ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 8 ಪು. 107-ಪು. 110 ಪ್ಯಾ. 2
  • ಸೂಕ್ತವಾದ ಧ್ವನಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೂಕ್ತವಾದ ಧ್ವನಿ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಧ್ವನಿಯ ಏರಿಳಿತ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಧ್ವನಿಯ ಏರಿಳಿತ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ದೃಷ್ಟಿ ಸಂಪರ್ಕ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 8 ಪು. 107-ಪು. 110 ಪ್ಯಾ. 2

ಅಧ್ಯಾಯ 8

ಸೂಕ್ತವಾದ ಧ್ವನಿ

ನೀವೇನು ಮಾಡುವ ಅಗತ್ಯವಿದೆ?

ಸಾಕಷ್ಟು ಗಟ್ಟಿಯಾಗಿ ಅಥವಾ ಧ್ವನಿಯ ತೀವ್ರತೆಯಿಂದ ಮಾತಾಡಿರಿ. ಸೂಕ್ತವಾದ ಧ್ವನಿ ಎಂದರೆ ಎಷ್ಟು ಎಂಬುದನ್ನು ನಿರ್ಧರಿಸಲಿಕ್ಕಾಗಿ, (1) ನಿಮ್ಮ ಸಭಿಕರ ಸಂಖ್ಯೆ ಮತ್ತು ಸಭಿಕರಲ್ಲಿ ಎಂತಹ ಜನರಿದ್ದಾರೆ, (2) ಅಪಕರ್ಷಕ ಸದ್ದುಗಳು, (3) ಚರ್ಚಿಸಲ್ಪಡುತ್ತಿರುವ ವಿಷಯಭಾಗ, ಮತ್ತು (4) ನಿಮ್ಮ ಉದ್ದೇಶವನ್ನು ಪರಿಗಣಿಸಿ.

ಇದು ಪ್ರಾಮುಖ್ಯವೇಕೆ?

ನಿಮ್ಮ ಮಾತು ಇತರರಿಗೆ ಸುಲಭವಾಗಿ ಕೇಳಿಬರದಿರುವಲ್ಲಿ, ಅವರ ಮನಸ್ಸು ಅಲೆದಾಡಬಹುದು ಮತ್ತು ನೀವು ಕೊಡುವ ಮಾಹಿತಿಯು ಅವರಿಗೆ ಸ್ಪಷ್ಟವಾಗಲಿಕ್ಕಿಲ್ಲ. ನೀವು ತೀರ ಗಟ್ಟಿಯಾಗಿ ಮಾತಾಡುವಲ್ಲಿ, ಜನರಿಗೆ ಕಿರಿಕಿರಿಯಾಗಬಹುದು ಮತ್ತು ಅದು ಅವಮರ್ಯಾದೆಯದ್ದೂ ಆಗಿ ಕಂಡುಬರಬಹುದು.

ಸಾರ್ವಜನಿಕ ಭಾಷಣಕಾರನು ಸಾಕಷ್ಟು ಗಟ್ಟಿಯಾಗಿ ಮಾತನಾಡದಿರುವಲ್ಲಿ, ಸಭಿಕರಲ್ಲಿ ಕೆಲವರು ತೂಕಡಿಸಲಾರಂಭಿಸಬಹುದು. ಒಬ್ಬ ಪ್ರಚಾರಕನು ಕ್ಷೇತ್ರ ಶುಶ್ರೂಷೆಯಲ್ಲಿ ತೀರ ತಗ್ಗುದನಿಯಲ್ಲಿ ಮಾತನಾಡುವುದಾದರೆ, ಮನೆಯವನ ಗಮನವನ್ನು ಅವನು ಸೆರೆಹಿಡಿದಿಟ್ಟುಕೊಳ್ಳಲು ಸಾಧ್ಯವಿರಲಿಕ್ಕಿಲ್ಲ. ಮತ್ತು ಕೂಟಗಳಲ್ಲಿ, ಸಭಿಕರ ಉತ್ತರಗಳು ಸಾಕಷ್ಟು ಗಟ್ಟಿಯಾದ ಧ್ವನಿಯಿಂದ ಕೊಡಲ್ಪಡದಿರುವಲ್ಲಿ, ಹಾಜರಿರುವ ಇತರರಿಗೆ ಬೇಕಾಗಿರುವ ಪ್ರೋತ್ಸಾಹವು ದೊರೆಯುವುದಿಲ್ಲ. (ಇಬ್ರಿ. 10:24, 25) ಇನ್ನೊಂದು ಕಡೆಯಲ್ಲಿ, ಭಾಷಣಕಾರನು ತಪ್ಪಾದ ಸ್ಥಳದಲ್ಲಿ ಧ್ವನಿಯನ್ನು ಏರಿಸಿ ಮಾತನಾಡುವಲ್ಲಿ, ಸಭಿಕರು ತಮ್ಮ ನೆಮ್ಮದಿಯನ್ನು ಕಳೆದುಕೊಳ್ಳಬಹುದು ಮಾತ್ರವಲ್ಲ ರೇಗಿಕೊಳ್ಳುವ ಸಾಧ್ಯತೆಯೂ ಇದೆ.—ಜ್ಞಾನೋ. 27:14.

ನಿಮ್ಮ ಸಭಿಕರನ್ನು ಪರಿಗಣಿಸಿ. ನೀವು ಯಾರೊಂದಿಗೆ ಮಾತಾಡುತ್ತಿದ್ದೀರಿ? ಒಬ್ಬ ವ್ಯಕ್ತಿಯೊಂದಿಗೆ ಮಾತ್ರವೊ? ಒಂದು ಕುಟುಂಬಕ್ಕೊ? ಕ್ಷೇತ್ರ ಸೇವೆಗಾಗಿ ಕೂಡಿಬಂದಿರುವ ಒಂದು ಚಿಕ್ಕ ಗುಂಪಿಗೊ? ಇಡೀ ಸಭೆಗೊ? ಅಥವಾ ದೊಡ್ಡ ಅಧಿವೇಶನಕ್ಕೊ? ಒಂದು ಸನ್ನಿವೇಶಕ್ಕೆ ಸೂಕ್ತವಾಗಿರುವ ಧ್ವನಿಯ ಪ್ರಮಾಣವು ಇನ್ನೊಂದು ಸನ್ನಿವೇಶಕ್ಕೆ ಸೂಕ್ತವಾಗಿರುವುದಿಲ್ಲವೆಂಬುದು ಸುವ್ಯಕ್ತ.

ದೇವರ ಸೇವಕರು ವಿವಿಧ ಸಂದರ್ಭಗಳಲ್ಲಿ ದೊಡ್ಡ ಜನಸಮೂಹಗಳನ್ನು ಸಂಬೋಧಿಸಿ ಮಾತನಾಡಿದ್ದಾರೆ. ರಾಜನಾದ ಸೊಲೊಮೋನನ ಸಮಯದಲ್ಲಿ ನಡೆದ ಯೆರೂಸಲೇಮಿನ ದೇವಾಲಯದ ಉದ್ಘಾಟನೆಯಲ್ಲಿ, ಧ್ವನಿವರ್ಧಕ ಸಾಧನಗಳಿರಲಿಲ್ಲ. ಆದಕಾರಣ ಸೊಲೊಮೋನನು ಒಂದು ಎತ್ತರವಾದ ವೇದಿಕೆಯ ಮೇಲೆ ನಿಂತು, “ಗಟ್ಟಿಯಾಗಿ” ಜನರನ್ನು ಹರಸಿದನು. (1 ಅರ. 8:55; 2 ಪೂರ್ವ. 6:13) ಶತಮಾನಗಳು ಕಳೆದ ಬಳಿಕ, ಸಾ.ಶ. 33 ರ ಪಂಚಾಶತ್ತಮದಲ್ಲಿ ಪವಿತ್ರಾತ್ಮವು ಸುರಿಸಲ್ಪಟ್ಟಾಗ, ಆಸಕ್ತರಾಗಿದ್ದ ಕೆಲವರು ಮತ್ತು ಕುಚೋದ್ಯಮಾಡುತ್ತಿದ್ದ ಇನ್ನು ಕೆಲವರಿದ್ದ ಜನರ ಗುಂಪೊಂದು ಯೆರೂಸಲೇಮಿನಲ್ಲಿದ್ದ ಕ್ರೈಸ್ತರ ಚಿಕ್ಕ ಗುಂಪಿನೊಂದಿಗೆ ನೆರೆದುಬಂದಿತ್ತು. ಆಗ ಪ್ರಾಯೋಗಿಕ ವಿವೇಕವನ್ನು ತೋರಿಸುತ್ತಾ ಪೇತ್ರನು, “ಎದ್ದು ನಿಂತು ಘಟ್ಟಿಯಾದ ಧ್ವನಿಯಿಂದ” ಅವರೊಂದಿಗೆ ಮಾತಾಡಿದನು. (ಅ. ಕೃ. 2:14) ಹೀಗೆ, ಬಲವಾದ ಸಾಕ್ಷಿಯೊಂದು ಕೊಡಲ್ಪಟ್ಟಿತು.

ಒಂದು ನಿರ್ದಿಷ್ಟ ಸಂದರ್ಭದಲ್ಲಿ ನೀವು ಉಪಯೋಗಿಸುತ್ತಿರುವ ಧ್ವನಿಯು ಸೂಕ್ತವಾದದ್ದಾಗಿದೆ ಎಂದು ನೀವು ಹೇಗೆ ಹೇಳಬಲ್ಲಿರಿ? ಸಭಿಕರ ಪ್ರತಿಕ್ರಿಯೆಯು ಒಂದು ಅತ್ಯುತ್ತಮವಾದ ಮಾಪಕವಾಗಿದೆ. ನಿಮ್ಮ ಸಭಿಕರಲ್ಲಿ ಕೆಲವರು ಕೇಳಿಸಿಕೊಳ್ಳಲು ಪ್ರಯಾಸಪಟ್ಟು ಕಿವಿಚಾಚುತ್ತಿರುವುದನ್ನು ನೀವು ಗಮನಿಸುವಲ್ಲಿ, ನಿಮ್ಮ ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಬೇಕು.

ನಾವು ಒಬ್ಬ ವ್ಯಕ್ತಿಯೊಂದಿಗೆ ಮಾತಾಡುತ್ತಿರಲಿ, ಅಥವಾ ಒಂದು ಗುಂಪಿಗೆ ಮಾತಾಡುತ್ತಿರಲಿ, ಸಭಿಕರಲ್ಲಿ ಎಂತಹ ಜನರಿದ್ದಾರೆ ಎಂಬುದನ್ನು ಪರಿಗಣಿಸುವುದು ವಿವೇಕಯುತವಾದದ್ದಾಗಿದೆ. ಸ್ವಲ್ಪ ಕಿವುಡರಾಗಿರುವ ಯಾರಾದರೂ ಇರುವಲ್ಲಿ, ನಿಮ್ಮ ಧ್ವನಿಯನ್ನು ನೀವು ಸ್ವಲ್ಪ ಏರಿಸಬೇಕಾದೀತು. ಆದರೆ ಕೇವಲ ವೃದ್ಧಾಪ್ಯದ ಕಾರಣ ಪ್ರತಿವರ್ತಿಸಲು ನಿಧಾನಿಸುವವರಿಗೆ ನೀವು ಕಿರಿಚಿ ಮಾತಾಡುವುದಾದರೆ, ಅದು ನಿಮ್ಮನ್ನು ಅವರಿಗೆ ಪ್ರೀತಿಪಾತ್ರರನ್ನಾಗಿ ಮಾಡುವುದಿಲ್ಲ. ಹಾಗೆ ಕಿರಿಚಾಡುವುದು ಅಸಭ್ಯತೆಯ ಚಿಹ್ನೆಯಾಗಿಯೂ ಪರಿಗಣಿಸಲ್ಪಡಬಹುದು. ಕೆಲವು ಸಂಸ್ಕೃತಿಗಳಲ್ಲಿ, ವಿಪರೀತವಾಗಿ ಏರಿಸಿದ ಧ್ವನಿಯು, ಒಬ್ಬನು ಕೋಪಗೊಂಡಿದ್ದಾನೆ ಅಥವಾ ಅವನು ಅಸಹನೆಯನ್ನು ತೋರಿಸುವ ವ್ಯಕ್ತಿಯಾಗಿದ್ದಾನೆ ಎಂಬುದರ ಪುರಾವೆಯಾಗಿ ಪರಿಗಣಿಸಲ್ಪಡುತ್ತದೆ.

ಅಪಕರ್ಷಕ ಸದ್ದುಗಳನ್ನು ಪರಿಗಣಿಸಿರಿ. ನೀವು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಎದುರಿಸುವ ಪರಿಸ್ಥಿತಿಗಳು, ಸಾಕ್ಷಿಯನ್ನು ನೀಡಲು ಬೇಕಾಗುವ ಧ್ವನಿಯ ಮಟ್ಟವನ್ನು ನಿಶ್ಚಯವಾಗಿಯೂ ಪ್ರಭಾವಿಸುತ್ತವೆ. ನಿಮಗೆ ಆಗ ವಾಹನಗಳ ಸದ್ದು, ತುಂಟ ಮಕ್ಕಳು, ಬೊಗಳುತ್ತಿರುವ ನಾಯಿಗಳು, ಗಟ್ಟಿಯಾದ ಸಂಗೀತ ಅಥವಾ ಜೋರಾಗಿ ಹಾಕಿರುವ ಟಿ.ವಿ.ಯ ಧ್ವನಿಯೊಂದಿಗೆ ಸ್ಪರ್ಧಿಸಬೇಕಾಗಬಹುದು. ಇನ್ನೊಂದು ಕಡೆಯಲ್ಲಿ, ಮನೆಗಳು ತುಂಬ ಹತ್ತಿರ ಹತ್ತಿರವಿರುವಂಥ ಕ್ಷೇತ್ರಗಳಲ್ಲಿ, ನೆರೆಯವರ ಗಮನವನ್ನು ಸೆಳೆಯುವಷ್ಟು ಗಟ್ಟಿಯಾಗಿ ನೀವು ಮಾತಾಡುವುದಾದರೆ, ಅದು ಮನೆಯವನನ್ನು ಪೇಚಾಟಕ್ಕೀಡುಮಾಡೀತು.

ಸಭೆಯಲ್ಲಿ ಅಥವಾ ಅಧಿವೇಶನಗಳಲ್ಲಿ ಭಾಷಣ ನೀಡುವ ಸಹೋದರರಿಗೂ, ಎಷ್ಟೋ ವಿಧದ ಪರಿಸ್ಥಿತಿಗಳನ್ನು ನಿಭಾಯಿಸಲಿಕ್ಕಿರುತ್ತದೆ. ಹೊರಾಂಗಣದಲ್ಲಿರುವ ಸಭಿಕರಿಗೆ ಮಾತಾಡುವುದಕ್ಕೂ ಉತ್ತಮ ಧ್ವನಿವಿಜ್ಞಾನ ಸೌಕರ್ಯಗಳಿರುವ ಸಭಾಗೃಹದಲ್ಲಿ ಮಾತಾಡುವುದಕ್ಕೂ ತುಂಬ ವ್ಯತ್ಯಾಸವಿದೆ. ಲ್ಯಾಟಿನ್‌ ಅಮೆರಿಕದಲ್ಲಿ ಇಬ್ಬರು ಮಿಷನೆರಿಗಳು ಒಬ್ಬ ಆಸಕ್ತನ ಮನೆಯ ಅಂಗಣದಲ್ಲಿ ಸಾರ್ವಜನಿಕ ಭಾಷಣವನ್ನು ನೀಡುತ್ತಿದ್ದಾಗ, ಸಮೀಪದ ಬೀದಿಚೌಕದಲ್ಲಿ ಪಟಾಕಿಗಳನ್ನು ಹೊಡೆಯಲಾಗುತ್ತಿತ್ತು ಮಾತ್ರವಲ್ಲ, ಹತ್ತಿರದಲ್ಲಿ ಹುಂಜವು ಒಂದೇ ಸಮನೆ ಕೂಗುತ್ತಾ ಇತ್ತು!

ಭಾಷಣದ ಮಧ್ಯದಲ್ಲಿ, ತೊಂದರೆಯು ಮುಗಿಯುವ ತನಕ ನಿಲ್ಲಿಸುವಂತೆ ನಿರ್ಬಂಧಿಸುವ ಅಥವಾ ಧ್ವನಿಯನ್ನು ಏರಿಸುವಂತೆ ಕೇಳಿಕೊಳ್ಳುವ ಏನಾದರೂ ಸಂಭವಿಸೀತು. ಉದಾಹರಣೆಗೆ, ಟಿನ್ನಿನ ಚಾವಣಿ ಇರುವ ಕಟ್ಟಡದಲ್ಲಿ ಕೂಟವು ನಡೆಯುತ್ತಿರುವಾಗ ಥಟ್ಟನೆ ಧಾರಾಕಾರವಾಗಿ ಮಳೆಯು ಸುರಿಯುವಲ್ಲಿ, ಸಭಿಕರಿಗೆ ಭಾಷಣಕಾರನ ಸ್ವರವನ್ನು ಕೇಳಿಸಿಕೊಳ್ಳುವುದೇ ಹೆಚ್ಚುಕಡಿಮೆ ಅಸಾಧ್ಯವಾಗಬಹುದು. ಅಳುತ್ತಿರುವ ಮಗು ಇಲ್ಲವೆ ತಡವಾಗಿ ಬರುವವರು ಮಾಡುವ ಸದ್ದು ಒಂದು ಪಂಥಾಹ್ವಾನವನ್ನು ಒಡ್ಡುವುದಂತೂ ಖಂಡಿತ. ಇಂತಹ ಅಪಕರ್ಷಣೆಗಳಿಗನುಸಾರ ನಿಮ್ಮ ಧ್ವನಿಯನ್ನು ಸರಿದೂಗಿಸಲು ಕಲಿಯಿರಿ. ಆಗ ನೀವು ನೀಡುತ್ತಿರುವ ಮಾಹಿತಿಯಿಂದ ನಿಮ್ಮ ಸಭಿಕರು ಪೂರ್ಣ ರೀತಿಯಲ್ಲಿ ಪ್ರಯೋಜನವನ್ನು ಪಡೆಯಬಲ್ಲರು.

ಒಂದುವೇಳೆ ಲಭ್ಯವಿರುವಲ್ಲಿ ಧ್ವನಿವರ್ಧಕ ಉಪಕರಣಗಳು ಉಪಯುಕ್ತವಾಗಿರುವುದಾದರೂ, ಅಗತ್ಯವಿರುವಲ್ಲಿ ಭಾಷಣಕಾರನು ಧ್ವನಿಯನ್ನು ಹೆಚ್ಚಿಸಬೇಕೆಂಬ ಅಗತ್ಯವನ್ನು ಇದು ನಿವಾರಿಸುವುದಿಲ್ಲ. ವಿದ್ಯುಚ್ಛಕ್ತಿ ಕಡಿತಗಳು ಪದೇ ಪದೇ ಸಂಭವಿಸುವಂಥ ಕೆಲವು ಸ್ಥಳಗಳಲ್ಲಿ, ಭಾಷಣಕಾರರು ಮೈಕ್ರೋಫೋನಿನ ನೆರವಿಲ್ಲದೇ ಮಾತಾಡುವುದನ್ನು ಮುಂದುವರಿಸುವ ನಿರ್ಬಂಧಕ್ಕೊಳಗಾಗುತ್ತಾರೆ.

ಚರ್ಚಿಸಲ್ಪಡುತ್ತಿರುವ ವಿಷಯಭಾಗವನ್ನು ಪರಿಗಣಿಸಿ. ನಿಮ್ಮ ಭಾಷಣದಲ್ಲಿರುವ ಮಾಹಿತಿಯ ಸ್ವರೂಪವು ಸಹ ಎಷ್ಟು ಗಟ್ಟಿಯಾದ ಧ್ವನಿಯು ಅಗತ್ಯವಿದೆಯೆಂಬುದರ ಮೇಲೆ ಪ್ರಭಾವ ಬೀರುತ್ತದೆ. ವಿಷಯವಸ್ತು ಬಲವತ್ತಾಗಿ ಮಾತಾಡುವುದನ್ನು ಕೇಳಿಕೊಳ್ಳುವಾಗ, ತೀರ ಮೃದುವಾಗಿ ಮಾತನಾಡಿ ನಿಮ್ಮ ಭಾಷಣವನ್ನು ಕ್ಷೀಣಿಸಬೇಡಿ. ಉದಾಹರಣೆಗೆ, ನೀವು ಶಾಸ್ತ್ರವಚನಗಳಿಂದ ಶಾಪದ ಮಾತುಗಳನ್ನು ಓದುತ್ತಿರುವಾಗ, ನಿಮ್ಮ ಧ್ವನಿಯ ಮಟ್ಟವು, ಪ್ರೀತಿಯನ್ನು ತೋರಿಸುವುದರ ಕುರಿತಾದ ಬುದ್ಧಿವಾದವನ್ನು ಓದುತ್ತಿರುವಾಗ ಇರುವುದಕ್ಕಿಂತ ಹೆಚ್ಚು ಬಲವತ್ತಾಗಿರಬೇಕು. ನಿಮ್ಮ ಧ್ವನಿಯ ಮಟ್ಟವನ್ನು ವಿಷಯಭಾಗಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿರಿ. ಆದರೆ ನಿಮ್ಮ ಧ್ವನಿಯು ಗಮನವನ್ನು ನಿಮ್ಮ ಕಡೆಗೆ ಸೆಳೆಯದಂಥ ರೀತಿಯಲ್ಲಿ ಅದನ್ನು ಮಾಡುವಂತೆ ಜಾಗ್ರತೆ ವಹಿಸಿರಿ.

ನಿಮ್ಮ ಉದ್ದೇಶವನ್ನು ಪರಿಗಣಿಸಿ. ನೀವು ನಿಮ್ಮ ಸಭಿಕರನ್ನು ಹುರುಪಿನ ಚಟುವಟಿಕೆಗೆ ಉತ್ತೇಜಿಸಲು ಬಯಸುವುದಾದರೆ, ಹೆಚ್ಚು ಬಲವತ್ತಾದ ಧ್ವನಿಯನ್ನು ಉಪಯೋಗಿಸಬೇಕಾಗಬಹುದು. ಅವರ ಆಲೋಚನಾ ಧಾಟಿಯನ್ನು ಬದಲಾಯಿಸಲು ನೀವು ಬಯಸುವಲ್ಲಿ, ವಿಪರೀತವಾದ ಧ್ವನಿಮಟ್ಟವನ್ನು ಉಪಯೋಗಿಸುವ ಮೂಲಕ ಅವರನ್ನು ವಿಕರ್ಷಿಸದಿರಿ. ನೀವು ಸಾಂತ್ವನ ನೀಡಲು ಪ್ರಯತ್ನಿಸುತ್ತಿರುವುದಾದರೆ, ಸಾಮಾನ್ಯವಾಗಿ ಹೆಚ್ಚು ಮೃದುವಾದ ಧ್ವನಿಯು ಉತ್ತಮವಾದದ್ದಾಗಿದೆ.

ಹೆಚ್ಚಿಸಿದ ಧ್ವನಿಮಟ್ಟದ ಪರಿಣಾಮಕಾರಿ ಉಪಯೋಗ. ನೀವು ತುಂಬ ಕಾರ್ಯನಿರತರಾಗಿರುವವರ ಗಮನವನ್ನು ಸೆಳೆಯಲು ಪ್ರಯತ್ನಿಸುವಲ್ಲಿ, ಹೆಚ್ಚಿಸಿದ ಧ್ವನಿಮಟ್ಟವು ಅನೇಕವೇಳೆ ಸಹಾಯಕರವಾಗಿರುತ್ತದೆ. ಹೆತ್ತವರಿಗೆ ಇದು ಗೊತ್ತಿರುವುದರಿಂದ, ಅವರು ತಮ್ಮ ಮಕ್ಕಳು ಆಟದಿಂದ ಹಿಂದೆ ಬರುವ ಸಮಯವಾದಾಗ, ಅವರನ್ನು ಗಟ್ಟಿಯಾದ ಧ್ವನಿಯಿಂದ ಕರೆಯುತ್ತಾರೆ. ಅಧ್ಯಕ್ಷನು ಸಭಾ ಕೂಟಕ್ಕೆ ಅಥವಾ ಸಮ್ಮೇಳನಕ್ಕೆ ಅದು ಆರಂಭವಾಗುವ ಸಮಯವಾಯಿತೆಂದು ಹೇಳಿ ಕರೆಕೊಡುವಾಗಲೂ ಹೆಚ್ಚಿಸಿದ ಧ್ವನಿಯ ಅಗತ್ಯವಿದ್ದೀತು. ಪ್ರಚಾರಕರು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ಮನೆಯ ಹೊರಗಡೆ ಕೆಲಸ ಮಾಡುತ್ತಿರುವವರನ್ನು ಗಟ್ಟಿಯಾಗಿ ಕರೆದು ವಂದಿಸಬಹುದು.

ಒಬ್ಬನ ಗಮನವನ್ನು ಸೆಳೆದಾದ ಬಳಿಕವೂ ಸಾಕಷ್ಟು ಗಟ್ಟಿಯಾದ ಧ್ವನಿಯನ್ನು ಉಪಯೋಗಿಸಿ ಮಾತಾಡುವುದು ಪ್ರಾಮುಖ್ಯವಾಗಿದೆ. ತೀರ ಮೃದುವಾದ ಸ್ವರವು, ಭಾಷಣಕಾರನು ಸರಿಯಾಗಿ ತಯಾರಿಸಿಲ್ಲ ಅಥವಾ ಅವನಿಗೆ ವಿಷಯದ ಬಗ್ಗೆ ನಿಶ್ಚಿತಾಭಿಪ್ರಾಯವಿಲ್ಲ ಎಂಬ ಅಭಿಪ್ರಾಯವನ್ನು ಮೂಡಿಸಬಹುದು.

ಉಚ್ಚ ಸ್ವರದಲ್ಲಿ ಕೊಡಲ್ಪಡುವ ಆಜ್ಞೆಯು ಜನರನ್ನು ಕ್ರಿಯೆಗೈಯುವಂತೆ ಪ್ರಚೋದಿಸಬಲ್ಲದು. (ಅ. ಕೃ. 14:9, 10) ಅದೇ ರೀತಿ, ಗಟ್ಟಿಯಾಗಿ ಕೂಗಿ ಹೇಳಿದ ಆಜ್ಞೆಯು ವಿಪತ್ತನ್ನು ತಪ್ಪಿಸಬಹುದು. ಫಿಲಿಪ್ಪಿ ಪಟ್ಟಣದಲ್ಲಿ ಒಬ್ಬ ಸೆರೆಯ ಯಜಮಾನನು, ಸೆರೆಯಲ್ಲಿದ್ದವರು ಪರಾರಿಯಾಗಿದ್ದಾರೆಂದು ನೆನಸಿ ತನ್ನನ್ನು ಇನ್ನೇನು ಸಾಯಿಸಿಕೊಳ್ಳುವುದರಲ್ಲಿದ್ದನು. “ಆದರೆ ಪೌಲನು ಮಹಾ ಶಬ್ದದಿಂದ ಕೂಗಿ ಅವನಿಗೆ—ನೀನೇನೂ ಕೇಡು ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಹೇಳಿದನು. ಈ ರೀತಿಯಲ್ಲಿ ಒಂದು ಆತ್ಮಹತ್ಯೆಯು ತಪ್ಪಿಸಲ್ಪಟ್ಟಿತು. ತದನಂತರ ಪೌಲ ಮತ್ತು ಸೀಲರು ಆ ಸೆರೆಯ ಯಜಮಾನನಿಗೆ ಹಾಗೂ ಅವನ ಮನೆಯವರೆಲ್ಲರಿಗೆ ಸಾಕ್ಷಿ ನೀಡಿದರು; ಅವರೆಲ್ಲರೂ ಸತ್ಯವನ್ನು ತಮ್ಮದಾಗಿ ಮಾಡಿಕೊಂಡರು.—ಅ. ಕೃ. 16:27-33.

ನಿಮ್ಮ ಧ್ವನಿಯನ್ನು ಉತ್ತಮಗೊಳಿಸುವ ವಿಧ. ಕೆಲವರಿಗೆ ಸೂಕ್ತವಾದ ಧ್ವನಿಯನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಕಲಿಯಲು ಅತ್ಯಧಿಕ ಪ್ರಯತ್ನದ ಅಗತ್ಯವಿರುತ್ತದೆ. ಸ್ವರವು ಕ್ಷೀಣವಾಗಿರುವುದರಿಂದ ಒಬ್ಬನು ಸಾಕಷ್ಟು ಗಟ್ಟಿಯಾಗಿ ಮಾತಾಡದೆ ಇರಬಹುದು. ಆದರೆ, ಅವನು ಇನ್ನೂ ಮೃದುಮಾತಿನವನಾಗಿಯೇ ಉಳಿಯಬಹುದಾದರೂ, ಪ್ರಯತ್ನಪಡುವಲ್ಲಿ ಪ್ರಗತಿಯನ್ನು ಮಾಡಲು ಸಾಧ್ಯವಾಗಬಹುದು. ಉಸಿರಾಟ ಮತ್ತು ದೇಹಭಂಗಿಗೆ ಗಮನಕೊಡಿರಿ. ನೆಟ್ಟಗೆ ಕುಳಿತುಕೊಳ್ಳುವುದನ್ನು ಮತ್ತು ನಿಂತುಕೊಳ್ಳುವುದನ್ನು ಅಭ್ಯಾಸಮಾಡಿ. ನಿಮ್ಮ ಭುಜಗಳನ್ನು ಹಿಂದಕ್ಕೆ ಸರಿಸಿ, ಗಾಢವಾಗಿ ಉಸಿರೆಳೆಯಿರಿ. ನಿಮ್ಮ ಶ್ವಾಸಕೋಶದ ಕೆಳಭಾಗವು ಗಾಳಿಯಿಂದ ತುಂಬುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಮಾತನಾಡುವಾಗ ನಿಮ್ಮ ಧ್ವನಿಯ ಮಟ್ಟವನ್ನು ನಿಯಂತ್ರಿಸಲು ನಿಮಗೆ ಸಾಧ್ಯಮಾಡುವಂಥದ್ದು, ಸರಿಯಾಗಿ ಕ್ರಮಪಡಿಸಲಾಗುವ ಈ ಗಾಳಿಯ ಸರಬರಾಯಿಯೇ.

ಇತರರಿಗಾದರೊ ವಿಪರೀತ ಗಟ್ಟಿಯಾಗಿ ಮಾತಾಡುವುದೇ ಸಮಸ್ಯೆಯಾಗಿದೆ. ಹೊರಾಂಗಣದಲ್ಲೋ ಅಥವಾ ಒಂದು ಗದ್ದಲಭರಿತ ಪರಿಸರದಲ್ಲೋ ಕೆಲಸಮಾಡುವುದರ ಫಲಿತಾಂಶವಾಗಿ ಈ ಚಾಳಿಯನ್ನು ಅವರು ಬೆಳೆಸಿಕೊಂಡಿರಬಹುದು. ಇಲ್ಲದಿರುವಲ್ಲಿ, ಅವರು ಎಲ್ಲರೂ ಕಿರುಚಿ ಮಾತನಾಡುವುದು ಮತ್ತು ಅಡ್ಡಿಯನ್ನುಂಟುಮಾಡುವುದು ಸಾಮಾನ್ಯವಾಗಿರುವಂಥ ಹಿನ್ನೆಲೆಯಿಂದ ಬಂದವರಾಗಿರಬಹುದು. ಇದರ ಪರಿಣಾಮವಾಗಿ, ತಾವು ಸಂಭಾಷಣೆಯ ಭಾಗವಾಗಲಿಕ್ಕಾಗಿರುವ ಒಂದೇ ಮಾರ್ಗವು ಇತರರಿಗಿಂತ ಹೆಚ್ಚು ಗಟ್ಟಿಯಾಗಿ ಮಾತನಾಡುವುದೇ ಆಗಿದೆ ಎಂದು ಅವರಿಗನಿಸಬಹುದು. ಆದರೆ ಅವರು, “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿ”ಕೊಳ್ಳುವ ವಿಷಯದಲ್ಲಿ ಕೊಡಲ್ಪಟ್ಟಿರುವ ಬೈಬಲ್‌ ಸಲಹೆಗೆ ಪ್ರಗತಿಪರವಾಗಿ ಗಮನಕೊಡುವಲ್ಲಿ, ಇತರರೊಂದಿಗೆ ಸಂಭಾಷಿಸುವಾಗ ಅವರು ತಮ್ಮ ಧ್ವನಿಮಟ್ಟವನ್ನು ಹೊಂದಿಸಿಕೊಳ್ಳುವರು.—ಕೊಲೊ. 3:12.

ಒಳ್ಳೆಯ ತಯಾರಿ, ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವುದರಿಂದ ಬರುವ ಅನುಭವ, ಮತ್ತು ಯೆಹೋವನಿಗೆ ಮಾಡುವ ಪ್ರಾರ್ಥನೆಯು, ನಾವು ಸೂಕ್ತವಾದ ಧ್ವನಿಯಿಂದ ಮಾತಾಡಲು ಸಹಾಯಮಾಡುವುದು. ನೀವು ವೇದಿಕೆಯಿಂದ ಮಾತಾಡುತ್ತಿರಲಿ ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಒಬ್ಬನೊಂದಿಗೆ ಮಾತಾಡುತ್ತಿರಲಿ, ನೀವು ಹೇಳುವ ಮಾತನ್ನು ಕೇಳಿ ಇನ್ನೊಬ್ಬ ವ್ಯಕ್ತಿಯು ಹೇಗೆ ಸಹಾಯವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದರ ಮೇಲೆ ನಿಮ್ಮ ಯೋಚನೆಗಳನ್ನು ಕೇಂದ್ರೀಕರಿಸಲು ಪ್ರಯತ್ನಿಸಿರಿ.—ಜ್ಞಾನೋ. 18:21.

ಧ್ವನಿಯನ್ನು ಹೆಚ್ಚಿಸಬೇಕಾಗಿರಬಹುದಾದ ಸಂದರ್ಭಗಳು

  • ಜನರ ಒಂದು ದೊಡ್ಡ ಗುಂಪಿನ ಗಮನವನ್ನು ಹಿಡಿದಿಟ್ಟುಕೊಳ್ಳಲಿಕ್ಕಾಗಿ.

  • ಅಪಕರ್ಷಣೆಗಳನ್ನು ನಿಷ್ಫಲಗೊಳಿಸಲಿಕ್ಕಾಗಿ.

  • ಅತಿ ಪ್ರಾಮುಖ್ಯವಾದ ವಿಷಯವನ್ನು ಹೇಳುವಾಗ ಗಮನವನ್ನು ಸೆಳೆಯಲಿಕ್ಕಾಗಿ.

  • ಕ್ರಿಯೆಗೈಯುವಂತೆ ಉತ್ತೇಜಿಸಲಿಕ್ಕಾಗಿ.

  • ಒಬ್ಬನ ಅಥವಾ ಒಂದು ಗುಂಪಿನ ಗಮನವನ್ನು ಸೆಳೆಯಲಿಕ್ಕಾಗಿ.

ಅಭಿವೃದ್ಧಿಮಾಡುವ ವಿಧ

  • ನೀವು ಯಾರೊಂದಿಗೆ ಮಾತಾಡುತ್ತಿದ್ದೀರೊ ಅವರ ಪ್ರತಿಕ್ರಿಯೆಗಳನ್ನು ಅವಲೋಕಿಸುವವರಾಗಿರಿ; ಅವರು ಆರಾಮವಾಗಿ ಕೇಳಿಸಿಕೊಳ್ಳುವಂತೆ ಸಾಕಷ್ಟು ಪ್ರಮಾಣದ ಧ್ವನಿಯನ್ನು ಉಪಯೋಗಿಸಿರಿ.

  • ನೀವು ಉಸಿರಾಡುವಾಗ ಶ್ವಾಸಕೋಶಗಳ ಕೆಳಭಾಗವನ್ನು ತುಂಬಿಸಲು ಕಲಿಯಿರಿ.

ಅಭ್ಯಾಸಪಾಠ: ಪ್ರಥಮವಾಗಿ ಅಪೊಸ್ತಲರ ಕೃತ್ಯಗಳು 19:23-41 ನ್ನು ಮೌನವಾಗಿ ಓದಿ, ಆ ಘಟನೆಯ ವೃತ್ತಾಂತದಲ್ಲಿ ತೋರಿಸಲ್ಪಟ್ಟಿರುವ ಹಿನ್ನೆಲೆಯನ್ನು ಮತ್ತು ಪೂರ್ವಾಪರವನ್ನು ಅರ್ಥಮಾಡಿಕೊಳ್ಳಿ. ಯಾರು ಮಾತಾಡುತ್ತಿದ್ದಾರೆ ಎಂಬುದನ್ನು ಮತ್ತು ತೋರಿಸಲ್ಪಡುತ್ತಿರುವ ಮನೋಭಾವವನ್ನು ಗಮನಿಸಿರಿ. ಆ ಬಳಿಕ ಪ್ರತಿಯೊಂದು ಭಾಗಕ್ಕೆ ಸೂಕ್ತವಾಗಿರುವಷ್ಟು ಗಟ್ಟಿಯಾದ ಧ್ವನಿಯಿಂದ ಅದನ್ನು ಓದಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ