ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು
ಪ್ರತಿ ವಾರ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಹೆಚ್ಚಿನವು, ಶಾಸ್ತ್ರಸಂಬಂಧವಾದ ಒಂದು ವಿಷಯದ ಮೇಲೆ ಒಂದು ಸಾರ್ವಜನಿಕ ಭಾಷಣವನ್ನು ಏರ್ಪಡಿಸುತ್ತವೆ. ನೀವು ಹಿರಿಯರೊ ಶುಶ್ರೂಷಾ ಸೇವಕರೊ ಆಗಿರುವಲ್ಲಿ, ಪರಿಣಾಮಕಾರಿಯಾದ ಸಾರ್ವಜನಿಕ ಭಾಷಣಕಾರರು, ಬೋಧಕರು ಆಗಿದ್ದೀರೆಂಬ ರುಜುವಾತನ್ನು ಕೊಡುತ್ತೀರೊ? ಹಾಗಿರುವಲ್ಲಿ, ಒಂದು ಸಾರ್ವಜನಿಕ ಭಾಷಣವನ್ನು ಕೊಡುವಂತೆ ನೀವು ಆಮಂತ್ರಿಸಲ್ಪಡಬಹುದು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು, ಹತ್ತಾರು ಸಾವಿರ ಸಹೋದರರು ಈ ಸೇವಾ ಸುಯೋಗಕ್ಕೆ ಯೋಗ್ಯರಾಗುವಂತೆ ಸಹಾಯಮಾಡಿದೆ. ಒಂದು ಸಾರ್ವಜನಿಕ ಭಾಷಣವನ್ನು ಕೊಡುವಂತೆ ನೇಮಿಸಲ್ಪಟ್ಟಾಗ, ನೀವು ಎಲ್ಲಿಂದ ಪ್ರಾರಂಭಿಸಬೇಕು?
ಹೊರಮೇರೆಯ ಅಧ್ಯಯನ ಮಾಡಿರಿ
ನೀವು ಯಾವುದೇ ಸಂಶೋಧನೆಗೆ ತೊಡಗುವ ಮೊದಲು ಹೊರಮೇರೆಯನ್ನು ಓದಿ, ಅದರ ಅರ್ಥವನ್ನು ತಿಳಿಯುವ ತನಕ ಅದರ ಕುರಿತು ಮನನಮಾಡಿರಿ. ಯಾವುದು ಭಾಷಣದ ಶಿರೋನಾಮವಾಗಿದ್ದು, ಅದರ ಮುಖ್ಯ ವಿಷಯವಾಗಿದೆಯೊ ಅದನ್ನು ಮನಸ್ಸಿನಲ್ಲಿ ಅಚ್ಚೊತ್ತಿಸಿರಿ. ನೀವು ಸಭಿಕರಿಗೆ ಏನನ್ನು ಕಲಿಸಬೇಕಾಗಿದೆ? ನಿಮ್ಮ ಉದ್ದೇಶವೇನು?
ಮುಖ್ಯ ಶಿರೋನಾಮಗಳೊಂದಿಗೆ ಚಿರಪರಿಚಿತರಾಗಿ. ಆ ಮುಖ್ಯಾಂಶಗಳನ್ನು ವಿಶ್ಲೇಷಿಸಿರಿ. ಪ್ರತಿಯೊಂದು ಮುಖ್ಯಾಂಶವು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸುತ್ತದೆ? ಪ್ರತಿ ಮುಖ್ಯಾಂಶದ ಕೆಳಗೆ ಅನೇಕ ಉಪಾಂಶಗಳ ಪಟ್ಟಿ ಇದೆ. ಉಪಾಂಶಗಳಿಗೆ ಆಧಾರ ಕೊಡುವ ಅಂಶಗಳನ್ನು ಉಪಾಂಶಗಳ ಕೆಳಗೆ ಕೊಡಲಾಗಿದೆ. ಹೊರಮೇರೆಯ ಪ್ರತಿ ವಿಭಾಗವು ಹಿಂದಿನ ವಿಭಾಗದ ವಿಷಯವನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತದೆ, ಮುಂದಿನದಕ್ಕೆ ಹೇಗೆ ನಡಿಸುತ್ತದೆ ಮತ್ತು ಭಾಷಣದ ಉದ್ದೇಶವನ್ನು ಸಾಧಿಸಲು ಹೇಗೆ ಸಹಾಯಮಾಡುತ್ತದೆಂಬುದನ್ನು ಪರಿಗಣಿಸಿರಿ. ಮುಖ್ಯ ವಿಷಯ, ಭಾಷಣದ ಉದ್ದೇಶ ಮತ್ತು ಮುಖ್ಯಾಂಶಗಳು ಆ ಗುರಿಯನ್ನು ಸಾಧಿಸುವ ವಿಧವನ್ನು ನೀವು ಅರ್ಥಮಾಡಿಕೊಂಡ ಬಳಿಕ, ಆ ವಿಷಯವನ್ನು ವಿಕಸಿಸತೊಡಗಲು ನೀವು ಸಿದ್ಧರಾಗಿದ್ದೀರಿ.
ಮೊದಲಲ್ಲಿ, ನಿಮ್ಮ ಭಾಷಣವನ್ನು, ಪ್ರತಿಯೊಂದಕ್ಕೆ ಒಂದು ಮುಖ್ಯಾಂಶವಿರುವ ನಾಲ್ಕು ಅಥವಾ ಐದು ಚಿಕ್ಕ ಭಾಷಣಗಳಾಗಿ ಪರಿಗಣಿಸುವುದನ್ನು ನೀವು ಸಹಾಯಕರವಾದದ್ದಾಗಿ ಕಂಡುಕೊಳ್ಳಬಹುದು. ಇವುಗಳಲ್ಲಿ ಪ್ರತಿಯೊಂದನ್ನು ಒಮ್ಮೆಗೆ ಒಂದರಂತೆ ತಯಾರಿಸಿರಿ.
ಒದಗಿಸಲ್ಪಟ್ಟಿರುವ ಹೊರಮೇರೆಯು ತಯಾರಿಯ ಸಾಧನವಾಗಿದೆ. ನೀವು ಭಾಷಣವನ್ನು ಕೊಡಲು ಟಿಪ್ಪಣಿಯಾಗಿ ಉಪಯೋಗಿಸಿಕೊಳ್ಳಲು ಅದು ಕೊಡಲ್ಪಟ್ಟಿರುವುದಿಲ್ಲ. ಅದು ಅಸ್ಥಿಪಂಜರದಂತಿದೆ. ನೀವು ಅದನ್ನು ಮಾಂಸದಿಂದ ತುಂಬಿಸಿ, ಅದಕ್ಕೆ ಹೃದಯವನ್ನು ಕೊಟ್ಟು, ಜೀವವನ್ನು ಊದಬೇಕೊ ಎಂಬಂತೆ ಇದೆ.
ಶಾಸ್ತ್ರವಚನಗಳ ಉಪಯೋಗ
ಯೇಸು ಕ್ರಿಸ್ತನೂ ಅವನ ಶಿಷ್ಯರೂ ತಮ್ಮ ಬೋಧನೆಯನ್ನು ಶಾಸ್ತ್ರವಚನಗಳ ಮೇಲೆ ಆಧಾರಿಸಿದರು. (ಲೂಕ 4:16-21; 24:27; ಅ. ಕೃ. 17:2, 3) ನೀವೂ ಹಾಗೆ ಮಾಡಬಲ್ಲಿರಿ. ಶಾಸ್ತ್ರವಚನಗಳು ನಿಮ್ಮ ಭಾಷಣದ ಆಧಾರವಾಗಿರಬೇಕು. ಒದಗಿಸಲ್ಪಟ್ಟಿರುವ ಹೊರಮೇರೆಯಲ್ಲಿ ಕೊಡಲ್ಪಟ್ಟಿರುವ ಹೇಳಿಕೆಗಳನ್ನು ಕೇವಲ ವಿವರಿಸಿ, ಅನ್ವಯಿಸುವ ಬದಲು, ಆ ಹೇಳಿಕೆಗಳಿಗೆ ಶಾಸ್ತ್ರವಚನಗಳು ಹೇಗೆ ಆಧಾರವಾಗಿವೆಯೆಂಬುದನ್ನು ವಿವೇಚಿಸಿ ತಿಳಿದು, ಬಳಿಕ ಶಾಸ್ತ್ರವಚನಗಳಿಂದ ಕಲಿಸಿರಿ.
ನೀವು ಭಾಷಣವನ್ನು ತಯಾರಿಸುವಾಗ, ಹೊರಮೇರೆಯಲ್ಲಿ ಕೊಡಲಾಗಿರುವ ಪ್ರತಿ ವಚನವನ್ನು ಪರೀಕ್ಷಿಸಿರಿ. ಅದರ ಪೂರ್ವಾಪರವನ್ನು ಗಮನಿಸಿ. ಕೆಲವು ವಚನಗಳು ಕೇವಲ ಸಹಾಯಕರವಾದ ಹಿನ್ನೆಲೆಯನ್ನು ಒದಗಿಸಬಹುದು. ಆದುದರಿಂದ, ನೀವು ಭಾಷಣ ಕೊಡುವಾಗ ಅವೆಲ್ಲವನ್ನೂ ಓದಬೇಕು ಅಥವಾ ವಿವರಿಸಬೇಕೆಂದಿಲ್ಲ. ನಿಮ್ಮ ಸಭಿಕರಿಗೆ ಅತ್ಯುತ್ತಮವಾಗಿ ಅನ್ವಯವಾಗುವ ವಚನಗಳನ್ನು ಆರಿಸಿಕೊಳ್ಳಿ. ಮುದ್ರಿತ ಹೊರಮೇರೆಯಲ್ಲಿ ಕೊಡಲ್ಪಟ್ಟಿರುವ ವಚನಗಳ ಮೇಲೆ ನೀವು ಕೇಂದ್ರೀಕರಿಸುವಲ್ಲಿ, ನಿಮಗೆ ಪ್ರಾಯಶಃ ಬೇರೆ ಶಾಸ್ತ್ರವಚನಗಳನ್ನು ಉಪಯೋಗಿಸುವ ಅಗತ್ಯವಿರಲಿಕ್ಕಿಲ್ಲ.
ನಿಮ್ಮ ಭಾಷಣದ ಯಶಸ್ಸು ಹೊಂದಿಕೊಂಡಿರುವುದು ನೀವು ಎಷ್ಟು ವಚನಗಳನ್ನು ಉಪಯೋಗಿಸುತ್ತೀರಿ ಎಂಬುದರ ಮೇಲಲ್ಲ, ಬದಲಾಗಿ ಬೋಧನೆಯ ಗುಣಮಟ್ಟದ ಮೇಲೆ. ಶಾಸ್ತ್ರವಚನಗಳನ್ನು ಉಪಯೋಗಿಸುವಾಗ, ಅವುಗಳನ್ನು ಏಕೆ ಉಪಯೋಗಿಸಲಾಗುತ್ತಿದೆ ಎಂಬುದಕ್ಕೆ ಕಾರಣಗಳನ್ನು ಕೊಡಿರಿ. ಅವುಗಳನ್ನು ಅನ್ವಯಿಸಲು ಸಮಯವನ್ನು ತೆಗೆದುಕೊಳ್ಳಿ. ನೀವು ಒಂದು ವಚನವನ್ನು ಓದಿದ ಬಳಿಕ, ಅದನ್ನು ಚರ್ಚಿಸುವಾಗ ನಿಮ್ಮ ಬೈಬಲನ್ನು ತೆರೆದಿಡಿರಿ. ಆಗ ನಿಮ್ಮ ಸಭಿಕರೂ ಹಾಗೆಯೇ ಮಾಡುವರು. ನೀವು ನಿಮ್ಮ ಸಭಿಕರ ಆಸಕ್ತಿಯನ್ನು ಕೆರಳಿಸಿ, ದೇವರ ವಾಕ್ಯದಿಂದ ಅವರು ಹೆಚ್ಚು ಪೂರ್ಣವಾಗಿ ಪ್ರಯೋಜನ ಪಡೆಯುವಂತೆ ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ? (ನೆಹೆ. 8:8, 12) ವಿವರಣೆ, ದೃಷ್ಟಾಂತ ಮತ್ತು ಅನ್ವಯದ ಮೂಲಕ ನೀವು ಸಹಾಯಮಾಡಬಲ್ಲಿರಿ.
ವಿವರಣೆ. ಮುಖ್ಯ ವಚನವೊಂದನ್ನು ವಿವರಿಸಲು ತಯಾರಿಸುತ್ತಿರುವಾಗ, ಹೀಗೆ ಕೇಳಿಕೊಳ್ಳಿ: ‘ಇದರ ಅರ್ಥವೇನು? ನಾನು ಇದನ್ನು ನನ್ನ ಭಾಷಣದಲ್ಲಿ ಏಕೆ ಉಪಯೋಗಿಸುತ್ತಿದ್ದೇನೆ? ಈ ವಚನದ ಕುರಿತು ಸಭಿಕರು ತಮ್ಮನ್ನೇ ಏನು ಕೇಳಿಕೊಳ್ಳುತ್ತಿರಬಹುದು?’ ಅದರ ಪೂರ್ವಾಪರ, ಹಿನ್ನೆಲೆ, ಸನ್ನಿವೇಶ, ಮಾತುಗಳಿಗಿರುವ ಶಕ್ತಿ, ಪ್ರೇರಿತ ಲೇಖಕನ ಇಂಗಿತಗಳನ್ನು ನೀವು ವಿಶ್ಲೇಷಿಸಬೇಕಾಗಬಹುದು. ಇದಕ್ಕೆ ಸಂಶೋಧನೆ ಮಾಡುವುದು ಅಗತ್ಯ. ಇದಕ್ಕೆ ಬೇಕಾಗಿರುವ ಸಮೃದ್ಧವಾದ ಅಮೂಲ್ಯ ಮಾಹಿತಿಯನ್ನು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಒದಗಿಸಲ್ಪಡುವ ಪ್ರಕಾಶನಗಳಲ್ಲಿ ನೀವು ಕಂಡುಕೊಳ್ಳುವಿರಿ. (ಮತ್ತಾ. 24:45-47) ಆ ವಚನದ ಕುರಿತು ಸರ್ವವನ್ನೂ ವಿವರಿಸಲು ಪ್ರಯತ್ನಿಸದೆ, ಚರ್ಚಿಸಲ್ಪಡುತ್ತಿರುವ ಅಂಶದ ಸಂಬಂಧದಲ್ಲಿ ನೀವು ನಿಮ್ಮ ಸಭಿಕರಿಂದ ಅದನ್ನು ಓದಿಸಿರುವುದಕ್ಕೆ ಕಾರಣವನ್ನು ವಿವರಿಸಿ.
ದೃಷ್ಟಾಂತ. ದೃಷ್ಟಾಂತಗಳ ಉದ್ದೇಶವು, ನಿಮ್ಮ ಸಭಿಕರನ್ನು ತಿಳಿವಳಿಕೆಯ ಹೆಚ್ಚು ಆಳವಾದ ಮಟ್ಟಕ್ಕೆ ಒಯ್ಯುವುದು ಅಥವಾ ನೀವು ಚರ್ಚಿಸಿರುವ ಒಂದು ಅಂಶವನ್ನೊ ಮೂಲತತ್ತ್ವವನ್ನೊ ಅವರು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದೇ ಆಗಿದೆ. ನೀವು ಏನು ಹೇಳಿರುವಿರೊ ಅದನ್ನು ಜನರು ಗ್ರಹಿಸುವಂತೆ ಮತ್ತು ಅವರಿಗೆ ಈಗಾಗಲೇ ಏನು ತಿಳಿದಿದೆಯೋ ಅದಕ್ಕೆ ಇದನ್ನು ಸಂಬಂಧಿಸುವಂತೆ ದೃಷ್ಟಾಂತಗಳು ಸಹಾಯಮಾಡುತ್ತವೆ. ಯೇಸು ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗವನ್ನು ಕೊಟ್ಟಾಗ ಹಾಗೆಯೇ ಮಾಡಿದನು. “ಆಕಾಶದಲ್ಲಿ ಹಾರಾಡುವ ಹಕ್ಕಿಗಳು,” “ಅಡವಿಯ ಹೂವುಗಳು,” ಒಂದು ‘ಇಕ್ಕಟ್ಟಾದ ಬಾಗಲು,’ ‘ಬಂಡೆಯ ಮೇಲೆ ಕಟ್ಟಿದ ಮನೆ,’ ಹಾಗೂ ಇಂತಹ ಅನೇಕ ಅಭಿವ್ಯಕ್ತಿಗಳು ಅವನ ಬೋಧನೆಯನ್ನು ಒತ್ತುಳ್ಳದ್ದಾಗಿ, ಸ್ಪಷ್ಟವಾದುದಾಗಿ ಮತ್ತು ಅವಿಸ್ಮರಣೀಯವಾಗಿ ಮಾಡಿದವು.—ಮತ್ತಾ. 5-7ನೆಯ ಅಧ್ಯಾಯಗಳು.
ಅನ್ವಯ. ಒಂದು ವಚನವನ್ನು ವಿವರಿಸುವುದು ಮತ್ತು ದೃಷ್ಟಾಂತಿಸುವುದು ಜ್ಞಾನವನ್ನು ನೀಡುತ್ತದಾದರೂ, ಆ ಜ್ಞಾನವನ್ನು ಅನ್ವಯಿಸುವುದೇ ಫಲಿತಾಂಶಗಳನ್ನು ತರುತ್ತದೆ. ಬೈಬಲಿನ ಸಂದೇಶಕ್ಕನುಸಾರ ವರ್ತಿಸುವುದು ನಿಮ್ಮ ಸಭಿಕರ ಜವಾಬ್ದಾರಿಯಾಗಿದೆ ಎಂಬುದು ನಿಜವಾದರೂ, ತಾವೇನು ಮಾಡಬೇಕಾಗಿದೆ ಎಂಬುದನ್ನು ವಿವೇಚಿಸಲು ನೀವು ಅವರಿಗೆ ಸಹಾಯಮಾಡಬಲ್ಲಿರಿ. ಚರ್ಚಿಸಲ್ಪಡುತ್ತಿರುವ ಆ ವಚನವು ನಿಮ್ಮ ಸಭಿಕರಿಗೆ ಅರ್ಥವಾಗಿದೆ ಮತ್ತು ನೀವು ಮನದಟ್ಟು ಮಾಡುತ್ತಿರುವ ವಿಷಯದ ಸಂಬಂಧವನ್ನು ಅವರು ಮನಗಂಡಿದ್ದಾರೆ ಎಂಬುದು ನಿಮಗೆ ದೃಢವಾದಾಗ, ನಂಬಿಕೆ ಮತ್ತು ನಡತೆಯ ಮೇಲೆ ಅದು ಬೀರುವ ಮಹತ್ತರ ಪರಿಣಾಮವನ್ನು ತೋರಿಸಲು ಸಮಯವನ್ನು ತೆಗೆದುಕೊಳ್ಳಿರಿ. ಚರ್ಚಿಸಲ್ಪಡುತ್ತಿರುವ ಸತ್ಯಕ್ಕೆ ಅಸಂಗತವಾದ ಕೆಟ್ಟ ವಿಚಾರಗಳನ್ನು ಅಥವಾ ನಡತೆಗಳನ್ನು ಬಿಟ್ಟುಬಿಡುವುದರ ಪ್ರಯೋಜನಗಳನ್ನು ಎತ್ತಿಹೇಳಿರಿ.
ವಚನಗಳನ್ನು ಹೇಗೆ ಅನ್ವಯಿಸಬಹುದೆಂಬುದರ ಕುರಿತು ನೀವು ಯೋಚಿಸುವಾಗ, ನಿಮ್ಮ ಸಭೆಯಲ್ಲಿರುವ ಜನರು ಅನೇಕ ಹಿನ್ನೆಲೆಗಳಿಂದ ಬಂದವರಾಗಿದ್ದು, ಅನೇಕ ಪರಿಸ್ಥಿತಿಗಳನ್ನು ಅನುಭವಿಸುತ್ತಿರುವವರಾಗಿದ್ದಾರೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಸಭಿಕರಲ್ಲಿ ಹೊಸದಾಗಿ ಆಸಕ್ತಿಯುಳ್ಳವರು, ಯುವ ಜನರು, ವೃದ್ಧರು ಮತ್ತು ವಿವಿಧ ವೈಯಕ್ತಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರು ಇರಬಹುದು. ನಿಮ್ಮ ಭಾಷಣವನ್ನು ಪ್ರಾಯೋಗಿಕವಾದುದಾಗಿಯೂ ವಾಸ್ತವಿಕವಾದುದಾಗಿಯೂ ಮಾಡಿರಿ. ಕೆಲವೇ ವ್ಯಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನೀವು ಸಲಹೆಯನ್ನು ಕೊಡುತ್ತಿದ್ದೀರಿ ಎಂಬ ಭಾವನೆ ಬರದಂತೆ ಜಾಗ್ರತೆ ವಹಿಸಿ.
ಭಾಷಣಕಾರನ ನಿರ್ಣಯಗಳು
ನಿಮ್ಮ ಭಾಷಣದ ಕುರಿತಾದ ಕೆಲವು ನಿರ್ಣಯಗಳು ನಿಮಗಾಗಿ ಈಗಾಗಲೇ ಮಾಡಲ್ಪಟ್ಟಿವೆ. ಮುಖ್ಯಾಂಶಗಳು ಸ್ಪಷ್ಟವಾಗಿ ಸೂಚಿಸಲ್ಪಟ್ಟಿವೆ ಮತ್ತು ಪ್ರತಿಯೊಂದು ಮುಖ್ಯ ಶಿರೋನಾಮದ ಚರ್ಚೆಗೆ ನೀವು ಎಷ್ಟು ಸಮಯವನ್ನು ಮೀಸಲಾಗಿರಿಸಬೇಕೆಂಬುದೂ ಸ್ಪಷ್ಟವಾಗಿ ತೋರಿಸಲ್ಪಟ್ಟಿದೆ. ಇನ್ನಿತರ ನಿರ್ಣಯಗಳನ್ನು ಮಾಡುವುದು ನಿಮ್ಮ ಕೆಲಸವಾಗಿದೆ. ನೀವು ಕೆಲವು ಉಪಾಂಶಗಳ ಮೇಲೆ ಹೆಚ್ಚು ಸಮಯವನ್ನೂ ಬೇರೆ ಉಪಾಂಶಗಳ ಮೇಲೆ ಕಡಿಮೆ ಸಮಯವನ್ನೂ ವ್ಯಯಿಸಲು ಆರಿಸಿಕೊಳ್ಳಬಹುದು. ಪ್ರತಿಯೊಂದು ಉಪಾಂಶವನ್ನೂ ಬೇರೆ ಅಂಶಗಳಷ್ಟೇ ವಿಸ್ತಾರವಾಗಿ ಆವರಿಸಬೇಕೆಂದು ಭಾವಿಸಿಕೊಳ್ಳಬೇಡಿ. ಇದು ನೀವು ವಿಷಯವನ್ನು ಆತುರಾತುರವಾಗಿ ಆವರಿಸುವಂತೆ ಮಾಡಿ, ನಿಮ್ಮ ಸಭಿಕರು ಅದನ್ನು ಸುಲಭವಾಗಿ ಗ್ರಹಿಸದಂತೆ ಮಾಡೀತು. ಹಾಗಾದರೆ, ಯಾವುದನ್ನು ಹೆಚ್ಚು ಪೂರ್ಣವಾಗಿ ಮತ್ತು ಯಾವುದನ್ನು ಸಂಕ್ಷಿಪ್ತವಾಗಿ ಅಥವಾ ಪ್ರಾಸಂಗಿಕವಾಗಿ ಆವರಿಸಬೇಕೆಂಬುದನ್ನು ನೀವು ಹೇಗೆ ನಿರ್ಣಯಿಸಬಲ್ಲಿರಿ? ಹೀಗೆ ಪ್ರಶ್ನಿಸಿಕೊಳ್ಳಿ: ‘ಭಾಷಣದ ಕೇಂದ್ರೀಯ ವಿಚಾರವನ್ನು ತಿಳಿಯಪಡಿಸಲು ಯಾವ ಅಂಶಗಳು ನನಗೆ ಸಹಾಯ ಮಾಡುವವು? ನನ್ನ ಸಭಿಕರಿಗೆ ಯಾವ ಅಂಶಗಳು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ? ಉಲ್ಲೇಖಿಸಲ್ಪಟ್ಟ ಒಂದು ವಚನವನ್ನೂ ಸಂಬಂಧಿತ ಅಂಶವನ್ನೂ ಬಿಟ್ಟುಬಿಡುವಲ್ಲಿ, ಅದು ನಾನು ಕೊಡಲಿರುವ ರುಜುವಾತಿನ ಸಾಲನ್ನು ಬಲಹೀನಗೊಳಿಸೀತೊ?’
ಊಹಾಪೋಹ ಅಥವಾ ವೈಯಕ್ತಿಕ ಅಭಿಪ್ರಾಯವನ್ನು ಒಳಗೂಡಿಸುವುದನ್ನು ಎಚ್ಚರಿಕೆಯಿಂದ ತ್ಯಜಿಸಿರಿ. ದೇವಕುಮಾರನಾದ ಯೇಸು ಕ್ರಿಸ್ತನು ಸಹ ‘ತನ್ನಷ್ಟಕ್ಕೆ ತಾನೇ’ ತನ್ನ ಸ್ವಂತ ಮಾತುಗಳನ್ನಾಡುವುದರಿಂದ ದೂರವಿದ್ದನು. (ಯೋಹಾ. 14:10) ಜನರು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಬರುವುದರ ಕಾರಣವು, ಬೈಬಲಿನ ಕುರಿತು ಚರ್ಚಿಸಲ್ಪಡುವುದನ್ನು ಕೇಳಿಸಿಕೊಳ್ಳುವುದೇ ಆಗಿದೆ ಎಂಬುದನ್ನು ಗ್ರಹಿಸಿರಿ. ನೀವು ಉತ್ತಮ ಭಾಷಣಕಾರರಾಗಿ ಪರಿಗಣಿಸಲ್ಪಟ್ಟಿರುವುದಾದರೆ, ಅದರ ಕಾರಣವು ಪ್ರಾಯಶಃ ನೀವು ನಿಮಗಲ್ಲ, ಬದಲಾಗಿ ದೇವರ ವಾಕ್ಯಕ್ಕೆ ಗಮನವನ್ನು ಸೆಳೆಯುವುದೇ ಆಗಿರುತ್ತದೆ. ಈ ಕಾರಣಕ್ಕಾಗಿಯೇ ನಿಮ್ಮ ಭಾಷಣಗಳು ಗಣ್ಯಮಾಡಲ್ಪಡುತ್ತವೆ.—ಫಿಲಿ. 1:10, 11.
ಒಂದು ಸರಳ ಹೊರಮೇರೆಯನ್ನು ಶಾಸ್ತ್ರವಚನದ ಸತ್ವ ತುಂಬಿರುವ ವಿವರಣೆಯಾಗಿ ಮಾರ್ಪಡಿಸಿರುವ ನೀವು, ಈಗ ಆ ಭಾಷಣವನ್ನು ಪೂರ್ವಾಭ್ಯಾಸ ಮಾಡುವ ಅಗತ್ಯವಿದೆ. ಗಟ್ಟಿಯಾಗಿ ಪೂರ್ವಾಭ್ಯಾಸ ಮಾಡುವುದು ಪ್ರಯೋಜನಕರವಾದದ್ದಾಗಿದೆ. ಎಲ್ಲ ಅಂಶಗಳೂ ಸರಿಯಾಗಿ ನಿಮ್ಮ ಮನಸ್ಸಿನಲ್ಲಿವೆ ಎಂದು ನಿಶ್ಚಯಮಾಡಿಕೊಳ್ಳುವುದೇ ಪ್ರಾಮುಖ್ಯವಾದ ವಿಷಯವಾಗಿದೆ. ನೀವು ಭಾಷಣದೊಳಗೆ ನಿಮ್ಮ ಹೃದಯವನ್ನು ಹಾಕಲು, ಅದರೊಳಗೆ ಜೀವವನ್ನೂದಲು ಮತ್ತು ಸತ್ಯದ ಕುರಿತು ಹುರುಪಿನ ಭಾಷಣವನ್ನು ನೀಡಲು ಶಕ್ತರಾಗಬೇಕು. ಭಾಷಣವನ್ನು ಕೊಡುವುದಕ್ಕೆ ಮೊದಲು ಹೀಗೆ ಪ್ರಶ್ನಿಸಿಕೊಳ್ಳಿ: ‘ನಾನು ಏನನ್ನು ಸಾಧಿಸಲು ನಿರೀಕ್ಷಿಸುತ್ತಿದ್ದೇನೆ?’ ಇದಲ್ಲದೆ, ಹೀಗೂ ಪ್ರಶ್ನಿಸಿಕೊಳ್ಳಿ: ‘ಮುಖ್ಯಾಂಶಗಳು ಎದ್ದು ತೋರುತ್ತವೋ? ಶಾಸ್ತ್ರವಚನಗಳನ್ನು ನಾನು ನಿಜವಾಗಿಯೂ ನನ್ನ ಭಾಷಣದ ಆಧಾರವಾಗಿ ಮಾಡಿದ್ದೇನೊ? ಪ್ರತಿಯೊಂದು ಮುಖ್ಯಾಂಶವು ಸ್ವಾಭಾವಿಕವಾಗಿ ಇನ್ನೊಂದು ಮುಖ್ಯಾಂಶಕ್ಕೆ ನಡಿಸುತ್ತದೊ? ಭಾಷಣವು ಯೆಹೋವನಿಗಾಗಿ ಹಾಗೂ ಆತನ ಒದಗಿಸುವಿಕೆಗಳಿಗಾಗಿ ಗಣ್ಯತೆಯನ್ನು ಬೆಳೆಸುತ್ತದೋ? ಸಮಾಪ್ತಿಯು ಮುಖ್ಯ ವಿಷಯಕ್ಕೆ ನೇರವಾಗಿ ಸಂಬಂಧಿಸಿದ್ದು, ಸಭಿಕರು ಏನು ಮಾಡಬೇಕೆಂಬುದನ್ನು ಅವರಿಗೆ ತೋರಿಸಿ, ಅದನ್ನು ಮಾಡಲು ಅವರನ್ನು ಪ್ರಚೋದಿಸುತ್ತದೊ?’ ಈ ಪ್ರಶ್ನೆಗಳಿಗೆ ನೀವು ಹೌದು ಎಂದು ಉತ್ತರ ಕೊಡುವುದಾದರೆ, ನೀವು ಸಭೆಯ ಪ್ರಯೋಜನಾರ್ಥವಾಗಿ ಮತ್ತು ಯೆಹೋವನ ಸ್ತುತಿಗಾಗಿ ‘ತಿಳುವಳಿಕೆಯನ್ನು ಸಾರ್ಥಕ ಮಾಡುವ’ ಸ್ಥಾನದಲ್ಲಿದ್ದೀರಿ.—ಜ್ಞಾನೋ. 15:2.