಿ ವಿಶ್ವ ಸಂಸ್ಥೆಯ ಹೈ ಕಮಿಷನರ್ (ಯುಎನ್ಏಚ್ಸಿಆರ್)
“ಆಫ್ರಿಕದಲ್ಲಿ, 18 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸುಮಾರು 3 ಕೋಟಿ ಸಿಡಿಮದ್ದುಗಳು ಚದುರಿವೆ.”—ಯುಎನ್ಏಚ್ಸಿಆರ್
ಬಡತನ: “ಲೋಕವ್ಯಾಪಕವಾಗಿ, ಪ್ರತಿ ಐದು ಜನರಲ್ಲಿ ಒಬ್ಬರು—ಒಟ್ಟಿನಲ್ಲಿ ನೂರು ಕೋಟಿಗಿಂತಲೂ ಹೆಚ್ಚು ಜನರು—ಬಡತನದ ರೇಖೆಯ ಕೆಳಗೆ ಜೀವಿಸುತ್ತಾರೆ, ಮತ್ತು ಅಂದಾಜು ಮಾಡಲ್ಪಟ್ಟ 1.3 ಕೋಟಿಯಿಂದ 1.8 ಕೋಟಿ ಬಡತನ ಸಂಬಂಧಿತ ಕಾರಣಗಳಿಂದ ವಾರ್ಷಿಕವಾಗಿ ಸಾಯುತ್ತಾರೆ.”—ಯುಎನ್ಡಿಪಿಐ
ಪಾತಕ: “ವರದಿಸಲ್ಪಟ್ಟಿರುವ ಪಾತಕವು 1980 ಗಳಿಂದ ಪ್ರತಿ ವರ್ಷ 5 ಪ್ರತಿಶತದ ಒಂದು ಲೋಕವ್ಯಾಪಕ ಸರಾಸರಿಯಲ್ಲಿ ಬೆಳೆದಿದೆ; ಅಮೆರಿಕದಲ್ಲಿಯೇ ವಾರ್ಷಿಕವಾಗಿ 3.5 ಕೋಟಿ ಪಾತಕಗಳು ನಡಿಸಲ್ಪಡುತ್ತವೆ.”—ಯುಎನ್ಡಿಪಿಐ
ಭ್ರಷ್ಟಾಚಾರ: “ಸಾರ್ವಜನಿಕ ಭ್ರಷ್ಟಾಚಾರವು ಸರ್ವಸಾಮಾನ್ಯ ಸಂಗತಿಯಾಗುತ್ತಿದೆ. ಕೆಲವು ದೇಶಗಳಲ್ಲಿ ಹಣಕಾಸಿನ ವಂಚನೆಯು ದೇಶದ ಮಹತ್ತರವಾದ ವಾರ್ಷಿಕ ಒಟ್ಟು ಸ್ವದೇಶೀಯ ಉತ್ಪನ್ನದ 10 ಪ್ರತಿಶತಕ್ಕೆ ಸಮಾನವಾದದರ್ದ ನಷ್ಟವನ್ನು ತರುತ್ತದೆ.”—ಯುಎನ್ಡಿಪಿಐ