ಪತ್ರಗಳ ಮೂಲಕ ಸಂವಾದಿಸುವುದು
ಪತ್ರಗಳು ಲಕ್ಷಾಂತರ ಮಂದಿಯ ಬದುಕುಗಳನ್ನೂ ಸ್ವಭಾವಗಳನ್ನೂ ಸುಧಾರಿಸಿವೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಹೆಚ್ಚಿನ ಪುಸ್ತಕಗಳು ಮೂಲತಃ ಪತ್ರಗಳಾಗಿದ್ದವು. ನಾವು ಇಂದು ಹೊಸ ವಿಶ್ವಾಸಿಗಳನ್ನು ಬಲಪಡಿಸಲು, ಮಿತ್ರರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು, ವಿಶೇಷ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸಲು, ಕಷ್ಟಗಳನ್ನು ಎದುರಿಸುತ್ತಿರುವವರನ್ನು ಬಲಗೊಳಿಸಲು ಮತ್ತು ಸಭಾ ಚಟುವಟಿಕೆಗಳನ್ನು ನಿರ್ವಹಿಸಲಿಕ್ಕಾಗಿ ಬೇಕಾಗುವ ಮಾಹಿತಿಯನ್ನು ರವಾನಿಸಲು ಪತ್ರಗಳನ್ನು ಬರೆಯಸಾಧ್ಯವಿದೆ.—1 ಥೆಸ. 1:1-7; 5:27; 2 ಪೇತ್ರ 3:1, 2.
ಪತ್ರ ಬರೆಯುವುದು ಸಾಕ್ಷಿ ನೀಡಲಿಕ್ಕಾಗಿಯೂ ಒಂದು ಪರಿಣಾಮಕಾರಿಯಾದ ಮಾರ್ಗವಾಗಿದೆ. ಕೆಲವು ಸ್ಥಳಗಳಲ್ಲಿ, ಅನೇಕರು ವಿಶೇಷ ಭದ್ರತೆಯಿರುವ ಬಹುಮಹಡಿ ಕಟ್ಟಡಗಳಲ್ಲಿ ಮತ್ತು ನಾವು ಮುಕ್ತವಾಗಿ ಸಾಕ್ಷಿಕೊಡಲು ಸಾಧ್ಯವಾಗದಿರುವಂಥ ಕೆಲವೊಂದು ಹಳ್ಳಿಗಳು ಹಾಗೂ ನಿರ್ಬಂಧಿತ ಕ್ಷೇತ್ರಗಳಲ್ಲಿ ಜೀವಿಸುತ್ತಿರಬಹುದು. ಕೆಲವರು ಹೆಚ್ಚಿನ ಸಮಯ ಮನೆಯಲ್ಲಿ ಇಲ್ಲದಿರುವುದರಿಂದ, ನಾವು ಮನೆಯಿಂದ ಮನೆಯ ಸಾಕ್ಷಿಕಾರ್ಯವನ್ನು ಮಾಡುವಾಗ ಅವರು ಸಿಗುವುದಿಲ್ಲ. ಇನ್ನಿತರರು ಸೆರೆಮನೆಗಳನ್ನೂ ಒಳಗೊಂಡು ಪ್ರತ್ಯೇಕ ಸ್ಥಳಗಳಲ್ಲಿ ಜೀವಿಸುತ್ತಾರೆ.
ಅಸ್ವಸ್ಥತೆ, ಪ್ರತಿಕೂಲ ಹವಾಮಾನ, ಇಲ್ಲವೆ ಕರ್ಫ್ಯೂನಂತಹ ಸನ್ನಿವೇಶಗಳು ಕೆಲವು ಬಾರಿ ನೀವು ಮನೆಯಲ್ಲೇ ಇರುವಂತೆ ಮಾಡಬಹುದು. ಆಗ, ನೀವು ನಿಮ್ಮ ಸಂಬಂಧಿಕನಿಗೊ ಅಥವಾ ಇತ್ತೀಚೆಗೆ ನೀವು ಅನೌಪಚಾರಿಕವಾಗಿ ಮಾತಾಡಿದ್ದ ಒಬ್ಬ ವ್ಯಕ್ತಿಗೊ ಪತ್ರ ಬರೆದು, ಇನ್ನೂ ಹೆಚ್ಚಿನ ಸಾಕ್ಷಿಯನ್ನು ಕೊಡಶಕ್ತರಾಗಬಹುದೊ? ನಿಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬನು ಮನೆ ಬದಲಾಯಿಸಿ ದೂರ ಹೋಗಿದ್ದಾನೊ? ಆಗ ನಿಮ್ಮಿಂದ ಕಳುಹಿಸಲ್ಪಡುವ ಒಂದು ಪತ್ರವು ಅವನ ಆತ್ಮಿಕ ಆಸಕ್ತಿಯನ್ನು ಸಜೀವವಾಗಿರಿಸುವ ಸಾಧನವಾದೀತು. ಅಥವಾ, ಇತ್ತೀಚೆಗೆ ಮದುವೆಯಾದವರೊಂದಿಗೆ, ತಂದೆತಾಯಿಗಳಾದವರೊಂದಿಗೆ ಇಲ್ಲವೆ ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಂಡಿರುವವರೊಂದಿಗೆ ನೀವು ಸೂಕ್ತವಾದ ಶಾಸ್ತ್ರೀಯ ಮಾಹಿತಿಯನ್ನು ಹಂಚಿಕೊಳ್ಳಸಾಧ್ಯವಿದೆ.
ಪತ್ರದ ಮೂಲಕ ಸಾಕ್ಷಿ ನೀಡುವುದು
ನೀವು ಹಿಂದೆಂದೂ ಭೇಟಿಯಾಗಿರದಂಥ ವ್ಯಕ್ತಿಗೆ ಸಾಕ್ಷಿ ನೀಡಲಿಕ್ಕಾಗಿ ಪತ್ರವನ್ನು ಬರೆಯುವಾಗ, ಮೊದಲಾಗಿ ನಿಮ್ಮನ್ನು ಪರಿಚಯಿಸಿಕೊಳ್ಳಿರಿ. ನೀವು ಒಂದು ಅಂತಾರಾಷ್ಟ್ರೀಯ ಸ್ವಯಂಸೇವಕ ಕೆಲಸದಲ್ಲಿ ಭಾಗವಹಿಸುತ್ತಿದ್ದೀರೆಂದು ವಿವರಿಸಬಹುದು. ಸಮಂಜಸವಾಗಿರುವಲ್ಲಿ, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರೆಂದು ತಿಳಿಸಿರಿ. ವೈಯಕ್ತಿಕವಾಗಿ ಭೇಟಿಯಾಗುವ ಬದಲು ನೀವೇಕೆ ಪತ್ರವನ್ನು ಬರೆಯುತ್ತಿದ್ದೀರೆಂಬುದನ್ನು ಆ ವ್ಯಕ್ತಿಗೆ ತಿಳಿಯಪಡಿಸಿರಿ. ಆ ವ್ಯಕ್ತಿಯೊಂದಿಗೆ ನೀವು ಮುಖಾಮುಖಿಯಾಗಿ ಮಾತಾಡುತ್ತಿದ್ದೀರೋ ಎಂಬಂತೆ ಪತ್ರವನ್ನು ಬರೆಯಿರಿ. ಆದರೂ, “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಬೇಕೆಂಬ ಮಾರ್ಗದರ್ಶನಕ್ಕನುಸಾರ, ನಿಮ್ಮ ಕುರಿತಾದ ಮಾಹಿತಿಯನ್ನು ಎಷ್ಟರ ಮಟ್ಟಿಗೆ ತಿಳಿಯಪಡಿಸಬೇಕೆಂಬುದಕ್ಕೆ ಗಂಭೀರವಾದ ಗಮನವನ್ನು ಕೊಡಿರಿ.—ಮತ್ತಾ. 10:16.
ಆ ವ್ಯಕ್ತಿಯನ್ನು ಭೇಟಿಯಾಗುತ್ತಿದ್ದಲ್ಲಿ ನೀವು ಏನು ಹೇಳುತ್ತಿದ್ದಿರೊ ಅದನ್ನೇ ಪತ್ರದಲ್ಲಿ ಸೇರಿಸಿರಿ. ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯಿಂದ ನೀವು ಒಂದು ಪೀಠಿಕೆಯನ್ನು ಆರಿಸಿಕೊಳ್ಳಬಹುದು ಅಥವಾ ನಮ್ಮ ರಾಜ್ಯದ ಸೇವೆಯ ಇತ್ತೀಚಿನ ಸಂಚಿಕೆಯಿಂದ ಒಂದು ಶಾಸ್ತ್ರೀಯ ನಿರೂಪಣೆಯನ್ನು ಉಪಯೋಗಿಸಬಹುದು. ನೀವು ಒಂದು ಪ್ರಶ್ನೆಯನ್ನು ಹಾಕಿ, ಆ ವ್ಯಕ್ತಿಯು ಅದರ ಕುರಿತು ಯೋಚಿಸುವಂತೆ ಪ್ರೋತ್ಸಾಹಿಸಬಹುದು. ಕೆಲವು ಪ್ರಚಾರಕರು, ತಮ್ಮಲ್ಲಿ ಬೈಬಲ್ ಪ್ರಶ್ನೆಗಳಿಗೆ ಉತ್ತರ ನೀಡುವ ಒಂದು ಉಚಿತ ಕಾರ್ಯಕ್ರಮವಿದೆಯೆಂದು ಹೇಳಿ, ನಮ್ಮ ಅಧ್ಯಯನ ಸಹಾಯಕಗಳಲ್ಲೊಂದರ ಕೆಲವು ಅಧ್ಯಾಯಗಳ ಶೀರ್ಷಿಕೆಗಳನ್ನು ಉಲ್ಲೇಖಿಸುತ್ತಾರೆ. ಸಾಕ್ಷಿಯನ್ನು ಕೊಡಲಿಕ್ಕಾಗಿ ಬರೆಯಲ್ಪಟ್ಟ ಒಂದು ಮಾದರಿ ಪತ್ರವು 73ನೆಯ ಪುಟದಲ್ಲಿ ತೋರಿಸಲ್ಪಟ್ಟಿದೆ. ಅದು ನಿಮಗೆ ತುಸು ಮಾಹಿತಿಯನ್ನು ನೀಡಬಹುದಾದರೂ, ಪತ್ರದಲ್ಲಿ ಒಳಗೂಡಿಸಲ್ಪಟ್ಟಿರುವ ವಿಷಯವನ್ನು ವಿಭಿನ್ನವಾದ ರೀತಿಯಲ್ಲಿ ತಿಳಿಸುವುದು ಉತ್ತಮ. ಇಲ್ಲದಿರುವಲ್ಲಿ, ಸಮಯ ಕಳೆದಂತೆ ಜನರು ಒಂದೇ ವಿಧವಾದ ಪತ್ರವನ್ನು ಪದೇ ಪದೇ ಪಡೆದಾರು.
ಅಪರಿಚಿತನೊಬ್ಬನಿಂದ ಬರುವ ಒಂದು ದೀರ್ಘ ಪತ್ರವನ್ನು ಓದಲು ಕೆಲವರು ಹಿಂಜರಿಯುತ್ತಾರೆ. ಆದಕಾರಣ, ನೀವು ಸಂಕ್ಷಿಪ್ತವಾದ ಪತ್ರವನ್ನು ಬರೆಯುವುದು ವಿವೇಕಯುತವಾದದ್ದಾಗಿದೆ. ನಿಮ್ಮ ಪತ್ರವು ತುಂಬ ದೊಡ್ಡದಾಗಿರುವಲ್ಲಿ ಅದನ್ನು ಪಡೆದುಕೊಳ್ಳುವವನು ಅದನ್ನು ಓದುವಷ್ಟರೊಳಗೆ ದಣಿದುಹೋದಾನು. ಪತ್ರದ ಜೊತೆಗೆ, ರಾಜ್ಯ ಸಭಾಗೃಹದ ಕೂಟಗಳ ಮುದ್ರಿತ ಆಮಂತ್ರಣವನ್ನು ಕಳುಹಿಸುವುದು ಸೂಕ್ತವಾದದ್ದಾಗಿದೆ. ಅದರೊಳಗೆ ಒಂದು ಟ್ರ್ಯಾಕ್ಟನ್ನೊ ಒಂದು ಬ್ರೋಷರನ್ನೊ ಇಡಬಹುದು, ಇಲ್ಲವೆ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಪ್ರತಿಯನ್ನು ಇಟ್ಟು, ಬೇಕಿರುವಲ್ಲಿ ಇವುಗಳನ್ನು ಕ್ರಮವಾಗಿ ಒದಗಿಸುತ್ತೇವೆಂದು ತಿಳಿಸಸಾಧ್ಯವಿದೆ. ಅಥವಾ ಚರ್ಚಿಸಲ್ಪಟ್ಟಿರುವ ವಿಷಯದ ಕುರಿತು ಇನ್ನೂ ಹೆಚ್ಚನ್ನು ಮಾತಾಡಲಿಕ್ಕಾಗಿ ಆ ಪತ್ರವನ್ನು ಪಡೆದುಕೊಳ್ಳುವಂಥ ವ್ಯಕ್ತಿಯ ಮನೆಗೆ ಭೇಟಿ ನೀಡಬಹುದೊ ಎಂದು ಕೇಳಸಾಧ್ಯವಿದೆ.
ಪತ್ರದ ರೂಪದ ಕುರಿತು ಒಂದು ಮಾತು
ಈಗ ಮಾದರಿ ಪತ್ರದ ಕಡೆಗೆ ನೋಟವನ್ನು ಹರಿಸಿ. ಈ ಕೆಳಗಿನ ವಿಷಯಗಳನ್ನು ಗಮನಿಸಿ: (1) ಅದು ನೀಟಾಗಿ ಕಾಣುತ್ತದೆ, ಅಸ್ತವ್ಯಸ್ತವಾಗಿ ಅಲ್ಲ. (2) ಒಂದುವೇಳೆ ಲಕೋಟೆಯು ಕಾಣೆಯಾದರೂ, ಪತ್ರವನ್ನು ಕಳುಹಿಸಿದವರ ಹೆಸರು ಮತ್ತು ವಿಳಾಸವು ಪತ್ರವನ್ನು ಪಡೆದುಕೊಳ್ಳುವವನ ಬಳಿ ಇರುತ್ತದೆ. (3) ಒಂದನೆಯ ಪ್ಯಾರಗ್ರಾಫ್‌ನಲ್ಲಿ, ಪತ್ರದ ಉದ್ದೇಶವು ಸರಳವೂ ನೇರವೂ ಆದ ರೀತಿಯಲ್ಲಿ ತಿಳಿಸಲ್ಪಟ್ಟಿದೆ. (4) ಪ್ರತಿಯೊಂದು ಮುಖ್ಯ ವಿಚಾರವನ್ನು ಪ್ರತ್ಯೇಕ ಪ್ಯಾರಗ್ರಾಫ್‌ನಲ್ಲಿ ಚರ್ಚಿಸಲಾಗಿದೆ. (5) ಪತ್ರದ ಉದ್ದೇಶವನ್ನು ಪರಿಗಣಿಸುವಾಗ, ಅದು ಮಾಮೂಲಾದದ್ದೂ ಅಲ್ಲ ಔಪಚಾರಿಕವೂ ಅಲ್ಲ.
ಸಭೆಯ ಸೆಕ್ರಿಟರಿಯು ಬ್ರಾಂಚ್ ಆಫೀಸಿಗೆ ಕಳುಹಿಸಬಹುದಾದಂಥ ರೀತಿಯ ಹೆಚ್ಚು ಔಪಚಾರಿಕ ಪತ್ರದಲ್ಲಿ, ಸಭೆಯ ಹೆಸರಿನೊಂದಿಗೆ ಸೆಕ್ರಿಟರಿಯ ಸ್ವಂತ ಹೆಸರು, ಅವನ ಅಂಚೆ ವಿಳಾಸ ಮತ್ತು ತಾರೀಖು ಸೇರಿರುತ್ತದೆ. ಪತ್ರವು ಯಾರಿಗೆ ಕಳುಹಿಸಲ್ಪಡುತ್ತಿದೆಯೊ ಆ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರು ಮತ್ತು ವಿಳಾಸವೂ ಆ ಪತ್ರದಲ್ಲಿರುತ್ತದೆ. ಇದಾದ ಬಳಿಕ ಯೋಗ್ಯ ರೀತಿಯ ವಂದನೆಯು ಸೇರಿಸಲ್ಪಡುತ್ತದೆ. ಪತ್ರವನ್ನು ಮುಕ್ತಾಯಗೊಳಿಸುವಾಗ, ಕೆಲವು ಭಾಷೆಗಳಲ್ಲಿ “ಇತಿ ನಿಮ್ಮ ವಿಶ್ವಾಸಿ,” ಅಥವಾ “ಇತಿ ನಿಮ್ಮ” ಎಂಬ ಅಭಿವ್ಯಕ್ತಿಗಳು ಸಹಿಯ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಸಹಿಯು ಸ್ವಹಸ್ತದಿಂದ ಬರೆದದ್ದಾಗಿರಬೇಕು.
ಯಾವುದೇ ಪತ್ರದಲ್ಲಾಗಲಿ, ಸರಿಯಾದ ಕಾಗುಣಿತ, ವ್ಯಾಕರಣ, ವಿರಾಮ ಚಿಹ್ನೆಗಳು ಮತ್ತು ನೀಟಾಗಿ ಬರೆಯುವುದಕ್ಕೆ ಗಮನಕೊಡಿರಿ. ಹೀಗೆ ಮಾಡುವಲ್ಲಿ, ನಿಮ್ಮ ಪತ್ರಕ್ಕೂ ಅದರಲ್ಲಿರುವ ಸಂದೇಶಕ್ಕೂ ಘನತೆಯು ದೊರೆಯುವುದು.
ಲಕೋಟೆಯ ಹೊರಗೆ, ಯಾವಾಗಲೂ ಪತ್ರವನ್ನು ಹಿಂದೆ ಕಳುಹಿಸಬೇಕಾದ ವಿಳಾಸವನ್ನು ಒದಗಿಸಿರಿ—ನಿಮ್ಮ ಸ್ವಂತ ಅಂಚೆ ವಿಳಾಸವನ್ನು ಕೊಟ್ಟರೆ ಒಳ್ಳೇದು. ಪತ್ರದ ಮೂಲಕ ಅಪರಿಚಿತರಿಗೆ ಸಾಕ್ಷಿಯನ್ನು ಕೊಡುವಾಗ, ನಿಮ್ಮ ಸ್ವಂತ ವಿಳಾಸವನ್ನು ಕೊಡುವುದು ಅಷ್ಟು ವಿವೇಚನೀಯವಲ್ಲವೆಂದು ನಿಮಗನಿಸುವಲ್ಲಿ, ಸ್ಥಳಿಕ ರಾಜ್ಯ ಸಭಾಗೃಹದ ವಿಳಾಸವನ್ನು ಮರುವಿಳಾಸವಾಗಿ ಉಪಯೋಗಿಸಲು ಅನುಮತಿ ನೀಡುವಿರೋ ಎಂದು ಹಿರಿಯರನ್ನು ಕೇಳಿರಿ. ಬ್ರಾಂಚ್ ಆಫೀಸಿನ ವಿಳಾಸವನ್ನು ಎಂದಿಗೂ ಹಿಂದೆ ಕಳುಹಿಸುವ ವಿಳಾಸವಾಗಿ ಉಪಯೋಗಿಸಬಾರದು. ಏಕೆಂದರೆ ಆಗ ನಿಮ್ಮ ಪತ್ರವನ್ನು ಬ್ರಾಂಚ್ ಆಫೀಸು ಕಳುಹಿಸಿದೆ ಎಂದು ತಪ್ಪಾಗಿ ಸೂಚಿಸಿದಂತಾಗಿ, ಅದು ಗಲಿಬಿಲಿಗೆ ಕಾರಣವಾಗಬಹುದು. ಪತ್ರದಲ್ಲಿ ಹಿಂದೆ ಕಳುಹಿಸುವ ವಿಳಾಸ ಕೊಡದೆ, ಅದರೊಂದಿಗೆ ಸಾಹಿತ್ಯವನ್ನು ಸೇರಿಸುವಲ್ಲಿಯೂ, ಸೊಸೈಟಿಯೇ ಇದನ್ನು ಕಳುಹಿಸಿದೆ ಎಂಬ ತಪ್ಪಭಿಪ್ರಾಯವನ್ನು ಇದು ಮೂಡಿಸಬಹುದು.
ಒಂದುವೇಳೆ ನೀವು ಸಾಹಿತ್ಯವನ್ನು ಒಳಗಿಟ್ಟು ಕಳುಹಿಸುವಲ್ಲಿ, ಸಾಕಷ್ಟು ಬೆಲೆಯ ಅಂಚೆಚೀಟಿಯು ಅಂಟಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಕಷ್ಟು ಬೆಲೆಯ ಅಂಚೆಚೀಟಿ ಇಲ್ಲದಿರುವಲ್ಲಿ, ಅದರ ಬೆಲೆಯನ್ನು ವಿಳಾಸದಾರನು ತೆರಬೇಕಾಗಬಹುದು ಮತ್ತು ಇದು ನಿಮ್ಮ ಸಂದೇಶಕ್ಕೆ ಕುಂದನ್ನು ತಂದೀತು. ಅನೇಕ ದೇಶಗಳಲ್ಲಿ ಪತ್ರದೊಂದಿಗೆ ಒಂದು ಬ್ರೋಷರನ್ನೊ ಪತ್ರಿಕೆಯನ್ನೊ ಸೇರಿಸಿ ಕಳುಹಿಸುವಲ್ಲಿ, ಅಂಚೆಬೆಲೆಯು ಕೇವಲ ಪತ್ರಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಾಗಿರುತ್ತದೆ ಎಂಬುದು ನೆನಪಿರಲಿ.
ಯೋಗ್ಯ ಶೈಲಿ
ನಿಮ್ಮ ಪತ್ರವನ್ನು ಬರೆದು ಮುಗಿಸಿದ ಬಳಿಕ, ಅದರಲ್ಲಿ ಅಡಕವಾಗಿರುವ ವಿಷಯವನ್ನು ಮೌಲ್ಯಮಾಪನ ಮಾಡಲಿಕ್ಕಾಗಿ ಓದಿನೋಡಿ. ಅದು ಹೇಗಿದೆ? ಸ್ನೇಹಪರತೆ ಮತ್ತು ಸಮಯೋಚಿತ ನಯ ಅದರಲ್ಲಿದೆಯೊ? ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ, ಬೇರೆ ಗುಣಗಳೊಂದಿಗೆ ನಾವು ಪ್ರೀತಿ ಮತ್ತು ದಯೆಯನ್ನು ತೋರಿಸಲು ಪ್ರಯತ್ನಿಸುತ್ತೇವೆ. (ಗಲಾ. 5:22, 23) ಆದುದರಿಂದ, ನಿಮಗೆ ನಕಾರಾತ್ಮಕ ಶೈಲಿಯೊ ನಿರಾಶಾವಾದವೊ ಕಂಡುಬರುವಲ್ಲಿ, ಆ ಮಾತುಗಳನ್ನು ಸರಿಮಾಡಿ ಬರೆಯಿರಿ.
ಒಂದು ಪತ್ರವು ನೀವು ಹೋಗಲು ಅಸಾಧ್ಯವಾಗಿರುವಂಥ ಸ್ಥಳಗಳಿಗೆಲ್ಲ ಹೋಗಬಲ್ಲದು. ಈ ನಿಜತ್ವವೇ ಅದನ್ನು ಶುಶ್ರೂಷೆಯ ಗಮನಾರ್ಹವಾದ ಸಾಧನವಾಗಿ ಮಾಡುತ್ತದೆ. ನಿಮ್ಮ ಪತ್ರವು ನಿಮ್ಮನ್ನು ಮತ್ತು ನೀವು ಮಹತ್ವದ್ದೆಂದೆಣಿಸುವ ವಿಷಯಗಳನ್ನು ಪ್ರತಿನಿಧಿಸುವ ಕಾರಣ, ಅದು ಏನು ಹೇಳುತ್ತದೆ, ಹೇಗೆ ಕಾಣುತ್ತದೆ ಮತ್ತು ಹೇಗೆ ಧ್ವನಿಸುತ್ತದೆ ಎಂಬುದಕ್ಕೆ ಗಮನಕೊಡಿರಿ. ಒಬ್ಬ ಅಮೂಲ್ಯ ವ್ಯಕ್ತಿಯನ್ನು ಜೀವದ ಪಥದಲ್ಲಿ ತೊಡಗಿಸಲು, ಬಲಪಡಿಸಲು ಅಥವಾ ಪ್ರೋತ್ಸಾಹಿಸಲು ಏನು ಬೇಕೊ ಅದನ್ನು ಆ ಪತ್ರವು ಒದಗಿಸಬಹುದು.