ಟಾಗ್ವ ಬೀಜ—ಆನೆಗಳನ್ನು ರಕ್ಷಿಸಬಲ್ಲದೊ?
ಎಕ್ವಡಾರ್ನ ಎಚ್ಚರ! ಸುದ್ದಿಗಾರರಿಂದ
ಟಾಗ್ವ ಬೀಜ ಮತ್ತು ಆನೆಗಳು ಸ್ನೇಹವನ್ನು ಬೆಳೆಸುವುದು ಅಸಂಭವನೀಯ. ಏಕೆಂದರೆ ಒಂದು ಕೆಲವೇ ಗ್ರ್ಯಾಮ್ಗಳಷ್ಟು ಭಾರವಾಗಿದ್ದರೆ, ಇನ್ನೊಂದು ಹಲವಾರು ಟನ್ನುಗಳಷ್ಟಿರುತ್ತದೆ. ಒಂದು ಮರವಾಗಿದ್ದರೆ, ಇನ್ನೊಂದು ಪ್ರಾಣಿಯಾಗಿದೆ. ಅವು ಬೇರೆ ಬೇರೆ ಭೂಖಂಡಗಳಲ್ಲಿ ವಾಸಿಸುತ್ತವೆ. ಆದಾಗ್ಯೂ, ದಕ್ಷಿಣ ಅಮೆರಿಕದ ಸಣ್ಣ ಟಾಗ್ವ ಬೀಜವು, ಗೊತ್ತುಗುರಿಯಿಲ್ಲದೆ ಸಂಹಾರವಾಗುತ್ತಿರುವ ಆಫ್ರಿಕದ ಶಕ್ತಿಶಾಲಿಯಾದ ಆನೆಯ ಜೀವವನ್ನು ರಕ್ಷಿಸಬಲ್ಲದು. ಹಾಗಾದರೆ, ಟಾಗ್ವ ಬೀಜವೆಂದರೇನು? ಮತ್ತು ಅದು ಆನೆಯ ಪ್ರಾಣಸ್ನೇಹಿತನಾಗಿ ಪರಿಣಮಿಸಿರುವುದು ಹೇಗೆ?
ಒಂದು ವಿಚಿತ್ರ ತಾಳೆ ಮರ
ಟಾಗ್ವ ಬೀಜವು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ ತಾಳೆ ಮರದ ಬೀಜವಾಗಿದ್ದು, ಮುಖ್ಯವಾಗಿ ದಕ್ಷಿಣ ಅಮೆರಿಕದ ಉತ್ತರ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ತುಂಬ ನಿಧಾನವಾಗಿ ಬೆಳೆಯುವ ಈ ಮರಗಳು, ಬುಡದಿಂದಲೇ ಚಿಗುರೊಡೆಯುತ್ತ ತಮ್ಮ ಚಿತ್ತಾಕರ್ಷಕ ಗರಿಗಳನ್ನು ಪ್ರದರ್ಶಿಸುತ್ತವೆ. ಅನೇಕ ವರ್ಷಗಳ ವರೆಗೆ ಇದರ ಕಾಂಡವೇ ಕಾಣುವುದಿಲ್ಲ. ಎರಡು ಮೀಟರುಗಳಷ್ಟು ಎತ್ತರವಾದ ಕಾಂಡವಿರುವ ಒಂದು ಟಾಗ್ವ ತಾಳೆ ಮರವು, ಏನಿಲ್ಲವೆಂದರೂ 35ರಿಂದ 40 ವರ್ಷಗಳಷ್ಟು ಹಳೆಯದಾಗಿರುತ್ತದೆ. ನಾರುಗಳಿಂದ ಕೂಡಿರುವ ಬೀಜಕೋಶಗಳ ದೊಡ್ಡ ಗೊಂಚಲುಗಳು ನೇರವಾಗಿ ಗರಿಗಳ ಕೆಳಗೇ ಬೆಳೆಯುತ್ತವೆ. ಸಾಮಾನ್ಯವಾಗಿ ಒಂದು ಗೊಂಚಲು ಸುಮಾರು 10 ಕಿಲೋಗ್ರ್ಯಾಮ್ಗಳಷ್ಟು ಭಾರವಾಗಿದ್ದು, ಒತ್ತಿಬಿಗಿದಿರುವ ಕಾಡು ಹಣ್ಣುಗಳಿಂದ ತುಂಬಿರುತ್ತದೆ. ಸಾಮಾನ್ಯವಾಗಿ, ಪ್ರತಿಯೊಂದು ಹಣ್ಣು 4ರಿಂದ 9 ಬೀಜಗಳನ್ನು ಹೊಂದಿದ್ದು, ಬಹುಮಟ್ಟಿಗೆ ಕೋಳಿಮೊಟ್ಟೆಯ ಗಾತ್ರ ಹಾಗೂ ಆಕಾರವನ್ನು ಹೊಂದಿರುತ್ತದೆ. ಮೊದಲನೇ ಹಂತದಲ್ಲಿ, ಬೀಜದ ಹೊಳ್ಳುಗಳು ಬಾಯಾರಿಕೆಯನ್ನು ತಣಿಸುವ ಎಳನೀರಿನಂಥ ದ್ರವಪದಾರ್ಥವನ್ನು ಹೊಂದಿರುತ್ತವೆ. ಎರಡನೇ ಹಂತದಲ್ಲಿ, ಈ ದ್ರವಪದಾರ್ಥವು ಗಟ್ಟಿಯಾಗಿ, ತಿನ್ನಲು ಯೋಗ್ಯವಾದ ಸಿಹಿ ಜೆಲಟಿನ್ನಂತಾಗುತ್ತದೆ. ಮೂರನೇ ಹಾಗೂ ಕೊನೆಯ ಹಂತದಲ್ಲಿ, ಈ ಜೆಲಟಿನ್ ಬಲಿತು ಗಟ್ಟಿಯಾದ ಬಿಳಿಬಣ್ಣದ ಪದಾರ್ಥವಾಗುತ್ತದೆ. ಹೀಗೆ, ಇದು ಸುಸ್ಪಷ್ಟವಾಗಿ ಪ್ರಾಣಿದಂತವನ್ನು ಹೋಲುತ್ತದೆ. ಇದನ್ನು ಮರದಂತವೆಂದು ಕರೆಯಸಾಧ್ಯವಿದೆ.
ಆನೆಯ ಸ್ನೇಹಿತನಾಗಿರಲು ಕಾರಣ
ದಂತದ ಒಂದು ಪ್ರತಿರೂಪವಾಗಿರುವುದರಿಂದ, ಟಾಗ್ವ ಬೀಜವನ್ನು ನಿಜವಾಗಿಯೂ ಆನೆಯ ಪ್ರಾಣಸ್ನೇಹಿತ ಎಂದು ಕರೆಯಬಹುದಾಗಿದೆ. ಪ್ರಾಣಿಗಳ ದಂತಕ್ಕಾಗಿ ನಿರ್ದಯವಾಗಿ ಬೇಟೆಯಾಡುವುದು, ಆಫ್ರಿಕದ ಆನೆಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡಿದೆ. ಆದರೆ, ಟಾಗ್ವ ಬೀಜವು ಒಂದು ಪ್ರಾಯೋಗಿಕ ಬದಲಿಯನ್ನು ಒದಗಿಸುತ್ತದೆ, ಏಕೆಂದರೆ ಟಾಗ್ವದ ಮರದಂತವು ಪ್ರಾಣಿದಂತದ ಪ್ರತಿರೂಪದಂತೆಯೇ ಕಾಣುತ್ತದೆ, ಮತ್ತು ತೀರ ಗಡುಸಾಗಿದ್ದು, ಹೆಚ್ಚು ಹೊಳಪಿನಿಂದ ಕೂಡಿರಲು ಇದನ್ನು ಪಾಲಿಷ್ ಮಾಡಬಹುದಾಗಿದೆ, ಹಾಗೂ ಇದು ಬಣ್ಣಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಟಾಗ್ವ ಮತ್ತು ಪ್ರಾಣಿದಂತವು ಒಂದಕ್ಕೊಂದು ಎಷ್ಟೊಂದು ಹೋಲುತ್ತದೆಂದರೆ, ಅಂತಾರಾಷ್ಟ್ರೀಯವಾಗಿ ನಿಷೇಧಿಸಲ್ಪಟ್ಟಿರುವ ಆನೆಯ ದಂತದಿಂದ ತಮ್ಮ ಕಲಾಕೃತಿಗಳು ಮಾಡಲ್ಪಟ್ಟಿಲ್ಲವೆಂಬುದನ್ನು ರುಜುಪಡಿಸಲಿಕ್ಕಾಗಿ, ಅನೇಕವೇಳೆ ಶಿಲ್ಪಿಗಳು ಅವುಗಳ ಮೇಲೆ ಟಾಗ್ವದ ಕಂದು ಬಣ್ಣದ ಚಿಪ್ಪುಗಳನ್ನು ಹಾಗೆಯೇ ಬಿಟ್ಟುಬಿಡುತ್ತಾರೆ.
ಮರದಂತವು ಇತ್ತೀಚಿನ ಆವಿಷ್ಕಾರವೇನಲ್ಲ. 1750ಗಳಷ್ಟು ಹಿಂದೆಯೇ, ಅಮೆರಿಕದ ಕ್ರೈಸ್ತ ಸಂನ್ಯಾಸಿಯಾದ ಕ್ವಾನ್ ಡೆ ಸಾಂಟಾ ಕೆರ್ಟ್ರೂಡಿಸ್ ತನ್ನ ವೃತ್ತಾಂತಗಳಲ್ಲಿ, ಸಣ್ಣ ಪ್ರತಿಮೆಗಳ ಮೇಲೆ ಕೆತ್ತನೆ ಮಾಡಲು ಉಪಯೋಗಿಸಲ್ಪಟ್ಟ “ಅಮೃತ ಶಿಲೆಯ ಚೆಂಡು”ಗಳಿಗೆ ಟಾಗ್ವವನ್ನು ಹೋಲಿಸುತ್ತಾ ಅದರ ಕುರಿತು ಉಲ್ಲೇಖಿಸಿದ್ದಾನೆ. 1900ರ ಆರಂಭದಲ್ಲಿ, ಟಾಗ್ವ ಬೆಳೆಯ ಪ್ರಧಾನ ಮೂಲವಾಗಿರುವ ಎಕ್ವಡಾರ್, ಮುಖ್ಯವಾಗಿ ಗುಂಡಿ (ಬಟನ್)ಗಳನ್ನು ತಯಾರಿಸುವುದಕ್ಕಾಗಿ ಪ್ರತಿವರ್ಷ ಸಾವಿರಾರು ಟನ್ನುಗಳಷ್ಟು ಬೀಜಗಳನ್ನು ರಫ್ತುಮಾಡುತ್ತಿತ್ತು. ಎರಡನೇ ವಿಶ್ವ ಯುದ್ಧದ ನಂತರ, ಹೆಚ್ಚು ಅಗ್ಗವಾದ ಹಾಗೂ ನವೀನವಾದ ಪ್ಲಾಸ್ಟಿಕ್ಗಳ ಹೊಸ ಆವಿಷ್ಕಾರವು, ಟಾಗ್ವದ ವ್ಯಾಪಾರವನ್ನು ಸಂಪೂರ್ಣವಾಗಿ ಕೊನೆಗೊಳಿಸಿತು. ಈಗ ಮಾರುಕಟ್ಟೆಯಲ್ಲಿ ಮರದಂತದ ವ್ಯಾಪಾರವು ಭರದಿಂದ ನಡೆಯುತ್ತಿರುವುದಕ್ಕೆ ಸೂಚನೆಯಾಗಿ, ಕಳೆದ 18 ತಿಂಗಳುಗಳ ಸಮಯಾವಧಿಯಲ್ಲಿ 1,650 ಟನ್ನುಗಳಷ್ಟು ಟಾಗ್ವವನ್ನು, ಎಕ್ವಡಾರ್ನಿಂದ ಜರ್ಮನಿ, ಇಟಲಿ, ಜಪಾನ್, ಅಮೆರಿಕ ಹಾಗೂ ಇನ್ನಿತರ 18 ದೇಶಗಳಿಗೆ ರಫ್ತುಮಾಡಲಾಗಿದೆ.a ಇಂದು ಟಾಗ್ವವನ್ನು ಹೇಗೆ ಪರಿಷ್ಕರಿಸಿ ಉಪಯೋಗಿಸಲಾಗುತ್ತದೆ?
ಬಹೂಪಯೋಗಿ ಟಾಗ್ವ
ಬೀಜಗಳಲ್ಲಿರುವ ತೇವಾಂಶದ ಮೇಲಾಧಾರಿಸಿ, ಅವುಗಳನ್ನು ಒಂದರಿಂದ ಮೂರು ತಿಂಗಳುಗಳ ವರೆಗೆ ಉಷ್ಣವಲಯದ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಅನಂತರ ಯಂತ್ರದ ಸಹಾಯದಿಂದ ಅವುಗಳ ಸಿಪ್ಪೆಯನ್ನು ಸುಲಿಯಲಾಗುತ್ತದೆ, ಮತ್ತು ಅವುಗಳ ಗಾತ್ರಕ್ಕನುಸಾರ ವರ್ಗೀಕರಿಸುತ್ತ, ಗುಂಡಿಗಳನ್ನು ತಯಾರಿಸಲು ಉಪಯೋಗಿಸುವುದಕ್ಕಾಗಿ ಅವುಗಳನ್ನು ಬಿಲ್ಲೆಗಳಾಗಿ ಕತ್ತರಿಸಲಾಗುತ್ತದೆ. ಟಾಗ್ವದಿಂದ ಮಾಡಲ್ಪಟ್ಟ “ದಂತದ” ಗುಂಡಿಗಳು, ಜಗತ್ತಿನ ಕೆಲವು ಉತ್ಕೃಷ್ಟ ಮಟ್ಟದ ವಸ್ತ್ರಗಳನ್ನು ಅಲಂಕರಿಸುತ್ತವೆ ಎಂಬುದು ನಿಶ್ಚಯ. ಆದರೂ, ಕೇವಲ ಗುಂಡಿಗಳಿಗಿಂತಲೂ ಹೆಚ್ಚನ್ನು ತಯಾರಿಸಲು ಟಾಗ್ವವು ಉಪಯೋಗಿಸಲ್ಪಡುತ್ತದೆ. ಆಭರಣಗಳು, ಚೆಸ್ ಕಾಯಿಗಳು, ಗಾಳಿ ವಾದ್ಯಗಳಲ್ಲಿ ಉಪಯೋಗಿಸಲ್ಪಡುವ ಕಂಪನ ಭಾಗಗಳು, ಪಿಯಾನೋ ವಾದ್ಯದ ಕೀಲಿಕೈಗಳು ಮತ್ತು ಕೊಡೆಯ ಹಿಡಿಗಳು, ಟಾಗ್ವದಿಂದ ಮಾಡಲ್ಪಡುವ ಹಲವಾರು ವಸ್ತುಗಳಲ್ಲಿ ಕೆಲವು.
ಆದರೆ, ಟಾಗ್ವ ತಾಳೆಯು ಇದಕ್ಕಿಂತಲೂ ಹೆಚ್ಚಿನದ್ದನ್ನು ಒದಗಿಸುತ್ತದೆ! ಪರಿಷ್ಕರಣೆಯ ನಂತರ ಉಳಿಯುವ ಟಾಗ್ವದ ಪುಡಿಯನ್ನು, ಪ್ರಾಣಿಗಳ ಆಹಾರವನ್ನು ಪುಷ್ಟಿಗೊಳಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಇದ್ದಿಲನ್ನು ತಯಾರಿಸುವ ದಹನ ವಸ್ತುವಾಗಿಯೂ ಇದನ್ನು ಉಪಯೋಗಿಸಲಾಗುತ್ತದೆ. ತಾಳೆ ಗರಿಯನ್ನು, ನೀರನ್ನು ತಡೆಗಟ್ಟುವ ಛಾವಣಿಯಾಗಿಯೂ ಉಪಯೋಗಿಸಬಹುದು. ಅಷ್ಟುಮಾತ್ರವಲ್ಲ, ಟಾಗ್ವದ ಕಟಾವು ಮತ್ತು ಪರಿಷ್ಕರಣೆಯೊಂದಿಗೆ ಸಾಗಾಣಿಕೆಯು ಸಹ ಅನೇಕರಿಗೆ ಉದ್ಯೋಗವನ್ನು ಒದಗಿಸುತ್ತದೆ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಮರದಂತವು ಆಫ್ರಿಕದ ಆನೆಯ ಸಂರಕ್ಷಣೆಗೆ ಅತ್ಯಂತ ಮಹತ್ವದ ಕೊಡುಗೆಯಾಗಿರಬಲ್ಲದು. ಆದುದರಿಂದ, ದಂತದ ಆಡಂಬರವನ್ನು ನೀವು ಬಯಸುವುದಾದರೆ, ಆಫ್ರಿಕದ ಸವನ್ನ ಹುಲ್ಲುಗಾಡುಗಳಿಗೆ ಹೋಗಬೇಕಾಗಿಲ್ಲ. ಬದಲಿಗೆ, ಹೇರಳವಾದ ಮರದಂತಗಳು ಬೆಳೆಯುವ ಮರಗಳಿರುವ ದಕ್ಷಿಣ ಅಮೆರಿಕದ ಮಳೆಗಾಡುಗಳನ್ನು ನೆನಪಿಸಿಕೊಳ್ಳಿ! ಹೌದು, ಆನೆಯ ಪ್ರಾಣಸ್ನೇಹಿತನಾಗಿರುವ ಟಾಗ್ವ ಬೀಜವನ್ನು ನೆನಪಿಸಿಕೊಳ್ಳಿ.
[ಅಧ್ಯಯನ ಪ್ರಶ್ನೆಗಳು]
a ಜನವರಿ 1, 1994 ಮತ್ತು ಜೂನ್ 15, 1995ರ ನಡುವಿನ ಸಮಯ.
[ಪುಟ 18,19 ರಲ್ಲಿರುವಚಿತ್ರಗಳು]
1. ಟಾಗ್ವ ತಾಳೆ
2. ಟಾಗ್ವ ಹಣ್ಣಿನ ಗೊಂಚಲುಗಳು
3. ಟಾಗ್ವ ಬೀಜಗಳನ್ನು ಅಡ್ಡವಾಗಿ ಕತ್ತರಿಸಿ ತೋರಿಸುತ್ತಿರುವುದು
4. ಟಾಗ್ವ ಬೀಜವು ಒಣಗಿ ಗಡುಸಾದ ಬೀಜಕಾಯಿಯಂತಾಗುತ್ತದೆ
5. ಟಾಗ್ವ ಗುಂಡಿಗಳು
6. ಮುತ್ತನ್ನು ಹುದುಗಿಸಿದ ಟಾಗ್ವದ ಒಡವೆ
7. ಟಾಗ್ವದ ಸಣ್ಣ ಪ್ರತಿಮೆಗಳು