ಪ್ರಶಂಸೆಯು ಚೈತನ್ಯಗೊಳಿಸುತ್ತದೆ
1 “ಇವತ್ತು ನಾನು ಒಳ್ಳೇ ಹುಡುಗಿಯಾಗಿರಲಿಲ್ಲವೋ?” ಎಂದು ಮಲಗುವ ಸಮಯದಲ್ಲಿ ಒಬ್ಬ ಚಿಕ್ಕ ಹುಡುಗಿಯು ಬಿಕ್ಕಳಿಸಿದಳು. ಆ ಪ್ರಶ್ನೆಯು ಅವಳ ತಾಯಿಯನ್ನು ಅಚ್ಚರಿಗೊಳಿಸಿತು. ಆ ದಿನ ತನ್ನ ಮಗಳು ಎಷ್ಟು ಚೆನ್ನಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆಂಬುದನ್ನು ತಾಯಿ ಗಮನಿಸಿದ್ದರೂ, ಅವಳಿಗೆ ಒಂದೇ ಒಂದು ಪ್ರಶಂಸೆಯ ಮಾತನ್ನೂ ಹೇಳುವ ಗೊಡವೆಗೆ ಹೋಗಲಿಲ್ಲ. ಆಬಾಲವೃದ್ಧರಾದ ನಮ್ಮೆಲ್ಲರಿಗೂ ಪ್ರಶಂಸೆಯ ಅಗತ್ಯವಿದೆ ಎಂಬುದನ್ನು ಆ ಚಿಕ್ಕ ಹುಡುಗಿಯ ಕಣ್ಣೀರು ನೆನಪಿಸಬೇಕು. ಇತರರು ಮಾಡುವ ಒಳ್ಳೆಯ ಕೆಲಸಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ನಾವು ನಮ್ಮ ಸುತ್ತಲಿರುವವರನ್ನು ಚೈತನ್ಯಗೊಳಿಸುತ್ತೇವೋ?—ಜ್ಞಾನೋ. 25:11.
2 ಜೊತೆ ಕ್ರೈಸ್ತರನ್ನು ಪ್ರಶಂಸಿಸಲಿಕ್ಕಾಗಿ ಅನೇಕ ಒಳ್ಳೆಯ ಕಾರಣಗಳಿವೆ. ಹಿರಿಯರು, ಶುಶ್ರೂಷಾ ಸೇವಕರು, ಮತ್ತು ಪಯನೀಯರರು ತಮ್ಮ ಜವಾಬ್ದಾರಿಗಳನ್ನು ನೆರವೇರಿಸಲು ಕಷ್ಟಪಟ್ಟು ಕೆಲಸಮಾಡುತ್ತಾರೆ. (1 ತಿಮೊ. 4:10; 5:17) ದೇವಭಯವುಳ್ಳ ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನ ಮಾರ್ಗದಲ್ಲಿ ಬೆಳೆಸಲಿಕ್ಕಾಗಿ ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ. (ಎಫೆ. 6:4) ಕ್ರೈಸ್ತ ಯುವಕರು “ಪ್ರಾಪಂಚಿಕ ಆತ್ಮವನ್ನು” ಎದುರಿಸುವುದರಲ್ಲಿ ದೊಡ್ಡ ಹೋರಾಟವನ್ನು ಮಾಡುತ್ತಿದ್ದಾರೆ. (1 ಕೊರಿಂ. 2:12; ಎಫೆ. 2:1-3) ಇತರರು ವೃದ್ಧಾಪ್ಯ, ಆರೋಗ್ಯದ ಸಮಸ್ಯೆಗಳು, ಅಥವಾ ಇತರ ಶೋಧನೆಗಳ ಹೊರತಾಗಿಯೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾರೆ. (2 ಕೊರಿಂ. 12:7) ಇಂಥವರೆಲ್ಲರೂ ಪ್ರಶಂಸೆಗೆ ಅರ್ಹರಾಗಿದ್ದಾರೆ. ನಾವು ಅವರ ಸ್ತುತ್ಯಾರ್ಹ ಪ್ರಯತ್ನಗಳನ್ನು ಪರಿಗಣಿಸುತ್ತೇವೋ?
3 ವೈಯಕ್ತಿಕ ಮತ್ತು ನಿರ್ದಿಷ್ಟ: ವೇದಿಕೆಯಿಂದ ಮಾಡಲ್ಪಡುವ ಪ್ರಶಂಸೆಯನ್ನು ನಾವೆಲ್ಲರೂ ಮೆಚ್ಚುತ್ತೇವೆ. ಆದರೂ, ಪ್ರಶಂಸೆಯೆಂಬುದು ವೈಯಕ್ತಿಕವಾಗಿ ನಮ್ಮ ಕಡೆಗೆ ನಿರ್ದೇಶಿಸಲ್ಪಡುವಾಗ ಇನ್ನಷ್ಟು ಚೈತನ್ಯದಾಯಕವಾಗಿರುತ್ತದೆ. ಉದಾಹರಣೆಗೆ, ರೋಮಾಪುರದವರಿಗೆ ಬರೆದ ತನ್ನ ಪತ್ರದ 16ನೇ ಅಧ್ಯಾಯದಲ್ಲಿ, ಪೌಲನು ಇತರರಲ್ಲಿ ಪೊಯಿಬೆ, ಪ್ರಿಸ್ಕ ಮತ್ತು ಅಕ್ವಿಲ, ತ್ರುಫೈನ ಮತ್ತು ತ್ರುಫೋಸ, ಹಾಗೂ ಪೆರ್ಸೀಸರಿಗೆ ಮೆಚ್ಚುಗೆಯ ನಿರ್ದಿಷ್ಟವಾದ ಅಭಿವ್ಯಕ್ತಿಗಳನ್ನು ಮಾಡಿದನು. (ರೋಮಾ. 16:1-4, 12) ಆ ನಂಬಿಗಸ್ತರಿಗೆ ಅವನ ಮಾತುಗಳು ಎಷ್ಟು ಚೈತನ್ಯದಾಯಕವಾಗಿದ್ದಿರಬೇಕು! ಇಂತಹ ಹೊಗಳಿಕೆಯು, ನಮಗೆ ಅವರ ಅಗತ್ಯವಿದೆ ಎಂಬ ಪುನರಾಶ್ವಾಸನೆಯನ್ನು ನಮ್ಮ ಸಹೋದರ ಸಹೋದರಿಯರಿಗೆ ನೀಡುವುದು ಮತ್ತು ನಮ್ಮನ್ನು ಪರಸ್ಪರ ಹತ್ತಿರವಾಗಿಸಲು ಸಹಾಯಮಾಡುವುದು. ನೀವು ಇತ್ತೀಚೆಗೆ ನಿರ್ದಿಷ್ಟವಾದ ವೈಯಕ್ತಿಕ ಪ್ರಶಂಸೆಯನ್ನು ನೀಡಿದ್ದೀರೋ?—ಎಫೆ. 4:29.
4 ಹೃದಯದಿಂದ: ಪ್ರಶಂಸೆಯು ನಿಜವಾಗಿಯೂ ಚೈತನ್ಯದಾಯಕವಾಗಿರಬೇಕಾದರೆ, ಅದು ಪ್ರಾಮಾಣಿಕವಾದದ್ದಾಗಿರಬೇಕು. ನಮ್ಮ ಮಾತುಗಳು ಹೃದಯದಿಂದ ಹೊರಹೊಮ್ಮುತ್ತಿವೆಯೋ ಅಥವಾ ನಾವು ಕೇವಲ ‘ಮುಖಸ್ತುತಿ ಮಾಡುತ್ತಿದ್ದೇವೋ’ ಎಂದು ಜನರು ಹೇಳಬಲ್ಲರು. (ಜ್ಞಾನೋ. 28:23) ಇತರರಲ್ಲಿ ಒಳ್ಳೆಯದನ್ನು ಗಮನಿಸಲು ನಾವು ನಮ್ಮನ್ನು ತರಬೇತಿಗೊಳಿಸುವಾಗ, ಇತರರನ್ನು ಪ್ರಶಂಸಿಸುವಂತೆ ನಮ್ಮ ಹೃದಯವು ಪ್ರೇರಿಸಲ್ಪಡುವುದು. “ಸಮಯೋಚಿತವಾದ [ಮಾತಿನಲ್ಲಿ] ಎಷ್ಟೋ ಸ್ವಾರಸ್ಯ!” ಎಂಬುದನ್ನು ತಿಳಿದವರಾಗಿ, ನಾವು ಪ್ರಾಮಾಣಿಕವಾದ ಪ್ರಶಂಸೆಯನ್ನು ನೀಡುವುದರಲ್ಲಿ ಔದಾರ್ಯವುಳ್ಳವರಾಗಿರೋಣ.—ಜ್ಞಾನೋ. 15:23.