ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g05 4/8 ಪು. 16-19
  • ವೆನಿಸ್‌ ‘ಸಮುದ್ರ ನಗರಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೆನಿಸ್‌ ‘ಸಮುದ್ರ ನಗರಿ’
  • ಎಚ್ಚರ!—2005
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅನಾಕರ್ಷಕ ಪ್ರದೇಶ
  • ಒಂದು ಗಣರಾಜ್ಯದ ಆರಂಭ ಮತ್ತು ಏಳಿಗೆ
  • “ಮೆಡಿಟರೇನಿಯನ್‌ನ ಒಡತಿ”
  • ಸ್ವಪ್ನನಗರಿ
  • ಬದುಕಿ ಉಳಿಯಲಿಕ್ಕಾಗಿ ಇನ್ನೂ ಹೋರಾಡುತ್ತಿದೆ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಸುವಾರ್ತೆಯನ್ನು ಸಾರಲು ಹಿಂಜರಿಯಬೇಡಿರಿ
    ಕಾವಲಿನಬುರುಜು—1998
ಎಚ್ಚರ!—2005
g05 4/8 ಪು. 16-19

ವೆನಿಸ್‌ ‘ಸಮುದ್ರ ನಗರಿ’

ಇಟಲಿಯ ಎಚ್ಚರ! ಲೇಖಕರಿಂದ

“ಸಮುದ್ರದಲ್ಲಿ ತುಂಬ ಶೋಭಾಯಮಾನವಾದ ಒಂದು ನಗರವಿದೆ. ಅದರ ಅಗಲವಾದ ಮತ್ತು ಕಿರಿದಾದ ಬೀದಿಗಳಲ್ಲಿ ಸಮುದ್ರದ ಉಬ್ಬರವಿಳಿತವಿದೆ; ಮತ್ತು ಸಮುದ್ರದ ಉಪ್ಪು ನೀರಿನ ಕಳೆಸಸ್ಯಗಳು ಆ ನಗರದ ಅರಮನೆಗಳ ಅಮೃತಶಿಲೆಗಳಿಗೆ ಕಚ್ಚಿಕೊಂಡಿವೆ.”​—⁠ಸ್ಯಾಮ್ಯೆಲ್‌ ರೋಜರ್ಸ್‌, ಇಂಗ್ಲಿಷ್‌ ಕವಿ, 1822.

ಆ ‘ಶೋಭಾಯಮಾನ ನಗರ’ವು ವೆನಿಸ್‌ ಆಗಿದೆ. ಒಂದು ಕಾಲದಲ್ಲಿ ಮಹಾ ಗಣರಾಜ್ಯವೊಂದರ ರಾಜಧಾನಿಯಾಗಿದ್ದ ವೆನಿಸ್‌, ವಿಸ್ತಾರವಾದ ಭೂಪ್ರದೇಶ ಹಾಗೂ ಸಮುದ್ರ ಸಾಮ್ರಾಜ್ಯದ ಮೇಲೆ ಅನೇಕ ಶತಮಾನಗಳ ವರೆಗೆ ಪ್ರಭುತ್ವ ನಡೆಸಿತು. ಈ ನಗರವು ಹೇಗೆ ಮತ್ತು ಏಕೆ “ಸಮುದ್ರದಲ್ಲಿ” ಕಟ್ಟಲ್ಪಟ್ಟಿತು? ಅದರ ವೈಭವವು ಯಾವುದರ ಮೇಲೆ ಆಧಾರಿತವಾಗಿತ್ತು? ಅದರ ಸಾಮ್ರಾಜ್ಯವು ಹೇಗೆ ಪತನಗೊಂಡಿತು ಮತ್ತು ಇಂದು ವೆನಿಸ್‌ನ ಭವ್ಯತೆಯಲ್ಲಿ ಏನು ಉಳಿದಿದೆ?

ಅನಾಕರ್ಷಕ ಪ್ರದೇಶ

ಆ್ಯಡ್ರಿಯಾಟಿಕ್‌ ಸಮುದ್ರದ ವಾಯವ್ಯ ತುದಿಯಲ್ಲಿರುವ ಒಂದು ಲಗೂನ್‌ನ (ಜಲಭಾಗದ) ಮಧ್ಯಭಾಗದಲ್ಲಿರುವ ವೆನಿಸ್‌ ನಗರವು 118 ದ್ವೀಪಗಳಿಂದ ರಚಿತವಾಗಿದೆ. ಸಮೀಪದಲ್ಲೇ ಇರುವ ಸಮುದ್ರಕ್ಕೆ ಹರಿಯುವ ನದಿಗಳು, ಹೆಚ್ಚು ಆಳವಿಲ್ಲದ ಸಮುದ್ರತೀರದ ಜಲಪ್ರದೇಶಗಳಿಗೆ ದೊಡ್ಡ ಪ್ರಮಾಣದ ಮೆಕ್ಕಲು ಮಣ್ಣನ್ನು ತಂದುಹಾಕುತ್ತವೆ. ಇಲ್ಲಿನ ನೀರಿನ ಉಬ್ಬರವಿಳಿತ ಹಾಗೂ ಪ್ರವಾಹವು ಅನೇಕಾನೇಕ ಮರಳದಂಡೆಗಳನ್ನು ಉಂಟುಮಾಡಿದೆ; ಇವು ಸುಮಾರು 51 ಕಿಲೊಮೀಟರುಗಳಷ್ಟು ಉದ್ದವಾದ ಹಾಗೂ 14 ಕಿಲೊಮೀಟರುಗಳಷ್ಟು ಅಗಲವಾದ ಪ್ರಶಾಂತ ಲಗೂನನ್ನು ಒಳಗೂಡಿವೆ. ಸಮುದ್ರಕ್ಕೆ ಹೋಗಿ ಸೇರುವ ಕಿರಿದಾದ ಮೂರು ನಾಲೆಗಳು, ಒಂದು ಮೀಟರ್‌ ಎತ್ತರವಾದ ಭರತಗಳು ಹಾಗೂ ದೋಣಿಗಳ ಸಂಚಾರಕ್ಕೆ ಆಸ್ಪದಮಾಡಿಕೊಡುತ್ತವೆ. ಒಂದು ಮೂಲವು ಹೇಳುವುದು: “ಅನೇಕ ಶತಮಾನಗಳಿಂದ ಈ ಲಗೂನು, ಆ್ಯಡ್ರಿಯಾಟಿಕ್‌ ಸಮುದ್ರದಿಂದ ಮೇಲಿನ ದಿಕ್ಕಿಗೆ ಪ್ರಯಾಣಿಸಿದ ಅಥವಾ ಮಧ್ಯ ಇಲ್ಲವೆ ಉತ್ತರ ಯೂರೋಪಿನಿಂದ ನದಿಗಳು ಅಥವಾ ಕ್ಯಾರವ್ಯಾನ್‌ ಮಾರ್ಗಗಳ ಮೂಲಕ ಕೆಳದಿಕ್ಕಿಗೆ ಬರುತ್ತಿದ್ದ ವಾಣಿಜ್ಯ ಸಂಚಾರಕ್ಕಾಗಿ ಬಹಳವಾಗಿ ಉಪಯೋಗಿಸಲ್ಪಡುತ್ತಿದ್ದ ಕೊನೆದಾಣವಾಗಿತ್ತು.”

ವೆನಿಸ್‌ ನಗರವು ಸಾ.ಶ. ಐದು ಮತ್ತು ಏಳನೆಯ ಶತಮಾನಗಳ ನಡುವಣ ಕಾಲಾವಧಿಯಲ್ಲಿ ಆರಂಭಗೊಂಡಿದೆ ಎಂದು ವಿದ್ವಾಂಸರು ನಂಬುತ್ತಾರೆ; ಆ ಸಮಯದಲ್ಲಿ ಉತ್ತರದಿಂದ ಬಂದ ಅಸಂಸ್ಕೃತ ಜನರು ಒಂದಾದ ಮೇಲೆ ಇನ್ನೊಂದರಂತೆ ಆಕ್ರಮಣಮಾಡುತ್ತಾ ಮುಖ್ಯ ಭೂಭಾಗದಲ್ಲಿದ್ದ ಸಮುದಾಯಗಳನ್ನು ಧೂಳೀಪಟಮಾಡಿದರು ಮತ್ತು ಅಲ್ಲಿದ್ದವುಗಳನ್ನು ಕೊಳ್ಳೆಹೊಡೆದರು. ಈ ಕೊಳ್ಳೆಹೊಡೆಯುವವರು ಬರುತ್ತಿದ್ದಾರೆ ಎಂದು ತಿಳಿದೊಡನೆ ಅನೇಕರು ಅಲ್ಲಿಂದ ಪಲಾಯನಗೈದು, ದುರ್ಗಮವಾದ ಸ್ಥಳವಾಗಿದ್ದರೂ ಹೆಚ್ಚು ಸುರಕ್ಷಿತವಾಗಿದ್ದ ಲಗೂನ್‌ ದ್ವೀಪಗಳಲ್ಲಿ ರಕ್ಷಣೆಯನ್ನು ಪಡೆದುಕೊಂಡರು.

ಇಲ್ಲಿನ ಆರಂಭದ ಕಟ್ಟಡಗಳು, ಕೆಸರಿನಲ್ಲಿ ಹೂಳಲ್ಪಟ್ಟ ಮತ್ತು ಮೃದುವಾದ ಕೊಂಬೆಗಳು ಅಥವಾ ಜವುಗುಸಸ್ಯಗಳಿಂದ ಹೆಣೆಯಲ್ಪಟ್ಟಿದ್ದ ಕಂಬಗಳಿಂದ ರಚಿತವಾದ ತಳಪಾಯದ ಮೇಲೆ ಕಟ್ಟಲ್ಪಟ್ಟವು ಎಂದು ದಾಖಲೆಪತ್ರಗಳು ಸೂಚಿಸುತ್ತವೆ. ತದನಂತರದ ಸಮಯಗಳಲ್ಲಿ ವೆನಿಸ್‌ ನಗರದವರು ಮರದ ಸಾವಿರಾರು ದಿಮ್ಮಿಗಳ ತಳಪಾಯದ ಮೇಲೆ ಕಲ್ಲಿನ ಮನೆಗಳನ್ನು ಕಟ್ಟಿದರು. ಈ ಮಧ್ಯೆ, ನಗರದ ಕೇಂದ್ರಭಾಗವಾಗಿ ಪರಿಣಮಿಸಿದಂಥ ರಿಯಾಲ್ಟೊದ ಲಗೂನ್‌ ದ್ವೀಪಗಳು ಅನೇಕವೇಳೆ ನೀರಿನಿಂದ ತುಂಬಿರುತ್ತಿದ್ದವು ಮತ್ತು ಇವು ಅತ್ಯಧಿಕ ಸಂಖ್ಯೆಯ ನೆಲೆಸಿಗರಿಗೆ ಸ್ಥಳಾವಕಾಶವನ್ನು ಒದಗಿಸುವಷ್ಟು ದೃಢವಾಗಿಯೂ ಇರಲಿಲ್ಲ, ವಿಶಾಲವಾಗಿಯೂ ಇರಲಿಲ್ಲ. ನೆಲೆಸಿಗರಿಗೆ ವಸತಿಯನ್ನು ಒದಗಿಸಲಿಕ್ಕಾಗಿ, ಈ ದ್ವೀಪಗಳಿಂದ ನೀರನ್ನು ಬರಿದುಮಾಡಿ ಆ ಭೂಮಿಯನ್ನು ಉಪಯೋಗಕ್ಕೆ ಬರುವಂತೆ ಮಾಡಲು ಹಿಂದಿನ ಕಾಲದ ವಿಧಾನಗಳನ್ನುಪಯೋಗಿಸುತ್ತಾ ವಿಸ್ತಾರಗೊಳಿಸಬೇಕಾಗಿತ್ತು. ಹೀಗಿರುವುದರಿಂದ, ಆ ನಿವಾಸಿಗಳು ತಮ್ಮ ದೋಣಿಗಳಿಗಾಗಿ ಕಾಲುವೆಗಳನ್ನು ತೋಡಿದರು ಮತ್ತು ಇದರಿಂದಾಗಿ ಹೆಚ್ಚು ಉತ್ತಮವಾದ ಕಟ್ಟಡ ನಿವೇಶನಗಳನ್ನು ಸಿದ್ಧಗೊಳಿಸಲಿಕ್ಕಾಗಿ ಆ ದ್ವೀಪಗಳನ್ನು ಇನ್ನಷ್ಟು ಗಟ್ಟಿಗೊಳಿಸಲಾಯಿತು. ಕಾಲುವೆಗಳು ಅವರ ಬೀದಿಗಳಾಗಿ ಪರಿಣಮಿಸಿದವು ಮತ್ತು ಪಾದಚಾರಿಗಳು ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗುವುದನ್ನು ಸುಲಭಗೊಳಿಸಲಿಕ್ಕಾಗಿ ಆ ಕಾಲುವೆಗಳ ಮೇಲೆ ಸೇತುವೆಗಳು ನಿರ್ಮಿಸಲ್ಪಟ್ಟವು.

ಒಂದು ಗಣರಾಜ್ಯದ ಆರಂಭ ಮತ್ತು ಏಳಿಗೆ

ಪಶ್ಚಿಮದಲ್ಲಿ ರೋಮನ್‌ ಸಾಮ್ರಾಜ್ಯವು ಪತನಗೊಂಡ ಬಳಿಕ, ಈ ಲಗೂನ್‌ ದ್ವೀಪಗಳು ಬೈಸಾಂಟೈನ್‌ ಸಾಮ್ರಾಜ್ಯದ ಅಧಿಕಾರದ ಕೆಳಗೆ ಬಂದವು. ಇದಕ್ಕೆ ಮುಂಚೆ ಬೈಸಾಂಟೈನ್‌ನ ರಾಜಧಾನಿಯು ಕಾನ್‌ಸ್ಟಾಂಟಿನೋಪಲ್‌ನಲ್ಲಿತ್ತು ಆದರೆ ಈ ಸಮಯಕ್ಕೆ ಅದು ಇಸ್ತಾನ್‌ಬುಲ್‌ಗೆ ಸ್ಥಳಾಂತರಿಸಿತ್ತು. ಲಗೂನ್‌ ಸಮುದಾಯಗಳಾದರೋ ದಂಗೆಯೆದ್ದು ತಮಗೆ ಸ್ವಾತಂತ್ರ್ಯ ನೀಡುವಂತೆ ತಗಾದೆಮಾಡಿದವು. ಇದರ ಫಲಿತಾಂಶವಾಗಿ ವೆನಿಸ್‌ ಯಾವ ಅಸಾಮಾನ್ಯ ಸನ್ನಿವೇಶದಲ್ಲಿತ್ತೆಂಬುದನ್ನು ಹೀಗೆ ವರ್ಣಿಸಲಾಗಿದೆ: ಅದು ಫ್ರ್ಯಾಂಕರು ಮತ್ತು ಬೈಸಾಂಟೈನರ “ಎರಡು ದೊಡ್ಡ ಸಾಮ್ರಾಜ್ಯಗಳ ನಡುವೆ ಪ್ರಾದೇಶಿಕವಾಗಿ ಬೇರ್ಪಟ್ಟ ಸ್ಥಿತಿಯಲ್ಲಿ ನೆಲೆಸಿರುವ, . . . ಡ್ಯೂಕನ ಆಳ್ವಿಕೆಯ ಕೆಳಗಿದ್ದ ಸಣ್ಣದಾದ ಮತ್ತು ಸ್ವತಂತ್ರವಾದ ಕ್ಷೇತ್ರವಾಗಿತ್ತು.” ಈ ಅಪೂರ್ವ ಸನ್ನಿವೇಶವೇ, ಆ ನಗರವು ಏಳಿಗೆಹೊಂದಿ ಒಂದು ದೊಡ್ಡ “ವ್ಯಾಪಾರ ಮಧ್ಯವರ್ತಿಯಾಗಿ” ಸಮೃದ್ಧಿಹೊಂದುವಂತೆ ನೆರವು ನೀಡಿತು.

ತದನಂತರದ ಶತಮಾನಗಳಲ್ಲಿ, ಮೆಡಿಟರೇನಿಯನ್‌ನ ಗಡಿಯುದ್ದಕ್ಕೂ ಇದ್ದ ಪ್ರದೇಶಗಳಲ್ಲಿ ಸ್ಯಾರಸೇನ್‌ರು, ನಾರ್ಮನರು ಮತ್ತು ಬೈಸಾಂಟಿಯನರನ್ನೂ ಸೇರಿಸಿ ತನ್ನ ವಿರುದ್ಧ ಕಾದಾಟಕ್ಕೆ ನಿಂತ ಅನೇಕ ಸೈನ್ಯಗಳ ವಿರುದ್ಧ ವೆನಿಸ್‌ ಯುದ್ಧಗಳನ್ನು ನಡೆಸಿತು. ಕೊನೆಗೂ ತನ್ನ ಅತ್ಯಂತ ಶಕ್ತಿಶಾಲಿ ಶತ್ರುರಾಜ್ಯವಾಗಿದ್ದ ಕಾನ್‌ಸ್ಟಾಂಟಿನೋಪಲನ್ನು ನಾಶಮಾಡಲಿಕ್ಕಾಗಿ 1204ರಲ್ಲಿನ ನಾಲ್ಕನೆಯ ಧರ್ಮಯುದ್ಧವನ್ನು (ಕ್ರೂಸೇಡ್‌ ಅನ್ನು) ಉಪಯೋಗಿಸಿಕೊಂಡ ಬಳಿಕ, ವೆನಿಸ್‌ ನಗರವು ಇವುಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಪ್ರಬಲವಾದದ್ದಾಗಿ ಪರಿಣಮಿಸಿತು. ವೆನಿಸ್‌ ನಗರವು, ಕಪ್ಪು ಸಮುದ್ರ ಮತ್ತು ಈಜಿಯನ್‌ ಸಮುದ್ರ ತೀರಗಳಲ್ಲಿ ಹಾಗೂ ಗ್ರೀಸ್‌, ಕಾನ್‌ಸ್ಟಾಂಟಿನೋಪಲ್‌, ಸಿರಿಯ, ಪ್ಯಾಲೆಸ್ತೀನ್‌, ಸೈಪ್ರಸ್‌ ಹಾಗೂ ಕ್ರೇಟ್‌ನಲ್ಲಿ ಅನೇಕ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿತ್ತು. ಈಗ ಅದು ಬೈಸಾಂಟೈನ್‌ ಸಾಮ್ರಾಜ್ಯದ ಪತನವನ್ನು ಸದುಪಯೋಗಿಸಿಕೊಂಡು, ಅವುಗಳಲ್ಲಿ ಅನೇಕ ವ್ಯಾಪಾರ ಕೇಂದ್ರಗಳನ್ನು ಪ್ರಾದೇಶಿಕ ವಸಾಹತುಗಳನ್ನಾಗಿ ಮಾರ್ಪಡಿಸಿತು.

“ಮೆಡಿಟರೇನಿಯನ್‌ನ ಒಡತಿ”

ಹನ್ನೆರಡನೇ ಶತಮಾನದಷ್ಟು ಹಿಂದೆಯೇ, ವೆನಿಸ್‌ ರಾಜ್ಯದ ಅತಿ ದೊಡ್ಡ ಹಡಗುನಿರ್ಮಾಣ ಕಾರ್ಯಾಗಾರಗಳು, ಪ್ರತಿ ಕೆಲವು ತಾಸುಗಳಿಗೆ ಒಂದರಷ್ಟು ಪ್ರಮಾಣದಲ್ಲಿ ಪೂರ್ಣ ಸಜ್ಜಿತ ಗ್ಯಾಲಿ ಹಡಗುಗಳನ್ನು ತಯಾರಿಸುತ್ತಿದ್ದವು. ಸ್ಥಳಿಕ ಉದ್ಯಮವು ಗಾಜನ್ನು ಮತ್ತು ಸುಂದರವಾದ ದುಬಾರಿ ವಸ್ತ್ರಗಳನ್ನು ಅಂದರೆ ಲೇಸು, ಜರತಾರಿ, ನೆಯ್ಗೆ ಚಿತ್ತಾರವಿರುವ ಡಮಾಸುಬಟ್ಟೆ ಮತ್ತು ಮಖಮಲ್ಲನ್ನು ಸಿದ್ಧಪಡಿಸುತ್ತಿತ್ತು. ವೆನಿಸ್‌ ರಾಜ್ಯದ ಮತ್ತು ವಿದೇಶದ ವರ್ತಕರು ಪಶ್ಚಿಮದಿಂದ ಬಂದೂಕುಗಳು, ಕುದುರೆಗಳು, ಅಂಬರು, ತುಪ್ಪುಳ, ಮರ, ಉಣ್ಣೆ, ಜೇನು, ಮೇಣ ಮತ್ತು ಗುಲಾಮರನ್ನು ತರುತ್ತಿದ್ದರು. ಇನ್ನೊಂದು ಕಡೆಯಲ್ಲಿ, ಮುಸ್ಲಿಮ್‌ ಲೆವಾಂಟ್‌ ಪ್ರದೇಶದಿಂದ ಚಿನ್ನ, ಬೆಳ್ಳಿ, ರೇಷ್ಮೆ, ಸಂಬಾರ ಪದಾರ್ಥಗಳು, ಹತ್ತಿ, ವರ್ಣದ್ರವ್ಯಗಳು, ದಂತ, ಸುಗಂಧದ್ರವ್ಯಗಳು ಮತ್ತು ಇನ್ನಿತರ ಅನೇಕಾನೇಕ ವಸ್ತುಗಳನ್ನು ಆಮದುಮಾಡಿಕೊಳ್ಳಲಾಗುತ್ತಿತ್ತು. ನಗರದ ಮಾರುಕಟ್ಟೆಗಳಿಗೆ ಬರುತ್ತಿದ್ದ ಹಾಗೂ ಅಲ್ಲಿಂದ ರವಾನಿಸಲ್ಪಡುತ್ತಿದ್ದ ಎಲ್ಲಾ ಸರಕುಗಳಿಗೆ ತೆರಿಗೆಗಳು ತೆರಲ್ಪಡುತ್ತಿವೆ ಎಂಬುದನ್ನು ನಗರದ ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಿದ್ದರು.

ಪಿಲ್ಲಾಡಿಯೊ, ಟಿಟಿಯನ್‌ ಮತ್ತು ಟಿಂಟೊರೆಟೊರಂಥ ಪ್ರಸಿದ್ಧ ವಾಸ್ತುಶಿಲ್ಪಿಗಳು ಮತ್ತು ಕಲಾಕಾರರಿಂದ ಸುಂದರಗೊಳಿಸಲ್ಪಟ್ಟ ವೆನಿಸ್‌ ನಗರವು ಲಾ ಸೇರೇನೇಸ್‌ಈಮಾ, ಅಂದರೆ “ಅತಿ ಪ್ರಶಾಂತ” ಅಥವಾ “ಸುಂದರ” ಎಂದು ವರ್ಣಿಸಲ್ಪಟ್ಟಿದೆ. ಹೀಗಿರುವಾಗ, ಆ ಸಮಯದಲ್ಲಿ ಈ ನಗರವು “ಮೆಡಿಟರೇನಿಯನ್‌ನ ಒಡತಿ, . . . ನಾಗರಿಕ ಜಗತ್ತಿನ ಅತಿ ಶ್ರೀಮಂತ ಹಾಗೂ ಅತಿ ಸಂಪದ್ಭರಿತ ವಾಣಿಜ್ಯ ಕೇಂದ್ರ” ಎಂದು ಕರೆಯಲ್ಪಡುವುದು ಸೂಕ್ತವಾಗಿತ್ತು. ಇದು ನೂರಾರು ವರ್ಷಗಳ ವರೆಗೆ ಈ ಸ್ಥಿತಿಯಲ್ಲೇ ಇತ್ತು. ಆದರೆ 16ನೆಯ ಶತಮಾನದಲ್ಲಿ ಮುಖ್ಯ ವ್ಯಾಪಾರ ವ್ಯವಸ್ಥೆಯು ಅಟ್ಲಾಂಟಿಕ್‌ ಮತ್ತು ಉತ್ತರ ಹಾಗೂ ದಕ್ಷಿಣ ಅಮೆರಿಕಗಳ ಕಡೆಗೆ ಸ್ಥಳಾಂತರಗೊಂಡಾಗಲೇ ಇದರ ಪ್ರಾಬಲ್ಯವು ದುರ್ಬಲಗೊಳ್ಳತೊಡಗಿತು.

ಮೆಡಿಟರೇನಿಯನ್‌ನ ತೀರದಾದ್ಯಂತ ಚದರಿದ್ದ ವೆನಿಸ್‌ ರಾಜ್ಯದ ವಸಾಹತುಗಳು, ಎಂದಿಗೂ ಒಂದಕ್ಕೊಂದು ಸೇರಿಕೊಳ್ಳುವ ಭಾಗ್ಯವನ್ನು ಅನುಭವಿಸಲಿಲ್ಲ ಅಥವಾ ಒಂದೇ ಸರಕಾರದ ಕೆಳಗಿನ ಐಕ್ಯಭಾವವನ್ನು ಅಥವಾ ಒಗ್ಗಟ್ಟಿನಿಂದ ಕೆಲಸಮಾಡುವುದನ್ನು ಎಂದೂ ಆನಂದಿಸಲಿಲ್ಲ. ಇದರ ಪರಿಣಾಮವಾಗಿ ವಸಾಹತುಗಳ ನಷ್ಟವು ಅನಿವಾರ್ಯವಾಯಿತು. ನೆರೆಹೊರೆಯಲ್ಲಿ ಆಳುತ್ತಿದ್ದ ಇತರ ರಾಜ್ಯಗಳು ಸಹ ಒಂದಾದ ಮೇಲೆ ಇನ್ನೊಂದರಂತೆ ವೆನಿಸ್‌ ಗಣರಾಜ್ಯದ ಕ್ಷೇತ್ರಗಳನ್ನು ಸ್ವಾಧೀನಪಡಿಸಿಕೊಂಡವು; ಕೊನೆಗೆ 1797ರಲ್ಲಿ Iನೆಯ ನೆಪೋಲಿಯನ್‌ ಈ ಲಗೂನ್‌ ನಗರವನ್ನು ವಶಪಡಿಸಿಕೊಂಡನು ಮತ್ತು ಅದನ್ನು ಆಸ್ಟ್ರಿಯದ ಆಳ್ವಿಕೆಗೆ ಒಪ್ಪಿಸಿದನು. ಇಸವಿ 1866ರಲ್ಲಿ ವೆನಿಸ್‌ ನಗರವು ಇಟಲಿಯ ಒಂದು ಭಾಗವಾಯಿತು.

ಸ್ವಪ್ನನಗರಿ

ವೆನಿಸ್‌ ನಗರಕ್ಕೆ ಭೇಟಿ ನೀಡುವಾಗ ಅನೇಕರಿಗೆ ಕಾಲಪ್ರವಾಹದಲ್ಲಿ ಇನ್ನೂರು ಅಥವಾ ಮುನ್ನೂರು ವರ್ಷಗಳ ಹಿಂದೆ ಹೆಜ್ಜೆಯಿಡುತ್ತಿರುವ ಅನುಭವವಾಗುತ್ತದೆ. ಈ ನಗರದ ವಾತಾವರಣವು ತುಂಬ ಅಪೂರ್ವವಾದದ್ದಾಗಿದೆ.

ಇದರ ಒಂದು ವೈಶಿಷ್ಟ್ಯವು, ಸದ್ದುಗದ್ದಲವಿಲ್ಲದ ಪ್ರಶಾಂತ ಸ್ಥಿತಿಯೇ ಆಗಿದೆ. ಕಿರಿದಾದ ಓಣಿಗಳಲ್ಲಿ ಪಾದಚಾರಿಗಳ ಸಂಚಾರವು ಮತ್ತು ಕಾಲುವೆಗಳ ಮೇಲಿನ ಸಂಚಾರವು ಹೆಚ್ಚಾಗಿ ಪ್ರತ್ಯೇಕವಾಗಿರುತ್ತದೆ; ಆದರೆ ಕೆಲವು ಕಡೆ ಮಾತ್ರ ಪಾದಚಾರಿಗಳ ಕಾಲುದಾರಿಗಳು ಕಾಲುವೆಗಳ ತೀರದುದ್ದಕ್ಕೂ ಇರುತ್ತವೆ ಅಥವಾ ಕಮಾನಿನಾಕಾರದ ವಿಶಿಷ್ಟವಾದ ಕಲ್ಲಿನ ಸೇತುವೆಗಳ ಮೂಲಕ ಕಾಲುವೆಗಳನ್ನು ದಾಟುತ್ತವೆ. ಇರುವಂಥ ಏಕಮಾತ್ರ ಮೋಟಾರು ವಾಹನಗಳು ದೋಣಿಗಳೇ, ಏಕೆಂದರೆ ಜಲಮಾರ್ಗಗಳೇ ಇಲ್ಲಿನ ಮುಖ್ಯ ರಸ್ತೆಗಳಾಗಿವೆ. ಈ ನಗರದಲ್ಲಿ ನಯನಮನೋಹರ ನೋಟಗಳು ಬೇಕಾದಷ್ಟಿವೆ. ಸೆಂಟ್‌ ಮಾರ್ಕ್ಸ್‌ ಚೌಕ ಮತ್ತು ಅದರ ರಾಜಭವನ, ಬೆಲ್‌ ಟವರ್‌ ಮತ್ತು ಎಲ್ಲಿ ಸೂರ್ಯನು ಹಸಿರಾದ ಲಗೂನಿನ ಮೇಲೆ ಮಿಂಚುತ್ತಾನೋ ಆ ರಮಣೀಯವಾದ ಜಲಾವೃತ ಕ್ಷೇತ್ರವು ಕಲಾಕಾರರಿಗೆ ತುಂಬ ಸ್ಫೂರ್ತಿದಾಯಕವಾಗಿದೆ.

ಮುಖ್ಯ ಚೌಕದಲ್ಲಿ ಯಾವಾಗಲೂ ಜನರಿಂದ ಕಿಕ್ಕಿರಿದಿರುವ ಹೊರಾಂಗಣದ ಕೆಫೆಗಳು (ಕಾಫಿಯಂಗಡಿಗಳು) ಪ್ರವಾಸಿಗರನ್ನು ಮತ್ತು ಸ್ಥಳಿಕ ನಿವಾಸಿಗಳನ್ನು ಸಹ ಕೈಬೀಸಿ ಕರೆಯುತ್ತವೆ. ಇಲ್ಲಿ ನೀವು ಚಿಕ್ಕ ಚಿಕ್ಕ ಶಾಸ್ತ್ರೀಯ ಆರ್ಕೆಸ್ಟ್ರಾಗಳ ಸಂಗೀತವನ್ನು ಕೇಳಿಸಿಕೊಳ್ಳುತ್ತಾ, ಒಂದು ಪಾನೀಯವನ್ನೊ ಅಥವಾ ಜಿಲೆಟೊ ಭಕ್ಷ್ಯವನ್ನೊ ಆನಂದಿಸಸಾಧ್ಯವಿದೆ. ನೀವು ಇಲ್ಲಿ ಕುಳಿತುಕೊಂಡು ದಾರಿಹೋಕರನ್ನು ನೋಡುತ್ತಿರುವಾಗ ಮತ್ತು ಒಂದೇ ಒಂದು ಕಾರು ಸಹ ನಿಮ್ಮ ಕಣ್ಣಿಗೆ ಬೀಳದೆ ನಿಮ್ಮ ಸುತ್ತಲಿರುವ ಅತ್ಯುತ್ತಮ ವಾಸ್ತುಶಿಲ್ಪವನ್ನು ನೋಡುತ್ತಾ ಮನಸಾರೆ ಮೆಚ್ಚುತ್ತಿರುವಾಗ ಇದು ನಿಜವಾಗಿಯೂ ನೀವು ಕಾಲಪ್ರವಾಹದಲ್ಲಿ ಹಿಂದಕ್ಕೆ ಹೋಗಿರುವ ಅನಿಸಿಕೆಯನ್ನು ನಿಮ್ಮಲ್ಲಿ ಮೂಡಿಸಬಲ್ಲದು.

ಕಲಾತ್ಮಕ ನಿಕ್ಷೇಪಗಳ ಅನ್ವೇಷಣೆಯಲ್ಲಿರುವವರನ್ನು ಈ ನಗರವು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆ ನಗರದ ಅನೇಕ ಅರಮನೆಗಳು, ವಸ್ತುಸಂಗ್ರಹಾಲಯಗಳು ಮತ್ತು ಚರ್ಚುಗಳಲ್ಲಿ ಅನೇಕ ಪ್ರಸಿದ್ಧ ಕಲಾಕಾರರು ಬಿಡಿಸಿರುವ ಚಿತ್ರಗಳಿವೆ. ಕೆಲವು ಸಂದರ್ಶಕರಾದರೋ ಕಿರಿದಾದ ಓಣಿಗಳಲ್ಲಿ ಸಂಚರಿಸುವುದು ಮತ್ತು ತಮ್ಮ ಸುತ್ತಲಿರುವ ಅಪರಿಚಿತ ಸ್ಥಳಗಳನ್ನು ನೋಡುವುದರಲ್ಲೇ ತೃಪ್ತರಾಗುತ್ತಾರೆ. ಇಲ್ಲಿರುವ ಅನೇಕಾನೇಕ ಅಂಗಡಿಗಳು, ಈ ನಗರವು ಯಾವುದಕ್ಕೆ ಪ್ರಸಿದ್ಧಿ ಪಡೆದಿದೆಯೋ ಆ ಸರಕುಗಳನ್ನು ಅಂದರೆ ಬೂರಾನೋ ಎಂಬ ಲಗೂನ್‌ ದ್ವೀಪದಲ್ಲಿ ತಯಾರಿಸಲ್ಪಟ್ಟ ಲೇಸು ಮತ್ತು ಕಸೂತಿಕೆಲಸ ಹಾಗೂ ಮ್ಯೂರಾನೊದಿಂದ ಬರುವ ಸೊಗಸಾದ ಸ್ಫಟಿಕ ಹಾಗೂ ಗಾಜಿನ ಪದಾರ್ಥಗಳನ್ನು ಪ್ರವಾಸಿಗರಿಗೆ ಲಭ್ಯಗೊಳಿಸುತ್ತವೆ. ಒಂದು ವೆಪೊರೆಟೊ ಅಥವಾ ಮೋಟಾರು ದೋಣಿಯಲ್ಲಿ ನಗರದ ಚಿಕ್ಕ ಪ್ರದಕ್ಷಿಣೆಯು ತಾನೇ ವಿಶಿಷ್ಟ ಅನುಭವವಾಗಿದ್ದು, ಈ ಮೇಲಿನ ಉತ್ಪನ್ನಗಳು ಹೇಗೆ ತಯಾರಿಸಲ್ಪಡುತ್ತವೆ ಎಂಬುದನ್ನು ನೋಡಲಿಕ್ಕಾಗಿ ಈ ದ್ವೀಪಗಳಲ್ಲಿ ಒಂದಕ್ಕೆ ನಿಮ್ಮನ್ನು ಕೊಂಡೊಯ್ಯುವವು.

ಮೊನಚಾದ ಕಮಾನುರಚನೆಗಳುಳ್ಳ ಸ್ಮಾರಕ ಸ್ಥಳಗಳು, ಹಳೆಯ ದಿನಗಳ ಪ್ರಾಚ್ಯ ಪ್ರಭಾವಗಳ ಪುರಾವೆಯನ್ನು ನೀಡುತ್ತವೆ. ವೆನಿಸ್‌ ನಗರದ ಮುಖ್ಯ ರಾಜಮಾರ್ಗವಾಗಿರುವ ಗ್ರ್ಯಾಂಡ್‌ ಕೆನಾಲ್‌ನ ಮೇಲಿರುವ ಸುಪ್ರಸಿದ್ಧ ರಿಯಾಲ್ಟೊ ಸೇತುವೆ, ಅದರ ಕೆಳಗೆ ನಿಶ್ಶಬ್ದವಾಗಿ ತೇಲಿಹೋಗುವ ಹೊಳಪುಳ್ಳ ಕಪ್ಪು ಗೊಂಡೋಲ ನಾವೆಗಳೊಂದಿಗೆ ಸಂದರ್ಶಕರ ಗಮನವನ್ನು ಆಕರ್ಷಿಸುತ್ತವೆ.

ಬದುಕಿ ಉಳಿಯಲಿಕ್ಕಾಗಿ ಇನ್ನೂ ಹೋರಾಡುತ್ತಿದೆ

ಆ “ಸುಂದರ ಗಣರಾಜ್ಯ” ಪತನಗೊಂಡು ಎರಡು ಶತಮಾನಗಳು ಕಳೆದ ಬಳಿಕವೂ ವೆನಿಸ್‌ ನಗರವು ಇನ್ನೂ ಬದುಕಿ ಉಳಿಯಲಿಕ್ಕಾಗಿ ಹೋರಾಡುತ್ತಿದೆ, ಆದರೆ ವಿಭಿನ್ನ ರೀತಿಯ ಕದನಗಳಲ್ಲಿ. ಇಸವಿ 1951ರಲ್ಲಿ ಅದರ ಐತಿಹಾಸಿಕ ಕೇಂದ್ರದಲ್ಲಿ 1,75,000ದಷ್ಟಿದ್ದ ನಿವಾಸಿಗಳ ಸಂಖ್ಯೆಯು 2003ರಲ್ಲಿ ಕೇವಲ 64,000ಕ್ಕೆ ಇಳಿದಿದೆ; ಆಸ್ತಿಯ ಬೆಲೆಗಳಲ್ಲಿ ವಿಪರೀತ ಏರಿಕೆ, ಕೆಲಸದ ಕೊರತೆ ಮತ್ತು ತೀರ ಕಡಿಮೆ ಆಧುನಿಕ ಸೌಕರ್ಯಗಳಿರುವುದೇ ಇದಕ್ಕೆ ಕಾರಣ. ಹಾಳಾಗುತ್ತಿರುವ ನಗರವನ್ನು ಹೇಗೆ​—⁠ಒಂದುವೇಳೆ ಸಾಧ್ಯವಿರುವಲ್ಲಿ​—⁠ನವೀಕರಿಸುವುದು ಎಂಬಂಥ ಜಟಿಲವಾದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ.

ಇಸವಿ 1920ಗಳಲ್ಲಿ, ಸ್ಥಳಿಕ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದೆಂಬ ನಿರೀಕ್ಷೆಯಲ್ಲಿ ಮುಖ್ಯ ಭೂಭಾಗದಲ್ಲಿ ಒಂದು ಹೊಸ ಕೈಗಾರಿಕಾ ಕ್ಷೇತ್ರವನ್ನು ನಿರ್ಮಿಸಲಾಯಿತು, ಮತ್ತು ಎಣ್ಣೆ ಟ್ಯಾಂಕರ್‌ಗಳು ಸಂಸ್ಕರಣಾಗಾರಗಳನ್ನು ತಲಪುವಂತೆ ಸಾಧ್ಯಗೊಳಿಸಲಿಕ್ಕಾಗಿ ಲಗೂನಿನ ಮಧ್ಯದಿಂದ ಆಳವಾದ ಕಾಲುವೆಯನ್ನು ತೋಡಲಾಯಿತು. ಈ ಉದ್ಯಮವು ಉದ್ಯೋಗಾವಕಾಶಗಳನ್ನು ನೀಡಿತಾದರೂ, ಮಾಲಿನ್ಯಕ್ಕೆ ಮತ್ತು ನಗರದ ಇತಿಹಾಸಪ್ರಸಿದ್ಧ ಭಾಗಗಳನ್ನು ಆಗಿಂದಾಗ್ಗೆ ಪ್ರವಾಹದಿಂದ ಮುಳುಗಿಸುವ ಆಕ್ವಾ ಆಲ್ಟಾ (ನೀರಿನ ಉಬ್ಬರ) ಎಂದು ಕರೆಯಲ್ಪಡುವ ವಿನಾಶಕರ ಉಬ್ಬರವಿಳಿತಗಳಿಗೆ ಇದೇ ಕಾರಣವೆಂದು ದೂರಲಾಗಿದೆ.

ಲಗೂನ್‌ ಪರಿಸರ ಮತ್ತು ಅದರ ಜಲೀಯ ಚಲನೆ ಹಾಗೂ ಒತ್ತಡವು, ಈ ನಗರದ ಬದುಕಿ ಉಳಿಯುವಿಕೆಗೆ ಅತ್ಯಗತ್ಯವಾಗಿರುವ ಸೂಕ್ಷ್ಮವಾದ ನೈಸರ್ಗಿಕ ಕಾರ್ಯವಿಧಾನವನ್ನು ರೂಪಿಸುತ್ತದೆ ಎಂಬ ವಿಚಾರವು ಹೊಸದೇನಲ್ಲ. 1324ರಷ್ಟು ಆರಂಭದಲ್ಲಿ ವೆನಿಸ್‌ ನಗರದ ನಿವಾಸಿಗಳು, ಮೆಕ್ಕಲು ಮಣ್ಣಿನಿಂದ ಲಗೂನನ್ನು ಅಡಚುವಂಥ ಬೆದರಿಕೆಯನ್ನೊಡ್ಡುವ ನದಿಗಳನ್ನು ಬೇರೆ ಕಡೆಗೆ ತಿರುಗಿಸಲಿಕ್ಕಾಗಿ ಬೃಹತ್‌ ಪ್ರಮಾಣದ ತಾಂತ್ರಿಕ ಕೆಲಸವನ್ನು ಕೈಗೊಂಡರು. ಹದಿನೆಂಟನೆಯ ಶತಮಾನದಲ್ಲಿ, ಆ್ಯಡ್ರಿಯಾಟಿಕ್‌ ಸಮುದ್ರದ ನೀರು ಇದ್ದಕ್ಕಿದ್ದಂತೆ ಲಗೂನಿನೊಳಗೆ ರಭಸದಿಂದ ನುಗ್ಗುವುದನ್ನು ತಡೆಗಟ್ಟುವ ಸಲುವಾಗಿ ಅವರು ಕಡಲ ತಡೆಗೋಡೆಗಳನ್ನು ಸಹ ನಿರ್ಮಿಸಿದರು.

ಈಗ ಸನ್ನಿವೇಶವು ಹಿಂದೆಂದಿಗಿಂತಲೂ ಹೆಚ್ಚು ಕ್ಲಿಷ್ಟಕರವಾಗಿ ಕಂಡುಬರುತ್ತದೆ. ಔದ್ಯೋಗಿಕ ಉಪಯೋಗಗಳಿಗಾಗಿ ಭೂಗತ ಜಲಕುಹರಗಳ ಬರಿದಾಗುವಿಕೆಯ ಫಲಿತಾಂಶವಾಗಿ ನೆಲಪ್ರದೇಶವು ಹೂತುಹೋಗುವ ಸಮಸ್ಯೆಯು ನಿಶ್ಚಯವಾಗಿಯೂ ನಿಲ್ಲಿಸಲ್ಪಟ್ಟಿದೆ ಎಂದು ನಿರೀಕ್ಷಿಸಲಾಗಿದೆಯಾದರೂ, ಲೋಕವ್ಯಾಪಕವಾಗಿ ಸಮುದ್ರದ ಮಟ್ಟಗಳು ಹೆಚ್ಚಾಗುತ್ತಿರುವುದು ಮುಂದುವರಿಯುತ್ತಲೇ ಇದೆ. ಅಷ್ಟುಮಾತ್ರವಲ್ಲ, ನೆಲಸುಧಾರಣೆಯ ಕಾರಣದಿಂದಾಗಿ ಆ ಲಗೂನ್‌ ಕ್ಷೇತ್ರವು ಸಹ ಸಂಕುಚಿತಗೊಂಡಿದೆ ಮತ್ತು ನೆಲ ಹಾಗೂ ಜಲದ ನಡುವಣ ಸಮತೋಲನಕ್ಕೂ ಧಕ್ಕೆಬಂದಿದೆ. ನೀರಿನ ಉಬ್ಬರವು ಬಹಳ ದೀರ್ಘ ಸಮಯದಿಂದಲೂ ಬೆದರಿಕೆಯನ್ನೊಡ್ಡುತ್ತಿತ್ತಾದರೂ ಈಗ ಅದು ಇನ್ನಷ್ಟು ಅಧಿಕಗೊಂಡಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಸೆಂಟ್‌ ಮಾರ್ಕ್ಸ್‌ ಚೌಕವು ಒಂದು ವರ್ಷದಲ್ಲಿ ಸುಮಾರು ಐದರಿಂದ ಏಳು ಬಾರಿ ಪ್ರವಾಹಕ್ಕೆ ತುತ್ತಾಗಿತ್ತು. ಒಂದು ಶತಮಾನದ ಬಳಿಕ, ಕೇವಲ ಒಂದು ವರ್ಷದಲ್ಲಿಯೇ ಅದು 80 ಬಾರಿ ಪ್ರವಾಹಕ್ಕೆ ತುತ್ತಾಯಿತು.

ವೆನಿಸ್‌ ನಗರದ ಅಸಾಧಾರಣವಾದ ಐತಿಹಾಸಿಕ ಹಾಗೂ ಕಲಾತ್ಮಕ ಪರಂಪರೆ ಮತ್ತು ಅದು ಎದುರಿಸುವ ಸಮಸ್ಯೆಗಳು ಅಂತಾರಾಷ್ಟ್ರೀಯವಾಗಿ ಚಿಂತೆಯ ಅಲೆಗಳನ್ನು ಎಬ್ಬಿಸಿವೆ. ಈ ನಗರದ ಬಂದರಿನ ಕೆಲಸಕಾರ್ಯಗಳಿಗೆ ಅಥವಾ ಇದರ ಜನಸಂಖ್ಯೆಯ ದೈನಂದಿನ ಜೀವಿತಕ್ಕೆ ಯಾವುದೇ ರೀತಿಯ ಭಂಗವನ್ನು ಉಂಟುಮಾಡದೆ, ನೀರಿನ ಉಬ್ಬರದಿಂದ ನಗರವನ್ನು ರಕ್ಷಿಸುವ ಮತ್ತು ಪರಿಸರವನ್ನು ಅಮೂಲ್ಯವಾಗಿ ಪರಿಗಣಿಸುವ ಗುರಿಯಿಂದ ವಿಶೇಷ ಶಾಸನಗಳು ಹೊರಡಿಸಲ್ಪಟ್ಟಿವೆ. ಇದನ್ನು ಮಾಡಲಿಕ್ಕಾಗಿರುವ ಅತ್ಯುತ್ತಮ ವಿಧವು ಯಾವುದು ಎಂಬುದು ಮಾತ್ರ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ.

ಕಾಲುವೆಯ ದಂಡೆಗಳನ್ನು ಏರಿಸುವುದು, ನೆಲಗಟ್ಟು ಇರುವ ಕ್ಷೇತ್ರಗಳಲ್ಲಿ ಭೂಮಿಯ ಒಳಪದರದಿಂದ ನೀರು ಮೇಲ್ಮುಖವಾಗಿ ಚಲಿಸಲು ಅವಕಾಶವಿಲ್ಲದಂತೆ ಮಾಡುವುದು, ಮತ್ತು ಆಕ್ವಾ ಆಲ್ಟಾ ಪರಿಸ್ಥಿತಿಗಳಲ್ಲಿ ಚರಂಡಿ ನೀರು ಹಿಂದಕ್ಕೆ ಹರಿದುಬರುವುದನ್ನು ತಡೆಗಟ್ಟುವ ಕೆಲಸವು ನಡೆಯುತ್ತಾ ಇದೆ. ಅತ್ಯಂತ ವಿವಾದಾಸ್ಪದವಾದ ಕ್ರಮವು, ಲಗೂನಿನ ಪ್ರವೇಶದ್ವಾರಗಳ ಸುತ್ತಲೂ ಚಲನೀಯ ತಡೆಗಟ್ಟುಗಳ ವ್ಯವಸ್ಥೆಯ ಯೋಜಿತ ನಿರ್ಮಾಣವೇ ಆಗಿದೆ; ನೀರಿನ ಉಬ್ಬರವು ಬೆದರಿಕೆಯನ್ನೊಡ್ಡುವಾಗ, ಈ ತಡೆಗಟ್ಟುಗಳು ಮೇಲೇರುವವು.

ಈ ಉದ್ದೇಶವು ತುಂಬ ಸಮಯ, ಗಮನ, ಶಕ್ತಿ, ಅಥವಾ ಸಂಪನ್ಮೂಲಗಳನ್ನು ಕೇಳಿಕೊಳ್ಳುತ್ತದೆ. ‘ಸಮುದ್ರದಲ್ಲಿನ ಶೋಭಾಯಮಾನವಾದ ನಗರವು’ ನಿಜವಾಗಿಯೂ ತುಂಬ ಆಸಕ್ತಿಕರ ಇತಿಹಾಸವನ್ನು ಹೊಂದಿದೆ, ಆದರೆ ಬೇರೆ ಬೇರೆ ಬರಹಗಾರರು ಹೇಳಿಕೆ ನೀಡಿರುವಂತೆ, “ಹೊರಗಿನವರು ಸ್ಥಳಿಕ ಜನರ ಆವಶ್ಯಕತೆಗಳನ್ನು ಕಡೆಗಣಿಸುವ ಮೂಲಕ ಅಥವಾ ಅವರನ್ನು ಆ ನಗರದಿಂದ ಬಲವಂತವಾಗಿ ಹೊರಡಿಸುವ ಮೂಲಕವೂ ಇದನ್ನು ಕೇವಲ ಒಂದು ವಸ್ತುಪ್ರದರ್ಶನಾಲಯವಾಗಿ ಮಾರ್ಪಡಿಸುವ” ಅಪಾಯಕ್ಕೆ ಅದು ಬಲಿಯಾಗಿದೆ. ದೀರ್ಘಕಾಲದಿಂದಲೂ ವೆನಿಸ್‌ ನಗರವು ಕಷ್ಟಕರವಾದ ನೈಸರ್ಗಿಕ ಪರಿಸರದೊಂದಿಗೆ ಹೆಣಗಾಡಬೇಕಾಗಿತ್ತು, ಆದರೆ ಈಗ “ನಗರವನ್ನು ಕೇವಲ ಭೌತಿಕ ರೀತಿಯಲ್ಲಿ ನೀರಿನಿಂದ ಸಂರಕ್ಷಿಸುವುದಷ್ಟೇ ಸಾಕಾಗದು; ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಚೈತನ್ಯಗೊಳಿಸಲ್ಪಟ್ಟಿರುವ, ಜನನಿವಾಸಿತವಾಗಿರುವ, ಲವಲವಿಕೆಯಿಂದಿರುವ ಮತ್ತು ಜೀವಕಳೆಯಿಂದ ತುಂಬಿರುವಂಥ ಒಂದು ನಗರಕ್ಕೆ ಈ ಸಂರಕ್ಷಣೆಯು ನೀಡಲ್ಪಡಬೇಕು.” (g05 3/22)

[ಪುಟ 16ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ವೆನಿಸ್‌

[ಪುಟ 16ರಲ್ಲಿರುವ ಚಿತ್ರ]

ಗ್ರ್ಯಾಂಡ್‌ ಕೆನಾಲ್‌ನ ಮೇಲಿರುವ ರಿಯಾಲ್ಟೊ ಸೇತುವೆ

[ಪುಟ 16, 17ರಲ್ಲಿರುವ ಚಿತ್ರ]

ಸಾನ್‌ ಜೋರ್‌ಜೋ ಮಾಜೋರಿ

[ಪುಟ 17ರಲ್ಲಿರುವ ಚಿತ್ರ]

ಸಾಂಟಾ ಮಾರೀಆ ಟೆಲಾ ಸಾಲೂಟೆ

[ಪುಟ 18ರಲ್ಲಿರುವ ಚಿತ್ರ]

ಗ್ರ್ಯಾಂಡ್‌ ಕೆನಾಲ್‌ನ ಪಕ್ಕಗಳಲ್ಲಿರುವ ರೆಸ್ಟಾರಂಟ್‌ಗಳು

[ಪುಟ 19ರಲ್ಲಿರುವ ಚಿತ್ರ]

ಸೆಂಟ್‌ ಮಾರ್ಕ್ಸ್‌ ಚೌಕದಲ್ಲಿ ಪ್ರವಾಹ

[ಕೃಪೆ]

Lepetit Christophe/GAMMA

[ಪುಟ 16ರಲ್ಲಿರುವ ಚಿತ್ರ ಕೃಪೆ]

ಭೂಪಟ: Mountain High Maps® Copyright © 1997 Digital Wisdom, Inc.; ಹಿನ್ನೆಲೆ ಚಿತ್ರ: © Medioimages

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ