ಪ್ರಥಮ ಋತುಸ್ರಾವಕ್ಕಾಗಿ ನಿಮ್ಮ ಮಗಳನ್ನು ಸಿದ್ಧಗೊಳಿಸುವುದು
ಹರೆಯವು ಅನೇಕ ಬದಲಾವಣೆಗಳ ಸಮಯವಾಗಿದೆ. ಬೆಳವಣಿಗೆಯ ಈ ಪ್ರಕ್ರಿಯೆಯಲ್ಲಿ ಎಳೆಯ ಬಾಲಕಿಯರಿಗಿರುವ ಒಂದು ಮುಖ್ಯ ಘಟ್ಟವು ಪ್ರಥಮ ಋತುಸ್ರಾವ ಇಲ್ಲವೆ ಮೈನೆರೆಯುವಿಕೆ ಆಗಿದೆ. ಇದನ್ನು “ಋತುಸ್ರಾವ ಪ್ರಕ್ರಿಯೆಯ ಆರಂಭ” ಎಂದು ಅರ್ಥನಿರೂಪಿಸಲಾಗಿದೆ.
ಪ್ರಥಮ ಋತುಸ್ರಾವವು ಎಳೆಯ ಬಾಲಕಿಯರಿಗೆ ಬಹಳಷ್ಟು ಮಾನಸಿಕ ಒತ್ತಡದ ಸಮಯವಾಗಿರಬಲ್ಲದು. ಅದಾಗುವಾಗ ಅವರಲ್ಲಿ ಸಮ್ಮಿಶ್ರ ಭಾವನೆಗಳೇಳಬಹುದು. ಹದಿಹರೆಯದಲ್ಲಿ ಬೇರೆಲ್ಲ ಬದಲಾವಣೆಗಳಾಗುವಾಗ ತಬ್ಬಿಬ್ಬುಗೊಳ್ಳುವಂತೆಯೇ, ಋತುಸ್ರಾವವು ಆರಂಭವಾಗುವಾಗಲೂ ಅವರು ತಬ್ಬಿಬ್ಬುಗೊಳ್ಳಬಹುದು. ಅನೇಕ ಹುಡುಗಿಯರಿಗೆ ತಮ್ಮ ಪ್ರಥಮ ಮಾಸಿಕ ಸ್ರಾವದ ಸಮಯದಲ್ಲಿ ಭಯ, ಆತಂಕವಾಗುತ್ತದೆ. ಇದಕ್ಕೆ ಕಾರಣವು ಹೆಚ್ಚಾಗಿ, ಅವರಿಗೆ ತಪ್ಪು ಮಾಹಿತಿ ಕೊಡಲ್ಪಟ್ಟಿರುವುದೇ ಆಗಿರುತ್ತದೆ ಅಥವಾ ಹೆಚ್ಚಿನವರಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಕೊಡಲ್ಪಡದೆ ಇರುವುದೇ ಆಗಿರುತ್ತದೆ.
ಆದರೆ ಪ್ರಥಮ ಋತುಸ್ರಾವಕ್ಕಾಗಿ ಯಾರನ್ನು ಮುಂದಾಗಿಯೇ ಸಿದ್ಧಗೊಳಿಸಲಾಗಿದೆಯೊ ಅಂಥ ಹುಡುಗಿಯರಿಗೆ ಅನೇಕವೇಳೆ ಅವರ ಪ್ರಥಮ ಋತುಸ್ರಾವವಾದಾಗ ಹೆಚ್ಚು ಗಾಬರಿಯಾಗುವುದಿಲ್ಲ. ಹೆಚ್ಚಿನ ಬಾಲಕಿಯರಾದರೊ ಇದಕ್ಕಾಗಿ ಸಿದ್ಧರಾಗಿರುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. 23 ದೇಶಗಳ ಅಭ್ಯರ್ಥಿಗಳನ್ನೊಳಗೊಂಡ ಒಂದು ಸಮೀಕ್ಷೆಯಲ್ಲಿ ಬಹುಮಟ್ಟಿಗೆ ಮೂರರಲ್ಲಿ ಒಬ್ಬ ಹುಡುಗಿ, ತನಗೆ ಅದರ ಬಗ್ಗೆ ತಿಳಿಸಲ್ಪಟ್ಟಿರಲೇ ಇಲ್ಲವೆಂದು ಹೇಳಿದಳು. ಈ ಹುಡುಗಿಯರು ತಮ್ಮ ಪ್ರಥಮ ಋತುಸ್ರಾವಕ್ಕಾಗಿ ಸಿದ್ಧಗೊಳಿಸಲ್ಪಟ್ಟಿರದೆ ಇದ್ದುದರಿಂದ ಅದು ಆರಂಭವಾದಾಗ ಏನು ಮಾಡಬೇಕೆಂದು ಅವರಿಗೆ ತೋಚಲಿಲ್ಲ.
ಪ್ರಥಮ ಋತುಸ್ರಾವದ ಬಗ್ಗೆ ಅತಿ ನಕಾರಾತ್ಮಕವಾದ ಅನುಭವಗಳನ್ನು ವರದಿಸಿರುವವರು, ಋತುಚಕ್ರದ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದಿದ್ದ ಸ್ತ್ರೀಯರದ್ದಾಗಿದೆ. ನಡೆಸಲಾದ ಒಂದು ಸಮೀಕ್ಷೆಯಲ್ಲಿ ಸ್ತ್ರೀಯರು ತಮ್ಮ ಪ್ರಥಮ ಋತುಸ್ರಾವದ ಅನುಭವದ ಬಗ್ಗೆ ವರ್ಣಿಸುತ್ತಿದ್ದಾಗ, ಅವರಿಗೆ ಆ ಸಮಯದಲ್ಲಿ “ಗಾಬರಿಯಾಗಿತ್ತು,” “ಆಘಾತವಾಗಿತ್ತು,” “ಮುಜುಗರವಾಗಿತ್ತು” ಮತ್ತು “ಹೆದರಿಕೆಯಾಗಿತ್ತು” ಎಂಬ ಪದಗಳನ್ನು ಉಪಯೋಗಿಸಿದರು.
ಹೆಚ್ಚಾಗಿ ಜನರು ರಕ್ತವನ್ನು ನೋಡಿದಾಗ ಹೆದರಿಹೋಗುತ್ತಾರೆ. ಏಕೆಂದರೆ ಸಾಮಾನ್ಯವಾಗಿ ರಕ್ತಸ್ರಾವವು ಯಾವುದೋ ಗಾಯದಿಂದ ಆಗುತ್ತಿದೆಯೆಂದೂ, ಅದರಿಂದಾಗಿ ನೋವಾಗುತ್ತದೆಂದೂ ನೆನಸಲಾಗುತ್ತದೆ. ಹೀಗಿರುವುದರಿಂದ ಸರಿಯಾದ ವಿವರಣೆ ಇಲ್ಲವೆ ಸಿದ್ಧತೆ ಇಲ್ಲದಿರುವಾಗ, ಸಾಂಸ್ಕೃತಿಕ ರೂಢಿಗತ ಭಾವನೆಗಳು, ತಪ್ಪುಕಲ್ಪನೆಗಳು ಇಲ್ಲವೆ ಬರೇ ಮೌಢ್ಯದಿಂದಾಗಿ ಒಬ್ಬ ವ್ಯಕ್ತಿಯು, ಋತುಸ್ರಾವವು ಯಾವುದೊ ಕಾಯಿಲೆಯಿಂದಾಗಿಯೊ ಯಾವುದೊ ಗಾಯದಿಂದಾಗಿಯೊ ಆಗುತ್ತಿದೆ ಎಂದು ನೆನಸುವುದು ಇಲ್ಲವೆ ಅದನ್ನು ನಾಚಿಕೆಯ ಸಂಗತಿಯಾಗಿ ದೃಷ್ಟಿಸುವುದು ಎಷ್ಟು ಸುಲಭವೆಂದು ನಾವು ಗ್ರಹಿಸಬಹುದು.
ಋತುಚಕ್ರವು ಎಲ್ಲ ಆರೋಗ್ಯವಂತ ಹುಡುಗಿಯರಿಗಾಗುವ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ನಿಮ್ಮ ಮಗಳಿಗೆ ತಿಳಿದಿರಬೇಕು. ಅವಳಿಗಿರುವ ಯಾವುದೇ ಭಯಆತಂಕದ ಭಾವನೆಗಳನ್ನು ದೂರಮಾಡಲು ತಂದೆ/ತಾಯಿಯಾಗಿರುವ ನೀವು ಸಹಾಯಮಾಡಬಲ್ಲಿರಿ. ಹೇಗೆ?
ಹೆತ್ತವರ ಪಾತ್ರ ಅತಿ ಪ್ರಾಮುಖ್ಯ
ಋತುಚಕ್ರದ ಬಗ್ಗೆ ಮಾಹಿತಿನೀಡುವ ಅನೇಕ ಮೂಲಗಳಿವೆ. ಉದಾಹರಣೆಗೆ ಶಾಲಾ ಶಿಕ್ಷಕರಿದ್ದಾರೆ ಮತ್ತು ವೈದ್ಯಕೀಯ ಡಾಕ್ಟರರು ಇದ್ದಾರೆ. ಅಲ್ಲದೆ, ಮುದ್ರಿತ ಮಾಹಿತಿ ಮತ್ತು ಶೈಕ್ಷಣಿಕ ಚಲನಚಿತ್ರಗಳೂ ಇವೆ. ಋತುಚಕ್ರವು ಹೇಗೆ ಆಗುತ್ತದೆಂಬ ಶಾರೀರಿಕ ಪ್ರಕ್ರಿಯೆಯ ಬಗ್ಗೆ ಹಾಗೂ ಋತುಚಕ್ರದ ಸಮಯದಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಬಗ್ಗೆ ಈ ಮೂಲಗಳು ಅಮೂಲ್ಯ ಮಾಹಿತಿಯನ್ನು ಕೊಡುತ್ತವೆಂದು ಅನೇಕ ಹೆತ್ತವರಿಗೆ ತಿಳಿದಿದೆ. ಆದರೂ, ಈ ಮಾಹಿತಿಮೂಲಗಳು ಸಂಬೋಧಿಸದಂಥ ಪ್ರಶ್ನೆಗಳು ಮತ್ತು ಅಗತ್ಯಗಳು ಹುಡುಗಿಯರಿಗೆ ಇರಬಹುದು. ಮುಟ್ಟಾಗುವಾಗ ಏನು ಮಾಡಬೇಕೆಂದು ಅವರಿಗೆ ಗೊತ್ತಿದ್ದರೂ, ಅದರಿಂದಾಗಿ ಬರುವಂಥ ವ್ಯತ್ಯಸ್ತ ಭಾವನೆಗಳನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ಹೆಚ್ಚಾಗಿ ಗೊತ್ತಿರುವುದಿಲ್ಲ.
ಅಜ್ಜಿಯರು, ಅಕ್ಕಂದಿರು ಮತ್ತು ವಿಶೇಷವಾಗಿ ತಾಯಂದಿರು ಎಳೆಯ ಹುಡುಗಿಯರಿಗೆ ಅಗತ್ಯವಿರುವ ಹೆಚ್ಚಿನ ಮಾಹಿತಿ ಮತ್ತು ಭಾವಾತ್ಮಕ ಆಸರೆಯನ್ನು ಕೊಡಬಲ್ಲರು. ಆದರೆ ಹೆಚ್ಚಾಗಿ ಹುಡುಗಿಯರು ತಮ್ಮ ತಾಯಂದಿರನ್ನೇ ಋತುಚಕ್ರದ ಬಗ್ಗೆ ಮಾಹಿತಿ ನೀಡಬಲ್ಲ ಅತಿ ಪ್ರಾಮುಖ್ಯ ಮೂಲವಾಗಿ ಪರಿಗಣಿಸುತ್ತಾರೆ.
ತಂದೆಯಂದಿರ ಬಗ್ಗೆ ಏನು? ಅನೇಕಮಂದಿ ಹುಡುಗಿಯರಿಗೆ ತಮ್ಮ ತಂದೆಯೊಂದಿಗೆ ಋತುಚಕ್ರದ ಬಗ್ಗೆ ಮಾತಾಡಲು ಮುಜುಗರವಾಗುತ್ತದೆ. ಕೆಲವು ಹೆಣ್ಣುಮಕ್ಕಳಿಗೆ, ತಂದೆ ತಮಗೆ ಬೆಂಬಲಕೊಟ್ಟು ಅರ್ಥಮಾಡಿಕೊಳ್ಳುವ ಮೂಲಕ ಪರೋಕ್ಷವಾದ ರೀತಿಯಲ್ಲಿ ಸಹಾಯಮಾಡಿದರೆ ಸಾಕೆಂದು ಅನಿಸುತ್ತದೆ. ಇನ್ನಿತರರು, ತಮ್ಮ ತಂದೆ ಇದರಲ್ಲಿ ಒಳಗೂಡದೇ ಇರುವುದನ್ನು ಇಷ್ಟಪಡುತ್ತಾರೆ.
ಅನೇಕ ದೇಶಗಳಲ್ಲಿ ಕಳೆದ ಕೆಲವೊಂದು ದಶಕಗಳಲ್ಲಿ, ಕೇವಲ ತಂದೆ ಮಾತ್ರ ಇರುವ ಮನೆತನಗಳು ಹೆಚ್ಚಾಗುತ್ತಿವೆ.a ಈ ಕಾರಣದಿಂದ, ಹೆಚ್ಚೆಚ್ಚಾಗಿ ತಂದೆಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಋತುಚಕ್ರದ ಬಗ್ಗೆ ತಿಳಿವಳಿಕೆಯನ್ನು ಕೊಡುವ ಸವಾಲನ್ನು ಎದುರಿಸಬೇಕಾಗುತ್ತದೆ. ಇಂಥ ತಂದೆಯಂದಿರು, ಋತುಚಕ್ರದ ಮೂಲಭೂತ ವಿಚಾರಗಳ ಬಗ್ಗೆ ಮತ್ತು ತಮ್ಮ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಇತರ ಶಾರೀರಿಕ ಹಾಗೂ ಭಾವಾತ್ಮಕ ಬದಲಾವಣೆಗಳೊಂದಿಗೆ ಪರಿಚಿತರಾಗಿರಬೇಕು. ಈ ವಿಷಯದಲ್ಲಿ ತಂದೆಯಂದಿರು ಅವರ ತಾಯಿಯಿಂದ ಅಥವಾ ಅಕ್ಕತಂಗಿಯರಿಂದ ಪ್ರಾಯೋಗಿಕ ಸಲಹೆ ಮತ್ತು ಸಹಾಯವನ್ನು ಪಡೆಯಬಹುದು.
ಈ ಚರ್ಚೆಗಳನ್ನು ಯಾವಾಗ ಆರಂಭಿಸಬೇಕು?
ಅಮೆರಿಕ, ದಕ್ಷಿಣ ಕೊರಿಯ ಮತ್ತು ಪಾಶ್ಚಿಮಾತ್ಯ ಯುರೋಪಿನ ಭಾಗಗಳಲ್ಲಿನ ಉದ್ಯಮೀಕೃತ ದೇಶಗಳಲ್ಲಿ ಋತುಸ್ರಾವ ಆರಂಭವಾಗುವಾಗ ಹುಡುಗಿಯರ ಸರಾಸರಿ ವಯಸ್ಸು ಸಾಮಾನ್ಯವಾಗಿ 12ರಿಂದ 13 ವರ್ಷವಾಗಿರುತ್ತದೆ. ಆದರೆ ಅದು ಬೇಗನೆ, ಅಂದರೆ 8 ವರ್ಷಕ್ಕೇ ಆರಂಭಗೊಳ್ಳಬಹುದು ಇಲ್ಲವೆ ತಡವಾಗಿ ಅಂದರೆ 16 ಯಾ 17 ವರ್ಷದಲ್ಲೂ ಆರಂಭವಾಗಬಹುದು. ಆಫ್ರಿಕ ಮತ್ತು ಏಷ್ಯಾ ಖಂಡದ ಕೆಲವು ಭಾಗಗಳಲ್ಲಿ ಮೊದಲ ಋತುಸ್ರಾವವಾಗುವಾಗ ಹುಡುಗಿಯರ ಸರಾಸರಿ ವಯಸ್ಸು ಹೆಚ್ಚಾಗಿರುತ್ತದೆ. ಉದಾಹರಣೆಗಾಗಿ ನೈಜೀರಿಯದಲ್ಲಿ ಅದು 15 ವರ್ಷ ಆಗಿರುತ್ತದೆ. ವಂಶವಾಹಿಗಳು, ಆರ್ಥಿಕ ಅಂತಸ್ತು, ಪೋಷಣೆ, ಶಾರೀರಿಕ ಚಟುವಟಿಕೆ ಮತ್ತು ದೇಹದ ಎತ್ತರವು ಋತುಚಕ್ರವು ಯಾವಾಗ ಆರಂಭವಾಗುವುದು ಎಂಬುದರ ಮೇಲೆ ಪರಿಣಾಮ ಬೀರಬಲ್ಲದು.
ನಿಮ್ಮ ಮಗಳ ಮೊದಲ ಋತುಸ್ರಾವದ ಮುಂಚೆಯೇ ಅವಳಿಗೆ ಮಾಹಿತಿಯನ್ನು ಕೊಡುವುದು ಅತ್ಯುತ್ತಮ. ಈ ಕಾರಣಕ್ಕಾಗಿ, ದೇಹದಲ್ಲಾಗುವ ಬದಲಾವಣೆಗಳು ಮತ್ತು ಋತುಚಕ್ರದ ಕುರಿತಾದ ಸಂಭಾಷಣೆಗಳು ಅವಳು ಎಳೆಯವಳಾಗಿರುವಾಗಲೇ, ಬಹುಶಃ ಎಂಟು ವರ್ಷದವಳಾಗಿರುವಾಗ ಆರಂಭವಾಗಬೇಕು. ಇದು ತೀರ ಚಿಕ್ಕ ವಯಸ್ಸೆಂದು ನಿಮಗನಿಸಬಹುದು. ಆದರೆ ನಿಮ್ಮ ಮಗಳು ಎಂಟು ಮತ್ತು ಹತ್ತು ವರ್ಷದ ನಡುವಿನ ಪ್ರಾಯದವಳಾಗಿದ್ದರೆ, ಈಗಾಗಲೇ ಅವಳ ದೇಹವು ಹಾರ್ಮೋನುಗಳ (ಚೋದಕಸ್ರಾವಗಳ) ಉಕ್ಕೇರುವಿಕೆಗೆ ಪ್ರತಿಕ್ರಿಯೆಯಲ್ಲಿ ಆಂತರಿಕವಾಗಿ ಪ್ರೌಢತೆಗೆ ಬೆಳೆಯಲಾರಂಭಿಸಿರಬೇಕು. ಅವಳ ದೇಹದಲ್ಲಿ ಹರೆಯಕ್ಕೆ ಸಂಬಂಧಪಟ್ಟ ಬಾಹ್ಯ ಬದಲಾವಣೆಗಳನ್ನು, ಉದಾಹರಣೆಗೆ ಸ್ತನ್ಯಗ್ರಂಥಿಗಳ ಬೆಳವಣಿಗೆ ಮತ್ತು ದೇಹದ ಮೇಲಿನ ರೋಮಗಳಲ್ಲಿ ಹೆಚ್ಚಳವನ್ನು ನೋಡುವಿರಿ. ಹೆಚ್ಚಿನ ಹುಡುಗಿಯರು, ಪ್ರಥಮ ಋತುಸ್ರಾವದ ಸ್ವಲ್ಪ ಮುಂಚೆಯೇ ತಟ್ಟನೆಯ ಬೆಳವಣಿಗೆಯನ್ನು (ಎತ್ತರ ಮತ್ತು ತೂಕದಲ್ಲಿ ಕ್ಷಿಪ್ರ ಹೆಚ್ಚಳವನ್ನು) ಹೊಂದುತ್ತಾರೆ.
ಇದರ ಬಗ್ಗೆ ಮಾತಾಡುವುದು ಹೇಗೆ?
ಪ್ರಥಮ ಋತುಸ್ರಾವದ ಸಮಯವು ಹತ್ತಿರಹತ್ತಿರ ಬರುತ್ತಿರುವ ಹುಡುಗಿಯರಿಗೆ, ತಮಗೆ ಏನಾಗಲಿದೆ ಎಂಬುದರ ಕುರಿತು ತಿಳಿದುಕೊಳ್ಳಲು ಹೆಚ್ಚು ಕುತೂಹಲವಿರುತ್ತದೆ. ಶಾಲೆಯಲ್ಲಿ ಬೇರೆ ಹುಡುಗಿಯರು ಇದರ ಬಗ್ಗೆ ಮಾತಾಡುವುದು ಅವರ ಕಿವಿಗೆ ಬಿದ್ದಿರಬಹುದು. ಅವರ ಬಳಿ ತುಂಬ ಪ್ರಶ್ನೆಗಳಿರುತ್ತವೆ, ಆದರೆ ಅದನ್ನು ಸರಿಯಾಗಿ ಹೇಗೆ ಕೇಳಬೇಕೆಂಬ ವಿಷಯದಲ್ಲಿ ಅವರು ಇಕ್ಕಟ್ಟಿನಲ್ಲಿರಬಹುದು. ಅದರ ಕುರಿತಾಗಿ ಮಾತಾಡಲು ಅವರಿಗೆ ಮುಜುಗರವಾಗುತ್ತಿರಬಹುದು.
ಹೆತ್ತವರಿಗೂ ಇದೇ ರೀತಿಯ ಅನಿಸಿಕೆಗಳಿರುತ್ತವೆ. ಋತುಚಕ್ರದ ಬಗ್ಗೆ ಸಾಮಾನ್ಯವಾಗಿ ತಾಯಂದಿರು ಮೊದಲು ಮಾಹಿತಿಯನ್ನು ಕೊಡಬೇಕಾದರೂ, ಈ ವಿಷಯದ ಬಗ್ಗೆ ಚರ್ಚಿಸಲು ತಾವು ಸಾಕಷ್ಟು ಸನ್ನದ್ಧರಲ್ಲವೆಂದು ನೆನಸುತ್ತಾ ಅವರಿಗೇ ಕಸಿವಿಸಿಯಾಗುತ್ತಿರಬಹುದು. ನಿಮಗೂ ಇದೇ ರೀತಿ ಅನಿಸುತ್ತಿರಬಹುದು. ಹೀಗಿರುವಾಗ, ನಿಮ್ಮ ಮಗಳೊಂದಿಗೆ ಪ್ರಥಮ ಋತುಸ್ರಾವ ಮತ್ತು ಋತುಚಕ್ರದ ಬಗ್ಗೆ ಸಂಭಾಷಣೆಯನ್ನು ಹೇಗೆ ಆರಂಭಿಸಬೇಕು?
ಪ್ರಥಮ ಋತುಸ್ರಾವದ ಸಮಯ ಸಮೀಪಿಸುತ್ತಿರುವ ಹದಿವಯಸ್ಸು ಪೂರ್ವದ ಹುಡುಗಿಯರು ಸರಳವಾದ ನಿರ್ದಿಷ್ಟ ಮಾಹಿತಿಯನ್ನು ಅರ್ಥೈಸಲು ಶಕ್ತರಾಗಿರುತ್ತಾರೆ. ಈ ಮಾಹಿತಿಯಲ್ಲಿ, ಮುಟ್ಟು ಎಷ್ಟು ಸಲ ಆಗುತ್ತದೆ, ಎಷ್ಟು ದಿನಗಳ ವರೆಗೆ ಆಗುತ್ತದೆ ಇಲ್ಲವೆ ಎಷ್ಟು ರಕ್ತನಷ್ಟವಾಗುತ್ತದೆ ಎಂಬ ವಿಷಯಗಳನ್ನು ಸೇರಿಸಬಹುದು. ಹೀಗೆ, ಋತುಸ್ರಾವದ ಕುರಿತಾದ ಶಿಕ್ಷಣದ ಆರಂಭದ ಹಂತಗಳಲ್ಲಿ, ಋತುಸ್ರಾವವನ್ನು ಹೇಗೆ ನಿರ್ವಹಿಸಬೇಕೆಂಬುದರ ಕುರಿತಾಗಿ ಒಡನೆ ಅನ್ವಯವಾಗುವ ಮತ್ತು ಪ್ರಾಯೋಗಿಕವಾಗಿರುವ ಅಂಶಗಳ ಮೇಲೆ ಕೇಂದ್ರೀಕರಿಸುವುದು ಹೆಚ್ಚು ಉತ್ತಮ. ಅಷ್ಟುಮಾತ್ರವಲ್ಲದೆ, ‘ಅದಾಗುವಾಗ ಹೇಗನಿಸುತ್ತದೆ?’ ಇಲ್ಲವೆ ‘ಏನಾಗಲಿದೆ?’ ಎಂಬಂಥ ಪ್ರಶ್ನೆಗಳಿಗೆ ನೀವು ಉತ್ತರಕೊಡಬೇಕಾದೀತು.
ತದನಂತರ, ನೀವು ಋತುಚಕ್ರ ಹೇಗೆ ಆಗುತ್ತದೆಂಬುದರ ಕುರಿತಾದ ಶಾರೀರಿಕ ಪ್ರಕ್ರಿಯೆಯ ವಿವರಗಳನ್ನು ಚರ್ಚಿಸಬಹುದು. ಹೆಚ್ಚಾಗಿ ನೀವು, ವೈದ್ಯಕೀಯ ಡಾಕ್ಟರರಿಂದ ಇಲ್ಲವೆ ಗ್ರಂಥಾಲಯ ಇಲ್ಲವೆ ಪುಸ್ತಕದಂಗಡಿಯಲ್ಲಿ ಲಭ್ಯವಿರುವ ಶೈಕ್ಷಣಿಕ ಓದುವ ಸಾಮಗ್ರಿಯನ್ನು ಪಡೆದುಕೊಳ್ಳಬಹುದು. ಇಂಥ ಪರಾಮರ್ಶೆ ಕೃತಿಗಳು, ಸವಿವರವಾದ ವಿವರಣೆಯನ್ನು ಕೊಡಲು ಸಹಾಯಕಾರಿಗಳಾಗಿರಬಹುದು. ಕೆಲವು ಹುಡುಗಿಯರು ಈ ಮಾಹಿತಿಯನ್ನು ತಮ್ಮಷ್ಟಕ್ಕೆ ಓದಿತಿಳಿದುಕೊಳ್ಳಲು ಇಷ್ಟಪಡಬಹುದು. ಇತರರಿಗೆ, ಅದನ್ನು ನಿಮ್ಮೊಂದಿಗೆ ಕೂಡಿ ಓದುವುದು ಹೆಚ್ಚು ಹಿತವೆನಿಸಬಹುದು.
ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ ಒಂದು ಪ್ರಶಾಂತ ಸ್ಥಳವನ್ನು ಆರಿಸಿಕೊಳ್ಳಿ. ಅವರು ದೊಡ್ಡವರಾಗಿ ಪ್ರೌಢರಾಗುವುದರ ಕುರಿತಾದ ಒಂದು ಸರಳ ಸಂಭಾಷಣೆಯೊಂದಿಗೆ ಆರಂಭಿಸಿರಿ. ಬಹುಶಃ ನೀವು ಹೀಗೆ ಹೇಳಸಾಧ್ಯವಿದೆ: “ಸ್ವಲ್ಪ ಸಮಯದೊಳಗೆ ಒಂದು ದಿನ, ಎಲ್ಲ ಹುಡುಗಿಯರಿಗೂ ಸಹಜವಾಗಿ ಆಗುವ ಒಂದು ಸಂಗತಿ ನಿನಗೂ ಆಗಲಿದೆ. ಅದೇನು ಅಂತ ನಿನಗೆ ಗೊತ್ತಾ?” ಅಥವಾ ತಾಯಿಯು ತನ್ನ ಬಗ್ಗೆ ತಿಳಿಸುತ್ತಾ ಈ ರೀತಿ ಆರಂಭಿಸಬಹುದು: “ನಾನು ನಿನ್ನ ವಯಸ್ಸಿನವಳಾಗಿದ್ದಾಗ, ಋತುಚಕ್ರ ಏನು ಹೇಗೆ ಎಂಬುದರ ಬಗ್ಗೆ ಯೋಚಿಸಲಾರಂಭಿಸಿದೆ. ಸ್ಕೂಲ್ನಲ್ಲಿ ನಾನೂ ನನ್ನ ಗೆಳತಿಯರೂ ಅದರ ಬಗ್ಗೆ ಮಾತಾಡಿದೆವು. ನಿನ್ನ ಗೆಳತಿಯರು ಅದರ ಬಗ್ಗೆ ಮಾತಾಡಲಾರಂಭಿಸಿದ್ದಾರಾ?” ಋತುಚಕ್ರದ ಬಗ್ಗೆ ಅವಳಿಗೆ ಈಗಾಗಲೇ ಏನು ಗೊತ್ತಿದೆಯೆಂದು ಮೊದಲು ಕಂಡುಹಿಡಿಯಿರಿ ಮತ್ತು ಅವಳಿಗೆ ಯಾವುದೇ ತಪ್ಪು ತಿಳಿವಳಿಕೆಗಳಿರುವಲ್ಲಿ ಅದನ್ನು ಸರಿಪಡಿಸಿರಿ. ನಿಮ್ಮ ಆರಂಭದ ಸಂಭಾಷಣೆಗಳಲ್ಲಿ, ಹೆಚ್ಚಿನಾಂಶ ನೀವೇ ಮಾತಾಡಬೇಕಾಗಬಹುದು ಎಂಬ ವಾಸ್ತವಾಂಶಕ್ಕಾಗಿ ಸಿದ್ಧರಾಗಿರಿ.
ಈಗ ನೀವೊಬ್ಬ ಹೆಂಗಸಾಗಿದ್ದರೂ, ನಿಮ್ಮ ಮೊದಲ ಋತುಸ್ರಾವದ ಬಗ್ಗೆ ನಿಮಗೂ ಚಿಂತೆಗಳು ಮತ್ತು ಆತಂಕಗಳು ಇದ್ದಿರಬಹುದಲ್ಲವೇ? ಆದುದರಿಂದ ಈಗ ನಿಮ್ಮ ಮಗಳೊಂದಿಗೆ ಈ ವಿಷಯವನ್ನು ಚರ್ಚಿಸುವಾಗ ನಿಮ್ಮ ವೈಯಕ್ತಿಕ ಅನುಭವವನ್ನು ಉಪಯೋಗಕ್ಕೆ ಹಾಕಬಲ್ಲಿರಿ. ನಿಮಗೆ ಆಗ ಏನೇನು ತಿಳಿಯುವ ಅಗತ್ಯವಿತ್ತು? ಏನೇನು ತಿಳಿಯಬೇಕೆಂಬ ಆಸಕ್ತಿಯಿತ್ತು? ಯಾವ ಮಾಹಿತಿಯು ಸಹಾಯಕಾರಿಯಾಗಿತ್ತು? ಋತುಚಕ್ರದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಬಗ್ಗೆ ಸಮತೂಕದ ಅಭಿಪ್ರಾಯವನ್ನು ಕೊಡಲು ಪ್ರಯತ್ನಿಸಿರಿ. ನಿಮ್ಮ ಮಗಳು ಕೇಳಬಹುದಾದ ಯಾವುದೇ ಪ್ರಶ್ನೆಗೆ ಉತ್ತರಕೊಡಲು ಸಿದ್ಧರಾಗಿರಿ.
ಒಂದು ನಿರಂತರ ಪ್ರಕ್ರಿಯೆ
ಋತುಚಕ್ರದ ಕುರಿತಾದ ಶಿಕ್ಷಣವನ್ನು ಒಂದೇ ಸಲ ಕುಳಿತುಕೊಂಡು ಮಾಡಬೇಕಾದ ಚರ್ಚೆ ಆಗಿ ದೃಷ್ಟಿಸುವ ಬದಲು, ನಿರಂತರವಾಗಿ ಮುಂದುವರಿಯುವ ಪ್ರಕ್ರಿಯೆಯಾಗಿ ದೃಷ್ಟಿಸತಕ್ಕದು. ಒಂದೇ ಸಲ ಎಲ್ಲ ವಿವರಗಳನ್ನು ಚರ್ಚಿಸುವ ಅಗತ್ಯವಿಲ್ಲ. ಒಮ್ಮೆಲೇ ತೀರ ಹೆಚ್ಚು ಮಾಹಿತಿಯನ್ನು ಕೊಟ್ಟರೆ ಆ ಎಳೆಯ ಹುಡುಗಿಗೆ ಅದೊಂದು ದೊಡ್ಡ ಹೊರೆಯಾಗಬಲ್ಲದು. ಮಕ್ಕಳು ಹಂತಹಂತವಾಗಿ ವಿಷಯಗಳನ್ನು ಕಲಿಯುತ್ತಾರೆ. ಅಲ್ಲದೆ, ವಿಭಿನ್ನ ಸಂದರ್ಭಗಳಲ್ಲಿ ಮಾಹಿತಿಯನ್ನು ಪುನರಾವರ್ತಿಸುವ ಅಗತ್ಯಬೀಳಬಹುದು. ಎಳೆಯ ಹುಡುಗಿಯರು ದೊಡ್ಡವರಾಗುತ್ತಾ ಹೋದಂತೆ ಹೆಚ್ಚಿನ ವಿವರಗಳನ್ನು ಅರ್ಥೈಸಿಕೊಳ್ಳಲು ಹೆಚ್ಚು ಶಕ್ತರಾಗುವರು.
ಇನ್ನೊಂದು ಅಂಶವೇನೆಂದರೆ, ಋತುಚಕ್ರದ ಕಡೆಗೆ ಹುಡುಗಿಯರಿಗಿರುವ ಮನೋಭಾವವು ತರುಣಾವಸ್ಥೆಯಾದ್ಯಂತ ಬದಲಾಗುತ್ತ ಹೋಗುತ್ತದೆ. ಮುಟ್ಟಿನ ವಿಷಯದಲ್ಲಿ ನಿಮ್ಮ ಮಗಳಿಗೆ ಸ್ವಲ್ಪ ಅನುಭವ ಸಿಕ್ಕಿದ ಬಳಿಕ, ಅವಳಿಗೆ ಬೇರೆ ಹೊಸ ಚಿಂತೆಗಳೂ ಪ್ರಶ್ನೆಗಳೂ ಎದುರಾಗುವವು. ಆದುದರಿಂದ ನೀವು ಅವಳಿಗೆ ಮಾಹಿತಿಕೊಡುವುದನ್ನು ಮತ್ತು ಅವಳ ಪ್ರಶ್ನೆಗಳಿಗೆ ಉತ್ತರಕೊಡುವುದನ್ನು ಮುಂದುವರಿಸುತ್ತಾ ಇರಬೇಕು. ಅತಿ ಪ್ರಾಮುಖ್ಯವಾಗಿರುವ ಮತ್ತು ನಿಮ್ಮ ಮಗಳ ವಯಸ್ಸು ಹಾಗೂ ಅರ್ಥೈಸಿಕೊಳ್ಳುವ ಸಾಮರ್ಥ್ಯಕ್ಕೆ ತಕ್ಕದಾದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.
ನೀವು ಮೊದಲ ಹೆಜ್ಜೆ ತೆಗೆದುಕೊಳ್ಳಿರಿ
ಆದರೆ ನಿಮ್ಮ ಮಗಳಿಗೆ ಆ ವಿಷಯದಲ್ಲಿ ಆಸಕ್ತಿಯೇ ಇಲ್ಲದಿರುವಂತೆ ತೋರುವಲ್ಲಿ ಆಗೇನು? ಬಹುಶಃ ಅವಳಿಗೆ ವೈಯಕ್ತಿಕ ವಿಷಯಗಳ ಕುರಿತಾಗಿ ಮಾತಾಡಲು ಹಿಂಜರಿಕೆ ಇರಬಹುದು. ಪ್ರಶ್ನೆಗಳನ್ನು ಕೇಳುವಷ್ಟರ ಮಟ್ಟಿಗೆ ಆ ವಿಷಯದ ಕುರಿತು ನಿರಾಳವೆನಿಸಲಿಕ್ಕಾಗಿ ಅವಳಿಗೆ ಸ್ವಲ್ಪ ಸಮಯ ಬೇಕಾಗಬಹುದು. ತನಗೆ ತಿಳಿಯಬೇಕಾದದ್ದೆಲ್ಲವೂ ಈಗಾಗಲೇ ತನಗೆ ತಿಳಿದಿದೆಯೆಂದು ಅವಳು ಹೇಳಲೂಬಹುದು.
ಅಮೆರಿಕದಲ್ಲಿ ಆರನೇ ತರಗತಿಯ ಹುಡುಗಿಯರ ನಡುವೆ ನಡೆಸಲ್ಪಟ್ಟ ಒಂದು ಸಮೀಕ್ಷೆಯಲ್ಲಿ, ಹೆಚ್ಚಿನ ಹುಡುಗಿಯರು ತಾವು ಪ್ರಥಮ ಋತುಸ್ರಾವಕ್ಕಾಗಿ ಸಿದ್ಧರಾಗಿದ್ದೇವೆಂದು ನೆನಸುತ್ತಿದ್ದರು. ಆದರೆ ಅವರಿಗೆ ಸ್ವಲ್ಪ ಹೆಚ್ಚು ಪ್ರಶ್ನೆಗಳನ್ನು ಕೇಳಿದ ನಂತರ ತಿಳಿದು ಬಂದ ಸಂಗತಿಯೇನೆಂದರೆ ಅವರಿಗಿದ್ದ ತಿಳಿವಳಿಕೆಯು ಅಪೂರ್ಣವಾಗಿತ್ತು ಮತ್ತು ಸಾಂಸ್ಕೃತಿಕ ರೂಢಿಗತ ಭಾವನೆಗಳು ಹಾಗೂ ತಪ್ಪು ಕಲ್ಪನೆಗಳ ಮೇಲೆ ಆಧಾರಿತವಾದ ಬೇರೆಬೇರೆ ತಪ್ಪಭಿಪ್ರಾಯಗಳನ್ನು ಅವರು ಆಗಲೇ ಸತ್ಯವೆಂದು ಸ್ವೀಕರಿಸಿದ್ದರು. ಆದುದರಿಂದ, ನಿಮ್ಮ ಮಗಳು ತಾನು ಮೊದಲ ಋತುಸ್ರಾವಕ್ಕಾಗಿ ಸಿದ್ಧಳಿದ್ದೇನೆ ಎಂದು ಹೇಳುವುದಾದರೂ, ನೀವು ಅವಳೊಂದಿಗೆ ಮಾತಾಡುವುದು ಅವಳಿಗೆ ಅಗತ್ಯವಾದ ಸಂಗತಿಯಾಗಿದೆ.
ಋತುಚಕ್ರದ ಬಗ್ಗೆ ಚಿಕ್ಕದಾದ ಚರ್ಚೆಗಳನ್ನು ಆರಂಭಿಸಿ ತದನಂತರ ಅವುಗಳನ್ನು ಮುಂದುವರಿಸುವುದು ನಿಮ್ಮ ಕೆಲಸ. ವಾಸ್ತವದಲ್ಲಿ ಅದು ಹೆತ್ತವರಾದ ನಿಮಗಿರುವ ಒಂದು ಜವಾಬ್ದಾರಿಯಾಗಿದೆ. ಅವಳಿಗೆ ಸಹಾಯದ ಅಗತ್ಯವಿದೆಯೆಂದು ಅವಳು ಆ ಸಮಯದಲ್ಲಿ ಅಂಗೀಕರಿಸಲಿ ಯಾ ಅಂಗೀಕರಿಸದೆ ಇರಲಿ, ಅವಳಿಗೆ ಖಂಡಿತವಾಗಿಯೂ ನಿಮ್ಮ ಸಹಾಯದ ಅಗತ್ಯವಿದೆ. ನಿಮಗೆ ಹತಾಶೆ ಮತ್ತು ಅನರ್ಹ ಭಾವನೆಯುಂಟಾಗಬಹುದು, ಆದರೂ ಬಿಟ್ಟುಕೊಡಬೇಡಿ. ತಾಳ್ಮೆಯಿಂದಿರಿ. ಸಕಾಲದಲ್ಲಿ ನಿಮ್ಮ ಮಗಳು, ನೀವು ಮಾಡಿದಂಥ ಪ್ರಯತ್ನಗಳು ಎಷ್ಟು ಅಮೂಲ್ಯವಾಗಿದ್ದವು ಎಂಬುದನ್ನು ಗ್ರಹಿಸಲಾರಂಭಿಸುವಳು. (g 5/06)
[ಪಾದಟಿಪ್ಪಣಿ]
a ಜಪಾನಿನಲ್ಲಿ ತಂದೆಯೊಬ್ಬನೇ ಇರುವ ಕುಟುಂಬಗಳ ಸಂಖ್ಯೆಯು 2003ರಲ್ಲಿ ಅತ್ಯುಚ್ಚಾಂಕವನ್ನು ತಲಪಿತು. ಅಮೆರಿಕದಲ್ಲಿ ಏಕಹೆತ್ತವರಿರುವ ಕುಟುಂಬಗಳಲ್ಲಿ ತಂದೆಯೊಬ್ಬನೇ ಇರುವ ಕುಟುಂಬಗಳ ಸಂಖ್ಯೆ ಆರರಲ್ಲಿ ಒಂದಾಗಿದೆ.
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮ್ಮ ಮಗಳ ಮೊದಲ ಋತುಸ್ರಾವದ ಮುಂಚೆಯೇ ಅವಳಿಗೆ ಮಾಹಿತಿಯನ್ನು ಕೊಡುವುದು ಅತ್ಯುತ್ತಮ
[ಪುಟ 13ರಲ್ಲಿರುವ ಚೌಕ]
ನಿಮ್ಮ ಮಗಳೊಂದಿಗೆ ಋತುಚಕ್ರದ ಕುರಿತಾಗಿ ಹೇಗೆ ಮಾತಾಡಬೇಕು?
❖ ಅವಳಿಗೆ ಈಗಾಗಲೇ ಏನು ಗೊತ್ತಿದೆಯೆಂದು ಕಂಡುಹಿಡಿಯಿರಿ. ಯಾವುದೇ ತಪ್ಪಭಿಪ್ರಾಯಗಳಿರುವಲ್ಲಿ ಅದನ್ನು ಸರಿಪಡಿಸಿರಿ. ನಿಮಗೂ ಅವಳಿಗೂ ಸರಿಯಾದ ಮಾಹಿತಿ ಇದೆಯೆಂಬುದನ್ನು ಖಚಿತಪಡಿಸಿರಿ.
❖ ನಿಮ್ಮ ಅನುಭವವನ್ನು ಹಂಚಿಕೊಳ್ಳಿರಿ. ಮೊದಲ ಋತುಸ್ರಾವದ ಸಮಯದಲ್ಲಿ ನಿಮಗಾದ ಅನುಭವದ ಕುರಿತಾಗಿ ಯೋಚಿಸಿ ಅದನ್ನು ಹಂಚಿಕೊಳ್ಳುವ ಮೂಲಕ, ನಿಮ್ಮ ಮಗಳಿಗೆ ತುಂಬ ಅಗತ್ಯವಿರುವ ಭಾವನಾತ್ಮಕ ಬೆಂಬಲವನ್ನು ಒದಗಿಸಬಲ್ಲಿರಿ.
❖ ಪ್ರಾಯೋಗಿಕ ಮಾಹಿತಿಯನ್ನು ನೀಡಿರಿ. ಎಳೆಯ ಹುಡುಗಿಯರು ಸರ್ವಸಾಮಾನ್ಯವಾಗಿ ಕೇಳುವಂಥ ಪ್ರಶ್ನೆಗಳಲ್ಲಿ ಇವು ಕೆಲವು: “ಶಾಲೆಯಲ್ಲಿರುವಾಗ ಮುಟ್ಟು ಶುರುವಾಗುವಲ್ಲಿ ಏನು ಮಾಡುವುದು?” “ನಾನು ಯಾವ ಸ್ಯಾನಿಟರಿ ಪ್ಯಾಡ್ಗಳನ್ನು ಬಳಸಬಹುದು?” “ಅವುಗಳನ್ನು ಬಳಸುವುದು ಹೇಗೆ?”
❖ ವಾಸ್ತವಾಂಶಭರಿತ ಮಾಹಿತಿಯನ್ನು ಸರಳವಾಗಿ ಪ್ರಸ್ತುತಪಡಿಸಿರಿ. ಮಾಹಿತಿಯನ್ನು ನಿಮ್ಮ ಮಗಳ ವಯಸ್ಸಿಗೆ ಮತ್ತು ಗ್ರಹಣ ಸಾಮರ್ಥ್ಯಕ್ಕೆ ಹೊಂದಿಸಿಕೊಳ್ಳಿರಿ.
❖ ನಿರಂತರವಾದ ಕಲಿಯುವಿಕೆಗೆ ಇಂಬುಕೊಡಿರಿ. ನಿಮ್ಮ ಮಗಳು ಋತುಚಕ್ರ ಆರಂಭವಾಗುವ ಹಂತವನ್ನು ತಲಪುವ ಮುಂಚೆಯೇ ಈ ಚರ್ಚೆಗಳನ್ನು ಆರಂಭಿಸಿರಿ, ಮತ್ತು ಅದರ ಬಳಿಕವೂ ಅಗತ್ಯಕ್ಕನುಸಾರ ಅಂಥ ಚರ್ಚೆಗಳನ್ನು ಮುಂದುವರಿಸಿರಿ.
[ಪುಟ 12ರಲ್ಲಿರುವ ಚಿತ್ರ]
ಅರ್ಥಮಾಡಿಕೊಳ್ಳುವವರಾಗಿರಿ. ವೈಯಕ್ತಿಕ ವಿಷಯಗಳ ಕುರಿತು ಮಾತಾಡಲು ನಿಮ್ಮ ಮಗಳು ಹಿಂಜರಿಯುತ್ತಿರಬಹುದು