ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಪ್ರಶಂಸಿಸುವ ಮೂಲಕ
1 ಮನಃಪೂರ್ವಕ ಪ್ರಶಂಸೆಯು ಜನರನ್ನು ಹುರಿದುಂಬಿಸುತ್ತದೆ, ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ ಮತ್ತು ಅವರಿಗೆ ಆನಂದವನ್ನು ತರುತ್ತದೆ. ಶುಶ್ರೂಷೆಯಲ್ಲಿ ಮನಃಪೂರ್ವಕ ಪ್ರಶಂಸೆಯ ಒಂದು ಮಾತನ್ನು ಹೇಳುವುದರಿಂದ ಜನರು ಕಿವಿಗೊಡಲು ಮನಸ್ಸುಮಾಡುತ್ತಾರೆಂದು ಅನೇಕ ಪ್ರಚಾರಕರು ಕಂಡುಕೊಂಡಿದ್ದಾರೆ. ಸುವಾರ್ತೆಯನ್ನು ಹಂಚಿಕೊಳ್ಳುವಾಗ ನಾವು ಜನರನ್ನು ಹೇಗೆ ಪ್ರಶಂಸಿಸಬಲ್ಲೆವು?
2 ಗಮನಿಸುವವರಾಗಿರಿ: ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ಏಷ್ಯಾ ಮೈನರ್ನಲ್ಲಿದ್ದ ಏಳು ಸಭೆಗಳ ಸುಕೃತ್ಯಗಳಿಗೆ ಗಮನಕೊಟ್ಟನು. (ಪ್ರಕ. 2:2, 3, 13, 19; 3:8) ತದ್ರೀತಿ, ಶುಶ್ರೂಷೆಯಲ್ಲಿ ಭೇಟಿಯಾಗುವ ಜನರಲ್ಲಿ ನಮಗಿರುವ ಯಥಾರ್ಥ ಆಸಕ್ತಿಯು ಅವರನ್ನು ಪ್ರಶಂಸಿಸಲು ನಾವು ಅವಕಾಶಗಳಿಗಾಗಿ ಹುಡುಕುವಂತೆ ಮಾಡುತ್ತದೆ. ಉದಾಹರಣೆಗೆ ಚೊಕ್ಕಟವಾದ ಅಂಗಳ, ಹೆತ್ತವರಲ್ಲೊಬ್ಬರು ಮಕ್ಕಳನ್ನು ಮುದ್ದುಮಾಡುತ್ತಿರುವುದು, ಅಥವಾ ನಮ್ಮನ್ನು ನೋಡಿ ಮನೆಯವರು ಬೀರುವ ನಸುನಗೆ ಮತ್ತು ಬರಮಾಡುವ ರೀತಿಯು—ಇವೆಲ್ಲವು ನಾವು ಅವರನ್ನು ಪ್ರಶಂಸಿಸಲು ಅವಕಾಶಗಳನ್ನು ನೀಡುತ್ತದೆ. ನೀವು ಅಂಥ ವಿಷಯಗಳನ್ನು ಕೂಡಲೇ ಗಮನಿಸಿ ಪ್ರಶಂಸೆನೀಡಲು ಆ ಅವಕಾಶಗಳನ್ನು ಸದುಪಯೋಗಿಸುತ್ತೀರೋ?
3 ಚೆನ್ನಾಗಿ ಕಿವಿಗೊಡಿರಿ: ಸುವಾರ್ತೆ ಸಾರುವಾಗ ಸೂಕ್ತ ಪ್ರಶ್ನೆಗಳನ್ನು ಕೇಳುವ ಮೂಲಕ ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಉತ್ತೇಜಿಸಿರಿ. ಅವರು ಏನು ಹೇಳುತ್ತಾರೋ ಅದಕ್ಕೆ ನಿಕಟ ಗಮನಕೊಡುವ ಮೂಲಕ ಅವರಿಗೆ ಮಾನಮರ್ಯಾದೆಯನ್ನು ತೋರಿಸಿ. (ರೋಮಾ. 12:10) ಈ ಮೂಲಕ ನೀವು ಅವರ ಮಾತುಗಳಿಂದ, ಅವರನ್ನು ಮನಃಪೂರ್ವಕವಾಗಿ ಪ್ರಶಂಸಿಸಲು ಯಾವುದಾದರೂ ವಿಷಯವನ್ನು ಕಂಡುಕೊಳ್ಳಬಲ್ಲಿರಿ ಮತ್ತು ಹೀಗೆ ನೀವಿಬ್ಬರು ಒಪ್ಪಿಕೊಳ್ಳುವಂಥ ಸಾಮಾನ್ಯ ವಿಷಯದ ಮೇಲೆ ಸಂಭಾಷಣೆಯನ್ನು ಹೆಣೆಯಬಲ್ಲಿರಿ.
4 ವಿವೇಚನೆಯನ್ನು ಬಳಸಿ: ಆದರೆ ಮನೆಯವರು ಹೇಳುವ ಮಾತು ಬೈಬಲ್ ಸತ್ಯದೊಂದಿಗೆ ಹೊಂದಿಕೆಯಲ್ಲಿ ಇರದಿದ್ದರೆ ಆಗೇನು? ತಪ್ಪಾದ ಹೇಳಿಕೆಯ ಬಗ್ಗೆ ಅಸಮ್ಮತಿ ಸೂಚಿಸುವ ಬದಲಿಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಗಣ್ಯಮಾಡಿ, “ನೀವು ಈ ವಿಷಯದ ಬಗ್ಗೆ ತುಂಬಾ ಆಲೋಚಿಸಿದ್ದೀರಿ ಎಂದು ನನಗೆ ತೋರುತ್ತದೆ” ಎಂಬಂಥ ಮಾತುಗಳ ಮೂಲಕ ಸಂಭಾಷಣೆಯನ್ನು ಮುಂದುವರಿಸಿರಿ. (ಕೊಲೊ. 4:6) ಒಬ್ಬ ವ್ಯಕ್ತಿ ತುಂಬ ವಾದಮಾಡುವವನು ಆಗಿರುವುದಾದರೂ ಆ ವಿಷಯದ ಬಗ್ಗೆ ಅವನಿಗಿರುವ ಯಥಾರ್ಥ ಆಸಕ್ತಿಯನ್ನು ನಾವು ಪ್ರಶಂಸಿಸಬಹುದು. ಈ ರೀತಿಯ ನಮ್ಮ ಸೌಮ್ಯ ಪ್ರತಿವರ್ತನೆಯು ಸುವಾರ್ತೆಯನ್ನು ತೀವ್ರವಾಗಿ ವಿರೋಧಿಸುವಂತೆ ತೋರುವವರ ಮನಸ್ಸನ್ನೂ ಮೃದುಮಾಡಬಲ್ಲದು.—ಜ್ಞಾನೋ. 25:15.
5 ನಾವು ಕೊಡುವ ಪ್ರಶಂಸೆಯು ಉತ್ತೇಜಿಸುವಂಥದ್ದು ಆಗಿರಬೇಕಾದರೆ ಅದು ಮನದಾಳದಿಂದ ಬರಬೇಕು. ಇಂಥ ಬಲವರ್ಧಕ ಮಾತುಗಳು ಯೆಹೋವನನ್ನು ಘನಪಡಿಸುತ್ತವೆ ಮತ್ತು ಇತರರನ್ನು ರಾಜ್ಯ ಸಂದೇಶದ ಕಡೆಗೆ ಆಕರ್ಷಿಸುತ್ತದೆ.