ಭಾಗ 9—ಪರಿಚಯ
ಈ ಭಾಗದಲ್ಲಿ ಚಿಕ್ಕವರು, ಪ್ರವಾದಿಗಳು ಮತ್ತು ರಾಜರು ಯೆಹೋವನಿಗೆ ತೋರಿಸಿದ ಅಸಾಧಾರಣ ನಂಬಿಕೆಯ ಬಗ್ಗೆ ನಾವು ಕಲಿಯುತ್ತೇವೆ. ಸಿರಿಯದಲ್ಲಿದ್ದ ಇಸ್ರಾಯೇಲ್‌ನ ಚಿಕ್ಕ ಹುಡುಗಿಗೆ ನಾಮಾನನನ್ನು ಯೆಹೋವನ ಪ್ರವಾದಿ ವಾಸಿ ಮಾಡುತ್ತಾನೆಂಬ ನಂಬಿಕೆ ಇತ್ತು. ಪ್ರವಾದಿ ಎಲೀಷನಿಗೆ ಶತ್ರು ಸೈನ್ಯದಿಂದ ತನ್ನನ್ನು ಯೆಹೋವನು ಕಾಪಾಡುತ್ತಾನೆಂಬ ಸಂಪೂರ್ಣ ಭರವಸೆಯಿತ್ತು. ಯುವ ಯೆಹೋವಾಷನನ್ನು ಅವನ ದುಷ್ಟ ಅಜ್ಜಿ ಅತಲ್ಯಳಿಂದ ಕಾಪಾಡಲು ಮಹಾ ಪುರೋಹಿತ ಯೆಹೋಯಾದ ತನ್ನ ಜೀವವನ್ನು ಪಣಕ್ಕಿಟ್ಟ. ಯೆರೂಸಲೇಮನ್ನು ಯೆಹೋವನು ಕಾಪಾಡುತ್ತಾನೆ ಎಂಬ ಭರವಸೆ ರಾಜ ಹಿಜ್ಕೀಯನಿಗಿತ್ತು. ಅವನು ಅಶ್ಶೂರ್ಯದವರ ಬೆದರಿಕೆಗೆ ಅಂಜಲಿಲ್ಲ. ರಾಜ ಯೋಷೀಯ ದೇಶದಿಂದ ವಿಗ್ರಹಾರಾಧನೆಯನ್ನು ತೆಗೆದುಹಾಕಿ, ದೇವಾಲಯವನ್ನು ಪುನಸ್ಥಾಪಿಸಿ ಜನರು ಸತ್ಯಾರಾಧನೆಗೆ ಹಿಂದಿರುಗುವಂತೆ ಮಾಡಿದ.