ಬೂಷ್ಟು ಮಿತ್ರ ಹಾಗೂ ಶತ್ರು!
ಸ್ವೀಡನ್‌ನ ಎಚ್ಚರ! ಲೇಖಕರಿಂದ
ಬೂಷ್ಟುಗಳಲ್ಲಿ ಕೆಲವು ಜೀವರಕ್ಷಕಗಳಾಗಿವೆ; ಇನ್ನು ಕೆಲವು ವಿನಾಶಕಾರಿಯಾಗಿವೆ. ಕೆಲವು ಬೂಷ್ಟುಗಳು ಚೀಸ್ ಮತ್ತು ದ್ರಾಕ್ಷಾಮದ್ಯಗಳ ರುಚಿಯನ್ನು ವರ್ಧಿಸುತ್ತವೆ; ಇನ್ನು ಕೆಲವು ಆಹಾರವನ್ನು ವಿಷಕಾರಿಯನ್ನಾಗಿ ಮಾಡುತ್ತವೆ. ಕೆಲವು ಮರದ ದಿಮ್ಮಿಗಳಲ್ಲಿ ಬೆಳೆಯುತ್ತವೆ; ಇನ್ನು ಕೆಲವು ಸ್ನಾನದ ಕೋಣೆ ಮತ್ತು ಪುಸ್ತಕಗಳಲ್ಲಿ ಹರಡುತ್ತವೆ. ವಾಸ್ತವದಲ್ಲಿ, ಬೂಷ್ಟುಗಳು ಎಲ್ಲೆಲ್ಲಿಯೂ ಇವೆ. ನೀವು ಈ ವಾಕ್ಯವನ್ನು ಓದುತ್ತಿರುವಂತೆ, ಬೂಷ್ಟುಗಳ ಬೀಜಾಣುಗಳು ನಿಮ್ಮ ಮೂಗಿನೊಳಗೂ ಹೋಗುತ್ತಿರಬಹುದು.
ಬೂಷ್ಟು ನಮ್ಮ ಸುತ್ತಲೂ ಇದೆ ಎಂಬುದನ್ನು ನಂಬಲು ನಿಮಗೆ ಅಸಾಧ್ಯವಾದರೆ, ಫ್ರಿಜ್‌ನಲ್ಲಿಯೇ ಆಗಲಿ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಒಂದು ತುಂಡು ಬ್ರೆಡ್ ಅನ್ನು ಹಾಗೆಯೇ ಬಿದ್ದಿರಲು ಬಿಡಿ. ಬೇಗನೆ ಅದರ ಮೇಲೆ ಬೂದಿಯಂಥ ಇಲ್ಲವೆ ಸ್ಪಂಜಿನಂತೆ ಕಾಣುವ ಹೊದಿಕೆ ಉಂಟಾಗುತ್ತದೆ. ಇದೇ ಬೂಷ್ಟು!
ನಿಜವಾಗಿಯೂ ಬೂಷ್ಟು ಏನಾಗಿದೆ?
ಬೂಷ್ಟು, ಶಿಲೀಂಧ್ರ (ಫಂಗಸ್) ವರ್ಗಕ್ಕೆ ಸೇರಿದೆ. ಶಿಲೀಂಧ್ರ ವರ್ಗದಲ್ಲಿ, ಬುಕುಟುಗಳು, ಅಣಬೆಗಳು, ಗಿಡಗಳಿಗೆ ಹಿಡಿಯುವ ಬೂಷ್ಟು ಮತ್ತು ಯೀಸ್ಟ್‌ಗಳನ್ನು ಸೇರಿಸಿ 1,00,000ಕ್ಕಿಂತಲೂ ಹೆಚ್ಚಿನ ಜಾತಿಯ ಏಕಾಣುಜೀವಿಗಳಿವೆ. ಸುಮಾರು 100 ಶಿಲೀಂಧ್ರಗಳು ಮಾತ್ರ ಮಾನವನಿಗೆ ಮತ್ತು ಪ್ರಾಣಿಗಳಿಗೆ ರೋಗವನ್ನು ಉಂಟುಮಾಡುವಂಥದ್ದಾಗಿವೆ. ಇತರ ಅನೇಕ ಶಿಲೀಂಧ್ರಗಳು ಆಹಾರ ಚಕ್ರದಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ—ಸತ್ತಿರುವ ಅವಯವಗಳನ್ನು ಕೊಳೆಯುವಂತೆ ಮಾಡಿ, ಅನಂತರ ಪ್ರಾಮುಖ್ಯವಾದ ಅಂಶಗಳನ್ನು ಸಸ್ಯಗಳು ಉಪಯೋಗಿಸಸಾಧ್ಯವಾಗುವಂಥ ವಿಧದಲ್ಲಿ ಪರಿವರ್ತಿಸುವುದೇ ಅವುಗಳ ಪಾತ್ರವಾಗಿದೆ. ಇನ್ನು ಕೆಲವು ಶಿಲೀಂಧ್ರಗಳು, ಮಣ್ಣಿನಿಂದ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಸಸ್ಯಗಳಿಗೆ ಸಹಾಯಮಾಡುತ್ತಾ ಅವುಗಳೊಂದಿಗೆ ಸಹಜೀವನವನ್ನು ನಡೆಸುತ್ತವೆ. ಇನ್ನು ಕೆಲವು ಪರೋಪಜೀವಿಗಳಾಗಿವೆ.
ಗಾಳಿಯಿಂದ ಹಾರಿಬಂದ ಸೂಕ್ಷ್ಮದರ್ಶಕ ಬೀಜಾಣುವಾಗಿ ಬೂಷ್ಟು ತನ್ನ ಜೀವನವನ್ನು ಆರಂಭಿಸುತ್ತದೆ. ಈ ಬೀಜಾಣುವು ಸೂಕ್ತವಾದ ಆಹಾರದ ಮೇಲೆ ಬಂದು ನೆಲೆಸಿದರೆ ಮತ್ತು ಅದಕ್ಕೆ ಸರಿಯಾದ ತಾಪಮಾನ ಹಾಗೂ ತೇವಾಂಶ ದೊರೆತರೆ, ಅದು ಬೆಳೆಯಲು ಆರಂಭಿಸಿ ಹೈಫೀ ಎಂಬ ಶಿಲೀಂಧ್ರಜಾಲದ ಎಳೆಗಳಾಗಿ ರೂಪಗೊಳ್ಳುತ್ತದೆ. ಸ್ಪಂಜಿನಂತೆ ಕಾಣುವ, ಒಂದಕ್ಕೊಂದು ಅಂಟಿಕೊಂಡಿರುವ ಇಂಥ ಬಹಳಷ್ಟು ಹೈಫೀಯನ್ನು ಮೈಸೇಲಿಯಮ್ ಎಂದು ಕರೆಯಲಾಗುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವ ಬೂಷ್ಟು ಆಗಿದೆ. ಸ್ನಾನದ ಕೋಣೆಯಲ್ಲಿನ ಟೈಲ್ಸ್‌ನ ಮಧ್ಯದಲ್ಲಿ ಉಂಟಾದ ಬೂಷ್ಟು ಕೆಲವೊಮ್ಮೆ ಕೊಳೆಯಂತೆ ಇಲ್ಲವೆ ಕಲೆಯಂತೆ ಸಹ ಕಾಣಬಹುದು.
ಬೂಷ್ಟು ಸಂತಾನೋತ್ಪತ್ತಿಯಲ್ಲಿ ಪರಿಣತ. ಬ್ರೆಡ್ಡಿನಲ್ಲಿ ಉಂಟಾಗುವ ರೈಸೋಪಸ್ ಸ್ಟೋಲನಿಫರ್ ಎಂಬ ಸಾಮಾನ್ಯವಾದ ಬೂಷ್ಟಿನಲ್ಲಿರುವ ಕಪ್ಪು ಚುಕ್ಕೆಗಳು ಬೀಜಾಣುಗಳಾಗಿವೆ ಅಥವಾ ಸ್ಪರ್ಯಾಂಜಿಯ ಎಂದು ಕರೆಯಲ್ಪಡುತ್ತವೆ. ಕೇವಲ ಒಂದು ಚುಕ್ಕೆಯಲ್ಲಿ 50,000ಕ್ಕಿಂತಲೂ ಹೆಚ್ಚು ಬೀಜಾಣುಗಳಿರುತ್ತವೆ ಮತ್ತು ಪ್ರತಿಯೊಂದು ಬೀಜಾಣುವು ಕೆಲವೇ ದಿವಸಗಳಲ್ಲಿ ಕೋಟ್ಯಂತರ ಹೊಸ ಬೀಜಾಣುಗಳನ್ನು ಉತ್ಪತ್ತಿಮಾಡಬಲ್ಲದು. ಅಷ್ಟುಮಾತ್ರವಲ್ಲದೆ, ಪರಿಸ್ಥಿತಿಯು ಅನುಕೂಲಕರವಾಗಿರುವಲ್ಲಿ ಈ ಬೂಷ್ಟು ಕಾಡಿನಲ್ಲಿರುವ ಮರದ ದಿಮ್ಮಿಯ ಮೇಲೆ ಬೆಳೆಯುವಂತೆಯೇ ಪುಸ್ತಕ, ಚರ್ಮದ ಪಾದರಕ್ಷೆ ಇಲ್ಲವೆ ವಾಲ್‌ಪೇಪರ್‌ನ ಮೇಲೆಯೂ ಬೆಳೆಯಬಲ್ಲದು.
ಬೂಷ್ಟು ಆಹಾರವನ್ನು ಹೇಗೆ “ತಿನ್ನುತ್ತದೆ”? ಆಹಾರವನ್ನು ಮೊದಲು ತಿಂದು, ಅನಂತರ ಜೀರ್ಣಶಕ್ತಿಯ ಮೂಲಕ ಅದನ್ನು ದೇಹಕ್ಕೆ ಹೀರಿಕೊಳ್ಳುವ ಪ್ರಾಣಿಗಳು ಮತ್ತು ಮನುಷ್ಯರಂತಿರದೆ ಬೂಷ್ಟು ವಿರುದ್ಧವಾಗಿ ಕಾರ್ಯವೆಸಗುತ್ತದೆ. ಜೈವಿಕ ಅಣುಗಳು ಬೂಷ್ಟುಗಳಿಗೆ ತಿನ್ನಲು ತೀರ ದೊಡ್ಡದ್ದಾಗಿರುವುದರಿಂದ ಅವು ಜೀರ್ಣಕಾರಿ ರಾಸಾಯನಿಕ ಕಿಣ್ವಗಳನ್ನು ಬಿಡುಗಡೆಮಾಡಿ ಆ ಅಣುಗಳನ್ನು ಅತಿ ಸಣ್ಣ ಭಾಗಗಳಾಗಿ ವಿಭಾಗಿಸುತ್ತವೆ. ಅನಂತರ ಅವುಗಳು ಅದನ್ನು ಹೀರಿಕೊಳ್ಳುತ್ತವೆ. ಮಾತ್ರವಲ್ಲದೆ, ಆಹಾರವನ್ನು ಹುಡುಕುತ್ತ ಅತ್ತಿತ್ತ ಅಲೆದಾಡಲು ಬೂಷ್ಟುಗಳಿಗೆ ಅಸಾಧ್ಯವಾಗಿರುವ ಕಾರಣ, ಅವು ಆಹಾರದ ಮೇಲೆಯೇ ವಾಸಿಸುತ್ತವೆ.
ಬೂಷ್ಟುಗಳು ಮೈಕೊಟೋಕ್ಸಿನ್ ಎಂಬ ವಿಷಕಾರಿ ಪದಾರ್ಥಗಳನ್ನು ಉತ್ಪತ್ತಿಮಾಡಬಲ್ಲವು ಮತ್ತು ಇವು, ಮಾನವರ ಹಾಗೂ ಪ್ರಾಣಿಗಳ ಜೀವಕ್ಕೆ ಪ್ರತಿಕೂಲ ಪ್ರಭಾವವನ್ನು ಬೀರಬಹುದು. ಅದನ್ನು ಒಳಸೇದುವ ಮೂಲಕ, ಸೇವಿಸುವ ಮೂಲಕ ಇಲ್ಲವೆ ಅದು ಚರ್ಮಕ್ಕೆ ಸ್ಪರ್ಶಿಸಲ್ಪಡುವ ಮೂಲಕ ಒಬ್ಬನು ಬೂಷ್ಟಿಗೆ ಒಡ್ಡಲ್ಪಡಬಹುದು. ಆದರೆ ಎಲ್ಲ ಬೂಷ್ಟುಗಳು ಹಾನಿಕಾರಕವಾಗಿರುವುದಿಲ್ಲ. ಬೂಷ್ಟಿನಲ್ಲಿ ಕೆಲವು ಅತಿ ಉಪಯುಕ್ತ ಅಂಶಗಳೂ ಇವೆ.
ಬೂಷ್ಟಿನ ಸ್ನೇಹಪರ ಮುಖ
ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ 1928ರಲ್ಲಿ, ಹಸಿರು ಬೂಷ್ಟಿಗಿರುವ ಕ್ರಿಮಿನಾಶಕ ಶಕ್ತಿಯನ್ನು ಆಕಸ್ಮಿಕವಾಗಿ ಗಮನಿಸಿದನು. ಪೆನಿಸಿಲಿಯಮ್ ನೊಟಾಟಮ್ ಎಂದು ತರುವಾಯ ಗುರುತಿಸಲಾದ ಹಸಿರು ಬೂಷ್ಟು ಸೂಕ್ಷ್ಮಜೀವಿಗಳಿಗೆ ಮಾರಕವಾಗಿ, ಆದರೆ ಮಾನವರಿಗೆ ಮತ್ತು ಪ್ರಾಣಿಗಳಿಗೆ ಹಾನಿರಹಿತವಾಗಿ ಪರಿಣಮಿಸಿತು. ಈ ಆವಿಷ್ಕಾರವು ಪೆನಿಸಿಲಿನ್‌ನ ತಯಾರಿಕೆಗೆ ನಡೆಸಿತು ಮತ್ತು ಪೆನಿಸಿಲಿನ್ ಅನ್ನು “ಬಹಳಷ್ಟು ಜೀವಗಳನ್ನು ರಕ್ಷಿಸಿದ ಏಕಮಾತ್ರ ಆಧುನಿಕ ಔಷಧಿ” ಎಂದು ಕರೆಯಲಾಗಿದೆ. ಫ್ಲೆಮಿಂಗ್ ಮತ್ತು ಅವನ ಜೊತೆ ಸಂಶೋಧಕರಾದ ಹವರ್ಡ್ ಫ್ಲೋರೀ ಹಾಗೂ ಅರ್ನೆಸ್ಟ್ ಚೇನ್ ತಮ್ಮ ಕೆಲಸಕ್ಕಾಗಿ 1945ರಲ್ಲಿ ಔಷಧ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಅಂದಿನಿಂದ, ಬೂಷ್ಟು ಇತರ ಅನೇಕ ಔಷಧೀಯ ಅಂಶಗಳನ್ನು ಒದಗಿಸಿಕೊಟ್ಟಿದೆ. ಇದರಲ್ಲಿ, ರಕ್ತದ ಹೆಪ್ಪುಗಟ್ಟುವಿಕೆಗೆ, ಮೈಗ್ರೇನ್ ತಲೆನೋವುಗಳು ಮತ್ತು ಪಾರ್ಕಿನ್ಸನ್ಸ್ ರೋಗಕ್ಕೆ ಬೇಕಾದ ಔಷಧವೂ ಸೇರಿದೆ.
ಬೂಷ್ಟು ರಸನೇಂದ್ರಿಯಕ್ಕೂ ಆಶೀರ್ವಾದವಾಗಿ ಫಲಿಸಿದೆ. ಉದಾಹರಣೆಗೆ, ಚೀಸ್ ಅನ್ನು ತೆಗೆದುಕೊಳ್ಳಿ. ಬ್ರೀ, ಕ್ಯಾಮಮ್‌ಬರ್, ಡೇನಿಷ್ ಬ್ಲೂ ಚೀಸ್, ಗಾರ್ಗನ್‌ಸೋಲ, ರಾಕ್‌ಫರ್ಟ್ ಮತ್ತು ಸ್ಟಿಲ್‌ಟನ್ ಎಂಬ ವಿವಿಧ ಬಗೆಯ ಚೀಸ್‌ಗಳಿಗೆ ಭಿನ್ನವಾದ ರುಚಿಯಿರಲು ನಿರ್ದಿಷ್ಟ ಜಾತಿಗಳ ಪೆನಿಸಿಲಿಯಮ್ ಬೂಷ್ಟೇ ಕಾರಣವೆಂದು ನಿಮಗೆ ತಿಳಿದಿದೆಯೊ? ಅಂತೆಯೇ, ಸಲಾಮಿ, ಸೋಯಾ ಸಾಸ್ ಮತ್ತು ಬಿಯರ್ ಇವೆಲ್ಲವು ನಿರ್ದಿಷ್ಟ ರೀತಿಯ ಬೂಷ್ಟನ್ನು ಉಪಯೋಗಿಸಿ ತಯಾರಿಸಲಾದ ವಿಷಯಗಳಾಗಿವೆ.
ದ್ರಾಕ್ಷಾಮದ್ಯದ ವಿಷಯದಲ್ಲಿಯೂ ಇದು ಸತ್ಯ. ನಿರ್ದಿಷ್ಟ ದ್ರಾಕ್ಷೆಯನ್ನು ಸರಿಯಾದ ಸಮಯಕ್ಕೆ ಕೊಯ್ದಾಗ ಮತ್ತು ಪ್ರತಿಯೊಂದು ಗೊಂಚಲಿನ ಮೇಲೆ ಸೂಕ್ತ ಪ್ರಮಾಣದ ಶಿಲೀಂಧ್ರ (ಫಂಗಸ್)ವು ಬೆಳೆದಾಗ, ಅದನ್ನು ಪರಮಶ್ರೇಷ್ಠ ದ್ರಾಕ್ಷಾಮದ್ಯವಾಗಿ ತಯಾರಿಸಲು ಉಪಯೋಗಿಸಸಾಧ್ಯವಿದೆ. ಬಾಟ್ರೀಟಿಸ್ ಸಿನಿರಿಯಾ ಎಂಬ ಬೂಷ್ಟು, ದ್ರಾಕ್ಷೆಗಳಲ್ಲಿರುವ ಸಕ್ಕರೆ ಅಂಶದ ಮೇಲೆ ಕ್ರಿಯೆಗೈದು ಅದರ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ದ್ರಾಕ್ಷಾಮದ್ಯದ ಉಗ್ರಾಣದಲ್ಲಿ, ಪಕ್ವಗೊಳ್ಳುವ ಸಮಯದಲ್ಲಿ ಕ್ಲಾಡೋಸ್‌ಪೋರಿಯಮ್ ಸೆಲ್ಲಾರಿ ಎಂಬ ಬೂಷ್ಟು ಅದಕ್ಕೆ ಇನ್ನಷ್ಟು ಹೆಚ್ಚಿನ ರುಚಿಯನ್ನು ನೀಡುತ್ತದೆ. ಹಂಗೆರಿಯ ದ್ರಾಕ್ಷಾಮದ್ಯವನ್ನು ತಯಾರಿಸುವವರ ನಾಣ್ಣುಡಿಯ ಭಾಷಾನುವಾದವು ಹೀಗೆ ಹೇಳುತ್ತದೆ: ‘ಉದಾತ್ತ ಬೂಷ್ಟಿನ ಪರಿಣಾಮ ಉತ್ತಮ ದ್ರಾಕ್ಷಾಮದ್ಯ.’
ಬೂಷ್ಟು ಶತ್ರುವಾದಾಗ
ಕೆಲವು ಬೂಷ್ಟುಗಳ ಹಾನಿಕಾರಕ ಗುಣಗಳಿಗೂ ದೀರ್ಘಕಾಲದ ಇತಿಹಾಸವಿದೆ. ಸಾ.ಶ.ಪೂ. ಆರನೇ ಶತಮಾನದಲ್ಲಿ, ಅಶ್ಶೂರ್ಯರು ತಮ್ಮ ಶತ್ರುಗಳ ಬಾವಿಯನ್ನು ವಿಷಪೂರಿತವನ್ನಾಗಿ ಮಾಡಲು ಕ್ಲ್ಯಾವಿಸೆಪ್ಸ್ ಪರ್ಪ್ಯರಿಯ ಎಂಬ ಬೂಷ್ಟನ್ನು ಉಪಯೋಗಿಸಿದರು. ಇದು ಪುರಾತನ ಕಾಲದ ಜೈವಿಕ ಕದನದ ಒಂದು ರೂಪವಾಗಿದೆ. ಮಧ್ಯ ಯುಗಗಳಲ್ಲಿ, ರೈ ಧಾನ್ಯದ ಮೇಲೆ ಉಂಟಾಗುವ ಇದೇ ಬೂಷ್ಟು ಅನೇಕ ಜನರಿಗೆ ಮೂರ್ಛೆರೋಗ, ನೋವುಭರಿತ ಉರಿಯೂತ, ಗ್ಯಾಂಗ್ರೀನ್ ಮತ್ತು ಮನೋ ವಿಕಲ್ಪ (ಭ್ರಾಂತಿ ರೋಗ) ಮುಂತಾದ ರೋಗಗಳನ್ನು ತಂದೊಡ್ಡಿತು. ಈಗ ಅರ್ಗಟಿಸಮ್ ಎಂದು ಕರೆಯುವ ಈ ರೋಗಕ್ಕೆ ಸೈಂಟ್ ಆ್ಯಂಟನಿಯ ಬೆಂಕಿ ಎಂಬ ಅಡ್ಡ ಹೆಸರೂ ಇದೆ. ಈ ಅಡ್ಡ ಹೆಸರು ಬರಲು ಕಾರಣ, ಈ ರೋಗಕ್ಕೆ ತುತ್ತಾದ ಅನೇಕ ಜನರು ಅದ್ಭುತಕರ ವಾಸಿಯಾಗುವಿಕೆಯನ್ನು ನಂಬಿ ಫ್ರಾನ್ಸ್‌ನಲ್ಲಿರುವ ಸೈಂಟ್ ಆ್ಯಂಟನಿಯ ದೇವಾಲಯಕ್ಕೆ ಯಾತ್ರೆ ಹೋಗುತ್ತಿದ್ದದ್ದೇ ಆಗಿತ್ತು.
ತೀಕ್ಷ್ಣವಾದ ಕಾರ್ಸಿನೊಜೆನಿಕ್ (ಕ್ಯಾನ್ಸರ್‌ಜನಕ) ವಸ್ತುವಾದ ಆ್ಯಫ್ಲಟಾಕ್ಸಿನ್—ಬೂಷ್ಟಿನಿಂದ ಉತ್ಪನ್ನವಾಗುವ ವಿಷಕಾರಿ ವಸ್ತು. ಒಂದು ಏಷ್ಯನ್ ದೇಶದಲ್ಲಿ, ಆ್ಯಫ್ಲಟಾಕ್ಸಿನ್‌ನ ಕಾರಣದಿಂದಾಗಿ ಒಂದು ವರುಷಕ್ಕೆ 20,000 ಜನರು ಮೃತಪಡುತ್ತಾರೆ. ಈ ಮಾರಕ ವಸ್ತುವನ್ನು ಆಧುನಿಕ ಜೈವಿಕ ಶಸ್ತ್ರಾಸ್ತ್ರಗಳಲ್ಲಿ ಉಪಯೋಗಿಸಲಾಗಿದೆ.
ಹಾಗಿದ್ದರೂ, ಜನರು ತಮ್ಮ ಜೀವನದಲ್ಲಿ ಪ್ರತಿದಿನ ಸಾಮಾನ್ಯ ಬೂಷ್ಟುಗಳಿಗೆ ಒಡ್ಡಲ್ಪಡುವುದರಿಂದ ಆಗುವ ಪರಿಣಾಮವು ಬರೀ ಕಿರಿಕಿರಿಯಷ್ಟೇ ಹೊರತು ಆರೋಗ್ಯಕ್ಕೆ ಗಂಭೀರವಾದ ಯಾವುದೇ ಅಪಾಯವಿರುವುದಿಲ್ಲ. “ಹೆಚ್ಚಿನ ಬೂಷ್ಟುಗಳ ವಾಸನೆಯನ್ನು ನೀವು ಗ್ರಹಿಸಬಲ್ಲಿರಾದರೂ, ಅವು ಜೀವಕ್ಕೆ ಹಾನಿಕಾರಕವಾಗಿರುವುದಿಲ್ಲ,” ಎಂದು ಯುಸಿ ಬರ್‌ಕ್ಲಿ ವೆಲ್‌ನೆಸ್ ಲೆಟರ್ ಎಂಬ ಸುದ್ದಿ ಪತ್ರವು ತಿಳಿಸುತ್ತದೆ. ಆದರೆ, ಬೂಷ್ಟುಗಳಿಂದ ಸಾಮಾನ್ಯವಾಗಿ ಪ್ರತಿಕೂಲ ಪರಿಣಾಮವನ್ನು ಎದುರಿಸುವವರು, ಆಸ್ತಮಾದಂಥ ಶ್ವಾಸಕೋಶದ ಸಮಸ್ಯೆಯಿರುವ ಜನರು; ಅಲರ್ಜಿಗಳನ್ನು, ರಾಸಾಯನಿಕ ವಸ್ತುಗಳಿಗೆ ಸೂಕ್ಷ್ಮವೇದವನ್ನು ಹೊಂದಿರುವ ಇಲ್ಲವೆ ರೋಗನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳು; ಮತ್ತು ದೊಡ್ಡ ಮೊತ್ತದ ಬೂಷ್ಟಿಗೆ ಒಡ್ಡಲ್ಪಡುವ ವ್ಯವಸಾಯ ಕೆಲಸಗಾರರೇ ಆಗಿದ್ದಾರೆ. ಕೂಸುಗಳು ಮತ್ತು ವೃದ್ಧರು ಬೂಷ್ಟಿಗೆ ಒಡ್ಡಲ್ಪಟ್ಟರೆ ಅದರಿಂದ ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಕ್ಯಾಲಿಫೋರ್ನಿಯಾದ ಆರೋಗ್ಯ ಸೇವೆಗಳ ಇಲಾಖೆಗನುಸಾರ ಬೂಷ್ಟಿನಿಂದ ಈ ಮುಂತಾದ ದುಷ್ಪರಿಣಾಮಗಳು ಸಂಭವಿಸಸಾಧ್ಯವಿದೆ: ‘ಉಬ್ಬಸ, ಉಸಿರಾಟದ ತೊಂದರೆ ಮತ್ತು ತೀವ್ರಗತಿಯ ಉಸಿರಾಟ ಮುಂತಾದ ಉಸಿರಾಟದ ಸಮಸ್ಯೆಗಳು; ಮೂಗು ಮತ್ತು ಸೈನಸ್‌ನ ತೊಂದರೆ; ಕಣ್ಣಿನ ಸಮಸ್ಯೆ (ಉರಿಯುವಿಕೆ, ಕಣ್ಣುಗಳಿಂದ ಸತತವಾಗಿ ನೀರು ಬರುತ್ತಿರುವುದು ಇಲ್ಲವೆ ಕಣ್ಣುಗಳು ಕೆಂಪಾಗಿರುವುದು); ಸ್ವಲ್ಪ ಸ್ವಲ್ಪವಾಗಿ ಪದೇ ಪದೇ ಕೆಮ್ಮುವ ಒಣ ಕೆಮ್ಮು; ಮೂಗು ಇಲ್ಲವೆ ಗಂಟಲಿನ ತುರಿಸುವಿಕೆ; ಚರ್ಮದ ಮೇಲೇಳುವ ಕೆಂಪು ಗುಳ್ಳೆಗಳು ಇಲ್ಲವೆ ತುರಿಸುವಿಕೆ.’
ಬೂಷ್ಟು ಮತ್ತು ಕಟ್ಟಡಗಳು
ಕೆಲವು ದೇಶಗಳಲ್ಲಿ, ಬೂಷ್ಟನ್ನು ತೆಗೆದುಹಾಕಿ ಕಟ್ಟಡವನ್ನು ಸರಿಪಡಿಸುವ ಉದ್ದೇಶದಿಂದ ಶಾಲೆಯು ಮುಚ್ಚಲ್ಪಟ್ಟಿರುವುದನ್ನು ಇಲ್ಲವೆ ಜನರು ಮನೆ ಅಥವಾ ಆಫೀಸನ್ನು ಖಾಲಿಮಾಡಿರುವುದನ್ನು ಕೇಳಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. 2002ರ ಆರಂಭದಲ್ಲಿ, ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಹೊಸದಾಗಿ ಆರಂಭಗೊಂಡ ಆಧುನಿಕ ಕಲಾಶಾಸ್ತ್ರದ ವಸ್ತುಪ್ರದರ್ಶನಾಲಯವನ್ನು ಬೂಷ್ಟಿನ ಕಾರಣದಿಂದ ಮುಚ್ಚಬೇಕಾಯಿತು. ಬೂಷ್ಟನ್ನು ತೆಗೆದುಹಾಕಿ ಸರಿಪಡಿಸಲು ಸುಮಾರು ಐದು ಮಿಲಿಯ ಡಾಲರ್ ಖರ್ಚಾಯಿತು! ಇತ್ತೀಚೆಗೆ ಈ ಸಮಸ್ಯೆಯು ಏಕೆ ಇಷ್ಟೊಂದು ವ್ಯಾಪಕವಾಗುತ್ತಿದೆ?
ಈ ಪ್ರಶ್ನೆಗೆ ಉತ್ತರವು ಎರಡು ಮುಖ್ಯ ಅಂಶಗಳನ್ನು ಒಳಗೊಂಡಿದೆ: ಕಟ್ಟಡವನ್ನು ಕಟ್ಟಲು ಉಪಯೋಗಿಸುವ ಸಾಮಗ್ರಿಗಳು ಮತ್ತು ಕಟ್ಟಡದ ವಿನ್ಯಾಸಗಳು. ಇತ್ತೀಚಿನ ದಶಕಗಳಲ್ಲಿ ಕಟ್ಟಡವನ್ನು ಕಟ್ಟಲು ಉಪಯೋಗಿಸುವ ಸಾಮಗ್ರಿಗಳಲ್ಲಿ, ಬೂಷ್ಟಿಗೆ ಹೆಚ್ಚು ಸುಲಭವಾಗಿ ಒಡ್ಡಲ್ಪಡುವ ಉತ್ಪನ್ನಗಳು ಸೇರಿವೆ. ಇದಕ್ಕೆ ಉದಾಹರಣೆಯು, ಡ್ರೈವಾಲ್ ಅಥವಾ ಜಿಪ್ಸಮ್ ಬೋರ್ಡ್, ಅಂದರೆ ಒಂದು ಗಟ್ಟಿಯಾದ ಪ್ಲಾಸ್ಟರ್ ತಿರುಳಿನ ಎರಡು ಬದಿಗೂ ಕಾಗದದ ಅನೇಕ ಹಾಳೆಗಳನ್ನು ಅಂಟಿಸಿ ಮಾಡಿದ ಬೋರ್ಡ್ ಆಗಿದೆ. ಈ ಪ್ಲಾಸ್ಟರ್ ತಿರುಳು ತೇವವನ್ನು ಹೀರಿಕೊಂಡು ತನ್ನಲ್ಲಿ ಹಿಡಿದಿಡುತ್ತದೆ. ಆದುದರಿಂದ ಇದು ಸ್ವಲ್ಪ ಕಾಲದ ವರೆಗೆ ಒದ್ದೆಯಾಗಿಯೇ ಉಳಿದರೆ, ಬೂಷ್ಟಿನ ಜೀವಕೋಶಗಳು ಮೊಳೆತು, ಡ್ರೈವಾಲ್‌ನಲ್ಲಿರುವ ಕಾಗದವನ್ನು ತಿಂದು ಬೆಳೆಯಬಲ್ಲವು.
ಕಟ್ಟಡದ ವಿನ್ಯಾಸಗಳೂ ಬದಲಾಗಿವೆ. 1970ಗಳ ಮುನ್ನ ಯುನೈಟೆಡ್ ಸ್ಟೇಟ್ಸ್ ಮತ್ತು ಹಲವಾರು ಇತರ ದೇಶಗಳಲ್ಲಿನ ಅನೇಕ ಕಟ್ಟಡಗಳು ಇತ್ತೀಚಿನ ವಿನ್ಯಾಸಗಳಂತೆ ಹೆಚ್ಚು ಸುರಕ್ಷಿತವಾಗಿರಲಿಲ್ಲ ಹಾಗೂ ಗಾಳಿ ಹೋಗದಂತೆ ಸಂಪೂರ್ಣವಾಗಿ ತಡೆಯಲ್ಪಟ್ಟದ್ದಾಗಿರಲಿಲ್ಲ. ಈ ಬದಲಾವಣೆಗಳನ್ನು ಮಾಡಲು ಕಾರಣ, ಶಾಖವು ಕಟ್ಟಡದಿಂದ ಹೊರಹೋಗುವುದನ್ನು ಮತ್ತು ಒಳಬರುವುದನ್ನು ಕಡಿಮೆಗೊಳಿಸುವ ಹಾಗೂ ಕಟ್ಟಡದೊಳಕ್ಕೆ ಗಾಳಿಯ ಚಲಾವಣೆಯನ್ನು ಕಡಿಮೆಗೊಳಿಸುವ ಮೂಲಕ ವಿದ್ಯುತ್‌ಶಕ್ತಿ ಅಥವಾ ಇನ್ನಾವುದೇ ಶಕ್ತಿಗಳ ಮಿತವ್ಯಯ ಮಾಡುವ ಹೇತುವಿನಿಂದಲೇ ಆಗಿದೆ. ಆದುದರಿಂದ ಈಗ ಒಮ್ಮೆ ನೀರು ಕಟ್ಟಡದೊಳಕ್ಕೆ ಸೇರಿದರೆ ಅದು ಬಹಳ ಕಾಲದ ವರೆಗೆ ಅಲ್ಲೇ ಉಳಿಯುತ್ತದೆ. ಈ ರೀತಿಯಲ್ಲಿ ಅದು ಬೂಷ್ಟಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಸಮಸ್ಯೆಗೆ ಪರಿಹಾರವಿದೆಯೊ?
ಬೂಷ್ಟಿನ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಕಡಿಮೆಪಕ್ಷ ಅವನ್ನು ಕಡಿಮೆಗೊಳಿಸುವ ಅತಿ ಪ್ರಭಾವಕಾರಿ ಉಪಾಯವು, ಕಟ್ಟಡದೊಳಗಿರುವ ಎಲ್ಲ ವಸ್ತುವನ್ನು ಶುದ್ಧವಾಗಿಯೂ ತೇವರಹಿತವಾಗಿಯೂ ಇಟ್ಟು ತೇವವನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸುವುದೇ ಆಗಿದೆ. ಒಂದುವೇಳೆ ಎಲ್ಲಿಯಾದರೂ ತೇವವು ಸಂಗ್ರಹವಾಗುವುದಾದರೆ, ಕೂಡಲೆ ಆ ಸ್ಥಳವನ್ನು ಒಣಗಿಸಿರಿ ಮತ್ತು ಪುನಃ ನೀರು ಸೇರಿಕೊಳ್ಳದಂತೆ ಅಗತ್ಯವಿರುವ ಬದಲಾವಣೆಯನ್ನು ಇಲ್ಲವೆ ದುರಸ್ತನ್ನು ಮಾಡಿರಿ. ಉದಾಹರಣೆಗೆ, ಚಾವಣಿ ಮತ್ತು ಚರಂಡಿಯನ್ನು ಶುದ್ಧವಾಗಿಯೂ ಸುಸ್ಥಿತಿಯಲ್ಲಿಯೂ ಇಡಿರಿ. ಮಾತ್ರವಲ್ಲದೆ, ಕಟ್ಟಡದ ತಳಪಾಯದ ಸುತ್ತಲು ನೀರು ನಿಲ್ಲದಂತೆ ಅಂಗಳವು ಕಟ್ಟಡದಿಂದ ಆಚೆಗೆ ಇಳಿಜಾರಾಗಿರುವಂತೆ ನೋಡಿಕೊಳ್ಳಿರಿ. ಹವಾನಿಯಂತ್ರಣವಿರುವಲ್ಲಿ, ಡ್ರಿಪ್ ಪ್ಯಾನ್‌ಗಳನ್ನು ಶುದ್ಧವಾಗಿಡಿ ಮತ್ತು ಡ್ರೇನ್ ಲೈನ್‌ಗಳಿಗೆ ಯಾವುದೇ ಅಡಚಣೆಯಿಲ್ಲದಂತೆ ನೋಡಿಕೊಳ್ಳಿ.
“ತೇವ ನಿಯಂತ್ರಣವೇ ಬೂಷ್ಟು ನಿಯಂತ್ರಣದ ಕೀಲಿಕೈಯಾಗಿದೆ” ಎಂಬುದಾಗಿ ಒಂದು ಅಧಿಕೃತ ಮೂಲ ತಿಳಿಸುತ್ತದೆ. ಮೇಲೆ ತಿಳಿಸಿದ ಕೆಲವು ಸರಳ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳುವುದಾದರೆ, ನೀವು ಮತ್ತು ನಿಮ್ಮ ಕುಟುಂಬವು ಬೂಷ್ಟಿನ ಸ್ನೇಹರಹಿತ ಮುಖವನ್ನು ಎದುರಿಸದಂತೆ ಅವು ತಡೆಯಬಹುದು. ಕೆಲವು ವಿಧಗಳಲ್ಲಿ ನೋಡುವುದಾದರೆ ಬೂಷ್ಟು ಬೆಂಕಿಯಂತಿದೆ. ಬೆಂಕಿ ಹಾನಿಕಾರಕವಾಗಿರಬಲ್ಲದು, ಆದರೆ ಅದೇ ಸಮಯದಲ್ಲಿ ಬಹಳಷ್ಟು ಉಪಯುಕ್ತವೂ ಹೌದು. ನಾವು ಅದನ್ನು ಹೇಗೆ ಉಪಯೋಗಿಸುತ್ತೇವೆ ಮತ್ತು ನಿಯಂತ್ರಿಸುತ್ತೇವೆ ಎನ್ನುವುದರ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ಬೂಷ್ಟಿನ ಬಗ್ಗೆ ನಮಗೆ ಕಲಿಯಲು ಬಹಳಷ್ಟಿದೆ. ಆದರೆ, ದೇವರ ಅದ್ಭುತಕರ ಸೃಷ್ಟಿಯ ಕುರಿತಾದ ಜ್ಞಾನವು ಕೇವಲ ನಮ್ಮ ಪ್ರಯೋಜನಾರ್ಥವಾಗಿದೆ. (g 1/06)
[ಪುಟ 12, 13ರಲ್ಲಿರುವ ಚೌಕ/ಚಿತ್ರ]
ಬೈಬಲಿನಲ್ಲಿ ಬೂಷ್ಟಿನ ಬಗ್ಗೆ ತಿಳಿಸಲಾಗಿದೆಯೊ?
‘ಮನೆಯ ಗೋಡೆಗಳಲ್ಲಿ ಕುಷ್ಠದ ಗುರುತು’ ಕಂಡುಬರುವ ವಿಷಯದ ಕುರಿತು ಬೈಬಲ್ ತಿಳಿಸುತ್ತದೆ. (ಯಾಜಕಕಾಂಡ 14:34-48) “ಪ್ರಾಣಹಾನಿಕರವಾದ ಕುಷ್ಠ” ಎಂಬುದಾಗಿಯೂ ಕರೆಯಲ್ಪಟ್ಟಿರುವ ಈ ಗುರುತು ಒಂದು ರೀತಿಯ ಬೂಷ್ಟಾಗಿತ್ತೆಂದು ಹೇಳಲಾಗಿದೆ. ಆದರೆ ಇದರ ಕುರಿತು ಅನಿಶ್ಚಿತತೆಯಿದೆ. ಏನೇ ಆಗಿರಲಿ, ಮನೆಯ ಯಜಮಾನನು ಆ ಗುರುತುಗಳಿರುವ ಕಲ್ಲುಗಳನ್ನು ತೆಗಿಸಿ, ಮನೆಯ ಗೋಡೆಗಳ ಒಳಗಡೆಯನ್ನೆಲ್ಲಾ ಗೀಚಿಸಿ, ಗುರುತುಗಳಿದ್ದ ಕಲ್ಲುಗಳನ್ನೂ ಗೀಚಿದ ಮಣ್ಣನ್ನು ಊರಿನ ಹೊರಗೆ “ಅಪವಿತ್ರ ಸ್ಥಳದಲ್ಲಿ” ಹಾಕಿಸಬೇಕು ಎಂಬುದಾಗಿ ದೇವರ ಧರ್ಮಶಾಸ್ತ್ರವು ಆದೇಶಿಸಿತ್ತು. ಒಂದುವೇಳೆ ಆ ಕುಷ್ಠವು ತಿರಿಗಿ ಕಾಣಬಂದರೆ, ಇಡೀ ಮನೆಯನ್ನೇ ಅಶುದ್ಧವೆಂದು ಘೋಷಿಸಿ, ಕೆಡಹಿಸಿ ಅದರ ಎಲ್ಲ ಸಾಮಗ್ರಿಗಳನ್ನು ಅಪವಿತ್ರ ಸ್ಥಳದಲ್ಲಿ ಹಾಕಿಸಿಬಿಡಬೇಕು. ಯೆಹೋವನು ಒದಗಿಸಿದ ಈ ಸವಿವರವಾದ ಸಲಹೆಗಳು, ತನ್ನ ಜನರ ಮತ್ತು ಅವರ ಶಾರೀರಿಕ ಹಿತಕ್ಷೇಮದ ಬಗ್ಗೆ ಆತನಿಗಿದ್ದ ಆಳವಾದ ಪ್ರೀತಿಪರ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ.
[ಪುಟ 11ರಲ್ಲಿರುವ ಚಿತ್ರ]
ಬೂಷ್ಟಿನಿಂದ ಉತ್ಪನ್ನವಾಗಿರುವ ಔಷಧಿಗಳು ಅನೇಕ ಪ್ರಾಣಗಳನ್ನು ಕಾಪಾಡಿವೆ
[ಪುಟ 13ರಲ್ಲಿರುವ ಚಿತ್ರ]
ಡ್ರೈವಾಲ್ ಮತ್ತು ವೈನಿಲ್ ವಾಲ್‌ಪೇಪರ್, ತೇವವನ್ನು ಹೀರಿಕೊಂಡು ತನ್ನಲ್ಲಿ ಹಿಡಿದಿಡುತ್ತದೆ