ಅಧ್ಯಾಯ 27
ಆಶುಭಾಷಣ ಮಾಡುವುದು
ನೀವು ನಿಮ್ಮ ಭಾಷಣವನ್ನು ಶ್ರಮಪಟ್ಟು ತಯಾರಿಸಿರಬಹುದು. ನಿಮ್ಮ ವಿಷಯಭಾಗವು ಬೋಧಪ್ರದವಾಗಿರಬಹುದು. ನಿಮ್ಮ ತರ್ಕಬದ್ಧತೆಯು ಉತ್ತಮವಾಗಿರಬಹುದು. ನೀವು ನಿರರ್ಗಳವಾಗಿ ಭಾಷಣ ನೀಡಬಹುದು. ಆದರೆ ನಿಮ್ಮ ಸಭಿಕರ ಗಮನವು ವಿಭಜಿತವಾಗಿರುವಲ್ಲಿ, ಅಂದರೆ ಅವರ ಮನಸ್ಸು ಪದೇ ಪದೇ ಬೇರೆ ವಿಷಯಗಳ ಕಡೆಗೆ ಅಲೆದಾಡುವ ಕಾರಣ, ನೀವು ಏನು ಹೇಳುತ್ತೀರೋ ಅದರಲ್ಲಿ ಕೆಲವು ಅಂಶಗಳಿಗೆ ಮಾತ್ರ ಅವರು ಕಿವಿಗೊಡುತ್ತಿರುವಲ್ಲಿ, ನಿಮ್ಮ ಭಾಷಣವು ಎಷ್ಟು ಕಾರ್ಯಸಾಧಕವಾಗಿರುತ್ತದೆ? ಭಾಷಣದ ಮೇಲೆ ತಮ್ಮ ಮನಸ್ಸುಗಳನ್ನು ಕೇಂದ್ರೀಕರಿಸಲು ಅವರಿಗೆ ಕಷ್ಟವಾಗುತ್ತಿರುವುದಾದರೆ, ನೀವು ಅವರ ಹೃದಯಗಳನ್ನು ತಲಪುವ ಸಂಭವವಿದೆಯೆ?
ಇಂತಹ ಸಮಸ್ಯೆಗೆ ಮೂಲಕಾರಣವೇನಾಗಿರಬಹುದು? ಇದಕ್ಕೆ ವಿವಿಧ ಸಂಗತಿಗಳು ಕಾರಣವಾಗಿರಬಹುದು. ಆದರೆ ಅನೇಕವೇಳೆ, ಆಶುಭಾಷಣದ ರೀತಿಯಲ್ಲಿ ಭಾಷಣವನ್ನು ಕೊಡದಿರುವುದೇ ಇದಕ್ಕೆ ಕಾರಣವಾಗಿರುತ್ತದೆ. ಅಂದರೆ, ಭಾಷಣಕಾರನು ತೀರ ಹೆಚ್ಚು ಸಲ ತನ್ನ ಟಿಪ್ಪಣಿಯನ್ನು ನೋಡುತ್ತಿರುತ್ತಾನೆ ಅಥವಾ ಅವನ ಭಾಷಣ ನೀಡುವಿಕೆಯು ತುಂಬ ಔಪಚಾರಿಕವಾಗಿರುತ್ತದೆ. ಆದರೆ ಈ ಸಮಸ್ಯೆಗಳು, ಭಾಷಣವು ತಯಾರಿಸಲ್ಪಡುವ ರೀತಿಗೆ ನೇರವಾಗಿ ಸಂಬಂಧಿಸಿದವುಗಳಾಗಿವೆ.
ನೀವು ಪ್ರಥಮವಾಗಿ ನಿಮ್ಮ ಭಾಷಣವನ್ನು ಬರೆದಿಟ್ಟು, ಬಳಿಕ ಅದನ್ನು ಹೊರಮೇರೆಯಾಗಿ ಪರಿವರ್ತಿಸಲು ಪ್ರಯತ್ನಿಸುವುದಾದರೆ, ಅದನ್ನು ಆಶುಭಾಷಣದ ರೀತಿಯಲ್ಲಿ ಕೊಡುವುದು ಕಷ್ಟಕರವೆಂದು ನೀವು ಪ್ರಾಯಶಃ ಕಂಡುಕೊಳ್ಳುವಿರಿ. ಹಾಗೇಕೆ? ಏಕೆಂದರೆ ನೀವು ಉಪಯೋಗಿಸಲು ಯೋಜಿಸಿರುವ ನಿಷ್ಕೃಷ್ಟ ಪದಗಳನ್ನು ನೀವು ಆರಿಸಿಕೊಂಡಿದ್ದೀರಿ. ನೀವು ಒಂದುವೇಳೆ ಭಾಷಣ ನೀಡುವಾಗ ಹೊರಮೇರೆಯನ್ನು ಉಪಯೋಗಿಸಿದರೂ, ಅದರ ಆದಿರೂಪದಲ್ಲಿ ನೀವು ಉಪಯೋಗಿಸಿರುವ ಪದಗಳನ್ನೇ ಜ್ಞಾಪಿಸಿಕೊಳ್ಳಲು ನೀವು ಪ್ರಯತ್ನಿಸುವಿರಿ. ಒಂದು ವಿಷಯವನ್ನು ಬರೆಯುವಾಗ, ಅದರ ಪದಪ್ರಯೋಗವು ದಿನನಿತ್ಯದ ಪದಪ್ರಯೋಗಕ್ಕಿಂತ ಹೆಚ್ಚು ಔಪಚಾರಿಕವೂ ವಾಕ್ಯರಚನೆಯು ಹೆಚ್ಚು ಜಟಿಲವಾದದ್ದೂ ಆಗಿರುತ್ತದೆ. ನಿಮ್ಮ ಭಾಷಣ ನೀಡಿಕೆಯು ಅದನ್ನು ಪ್ರತಿಬಿಂಬಿಸುವುದು.
ಆದುದರಿಂದ, ಭಾಷಣದ ಪ್ರತಿಯೊಂದು ಪದವನ್ನು ವಿವರವಾಗಿ ಬರೆಯುವ ಬದಲು, ಈ ಕೆಳಗಿನ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿರಿ: (1) ಒಂದು ಮುಖ್ಯ ವಿಷಯವನ್ನು ಮತ್ತು ಆ ಮುಖ್ಯ ವಿಷಯವನ್ನು ವಿಕಸಿಸುವುದರಲ್ಲಿ ನೀವು ಉಪಯೋಗಿಸಲಿರುವ ವಿಷಯವಸ್ತುವಿನ ಮುಖ್ಯ ಅಂಶಗಳನ್ನು ಆರಿಸಿಕೊಳ್ಳಿರಿ. ಒಂದು ಚಿಕ್ಕ ಭಾಷಣಕ್ಕೆ ಎರಡು ಮುಖ್ಯಾಂಶಗಳು ಸಾಕಾಗಬಹುದು. ದೀರ್ಘಾವಧಿಯ ಭಾಷಣಕ್ಕೆ ನಾಲ್ಕೊ ಐದೊ ಮುಖ್ಯಾಂಶಗಳು ಇರಬಹುದು. (2) ಪ್ರತಿಯೊಂದು ಮುಖ್ಯಾಂಶದ ಕೆಳಗೆ, ಅದನ್ನು ವಿಕಸಿಸುವಾಗ ನೀವು ಉಪಯೋಗಿಸಲು ಯೋಜಿಸಿರುವ ಮುಖ್ಯ ಶಾಸ್ತ್ರವಚನಗಳನ್ನು ಬರೆಯಿರಿ; ನಿಮ್ಮ ದೃಷ್ಟಾಂತಗಳನ್ನೂ ಮುಖ್ಯ ವಾದಾಂಶಗಳನ್ನೂ ಗುರುತು ಮಾಡಿಕೊಳ್ಳಿರಿ. (3) ನಿಮ್ಮ ಭಾಷಣವನ್ನು ನೀವು ಹೇಗೆ ಆರಂಭಿಸುವಿರಿ ಎಂಬುದನ್ನೂ ಯೋಚಿಸಿರಿ. ಇದರ ಬಗ್ಗೆ ನೀವು ಒಂದೆರಡು ವಾಕ್ಯಗಳನ್ನೂ ಬರೆದಿಡಬಹುದು. ಅಲ್ಲದೆ, ನಿಮ್ಮ ಸಮಾಪ್ತಿಯನ್ನೂ ಯೋಜಿಸಿರಿ.
ಭಾಷಣ ನೀಡಿಕೆಗೆ ತಯಾರಿಯು ತುಂಬ ಪ್ರಾಮುಖ್ಯವಾಗಿದೆ. ಆದರೆ ಬಾಯಿಪಾಠ ಮಾಡುವ ಉದ್ದೇಶದಿಂದ ಭಾಷಣದ ಒಂದೊಂದು ಪದವನ್ನೂ ಪುನರ್ವಿಮರ್ಶಿಸಬೇಡಿ. ಆಶುಭಾಷಣಕ್ಕಾಗಿ ತಯಾರಿಯನ್ನು ಮಾಡುವಾಗ, ಪದಗಳ ಮೇಲಲ್ಲ ಬದಲಾಗಿ ವ್ಯಕ್ತಪಡಿಸಲಿರುವ ವಿಚಾರಗಳ ಮೇಲೆ ಒತ್ತುನೀಡಲ್ಪಡಬೇಕು. ಈ ವಿಚಾರಗಳನ್ನು, ಅವು ನಿಮ್ಮ ಮನಸ್ಸಿಗೆ ಒಂದರ ನಂತರ ಮತ್ತೊಂದು ಸುಲಭವಾಗಿ ಬರುವ ತನಕ ನೀವು ಪುನರ್ವಿಮರ್ಶಿಸುತ್ತಾ ಇರಬೇಕು. ನಿಮ್ಮ ಭಾಷಣದ ರಚನೆಯು ತರ್ಕಬದ್ಧವಾಗಿ ವಿಕಸಿಸಲ್ಪಟ್ಟಿದ್ದು, ಚೆನ್ನಾಗಿ ಯೋಜಿಸಲ್ಪಟ್ಟಿರುವುದಾದರೆ, ಇದು ಕಷ್ಟಕರವಾಗಿರಬಾರದು; ನೀವು ಭಾಷಣ ಕೊಡುವಾಗ ವಿಚಾರಗಳು ಸ್ವಾಭಾವಿಕವಾಗಿಯೂ ಸುಲಭವಾಗಿಯೂ ಬರುವವು.
ಪ್ರಯೋಜನಗಳನ್ನು ಪರಿಗಣಿಸಿರಿ. ಆಶುಭಾಷಣದ ಒಂದು ಮುಖ್ಯ ಪ್ರಯೋಜನವೇನೆಂದರೆ, ನೀವು ಸಹಜವಾದ ಶೈಲಿಯಲ್ಲಿ ಮಾತಾಡುವುದರಿಂದ ಜನರು ಅದಕ್ಕೆ ಅತಿ ತ್ವರಿತವಾಗಿ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸುವರು. ಆಗ ನಿಮ್ಮ ಭಾಷಣ ನೀಡಿಕೆಯು ಹೆಚ್ಚು ಸಜೀವವಾದದ್ದಾಗಿರುವುದು ಮತ್ತು ಹೀಗೆ ನಿಮ್ಮ ಸಭಿಕರಿಗೆ ಹೆಚ್ಚು ಆಸಕ್ತಿದಾಯಕವಾಗಿರುವುದು.
ಈ ರೀತಿಯ ಮಾತನಾಡುವಿಕೆಯು, ನೀವು ನಿಮ್ಮ ಕೇಳುಗರೊಂದಿಗೆ ಅತಿ ಹೆಚ್ಚು ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳುವಂತೆ ಅನುಮತಿಸುವುದು ಮತ್ತು ಇದು ಅವರೊಂದಿಗಿನ ನಿಮ್ಮ ಸಂವಾದವನ್ನು ಉತ್ತಮಗೊಳಿಸುವುದು. ಪ್ರತಿಯೊಂದು ವಾಕ್ಯದ ಪದಪ್ರಯೋಗಕ್ಕಾಗಿ ನೀವು ಟಿಪ್ಪಣಿಯ ಮೇಲೆ ಹೊಂದಿಕೊಳ್ಳದೆ ಇರುವುದರಿಂದ, ನಿಮ್ಮ ವಿಷಯವಸ್ತುವನ್ನು ನೀವು ಚೆನ್ನಾಗಿ ತಿಳಿದಿದ್ದೀರೆಂದೂ ನೀವು ಏನು ಹೇಳುತ್ತಿದ್ದೀರೊ ಅದನ್ನು ನೀವು ಯಥಾರ್ಥವಾಗಿ ನಂಬುತ್ತೀರೆಂದೂ ನಿಮ್ಮ ಕೇಳುಗರು ಭಾವಿಸುವುದು ಹೆಚ್ಚು ಸಂಭವನೀಯ. ಹೀಗೆ, ಈ ರೀತಿಯ ಭಾಷಣ ನೀಡುವಿಕೆಯು ಹೃತ್ಪೂರ್ವಕವಾದ, ಸಂಭಾಷಣಾ ರೂಪದ, ಸಭಿಕರ ಹೃದಯವನ್ನು ತಲಪುವ ಭಾಷಣವಾಗಿ ಪರಿಣಮಿಸುವುದು.
ಆಶುಭಾಷಣವು ನೀವು ಅದನ್ನು ವಿವಿಧ ಪರಿಸ್ಥಿತಿಗಳಿಗೆ ಹೊಂದಿಸಿಕೊಳ್ಳುವಂತೆಯೂ ಅನುಮತಿಸುತ್ತದೆ. ಭಾಷಣದ ವಿಷಯಭಾಗವು ನೀವು ಅದರಲ್ಲಿ ಹೊಂದಾಣಿಕೆಗಳನ್ನು ಮಾಡಲಾಗದಷ್ಟು ಕಟ್ಟುನಿಟ್ಟಿನದ್ದಾಗಿರುವುದಿಲ್ಲ. ಉದಾಹರಣೆಗೆ, ನೀವು ಭಾಷಣ ನೀಡಲಿರುವ ದಿನದ ಆರಂಭದಲ್ಲಿ, ನಿಮ್ಮ ವಿಷಯವಸ್ತುವಿಗೆ ನೇರವಾಗಿ ಸಂಬಂಧಿಸುವ ಗಮನಾರ್ಹವಾದ ಸುದ್ದಿಯೊಂದನ್ನು ನೀವು ಕೇಳಿಸಿಕೊಳ್ಳುತ್ತೀರಿ ಎಂದಿಟ್ಟುಕೊಳ್ಳಿ. ಅದಕ್ಕೆ ಸೂಚಿಸಿ ಮಾತಾಡುವುದು ಸೂಕ್ತವಾಗಿರುವುದಿಲ್ಲವೊ? ಅಥವಾ, ನೀವು ಮಾತನಾಡುತ್ತಿರುವಾಗ, ಸಭಿಕರಲ್ಲಿ ಶಾಲಾವಯಸ್ಸಿನ ಅನೇಕ ಮಕ್ಕಳಿದ್ದಾರೆಂದು ನಿಮಗೆ ತಿಳಿದು ಬರುತ್ತದೆ. ಆಗ, ವಿಷಯಭಾಗವು ಅವರ ಜೀವಿತಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆಂಬುದನ್ನು ಗಣ್ಯಮಾಡಲಿಕ್ಕಾಗಿ ಅವರಿಗೆ ಸಹಾಯಮಾಡುವಂತೆ, ನಿಮ್ಮ ದೃಷ್ಟಾಂತಗಳನ್ನೂ ಅನ್ವಯವನ್ನೂ ಹೊಂದಿಸಿಕೊಳ್ಳುವುದು ಎಷ್ಟು ಉತ್ತಮವಾಗಿರುವುದು!
ಆಶುಭಾಷಣ ಮಾಡುವುದರಲ್ಲಿರುವ ಇನ್ನೊಂದು ಪ್ರಯೋಜನವು, ಅದು ನಿಮ್ಮ ಸ್ವಂತ ಮನಸ್ಸನ್ನು ಹುರಿದುಂಬಿಸುವುದೇ ಆಗಿದೆ. ನಿಮ್ಮ ಭಾಷಣಕ್ಕೆ ಗಣ್ಯತೆಯನ್ನು ತೋರಿಸಿ, ಪ್ರತಿವರ್ತಿಸುವ ಸಭಿಕರಿರುವಾಗ, ನೀವು ಸಹ ಉತ್ಸಾಹಭರಿತರಾಗುತ್ತೀರಿ ಮತ್ತು ವಿಚಾರಗಳನ್ನು ವಿಸ್ತಾರಗೊಳಿಸುತ್ತೀರಿ ಅಥವಾ ಒತ್ತಿಹೇಳಲಿಕ್ಕಾಗಿ ಕೆಲವು ಅಂಶಗಳನ್ನು ಪುನರಾವರ್ತಿಸಲು ಸಮಯವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಸಭಿಕರ ಆಸಕ್ತಿಯು ಕಡಿಮೆಯಾಗುತ್ತಿದೆ ಎಂಬುದನ್ನು ನೀವು ಗಮನಿಸುವಾಗ, ಯಾರ ಮನಸ್ಸುಗಳು ಅಲೆದಾಡುತ್ತಿವೆಯೋ ಅಂಥವರೊಂದಿಗೆ ಸುಮ್ಮನೆ ಮಾತಾಡುತ್ತ ಹೋಗುವ ಬದಲು, ಅವರ ಆ ಸಮಸ್ಯೆಯನ್ನು ಪರಿಹರಿಸಲು ನೀವು ಕ್ರಮವನ್ನು ತೆಗೆದುಕೊಳ್ಳಸಾಧ್ಯವಿದೆ.
ಅಪಾಯಗಳಿಂದ ತಪ್ಪಿಸಿಕೊಳ್ಳಿರಿ. ಆಶುಭಾಷಣ ಮಾಡುವಾಗ ಕೆಲವು ಅಪಾಯಗಳ ಸಾಧ್ಯತೆಯೂ ಇದೆ ಎಂಬುದು ನಿಮಗೆ ತಿಳಿದಿರಬೇಕು. ಇವುಗಳಲ್ಲಿ ಒಂದು, ನಿಗದಿತ ಕಾಲಾವಧಿಯನ್ನು ಮೀರಿ ಹೋಗುವ ಪ್ರವೃತ್ತಿಯೇ ಆಗಿದೆ. ಭಾಷಣ ನೀಡುತ್ತಿರುವಾಗ ನೀವು ತೀರ ಹೆಚ್ಚು ವಿಷಯಗಳನ್ನು ಒಳಗೂಡಿಸುವುದಾದರೆ, ಸಮಯಪಾಲನೆಯು ಒಂದು ಸಮಸ್ಯೆಯಾಗಬಹುದು. ನಿಮ್ಮ ಹೊರಮೇರೆಯಲ್ಲಿ, ನಿಮ್ಮ ಭಾಷಣದ ಪ್ರತಿ ವಿಭಾಗಕ್ಕೆ ಎಷ್ಟು ಸಮಯವನ್ನು ಅನುಮತಿಸಲಾಗಿದೆಯೆಂದು ಬರೆದಿಡುವಲ್ಲಿ, ನೀವು ಈ ಸಮಸ್ಯೆಯನ್ನು ನಿಭಾಯಿಸಬಲ್ಲಿರಿ. ಆ ಬಳಿಕ ಈ ಕಾರ್ಯತಖ್ತೆಗೆ ಒತ್ತಾಗಿ ಅಂಟಿಕೊಳ್ಳಿರಿ.
ವಿಶೇಷವಾಗಿ ಅನುಭವಸ್ಥ ಭಾಷಣಕಾರರಿಗೆ ಇರುವ ಇನ್ನೊಂದು ಅಪಾಯವು, ಅತಿಯಾದ ಆತ್ಮವಿಶ್ವಾಸವಾಗಿದೆ. ಸಾರ್ವಜನಿಕವಾಗಿ ಮಾತಾಡುವ ರೂಢಿಯಾಗಿಬಿಟ್ಟಿರುವ ಕೆಲವರಿಗೆ, ಕೆಲವು ವಿಚಾರಗಳನ್ನು ಬೇಗನೆ ಒಟ್ಟುಗೂಡಿಸಿಕೊಂಡು, ನಿಗದಿತ ಸಮಯವನ್ನು ತುಂಬಿಸುವುದು ಕಷ್ಟಕರವಾಗಿರಲಿಕ್ಕಿಲ್ಲ. ಆದರೆ ದೈನ್ಯಭಾವ ಮತ್ತು ನಾವು ಸ್ವತಃ ಯೆಹೋವನೇ ಮಹಾ ಉಪದೇಶಕನಾಗಿರುವ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆಂಬ ನಿಜತ್ವಕ್ಕಾಗಿ ಗಣ್ಯತೆಯು, ನಾವು ಪ್ರತಿಯೊಂದು ಭಾಷಣ ನೇಮಕವನ್ನು ಪ್ರಾರ್ಥನಾಪೂರ್ವಕವಾಗಿ ಸಮೀಪಿಸುವಂತೆ ಮತ್ತು ಚೆನ್ನಾಗಿ ತಯಾರಿಸುವಂತೆ ನಮ್ಮನ್ನು ಪ್ರಚೋದಿಸಬೇಕು.—ಯೆಶಾ. 30:20, NW; ರೋಮಾ. 12:6-8.
ಆಶುಭಾಷಣದಲ್ಲಿ ಅನುಭವಸ್ಥರಲ್ಲದ ಅನೇಕ ಭಾಷಣಕಾರರಿಗೆ ಪ್ರಾಯಶಃ ಹೆಚ್ಚು ಚಿಂತೆಯ ವಿಷಯವೇನೆಂದರೆ, ತಾವು ಹೇಳಲು ಬಯಸುವ ವಿಷಯವನ್ನು ಮರೆತುಬಿಡುವೆವು ಎಂಬುದೇ. ಆದರೆ ಪರಿಣಾಮಕಾರಿಯಾದ ಭಾಷಣ ಕೊಡುವಿಕೆಯಲ್ಲಿ ಈ ಮುನ್ನೆಜ್ಜೆಯನ್ನು ಇಡದಂತೆ ಆ ಭಯವು ನಿಮ್ಮನ್ನು ತಡೆದುಹಿಡಿಯುವಂತೆ ಬಿಡಬೇಡಿ. ಚೆನ್ನಾಗಿ ತಯಾರಿಸಿರಿ, ಮತ್ತು ಯೆಹೋವನ ಆತ್ಮದ ಸಹಾಯಕ್ಕಾಗಿ ಆತನ ಕಡೆಗೆ ನೋಡಿರಿ.—ಯೋಹಾ. 14:26.
ಬೇರೆ ಭಾಷಣಕಾರರು, ಪದಪ್ರಯೋಗದ ಕುರಿತಾದ ವಿಪರೀತ ಚಿಂತೆಯು ಅವರನ್ನು ಆಶುಭಾಷಣ ಮಾಡುವುದರಿಂದ ತಡೆದು ಹಿಡಿಯುವಂತೆ ಬಿಡುತ್ತಾರೆ. ಆಶುಭಾಷಣದಲ್ಲಿ ಹಸ್ತಪ್ರತಿಯ ಭಾಷಣದಲ್ಲಿರುವಂತೆ ಆರಿಸಿ ತೆಗೆದ ಪದಗಳು ಮತ್ತು ವ್ಯಾಕರಣದ ನಿಷ್ಕೃಷ್ಟತೆಯು ಇಲ್ಲದಿರಬಹುದೆಂಬುದು ನಿಜವಾದರೂ, ಮನಸ್ಸಿಗೆ ಹಿಡಿಸುವಂಥ ಸಂಭಾಷಣಾ ಶೈಲಿಯು ಖಂಡಿತವಾಗಿಯೂ ಆ ಕೊರತೆಯನ್ನು ನೀಗಿಸುತ್ತದೆ. ಸುಲಭವಾಗಿ ಅರ್ಥವಾಗುವ ಪದಗಳಲ್ಲಿ ಮತ್ತು ಜಟಿಲವಲ್ಲದ ವಾಕ್ಯಗಳಲ್ಲಿ ಸಾದರಪಡಿಸಲ್ಪಡುವ ವಿಚಾರಗಳಿಗೆ ಜನರು ಹೆಚ್ಚು ಸುಲಭವಾಗಿ ಪ್ರತಿವರ್ತಿಸುತ್ತಾರೆ. ನೀವು ಚೆನ್ನಾಗಿ ತಯಾರಿಸುವಲ್ಲಿ, ಸೂಕ್ತ ಪದಸರಣಿಗಳು ಸ್ವಾಭಾವಿಕವಾಗಿ ಮನಸ್ಸಿಗೆ ಬರುವವು; ನೀವು ಬಾಯಿಪಾಠ ಮಾಡಿರುವುದರಿಂದ ಇದು ಆಗುವುದಿಲ್ಲ, ಬದಲಾಗಿ ವಿಚಾರಗಳನ್ನು ಸಾಕಷ್ಟು ಮಟ್ಟಿಗೆ ಪುನರ್ವಿಮರ್ಶಿಸಿರುವ ಕಾರಣದಿಂದಲೇ ಆಗುತ್ತದೆ. ಮತ್ತು ನೀವು ದೈನಂದಿನ ಸಂಭಾಷಣೆಯಲ್ಲಿ ಉತ್ತಮ ಮಾತುಗಳನ್ನು ಉಪಯೋಗಿಸುವಲ್ಲಿ, ನೀವು ವೇದಿಕೆಯ ಮೇಲಿರುವಾಗಲೂ ಅವು ಸ್ವಾಭಾವಿಕವಾಗಿಯೇ ಬರುವವು.
ಯಾವ ವಿಧದ ಟಿಪ್ಪಣಿಯನ್ನು ಉಪಯೋಗಿಸಬೇಕು? ಸಕಾಲದಲ್ಲಿ ಮತ್ತು ಅಭ್ಯಾಸದ ಕಾರಣ ನೀವು ನಿಮ್ಮ ಹೊರಮೇರೆಯನ್ನು, ನಿಮ್ಮ ಭಾಷಣದ ಪ್ರತಿಯೊಂದು ಅಂಶಕ್ಕೆ ಕೇವಲ ಕೆಲವೇ ಪದಗಳಷ್ಟರ ಮಟ್ಟಿಗೆ ಕಡಿಮೆಗೊಳಿಸಲು ಶಕ್ತರಾಗಬಹುದು. ಇವುಗಳನ್ನು ಮತ್ತು ನೀವು ಉಪಯೋಗಿಸಲು ಯೋಜಿಸಿರುವ ಎಲ್ಲ ಶಾಸ್ತ್ರವಚನಗಳನ್ನು ಸುಲಭವಾಗಿ ನೋಡಲು ಸಾಧ್ಯವಾಗುವಂತೆ, ಒಂದು ಕಾರ್ಡಿನ ಮೇಲೆಯೊ ಕಾಗದದ ಮೇಲೆಯೊ ಬರೆದಿಡಬಹುದು. ಕ್ಷೇತ್ರ ಶುಶ್ರೂಷೆಗಾಗಿ, ಹೆಚ್ಚಿನ ಸಂದರ್ಭಗಳಲ್ಲಿ ನೀವು ಒಂದು ಸರಳ ಹೊರಮೇರೆಯನ್ನು ಬಾಯಿಪಾಠ ಮಾಡಿಕೊಳ್ಳುವಿರಿ. ಒಂದು ಪುನರ್ಭೇಟಿಗಾಗಿ ನೀವು ಒಂದು ವಿಷಯದ ಕುರಿತು ಸಂಶೋಧನೆ ಮಾಡಿರುವಲ್ಲಿ, ಇವುಗಳ ಸಂಕ್ಷಿಪ್ತ ಟಿಪ್ಪಣಿಯನ್ನು ಚಿಕ್ಕ ಕಾಗದದಲ್ಲಿ ಬರೆದು, ನಿಮ್ಮ ಬೈಬಲಿನ ಪುಟಗಳ ಮಧ್ಯೆ ಇಟ್ಟುಕೊಳ್ಳಬಹುದು. ಅಥವಾ “ಚರ್ಚೆಗಾಗಿ ಬೈಬಲ್ ವಿಷಯಗಳು” ಪುಸ್ತಿಕೆಯಲ್ಲಿರುವ ಒಂದು ಹೊರಮೇರೆಯನ್ನು ಇಲ್ಲವೆ ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್) ಪುಸ್ತಕದಲ್ಲಿರುವ ವಿಷಯಭಾಗವನ್ನು ನಿಮ್ಮ ಚರ್ಚೆಯ ಆಧಾರವಾಗಿ ಉಪಯೋಗಿಸಬಹುದು.
ಆದರೂ, ಕೆಲವೇ ವಾರಗಳಲ್ಲಿ ನಿಮಗೆ ಕೂಟಗಳಲ್ಲಿ ಅನೇಕ ಭಾಗಗಳಿರುವುದಾದರೆ ಮತ್ತು ಸಾರ್ವಜನಿಕ ಭಾಷಣಗಳನ್ನೂ ಕೊಡಲಿಕ್ಕಿರುವುದಾದರೆ, ನಿಮಗೆ ಹೆಚ್ಚು ಸವಿಸ್ತಾರವಾದ ಟಿಪ್ಪಣಿಗಳ ಅಗತ್ಯವಿದೆ ಎಂದು ನಿಮಗೆ ಅನಿಸಬಹುದು. ಏಕೆ? ಆ ನೇಮಕಗಳಲ್ಲಿ ಪ್ರತಿಯೊಂದನ್ನು ನಿರ್ವಹಿಸುವ ಮೊದಲು ಅದರ ವಿಷಯಭಾಗದ ಕುರಿತು ನಿಮ್ಮ ಮನಸ್ಸನ್ನು ಚುರುಕುಗೊಳಿಸಲಿಕ್ಕಾಗಿಯೇ. ಆದರೆ ಈಗಲೂ, ಭಾಷಣ ಕೊಡುವಾಗ ಪದಪ್ರಯೋಗಕ್ಕಾಗಿ ನೀವು ನಿಮ್ಮ ಟಿಪ್ಪಣಿಯ ಮೇಲೆ ತೀರ ಹೆಚ್ಚು ಹೊಂದಿಕೊಳ್ಳುವುದಾದರೆ, ಅಂದರೆ ಹೆಚ್ಚುಕಡಮೆ ಪ್ರತಿ ವಾಕ್ಯವನ್ನು ಒಂದಲ್ಲ ಒಂದು ಸ್ಥಳದಲ್ಲಿ ನೀವು ಟಿಪ್ಪಣಿಯಲ್ಲಿ ನೋಡುತ್ತ ಇರುವುದಾದರೆ, ಆಶುಭಾಷಣದ ವೈಶಿಷ್ಟ್ಯದಿಂದ ಬರುವ ಪ್ರಯೋಜನಗಳನ್ನು ನೀವು ಕಳೆದುಕೊಳ್ಳುವಿರಿ. ನೀವು ಸವಿಸ್ತಾರವಾದ ಟಿಪ್ಪಣಿಯನ್ನು ಉಪಯೋಗಿಸುವಲ್ಲಿ, ನಿಮ್ಮ ಹೊರಮೇರೆಯನ್ನು ರೂಪಿಸುವ ಕೇವಲ ಕೆಲವೇ ಪ್ರಮುಖ ಪದಗಳನ್ನು ಮತ್ತು ಶಾಸ್ತ್ರವಚನಗಳ ಉಲ್ಲೇಖಗಳನ್ನು ಸುಲಭವಾಗಿ ನೋಡಲಿಕ್ಕಾಗುವಂತೆ ಅವುಗಳಿಗೆ ಗುರುತು ಹಾಕಿರಿ.
ಸಾಮಾನ್ಯವಾಗಿ ಒಬ್ಬ ಅನುಭವಸ್ಥ ಭಾಷಣಕಾರನ ಭಾಷಣವು ಅತ್ಯಧಿಕವಾಗಿ ಆಶುಭಾಷಣವಾಗಿರಬೇಕಾದರೂ, ಭಾಷಣ ನೀಡಿಕೆಯ ಇತರ ರೂಪಗಳನ್ನು ಅದರಲ್ಲಿ ಸೇರಿಸುವುದರಲ್ಲೂ ಪ್ರಯೋಜನಗಳು ಇರಸಾಧ್ಯವಿದೆ. ಎಲ್ಲಿ ಸಭಿಕರೊಂದಿಗೆ ಉತ್ತಮ ದೃಷ್ಟಿ ಸಂಪರ್ಕವೂ ಬಲವಾದ, ಜಾಗರೂಕತೆಯಿಂದ ಆರಿಸಿರುವ ಪದಗಳಿರುವ ಹೇಳಿಕೆಗಳೂ ಇರಬೇಕೊ ಅಂತಹ ಪೀಠಿಕೆ ಮತ್ತು ಸಮಾಪ್ತಿಯನ್ನು ರೂಪಿಸುವ ಕೆಲವು ವಾಕ್ಯಗಳನ್ನು ಬಾಯಿಪಾಠ ಮಾಡಿರುವುದು ಒಳ್ಳೇದು. ಎಲ್ಲಿ ನಿಜತ್ವಗಳು, ಅಂಕಿಸಂಖ್ಯೆಗಳು, ಉಲ್ಲೇಖಗಳು ಅಥವಾ ಶಾಸ್ತ್ರವಚನಗಳು ಉಪಯೋಗಿಸಲ್ಪಡುತ್ತವೋ ಅಲ್ಲಿ ವಾಚನವು ಸೂಕ್ತವಾಗಿರುವುದು ಮಾತ್ರವಲ್ಲ, ಅವುಗಳನ್ನು ಪರಿಣಾಮಕಾರಿಯಾಗಿಯೂ ಉಪಯೋಗಿಸಸಾಧ್ಯವಿದೆ.
ಇತರರು ವಿವರಣೆಯನ್ನು ಕೊಡುವಂತೆ ಒತ್ತಾಯಿಸುವಾಗ. ಕೆಲವು ಸಲ, ಮುಂದಾಗಿ ತಯಾರಿಸುವ ಅವಕಾಶವಿಲ್ಲದೆ ನಮ್ಮ ನಂಬಿಕೆಗಳನ್ನು ವಿವರಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಗುತ್ತದೆ. ಕ್ಷೇತ್ರ ಸೇವೆಯಲ್ಲಿ ನಾವು ಸಂಧಿಸುವ ಒಬ್ಬನು ಆಕ್ಷೇಪಣೆಯನ್ನು ಎತ್ತುವಾಗ ಇದು ಸಂಭವಿಸಬಹುದು. ನಾವು ಸಂಬಂಧಿಕರೊಂದಿಗೆ ಇರುವಾಗ, ನಮ್ಮ ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಇಂತಹ ಸನ್ನಿವೇಶಗಳು ಏಳಬಹುದು. ನಮ್ಮ ನಂಬಿಕೆಗಳು ಮತ್ತು ನಮ್ಮ ಜೀವನ ರೀತಿಯ ಕುರಿತು ವಿವರಣೆಗಳನ್ನು ನೀಡುವಂತೆ ಸರಕಾರೀ ಅಧಿಕಾರಿಗಳು ಸಹ ಒತ್ತಾಯಿಸಬಹುದು. ಶಾಸ್ತ್ರವಚನಗಳು ಪ್ರೋತ್ಸಾಹಿಸುವುದು: “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.”—1 ಪೇತ್ರ 3:15.
ಅಪೊಸ್ತಲರ ಕೃತ್ಯಗಳು 4:19, 20 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಪೇತ್ರ ಯೋಹಾನರು ಯೆಹೂದಿ ಹಿರೀಸಭೆಯವರಿಗೆ ಹೇಗೆ ಉತ್ತರ ಕೊಟ್ಟರೆಂಬುದನ್ನು ಗಮನಿಸಿರಿ. ಕೇವಲ ಎರಡೇ ವಾಕ್ಯಗಳಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದರು. ಅವರ ಸಭಿಕರಿಗೆ ಸೂಕ್ತವಾದಂಥ ರೀತಿಯಲ್ಲಿ, ಅಂದರೆ ಅಪೊಸ್ತಲರ ಮುಂದಿರುವ ವಿವಾದಾಂಶವು ನ್ಯಾಯಾಲಯದ ಮುಂದೆಯೂ ಇದೆ ಎಂಬುದನ್ನು ಸೂಚಿಸುತ್ತಾ ಅವರು ಅದನ್ನು ತಿಳಿಯಪಡಿಸಿದರು. ಸಮಯಾನಂತರ, ಸುಳ್ಳು ಆರೋಪಗಳನ್ನು ಹೊರಿಸುತ್ತ ಸ್ತೆಫನನನ್ನು ಅದೇ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅವನು ಪೂರ್ವಸಿದ್ಧತೆಯಿಲ್ಲದೆ ಕೊಟ್ಟ ಪ್ರಬಲವಾದ ಉತ್ತರವನ್ನು ಅಪೊಸ್ತಲರ ಕೃತ್ಯಗಳು 7:2-53 ರಲ್ಲಿ ಓದಿರಿ. ಅವನು ತನ್ನ ವಿಷಯಭಾಗವನ್ನು ಹೇಗೆ ಸಂಘಟಿಸಿದನು? ಅವನು ಐತಿಹಾಸಿಕ ಕ್ರಮದಲ್ಲಿ ಘಟನೆಗಳನ್ನು ವಿವರಿಸಿದನು. ಇಸ್ರಾಯೇಲ್ ಜನಾಂಗದಿಂದ ತೋರಿಸಲ್ಪಟ್ಟ ದಂಗೆಕೋರ ಮನೋಭಾವವನ್ನು ಅವನು ಸರಿಯಾದ ಹಂತದಲ್ಲಿ ಒತ್ತಿಹೇಳತೊಡಗಿದನು. ಸಮಾಪ್ತಿ ಭಾಗದಲ್ಲಿ, ಹಿರೀಸಭೆಯವರು ಸಹ ದೇವಕುಮಾರನನ್ನು ಮರಣಕ್ಕೊಪ್ಪಿಸುವ ಮೂಲಕ ಅದೇ ಮನೋಭಾವವನ್ನು ಪ್ರದರ್ಶಿಸಿದ್ದರೆಂಬುದನ್ನು ಅವನು ತೋರಿಸಿದನು.
ನೀವು ನಿಮ್ಮ ನಂಬಿಕೆಗಳ ಕುರಿತು ಪೂರ್ವಸಿದ್ಧತೆಯಿಲ್ಲದೆ ವಿವರಣೆಯನ್ನು ಕೊಡುವಂತೆ ಕೇಳಿಕೊಳ್ಳಲ್ಪಡುವಾಗ, ನಿಮ್ಮ ಹೇಳಿಕೆಗಳು ಪರಿಣಾಮಕಾರಿಯಾಗಿರುವಂತೆ ಯಾವುದು ಸಹಾಯಮಾಡಬಲ್ಲದು? ಅರ್ತಷಸ್ತ ರಾಜನ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಮೌನವಾಗಿ ಪ್ರಾರ್ಥಿಸಿದ ನೆಹೆಮೀಯನನ್ನು ಅನುಕರಿಸಿರಿ. (ನೆಹೆ. 2:4) ಆಮೇಲೆ, ಥಟ್ಟನೆ ಒಂದು ಮಾನಸಿಕ ಹೊರಮೇರೆಯನ್ನು ಸಿದ್ಧಪಡಿಸಿಕೊಳ್ಳಿರಿ. ಮೂಲಭೂತ ಹೆಜ್ಜೆಗಳನ್ನು ಈ ವಿಧದಲ್ಲಿ ಪಟ್ಟಿಮಾಡಬಹುದು: (1) ವಿವರಣೆಯಲ್ಲಿ ಸೇರಿಸಬೇಕಾದ ಒಂದೊ ಎರಡೊ ಅಂಶಗಳನ್ನು ಆರಿಸಿಕೊಳ್ಳಿರಿ (“ಚರ್ಚೆಗಾಗಿ ಬೈಬಲ್ ವಿಷಯಗಳು” ಎಂಬ ಪುಸ್ತಿಕೆಯಲ್ಲಿ ಕಂಡುಬರುವ ಅಂಶಗಳನ್ನು ನೀವು ಉಪಯೋಗಿಸಬಹುದು). (2) ಈ ಅಂಶಗಳನ್ನು ಬೆಂಬಲಿಸಲು ನೀವು ಯಾವ ಶಾಸ್ತ್ರವಚನಗಳನ್ನು ಉಪಯೋಗಿಸುವಿರಿ ಎಂಬುದನ್ನು ನಿರ್ಣಯಿಸಿರಿ. (3) ನಿಮ್ಮ ವಿವರಣೆಯನ್ನು, ವಿಚಾರಿಸುತ್ತಿರುವವನು ಕೇಳಲು ಇಷ್ಟಪಡುವಂತೆ ಮಾಡಲು ಅದನ್ನು ಹೇಗೆ ಸಮಯೋಚಿತ ನಯದಿಂದ ಆರಂಭಿಸಬೇಕೆಂಬುದನ್ನು ಯೋಜಿಸಿರಿ. ಆ ಬಳಿಕ ಮಾತಾಡಲಾರಂಭಿಸಿರಿ.
ಒತ್ತಡಕ್ಕೊಳಗಾಗುವಾಗ, ಏನು ಮಾಡಬೇಕೆಂದು ನೀವು ಜ್ಞಾಪಿಸಿಕೊಳ್ಳುವಿರೊ? ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು.” (ಮತ್ತಾ. 10:19, 20) ಇದರ ಅರ್ಥವು, ಒಂದನೆಯ ಶತಮಾನದ ಕ್ರೈಸ್ತರಿಗೆ ಕೊಡಲ್ಪಟ್ಟ ಅದ್ಭುತಕರವಾದ “ಜ್ಞಾನವಾಕ್ಯವು” ನಿಮಗೆ ಕೊಡಲ್ಪಡುವುದೆಂದಲ್ಲ. (1 ಕೊರಿಂ. 12:8) ಆದರೆ ಯೆಹೋವನು ಕ್ರೈಸ್ತ ಸಭೆಯಲ್ಲಿ ತನ್ನ ಸೇವಕರಿಗೆ ಒದಗಿಸುವ ಶಿಕ್ಷಣವನ್ನು ನೀವು ಕ್ರಮವಾಗಿ ತೆಗೆದುಕೊಳ್ಳುವಲ್ಲಿ, ಅಗತ್ಯವಿರುವಾಗ ಪವಿತ್ರಾತ್ಮವು ಆ ಬೇಕಾಗಿರುವ ಮಾಹಿತಿಯನ್ನು ನಿಮ್ಮ ಮನಸ್ಸಿಗೆ ತರುವುದು.—ಯೆಶಾ. 50:4.
ಆಶುಭಾಷಣವು ಅತಿ ಪರಿಣಾಮಕಾರಿಯಾಗಿರಬಲ್ಲದು ಎಂಬುದರಲ್ಲಿ ಸಂಶಯವಿಲ್ಲ. ನೀವು ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ ಇದನ್ನು ಕ್ರಮವಾಗಿ ಅಭ್ಯಾಸ ಮಾಡುವುದಾದರೆ, ಅಗತ್ಯ ಬೀಳುವಾಗ ಇತರರಿಗೆ ಪೂರ್ವಸಿದ್ಧತೆಯಿಲ್ಲದೆ ಉತ್ತರಗಳನ್ನು ಕೊಡುವುದು ಕಷ್ಟಕರವಾಗುವುದಿಲ್ಲ. ಏಕೆಂದರೆ ತದ್ರೀತಿಯ ಹೊರಮೇರೆಯನ್ನು ತಯಾರಿಸುವ ವಿಧಾನಗಳು ಅಲ್ಲಿಯೂ ಅನ್ವಯಿಸುತ್ತವೆ. ಹಿಂಜರಿಯಬೇಡಿರಿ. ಆಶುಭಾಷಣವನ್ನು ಮಾಡಲು ಕಲಿಯುವುದು, ನಿಮ್ಮ ಕ್ಷೇತ್ರ ಶುಶ್ರೂಷೆಯನ್ನು ಹೆಚ್ಚು ಫಲಕಾರಿಯಾಗಿ ಮಾಡಲು ನಿಮಗೆ ನೆರವಾಗುವುದು. ಮತ್ತು ಸಭೆಗೆ ಭಾಷಣ ನೀಡುವ ಸುಯೋಗವು ನಿಮಗಿರುವಲ್ಲಿ, ನೀವು ಸಭಿಕರ ಗಮನವನ್ನು ಆಕರ್ಷಿಸಿ, ಅವರ ಹೃದಯಗಳನ್ನು ತಲಪುವುದು ಹೆಚ್ಚು ಸಂಭವನೀಯ.