ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lf ಪ್ರಶ್ನೆ 4 ಪು. 22-29
  • ಜೀವ ಒಬ್ಬ ಪೂರ್ವಜನಿಂದ ಬಂತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವ ಒಬ್ಬ ಪೂರ್ವಜನಿಂದ ಬಂತಾ?
  • ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಡಾರ್ವಿನ್‌ನ ಮರ ಬುಡಮೇಲಾಯ್ತು
  • ಪಳೆಯುಳಿಕೆಯ ಸಂಶೋಧನೆಯಿಂದ ಏನು ಗೊತ್ತಾಗಿದೆ?
  • ಟೊಳ್ಳು ಪುರಾವೆಗಳು
  • “ಚಲನಚಿತ್ರದ” ನಿಜವಾದ ಕಥೆ
  • ಜೀವವಿಕಾಸವು ವಾಸ್ತವಾಂಶವೇ?
    ಎಚ್ಚರ!—2006
  • ವಿಕಾಸ ವಾದ ವಿಚಾರಣೆಗೊಳಗಾಗುತ್ತದೆ
    ಕಾವಲಿನಬುರುಜು—1994
ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
lf ಪ್ರಶ್ನೆ 4 ಪು. 22-29

ಪ್ರಶ್ನೆ 4

ಎಲ್ಲಾ ಜೀವಗಳು ಒಬ್ಬ ಪೂರ್ವಜನಿಂದ ಬಂದವಾ?

 ಎಲ್ಲಾ ಜೀವಿಗಳಿಗೂ ಒಬ್ಬನೇ ಪೂರ್ವಜ ಅಂತ ಚಾರ್ಲ್ಸ್‌ ಡಾರ್ವಿನ್‌ನ ಜೀವದ ಮರ

ಭೂಮಿ ಮೇಲಿರೋ ಎಲ್ಲಾ ಜೀವಿಗಳು ಒಬ್ಬ ಪೂರ್ವಜನಿಂದ ಬಂದವು ಅಂತ ಡಾರ್ವಿನ್‌ ನಂಬಿದ. ಜೀವ ಹೇಗೆ ಶುರುವಾಯಿತು ಅಂತ ಅರ್ಥ ಮಾಡಿಸೋಕೆ ಒಂದು ದೊಡ್ಡ ಮರಕ್ಕೆ ಜೀವವನ್ನ ಹೋಲಿಸಿದ. ನಂತರ ಇನ್ನೂ ಕೆಲವರು “ಜೀವದ ಮರ” ಸರಳವಾದ ಒಂದು ಜೀವಕೋಶದಿಂದ ಶುರುವಾಯಿತು ಅಂತ ನಂಬಿದರು. ಮರದ ಕಾಂಡದಿಂದ ಮುಖ್ಯವಾದ ಕೊಂಬೆಗಳು ಅಂದರೆ ಹೊಸ ಜೀವಿಗಳು ಹುಟ್ಟಿದವು. ಬೇರೆಬೇರೆ ಕೊಂಬೆಗಳಿಂದ ಗಿಡಮರಗಳು, ಪ್ರಾಣಿಗಳು ಬಂದವು. ಅಷ್ಟೇ ಅಲ್ಲ, ಈಗ ಇರೋ ಎಲ್ಲಾ ಜಾತಿಯ ಪ್ರಾಣಿಪಕ್ಷಿಗಳು, ಗಿಡಮರಗಳ ಮೂಲ ಇದೇ ಅಂತನೂ ನಂಬಿದ್ದರು. ನಿಜವಾಗಲೂ ನಡೆದದ್ದು ಇದೇನಾ?

ಅನೇಕ ವಿಜ್ಞಾನಿಗಳು ಏನು ಹೇಳ್ತಾರೆ? ಪಳೆಯುಳಿಕೆಯ (Fossil-ಪ್ರಾಣಿ ಮೂಳೆಗಳ ಅವಶೇಷ) ಸಿದ್ಧಾಂತದ ಪ್ರಕಾರ ಎಲ್ಲಾ ಜೀವಿಗಳು ಒಬ್ಬ ಪೂರ್ವಜನಿಂದ ಬಂದವು ಅಂತ ಅನೇಕ ವಿಜ್ಞಾನಿಗಳು ಕಲಿಸುತ್ತಾರೆ. ಎಲ್ಲಾ ಜೀವಿಗಳಲ್ಲಿ ಒಂದೇ ರೀತಿಯ ಡಿ.ಎನ್‌.ಎ ಇದೆ, ಆದ್ದರಿಂದ ಜೀವದ ಮೂಲ ಒಬ್ಬ ಪೂರ್ವಜ ಅಂತ ಅವರು ವಾದ ಮಾಡುತ್ತಾರೆ.

ಬೈಬಲ್‌ ಏನು ಹೇಳುತ್ತೆ? ಎಲ್ಲಾ ಗಿಡಮರಗಳು, ಸಮುದ್ರ ಜೀವಿಗಳು, ಪ್ರಾಣಿಪಕ್ಷಿಗಳು ಅವುಗಳ ಜಾತಿಗನುಸಾರ ಸೃಷ್ಟಿಯಾದವು ಅಂತ ಬೈಬಲಿನ ಆದಿಕಾಂಡ ಪುಸ್ತಕದಲ್ಲಿದೆ. (ಆದಿಕಾಂಡ 1:12, 20-25) ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ, ಪ್ರತಿಯೊಂದು ಪ್ರಾಣಿ-ಪಕ್ಷಿಗಳ ಮಧ್ಯೆ ತುಂಬ ವ್ಯತ್ಯಾಸ ಇರುತ್ತೆ. ಜೊತೆಗೆ, ಪ್ರತಿ ಜಾತಿಯಲ್ಲೂ ವಿಭಿನ್ನತೆ ಇರುತ್ತೆ ಅಂತ ನಾವು ಹೇಳಬಹುದು. ಸೃಷ್ಟಿ ಬಗ್ಗೆ ಬೈಬಲ್‌ನಲ್ಲಿರೋ ವಿಷಯ ನಿಜಾನೇ ಆಗಿದ್ದರೆ, ಎಲ್ಲಾ ಜೀವಿಗಳು ಒಂದೇ ಸಮಯದಲ್ಲಿ ಪೂರ್ತಿಯಾಗಿ ಸೃಷ್ಟಿಯಾದವು ಅಂತ ಪಳೆಯುಳಿಕೆಯಿಂದ ರುಜುವಾಗಬೇಕು.

ಆಧಾರಗಳಿಂದ ಏನು ಗೊತ್ತಾಗುತ್ತೆ? ಆಧಾರಗಳು ಸೃಷ್ಟಿ ಸರಿ ಅಂತ ಹೇಳುತ್ತಾ ಅಥವಾ ಡಾರ್ವಿನ್‌ ಹೇಳಿದ್ದು ಸರಿ ಅಂತ ಹೇಳುತ್ತಾ? 150 ವರ್ಷಗಳಿಂದ ಆಗುತ್ತಿರೋ ಪ್ರಯೋಗಗಳಿಂದ ಏನು ಗೊತ್ತಾಗಿದೆ?

ಡಾರ್ವಿನ್‌ನ ಮರ ಬುಡಮೇಲಾಯ್ತು

ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಏಕಕೋಶ ಜೀವಿಗಳ, ಗಿಡಮರಗಳ ಮತ್ತು ಪ್ರಾಣಿ-ಪಕ್ಷಿಗಳ ಅನುವಂಶಿಕ ಕೋಡ್‌ಅನ್ನು ಒಂದರ ಜೊತೆ ಒಂದು ಹೋಲಿಕೆ ಮಾಡಿ ನೋಡಿದ್ದಾರೆ. ಆಗ ಡಾರ್ವಿನ್‌ನ “ಜೀವದ ಮರ” ಸಿದ್ಧಾಂತ ಸರಿ ಇರಬಹುದು ಅಂತ ಅವರಿಗೆ ಅನಿಸಿತು. ಆದರೆ ಅದು ನಿಜ ಅಲ್ಲ.

ಹೀಗೆ ಹೋಲಿಕೆ ಮತ್ತು ಸಂಶೋಧನೆ ಮಾಡಿದರಿಂದ ಗೊತ್ತಾಗಿರೋ ವಿಷಯದ ಬಗ್ಗೆ 1999ರಲ್ಲಿ ಜೀವಶಾಸ್ತ್ರಜ್ಞ ಮ್ಯಾಲ್ಕಮ್‌. ಎಸ್‌. ಗೊರ್ಡೊನ್‌ ಹೀಗೆ ಬರೆದಿದ್ದಾರೆ: “ಜೀವ ಒಂದೇ ಮೂಲದಿಂದ ಅಲ್ಲ, ಬೇರೆಬೇರೆ ಮೂಲಗಳಿಂದ ಬಂದಿದೆ.” ಡಾರ್ವಿನ್‌ ಹೇಳಿದ ಜೀವದ ಮರದಿಂದನೇ ಎಲ್ಲಾ ಜೀವಿಗಳು ಬಂದವು ಅಂತ ಹೇಳೋದಕ್ಕೆ ಆಧಾರ ಇದೆಯಾ? ಗೊರ್ಡೊನ್‌ ಹೀಗೆ ಮುಂದುವರಿಸುತ್ತಾರೆ: “ಎಲ್ಲಾ ಜೀವಿಗಳು ಒಬ್ಬ ಪೂರ್ವಜನಿಂದ ಬಂದವು ಅಂತ ನಾವು ಹಿಂದೆ ಅಂದುಕೊಡಿದ್ದೆವು. ಆದರೆ ಈ ಸಿದ್ಧಾಂತ ಗಿಡಮರಗಳ ಮತ್ತು ಪ್ರಾಣಿ-ಪಕ್ಷಿಗಳ ಸಾಮ್ರಾಜ್ಯಕ್ಕೆ ಅನ್ವಯಿಸಲ್ಲ. ಕೆಲವು ಫೈಲಾಗಳಿಗೆ ಅನ್ವಯಿಸಿದರೂ ಎಲ್ಲಾ ಫೈಲಾಗಳಿಗೆ ಮತ್ತು ಅದರ ನಂತರ ಬರೋ ವರ್ಗಳಿಗೂ ಅನ್ವಯಿಸಲ್ಲ.”29a

ಇತ್ತೀಚಿಗೆ ಮಾಡಿರೋ ಎಲ್ಲಾ ಸಿದ್ಧಾಂತಗಳು ಡಾರ್ವಿನ್‌ನ ಸಿದ್ಧಾಂತವನ್ನ ಒಪ್ಪುತ್ತಾ ಇಲ್ಲ. ಉದಾಹರಣೆಗೆ, 2009ರಲ್ಲಿ ಬಂದ ನ್ಯೂ ಸೈಂಟಿಸ್ಟ್‌ ಅನ್ನೋ ಪತ್ರಿಕೆಯ ಒಂದು ಲೇಖನದಲ್ಲಿ ವಿಕಾಸವಾದಿ ಮತ್ತು ವಿಜ್ಞಾನಿಯಾಗಿರೋ ಎರಿಕ್‌ ಬ್ಯಾಪ್ಟಿಸ್ಟ್‌ ಹೀಗೆ ಹೇಳುತ್ತಾರೆ: “ಜೀವದ ಮರ ಸಿದ್ಧಾಂತ ನಿಜ ಅಂತ ಹೇಳೋಕೆ ನಮ್ಮ ಹತ್ತಿರ ಯಾವ ಆಧಾರನೂ ಇಲ್ಲ.”30 ಅದೇ ಲೇಖನದಲ್ಲಿ ವಿಕಾಸವಾದವನ್ನು ನಂಬುವ ಜೀವಶಾಸ್ತ್ರಜ್ಞರಾದ ಮೈಕಲ್‌ ರೋಸ್‌ ಹೀಗೆ ಹೇಳುತ್ತಾರೆ: “ಜೀವದ ಮರ ಸಿದ್ಧಾಂತ ಸಮಾಧಿ ಸೇರಿದೆ ಅಂತ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಜೀವಶಾಸ್ತ್ರದ ಬುನಾದಿನೇ ಬದಲಾಗಬೇಕು ಅನ್ನೋ ವಿಷಯವನ್ನ ಅನೇಕರು ಒಪ್ಪಿಕೊಂಡಿಲ್ಲ.”31b

ಪಳೆಯುಳಿಕೆಯ ಸಂಶೋಧನೆಯಿಂದ ಏನು ಗೊತ್ತಾಗಿದೆ?

ಒಬ್ಬ ಪೂರ್ವಜನಿಂದ ಜೀವ ಉಗಮ ಆಯಿತು ಅಂತ ಅನೇಕ ಪಳೆಯುಳಿಕೆಯನ್ನ ಸಂಶೋಧನೆ ಮಾಡಿದಾಗ ಗೊತ್ತಾಗಿದೆ ಅಂತ ಅನೇಕ ವಿಜ್ಞಾನಿಗಳು ಹೇಳುತ್ತಾರೆ. ಮೀನುಗಳಿಂದ ಉಬಯಚರಗಳು (Amphibians) ಅಂದರೆ ನೆಲ ಮತ್ತು ನೀರು ಎರಡರ ಮೇಲೂ ಬದುಕುವ ಜೀವಿಗಳು ಬಂದವು, ಅದೇ ತರ ಸರಿಸೃಪಗಳು (Reptiles), ಸಸ್ತನಿಗಳು (Mammals) ಬಂದವು. ಆದರೆ ನಿಜಾಂಶ ಏನು?

ವಿಕಾಸವಾದವನ್ನ ಸಮರ್ಥಿಸೋ ಪ್ರಗ್ಜೀವಶಾಸ್ತ್ರಜ್ಞರಾದ (Paleontologist) ಡೇವಿಡ್‌ ಎಮ್‌. ರಾಪ್‌ ಹೀಗಂತಾರೆ: “ಜೀವದ ಉಗಮ ಹಂತಹಂತವಾಗಿ ಆಯಿತು ಅಂತ ವಿವರಿಸೋದಕ್ಕೆ ಡಾರ್ವಿನ್‌ ಕಾಲದ ಮತ್ತು ಈಗಿನ ಕಾಲದ ಅಗೆತಶಾಸ್ತ್ರಜ್ಞರು ಕಂಡುಹಿಡಿದಿರೋ ವಿಷಯಗಳಲ್ಲಿ ಒಂದಕ್ಕೊಂದು ಹೊಂದಾಣಿಕೆ ಇಲ್ಲ ಅಂತ ಹೇಳಬಹುದು. ಉದಾಹರಣೆಗೆ, ಅವರ ಪ್ರಕಾರ ಪ್ರಭೇದಗಳು ಇದ್ದಕ್ಕಿದ್ದಂತೆ ಒಂದು ಸಮಯದಲ್ಲಿ ಕಾಣಿಸಿಕೊಳ್ಳುತ್ತೆ, ನಂತರ ಅನೇಕ ವರ್ಷಗಳ ತನಕ ಅವುಗಳಲ್ಲಿ ಯಾವುದೇ ಬದಲಾವಣೆ ಆಗಲ್ಲ. ಒಂದುವೇಳೆ ಆದರೂ ಅದು ಸ್ವಲ್ಪ ಮಾತ್ರ. ಆಮೇಲೆ ಒಂದಿನ ಅವು ಕಾಣದೇ ಹೋಗುತ್ತೆ.”32

ಪ್ರಾಣಿಗಳ ಪಳೆಯುಳಿಕೆಗಳ ಸಂಶೋಧನೆಯಿಂದ ಗೊತ್ತಾಗಿರೋದು ಏನಂದರೆ, ತುಂಬ ವರ್ಷಗಳ ನಂತರನೂ ಜೀವಜಂತುಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿ ವಿಕಾಸವಾಯಿತು ಅನ್ನೋದಕ್ಕೆ ಪಳೆಯುಳಿಕೆಗಳಿಂದ ಯಾವುದೇ ಆಧಾರ ಸಿಕ್ಕಿಲ್ಲ. ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ, ಒಂದೊಂದೂ ಪ್ರಾಣಿಗಳ ದೇಹ ರಚನೆ ಇನ್ನೊಂದಕ್ಕಿಂತ ಭಿನ್ನವಾಗಿರುತ್ತೆ. ಎಲ್ಲಾದರೂ ಹೊಸ ಬದಲಾವಣೆಗಳಾದರೆ ಅದು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತೆ. ಉದಾಹರಣೆಗೆ ಬಾವಲಿಗಳಲ್ಲಿ ಧ್ವನಿ ಮತ್ತು ಸೋನಾರ್‌ ತರಂಗಗಳ ಸಹಾಯದಿಂದ ಹಾರುವ ಸಾಮರ್ಥ್ಯ ಇದೆ. ಆದರೆ ಈ ಸಾಮರ್ಥ್ಯ ಅದರ ಹಿಂದೆ ಜೀವಿಸಿದ ಯಾವುದೇ ಪ್ರಾಣಿ-ಪಕ್ಷಿಗಳಲ್ಲಿ ಕಂಡುಬಂದಿಲ್ಲ. ಹೀಗಿರುವಾಗ ಯಾವ ಪ್ರಾಣಿಯನ್ನ ಬಾವಲಿಯ ಪೂರ್ವಜ ಅಂತ ಹೇಳಕ್ಕಾಗುತ್ತೆ?

ನಿಜ ಹೇಳಬೇಕಂದರೆ, ಪ್ರಾಣಿ ಜಗತ್ತಿನ ಮುಖ್ಯ ವರ್ಗದಲ್ಲಿರೋ ಪ್ರಾಣಿಗಳು ಒಂದೇ ಸಮನೆ ಇದ್ದಕ್ಕಿದ್ದಂತೆ ಉತ್ಪತ್ತಿಯಾದವು ಅಂತ ಪಳೆಯುಳಿಕೆಯ ರೆಕಾರ್ಡ್‌ನಿಂದ ಗೊತ್ತಾಗುತ್ತೆ. ಈ ಸಮಯಾವಧಿಯನ್ನ ಪ್ರಗ್ಜೀವಶಾಸ್ತ್ರಜ್ಞರು “ಕೇಂಬ್ರಿಯನ್‌ ವಿಸ್ಪೋಟ” ಅಂತ ಕರೆದಿದ್ದಾರೆ. ಈ ಕೇಂಬ್ರಿಯನ್‌ ಕಾಲ ಯಾವಾಗಿಂದ ಶುರುವಾಯಿತು?

ಸಂಶೋಧಕರು ಹೇಳಿರೋದನ್ನ ಸರಿ ಅಂತ ಅಂದುಕೊಳ್ಳೋಣ. ಅವರ ಪ್ರಕಾರ ಭೂಮಿಯ ಇತಿಹಾಸವನ್ನ ಅರ್ಥ ಮಾಡಿಕೊಳ್ಳೋಕ್ಕೆ ಒಂದು ಫುಟ್‌ಬಾಲ್‌ ಮೈದಾನದಷ್ಟು ಉದ್ದದ ಸಮಯಾವಧಿಯನ್ನ ಊಹಿಸಿ (1). ಈ ಮೈದಾನವನ್ನ ಎಂಟು ಭಾಗಗಳಾಗಿ ವಿಂಗಡಿಸಿ. ಪ್ರಗ್ಜೀವಶಾಸ್ತ್ರಜ್ಞರ ಪ್ರಕಾರ ನೀವು ಏಳನೇ ಭಾಗವನ್ನ ದಾಟಿದ ಮೇಲೆನೇ, ಕೇಂಬ್ರಿಯನ್‌ ಕಾಲವನ್ನ ತಲುಪುತ್ತೀರ (2). ಈ ಕಾಲಾವಧಿಯ ಚಿಕ್ಕ ಸಮಯದಲ್ಲೇ ಪ್ರಾಣಿ ಜಗತ್ತಿನ ಮುಖ್ಯ ವರ್ಗದ ಪ್ರಾಣಿಗಳ ಪಳೆಯುಳಿಕೆಗಳು ಸಿಗುತ್ತೆ. ಈ ಪ್ರಾಣಿಗಳ ವಿಕಾಸ ಎಷ್ಟು ವೇಗದಲ್ಲಿ ನಡಿಯುತ್ತೆ? ಕೇಂಬ್ರಿಯನ್‌ ಕಾಲದಿಂದ ಒಂದು ಹೆಜ್ಜೆ ಮುಂದಕ್ಕೆ ಇಟ್ಟ ತಕ್ಷಣ ವಿಧವಿಧವಾದ ಜೀವಜಂತುಗಳು ಕಾಣಿಸಿಕೊಳ್ಳೋಕ್ಕೆ ಶುರುವಾಗುತ್ತೆ.

ಭೂಮಿಯ ಉಗಮದದಿಂದ ಹಿಡಿದು ಕೇಂಬ್ರಿಯನ್‌ ವಿಸ್ಪೋಟದ ತನಕ ಇರೋ ಸಮಯಾವಧಿಯನ್ನು ತೋರಿಸೋ ಫುಟ್‌ಬಾಲ್‌ ಮೈದಾನ

ಹೀಗೆ ಇದ್ದಕ್ಕಿದ್ದಂತೆ ಜೀವಿಗಳು ಉತ್ಪತ್ತಿ ಆಗಿರೋದನ್ನ ನೋಡಿದಾಗ, ಡಾರ್ವಿನ್‌ ಸಿದ್ಧಾಂತವನ್ನ ನಂಬುವ ವಿಜ್ಞಾನಿಗಳ ಮನಸ್ಸಲ್ಲಿ ಕೆಲವು ಪ್ರಶ್ನೆಗಳು ಬಂದಿವೆ. ಉದಾಹರಣೆಗೆ, 2008ರಲ್ಲಿ ವಿಕಾಸವಾದವನ್ನ ಸಮರ್ಥಿಸೋ ವಿಜ್ಞಾನಿ ಸ್ಟುವರ್ಟ್‌ ನ್ಯುಮೆನ್‌ ಒಂದು ಇಂಟರ್‌ವ್ಯೂ ಕೊಟ್ಟರು. ಅವರು ಹೇಳಿದ್ದು: “ಈ ರೀತಿ ಹೊಸಹೊಸ ರೀತಿಯ ಜೀವಿಗಳು ಹುಟ್ಟಿಕೊಂಡವು ಅನ್ನೋದು ನಿಜನೇ ಆಗಿದ್ದರೆ, ಅದನ್ನ ಅರ್ಥ ಮಾಡಿಕೊಳ್ಳೋಕೆ ವಿಕಾಸವಾದದ ಹೊಸ ಸಿದ್ಧಾಂತನೇ ಬೇಕು. ವಿಕಾಸದ ಸಮಯದಲ್ಲಿ ಪ್ರಾಣಿಗಳಲ್ಲಿ ಆದ ದೊಡ್ಡ ಬದಲಾವಣೆಗಳನ್ನ ನಾವು ಅರ್ಥ ಮಾಡಿಕೊಂಡಾಗ ಡಾರ್ವಿನ್‌ ಸಿದ್ಧಾಂತ ಯಾವ ಲೆಕ್ಕಕ್ಕೂ ಬರಲ್ಲ. ನನ್ನ ಪ್ರಕಾರ ಜೀವದ ವಿಕಾಸ ಕ್ರಮವನ್ನ ಅರ್ಥಮಾಡಿಕೊಳ್ಳೋಕ್ಕೆ ಇನ್ನೂ ಅನೇಕ ಸಿದ್ಧಾಂತಗಳ ಅಗತ್ಯ ಇದೆ. ಇದರಲ್ಲಿ ಒಂದು ಡಾರ್ವಿನ್‌ ಸಿದ್ಧಾಂತ ಇದೆ ಆದರೂ ಈ ಸಿದ್ಧಾಂತದಿಂದ ಅಷ್ಟೇನು ಪ್ರಯೋಜನ ಇಲ್ಲ.”33

ಟೊಳ್ಳು ಪುರಾವೆಗಳು

ಹೋಲಿಕೆ ಮಾಡಲು ಪುಸ್ತಕಗಳಲ್ಲಿ ತೋರಿಸಿರುವ ಪಳೆಯುಳಿಕೆಯ ಚಿತ್ರಗಳು

ಕೆಲವು ಪುಸ್ತಕಗಳಲ್ಲಿ ಪಳೆಯುಳಿಕೆಗಳ ಕ್ರಮವನ್ನ ಈ ರೀತಿಯಲ್ಲಿ ಇಟ್ಟು, ಜೀವಜಂತುಗಳ ವಿಕಾಸ ಇದೇ ಕ್ರಮದಲ್ಲಿ ಆಯಿತು ಅಂತ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಪಳೆಯುಳಿಕೆಗಳ ಆಕಾರವನ್ನು ಯಾಕೆ ಬದಲಾಯಿಸುತ್ತಾರೆ?

Above left: ಕೆಲವು ಪುಸ್ತಕಗಳಲ್ಲಿ ತೋರಿಸಿರುವ ಪ್ರಕಾರ

Above right: ನಿಜವಾದ ಗಾತ್ರ

ಮೀನಿನಿಂದ ಉಭಯಚರಗಳು ಬಂದವು, ಸರಿಸೃಪಗಳಿಂದ ಸಸ್ತನಿಗಳು ಬಂದವು ಅನ್ನೋದಕ್ಕೆ ಆಧಾರವಾಗಿರೋ ಪಳೆಯುಳಿಕೆಗಳ ಬಗ್ಗೆ ಏನು? ಈ ಕ್ರಮದಲ್ಲೇ ಈ ಜೀವಿಗಳು ವಿಕಾಸ ಆದವು ಅಂತ ಹೇಳೋದಕ್ಕೆ ನಮ್ಮ ಹತ್ತಿರ ಬಲವಾದ ಆಧಾರ ಇದೆ ಅಂತ ಹೇಳಬಹುದಾ? ಸರಿಯಾದ ಸಂಶೋಧನೆಯಿಂದ ಇವೆಲ್ಲ ಟೊಳ್ಳು ಪುರಾವೆಗಳು ಅಂತ ಗೊತ್ತಾಯಿತು.

ಮೊದಲನೇ ಟೊಳ್ಳು ಪುರಾವೆ: ಸರೀಸೃಪಗಳಿಂದ ಸಸ್ತನಿಗಳು ಆದವು ಅಂತ ಕೆಲವು ಪುಸ್ತಕಗಳಲ್ಲಿ ಚಿತ್ರಗಳನ್ನ ತೋರಿಸಿದ್ದಾರೆ. ಈ ಚಿತ್ರಗಳು ತಪ್ಪಾಗಿವೆ. ಯಾಕೆಂದರೆ, ಆ ಪಳೆಯುಳಿಕೆಗಳ ಆಕಾರ ಎಲ್ಲಾ ಒಂದೇ ರೀತಿ ಇರುತ್ತೆ. ಆದರೆ ನಿಜ ಏನಂದರೆ, ಈ ಪಳೆಯುಳಿಕೆಗಳ ಆಕಾರ, ಕೆಲವು ಚಿಕ್ಕದು, ಕೆಲವು ದೊಡ್ಡದು ಇರುತ್ತೆ.

ಎರಡನೇ ಟೊಳ್ಳು ಪುರಾವೆ: ಆ ಜೀವಜಂತುಗಳು ಒಂದಕ್ಕೊಂದು ಹೋಲುತ್ತೆ ಅಂತ ಹೇಳೋಕೆ ಯಾವುದೇ ಆಧಾರ ಸಿಕ್ಕಿಲ್ಲ, ಅದಕ್ಕೆ ಇದೆ ಒಂದು ದೊಡ್ಡ ಪುರಾವೆ. ಕೆಲವು ವಿಜ್ಞಾನಿಗಳು ಒಂದು ಪಳೆಯುಳಿಕೆಯಿಂದ ಇನ್ನೊಂದು ಪಳೆಯುಳಿಕೆಯ ಮಧ್ಯೆ ಮಿಲ್ಯಾಂತರ ವರ್ಷಗಳ ಅಂತರ ಇರಬಹುದು ಅಂತ ಹೇಳಿದ್ದಾರೆ. ಈ ಅಂತರದ ಬಗ್ಗೆ ಪ್ರಾಣಿಶಾಸ್ತ್ರಜ್ಞರಾದ ಹೆನ್ರಿ ಜೀ ಹೀಗಂತಾರೆ: “ಈ ಪಳೆಯುಳಿಕೆಗಳ ಮಧ್ಯೆ ಇರೋ ಅಂತರ ಎಷ್ಟು ಅಂದರೆ, ಯಾವ ಪ್ರಾಣಿ ಯಾವುದರ ಪೂರ್ವಜ ಅಥವಾ ವಂಶಜ ಅಂತ ಹೇಳೋಕೆ ಸಾಧ್ಯನೇ ಇಲ್ಲ.”34c

ಮೀನು ಮತ್ತು ಉಭಯಚರ ಪಳೆಯುಳಿಕೆಯ ಬಗ್ಗೆ ಜೀವಶಾಸ್ತ್ರಜ್ಞರಾದ ಮ್ಯಾಲ್ಕಮ್‌. ಎಸ್‌. ಗೊರ್ಡನ್‌ ಹೀಗೆ ಹೇಳುತ್ತಾರೆ, ನಮಗೆ ತುಂಬ ಕಡಿಮೆ ಪಳೆಯುಳಿಕೆಗಳು ಸಿಕ್ಕಿವೆ “ಆ ಸಮಯದಲ್ಲಿ ಸಾವಿರಾರು ಜೀವಜಂತುಗಳು ಇದ್ದರೂ ಎಲ್ಲದರ ಪಳೆಯುಳಿಕೆ ಸಿಕ್ಕಿಲ್ಲ.” ಅವರು ಮುಂದುವರಿಸಿ ಹೇಳೋದು: “ಈ ಜೀವಜಂತುಗಳಿಂದ ಇನ್ನೊಂದು ಜೀವ ವಿಕಾಸ ಆಯಿತು ಅಂತ ಆಗಲಿ ಅಥವಾ ಇವುಗಳ ಮಧ್ಯೆ ಒಂದಕ್ಕೊಂದು ಸಂಬಂಧ ಇತ್ತು ಅಂತ ಆಗಲಿ ಹೇಳೋಕೆ ಸಾಧ್ಯ ಇಲ್ಲ.”35d

ಅನೇಕ ರೀತಿಯ ಜೀವಜಂತುಗಳ ಮಧ್ಯೆ ಸಂಬಂಧ ಇದ್ದಿರಬಹುದು ಅಂತ ತೋರಿಸುವ ಗ್ರಾಫ್‌

“ಚಲನಚಿತ್ರದ” ನಿಜವಾದ ಕಥೆ

ಇಸವಿ 2004ರ ನ್ಯಾಷನಲ್‌ ಜಿಯೊಗ್ರಾಫಿಕ್‌ ಪತ್ರಿಕೆಯಲ್ಲಿ ಹೀಗೆ ಬರೆದಿತ್ತು “ಪಳೆಯುಳಿಕೆಯ ರೆಕಾರ್ಡ್‌ನ್ನು ವಿಕಾಸವಾದದ ಒಂದು ಚಲನಚಿತ್ರಕ್ಕೆ ಹೋಲಿಸಬಹುದು. ಈ ಚಲನಚಿತ್ರದ ಒಂದೊಂದು ರೀಲ್‌ನಲ್ಲಿರುವ 1000 ಚಿತ್ರಗಳಲ್ಲಿ 999 ಚಿತ್ರಗಳು ಕಟ್ಟಿಂಗ್‌ ಮಾಡೋವಾಗ ಕಳೆದು ಹೋಗಿದೆ.”36 ಈ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತೆ?

ಚಲನಚಿತ್ರದ ರೀಲು ಮತ್ತು ಚಲನಚಿತ್ರಗಳ ಕೆಲವು ಚಿತ್ರಗಳು

ಜೀವಜಂತುಗಳು ಒಂದರಿಂದ ಇನ್ನೊಂದು ಉತ್ಪತ್ತಿಯಾಗಿಲ್ಲ ಅಂತ ಪಳೆಯುಳಿಕೆಯ “95 ಚಿತ್ರಗಳು” ತೋರಿಸುತ್ತಾದರೆ, ಉಳಿದ “5 ಚಿತ್ರಗಳನ್ನ” ಇನ್ನೊಂದು ಕ್ರಮದಲ್ಲಿ ಇಟ್ಟು ವಿಕಾಸವಾದ ನಿಜ ಅಂತ ಯಾಕೆ ಪಳೆಯುಳಿಕೆಯ ವಿಜ್ಞಾನಿಗಳು ತೋರಿಸುತ್ತಾರೆ?

ಊಹಿಸಿ, ಒಂದು ಚಲನಚಿತ್ರದ 1,00,000 ಚಿತ್ರಗಳಲ್ಲಿ 100 ಮಾತ್ರ ಸಿಕ್ಕಿದೆ. ಈ ನೂರು ಚಿತ್ರಗಳನ್ನ ಮಾತ್ರ ಬಳಸಿ ಚಲನಚಿತ್ರದ ನಿಜವಾದ ಕಥೆ ಏನು ಅಂತ ನಿಮಗೆ ಹೇಳಕ್ಕಾಗುತ್ತಾ? ಅದರ ಕಥೆ ಹೀಗಿರಬಹುದು ಅಂತ ನೀವು ಊಹಿಸಿರಬಹುದು. ಆದರೆ ನೀವು ಊಹಿಸಿರೋ ಕಥೆಗೆ 5 ಚಿತ್ರಗಳು ಮಾತ್ರ ಹೊಂದಿಕೆಯಲ್ಲಿವೆ. ಆದರೆ ಉಳಿದ 95 ಚಿತ್ರಗಳು ಬೇರೆ ಕಥೆಯನ್ನೇ ಹೇಳುತ್ತಿವೆ. 5 ಚಿತ್ರಗಳು ನೀವು ಹೇಳುತ್ತಿರುವ ಕಥೆಗೆ ಹೊಂದಿಕೆಯಲ್ಲಿದೆ ಅಂದಮಾತ್ರಕ್ಕೆ ಅದೇ ಸತ್ಯ ಅಂತ ನೀವು ವಾದ ಮಾಡೋದು ಸರಿನಾ? ಅದೇ ಸರಿ ಅಂತ ಸಾಬೀತು ಮಾಡೋಕೆ ಅವನ್ನ ನಿಮ್ಮಿಷ್ಟದ ಕ್ರಮದಲ್ಲಿ ಜೋಡಿಸೋದು ಸರಿನಾ? ಅಥವಾ ನಿಜವಾದ ಕಥೆ ಏನು ಅಂತ ತಿಳಿಯೋಕೆ ಉಳಿದ 95 ಚಿತ್ರಗಳ ಬಗ್ಗೆ ಕೂಡ ತಿಳಿದುಕೊಳ್ಳೋದು ಸರಿ ಅಂತ ನಿಮಗೆ ಅನಿಸುವುದಿಲ್ಲವಾ?

ಪಳೆಯುಳಿಕೆಯ ರೆಕಾರ್ಡ್‌ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸೋ ವಿಕಾಸವಾದಿಗಳಿಗೆ ಈ ಉದಾಹರಣೆ ಹೇಗೆ ಅನ್ವಯಿಸುತ್ತೆ? 95 ಚಿತ್ರಗಳು ಅಥವಾ ಈ ಹೆಚ್ಚಿನ ಪಳೆಯುಳಿಕೆಯಿಂದ ನಮಗೇನು ಗೊತ್ತಾಗುತ್ತೆ ಅಂದರೆ, ಸಮಯ ಹೋದಂತೆ ಜೀವಜಂತುಗಳಲ್ಲಿ ಯಾವುದೇ ಹೆಚ್ಚಿನ ಬದಲಾವಣೆಯಾಗಿಲ್ಲ. ಈ ವಿಷಯವನ್ನ ಮುಚ್ಚಿಹಾಕಲಾಗಿದೆ. ಯಾಕೆ? ಲೇಖಕ ರಿಚರ್ಡ್‌ ಮಾರಿಸ್‌ ಹೀಗಂತಾರೆ: “ಜೀವಿಗಳಲ್ಲಿ ನಿಧಾನವಾಗಿ ಪರಿವರ್ತನೆ ಆಗುತ್ತಾ ಇದೆ ಅಂತ ಪ್ರಾಕ್ತನಾಶಾಸ್ತ್ರಜ್ಞರು ನಂಬುತ್ತಾರೆ. ಹಾಗಾಗಿ ಅವರ ಕಣ್ಮುಂದೆನೇ ಆಧಾರಗಳಿದ್ದರೂ ಅವನ್ನ ತಳ್ಳಿ ಹಾಕಿದರು. ವಿಕಾಸವಾದವನ್ನ ಸಮರ್ಥಿಸೋಕೆ ಪಳೆಯುಳಿಕೆಯ ರೆಕಾರ್ಡನ್ನು ತಮಗೆ ಇಷ್ಟಬಂದ ಹಾಗೆ ಅವರು ಅರ್ಥಮಾಡಿಕೊಂಡಿದ್ದಾರೆ.”37

“ಪಳೆಯುಳಿಕೆಗಳನ್ನ ಒಂದು ಕ್ರಮದಲ್ಲಿ ಇಟ್ಟು, ಅದೇ ಕ್ರಮದಲ್ಲಿ ಒಂದು ಜೀವಿಯಿಂದ ಇನ್ನೊಂದು ಜೀವಿ ಬಂತು ಅನ್ನೋ ಯಾವ ಸಿದ್ಧಾಂತನೂ ವಿಜ್ಞಾನದಲ್ಲಿ ಇಲ್ಲ. ಇದು ಒಂದು ಅಜ್ಜಿ ಕಥೆ ಅನ್ನಬಹುದು. ಇದು ಯಾವುದೇ ಆಧಾರ ಇಲ್ಲದ ವಿಷಯವಾಗಿದೆ.”—ಇನ್‌ ಸರ್ಚ್‌ ಆಫ್‌ ಡೀಪ್‌ ಟೈಮ್‌ —ಬಿಯಾಂಡ್‌ ದಿ ಫಾಸಿಲ್‌ ರೆಕಾರ್ಡ್‌ ಟು ಎ ನ್ಯು ಹಿಸ್ಟ್ರಿ ಆಫ್‌ ಲೈಫ್‌ ಲೇಖಕ ಹೆನ್ರಿ ಜೀ ಪುಟ. 116-117

ಈಗಿನ ಕಾಲದ ವಿಕಾಸವಾದಿಗಳ ಬಗ್ಗೆ ಏನು? ವಿಕಾಸವಾದನೇ ಸರಿ ಅಂತ ಸಾಬೀತು ಮಾಡೋ ಹಾಗೆ ಪಳೆಯುಳಿಕೆಯ ರೆಕಾರ್ಡನ್ನು ಬಳಸುತ್ತಾ ಅಥವಾ ಪಳೆಯುಳಿಕೆ ಮತ್ತು ಅನುವಂಶಿಕ ದಾಖಲೆಯ ಪ್ರಕಾರ ರೆಕಾರ್ಡನ್ನು ಕ್ರಮವಾಗಿ ಜೋಡಿಸಿ ಬಳಸುತ್ತಾರಾ?e

ನಿಮಗೇನನಿಸುತ್ತೆ? ಆಧಾರಗಳನ್ನ ನೋಡಿ ನೀವು ಯಾವ ತೀರ್ಮಾನಕ್ಕೆ ಬರುತ್ತೀರಾ? ಇಲ್ಲಿ ವರೆಗೂ ಕಲಿತ ಸತ್ಯಾಂಶಗಳ ಬಗ್ಗೆ ಯೋಚಿಸಿ.

  • ಭೂಮಿ ಮೇಲೆ ಬಂದ ಮೊದಲ ಜೀವ “ಸರಳವಾಗಿ” ಇರಲಿಲ್ಲ.

  • ಜೀವಕೋಶದ ಬೇರೆಬೇರೆ ಭಾಗಗಳು ತನ್ನಿಂದ ತಾನೇ ಬರೋಕೆ ಸಾಧ್ಯಾನೇ ಇಲ್ಲ.

  • ಮಾಹಿತಿಯನ್ನ ಸಂಗ್ರಹಿಸಿ ಇಡಲು ಮನುಷ್ಯರು ಇಲ್ಲಿ ವರೆಗೂ ಮಾಡಿರೋ ಯಾವುದೇ ವಸ್ತು ಅಥವಾ ಪ್ರೋಗ್ರಾಮ್‌ಗಿಂತ ಡಿ.ಎನ್‌.ಎ ತುಂಬ ಜಟಿಲವಾಗಿದೆ. ಇದು ಜೀವಕೋಶದಲ್ಲಿ ಹೇಗೆಲ್ಲ ಕೆಲಸ ನಡೀಬೇಕು ಅನ್ನೋ ನಿರ್ದೇಶನಗಳನ್ನ ಕೊಡುತ್ತೆ. ಇದರ ಹಿಂದೆ ಒಬ್ಬ ಬುದ್ಧಿವಂತನ ಕೈಕೆಲಸ ಇದೆ ಅಂತ ನಮಗೆ ಗೊತ್ತಾಗುತ್ತೆ.

  • ಅನುವಂಶಿಕ ರೆಕಾರ್ಡ್‌ನಿಂದ ನಮಗೆ ಏನು ಗೊತ್ತಾಗುತ್ತೆ ಅಂದರೆ, ಜೀವ ಒಬ್ಬ ಪೂರ್ವಜನಿಂದ ಬರೋದಕ್ಕೆ ಸಾಧ್ಯನೇ ಇಲ್ಲ. ಇದರ ಜೊತೆಗೆ ಪ್ರಾಣಿಗಳ ದೊಡ್ಡ ಗುಂಪು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು ಅಂತ ಪಳೆಯುಳಿಕೆಯ ರೆಕಾರ್ಡ್‌ನಿಂದ ಗೊತ್ತಾಗುತ್ತೆ.

ಈ ಎಲ್ಲಾ ಆಧಾರ, ಸತ್ಯಗಳನ್ನ ಪರಿಶೀಲನೆ ಮಾಡಿದ ಮೇಲೆ, ಜೀವದ ಉಗಮದ ಬಗ್ಗೆ ಬೈಬಲ್‌ ಹೇಳೋದನ್ನ ನೀವು ಒಪ್ಪಿಕೊಳ್ಳುವುದಿಲ್ಲವಾ? ಆದರೆ ಇದನ್ನ ವಿಜ್ಞಾನ ಒಪ್ಪಲ್ಲ ಅನ್ನೋದು ಅನೇಕ ಜನರ ಅನಿಸಿಕೆ. ಇದು ನಿಜಾನಾ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

a ಜೈವಿಕ ಪದವಾಗಿರೋ ಫೈಲಾ ಅಂದರೆ (ಏಕವಚನದಲ್ಲಿ ಫೈಲಮ್‌), ಒಂದೇ ರೀತಿಯ ಶರೀರ ಇರೋ ಪ್ರಾಣಿಗಳ ದೊಡ್ಡ ಗುಂಪು. ಪ್ರಾಣಿಗಳನ್ನ ಮತ್ತು ಗಿಡಗಳನ್ನ ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅವು ಹೀಗಿವೆ: ಸಾಮ್ರಾಜ್ಯ (ಕಿಂಗ್‌ಡಮ್‌), ವಂಶ (ಫೈಲಮ್‌), ವರ್ಗ (ಕ್ಲಾಸ್‌), ಗಣ (ಆರ್ಡರ್‌), ಕುಟುಂಬ (ಫ್ಯಾಮಿಲಿ), ಜಾತಿ (ಜೀನಸ್‌) ಮತ್ತು ಪ್ರಭೇದ (ಸ್ಪೀಶಿಸ್‌). ಉದಾಹರಣೆಗೆ ಕುದುರೆಯ ವರ್ಗೀಕರಣ ಹೀಗಿದೆ- ಸಾಮ್ರಾಜ್ಯ: ಅನಿಮೇಲಿಯಾ; ವಂಶ: ಕೊರ್ಡಾಟಾ; ವರ್ಗ: ಮಾಮಿಲಿಯ; ಗಣ: ಪೆರಿಸೊಡಕ್ಟೈಲ; ಕುಟುಂಬ: ಇಕ್ವಿಡೇ; ಜಾತಿ: ಇಕ್ವಸ್‌; ಪ್ರಭೇದ: ಕ್ಯಾಬಲಸ್‌.

b ನ್ಯೂ ಸೈಂಟಿಸ್ಟ್‌ ಪತ್ರಿಕೆಯಾಗಲಿ ಬ್ಯಾಪ್ಟಿಸ್ಟ್‌ ಮತ್ತು ರೋಸ್‌ ವಿಜ್ಞಾನಿಗಳಾಗಲಿ ವಿಕಾಸವಾದ ತಪ್ಪು ಅಂತ ಹೇಳುತ್ತಾ ಇಲ್ಲ. ಬದಲಿಗೆ ಜೀವದ ಮರ ಸಿದ್ಧಾಂತ ಒಪ್ಪಿಕೊಳ್ಳೋಕೆ ಯಾವುದೇ ಆಧಾರಗಳು ಸಿಕ್ಕಿಲ್ಲ ಅಂತ ಹೇಳುತ್ತಿದ್ದಾರೆ. ಆದರೂ ಈ ವಿಜ್ಞಾನಿಗಳು ವಿಕಾಸವಾದವನ್ನ ಸಮರ್ಥಿಸೋಕೆ ಹೊಸಹೊಸ ವಿಧಾನಗಳನ್ನ ಹುಡುಕುತ್ತಾ ಇದ್ದಾರೆ.

c ಹೆನ್ರಿ. ಜೀ ವಿಕಾಸವಾದವನ್ನ ತಪ್ಪು ಅಂತ ಹೇಳುತ್ತಾ ಇಲ್ಲ. ಬದಲಿಗೆ ಪಳೆಯುಳಿಕೆಗಳ ರೆಕಾರ್ಡ್‌ನಿಂದ ಪೂರ್ತಿ ಮಾಹಿತಿ ಸಿಗೋದಿಲ್ಲ ಅಂತ ಅವರ ಮಾತಿನಿಂದ ಗೊತ್ತಾಗುತ್ತೆ.

d ಮ್ಯಾಲ್ಕಮ್‌ ಎಸ್‌. ಗೊರ್ಡೋನ್‌ ವಿಕಾಸವನ್ನು ನಂಬುವ ವಿಜ್ಞಾನಿ.

e ಉದಾಹರಣೆಗೆ, “ಮನುಷ್ಯನ ವಿಕಾಸ ಎಷ್ಟು ನಿಜ?” ಚೌಕವನ್ನ ನೋಡಿ.

ನಿಜಾಂಶಗಳು ಮತ್ತು ಪ್ರಶ್ನೆಗಳು

  • ನಿಜಾಂಶ: ವಿಕಾಸವಾದದಲ್ಲಿ ಎರಡು ಸಿದ್ಧಾಂತಗಳಿವೆ. ಒಂದು, ಒಬ್ಬ ಪೂರ್ವಜನಿಂದ ಜೀವ ಶುರುವಾಯಿತು. ಎರಡು, ಈಗಾಗಲೇ ಇರೋ ಪ್ರಾಣಿಗಳಿಂದ ನಿಧಾನವಾಗಿ ಬದಲಾವಣೆಯಾಗಿ ಹೊಸ ಪ್ರಾಣಿಗಳು ಹುಟ್ಟಿಕೊಂಡವು. ಈ ಸಿದ್ಧಾಂತಗಳನ್ನು ಆಧರಿಸಿ ಸೃಷ್ಟಿ ಬಗ್ಗೆ ಬೈಬಲ್‌ ಹೇಳುವ ವಿಷಯಗಳನ್ನ ಸಂಶೋಧಕರು ಒಪ್ಪಲ್ಲ.

    ಪ್ರಶ್ನೆ: ಡಾರ್ವಿನ್‌ನ ಸಿದ್ಧಾಂತಗಳ ಬಗ್ಗೆ ಆಗೋ ವಿವಾದಗಳನ್ನು ನೋಡಿದರೆ ವೈಜ್ಞಾನಿಕವಾಗಿ ಅವನು ಹೇಳಿರೋ ಸಿದ್ಧಾಂತಗಳು ನಿಮಗೆ ಸರಿ ಅಂತ ಅನಿಸುತ್ತಾ?

  • ನಿಜಾಂಶ: ಎಲ್ಲಾ ಜೀವಿಗಳಲ್ಲಿ ಒಂದೇ ರೀತಿಯ “ಕಂಪ್ಯೂಟರ್‌ ಭಾಷೆ” ಅಥವಾ ಡಿ.ಎನ್‌.ಎ ಇರುತ್ತೆ. ಅದು ಜೀವಕೋಶದ ಆಕಾರ ಮತ್ತು ಅವು ಹೇಗೆ ಕೆಲಸ ಮಾಡಬೇಕು ಅಂತ ನಿರ್ಧರಿಸುತ್ತೆ.

    ಪ್ರಶ್ನೆ: ಈ ಸಮಾನತೆಗಳನ್ನ ನೋಡುವಾಗ ಎಲ್ಲಾ ಜೀವಿಗಳು ಒಬ್ಬ ಪೂರ್ವಜನಿಂದ ಅಲ್ಲ, ಬದಲಿಗೆ ಒಬ್ಬ ಸೃಷ್ಟಿಕರ್ತನಿಂದ ಬಂದಿವೆ ಅಂತ ನಿಮಗೆ ಅನಿಸಿವುದಿಲ್ಲವಾ?

ಮನುಷ್ಯನ ವಿಕಾಸ ಎಷ್ಟು ನಿಜ?

ಬುರುಡೆ

ಮನುಷ್ಯನ ವಿಕಾಸದ ಬಗ್ಗೆ ಅನೇಕ ಪುಸ್ತಕಗಳಲ್ಲಿ, ವಿಶ್ವಕೋಶಗಳಲ್ಲಿ ಒಂದಾದಮೇಲೆ ಒಂದು ಚಿತ್ರಗಳನ್ನ ಕ್ರಮವಾಗಿ ಜೋಡಿಸಿ ಇಟ್ಟಿರುತ್ತಾರೆ. ಮೊದಲನೇ ಚಿತ್ರದಲ್ಲಿ ಭುಜಗಳು ಸ್ವಲ್ಪ ಬಗ್ಗಿರೋ ತರ ಒಂದು ಮಂಗನ ಚಿತ್ರ ಇರುತ್ತೆ. ಮುಂದಿನ ಚಿತ್ರದಲ್ಲಿ ನೆಟ್ಟಗೆ ನಿಂತಿರೋ ಮತ್ತು ಹಿಂದಿನ ಚಿತ್ರದಲ್ಲಿ ಇರೋದಕ್ಕಿಂತ ದೊಡ್ಡ ತಲೆ ಇರುವಂಥ ಚಿತ್ರವನ್ನ ನೀವು ನೋಡಬಹುದು. ಕೊನೆಯಲ್ಲಿ, ಈಗಿನ ಕಾಲದ ಮನುಷ್ಯನ ಚಿತ್ರ ಇರುತ್ತೆ. ಅದರ ಜೊತೆಗೆ, ಮನುಷ್ಯ ಮತ್ತು ಮಂಗನ ಮಧ್ಯೆ ಸಂಬಂಧ ಇದೆ ಅಂತ ತೋರಿಸಿಕೊಡುವ ಒಂದು ಲಿಂಕ್‌ ಸಿಕ್ಕಿದೆ ಅಂತ ಮೀಡಿಯಾದಲ್ಲಿ ಹೇಳುತ್ತಾರೆ. ಈ ತರ ಪುಸ್ತಕಗಳಲ್ಲಿರುವ ಚಿತ್ರಗಳನ್ನ ನೋಡಿದಾಗ, ಮೀಡಿಯಾದ ರಿಪೋರ್ಟ್‌ಗಳನ್ನ ಕೇಳಿಸಿಕೊಂಡಾಗ ಮಂಗನಿಂದಲೇ ಮಾನವ ಬಂದಿದ್ದಾನೆ ಅನ್ನೋದಕ್ಕೆ ತುಂಬ ಆಧಾರಗಳಿವೆ ಅಂತ ಜನರು ನಂಬುತ್ತಿದ್ದಾರೆ. ಈ ತರ ನಂಬೋದಕ್ಕೆ ಯಾವುದಾದರೂ ಬಲವಾದ ಆಧಾರ ಇದೆಯಾ? ಮುಂದೆ ಕೊಟ್ಟಿರೋ ವಿಷಯಗಳ ಬಗ್ಗೆ ವಿಕಾಸವಾದದ ಸಂಶೋಧಕರು ಏನು ಹೇಳುತ್ತಾರೆ ಅಂತ ನೋಡಿ.f

ಪಳೆಯುಳಿಕೆಗಳು ನಿಜವಾಗಲೂ ಏನನ್ನ ತೋರಿಸಿಕೊಡುತ್ತವೆ?

ಸತ್ಯ: 20ನೇ ಶತಮಾನದ ಆರಂಭದಲ್ಲಿ ಮನುಷ್ಯ ಮತ್ತು ಮಂಗಗಳ ವಿಕಾಸ ಹೇಗಾಯಿತು ಅಂತ ತೋರಿಸಿಕೊಡುವ ಪಳೆಯುಳಿಕೆಗಳು ತುಂಬ ಕಮ್ಮಿ ಸಿಕ್ಕಿವೆ. ಎಷ್ಟೆಂದರೆ ಅವುಗಳನ್ನ ಒಂದು ಟೆನಿಸ್‌ ಟೇಬಲ್‌ ಮೇಲೆ ಇಡಬಹುದು. ನಂತರ ಇನ್ನೂ ಕೆಲವು ಪಳೆಯುಳಿಕೆಗಳು ಸಿಕ್ಕಿದವು. ಈಗ ಒಂದು ರೈಲಿನ ಬೋಗಿ ತುಂಬುವಷ್ಟು ಸಿಕ್ಕಿವೆ ಅಂತ ಅವರು ಹೇಳಿದರು.38 ಅವರಿಗೆ ಸಿಕ್ಕಿರುವ ಈ ಪಳೆಯುಳಿಕೆಯಲ್ಲಿ ಇರುವುದು ಮೂಳೆಗಳು ಅಥವಾ ಹಲ್ಲುಗಳು ಮಾತ್ರ. ಇಲ್ಲಿವರೆಗೂ ಪೂರ್ತಿ ತಲೆ ಬುರುಡೆ ಆಗಲಿ ಪೂರ್ತಿ ಅಸ್ತಿಪಂಜರ ಆಗಲಿ ಸಿಕ್ಕಿಲ್ಲ.39

ಪ್ರಶ್ನೆ: ಮಂಗನಿಂದನೇ ಮಾನವ ಬಂದ ಅಂತ ರುಜುಪಡಿಸೋಕೆ ನಮಗೆ ತುಂಬ ಪಳೆಯುಳಿಕೆಗಳು ಸಿಕ್ಕಿವೆ ಅಂತ ಅವರು ವಾದ ಮಾಡುತ್ತಾರೆ. ಮಂಗನಿಂದ ಮಾನವ ಹೇಗೆ ಮತ್ತು ಯಾವಾಗ ಬಂದ ಅಂತ ವಿಕಾಸವಾದಿಗಳಿಗೆ ಹೇಳೋಕೆ ಆಗುತ್ತಾ?

ಉತ್ತರ: ಇಲ್ಲ. ಈ ಪ್ರಶ್ನೆಗೆ ಸರಿಯಾದ ಉತ್ತರ ವಿಜ್ಞಾನಿಗಳಿಗೆ ಇನ್ನೂ ಸಿಕ್ಕಿಲ್ಲ. ಮಂಗಗಳ ಪಳೆಯುಳಿಕೆಯ ವರ್ಗೀಕರಣದ ಬಗ್ಗೆ ಆಸ್ಟ್ರೇಲಿಯದ ನ್ಯೂ ಸೌತ್‌ ವೇಲ್ಸ್‌ನ ವಿಶ್ವವಿದ್ಯಾನಿಲಯದ ರಾಬಿನ್‌ ಡೆರಿಕೋರ್ಟ್‌ ಅವರು 2009ರಲ್ಲಿ ಹೀಗೆ ಬರೆದರು: “ನಾವು ಯಾರು ಒಮ್ಮತದಲ್ಲಿ ಇಲ್ಲ ಅನ್ನೋ ವಿಷಯವನ್ನ ನಾವೆಲ್ಲರು ಒಪ್ಪಿಕೊಳ್ಳುತ್ತೇವೆ.”40 2007ರಲ್ಲಿ ನೇಚರ್‌ ಅನ್ನೋ ಒಂದು ವಿಜ್ಞಾನದ ಪತ್ರಿಕೆಯಲ್ಲಿ ವಿಕಾಸದ ಬಗ್ಗೆ ಇನ್ನೊಂದು ಲಿಂಕ್‌ ಸಿಕ್ಕಿದೆ ಅಂತ ಹೇಳೋರ ಬಗ್ಗೆ ಲೇಖನ ಬಂದಿತ್ತು. ಅದರಲ್ಲಿ ಸಂಶೋಧಕರು ಮಂಗನಿಂದ ಮಾನವ ಹೇಗೆ ಮತ್ತು ಯಾವಾಗ ಬಂದ ಅನ್ನೋದಕ್ಕೆ ನಮ್ಮ ಹತ್ತಿರ ಯಾವ ಆಧಾರನೂ ಇಲ್ಲ ಅಂತ ಹೇಳಿದರು.41 ಹಂಗೇರಿಯ ಎಟ್ವಸ್‌ ಲೋರಂಡ್‌ ವಿಶ್ವವಿದ್ಯಾನಿಲಯದ ಜೈವಿಕ ಮಾನವಶಾಸ್ತ್ರಜ್ಞ ಡ್ಯೂಲಾ ಡ್ಯೆನಿಶ್‌ 2002ರಲ್ಲಿ ಹೀಗೆ ಬರೆದರು: “ಹೋಮಿನಿಡ್‌ ಪಳೆಯುಳಿಕೆಯನ್ನ ಯಾವ ವರ್ಗದಲ್ಲಿ ಮತ್ತು ಯಾವ ಕ್ರಮದಲ್ಲಿ ಇಡಬೇಕು ಅಂತ ಇನ್ನೂ ವಾದ-ವಿವಾದಗಳು ನಡಿತಾನೇ ಇವೆ.”g ಡ್ಯೂಲಾ ಮುಂದುವರಿಸಿ, ಇಲ್ಲಿ ತನಕ ನಮಗೆ ಸಿಕ್ಕಿದ ಪಳೆಯುಳಿಕೆಯಿಂದ ಮಂಗನಿಂದ ಮಾನವ ಎಲ್ಲಿ, ಹೇಗೆ ಮತ್ತು ಯಾವಾಗ ಬಂದ ಅನ್ನೋದಕ್ಕೆ ನಮ್ಮ ಹತ್ತಿರ ಯಾವುದೇ ಬಲವಾದ ಆಧಾರಗಳು ಇಲ್ಲ ಅಂತ ಹೇಳಿದ್ದಾರೆ.42

“ಕಳೆದುಹೋದ ಲಿಂಕ್‌ಗಳ” ಹುಡುಕಾಟ

ಸತ್ಯ: “ಕಳೆದುಹೋದ ಲಿಂಕ್‌” ಸಿಕ್ಕಿತು ಅಂತ ಆಗಾಗ ವರದಿಗಳಲ್ಲಿ ಬರುತ್ತಾ ಇರುತ್ತೆ. 2009ರಲ್ಲಿ ಒಂದು ಪಳೆಯುಳಿಕೆ ಸಿಕ್ಕಿತು. ಅದಕ್ಕೆ ಐಡಾ ಅಂತ ಹೆಸರಿಟ್ಟರು. ಇದರ ಬಗ್ಗೆ ವರದಿಗಳು ಎಷ್ಟು ದೊಡ್ಡ ರೀತಿಯಲ್ಲಿ ಎಲ್ಲಾ ಕಡೆ ಹಬ್ಬಿಸಿತೆಂದರೆ, ಒಂದು ಪತ್ರಿಕೆಯ ಇದನ್ನ “ಚಲನಚಿತ್ರದ ತಾರೆಯರ ಪ್ರಚಾರಕ್ಕೆ” ಹೋಲಿಸಿ ಮಾತಾಡಿತು.43 ಇದೇ ರೀತಿಯ ವರದಿ ಬ್ರಿಟನ್‌ನ ದಿ ಗಾರ್ಡಿಯನ್‌ ಅನ್ನೋ ವಾರ್ತಾ ಪತ್ರಿಕೆಯಲ್ಲೂ ಬಂತು. ಅದರ ಶೀರ್ಷಿಕೆ, “ಹುಡುಕಾಟದಲ್ಲಿ ಸಿಕ್ಕ ಅದ್ಭುತ ಲಿಂಕ್‌” ಎಂದಾಗಿತ್ತು.44 ಆದರೆ ಸ್ವಲ್ಪ ದಿನಗಳಲ್ಲೇ ಬ್ರಿಟನ್‌ನ ನ್ಯೂ ಸೈಂಟಿಸ್ಟ್‌ ಅನ್ನೋ ಪತ್ರಿಕೆಯಲ್ಲಿ “ಮನುಷ್ಯ ವಿಕಾಸವಾದದಲ್ಲಿ ಐಡಾ ‘ಕಳೆದುಹೋದ ಲಿಂಕ್‌’ ಅಲ್ಲವೇ ಅಲ್ಲ” ಅಂತ ತಿಳಿಸಿತ್ತು.45

ಪ್ರಶ್ನೆ: “ಕಳೆದುಹೋದ ಲಿಂಕ್‌” ವಿಜ್ಞಾನಿಗಳಿಗೆ ಸಿಕ್ಕಿದರೆ ಮೀಡಿಯಾದಲ್ಲಿ ಎಲ್ಲಾ ಕಡೆ ಹಬ್ಬಿಸುತ್ತಾರೆ. ಆದರೆ ಯಾವುದಾದರೂ ಪಳೆಯುಳಿಕೆಯನ್ನು “ಜೀವದ ಮರ”ದಿಂದ ತೆಗೆದುಬಿಟ್ಟರೆ ಅದರ ಬಗ್ಗೆ ಯಾರೂ ಮಾತಾಡಲ್ಲ. ಯಾಕೆ ಹೀಗೆ?

ಒಂದು ಪಳೆಯುಳಿಕೆ

ಉತ್ತರ: ಈ ರೀತಿ ಸಂಶೋಧನೆ ಮಾಡುವವರ ಬಗ್ಗೆ ರಾಬಿನ್‌ ಡೆರಿಕೋರ್ಟ್‌ ಹೀಗೆ ಹೇಳುತ್ತಾರೆ: “ಸಂಶೋಧನೆ ಮಾಡುವ ಗುಂಪಿನಲ್ಲಿರೋ ಮುಖ್ಯಸ್ಥನಿಗೆ ಅವರ ಆವಿಷ್ಕಾರದ ಬಗ್ಗೆ ತುಂಬ ಬಣ್ಣ ಹಚ್ಚಿ, ವರ್ಣಿಸಿ ಹೇಳಬೇಕಾಗುತ್ತೆ. ಯಾಕಂದರೆ ಬೇರೆ ಸಂಸ್ಥೆಯಿಂದ ಹಣ ಪಡಿಯೋಕೆ ಅವರು ಈ ತರ ಮಾಡುತ್ತಾರೆ. ಹೀಗೆ ಮಾಡಿದಕ್ಕೆ ನ್ಯೂಸ್‌ಪೇಪರ್‌ಗಳಲ್ಲಿ ಟಿವಿ ಚಾನೆಲ್‌ಗಳಲ್ಲಿ ಅವರನ್ನ ತುಂಬ ಹೊಗಳುತ್ತಾರೆ ಮತ್ತು ಇದೇ ತರ ಕಥೆಗಳನ್ನ ಇನ್ನೂ ಹುಡುಕಿ ಅಂತ ಅವರನ್ನ ಪ್ರೋತ್ಸಾಹಿಸುತ್ತಾರೆ.”46

ಪುಸ್ತಕಗಳಲ್ಲಿ ಮಂಗನಿಂದ ಮಾನವನ ಚಿತ್ರಗಳು

ಸತ್ಯ: ಮನುಷ್ಯ ಯಾವ ಪ್ರಾಣಿಯಿಂದ ಬಂದನು ಅಂತ ಹೇಳುತ್ತಾರೊ, ಆ ಪ್ರಾಣಿಗೆ ಒಂದು ರೀತಿಯ ಮುಖ ಲಕ್ಷಣ, ಬಣ್ಣ ಮತ್ತು ಕೂದಲುಗಳು ಇರೋ ತರ ಮಾಡಿ ಪುಸ್ತಕಗಳಲ್ಲಿ ಮತ್ತು ಸಂಗ್ರಹಾಲಯಗಳಲ್ಲಿ ತೋರಿಸುತ್ತಾರೆ. ಹೀಗೆ ಮನುಷ್ಯನ ವಿಕಾಸ ಅವರ “ಪೂರ್ವಜರಾದ” ಮಂಗಗಳಿಂದ ಆಗಿದೆ ಅಂತ ತೋರಿಸುತ್ತಾರೆ. ಆಮೇಲೆ ಅವರು ವಿಕಾಸ ಆದಂತೆ ಅವರ ಮುಖ ಲಕ್ಷಣಗಳು, ಬಣ್ಣ ಮತ್ತು ಕೂದಲು ಮನುಷ್ಯನ ತರ ಬದಲಾದವು ಅಂತ ತೋರಿಸುತ್ತಾರೆ.

ಪ್ರಶ್ನೆ: ಪಳೆಯುಳಿಕೆಯ ಆಧಾರದ ಮೇಲೆ ವಿಜ್ಞಾನಿಗಳು ಜೀವಿಗಳ ಬಣ್ಣ, ಮೈಕಟ್ಟು ಇದೇ ತರ ಇತ್ತು ಅಂತ ಹೇಳೋಕೆ ಆಗುತ್ತಾ?

ಉತ್ತರ: ಇಲ್ಲ. ಆಸ್ಟ್ರೇಲಿಯಾದ ಅಡಿಲೇಡ್‌ ವಿಶ್ವವಿದ್ಯಾಲಯದಲ್ಲಿ ದೇಹದ ರಚನೆಯ ವಿಭಾಗದಲ್ಲಿ ಕೆಲಸ ಮಾಡೋ ಮಾನವ ಶಾಸ್ತ್ರಜ್ಞರಾದ ಕಾರ್ಲ್‌ ಎನ್‌. ಸ್ಟೀಫನ್‌ 2003ರಲ್ಲಿ ಹೀಗೆ ಬರೆದರು: “ಮನುಷ್ಯರ ಆರಂಭದ ಪೂರ್ವಜರ ಮುಖಗಳನ್ನ ನಮೂನೆಯನ್ನು ಮಾಡೋಕೂ ಆಗಲ್ಲ ಅದನ್ನ ಪರೀಕ್ಷಿಸೋಕೂ ಆಗಲ್ಲ.” ಈಗಿನ ಮಂಗಗಳ ಆಧಾರದ ಮೇಲೆ ಆ ರೀತಿಯ ಪ್ರಯತ್ನಗಳನ್ನ ಮಾಡೋದು ‘ತಪ್ಪಾಗಿದೆ ಮತ್ತು ಅದರಿಂದ ಯಾವ ಉಪಯೋಗವು ಇಲ್ಲ.’ ಈ ರೀತಿ ಮಾಡೋದರಿಂದ ಯಾವುದು ಸತ್ಯವಾಗಿದೆಯೋ ಅದನ್ನ ರುಜುಪಡಿಸುವ ಬದಲು ತಾವು ಹೇಳಿದ್ದೇ ಸರಿ ಅಂತ ರುಜುಪಡಿಸುತ್ತಾ ಇದ್ದಾರೆ. ಸ್ಟೀಫನ್‌ ಯಾವ ತೀರ್ಮಾನಕ್ಕೆ ಬಂದರು? “ಹಳೇ ಹೋಮಿನಿಡ್‌ಗಳು ಎಷ್ಟೇ ಮುಖಗಳ ನಮೂನೆಯನ್ನ ಮಾಡಿದರೂ ಅವು ನಮ್ಮನ್ನ ದಾರಿ ತಪ್ಪಿಸುತ್ತಲೇ ಇವೆ.”47

ಮೆದುಳಿನ ಆಕಾರವನ್ನು ನೋಡಿ ಬುದ್ಧಿಯನ್ನು ಅಳಿಯೋದು

ಸತ್ಯ: ಯಾವ ಪ್ರಾಣಿಯನ್ನ ಮನುಷ್ಯನ ಪೂರ್ವಜ ಅಂತ ಕರೆಯುತ್ತಾರೋ ಆ ಪ್ರಾಣಿಯ ಮೆದುಳಿನ ಆಕಾರ ನೋಡಿ ಆ ಪ್ರಾಣಿ ಮನುಷ್ಯರಿಗೆ ಎಷ್ಟರ ಮಟ್ಟಿಗೆ ಹೋಲುತ್ತೆ ಅಂತ ವಿಜ್ಞಾನಿಗಳು ತೀರ್ಮಾನ ಮಾಡುತ್ತಾರೆ.

ಪ್ರಶ್ನೆ: ಯಾವ ಪ್ರಾಣಿಗೆ ಎಷ್ಟು ಬುದ್ಧಿ ಇದೆ ಅಂತ ಅದರ ಮೆದುಳಿನ ಆಕಾರ ನೋಡಿ ಹೇಳೋಕೆ ಆಗುತ್ತಾ?

ಮನುಷ್ಯನ ಮತ್ತು ಮಂಗನ ಬುರುಡೆ

ಉತ್ತರ: ಇಲ್ಲ. ಯಾವ ಪ್ರಾಣಿಗಳು ಅಳಿದು ಹೋಗಿವೆಯೋ ಅದರ ಮೆದುಳಿನ ಆಕಾರದಿಂದ ಯಾವ ಪ್ರಾಣಿ ಮನುಷ್ಯರಿಗೆ ಹೋಲುತ್ತೆ ಅಂತ ಕಂಡುಹಿಡಿಯೋಕೆ ಸಂಶೋಧಕರ ಒಂದು ಗುಂಪು ಪ್ರಯತ್ನಿಸಿದೆ. ಈ ರೀತಿ ಸಂಶೋಧನೆ ಮಾಡಿದಾಗ, “ಯಾವುದೇ ತೀರ್ಮಾನಕ್ಕೆ ಬರೋಕೆ ಆಗುತ್ತಿಲ್ಲ” ಅಂತ ಅವರು ಒಪ್ಪಿಕೊಂಡರು.48 ಯಾಕೆ? 2008ರ ಸೈಂಟಿಫಿಕ್‌ ಅಮೇರಿಕನ್‌ ಮೈಂಡ್‌ ಪುಸ್ತಕ ಇದರ ಬಗ್ಗೆ ಏನು ಹೇಳುತ್ತೆ ಅಂತ ಗಮನಿಸಿ: “ಮನುಷ್ಯ ಮತ್ತು ಪ್ರಾಣಿಗಳ ಮೆದುಳಿನ ಆಕಾರ ಮತ್ತು ಬುದ್ಧಿವಂತಿಕೆಯ ಮಧ್ಯೆ ಇರುವ ಸಂಬಂಧವನ್ನು ಕಂಡುಹಿಡಿಯೋಕೆ ವಿಜ್ಞಾನಿಗಳು ಸೋತುಹೋಗಿದ್ದಾರೆ. ಮೆದುಳಿನ ಕೆಲವು ಪ್ರಾಮುಖ್ಯ ಭಾಗಗಳ ಆಕಾರಕ್ಕೂ ಬುದ್ಧಿಗೂ ಏನು ಸಂಬಂಧ ಇದೆ ಎಂದೂ ಕಂಡುಹಿಡಿಯೋಕೆ ಆಗಿಲ್ಲ. ಅವರಿಗೆ ಮನುಷ್ಯರು ಮಾತಾಡೋ ಸಾಮರ್ಥ್ಯವನ್ನ ನಿರ್ಧರಿಸೋ ಭಾಗದ ಬಗ್ಗೆ ಮಾತ್ರ ಗೊತ್ತು. ಅದನ್ನ ಬ್ರೋಕಾಸ್‌ ಅಂತ ಕರಿತಾರೆ.”49

ನಿಮಗೇನನಿಸುತ್ತೆ? “ಮಂಗನಿಂದನೇ ಮಾನವ” ಅನ್ನೊ ವಿಷಯವನ್ನ ರುಜುಪಡಿಸೋಕೆ ವಿಜ್ಞಾನಿಗಳು ಮೆದುಳಿನ ಆಕಾರದ ಪ್ರಕಾರ ಪಳೆಯುಳಿಕೆಯನ್ನು ಯಾಕೆ ಇಡುತ್ತಾರೆ? ಮೆದುಳಿನ ಆಕಾರವನ್ನ ನೋಡಿ ಬುದ್ಧಿಯನ್ನು ಅಳಿಯೋಕೆ ಸಾಧ್ಯನೇ ಇಲ್ಲ ಅಂತ ಈಗಾಗಲೇ ಅವರಿಗೆ ಗೊತ್ತಿದೆ. ಯಾಕೆ ಅವರು ತಮ್ಮ ಸಿದ್ಧಾಂತನೇ ಸರಿ ಅಂತ ರುಜುಪಡಿಸೋಕೆ ಒತ್ತಾಯ ಮಾಡುತ್ತಿದ್ದಾರೆ? ಯಾವ ಪಳಿಯುಳಿಕೆಯನ್ನು ಮನುಷ್ಯರ ಪೂರ್ವಜ ಅಂತ ತೋರಿಸೋದು, ಯಾವುದನ್ನಲ್ಲ ಅಂತ ವಿಜ್ಞಾನಿಗಳು ಯಾಕೆ ಯಾವಾಗಲೂ ವಾದ-ವಿವಾದಗಳನ್ನ ಮಾಡುತ್ತಲೇ ಇರುತ್ತಾರೆ? ನೋಡೋಕೆ ಮಂಗನ ಹಾಗೇ ಇದೆ ಅಂದ ತಕ್ಷಣ ಅದು ಅಳಿದು ಹೋದ ಮಂಗನ ಪಳಿಯುಳಿಕೆನೇ ಅಂತ ಅವರು ಹೇಗೆ ಹೇಳೋಕೆ ಸಾಧ್ಯ?

ನಿಯಾಂಡರ್ತಲ್‌ ಅನ್ನೋ ಪಳೆಯುಳಿಕೆಗಳ ಬಗ್ಗೆ ಏನು ಹೇಳಬಹುದು? ಮನುಷ್ಯರು ಹೀಗೇ ಇದ್ದರು ಅಂತ ರುಜುಪಡಿಸೋಕೆ ಅವುಗಳನ್ನ ಉಪಯೋಗಿಸುತ್ತಿದ್ದರು. ಇದರಿಂದ ಮನುಷ್ಯರ ಹಾಗೆ ಕಾಣೋ ಮಂಗಗಳು ಇದ್ದವು ಅಂತನೂ ಹೇಳುತ್ತಿದ್ದರು. ಆದರೆ ಈಗ ಸಂಶೋಧಕರು ಈ ವಿಚಾರದ ಬಗ್ಗೆ ತಮ್ಮ ಯೋಚನೆಯನ್ನ ಬದಲಾಯಿಸಿಕೊಂಡಿದ್ದಾರೆ. 2009ರಲ್ಲಿ, ಮಿಲ್ಫೋರ್ಡ್‌ ಎಚ್‌. ವೋಲ್ಪಾಫ್‌ರವರು ಅಮೇರಿಕನ್‌ ಜರ್ನಲ್‌ ಆಫ್‌ ಫಿಸಿಕಲ್‌ ಆಂಥ್ರೋಪಾಲಜಿಯಲ್ಲಿ ಹೀಗೆ ಬರೆದರು: “ನಿಯಾಂಡರ್ತಲ್‌ ಮನುಷ್ಯರದೇ ಒಂದು ಜಾತಿ ಆಗಿರಬಹುದು.”50

ವಿಜ್ಞಾನಿಗಳು ಹಣಗಳಿಸೋಕೆ, ಹೆಸರು ಮಾಡೋಕೆ ಮನುಷ್ಯನ ವಿಕಾಸದ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನ ಹೇಳುತ್ತಾರೆ. ಆದರೆ ಯಾವುದೇ ಪಕ್ಷ ವಹಿಸದೆ ಪ್ರಾಮಾಣಿಕರಾಗಿರೋ ಜನರಿಗೆ “ನಿಜ ಏನಂತ” ಗೊತ್ತಾಗಿ ಬಿಡುತ್ತೆ. ಇಂಥ ಆಧಾರಗಳನ್ನ ನಂಬೋಕೆ ನೀವು ತಯಾರಿದ್ದೀರ?

f ಟಿಪ್ಪಣಿ: ಈ ಚೌಕದಲ್ಲಿರೋ ಸಂಶೋಧಕರು ಬೈಬಲಲ್ಲಿರೋ ಸೃಷ್ಟಿಯನ್ನ ನಂಬಲ್ಲ ಬದಲಿಗೆ, ವಿಕಾಸವಾದವನ್ನ ನಂಬುತ್ತಾರೆ.

g ವಿಕಾಸವಾದದ ಸಂಶೋಧಕರು ಮನುಷ್ಯ ಮತ್ತು ಹಿಂದಿನ ಕಾಲದಲ್ಲಿ ಮನುಷ್ಯರ ತರ ಕಾಣುವಂಥ ಪ್ರಭೇದಗಳನ್ನ (ಸ್ಪೀಶೀಸ್‌) “ಹೋಮಿನಿಡ್‌” ಅಂತ ಕರಿತಾರೆ.

ಈ ಚಿತ್ರದಲ್ಲಿ ಯಾವ ತಪ್ಪಿದೆ?

ವಿಕಾಸವಾದದ ಪ್ರಕಾರ ಮಂಗನಿಂದ ಮಾನವ ಬಂದ
  • ಈ ರೀತಿಯ ಚಿತ್ರಗಳು ಚಿತ್ರಕಾರರ, ಸಂಶೋಧಕರ ಅಂದಾಜು ಅಥವಾ ಅವರ ಯೋಚನೆ ಪ್ರಕಾರ ಇರುತ್ತೆ ಹೊರತು ಯಾವುದು ನಿಜವಾಗಿದೆಯೋ ಅದರ ಪ್ರಕಾರ ಅಲ್ಲ.51

  • ಪಳೆಯುಳಿಕೆಯಾಗಿರುವ ಹಲ್ಲು

    ಇಂಥ ಹೆಚ್ಚಿನ ಚಿತ್ರಗಳನ್ನ ತಲೆಬುರುಡೆಯ ಕೆಲವು ಭಾಗಗಳು ಮತ್ತು ಹಲ್ಲಿನ ಅವಶೇಷಗಳ ಆಧಾರದ ಮೇಲೆ ಮಾಡಿರುತ್ತಾರೆ. ಆದರೆ ಇಲ್ಲಿ ವರಗೆ ಪೂರ್ತಿ ತಲೆಬುರುಡೆ ಆಗಲಿ, ಅಸ್ಥಿಪಂಜರ ಆಗಲಿ ಸಿಕ್ಕಿಲ್ಲ.

  • ಸಂಶೋಧಕರ ಮಧ್ಯದಲ್ಲಿ ಯಾವ ಪಳೆಯುಳಿಕೆಯನ್ನ ಯಾವ ವರ್ಗದಲ್ಲಿ ಇಡಬೇಕು ಅಂತ ವಾದ-ವಿವಾದಗಳು ನಡಿತಾನೇ ಇರುತ್ತೆ.

  • ಅಳಿದು ಹೋಗಿರುವ ಒಂದು ಜೀವಿಯ ಮುಖ, ಚರ್ಮದ ಬಣ್ಣ ಮತ್ತು ಕೂದಲನ್ನು ತೋರಿಸಿರುವ ಒಬ್ಬ ಕಲಾವಿದನ ಕೈಕೆಲಸ

    ಅಳಿದುಹೋದ ಪ್ರಾಣಿಗಳ ಮುಖ, ಮೈಕಟ್ಟು, ಬಣ್ಣ, ಕೂದಲು ಹೀಗೇ ಇತ್ತು ಅಂತ ಚಿತ್ರಕಾರರಿಗೆ ಬಿಡಿಸೋಕೆ ಆಗಲ್ಲ.

  • ಪ್ರತಿ ಪ್ರಾಣಿಯ ಮೆದುಳಿನ ಆಕಾರದ ಪ್ರಕಾರ ಕ್ರಮವಾಗಿ ಜೋಡಿಸಿಟ್ಟು ಮನುಷ್ಯ ಇದೇ ತರ ವಿಕಾಸ ಆದ ಅಂತ ಹೇಳುತ್ತಾರೆ. ಆದರೆ ಪ್ರಾಣಿಯ ಮೆದುಳಿನ ಆಕಾರವನ್ನು ನೋಡಿ ಯಾವ ಪ್ರಾಣಿಗೆ ಎಷ್ಟು ಬುದ್ಧಿ ಇದೆ ಅಂತ ಹೇಳೋಕೆ ಆಗಲ್ಲ ಅಂತ ಈಗಾಗಲೇ ರುಜುವಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ