ಅಧ್ಯಾಯ 43
ನೇಮಿತ ವಿಷಯಭಾಗದ ಉಪಯೋಗ
ಬೈಬಲು ಕ್ರೈಸ್ತ ಸಭೆಯನ್ನು ಮಾನವ ಶರೀರಕ್ಕೆ ಹೋಲಿಸುತ್ತದೆ. ಪ್ರತಿಯೊಂದು ಅಂಗವು ಅಗತ್ಯವಾದರೂ, “ಎಲ್ಲಾ ಅಂಗಗಳಿಗೆ . . . ಒಂದೇ ಕೆಲಸ ಇರುವದಿಲ್ಲ.” ಇದಕ್ಕೆ ಹೊಂದಿಕೆಯಲ್ಲಿ, ನಮ್ಮ ವಶಕ್ಕೆ ಕೊಡಲ್ಪಟ್ಟಿರುವ ಯಾವುದೇ ಸುಯೋಗದಲ್ಲಿ ನಾವು ಶ್ರಮಪಡಬೇಕು. ನಮಗೆ ಭಾಷಣದ ಯಾವುದೇ ನೇಮಕವು ದೊರೆತರೂ ಅದನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಚೆನ್ನಾಗಿ ನಿರ್ವಹಿಸುವುದನ್ನು ಇದು ಅಗತ್ಯಪಡಿಸುತ್ತದೆ. ಹೆಚ್ಚು ಆಸಕ್ತಿಕರವಾದ ಬೇರೆ ವಿಷಯವಸ್ತುಗಳಿರುವುದರಿಂದ ಕೆಲವು ವಿಷಯವಸ್ತುಗಳನ್ನು ಕಡಿಮೆ ಪ್ರಮುಖತೆಯದ್ದಾಗಿ ನೋಡಬಾರದು. (ರೋಮಾ. 12:4-8) ಆತ್ಮಿಕ ಆಹಾರವನ್ನು “ಹೊತ್ತುಹೊತ್ತಿಗೆ” ಒದಗಿಸುವ ಜವಾಬ್ದಾರಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗಿದೆ. (ಮತ್ತಾ. 24:45) ನಾವು ಪಡೆದುಕೊಂಡಿರುವ ಸಲಹೆಗಳಿಗನುಸಾರ ಭಾಷಣಗಳನ್ನು ವಿಕಸಿಸಲಿಕ್ಕಾಗಿ ನಾವು ನಮ್ಮ ವೈಯಕ್ತಿಕ ಸಾಮರ್ಥ್ಯಗಳನ್ನು ಉಪಯೋಗಿಸುವಾಗ, ನಾವು ಆ ಏರ್ಪಾಡಿಗೆ ಮಾನ್ಯತೆಯನ್ನು ತೋರಿಸುತ್ತೇವೆ. ಇದು ಇಡೀ ಸಭೆಯು ಸರಾಗವಾಗಿ ಕಾರ್ಯನಡಿಸುವಂತೆ ನೆರವಾಗುತ್ತದೆ.
ಅದರಲ್ಲಿ ಸೇರಿಸಬೇಕಾದ ಸಂಗತಿಗಳು. ನಿಮಗೆ ಶಾಲೆಯಲ್ಲಿ ಒಂದು ವಿಷಯವಸ್ತು ನೇಮಿಸಲ್ಪಟ್ಟಿರುವಾಗ, ಬೇರೊಂದು ವಿಷಯವನ್ನಲ್ಲ, ಬದಲಾಗಿ ಆ ವಿಷಯವಸ್ತುವನ್ನೇ ವಿಕಸಿಸಲು ನಿಶ್ಚಯ ಮಾಡಿಕೊಳ್ಳಿರಿ. ಹೆಚ್ಚಿನ ಸಂದರ್ಭಗಳಲ್ಲಿ, ಪರಾಮರ್ಶೆಗಾಗಿ ನಿರ್ದಿಷ್ಟ ವಿಷಯಭಾಗವು ನಿಮಗೆ ಕೊಡಲ್ಪಡುವುದು. ಆದರೆ, ನಿಮ್ಮ ಭಾಷಣಕ್ಕೆ ಆಧಾರದೋಪಾದಿ ಯಾವ ಮುದ್ರಿತ ಮಾಹಿತಿಯನ್ನು ನೀವು ಉಪಯೋಗಿಸಬೇಕು ಎಂದು ನಿಮಗೆ ಹೇಳಲ್ಪಟ್ಟಿರದಿದ್ದಲ್ಲಿ, ನೀವು ನಿಮ್ಮ ಆಯ್ಕೆಯ ಮೂಲದಿಂದ ಮಾಹಿತಿಯನ್ನು ಸಂಗ್ರಹಿಸಬಹುದು. ಆದರೂ, ನೀವು ನಿಮ್ಮ ಭಾಷಣವನ್ನು ತಯಾರಿಸುವಾಗ, ನಿಮ್ಮ ಇಡೀ ಭಾಷಣವು ನೇಮಿಸಲ್ಪಟ್ಟಿರುವ ವಿಷಯವಸ್ತುವಿನ ಸುತ್ತಲೂ ರಚಿಸಲ್ಪಟ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಯಾವ ವಿಷಯಗಳನ್ನು ಸೇರಿಸಬೇಕೆಂದು ನಿರ್ಧರಿಸುವಾಗ, ನೀವು ನಿಮ್ಮ ಸಭಿಕರನ್ನು ಸಹ ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ.
ನಿಮ್ಮ ಭಾಷಣಕ್ಕೆ ಆಧಾರವಾಗಿ ಕೊಟ್ಟಿರುವ ವಿಷಯಭಾಗವನ್ನು ಜಾಗರೂಕತೆಯಿಂದ ಅಧ್ಯಯನಮಾಡಿ, ಅದರಲ್ಲಿರುವ ಶಾಸ್ತ್ರವಚನಗಳನ್ನು ವಿಶ್ಲೇಷಿಸಿರಿ. ಬಳಿಕ, ಅದನ್ನು ಸಭಿಕರ ಪ್ರಯೋಜನಾರ್ಥವಾಗಿ ಅತಿ ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದೆಂಬುದನ್ನು ಪರಿಗಣಿಸಿರಿ. ಮುದ್ರಿತ ವಿಷಯಭಾಗದಿಂದ ಎರಡೊ ಅಥವಾ ಹೆಚ್ಚೆಂದರೆ ಮೂರೊ ಅಂಶಗಳನ್ನು ಆರಿಸಿ ತೆಗೆದು, ಅವುಗಳನ್ನು ನಿಮ್ಮ ಭಾಷಣದ ಮುಖ್ಯಾಂಶಗಳಾಗಿ ಉಪಯೋಗಿಸಿರಿ. ಅದೇ ರೀತಿ, ಆ ನೇಮಿತ ಮಾಹಿತಿಯಿಂದ ನೀವು ಓದಿ ಚರ್ಚಿಸಲು ಬಯಸುವ ಶಾಸ್ತ್ರವಚನಗಳನ್ನು ಆರಿಸಿಕೊಳ್ಳಿರಿ.
ಭಾಷಣಕ್ಕೆ ಆಧಾರವಾಗಿ ಕೊಡಲ್ಪಟ್ಟಿರುವ ವಿಷಯಭಾಗದಲ್ಲಿ ನೀವು ಎಷ್ಟನ್ನು ಆವರಿಸಬೇಕು? ನೀವು ಪರಿಣಾಮಕಾರಿಯಾಗಿ ಎಷ್ಟನ್ನು ಉಪಯೋಗಿಸಸಾಧ್ಯವಿದೆಯೊ ಅಷ್ಟನ್ನೇ. ನಿಮ್ಮ ಭಾಷಣದಲ್ಲಿ ತುಂಬ ಮಾಹಿತಿಯನ್ನು ತುರುಕಿಸುವ ಉದ್ದೇಶದಿಂದ ಉತ್ತಮ ಬೋಧನಾ ವಿಧಾನಗಳನ್ನು ತ್ಯಾಗಮಾಡಬೇಡಿರಿ. ಆ ಮಾಹಿತಿಯಲ್ಲಿ ಕೆಲವು ನಿಮ್ಮ ಭಾಷಣದ ಉದ್ದೇಶಕ್ಕೆ ಹೊಂದಿಕೊಳ್ಳದಿರುವಲ್ಲಿ, ಆ ಉದ್ದೇಶವನ್ನು ಪೂರೈಸಲು ನಿಮಗೆ ಸಹಾಯಮಾಡುವಂಥ ಭಾಗಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿರಿ. ನೇಮಿತ ವಿಷಯಭಾಗದಿಂದ ನಿಮ್ಮ ಸಭಿಕರಿಗೆ ಅತಿ ಬೋಧಪ್ರದವೂ ಪ್ರಯೋಜನಕರವೂ ಆಗಿರುವ ಸಂಗತಿಗಳನ್ನು ಮಾತ್ರ ಉಪಯೋಗಿಸಿರಿ. ಈ ಭಾಷಣ ಸಲಹಾ ಅಂಶದ ಸಂಬಂಧದಲ್ಲಿ ನಿಮ್ಮ ಉದ್ದೇಶವು ನೀವು ಎಷ್ಟನ್ನು ಆವರಿಸಬಲ್ಲಿರಿ ಎಂದು ನೋಡುವುದಲ್ಲ, ಬದಲಿಗೆ, ನಿಮ್ಮ ಭಾಷಣಕ್ಕೆ ಆಧಾರವಾಗಿ ಏನು ನೇಮಿಸಲ್ಪಟ್ಟಿದೆಯೋ ಅದನ್ನು ಉಪಯೋಗಿಸುವುದೇ ಆಗಿದೆ.
ನಿಮ್ಮ ಭಾಷಣವು, ನಿಮಗೆ ನೇಮಿಸಲ್ಪಟ್ಟ ವಿಷಯಭಾಗದ ಬರಿಯ ಸಾರಾಂಶವಾಗಿರುವಂತೆ ಉದ್ದೇಶಿಸಲ್ಪಟ್ಟಿರುವುದಿಲ್ಲ. ನೀವು ಕೆಲವು ಅಂಶಗಳನ್ನು ವಿವರಿಸಿ, ಅವುಗಳನ್ನು ವಿಸ್ತರಿಸಿ, ದೃಷ್ಟಾಂತಿಸಿ, ಅವುಗಳನ್ನು ಹೇಗೆ ಅನ್ವಯಿಸಬಹುದೆಂಬ ಒಂದು ಉದಾಹರಣೆಯನ್ನು ಕೊಡಲು ಯೋಜಿಸಬೇಕು. ನಿಮ್ಮ ನೇಮಿತ ವಿಷಯಭಾಗದ ಸ್ಥಾನದಲ್ಲಿ ಹೆಚ್ಚಿನ ವಿಚಾರಗಳನ್ನು ಉಪಯೋಗಿಸುವ ಬದಲು, ನಿಮ್ಮ ನೇಮಿತ ವಿಷಯಭಾಗದಿಂದ ತೆಗೆದ ಪ್ರಮುಖ ಅಂಶಗಳನ್ನು ವಿಕಸಿಸಲಿಕ್ಕಾಗಿ ಅವುಗಳನ್ನು ಉಪಯೋಗಿಸಬೇಕು.
ಬೋಧಕರಾಗಲು ಅಗತ್ಯವಿರುವ ಅರ್ಹತೆಗಳುಳ್ಳ ಸಹೋದರರು ಸಕಾಲದಲ್ಲಿ ಸೇವಾ ಕೂಟದಲ್ಲಿ ಭಾಷಣವನ್ನು ನೀಡಲು ಆಮಂತ್ರಿಸಲ್ಪಡಬಹುದು. ತಮಗೆ ನೇಮಿಸಲ್ಪಟ್ಟಿರುವ ವಿಷಯಭಾಗವನ್ನು—ಅವುಗಳ ಸ್ಥಾನದಲ್ಲಿ ಬೇರೆ ವಿಷಯಗಳನ್ನು ಭರ್ತಿಮಾಡುವುದಕ್ಕೆ ಬದಲಾಗಿ—ಸದುಪಯೋಗಿಸುವ ಅಗತ್ಯವನ್ನು ಅವರು ತಿಳಿದಿರುತ್ತಾರೆ. ಅದೇ ರೀತಿ, ಯಾರು ಸಾರ್ವಜನಿಕ ಭಾಷಣಗಳನ್ನು ಕೊಡುತ್ತಾರೋ ಅಂಥ ಸಹೋದರರಿಗೆ ಅನುಸರಿಸಲು ಹೊರಮೇರೆಗಳನ್ನು ಕೊಡಲಾಗುತ್ತದೆ. ಇವು ತುಸು ಹೊಂದಿಸಿಕೊಳ್ಳುವಿಕೆಗೆ ಅವಕಾಶವನ್ನು ನೀಡುತ್ತವಾದರೂ, ವಿಕಸಿಸಬೇಕಾದ ಮುಖ್ಯಾಂಶಗಳು, ಬೆಂಬಲ ನೀಡಲು ಉಪಯೋಗಿಸಬೇಕಾದ ವಾದಗಳು ಮತ್ತು ಭಾಷಣಕ್ಕೆ ಅಸ್ತಿವಾರವನ್ನು ಒದಗಿಸುವ ಶಾಸ್ತ್ರವಚನಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ನೇಮಿತ ವಿಷಯಭಾಗವನ್ನು ಆಧಾರವಾಗಿ ಉಪಯೋಗಿಸುತ್ತಾ ಬೋಧಿಸುವುದು ಹೇಗೆಂಬುದನ್ನು ಕಲಿಯುವುದು, ಬೇರೆ ಭಾಷಣ ನೇಮಕಗಳಿಗಾಗಿ ತಯಾರಿಸುವುದರ ಒಂದು ಪ್ರಮುಖ ಭಾಗವಾಗಿದೆ.
ಈ ತರಬೇತಿಯು ನೀವು ಪ್ರಗತಿಪರ ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವಂತೆಯೂ ಸಹಾಯಮಾಡಬಲ್ಲದು. ತುಂಬ ಆಸಕ್ತಿಕರವಾಗಿರಬಹುದಾದ ಆದರೆ ವಿಷಯವಸ್ತುವನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರದಂಥ ಇತರ ಸಂಗತಿಗಳನ್ನು ಎತ್ತಿತೋರಿಸುವ ಮೂಲಕ ಅಧ್ಯಯನದ ವಿಷಯವಸ್ತುವನ್ನು ಬಿಟ್ಟು ಬೇರೆ ವಿಷಯಕ್ಕೆ ಹೋಗುವ ಬದಲು, ಅಧ್ಯಯನದ ವಿಷಯಭಾಗದ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಲು ನೀವು ಕಲಿಯುವಿರಿ. ಆದರೂ, ಈ ಪಾಠದ ನಿಜ ಇಂಗಿತವನ್ನು ನೀವು ತಿಳಿಯುವುದಾದರೆ, ನೀವು ಒಬ್ಬ ವಿದ್ಯಾರ್ಥಿಗೆ ಬೇಕಾಗಬಹುದಾದ ಹೆಚ್ಚಿನ ವಿವರಣೆಯನ್ನು ಒದಗಿಸದಿರುವಷ್ಟು ಕಟ್ಟುನಿಟ್ಟಿನವರೂ ಆಗಿರುವುದಿಲ್ಲ.