ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 39-ಪು. 42
  • ಭಾಷಣದ ಹೊರಮೇರೆಯನ್ನು ತಯಾರಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಷಣದ ಹೊರಮೇರೆಯನ್ನು ತಯಾರಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಶ್ಲೇಷಿಸಿ, ಆರಿಸಿ, ಸಂಘಟಿಸಿ
  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಹೊರಮೇರೆಯ ಉಪಯೋಗ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 39-ಪು. 42

ಭಾಷಣದ ಹೊರಮೇರೆಯನ್ನು ತಯಾರಿಸುವುದು

ಭಾಷಣ ನೇಮಕವು ದೊರೆತಾಗ, ಅನೇಕರು ಪ್ರಯಾಸಪಟ್ಟು ಅದನ್ನು ಪೀಠಿಕೆಯಿಂದ ಆರಂಭಿಸಿ ಸಮಾಪ್ತಿಯ ತನಕ ವಿವರವಾಗಿ ಬರೆದಿಡುತ್ತಾರೆ. ಆ ಭಾಷಣದ ತಯಾರಿಯು ಮುಗಿಯುವುದರೊಳಗೆ ಅನೇಕಾನೇಕ ಕರಡು ಪ್ರತಿಗಳು ತಯಾರಿಸಲ್ಪಟ್ಟಿರಬಹುದು. ಇದಕ್ಕಾಗಿ ಗಂಟಾನುಗಟ್ಟಲೆ ಸಮಯ ವ್ಯಯಿಸಲ್ಪಟ್ಟಿರಬಹುದು.

ಇದೇ ರೀತಿ ನೀವು ನಿಮ್ಮ ಭಾಷಣಗಳನ್ನು ತಯಾರಿಸುತ್ತೀರೋ? ಅದಕ್ಕಿಂತ ಹೆಚ್ಚು ಸುಲಭವಾದ ರೀತಿಯನ್ನು ನೀವು ಕಲಿಯಬಯಸುವಿರೊ? ನೀವು ಒಂದು ಹೊರಮೇರೆಯನ್ನು ತಯಾರಿಸುವುದು ಹೇಗೆಂದು ಕಲಿಯುವಲ್ಲಿ, ಎಲ್ಲವನ್ನೂ ಬರೆದಿಡುವ ಆವಶ್ಯಕತೆ ಇರುವುದಿಲ್ಲ. ಇದು ನಿಮಗೆ ಭಾಷಣ ಕೊಡುವುದನ್ನು ಅಭ್ಯಾಸಮಾಡಲು ಹೆಚ್ಚು ಸಮಯವನ್ನು ಕೊಡುವುದು. ಆಗ ನಿಮಗೆ ಭಾಷಣಗಳನ್ನು ಕೊಡುವುದು ಹೆಚ್ಚು ಸುಲಭವಾಗುವುದು ಮಾತ್ರವಲ್ಲ, ಸಭಿಕರಿಗೆ ಆಲಿಸಲು ಹೆಚ್ಚು ಆಸಕ್ತಿಯದ್ದಾಗಿಯೂ ಹೆಚ್ಚು ಪ್ರಚೋದಕವಾಗಿಯೂ ಇರುವುದು.

ಸಭೆಯಲ್ಲಿ ಕೊಡಲ್ಪಡುವ ಸಾರ್ವಜನಿಕ ಭಾಷಣಗಳಿಗೆ ಮೂಲಭೂತವಾದ ಒಂದು ಹೊರಮೇರೆಯು ಒದಗಿಸಲ್ಪಡುತ್ತದೆ ಎಂಬುದು ನಿಜ. ಆದರೆ ಇತರ ಹೆಚ್ಚಿನ ಭಾಷಣಗಳಿಗೆ ಹೀಗಿರುವುದಿಲ್ಲ. ನಿಮಗೆ ಒಂದು ವಿಷಯವಸ್ತು ಅಥವಾ ಮುಖ್ಯ ವಿಷಯವು ಮಾತ್ರ ಕೊಡಲ್ಪಡಬಹುದು. ಅಥವಾ ಒಂದು ನಿರ್ದಿಷ್ಟ ಮುದ್ರಿತ ವಿಷಯಭಾಗವನ್ನು ಆವರಿಸುವಂತೆ ನಿಮಗೆ ತಿಳಿಸಲಾಗಬಹುದು. ಕೆಲವು ಸಲ, ನಿಮಗೆ ಕೆಲವು ಸೂಚನೆಗಳು ಮಾತ್ರ ಕೊಡಲ್ಪಡಬಹುದು. ಇಂತಹ ಎಲ್ಲ ನೇಮಕಗಳಿಗೆ, ನಿಮ್ಮ ಸ್ವಂತ ಹೊರಮೇರೆಯನ್ನು ತಯಾರಿಸುವ ಅಗತ್ಯ ನಿಮಗಿದೆ.

ಪುಟ 41ರಲ್ಲಿರುವ ಚಿತ್ರ

ಪುಟ 41 ರಲ್ಲಿರುವ ಮಾದರಿಯು, ಒಂದು ಚಿಕ್ಕ ಹೊರಮೇರೆಯನ್ನು ಹೇಗೆ ತಯಾರಿಸಬಹುದು ಎಂಬ ವಿಧಾನವನ್ನು ನಿಮಗೆ ನೀಡುವುದು. ಅಲ್ಲಿ ಪ್ರತಿಯೊಂದು ಮುಖ್ಯಾಂಶವು ಎಡ ಅಂಚಿನಲ್ಲಿ (ಮಾರ್ಜಿನ್‌ನಲ್ಲಿ) ದೊಡ್ಡ ಅಕ್ಷರಗಳಲ್ಲಿ ಆರಂಭಗೊಳ್ಳುವುದನ್ನು ಗಮನಿಸಿರಿ. ಪ್ರತಿಯೊಂದು ಮುಖ್ಯಾಂಶದ ಕೆಳಗೆ ಅದನ್ನು ಬೆಂಬಲಿಸುವ ವಿಷಯಗಳನ್ನು ಪಟ್ಟಿಮಾಡಲಾಗಿದೆ. ಈ ವಿಚಾರಗಳನ್ನು ವಿಕಸಿಸಲಿಕ್ಕಾಗಿ ಉಪಯೋಗಿಸಲ್ಪಡುವ ಹೆಚ್ಚಿನ ವಿಷಯಗಳು ಅವುಗಳ ಕೆಳಗೆ ಪಟ್ಟಿಮಾಡಲ್ಪಟ್ಟಿದ್ದು, ಎಡ ಅಂಚಿನಿಂದ ಸ್ವಲ್ಪ ಸ್ಥಳವನ್ನು ಬಿಟ್ಟು ಅವುಗಳನ್ನು ಒಳಸೇರಿಸಲಾಗಿದೆ. ಈ ಹೊರಮೇರೆಯನ್ನು ಜಾಗರೂಕತೆಯಿಂದ ಪರೀಕ್ಷಿಸಿರಿ. ಅಲ್ಲಿ ಎರಡು ಮುಖ್ಯಾಂಶಗಳು ನೇರವಾಗಿ ಮುಖ್ಯ ವಿಷಯಕ್ಕೆ ಸಂಬಂಧಿಸುತ್ತವೆಂಬುದನ್ನು ಗಮನಿಸಿರಿ. ಉಪಾಂಶಗಳು ಕೇವಲ ಆಸಕ್ತಿಯ ವಿಷಯಗಳಾಗಿರುವುದಿಲ್ಲವೆಂಬುದನ್ನೂ ಗಮನಿಸಿರಿ. ಬದಲಿಗೆ, ಅವುಗಳಲ್ಲಿ ಪ್ರತಿಯೊಂದು ಉಪಾಂಶವು ಅದು ಯಾವುದರ ಕೆಳಗೆ ತೋರಿಬರುತ್ತದೋ ಆ ಮುಖ್ಯಾಂಶವನ್ನು ಬೆಂಬಲಿಸುತ್ತದೆ.

ನೀವು ಒಂದು ಹೊರಮೇರೆಯನ್ನು ತಯಾರಿಸುವಾಗ, ಅದು ಇಲ್ಲಿ ಕೊಡಲ್ಪಟ್ಟಿರುವ ಮಾದರಿ ಹೊರಮೇರೆಯಂತೆಯೇ ತೋರಲಿಕ್ಕಿಲ್ಲ. ಆದರೆ ಇದರಲ್ಲಿ ಒಳಗೂಡಿರುವ ಮೂಲತತ್ತ್ವಗಳನ್ನು ನೀವು ಗ್ರಹಿಸುವಲ್ಲಿ, ನಿಮ್ಮ ಭಾಷಣದ ವಿಷಯಭಾಗವನ್ನು ನೀವು ಸಂಘಟಿಸಿ, ಸಮಂಜಸವಾದ ಸಮಯದೊಳಗೆ ಒಂದು ಉತ್ತಮ ಭಾಷಣವನ್ನು ತಯಾರಿಸುವಂತೆ ಇವು ನಿಮಗೆ ಸಹಾಯಮಾಡುವವು. ಹಾಗಾದರೆ, ನೀವು ಹೇಗೆ ಮುಂದುವರಿಯಬೇಕು?

ವಿಶ್ಲೇಷಿಸಿ, ಆರಿಸಿ, ಸಂಘಟಿಸಿ

ನಿಮಗೆ ಒಂದು ಮುಖ್ಯ ವಿಷಯದ ಅಗತ್ಯವಿದೆ. ನಿಮ್ಮ ಮುಖ್ಯ ವಿಷಯವು ಒಂದೇ ಪದದಿಂದ ಪ್ರತಿನಿಧಿಸಲ್ಪಡಬಹುದಾದ ವಿಶಾಲವಾದ ವಿಷಯವಸ್ತು ಆಗಿರುವುದಿಲ್ಲ. ಅದು ನೀವು ತಿಳಿಸಲು ಬಯಸುವ ಪ್ರಮುಖ ವಿಚಾರವಾಗಿದ್ದು, ನೀವು ಯಾವ ಕೋನದಿಂದ ನಿಮ್ಮ ವಿಷಯವಸ್ತುವನ್ನು ಚರ್ಚಿಸುವಿರೆಂಬುದನ್ನು ಸೂಚಿಸುತ್ತದೆ. ನಿಮಗೆ ಒಂದು ಮುಖ್ಯ ವಿಷಯವು ಮಾತ್ರ ನೇಮಿಸಲ್ಪಟ್ಟಿರುವಲ್ಲಿ, ಪ್ರತಿಯೊಂದು ಮುಖ್ಯ ಪದವನ್ನು ಜಾಗರೂಕತೆಯಿಂದ ವಿಶ್ಲೇಷಿಸಿರಿ. ಆ ನೇಮಿತ ಮುಖ್ಯ ವಿಷಯವನ್ನು ಪ್ರಕಾಶಿತ ವಿಷಯಭಾಗದ ಆಧಾರದ ಮೇರೆಗೆ ನೀವು ವಿಕಸಿಸಲಿರುವಿರಾದರೆ, ಆ ಮುಖ್ಯ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಪ್ರಕಾಶಿತ ವಿಷಯಭಾಗವನ್ನು ಅಧ್ಯಯನ ಮಾಡಿರಿ. ನಿಮಗೆ ಒಂದು ವಿಷಯವಸ್ತು ಮಾತ್ರ ನೇಮಿಸಲ್ಪಟ್ಟಿರುವುದಾದರೆ, ಅದಕ್ಕೆ ಮುಖ್ಯ ವಿಷಯವನ್ನು ಆರಿಸುವುದು ನಿಮಗೆ ಬಿಟ್ಟದ್ದು. ಆದರೆ, ಹಾಗೆ ಮಾಡುವ ಮೊದಲು, ಸ್ವಲ್ಪ ಮಟ್ಟಿಗೆ ಸಂಶೋಧನೆ ಮಾಡುವುದು ಸಹಾಯಕರವೆಂದು ನೀವು ಕಂಡುಕೊಳ್ಳಬಹುದು. ನಿಮ್ಮ ಮನಸ್ಸನ್ನು ತೆರೆದಿಡುವ ಮೂಲಕ ನಿಮಗೆ ಅನೇಕವೇಳೆ ಹೊಸ ವಿಚಾರಗಳು ಸಿಗುವವು.

ಈ ಸೂಕ್ತಕ್ರಮಗಳನ್ನು ತೆಗೆದುಕೊಳ್ಳುವಾಗ, ‘ನನ್ನ ಸಭಿಕರಿಗೆ ಈ ವಿಷಯವು ಏಕೆ ಪ್ರಾಮುಖ್ಯವಾಗಿದೆ? ನನ್ನ ಉದ್ದೇಶವೇನು?’ ಎಂದು ನಿಮ್ಮನ್ನು ಕೇಳಿಕೊಳ್ಳುತ್ತ ಇರಿ. ಕೇವಲ ಆ ವಿಷಯವನ್ನು ಆವರಿಸುವುದಾಗಲಿ ಇಲ್ಲವೆ ವರ್ಣರಂಜಿತವಾದ ಒಂದು ಭಾಷಣವನ್ನು ಕೊಡುವುದಾಗಲಿ ನಿಮ್ಮ ಉದ್ದೇಶವಾಗಿರಬಾರದು. ಅದರ ಬದಲು ನಿಮ್ಮ ಸಭಿಕರಿಗೆ ಯಾವುದು ಪ್ರಯೋಜನಕರವೊ ಅದನ್ನು ನೀಡುವುದಾಗಿರಬೇಕು. ನಿಮ್ಮ ಉದ್ದೇಶವು ರೂಪುಗೊಂಡಾಗ, ಅದನ್ನು ಬರೆದಿಡಿರಿ. ನೀವು ಭಾಷಣವನ್ನು ತಯಾರಿಸುವಾಗ ಅದನ್ನು ನಿಮ್ಮ ಜ್ಞಾಪಕಕ್ಕೆ ತಂದುಕೊಳ್ಳುತ್ತ ಇರಿ.

ನಿಮ್ಮ ಉದ್ದೇಶವನ್ನು ನಿರ್ಧರಿಸಿ, ಅದಕ್ಕೆ ಹೊಂದಿಕೆಯಾದ ಮುಖ್ಯ ವಿಷಯವನ್ನು ಆರಿಸಿದ (ಅಥವಾ, ನಿಮಗೆ ನೇಮಿತವಾದ ಮುಖ್ಯ ವಿಷಯವು ಆ ಉದ್ದೇಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆಂದು ವಿಶ್ಲೇಷಿಸಿದ) ಬಳಿಕ, ಹೆಚ್ಚು ಕೇಂದ್ರೀಕೃತವಾದ ಸಂಶೋಧನೆಯನ್ನು ನೀವು ನಡೆಸಬಲ್ಲಿರಿ. ನಿಮ್ಮ ಸಭಿಕರಿಗೆ ನಿರ್ದಿಷ್ಟವಾಗಿ ಪ್ರಯೋಜನದಾಯಕವಾಗಿರುವ ಮಾಹಿತಿಗಾಗಿ ಹುಡುಕಿರಿ. ಅಸ್ಪಷ್ಟ ವಿವರಗಳಿಂದ ತೃಪ್ತರಾಗದೆ, ಬೋಧಪ್ರದವೂ ನಿಜವಾಗಿ ಸಹಾಯಕರವೂ ಆಗಿರುವ ನಿರ್ದಿಷ್ಟ ವಿವರಗಳುಳ್ಳ ಅಂಶಗಳಿಗಾಗಿ ಹುಡುಕಿರಿ. ನೀವು ಮಾಡುವ ಸಂಶೋಧನೆಯ ಪ್ರಮಾಣದ ವಿಷಯದಲ್ಲಿ ವಾಸ್ತವಭಾವದವರಾಗಿರಿ. ಹೆಚ್ಚಿನ ಸಂದರ್ಭಗಳಲ್ಲಿ, ನಿಮಗೆ ಉಪಯೋಗಿಸಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚಿನ ಮಾಹಿತಿಯು ನಿಮಗೆ ಬೇಗನೆ ದೊರೆಯುವುದರಿಂದ, ನೀವು ಬೇಕಾಗುವ ವಿಷಯಗಳನ್ನು ಮಾತ್ರ ಆಯ್ದುಕೊಳ್ಳುವ ಅಗತ್ಯವಿರುತ್ತದೆ.

ನಿಮ್ಮ ಮುಖ್ಯ ವಿಷಯವನ್ನು ವಿಸ್ತರಿಸಿ ನಿಮ್ಮ ಉದ್ದೇಶವನ್ನು ಸಾಧಿಸಲಿಕ್ಕಾಗಿ ಚರ್ಚಿಸಬೇಕಾಗುವ ಮುಖ್ಯಾಂಶಗಳನ್ನು ಗುರುತಿಸಿರಿ. ಇವು ನಿಮ್ಮ ಚೌಕಟ್ಟಾಗುವವು, ಅಂದರೆ ನಿಮ್ಮ ಮೂಲ ಹೊರಮೇರೆಯಾಗುವವು. ಮುಖ್ಯಾಂಶಗಳು ಎಷ್ಟಿರಬೇಕು? ಒಂದು ಚಿಕ್ಕ ಚರ್ಚೆಗೆ ಪ್ರಾಯಶಃ ಎರಡು ಮುಖ್ಯಾಂಶಗಳು ಸಾಕು. ಮತ್ತು ಒಂದು ತಾಸಿನಷ್ಟು ಉದ್ದದ ಭಾಷಣಕ್ಕೂ ಸಾಮಾನ್ಯವಾಗಿ ಐದು ಮುಖ್ಯಾಂಶಗಳು ಸಾಕಾಗುತ್ತವೆ. ನಿಮ್ಮ ಮುಖ್ಯಾಂಶಗಳು ಕಡಿಮೆ ಸಂಖ್ಯೆಯಲ್ಲಿದ್ದಷ್ಟೂ ನಿಮ್ಮ ಸಭಿಕರು ಅವುಗಳನ್ನು ಜ್ಞಾಪಕಕ್ಕೆ ತಂದುಕೊಳ್ಳುವುದು ಹೆಚ್ಚು ಸಂಭವನೀಯ.

ಮುಖ್ಯ ವಿಷಯವೂ ಮುಖ್ಯಾಂಶಗಳೂ ನಿಮ್ಮ ಮನಸ್ಸಿನಲ್ಲಿ ಸ್ಥಿರವಾದ ಬಳಿಕ, ನಿಮ್ಮ ಸಂಶೋಧನೆಯಿಂದ ಪಡೆದುಕೊಂಡ ವಿಷಯಭಾಗವನ್ನು ಸಂಘಟಿಸಿರಿ. ಯಾವುದು ನೇರವಾಗಿ ನಿಮ್ಮ ಮುಖ್ಯಾಂಶಗಳಿಗೆ ಸಂಬಂಧಿಸುತ್ತದೆಂಬುದನ್ನು ನಿರ್ಧರಿಸಿರಿ. ನಿಮ್ಮ ಭಾಷಣಕ್ಕೆ ಹೊಸತನವನ್ನು ನೀಡುವಂಥ ವಿವರಗಳನ್ನು ಆರಿಸಿಕೊಳ್ಳಿರಿ. ನೀವು ಮುಖ್ಯಾಂಶಗಳನ್ನು ಸಮರ್ಥಿಸಲಿಕ್ಕಾಗಿ ಶಾಸ್ತ್ರವಚನಗಳನ್ನು ಆರಿಸುವಾಗ, ಆ ವಚನಗಳ ಬಗ್ಗೆ ಅರ್ಥಪೂರ್ಣವಾದ ರೀತಿಯಲ್ಲಿ ತರ್ಕಿಸುವಂತೆ ನಿಮಗೆ ಸಹಾಯಮಾಡುವ ವಿಚಾರಗಳನ್ನು ಗಮನಿಸಿರಿ. ಪ್ರತಿಯೊಂದು ವಿಚಾರವನ್ನು ಅದು ಯಾವುದಕ್ಕೆ ಸೇರುತ್ತದೊ ಆ ಮುಖ್ಯಾಂಶದ ಕೆಳಗೆ ಸೇರಿಸಿರಿ. ಸಂಗ್ರಹಿತ ಮಾಹಿತಿಯಲ್ಲಿ ಯಾವುದಾದರೂ ವಿಷಯವು ನಿಮ್ಮ ಮುಖ್ಯಾಂಶಗಳಲ್ಲಿ ಯಾವುದಕ್ಕೂ ಹೊಂದಿಕೊಳ್ಳದಿದ್ದರೆ, ಅದು ಎಷ್ಟೇ ಆಸಕ್ತಿದಾಯಕವಾಗಿದ್ದರೂ ಅದನ್ನು ಬಿಟ್ಟುಬಿಡಿ, ಇಲ್ಲವೆ ಇನ್ನೊಂದು ಸಂದರ್ಭದಲ್ಲಿ ಉಪಯೋಗಿಸಲಿಕ್ಕಾಗಿ ಫೈಲಿನಲ್ಲಿ ಹಾಕಿಡಿರಿ. ಅತ್ಯುತ್ತಮವಾದ ವಿಷಯವನ್ನು ಮಾತ್ರ ಇಟ್ಟುಕೊಳ್ಳಿರಿ. ನೀವು ಮಿತಿಮೀರಿ ವಿಷಯಗಳನ್ನು ಆವರಿಸಲು ಪ್ರಯತ್ನಿಸುವಲ್ಲಿ, ಅತಿಯಾದ ವೇಗದಲ್ಲಿ ಮಾತಾಡಬೇಕಾಗುವುದರಿಂದ ನಿಮ್ಮ ಭಾಷಣವು ಪೊಳ್ಳಾಗಿರುವುದು. ಸಭಿಕರಿಗೆ ನಿಜವಾಗಿಯೂ ಅಮೂಲ್ಯವಾಗಿರುವ ಕೆಲವೇ ವಿಷಯಗಳನ್ನು ಉತ್ತಮವಾದ ರೀತಿಯಲ್ಲಿ ಹೇಳುವುದೇ ಎಷ್ಟೋ ಮೇಲು. ನಿಯಮಿತ ಸಮಯವನ್ನು ಮೀರಿ ಹೋಗಬೇಡಿ.

ಈ ಮೊದಲೇ ಇಲ್ಲದಿದ್ದರೆ ಈ ಹಂತದಲ್ಲಿಯಾದರೂ ನಿಮ್ಮ ವಿಷಯಭಾಗವನ್ನು ತರ್ಕಬದ್ಧವಾದ ಕ್ರಮದಲ್ಲಿ ಏರ್ಪಡಿಸಿರಿ. ಸುವಾರ್ತಾ ಲೇಖಕನಾಗಿದ್ದ ಲೂಕನು ಹೀಗೆ ಮಾಡಿದನು. ತನ್ನ ವಿಷಯವಸ್ತುವಿಗೆ ಸಂಬಂಧಪಟ್ಟ ಹೇರಳವಾದ ನಿಜತ್ವಗಳನ್ನು ಸಂಗ್ರಹಿಸಿದ ಬಳಿಕ, ಅವನು ಅದನ್ನು “ಕ್ರಮವಾಗಿ” ಬರೆದನು. (ಲೂಕ 1:3) ನೀವು ನಿಮ್ಮ ವಿಷಯಭಾಗವನ್ನು ಕಾಲಕ್ರಮಾನುಸಾರವಾಗಲಿ ವಿಷಯಾನುಸಾರವಾಗಲಿ ಏರ್ಪಡಿಸಬಹುದು. ಯಾವುದು ನಿಮ್ಮ ಉದ್ದೇಶವನ್ನು ಪೂರೈಸಲು ಅತಿ ಪರಿಣಾಮಕಾರಿಯಾಗಿದೆ ಎಂಬುದರ ಮೇಲೆ ಹೊಂದಿಕೊಂಡು, ಕಾರಣ ಕಾರ್ಯಭಾವ ಅಥವಾ ಸಮಸ್ಯೆ ಮತ್ತು ಪರಿಹಾರಕ್ಕನುಸಾರ ಅದನ್ನು ಏರ್ಪಡಿಸಬಹುದು. ಇದ್ದಕ್ಕಿದ್ದಂತೆ ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ನೆಗೆಯಬಾರದು. ಒಂದು ವಿಷಯದಿಂದ ಇನ್ನೊಂದಕ್ಕೆ ನಿಮ್ಮ ಕೇಳುಗರನ್ನು ಸರಾಗವಾಗಿ ನಡೆಸಬೇಕು. ಸುಲಭವಾಗಿ ದಾಟಲಸಾಧ್ಯವಾದ ಅಂತರಗಳು ಅಲ್ಲಿರಬಾರದು. ಸಾದರಪಡಿಸಲ್ಪಡುವ ಪುರಾವೆಯು, ಸಭಿಕರನ್ನು ತರ್ಕಬದ್ಧವಾದ ತೀರ್ಮಾನಕ್ಕೆ ನಡಿಸುವಂತಿರಬೇಕು. ನಿಮ್ಮ ವಿಷಯಾಂಶಗಳನ್ನು ನೀವು ಕ್ರಮವಾಗಿ ಏರ್ಪಡಿಸುವಾಗ, ನಿಮ್ಮ ಭಾಷಣವು ಸಭಿಕರಿಗೆ ಹೇಗೆ ಕೇಳಿಬರುವುದೆಂಬುದರ ಕುರಿತು ಯೋಚಿಸಿರಿ. ನಿಮ್ಮ ಯೋಚನಾಧಾರೆಯನ್ನು ಅವರು ಸುಲಭವಾಗಿ ಅನುಸರಿಸುವರೊ? ತಾವು ಕೇಳಿಸಿಕೊಳ್ಳುವ ವಿಷಯಕ್ಕನುಸಾರ, ನಿಮ್ಮ ಮನಸ್ಸಿನಲ್ಲಿರುವ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವರು ವರ್ತಿಸುವಂತೆ ಪ್ರಚೋದಿಸಲ್ಪಡುವರೊ?

ಆ ಬಳಿಕ, ನಿಮ್ಮ ವಿಷಯವಸ್ತುವಿನಲ್ಲಿ ಆಸಕ್ತಿಯನ್ನು ಹುಟ್ಟಿಸುವಂತಹ ಮತ್ತು ನೀವು ಚರ್ಚಿಸಲಿರುವ ವಿಷಯವು ಸಭಿಕರಿಗೆ ನಿಜ ಬೆಲೆಯುಳ್ಳದ್ದಾಗಿದೆಯೆಂದು ತೋರಿಸುವಂತಹ ಒಂದು ಪೀಠಿಕೆಯನ್ನು ತಯಾರಿಸಿರಿ. ನಿಮ್ಮ ಆರಂಭದ ಕೆಲವು ವಾಕ್ಯಗಳನ್ನು ಬರೆದಿಡುವುದು ಸಹಾಯಕರವಾಗಿರಬಹುದು. ಅಂತಿಮವಾಗಿ, ನಿಮ್ಮ ಉದ್ದೇಶಕ್ಕೆ ಹೊಂದಿಕೆಯಲ್ಲಿರುವ ಪ್ರಚೋದನಾತ್ಮಕವಾದ ಸಮಾಪ್ತಿಯನ್ನು ಯೋಜಿಸಿರಿ.

ನಿಮ್ಮ ಹೊರಮೇರೆಯನ್ನು ಸಾಕಷ್ಟು ಮೊದಲೇ ಸಿದ್ಧಪಡಿಸುವಲ್ಲಿ, ನೀವು ಭಾಷಣವನ್ನು ಕೊಡುವ ಮೊದಲು ಅದನ್ನು ಪರಿಷ್ಕರಿಸಲು ನಿಮಗೆ ಸಮಯವಿರುವುದು. ಕೆಲವು ವಿಚಾರಗಳನ್ನು ಅಂಕಿಅಂಶಗಳನ್ನು ಕೊಟ್ಟೊ, ಒಂದು ದೃಷ್ಟಾಂತದ ಮೂಲಕವೊ ಅಥವಾ ಒಂದು ಅನುಭವದಿಂದಲೊ ಬೆಂಬಲಿಸುವ ಆವಶ್ಯಕತೆ ನಿಮಗೆ ಕಂಡುಬಂದೀತು. ಸದ್ಯದ ಘಟನೆಯೊಂದನ್ನು ಅಥವಾ ಸ್ಥಳಿಕ ಆಸಕ್ತಿಯ ಒಂದು ವಿಷಯವನ್ನು ಉಪಯೋಗಿಸುವುದು, ಸಭಿಕರು ವಿಷಯಭಾಗದ ಪ್ರಾಯೋಗಿಕ ಅನ್ವಯವನ್ನು ಸುಲಭವಾಗಿ ಮನಗಾಣುವಂತೆ ಸಹಾಯಮಾಡೀತು. ನಿಮ್ಮ ಭಾಷಣವನ್ನು ನೀವು ಪುನರ್ವಿಮರ್ಶಿಸುವಾಗ, ಮಾಹಿತಿಯನ್ನು ನಿಮ್ಮ ಸಭಿಕರಿಗೆ ಅನ್ವಯಿಸಲು ಹೆಚ್ಚಿನ ಅವಕಾಶಗಳಿವೆ ಎಂಬ ಅರಿವು ನಿಮಗಾಗಬಹುದು. ಒಳ್ಳೆಯ ವಿಷಯಭಾಗವನ್ನು ಕಾರ್ಯಸಾಧಕವಾದ ಭಾಷಣವಾಗಿ ರೂಪಿಸಲು, ವಿಶ್ಲೇಷಿಸಿ ಪರಿಷ್ಕರಿಸುವ ಕಾರ್ಯವಿಧಾನವು ಅತ್ಯಾವಶ್ಯಕವಾಗಿದೆ.

ಕೆಲವು ಭಾಷಣಕಾರರಿಗೆ ಇತರರಿಗಿಂತ ಹೆಚ್ಚು ವಿಸ್ತಾರವಾದ ಟಿಪ್ಪಣಿಯ ಅವಶ್ಯವಿದ್ದೀತು. ಆದರೆ ನೀವು ಕೆಲವೇ ಮುಖ್ಯಾಂಶಗಳ ಕೆಳಗೆ ನಿಮ್ಮ ವಿಷಯಭಾಗವನ್ನು ಕ್ರಮವಾಗಿ ಏರ್ಪಡಿಸಿ, ಅವುಗಳನ್ನು ಅಷ್ಟೇನೂ ಬೆಂಬಲಿಸದ ವಿಷಯಗಳನ್ನು ತೆಗೆದುಹಾಕಿ, ನಿಮ್ಮ ವಿಚಾರಗಳನ್ನು ನ್ಯಾಯಸಮ್ಮತವಾದ ಕ್ರಮದಲ್ಲಿ ಬರೆಯುವುದಾದರೆ, ತುಸು ಅನುಭವ ಸಿಕ್ಕಿದ ನಂತರ ಎಲ್ಲವನ್ನೂ ಬರೆದಿಡುವ ಅಗತ್ಯವಿರುವುದಿಲ್ಲವೆಂಬುದನ್ನು ನೀವೇ ಕಂಡುಕೊಳ್ಳುವಿರಿ. ಮತ್ತು ಅದೆಷ್ಟು ಸಮಯವನ್ನು ಉಳಿಸಬಲ್ಲದು! ಆಗ ನಿಮ್ಮ ಭಾಷಣದ ಗುಣಮಟ್ಟವೂ ಉತ್ತಮಗೊಳ್ಳುವುದು. ನೀವು ನಿಮ್ಮ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ನಿಜವಾಗಿಯೂ ಪ್ರಯೋಜನ ಪಡೆಯುತ್ತೀರೆಂಬುದು ಆಗ ಸ್ಪಷ್ಟವಾಗುವುದು.

ಹೊರಮೇರೆಯನ್ನು ತಯಾರಿಸುವ ವಿಧ

  • ಸಭಿಕರಿಗೆ ನಿಮ್ಮ ವಿಷಯವಸ್ತು ಏಕೆ ಪ್ರಾಮುಖ್ಯವಾಗಿದೆ ಮತ್ತು ನಿಮ್ಮ ಉದ್ದೇಶವೇನು ಎಂಬುದನ್ನು ನಿರ್ಧರಿಸಿರಿ

  • ಒಂದು ಮುಖ್ಯ ವಿಷಯವನ್ನು ಆರಿಸಿಕೊಳ್ಳಿರಿ; ಅದು ನೇಮಿಸಲ್ಪಟ್ಟಿರುವುದಾದರೆ ಅದನ್ನು ವಿಶ್ಲೇಷಿಸಿರಿ

  • ಬೋಧಪ್ರದವೂ ಸಹಾಯಕರವೂ ಆದ ಮಾಹಿತಿಯನ್ನು ಸಂಗ್ರಹಿಸಿರಿ

  • ನಿಮ್ಮ ಮುಖ್ಯಾಂಶಗಳನ್ನು ಗುರುತಿಸಿರಿ

  • ನಿಮ್ಮ ವಿಷಯಭಾಗವನ್ನು ಸಂಘಟಿಸಿರಿ; ಅತ್ಯುತ್ತಮವಾದ ವಿಷಯವನ್ನು ಮಾತ್ರ ಇಟ್ಟುಕೊಳ್ಳಿ

  • ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆಯನ್ನು ತಯಾರಿಸಿರಿ

  • ಪ್ರಚೋದನಾತ್ಮಕವಾದ ಸಮಾಪ್ತಿಯನ್ನು ಯೋಜಿಸಿರಿ

  • ನಿಮ್ಮ ಭಾಷಣವನ್ನು ಪುನರ್ವಿಮರ್ಶಿಸಿರಿ; ಅದನ್ನು ಪರಿಷ್ಕರಿಸಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ