ಯುವ ಜನರು ಪ್ರಶ್ನಿಸುವುದು . . .
ನನ್ನ ದೇಹಕ್ಕೆ ಏನು ಸಂಭವಿಸುತ್ತಾ ಇದೆ?
ತರುಣಾವಸ್ಥೆ—ಇದು ನಿಮ್ಮ ಜೀವನದಲ್ಲಿ ಪ್ರೇರಕ ಸಮಯವಾಗಿರ ಸಾಧ್ಯವಿದೆ. ನೀವು ಬಾಲ್ಯಾವಸ್ಥೆಯನ್ನು ಬಿಡುತ್ತಾ ಕ್ರಮೇಣ ವಯಸ್ಕರಾಗುತ್ತೀದ್ದಿರಿ.
ಆದರೆ, ನಿಮ್ಮ ಹೆತ್ತವರು ಪ್ರಾಯಶಃ ನಿಮ್ಮೊಂದಿಗೆ ನೀವೇನು ನಿರೀಕಿಸಬಹುದೆಂಬುದನ್ನು ಚರ್ಚಿಸಿರಲಿಕ್ಕಿಲ್ಲ. ಒಂದು ವೇಳೆ ಅವರು ಚರ್ಚಿಸಿದ್ದರೂ, ತರುಣಾವಸ್ಥೆಯ ನಿಜತ್ವ ನೀವು ಎಣಿಸಿದ್ದುದಕ್ಕಿಂತ ಹೆಚ್ಚಿನದಾಗಿದ್ದೀತು. ನಿಮ್ಮಲ್ಲಿ ಏನೋ ಗುರುತರವಾದ ಕೆಟ್ಟ ದೇಹಸ್ಥಿತಿಯಿದೆ ಎಂದು ಎಣಿಸುವಂಥ ವಿಷಯಗಳು ನಿಮಗೆ ಸಂಭವಿಸುತ್ತಿರಬಹುದು. ಆದರೆ ಇದಕ್ಕೆ ತೀರಾ ವ್ಯತಿರಿಕ್ತವಾದ ಸಂಗತಿ ನಿಜವಾಗಿರುವುದು ಹೆಚ್ಚು ಸಂಭವನೀಯ.
ಮುಟ್ಟಿನ ಚಕ್ರ—ಶಾಪವೋ ಯಾ ಆಶೀರ್ವಾದವೋ?
ತರುಣಾವಸ್ಥೆ ಆರಂಭವಾಗಿ ಸುಮಾರು ಎರಡು ವರ್ಷಗಳಲ್ಲಿ, ಒಬ್ಬ ಹುಡುಗಿಗೆ ಗಮನಾರ್ಹ ಬದಲಾವಣೆಯ—ಮುಟ್ಟಿನ ಚಕ್ರದಾರಂಭದ—ಅನುಭವವಾಗುತ್ತದೆ. ಆದರೆ, ಸಾಕಷ್ಟು ತಯಾರಿಕೆಯಿಲ್ಲದಿರುವಲ್ಲಿ ಜೀವನದ ಈ ಘಟ್ಟ ಭಯಂಕರವೂ ತಲ್ಲಣಗೊಳಿಸುವಂಥದೂ ಆಗಬಲ್ಲದು.a ಪೌಲ ಎಂಬ ಹುಡುಗಿ ಬರೆದುದು: “ನನಗೆ ನಿಜವಾಗಿಯೂ ಭಯವಾಗುತ್ತದೆ. ಸುಮಾರು ಮೂರು ತಿಂಗಳ ಹಿಂದೆ ನನಗೆ ತಿಂಗಳಲ್ಲಿ ಕೆಲವು ದಿನ ರಕ್ತಸ್ತ್ರಾವವಾಗುತ್ತಿದೆ. ಇದು ನನಗೆ ಕ್ಯಾನ್ಸರ್ ಇದೆಯೆಂದು ಅರ್ಥವೋ?. . . ಈ ರಕ್ತಸ್ರಾವದ ಕುರಿತು ಯೋಚನೆ ನನ್ನನ್ನು ಎಷ್ಟು ಕಲಕಿ ಬಿಚ್ಚಿದೆಯೆಂದರೆ ನಾನು ಅಳುತ್ತಾ ಕಂಪಿಸುತ್ತಾ ಇದ್ದೇನೆ.”
ತರುಣಾವಸ್ಥೆ ಮತ ಯೌವನ (ಎಡೊಲೆಸೆಂಟ್ಸ್ ಆ್ಯಂಡ್ ಯೂತ್ಸ್) ಎಂಬ ಪುಸಕ, ಕೆಲವು ಹುಡುಗಿಯರು ಈ ಚಕ್ರ ಆರಂಭವಾಗುವಾಗ ಲಜ್ಜೆ ಮತ್ತು ದೋಷಿತನವನ್ನೂ ಅನುಭವಿಸುತ್ತಾರೆಂದು ವರದಿ ಮಾಡುತ್ತದೆ. ಆದುದರಿಂದ, ಅನೇಕ ಹುಡುಗಿಯರು ಈ ಸಂಭವವನ್ನು ಗುಟ್ಟಾಗಿಡುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಒಬ್ಬ ತರುಣಿ ಹೇಳಿದ್ದು: “ನನ್ನ ಅಮ್ಮನಿಗೆ ಹೇಳಲು ನಾನು ನಾಚಿಕೆಪಟ್ಟೆ. ಅಮ್ಮ ಇದರ ವಿಷಯ ಎಂದೂ ಮಾತಾಡಿರಲಿಲ್ಲ ಮತ್ತು ನಾನು ತೀರಾ ಭಯಪಟ್ಟೆ.”
ಆದರೆ ನಾಚಿಕೆಗೆ ಕಾರಣವಾಗುವುದರ ಬದಲು, ಈ ಮುಟ್ಟಿನ ಚಕ್ರವು ನಿಮ್ಮ ಸಂತಾನೋತ್ಪತ್ತಿಯ ಶಕ್ತಿ ಬಲಿಯುತ್ತಾ ಇದೆ ಎಂಬುದಕ್ಕೆ ರುಜುವಾತಾಗಿದೆ. ಈಗ ನಿಮ್ಮ ದೇಹ ಗರ್ಭ ತಾಳಲು ಮತ್ತು ಮಗುವನ್ನು ಹಡೆಯಲು ಶಕ್ತವಾಗಿರುತ್ತದೆ. ಹೌದು, ಹೆತ್ತವರಾಗಲು ನೀವು ನಿಜವಾಗಿಯೂ ಸಿದ್ಧವಾಗಬೇಕಾದರೆ ವರ್ಷಗಳು ಹಿಡಿಯಲಿಕ್ಕಿವೆಯೆಂಬುದು ನಿಜ. ಆದರೆ, ಈಗ ನೀವು ಸ್ತ್ರೀತ್ವದ ಹೊಸ್ತಿಲಲ್ಲಿ ನಿಂತಿದ್ದೀರಿ. ಇದು ಲಜ್ಜಾಸ್ಪದವೇ, ಸಂಕೋಚಾಸ್ಪದವೇ? ಅಲ್ಲ!
ಇದಲ್ಲದೆ, ಈ ಸಂಗತಿ ಲೋಕವ್ಯಾಪಕವಾಗಿ ಎಲ್ಲಾ ಮಹಿಳೆಯರ ಅನುಭವವಾಗಿದೆ. ಈ ಮುಟ್ಟಿನ ಚಕ್ರವನ್ನು ಬೈಬಲು, “ಹೆಂಗಸರಿಗಾಗುವ ರೂಢಿಯ ಸಂಗತಿ” ಎಂದು ಹೇಳಿ ಸೂಚಿಸುತ್ತದೆ. (ಆದಿಕಾಂಡ 31:35, NW) ಮತ್ತು ಕೆಲವರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಇದು ಶಾಪವಲ್ಲ.b ಪ್ರಾಯಶಃ, ಈ ಚಕ್ರ ಏಕೆ ಮತ್ತು ಹೇಗೆ ಸಂಭವಿಸುತ್ತದೆಂದು ಹೆಚ್ಚು ಉತ್ತಮವಾಗಿ ತಿಳಿಯುವಲ್ಲಿ, ನಿಮ್ಮ ಭಯದಲ್ಲಿ ಸ್ವಲ್ಪವನ್ನು ಅದು ದೂರ ಮಾಡೀತು.
“ಮಾಸಿಕ ಅದ್ಭುತ”
“ಮೆನ್ಸ್ಟ್ರುವಿಶನ್” ಎಂಬ ಇಂಗ್ಲಿಷ್ ಪದ “ಮಾಸಿಕ” ವೆಂದು ಅರ್ಥ ಬರುವ ಲ್ಯಾಟಿನ್ ಪದದಿಂದ ಬಂದಿದೆ. ಮಾಸಕ್ಕೊಮ್ಮೆ ನಿಮ್ಮ ದೇಹ ಮಗುವಿನ ಗರ್ಭತಾಳುವಿಕೆಗೆ ಸಾಮರ್ಥ್ಯ ಹೊಂದುತ್ತದೆ. ಪ್ರಥಮವಾಗಿ, ನಿಮ್ಮ ಶರೀರದ ಚೋದಕ ಸ್ರಾವದ ಮಟ್ಟಗಳಲ್ಲಿ ಉನ್ನತಿಯು ಗರ್ಭಕೋಶ ಯಾ ಗರ್ಭಾಶಯಕ್ಕೆ ಸೂಚನೆ ಕೊಡುತ್ತದೆ. ಆಗ ಗರ್ಭಾಶಯ ಗರ್ಭಾಧಾನವಾಗಿರುವ ಅಂಡವನ್ನು ಪಡೆದು ಪೋಷಿಸಲು ತನ್ನನ್ನು ಸಿದ್ಧಮಾಡಿಕೊಳ್ಳುತ್ತದೆ; ಅದರ ಒಳ ಆವರಣ ರಕ್ತ ಮತ್ತು ಪೋಷಕ ಪದಾರ್ಥಗಳಿಂದ ತುಂಬಿರುತ್ತದೆ. ಸಮೀಪದಲ್ಲಿ, ಸಾವಿರಾರು ಸೂಕ್ಷ್ಮಅಂಡಗಳಿರುವ ಎರಡು ಬಾದಾಮಿ ಆಕಾರದ, ಅಂಡಾಶಯಗಳೆಂಬ ಅಂಗಗಳಿವೆ. ಇದರಲ್ಲಿ ಪ್ರತಿಯೊಂದು ಅಂಡವು ಭಾವೀ ಶಿಶುವಾಗಿದೆ. ಪುರುಷನ ವೀರ್ಯದಿಂದ ಗರ್ಭಾಧಾನವಾಗುವುದೊಂದೇ ಬಾಕಿ. ತಿಂಗಳಿಗೊಮ್ಮೆ ಒಂದು ಅಂಡ ಹಣ್ಣಾಗಿ ಅಂಡಾಶಯದಿಂದ ಹೊರಬರುತ್ತದೆ.
ಮೃದು “ಬೆರಳುಗಳು” ಈಗ ಈ ಅಂಡವನ್ನು ಮೇಲಕ್ಕೆತ್ತಿ ಅಂಡವಾಹಿ ನಾಳಗಳಿಗೆ ಎಳೆಯುತ್ತವೆ. ಈಗ ಈ ಚಿಕ್ಕ ಅಂಡ ಗರ್ಭಾಶಯಕ್ಕೆ ಹೋಗಲು ನಾಲ್ಕರಿಂದ ಆರು ದಿನಗಳ ಪ್ರಯಾಣವನ್ನು ಆರಂಭಿಸುತ್ತದೆ. ಈ ಸಮಯದಲ್ಲಿ ಒಬ್ಬ ಸ್ತ್ರೀ ಗರ್ಭವತಿಯಾಗದಿರುವಲ್ಲಿ, ಈ ಚಿಕ್ಕ ಅಂಡ ಛಿನ್ನಭಿನ್ನವಾಗುತ್ತದೆ. ಗರ್ಭಾಶಯದ ರಕ್ತಭರಿತ ಒಳ ಆವರಣವೂ ಶಿಥಿಲಗೊಳ್ಳುತ್ತದೆ. ಗರ್ಭಾಶಯವು ಸಂಕುಚಿತವಾಗಿ ಈ ಒಳಪದರವನ್ನು ಮೆತ್ತಗಾಗಿ ಯೋನಿಯ ಮಾರ್ಗವಾಗಿ ಹೊರತಳ್ಳುತ್ತದೆ.
ಎರಡರಿಂದ ಏಳು ದಿನಗಳ ತನಕ (ಸ್ತ್ರೀಯಿಂದ ಸ್ತ್ರೀಗೆ ಇದರಲ್ಲಿ ವ್ಯತ್ಯಾಸವಿದೆ) ಈ ಮುಟ್ಟು ಹರಿಯುತ್ತದೆ. ಆ ಬಳಿಕ ಈ ಕಾರ್ಯಗತಿ, ಪ್ರತಿ ತಿಂಗಳು, ಮುಟ್ಟು ಕಡೆಯದಾಗಿ ನಿಲ್ಲುವ ತನಕ ಮುಂದುವರಿಯುತ್ತದೆ.c ಇದನ್ನು ಒಬ್ಬ ಲೇಖಕನು ಯೋಗ್ಯವಾಗಿಯೇ “ಮಾಸಿಕ ಅದ್ಭುತ” ವೆಂದು ವರ್ಣಿಸಿದನು. ಈ ಕಾರ್ಯಗತಿ ಒಬ್ಬ ಪರಿಣತ ಶಿಲ್ಪಿಯ ಸಂದೇಹಾಸ್ಪದವಿಲ್ಲದ ಹಸ್ತಾಕ್ಷರವುಳ್ಳದ್ದು. ಇದು ನಮಗೆ, ಕೀರ್ತನೆಗಾರನಂತೆ ಕೂಗಿ ಹೇಳಲು ಇನ್ನೊಂದು ಸಕಾರಣವನ್ನು ಕೊಡುತ್ತದೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.”—ಕೀರ್ತನೆ 139:14.
ಸಹಾಯವನ್ನು ಹುಡುಕುವುದು
ಆದರೂ, ಈ ಮುಟ್ಟಿನ ಚಕ್ರ ಅನೇಕ ಪ್ರಾಯೋಗಿಕ ಚಿಂತೆಗಳನ್ನು ನಿಮ್ಮ ಮುಂದೆ ತರುತ್ತದೆ. ದೃಷ್ಟಾಂತಕ್ಕೆ, ‘ನಾನು ಶಾಲೆಯಲ್ಲಿರುವಾಗ ಅದು ಆರಂಭವಾದರೆ ಏನು?’ ಎಂದು ಅನೇಕ ಹುಡುಗಿಯರು ಚಿಂತಿಸುತ್ತಾರೆ. ಇದು ನಿಮ್ಮ ಬಟ್ಟೆಯನ್ನು ಕೊಳೆ ಮಾಡಿ ತುಸು ಪೇಚಾಟಕ್ಕೆಡೆ ಮಾಡುತ್ತದೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೂ ಲೈಂಗಿಕ ಶಿಕ್ಷಕಿ ಲಿಂಡ ಮ್ಯಾಡರಸ್ ನಮಗೆ, “ಹುಡುಗಿಯರಲ್ಲಿ ಹೆಚ್ಚಿನವರು ಪ್ರಥಮ ಬಾರಿ ಬಟ್ಟೆಯಲ್ಲಿ ತೋರಿಬರುವಷ್ಟು ರಕ್ತವನ್ನು ಸ್ರವಿಸುವುದಿಲ್ಲ” ಎಂಬ ಆಶ್ವಾಸನೆ ನೀಡುತ್ತಾರೆ. ಆದರೂ, ನೀವು ಇದಕ್ಕಾಗಿ ಸಾಕಷ್ಟು ಮಟ್ಟಿಗೆ ಸಿದ್ಧರಾಗಿರಲು ಬಯಸುವಿರಿ.
ಅನೇಕ ಪುಸ್ತಕಗಳು ಇದಕ್ಕೆ ಸ್ವಸ್ಥವಾದ ವೈದ್ಯಕೀಯ ಸಲಹೆಯನ್ನು ನೀಡುತ್ತವೆ. ಆದರೆ, ನಿಮ್ಮ ಚಿಂತೆಗಳನ್ನು ನಿಮ್ಮ ತಾಯಿಯೊಂದಿಗೆ ಏಕೆ ಹಂಚಿಕೊಳ್ಳಬಾರದು? ಅವರಲ್ಲಿ ಅನೇಕ ಪ್ರಾಯೋಗಿಕ ಸೂಚನೆಗಳಿರಬಹುದೆಂಬುದು ನಿಸ್ಸಂಶಯ. ಒಬ್ಬ ಯುವತಿ ಹೇಳಿದ್ದು: “ನನ್ನ ತಾಯಿ ನನಗೆ ಮಿತ್ರಳಂತೆ ಇದ್ದರು. ನಮ್ಮೊಳಗೆ ದೀರ್ಘ ಚರ್ಚೆ ನಡೆಯುತ್ತಿತ್ತು, ಮತ್ತು ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು.”
ಕೆಲವು ತಾಯಂದಿರಿಗೆ ಇಂಥ ಗುಪ್ತ ವಿಚಾರಗಳನ್ನು ಮಾತಾಡುವುದು ಕಷ್ಟಕರವೆಂದು ಒಪ್ಪಿಕೊಳ್ಳಬೇಕು. ಆದರೆ, ನೀವು ಅವರನ್ನು ಮರ್ಯಾದೆಯಿಂದ ಸಮೀಪಿಸಿ, ಇದು ನಿಮಗೆ ಪ್ರಾಮುಖ್ಯವೆಂದು ತಿಳಿಯಪಡಿಸುವಲ್ಲಿ ಅವರು ತಮ್ಮ ಸಂಕೋಚ ಪ್ರವೃತ್ತಿಯನ್ನು ಜಯಿಸಿ ನಿಮ್ಮೊಂದಿಗೆ ಮಾತಾಡಿಯಾರು. ಇದು ವಿಫಲಗೊಳ್ಳುವಲ್ಲಿ, ನಿಮಗೆ ಹಿತಕರವಾಗುವ ಒಬ್ಬ ಬಲಿತ ಕ್ರೈಸ್ತ ಸ್ತ್ರೀಯಲ್ಲಿ ಏಕೆ ಇದನ್ನು ಗೋಪ್ಯವಾಗಿ ಹೇಳಬಾರದು?
ಮುಟ್ಟಾದ ಸಮಯದಲ್ಲಿ ಅನೇಕ ಮಹಿಳೆಯರು ತಮ್ಮ ದಿನನಿತ್ಯದ ಕಾರ್ಯಗಳ್ನು ಮಾಮೂಲಿಯಾಗಿ ಮಾಡುತ್ತಾರಾದರೂ, ದೇಹ ಬದಲಾವಣೆ, ಜೀವ ಬದಲಾವಣೆ (ಚೇಂಜಿಂಗ್ ಬಾಡೀಸ್, ಚೇಂಜಿಂಗ್ ಲೈವ್ಸ್) ಎಂಬ ಪುಸ್ತಕವು, ಕೆಲವು ಸ್ತ್ರೀಯರು, “ತಲೆನೋವು, ಬೆನ್ನುನೋವು, ಚರ್ಮದ ಸಮಸ್ಯೆಗಳು, ಮನೋವೃತ್ತಿ ಬದಲಾವಣೆ, ಖಿನ್ನತೆ, ಸೆಡೆತ, ಪಿತ್ತೋದ್ರೇಕ, ಮೂತ್ರ ಕಟ್ಟಿಹೋಗುವಿಕೆ” ಯಂಥ ಸಮಸ್ಯೆಗಳನ್ನು ಅನುಭವಿಸುತ್ತಾರೆಂದು ಹೇಳುತ್ತದೆ. ಸಾಮಾನ್ಯ ಆ್ಯಸ್ಪಿರಿನ್ ಮಿಶ್ರಣಗಳು ಅನೇಕ ವೇಳೆ ಈ ರೋಗಸೂಚನೆಗಳನ್ನು ನಿವಾರಿಸುತ್ತವೆ. (ಹೆಚ್ಚು ಶಕ್ತಿಯ ಔಷಧ ಅಗತ್ಯವೂ ಎಂಬುದನ್ನು ನಿಮ್ಮ ಡಾಕ್ಟರರು ನಿರ್ಧರಿಸಬಲ್ಲರು.) ಮತ್ತು, ಸಾಧ್ಯವಿರುವಲ್ಲಿ ಈ ಚಕ್ರಸಮಯದ ಸುತ್ತ ನಿಮ್ಮ ಚಟುವಟಿಕೆಗಳನ್ನು ಯೋಜಿಸುವುದರಿಂದ ಅನಾವಶ್ಯಕ ಒತ್ತಡವನ್ನು ನೀವು ತಪ್ಪಿಸಿಕೊಳ್ಳುವಿರಿ.
ರಾತ್ರಿ ವೇಳೆಯ ವಿಸರ್ಜನೆ
ಸಂತಾನೋತ್ಪತ್ತಿಯ ವ್ಯವಸ್ಥೆ ಬಲಿಯುವಾಗ ಹುಡುಗರೂ ಅನೇಕ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಜನನೇಂದ್ರಿಯಗಳು ವೀರ್ಯವೆಂಬ ದ್ರವವನ್ನು ಉತ್ಪಾದಿಸುತ್ತವೆ. ಇದರಲ್ಲಿ ಕೋಟ್ಯಂತರ ಸೂಕ್ಷ್ಮ ರೇತಸ್ಸಿದ್ದು ಅವುಗಳಲ್ಲಿ ಪ್ರತಿಯೊಂದು, ಸಂಭೋಗದ ಸಮಯದಲ್ಲಿ ವಿಸರ್ಜಿಸಲ್ಪಟ್ಟರೆ, ಸ್ತ್ರೀ ಅಂಡವನ್ನು ಗರ್ಭಾಧಾನ ಮಾಡಿ ಮಗು ಹುಟ್ಟಿಸಲು ಶಕ್ತವಾಗಿದೆ.
ಆದರೆ ನೀವು ವಿವಾಹಿತರಲ್ಲವಾಗಿರುವುದರಿಂದ, ವೀರ್ಯ ಶೇಖರಣೆಯಾಗುತ್ತದೆ. ಕೆಲವನ್ನು ನಿಮ್ಮ ಶರೀರವು ಕ್ರಮೇಣ ಹೀರಿಕೊಳ್ಳುತ್ತದೆ. ಆದರೆ, ಆಗಾಗ ಇವುಗಳಲ್ಲಿ ಕೆಲವು, ನೀವು ರಾತ್ರಿ ನಿದ್ರಿಸುತ್ತಿರುವಾಗ ವಿಸರ್ಜಿಸಲ್ಪಡುತ್ತವೆ. ಇದಕ್ಕೆ ಸಾಮಾನ್ಯವಾಗಿ ಒದ್ದೆ ಕನಸು ಎಂದು ಹೆಸರಿದೆ. ಆದರೆ ರಾತ್ರಿ ವೇಳೆಯ ವಿಸರ್ಜನೆಯೆಂಬುದು ಇದಕ್ಕೆ ಹೆಚ್ಚು ಯೋಗ್ಯವಾದ ಹೆಸರು. ಏಕೆಂದರೆ ಈ ಸ್ಖಲನವು ಅನೇಕ ವೇಳೆ, ಪ್ರಣಯ ಸ್ವಪ್ನದೊಂದಿಗೆ ಯಾ ಸ್ವಪ್ನವಿಲ್ಲದೆ ನಡೆಯುತ್ತದೆ.
ರಾತ್ರಿ ವಿಸರ್ಜನೆಯ ಸಂಬಂಧದಲ್ಲಿ ಒಬ್ಬ ಹುಡುಗನ ಅನುಭವ ಅವನನ್ನು ಅಸ್ಥಿರಗೊಳಿಸಬಹುದು. ಒಬ್ಬ ಹದಿಪ್ರಾಯದವನು ಜ್ಞಾಪಿಸಿಕೊಂಡದ್ದು: “ನಾನು ಸುಮಾರು ಹನ್ನೆರಡುವರೆ ವಯಸ್ಸಿನವನಾಗಿದ್ದಾಗ ನನಗೆ ಪ್ರಥಮವಾಗಿ ಒದ್ದೆ ಕನಸು ಬಿತ್ತು. ಏನಾಯಿತೆಂದು ನನಗೆ ತಿಳಿದಿರಲಿಲ್ಲ. . . . . ನಾನು ಎಚ್ಚತ್ತಾಗ ಹಾಸಿಗೆ ಒದ್ದೆಯಾಗಿತ್ತು. ನಾನು ಮೂತ್ರ ಮಾಡಿರಬಹುದು ಎಂದು ಎಣಿಸಿದೆ.” ಆದರೆ ಇಂಥ ವಿಸರ್ಜನೆಗಳು ಮಾಮೂಲಿ ಎಂಬುದು ನಿಮಗೆ ತಿಳಿದಿರಲಿ. ಬೈಬಲು ಸಹ ಇದರ ಕುರಿತು ಮಾತಾಡುತ್ತದೆ. (ಯಾಜಕಕಾಂಡ 15:16, 17) ನಿಮ್ಮ ಸಂತಾನೋತ್ಪತ್ತಿಯ ಅಂಗಗಳು ಕಾರ್ಯ ನಡೆಸುತ್ತಿವೆ ಮತ್ತು ನೀವು ಪುರುಷತ್ವವನ್ನು ತಲುಪುತ್ತಿದ್ದೀರಿ ಎಂಬುದಕ್ಕೆ ಇದು ಸೂಚನೆ.
ನಿಮ್ಮ ತಾಯಿ ಒದ್ದೆ ದುಪ್ಪಟಿಯನ್ನು ಕಂಡುಹಿಡಿಯುವ ವಿಷಯ ನೀವು ಗಾಬರಿಪಡಬಹುದು. ಆದರೆ ಇದು ತಾಯಿಯನ್ನು ತಲ್ಲಣ ಯಾ ಆಶ್ಚರ್ಯಗೊಳಿಸುವುದು ತೀರಾ ಅಸಂಭವನೀಯ. ಆದರೆ, ನಿಮ್ಮ ತಂದೆಯೊಂದಿಗೆ ಯಾ ಇನ್ನೊಬ್ಬ ಬಲಿತ ವಯಸ್ಕನೊಂದಿಗೆ ಇದರ ವಿಷಯ ಮಾತಾಡುವುದು ಸಹಾಯಕರವಾಗಬಹುದು. ನಿಮ್ಮ ಮನಸ್ಸಿನಲ್ಲಿ ಉಳಿದಿರುವ ಚಿಂತೆಯನ್ನು ಇದು ಉಪಶಮನ ಮಾಡಬಹುದು. ಈ ವಿಷಯದಲ್ಲಿ ನಿಮ್ಮ ಗೋಪ್ಯವನ್ನು ಕಾಪಾಡಿಕೊಳ್ಳುವ ಕಾರ್ಯದ ಯೋಜನೆಯನ್ನೂ ನೀವು ಮಾಡಬಹುದು.
ಉದ್ರೇಕವನ್ನು ನಿಭಾಯಿಸುವುದು
ಸಂತಾನೋತ್ಪತ್ತಿಯ ಅಂಗಗಳು ಬಲಿಯುವಾಗ, ಹುಡುಗರೂ ಹುಡುಗಿಯರೂ ಅನೇಕ ವೇಳೆ ಲೈಂಗಿಕ ಉದ್ರೇಕಕ್ಕೆ ವಿಪರೀತ ಶೀಘ್ರ ಸಂವೇದಿಗಳಾಗುತ್ತಾರೆ. ಇದಾಗುವಾಗ ಹುಡುಗನ ಲಿಂಗ, ಯಾ ಶಿಶ್ನ ರಕ್ತದಿಂದ ತುಂಬಿ ನೆಟ್ಟಗಾಗುತ್ತದೆ ಯಾ ಗಟ್ಟಿಯಾಗುತ್ತದೆ. ದ ನ್ಯೂ ಟೀನೇಜ್ ಬಾಡಿ ಬುಕ್ ಜ್ಞಾಪಕ ಹುಟ್ಟಿಸುವುದು: “ಆದರೆ ಅನೇಕ ನೆಟ್ಟಗಾಗುವಿಕೆಗಳು ಅಲೈಂಗಿಕ ವಿಷಯಗಳಿಂದಾಗಿ—ಕೆಲವು ಸಲ ಯಾವ ಕಾರಣವೂ ಇಲ್ಲದೆ—ನಡೆಯಬಹುದು! ಬಸ್ಸಿನ ಕಂಪನ, ಬಿಗಿಯಾದ ಬಟ್ಟೆ, ಚಳಿ, ಭಯ ಮತ್ತು ಇತರ ಉದ್ರೇಕಗಳಿಂದಾಗಿ ಅದು ನಡೆಯಬಹುದು.” ಯುವತಿಯರಿಗೂ ಯಾವ ಕಾರಣವೂ ಇಲ್ಲದೆ ಇಂಥ ಉದ್ರೇಕ ಸಂಭವಿಸಬಹುದು.
ಬಯಸದ ಲೈಂಗಿಕ ಉದ್ರೇಕವು ಮನಸ್ಸನ್ನು ಕಲಕಿಸಬಲ್ಲದು, ಲಜ್ಜಾಸ್ಪದವಾಗಬಲ್ಲದು. ಆದರೆ ಇದು ಬೆಳೆಯುವುದರ ಭಾಗವಾಗಿರುವುದರಿಂದ ಪದೇ ಪದೇ ಸಂಭವಿಸಬಹುದು. ಕೆಲವು ಯುವಜನರು ಲೈಂಗಿಕ ಶಮನ ಪಡೆಯುವರೇ ತಮ್ಮ ಜನನೇಂದ್ರಿಯಗಳನ್ನು ಅಲುಗಾಡಿಸುತ್ತಾರೆ ಯಾ ಅವುಗಳೊಂದಿಗೆ ಆಡುತ್ತಾರೆ. ಇದು ತಪ್ಪು, ಮತ್ತು ಮುಂದಕ್ಕೆ ಇದು ಬೇರೆ ಸಮಸ್ಯೆಗಳಿಗೆ ನಡೆಸಬಹುದು.d ಕೇವಲ ಬಿಗುಪು ಕಡಮೆ ಮಾಡಿ ನಿಮ್ಮ ಮನಸ್ಸನ್ನು ಅದರಿಂದ ದೂರವಿರಿಸುವುದು ಹೆಚ್ಚು ಉತ್ತಮ. ಈ ಉದ್ರೇಕ ಬೇಗನೆ ದಾಟಿಹೋಗುವುದು. ನೀವು ವಯಸ್ಕರಾದಂತೆ ಮತ್ತು ನಿಮ್ಮ ಚೋದಕ ದ್ರವ್ಯದ ಮಟ್ಟಗಳು ಕಡಮೆಯಾದಂತೆ, ಇಂಥ ಸ್ವಪ್ರೇರಿತ ಉದ್ರೇಕಗಳು ಕಡಮೆ ಬಾರಿ ನಡೆಯುವುವೆಂದು ನೀವು ಕಂಡುಹಿಡಿಯುವಿರಿ.
ತರುಣಾವಸ್ಥೆ ಸದಾ ಇರುತ್ತಾ ಹೋಗುವುದಿಲ್ಲ. ಪ್ರಾಯಶಃ ಒಂದು ದಿನ, ನಿಮಗೆ ಈಗ ಸಂಕಟ ತರುತ್ತಿರುವ ವಿಷಯಗಳ ಕುರಿತು ನೀವು ನಗಾಡುವಿರಿ. ಈ ಮಧ್ಯೆ, ನೀವು ಸಹಜ ಸ್ಥಿತಿಯ ವ್ಯಕ್ತಿಯಾಗಿದ್ದೀರೆಂದು ಸಮಾಧಾನ ತಕ್ಕೊಳ್ಳಿರಿ. (g90 2/8)
[ಅಧ್ಯಯನ ಪ್ರಶ್ನೆಗಳು]
a ಒಂದು ಅಧ್ಯಯನದಲ್ಲಿ, ಪ್ರಶ್ನಿಸಲ್ಪಟ್ಟ ತಾಯಂದಿರಲ್ಲಿ 20 ಪ್ರತಿಶತ ತಮ್ಮ ಹೆಣ್ಣು ಮಕ್ಕಳಿಗೆ ಮುಟ್ಟಿನ ಕುರಿತು ಏನೂ ಹೇಳಿರಲಿಲ್ಲ. ಇನ್ನೊಂದರಲ್ಲಿ, 10 ಪ್ರತಿಶತ ಕೇವಲ ಸಾಕೂಸಾಲದ ಮಾಹಿತಿಯನ್ನು ಮಾತ್ರ ಕೊಟ್ಟರು.
b ಮೋಶೆಯ ಧರ್ಮಶಾಸ್ತ್ರ ಮುಟ್ಟಾಗುತ್ತಿರುವ ಸ್ತ್ರೀ “ಅಶುದ್ಧಳು” ಎಂದು ಹೇಳಿರುವುದು ಸತ್ಯ. (ಯಾಜಕಕಾಂಡ 15:1-17, 19-33) ಆದರೆ ಇದು ಕರ್ಮಾಚರಣೆಯ ಅರ್ಥದಲ್ಲಿ ಮಾತ್ರ. ಈ ನಿಯಮಗಳು ರಕ್ತದ ಪವಿತ್ರತೆಗೆ ಗೌರವವನ್ನು ಕಲಿಸಲಿಕ್ಕಾಗಿ ಕೊಡಲ್ಪಟ್ಟವೆಂಬುದು ವ್ಯಕ್ತ. (ಯಾಜಕಕಾಂಡ 17:10-12) ಅದೇ ಸಮಯದಲ್ಲಿ, ಈ ನಿಯಮಗಳು, ಮಾನವ ಸಂತತಿ ಪಾಪಾವಸ್ಥೆಯಲ್ಲಿ ಹುಟ್ಟಿದೆಯೆಂದೂ ಅದಕ್ಕೆ ಒಬ್ಬ ರಕ್ಷಕನು ಅಗತ್ಯವೆಂದೂ ಯೆಹೂದಿ ಜನಾಂಗಕ್ಕೆ ಜ್ಞಾಪಕ ಹುಟ್ಟಿಸಲಿಕ್ಕಾಗಿ ಕೊಡಲ್ಪಟ್ಟವು.
c ಈ ಚಕ್ರ ನಿಯತ ಕ್ರಮದ ನಮೂನೆಗೆ ಬರಲು ಅನೇಕ ತಿಂಗಳುಗಳು ಯಾ ವರ್ಷಗಳು ಹಿಡಿಯಬಹುದು.
d ಅವೇಕ್! ಪತ್ರಿಕೆಯ ನವಂಬರ 8, 1987, ಮತ್ತು ಮಾರ್ಚ್ 8, 1988 ರ ಸಂಚಿಕೆಗಳಲ್ಲಿ ಮುಷ್ಟಿಮೈಥುನದ ಲೇಖನಗಳನ್ನು ನೋಡಿ.
[ಪುಟ 20ರಲ್ಲಿರುವಚೌಕ]
ತರುಣಾವಸ್ಥೆಯ ಬದಲಾವಣೆಗಳಿಗೆ ಹೊಂದಿಸಿಕೊಳ್ಳಲು ಹೆತ್ತವರು ಸಹಾಯ ಮಾಡಬಲ್ಲರು