ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 37 ಪು. 212-ಪು. 214 ಪ್ಯಾ. 5
  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಭಾಷಣದ ಹೊರಮೇರೆಯನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮುಖ್ಯ ವಿಷ್ಯಗಳನ್ನ ನೆನಪಿಸ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ನೇಮಿತ ವಿಷಯಭಾಗದ ಉಪಯೋಗ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 37 ಪು. 212-ಪು. 214 ಪ್ಯಾ. 5

ಅಧ್ಯಾಯ 37

ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು

ನೀವೇನು ಮಾಡುವ ಅಗತ್ಯವಿದೆ?

ಮುಖ್ಯಾಂಶಗಳಿಗೆ ವಿಶೇಷ ಗಮನವನ್ನು ಕೊಡಲಾಗುವಂತೆ ನಿಮ್ಮ ಭಾಷಣದ ವಿಷಯವಸ್ತುವನ್ನು ಸಂಘಟಿಸಿರಿ ಮತ್ತು ಸಾದರಪಡಿಸಿರಿ.

ಇದು ಪ್ರಾಮುಖ್ಯವೇಕೆ?

ಇದು ಸ್ಮರಣಸಾಧನವಾಗಿದ್ದು, ಮನನ ಮಾಡುವುದಕ್ಕೂ ಅನ್ವಯಿಸಿಕೊಳ್ಳುವುದಕ್ಕೂ ನೆರವಾಗುತ್ತದೆ.

ಒಂದು ಭಾಷಣದ ಮುಖ್ಯಾಂಶಗಳು ಯಾವುವು? ಇವು ಕೇವಲ ಪ್ರಾಸಂಗಿಕವಾಗಿ, ಸಂಕ್ಷಿಪ್ತವಾಗಿ ಹೇಳಲ್ಪಡುವ ಆಸಕ್ತಿಕರವಾದ ಸಂಗತಿಗಳಾಗಿರುವುದಿಲ್ಲ. ಇವು ವಿವರವಾಗಿ ವಿಕಸಿಸಲ್ಪಡುವ ಪ್ರಮುಖ ವಿಚಾರಗಳಾಗಿವೆ. ಇವು ನಿಮ್ಮ ಉದ್ದೇಶವನ್ನು ಸಾಧಿಸಲು ಅತ್ಯಾವಶ್ಯಕವಾಗಿರುವ ವಿಚಾರಗಳಾಗಿವೆ.

ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡಲಿಕ್ಕಾಗಿ ಇರುವ ಒಂದು ಅತ್ಯಾವಶ್ಯಕ ಸಂಗತಿಯು, ಭಾಷಣದ ವಿಷಯಭಾಗವನ್ನು ವಿವೇಕದಿಂದ ಆರಿಸಿ, ಅದನ್ನು ಸಂಘಟಿಸುವುದೇ ಆಗಿದೆ. ಭಾಷಣಕ್ಕಾಗಿ ಸಂಶೋಧನೆಯನ್ನು ಮಾಡುವಾಗ, ಉಪಯೋಗಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚಿನ ಮಾಹಿತಿಯು ಸಾಮಾನ್ಯವಾಗಿ ಸಿಗುತ್ತದೆ. ಹಾಗಾದರೆ, ಯಾವುದನ್ನು ಉಪಯೋಗಿಸಬಹುದೆಂದು ನೀವು ಹೇಗೆ ನಿರ್ಧರಿಸಬಲ್ಲಿರಿ?

ಪ್ರಥಮವಾಗಿ, ನಿಮ್ಮ ಸಭಿಕರ ಬಗ್ಗೆ ಯೋಚಿಸಿರಿ. ಅವರಿಗೆ ಹೆಚ್ಚಾಗಿ ನಿಮ್ಮ ಭಾಷಣದ ವಿಷಯವಸ್ತು ಅಪರಿಚಿತವಾದದ್ದಾಗಿದೆಯೊ ಅಥವಾ ಅವರು ಅದರೊಂದಿಗೆ ಪರಿಚಿತರಾಗಿದ್ದಾರೊ? ಅವರಲ್ಲಿ ಹೆಚ್ಚಿನವರು ಬೈಬಲು ಅದರ ಬಗ್ಗೆ ಏನು ಹೇಳುತ್ತದೊ ಅದನ್ನು ಒಪ್ಪುತ್ತಾರೊ ಅಥವಾ ಅದನ್ನು ಕೆಲವರು ಸಂದೇಹಿಸುತ್ತಾರೊ? ಬೈಬಲು ಆ ಭಾಷಣದ ವಿಷಯವಸ್ತುವಿನ ಕುರಿತು ಏನು ಹೇಳುತ್ತದೊ ಅದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವಾಗ, ಅವರು ತಮ್ಮ ದೈನಂದಿನ ಜೀವಿತದಲ್ಲಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ? ಎರಡನೆಯದಾಗಿ, ನೀವು ಉಪಯೋಗಿಸಲು ಯೋಜಿಸುವ ವಿಷಯವಸ್ತುವಿನ ಸಂಬಂಧದಲ್ಲಿ ಆ ಸಭಿಕರೊಂದಿಗೆ ಮಾತಾಡಲು ನಿಮಗಿರುವ ಉದ್ದೇಶವು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಈ ಎರಡು ಮಾರ್ಗದರ್ಶಕಗಳನ್ನು ಉಪಯೋಗಿಸುತ್ತಾ, ನಿಮ್ಮ ವಿಷಯಭಾಗದ ಮೌಲ್ಯಮಾಪನ ಮಾಡಿರಿ ಮತ್ತು ನಿಜವಾಗಿಯೂ ತಕ್ಕದ್ದಾಗಿರುವಂತಹ ವಿಷಯಗಳನ್ನು ಮಾತ್ರ ಇಟ್ಟುಕೊಳ್ಳಿರಿ.

ನಿಮಗೆ ಮುಖ್ಯ ವಿಷಯವೂ ಮುಖ್ಯಾಂಶಗಳೂ ಇರುವ ಮೂಲಭೂತ ಹೊರಮೇರೆಯು ಕೊಡಲ್ಪಟ್ಟಿರುವುದಾದರೆ, ನೀವು ಅದಕ್ಕೆ ಅಂಟಿಕೊಳ್ಳಬೇಕು. ಆದರೆ ಪ್ರತಿಯೊಂದು ಮುಖ್ಯಾಂಶವನ್ನು ವಿಕಸಿಸುವಾಗ ಈ ಮೇಲಿನ ಅಂಶಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳುವುದಾದರೆ, ನೀವು ಏನನ್ನು ಸಾದರಪಡಿಸುತ್ತೀರೋ ಅದರ ಮಹತ್ವವು ಹೆಚ್ಚು ವರ್ಧಿಸಲ್ಪಡುವುದು. ನಿಮಗೆ ಯಾವುದೇ ಹೊರಮೇರೆಯು ಕೊಡಲ್ಪಡದಿರುವಾಗ, ಮುಖ್ಯಾಂಶಗಳನ್ನು ಆರಿಸುವುದು ನಿಮ್ಮ ಜವಾಬ್ದಾರಿಯಾಗಿದೆ.

ನಿಮ್ಮ ಮುಖ್ಯಾಂಶಗಳು ಮನಸ್ಸಿನಲ್ಲಿ ಸ್ಪಷ್ಟವಾಗಿದ್ದು, ಇವುಗಳ ಕೆಳಗೆ ನೀವು ವಿವರಗಳನ್ನು ಸಂಘಟಿಸಿರುವಲ್ಲಿ, ಭಾಷಣವನ್ನು ಕೊಡುವುದು ನಿಮಗೆ ಹೆಚ್ಚು ಸುಲಭವಾಗುವುದು. ನಿಮ್ಮ ಸಭಿಕರು ಸಹ ಇದರಿಂದ ಹೆಚ್ಚು ಪ್ರಯೋಜನವನ್ನು ಪಡೆಯುವುದು ಸಂಭವನೀಯ.

ನಿಮ್ಮ ವಿಷಯಭಾಗವನ್ನು ಸಂಘಟಿಸುವ ವಿವಿಧ ವಿಧಗಳು. ನಿಮ್ಮ ಭಾಷಣದ ಪ್ರಧಾನ ಭಾಗವನ್ನು ಸಂಘಟಿಸಲು ವಿವಿಧ ವಿಧಾನಗಳನ್ನು ಅನುಸರಿಸಬಹುದು. ನೀವು ಅವುಗಳೊಂದಿಗೆ ಚಿರಪರಿಚಿತರಾಗುವಾಗ, ನಿಮ್ಮ ಉದ್ದೇಶದ ಮೇಲೆ ಹೊಂದಿಕೊಂಡು, ಇವುಗಳಲ್ಲಿ ಅನೇಕ ವಿಧಾನಗಳು ಪರಿಣಾಮಕಾರಿಯಾಗಿರಬಲ್ಲವು ಎಂಬುದನ್ನು ನೀವು ತಿಳಿದುಕೊಳ್ಳುವಿರಿ.

ಒಂದು ಬಹೂಪಯೋಗಿ ವಿಧಾನವು, ವಿಷಯವಸ್ತುಗಳಿಗನುಸಾರವಾದ ಉಪಭಾಗವನ್ನು ಒಳಗೊಂಡಿದೆ. (ಪ್ರತಿಯೊಂದು ಮುಖ್ಯಾಂಶದ ಅಗತ್ಯವಿದೆ, ಏಕೆಂದರೆ ಅದು ಆ ವಿಷಯವಸ್ತುವಿನ ಕುರಿತಾದ ನಿಮ್ಮ ಕೇಳುಗರ ತಿಳಿವಳಿಕೆಗೆ ಹೆಚ್ಚನ್ನು ಕೂಡಿಸುತ್ತದೆ ಅಥವಾ ನಿಮ್ಮ ಭಾಷಣದ ಉದ್ದೇಶವನ್ನು ಸಾಧಿಸಲು ಸಹಾಯಮಾಡುತ್ತದೆ.) ಇನ್ನೊಂದು ವಿಧಾನವು ಕಾಲಗಣನೆಗನುಸಾರವಾದದ್ದಾಗಿದೆ. (ಉದಾಹರಣೆಗೆ, ಜಲಪ್ರಳಯಕ್ಕೆ ಮೊದಲು ನಡೆದ ಸಂಗತಿಗಳನ್ನು ಹೇಳಿದ ಬಳಿಕ, ಸಾ.ಶ. 70 ರಲ್ಲಿ ಯೆರೂಸಲೇಮ್‌ ನಾಶಗೊಳಿಸಲ್ಪಡುವುದಕ್ಕೆ ಮೊದಲು ನಡೆದ ಘಟನೆಗಳನ್ನು ಹೇಳಿ, ನಂತರ ನಮ್ಮ ಸ್ವಂತ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಹೇಳಬಹುದು.) ಮೂರನೆಯ ವಿಧಾನವು ಕಾರ್ಯಕಾರಣ ಭಾವವಾಗಿದೆ. (ಇದನ್ನು ಯಾವುದೇ ದಿಕ್ಕಿನಲ್ಲಿಯೂ ವಿಕಸಿಸಬಹುದು. ಉದಾಹರಣೆಗೆ, ಸದ್ಯದ ಸನ್ನಿವೇಶವನ್ನು ಅಂದರೆ ಕಾರ್ಯವನ್ನು ಸೂಚಿಸಿದ ಬಳಿಕ ಅದಕ್ಕಿರುವ ಕಾರಣವನ್ನು ನೀವು ತೋರಿಸಬಹುದು.) ನಾಲ್ಕನೆಯ ವಿಧಾನದಲ್ಲಿ ವಿರುದ್ಧಾತ್ಮಕ ವಿಚಾರಗಳನ್ನು ಉಪಯೋಗಿಸುವುದು ಒಳಗೂಡಿದೆ. (ಒಳ್ಳೆಯದರ ಮತ್ತು ಕೆಟ್ಟದ್ದರ ಅಥವಾ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳ ಮಧ್ಯೆ ಇರುವ ವ್ಯತ್ಯಾಸವನ್ನು ನೀವು ತೋರಿಸಬಹುದು.) ಕೆಲವು ಬಾರಿ, ಒಂದು ಭಾಷಣದಲ್ಲಿ ಒಂದಕ್ಕಿಂತ ಹೆಚ್ಚು ವಿಧಾನಗಳು ಒಳಗೂಡಿರುತ್ತವೆ.

ಯೆಹೂದಿ ಹಿರೀಸಭೆಯ ಮುಂದೆ ಸ್ತೆಫನನ ಮೇಲೆ ಸುಳ್ಳಾರೋಪವು ಹೊರಿಸಲ್ಪಟ್ಟಾಗ, ಅವನು ಕಾಲಗಣನೆಗನುಸಾರವಾದ ಒಂದು ಪ್ರಬಲ ಭಾಷಣವನ್ನು ಕೊಟ್ಟನು. ನೀವು ಅದನ್ನು ಅಪೊಸ್ತಲರ ಕೃತ್ಯಗಳು 7:2-53 ರಲ್ಲಿ ಓದುತ್ತಿರುವಾಗ, ಅವನು ಆರಿಸಿ ತೆಗೆದ ಅಂಶಗಳು ಉದ್ದೇಶಪೂರ್ಣವಾಗಿದ್ದವು ಎಂಬುದನ್ನು ಗಮನಿಸಿರಿ. ತನ್ನ ಸಭಿಕರು ಅಲ್ಲಗಳೆಯಸಾಧ್ಯವಿಲ್ಲದಂಥ ಇತಿಹಾಸಕ್ಕೆ ತಾನು ಸೂಚಿಸುತ್ತಿದ್ದೇನೆಂದು ಸ್ತೆಫನನು ಮೊದಲನೆಯದಾಗಿ ಸ್ಪಷ್ಟಪಡಿಸಿದನು. ಬಳಿಕ ಅವನು, ಯೋಸೇಫನನ್ನು ಅವನ ಸಹೋದರರು ತಳ್ಳಿಹಾಕಿದರೂ, ಬಿಡುಗಡೆಯನ್ನು ಒದಗಿಸಲು ದೇವರು ಅವನನ್ನು ಉಪಯೋಗಿಸಿದನೆಂದು ಸೂಚಿಸಿದನು. ಆಮೇಲೆ, ದೇವರು ಯಾರನ್ನು ಉಪಯೋಗಿಸಿದನೊ ಆ ಮೋಶೆಗೆ ಯೆಹೂದ್ಯರು ಅವಿಧೇಯರಾದರೆಂದು ಅವನು ತೋರಿಸಿದನು. ಬಳಿಕ, ಹಿಂದಿನ ಯೆಹೂದಿ ಸಂತತಿಗಳು ತೋರಿಸಿದಂತಹ ಮನೋಭಾವವನ್ನೇ, ಯೇಸು ಕ್ರಿಸ್ತನ ಮರಣಕ್ಕೆ ಕಾರಣರಾದವರೂ ತೋರಿಸಿದ್ದರೆಂದು ಒತ್ತಿಹೇಳುವ ಮೂಲಕ ಅವನು ತನ್ನ ಮಾತುಗಳನ್ನು ಮುಕ್ತಾಯಗೊಳಿಸಿದನು.

ತೀರ ಹೆಚ್ಚು ಮುಖ್ಯಾಂಶಗಳನ್ನು ಉಪಯೋಗಿಸಬೇಡಿ. ಯಾವುದೇ ಮುಖ್ಯ ವಿಷಯವನ್ನು ವಿಕಸಿಸುವುದರಲ್ಲಿ ಕೇವಲ ಕೆಲವೇ ಆವಶ್ಯಕ ಅಂಶಗಳಿವೆ. ಅಧಿಕಾಂಶ ವಿದ್ಯಮಾನಗಳಲ್ಲಿ, ಸಾಧಾರಣವಾಗಿ ಐದಕ್ಕಿಂತ ಹೆಚ್ಚು ಮುಖ್ಯಾಂಶಗಳಿರುವುದಿಲ್ಲ. ನೀವು ಮಾತಾಡುವುದು 5 ನಿಮಿಷಗಳಾಗಿರಲಿ, 10 ನಿಮಿಷಗಳಾಗಿರಲಿ, 30 ನಿಮಿಷಗಳಾಗಿರಲಿ ಅಥವಾ ಇನ್ನೂ ದೀರ್ಘವಾಗಿರುವಾಗಲೂ ಇದು ಅನ್ವಯವಾಗುತ್ತದೆ. ತೀರ ಹೆಚ್ಚು ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡಲು ಪ್ರಯತ್ನಿಸಬೇಡಿರಿ. ಒಂದು ಭಾಷಣದಿಂದ ನಿಮ್ಮ ಸಭಿಕರು ಸಮಂಜಸವಾಗಿಯೇ ಕೇವಲ ಕೆಲವೇ ಭಿನ್ನ ವಿಚಾರಗಳನ್ನು ಗ್ರಹಿಸಬಲ್ಲರು. ಮತ್ತು ಭಾಷಣವು ಎಷ್ಟು ಹೆಚ್ಚು ದೀರ್ಘವಾಗಿರುತ್ತದೋ, ಮುಖ್ಯಾಂಶಗಳೂ ಅಷ್ಟೇ ವಿಶಿಷ್ಟವೂ ಸ್ಪಷ್ಟವಾಗಿ ನಿರೂಪಿಸಲ್ಪಟ್ಟವುಗಳೂ ಆಗಿರಬೇಕು.

ನೀವು ಎಷ್ಟೇ ಮುಖ್ಯಾಂಶಗಳನ್ನು ಉಪಯೋಗಿಸಿದರೂ, ಅವುಗಳಲ್ಲಿ ಪ್ರತಿಯೊಂದನ್ನು ಸಾಕಷ್ಟು ವಿಕಸಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಸಭಿಕರ ಮನಸ್ಸುಗಳ ಮೇಲೆ ಸ್ಥಿರವಾಗಿ ಅಚ್ಚೊತ್ತಲ್ಪಡುವಂತೆ, ಪ್ರತಿಯೊಂದು ಮುಖ್ಯಾಂಶವನ್ನು ಅವರು ಪರೀಕ್ಷಿಸಲಿಕ್ಕಾಗಿ ಸಾಕಷ್ಟು ಸಮಯಾವಕಾಶವನ್ನು ಕೊಡಿರಿ.

ನಿಮ್ಮ ಭಾಷಣವು ಸರಳತೆಯ ಅಭಿಪ್ರಾಯವನ್ನು ಕೊಡಬೇಕು. ಇದು ಸದಾ ನೀವು ಸಾದರಪಡಿಸುವ ಮಾಹಿತಿಯ ಪ್ರಮಾಣದ ಮೇಲೆ ಹೊಂದಿಕೊಂಡಿರುವುದಿಲ್ಲ. ನಿಮ್ಮ ವಿಚಾರಗಳನ್ನು ಕೇವಲ ಕೆಲವೇ ಮುಖ್ಯ ಶಿರೋನಾಮಗಳ ಕೆಳಗೆ ಸ್ಪಷ್ಟವಾಗಿ ಗುಂಪು ಕೂಡಿಸಿ, ಇವುಗಳನ್ನು ಒಂದೊಂದಾಗಿ ವಿಕಸಿಸುವುದಾದರೆ, ಆಗ ಭಾಷಣವನ್ನು ಅನುಸರಿಸುವುದು ಸುಲಭವಾಗುವುದು ಮತ್ತು ಅದನ್ನು ಜ್ಞಾಪಕದಲ್ಲಿಡುವುದು ಕೂಡ ಸುಲಭವಾಗುವುದು.

ನಿಮ್ಮ ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡಿರಿ. ನಿಮ್ಮ ಮಾಹಿತಿಯು ಸರಿಯಾಗಿ ಸಂಘಟಿಸಲ್ಪಟ್ಟಿರುವುದಾದರೆ, ನಿಮ್ಮ ಭಾಷಣ ನೀಡುವಿಕೆಯ ಮೂಲಕ ನಿಮ್ಮ ಮುಖ್ಯಾಂಶಗಳ ಮಹತ್ವವನ್ನು ಪುಷ್ಟಿಗೊಳಿಸುವುದು ಕಷ್ಟವಾಗಿರದು.

ಒಂದು ಮುಖ್ಯಾಂಶವನ್ನು ಎದ್ದುಕಾಣುವಂತೆ ಮಾಡುವ ಪ್ರಧಾನ ಮಾರ್ಗವು, ರುಜುವಾತುಗಳು, ಶಾಸ್ತ್ರವಚನಗಳು ಮತ್ತು ಇನ್ನಿತರ ವಿಷಯಗಳನ್ನು, ಅವು ಮುಖ್ಯಾಂಶದ ಮೇಲೆ ಗಮನವನ್ನು ಕೇಂದ್ರೀಕರಿಸುವ ಮತ್ತು ಅದನ್ನು ವಿಸ್ತರಿಸುವ ರೀತಿಯಲ್ಲಿ ಅಂಶಗಳನ್ನು ಪ್ರಸ್ತುತಪಡಿಸುವುದೇ ಆಗಿದೆ. ಎಲ್ಲ ದ್ವಿತೀಯ ಅಂಶಗಳು ಮುಖ್ಯಾಂಶವನ್ನು ಸ್ಪಷ್ಟೀಕರಿಸಿ, ರುಜುಪಡಿಸಬೇಕು ಇಲ್ಲವೆ ವಿಸ್ತರಿಸಬೇಕು. ಕೇವಲ ಆಸಕ್ತಿಕರವಾಗಿವೆಯೆಂಬ ಕಾರಣಕ್ಕಾಗಿ ಅಸಂಬಂಧಿತ ವಿಚಾರಗಳನ್ನು ಕೂಡಿಸಬೇಡಿ. ದ್ವಿತೀಯ ಅಂಶಗಳನ್ನು ನೀವು ವಿಕಸಿಸುವಾಗ, ಅವು ಯಾವುದನ್ನು ಬೆಂಬಲಿಸುತ್ತವೋ ಆ ಮುಖ್ಯಾಂಶದೊಂದಿಗೆ ಅವುಗಳಿಗಿರುವ ಸಂಬಂಧವನ್ನು ಸ್ಪಷ್ಟವಾಗಿ ತೋರಿಸಿರಿ. ಅದನ್ನು ಸಭಿಕರು ತಾವಾಗಿಯೇ ಊಹಿಸಿಕೊಳ್ಳುವಂತೆ ಬಿಡಬೇಡಿ. ಈ ಸಂಬಂಧವನ್ನು, ಮುಖ್ಯ ವಿಚಾರವನ್ನು ವ್ಯಕ್ತಪಡಿಸುವ ಮುಖ್ಯ ಪದಗಳನ್ನು ಪುನರಾವರ್ತಿಸುವ ಮೂಲಕ ಅಥವಾ ಮುಖ್ಯಾಂಶದ ಸಾರಾಂಶವನ್ನೇ ಆಗಾಗ ಪುನರಾವರ್ತಿಸುವ ಮೂಲಕ ತೋರಿಸಸಾಧ್ಯವಿದೆ.

ಕೆಲವು ಭಾಷಣಕಾರರು ತಮ್ಮ ಮುಖ್ಯಾಂಶಗಳನ್ನು ಸಂಖ್ಯೆಗಳಿಂದ ಗುರುತಿಸುವ ಮೂಲಕ ಅವುಗಳನ್ನು ಎತ್ತಿತೋರಿಸುತ್ತಾರೆ. ಮುಖ್ಯಾಂಶಗಳನ್ನು ಎತ್ತಿತೋರಿಸುವ ಒಂದು ವಿಧಾನವು ಇದಾಗಿದೆಯಾದರೂ, ಮಾಹಿತಿಯನ್ನು ಜಾಗರೂಕತೆಯಿಂದ ಆಯ್ದುಕೊಂಡು, ಅದನ್ನು ತರ್ಕಬದ್ಧವಾಗಿ ವಿಕಸಿಸುವುದಕ್ಕೆ ಇದು ಒಂದು ಬದಲಿಯಾಗಿರಬಾರದು.

ಬೆಂಬಲಿಸುವಂಥ ವಾದಾಂಶವನ್ನು ಸಾದರಪಡಿಸುವುದಕ್ಕೆ ಮೊದಲು ನಿಮ್ಮ ಮುಖ್ಯಾಂಶವನ್ನು ಆರಂಭದಲ್ಲೇ ಹೇಳುವ ಆಯ್ಕೆಯನ್ನು ನೀವು ಮಾಡಬಹುದು. ಆಗ, ಇದನ್ನು ಅನುಸರಿಸಿ ಬರುವ ವಿಷಯದ ಮೌಲ್ಯವನ್ನು ಸಭಿಕರು ಗಣ್ಯಮಾಡುವಂತೆ ಇದು ಅವರಿಗೆ ಸಹಾಯಮಾಡುವುದು ಮಾತ್ರವಲ್ಲ, ಇದು ಆ ಮುಖ್ಯಾಂಶವನ್ನೂ ಒತ್ತಿಹೇಳುವುದು. ಈ ಅಂಶವು ಪೂರ್ಣವಾಗಿ ವಿಸ್ತರಿಸಲ್ಪಟ್ಟ ಬಳಿಕ, ಅದರ ಸಾರಾಂಶವನ್ನು ಹೇಳುವ ಮೂಲಕ ನೀವು ಅದನ್ನು ಇನ್ನಷ್ಟು ಪುಷ್ಟಿಗೊಳಿಸಬಹುದು.

ಕ್ಷೇತ್ರ ಶುಶ್ರೂಷೆಯಲ್ಲಿ. ಮೇಲೆ ಚರ್ಚಿಸಲ್ಪಟ್ಟಿರುವ ಮೂಲತತ್ತ್ವಗಳು, ಔಪಚಾರಿಕ ಭಾಷಣಗಳಿಗೆ ಮಾತ್ರವಲ್ಲ ಕ್ಷೇತ್ರ ಶುಶ್ರೂಷೆಯಲ್ಲಿ ನೀವು ನಡೆಸುವ ಸಂಭಾಷಣೆಗಳಿಗೂ ಅನ್ವಯಿಸುತ್ತವೆ. ಇದನ್ನು ತಯಾರಿಸುವಾಗ, ಆ ಪ್ರದೇಶದ ಜನರ ಮನಸ್ಸಿನಲ್ಲಿರುವ ಯಾವುದಾದರೂ ಮಹತ್ವದ ಸನ್ನಿವೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳಿರಿ. ಬೈಬಲು ನೀಡುವ ನಿರೀಕ್ಷೆಯು ಆ ಸನ್ನಿವೇಶವನ್ನು ಹೇಗೆ ಇತ್ಯರ್ಥಗೊಳಿಸುವುದೆಂಬುದನ್ನು ತೋರಿಸಲು ಅವಕಾಶವನ್ನು ಕೊಡುವ ಒಂದು ಮುಖ್ಯ ವಿಷಯವನ್ನು ಆರಿಸಿಕೊಳ್ಳಿರಿ. ಆ ಮುಖ್ಯ ವಿಷಯವನ್ನು ವಿಕಸಿಸಲಿಕ್ಕಾಗಿರುವ ಒಂದೆರಡು ಮುಖ್ಯಾಂಶಗಳನ್ನು ಆರಿಸಿಕೊಳ್ಳಿರಿ. ಆ ಅಂಶಗಳನ್ನು ಬೆಂಬಲಿಸಲಿಕ್ಕಾಗಿ ನೀವು ಯಾವ ಶಾಸ್ತ್ರವಚನಗಳನ್ನು ಉಪಯೋಗಿಸುವಿರೆಂಬುದನ್ನು ನಿರ್ಧರಿಸಿರಿ. ಬಳಿಕ, ನಿಮ್ಮ ಚರ್ಚೆಯನ್ನು ಹೇಗೆ ಆರಂಭಿಸುವಿರೆಂಬುದನ್ನು ಯೋಜಿಸಿರಿ. ಇಂತಹ ತಯಾರಿಯು ಸಂಭಾಷಣೆಗೆ ಅಗತ್ಯವಿರುವಂತೆ ಹೊಂದಿಸಿಕೊಳ್ಳುವ ಅವಕಾಶವನ್ನು ನಮಗೆ ಕೊಡುತ್ತದೆ. ಮನೆಯವನು ಜ್ಞಾಪಕದಲ್ಲಿಟ್ಟುಕೊಳ್ಳುವಂಥ ಯಾವುದಾದರೊಂದು ವಿಷಯವನ್ನು ನೀವು ಹೇಳುವಂತೆಯೂ ಇದು ಸಹಾಯಮಾಡುತ್ತದೆ.

ಇದನ್ನು ಮಾಡುವ ವಿಧ

  • ನೀವು ಮುಖ್ಯಾಂಶಗಳನ್ನು ಆರಿಸಿಕೊಳ್ಳುವ ಮೊದಲು, ಆ ಭಾಷಣದ ವಿಷಯವಸ್ತುವಿನ ಕುರಿತು ಸಭಿಕರಿಗೆ ಏನು ತಿಳಿದಿದೆ ಎಂಬುದನ್ನು ಪರಿಗಣಿಸಿರಿ ಮತ್ತು ನಿಮ್ಮ ಉದ್ದೇಶವೇನೆಂಬುದನ್ನು ಸಹ ನಿರ್ಧರಿಸಿರಿ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ನಿಮ್ಮ ಮಾಹಿತಿಯನ್ನು ಸಂಘಟಿಸಿರಿ.

  • ರುಜುವಾತಿನ ಅಂಶಗಳು, ಶಾಸ್ತ್ರವಚನಗಳು ಮತ್ತು ಇತರ ಮಾಹಿತಿ ಹಾಗೂ ಇವು ಬೆಂಬಲಿಸುವ ಮುಖ್ಯ ವಿಚಾರದ ಮಧ್ಯೆ ಇರುವ ಸಂಬಂಧವನ್ನು ಸ್ಪಷ್ಟವಾಗಿ ತೋರಿಸಿರಿ.

  • ಪ್ರತಿಯೊಂದು ಮುಖ್ಯಾಂಶಕ್ಕೆ ಗಮನವನ್ನು ಸೆಳೆಯಿರಿ. ಇದನ್ನು ಸಂಖ್ಯೆಗಳಿಂದ ಗುರುತಿಸುವ ಮೂಲಕ, ಬೆಂಬಲಿಸುವ ಮಾಹಿತಿಯನ್ನು ನೀಡುವ ಮೊದಲು ಪ್ರತಿಯೊಂದು ಮುಖ್ಯಾಂಶವನ್ನು ಹೇಳುವ ಮೂಲಕ, ಅಥವಾ ಒಂದು ಅಂಶವು ವಿಸ್ತರಿಸಲ್ಪಟ್ಟ ಬಳಿಕ ಅದೇ ಅಂಶವನ್ನು ಪುನಃ ಹೇಳುವ ಮೂಲಕ ಮಾಡಬಹುದು.

ಅಭ್ಯಾಸಪಾಠ: ಈ ವಾರದ ಕಾವಲಿನಬುರುಜು ಅಧ್ಯಯನಕ್ಕಾಗಿರುವ ಲೇಖನವನ್ನು ಪುನರ್ವಿಮರ್ಶಿಸಿರಿ. ದಪ್ಪಕ್ಷರದ ಉಪಶಿರೋನಾಮಗಳನ್ನು ಮತ್ತು ಬೋಧನಾ ಚೌಕದಲ್ಲಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ಮುಖ್ಯಾಂಶಗಳನ್ನು ಗುರುತಿಸಲು ಪ್ರಯತ್ನಿಸಿರಿ. ಇದನ್ನು ಪ್ರತಿ ವಾರ ಮಾಡುವುದು ಪ್ರಯೋಜನಕರವಾಗಿರಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ