ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 41 ಪು. 226-ಪು. 229 ಪ್ಯಾ. 1
  • ಇತರರಿಗೆ ಅರ್ಥವತ್ತಾದದ್ದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇತರರಿಗೆ ಅರ್ಥವತ್ತಾದದ್ದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಅರ್ಥವಾಗುವ ಭಾಷೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸಭಿಕರಿಗೆ ಬೋಧಪ್ರದವಾದ ವಿಷಯ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಾರ್ವಜನಿಕರಿಗಾಗಿ ಕೊಡುವ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸರಳ ಮಾತುಗಳಿಂದ ಬೋಧಿಸಿರಿ
    2009 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 41 ಪು. 226-ಪು. 229 ಪ್ಯಾ. 1

ಅಧ್ಯಾಯ 41

ಇತರರಿಗೆ ಅರ್ಥವತ್ತಾದದ್ದು

ನೀವೇನು ಮಾಡುವ ಅಗತ್ಯವಿದೆ?

ನೀವು ಏನು ಹೇಳುತ್ತೀರೋ ಅದರ ಅರ್ಥವನ್ನು ಇತರರು ಸುಲಭವಾಗಿ ಗ್ರಹಿಸುವಂಥ ರೀತಿಯಲ್ಲಿ ಮಾತಾಡಿರಿ.

ಇದು ಪ್ರಾಮುಖ್ಯವೇಕೆ?

ನಿಮ್ಮ ವಿಷಯಭಾಗವು ಅರ್ಥಮಾಡಿಕೊಳ್ಳಲು ಎಷ್ಟು ಹೆಚ್ಚು ಸುಲಭವಾಗಿರುತ್ತದೊ, ಸಭಿಕರು ಅದರಿಂದ ಅಷ್ಟು ಹೆಚ್ಚು ಪ್ರಯೋಜನವನ್ನು ಪಡೆಯುವರು.

ನೀವು ಮಾತಾಡುವಾಗ, ಕೇವಲ ಮಾಹಿತಿಯನ್ನು ಕೊಡುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿರಿ. ನೀವು ಹೇಳುವ ವಿಷಯವು ನಿಮ್ಮ ಕೇಳುಗರಿಗೆ ಅರ್ಥವಾಗುವಂತೆ ಮಾಡಲು ಪ್ರಯತ್ನಿಸಿರಿ. ಇದು, ನೀವು ಸಭೆಗೆ ಮಾತಾಡುತ್ತಿರಲಿ ಅಥವಾ ಸಾಕ್ಷ್ಯೇತರರಿಗೆ ಮಾತಾಡುತ್ತಿರಲಿ, ನೀವು ಪರಿಣಾಮಕಾರಿಯಾಗಿ ಮಾತಾಡುವಂತೆ ನಿಮಗೆ ಸಹಾಯಮಾಡಬಲ್ಲದು.

ಅರ್ಥವತ್ತಾದ ಭಾಷಣದಲ್ಲಿ ಅನೇಕ ಅಂಶಗಳು ಒಳಗೂಡಿವೆ. ಅವುಗಳಲ್ಲಿ ಕೆಲವನ್ನು, “ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿ ವಿಕಸಿಸುವುದು” ಎಂಬ ಮುಖ್ಯ ವಿಷಯವಿರುವ 26ನೆಯ ಪಾಠದಲ್ಲಿ ಕೊಡಲಾಗಿದೆ. ಬೇರೆ ವಿಷಯಗಳನ್ನು, “ಇತರರಲ್ಲಿ ಆಸಕ್ತಿಯನ್ನು ತೋರಿಸುವುದು” ಎಂಬ ಮುಖ್ಯ ವಿಷಯವಿರುವ 30ನೆಯ ಪಾಠದಲ್ಲಿ ಪರಿಗಣಿಸಲಾಗಿದೆ. ಈ ಪಾಠದಲ್ಲಿ, ಇನ್ನೂ ಹೆಚ್ಚಿನ ಕೆಲವು ಅಂಶಗಳನ್ನು ನಾವು ಚರ್ಚಿಸಲಿದ್ದೇವೆ.

ಸರಳ ಪದಗಳು, ಸರಳವಾದ ಶೈಲಿ. ಸರಳವಾದ ಪದಗಳು ಮತ್ತು ಚಿಕ್ಕ ಚಿಕ್ಕ ವಾಕ್ಯಗಳು ಪ್ರಬಲವಾದ ಸಂವಾದ ವಿಧಾನಗಳಾಗಿವೆ. ಜನರು ಯಾರೇ ಆಗಿರಲಿ ಅಥವಾ ಎಲ್ಲಿಯೇ ಜೀವಿಸುತ್ತಿರಲಿ ಅವರಿಂದ ಅರ್ಥಮಾಡಿಕೊಳ್ಳಲ್ಪಡುವ ಭಾಷಣದ ಕುರಿತು ಒಂದು ಅತ್ಯುತ್ತಮವಾದ ಮಾದರಿಯು ಯೇಸುವಿನ ಪರ್ವತ ಪ್ರಸಂಗವಾಗಿದೆ. ಆ ವಿಚಾರಗಳು ಅವರಿಗೆ ಹೊಸದಾಗಿದ್ದಿರಬಹುದು. ಆದರೂ, ಯೇಸು ಏನು ಹೇಳಿದನೋ ಅದನ್ನು ಅವರು ಅರ್ಥಮಾಡಿಕೊಳ್ಳಶಕ್ತರಾಗಿದ್ದರು, ಏಕೆಂದರೆ ನಮ್ಮೆಲ್ಲರ ಹಿತಾಸಕ್ತಿಯ ಕುರಿತಾದ ವಿಷಯಗಳ ಸಂಬಂಧದಲ್ಲಿ ಅವನು ಮಾತಾಡಿದನು: ಸಂತೋಷಭರಿತರಾಗಿರುವ ವಿಧ, ಇತರರೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ವಿಧ, ವ್ಯಾಕುಲತೆಯನ್ನು ನಿಭಾಯಿಸುವ ವಿಧ ಮತ್ತು ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳುವ ವಿಧಗಳು ಇವುಗಳಲ್ಲಿ ಕೆಲವಾಗಿವೆ. ಮತ್ತು ಅವನು ತನ್ನ ವಿಚಾರಗಳನ್ನು ವ್ಯಾವಹಾರಿಕ ಮಾತುಗಳಲ್ಲಿ ವ್ಯಕ್ತಪಡಿಸಿದನು. (ಮತ್ತಾ. ಅಧ್ಯಾ. 5-7) ವಾಕ್ಯಗಳ ಉದ್ದ ಮತ್ತು ರಚನೆಯಲ್ಲಿ ವೈವಿಧ್ಯವಿರುವ ಅನೇಕ ಉದಾಹರಣೆಗಳನ್ನು ಬೈಬಲು ಕೊಡುತ್ತದೆಂಬುದು ನಿಜ. ಆದರೆ ನಿಮ್ಮ ಮುಖ್ಯ ಉದ್ದೇಶವು, ವಿಚಾರಗಳನ್ನು ಸ್ಪಷ್ಟವಾದ ಮತ್ತು ಸುಲಭವಾಗಿ ಗ್ರಹಿಸುವಂಥ ರೀತಿಯಲ್ಲಿ ಹೇಳುವುದಾಗಿರಬೇಕು.

ನೀವು ಗಹನವಾದ ವಿಚಾರದ ಕುರಿತು ಚರ್ಚಿಸುತ್ತಿರುವಾಗಲೂ, ಸರಳವಾದ ಶೈಲಿಯು ಅದನ್ನು ಸುಲಭವಾಗಿ ಗ್ರಹಿಸುವಂಥದ್ದಾಗಿ ಮಾಡಬಲ್ಲದು. ಈ ಸರಳತೆಯನ್ನು ಹೇಗೆ ಸಾಧಿಸಬಹುದು? ಅನಾವಶ್ಯಕವಾದ ವಿವರಗಳನ್ನು ಕೊಡುವ ಮೂಲಕ ನಿಮ್ಮ ಸಭಿಕರನ್ನು ಮಾಹಿತಿಯಲ್ಲಿ ಪೂರ್ತಿಯಾಗಿ ಮುಳುಗಿಸಿಬಿಡಬೇಡಿ. ನಿಮ್ಮ ಮುಖ್ಯಾಂಶಗಳನ್ನು ಸ್ಫುಟಗೊಳಿಸುವಂಥ ರೀತಿಯಲ್ಲಿ ನಿಮ್ಮ ವಿಷಯಭಾಗವನ್ನು ಸಂಘಟಿಸಿರಿ. ನಿಮ್ಮ ಮುಖ್ಯ ವಚನಗಳನ್ನು ಜಾಗರೂಕತೆಯಿಂದ ಆರಿಸಿರಿ. ಒಂದು ವಚನದಿಂದ ಇನ್ನೊಂದಕ್ಕೆ ದೌಡಾಯಿಸುವ ಬದಲು, ಅವುಗಳನ್ನು ಓದಿರಿ ಮತ್ತು ಚರ್ಚಿಸಿರಿ. ಒಂದು ಉತ್ತಮ ವಿಚಾರವನ್ನು ಅನೇಕಾನೇಕ ಶಬ್ದಗಳ ಮಧ್ಯೆ ಹುಗಿದುಬಿಡಬೇಡಿರಿ.

ನೀವು ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡಿಸುವಾಗ, ಅವೇ ಮೂಲತತ್ತ್ವಗಳನ್ನು ಅನ್ವಯಿಸಿರಿ. ಎಲ್ಲ ವಿವರಗಳನ್ನು ವಿವರಿಸಿಬಿಡಲು ಪ್ರಯತ್ನಿಸಬೇಡಿ. ಪ್ರಧಾನ ವಿಚಾರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ. ಸಮಯಾನಂತರ, ತನ್ನ ವೈಯಕ್ತಿಕ ಅಧ್ಯಯನದಲ್ಲಿ ಮತ್ತು ಸಭಾ ಕೂಟಗಳಲ್ಲಿ ಅವನು ಹೆಚ್ಚಿನ ವಿವರಗಳನ್ನು ಕಲಿಯಸಾಧ್ಯವಿದೆ.

ವಿಷಯಭಾಗವನ್ನು ಸರಳವಾದ ರೀತಿಯಲ್ಲಿ ಸಾದರಪಡಿಸಲಿಕ್ಕಾಗಿ, ಒಳ್ಳೆಯ ತಯಾರಿಯ ಅಗತ್ಯವಿದೆ. ನಿಮ್ಮ ವಿಷಯವಸ್ತು ಇತರರಿಗೆ ಅರ್ಥವತ್ತಾಗಿರಬೇಕಾದರೆ, ಮೊದಲಾಗಿ ಸ್ವತಃ ನೀವೇ ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಯಾವುದೇ ವಿಚಾರವನ್ನು ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳುವಾಗ, ಅದು ಹಾಗೆ ಏಕೆಂಬುದಕ್ಕೆ ಕಾರಣಗಳನ್ನು ಕೊಡಲು ನೀವು ಶಕ್ತರಾಗಿರುವಿರಿ. ಆಗ ಅದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸಲು ಸಹ ನೀವು ಶಕ್ತರಾಗಿರುವಿರಿ.

ಅಪರಿಚಿತ ಪದಗಳನ್ನು ವಿವರಿಸಿ ಹೇಳಿರಿ. ಕೆಲವು ಸಲ ವಿಷಯಗಳನ್ನು ಸ್ಪಷ್ಟವಾಗಿ ಗ್ರಹಿಸುವಂತೆ ಮಾಡಲಿಕ್ಕಾಗಿ, ನಿಮ್ಮ ಸಭಿಕರಿಗೆ ಅಪರಿಚಿತವಾಗಿರುವ ಪದಗಳ ಅರ್ಥವನ್ನು ನೀವು ವಿವರಿಸಬೇಕಾಗುತ್ತದೆ. ನಿಮ್ಮ ಸಭಿಕರಿಗೆ ಅತಿಶಯ ಜ್ಞಾನವಿದೆಯೆಂದು ಅಂದಾಜುಮಾಡಬೇಡಿರಿ. ಅದೇ ಸಮಯದಲ್ಲಿ ಅವರಿಗೆ ಬುದ್ಧಿಶಕ್ತಿಯಲ್ಲಿ ಕೊರತೆಯಿದೆಯೆಂದೂ ನೆನಸಬೇಡಿರಿ. ನೀವು ಬೈಬಲಿನ ಅಧ್ಯಯನ ಮಾಡುತ್ತಿರುವುದರಿಂದಾಗಿ, ಇತರರಿಗೆ ಅಪರಿಚಿತವಾಗಿರುವಂಥ ಕೆಲವು ಪದಗಳನ್ನು ನೀವು ಉಪಯೋಗಿಸಬಹುದು. ಯಾರು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸ ಮಾಡುವುದಿಲ್ಲವೋ ಅವರಿಗೆ, ‘ಉಳಿಕೆಯವರು,’ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” “ಬೇರೆ ಕುರಿಗಳು,” ಮತ್ತು “ಮಹಾ ಸಮೂಹ” ಎಂಬ ಪದಗಳು, ಜನರ ನಿರ್ದಿಷ್ಟ ಗುಂಪುಗಳನ್ನು ಗುರುತಿಸುತ್ತವೆಂದು ಸ್ವಲ್ಪವಾದರೂ ವಿವರಿಸಿ ಹೇಳದಿದ್ದರೆ ಅವುಗಳನ್ನು ಅವರು ಅರ್ಥಮಾಡಿಕೊಳ್ಳಲಾರರು. (ರೋಮಾ. 11:5; ಮತ್ತಾ. 25:45; ಯೋಹಾ. 10:16; ಪ್ರಕ. 7:9) ತದ್ರೀತಿಯಲ್ಲಿ, ಒಬ್ಬ ವ್ಯಕ್ತಿಗೆ ಯೆಹೋವನ ಸಾಕ್ಷಿಗಳ ಸಂಸ್ಥೆಯ ಪರಿಚಯವಿಲ್ಲದಿರುವುದಾದರೆ, “ಪ್ರಚಾರಕ,” “ಪಯನೀಯರ್‌,” “ಸರ್ಕಿಟ್‌ ಮೇಲ್ವಿಚಾರಕ,” ಮತ್ತು “ಜ್ಞಾಪಕಾಚರಣೆ” ಎಂಬಂಥ ಪದಗಳು ಏನನ್ನು ಅರ್ಥೈಸುತ್ತವೆ ಎಂಬುದನ್ನು ಅವನು ಬಹುಶಃ ಗ್ರಹಿಸಲಾರನು.

ಸಾಕ್ಷ್ಯೇತರರು ಉಪಯೋಗಿಸುವ ಕೆಲವು ಬೈಬಲ್‌ ಅಭಿವ್ಯಕ್ತಿಗಳಿಗೂ ತುಸು ವಿವರಣೆ ಬೇಕಾಗಬಹುದು. ಅನೇಕರಿಗೆ, “ಹರ್ಮಗೆದೋನ್‌” ಒಂದು ನ್ಯೂಕ್ಲಿಯರ್‌ ಸರ್ವನಾಶವನ್ನು ಅರ್ಥೈಸುತ್ತದೆ. “ದೇವರ ರಾಜ್ಯ”ವನ್ನು ಅವರು ವ್ಯಕ್ತಿಯ ಆಂತರಿಕ ಸ್ಥಿತಿಯೊಂದಿಗೆ ಅಥವಾ ಸ್ವರ್ಗದೊಂದಿಗೆ ಸಂಬಂಧಿಸಬಹುದೇ ಹೊರತು ಸರಕಾರದೊಂದಿಗಲ್ಲ. “ಆತ್ಮ”ಕ್ಕೆ ಸೂಚಿಸಿ ಏನಾದರೂ ಹೇಳಲ್ಪಟ್ಟರೆ, ಶರೀರದ ಮರಣವನ್ನು ಪಾರಾಗುವ, ಮಾನವರ ಆತ್ಮಿಕ ಭಾಗವೆಂದು ಹೇಳಲ್ಪಡುವ ವಿಷಯದ ಕುರಿತು ಒಬ್ಬನು ಯೋಚಿಸಬಹುದು. “ಪವಿತ್ರಾತ್ಮ”ವು ಒಂದು ವ್ಯಕ್ತಿಯಾಗಿದ್ದು, ತ್ರಯೈಕ್ಯದ ಭಾಗವಾಗಿದೆ ಎಂದು ಲಕ್ಷಾಂತರ ಜನರಿಗೆ ಕಲಿಸಲಾಗಿದೆ. ಬಹು ಜನರು ಬೈಬಲಿನ ನೈತಿಕ ಮಟ್ಟವನ್ನು ತ್ಯಜಿಸಿರುವುದರಿಂದ, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಬೈಬಲ್‌ ಹೇಳುವಾಗ, ಅದರ ಅರ್ಥವನ್ನು ತಿಳಿದುಕೊಳ್ಳಲೂ ಅವರಿಗೆ ಸಹಾಯವು ಬೇಕಾದೀತು.—1 ಕೊರಿಂ. 6:18.

ಜನರು ಬೈಬಲಿನ ವಾಚಕರಾಗಿರದಿದ್ದಲ್ಲಿ, “ಅಬ್ರಹಾಮ,” “ಪೌಲ,” ಅಥವಾ “ಲೂಕ”ರು ಯಾರಾಗಿದ್ದಾರೆ ಎಂಬುದು ಅವರಿಗೆ ತಿಳಿಯದಿರಬಹುದು. ಆ ವ್ಯಕ್ತಿಯನ್ನು ಪುರಾತನ ಇಸ್ರಾಯೇಲ್ಯರ ಪೂರ್ವಜನೆಂದೊ, ಕ್ರಿಸ್ತನ ಒಬ್ಬ ಅಪೊಸ್ತಲನೆಂದೊ ಅಥವಾ ಒಬ್ಬ ಬೈಬಲ್‌ ಲೇಖಕನೆಂದೊ ಗುರುತಿಸಲಿಕ್ಕಾಗಿ ನೀವು ಸ್ವಲ್ಪ ವಿವರಣಾತ್ಮಕ ಅಭಿವ್ಯಕ್ತಿಗಳನ್ನು ಕೂಡಿಸಿ ಹೇಳಬೇಕಾಗಬಹುದು.

ಪುರಾತನ ಕಾಲಗಳ ಅಳತೆಗಳು ಅಥವಾ ಪದ್ಧತಿಗಳು ಕೂಡಿರುವ ಶಾಸ್ತ್ರವಚನಗಳನ್ನು ಅರ್ಥಮಾಡಿಕೊಳ್ಳಲು, ಆಧುನಿಕ ದಿನಗಳ ಸಭಿಕರಿಗೆ ಪದೇ ಪದೇ ಸಹಾಯವು ಬೇಕಾಗುತ್ತದೆ. ಉದಾಹರಣೆಗೆ, ನೋಹನ ನಾವೆಯು 300 ಮೊಳ ಉದ್ದ, 50 ಮೊಳ ಅಗಲ ಮತ್ತು 30 ಮೊಳ ಎತ್ತರವಾಗಿತ್ತು ಎಂಬ ಹೇಳಿಕೆಯು ಸಭಿಕರಿಗೆ ಅರ್ಥವಾಗಲಿಕ್ಕಿಲ್ಲ. (ಆದಿ. 6:15) ಆದರೆ ಅದೇ ಪರಿಮಾಣವನ್ನು, ನೀವು ಜನರಿಗೆ ತಿಳಿದಿರುವಂಥ ಯಾವುದಾದರೂ ಸ್ಥಳಿಕವಾಗಿ ಎದ್ದುಕಾಣುವ ಭೌತಿಕ ರಚನೆಗೆ ಸೂಚಿಸಿ ವರ್ಣಿಸುವುದಾದರೆ, ನಿಮ್ಮ ಸಭಿಕರು ಆ ನಾವೆಯ ಗಾತ್ರವನ್ನು ಕೂಡಲೆ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವರು.

ಅಗತ್ಯವಿರುವ ವಿವರಣೆಯನ್ನು ಒದಗಿಸಿರಿ. ಒಂದು ವಿಷಯವನ್ನು ನಿಮ್ಮ ಸಭಿಕರಿಗೆ ಸ್ಪಷ್ಟಗೊಳಿಸಲಿಕ್ಕಾಗಿ, ಒಂದು ನಿರ್ದಿಷ್ಟ ಪದದ ಸರಿಯಾದ ನಿರೂಪಣೆಯನ್ನು ನೀಡುವುದಕ್ಕಿಂತಲೂ ಹೆಚ್ಚಿನದ್ದು ಬೇಕಾದೀತು. ಎಜ್ರನ ದಿನಗಳಲ್ಲಿ ಯೆರೂಸಲೇಮಿನಲ್ಲಿ, ಧರ್ಮಶಾಸ್ತ್ರದ ವಾಚನದೊಂದಿಗೆ ಅರ್ಥವಿವರಣೆಯೂ ನಡೆಯುತ್ತಿತ್ತು. ಜನರು ಅದರ ಅರ್ಥವನ್ನು ಗ್ರಹಿಸುವಂತೆ ಸಹಾಯಮಾಡಲಿಕ್ಕಾಗಿ, ಲೇವಿಯರು ಧರ್ಮಶಾಸ್ತ್ರದ ಅರ್ಥವಿವರಣೆ ಮಾಡಿ, ಜನರು ಆ ಕಾಲದಲ್ಲಿ ಎದುರಿಸುತ್ತಿದ್ದ ಪರಿಸ್ಥಿತಿಗಳಿಗೆ ಅದನ್ನು ಅನ್ವಯಿಸಿದರು. (ನೆಹೆ. 8:8, 12) ಅದೇ ರೀತಿ, ನೀವು ಓದುವ ಶಾಸ್ತ್ರವಚನಗಳನ್ನು ವಿವರಿಸಿ, ಅನ್ವಯಿಸಲು ಸಮಯವನ್ನು ತೆಗೆದುಕೊಳ್ಳಿರಿ.

ತನ್ನ ಮರಣ ಮತ್ತು ಪುನರುತ್ಥಾನದ ಬಳಿಕ, ಆಗ ತಾನೇ ನಡೆದಿರುವ ವಿಷಯಗಳು ಶಾಸ್ತ್ರವಚನಗಳ ನೆರವೇರಿಕೆಗನುಸಾರ ನಡೆದವೆಂದು ಯೇಸು ತನ್ನ ಶಿಷ್ಯರಿಗೆ ವಿವರಿಸಿದನು. ಆ ವಿಷಯಗಳ ಸಾಕ್ಷಿಗಳೋಪಾದಿ ಅವರ ಜವಾಬ್ದಾರಿಯನ್ನೂ ಅವನು ಅವರಿಗೆ ಒತ್ತಿಹೇಳಿದನು. (ಲೂಕ 24:44-48) ಕಲಿಸಲ್ಪಟ್ಟಿರುವ ವಿಷಯಗಳು ತಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕೆಂಬುದನ್ನು ಜನರು ಪರಿಗಣಿಸುವಂತೆ ನೀವು ಅವರಿಗೆ ಸಹಾಯಮಾಡುವಾಗ, ಅದರ ನಿಜಾರ್ಥವನ್ನು ಅವರು ಹೆಚ್ಚು ಸುಲಭವಾಗಿ ಗ್ರಹಿಸುವರು.

ಹೃದಯವು ಒಳಗೂಡಿರುವ ವಿಧ. ನಿಮ್ಮ ವಿವರಣೆಗಳು ಸ್ಪಷ್ಟವಾಗಿರುವುದಾದರೂ, ಇನ್ನೊಬ್ಬ ವ್ಯಕ್ತಿಯು ಅದನ್ನು ಅರ್ಥಮಾಡಿಕೊಳ್ಳುತ್ತಾನೊ ಇಲ್ಲವೊ ಎಂಬುದನ್ನು ಬೇರೆ ಅಂಶಗಳು ಪ್ರಭಾವಿಸಬಹುದು ಎಂಬುದಂತೂ ಖಂಡಿತ. ಒಬ್ಬನ ಹೃದಯವು ಸ್ಪಂದಿಸದಿದ್ದರೆ, ಏನು ಹೇಳಲ್ಪಡುತ್ತದೋ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅದು ಒಂದು ತಡೆಯಾಗಿರುವುದು. (ಮತ್ತಾ. 13:13-15) ವಿಷಯಗಳನ್ನು ಕಟ್ಟುನಿಟ್ಟಾಗಿ ಶಾರೀರಿಕ ದೃಷ್ಟಿಕೋನದಿಂದ ವೀಕ್ಷಿಸಲು ನಿರ್ಧರಿಸಿರುವಂಥ ಜನರಿಗೆ, ಆತ್ಮಿಕ ವಿಷಯಗಳು ಹುಚ್ಚುಮಾತಾಗಿ ಕಂಡುಬರುತ್ತವೆ. (1 ಕೊರಿಂ. 2:14) ಒಬ್ಬ ವ್ಯಕ್ತಿಯು ಇಂತಹ ಮನೋಭಾವವನ್ನು ಪ್ರದರ್ಶಿಸುವಾಗ, ಚರ್ಚೆಯನ್ನು ಸದ್ಯಕ್ಕಾದರೂ ಅಲ್ಲಿಗೇ ಕೊನೆಗೊಳಿಸುವುದು ವಿವೇಕಯುತವಾಗಿರಬಹುದು.

ಆದರೂ ಕೆಲವು ಸಂದರ್ಭಗಳಲ್ಲಿ, ಜೀವನದಲ್ಲಿ ಅನುಭವಿಸಿರುವ ಕಷ್ಟಕರ ಪರಿಸ್ಥಿತಿಗಳ ಕಾರಣ ಹೃದಯವು ಜಡವಾಗಿರಬಹುದು. ಆದರೆ ಇನ್ನೂ ಸ್ವಲ್ಪ ಸಮಯದ ವರೆಗೆ ಅವರಿಗೆ ಬೈಬಲ್‌ ಸತ್ಯಕ್ಕೆ ಕಿವಿಗೊಡುವಂತೆ ಅವಕಾಶಗಳು ಕೊಡಲ್ಪಡುವಲ್ಲಿ, ಅಂತಹ ವ್ಯಕ್ತಿಯ ಹೃದಯವು ಅದನ್ನು ಆಲಿಸುವ ಆಕಾಂಕ್ಷೆಯನ್ನು ತೋರಿಸಬಹುದು. ಯೇಸು ತನ್ನ ಅಪೊಸ್ತಲರಿಗೆ, ತನ್ನನ್ನು ಹೊಡೆದು ಮರಣಕ್ಕೊಪ್ಪಿಸಲಾಗುವುದು ಎಂದು ಹೇಳಿದಾಗ, ಅವರಿಗೆ ಅದು ಅರ್ಥವಾಗಲಿಲ್ಲ. ಏಕೆ? ಏಕೆಂದರೆ ಅದನ್ನು ಅವರು ನಿರೀಕ್ಷಿಸಿರಲೂ ಇಲ್ಲ, ಬಯಸಿರಲೂ ಇಲ್ಲ! (ಲೂಕ 18:31-34) ಆದರೂ ಸಕಾಲದಲ್ಲಿ, ಆ ಅಪೊಸ್ತಲರಲ್ಲಿ 11 ಮಂದಿಗೆ ಅದು ಅರ್ಥವಾಯಿತು ಮತ್ತು ಯೇಸು ತಮಗೆ ಏನು ಕಲಿಸಿದ್ದನೊ ಅದಕ್ಕನುಸಾರವಾಗಿ ಕಾರ್ಯನಡಿಸುವ ಮೂಲಕ ಅವರು ಅದನ್ನು ತೋರಿಸಿದರು.

ಉತ್ತಮ ಮಾದರಿಯ ಪರಿಣಾಮ. ಜನರಿಗೆ ಕೇವಲ ನಮ್ಮ ನುಡಿಗಳಿಂದ ಮಾತ್ರವಲ್ಲ ನಡತೆಯಿಂದಲೂ ವಿಷಯಗಳನ್ನು ಗ್ರಹಿಸುವಂತೆ ಸಹಾಯ ದೊರೆಯುತ್ತದೆ. ರಾಜ್ಯ ಸಭಾಗೃಹಕ್ಕೆ ನೀಡಿದ ತಮ್ಮ ಪ್ರಥಮ ಭೇಟಿಯ ವಿಷಯದಲ್ಲಿ ಅನೇಕರು ಅಲ್ಲಿ ಏನು ಹೇಳಲ್ಪಟ್ಟಿತೋ ಅದನ್ನಲ್ಲ, ಬದಲಾಗಿ ಅಲ್ಲಿ ಕಂಡುಬಂದ ಪ್ರೀತಿಯನ್ನು ತಾವು ಜ್ಞಾಪಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅದೇ ರೀತಿ, ನಾವು ತೋರಿಸುವ ಸಂತೋಷಭರಿತ ಮನೋಭಾವವು, ಅನೇಕರು ಬೈಬಲ್‌ ಸತ್ಯಕ್ಕೆ ಕಿವಿಗೊಡುವಂತೆ ಸಹಾಯಮಾಡಿದೆ. ಯೆಹೋವನ ಜನರು ಪರಸ್ಪರವಾಗಿ ತೋರಿಸುವ ಪ್ರೀತಿಪೂರ್ವಕವಾದ ದಯೆ, ಮತ್ತು ಸಂಕಷ್ಟಗಳು ಬರುವಾಗ ಅವರು ಇತರರಿಗೆ ತೋರಿಸುವ ದಯಾಪೂರ್ವಕವಾದ ಪರಿಗಣನೆಯನ್ನು ನೋಡುವುದು, ಸಾಕ್ಷಿಗಳ ಬಳಿ ಸತ್ಯ ಧರ್ಮವಿದೆಯೆಂಬ ತೀರ್ಮಾನಕ್ಕೆ ಕೆಲವರು ಬರುವಂತೆ ಮಾಡಿದೆ. ಹೀಗಿರುವುದರಿಂದ, ನೀವು ಬೈಬಲ್‌ ಸತ್ಯವನ್ನು ಗ್ರಹಿಸುವಂತೆ ಜನರಿಗೆ ಸಹಾಯಮಾಡಲು ಪ್ರಯತ್ನಿಸುವಾಗ, ನೀವು ಅದನ್ನು ವಿವರಿಸುವ ರೀತಿ ಮತ್ತು ನಿಮ್ಮ ಮಾದರಿಗೆ ಗಮನವನ್ನು ಕೊಡಿರಿ.

ಇದನ್ನು ಮಾಡುವ ವಿಧ

  • ಸರಳ ಭಾಷೆಯನ್ನು ಉಪಯೋಗಿಸಿರಿ; ಪ್ರಧಾನ ವಿಚಾರಗಳನ್ನು ವಿವರಿಸಲಿಕ್ಕಾಗಿ ಚಿಕ್ಕ ಚಿಕ್ಕ ವಾಕ್ಯಗಳನ್ನು ಉಪಯೋಗಿಸಿರಿ.

  • ಕೇವಲ ಕೆಲವೇ ಮುಖ್ಯಾಂಶಗಳನ್ನು ಒತ್ತಿಹೇಳಿರಿ.

  • ನಿಮ್ಮ ಸಭಿಕರಿಗೆ ಅಪರಿಚಿತವಾದ ಪದಗಳನ್ನು ವಿವರಿಸಿ ಹೇಳಿರಿ.

  • ಶಾಸ್ತ್ರವಚನಗಳನ್ನು ವಿವರಿಸಿಸಲು ಮತ್ತು ಅನ್ವಯಿಸಲು ಸಮಯವನ್ನು ತೆಗೆದುಕೊಳ್ಳಿರಿ.

  • ನೀವು ಯಾರೊಂದಿಗೆ ಮಾತಾಡುತ್ತೀರೊ ಅವರನ್ನು ನಿಮ್ಮ ಮಾದರಿಯು ಹೇಗೆ ಪ್ರಭಾವಿಸಬಹುದೆಂಬುದನ್ನು ಪರಿಗಣಿಸಿರಿ.

ಅಭ್ಯಾಸಪಾಠ: ನೀವು ಈ ವಾರದ ಒಂದು ಸಭಾ ಕೂಟದಲ್ಲಿ ಆನಂದಿಸಿದ ಒಂದು ವಿಷಯವನ್ನು ಒಬ್ಬ ಸಾಕ್ಷ್ಯೇತರ ಸಂಬಂಧಿಕನಿಗೆ, ನೆರೆಯವನಿಗೆ, ಜೊತೆಕಾರ್ಮಿಕನಿಗೆ ಅಥವಾ ಸಹಪಾಠಿಗೆ ತಿಳಿಸಲು ಪ್ರಯತ್ನಿಸಿರಿ. ಆ ವ್ಯಕ್ತಿಯು ಅರ್ಥಮಾಡಿಕೊಳ್ಳದಿರಬಹುದಾದ ಪದಗಳನ್ನು ವಿವರಿಸುವುದನ್ನು ಖಚಿತಪಡಿಸಿಕೊಳ್ಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ