ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 11/1 ಪು. 26-30
  • ಜರೂರಿಯ ಭಾವದಿಂದ ಸೇವೆಮಾಡುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜರೂರಿಯ ಭಾವದಿಂದ ಸೇವೆಮಾಡುವುದು
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯುದ್ಧಕಾಲದ ತರಬೇತು
  • ಜೀವನೋದ್ಯೋಗದ ಆರಂಭ
  • ಒಬ್ಬ ನೆಚ್ಚಿನ ಸಹಕಾರಿಣಿ
  • ಇಂಡೊನೇಷ್ಯದಲ್ಲಿ ಮಿಷನೆರಿ ಸೇವೆ
  • ಕ್ಷಿಪ್ರಾಕ್ರಮಣದ ಮಧ್ಯೆ
  • ಅಧಿಕ ವಿರೋಧವು ಸೋಲಿಸಲ್ಪಟ್ಟಿತು
  • ದಕ್ಷಿಣ ಅಮೆರಿಕಕ್ಕೆ
  • ಯೆಹೋವನು ನನ್ನೊಡನೆ ಇರುವವನಾಗಿ ಪರಿಣಮಿಸಿದನು
    ಕಾವಲಿನಬುರುಜು—1996
  • ಯೆಹೋವನು ತನ್ನ ಚಿತ್ತವನ್ನು ಮಾಡುವಂತೆ ನನಗೆ ಕಲಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಿಜಸ್ಥಿತಿಯು ನನ್ನ ನಿರೀಕ್ಷಣೆಗಳನ್ನು ಮೀರಿಸಿದೆ
    ಎಚ್ಚರ!—1999
  • ದೇವರಿಗೆ ಮೆಚ್ಚುಗೆಯಾಗುವಂತಹ ಸಂಗೀತ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು—1993
w93 11/1 ಪು. 26-30

ಜರೂರಿಯ ಭಾವದಿಂದ ಸೇವೆಮಾಡುವುದು

ಹ್ಯಾನ್ಸ್‌ ಫಾನ್‌ ಫ್ಯೂರರಿಂದ ಹೇಳಲ್ಪಟ್ಟಂತೆ

ಇಸವಿ 1962ರ ಒಂದು ಬೆಳಗಾತ, ನೆದರ್‌ಲೆಂಡ್ಸ್‌ನ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಮೇಲ್ವಿಚಾರಕರಾದ ಪೌಲ್‌ ಕಶ್ನಿರ್‌, ರಾಟೆರ್‌ಡಮ್‌ ರೇವು ಪ್ರಾಂತದಲ್ಲಿ ನನ್ನನ್ನು ಸಂಧಿಸಿದರು. ಮಂದವಾಗಿ ಬೆಳಗಿಸಲ್ಪಟ್ಟ ಉಪಾಹಾರದಂಗಡಿಯೊಂದರಲ್ಲಿ ಮೇಜಿನಾಚೆಯಿಂದ ನನ್ನನ್ನು ನೋಡುತ್ತಾ, ಅವರಂದದ್ದು: “ಹ್ಯಾನ್ಸ್‌, ನೀನು ಈ ನೇಮಕವನ್ನು ಸ್ವೀಕರಿಸಿದರೆ, ನಿನಗೆ ಮತ್ತು ನಿನ್ನ ಪತ್ನಿಗೆ ಪ್ರಯಾಣದ ಹೋಗುವ ಟಿಕೆಟು ಮಾತ್ರವೇ ಸಿಗುವುದೆಂದು ಬಲ್ಲಿಯಲ್ಲವೇ?”

“ಹೌದು, ಸೂಜಿ ಕೂಡ ಅದಕ್ಕೆ ಒಪ್ಪುತ್ತಾಳೆಂದು ನನಗೆ ಖಾತರಿ ಇದೆ.”

“ಒಳ್ಳೇದು, ಸೂಜಿಯೊಂದಿಗೆ ಮಾತಾಡಿ ನೋಡು. ನಿನ್ನ ನಿರ್ಣಯವನ್ನು ಆದಷ್ಟು ಬೇಗನೆ ತಿಳಿಸಿದರೆ ಒಳ್ಳೆಯದಿತ್ತು.”

ಮಾರಣೆಯ ದಿನ ಅವರಿಗೆ ನಮ್ಮ ಉತ್ತರ ಸಿಕ್ಕಿತು: “ನಾವು ಹೋಗುವೆವು.” ಹೀಗೆ ದಶಂಬರ 26, 1962 ರಂದು, ಆ್ಯಮ್‌ಸ್ಟರ್‌ಡಮ್‌ನ ಹಿಮದಿಂದಾವೃತ ಸ್ಕಿಪಾಲ್‌ ವಿಮಾನ ನಿಲ್ದಾಣದಲ್ಲಿ ನಮ್ಮ ಸಂಬಂಧಿಕರನ್ನೂ ಮಿತ್ರರನ್ನೂ ನಾವು ಆಲಿಂಗಿಸಿ, ಸೇವೆಯಾಗದ ಒಂದು ಮಿಷನೆರಿ ಟೆರಿಟೊರಿಯೂ—ಪ್ಯಾಪುವ ಜನರ ದೇಶವೂ—ಆದ ನೆದರ್ಲೆಂಡ್ಸ್‌ ನ್ಯೂ ಗಿನೀ (ಈಗ ಪಶ್ಚಿಮ ಐರಿಯನ್‌, ಇಂಡೋನೇಷ್ಯ)ಗೆ ವಿಮಾನ ಮೂಲಕ ತೆರಳಿದೆವು.

ಈ ಪಂಥಾಹ್ವಾನದ ನೇಮಕವನ್ನು ಸ್ವೀಕರಿಸುವ ಕುರಿತು ನಮಗೇನಾದರೂ ಸಂದೇಹಗಳಿದ್ದವೋ? ನಿಜವಾಗಿ ಇರಲಿಲ್ಲ. ದೇವರ ಚಿತ್ತವನ್ನು ಮಾಡುವುದಕ್ಕೆ ನಾವು ಪೂರ್ಣ ಹೃದಯದಿಂದ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡಿದೆವ್ದು, ಮತ್ತು ಆತನು ನಮ್ಮನ್ನು ಬೆಂಬಲಿಸುವನೆಂದು ನಾವು ಭರವಸೆಯಿಟ್ಟೆವು. ನಮ್ಮ ಜೀವಿತಗಳ ಕುರಿತು ಹಿನ್ನೋಡುವಾಗ, ಯೆಹೋವನಲ್ಲಿ ನಮ್ಮ ಭರವಸೆಯು ಎಂದೂ ಅನುಚಿತವಾಗಿರಲಿಲ್ಲವೆಂದು ನಾವು ಕಾಣಬಲ್ಲೆವು. ಆದರೆ ಇಂಡೊನೇಷ್ಯದಲ್ಲಿ ಏನಾಯಿತೆಂದು ತಿಳಿಸುವ ಮುಂಚಿತವಾಗಿ, ನಮ್ಮ ಆರಂಭದ ವರ್ಷಗಳ ಕುರಿತು ನಿಮಗೆ ತಿಳಿಸುವಂತೆ ಬಿಡಿರಿ.

ಯುದ್ಧಕಾಲದ ತರಬೇತು

ನನ್ನ ಕುಟುಂಬವು 1940 ರಲ್ಲಿ ಆ ಧೀರ ಸಾಕ್ಷಿ ಆರ್ಥರ್‌ ವಿಂಕ್ಲರ್‌ರಿಂದ ಭೇಟಿ ಮಾಡಲ್ಪಟ್ಟಾಗ, ನಾನು ಕೇವಲ ಹತ್ತು ವರ್ಷದವನು. ಕ್ರೈಸ್ತಪ್ರಪಂಚದ ಸುಳ್ಳು ಬೋಧನೆಗಳ ಕುರಿತು ಬೈಬಲಿಗೆ ಹೇಳಲಿಕ್ಕಿದದ್ದನ್ನು ತಿಳಿದಾಗ ನನ್ನ ಹೆತ್ತವರಿಗೆ ಧಕ್ಕೆಬಡಿಯಿತು. ಆಗ ನೆದರ್ಲೆಂಡ್ಸ್‌ ನಾಜೀ ಜರ್ಮನಿಯಿಂದ ಆಕ್ರಮಿಸಲ್ಪಟ್ಟಿದದ್ದರಿಂದ ಮತ್ತು ಯೆಹೋವನ ಸಾಕ್ಷಿಗಳು ಹಿಂಸಿಸಲ್ಪಡುತ್ತಿದ್ದದರಿಂದ, ನಿಷೇಧಿಸಲ್ಪಟ್ಟ ಒಂದು ಸಂಸ್ಥೆಯ ಸಹವಾಸ ಮಾಡುವ ವಿಷಯದಲ್ಲಿ ನನ್ನ ಹೆತ್ತವರು ನಿರ್ಣಯಿಸಬೇಕಿತ್ತು. ಅವರು ಸಹವಾಸ ಮಾಡಲು ನಿರ್ಣಯಿಸಿದರು.

ತದನಂತರ, ನನ್ನ ತಾಯಿಯ ಧೈರ್ಯ ಹಾಗೂ ಸ್ವಾತಂತ್ರ್ಯವನ್ನು ಮತ್ತು ಜೀವವನ್ನು ಸಹ ಕಳಕೊಳ್ಳಲು ಅವರಿಗಿದ್ದ ಸಿದ್ಧಮನಸ್ಸು ನನ್ನನ್ನು ಬಹಳವಾಗಿ ಪ್ರಭಾವಿಸಿತು. ಒಮ್ಮೆ ಅವರು 11 ಕಿಲೊಮೀಟರ್‌ ದೂರ ಸೈಕಲ್‌ ಸವಾರಿಮಾಡಿ, ಬೈಬಲ್‌ ಕಿರುಹೊತ್ತಗೆಗಳಿಂದ ತುಂಬಿದ್ದ ಚೀಲದೊಂದಿಗೆ ಕತ್ತಲೆಯಲ್ಲಿ ಕಾದು ನಿಂತರು. ಒಂದು ವಿಶೇಷ ಚಟುವಟಿಕೆಯ ಪ್ರಾರಂಭಕ್ಕೆ ನಿಯಮಿತ ಸಮಯ ಬಂದಾಗ, ತನಗಾದಷ್ಟು ವೇಗದಿಂದ ಸೈಕಲು ನಡಿಸುತ್ತಾ, ಕ್ರಮವಾಗಿ ತನ್ನ ಚೀಲದೊಳಗೆ ಕೈಅದ್ದಿ ಕಿರುಹೊತ್ತಗೆಗಳನ್ನು ಬೀದಿಯಲ್ಲಿ ಹರಡಿಸುತ್ತಿದ್ದರು. ಬೆಂಬತ್ತಿ ಬರುತ್ತಿದ್ದ ಸೈಕಲಿನವನೊಬ್ಬನು ಕಟ್ಟಕಡೆಗೆ ಅವರ ಸಮಕ್ಕೆ ಬಂದು ಮೇಲುಸಿರುಬಿಡುತ್ತಾ ಅಂದದ್ದು: “ಹೆಂಗಸೇ, ಹೆಂಗಸೇ, ನಿಮ್ಮದೇನೋ ವಸ್ತು ಕಳೆದು ಹೋಗುತ್ತಾ ಇದೆ!” ತಾಯಿ ಈ ಕಥೆಯನ್ನು ನಮಗೆ ಹೇಳಿದಾಗ ನಮಗೆ ನಗೆ ತಡೆಯಲಾಗಲಿಲ್ಲ.

ನಾನು ಬಹಳ ಚಿಕ್ಕವನಾಗಿದ್ದೆ ಆದರೆ, ನನ್ನ ಜೀವಿತದೊಂದಿಗೆ ಏನು ಮಾಡಬಯಸುತ್ತೇನೆಂದು ನಾನು ತಿಳಿದಿದ್ದೆ. ಇಸವಿ 1942ರ ಮಧ್ಯೆ ನಮ್ಮ ಕೂಟವೊಂದರಲ್ಲಿ, “ಮುಂದಿನ ಸಾರಿ ಯಾರು ದೀಕ್ಷಾಸ್ನಾನವಾಗ ಬಯಸುತ್ತೀರಿ?” ಎಂದು ಕೇಳಿದಾಗ ನಾನು ಕೈ ಎತ್ತಿದೆ. ಅಂಥ ಒಂದು ನಿರ್ಣಯದ ಮಹತ್ವವು ನನಗೆ ತಿಳಿದಿದೆಯೋ ಎಂದು ಸಂದೇಹಿಸುತ್ತಾ, ನನ್ನ ಹೆತ್ತವರು ಚಿಂತೆಯ ನಸುನೋಟಗಳನ್ನು ಬೀರಿದರು. ಆದರೆ ನಾನು ಕೇವಲ ಹನ್ನೆರಡು ವಯಸ್ಸಿನವನಾಗಿದ್ದಾಗ್ಯೂ, ದೇವರಿಗೆ ಸಮರ್ಪಣೆಯ ಅರ್ಥವೇನೆಂದು ನನಗೆ ತಿಳಿದಿತ್ತು.

ನಾಜೀಗಳು ನಮ್ಮನ್ನು ಬೆನ್ನಟ್ಟಿಕೊಂಡಿದ್ದಾಗ ಮನೆ ಮನೆಯ ಸಾರುವಿಕೆಯು ಎಚ್ಚರಿಕೆಗೆ ಕರೆಗೊಟ್ಟಿತು. ನಮ್ಮನ್ನು ಹಿಡುಕೊಡಬಹುದಾದವರ ಮನೆಗಳನ್ನು ಸಂದರ್ಶಿಸುವುದರಿಂದ ದೂರವಿರಲು, ನಾಜೀಗಳಿಗೆ ಅನುಕಂಪ ತೋರಿಸುವವರು ತಮ್ಮ ಕಿಟಿಕಿಗಳಿಗೆ ಪ್ರಕಟನೆಯ ಚೀಟಿಗಳನ್ನು ಹಚ್ಚಿದ ದಿನಗಳಲ್ಲಿ, ನಾನು ಸೈಕಲಲ್ಲಿ ಸುತ್ತಾಡಿ ಅವರ ವಿಳಾಸಗಳನ್ನು ಬರೆದುಕೊಳ್ಳುತ್ತಿದ್ದೆ. ಒಮ್ಮೆ ಒಬ್ಬ ಪುರುಷನು ನನ್ನನ್ನು ಗಮನಿಸಿ, ಕೂಗಿ ಹೇಳಿದ್ದು: “ಶಹಭಾಸ್‌, ಹುಡುಗ. ಹೆಸರು ಬರೆದುಕೋ—ಅವರೆಲ್ಲರದ್ದನ್ನು!” ನಾನು ಉತ್ಸುಕನಾಗಿದ್ದೆ ಆದರೆ, ಸಾಕಷ್ಟು ವಿವೇಕಯುತನಿರಲಿಲ್ಲವೆಂಬುದು ಸ್ಫುಟ! ಇಸವಿ 1945 ರಲ್ಲಿ ಯುದ್ಧವು ಕೊನೆಗೊಂಡಾಗ, ಸಾರಲು ಹೆಚ್ಚು ಸ್ವಾತಂತ್ರ್ಯದ ಪ್ರತೀಕ್ಷೆಯಲ್ಲಿ ನಾವು ಉಲ್ಲಾಸಿಸಿದೆವು.

ಜೀವನೋದ್ಯೋಗದ ಆರಂಭ

ನವಂಬರ 1, 1948 ರಲ್ಲಿ, ನನ್ನ ಶಾಲಾ ಶಿಕ್ಷಣ ಮುಗಿಸಿದ ಮೇಲೆ, ಪಯನೀಯರನಾಗಿ ನನ್ನ ಮೊದಲನೆಯ ಪೂರ್ಣಸಮಯದ ಸಾರುವ ನೇಮಕವು ನನಗೆ ದೊರಕಿತು. ಒಂದು ತಿಂಗಳ ತರುವಾಯ ಸಹೋದರ ವಿಂಕ್ಲರ್‌ ನಾನು ಉಳುಕೊಳ್ಳುತ್ತಿದ್ದ ಕುಟುಂಬವನ್ನು ಸಂದರ್ಶಿಸಿದರು. ನಾನು ಎಂಥವನೆಂದು ನಿಶ್ಚಯಿಸಿಕೊಳ್ಳಲು ಅವರು ಬಂದಿರಬೇಕು ಯಾಕಂದರೆ ಅನಂತರ ಕೂಡಲೆ ಸೊಸೈಟಿಯ ಆ್ಯಮ್‌ಸ್ಟರ್‌ಡಮ್‌ ಬ್ರಾಂಚ್‌ ಅಫೀಸಿನಲ್ಲಿ ಕೆಲಸಮಾಡಲು ನಾನು ಆಮಂತ್ರಿಸಲ್ಪಟ್ಟೆನು.

ತದನಂತರ, ಸರ್ಕಿಟ್‌ ಮೇಲ್ವಿಚಾರಕನಾಗಿ ಯೆಹೋವನ ಸಾಕ್ಷಿಗಳ ಸಭೆಗಳನ್ನು ಸಂದರ್ಶಿಸುವಂತೆ ನನ್ನನ್ನು ಕೇಳಲಾಯಿತು. ಆಮೇಲೆ, 1952ರ ಶರತ್ಕಾಲದಲ್ಲಿ, ಮಿಷನೆರಿ ತರಬೇತನ್ನು ಪಡೆಯುವುದಕ್ಕಾಗಿ ನ್ಯೂ ಯಾರ್ಕ್‌ನಲ್ಲಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಾದ್‌ನ 21 ನೆಯ ತರಗತಿಗೆ ಹಾಜರಾಗಲು ನನಗೆ ಆಮಂತ್ರಣ ಸಿಕ್ಕಿತು. ಹೀಗೆ 1952ರ ಕೊನೆಯಲ್ಲಿ, ನೆದರ್ಲೆಂಡ್ಸ್‌ನಿಂದ ನಾವು ಎಂಟು ಮಂದಿ ನ್ಯೂ ಆ್ಯಮ್‌ಸ್ಟರ್‌ಡಮ್‌ ಹಡಗನ್ನು ಹತ್ತಿ ಅಮೆರಿಕಕ್ಕೆ ಸಮುದ್ರ ಯಾನ ಮಾಡಿದೆವು.

ಗಿಲ್ಯಾದ್‌ ಶಾಲಾ ವ್ಯಾಸಂಗದ ಕೊನೆಯಲ್ಲಿ, ಉಪದೇಶಕರಲ್ಲಿ ಒಬ್ಬರಾದ ಮ್ಯಾಕ್ಸ್‌ವೆಲ್‌ ಫ್ರೆಂಡ್‌ ಅಂದದ್ದು: “ಇಲ್ಲಿ ಕಲಿತ ಹೆಚ್ಚಿನ ವಿಷಯಗಳನ್ನು ನೀವು ಮರೆತುಬಿಡುವಿರಿ, ಆದರೆ ಮೂರು ವಿಷಯಗಳು, ನಂಬಿಕೆ, ನಿರೀಕ್ಷೆ, ಮತ್ತು ಪ್ರೀತಿಯು ನಿಮ್ಮೊಂದಿಗೆ ಉಳಿಯುವುದೆಂದು ನಾವು ನಿರೀಕ್ಷಿಸುತ್ತೇವೆ.” ಅಲ್ಲದೆ, ಯೆಹೋವನ ಸಂಸ್ಥೆಯು ಜರೂರಿಯ ಭಾವದಿಂದ ಕೆಲಸಮಾಡುತ್ತಿರುವ ಅಮೂಲ್ಯ ಸ್ಮರಣೆಗಳು ನನ್ನ ಮನಸ್ಸು ಮತ್ತು ಹೃದಯದಲ್ಲಿ ಸಂಚಯಗೊಂಡಿವೆ.

ಆಮೇಲೆ ನಾನೊಂದು ದೊಡ್ಡ ಆಶಾಭಂಗವನ್ನು ಪಡೆದೆ. ನಮ್ಮ ಡಚ್‌ ಗುಂಪಿನ ಅರ್ಧದಷ್ಟು ಮಂದಿ—ನಾನು ಸಹ ಸೇರಿ—ನೆದರ್ಲೆಂಡ್ಸ್‌ಗೆ ಹಿಂದೆ ಹೋಗಲು ನೇಮಿತರಾದೆವು. ನಿರಾಶೆಗೊಂಡರೂ, ನಾನು ಮನಕಲಕಲಿಲ್ಲ. ಪುರಾತನ ಮೋಶೆಯಂತೆ, ಒಂದು ವಿದೇಶೀ ನೇಮಕವನ್ನು ಪಡೆಯುವ ಮುಂಚೆ ನನಗೆ ನಾಲ್ವತ್ತು ವರ್ಷ ಕಾಯಲಿಕ್ಕೆ ಇರಲಿಕ್ಕಿಲವ್ಲೆಂದು ನಿರೀಕ್ಷಿಸಿದೆ ಮಾತ್ರ.—ಅ. ಕೃತ್ಯಗಳು 7:23-30.

ಒಬ್ಬ ನೆಚ್ಚಿನ ಸಹಕಾರಿಣಿ

ನನ್ನ ವಿವಾಹದ ಯೋಜನೆಗಳ ಕುರಿತು ನನ್ನ ಪಿತಸದೃಶ ಮಿತ್ರರಾದ ಫ್ರಿಟ್ಸ್‌ ಹಾರ್ಟ್‌ಸ್ಟೆಂಗ್‌ಗೆ ತಿಳಿದುಬಂದಾಗ, “ಇದಕ್ಕಿಂತ ಉತ್ತಮ ಆಯ್ಕೆ ಯನ್ನು ನಾನು ನೆನಸಲಾರೆ” ಎಂದರವರು ಗುಟ್ಟಾಗಿ. ಸೂಜಿಯ ತಂದೆ, ಕ್ಯಾಸಿ ಸ್ಟೂವ್‌, ಎರಡನೆಯ ಲೋಕ ಯುದ್ಧದ ಸಮಯದಲ್ಲಿ ನಾಜೀಗಳ ವಿರುದ್ಧ ಪ್ರತಿಭಟನೆಯಲ್ಲಿ ಮುಖ್ಯ ಹೋರಾಟಗಾರರಾಗಿದ್ದರು. ಆದರೆ 1946 ರಲ್ಲಿ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟಾಗ, ಅವರು ಒಡನೇ ಬೈಬಲ್‌ ಸತ್ಯಗಳನ್ನು ಸ್ವೀಕರಿಸಿದರು. ಸ್ವಲ್ಪ ಸಮಯದಲ್ಲೇ ಅವರು ಮತ್ತು ಅವರ ಆರು ಮಕ್ಕಳಲ್ಲಿ ಮೂವರು—ಸೂಜಿ, ಮೆರಿಯನ್‌, ಮತ್ತು ಕೆನೆತ್‌ ದೀಕ್ಷಾಸ್ನಾನ ಪಡಕೊಂಡರು. ಮೇ 1, 1947 ರಲ್ಲಿ, ಈ ಮಕ್ಕಳೆಲ್ಲರೂ ಪಯನೀಯರರಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರಾರಂಭಿಸಿದರು. ಕ್ಯಾಸಿ ತನ್ನ ವ್ಯಾಪಾರವನ್ನು 1948 ರಲ್ಲಿ ಮಾರಿ, ತಾನೂ ಪಯನೀಯರಿಂಗ್‌ ಆರಂಭಿಸಿದರು. “ಆ ವರ್ಷಗಳು ನನ್ನ ಜೀವಿತದ ಅತ್ಯಂತ ಸಂತೋಷದವುಗಳು!” ಎಂದರವರು ಅನಂತರ.

ಇಸವಿ 1949 ರಲ್ಲಿ, ಆ್ಯಮ್‌ಸ್ಟರ್‌ಡಮ್‌ ಬ್ರಾಂಚ್‌ನಲ್ಲಿ ಕೆಲಸಮಾಡಲು ಅವಳು ಆಮಂತ್ರಿಸಲ್ಪಟ್ಟಾಗ, ನನಗೆ ಸೂಜಿಯ ಪರಿಚಯವಾಯಿತು. ಆದರೆ ಮರುವರ್ಷ ಅವಳು ಮತ್ತು ಅವಳ ತಂಗಿ ಮೆರಿಯನ್‌ ಗಿಲ್ಯಾದ್‌ನ 16 ನೆಯ ತರಗತಿಗೆ ಹಾಜರಾಗಿ, ತಮ್ಮ ಮಿಷನೆರಿ ನೇಮಕವಾದ—ಇಂಡೊನೇಷ್ಯಕ್ಕೆ ಹಡಗು ಪಯಣ ಮಾಡಿದರು. ಅಲ್ಲಿ ಐದು ವರ್ಷಗಳ ಮಿಷನೆರಿ ಸೇವೆಯ ಅನಂತರ, ಫೆಬ್ರವರಿ 1957 ರಲ್ಲಿ, ನನ್ನನ್ನು ಮದುವೆಯಾಗಲು ಸೂಜಿ ನೆದರ್ಲೆಂಡ್ಸ್‌ಗೆ ಹಿಂತಿರುಗಿದಳು. ಆ ಸಮಯದಲ್ಲಿ ನಾನು ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದೆ, ಮತ್ತು ನಮ್ಮ ದಾಂಪತ್ಯದ ವರ್ಷಗಳಲ್ಲೆಲ್ಲಾ, ಅನೇಕ ಸಲ ಆಕೆಯು ರಾಜ್ಯ ಸೇವೆಗಾಗಿ ವೈಯಕ್ತಿಕ ತ್ಯಾಗಗಳನ್ನು ಮಾಡಲು ಸಿದ್ಧಮನಸ್ಸನ್ನು ತೋರಿಸಿರುತ್ತಾಳೆ.

ನಮ್ಮ ವಿವಾಹದ ಅನಂತರ, ನೆದರ್ಲೆಂಡ್ಸ್‌ನ ವಿವಿಧ ಭಾಗಗಳಲ್ಲಿ ನಾವು ಸಭೆಗಳನ್ನು ಸಂದರ್ಶಿಸುವುದನ್ನು ಮುಂದುವರಿಸಿದೆವು. ಕಷ್ಟದ ನೇಮಕಗಳಲ್ಲಿ ಸೂಜಿಯ ಮಿಷನೆರಿ ಸೇವಾ ವರುಷಗಳು, ಒಂದು ಸಭೆಯಿಂದ ಇನ್ನೊಂದು ಸಭೆಗೆ ನಮ್ಮ ಸೈಕಲ್‌ ಪ್ರಯಾಣಗಳಿಗಾಗಿ ಆಕೆಯನ್ನು ಚೆನ್ನಾಗಿ ತಯಾರುಗೊಳಿಸಿದ್ದವು. ರಾಟೆರ್‌ಡಮ್‌ನಲ್ಲಿ ಸಹೋದರ ಕಶ್ನಿರ್‌ ಬಂದು ನನ್ನನ್ನು ಭೇಟಿಯಾಗಿ ಪಶ್ಚಿಮ ಐರಿಯನ್‌, ಇಂಡೊನೇಷ್ಯಕ್ಕೆ ಹೋಗುವಂತೆ ಆಮಂತ್ರಿಸಿದ್ದು ನಾವು 1962 ರಲ್ಲಿ ಸರ್ಕಿಟ್‌ ಸೇವೆಯಲ್ಲಿರುವಾಗಲೇ.

ಇಂಡೊನೇಷ್ಯದಲ್ಲಿ ಮಿಷನೆರಿ ಸೇವೆ

ನಾವು ಮನಕರ್ವಿ ಶಹರದಲ್ಲಿ—ಒಂದು ಸಂಪೂರ್ಣ ಬೇರೆಯಾದ ಜಗತ್ತಿಗೆ—ಆಗಮಿಸಿದೆವು! ಉಷ್ಣವಲಯದ ರಾತ್ರಿಗಳ ಭಯಹುಟ್ಟಿಸುವ ಸದ್ದುಗಳು, ಸೆಕೆ ಮತ್ತು ಧೂಳು ಅಲ್ಲಿದ್ದವು. ಮತ್ತು ಮಚ್ಚುಕತ್ತಿಗಳನ್ನು ಹಿಡುಕೊಂಡು, ಕೇವಲ ತುಂಡುದಟ್ಟಿಯನ್ನು ಧರಿಸಿದ ಒಳನಾಡಿನ ಪ್ಯಾಪುವ ನಾಡಿಗರಿದ್ದರು, ಅವರು ನಮ್ಮ ಹಿಂದಿನಿಂದಲೇ ನಡಕೊಂಡು ಬಂದು, ನಮ್ಮ ಶೇತ್ವ ಚರ್ಮವನ್ನು ಮುಟ್ಟಿನೋಡಲು ಇಷ್ಟಪಡುತ್ತಿದ್ದರು—ಇವೆಲ್ಲವನ್ನು ರೂಢಿಯಾಗಿ ಮಾಡಲು ಅಷ್ಟು ಸುಲಭವಾಗಿರಲಿಲ್ಲ.

ನಮ್ಮ ಆಗಮನದ ವಾರಗಳೊಳಗೆ, ವೈದಿಕರು ಚರ್ಚ್‌ ಪೀಠಗಳಿಂದ ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಎಚ್ಚರಿಸುತ್ತಾ ಒಂದು ಪತ್ರವನ್ನು ಓದಿದರು, ಮತ್ತು ಹಾಜರಾಗಿರುವ ಎಲ್ಲರಿಗೆ ಅದರ ಒಂದು ಪ್ರತಿಯನ್ನು ನೀಡಿದರು. ಸ್ಥಳಿಕ ರೇಡಿಯೊ ಸೇಷ್ಟನ್‌ ಆ ಪತ್ರದ ಪ್ರಸಾರವನ್ನು ಸಹ ಮಾಡಿತು. ಅನಂತರ ಮೂವರು ವೈದಿಕರು ನಮ್ಮನ್ನು ಸಂದರ್ಶಿಸಿ, ಯಾರನ್ನು ಅವರು “ವಿಧರ್ಮಿ” ಗಳೆಂದು ಕರೆದರೋ ಅವರ ನಡುವೆ, ಒಳನಾಡಿಗೆ ಹೋಗಿ ಕೆಲಸಮಾಡುವಂತೆ ನಮ್ಮನ್ನು ನಿರ್ಬಂಧಿಸಿದರು. ಒಬ್ಬ ಉಚ್ಚ-ಪದದ ಪ್ಯಾಪುವ ಪೊಲೀಸ್‌ ಆಫೀಸರನು ಸಹ ನಾವು ಅಲ್ಲಿಂದ ಹೊರಡುವಂತೆ ಒತ್ತಾಯಿಸಿದನು, ಮತ್ತು ನಮ್ಮ ಕೊಲೆಯು ಯೋಜಿಸಲ್ಪಡುತ್ತಿದೆಯೆಂದು ಗುಪ್ತ ಪೊಲೀಸ್‌ ಸದಸ್ಯನೊಬ್ಬನು ನಮಗಂದನು.

ಆದರೂ, ಪ್ರತಿಯೊಬ್ಬನೂ ನಮ್ಮನ್ನು ವಿರೋಧಿಸಿರಲಿಲ್ಲ. ಪ್ಯಾಪುವದವರ ರಾಜಕೀಯ ಸಲಹೆಗಾರನಾಗಿದ್ದ ಮತ್ತು ನೆದರ್ಲೆಂಡ್ಸ್‌ಗೆ ಆಗಲೇ ತೆರಳಲಿಕ್ಕಿದ್ದ ಒಬ್ಬ ಡಚ್‌ ನಾಡಿಗನು ನಮ್ಮನ್ನು ಹಲವಾರು ಪ್ಯಾಪುವ ಮುಖ್ಯಸ್ಥರಿಗೆ ಪರಿಚಯ ಮಾಡಿಸಿದನು. “ಯೆಹೋವನ ಸಾಕ್ಷಿಗಳು ನಿಮಗೆ ತಿಳಿದಿರುವುದಕ್ಕಿಂತಲೂ ಉತ್ತಮ ತರದ ಕ್ರೈಸ್ತ ಧರ್ಮವನ್ನು ತರಲಿರುವರು” ಎಂದನು ಅವನು ಅವರಿಗೆ. “ಆದುದರಿಂದ ನೀವು ಅವರನ್ನು ಸ್ವಾಗತಿಸಬೇಕು.”

ತದನಂತರ, ಒಬ್ಬ ಸರಕಾರಿ ಅಧಿಕಾರಿಯು ಸೂಜಿಯನ್ನು ದಾರಿಯಲ್ಲಿ ಗೋಚರಿಸಿ, “ನೀವೊಂದು ಹೊಸ ಕೆಲಸವನ್ನು ಆರಂಭಿಸಿದೀರ್ದೆಂದು ನಮಗೆ ವರದಿಯಾಗಿದೆ, ಆದುದರಿಂದ ನಾವು ನಿಮ್ಮನ್ನು ಇಲ್ಲಿ ಇರಗೊಡಿಸಲಾರೆವು. ಆದರೆ, ಅಹ್‌, . . . ನಿಮಗೊಂದು ಚರ್ಚ್‌ ಇದ್ದದ್ದಾದರೆ ಮಾತ್ರ,” ಎಂದು ಪಿಸುಗುಟ್ಟಿದನು. ಒಂದು ಸೂಕ್ಷ್ಮ ಸೂಚನೆ! ಕೂಡಲೆ ನಾವು ನಮ್ಮ ಮನೆಯ ಗೋಡೆಗಳನ್ನು ಬೀಳಿಸಿ, ಬೆಂಚುಗಳನ್ನು ಸಾಲಾಗಿ ಇಟ್ಟು, ಭಾಷಣಕರ್ತನ ವೇದಿಕೆಯನ್ನು ನಿಲ್ಲಿಸಿದೆವು, ಮತ್ತು “ರಾಜ್ಯ ಸಭಾಗೃಹ” ಎಂದು ಓದುವ ಗುರುತು ಹಲಗೆಯನ್ನು ಎದುರುಗಡೆ ಹಾಕಿದೆವು. ಅನಂತರ ಆ ಅಧಿಕಾರಿಯನ್ನು ಸಂದರ್ಶಿಸುವಂತೆ ಆಮಂತ್ರಿಸಿದೆವು. ಅವನು ತಲೆದೂಗಿದನು, ನಸುನಕ್ಕನು, ‘ಗಟ್ಟಿಗರು, ಗಟ್ಟಿಗರು’ ಎನ್ನಲೋ ಎಂಬಂತೆ, ತನ್ನ ತೋರ್ಬೆರಳಿಂದ ತನ್ನ ತಲೆಯ ಪಕ್ಕವನ್ನು ಟಪ ಟಪನೆ ತಟ್ಟಿದನು.

ನಮ್ಮ ಆಗಮನದ ಒಂದೂವರೆ ವರ್ಷದ ಬಳಿಕ, ಜೂನ್‌ 26, 1964 ರಲ್ಲಿ, ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಮೊದಲನೆಯ 12 ಮಂದಿ ಪ್ಯಾಪುವ ನಾಡಿಗರು ದೀಕ್ಷಾಸ್ನಾನ ಪಡಕೊಂಡರು. ಸ್ವಲ್ಪದರಲ್ಲಿಯೇ ಇನ್ನು ಹತ್ತು ಮಂದಿ ಹಿಂಬಾಲಿಸಿದರು, ಮತ್ತು ನಮ್ಮ ಕೂಟದ ಸರಾಸರಿ 40 ಆಯಿತು. ಇಬ್ಬರು ಇಂಡೊನೇಷ್ಯ ಪಯನೀಯರರನ್ನು ನಮ್ಮ ಸಹಾಯಕ್ಕಾಗಿ ಕಳುಹಿಸಲಾಯಿತು. ಮನಕರ್ವಿಯಲ್ಲಿ ಸಭೆಯು ಚೆನ್ನಾಗಿ ಸ್ಥಾಪನೆಗೊಂಡಾಗ, ಸೊಸೈಟಿಯ ಇಂಡೊನೇಷ್ಯ ಬ್ರಾಂಚ್‌ ನಮಗೆ ದಶಂಬರ 1964 ರಲ್ಲಿ ಇನ್ನೊಂದು ಸಾರುವ ನೇಮಕವನ್ನು ಕೊಟ್ಟಿತು.

ನಾವು ಹೊರಡುವ ಮುಂಚೆ, ಸರಕಾರದ ಸಾರ್ವಜನಿಕ ಸಂಬಂಧಗಳ ಮುಖ್ಯಸ್ಥನು ನಮ್ಮೊಂದಿಗೆ ಖಾಸಗಿಯಾಗಿ ಮಾತಾಡುತ್ತಾ ಅಂದದ್ದು: “ನೀವು ಹೋಗುವುದನ್ನು ನಾನು ವಿಷಾಧಿಸುತ್ತೇನೆ. ಪ್ರತಿ ವಾರ ವೈದಿಕರು ನಿಮ್ಮನ್ನು ಕಳುಹಿಸಿಬಿಡುವಂತೆ ನನ್ನೊಂದಿಗೆ ಬೇಡಿಕೊಳ್ಳುತ್ತಿದ್ದರು ಯಾಕಂದರೆ ನೀವು ಅವರ ಫಲಗಳನ್ನು ಕದಿಯುತ್ತಿದ್ದೀರೆಂದು ಅವರು ಹೇಳಿದರು. ಆದರೆ ನಾನವರಿಗೆ ಅಂದದ್ದು: “ಇಲ್ಲ, ಬದಲಿಗೆ, ಅವರು ನಿಮ್ಮ ಮರಗಳನ್ನು ಫಲವತ್ತಾಗಿ ಮಾಡುತ್ತಿದ್ದಾರೆ.” ಅವನು ಕೂಡಿಸಿದ್ದು: “ಎಲ್ಲಿ ಹೋದರೂ, ಹೋರಾಟ ಮುಂದರಿಸಿರಿ. ನೀವು ಜಯಿಸುವಿರಿ!”

ಕ್ಷಿಪ್ರಾಕ್ರಮಣದ ಮಧ್ಯೆ

ಸಪ್ಟಂಬರ 1965ರ ಒಂದು ರಾತ್ರಿಯಲ್ಲಿ, ರಾಜಧಾನಿ ಜಕಾರ್ಟದಲ್ಲಿ ನಾವು ಸೇವೆ ಮಾಡುತ್ತಿದ್ದಾಗ, ಕಮ್ಯೂನಿಸ್ಟ್‌ ದಂಗೆಖೋರರು ಅನೇಕ ಮಿಲಿಟರಿ ಮುಖಂಡರನ್ನು ಕೊಂದರು, ಜಕಾರ್ಟಕ್ಕೆ ಬೆಂಕಿ ಹಚ್ಚಿದರು, ಮತ್ತು ಕಟ್ಟಕಡೆಗೆ ರಾಷ್ಟ್ರದ ಅಧ್ಯಕ್ಷರಾದ ಸುಕಾರ್ನೊರನ್ನು ಉರುಳಿಸಿಬಿಟ್ಟ ಒಂದು ದೇಶವ್ಯಾಪಕ ಹೋರಾಟವನ್ನು ಆರಂಭಿಸಿದರು. ಸುಮಾರು 4,00,000 ಮಂದಿ ಪ್ರಾಣನಷ್ಟಪಟ್ಟರು!

ಒಮ್ಮೆ ನಾವು ಸಾರುತ್ತಿದ್ದಾಗ ಮುಂದಿನ ರಸ್ತೆಯಲ್ಲಿ ಗುಂಡು ಹೊಡೆತಗಳು ಮತ್ತು ಬೆಂಕಿಹಚ್ಚುವಿಕೆ ನಡೆಯುತ್ತಿದ್ದವು. ಮಾರಣೆಯ ದಿನ, ಸಮೀಪದ ಕಮ್ಯೂನಿಸ್ಟ್‌ ಸೌಕರ್ಯವನ್ನು ಮಿಲಿಟರಿ ಆಗಲೇ ನಾಶಮಾಡಲಿದೆಯೆಂದು ನಮಗೆ ತಿಳಿಯಿತು. ಮನೆಯವರನ್ನು ನಾವು ಗೋಚರಿಸಿದಾಗ ಅವರು ಹೆದರಿದವರಾಗಿ ಕಂಡುಬಂದರು, ಆದರೆ ನಮ್ಮ ಬೈಬಲ್‌ ಸಂದೇಶವನ್ನು ಅವರು ಕೇಳಿದಾಗ, ಅವರ ಬಿಗುಪು ತಗ್ಗಿತು ಮತ್ತು ನಮ್ಮನ್ನು ಒಳಗೆ ಕರೆದರು. ನಾವು ಅವರೊಂದಿಗಿರುವುದು ಅವರಿಗೆ ಸುರಕ್ಷೆಯೆನಿಸಿತು. ಆ ಅವಧಿಯು ನಮಗೆಲ್ಲರಿಗೆ ಯೆಹೋವನೊಂದಿಗೆ ಆತುಕೊಂಡಿರಲು ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಸಮತೆಯನ್ನಿಡಲು ಕಲಿಸಿತು.

ಅಧಿಕ ವಿರೋಧವು ಸೋಲಿಸಲ್ಪಟ್ಟಿತು

ಇಸವಿ 1966ರ ಕೊನೆಯಲ್ಲಿ, ದಕ್ಷಿಣದ ಚಿತ್ರಮಯ ಮೊಲುಕ್ಕ ದ್ವೀಪಗಳಲ್ಲಿನ ಎಂಬನ್‌ ಶಹರಕ್ಕೆ ನಾವು ಸ್ಥಳಬದಲಾಯಿಸಿದೆವು. ಅಲ್ಲಿ ಸ್ನೇಹಪರರಾದ, ಸಹಾಯಶೀಲ ಜನತೆಯ ನಡುವೆ ಹೆಚ್ಚು ಆತ್ಮಿಕಾಸಕ್ತಿಯನ್ನು ನಾವು ಕಂಡುಕೊಂಡೆವು. ನಮ್ಮ ಚಿಕ್ಕ ಸಭೆಯು ಬೇಗನೆ ಬೆಳೆಯಿತು, ಮತ್ತು ಕೂಟದ ಹಾಜರಿಯು ನೂರಕ್ಕೆ ಸಮೀಪಿಸಿತು. ಆದುದರಿಂದ, ಕ್ರೈಸ್ತಪ್ರಪಂಚದ ಚರ್ಚ್‌ ಅಧಿಕಾರಿಗಳು ಧಾರ್ಮಿಕ ಕಾರ್ಯಕಲಾಪಗಳ ಆಫೀಸನ್ನು ಸಂದರ್ಶಿಸಿ, ನಮ್ಮನ್ನು ಎಂಬನ್‌ನಿಂದ ಹೊರಡಿಸಿಬಿಡುವಂತೆ ಅದರ ಮುಖ್ಯಸ್ಥನಿಗೆ ಒತ್ತಡ ಹಾಕಿದರು. ಆದರೆ ಅಲ್ಲಿ ಮುಖ್ಯಸ್ಥನ ಡೆಸ್ಕಿನ ಮೇಲೆಯೇ ವಾಚ್‌ ಟವರ್‌ ಸೊಸೈಟಿಯ ಪುಸ್ತಕಗಳು ಗಮನಸೆಳೆಯುವಂತೆ ಪ್ರದರ್ಶಿಸಲ್ಪಟ್ಟದ್ದು ಅವರ ಕಣ್ಣಿಗೆ ಬಿತ್ತು! ಮುಖ್ಯಸ್ಥನ ಮನಸ್ಸು ಬದಲಾಯಿಸುವುದರಲ್ಲಿ ಸೋತ ಅವರು, ಜಕಾರ್ಟದಲ್ಲಿ ಸರಕಾರದ ಧಾರ್ಮಿಕ ಖಾತೆಯ ಅಧಿಕಾರಿಗಳನ್ನು ಸಂಪರ್ಕಿಸಿ, ನಮ್ಮನ್ನು ಎಂಬನ್‌ನಿಂದ ಮಾತ್ರವಲ್ಲ ಇಡೀ ಇಂಡೊನೇಷ್ಯದಿಂದಲೇ ಹೊರಗಟ್ಟಲು ಹವಣಿಸಿದರು.

ಈ ಸಾರಿ ಅವರು ಯಶಸ್ವಿಯಾದಂತೆ ಕಂಡರು, ಯಾಕಂದರೆ ಫೆಬ್ರವರಿ 1, 1968 ನಮ್ಮನ್ನು ಹೊರಗಟ್ಟುವ ತಾರೀಖಾಗಿ ಕೊಡಲ್ಪಟ್ಟಿತು. ಆದರೂ, ಜಕಾರ್ಟದ ನಮ್ಮ ಸಹೋದರರು ಧಾರ್ಮಿಕ ಖಾತೆಯಲ್ಲಿನ ಒಬ್ಬ ಉಚ್ಚ ಮುಸ್ಲಿಂ ಅಧಿಕಾರಿಯನ್ನು ಸಂಪರ್ಕಿಸಿದರು ಮತ್ತು ಅವನು ಆ ನಿರ್ಣಯವನ್ನು ವಿಪರ್ಯಸ್ತಗೊಳಿಸಲು ಸಹಾಯ ಮಾಡಿದನು. ಅದಲ್ಲದೆ, ಒಂದು ಹಿಂದಣ ಕಾಯಿದೆಯು ಬದಲಾಯಿತು ಮತ್ತು ಇನ್ನೂ ಬೇರೆ ಮಿಷನೆರಿಗಳಿಗೆ ಪ್ರವೇಶವು ನೀಡಲ್ಪಟ್ಟಿತು.

ಹೀಗೆ, ಮುಂದಿನ ಹತ್ತು ವರ್ಷಗಳಲ್ಲಿ, ಉತ್ತರ ಸುಮಾತ್ರದಲ್ಲಿನ ಶೋಭಾಯಮಾನ ಪರ್ವತಗಳು, ಅರಣ್ಯಗಳು, ಮತ್ತು ಕೊಳಗಳ ಹಿನ್ನೆಲೆಯಲ್ಲಿ, ನಾವು ಆಸ್ಟ್ರೇಲಿಯ, ಆಸ್ಟ್ರಿಯ, ಜರ್ಮನಿ, ಫಿಲಿಪ್ಪೀನ್ಸ್‌, ಸ್ವೀಡನ್‌ ಮತ್ತು ಅಮೆರಿಕದ ಮಿಷನೆರಿಗಳೊಂದಿಗೆ ಕೆಲಸಮಾಡಿದೆವು. ಸಾರುವ ಕಾರ್ಯವು, ವಿಶೇಷವಾಗಿ ಪ್ರದೇಶದ ಮುಖ್ಯ ಭಾಷಾ ಗುಂಪಾದ ಬಾಟಕ್‌ನಲ್ಲಿ, ಏಳಿಗೆಯನ್ನು ಹೊಂದಿತು.

ಆದರೂ ಕೊನೆಗೆ 1976 ರಲ್ಲಿ, ನಮ್ಮ ಸಾರುವ ಕಾರ್ಯವನ್ನು ನಿಷೇಧಗೊಳಿಸುವುದರಲ್ಲಿ ಧಾರ್ಮಿಕ ಸಂಚುಗಾರರು ಯಶಸ್ವಿಗಳಾದರು, ಮತ್ತು ಮರುವರ್ಷದಲ್ಲಿ ಹೆಚ್ಚಿನ ಮಿಷನೆರಿಗಳು ಬೇರೆ ದೇಶಗಳಲ್ಲಿ ತಮ್ಮ ನೇಮಕಗಳಿಗಾಗಿ ಬಿಟ್ಟುಹೋದರು. ಕೊನೆಗೆ 1979 ರಲ್ಲಿ, ನಾವು ಕೂಡ ಹೋಗಬೇಕಾಯಿತು.

ದಕ್ಷಿಣ ಅಮೆರಿಕಕ್ಕೆ

ಇಷ್ಟರೊಳಗೆ ನಾವು ಸುಮಾರು 50 ವರ್ಷ ವಯಸ್ಸಿನವರಾಗಿದ್ದೆವು, ಮತ್ತು ಇನ್ನೂ ಮತ್ತೊಂದು ದೇಶಕ್ಕೆ ಅಳವಡಿಸುವಿಕೆ ಮಾಡಲು ನಮಗೆ ಸಾಧ್ಯವೋ ಎಂದು ನಾವು ಯೋಚಿಸಿದೆವು. “ಒಂದು ಹೊಸ ನೇಮಕವನ್ನು ನಾವು ಸ್ವೀಕರಿಸೋಣವೋ ಅಥವಾ ಬದಲಾಗಿ ಯಾವುದಾದರೂ ಒಂದೇ ಸ್ಥಳದಲ್ಲಿ ನೆಲೆಸೋಣವೋ?” ಸೂಜಿ ಕೇಳಿದಳು.

“ಒಳ್ಳೇದು, ಸೂಜಿ,” ನಾನು ಉತ್ತರಿಸಿದೆ, “ಯೆಹೋವನು ಎಲ್ಲೆಲ್ಲಿ ಹೋಗಲು ನಮ್ಮನ್ನು ಆಮಂತ್ರಿಸಿದನೋ ಅಲ್ಲಿ, ನಮ್ಮ ಪರಾಮರಿಕೆಯನ್ನು ಆತನು ಮಾಡಿದನು. ಭವಿಷ್ಯತ್ತು ಯಾವ ಅಧಿಕ ಆಶೀರ್ವಾದಗಳನ್ನು ಇರಿಸಿದೆಯೋ ಯಾರಿಗೆ ಗೊತ್ತು?” ಹೀಗೆ, ನಾವು ನಮ್ಮ ಹೊಸ ನೇಮಕ, ದಕ್ಷಿಣ ಅಮೆರಿಕನ್‌ ದೇಶವಾದ ಸುರಿನಾಮ್‌ಗೆ ಆಗಮಿಸಿದೆವು. ಎರಡು ತಿಂಗಳೊಳಗೆ ಪುನಃ ನಾವು ಸಂಚಾರ ಸೇವೆಯಲ್ಲಿ ತೊಡಗಿದೆವು ಮತ್ತು ತಡವಿಲ್ಲದೆ ಅದು ಸ್ವಂತ ಮನೆಯಂತೆ ಅನಿಸಿತು.

ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಮ್ಮ 45 ಕ್ಕಿಂತಲೂ ಹೆಚ್ಚು ವರ್ಷಗಳನ್ನು ಪುನರಾಲೋಚಿಸುವಲ್ಲಿ, ಮಿಷನೆರಿ ಸೇವೆಯಲ್ಲಿ ಬಿಡದೆ ಮುಂದರಿಯುವಂತೆ ನೆರವಾಗಲು ನಮ್ಮ ಹೆತ್ತವರ ಬೆಂಬಲವು ಅದೆಷ್ಟು ಪ್ರಾಮುಖ್ಯವಾಗಿತ್ತೆಂಬದನ್ನು ನಾನು ಮತ್ತು ಸೂಜಿ ಗ್ರಹಿಸಿದ್ದೇವೆ. ಆರು ವರ್ಷಗಳ ಅನಂತರ, 1969 ರಲ್ಲಿ, ನಾನು ಪುನಃ ನನ್ನ ಹೆತ್ತವರನ್ನು ನೋಡಿದಾಗ, ನನ್ನ ತಂದೆಯು ನನ್ನನ್ನು ಬದಿಗೆ ಕರೆದು ಅಂದದ್ದು: “ಒಂದುವೇಳೆ ತಾಯಿ ಮೊದಲು ಸತ್ತರೆ, ನೀನು ಮನೆಗೆ ಬರುವ ಅಗತ್ಯವಿಲ್ಲ. ನಿನ್ನ ನೇಮಕದಲ್ಲಿ ಉಳಿದುಕೋ. ನಾನು ನಿರ್ವಹಿಸುವೆನು. ಒಂದುವೇಳೆ ಅದು ತಿರುಗ ಮುರುಗವಾದರೆ, ಆ ಕುರಿತು ನೀನು ತಾಯಿಯನ್ನು ಕೇಳಬೇಕಾಗುತ್ತದೆ.” ತಾಯಿ ಹೇಳಿದ್ದೂ ಹಾಗೆಯೇ.

ಸೂಜಿಯ ಹೆತ್ತವರಲ್ಲೂ ಅದೇ ನಿಸ್ವಾರ್ಥ ಮನೋಭಾವವಿತ್ತು. ಒಂದು ಸಂದರ್ಭದಲ್ಲಿ ಸೂಜಿ ಅವರಿಂದ 17 ವರ್ಷಗಳ ತನಕ ದೂರವಾಗಿದ್ದಳು, ಆದರೂ, ಎದೆಗುಂದಿಸುವ ಒಂದು ಶಬ್ದವನ್ನಾದರೂ ಅವರೆಂದೂ ಅವಳಿಗೆ ಬರೆಯಲಿಲ್ಲ. ನಿಶ್ಚಯವಾಗಿ, ನಮ್ಮ ಹೆತ್ತವರಿಗೆ ಬೇರೆ ಯಾವ ಸಹಾಯವೂ ದೊರೆಯದಿರುತ್ತಿದ್ದಲ್ಲಿ, ನಾವು ಮನೆಗೆ ಹಿಂತಿರುಗಿ ಬರುತ್ತಿದ್ದೆವು. ವಿಷಯವೇನಂದರೆ, ನಮ್ಮ ಹೆತ್ತವರಿಗೆ ಮಿಷನೆರಿ ಸೇವೆಯ ವಿಷಯವಾಗಿ ಅದೇ ಬೆಲೆಕಟ್ಟುವಿಕೆ ಇತ್ತು, ಮತ್ತು ನಮ್ಮ ಹೃದಯಗಳಲ್ಲಿ ಅವರು ಬೇರೂರಿದ್ದ ಅದೇ ಜರೂರಿಯ ಭಾವದಿಂದ, ಅವರು ತಮ್ಮ ಮರಣದ ತನಕ ಯೆಹೋವನ ಸೇವೆ ಮಾಡಿದರು.—ಹೋಲಿಸಿರಿ 1 ಸಮುವೇಲ 1:26-28.

ನಂಬಿಗಸ್ತ ಪತ್ರ ಬರೆಯುವವರಿಂದಲೂ ನಾವು ಉತ್ತೇಜನವನ್ನು ಹೊಂದಿದ್ದೇವೆ. ನಮ್ಮ 30 ಕ್ಕಿಂತಲೂ ಹೆಚ್ಚು ವರ್ಷಗಳ ಮಿಷನೆರಿ ಸೇವೆಯಲ್ಲಿ ನಮಗೆ ಪತ್ರ ಬರೆಯುವುದನ್ನು ಒಂದು ತಿಂಗಳಾದರೂ ಎಂದೂ ತಪ್ಪದ ಕೆಲವರಿದ್ದಾರೆ! ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ, ಭೂಮಿಯಲ್ಲಿರುವ ತನ್ನ ಸೇವಕರನ್ನು ಹೇಗೆ ಪೋಷಿಸಬೇಕೆಂದು ತಿಳಿದಿರುವ ನಮ್ಮ ಪ್ರಿಯ ಸ್ವರ್ಗೀಯ ತಂದೆಯಾದ ಯೆಹೋವನನ್ನು ನಾವು ಮನಸ್ಸಿನಲ್ಲಿಡುತ್ತೇವೆ. ಆದುದರಿಂದ, ನಾವು ಮುನ್ನೋಡುತ್ತಲಿದ್ದ ಘಟನೆಗಳ ಪರಾಕಾಷ್ಠೆಯನ್ನು ನಾವೀಗ ಹತ್ತರಿಸುತ್ತಿರುವಾಗ, ಜರೂರಿಯ ಭಾವದಿಂದ ಯೆಹೋವನನ್ನು ಸೇವಿಸುವುದನ್ನು ಮುಂದುವರಿಸುವ ಮೂಲಕ, ನಾನು ಮತ್ತು ಸೂಜಿ “ಯೆಹೋವನ ದಿನದ ಸಾನ್ನಿಧ್ಯವನ್ನು ಮನಸ್ಸಿನಲ್ಲಿ ನಿಕಟವಾಗಿ” ಇಟ್ಟುಕೊಂಡಿರಲು ಬಯಸುತ್ತೇವೆ.—2 ಪೇತ್ರ 3:12, NW.

[ಪುಟ 26 ರಲ್ಲಿರುವ ಚಿತ್ರ]

ಮದುವೆಯಾದದ್ದು 1957 ರಲ್ಲಿ

[ಪುಟ 29 ರಲ್ಲಿರುವ ಚಿತ್ರ]

ಎಂತಹ ರೋಮಾಂಚನ—ಪಯನೀಯರರಾಗಿ ಆರು ಯುವ ಜನರು!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ