ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/12 ಪು. 20-21
  • ಇತರರನ್ನು ಶ್ಲಾಘಿಸಬೇಕು ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇತರರನ್ನು ಶ್ಲಾಘಿಸಬೇಕು ಏಕೆ?
  • ಎಚ್ಚರ!—2012
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೇರೆಯವರ ಒಳ್ಳೇ ಗುಣಗಳಿಗೆ ಗಮನಕೊಡಿ
  • ಸತ್ಕಾರ್ಯಗಳಿಗೆ ಬೆಲೆಕೊಡಿ
  • ಶ್ಲಾಘನೆಯ ಶಕ್ತಿ
  • “ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಪ್ರಶಂಸಿಸುವ ಮೂಲಕ
    2006 ನಮ್ಮ ರಾಜ್ಯದ ಸೇವೆ
  • ಪ್ರಶಂಸೆಯು ಚೈತನ್ಯಗೊಳಿಸುತ್ತದೆ
    2003 ನಮ್ಮ ರಾಜ್ಯದ ಸೇವೆ
  • ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಎಚ್ಚರ!—2012
g 7/12 ಪು. 20-21

ಬೈಬಲಿನ ದೃಷ್ಟಿಕೋನ

ಇತರರನ್ನು ಶ್ಲಾಘಿಸಬೇಕು ಏಕೆ?

ಅನೇಕರಿಗೆ ತಮ್ಮ ಶ್ರಮ, ಪ್ರಯತ್ನಗಳನ್ನು ಯಾರೂ ಗಮನಿಸುತ್ತಿಲ್ಲ ಎಂಬ ನೋವಿದೆ. ಉದಾಹರಣೆಗೆ, ಕೆಲಸಗಾರರಿಗೆ ತಾವೆಷ್ಟೇ ದುಡಿದರೂ ಧಣಿಗಳ ದೃಷ್ಟಿಯಲ್ಲಿ ಏನೂ ಬೆಲೆಯಿಲ್ಲ ಎನ್ನುವ ಕೊರಗು. ಅನೇಕ ವಿವಾಹಿತರಿಗೆ ತಮ್ಮ ಬಗ್ಗೆ ತಮ್ಮ ಸಂಗಾತಿಗೆ ಉಡಾಫೆ ಎಂಬ ಅಳಲು. ಇನ್ನು ಕೆಲವು ಮಕ್ಕಳಿಗೆ, ತಾವೆಂದೂ ಹೆತ್ತವರ ನಿರೀಕ್ಷೆಗೆ ತಕ್ಕಂತೆ ಇರಸಾಧ್ಯವಿಲ್ಲ ಎಂಬ ಅನಿಸಿಕೆ. ಇಂಥೆಲ್ಲ ಭಾವನೆಗಳನ್ನು ಕಿತ್ತೆಸೆಯುವ ಸಿದ್ಧೌಷಧ: ಒಬ್ಬರನ್ನೊಬ್ಬರು ಶ್ಲಾಘಿಸುವುದೇ!

ಮನದಾಳದಿಂದ ಹೊಗಳುವ ರೂಢಿ ಇಂದು ಅಳಿವಿನಂಚಿನಲ್ಲಿದೆ. ಇದೇನೂ ಅಚ್ಚರಿಯ ಸಂಗತಿಯಲ್ಲ. ಏಕೆಂದರೆ ‘ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು. ಜನರು ಸ್ವಪ್ರೇಮಿಗಳೂ ಕೃತಜ್ಞತೆಯಿಲ್ಲದವರೂ’ ಆಗಿರುವರೆಂದು ಬೈಬಲ್‌ ಮೊದಲೇ ಹೇಳಿತ್ತು.—2 ತಿಮೊಥೆಯ 3:1, 2.

ನಿಮ್ಮನ್ನು ಯಾರಾದರೂ ಶ್ಲಾಘಿಸಿದ್ದಾರಾ? ಶ್ಲಾಘಿಸಿದ್ದರೆ ಅದು ಮನಸ್ಸಿಗೆಷ್ಟು ಉತ್ಸಾಹ, ಉಲ್ಲಾಸ ನೀಡುತ್ತದೆಂದು ನಿಮಗೆ ತಿಳಿದೇ ಇದೆ. “ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 15:23, ಪವಿತ್ರ ಗ್ರಂಥ ಭಾಷಾಂತರ) ಒಬ್ಬರೊಂದಿಗೊಬ್ಬರು ಪ್ರೀತಿದಯೆಯಿಂದ ವ್ಯವಹರಿಸಬೇಕೆಂದು ಬೈಬಲ್‌ ಕಲಿಸುತ್ತದೆ.

ಬೇರೆಯವರ ಒಳ್ಳೇ ಗುಣಗಳಿಗೆ ಗಮನಕೊಡಿ

ನಮ್ಮ ಬಗ್ಗೆ ದೇವರಿಗೆ ಅಪಾರ ಆಸಕ್ತಿ ಇದೆ. ಹಾಗಾಗಿ ಆತನು ನಮ್ಮ ಒಳ್ಳೇ ಗುಣಗಳಿಗೂ ನಡತೆಗೂ ಗಮನ ಕೊಡುತ್ತಾನೆ ಮಾತ್ರವಲ್ಲ ಮಾನ್ಯಮಾಡುತ್ತಾನೆ. ಆತನು “ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂದು ಬೈಬಲ್‌ ಆಶ್ವಾಸನೆ ನೀಡುತ್ತದೆ. (2 ಪೂರ್ವಕಾಲವೃತ್ತಾಂತ 16:9) ದೇವರ ನಿಯಮಗಳನ್ನು ಪಾಲಿಸುವ ಮೂಲಕ ನಾವಾತನಿಗೆ ಪ್ರೀತಿ ತೋರಿಸುವಾಗ ಆತ ಖಂಡಿತ ಗಮನಿಸುತ್ತಾನೆ.

ಯೆಹೋವ ದೇವರು ನಮ್ಮಲ್ಲಿ ತಪ್ಪುಗಳನ್ನು ಹುಡುಕುವುದಿಲ್ಲ. ಹಾಗೆ ತಪ್ಪುಗಳನ್ನು ಹುಡುಕಿದರೆ ನಾವ್ಯಾರೂ ಆತನ ಮುಂದೆ ನಿಲ್ಲಲಾರೆವು. (ಕೀರ್ತನೆ 130:3) ಯೆಹೋವನನ್ನು ಒಬ್ಬ ಗಣಿಗಾರನಿಗೆ ಹೋಲಿಸಬಹುದು. ಗಣಿಗಾರ ಕಲ್ಲುರಾಶಿಯನ್ನು ಸೂಕ್ಷ್ಮವಾಗಿ ಶೋಧಿಸುತ್ತಾ ಅಮೂಲ್ಯ ರತ್ನಗಳನ್ನು ತಾಳ್ಮೆಯಿಂದ ಹುಡುಕುತ್ತಾನೆ. ಆತನಿಗೆ ಒಂದೇ ಒಂದು ರತ್ನ ಸಿಕ್ಕರೂ ಆನಂದಪಡುತ್ತಾನೆ. ಅದೊಂದು ಒರಟು ಕಲ್ಲಿನಂತೆ ಕಾಣುವುದಾದರೂ ಗಣಿಗಾರ ಅದರಲ್ಲಿ ಅಡಗಿರುವ ಬೆಲೆಬಾಳುವ ರತ್ನವನ್ನು ನೋಡುತ್ತಾನೆ. ಅದೇ ರೀತಿ ದೇವರು ನಮ್ಮ ಹೃದಯಗಳನ್ನು ಶೋಧಿಸುವಾಗ ತಪ್ಪುಗಳಿಗಾಗಿ ಅಲ್ಲ, ಒಳ್ಳೇ ಗುಣಗಳಿಗಾಗಿ ಹುಡುಕುತ್ತಾನೆ. ಅವು ಸಿಕ್ಕಿದಾಗ ಸಂತೋಷಪಡುತ್ತಾನೆ. ಆತನು ಆ ಗುಣಗಳನ್ನು ರೂಪಿಸಿ, ಉಜ್ಜಿ, ಅವುಗಳಿಗೆ ಮೆರುಗು ನೀಡಿದಾಗ ನಾವು ಒಂದು ಬೆಲೆಬಾಳುವ ರತ್ನವಾಗಬಲ್ಲೆವು. ಅಂದರೆ ಯೆಹೋವನಿಗೆ ನಿಷ್ಠರಾದ ಆರಾಧಕರಾಗಬಲ್ಲೆವು ಎಂದು ಆತನಿಗೆ ತಿಳಿದಿದೆ.

ದೇವರಿಂದ ನಾವು ಕಲಿಯುವ ಪಾಠ? ಇನ್ನೊಬ್ಬರ ಕುಂದುಕೊರತೆಗಳ ಮೇಲೆ ಗಮನಹರಿಸುವುದು ಮಾನವಸಹಜ ಗುಣ. ಆದರೆ ಯೆಹೋವನು ಜನರನ್ನು ಹೇಗೆ ನೋಡುತ್ತಾನೋ ಹಾಗೇ ನಾವೂ ನೋಡಬೇಕು. ಇನ್ನೊಬ್ಬರಲ್ಲಿ ಒಳ್ಳೇ ಗುಣಗಳನ್ನು ಹುಡುಕಬೇಕು. (ಕೀರ್ತನೆ 103:8-11, 17, 18) ಆ ಗುಣಗಳಿಗಾಗಿ ಅವರನ್ನು ಪ್ರಶಂಸಿಸಬೇಕು. ಫಲಿತಾಂಶ? ಇದು ಅವರಲ್ಲಿ ಚೈತನ್ಯ ತುಂಬುತ್ತದೆ. ಸರಿಯಾದ ಸಂಗತಿಗಳನ್ನು ಮಾಡಲು ಇನ್ನಷ್ಟು ಶ್ರಮಿಸುವಂತೆ ಮಾಡುತ್ತದೆ. ಅಲ್ಲದೆ, ಕೊಡುವುದರಿಂದ ಬರುವ ಸಂತೋಷ ನಮಗೂ ಸಿಗುತ್ತದೆ.—ಅಪೊಸ್ತಲರ ಕಾರ್ಯಗಳು 20:35.

ಸತ್ಕಾರ್ಯಗಳಿಗೆ ಬೆಲೆಕೊಡಿ

ಇತರರು ಮಾಡುತ್ತಿದ್ದ ಒಳ್ಳೇ ಕೆಲಸಗಳನ್ನು ಯೇಸು ಗಮನಿಸಿ ಶ್ಲಾಘಿಸಿದನು. ಉದಾಹರಣೆಗೆ, ಕಾಯಿಲೆಯಿಂದ ನರಳುತ್ತಿದ್ದ ಸ್ತ್ರೀಯೊಬ್ಬಳು ಗುಣವಾಗಬೇಕೆಂಬ ಆಸೆಯಿಂದ ಯಾರಿಗೂ ಗೊತ್ತಾಗದ ಹಾಗೆ ಯೇಸುವಿನ ಉಡುಪನ್ನು ಮುಟ್ಟಿದಳು. ಆಗ ಯೇಸು “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ” ಎನ್ನುತ್ತಾ ಆಕೆಯನ್ನು ಪ್ರಶಂಸಿಸಿದನು.—ಮಾರ್ಕ 5:34.

ಮತ್ತೊಂದು ಉದಾಹರಣೆ ಗಮನಿಸಿ. ಯೆರೂಸಲೇಮ್‌ ಆಲಯದಲ್ಲಿ ಯೇಸು ಬೋಧಿಸುತ್ತಿದ್ದನು. ಅನೇಕ ಶ್ರೀಮಂತರು ಆಲಯದ ಕಾಣಿಕೆ ಪೆಟ್ಟಿಗೆಗಳಲ್ಲಿ ಹಣಹಾಕುತ್ತಿದ್ದರು. ಆಗ ಒಬ್ಬ ಬಡ ವಿಧವೆ “ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು” ಕಾಣಿಕೆ ಹಾಕಿದಳು. ಬೇರೆಯವರು ಹಾಕಿದ ಕಾಣಿಕೆಯ ಮುಂದೆ ಆಕೆಯ ಕಾಣಿಕೆ ಏನೂ ಅಲ್ಲವಾಗಿತ್ತು. ಆದರೆ ಆಕೆ ಹೃತ್ಪೂರ್ವಕವಾಗಿ ಹಾಕಿದ್ದಳು. ಅದನ್ನು ಗಮನಿಸಿದ ಯೇಸು, “ಈ ವಿಧವೆಯು ಬಡವಳಾಗಿರುವುದಾದರೂ ಅವರೆಲ್ಲರು ಹಾಕಿದ್ದಕ್ಕಿಂತ ಹೆಚ್ಚನ್ನು ಹಾಕಿದ್ದಾಳೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. ಏಕೆಂದರೆ ಅವರೆಲ್ಲರೂ ತಮಗೆ ಸಾಕಾಗಿ ಮಿಕ್ಕದ್ದನ್ನು ಕಾಣಿಕೆಯಾಗಿ ಕೊಟ್ಟರು, ಆದರೆ ಈ ಸ್ತ್ರೀಯು ತನ್ನ ಬಡತನದಲ್ಲಿಯೂ ತನ್ನಲ್ಲಿದ್ದ ಜೀವನಾಧಾರವನ್ನೆಲ್ಲ ಹಾಕಿದಳು” ಎಂದು ಎಲ್ಲರ ಮುಂದೆ ಶ್ಲಾಘಿಸಿದನು.—ಲೂಕ 21:1-4.

ಯೇಸುವನ್ನು ನಾವು ಹೇಗೆ ಅನುಕರಿಸಬಲ್ಲೆವು? ಬೇರೆಯವರ ಸತ್ಕಾರ್ಯಗಳನ್ನು ನಾವು ಶ್ಲಾಘಿಸಬೇಕು. “ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳಿತು ಮಾಡುವುದನ್ನು ತಪ್ಪಿಸಬೇಡ” ಎನ್ನುತ್ತದೆ ಬೈಬಲ್‌.—ಜ್ಞಾನೋಕ್ತಿ 3:27, ಪವಿತ್ರ ಗ್ರಂಥ ಭಾಷಾಂತರ.

ಶ್ಲಾಘನೆಯ ಶಕ್ತಿ

ಕೃತಘ್ನತೆ ತುಂಬಿದ ಈ ಜಗತ್ತಿನಲ್ಲಿ ಪ್ರೀತಿ, ಶ್ಲಾಘನೆ ಎಲ್ಲರಿಗೂ ಬೇಕು. ಹಾಗಾಗಿ ಇತರರನ್ನು ಮನಸಾರೆ ಶ್ಲಾಘಿಸೋಣ. ಆಗ ಅವರ ಮನೋಸ್ಥೈರ್ಯ ಹೆಚ್ಚುತ್ತದೆ, ಆತ್ಮೋನ್ನತಿ ಆಗುತ್ತದೆ. ತಮ್ಮಿಂದಾದದ್ದೆಲ್ಲವನ್ನು ಮಾಡಲು ಪ್ರಚೋದಿತರಾಗುತ್ತಾರೆ.—ಜ್ಞಾನೋಕ್ತಿ 31:28, 29.

“ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ” ಎಂದು ಬೈಬಲ್‌ಎಲ್ಲರನ್ನು ಪ್ರೋತ್ಸಾಹಿಸುತ್ತದೆ. (ಇಬ್ರಿಯ 10:24) ಪ್ರತಿಯೊಬ್ಬರೂ ಇತರರಲ್ಲಿ ಆಸಕ್ತಿ ವಹಿಸುತ್ತಿದ್ದಲ್ಲಿ, ಸದ್ಗುಣಗಳಿಗೆ ಗಮನಕೊಟ್ಟಿದ್ದಲ್ಲಿ, ಸತ್ಕಾರ್ಯಗಳಿಗೆ ಬೆಲೆಕೊಟ್ಟಿದ್ದಲ್ಲಿ ಈ ಜಗತ್ತು ಇಂದಿಗಿಂತ ಭಿನ್ನವಾಗಿರುತ್ತಿತ್ತು! ಶ್ಲಾಘನೆಗಿರುವ ಶಕ್ತಿ ಅಷ್ಟು  ಅಪಾರ! (g12-E 04)

ಈ ಬಗ್ಗೆ ಯೋಚಿಸಿದ್ದೀರಾ?

● ಬೇರೆಯವರ ಸತ್ಕಾರ್ಯಗಳನ್ನು ನಾವೇಕೆ ಶ್ಲಾಘಿಸಬೇಕು?—ಜ್ಞಾನೋಕ್ತಿ 15:23, ಪವಿತ್ರ ಗ್ರಂಥ ಭಾಷಾಂತರ.

● ಯೆಹೋವ ದೇವರು ನಮ್ಮಲ್ಲಿ ಏನನ್ನು ಹುಡುಕುತ್ತಾನೆ?—2 ಪೂರ್ವಕಾಲವೃತ್ತಾಂತ 16:9.

● ಇತರರನ್ನು ಯಾವಾಗ ಶ್ಲಾಘಿಸಬೇಕು?—ಜ್ಞಾನೋಕ್ತಿ 3:27, ಪವಿತ್ರ ಗ್ರಂಥ ಭಾಷಾಂತರ.

[ಪುಟ 21ರಲ್ಲಿರುವ ಚಿತ್ರ]

ಬೇರೆಯವರ ಸತ್ಕಾರ್ಯಗಳನ್ನು ಗಮನಿಸಿ ಶ್ಲಾಘಿಸುತ್ತೀರಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ