ಭಯೋತ್ಪಾದನೆಗೆ ಗುರಿಯಾಗುವ ಮಕ್ಕಳು
ಸಾಯಂಕಾಲದ ನಸುಬೆಳಕಿನಲ್ಲಿ ಉತ್ತರ ಯುಗಾಂಡದಲ್ಲಿನ ರಸ್ತೆಗಳಲ್ಲಿ ಸಾವಿರಾರು ಮಂದಿ ಮಕ್ಕಳು ಬರೀಗಾಲಲ್ಲಿ ನಡೆದು ಹೋಗುತ್ತಿರುವುದನ್ನು ನೀವು ನೋಡುವಿರಿ. ರಾತ್ರಿಯಾಗುವ ಮುಂಚೆ ಅವರು ತಮ್ಮ ಹಳ್ಳಿಗಳನ್ನು ಬಿಟ್ಟು ಗೂಲೂ, ಕಿಟ್ಗೂಮ್ ಮತ್ತು ಲೀರಾದಂಥ ದೊಡ್ಡ ದೊಡ್ಡ ನಗರಗಳಿಗೆ ನಡೆದುಕೊಂಡು ಹೋಗುತ್ತಾರೆ. ಆ ನಗರಗಳನ್ನು ತಲಪಿದ ಕೂಡಲೇ ಅವರೆಲ್ಲರೂ ಚದರಿ ಬೇರೆ ಬೇರೆ ಕಡೆಗೆ ಹೋಗಿಬಿಡುತ್ತಾರೆ ಅಂದರೆ ಯಾವುದಾದರೂ ಕಟ್ಟಡಗಳಿಗೊ, ಬಸ್ ಸ್ಟ್ಯಾಂಡ್ಗಳಿಗೊ, ಪಾರ್ಕ್ಗಳಿಗೊ, ಕಾಂಪೌಂಡ್ಗಳಿಗೊ ಅವರು ಸೇರಿಬಿಡುತ್ತಾರೆ. ಸೂರ್ಯೋದಯವಾಗುವಾಗ ಅವರು ವಾಪಸ್ ಮನೆಯ ದಾರಿಹಿಡಿದು ರಸ್ತೆಗಳಲ್ಲಿ ನಡೆಯುತ್ತಿರುವುದನ್ನು ನೋಡುವಿರಿ. ಅವರಿಗೆ ಪ್ರತಿದಿನ ಈ ವಿಚಿತ್ರ ರೂಢಿಯಿರುವುದೇಕೆ?
ಕೆಲವರು ಅವರನ್ನು ರಾತ್ರಿ ಪ್ರಯಾಣಿಕರು ಎಂದು ಕರೆಯುತ್ತಾರೆ. ಆದರೆ ಈ ಎಳೆಯರು ರಾತ್ರಿ ಪಾಳಿ ಕೆಲಸಮಾಡಲು ಹೋಗುತ್ತಿಲ್ಲ. ಅವರು ಪ್ರತಿ ಸಾಯಂಕಾಲ ಮನೆಬಿಟ್ಟು ಹೋಗಲು ಕಾರಣವೇನೆಂದರೆ ಅವರು ವಾಸಿಸುವ ಅರಣ್ಯಪ್ರದೇಶವು ಕತ್ತಲು ಕವಿದ ನಂತರ ಒಂದು ಅಪಾಯಕಾರಿ ಸ್ಥಳವಾಗಿಬಿಡುತ್ತದೆ.
ಬಹುಮಟ್ಟಿಗೆ ಇಪ್ಪತ್ತು ವರ್ಷಗಳಿಂದ ಗೆರಿಲ್ಲ ಪಡೆಗಳವರು ಈ ಗ್ರಾಮಾಂತರ ನೆಲಸುನಾಡುಗಳ ಮೇಲೆ ದಾಳಿ ನಡೆಸಿ ಮಕ್ಕಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಪ್ರತಿ ವರ್ಷ ಅವರು ಹೀಗೆ ನೂರಾರು ಮಂದಿ ಬಾಲಕಬಾಲಕಿಯರನ್ನು ಅವರ ಮನೆಗಳಿಂದ ಅಪಹರಿಸಿ ದಟ್ಟವಾದ ಅರಣ್ಯದೊಳಗೆ ಮಾಯವಾಗುತ್ತಾರೆ. ಮಕ್ಕಳನ್ನು ಹೆಚ್ಚಾಗಿ ರಾತ್ರಿಸಮಯದಲ್ಲೇ ದೋಚಿಕೊಂಡು ಹೋಗಲಾಗುತ್ತದೆ. ಆ ಸೈನಿಕರು ಅಪಹರಿಸಿರುವ ಮಕ್ಕಳನ್ನು ಸೈನಿಕರಾಗಿಯೊ, ಕೂಲಿಗಳಾಗಿಯೊ, ತಮ್ಮ ಲೈಂಗಿಕಾಸೆಗಳನ್ನು ತೀರಿಸಲಿಕ್ಕಾಗಿಯೊ ಬಳಸುತ್ತಾರೆ. ಸೆರೆಹಿಡಿಯಲ್ಪಟ್ಟ ಮಕ್ಕಳು ಒಂದುವೇಳೆ ಸೈನಿಕರೊಂದಿಗೆ ಸಹಕರಿಸದಿದ್ದರೆ ಅವರ ಮೂಗು ಇಲ್ಲವೆ ತುಟಿಗಳನ್ನು ಕತ್ತರಿಸಿಬಿಡುತ್ತಾರೆ. ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯಾರಾದರೂ ಸಿಕ್ಕಿಬೀಳುವಲ್ಲಿ, ಅವರನ್ನು ಎಷ್ಟು ಘೋರ ರೀತಿಯಲ್ಲಿ ಸಾಯಿಸುತ್ತಾರೆಂಬುದನ್ನು ವರ್ಣಿಸಲೂ ಸಾಧ್ಯವಿಲ್ಲ.
ಭಯೋತ್ಪಾದನೆಗೆ ಬಲಿಗಳಾಗಿರುವ ಇತರ ಎಳೆಯರೂ ಇದ್ದಾರೆ. ಸಿಯೆರಾ ಲಿಯೋನ್ನಲ್ಲಿ ಕಾಣಸಿಗುವ ಅಂಗಹೀನ ಹದಿವಯಸ್ಕರು ದಟ್ಟಗಾಲಿಡುತ್ತಿದ್ದ ಪುಟಾಣಿಗಳಾಗಿದ್ದಾಗ ಮಚ್ಚುಕತ್ತಿಹಿಡಿದಿದ್ದ ಪುರುಷರು ಬಂದು ಅವರ ಕೈಕಾಲುಗಳನ್ನು ಕತ್ತರಿಸಿಹಾಕಿದ್ದರು. ಆಫ್ಘಾನಿಸ್ತಾನದಲ್ಲಿ, ಪುಟ್ಟ ಹುಡುಗಹುಡುಗಿಯರು ಬಣ್ಣಬಣ್ಣದ ಚಿಟ್ಟೆಗಳಂತೆ ತೋರುವ ವರ್ಣರಂಜಿತ “ಆಟಿಕೆ”ಗಳೊಂದಿಗೆ ಆಡಲು ಹೋಗಿ, ವಾಸ್ತವದಲ್ಲಿ ನೆಲಬಾಂಬುಗಳಾಗಿರುವ ಅವು ಸಿಡಿಯುವಾಗ ತಮ್ಮ ಬೆರಳುಗಳನ್ನೂ ಕಣ್ಣುಗಳನ್ನೂ ಕಳೆದುಕೊಳ್ಳುತ್ತಾರೆ.
ಭಯೋತ್ಪಾದನೆಯಿಂದ ಬಾಧಿಸಲ್ಪಡುವ ಇನ್ನೂ ಕೆಲ ಎಳೆಯರ ಪಾಡು ಬೇರೆಯೇ ಆಗಿರುತ್ತದೆ. ಉದಾಹರಣೆಗೆ, ಅಮೆರಿಕದ ಓಕ್ಲಹೋಮ ಸಿಟಿಯಲ್ಲಿ 1995ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 168 ಜನರಲ್ಲಿ 19 ಚಿಕ್ಕ ಮಕ್ಕಳಿದ್ದರು. ಮತ್ತು ಇವರಲ್ಲಿ ಕೆಲವು ಶಿಶುಗಳಿದ್ದವು. ಉರಿಯುತ್ತಿರುವ ಮೋಂಬತ್ತಿಗಳನ್ನು ಆರಿಸಿಬಿಡುವ ರಭಸವಾದ ಗಾಳಿಯಂತೆ ಆ ಬಾಂಬು ಆ ಪುಟ್ಟ ಹಸುಳೆಗಳ ಜೀವಗಳನ್ನು ಒಂದೇ ಕ್ಷಣದಲ್ಲಿ ಕೊನೆಗೊಳಿಸಿತು. ಭಯೋತ್ಪಾದಕರ ಈ ಕೃತ್ಯವು ಆ ಶಿಶುಗಳು ಬೆಳೆದು ಮಕ್ಕಳಾಗಿ ಬಾಳುವ, ತಮ್ಮ ತಂದೆತಾಯಂದಿರ ತೋಳುಗಳಲ್ಲಿ ನಕ್ಕುನಲಿಯುತ್ತಾ ಆಟವಾಡುವ ಮತ್ತು ತಬ್ಬಿಕೊಳ್ಳುವ ಹಕ್ಕನ್ನು ಅವರಿಂದ ಕಸಿದುಕೊಂಡಿತು.
ಈ ಎಲ್ಲ ಘಟನೆಗಳು ಇತ್ತೀಚೆಗೆ ನಡೆದವುಗಳು. ಆದರೆ ವಾಸ್ತವದಲ್ಲಿ ಭಯೋತ್ಪಾದಕರ ಹಿಂಸಾಚಾರವು ಮಾನವಕುಲವನ್ನು ಎಷ್ಟೋ ಶತಮಾನಗಳಿಂದ ಕಾಡಿಸಿದೆ. ಇದನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ. (g 6/06)
[ಪುಟ 3ರಲ್ಲಿರುವ ಚೌಕ]
ಮಗುವಿನ ಸಾವಿಗಾಗಿ ತಯಾರಿ
“ಇವತ್ತು ಬೆಳಗ್ಗೆ ನಾನು ನನ್ನ ಹನ್ನೊಂದು ವರ್ಷದ ಮಗನನ್ನು ನಿದ್ದೆಯಿಂದ ಎಬ್ಬಿಸಿದಾಗ ಅವನು ಮೊದಲು ಕೇಳಿದ್ದು: ‘ಇವತ್ತಿನ ಭಯೋತ್ಪಾದಕರ ದಾಳಿ ನಡೆದಾಯಿತಾ?’” ಇದನ್ನು, ಲೇಖಕನಾದ ಡೇವಿಡ್ ಗ್ರೋಸ್ಮನ್ ತಾನು ವಾಸಿಸುತ್ತಿರುವ ದೇಶವನ್ನು ಬಾಧಿಸುತ್ತಿರುವ ಹಿಂಸಾಚಾರದ ಬಗ್ಗೆ ಬರೆಯುವಾಗ ಹೇಳಿದರು. ಅವರು ಮುಂದುವರಿಸುತ್ತಾ ಹೇಳಿದ್ದು: “ನನ್ನ ಮಗನು ಹೆದರಿಕೊಂಡಿದ್ದಾನೆ.”
ಇತ್ತೀಚಿನ ಸಮಯಗಳಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಗಳಿಂದಾಗಿ ಎಷ್ಟೊಂದು ಮಕ್ಕಳು ಸಾವನ್ನಪ್ಪಿದ್ದಾರೆಂದರೆ, ಕೆಲವು ಹೆತ್ತವರು ತಮ್ಮ ಪುಟ್ಟ ಮಕ್ಕಳ ಸಾವಿಗಾಗಿ ತಯಾರಿಯನ್ನು ಮಾಡುತ್ತಾರೆ. ಗ್ರೋಸ್ಮನ್ ಬರೆದುದು: “ಒಂದು ಯುವ ಜೋಡಿಯು ಭವಿಷ್ಯಕ್ಕಾಗಿ ಮಾಡಿರುವ ತಮ್ಮ ಯೋಜನೆಗಳ ಬಗ್ಗೆ ಹೇಳಿದ ಸಂಗತಿಯನ್ನು ನಾನೆಂದಿಗೂ ಮರೆಯಲಾರೆ. ಅವರು ಮದುವೆಯಾಗಿ ಮೂರು ಮಕ್ಕಳಿಗೆ ಜನ್ಮಕೊಡುವರೆಂದು ಹೇಳಿದರು. ಗಮನಿಸಿ, ಇಬ್ಬರಲ್ಲ ಮೂವರಂತೆ. ಏಕೆಂದರೆ ಒಂದುವೇಳೆ ಒಂದು ಮಗು ಸಾಯುವಲ್ಲಿ, ಕಡಿಮೆಪಕ್ಷ ಇಬ್ಬರಾದರೂ ಉಳಿದಿರುವರು.”
ಆದರೆ ಇಬ್ಬರು ಇಲ್ಲವೆ ಮೂವರೂ ಮಕ್ಕಳು ಸಾಯುವಲ್ಲಿ ಅವರೇನು ಮಾಡುವರೆಂದು ಆ ಜೋಡಿ ತಿಳಿಸಲಿಲ್ಲ.a
[ಪಾದಟಿಪ್ಪಣಿ]
a ಈ ವಿಭಾಗದಲ್ಲಿರುವ ಉಲ್ಲೇಖಗಳು ಡೇವಿಡ್ ಗ್ರೋಸ್ಮನ್ ಬರೆದಂಥ ಜೀವನದ ಭಾಗವಾಗಿಬಿಟ್ಟಿರುವ ಮರಣ (ಇಂಗ್ಲಿಷ್) ಎಂಬ ಪುಸ್ತಕದಿಂದ ತೆಗೆಯಲ್ಪಟ್ಟಿವೆ.
[ಪುಟ 3ರಲ್ಲಿರುವ ಚಿತ್ರ ಕೃಪೆ]
© Sven Torfinn/Panos Pictures