ಅಧ್ಯಾಯ 2
ಪರದೈಸ್ ಕೈಜಾರಿತು
ದೇವರ ಆಧಿಪತ್ಯಕ್ಕೆ ಸಡ್ಡುಹೊಡೆಯುವಂತೆ ಒಬ್ಬ ದಂಗೆಕೋರ ದೇವದೂತನು ಆದಾಮಹವ್ವರನ್ನು ಪ್ರಚೋದಿಸುತ್ತಾನೆ. ಪರಿಣಾಮವಾಗಿ ಪಾಪ ಮತ್ತು ಮರಣ ಈ ಲೋಕದೊಳಗೆ ನುಸುಳುತ್ತವೆ
ಮಾನವರನ್ನು ಸೃಷ್ಟಿಸುವ ಎಷ್ಟೋ ಸಮಯದ ಮುಂಚೆಯೇ ದೇವರು ಅನೇಕ ಅದೃಶ್ಯ ಆತ್ಮಜೀವಿಗಳನ್ನು ಸೃಷ್ಟಿಸಿದನು. ಅವರೇ ದೇವದೂತರು. ಅವರಲ್ಲಿ ಒಬ್ಬ ದಂಗೆಕೋರ ದೇವದೂತನು ಏದೆನ್ ತೋಟದಲ್ಲಿ ಹವ್ವಳನ್ನು ಉಪಾಯದಿಂದ ಮೋಸಗೊಳಿಸಲು ಪ್ರಯತ್ನಿಸಿದನು. ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿದ್ದ ಆ ಒಂದು ಮರದ ಹಣ್ಣನ್ನು ತಿನ್ನುವಂತೆ ಹವ್ವಳನ್ನು ಅವನು ಪ್ರಚೋದಿಸಿದನು. ಅವನನ್ನು ಬೈಬಲಿನಲ್ಲಿ ಪಿಶಾಚನಾದ ಸೈತಾನನೆಂದು ಕರೆಯಲಾಗಿದೆ.
ಆ ಸೈತಾನನು ಒಂದು ಸರ್ಪದ ಮುಖಾಂತರ ಹವ್ವಳೊಂದಿಗೆ ಮಾತಾಡಿದನು. ಹವ್ವ ಹಾಗೂ ಆಕೆಯ ಗಂಡನಿಂದ ದೇವರು ಯಾವುದೋ ಒಳ್ಳೆಯ ವಿಷಯವನ್ನು ಮುಚ್ಚಿಡುತ್ತಿದ್ದಾನೆಂದು ಅವನು ಪರೋಕ್ಷವಾಗಿ ಸೂಚಿಸಿದನು. ತಿನ್ನಬಾರದೆಂದು ನಿಷೇಧಿಸಿದ ಹಣ್ಣನ್ನು ತಿಂದರೆ ಹವ್ವಳಾಗಲಿ ಆಕೆಯ ಗಂಡನಾಗಲಿ ಸಾಯುವುದಿಲ್ಲ ಎಂದು ಆ ದೇವದೂತನು ಹವ್ವಳಿಗೆ ಹೇಳಿದನು. ಹೀಗೆ, ದೇವರು ತನ್ನ ಮಾನವ ಮಕ್ಕಳಿಗೆ ಸುಳ್ಳು ಹೇಳುತ್ತಿದ್ದಾನೆಂದು ಸೈತಾನನು ಆಪಾದನೆ ಹೊರಿಸಿದನು. ದೇವರಿಗೆ ಅವಿಧೇಯರಾದರೆ ಜ್ಞಾನೋದಯವಾಗಿ ಅವರು ಸ್ವತಂತ್ರ ಜೀವನ ನಡೆಸಬಹುದೆಂದು ಆ ವಂಚಕನು ಹೇಳಿದನು. ಆದರೆ ಇದು ಶುದ್ಧ ಸುಳ್ಳಾಗಿತ್ತು. ಭೂಮಿಯ ಮೇಲೆ ಹೇಳಿದ ಮೊಟ್ಟಮೊದಲ ಸುಳ್ಳು ಇದಾಗಿತ್ತು. ಸೈತಾನನ ಈ ಆಪಾದನೆಯಲ್ಲಿ ಮುಖ್ಯವಾಗಿ ದೇವರ ಪರಮಾಧಿಕಾರ ಅಥವಾ ಸಾರ್ವಭೌಮತ್ವ ಒಳಗೂಡಿತ್ತು. ಅಂದರೆ, ದೇವರಿಗೆ ಮಾನವರನ್ನು ಆಳಲು ಯಾವುದೇ ಹಕ್ಕಿಲ್ಲ, ಆತನು ನೀತಿಯಿಂದ ಆಳ್ವಿಕೆ ನಡೆಸುವುದಿಲ್ಲ ಮತ್ತು ಆತನಿಗೆ ತನ್ನ ಪ್ರಜೆಗಳ ಹಿತಾಸಕ್ತಿಯ ಕುರಿತು ಕಿಂಚಿತ್ತೂ ಚಿಂತೆಯಿಲ್ಲ ಎಂಬುದು ಸೈತಾನನ ವಾದವಾಗಿತ್ತು.
ಸೈತಾನನ ಸುಳ್ಳನ್ನು ಹವ್ವಳು ನಂಬಿದಳು. ಆ ಹಣ್ಣನ್ನು ತಿನ್ನಬೇಕೆಂಬ ಆಸೆ ಅವಳಲ್ಲಿ ಹುಟ್ಟಿಕೊಂಡಿತು. ಅವಳು ಅದನ್ನು ತಿಂದಳು, ಬಳಿಕ ತನ್ನ ಗಂಡನಿಗೆ ಕೊಟ್ಟಳು. ಅವನೂ ತಿಂದನು. ಹೀಗೆ ಅವರು ಪಾಪಿಗಳಾದರು. ಚಿಕ್ಕ ವಿಷಯವಾಗಿ ಕಂಡುಬಂದರೂ ಇದು ದೇವರ ವಿರುದ್ಧ ಅವರ ದಂಗೆಯಾಗಿತ್ತು. ಬೇಕುಬೇಕೆಂದೇ ದೇವರ ಆಜ್ಞೆಗೆ ಅವಿಧೇಯರಾಗುವ ಮೂಲಕ, ತಮಗೆ ಪರಿಪೂರ್ಣ ಜೀವವನ್ನು ಕೊಟ್ಟು ಸಕಲವನ್ನೂ ದಯಪಾಲಿಸಿದ ಸೃಷ್ಟಿಕರ್ತನ ಆಧಿಪತ್ಯವನ್ನು ಆದಾಮಹವ್ವರು ಬೇಡವೆಂದು ತಳ್ಳಿಬಿಟ್ಟರು.
ಸ್ತ್ರೀಯ ಸಂತಾನವು “ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”—ಆದಿಕಾಂಡ 3:15
ತನ್ನ ವಿರುದ್ಧ ದಂಗೆಯೆದ್ದವರಿಗೆ ದೇವರು ಶಿಕ್ಷೆ ವಿಧಿಸಿದನು. ವಾಗ್ದತ್ತ ಸಂತಾನ ಅಥವಾ ವಿಮೋಚಕನೊಬ್ಬನು ಬರಲಿದ್ದಾನೆಂದು, ಸರ್ಪದ ಮುಖಾಂತರ ಮಾತಾಡಿದ ಸೈತಾನನನ್ನು ಅವನು ನಾಶಮಾಡುವನೆಂದು ದೇವರು ಮುಂತಿಳಿಸಿದನು. ಆದಾಮಹವ್ವರಿಗೋ ದೇವರು ಮರಣದಂಡನೆ ವಿಧಿಸಿದನು. ಆದರೆ ಕೂಡಲೇ ಮರಣದಂಡನೆ ಜಾರಿಗೊಳಿಸದೆ ಮಕ್ಕಳಾಗುವ ವರೆಗೆ ಅವರು ಜೀವಿಸುವಂತೆ ಅನುಮತಿಸಿದನು. ಮುಂದೆ ಹುಟ್ಟಲಿರುವ ಅವರ ಸಂತತಿಯ ಕಡೆಗೆ ದೇವರು ಹೀಗೆ ಕರುಣೆ ತೋರಿಸಿದನು. ಆ ಸಂತತಿಯ ಮುಂದೆ ಒಂದು ಒಳ್ಳೆಯ ಭವಿಷ್ಯದ ನಿರೀಕ್ಷೆಯಿತ್ತು. ಏಕೆಂದರೆ, ದೇವರು ಮುಂತಿಳಿಸಿದ್ದ ವಿಮೋಚಕನು ಏದೆನ್ ತೋಟದಲ್ಲಾದ ದಂಗೆಯ ದುಷ್ಪರಿಣಾಮಗಳನ್ನೆಲ್ಲಾ ಸರಿಪಡಿಸಲಿದ್ದನು. ಮುಂದೆ ಬರಲಿದ್ದ ಈ ರಕ್ಷಕನು ಯಾರು ಮತ್ತು ಅವನು ದೇವರ ಉದ್ದೇಶವನ್ನು ಹೇಗೆ ಪೂರೈಸುವನು ಎಂಬ ವಿಷಯವು ಬೈಬಲನ್ನು ಬರೆಯುತ್ತಾ ಬರೆಯುತ್ತಾ ಹೋದಂತೆ ತಿಳಿಸಲ್ಪಟ್ಟಿತು.
ದೇವರು ಆದಾಮಹವ್ವರನ್ನು ಪರದೈಸಿನಿಂದ ಹೊರಗೆ ಕಳುಹಿಸಿಬಿಟ್ಟನು. ಏದೆನ್ ತೋಟದ ಹೊರಗೆ ಜೀವನ ನಡೆಸುವುದು ತುಂಬ ಕಷ್ಟಕರವಾಗಿತ್ತು. ಅವರು ಬೆವರು ಸುರಿಸಿ ಕಷ್ಟಪಟ್ಟು ಭೂಮಿಯನ್ನು ವ್ಯವಸಾಯ ಮಾಡಬೇಕಿತ್ತು. ಕಾಲಾನಂತರ ಹವ್ವಳು ಗರ್ಭಿಣಿಯಾಗಿ ಕಾಯಿನನಿಗೆ ಜನ್ಮಕೊಟ್ಟಳು. ಈ ಕಾಯಿನನೇ ಆದಾಮಹವ್ವರ ಮೊದಲ ಪುತ್ರ. ಆದಾಮಹವ್ವರಿಗೆ ಬೇರೆ ಗಂಡುಹೆಣ್ಣು ಮಕ್ಕಳೂ ಹುಟ್ಟಿದರು. ಹೇಬೆಲ ಮತ್ತು ಸೇತರು ಅವರಲ್ಲಿ ಇಬ್ಬರು. ಈ ಸೇತನ ವಂಶದಲ್ಲಿಯೇ ನೋಹನು ಹುಟ್ಟಿದನು.
—ಆದಿಕಾಂಡ ಅಧ್ಯಾಯ 3ರಿಂದ 5 ಮತ್ತು ಪ್ರಕಟನೆ 12:9 ರ ಮೇಲೆ ಆಧಾರಿತವಾಗಿದೆ.