ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 9 ಪು. 111-ಪು. 114 ಪ್ಯಾ. 3
  • ಧ್ವನಿಯ ಏರಿಳಿತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧ್ವನಿಯ ಏರಿಳಿತ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಧ್ವನಿಯ ಏರಿಳಿತ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸೂಕ್ತವಾದ ಧ್ವನಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ವಾಭಾವಿಕತೆ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಂಭಾಷಣಾ ರೀತಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 9 ಪು. 111-ಪು. 114 ಪ್ಯಾ. 3

ಅಧ್ಯಾಯ 9

ಧ್ವನಿಯ ಏರಿಳಿತ

ನೀವೇನು ಮಾಡುವ ಅಗತ್ಯವಿದೆ?

ನಿಮ್ಮ ಸ್ವರದ ಶಬ್ದಪ್ರಮಾಣವನ್ನು ಮಾರ್ಪಡಿಸಿರಿ. ಈ ಅಧ್ಯಯನದಲ್ಲಿ, ನಾವು ಧ್ವನಿಯ ವ್ಯಾಪ್ತಿ, ಅದರ ವೇಗ ಮತ್ತು ಸ್ವರದ ತೀವ್ರತೆಯ ಮಟ್ಟದಲ್ಲಿನ ಬದಲಾವಣೆಗಳನ್ನು ಪರಿಗಣಿಸುತ್ತೇವೆ.

ಇದು ಪ್ರಾಮುಖ್ಯವೇಕೆ?

ಧ್ವನಿಯ ಸರಿಯಾದ ಏರಿಳಿತವು ಭಾಷಣಕ್ಕೆ ಜೀವಕೊಟ್ಟು, ಭಾವಪೂರ್ಣತೆಯನ್ನು ಕೆರಳಿಸಿ, ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ.

ಧ್ವನಿಯಲ್ಲಿ ಯಾವುದೇ ಏರಿಳಿತವಿಲ್ಲದಿರುವಲ್ಲಿ, ನಿಮಗೆ ಆ ವಿಷಯದಲ್ಲಿ ನಿಜವಾಗಿಯೂ ಆಸಕ್ತಿಯಿಲ್ಲ ಎಂಬ ಅಭಿಪ್ರಾಯವನ್ನು ಇದು ಕೊಡಬಹುದು.

ಸರಳ ಅರ್ಥಒತ್ತಿನ ನಿಮ್ಮ ಉಪಯೋಗವು, ನೀವು ಏನು ಹೇಳುತ್ತೀರೋ ಅದನ್ನು ಅರ್ಥಮಾಡಿಕೊಳ್ಳುವಂತೆ ಸಭಿಕರಿಗೆ ಸಹಾಯಮಾಡುತ್ತದೆ. ಆದರೆ ಧ್ವನಿಯ ವ್ಯಾಪ್ತಿ, ಅದರ ವೇಗ ಮತ್ತು ಸ್ವರದ ತೀವ್ರತೆಯಲ್ಲಿ ನೀವು ವೈವಿಧ್ಯವನ್ನು ಸದುಪಯೋಗಿಸುವಲ್ಲಿ, ನಿಮ್ಮ ಭಾಷಣವು ಆಲಿಸಲು ಇನ್ನೂ ಹೆಚ್ಚು ಆನಂದದಾಯಕವಾಗಿರುವುದು. ಅದಲ್ಲದೆ, ನೀವು ಏನು ಮಾತಾಡುತ್ತಿದ್ದೀರೊ ಅದರ ಬಗ್ಗೆ ನಿಮಗೆ ಹೇಗನಿಸುತ್ತದೆಂದೂ ಅದು ನಿಮ್ಮ ಸಭಿಕರಿಗೆ ತಿಳಿಯಪಡಿಸಬಹುದು. ಆ ವಿಷಯದ ಬಗ್ಗೆ ನಿಮಗಿರುವ ಮನೋಭಾವವು, ಅವರಿಗೆ ಅದರ ಬಗ್ಗೆ ಹೇಗನಿಸುತ್ತದೆ ಎಂಬುದನ್ನು ಪ್ರಭಾವಿಸಬಲ್ಲದು. ನೀವು ವೇದಿಕೆಯಿಂದ ಮಾತಾಡುತ್ತಿರಲಿ, ಇಲ್ಲವೆ ಕ್ಷೇತ್ರ ಶುಶ್ರೂಷೆಯಲ್ಲಿ ಒಬ್ಬ ವ್ಯಕ್ತಿಯೊಡನೆ ಮಾತಾಡುತ್ತಿರಲಿ ಇದು ಸತ್ಯವಾಗಿದೆ.

ಮಾನವ ಸ್ವರವು ಅನೇಕ ವೈವಿಧ್ಯಮಯ ಸಾಮರ್ಥ್ಯವಿರುವ ಒಂದು ಅದ್ಭುತಕರ ಸಾಧನವಾಗಿದೆ. ಸರಿಯಾಗಿ ಉಪಯೋಗಿಸುವಲ್ಲಿ, ಅದು ಭಾಷಣಕ್ಕೆ ಜೀವವನ್ನು ಕೊಡಬಲ್ಲದು, ಹೃದಯವನ್ನು ಸ್ಪರ್ಶಿಸಬಲ್ಲದು, ಭಾವಾವೇಶವನ್ನು ಕೆರಳಿಸಬಲ್ಲದು ಮತ್ತು ನಾವು ಕ್ರಿಯೆಗೈಯುವಂತೆ ಪ್ರಚೋದಿಸಬಲ್ಲದು. ಆದರೂ, ಧ್ವನಿಯ ಮಟ್ಟವನ್ನು ಎಲ್ಲಿ ಹೊಂದಿಸಿಕೊಳ್ಳಬೇಕು, ವೇಗವನ್ನು ಬದಲಾಯಿಸಬೇಕು ಅಥವಾ ಸ್ವರದ ತೀವ್ರತೆಯನ್ನು ಮಾರ್ಪಡಿಸಬೇಕು ಎಂಬುದನ್ನು ಸೂಚಿಸಲಿಕ್ಕಾಗಿ ನಿಮ್ಮ ಟಿಪ್ಪಣಿಯಲ್ಲಿ ಕೇವಲ ಗುರುತನ್ನು ಹಾಕುವುದರಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ. ಕೇವಲ ಇಂತಹ ಗುರುತುಗಳನ್ನು ನೋಡಿದಾಕ್ಷಣ ಧ್ವನಿಯನ್ನು ಏರಿಳಿಸುವುದು ಅಸಹಜವಾಗಿ ಕೇಳಿಬರಬಹುದು. ನಿಮ್ಮ ಭಾಷಣಕ್ಕೆ ಜೀವವನ್ನು ತುಂಬಿ ಅದಕ್ಕೆ ಮೆರುಗನ್ನು ನೀಡುವುದಕ್ಕೆ ಬದಲಾಗಿ, ಅದು ನಿಮ್ಮ ಸಭಿಕರು ಕಸಿವಿಸಿಗೊಳ್ಳುವಂತೆ ಮಾಡಬಹುದು. ಧ್ವನಿಯ ಸರಿಯಾದ ಏರಿಳಿತವು ಹೃದಯದಿಂದ ಹೊಮ್ಮುತ್ತದೆ.

ಧ್ವನಿಯ ಏರಿಳಿತವನ್ನು ವಿವೇಕದಿಂದ ಉಪಯೋಗಿಸುವಲ್ಲಿ, ಇದು ಭಾಷಣಕಾರನ ಕಡೆಗೆ ಅನುಚಿತ ಗಮನವನ್ನು ಸೆಳೆಯುವುದಿಲ್ಲ. ಬದಲಿಗೆ, ಸಭಿಕರು ಚರ್ಚಿಸಲ್ಪಡುತ್ತಿರುವ ವಿಷಯವಸ್ತುವಿನ ಇಂಗಿತವನ್ನು ಗ್ರಹಿಸುವಂತೆ ಇದು ಸಹಾಯಮಾಡುವುದು.

ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳಿರಿ. ನಿಮ್ಮ ಮಾತುಗಳನ್ನು ಮಾರ್ಪಡಿಸುವ ಒಂದು ವಿಧವು, ನಿಮ್ಮ ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳುವುದಾಗಿದೆ. ಆದರೆ ಇದು, ಒಮ್ಮೆ ಎತ್ತರದ ಧ್ವನಿ, ನಂತರ ಮೆತ್ತಗಿನ ಧ್ವನಿ ಎಂಬ ಬೇಸರಗೊಳಿಸುವಂಥ ಕೇವಲ ರೂಢಿಯ ಏರಿಳಿತವಾಗಿರಬಾರದು. ಅದು ನೀವು ಏನು ಹೇಳುತ್ತೀರೊ ಅದರ ಅರ್ಥವನ್ನು ಕೆಡಿಸುವುದು. ನೀವು ಧ್ವನಿಯ ಮಟ್ಟವನ್ನು ತೀರ ಹೆಚ್ಚು ಬಾರಿ ಏರಿಸುವಲ್ಲಿ, ಅದು ಅಹಿತಕರವಾದ ಅಭಿಪ್ರಾಯವನ್ನು ಮೂಡಿಸುವುದು.

ನಿಮ್ಮ ಧ್ವನಿಯ ಮಟ್ಟವು ವಿಷಯಕ್ಕನುಸಾರವಾಗಿರಬೇಕು. ನೀವು ಪ್ರಕಟನೆ 14:6, 7 ರಲ್ಲಿ ಅಥವಾ ಪ್ರಕಟನೆ 18:4 ರಲ್ಲಿ ಕಂಡುಬರುವ ತುರ್ತಿನ ಆಜ್ಞೆಯನ್ನು ಓದುವಾಗ, ಇಲ್ಲವೆ ವಿಮೋಚನಕಾಂಡ 14:13, 14 ರಲ್ಲಿರುವ ದೃಢನಿಶ್ಚಿತ ಹೇಳಿಕೆಯನ್ನು ಓದುವಾಗ, ಧ್ವನಿಯನ್ನು ಸಾಕಷ್ಟು ಮಟ್ಟಿಗೆ ಏರಿಸುವುದು ಸೂಕ್ತವಾದದ್ದಾಗಿದೆ. ಅದೇ ರೀತಿ, ಯೆರೆಮೀಯ 25:27-38 ರಲ್ಲಿ ಕಂಡುಬರುವಂತಹ ಬೈಬಲಿನ ಬಲವಾದ ಖಂಡನೆಯನ್ನು ನೀವು ಓದುತ್ತಿರುವುದಾದರೆ, ನಿಮ್ಮ ಧ್ವನಿಯ ಮಟ್ಟವನ್ನು ಬದಲಾಯಿಸುವುದು, ಕೆಲವು ಹೇಳಿಕೆಗಳು ಬೇರೆ ಹೇಳಿಕೆಗಳಿಗಿಂತ ಹೆಚ್ಚಾಗಿ ಎದ್ದುನಿಲ್ಲುವಂತೆ ಮಾಡುವುದು.

ನಿಮ್ಮ ಉದ್ದೇಶವನ್ನೂ ಪರಿಗಣಿಸಿರಿ. ನಿಮ್ಮ ಸಭಿಕರು ಕಾರ್ಯವೆಸಗುವಂತೆ ಅವರನ್ನು ಪ್ರಚೋದಿಸುವುದು ನಿಮ್ಮ ಬಯಕೆಯೊ? ನಿಮ್ಮ ಭಾಷಣದ ಮುಖ್ಯಾಂಶಗಳು ಎದ್ದುಕಾಣಬೇಕೆಂದು ನೀವು ಬಯಸುತ್ತೀರೊ? ಏರಿಸಲ್ಪಟ್ಟಿರುವ ಧ್ವನಿಯ ಮಟ್ಟವನ್ನು ವಿವೇಚನೆಯಿಂದ ಉಪಯೋಗಿಸುವಲ್ಲಿ, ಈ ಉದ್ದೇಶಗಳನ್ನು ಪೂರೈಸಲು ಅದು ಸಹಾಯಮಾಡುತ್ತದೆ. ಆದರೆ ಕೇವಲ ನಿಮ್ಮ ಧ್ವನಿಯನ್ನು ಏರಿಸುವುದು ನಿಮ್ಮ ಉದ್ದೇಶವನ್ನು ವಿಫಲಗೊಳಿಸಬಹುದು. ಹೇಗೆ? ಹೇಗೆಂದರೆ, ನೀವು ಏನು ಹೇಳುತ್ತಿದ್ದೀರೊ ಆ ವಿಷಯವು ಧ್ವನಿಯ ಏರಿಕೆಯ ಬದಲಿಗೆ, ಹಾರ್ದಿಕತೆ ಮತ್ತು ಭಾವಪೂರ್ಣತೆಯನ್ನು ಅಗತ್ಯಪಡಿಸುತ್ತಿರಬಹುದು. ನಾವು ಇದನ್ನು 11ನೆಯ ಪಾಠದಲ್ಲಿ ಚರ್ಚಿಸುವೆವು.

ವಿವೇಚನೆಯಿಂದ ಉಪಯೋಗಿಸುವಲ್ಲಿ, ಧ್ವನಿಯ ಇಳಿತವು ಕುತೂಹಲವನ್ನು ಕೆರಳಿಸಬಲ್ಲದು. ಆದರೆ ತದನಂತರ ಒಡನೆಯೇ ಸ್ವರದ ತೀವ್ರತೆಯನ್ನು ಹೆಚ್ಚಿಸುವುದನ್ನು ಇದು ಸಾಮಾನ್ಯವಾಗಿ ಅಗತ್ಯಪಡಿಸುತ್ತದೆ. ಧ್ವನಿಯ ಇಳಿತದೊಂದಿಗೆ ಹೆಚ್ಚಿಸಿದ ತೀವ್ರತೆಯನ್ನು, ಕಳವಳ ಅಥವಾ ಭಯವನ್ನು ಸೂಚಿಸಲು ಉಪಯೋಗಿಸಸಾಧ್ಯವಿದೆ. ಏನು ಹೇಳಲ್ಪಡುತ್ತಿದೆಯೊ ಅದು, ಅದರ ಸುತ್ತಲಿರುವ ವಿಷಯಕ್ಕೆ ಹೋಲಿಕೆಯಲ್ಲಿ ಕಡಿಮೆ ಪ್ರಾಮುಖ್ಯತೆಯದ್ದಾಗಿದೆ ಎಂಬುದನ್ನು ಸೂಚಿಸಲಿಕ್ಕಾಗಿ ಸಹ ತಗ್ಗು ಧ್ವನಿಯನ್ನು ಉಪಯೋಗಿಸಬಹುದು. ಆದರೆ ನಿಮ್ಮ ಧ್ವನಿಯು ಸದಾ ತಗ್ಗು ಧ್ವನಿಯಾಗಿರುವಲ್ಲಿ, ನಿಮಗೆ ನಿಮ್ಮ ಭಾಷಣದ ವಿಷಯವಸ್ತುವಿನ ಕುರಿತು ಅನಿಶ್ಚಿತತೆಯಿದೆ ಅಥವಾ ನಿಶ್ಚಿತಾಭಿಪ್ರಾಯದ ಕೊರತೆಯಿದೆ ಅಥವಾ ನಿಮಗೆ ಅದರಲ್ಲಿ ನಿಜವಾದ ಆಸಕ್ತಿಯಿಲ್ಲ ಎಂಬ ಅಭಿಪ್ರಾಯವನ್ನು ಕೊಡಬಹುದು. ಆದುದರಿಂದ, ಅತಿ ಮೃದುವಾದ ಸ್ವರವನ್ನು ವಿವೇಚನೆಯಿಂದ ಉಪಯೋಗಿಸಬೇಕೆಂಬುದು ಸುವ್ಯಕ್ತ.

ನಿಮ್ಮ ವೇಗವನ್ನು ಬದಲಾಯಿಸಿರಿ. ದಿನನಿತ್ಯದ ಮಾತುಕತೆಯಲ್ಲಿ, ನಾವು ನಮ್ಮ ಯೋಚನೆಗಳನ್ನು ತಿಳಿಯಪಡಿಸುವಾಗ ಪದಗಳು ತಮ್ಮಷ್ಟಕ್ಕೆ ಸರಾಗವಾಗಿ ಹೊರಬರುತ್ತವೆ. ಭಾವೋದ್ವೇಗಗೊಂಡಿರುವಾಗ, ನಾವು ವೇಗವಾಗಿ ಮಾತಾಡುತ್ತೇವೆ. ಇತರರು ನಾವು ಹೇಳಿದ್ದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾವು ಬಯಸುವಾಗ, ನಮ್ಮ ಮಾತಿನ ವೇಗವು ಹೆಚ್ಚು ನಿಧಾನವಾಗುತ್ತದೆ.

ಆದರೂ, ಹೊಸ ಭಾಷಣಕಾರರಲ್ಲಿ ಅನೇಕರು ತಮ್ಮ ಮಾತಿನ ವೇಗವನ್ನು ಬದಲಾಯಿಸುವುದು ತುಂಬ ಅಪರೂಪ. ಅದೇಕೆ? ಏಕೆಂದರೆ ಅವರು ತಮ್ಮ ಪದಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತಾರೆ. ಅವರು ಎಲ್ಲವನ್ನೂ ಬರೆದಿಟ್ಟುಕೊಂಡಿರಬಹುದು. ಅವರು ಭಾಷಣವನ್ನು ಹಸ್ತಪ್ರತಿಯಿಂದ ಕೊಡದೇ ಇದ್ದರೂ, ಪದಗಳನ್ನು ಅವರು ಬಾಯಿಪಾಠ ಮಾಡಿಕೊಂಡಿರಬಹುದು. ಇದರ ಪರಿಣಾಮವಾಗಿ, ಎಲ್ಲವನ್ನೂ ಲಯಬದ್ಧ ವೇಗದಲ್ಲಿ ಸಾದರಪಡಿಸಲಾಗುತ್ತದೆ. ಒಂದು ಹೊರಮೇರೆಯಿಂದ ಭಾಷಣವನ್ನು ಕೊಡಲು ಕಲಿಯುವುದು, ಈ ಬಲಹೀನತೆಯನ್ನು ತಿದ್ದಲು ಸಹಾಯಮಾಡುವುದು.

ನಿಮ್ಮ ಮಾತಿನ ವೇಗವನ್ನು ಥಟ್ಟನೆ ಹೆಚ್ಚಿಸುವುದನ್ನು ದೂರಮಾಡಿರಿ. ಏಕೆಂದರೆ ನಿಧಾನವಾಗಿ ಅತ್ತಿತ್ತ ಸುತ್ತಾಡುತ್ತಿರುವ ಒಂದು ಬೆಕ್ಕು, ನಾಯಿಯನ್ನು ನೋಡಿದಾಕ್ಷಣ ಥಟ್ಟನೆ ದೂರ ಹಾರುವುದನ್ನು ಇದು ಒಬ್ಬನ ಜ್ಞಾಪಕಕ್ಕೆ ತರಬಹುದು. ಮತ್ತು ನಿಮ್ಮ ಪದಪ್ರಯೋಗವು ಅರ್ಥವಾಗದಿರುವಷ್ಟು ವೇಗವಾಗಿ ಎಂದಿಗೂ ಮಾತಾಡಬೇಡಿ.

ನಿಮ್ಮ ಮಾತಿನ ವೇಗದಲ್ಲಿ ವೈವಿಧ್ಯವನ್ನು ಸಾಧಿಸಲಿಕ್ಕಾಗಿ, ಕ್ರಮವಾದ ಅಂತರಗಳಲ್ಲಿ ವೇಗವಾಗಿ ಮಾತಾಡಿ, ಬಳಿಕ ನಿಧಾನಿಸಬೇಡಿ. ಆ ಭಾಷಣ ಶೈಲಿಯು ನೀವು ಸಾದರಪಡಿಸುತ್ತಿರುವ ವಿಷಯದ ಮೌಲ್ಯವನ್ನು ವರ್ಧಿಸುವ ಬದಲು, ಅದನ್ನು ತಗ್ಗಿಸುವುದು. ವೇಗದಲ್ಲಿ ಬದಲಾವಣೆಗಳು ನೀವು ಏನು ಹೇಳುತ್ತಿದ್ದೀರೊ ಅದಕ್ಕೆ, ನೀವು ತಿಳಿಯಪಡಿಸುವ ಭಾವನೆಗಳಿಗೆ ಮತ್ತು ನಿಮ್ಮ ಉದ್ದೇಶಕ್ಕೆ ಸರಿಹೊಂದುವಂತಿರಬೇಕು. ಮಿತವಾದ ವೇಗದಲ್ಲಿ ನಿಮ್ಮ ಭಾಷಣವನ್ನು ಕೊಡಿರಿ. ಉದ್ರೇಕವನ್ನು ತಿಳಿಯಪಡಿಸಲು, ನೀವು ದೈನಂದಿನ ಜೀವಿತದಲ್ಲಿ ಮಾಡುವಂತೆಯೇ, ಹೆಚ್ಚು ವೇಗದಿಂದ ಮಾತಾಡಿರಿ. ಕಡಿಮೆ ಪ್ರಾಮುಖ್ಯವಾದ ಅಂಶಗಳನ್ನು ಹೇಳುವಾಗ, ಇಲ್ಲವೆ ವಿವರಗಳು ಅತ್ಯಾವಶ್ಯಕವಾಗಿರದಂಥ ಸಂಭವಗಳನ್ನು ಹೇಳುತ್ತಿರುವಾಗ ಸಹ ಇದು ಸೂಕ್ತವಾಗಿದೆ. ಇದು ಭಾಷಣಕ್ಕೆ ವೈವಿಧ್ಯವನ್ನು ಕೂಡಿಸಿ, ನಿಮ್ಮ ಭಾಷಣವು ನೀರಸವಾಗದಂತೆ ನೋಡಿಕೊಳ್ಳಲು ಸಹಾಯಮಾಡುವುದು. ಇನ್ನೊಂದು ಕಡೆಯಲ್ಲಿ, ಭಾಷಣದಲ್ಲಿನ ಗಹನವಾದ ವಾದಗಳು, ಮುಖ್ಯಾಂಶಗಳು, ಪರಮಾವಧಿಗಳು, ಸಾಮಾನ್ಯವಾಗಿ ನಿಧಾನವಾಗಿ ಮಾತಾಡುವುದನ್ನು ಅಗತ್ಯಪಡಿಸುತ್ತವೆ.

ಸ್ವರದ ತೀವ್ರತೆಯನ್ನು ಬದಲಾಯಿಸಿರಿ. ಒಬ್ಬನು ಸುಮಾರು ಒಂದು ತಾಸು ಸಂಗೀತದ ಉಪಕರಣವನ್ನು ನುಡಿಸುತ್ತಾನೆಂದು ಭಾವಿಸಿಕೊಳ್ಳಿ. ಆ ಇಡೀ ತಾಸಿನಲ್ಲಿ ಅವನು ಒಂದೇ ಒಂದು ನಾದವನ್ನು, ಮೊದಲು ಗಟ್ಟಿಯಾಗಿ, ಬಳಿಕ ಮೃದುವಾಗಿ, ಆಗಾಗ ವೇಗದಿಂದ, ಬಳಿಕ ನಿಧಾನವಾಗಿ ನುಡಿಸುತ್ತಾನೆ. ಧ್ವನಿಯ ಮಟ್ಟದಲ್ಲಿ ಮತ್ತು ವೇಗದಲ್ಲಿ ವೈವಿಧ್ಯವಿದ್ದರೂ, ಸ್ವರದ ತೀವ್ರತೆಯಲ್ಲಿ ಯಾವ ಬದಲಾವಣೆಯೂ ಇಲ್ಲದಿರುವಲ್ಲಿ, ಆ “ಸಂಗೀತ”ವು ನಮಗೆ ಅಷ್ಟೇನೂ ಹಿಡಿಸುವುದಿಲ್ಲ. ಅದೇ ರೀತಿ, ಸ್ವರದ ತೀವ್ರತೆಯಲ್ಲಿ ವೈವಿಧ್ಯವಿಲ್ಲದಿದ್ದರೆ, ನಮ್ಮ ಧ್ವನಿಯು ಕಿವಿಗಳಿಗೆ ಹಿತಕರವಾಗಿರಲಾರದು.

ಸ್ವರದ ತೀವ್ರತೆಯಲ್ಲಿ ಬದಲಾವಣೆಯು ಎಲ್ಲ ಭಾಷೆಗಳಲ್ಲಿ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲವೆಂಬುದನ್ನು ಗಮನಿಸತಕ್ಕದ್ದು. ಚೈನೀಸ್‌ ಭಾಷೆಯಂತೆ ಉಚ್ಚಾರದ ಮೇಲೆ ಸ್ವರಭಾರ ಹಾಕುವ ಭಾಷೆಗಳಲ್ಲಿ, ಸ್ವರದ ತೀವ್ರತೆಯಲ್ಲಿ ಬದಲಾವಣೆಯು ಪದದ ಅರ್ಥವನ್ನೇ ಬದಲಾಯಿಸಬಹುದು. ಆದರೂ, ಅಂತಹ ಭಾಷೆಯಲ್ಲಿಯೂ ಒಬ್ಬನು ತನ್ನ ಬಾಯಿಮಾತಿಗೆ ಹೆಚ್ಚಿನ ವೈವಿಧ್ಯವನ್ನು ಕೂಡಿಸಲು ಮಾಡಸಾಧ್ಯವಿರುವ ವಿಷಯಗಳಿವೆ. ಅವನು ತನ್ನ ವಿವಿಧ ಸ್ವರಗಳಿಗೆ ಅವುಗಳದ್ದೇ ಸಂಬಂಧಸೂಚಕ ಮಟ್ಟಗಳನ್ನು ಕಾಪಾಡಿಕೊಳ್ಳುವಾಗ, ತನ್ನ ಸ್ವರದ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬಲ್ಲನು. ಹೀಗೆ ಅವನು ಉಚ್ಚ ಸ್ವರವನ್ನು ಇನ್ನೂ ಉಚ್ಚವಾಗಿಯೂ ತಗ್ಗಿದ ಸ್ವರವನ್ನು ತಗ್ಗಿದ್ದಾಗಿಯೂ ಮಾಡಬಲ್ಲನು.

ಉಚ್ಚಾರದ ಮೇಲೆ ಸ್ವರಭಾರ ಹಾಕದಿರುವಂಥ ಭಾಷೆಗಳಲ್ಲಿಯೂ, ಸ್ವರದ ತೀವ್ರತೆಯಲ್ಲಿ ಬದಲಾವಣೆಯು ವಿವಿಧ ವಿಚಾರಗಳನ್ನು ತಿಳಿಯಪಡಿಸಬಲ್ಲದು. ಉದಾಹರಣೆಗೆ, ಸ್ವರದ ತೀವ್ರತೆಯನ್ನು ತುಸು ಹೆಚ್ಚಿಸುವುದರೊಂದಿಗೆ ಸಮಾನ ರೀತಿಯಲ್ಲಿ ಧ್ವನಿಯನ್ನು ಏರಿಸುವುದನ್ನು ಅರ್ಥಒತ್ತಿಗಾಗಿ ಉಪಯೋಗಿಸಬಹುದು. ಅಥವಾ ಸ್ವರದ ತೀವ್ರತೆಯಲ್ಲಿ ಬದಲಾವಣೆಯು, ಗಾತ್ರ ಅಥವಾ ದೂರವನ್ನು ಸೂಚಿಸುವ ವಿಧಾನವಾಗಿರಬಹುದು. ಒಂದು ವಾಕ್ಯದ ಅಂತ್ಯದಲ್ಲಿ ಏರಿಸಲ್ಪಟ್ಟ ಸ್ವರವ್ಯತ್ಯಾಸವು ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ ಎಂದು ಸೂಚಿಸಬಹುದು. ಕೆಲವು ಭಾಷೆಗಳು ತಗ್ಗಿದ ಸ್ವರವ್ಯತ್ಯಾಸವನ್ನು ಅಗತ್ಯಪಡಿಸಬಹುದು.

ಸ್ವರದ ಹೆಚ್ಚು ಉಚ್ಚ ತೀವ್ರತೆಯಿಂದ, ಉದ್ರೇಕ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಬಹುದು. (ಉಚ್ಚಾರದ ಮೇಲೆ ಸ್ವರಭಾರ ಹಾಕುವ ಭಾಷೆಗಳಲ್ಲಿ, ಇದಕ್ಕೆ ಹೆಚ್ಚು ವಿಶಾಲವಾದ ವ್ಯಾಪ್ತಿಯಿರುವ ಧ್ವನಿಯು ಬೇಕಾದೀತು.) ದುಃಖ ಮತ್ತು ಕಳವಳವನ್ನು ವ್ಯಕ್ತಪಡಿಸುವುದು, ತಗ್ಗಿದ ಸ್ವರದ ತೀವ್ರತೆಯನ್ನು ಅಗತ್ಯಗೊಳಿಸಬಹುದು. (ಅಥವಾ ಉಚ್ಚಾರದ ಮೇಲೆ ಸ್ವರಭಾರ ಹಾಕುವ ಭಾಷೆಗಳಲ್ಲಿ, ಸಂಕುಚಿತ ವ್ಯಾಪ್ತಿಯಿರುವ ಸ್ವರವು ಬೇಕಾದೀತು.) ಇಲ್ಲಿ ತಿಳಿಸಲಾಗಿರುವ ಭಾವಾವೇಶಗಳು, ಭಾಷಣಕಾರನು ಹೃದಯವನ್ನು ಸ್ಪರ್ಶಿಸುವಂತೆ ಸಹಾಯಮಾಡುತ್ತವೆ. ನೀವು ಅವುಗಳನ್ನು ವ್ಯಕ್ತಪಡಿಸಲು ಬಯಸುವಾಗ, ಕೇವಲ ಪದಗಳನ್ನು ಹೇಳಬೇಡಿ. ನೀವು ಸಹ ಅವುಗಳನ್ನು ಅನುಭವಿಸುತ್ತಿದ್ದೀರಿ ಎಂಬಂತೆ ನಿಮ್ಮ ಸ್ವರವನ್ನು ಉಪಯೋಗಿಸಿರಿ.

ಅಸ್ತಿವಾರವನ್ನು ಹಾಕುವುದು. ಹಾಗಾದರೆ, ಧ್ವನಿಯ ಏರಿಳಿತವು ಆರಂಭವಾಗುವುದು ಎಲ್ಲಿ? ನಿಮ್ಮ ಭಾಷಣಕ್ಕಾಗಿ ವಿಷಯಭಾಗವನ್ನು ಆರಿಸುವಾಗಲೇ. ತರ್ಕಸರಣಿಗಳು ಅಥವಾ ಬುದ್ಧಿವಾದಗಳನ್ನು ಬಿಟ್ಟರೆ ಇನ್ನಾವುದೂ ನಿಮ್ಮ ಭಾಷಣದಲ್ಲಿ ಇಲ್ಲದಿರುವಲ್ಲಿ, ನಿಮ್ಮ ಭಾಷಣ ಶೈಲಿಯಲ್ಲಿ ವೈವಿಧ್ಯಕ್ಕೆ ಹೆಚ್ಚಿನ ಅವಕಾಶವಿರಲಿಕ್ಕಿಲ್ಲ. ಆದಕಾರಣ ನಿಮ್ಮ ಹೊರಮೇರೆಯನ್ನು ವಿಶ್ಲೇಷಿಸಿ ನೋಡಿ, ಮತ್ತು ನಿಮ್ಮ ಭಾಷಣವು ಕಣ್ಣಿಗೆ ಕಟ್ಟುವಂತಹದ್ದೂ ಬೋಧಪ್ರದವೂ ಆಗಿರಲು ಸಾಕಷ್ಟು ಅಂಶಗಳು ಅದರಲ್ಲಿರುವಂತೆ ಖಚಿತಪಡಿಸಿಕೊಳ್ಳಿ.

ಒಂದುವೇಳೆ ಭಾಷಣದ ಮಧ್ಯದಲ್ಲಿ, ನಿಮ್ಮ ಭಾಷಣವು ಬೇಸರ ಬರಿಸುವಂಥ ರೀತಿಯಲ್ಲಿ ಮುಂದುವರಿಯುತ್ತಿರುವುದರಿಂದ, ಇನ್ನೂ ಹೆಚ್ಚಿನ ವೈವಿಧ್ಯದ ಆವಶ್ಯಕತೆಯಿದೆ ಎಂದು ನಿಮಗನಿಸುವುದಾದರೆ ಏನು ಮಾಡಬಹುದು? ನಿಮ್ಮ ವಿಷಯಭಾಗದ ಸಾದರಪಡಿಸುವಿಕೆಯ ವಿಧವನ್ನು ಬದಲಾಯಿಸಿರಿ. ಅದು ಹೇಗೆ? ಒಂದು ವಿಧವು ಬೈಬಲನ್ನು ತೆರೆದು, ಸಭಿಕರೂ ತಮ್ಮ ಬೈಬಲುಗಳನ್ನು ತೆರೆಯುವಂತೆ ಹೇಳಿ, ಕೇವಲ ಮಾತಾಡುತ್ತಾ ಇರುವ ಬದಲು ಒಂದು ವಚನವನ್ನು ಓದಿರಿ. ಇಲ್ಲವೆ, ಯಾವುದೇ ಒಂದು ಹೇಳಿಕೆಯನ್ನು ಪ್ರಶ್ನೆಯಾಗಿ ಬದಲಾಯಿಸಿ, ಅದನ್ನು ಒತ್ತಿಹೇಳಲಿಕ್ಕಾಗಿ ನಿಲ್ಲಿಸುವಿಕೆಯನ್ನು ಕೂಡಿಸಿರಿ. ಒಂದು ಸರಳವಾದ ದೃಷ್ಟಾಂತವನ್ನು ಕೊಡಿರಿ. ಅನುಭವಸ್ಥ ಭಾಷಣಕಾರರು ಈ ವಿಧಾನಗಳನ್ನು ಉಪಯೋಗಿಸುತ್ತಾರೆ. ಆದರೆ, ನಿಮ್ಮ ಅನುಭವದ ವ್ಯಾಪ್ತಿಯು ಎಷ್ಟೇ ಇರಲಿ, ನಿಮ್ಮ ವಿಷಯವನ್ನು ತಯಾರಿಸುವಾಗ ನೀವು ಇವೇ ವಿಚಾರಗಳನ್ನು ಉಪಯೋಗಿಸಬಲ್ಲಿರಿ.

ಧ್ವನಿಯ ಏರಿಳಿತವೇ ಭಾಷಣದ ಸ್ವಾರಸ್ಯವೆಂದು ಹೇಳಸಾಧ್ಯವಿದೆ. ಸರಿಯಾದ ವಿಧವನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವಲ್ಲಿ, ಅದು ನಿಮ್ಮ ವಿಷಯಭಾಗದ ಪೂರ್ತಿ ರುಚಿಯನ್ನು ಹೊರತಂದು, ಅದನ್ನು ನಿಮ್ಮ ಸಭಿಕರಿಗೆ ಸ್ವಾದಿಷ್ಟಕರವಾದದ್ದಾಗಿ ಮಾಡುವುದು.

ಇದನ್ನು ಮಾಡುವ ವಿಧ

  • ಧ್ವನಿಯ ಮಟ್ಟವನ್ನು ಹೊಂದಿಸಿಕೊಳ್ಳಿರಿ; ತುರ್ತಿನ ಆಜ್ಞೆ, ಬಲವಾದ ನಿಶ್ಚಿತಾಭಿಪ್ರಾಯ ಅಥವಾ ಖಂಡನೆಗಳನ್ನು ವ್ಯಕ್ತಪಡಿಸುವಾಗ ಹೀಗೆ ಮಾಡಿರಿ. ನಿಮ್ಮ ಭಾಷಣದಲ್ಲಿ ಧ್ವನಿಯನ್ನು ಏರಿಸುವುದನ್ನು ಅಗತ್ಯಪಡಿಸುವ ಭಾಗಗಳಿಗೆ ಜಾಗರೂಕತೆಯ ಗಮನವನ್ನು ಕೊಡಿ.

  • ವೇಗವನ್ನು ಬದಲಾಯಿಸಿ; ಕಡಿಮೆ ಪ್ರಾಮುಖ್ಯವಾದ ವಿಷಯಗಳನ್ನು ಬೇಗನೆ ಹೇಳಿ, ಗಹನವಾದ ವಾದಗಳನ್ನು ಮತ್ತು ಮುಖ್ಯಾಂಶಗಳನ್ನು ನಿಧಾನವಾಗಿ ಹೇಳಿರಿ. ಉದ್ರೇಕವನ್ನು ತಿಳಿಯಪಡಿಸುವಾಗ ವೇಗವಾಗಿ ಮಾತಾಡಿರಿ.

  • ಸ್ವರದ ತೀವ್ರತೆಯನ್ನು ಮಾರ್ಪಡಿಸಿರಿ; ಸೂಕ್ತವಾಗಿರುವಲ್ಲಿ, ಭಾವನೆಗಳನ್ನು ತಿಳಿಯಪಡಿಸಲಿಕ್ಕಾಗಿ ಮತ್ತು ಹೃದಯಗಳನ್ನು ಸ್ಪರ್ಶಿಸಲಿಕ್ಕಾಗಿ ಇದನ್ನು ಮಾಡಿರಿ. ಉಚ್ಚಾರದ ಮೇಲೆ ಸ್ವರಭಾರ ಹಾಕುವ ಭಾಷೆಗಳಲ್ಲಿ, ನಿಮ್ಮ ಸ್ವರದ ವ್ಯಾಪ್ತಿಯನ್ನು ವಿಶಾಲಗೊಳಿಸಿರಿ ಇಲ್ಲವೆ ಸಂಕುಚಿತಗೊಳಿಸಿರಿ.

  • ಧ್ವನಿಯ ಏರಿಳಿತವು, ನಿಮ್ಮ ಭಾಷಣಕ್ಕಾಗಿರುವ ವಿಷಯಭಾಗದ ಕುರಿತಾದ ನಿಮ್ಮ ಆಯ್ಕೆಯಿಂದ ಆರಂಭಗೊಳ್ಳುತ್ತದೆ.

ಅಭ್ಯಾಸಪಾಠಗಳು: (1) ಒಂದನೆಯ ಸಮುವೇಲ 17:17-53 ನ್ನು ನೀವೇ ಓದಿ; ಧ್ವನಿಯ ಏರಿಳಿತ, ವೇಗ ಮತ್ತು ಸ್ವರದ ತೀವ್ರತೆಯ ಮಟ್ಟದಲ್ಲಿ ತಕ್ಕದಾದ ವೈವಿಧ್ಯವನ್ನು ಉಪಯೋಗಿಸುವ ಸಂದರ್ಭಗಳನ್ನು ಗಮನಿಸಿ. ಆ ಬಳಿಕ ಗಟ್ಟಿಯಾಗಿ ಓದಿರಿ. ಅದು ಭಾವಗರ್ಭಿತವಾಗಿರಬೇಕು, ಅತಿರೇಕವಾದದ್ದಾಗಿರಬಾರದು. ಇದನ್ನು ಅನೇಕ ಬಾರಿ ಮಾಡಿರಿ. (2) ನಿಮ್ಮ ಸ್ವರದಲ್ಲಿ ನಮ್ಯತೆಯನ್ನು ಬೆಳೆಸಲು, 48-51ನೆಯ ವಚನಗಳನ್ನು ನಿಮಗೆ ಸಾಧ್ಯವಾಗುವಷ್ಟು ವೇಗದಲ್ಲಿ, ತಡವರಿಸದೆ ಗಟ್ಟಿಯಾಗಿ ಓದಿರಿ. ಪದೇ ಪದೇ ಓದಿ, ಸ್ಪಷ್ಟೋಚ್ಚಾರವನ್ನು ತ್ಯಾಗಮಾಡದೆ, ನಿಮ್ಮ ವೇಗವನ್ನು ಸತತವಾಗಿ ಹೆಚ್ಚಿಸಿರಿ. ಬಳಿಕ ಅದೇ ಭಾಗವನ್ನು ಸಾಧ್ಯವಾಗುವಷ್ಟು ನಿಧಾನವಾಗಿ, ಸಾವಧಾನವಾಗಿ ಓದಿರಿ. ಬಳಿಕ, ಪರ್ಯಾಯವಾಗಿ ಒಮ್ಮೆ ವೇಗವಾಗಿ, ಇನ್ನೊಮ್ಮೆ ನಿಧಾನವಾಗಿ, ನಿಮ್ಮ ಸ್ವರವು ನೀವು ಏನನ್ನು ಮಾಡಲು ಬಯಸುತ್ತೀರೋ ಅದನ್ನು ಮಾಡುವ ತನಕ ಓದಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ