ಪಾಠ 8
ಯೋಷೀಯನಿಗೆ ಒಳ್ಳೇ ಗೆಳೆಯರಿದ್ದರು
ಸರಿಯಾದ ಕೆಲಸ ಮಾಡುವುದು ಕಷ್ಟ ಅಂತ ನಿನಗೆ ಅನಿಸುತ್ತದಾ?— ತುಂಬ ಜನರಿಗೆ ಕಷ್ಟ ಅನಿಸುತ್ತದೆ. ಯೋಷೀಯ ಎಂಬ ಹುಡುಗನಿಗಂತೂ ಇದು ತುಂಬಾನೇ ಕಷ್ಟವಾಗಿತ್ತು ಅಂತ ಬೈಬಲ್ ಹೇಳುತ್ತದೆ. ಆದರೆ ಅವನಿಗೆ ಸಹಾಯ ಮಾಡಲು ಒಳ್ಳೇ ಗೆಳೆಯರಿದ್ದರು. ಯೋಷೀಯ ಮತ್ತು ಅವನ ಗೆಳೆಯರ ಬಗ್ಗೆ ತಿಳಿಯೋಣ.
ಯೋಷೀಯನ ಅಪ್ಪನ ಹೆಸರು ಆಮೋನ. ಆಮೋನ ಯೆಹೂದದ ರಾಜನಾಗಿದ್ದ. ತುಂಬ ಕೆಟ್ಟವನು. ವಿಗ್ರಹಗಳ ಆರಾಧನೆ ಕೂಡ ಮಾಡುತ್ತಿದ್ದ. ಅವನು ಸತ್ತ ಮೇಲೆ ಅವನ ಮಗ ಯೋಷೀಯ ರಾಜನಾದ. ಆಗ ಯೋಷೀಯನಿಗೆ ಎಂಟು ವರ್ಷ ಅಷ್ಟೆ! ಯೋಷೀಯ ಸಹ ಅವನ ಅಪ್ಪನ ಹಾಗೆ ಕೆಟ್ಟವನಾಗಿದ್ದನಾ?— ಇಲ್ಲ!
ವಿಗ್ರಹಗಳನ್ನು ಆರಾಧಿಸಬೇಡಿ ಅಂತ ಚೆಫನ್ಯ ಜನರಿಗೆ ಹೇಳುತ್ತಿದ್ದ
ಯೆಹೋವನು ಹೇಳಿದಂತೆ ಮಾಡುವ ಆಸೆ ಯೋಷೀಯನಿಗೆ ಚಿಕ್ಕ ಪ್ರಾಯದಿಂದಲೇ ಇತ್ತು. ಆದ್ದರಿಂದ ಯೆಹೋವನನ್ನು ಪ್ರೀತಿಸುವವರನ್ನು ಮಾತ್ರ ಗೆಳೆಯರನ್ನಾಗಿ ಮಾಡಿಕೊಂಡ. ಇವರು ಯೋಷೀಯನಿಗೆ ಸರಿಯಾದ ಕೆಲಸ ಮಾಡಲು ಸಹಾಯ ಮಾಡಿದರು. ಇವರಲ್ಲಿ ಇಬ್ಬರ ಬಗ್ಗೆ ನೋಡೋಣ.
ಒಬ್ಬ ಗೆಳೆಯನ ಹೆಸರು ಚೆಫನ್ಯ. ಅವನು ಪ್ರವಾದಿ. ವಿಗ್ರಹಗಳನ್ನು ಆರಾಧನೆ ಮಾಡಬಾರದು, ಮಾಡಿದರೆ ಶಿಕ್ಷೆ ಸಿಗುತ್ತದೆ ಅಂತ ಯೆಹೂದದ ಜನರಿಗೆ ಹೇಳುತ್ತಿದ್ದ. ಯೋಷೀಯ ಚೆಫನ್ಯ ಹೇಳಿದಂತೆ ಯೆಹೋವನನ್ನೇ ಆರಾಧಿಸಿದ, ವಿಗ್ರಹಗಳನ್ನು ಆರಾಧಿಸಲಿಲ್ಲ.
ಇನ್ನೊಬ್ಬ ಗೆಳೆಯನ ಹೆಸರು ಯೆರೆಮೀಯ. ಇವನು ಮತ್ತು ಯೋಷೀಯ ಹೆಚ್ಚುಕಡಿಮೆ ಒಂದೇ ವಯಸ್ಸಿನವರು. ಇವರಿಬ್ಬರ ಊರು ಪಕ್ಕಪಕ್ಕದಲ್ಲಿತ್ತು. ಇವರು ಎಷ್ಟು ಒಳ್ಳೇ ಗೆಳೆಯರು ಆಗಿದ್ದರೆಂದರೆ ಯೋಷೀಯ ಸತ್ತಾಗ ಯೆರೆಮೀಯ ದುಃಖದಿಂದ ಒಂದು ಹಾಡು ಬರೆದ. ಯೋಷೀಯ ಎಷ್ಟು ನೆನಪಾಗುತ್ತಾನೆ ಎಂದು ಅದರಲ್ಲಿ ಬರೆದ. ಸರಿಯಾದ ಕೆಲಸಗಳನ್ನು ಮಾಡಲು ಮತ್ತು ಯೆಹೋವನು ಹೇಳಿದಂತೆ ಮಾಡಲು ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು.
ಸರಿಯಾದ ಕೆಲಸಗಳನ್ನೇ ಮಾಡಲು ಯೋಷೀಯ ಮತ್ತು ಯೆರೆಮೀಯ ಒಬ್ಬರಿಗೊಬ್ಬರು ಸಹಾಯಮಾಡಿದರು
ಯೋಷೀಯನ ಹಾಗೇ ನೀನೇನು ಮಾಡಬೇಕು?— ಚಿಕ್ಕ ಪ್ರಾಯದಲ್ಲೇ ಯೋಷೀಯನಿಗೆ ಸರಿಯಾದ ಕೆಲಸಗಳನ್ನು ಮಾಡುವ ಆಸೆ ಇತ್ತು. ಯಾರು ಯೆಹೋವನನ್ನು ಪ್ರೀತಿಸುತ್ತಾರೊ ಅವರನ್ನೇ ಗೆಳೆಯರನ್ನಾಗಿ ಮಾಡಿಕೊಳ್ಳಬೇಕೆಂದು ಅವನಿಗೆ ಗೊತ್ತಿತ್ತು. ನೀನು ಸಹ ಯೆಹೋವನನ್ನು ಪ್ರೀತಿಸುವವರನ್ನೇ ಗೆಳೆಯರನ್ನಾಗಿ ಮಾಡಿಕೊಳ್ಳಬೇಕು. ಅವರು ನಿನಗೆ ಸರಿಯಾದ ಕೆಲಸಗಳನ್ನು ಮಾಡಲು ಸಹಾಯ ಮಾಡುವವರಾಗಿರಬೇಕು. ಅಂಥವರನ್ನು ಗೆಳೆಯರನ್ನಾಗಿ ಮಾಡಿಕೊ!