ನಿಜಸ್ಥಿತಿಯು ನನ್ನ ನಿರೀಕ್ಷಣೆಗಳನ್ನು ಮೀರಿಸಿದೆ
ವಿಲಮ್ ವಾನ್ ಸೇಅಲ್ ಹೇಳಿದಂತೆ
ಇಸವಿ 1942ರ ಸಮಯ. ನಮ್ಮ ದೇಶವು IIನೆಯ ವಿಶ್ವ ಯುದ್ಧದಲ್ಲಿ ಒಳಗೂಡಿತ್ತು. ನಾಜಿಗಳಿಂದ ತಪ್ಪಿಸಿಕೊಳ್ಳಲು ನೆದರ್ಲೆಂಡ್ಸ್ನ ಗ್ರೋನಿಂಗನ್ನಲ್ಲಿ ಅಡಗಿಕೊಂಡಿದ್ದ ಐವರು ಯುವಕರಲ್ಲಿ ನಾನೊಬ್ಬನಾಗಿದ್ದೆ. ಒಂದು ಚಿಕ್ಕ ಕೋಣೆಯಲ್ಲಿ ಕುಳಿತುಕೊಂಡಿರುವಾಗ, ನಾವು ಬದುಕಿ ಉಳಿಯುವ ಸಾಧ್ಯತೆಗಳೇನಾದರೂ ಇವೆಯೋ ಎಂಬುದರ ಕುರಿತಾಗಿ ಮಾತಾಡುತ್ತಾ ಇದ್ದೆವು.
ನಾವು ಪಾರಾಗುವ ಸಾಧ್ಯತೆಗಳೇ ಇಲ್ಲದಂತೆ ತೋರುತ್ತಿತ್ತು ಮತ್ತು ಹಾಗೆಯೇ ಆಯಿತು. ನಮ್ಮ ಗುಂಪಿನಲ್ಲಿದ್ದವರಲ್ಲಿ ಮೂವರು ಘೋರ ಸಾವನ್ನಪ್ಪಿದರು. ನಿಜ ಸಂಗತಿಯೇನೆಂದರೆ, ಅವರ ಪೈಕಿ ವೃದ್ಧನಾಗಿ ಇನ್ನೂ ಬದುಕಿ ಉಳಿದಿರುವವನು ನಾನೊಬ್ಬನೇ. ನಿಜಸ್ಥಿತಿಯು ನನ್ನ ನಿರೀಕ್ಷಣೆಗಳನ್ನು ಮೀರಿಸಿದೆಯೆಂಬುದಕ್ಕೆ ಇದು ಕೇವಲ ಒಂದು ನಿದರ್ಶನ ಅಷ್ಟೇ.
ಮೇಲೆ ತಿಳಿಸಲ್ಪಟ್ಟಿರುವ ಘಟನೆಯು ನಡೆದಾಗ, ನನಗೆ ಕೇವಲ 19 ವರ್ಷ ಪ್ರಾಯವಾಗಿತ್ತು. ಮತ್ತು ಬೈಬಲ್ ಅಥವಾ ಧರ್ಮದ ಕುರಿತಾಗಿ ನನಗೆ ಹೆಚ್ಚೇನೂ ತಿಳಿದಿರಲಿಲ್ಲ. ವಾಸ್ತವದಲ್ಲಿ, ತಂದೆಯವರು ಎಲ್ಲ ರೀತಿಯ ಧರ್ಮಗಳನ್ನು ವಿರೋಧಿಸುತ್ತಿದ್ದರು, ಮತ್ತು ತಾಯಿ ಒಂದು ಧರ್ಮಕ್ಕಾಗಿ ನಡೆಸಿದ ಅನ್ವೇಷಣೆಯು, ಅವರು ಪ್ರೇತವ್ಯವಹಾರವನ್ನು ಸ್ವೀಕರಿಸಿಕೊಳ್ಳುವಂತೆ ನಡಿಸಿತು. ನನಗಾದರೊ, ಯಾವುದೇ ನಿರೀಕ್ಷೆ ಇರಲಿಲ್ಲ. ಬಾಂಬ್ ದಾಳಿಯಿಂದಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ನಾನು ಕೊಲ್ಲಲ್ಪಡುವಲ್ಲಿ, ನನ್ನನ್ನು ನೆನಪಿಸಿಕೊಳ್ಳಲು ದೇವರಿಗೆ ಒಂದೇ ಒಂದು ಕಾರಣವೂ ಇಲ್ಲವೆಂದು ನನಗನಿಸಿತು. ಯಾಕಂದರೆ ನಾನು ಆತನ ಕುರಿತಾಗಿ ಕಲಿಯಲು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ.
ಅನ್ವೇಷಣೆಯ ಪ್ರತಿಫಲ
ಆ ನಾಲ್ಕು ಮಂದಿ ಯೌವನಸ್ಥರೊಂದಿಗಿನ ಆ ಸಂಭಾಷಣೆಯ ಬಳಿಕ, ನಾಸಿಗಳು ನನ್ನನ್ನು ಸೆರೆಹಿಡಿದು, ಎಮರಿಕ್ ಬಳಿಯಲ್ಲಿದ್ದ ಜರ್ಮನಿಯ ಒಂದು ದುಡಿಮೆ ಶಿಬಿರಕ್ಕೆ ಕರೆದುಕೊಂಡು ಹೋದರು. ಮಿತ್ರಪಡೆಗಳು ಬಾಂಬ್ಗಳನ್ನು ಎಸೆದ ನಂತರ ಕಲ್ಲುಮಣ್ಣುಗಳನ್ನು ತೆಗೆದುಹಾಕುವುದು ಮತ್ತು ಉಂಟಾಗಿರುವ ಯಾವುದೇ ಹಾನಿಯನ್ನು ಸರಿಪಡಿಸುವುದು ನಮ್ಮ ಕೆಲಸವಾಗಿತ್ತು. 1943ರ ಅಂತ್ಯ ಭಾಗದಲ್ಲಿ ನಾನು ತಪ್ಪಿಸಿಕೊಂಡು ಓಡಿಹೋದೆ, ಮತ್ತು ಯುದ್ಧವು ಇನ್ನೂ ನಡೆಯುತ್ತಾ ಇದ್ದರೂ ನೆದರ್ಲೆಂಡ್ಸ್ಗೆ ಹಿಂದಿರುಗಿದೆ.
ಪ್ರಶ್ನೆಗಳು ಮತ್ತು ಬೈಬಲ್ ವಚನಗಳುಳ್ಳ ಒಂದು ಚಿಕ್ಕ ಪುಸ್ತಿಕೆಯು ಹೇಗೋ ನನ್ನ ಕೈಸೇರಿತು. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದ್ದ ರಕ್ಷಣೆ (ಇಂಗ್ಲಿಷ್) ಎಂಬ ಪುಸ್ತಕದ ಅಭ್ಯಾಸದ ಸಂಬಂಧದಲ್ಲಿ ಅದನ್ನು ಉಪಯೋಗಿಸಲಾಗುತ್ತಿತ್ತು. ಆ ಪ್ರಶ್ನೆಗಳನ್ನು ಓದಿ, ವಚನಗಳನ್ನು ಬೈಬಲಿನಲ್ಲಿ ತೆರೆದು ನೋಡುವುದರಿಂದ ನನಗೆ ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ತೀವ್ರ ಆಸಕ್ತಿಯುಂಟಾಯಿತು.
ನನ್ನನ್ನು ಮದುವೆಯಾಗಲಿದ್ದ ಕ್ರೇ ಎಂಬವಳೊಂದಿಗೆ ನಾನು ಓದುತ್ತಿದ್ದ ವಿಷಯದ ಕುರಿತಾಗಿ ಮಾತಾಡಿದೆನಾದರೂ, ಆರಂಭದಲ್ಲಿ ಅವಳಿಗೆ ಆಸಕ್ತಿಯಿರಲಿಲ್ಲ. ಆದರೆ ನನ್ನ ತಾಯಿಯವರು, ಆ ಪುಸ್ತಿಕೆಯನ್ನು ಓದುವುದರಲ್ಲಿ ತಲ್ಲೀನರಾದರು. “ನನ್ನ ಇಡೀ ಜೀವಮಾನದಲ್ಲಿ ನಾನು ಹುಡುಕುತ್ತಾ ಇದ್ದ ಸತ್ಯ ಇದೇ ಆಗಿದೆ!” ಎಂದು ಅವರು ಉದ್ಗರಿಸಿದರು. ನಾನು ನನ್ನ ಮಿತ್ರರೊಂದಿಗೂ ಅದರ ಕುರಿತಾಗಿ ಮಾತಾಡಿದೆ. ಮತ್ತು ಕೆಲವರಿಗೆ ಹೆಚ್ಚನ್ನು ತಿಳಿದುಕೊಳ್ಳುವ ಬಯಕೆ ಇತ್ತು. ಅವರಲ್ಲೊಬ್ಬನು ಸಾಕ್ಷಿಯಾದನು. 1996ರಲ್ಲಿ ಅವನು ಸಾಯುವ ಸಮಯದ ವರೆಗೆ, ಕ್ರಮವಾಗಿ ಪತ್ರದ ಮೂಲಕ ಮತ್ತು ಪರಸ್ಪರ ಭೇಟಿಯಾಗುವ ಮೂಲಕ ನಾವು ಸಂಪರ್ಕವನ್ನಿಟ್ಟುಕೊಂಡಿದ್ದೆವು.
ಈ ಮಧ್ಯೆ, ಕ್ರೇ ಬೈಬಲನ್ನು ಅಭ್ಯಾಸಮಾಡಲು ಆರಂಭಿಸಿದಳು, ಮತ್ತು 1945ರ ಫೆಬ್ರವರಿಯಲ್ಲಿ ನಾವಿಬ್ಬರೂ ದೀಕ್ಷಾಸ್ನಾನವನ್ನು ಪಡೆದುಕೊಂಡೆವು. ಕೆಲವೇ ತಿಂಗಳಿನಲ್ಲಿ ಯುದ್ಧವೂ ಅಂತ್ಯಗೊಂಡಿತು. ನಮ್ಮ ವಿವಾಹವಾದ ಬಳಿಕ, ನಾವು ಯೆಹೋವನ ಸಾಕ್ಷಿಗಳಲ್ಲಿ ಪಯನೀಯರರೆಂದು ಕರೆಯಲ್ಪಡುವ ಪೂರ್ಣ ಸಮಯದ ಸೇವಕರಾಗಲು ಬಯಸಿದೆವು. ಆದರೆ ನಮ್ಮ ಮುಂದೆ, ಅಸ್ವಸ್ಥತೆ ಮತ್ತು ಹಣಕಾಸಿನ ಮುಗ್ಗಟ್ಟುಗಳು ತಡೆಗಳಂತಿದ್ದವು. ಅಷ್ಟುಮಾತ್ರವಲ್ಲದೆ, ಹೆಚ್ಚು ಹಣವನ್ನು ಸಂಪಾದಿಸಲು ನಮಗಾಗಿ ಅನೇಕ ಅವಕಾಶಗಳೂ ದೊರೆತವು. ನಾವು ಮೊದಲು ಸ್ವಲ್ಪ ಹಣವನ್ನು ಒಟ್ಟುಗೂಡಿಸಿ ಅನಂತರ ಪಯನೀಯರ್ ಸೇವೆಯನ್ನು ಆರಂಭಿಸಬೇಕೊ ಅಥವಾ ಆ ಕೂಡಲೇ ಪಯನೀಯರ್ ಸೇವೆಯನ್ನು ಆರಂಭಿಸಬೇಕೊ ಎಂಬ ಪ್ರಶ್ನೆ ನಮ್ಮ ಮುಂದೆ ಇತ್ತು.
ನೆದರ್ಲೆಂಡ್ಸ್ನಲ್ಲಿ ನಮ್ಮ ಶುಶ್ರೂಷೆ
ಒಡನೇ ಪಯನೀಯರ್ ಸೇವೆಯಲ್ಲಿ ತೊಡಗುವುದೇ ನಮ್ಮ ನಿರ್ಣಯವಾಗಿತ್ತು. ಮತ್ತು ಅದನ್ನು ನಾವು ಸೆಪ್ಟೆಂಬರ್ 1, 1945ರಂದು ಆರಂಭಿಸಿದೆವು. ಅದೇ ದಿನ, ನಾನು ರಾತ್ರಿ ತಡವಾಗಿ ಮನೆಗೆ ಹಿಂದಿರುಗಿ ಬರುತ್ತಿದ್ದಾಗ ಬಾಯಾರಿದ್ದರಿಂದ ಒಂದು ಫಲಾಹಾರ ಮಂದಿರಕ್ಕೆ ಹೋದೆ. ಅಲ್ಲಿದ್ದ ವೇಟರ್ಗೆ, ನಾನು ಯಾವುದನ್ನು ಒಂದು ಗೂಲ್ಡನ್ ನೋಟ್ ಎಂದು ನೆನಸಿದ್ದೆನೊ ಅದನ್ನು ಕೊಟ್ಟು, “ಚಿಲ್ಲರೆಯನ್ನು ಇಟ್ಟುಕೊ” ಎಂದು ಹೇಳಿದೆ. ಆದರೆ ಅವನಿಗೆ ನೂರರ ಗೂಲ್ಡನ್ ನೋಟನ್ನು ಕೊಟ್ಟುಬಿಟ್ಟೆನೆಂದು ನಾನು ಮನೆಗೆ ತಲಪಿದ ನಂತರವೇ ನನಗೆ ಗೊತ್ತಾಯಿತು! ಆದುದರಿಂದ, ಪಯನೀಯರ್ ಸೇವೆಯನ್ನು ಆರಂಭಿಸಲು ಈಗ ನಮ್ಮ ಬಳಿ ಒಂದೇ ಒಂದು ಗೂಲ್ಡನ್ ನೋಟ್ ಇತ್ತು!
ನಾನು 1946ರಲ್ಲಿ ಸಾರ್ವಜನಿಕ ಬೈಬಲ್ ಭಾಷಣಗಳನ್ನು ಕೊಡಲು ಆರಂಭಿಸಿದಾಗ, ನನ್ನ ಬಳಿ ಕೇವಲ ಒಂದು ಲೆದರ್ (ಚರ್ಮದ) ಕೋಟ್ ಇತ್ತು. ಹೆಚ್ಚುಕಡಿಮೆ ನನ್ನಂತಹದ್ದೇ ಮೈಕಟ್ಟಿದ್ದ ಒಬ್ಬ ಮಿತ್ರನು, ಕೂಟದ ಅಧ್ಯಕ್ಷನಾಗಿರುತ್ತಿದ್ದನು. ಅವನು ನನ್ನ ಭಾಷಣದ ಕುರಿತು ಪ್ರಕಟನೆ ಮಾಡಿ, ತತ್ಕ್ಷಣ ಸ್ಟೇಜಿನ ಹಿಂಭಾಗಕ್ಕೆ ಬಂದು, ತನ್ನ ಕೋಟ್ ಅನ್ನು ನನಗೆ ಕೊಡುತ್ತಿದ್ದನು. ಅನಂತರ ನಾನು ಭಾಷಣ ಕೊಡುತ್ತಿದ್ದೆ. ಭಾಷಣವಾದ ಕೂಡಲೇ ನಾವು ಸ್ಟೇಜಿನ ಹಿಂಭಾಗದಲ್ಲಿ ಪುನಃ ಕೋಟನ್ನು ಬದಲಾಯಿಸುತ್ತಿದ್ದೆವು!
ಮಾರ್ಚ್ 1949ರಲ್ಲಿ, ಕ್ರೇ ಮತ್ತು ನಾನು ಸರ್ಕಿಟ್ ಕೆಲಸದಲ್ಲಿ, ಅಂದರೆ ಯೆಹೋವನ ಸಾಕ್ಷಿಗಳ ಸಭೆಗಳನ್ನು ಸಂದರ್ಶಿಸುತ್ತಾ ಅವುಗಳನ್ನು ಆತ್ಮಿಕವಾಗಿ ಬಲಗೊಳಿಸುವ ಕೆಲಸದಲ್ಲಿ ಪಾಲ್ಗೊಳ್ಳುವ ಆಮಂತ್ರಣವನ್ನು ಪಡೆದುಕೊಂಡೆವು. ಯುದ್ಧದ ಮುಂಚೆ ಮತ್ತು ಅನಂತರವೂ ಒಬ್ಬ ನಂಬಿಗಸ್ತ ಶುಶ್ರೂಷಕರಾಗಿದ್ದ ಫ್ರಿಟ್ಸ್ ಹಾರ್ಟ್ಸ್ಟ್ಯಾಂಗ್ ಎಂಬವರು, ನನ್ನನ್ನು ಸರ್ಕಿಟ್ ಕೆಲಸಕ್ಕಾಗಿ ತರಬೇತುಗೊಳಿಸಿದರು. ಅವರು ನನಗೆ ಈ ಹಿತೋಪದೇಶವನ್ನು ಕೊಟ್ಟರು: “ವಿಮ್, ಯೆಹೋವನ ಸಂಸ್ಥೆಯಿಂದ ಬರುವ ಸೂಚನೆಗಳು ಉತ್ತಮವಲ್ಲವೆಂದು ನೀನು ಆರಂಭದಲ್ಲಿ ನೆನಸಿದರೂ ಅದನ್ನು ಚಾಚೂತಪ್ಪದೆ ಅನುಸರಿಸು. ಹಾಗೆ ಮಾಡಿದರೆ ನೀನು ಎಂದಿಗೂ ವಿಷಾದಿಸದಿರುವಿ.” ಅವರ ಈ ಮಾತು ಸತ್ಯವಾಗಿತ್ತು.
ಆ ಸಮಯದಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್ ಏಚ್. ನಾರ್ 1951ರಲ್ಲಿ ನೆದರ್ಲೆಂಡ್ಸ್ಗೆ ಭೇಟಿಯನ್ನಿತ್ತರು. ಆಗ ಕ್ರೇ ಮತ್ತು ನಾನು, ಅಮೆರಿಕದಲ್ಲಿ ಮಿಷನೆರಿ ತರಬೇತಿಯನ್ನು ಪಡೆದುಕೊಳ್ಳಲಿಕ್ಕಾಗಿ ಅರ್ಜಿಯನ್ನು ಸಲ್ಲಿಸಿದೆವು. ಸ್ವಲ್ಪ ಸಮಯದೊಳಗೆ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 21ನೆಯ ತರಗತಿಯನ್ನು ಹಾಜರಾಗಲು ನಮಗೆ ಆಮಂತ್ರಣವು ಸಿಕ್ಕಿತು. ನಾವು 1945ರಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದಾಗ, ನೆದರ್ಲೆಂಡ್ಸ್ನಲ್ಲಿ ಸುಮಾರು 2,000 ಸಾಕ್ಷಿಗಳಿದ್ದರು. ಆದರೆ 1953ರೊಳಗೆ, ಸುಮಾರು 7,000 ಮಂದಿ ಸಾಕ್ಷಿಗಳಿದ್ದರು. ಇದು ನಮ್ಮ ನಿರೀಕ್ಷಣೆಗಳನ್ನು ಬಹಳಷ್ಟು ಮೀರಿಸಿದ ಒಂದು ನಿಜಸ್ಥಿತಿಯಾಗಿತ್ತು!
ನಮ್ಮ ಹೊಸ ವಾಸಸ್ಥಾನದಲ್ಲಿ ಶುಶ್ರೂಷೆ
ಈಗ ಇಂಡೊನೇಷಿಯದ ಒಂದು ಪ್ರಾಂತವಾಗಿ ಪರಿಣಮಿಸಿರುವ ಡಚ್ ನ್ಯೂ ಗಿನೀಗೆ ಹೋಗುವಂತೆ ನಮಗೆ ನೇಮಕ ನೀಡಲಾಯಿತು. ಆದರೆ ಅಲ್ಲಿ ಪ್ರವೇಶಿಸಲು ನಮಗೆ ಅನುಮತಿ ದೊರಕದಿದ್ದದ್ದರಿಂದ, ದಕ್ಷಿಣ ಅಮೆರಿಕದಲ್ಲಿರುವ ಸುರಿನಾಮ್ ಎಂಬ ಒಂದು ಉಷ್ಣವಲಯ ದೇಶಕ್ಕೆ ನಮ್ಮ ನೇಮಕವನ್ನು ಬದಲಾಯಿಸಲಾಯಿತು. ನಾವು ಡಿಸೆಂಬರ್ 1955ರಂದು ಅಲ್ಲಿಗೆ ತಲಪಿದೆವು. ಆಗ ಸುರಿನಾಮ್ನಲ್ಲಿ ಕೇವಲ ನೂರು ಮಂದಿ ಸಾಕ್ಷಿಗಳಿದ್ದರು. ಆದರೂ ಅವರು ನಮಗೆ ತುಂಬ ಸಹಾಯ ಮಾಡಿದರು. ಸ್ವಲ್ಪ ಸಮಯದೊಳಗೆ ನಾವು ನಿರಾತಂಕದಿಂದ ಇರಲಾರಂಭಿಸಿದೆವು.
ನಿಜ, ನಾವು ಅನೇಕ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾಗಿತ್ತು ಮತ್ತು ಕೆಲವೊಮ್ಮೆ ಹಾಗೆ ಹೊಂದಿಕೊಳ್ಳುವುದು ಕಷ್ಟಕರವೂ ಆಗಿತ್ತು. ಉದಾಹರಣೆಗಾಗಿ, ಕ್ರೇ ಯಾವುದೇ ಕೀಟವನ್ನು ಕಂಡರೂ ಹೆದರುತ್ತಿದ್ದಳು. ನೆದರ್ಲೆಂಡ್ಸ್ನಲ್ಲಿ, ನಮ್ಮ ಮಲಗುವ ಕೋಣೆಯಲ್ಲಿ ಒಂದು ಚಿಕ್ಕ ಜೇಡರಹುಳು ಬಂದರೆ ಸಾಕು, ನಾನು ಅದನ್ನು ಹೊರಹಾಕುವ ವರೆಗೆ ಅವಳಿಗೆ ನಿದ್ರೆಬರುತ್ತಿರಲಿಲ್ಲ. ಆದರೆ ಸುರಿನಾಮ್ನಲ್ಲಿ ಅದಕ್ಕಿಂತಲೂ ಹತ್ತು ಪಟ್ಟು ದೊಡ್ಡದಾಗಿರುವ ಜೇಡರಹುಳುಗಳಿವೆ, ಮತ್ತು ಕೆಲವು ವಿಷಕಾರಿಯಾಗಿವೆ! ನಮ್ಮ ಮಿಷನೆರಿ ಮನೆಯಲ್ಲಿ, ಜಿರಳೆ, ಇಲಿ, ಇರುವೆ, ಸೊಳ್ಳೆ ಮತ್ತು ಮಿಡತೆಗಳೂ ಇರುತ್ತಿದ್ದವು. ಹಾವುಗಳೂ ನಮ್ಮನ್ನು ಭೇಟಿಮಾಡಲು ಬರುತ್ತಿದ್ದವು. ಆದರೆ ಈಗ ಕ್ರೇ ಅಂತಹ ಜೀವಿಗಳಿಗೆ ಎಷ್ಟು ಒಗ್ಗಿಹೋಗಿದ್ದಾಳೆಂದರೆ, ಅವುಗಳನ್ನು ಓಡಿಸುವುದು ಈಗ ಅವಳಿಗೆ ಒಂದು ಸಾಮಾನ್ಯವಾದ ದಿನಚರಿಯಾಗಿಬಿಟ್ಟಿದೆ.
43ಕ್ಕಿಂತಲೂ ಹೆಚ್ಚು ವರ್ಷಗಳ ನಂತರ, ಇಲ್ಲಿಯೇ ಹುಟ್ಟಿ ಬೆಳೆದಿರುವ ಅನೇಕರಿಗಿಂತಲೂ ಹೆಚ್ಚಾಗಿ ನಮಗೆ ಈ ದೇಶದ ಒಳ್ಳೆಯ ಪರಿಚಯವಿದೆ. ಈ ದೇಶದ ನದಿಗಳು, ಮಳೆಯಾರಣ್ಯ, ಮತ್ತು ಕರಾವಳಿಯ ಬಳಿಯಿರುವ ಜೌಗುನೆಲಗಳನ್ನು ನಾವು ನೋಡಿ ಸಂತೋಷಪಡಲು ಕಲಿತುಕೊಂಡಿದ್ದೇವೆ. ಇಲ್ಲಿನ ಸಮೃದ್ಧ ವನ್ಯ ಜೀವಿಗಳೊಂದಿಗೆ, ಅಂದರೆ ಮುಳ್ಳುಹಂದಿಗಳು, ಸ್ಲೋತ್ಗಳು, ಜಾಗ್ವಾರ್ಗಳು ಮತ್ತು ವಿವಿಧ ರೀತಿಯ ಹಾವುಗಳೊಂದಿಗೂ ನಾವು ಚಿರಪರಿಚಿತರಾಗಿದ್ದೇವೆ. ಈ ಹಾವುಗಳು ಅನೇಕವೇಳೆ ಸುಂದರವಾದ ಬಣ್ಣಗಳುಳ್ಳವುಗಳಾಗಿರುತ್ತವೆ. ಆದರೆ ನಾವು ವಿಶೇಷವಾಗಿ ಮೆಚ್ಚಿಕೊಂಡಿರುವ ಸಂಗತಿಯು, ಇಲ್ಲಿರುವ ಜನರಲ್ಲಿನ ವ್ಯಾಪಕವಾದ ವೈವಿಧ್ಯತೆಯನ್ನೇ. ಇವರಲ್ಲಿ ಕೆಲವರ ಪೂರ್ವಜರು ಆಫ್ರಿಕ ಹಾಗೂ ಭಾರತ, ಇಂಡೊನೇಷಿಯ, ಚೈನಾ ಮತ್ತು ಇತರ ದೇಶಗಳಿಂದ ಬಂದವರಾಗಿದ್ದಾರೆ. ಮತ್ತು ಕೆಲವರು ಮೂಲನಿವಾಸಿಗಳ ಸಂತತಿಯವರು, ಅಂದರೆ ಅಮೆರ್ಇಂಡಿಯನರು ಆಗಿದ್ದಾರೆ.
ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಮನೆಯಿಂದ ಮನೆಗೆ ಹೋಗುವಾಗ ನಾವು ಈ ಎಲ್ಲ ಹಿನ್ನೆಲೆಗಳ ಜನರನ್ನು ಭೇಟಿಯಾಗುತ್ತೇವೆ. ಅಲ್ಲದೆ, ನಮ್ಮ ರಾಜ್ಯ ಸಭಾಗೃಹಗಳಲ್ಲಿಯೂ ನಮ್ಮ ಕ್ರೈಸ್ತ ಸಹೋದರ ಸಹೋದರಿಯರ ನಡುವೆ ಇದೇ ರೀತಿಯ ಬೆರಗುಗೊಳಿಸುವ ವೈವಿಧ್ಯತೆಯಿದೆ. 1953ರಲ್ಲಿ ದುಃಸ್ಥಿತಿಯಲ್ಲಿದ್ದ ಕೇವಲ ಒಂದೇ ಒಂದು ರಾಜ್ಯ ಸಭಾಗೃಹದಿಂದ, 30ಕ್ಕಿಂತಲೂ ಹೆಚ್ಚು ಆಕರ್ಷಕ ರಾಜ್ಯ ಸಭಾಗೃಹಗಳು, ಒಂದು ಸುಂದರ ಅಸೆಂಬ್ಲಿ ಹಾಲ್, ಮತ್ತು ಫೆಬ್ರವರಿ 1995ರಲ್ಲಿ ಸಮರ್ಪಿಸಲ್ಪಟ್ಟ ಒಂದು ಅತಿ ಉತ್ಕೃಷ್ಟವಾದ ಬ್ರಾಂಚ್ ಸೌಕರ್ಯದ ವರೆಗೆ ಆಗಿರುವ ವೃದ್ಧಿಯನ್ನೂ ನಾವು ನೋಡಿದ್ದೇವೆ.
ನಾನು ಕಲಿತುಕೊಂಡಿರುವ ಪಾಠಗಳು
ಸುರಿನಾಮ್ನ ಒಳನಾಡಿನಲ್ಲಿ ಬಹುದೂರದಲ್ಲಿ, ಬುಷ್ ನೀಗ್ರೋಗಳೆಂದು ಕರೆಯಲ್ಪಡುವವರ ಹಲವಾರು ಸಭೆಗಳಿವೆ. ಇವರು, ಕೃಷಿಗಾರಿಕಾ ತೋಟಗಳಿಂದ ಪಲಾಯನಗೈದು ನದಿಗಳ ತೀರದ ಉದ್ದಕ್ಕೂ ಸಾಧ್ಯವಿರುವಷ್ಟು ದೂರದ ವರೆಗೆ ಓಡಿಹೋದ ಆಫ್ರಿಕದ ಗುಲಾಮರ ವಂಶಜರಾಗಿದ್ದಾರೆ. ಅವರ ಚಾಕಚಕ್ಯತೆಯನ್ನು ನೋಡಿ, ನಾನು ಎಷ್ಟೋ ಸಲ ಚಕಿತನಾಗಿದ್ದೇನೆ. ಉದಾಹರಣೆಗಾಗಿ, ಅವರು ಸಾಗಣೆಗಾಗಿ ನದಿಗಳನ್ನು ಉಪಯೋಗಿಸುವ ವಿಧ ಮತ್ತು ಮಳೆಯಾರಣ್ಯವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವ ರೀತಿ ಆಶ್ಚರ್ಯಗೊಳಿಸುವಂಥದ್ದಾಗಿದೆ. ಅವರು ಮರಗಳನ್ನು ಕಡಿದು, ದೋಣಿಗಳನ್ನು ತಯಾರಿಸುತ್ತಾರೆ ಮತ್ತು ಇವುಗಳನ್ನು ಧುಮ್ಮಿಕ್ಕುವ ಜಲಪಾತಗಳು ಮತ್ತು ರಭಸದಿಂದ ಹರಿಯುವ ಪ್ರವಾಹಗಳಲ್ಲಿ ಕುಶಲವಾಗಿ ನಡೆಸಿಕೊಂಡು ಹೋಗುತ್ತಾರೆ. ಆಹಾರಕ್ಕಾಗಿ ಅವರು ಬೇಟೆಯಾಡುತ್ತಾರೆ ಮತ್ತು ಮೀನುಹಿಡಿಯುತ್ತಾರೆ, ಯಾವುದೇ ಆಧುನಿಕ ಸೌಕರ್ಯಗಳಿಲ್ಲದೆ ಅಡಿಗೆಮಾಡುತ್ತಾರೆ ಮತ್ತು ನಮಗೆ ತುಂಬ ಕಷ್ಟಕರವಾಗಿರುವಂತಹ ಎಷ್ಟೋ ಬೇರೆ ಕೆಲಸಗಳನ್ನೂ ಇವರು ಮಾಡುತ್ತಾರೆ.
ಈ ಎಲ್ಲ ವರ್ಷಗಳಲ್ಲಿ, ಸುರಿನಾಮ್ನಲ್ಲಿ ವಾಸಿಸುತ್ತಿರುವ ಇತರ ಜನರ ಬಗ್ಗೆಯೂ ಮತ್ತು ಅವರ ಪದ್ಧತಿಗಳು ಹಾಗೂ ಅವರ ಜೀವನ ರೀತಿಗಳ ಬಗ್ಗೆಯೂ ನಾವು ತಿಳಿದುಕೊಂಡಿದ್ದೇವೆ. 1950ಗಳಷ್ಟು ಹಿಂದೆ, ನಾನೊಂದು ಅಮೆರ್ಇಂಡಿಯನ್ ಹಳ್ಳಿಗೆ ಭೇಟಿನೀಡಿದ್ದು ನೆನಪಿದೆ. ನಾನು ಮಧ್ಯ ರಾತ್ರಿ, ಮಳೆ ಕಾಡಿನಲ್ಲಿ ನಿರ್ಜನವಾದ ಒಂದು ಕ್ಯಾಂಪಿಗೆ ಬಂದು ತಲಪಿದೆ. ಅಲ್ಲಿಂದ ನನ್ನ ಇಂಡಿಯನ್ ಗೈಡ್ ಮತ್ತು ನಾನು ದೋಣಿಯಲ್ಲಿ ಪ್ರಯಾಣಿಸಬೇಕಿತ್ತು. ಅವನು ಬೆಂಕಿ ಹೊತ್ತಿಸಿ, ಊಟ ತಯಾರಿಸಿ, ತೂಗುಮಂಚಗಳನ್ನು ಕಟ್ಟಿದನು. ನನಗಾಗಿ ಎಲ್ಲ ಕೆಲಸಗಳನ್ನು ಮಾಡುವುದು ಅವನಿಗೆ ಸಾಮಾನ್ಯವಾದ ಸಂಗತಿಯಾಗಿತ್ತು, ಯಾಕಂದರೆ ನನಗೆ ಅವುಗಳಲ್ಲಿ ಯಾವುದನ್ನೂ ಮಾಡಲು ಬರುವುದಿಲ್ಲವೆಂಬುದು ಅವನಿಗೆ ತಿಳಿದಿತ್ತು.
ಮಲಗಿದ್ದಾಗ ನಾನು ಮಧ್ಯದಲ್ಲಿ ನನ್ನ ತೂಗುಮಂಚದಿಂದ ಕೆಳಗೆ ಬಿದ್ದಾಗ, ಅವನು ನಗಲಿಲ್ಲ. ಬದಲಿಗೆ ನನ್ನ ಬಟ್ಟೆಗಳಿಗೆ ತಾಗಿದ್ದ ಧೂಳನ್ನು ಕೊಡವಿ, ತೂಗುಮಂಚವನ್ನು ಪುನಃ ಕಟ್ಟಿದನು. ಒಂದು ಕಿರಿದಾದ ನದಿಯಲ್ಲಿ ನಾವು ಪ್ರಯಾಣಿಸುತ್ತಿದ್ದಾಗ, ನಮ್ಮ ಸುತ್ತಮುತ್ತಲೂ ಎಷ್ಟು ಕತ್ತಲೆಯಾಗಿತ್ತೆಂದರೆ, ನಾನು ನನ್ನ ಕೈಗಳನ್ನು ಮುಂದೆ ಇಟ್ಟರೂ ನನಗೆ ಅವುಗಳನ್ನು ನೋಡಲು ಸಾಧ್ಯವಿರಲಿಲ್ಲ. ಆದರೆ ನನ್ನ ಗೈಡ್, ದೋಣಿಯನ್ನು ಹೇಗೋ ಅನೇಕಾನೇಕ ತಿರುವುಗಳು ಮತ್ತು ಅಡಚಣೆಗಳ ಸುತ್ತಲೂ ನಡೆಸಿಕೊಂಡು ಹೋಗುತ್ತಿದ್ದನು. ಅವನು ಅದನ್ನು ಹೇಗೆ ಮಾಡಲು ಸಾಧ್ಯವೆಂದು ಕೇಳಿದಾಗ, ಅವನು ಹೇಳಿದ್ದು: “ನೀವು ತಪ್ಪಾದ ಕಡೆ ನೋಡುತ್ತಿದ್ದೀರಿ. ಮೇಲೆ ನೋಡಿ, ಮರಗಳ ತುದಿಗಳು ಮತ್ತು ಆಕಾಶದ ನಡುವಿನ ವ್ಯತ್ಯಾಸವನ್ನು ಗಮನಿಸಿ. ನದಿಯಲ್ಲಿ ಎಲ್ಲಿ ತಿರುವು ಇದೆಯೆಂಬುದನ್ನು ಅದು ತೋರಿಸುತ್ತದೆ. ಕೆಳಗೆ ನೋಡಿ, ಸಣ್ಣ ಸಣ್ಣ ಅಲೆಗಳನ್ನು ಗಮನಿಸಿರಿ. ಮುಂದೆ ಬಂಡೆಗಳು ಅಥವಾ ಬೇರೆ ಯಾವುದೇ ತಡೆಗಳಿವೆಯೊ ಎಂಬುದನ್ನು ತಿಳಿದುಕೊಳ್ಳುವಂತೆ ಅವು ಸಹಾಯಮಾಡುವವು. ಮತ್ತು ಆಲಿಸಿರಿ, ಮುಂದೇನಿದೆಯೆಂದು ಧ್ವನಿಗಳಿಂದಲೂ ಗೊತ್ತಾಗುತ್ತದೆ.”
ತೋಡುದೋಣಿಗಳಲ್ಲಿ ಪ್ರಯಾಣಿಸುವುದು, ರಭಸದ ಪ್ರವಾಹಗಳನ್ನು ಹಾಯ್ದುಹೋಗುವುದು ಮತ್ತು ಧುಮ್ಮಿಕ್ಕುವ ಜಲಪಾತಗಳನ್ನು ದಾಟಿಕೊಂಡು ಹೋಗುವುದು ಅಪಾಯಕಾರಿಯೂ, ದಣಿವನ್ನು ಉಂಟುಮಾಡುವಂತಹದ್ದೂ ಆಗಿರಬಲ್ಲದು. ಆದರೆ ಪ್ರಯಾಣದ ಅಂತ್ಯದಲ್ಲಿ ಆದರದ ಅತಿಥಿಸತ್ಕಾರದೊಂದಿಗೆ ಸ್ವಾಗತಿಸಲು ಕಾದುಕೊಂಡಿರುವ ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ನಾವು ಭೇಟಿಯಾಗುವಾಗ, ನಮ್ಮಲ್ಲಿ ಚೈತನ್ಯತುಂಬುತ್ತದೆ. ಅತಿಥಿಗಳಿಗಾಗಿ ಯಾವಾಗಲೂ ಆಹಾರವು ಇದ್ದೇ ಇರುತ್ತದೆ. ಪ್ರಾಯಶಃ ಅದು ಕೇವಲ ಒಂದು ಬಟ್ಟಲು ಸೂಪ್ ಕೂಡ ಆಗಿರಬಹುದು. ಮಿಷನೆರಿ ಜೀವನವು ಅನೇಕವೇಳೆ ತಾಳ್ಮೆಯನ್ನು ಪರೀಕ್ಷಿಸುವಂತಹದ್ದೂ ಕಷ್ಟಕರವೂ ಆಗಿತ್ತೆಂಬುದು ನಿಜ, ಆದರೂ ಅದರಿಂದ ನಮಗೆ ಎಂದೂ ನಿರಾಶೆಯಾಗಿಲ್ಲ.
ನಾವು ಮುಂದುವರಿಯುವಂತೆ ಸಹಾಯಮಾಡಿರುವ ವಿಷಯ
ನಮ್ಮ ಆರೋಗ್ಯವು ಅಷ್ಟೇನೂ ಒಳ್ಳೆಯದಾಗಿರುವುದಿಲ್ಲ. ಅಲ್ಲದೆ ನಮಗೆ ಕುಟುಂಬದ ಸದಸ್ಯರಿಂದಲೂ ಪ್ರೋತ್ಸಾಹ ಸಿಕ್ಕಿರುವುದಿಲ್ಲ, ಯಾಕಂದರೆ ನಮ್ಮ ಏಕೈಕ ಸಾಕ್ಷಿ ಸಂಬಂಧಿಯು ನನ್ನ ತಾಯಿ ಆಗಿದ್ದರು. ಆದರೂ, ನಮ್ಮ ಪ್ರಿಯ ಮಿತ್ರರ ಸಹಾಯ ಮತ್ತು ಉತ್ತೇಜನದಿಂದ ನಮ್ಮ ಅಗತ್ಯಗಳು ಯಾವಾಗಲೂ ಪೂರೈಸಲ್ಪಟ್ಟಿವೆ. ನಮ್ಮ ನೇಮಕದಲ್ಲಿ ಮುಂದುವರಿಯುವಂತೆ ಇದು ನಮಗೆ ಸಹಾಯಮಾಡಿದೆ. ವಿಶೇಷವಾಗಿ ತಾಯಿ ನಮ್ಮನ್ನು ತುಂಬ ಹುರಿದುಂಬಿಸುತ್ತಿದ್ದರು.
ನಮ್ಮ ನೇಮಕದಲ್ಲಿದ್ದು ಸುಮಾರು ಆರು ವರ್ಷಗಳು ಕಳೆದ ನಂತರ, ತಾಯಿಯವರು ತುಂಬ ಅಸ್ವಸ್ಥರಾದರು. ಅವರನ್ನು ಕೊನೆಯ ಸಲ ನೋಡಿ ಹೋಗುವಂತೆ ನಮ್ಮ ಮಿತ್ರರು ಬಯಸಿದರಾದರೂ, ಅಮ್ಮ ಪತ್ರದಲ್ಲಿ ಹೀಗೆ ಬರೆದರು: “ದಯವಿಟ್ಟು ನಿಮ್ಮ ನೇಮಕದಲ್ಲಿಯೇ ಇರಿ. ನಾನು ಅಸ್ವಸ್ಥಳಾಗುವುದಕ್ಕೆ ಮುಂಚೆ ಹೇಗಿದ್ದೇನೊ ಹಾಗೆಯೇ ಇದ್ದೇನೆಂದು ನನ್ನ ನೆನಪುಮಾಡಿಕೊಳ್ಳಿರಿ. ಪುನರುತ್ಥಾನದ ಸಮಯದಲ್ಲಿ ನಿಮ್ಮನ್ನು ನೋಡಲು ನಿರೀಕ್ಷಿಸುತ್ತೇನೆ.” ಅವರು ದೃಢವಾದ ನಂಬಿಕೆಯುಳ್ಳ ಒಬ್ಬ ಸ್ತ್ರೀಯಾಗಿದ್ದರು.
ರಜೆಯಲ್ಲಿ ನಾವು ಕೊನೆಗೆ ನೆದರ್ಲೆಂಡ್ಸ್ಗೆ ಹಿಂದಿರುಗಲು ಶಕ್ತರಾದದ್ದು 1966ರಲ್ಲೇ. ನಮ್ಮ ಹಳೆಯ ಮಿತ್ರರನ್ನು ನೋಡಿ ನಮಗೆ ತುಂಬ ಸಂತೋಷವಾಯಿತಾದರೂ, ಈಗ ನಮ್ಮ ಸ್ವದೇಶ ಸುರಿನಾಮ್ ಆಗಿದೆಯೆಂದು ನಮಗನಿಸುತ್ತಿತ್ತು. ಮಿಷನೆರಿಗಳು ತಮ್ಮ ನೇಮಕದಲ್ಲಿ ಕಡಿಮೆಪಕ್ಷ ಮೂರು ವರ್ಷಗಳ ವರೆಗೆ ಸೇವೆಸಲ್ಲಿಸಿದ ನಂತರವೇ ತಮ್ಮ ಸ್ವದೇಶಕ್ಕೆ ರಜೆಯಲ್ಲಿ ಹೋಗಬೇಕೆಂದು ಸಂಸ್ಥೆಯು ಕೊಡುವ ಸಲಹೆಯು ಎಷ್ಟು ವಿವೇಕಪ್ರದವೆಂಬುದು ನಮಗೆ ಇದರಿಂದ ಮನದಟ್ಟಾಯಿತು.
ನಮ್ಮ ನೇಮಕದಲ್ಲಿ ಆನಂದಿಸಲು ನಮಗೆ ಸಹಾಯಮಾಡಿರುವ ಇನ್ನೊಂದು ಸಂಗತಿಯು ಹಾಸ್ಯಪ್ರಜ್ಞೆ ಆಗಿದೆ. ಇದರರ್ಥ, ಯಾವುದೇ ವಿಷಯಗಳ ಸಂಬಂಧದಲ್ಲಿ ಅಥವಾ ಕೆಲವೊಮ್ಮೆ ನಮ್ಮ ವಿಷಯದಲ್ಲೇ ನಗಾಡಲು ಶಕ್ತರಾಗಿರುವುದೇ. ಯೆಹೋವನು ತನ್ನ ಸೃಷ್ಟಿಯಲ್ಲೂ ಒಂದಿಷ್ಟು ಹಾಸ್ಯವನ್ನು ಸೇರಿಸಿದ್ದಾನೆ. ಮಂಗಗಳ, ನೀರುನಾಯಿಗಳ ಮತ್ತು ವಿಶೇಷವಾಗಿ ಅನೇಕ ಮರಿಗಳ ಕುಚೇಷ್ಟೆಗಳನ್ನು ನೋಡುವಾಗ, ನಮ್ಮ ಮುಖದಲ್ಲಿ ನಗು ಅರಳುತ್ತದೆ. ಅಷ್ಟುಮಾತ್ರವಲ್ಲದೆ, ವಿಷಯಗಳನ್ನು ಸಕಾರಾತ್ಮಕ ರೀತಿಯಲ್ಲಿ ನೋಡಬೇಕು ಮತ್ತು ನಮ್ಮನ್ನು ನಾವೇ ಶ್ರೇಷ್ಠರೆಂದು ಎಣಿಸದಿರುವುದು ಪ್ರಾಮುಖ್ಯವೆಂಬುದನ್ನು ನಾವು ಈ ಎಲ್ಲ ವರ್ಷಗಳಲ್ಲಿ ಕಲಿತುಕೊಂಡಿದ್ದೇವೆ.
ಶುಶ್ರೂಷೆಯಲ್ಲಿನ ನಮ್ಮ ಪ್ರತಿಫಲದಾಯಕ ಕೆಲಸವು, ನಾವು ನಮ್ಮ ನೇಮಕದಲ್ಲಿ ಮುಂದುವರಿಯುವಂತೆ ನಮಗೆ ವಿಶೇಷವಾಗಿ ಸಹಾಯಮಾಡಿದೆ. ಕ್ರೇ, ಪಾರಮಾರಬೋದ ಒಂದು ವೃದ್ಧಾಶ್ರಮದಲ್ಲಿ ಒಂಬತ್ತು ಮಂದಿ ಪುರುಷರೊಂದಿಗೆ ಬೈಬಲ್ ಅಭ್ಯಾಸವನ್ನು ಆರಂಭಿಸಿದಳು. ಇವರೆಲ್ಲರೂ 80 ವರ್ಷ ಪ್ರಾಯವನ್ನು ದಾಟಿದವರಾಗಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಒಂದು ಸಮಯದಲ್ಲಿ ಒಬ್ಬ ಬಾಲಾಟಬ್ಲೀಡರ್ (ರಬ್ಬರ್ ಮರದಿಂದ ರಬ್ಬರನ್ನು ಶೇಖರಿಸುವವನು) ಅಥವಾ ಬಂಗಾರವನ್ನು ಶೋಧಿಸುವವರು ಆಗಿದ್ದರು. ಅವರಲ್ಲಿ ಎಲ್ಲರೂ ತಾವು ಕಲಿತುಕೊಂಡ ವಿಷಯವನ್ನು ತುಂಬ ಇಷ್ಟಪಟ್ಟು, ದೀಕ್ಷಾಸ್ನಾನ ಪಡೆದುಕೊಂಡರು ಮತ್ತು ತಮ್ಮ ಮರಣದ ವರೆಗೂ ಸಾರುವ ಕೆಲಸದಲ್ಲಿ ನಂಬಿಗಸ್ತಿಕೆಯಿಂದ ಪಾಲ್ಗೊಂಡರು.
ನ್ಯೂ ಚರ್ಚ್ ಆಫ್ ಸ್ವೀಡನ್ಬರ್ಗ್ನ ರಿವರ್ಸ್ ಎಂಬ ಹೆಸರಿನ ಒಬ್ಬ ವೃದ್ಧ ಸೌವಾರ್ತಿಕರು, ನಾವು ಈ ವೃದ್ಧ ಪುರುಷರೊಂದಿಗೆ ಅಭ್ಯಾಸವನ್ನು ಮಾಡುತ್ತಿದ್ದಾಗ ದೂರದಿಂದ ಆಲಿಸಿ, ಕುಹಕವಾದ ನುಡಿಗಳನ್ನಾಡುತ್ತಿದ್ದರು. ಆದರೆ ಪ್ರತಿ ವಾರ ಅವರು ಸ್ವಲ್ಪ ಸ್ವಲ್ಪವಾಗಿ ನಮ್ಮ ಹತ್ತಿರಕ್ಕೆ ಬಂದು ಕುಳಿತು ಆಲಿಸತೊಡಗಿದರು ಮತ್ತು ಅವರ ಅಪಹಾಸ್ಯವು ಕಡಿಮೆಯಾಗತೊಡಗಿತು. ಕೊನೆಗೆ ಅವರು ಆ ಇತರ ವೃದ್ಧ ಪುರುಷರೊಂದಿಗೆ ಅಭ್ಯಾಸಕ್ಕಾಗಿ ಕುಳಿತುಕೊಳ್ಳಲಾರಂಭಿಸಿ, ಅದರಲ್ಲಿ ಭಾಗವಹಿಸಲಾರಂಭಿಸಿದರು. ಅವರು 92 ವರ್ಷ ಪ್ರಾಯದವರಾಗಿದ್ದು, ದೃಷ್ಟಿ ಮತ್ತು ಕಿವಿ ಮಂದವಾಗಿದ್ದರೂ ಅವರು ಶಾಸ್ತ್ರವಚನಗಳನ್ನು ಎಷ್ಟು ಚೆನ್ನಾಗಿ ಉಲ್ಲೇಖಿಸಿ ಹೇಳುತ್ತಿದ್ದರೆಂದರೆ, ಅವರು ಅದನ್ನು ಓದಿ ಹೇಳುತ್ತಿದ್ದಾರೋ ಎಂಬಂತಿರುತ್ತಿತ್ತು. ಕಟ್ಟಕಡೆಗೆ, ಅವರು ಕೂಡ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಾರಂಭಿಸಿದರು, ಮತ್ತು ಕಿವಿಗೊಡುವವರು ಯಾರೇ ಇರಲಿ ಅವರೆಲ್ಲರಿಗೂ ಸಾರುತ್ತಿದ್ದರು. ಸಾಯುವ ಸ್ವಲ್ಪ ಸಮಯದ ಮುಂಚೆ, ನಾವು ಬಂದು ನೋಡಿ ಹೋಗುವಂತೆ ಅವರು ಸುದ್ದಿ ಕಳುಹಿಸಿದರು. ಆದರೆ ನಾವು ಅಲ್ಲಿ ತಲಪುವಷ್ಟರಲ್ಲಿ, ಅವರು ಸತ್ತುಹೋಗಿದ್ದರು. ಆದರೆ ಅವರ ತಲೆದಿಂಬಿನಡಿಯಲ್ಲಿ, ಆ ತಿಂಗಳು ಅವರು ಸೇವೆಯಲ್ಲಿ ಕಳೆದಂತಹ ತಾಸುಗಳ ವರದಿಯು ನಮಗೆ ಸಿಕ್ಕಿತು.
ಪೂರ್ಣ ಸಮಯದ ಸಾರುವ ಕೆಲಸದಲ್ಲಿ 25ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದ ಬಳಿಕ, 1970ರಲ್ಲಿ ಸುರಿನಾಮ್ ಬ್ರಾಂಚ್ ಆಫೀಸಿನ ಮೇಲ್ವಿಚಾರಣೆ ಮಾಡುವಂತೆ ನನ್ನನ್ನು ನೇಮಿಸಲಾಯಿತು. ಆಫೀಸಿನಲ್ಲಿ ಕುಳಿತುಕೊಂಡು ಕೆಲಸಮಾಡುವುದು ನನಗೆ ಕಷ್ಟಕರವಾಗಿ ತೋರಿತು. ಕ್ರೇಯನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿತ್ತು, ಯಾಕಂದರೆ ಅವಳು ಆಗಲೂ ಪ್ರತಿ ದಿನ ಕ್ಷೇತ್ರ ಸೇವೆಗೆ ಹೋಗುತ್ತಿದ್ದಳು. ಆದರೆ ಈಗ ಕ್ರೇ ಸಹ ಬ್ರಾಂಚ್ನಲ್ಲೇ ಕೆಲಸಮಾಡುತ್ತಾಳೆ. ಮತ್ತು ನಾವಿಬ್ಬರೂ ವೃದ್ಧರಾಗುತ್ತಿರುವಂತೆಯೇ ನಮಗೆ ಮಾಡಲು ಅರ್ಥಪೂರ್ಣವಾದ ಕೆಲಸವಿದೆ.
ಹಿಂದೆ 1945ರಲ್ಲಿ ಲೋಕದಲ್ಲಿದ್ದಂತಹ 1,60,000 ಸಕ್ರಿಯ ರಾಜ್ಯ ಘೋಷಕರ ಸಂಖ್ಯೆಯನ್ನು, ಇಂದಿನ 60,00,000 ಸಂಖ್ಯೆಯೊಂದಿಗೆ ಹೋಲಿಸುವಾಗ, ನಿಜಸ್ಥಿತಿಯು ನನ್ನ ನಿರೀಕ್ಷಣೆಗಳನ್ನು ಎಷ್ಟು ಮೀರಿಸಿದೆಯೆಂಬುದನ್ನು ನಾನು ಖಂಡಿತವಾಗಿಯೂ ನೋಡಬಲ್ಲೆ. ಮತ್ತು ಸುರಿನಾಮ್ನಲ್ಲಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆಯು, ನಾವು 1955ರಲ್ಲಿ ಬಂದಾಗ ಎಷ್ಟಿತ್ತೊ ಅದಕ್ಕಿಂತಲೂ 19 ಪಟ್ಟು, ಅಂದರೆ ಸರಿಸುಮಾರು 100 ಮಂದಿಯಿಂದ, ಇಂದು 1,900 ಮಂದಿಗೆ ಹೆಚ್ಚಿದೆ!
ನಾವು ನಮ್ಮ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೆ, ಭವಿಷ್ಯತ್ತಿನಲ್ಲಿ ಆತನ ಉದ್ದೇಶಗಳ ನೆರವೇರಿಕೆಯಲ್ಲಿ ಹೆಚ್ಚು ಭವ್ಯವಾದ ಬೆಳವಣಿಗೆಗಳನ್ನು ನೋಡುವೆವೆಂಬ ಭರವಸೆ ನನಗಿದೆ. ಮತ್ತು ನಾವು ಅದನ್ನೇ ಮಾಡಲು, ಅಂದರೆ ನಂಬಿಗಸ್ತರಾಗಿ ಉಳಿಯುವ ಗುರಿಯನ್ನಿಟ್ಟಿದ್ದೇವೆ.
[ಪುಟ 11 ರಲ್ಲಿರುವ ಚಿತ್ರ]
1955ರಲ್ಲಿ ನಾವು ಸುರಿನಾಮ್ಗೆ ಆಗಮಿಸಿದಾಗ
[ಪುಟ 13 ರಲ್ಲಿರುವ ಚಿತ್ರ]
ನಮ್ಮ ಶುಶ್ರೂಷೆಯಲ್ಲಿ ದೋಣಿಗಳನ್ನು ಬಳಸುತ್ತಿರುವುದು
[ಪುಟ 13 ರಲ್ಲಿರುವ ಚಿತ್ರ]
ನನ್ನ ಪತ್ನಿಯೊಂದಿಗೆ