ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಾ ಇವೆಯೊ?
“ಹವಾಮಾನ ಬದಲಾವಣೆಯಿಂದ ಸಂಭವಿಸುವ ವಿಪರೀತ ಘಟನೆಗಳಿಂದಾಗಿ ಭವಿಷ್ಯತ್ತಿನಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುವುದೆಂದು ನಾವು ನಿರೀಕ್ಷಿಸಬಲ್ಲೆವು. ಇದರರ್ಥ, ನಾವು ಹೊಸ ರೀತಿಯ ಹವಾಮಾನ ಗಂಡಾಂತರಗಳನ್ನು ಮತ್ತು ಆಸ್ತಿ ಹಾಗೂ ಜೀವಗಳ ಹೆಚ್ಚಿನ ನಷ್ಟವನ್ನು ಎದುರಿಸಲು ಸಿದ್ಧರಾಗಿರಬೇಕು. . . . ಮುನ್ನೆಚ್ಚರಿಕೆಯ ಸೂತ್ರಕ್ಕನುಸಾರ, ಯಾವುದೇ ಗಣನೀಯ ಬದಲಾವಣೆಗಳಿಗೆ ನಮ್ಮನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುವುದು ವಿವೇಕಯುತವಾಗಿದೆ.” —“ಟಾಪಿಕ್ಸ್ ಜೀಓ—ವಾರ್ಷಿಕ ಪುನರ್ವಿಮರ್ಶೆ: ನೈಸರ್ಗಿಕ ದುರಂತಗಳು 2003.” (ಇಂಗ್ಲಿಷ್)
ಇಸವಿ 2003ರ ಬೇಸಿಗೆಕಾಲದಂದು ಯೂರೋಪಿನ ಹಲವು ಭಾಗಗಳು ಬಿಸಿಲ ತಾಪದಿಂದ ಬೆಂದುಹೋದವು. ಇಟಲಿ, ನೆದರ್ಲೆಂಡ್ಸ್, ಪೋರ್ಚುಗಲ್, ಫ್ರಾನ್ಸ್, ಬ್ರಿಟನ್, ಬೆಲ್ಜಿಯಮ್ ಮತ್ತು ಸ್ಪೆಯಿನ್ನಲ್ಲಿ ತೀಕ್ಷ್ಣವಾದ ತಾಪಮಾನದಿಂದಾಗಿ ಸುಮಾರು 30,000 ಮಂದಿ ಮೃತಪಟ್ಟರು. ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಭಾರತದಲ್ಲಿ ಮಳೆಗಾಲಕ್ಕಿಂತ ಮುಂಚಿನ ತೀವ್ರವಾದ ಬಿಸಿಲಿನ ಅವಧಿಯಿಂದಾಗಿ 1,500 ಮಂದಿ ತಮ್ಮ ಜೀವವನ್ನು ಕಳೆದುಕೊಂಡರು. ಅದೇ ಸಮಯದಲ್ಲಿ ಆಸ್ಟ್ರೇಲಿಯದಲ್ಲಿ, ಬರಗಾಲ ಮತ್ತು ಹಿಂದೆಂದೂ ಇರದಿದ್ದಷ್ಟು ಉಷ್ಣತೆಯಿಂದಾಗಿ ಕಾಡ್ಗಿಚ್ಚು ಉಂಟಾಗಿ 70 ಲಕ್ಷಕ್ಕಿಂತಲೂ ಹೆಚ್ಚು ಎಕರೆ ಸ್ಥಳವು ಸುಟ್ಟು ಭಸ್ಮವಾಯಿತು.
ವಿಶ್ವ ಪವನಶಾಸ್ತ್ರೀಯ ಸಂಸ್ಥೆಗನುಸಾರ, “2003ರ ಅಟ್ಲಾಂಟಿಕ್ನ ಚಂಡಮಾರುತ ಕಾಲದಲ್ಲಿ, ಹೆಸರಿಸಲಾದ 16 ಬಿರುಗಾಳಿಗಳು ಹುಟ್ಟಿಕೊಂಡವು. ಇದು, 1944-1996ರ ತನಕದ ವಾರ್ಷಿಕ ಸರಾಸರಿ ಸಂಖ್ಯೆಯಾದ 9.8ಕ್ಕಿಂತ ಬಹಳ ಹೆಚ್ಚಾಗಿದೆ. ಆದರೆ, 1990ಗಳ ಮಧ್ಯಭಾಗದಿಂದ ಉಷ್ಣವಲಯದಲ್ಲಾದ ಹವಾಮಾನ ಬದಲಾವಣೆಯ ಸಂಖ್ಯೆಯಲ್ಲಿನ ವಾರ್ಷಿಕ ಹೆಚ್ಚಳಕ್ಕೆ ಇದು ಹೊಂದಾಣಿಕೆಯಲ್ಲಿದೆ.” ಉಷ್ಣವಲಯದ ಹವಾಮಾನ ಬದಲಾವಣೆಯಲ್ಲಿನ ಈ ಹೆಚ್ಚಳವು 2004ರಲ್ಲಿಯೂ ಮುಂದುವರಿಯಿತು. ಆ ವರುಷದಲ್ಲಿ, ಭಯಂಕರ ಚಂಡಮಾರುತಗಳು ಕ್ಯಾರಿಬೀಯನ್ ಮತ್ತು ಮೆಕ್ಸಿಕೊ ಕೊಲ್ಲಿಯನ್ನು ಬಡಿದವು ಹಾಗೂ ಸುಮಾರು 2,000 ಜೀವಗಳನ್ನು ಬಲಿತೆಗೆದುಕೊಂಡವು. ಮಾತ್ರವಲ್ಲದೆ, ಅವು ತಮ್ಮ ನಾಶಕಾರಕ ಪರಿಣಾಮಗಳ ಜಾಡನ್ನೂ ಬಿಟ್ಟುಹೋದವು.
ಇಸವಿ 2003ರಲ್ಲಿ, ಶ್ರೀ ಲಂಕಕ್ಕೆ ಸುಂಟರಗಾಳಿ ಬಡಿದು ತೀವ್ರ ನೆರೆಹಾವಳಿಯುಂಟಾಗಿ ಕಡಿಮೆಪಕ್ಷ 250 ಮಂದಿ ಮೃತಪಟ್ಟರು. 2004ರಲ್ಲಿ, ಪಶ್ಚಿಮ ಪೆಸಿಫಿಕ್ನಲ್ಲಿ ಕಡಿಮೆಪಕ್ಷ 23 ತುಫಾನುಗಳು ಸಂಭವಿಸಿದ ದಾಖಲೆಯಿದೆ. ಅವುಗಳಲ್ಲಿ ಹತ್ತು ತೂಫಾನುಗಳು ಜಪಾನ್ ದೇಶವನ್ನು ಬಾಧಿಸಿದವು. ಅಲ್ಲಿ ಅವು ಬಹಳಷ್ಟು ಹಾನಿಯನ್ನು ಉಂಟುಮಾಡಿ 170ಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡವು. ಭಾರೀ ಮಳೆಯಿಂದಾಗಿ ಸಂಭವಿಸಿದ ನೆರೆಯಿಂದ ಸುಮಾರು ಮೂರು ಕೋಟಿ ಜನರು ದಕ್ಷಿಣ ಏಷ್ಯಾದಲ್ಲಿ, ಮುಖ್ಯವಾಗಿ ಬಾಂಗ್ಲಾದೇಶದಲ್ಲಿ ಬಾಧಿತರಾದರು. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡರು, ಹೆಚ್ಚುಕಡಿಮೆ 30 ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟುಹೋಗಬೇಕಾಯಿತು ಮತ್ತು 1,300ಕ್ಕಿಂತಲೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು.
ಇಸವಿ 2003ರಲ್ಲಿ ಅನೇಕ ಪ್ರಚಂಡವಾದ ಭೂಕಂಪಗಳು ಸಂಭವಿಸಿದವು. ಮೇ 21ರಂದು ಅಲ್ಜೀರಿಯದ ಆಲ್ಜಿಯರ್ಸಿನಲ್ಲಿ ಸಂಭವಿಸಿದ ಭೂಕಂಪದಿಂದಾಗಿ 10,000 ಮಂದಿ ಗಾಯಗೊಂಡರು ಮತ್ತು 2,00,000 ಜನರು ತಮ್ಮ ಮನೆಗಳನ್ನು ಕಳೆದುಕೊಂಡರು. ಡಿಸೆಂಬರ್ 26ರಂದು ಬೆಳಗ್ಗೆ 5:26ಕ್ಕೆ, ಇರಾನಿನ ಬಾಮ್ ನಗರದ ಸುಮಾರು ಎಂಟು ಕಿಲೊಮೀಟರ್ ದಕ್ಷಿಣಕ್ಕೆ ಭೂಮಿಯು ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 6.5ರಷ್ಟಿದ್ದ ಆ ಭೂಕಂಪವು ನಗರದ 70 ಪ್ರತಿಶತ ಭಾಗವನ್ನು ಧ್ವಂಸಗೊಳಿಸಿತು, 40,000 ಜನರ ಜೀವವನ್ನು ಕಸಿದುಕೊಂಡಿತು ಮತ್ತು 1,00,000ಕ್ಕಿಂತಲೂ ಹೆಚ್ಚು ಜನರನ್ನು ಮನೆಯಿಲ್ಲದವರನ್ನಾಗಿ ಮಾಡಿತು. ಅದು ಆ ವರುಷದ ಅತಿ ಮಾರಕ ನೈಸರ್ಗಿಕ ವಿಪತ್ತಾಗಿತ್ತು. ಬಾಮ್ ನಗರದ 2,000 ವರುಷ ಹಳೆಯ ಆರ್ಗೇಬಾಮ್ ಎಂಬ ದುರ್ಗದ ಹೆಚ್ಚಿನ ಭಾಗವನ್ನು ಸಹ ಅದು ನೆಲಸಮಮಾಡಿತು. ಹೀಗಾಗಿ, ಆ ಪ್ರದೇಶದ ಆರ್ಥಿಕವಾಗಿ ಪ್ರಾಮುಖ್ಯವಾದ ಪ್ರವಾಸಿಗರ ಆಕರ್ಷಕ ತಾಣವು ನಾಶವಾಯಿತು.
ಇದು ಸಂಭವಿಸಿ ಸರಿಯಾಗಿ ಒಂದು ವರುಷದ ಅನಂತರ, ರಿಕ್ಟರ್ ಮಾಪಕದಲ್ಲಿ 9.0ರಷ್ಟಿದ್ದ ಇನ್ನೊಂದು ಭೂಕಂಪವು ಇಂಡೊನೇಷಿಯಾದ ಪಶ್ಚಿಮ ಕರಾವಳಿಯಲ್ಲಿರುವ ಉತ್ತರ ಸುಮಾತ್ರ ದ್ವೀಪದಿಂದ ಸ್ವಲ್ಪವೇ ದೂರದಲ್ಲಿ ಸಂಭವಿಸಿತು. ಇದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿರುವವುಗಳಲ್ಲೇ ಅತಿ ಮಾರಕವಾದ ಸುನಾಮಿಗಳನ್ನು ಉಂಟುಮಾಡಿತು. ಆ ಮಾರಕ ಅಲೆಗಳು 2,00,000ಕ್ಕಿಂತಲೂ ಹೆಚ್ಚು ಮಂದಿಯ ಜೀವವನ್ನು ಬಲಿತೆಗೆದುಕೊಂಡವು ಮತ್ತು ಇದಕ್ಕಿಂತಲೂ ಹೆಚ್ಚು ಜನರನ್ನು ಗಾಯಗೊಳಿಸಿದವು ಅಥವಾ ಮನೆಯಿಲ್ಲದವರನ್ನಾಗಿ ಮಾಡಿದವು ಇಲ್ಲವೆ ಇವೆರಡನ್ನೂ ಅನುಭವಿಸುವಂತೆ ಮಾಡಿದವು. ಆಫ್ರಿಕದ ಪೂರ್ವ ಕರಾವಳಿಯು ಸಹ, ಅಂದರೆ ಭೂಕಂಪದ ಅಧಿಕೇಂದ್ರದಿಂದ 4,500 ಕಿಲೊಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚು ದೂರದ ಸ್ಥಳವು ಸಹ ಈ ಸುನಾಮಿಯ ಮಾರಕ ಹೊಡೆತವನ್ನು ಅನುಭವಿಸಿತು.
ಭವಿಷ್ಯತ್ತು ಕರಾಳವಾಗಿದೆಯೊ?
ಇವೆಲ್ಲ ಘಟನೆಗಳು, ಮುಂದೆ ಸಂಭವಿಸಲಿರುವ ಸಂಗತಿಗಳ ಛಾಯೆಯಾಗಿವೆಯೊ? ಹವಾಮಾನಕ್ಕೆ ಸಂಬಂಧಿಸಿದ ವಿಪತ್ತುಗಳ ವಿಷಯದಲ್ಲಿ, ವಾಯುಮಂಡಲದಲ್ಲಿ ಮಾನವರಿಂದ ಉಂಟುಮಾಡಲ್ಪಟ್ಟಿರುವ ಬದಲಾವಣೆಗಳು ಲೋಕದ ವಾತಾವರಣವನ್ನು ಬದಲಾಯಿಸುತ್ತಿವೆ ಮತ್ತು ಇದು ಅತಿ ವಿಪರೀತವಾದ ಹವಾಮಾನಕ್ಕೆ ಒಂದು ಕಾರಣವಾಗಿದೆ ಎಂದು ಅನೇಕ ವಿಜ್ಞಾನಿಗಳು ನಂಬುತ್ತಾರೆ. ಇದು ಸತ್ಯವಾಗಿರುವಲ್ಲಿ, ಭವಿಷ್ಯದ ಬಗ್ಗೆ ಇದೊಂದು ಒಳ್ಳೇ ಸೂಚನೆಯಾಗಿರುವುದಿಲ್ಲ. ಈ ಗಂಡಾಂತರವನ್ನು ಮತ್ತಷ್ಟು ಹೆಚ್ಚಿಸುವ ಇನ್ನೊಂದು ವಿಷಯವು, ಇಂದು ಹೆಚ್ಚೆಚ್ಚು ಜನರು ಸ್ವಆಯ್ಕೆಯಿಂದ ಇಲ್ಲವೆ ಬೇರೆ ದಾರಿಯಿಲ್ಲದೆ ವಿಪತ್ತಿಗೆ ತುತ್ತಾಗುವಂಥ ಕ್ಷೇತ್ರಗಳಲ್ಲಿ ವಾಸಿಸುತ್ತಿರುವುದೇ ಆಗಿದೆ.
ವಿಪತ್ತಿಗೆ ಸಂಬಂಧಿಸಿದ ಸಾವುಗಳಲ್ಲಿ 95 ಪ್ರತಿಶತ, ಪ್ರಗತಿಶೀಲ ದೇಶಗಳಲ್ಲಿ ಸಂಭವಿಸುತ್ತವೆ ಎಂದು ಅಂಕಿಸಂಖ್ಯೆಗಳು ಸೂಚಿಸುತ್ತವೆ. ಇನ್ನೊಂದು ಬದಿಯಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಇಂಥ ಮರಣದ ಸಂಖ್ಯೆ ಕಡಿಮೆಯಿರುತ್ತದಾದರೂ ಅವು 75 ಪ್ರತಿಶತ ಆರ್ಥಿಕ ನಷ್ಟವನ್ನು ಅನುಭವಿಸುತ್ತವೆ. ಹೆಚ್ಚುತ್ತಾ ಹೋಗುತ್ತಿರುವ ಇಂಥ ದೊಡ್ಡ ಮೊತ್ತದ ನಷ್ಟಗಳನ್ನು ಭರ್ತಿಮಾಡಲು ತಮ್ಮಲ್ಲಿ ಸಾಕಷ್ಟು ಹಣವಿರುವುದೊ ಎಂಬುದಾಗಿ ವಿಮೆ ಕಂಪೆನಿಗಳು ಸಹ ಚಿಂತಿಸುತ್ತವೆ.
ಮುಂದಿನ ಲೇಖನದಲ್ಲಿ, ವಿಪತ್ತುಗಳಿಗೆ ನಡೆಸುವ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಕೆಲವೊಂದನ್ನು ಮತ್ತು ಮನುಷ್ಯನು ಅವುಗಳ ತೀಕ್ಷ್ಣತೆಯನ್ನು ಹೆಚ್ಚಿಸುತ್ತಿರಬಹುದಾದ ವಿಧಗಳನ್ನು ನಾವು ಪರೀಕ್ಷಿಸೋಣ. ಮಾತ್ರವಲ್ಲದೆ, ಭೂಮಿಯನ್ನು ಮುಂದಿನ ತಲೆಮಾರುಗಳಿಗೆ ಸುರಕ್ಷಿತವಾದ ಸ್ಥಳವನ್ನಾಗಿ ಮಾಡುವ ಶಕ್ತಿ ಮತ್ತು ಇಚ್ಛೆ ಮಾನವನಲ್ಲಿದೆಯೊ ಎಂಬುದನ್ನು ಸಹ ನಾವು ಪರಿಗಣಿಸೋಣ. (g05 7/22)
[ಪುಟ 3ರಲ್ಲಿರುವ ಚಿತ್ರ]
ಫ್ರಾನ್ಸ್2003 ಯೂರೋಪಿನಲ್ಲಿ ಬೇಸಿಗೆಯ ತೀವ್ರವಾದ ಬಿಸಿಲಿನ ಅವಧಿಯಿಂದಾಗಿ 30,000 ಮಂದಿ ಮೃತಪಟ್ಟರು; ಸ್ಪೆಯಿನ್ನಲ್ಲಿ ತಾಪಮಾನವು 44.8 ಡಿಗ್ರಿ ಸೆಲ್ಸಿಯಸ್ ತಲಪಿತು
[ಕೃಪೆ]
Alfred/EPA/Sipa Press
[ಪುಟ 4, 5ರಲ್ಲಿರುವ ಚಿತ್ರಗಳು]
ಇರಾನ್2003 ಭೂಕಂಪವು ಬಾಮ್ ನಗರದ 40,000 ಜನರ ಜೀವವನ್ನು ಕಸಿದುಕೊಂಡಿತು; ಸಾಮೂಹಿಕ ಗೋರಿಯ ಬಳಿಯಲ್ಲಿ ಸ್ತ್ರೀಯರು ತಮ್ಮ ಸಂಬಂಧಿಕರಿಗಾಗಿ ಗೋಳಾಡುತ್ತಿರುವುದು
[ಕೃಪೆ]
ಹಿನ್ನೆಲೆ ಮತ್ತು ಸ್ತ್ರೀಯರು: © Tim Dirven/Panos Pictures