ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 4/1 ಪು. 22-23
  • ಸರಿಯಾದದ್ದನ್ನೇ ಗೈದ ಯೋಷೀಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಿಯಾದದ್ದನ್ನೇ ಗೈದ ಯೋಷೀಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಅನುರೂಪ ಮಾಹಿತಿ
  • ಯೋಷೀಯನಿಗೆ ಒಳ್ಳೇ ಗೆಳೆಯರಿದ್ದರು
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ದೀನನಾದ ಯೋಷೀಯನು ಯೆಹೋವನ ಅನುಗ್ರಹವನ್ನು ಹೊಂದಿದ್ದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಬಾಲ್ಯ ಹೇಗಿದ್ದರೂ ನೀವು ಯಶಸ್ವಿಯಾಗಬಹುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 4/1 ಪು. 22-23

ನಿಮ್ಮ ಮಕ್ಕಳಿಗೆ ಕಲಿಸಿರಿ

ಸರಿಯಾದದ್ದನ್ನೇ ಗೈದ ಯೋಷೀಯ

ಸರಿಯಾದದ್ದನ್ನು ಮಾಡುವುದು ನಿಮಗೆ ಕಷ್ಟವೆಂದು ಕಾಣುತ್ತದೋ?a​—⁠ ಹೌದೆಂದಾದರೆ ಹಾಗೆ ಹೇಳುವವರು ನೀವೊಬ್ಬರೇ ಅಲ್ಲ, ಎಷ್ಟೋ ಜನರಿದ್ದಾರೆ. ತಮಗೆ ಸರಿ ಎಂದು ಗೊತ್ತಿರುವುದನ್ನು ಮಾಡುವುದು ಪ್ರಾಪ್ತವಯಸ್ಕರಿಗೂ ಕಷ್ಟಕರ. ಸರಿಯಾದ ಆಯ್ಕೆಗಳನ್ನು ಮಾಡಲು ಯೋಷೀಯನಿಗೆ ವಿಶೇಷವಾಗಿ ಕಷ್ಟವಾದದ್ದೇಕೆ ಎಂದು ನಾವು ನೋಡೋಣ. ಯೋಷೀಯನು ಯಾರೆಂದು ನಿಮಗೆ ಗೊತ್ತೋ?​—⁠

ಯೋಷೀಯನು ಯೆಹೂದದ ಅರಸನಾದ ಆಮೋನನ ಮಗನು. ಯೋಷೀಯನು ಹುಟ್ಟುವಾಗ ಆಮೋನನಿಗೆ ಕೇವಲ 16 ವರ್ಷ ಪ್ರಾಯ. ಆಮೋನನು ತುಂಬಾ ಕೆಟ್ಟವನು. ಅವನ ತಂದೆ ಮನಸ್ಸೆ ರಾಜನು ಅಷ್ಟೇ ಕೆಟ್ಟವನಾಗಿದ್ದನು. ವಾಸ್ತವದಲ್ಲಿ ಅವನು ಅನೇಕ ವರ್ಷಗಳ ವರೆಗೆ ಅತಿ ದುಷ್ಟ ರಾಜನಾಗಿದ್ದನು. ಒಮ್ಮೆ ಅಶ್ಶೂರ್ಯರು ಅವನನ್ನು ಸೆರೆಹಿಡಿದು ದೂರದ ಬ್ಯಾಬಿಲೋನ್‌ ದೇಶಕ್ಕೆ ಬಂದಿಯಾಗಿ ಒಯ್ದರು. ಸೆರೆಯಲ್ಲಿದ್ದಾಗ ಮನಸ್ಸೆ ಯೆಹೋವ ದೇವರ ಬಳಿ ತನ್ನನ್ನು ಕ್ಷಮಿಸುವಂತೆ ಬಹಳವಾಗಿ ಮೊರೆಯಿಟ್ಟನು. ಆಗ ಯೆಹೋವನು ಅವನನ್ನು ಕ್ಷಮಿಸಿದನು.

ಮನಸ್ಸೆ ಸೆರೆಮನೆಯಿಂದ ಬಿಡುಗಡೆ ಹೊಂದಿದಾಗ ಅವನು ಯೆರೂಸಲೇಮಿಗೆ ಹಿಂದಿರುಗಿ ರಾಜನಾಗಿ ಪುನಃ ಆಳತೊಡಗಿದನು. ಆ ಕೂಡಲೆ ಅವನು ತಾನು ಮಾಡಿದ ಎಲ್ಲಾ ದುಷ್ಕೃತ್ಯಗಳನ್ನು ಸರಿಪಡಿಸಿ, ಜನರು ಯೆಹೋವನನ್ನು ಆರಾಧಿಸುವಂತೆ ಸಹಾಯಮಾಡಿದನು. ತಾನಿಟ್ಟ ಈ ಒಳ್ಳೇ ಮಾದರಿಯನ್ನು ತನ್ನ ಮಗನಾದ ಆಮೋನನು ಅನುಸರಿಸದಿದ್ದಾಗ ಅವನು ತುಂಬಾ ನೊಂದುಕೊಂಡಿದ್ದಿರಬೇಕು. ಸುಮಾರು ಈ ಸಮಯದಲ್ಲೇ ಯೋಷೀಯನ ಜನನವಾಯಿತು. ಮನಸ್ಸೆಗೆ ತನ್ನ ಮೊಮ್ಮಗನಾದ ಯೋಷೀಯನೊಂದಿಗೆ ಎಷ್ಟು ಸಂಪರ್ಕವಿತ್ತೆಂಬದನ್ನು ಬೈಬಲ್‌ ತಿಳಿಸುವುದಿಲ್ಲ. ಆದರೆ ಯೆಹೋವನನ್ನು ಆರಾಧಿಸುವಂತೆ ಯೋಷೀಯನಿಗೆ ಮನಸ್ಸೆ ಸಹಾಯಮಾಡ ಪ್ರಯತ್ನಿಸಿದ್ದಿರಬಹುದೆಂದು ನೀವು ನೆನಸುತ್ತೀರೋ?​—⁠

ಯೋಷೀಯನು ಕೇವಲ ಆರು ವರ್ಷದವನಾಗಿದ್ದಾಗ ಮನಸ್ಸೆ ಸತ್ತನು. ಆಗ ಯೋಷೀಯನ ತಂದೆಯಾದ ಆಮೋನನು ಅರಸನಾದನು. ಆಮೋನನು ಕೇವಲ ಎರಡು ವರ್ಷ ಆಳಿದ ಬಳಿಕ ಅವನ ಸ್ವಂತ ಸೇವಕರು ಅವನನ್ನು ಕೊಂದುಹಾಕಿದರು. ಆದುದರಿಂದ ಯೋಷೀಯನು ಎಂಟು ವರ್ಷದವನಾಗಿದ್ದಾಗಲೇ ಯೆಹೂದದ ಅರಸನಾದನು. (2 ಪೂರ್ವಕಾಲವೃತ್ತಾಂತ, ಅಧ್ಯಾಯ 33) ಆಗ ಏನು ಸಂಭವಿಸಿತ್ತೆಂದು ನೀವು ನೆನಸುತ್ತೀರಿ? ಯೋಷೀಯನು ತನ್ನ ತಂದೆ ಆಮೋನನ ಕೆಟ್ಟಮಾದರಿಯನ್ನು ಅನುಸರಿಸಿದನೋ ಅಥವಾ ಪಶ್ಚಾತ್ತಾಪಪಟ್ಟ ತನ್ನ ಅಜ್ಜ ಮನಸ್ಸೆಯ ಒಳ್ಳೇ ಮಾದರಿಯನ್ನು ಅನುಸರಿಸಿದನೋ?​—⁠

ಯೋಷೀಯನು ಅತಿ ಚಿಕ್ಕ ಪ್ರಾಯದವನಾಗಿದ್ದರೂ ಯೆಹೋವನನ್ನೇ ಆರಾಧಿಸಲು ದೃಢಸಂಕಲ್ಪಮಾಡಿದ್ದನು. ಆದುದರಿಂದ ತನ್ನ ತಂದೆಯ ಮಿತ್ರರಿಗೆ ಕಿವಿಗೊಡುವ ಬದಲು ಯೆಹೋವನನ್ನು ಪ್ರೀತಿಸಿದವರು ಹೇಳಿದಂತೆ ಅವನು ಮಾಡಿದನು. ಯೋಷೀಯನು ಕೇವಲ ಎಂಟು ವರ್ಷದವನಾಗಿದ್ದರೂ ದೇವರನ್ನು ಪ್ರೀತಿಸುವ ಜನರಿಗೆ ಕಿವಿಗೊಡುವುದು ಸರಿ ಎಂದು ಅವನಿಗೆ ತಿಳಿದಿತ್ತು. (2 ಪೂರ್ವಕಾಲವೃತ್ತಾಂತ 34:​1, 2) ಯೋಷೀಯನಿಗೆ ಸಲಹೆನೀಡಿದವರ ಮತ್ತು ಅವನಿಗೆ ಆದರ್ಶ ವ್ಯಕ್ತಿಗಳಾಗಿದ್ದವರ ಕುರಿತು ತಿಳಿಯಲು ನಿಮಗೆ ಇಷ್ಟವಿದೆಯೋ?​—⁠

ಯೋಷೀಯನಿಗೆ ಒಳ್ಳೇ ಮಾದರಿಯನ್ನಿಟ್ಟವರಲ್ಲಿ ಪ್ರವಾದಿ ಚೆಫನ್ಯನು ಒಬ್ಬನು. ಅವನು ಯೋಷೀಯನ ಸಂಬಂಧಿಕನು. ಪ್ರಾಯಶಃ ಮನಸ್ಸೆಯ ತಂದೆಯೂ ಒಳ್ಳೇ ರಾಜನೂ ಆದ ಹಿಜ್ಕೀಯನ ವಂಶಸ್ಥ. ಯೋಷೀಯನು ರಾಜನಾಗಿ ಆಳಲಾರಂಭಿಸಿದಾಗ ಚೆಫನ್ಯನು ತನ್ನ ಹೆಸರಿನ ಬೈಬಲ್‌ ಪುಸ್ತಕವನ್ನು ಬರೆದನು. ಯಾವುದು ಸರಿಯೋ ಅದನ್ನು ಮಾಡದಿದ್ದವರಿಗೆ ಆಗುವ ಗತಿ ಏನೆಂದು ಚೆಫನ್ಯನು ಎಚ್ಚರಿಸಿದನು. ಯೋಷೀಯನು ಈ ಎಚ್ಚರಿಕೆಗಳಿಗೆ ನಿಕಟ ಗಮನಕೊಟ್ಟಿರಬೇಕೆಂಬದು ಸ್ಪಷ್ಟ.

ಆ ಸಮಯದಲ್ಲಿ ಯೆರೆಮೀಯ ಎಂಬ ಪ್ರವಾದಿ ಸಹ ಇದ್ದನು. ಈ ಮುಂಚೆ ನೀವು ಅವನ ಕುರಿತು ಕೇಳಿದ್ದಿರಬಹುದು. ಯೆರೆಮೀಯ ಮತ್ತು ಯೋಷೀಯ ಇಬ್ಬರೂ ಯೌವನಸ್ಥರಾಗಿದ್ದರು. ನೆರೆಹೊರೆಯಲ್ಲಿ ಜೀವಿಸುತ್ತಿದ್ದರು. ಯೆರೆಮೀಯ ಎಂಬ ಬೈಬಲ್‌ ಪುಸ್ತಕವನ್ನು ಬರೆಯಲು ಯೆರೆಮೀಯನನ್ನು ಪ್ರೇರಿಸಿದವನು ಯೆಹೋವನೇ. ಯೋಷೀಯನು ಯುದ್ಧದಲ್ಲಿ ಮಡಿದಾಗ ತನಗಾದ ಅತಿದುಃಖವನ್ನು ವ್ಯಕ್ತಪಡಿಸಲು ಯೆರೆಮೀಯನು ಒಂದು ಶೋಕಗೀತೆಯನ್ನು ಬರೆದನು. (2 ಪೂರ್ವಕಾಲವೃತ್ತಾಂತ 35:25) ಅವರು ಯೆಹೋವನಿಗೆ ನಂಬಿಗಸ್ತರಾಗಿರಲು ಒಬ್ಬರನ್ನೊಬ್ಬರು ಎಷ್ಟು ಉತ್ತೇಜಿಸಿದ್ದಿರಬೇಕು ಎಂದು ನಾವು ಊಹಿಸಸಾಧ್ಯವಿದೆ!

ಯೋಷೀಯನ ಕುರಿತು ಅಧ್ಯಯನ ಮಾಡುವುದರಿಂದ ನೀವೇನನ್ನು ಕಲಿಯುತ್ತೀರಿ?​—⁠ ಅವನಿಗಿದ್ದಂತೆ ಯೆಹೋವನನ್ನು ಆರಾಧಿಸದ ತಂದೆ ನಿಮಗಿರುವಲ್ಲಿ, ದೇವರ ಕುರಿತಾಗಿ ಕಲಿಯಲು ನಿಮಗೆ ನೆರವಾಗಬಲ್ಲ ಬೇರೆ ಯಾರಾದರೂ ಇದ್ದಾರೋ? ಅವರು ಒಂದುವೇಳೆ ನಿಮ್ಮ ತಾಯಿ, ಅಜ್ಜ-ಅಜ್ಜಿ ಅಥವಾ ಇತರ ಸಂಬಂಧಿಕರಾಗಿರಬಹುದು. ಅಥವಾ ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡುವಂತೆ ನಿಮ್ಮ ತಾಯಿ ಅನುಮತಿಸಬಹುದಾದ ಯೆಹೋವನ ಸೇವಕರಲ್ಲಿ ಒಬ್ಬರಾಗಿರಬಹುದು.

ವಿಷಯವೇನೇ ಇರಲಿ, ಯೋಷೀಯನು ಪ್ರಾಯದಲ್ಲಿ ಚಿಕ್ಕವನಾಗಿದ್ದರೂ ಯೆಹೋವನ ಆರಾಧಕರೊಂದಿಗೆ ಮಿತ್ರತ್ವವನ್ನು ಮಾಡಬೇಕೆಂದು ಅರಿತುಕೊಳ್ಳಲು ಸಾಕಷ್ಟು ಪ್ರೌಢನಾಗಿದ್ದನು. ನೀವು ಕೂಡ ಅದೇ ರೀತಿ ಯಾವುದು ಸರಿಯೋ ಅದನ್ನೇ ಆಯ್ಕೆಮಾಡುವಂತಾಗಲಿ! (w09 2/1)

[ಪಾದಟಿಪ್ಪಣಿ]

a ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ‘​—⁠’ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಏನಾದರೂ ಹೇಳುವಂತೆ ಉತ್ತೇಜಿಸಲು ಈ ಗುರುತನ್ನು ಕೊಡಲಾಗಿದೆ.

ಪ್ರಶ್ನೆಗಳು:

❍ ಯೋಷೀಯನ ತಂದೆ ಮತ್ತು ಅಜ್ಜ ಯಾರಾಗಿದ್ದರು? ಅವರು ಯಾವ ರೀತಿಯ ಪುರುಷರು?

❍ ಯೋಷೀಯನ ಅಜ್ಜನು ತನ್ನ ಜೀವಿತದಲ್ಲಿ ಯಾವ ಬದಲಾವಣೆಯನ್ನು ಮಾಡಿದ್ದನು?

❍ ಯೋಷೀಯನ ಮೇಲೆ ಒಳ್ಳೇ ಪ್ರಭಾವವನ್ನು ಬೀರಿರಬಹುದಾದ ಇಬ್ಬರು ಪ್ರವಾದಿಗಳ ಹೆಸರೇನು? ಅವರಂಥ ಮಿತ್ರರಿರುವುದು ಏಕೆ ಪ್ರಾಮುಖ್ಯ?

[ಪುಟ 23ರಲ್ಲಿರುವ ಚಿತ್ರಗಳು]

ಯೋಷೀಯನು ಸರಿಯಾದದ್ದನ್ನೇ ಮಾಡಲು ಚೆಫನ್ಯ ಮತ್ತು ಯೆರೆಮೀಯರು ಹೇಗೆ ಸಹಾಯಮಾಡಿರಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ