ಅಧ್ಯಾಯ 31
ಇತರರಿಗೆ ತೋರಿಸಲ್ಪಡುವ ಗೌರವ
“ಎಲ್ಲರನ್ನೂ ಸನ್ಮಾನಿಸಿರಿ,” ಮತ್ತು “ಯಾರನ್ನೂ ದೂಷಿಸದೆ” ಇರಿ ಎಂದು ಶಾಸ್ತ್ರವಚನಗಳು ಹೇಳುತ್ತವೆ. (1 ಪೇತ್ರ 2:17; ತೀತ 3:2) ಹೌದು, ನಾವು ಸಂಧಿಸುವ ಪ್ರತಿ ಮನುಷ್ಯನು ‘ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟವನು.’ (ಯಾಕೋ. 3:9) ಪ್ರತಿಯೊಬ್ಬನು ಕ್ರಿಸ್ತನು ಯಾರಿಗಾಗಿ ಸತ್ತನೊ ಅಂತಹ ವ್ಯಕ್ತಿಯಾಗಿದ್ದಾನೆ. (ಯೋಹಾ. 3:16) ಮತ್ತು ಎಲ್ಲರೂ, ಸುವಾರ್ತೆಗನುಸಾರ ಕ್ರಿಯೆಗೈಯುವ ಹಾಗೂ ರಕ್ಷಿಸಲ್ಪಡುವ ಉದ್ದೇಶದಿಂದ ಅದನ್ನು ಕೇಳಿಸಿಕೊಳ್ಳಲು ಅರ್ಹರಾಗಿದ್ದಾರೆ. (2 ಪೇತ್ರ 3:9) ಕೆಲವರಲ್ಲಿ ವಿಶೇಷ ಗೌರವಕ್ಕೆ ಅರ್ಹವಾಗಿರುವ ಗುಣಗಳು ಅಥವಾ ಅಧಿಕಾರವಿದೆ.
ಹಾಗಾದರೆ ಬೈಬಲು ಯಾವ ರೀತಿಯ ಗೌರವವನ್ನು ತೋರಿಸಬೇಕೆಂದು ಹೇಳುತ್ತದೊ ಅಂತಹ ಗೌರವವನ್ನು ತೋರಿಸುವುದರಿಂದ ತಮಗೆ ವಿನಾಯತಿ ಇದೆಯೆಂದು ಕೆಲವರು ಏಕೆ ನೆನಸಬಹುದು? ಏಕೆಂದರೆ ಕೋಮು, ವರ್ಣ, ಲಿಂಗ, ಆರೋಗ್ಯ, ವಯಸ್ಸು, ಐಶ್ವರ್ಯ ಅಥವಾ ಸಾಮಾಜಿಕ ಸ್ಥಾನಮಾನದ ಮೇಲೆ ಹೊಂದಿಕೊಂಡು, ಗೌರವಕ್ಕೆ ಯಾರು ಯೋಗ್ಯರು ಎಂಬುದನ್ನು ಸ್ಥಳಿಕ ಸಂಸ್ಕೃತಿಯು ನಿರ್ಣಯಿಸಬಹುದು. ಸಾರ್ವಜನಿಕ ಅಧಿಕಾರಿಗಳ ಮಧ್ಯೆ ಇರುವ ವ್ಯಾಪಕವಾದ ಭ್ರಷ್ಟಾಚಾರವು, ಅಧಿಕಾರ ಸ್ಥಾನಕ್ಕಿರುವ ಗೌರವವನ್ನು ಶಿಥಿಲಗೊಳಿಸಿದೆ. ಕೆಲವು ದೇಶಗಳಲ್ಲಿ, ಪ್ರಾಯಶಃ ಮೂಲಭೂತ ಆವಶ್ಯಕತೆಗಳನ್ನು ಪಡೆಯಲಿಕ್ಕಾಗಿ ದೀರ್ಘಾವಧಿಯ ವರೆಗೆ ಕೆಲಸವನ್ನು ಮಾಡಬೇಕಾಗಿರುವ ಕಾರಣ ಜನರು ತಮ್ಮ ಜೀವನದಲ್ಲಿ ತುಂಬ ಅಸಂತುಷ್ಟರಾಗಿದ್ದಾರೆ. ಮತ್ತು ಅವರ ಸುತ್ತಮುತ್ತಲೂ ಗೌರವವನ್ನು ತೋರಿಸದಂಥ ಜನರಿದ್ದಾರೆ. ಜನಪ್ರಿಯರಲ್ಲದ ಅಧ್ಯಾಪಕರು ಮತ್ತು ಅಧಿಕಾರದಲ್ಲಿರುವವರ ವಿರುದ್ಧ ಪ್ರತಿಭಟನೆ ತೋರಿಸುವುದರಲ್ಲಿ ಜೊತೆಗೂಡುವಂತೆ ಯುವ ಜನರು ಸಮಾನಸ್ಥರಿಂದ ಒತ್ತಡಕ್ಕೊಳಗಾಗುತ್ತಾರೆ. ಟೆಲಿವಿಷನ್‌ನಲ್ಲಿ ಮಕ್ಕಳು ಹೆತ್ತವರಿಗಿಂತಲೂ ಹುಷಾರಾಗಿರುವುದನ್ನು ಅಥವಾ ಹೆತ್ತವರ ಮೇಲೆ ಅಧಿಕಾರ ನಡೆಸುವುದನ್ನು ನೋಡಿ ಅನೇಕರು ಪ್ರಭಾವಿತರಾಗುತ್ತಾರೆ. ಇಂತಹ ಲೌಕಿಕ ವಿಚಾರಗಳು, ಇತರರ ಕಡೆಗೆ ನಮಗಿರುವ ಆದರಾಭಿಮಾನಗಳನ್ನು ಬದಲಾಯಿಸದಂತೆ ನಾವು ಶತಪ್ರಯತ್ನ ಮಾಡಬೇಕಾಗುತ್ತದೆ. ಆದರೂ, ನಾವು ಜನರಿಗೆ ಘನತೆ ತೋರಿಸುವಾಗ, ವಿಚಾರ ವಿನಿಮಯವು ಹೆಚ್ಚು ಸುಲಭವಾಗಿ ಸಾಧ್ಯವಾಗುವಂಥ ವಾತಾವರಣವನ್ನು ಇದು ಸೃಷ್ಟಿಸುತ್ತದೆ.
ಗೌರವಯುತವಾದ ಸಮೀಪಿಸುವಿಕೆ. ಧಾರ್ಮಿಕ ಕೆಲಸದಲ್ಲಿ ತೊಡಗಿರುವ ಒಬ್ಬ ವ್ಯಕ್ತಿಯು, ಸೂಕ್ತವಾದ ಉಡುಪನ್ನು ಧರಿಸುವ ಮೂಲಕ ಮತ್ತು ಸೂಕ್ತವಾಗಿ ವರ್ತಿಸುವ ಮೂಲಕ ಗೌರವವನ್ನು ತೋರಿಸುವವನಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಯಾವುದು ಸೂಕ್ತವಾದ ಶಿಷ್ಟಾಚಾರವೆಂದು ಪರಿಗಣಿಸಲ್ಪಡುತ್ತದೋ ಅದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು, ಒಂದು ಟೋಪಿಯನ್ನು ಧರಿಸಿಯೊ ಕಿಸೆಯಲ್ಲಿ ಕೈಯನ್ನಿಟ್ಟುಕೊಂಡೊ ಸಮೀಪಿಸುವುದನ್ನು ಕೆಲವರು ಅವಮರ್ಯಾದೆಯೆಂದು ಎಣಿಸುತ್ತಾರೆ. ಬೇರೆ ಕಡೆಗಳಲ್ಲಿ ಇಂತಹ ನಡವಳಿಕೆಯನ್ನು ಜನರು ಅಂಗೀಕರಿಸಬಹುದು. ಆದುದರಿಂದ, ಇತರರ ಮನನೋಯಿಸದಂತೆ, ಇಂತಹ ಸ್ಥಳಿಕ ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳಿರಿ. ಹೀಗೆ ಮಾಡುವುದು, ಸುವಾರ್ತೆಯನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸುವ ನಿಮ್ಮ ಪ್ರಯತ್ನಕ್ಕೆ ಬರುವ ತಡೆಗಳನ್ನು ತಪ್ಪಿಸಲು ನಿಮಗೆ ಸಹಾಯಮಾಡಬಲ್ಲದು.
ಇದು ನಾವು ಇತರರನ್ನು, ವಿಶೇಷವಾಗಿ ವೃದ್ಧರನ್ನು ಸಂಬೋಧಿಸುವ ರೀತಿಗೂ ಅನ್ವಯಿಸುತ್ತದೆ. ಯುವ ಜನರು ವೃದ್ಧರ ಅನುಮತಿ ಪಡೆಯದೇ ಅವರ ಮೊದಲ ಹೆಸರಿನಿಂದ ಅವರನ್ನು ಕರೆಯುವುದನ್ನು ಸಾಮಾನ್ಯವಾಗಿ ಅಸಭ್ಯ ನಡವಳಿಕೆಯಾಗಿ ವೀಕ್ಷಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ವಯಸ್ಕರೂ ಅಪರಿಚಿತರನ್ನು ಅವರ ಮೊದಲ ಹೆಸರಿನಿಂದ ಕರೆಯುವುದರಿಂದ ದೂರವಿರುವಂತೆ ನಿರೀಕ್ಷಿಸಲಾಗುತ್ತದೆ. ಅಲ್ಲದೆ, ಅನೇಕ ಭಾಷೆಗಳಲ್ಲಿ, ನಿಮಗಿಂತ ಹೆಚ್ಚು ವಯಸ್ಸಾದವರನ್ನು ಅಥವಾ ಅಧಿಕಾರದಲ್ಲಿರುವವರನ್ನು ಸಂಬೋಧಿಸುವಾಗ, ಅವರಿಗೆ ಗೌರವವನ್ನು ತೋರಿಸಲಿಕ್ಕಾಗಿ “ನೀವು” ಎಂಬ ಬಹುವಚನವನ್ನೊ ಬೇರೆ ರೀತಿಯ ಗೌರವಪೂರ್ವಕ ವಿಧಾನವನ್ನೊ ಬಳಸಲಾಗುತ್ತದೆ.
ಗೌರವಯುತವಾದ ಮನ್ನಣೆ. ಚಿಕ್ಕ ಸಮುದಾಯಗಳಲ್ಲಿ, ರಸ್ತೆಯಲ್ಲಿ ನಡೆಯುತ್ತಿರುವಾಗ ಅಥವಾ ಕೋಣೆಯನ್ನು ಪ್ರವೇಶಿಸುವಾಗ, ನೀವು ಸಂಧಿಸುವ ಒಬ್ಬನ ಉಪಸ್ಥಿತಿಗೆ ಮನ್ನಣೆ ತೋರಿಸುವಂತೆ ನಿರೀಕ್ಷಿಸಲಾಗುತ್ತದೆ. ಇದನ್ನು ಸರಳವಾಗಿ ವಂದಿಸುವುದು, ಮುಗುಳುನಗೆ ಬೀರುವುದು, ತಲೆಬಾಗಿಸುವುದು ಅಥವಾ ಹುಬ್ಬೇರಿಸುವ ಮೂಲಕ ಸಹ ಮಾಡಲಾಗುತ್ತದೆ. ಒಬ್ಬನನ್ನು ಅಲಕ್ಷಿಸುವುದು ಅಗೌರವವೆಂದೆಣಿಸಲ್ಪಡುತ್ತದೆ.
ಆದರೆ ನೀವು ಕೆಲವರ ಉಪಸ್ಥಿತಿಗೆ ಮನ್ನಣೆ ತೋರಿಸಿದರೂ ತಮ್ಮನ್ನು ಅಲಕ್ಷಿಸಲಾಗಿದೆಯೆಂದು ಅವರು ನೆನಸಬಹುದು. ಅದು ಹೇಗೆ? ನೀವು ಅವರಿಗೆ ವೈಯಕ್ತಿಕವಾಗಿ ಮನ್ನಣೆ ಕೊಡಲಿಲ್ಲ ಎಂಬುದನ್ನು ಅವರು ಗ್ರಹಿಸಸಾಧ್ಯವಿರುವುದರಿಂದಲೇ. ಯಾವುದೋ ಒಂದು ಶಾರೀರಿಕ ವೈಶಿಷ್ಟ್ಯದ ಕಾರಣ ಜನರನ್ನು ವರ್ಗೀಕರಿಸುವುದು ಅಸಾಮಾನ್ಯವಾದದ್ದೇನೂ ಅಲ್ಲ. ಅಂಗವಿಕಲರನ್ನೂ ಆರೋಗ್ಯ ಸಮಸ್ಯೆಗಳುಳ್ಳವರನ್ನೂ ಅನೇಕವೇಳೆ ಅಲಕ್ಷಿಸಲಾಗುತ್ತದೆ. ಆದರೂ ದೇವರ ವಾಕ್ಯವು ಅಂತಹವರನ್ನು ಹೇಗೆ ಪ್ರೀತಿ ಮತ್ತು ಗೌರವದಿಂದ ಉಪಚರಿಸಬೇಕೆಂಬುದನ್ನು ತೋರಿಸುತ್ತದೆ. (ಮತ್ತಾ. 8:2, 3) ನಾವೆಲ್ಲರೂ ಆದಾಮನ ಪಾಪದ ಬಾಧ್ಯತೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಬಾಧಿತರಾಗಿದ್ದೇವೆ. ಇತರರು ನಿಮ್ಮನ್ನು ನಿಮ್ಮ ದೋಷಗಳಿಂದಲೇ ಸದಾ ಗುರುತಿಸುವಲ್ಲಿ ನಿಮಗೆ ಗೌರವಿಸಲ್ಪಡುವ ಅನಿಸಿಕೆಯಾದೀತೊ? ಅದರ ಬದಲಿಗೆ, ನಿಮ್ಮ ಅನೇಕ ಸಕಾರಾತ್ಮಕ ಗುಣಗಳಿಂದ ನೀವು ಗುರುತಿಸಲ್ಪಡುವಂತೆ ನೀವು ಅಪೇಕ್ಷಿಸುವುದಿಲ್ಲವೊ?
ಗೌರವಿಸುವುದರಲ್ಲಿ ತಲೆತನವನ್ನು ಅಂಗೀಕರಿಸುವುದೂ ಸೇರಿದೆ. ಕೆಲವು ಸ್ಥಳಗಳಲ್ಲಿ, ಕುಟುಂಬದಲ್ಲಿ ಇತರರಿಗೆ ಸಾಕ್ಷಿ ನೀಡುವ ಮೊದಲು ಮನೆಯ ಶಿರಸ್ಸಿನೊಂದಿಗೆ ಮಾತಾಡಬೇಕಾಗುತ್ತದೆ. ಸಾರುವ ಮತ್ತು ಕಲಿಸುವ ಅಧಿಕಾರವು ನಮಗೆ ಬರುವುದು ಯೆಹೋವನಿಂದಾದರೂ, ಮಕ್ಕಳಿಗೆ ತರಬೇತು, ಶಿಸ್ತು ಮತ್ತು ಮಾರ್ಗದರ್ಶನವನ್ನು ಕೊಡಲು ದೇವರಿಂದ ನೇಮಿಸಲ್ಪಟ್ಟವರು ಹೆತ್ತವರೆಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. (ಎಫೆ. 6:1-4) ಆದಕಾರಣ, ಒಂದು ಮನೆಗೆ ಭೇಟಿ ನೀಡುವಾಗ, ಮಕ್ಕಳೊಂದಿಗೆ ಹೆಚ್ಚು ಚರ್ಚಿಸಲು ತೊಡಗುವ ಮೊದಲು ಹೆತ್ತವರೊಂದಿಗೆ ಮಾತಾಡುವುದು ಸಾಮಾನ್ಯವಾಗಿ ಸೂಕ್ತವಾದದ್ದಾಗಿದೆ.
ವಯಸ್ಸಾದವರಿಗೆ ಜೀವನದಲ್ಲಿ ಅನುಭವವಿರುತ್ತದೆ ಮತ್ತು ಇದನ್ನು ಗೌರವಿಸತಕ್ಕದ್ದು. (ಯೋಬ 32:6, 7) ಇದಕ್ಕೆ ತೋರಿಸಿದ ಮನ್ನಣೆಯು, ಶ್ರೀ ಲಂಕದಲ್ಲಿ ವೃದ್ಧರೊಬ್ಬನನ್ನು ಭೇಟಿಯಾದ ಒಬ್ಬ ಯುವ ಪಯನೀಯರ್ ಸಹೋದರಿಗೆ ಸಹಾಯ ನೀಡಿತು. ಅವರು ಪ್ರಥಮವಾಗಿ, “ನಿನ್ನಂತಹ ಯುವ ವ್ಯಕ್ತಿ ನನಗೆ ಹೇಗೆ ಬೈಬಲನ್ನು ಕಲಿಸಸಾಧ್ಯವಿದೆ?” ಎಂದು ಹೇಳಿ ಅವಳ ಭೇಟಿಗೆ ಆಕ್ಷೇಪಣೆಯನ್ನೆತ್ತಿದರು. ಆದರೆ ಅವಳು ಉತ್ತರ ಕೊಟ್ಟದ್ದು: “ನಿಜವಾಗಿಯೂ ನಾನು ನಿಮಗೆ ಕಲಿಸಲು ಬಂದಿರುವುದಿಲ್ಲ. ಬದಲಾಗಿ ನಾನು ಕಲಿತ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ. ಅದು ನನ್ನನ್ನು ಎಷ್ಟು ಸಂತೋಷಪಡಿಸಿದೆಯೆಂದರೆ, ನಾನು ಅದನ್ನು ಇನ್ನಿತರರಿಗೆ ಹೇಳಲೇಬೇಕಾಗಿದೆ.” ಆ ಪಯನೀಯರಳ ಗೌರವಯುತ ಉತ್ತರವು, ಆ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಿತು. “ನೀನೇನು ಕಲಿತೆ, ನನಗೆ ಹೇಳು” ಎಂದರವರು. “ಸದಾಕಾಲ ಹೇಗೆ ಜೀವಿಸುವುದು ಎಂಬುದನ್ನು ನಾನು ಕಲಿತಿದ್ದೇನೆ,” ಎಂದು ಅವಳು ಹೇಳಿದಳು. ಆ ವೃದ್ಧರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದರು. ಎಲ್ಲ ವೃದ್ಧರು ಇದೇ ರೀತಿಯಲ್ಲಿ ಗೌರವಿಸಲ್ಪಡಲು ಬಯಸಲಿಕ್ಕಿಲ್ಲವಾದರೂ, ಹೆಚ್ಚಿನವರು ಇದನ್ನು ಗಣ್ಯಮಾಡುವುದಂತೂ ಖಂಡಿತ.
ಆದರೂ, ಗೌರವದ ಪ್ರದರ್ಶನವನ್ನು ವಿಪರೀತವಾಗಿಯೂ ತೋರಿಸುವ ಸಾಧ್ಯತೆಯಿದೆ. ಶಾಂತಸಾಗರದ ದ್ವೀಪಗಳಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ, ಹಳ್ಳಿಯ ಅಥವಾ ಕುಲದ ಮುಖ್ಯಸ್ಥರನ್ನು ಸಮೀಪಿಸುವಾಗ ವಾಡಿಕೆಯ ಪ್ರಕಾರ ಗೌರವಯುತವಾದ ಸಂಬೋಧನೆಗಳನ್ನು ಉಪಯೋಗಿಸುವುದು, ಸಾಕ್ಷಿಗಳಿಗೆ ಜನರು ಕಿವಿಗೊಡುವಂತೆಯೂ ಆ ಮುಖ್ಯಸ್ಥರೊಂದಿಗೂ ಅವರ ಆಡಳಿತದ ಕೆಳಗಿರುವ ಜನರೊಂದಿಗೂ ಸಾಕ್ಷಿಗಳು ಮಾತಾಡುವಂತೆಯೂ ಸಂದರ್ಭವನ್ನು ಕೊಡುವುದು. ಆದರೂ ಹೊಗಳಿಕೆಯ ಅಗತ್ಯವೂ ಇಲ್ಲ, ಅದು ಸರಿಯೂ ಅಲ್ಲ. (ಜ್ಞಾನೋ. 29:5) ತದ್ರೀತಿಯಲ್ಲಿ, ಒಂದು ಭಾಷೆಯಲ್ಲಿ ಅದರ ವ್ಯಾಕರಣದ ಭಾಗವಾಗಿ ಗೌರವಸೂಚಕ ಪದಗಳಿರಬಹುದಾದರೂ, ಅದನ್ನು ಅತ್ಯಧಿಕವಾಗಿ ಉಪಯೋಗಿಸಬೇಕೆಂದು ಕ್ರೈಸ್ತ ಗೌರವವು ಅಪೇಕ್ಷಿಸುವುದಿಲ್ಲ.
ಗೌರವಯುತವಾದ ಭಾಷಣ ನೀಡುವಿಕೆ. ನಮ್ಮ ನಿರೀಕ್ಷೆಗೆ ಕಾರಣವನ್ನು ವಿವರಿಸುವಾಗ, ಅದನ್ನು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಮಾಡಬೇಕೆಂದು ಬೈಬಲು ಪ್ರೋತ್ಸಾಹಿಸುತ್ತದೆ. (1 ಪೇತ್ರ 3:15, NW) ಆದಕಾರಣ, ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನದ ಲೋಪದೋಷಗಳನ್ನು ನಾವು ಬೇಗನೆ ಬಯಲುಪಡಿಸಲು ಶಕ್ತರಾಗಿರಬಹುದಾದರೂ, ಅವನು ತನ್ನ ಘನತೆಯನ್ನು ಕಳೆದುಕೊಳ್ಳುವ ರೀತಿಯಲ್ಲಿ ಅದನ್ನು ಮಾಡುವುದು ವಿವೇಕಯುತವಾಗಿದೆಯೋ? ಅವನಿಗೆ ತಾಳ್ಮೆಯಿಂದ ಕಿವಿಗೊಟ್ಟು, ಅವನಿಗೆ ಏಕೆ ಹಾಗನಿಸುತ್ತದೆಂದು ಪ್ರಾಯಶಃ ಕೇಳಿ, ಆ ಬಳಿಕ ನಾವು ಶಾಸ್ತ್ರವಚನಗಳಿಂದ ತರ್ಕಿಸುವಾಗ ಅವನ ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದು ಉತ್ತಮವಾಗಿರಲಿಕ್ಕಿಲ್ಲವೊ?
ಒಬ್ಬನು ಇನ್ನೊಬ್ಬನೊಡನೆ ಮಾತಾಡುವ ಇಂತಹ ಸನ್ನಿವೇಶಗಳಲ್ಲಿ ತೋರಿಸಲ್ಪಡುವ ಗೌರವವು, ವೇದಿಕೆಯಿಂದ ಸಭಿಕರೊಂದಿಗೆ ಮಾತಾಡುವಾಗಲೂ ತೋರಿಬರಬೇಕು. ತನ್ನ ಸಭಿಕರನ್ನು ಗೌರವಿಸುವಂಥ ಒಬ್ಬ ಭಾಷಣಕಾರನು, ಅವರನ್ನು ನಿರ್ದಯವಾಗಿ ಟೀಕಿಸನು ಅಥವಾ “ನಿಮಗೆ ನಿಜವಾಗಿಯೂ ಮನಸ್ಸಿರುವಲ್ಲಿ ಅದನ್ನು ಮಾಡಬಲ್ಲಿರಿ” ಎಂದು ಸೂಚಿಸುವಂಥ ಮನೋಭಾವವನ್ನು ತೋರಿಸನು. ಆ ರೀತಿಯಲ್ಲಿ ಮಾತಾಡುವುದು, ಇತರರನ್ನು ಕೇವಲ ನಿರುತ್ತೇಜಿಸುತ್ತದೆ ಅಷ್ಟೆ. ಅದರ ಬದಲಿಗೆ ಸಭಿಕರನ್ನು, ಅವರು ಯೆಹೋವನನ್ನು ಪ್ರೀತಿಸುವ ಮತ್ತು ಆತನ ಸೇವೆಮಾಡಲು ಬಯಸುವ ಜನರ ಒಂದು ಕೂಟವಾಗಿ ವೀಕ್ಷಿಸುವುದು ಎಷ್ಟು ಉತ್ತಮವಾಗಿರುವುದು! ಯೇಸುವನ್ನು ಅನುಕರಿಸುತ್ತಾ, ಆತ್ಮಿಕವಾಗಿ ಯಾರು ಬಲಹೀನರು, ಅನನುಭವಿಗಳು ಅಥವಾ ಬೈಬಲ್ ಸಲಹೆಯನ್ನು ಅನ್ವಯಿಸಲು ನಿಧಾನಿಗಳಾಗಿರಬಹುದೊ ಅಂಥವರೊಂದಿಗೆ ವ್ಯವಹರಿಸುವಾಗ ನಾವು ವಿವೇಚನೆಯನ್ನು ತೋರಿಸಬೇಕು.
ದೇವರ ವಾಕ್ಯವನ್ನು ಹೆಚ್ಚು ಪೂರ್ಣವಾಗಿ ಅನ್ವಯಿಸುವ ಅಗತ್ಯವಿರುವವರಲ್ಲಿ ತಾನೂ ಒಬ್ಬನೆಂದು ಭಾಷಣಕಾರನು ತನ್ನನ್ನು ಸೇರಿಸಿಕೊಳ್ಳುವಲ್ಲಿ, ಅವನು ತಮ್ಮನ್ನು ಗೌರವಿಸುತ್ತಾನೆಂಬುದನ್ನು ಸಭಿಕರು ಮನಗಾಣುವರು. ಆದುದರಿಂದ, ಶಾಸ್ತ್ರವಚನಗಳನ್ನು ಅನ್ವಯಿಸುವಾಗ, “ನೀವು” ಎಂಬ ಸರ್ವನಾಮವನ್ನು ಸತತವಾಗಿ ಬಳಸುವುದರಿಂದ ದೂರವಿರುವುದು ವಿವೇಕಯುತವಾದದ್ದಾಗಿದೆ. ಉದಾಹರಣೆಗೆ, “ನೀವು ನಿಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತಿದ್ದೀರೊ?” ಎಂದು ಕೇಳುವುದಕ್ಕೂ, “ನಮ್ಮಲ್ಲಿ ಪ್ರತಿಯೊಬ್ಬನು, ‘ನನಗೆ ಸಾಧ್ಯವಿರುವ ಸಕಲವನ್ನೂ ನಾನು ಮಾಡುತ್ತಿದ್ದೇನೊ?’ ಎಂದು ಕೇಳಿಕೊಳ್ಳುವುದು ಉತ್ತಮ” ಎಂದು ಹೇಳುವುದಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿರಿ. ಆ ಎರಡೂ ಪ್ರಶ್ನೆಗಳ ಮುಖ್ಯಾಂಶವು ಒಂದೇ ಆಗಿದ್ದರೂ, ಪ್ರಥಮ ಪ್ರಶ್ನೆಯು ಭಾಷಣಕಾರನು ತನ್ನನ್ನು ಸಭಿಕರ ಮಟ್ಟದಲ್ಲಿ ಇಟ್ಟುಕೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಆದರೆ ಎರಡನೆಯದ್ದು, ಭಾಷಣಕಾರನನ್ನು ಸೇರಿಸಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಸನ್ನಿವೇಶ ಮತ್ತು ತನ್ನ ಸ್ವಂತ ಹೇತುಗಳನ್ನು ವಿಶ್ಲೇಷಿಸುವಂತೆ ಉತ್ತೇಜಿಸುತ್ತದೆ.
ಸಭಿಕರನ್ನು ನಗಿಸುವ ಏಕಮಾತ್ರ ಕಾರಣಕ್ಕಾಗಿ ಹಾಸ್ಯದ ಹೇಳಿಕೆಗಳನ್ನು ಮಾಡುವ ಪ್ರಚೋದನೆಯನ್ನು ತಡೆಗಟ್ಟಲು ಪ್ರಯತ್ನಿಸಿರಿ. ಇದು ಬೈಬಲಿನ ಸಂದೇಶದ ಘನತೆಯಿಂದ ಒಬ್ಬನನ್ನು ಅಪಕರ್ಷಿಸುತ್ತದೆ. ನಾವು ದೇವರ ಸೇವೆಯಲ್ಲಿ ಸಂತೋಷಿಸಬೇಕೆಂಬುದು ನಿಜ. ಮತ್ತು ನಮಗೆ ನೇಮಿಸಲ್ಪಟ್ಟ ವಿಷಯಭಾಗದಲ್ಲಿ ತುಸು ವಿನೋದಕರವಾದ ವಿಷಯಗಳೂ ಇರಬಹುದು. ಹಾಗಿದ್ದರೂ, ಗಂಭೀರ ವಿಷಯವನ್ನು ನಗೆ ಬರಿಸುವ ಮಟ್ಟಕ್ಕೆ ಇಳಿಸುವುದು ಸಭಿಕರಿಗೂ ದೇವರಿಗೂ ಗೌರವದ ಕೊರತೆಯನ್ನು ತೋರಿಸುತ್ತದೆ.
ನಮ್ಮ ಸಮೀಪಿಸುವಿಕೆ, ನಮ್ಮ ವರ್ತನೆ ಮತ್ತು ನಮ್ಮ ಮಾತುಗಳು, ನಾವು ಇತರರನ್ನು ಹೇಗೆ ದೃಷ್ಟಿಸುವಂತೆ ಯೆಹೋವನು ನಮಗೆ ಕಲಿಸಿದ್ದಾನೋ ಅದೇ ರೀತಿ ಅವರನ್ನು ದೃಷ್ಟಿಸುತ್ತಿದ್ದೇವೆ ಎಂಬುದನ್ನು ಸದಾ ಪ್ರದರ್ಶಿಸುವಂತಿರಲಿ.