ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಸುವಾರ್ತೆಯನ್ನು ಸಾರಲು ಹಿಂಜರಿಯಬೇಡಿರಿ
ಯೂರೋಪಿಯನ್ ಪರಿಶೋಧಕರು, ಗಲ್ಫ್ ಆಫ್ ವೆನಿಸ್ವೇಲವನ್ನು ಹಾಗೂ ಲೇಕ್ ಮರಕೈಬೊವನ್ನು ಪ್ರಥಮ ಬಾರಿ ಸಂದರ್ಶಿಸಿದಾಗ, ಹೆಚ್ಚು ಆಳವಿಲ್ಲದ ನೀರಿನಲ್ಲಿ ಎತ್ತರಿಸಿ ಕಟ್ಟಲ್ಪಟ್ಟಿರುವ, ಹುಲ್ಲುಹೊದಿಸಲ್ಪಟ್ಟ ಗುಡಿಸಿಲುಗಳಿಂದ ಕಡಲ ತೀರವು ತುಂಬಿತ್ತು. ಆ ದೃಶ್ಯವು ಇಟಲಿಯ ವೆನಿಸ್ ಅನ್ನು ಜ್ಞಾಪಕಕ್ಕೆ ತರುತ್ತಿತ್ತು—ಅಲ್ಲಿಯೂ ಜನರು ಕಡಲ ತೀರದುದ್ದಕ್ಕೂ ತಮ್ಮ ಮನೆಗಳನ್ನು ಕಟ್ಟಿದ್ದರು. ಸ್ಪ್ಯಾನಿಷ್ ಭಾಷೆಯನ್ನು ಮಾತಾಡುತ್ತಿದ್ದ ಪರಿಶೋಧಕರು, ಆ ಸ್ಥಳಕ್ಕೆ ವೆನಿಸ್ವೇಲ ಎಂದು ಹೆಸರಿಟ್ಟರು. ಅದರ ಅರ್ಥ “ಚಿಕ್ಕ ವೆನಿಸ್.”
ಇಂದು, ಈ ಸುಂದರವಾದ ದೇಶದಲ್ಲಿ, ಇನ್ನೊಂದು ರೀತಿಯ ನಿರ್ಮಾಣ ಕಾರ್ಯಕ್ರಮವು ನಡೆಯುತ್ತಾ ಇದೆ; ಇದು ಆತ್ಮಿಕ ರೀತಿಯದ್ದಾಗಿದೆ. ಅಲ್ಲಿನ ಯೆಹೋವನ ಸಾಕ್ಷಿಗಳು, ದೊರಕುವ ಪ್ರತಿಯೊಂದು ಸಂದರ್ಭದಲ್ಲೂ ರಾಜ್ಯದ ಬೀಜವನ್ನು ಬಿತ್ತುವುದರಲ್ಲಿ ತುಂಬ ಕಾರ್ಯಮಗ್ನರಾಗಿದ್ದಾರೆ. ಅದರಿಂದ ಫಲಿಸುವ ಆತ್ಮಿಕ ಕೊಯ್ಲು, “ಬೆಳೆಯ ಯಜಮಾನ”ನಾದ ಯೆಹೋವ ದೇವರಿಗೆ ಅತ್ಯಧಿಕ ಸ್ತುತಿಯನ್ನು ತರುತ್ತಿದೆ.—ಮತ್ತಾಯ 9:37, 38.
ಸಂಚರಣ ಮೇಲ್ವಿಚಾರಕರೊಬ್ಬರು, ವಾಯವ್ಯ ವೆನಿಸ್ವೇಲದಲ್ಲಿ ಸೂಲ್ಯ ಎಂಬ ರಾಜ್ಯದಲ್ಲಿರುವ ಒಂದು ಸಭೆಯನ್ನು ಸಂದರ್ಶಿಸಿದಾಗ, ಅವರೂ ಅವರ ಪತ್ನಿಯೂ ಸಮೀಪದಲ್ಲಿರುವ ಟೋಆಸ್ ಎಂಬ ಹೆಸರಿನ ಚಿಕ್ಕ ದ್ವೀಪವನ್ನು ಸಂದರ್ಶಿಸುವಂತೆ ಸ್ಥಳಿಕ ಸಾಕ್ಷಿಗಳು ಏರ್ಪಡಿಸಿದರು. ಆ ದ್ವೀಪಕ್ಕೆ ಹೋಗಲಿಕ್ಕಾಗಿ ನಸುಕಿನಲ್ಲಿಯೇ ಬರುವ ಹಡಗನ್ನು ಹಿಡಿಯಲು ಅವರು ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆಗ, ಆ ಸಂಚರಣ ಮೇಲ್ವಿಚಾರಕನ ಪತ್ನಿಯಾಗಿದ್ದ ಮರೀ, ಹಡಗಿನಲ್ಲಿದ್ದ ಕೆಲವು ಕೆಲಸಗಾರರೊಂದಿಗೆ ಮಾತಾಡೋಣ ಎಂದು, ತನ್ನ ಜೊತೆಯಲ್ಲಿದ್ದ ಒಬ್ಬ ಪೂರ್ಣ ಸಮಯದ ಪಯನೀಯರ್ ಸಹೋದರಿಗೆ ಹೇಳಿದಳು. ಆ ಪಯನೀಯರ್ ಸಹೋದರಿಯು ಇದಕ್ಕೆ ಒಪ್ಪಿಕೊಂಡಳು.
ಮರೀ ಒಬ್ಬ ಮೆಕಾನಿಕ್ನ ಬಳಿಗೆ ಹೋಗಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಕೊಟ್ಟಳು. ಅವಳು “ದೇವರನ್ನು ಗೌರವಿಸುವ ಒಂದು ಕುಟುಂಬವನ್ನು ಕಟ್ಟುವುದು” ಎಂಬ ಅಧ್ಯಾಯವನ್ನು ಅವನಿಗೆ ತೋರಿಸಿದಳು. ಅವನು ಅದನ್ನು ಇಷ್ಟಪಟ್ಟಂತೆ ತೋರಿತು. ಆಗ ಮರೀ, ಈ ಪುಸ್ತಕದ ಉಪಯೋಗವನ್ನು ಅವನಿಗೆ ವಿವರಿಸಿ, ಅವನ ಮನೆಯಲ್ಲೇ ಒಂದು ಬೈಬಲ್ ಅಭ್ಯಾಸವನ್ನು ನಡೆಸಸಾಧ್ಯವಿದೆ ಎಂದು ಹೇಳಿದಳು. ಅವನು ಪುಸ್ತಕವನ್ನು ತೆಗೆದುಕೊಂಡನು, ಹಾಗೂ ಯಾರಾದರೊಬ್ಬರು ಅವನ ಮನೆಗೆ ಹೋಗಿ ಅವನನ್ನು ಭೇಟಿಮಾಡುವಂತೆ ಏರ್ಪಾಡುಗಳನ್ನು ಮಾಡಲಾಯಿತು.
ಸ್ವಲ್ಪ ಸಮಯದ ಬಳಿಕ, ಆ ಸ್ಥಳದಲ್ಲಿ, ಒಂದು ದಿನದ ವಿಶೇಷ ಸಮ್ಮೇಳನವು ನಡೆಯಿತು. ಸೆನರ್ ನಾವಾ ಎಂಬ ಹೆಸರಿನ ಆ ಮೆಕಾನಿಕ್ನ ಜೊತೆ, ಅವನ ಪತ್ನಿಯೂ ಇಬ್ಬರು ಎಳೆಯ ಪುತ್ರಿಯರೂ ಅಲ್ಲಿರುವುದನ್ನು ನೋಡಿ ಮರೀಯಳಿಗೆ ಎಷ್ಟೊಂದು ಆಶ್ಚರ್ಯವಾಯಿತು! ಅವರ ಕುಟುಂಬ ಬೈಬಲ್ ಅಭ್ಯಾಸದ ವಿಷಯದಲ್ಲಿ ಅವಳ ಅಭಿಪ್ರಾಯವೇನೆಂದು ಮರೀ ಅವನ ಪತ್ನಿಯನ್ನು ಕೇಳಿದಳು. ಅವಳ ಉತ್ತರವು ಅತ್ಯಂತ ಆಸಕ್ತಿಕರವಾಗಿತ್ತು.
“ನಾವು ಸತ್ಯವನ್ನು ಕಲಿತಿರುವುದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಅವಳು ಹೇಳಿದಳು. ತದನಂತರ ಅವಳು ವಿವರಿಸಿದ್ದು, “ನೀವು ನನ್ನ ಪತಿಯೊಂದಿಗೆ ಸುವಾರ್ತೆಯ ವಿಷಯದಲ್ಲಿ ಮಾತಾಡಿದ್ದಾಗ, ಆಗ ತಾನೇ ಅವರು ನನ್ನನ್ನು ಬಿಟ್ಟು, ಇನ್ನೊಬ್ಬ ಸ್ತ್ರೀಯೊಂದಿಗೆ ಸಹವಾಸಿಸುತ್ತಿದ್ದರು. ಅವರು ಭಾರಿ ಕುಡುಕರೂ ಆಗಿದ್ದರು. ಕೆಲವೊಮ್ಮೆ ಕುಡಿದು ಮತ್ತೇರಿದ್ದಾಗ ಅವರು ಅವಾಚ್ಯ ಶಬ್ದಗಳನ್ನು ನುಡಿಯುತ್ತಿದ್ದರು, ಇದು ನಮ್ಮ ದ್ವೀಪದ ಚಿಕ್ಕ ಸಮುದಾಯದಲ್ಲಿದ್ದ ಜನರಿಗೆ ಇಷ್ಟವಾಗುತ್ತಿರಲಿಲ್ಲ. ನನ್ನ ಪತಿ ಪ್ರೇತಾರಾಧನೆಯಲ್ಲೂ ಒಳಗೂಡುತ್ತಿದ್ದರು. ಆದರೆ, ಅವರು ಅಭ್ಯಾಸದಿಂದ ಪಡೆದುಕೊಂಡಿರುವ ಬೈಬಲ್ ಜ್ಞಾನವು, ಅವರು ತಮ್ಮ ಜೀವಿತದಲ್ಲಿ ನಂಬಲಸಾಧ್ಯವಾದಷ್ಟು ಬದಲಾವಣೆಗಳನ್ನು ಮಾಡುವಂತೆ ಸಹಾಯ ಮಾಡಿದೆ. ಅವರು ತಮ್ಮ ಎಲ್ಲ ಅಶುದ್ಧ ಹವ್ಯಾಸಗಳನ್ನು ಬಿಟ್ಟುಬಿಟ್ಟಿದ್ದಾರೆ. ಅವರ ಹೆತ್ತವರು ಕ್ಯಾಥೊಲಿಕರಾಗಿದ್ದು, ಈ ಎಲ್ಲ ಬದಲಾವಣೆಗಳನ್ನು ನೋಡಿ ತುಂಬ ಪ್ರಭಾವಿತರಾಗಿದ್ದಾರೆ. ಈಗ ಇವರು ಒಬ್ಬ ಜವಾಬ್ದಾರಿಯುತ ಪತಿಯೂ ತಂದೆಯೂ ಆಗಿರುವುದನ್ನು ನೋಡಿ, ಹೆತ್ತವರು ಸಂತೋಷಗೊಂಡಿದ್ದಾರೆ.”
ಸೆನರ್ ನಾವಾ 1996ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಈಗ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಮಾಡುತ್ತಿದ್ದಾನೆ. ಅವನ ಹೆಂಡತಿಯಾದ ಜೆನೀ, 1997ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಈ ಹಡಗಿನ ಮೆಕಾನಿಕ್ನಲ್ಲಾದ ಎಲ್ಲ ಬದಲಾವಣೆಗಳನ್ನು ನೋಡಿ, ಆ ಪಟ್ಟಣದ ಪೌರ ಸಭಾಧ್ಯಕ್ಷನು ಎಷ್ಟು ಪ್ರಭಾವಿತನಾದನೆಂದರೆ, ಅವನು ಸಹ ಒಂದು ಬೈಬಲ್ ಅಭ್ಯಾಸಕ್ಕಾಗಿ ಕೇಳಿಕೊಂಡನು. ಆ ಬೆಳಗ್ಗೆ ಹಡಗಿಗಾಗಿ ಸಾಲಿನಲ್ಲಿ ನಿಂತು ಕಾಯುತ್ತಿರುವಾಗ, ಸುವಾರ್ತೆಯನ್ನು ಸಾರಲು ಹಿಂಜರಿಯದೆ ಇದ್ದುದಕ್ಕಾಗಿ ಆ ಸಹೋದರಿಯರು ಎಷ್ಟೊಂದು ಸಂತೋಷಪಟ್ಟರು!
[ಪುಟ 7 ರಲ್ಲಿರುವ ಚಿತ್ರ]
ಒಬ್ಬ ಹಡಗಿನ ಮೆಕಾನಿಕ್ನೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಮೂಲಕ, ಸಂತೋಷಭರಿತ ಫಲಿತಾಂಶಗಳು ದೊರಕಿದವು