ಪಾಠ 56
ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ
ಯೋಷೀಯ ಯೆಹೂದದ ರಾಜನಾದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಆ ದಿನಗಳಲ್ಲಿ ಜನರು ಮಾಟಮಂತ್ರ ಮಾಡುತ್ತಿದ್ದರು ಹಾಗೂ ಮೂರ್ತಿಗಳನ್ನ ಪೂಜಿಸುತ್ತಿದ್ದರು. ಯೋಷೀಯ ತನ್ನ 16ನೇ ವಯಸ್ಸಿನಲ್ಲಿ ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧಿಸುವುದು ಹೇಗೆಂದು ತಿಳಿಯಲು ಪ್ರಯತ್ನಿಸಿದ. 20ನೇ ವಯಸ್ಸಿನಲ್ಲಿ ಇಡೀ ದೇಶದಲ್ಲಿದ್ದ ಮೂರ್ತಿಗಳನ್ನ ಹಾಗೂ ಯಜ್ಞವೇದಿಗಳನ್ನು ನಾಶಮಾಡಲು ಶುರುಮಾಡಿದ. 26ನೇ ವಯಸ್ಸಿನಲ್ಲಿ ಹಾಳಾಗಿದ್ದ ಯೆಹೋವನ ಆಲಯವನ್ನು ಸರಿಪಡಿಸಿದ.
ಮಹಾ ಪುರೋಹಿತ ಹಿಲ್ಕೀಯನಿಗೆ ದೇವಾಲಯದಲ್ಲಿ ನಿಯಮ ಪುಸ್ತಕದ ಸುರುಳಿಯೊಂದು ಸಿಕ್ಕಿತು. ಅದನ್ನು ಮೋಶೆ ತನ್ನ ಕೈಯಾರೆ ಬರೆದಿರಬಹುದು. ರಾಜನ ಕಾರ್ಯದರ್ಶಿಯಾದ ಶಾಫಾನ ಅದನ್ನು ಯೋಷೀಯನ ಹತ್ತಿರ ತೆಗೆದುಕೊಂಡು ಬಂದು ಜೋರಾಗಿ ಓದಲು ಶುರುಮಾಡಿದ. ಯೋಷೀಯ ಅದನ್ನು ಕೇಳಿಸಿಕೊಂಡಾಗ ಜನರು ತುಂಬ ವರ್ಷಗಳಿಂದ ಯೆಹೋವನಿಗೆ ಅವಿಧೇಯರಾಗುತ್ತಾ ಬಂದಿದ್ದಾರೆ ಎಂದು ಗೊತ್ತಾಯಿತು. ಆಗ ಅವನು ಹಿಲ್ಕೀಯನಿಗೆ ‘ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂದಿದೆ. ಹೋಗಿ ಆತನ ಹತ್ತಿರ ಮಾತಾಡು. ಆಗ ಆತನು ನಾವೇನು ಮಾಡಬೇಕು ಎಂದು ಹೇಳುತ್ತಾನೆ’ ಅಂದ. ಯೆಹೋವನು ಪ್ರವಾದಿನಿಯಾದ ಹುಲ್ದಳ ಮೂಲಕ ಹೀಗಂದನು: ‘ಯೆಹೂದದ ಜನರು ನನ್ನನ್ನು ಬಿಟ್ಟುಬಿಟ್ಟಿದ್ದಾರೆ. ನಾನು ಅವರನ್ನು ಶಿಕ್ಷಿಸುತ್ತೇನೆ. ಆದರೆ ಯೋಷೀಯನು ತಗ್ಗಿಸಿಕೊಂಡ. ಹಾಗಾಗಿ ಅವನು ರಾಜನಾಗಿ ಇರುವವರೆಗೂ ಜನರನ್ನು ಶಿಕ್ಷಿಸುವುದಿಲ್ಲ.’
ಯೆಹೋವನ ಮಾತು ಯೋಷೀಯನಿಗೆ ಗೊತ್ತಾದಾಗ ಅವನು ದೇವಾಲಯಕ್ಕೆ ಹೋಗಿ ಯೆಹೂದದ ಜನರನ್ನು ಅಲ್ಲಿ ಒಟ್ಟುಸೇರಿಸಿದ. ನಂತರ ಯೆಹೋವನ ನಿಯಮ ಪುಸ್ತಕವನ್ನ ಇಡೀ ಜನಾಂಗದ ಮುಂದೆ ಜೋರಾಗಿ ಓದಿದ. ಯೋಷೀಯ ಮತ್ತು ಜನರು ಇನ್ನು ಮುಂದೆ ಯೆಹೋವನಿಗೆ ಪೂರ್ಣ ಹೃದಯದಿಂದ ವಿಧೇಯರಾಗುತ್ತೇವೆ ಎಂದು ಮಾತುಕೊಟ್ಟರು.
ಯೆಹೂದ ಜನಾಂಗದವರು ಪಸ್ಕ ಹಬ್ಬವನ್ನು ಆಚರಿಸಿ ಅನೇಕ ವರ್ಷಗಳೇ ಕಳೆದಿದ್ದವು. ಆದರೆ ಯೋಷೀಯ ಸುರುಳಿಯನ್ನು ಓದಿದಾಗ ಪಸ್ಕವನ್ನು ಪ್ರತಿವರ್ಷ ಆಚರಿಸಬೇಕು ಎಂದು ತಿಳಿಯಿತು. ಹಾಗಾಗಿ ಅವನು ಜನರಿಗೆ ‘ನಾವು ಯೆಹೋವನಿಗೋಸ್ಕರ ಪಸ್ಕ ಹಬ್ಬವನ್ನು ಆಚರಿಸೋಣ’ ಎಂದ. ನಂತರ ಯೋಷೀಯ ಅನೇಕ ಬಲಿಗಳನ್ನು ಸಿದ್ಧಮಾಡಿ ದೇವಾಲಯದಲ್ಲಿ ಸ್ತುತಿಯನ್ನು ಹಾಡಲು ಹಾಡುಗಾರರನ್ನು ನೇಮಿಸಿದ. ಇಡೀ ಜನಾಂಗ ಪಸ್ಕ ಹಬ್ಬವನ್ನು ಮತ್ತು ಅದರ ನಂತರ ಬರುವ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿನ ಆಚರಿಸಿತು. ಸಮುವೇಲನ ಕಾಲದಿಂದ ಅಂಥ ಪಸ್ಕ ಹಬ್ಬ ನಡೆದಿರಲಿಲ್ಲ. ಯೋಷೀಯ ನಿಯಮ ಪುಸ್ತಕವನ್ನ ಹೃದಯದಿಂದ ಪ್ರೀತಿಸಿದ. ಅವನಂತೆ ನಿಮಗೂ ಯೆಹೋವನ ಬಗ್ಗೆ ಕಲಿಯಲು ಇಷ್ಟ ಇದೆಯಾ?
“ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.”—ಕೀರ್ತನೆ 119:105