ಭಾರತದ ಕೊಯ್ಲಿನಲ್ಲಿ ಹರ್ಷಿಸುವುದು
ಎಫ್. ಇ. ಸ್ಕಿನ್ನರ್ರು ಹೇಳಿದ್ದು
ಅದು ನನಗೆ ನಂಬಲಿಕ್ಕೆ ಮೀರಿದ್ದಾಗಿತ್ತು—10 ಭಾಷೆಗಳಲ್ಲಿ 21 ಅಧಿವೇಶನಗಳು, ದೈವಿಕ ನ್ಯಾಯದ ಅರ್ಥವನ್ನು ಕಲಿಯಲು 15,000 ಕ್ಕಿಂತಲೂ ಹೆಚ್ಚು ಹಾಜರಿ, ನ್ಯಾಯದ ಮಹಾ ದೇವರಾದ ಯೆಹೋವನೆಡೆಗೆ ತಮ್ಮ ಪ್ರೀತಿಯನ್ನು ಸೂಚಿಸಲು ದೀಕ್ಷಾಸ್ನಾನ ಪಡೆದ 545 ಜನರು! ಭಾರತದಲ್ಲಿರುವ 9,000 ಯೆಹೋವನ ಸಾಕ್ಷಿಗಳಿಗೆ ಇದು 1989 ರ ಅತ್ಯುಜಲ್ವ ವಿಷಯವಾಗಿತ್ತು. ಆದರೆ ನನಗದು ವಿಶೇಷವಾಗಿ ಹರ್ಷಿಸಲು ಕಾರಣವಾಗಿತ್ತು. ಏಕೆ? ಏಕೆಂದರೆ, ಜುಲೈ 1926 ರಲ್ಲಿ ನಾನು ಭಾರತದ ಮಣ್ಣಿನ ಮೇಲೆ ನನ್ನ ಪ್ರಥಮ ಹೆಜ್ಜೆ ಇಟ್ಟಾಗ, ಇಂಥಹ ಮಹಾ ಘಟನೆಗಳ ಕುರಿತಾಗಿ ಯೋಚಿಸುವುದೇ ಕಷ್ಟವಾಗಿತ್ತು. ಆಗ ಇಡೀ ದೇಶದಲ್ಲಿ ರಾಜ್ಯ ಸಂದೇಶದ ಪ್ರಚಾರಕರ ಸಂಖ್ಯೆ 70 ಕ್ಕಿಂತ ಕಡಿಮೆಯಾಗಿತ್ತು. 64 ವರ್ಷಗಳ ಹಿಂದೆ ನನ್ನ ಸಂಗಾತಿ ಮತ್ತು ನಾನು ಎಂತಹ ಒಂದು ನೇಮಕವನ್ನು ಪಡೆದೆವು!
ನಾನು ಭಾರತಕ್ಕೆ ಬಂದ ವಿಧ
ಮೇ 1926 ರಲ್ಲಿ ಇಂಗ್ಲಂಡಿನ ಲಂಡನ್ನಲ್ಲಿ ನಡೆದ ಒಂದು ದೊಡ್ಡ ಸಮ್ಮೇಲನಕ್ಕೆ ನಾನು ಹಾಜರಾದೆ ಮತ್ತು ಅದಾದ ಕೂಡಲೇ ಶೆಫಿಲ್ನ್ಡಲ್ಲಿರುವ ನನ್ನ ಮನೆಗೆ ಹಿಂತಿರುಗಿದೆ. ಕೆಲವು ದಿನಗಳ ನಂತರ ಸೇವೆಯಿಂದ ಮನೆಗೆ ಹಿಂತಿರುಗಿದಾಗ, ಒಂದು ಟೆಲಿಗ್ರಾಮ್ ನನಗಾಗಿ ಕಾದಿರುವದನ್ನು ಕಂಡೆನು. ಅದು ಹೀಗಿತ್ತು: “ಜಡ್ಜ್ ರಥರ್ಫರ್ಡ್ರು ನಿನ್ನನ್ನು ಕಾಣಬಯಸುತ್ತಾರೆ.”
ವಾಚ್ಟವರ್ ಸೊಸೈಟಿಯ ಎರಡನೆಯ ಅಧ್ಯಕ್ಷರಾದ ಸಹೋದರ ರಥರ್ಫರ್ಡರು ಇತ್ತೀಚಿನ ಅಧಿವೇಶನಗಳಿಗಾಗಿ ನ್ಯೂಯೋರ್ಕಿನಿಂದ ಬಂದಿದ್ದರು ಮತ್ತು ಅವರು ಲಂಡನಿನಲಿದ್ದರು. ಲಂಡನಿಗೆ ಹೋಗುವ ರೈಲಿನಲ್ಲಿ ಮರುದಿನ ಬೆಳಿಗ್ಗೆ ಪ್ರಯಾಣಿಸುತ್ತಿದ್ದಾಗ, ನಾನು ಯೋಚಿಸುತ್ತಾ ಇದ್ದೆ, ‘ಇದರ ಅರ್ಥವೇನಾಗಿರಬಹುದು’ ಎಂಬದಾಗಿ. ಶಾಖಾ ಆಫೀಸಲ್ಲಿ ಸಹೋದರ ರಥರ್ಫರ್ಡರ ಬಳಿಗೆ ನನ್ನನ್ನು ಒಯ್ಯಲಾಯಿತು. ಮತ್ತು ಅವರು ನನ್ನನ್ನು ವಿಚಾರಿಸಿದ್ದು: “ಲೋಕದ ಯಾವ ಭಾಗದಲ್ಲಿಯಾದರೂ ಕೆಲಸಮಾಡುವ ವಿಷಯವಾಗಿ ನೀನು ಚಿಂತಿಸುತ್ತಿಯಾ?”
“ಇಲ್ಲ” ಎಂದು ನಾನುತ್ತರಿಸಿದೆ.
“ಭಾರತಕ್ಕೆ ಹೋಗಲು ನಿನಗೆ ಹೇಗೆನಿಸುತ್ತದೆ?”
“ನಾನು ಯಾವಾಗ ಹೋಗಲು ಬಯಸುತ್ತೀರಿ?” ಎಂದು ಯಾವುದೇ ಅಂಜಿಕೆಯಿಲ್ಲದೆ ಉತ್ತರಿಸಿದೆ. ಹೀಗೆ, ಮೂರು ವಾರಗಳ ನಂತರ, ಜೋರ್ಜ್ ರೈಟ್ ಮತ್ತು ನಾನು ಭಾರತಕ್ಕೆ ಹೋಗುತ್ತಿರುವ ಹಡಗಿನಲ್ಲಿದ್ದೆವು. ನಾನಾಗ 31 ವಯಸ್ಸಿನವನು ಮತ್ತು ನನ್ನ ಜೀವಿತದಲ್ಲಿ ನಾನೇನು ಮಾಡ ಬಯಸಿದ್ದೆ ಎನ್ನುವುದರಲ್ಲಿ ಹೃದಯದಲ್ಲಾಗಲಿ ಮನದಲ್ಲಾಗಲಿ ಯಾವುದೇ ಪ್ರಶ್ನೆಯಿರಲಿಲ್ಲ.
ಜೀವಿತ ಮಾರ್ಗವೂಂದನ್ನು ನಿರ್ಣಯಿಸುವುದು
1918 ರೊಳೆಗೆ ಮೊದಲನೆ ಲೋಕ ಯುದ್ಧವು ಮುಗಿದಿತ್ತು. ನಾನಾಗಲೇ ಬ್ರಿಟಿಶ್ ಸೇನೆಯಲ್ಲಿ ನಾಲ್ಕು ವರ್ಷಗಳನ್ನು ವ್ಯಯಿಸಿದ್ದೆ. ನನಗೆ ಫೋಟಾಗ್ರಫಿ ಮತ್ತು ರೇಡಿಯೋ ಟ್ರಾನ್ಸ್ಮಿಶನ್ನಲ್ಲಿ ಅಭಿರುಚಿ ಇತ್ತು ಮತ್ತು ಒಳ್ಳೆಯ ವ್ಯಾಪಾರದ ಅವಕಾಶಗಳು ನನಗೆ ತೆರೆದಿದ್ದವು. ಅಲ್ಲದೇ, ಮದುವೆಯಾಗುವುದರ ಕುರಿತೂ ಆಲೋಚಿಸುತ್ತಿದ್ದೆ. ಆದರೂ ಅದೇ ಸಮಯದಲ್ಲಿ ನನ್ನ ಜೀವಿತದ ಪೂರ್ಣ ಕೇಂದ್ರ ಬಿಂದುವು ಬದಲಾವಣೆಯಾಗುತ್ತಿರುವ ವಿಷಯಗಳ ಒಂದು ತಿಳುವಳಿಕೆಗೆ ನಾನು ಬರುತ್ತಾ ಇದ್ದೆ.
ನನ್ನ ತಂದೆ ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ಪುಸ್ತಕಗಳನ್ನು ಸ್ವೀಕರಿಸಿದ್ದರು ಮತ್ತು ಆಗ ಕಲ್ಪೋರ್ಟರ್ ಎಂದು ಕರೆಯಲ್ಪಡುತ್ತಿದ್ದ ಪಯನೀಯರೊಬ್ಬರು ನಮ್ಮ ಕುಟುಂಬದೊಂದಿಗೆ ಒಂದು ಬೈಬಲಭ್ಯಾಸ ಮಾಡತೊಡಗಿದರು. ಆ ಮಹಿಳೆ ಒಬ್ಬ ಶಾಲಾ ಅಧ್ಯಾಪಿಕೆಯಾಗಿದ್ದರು. ಸ್ವಲ್ಪ ಸಮಯದ ನಂತರ, ನನ್ನಷ್ಟೇ ವಯಸ್ಸಿನ ಕೆಲವು ಎಳೆಯರು ಪ್ರತಿ ಶನಿವಾರ ಒಂದು ಕಪ್ ಚಾ ಮತ್ತು ಬೈಬಲಧ್ಯಯನಕ್ಕಾಗಿ ಅವರ ಮನೆಗೆ ಹೋಗುತ್ತಿದ್ದೆವು. ಆಕೆ ಪದೇ ಪದೇ ಯೆಹೋವನಿಗಾಗಿ ನಮ್ನನ್ನು ದೊರಕಿಸಿಕೊಳ್ಳುವಂತೆ ನಮ್ಮನ್ನು ನಾವೇ ಸಿದ್ಧಗೊಳಿಸಲು ಹೇಳುತ್ತಿದ್ದರು, “ಒಂದು ನೇಮಕವನ್ನೆಂದೂ ನಿರಾಕರಿಸಬೇಡಿರಿ” ಎನ್ನುತ್ತಿದ್ದರು. ನಾನು ಅವಿವಾಹಿತನಾಗಿ ಉಳಿಯುವಂತೆ ಸಹ ಅವರು ಪ್ರೋತ್ಸಾಹಿಸಿದ್ದರು.
ಕೆಲವು ಸಮಯದ ತನಕ ನಾನೇನು ಮಾಡುವುದು ಎನ್ನುವದರ ಕುರಿತು ನನಗೆ ಹೋರಾಟ ನಡಿಸಬೇಕಾಯಿತು. ಮತ್ತಾಯ 19:21 ರಲ್ಲಿ ಶ್ರೀಮಂತ ಎಳೆಯ ಅಧಿಪತಿಗೆ ಹೇಳಿದ ಮಾತುಗಳು ನನಗೆ ನೆರವಾದವು: “ನೀನು ಪರಿರಪೂರ್ಣನಾಗಬೇಕೆಂದಿದ್ದರೆ, ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು. ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು.” ನಾನು ಕೆಲಸಮಾಡುತ್ತಿದ್ದ ಕಂಪೆನಿಗೆ ರಾಜೀನಾಮೆ ಕೊಟ್ಟೆ, ಮೂರು ತಿಂಗಳೊಳೆಗೆ ಕಲ್ಪೋರ್ಟರ್ ಆದೆ. ಇದು, ಮತ್ತು ಅವಿವಾಹಿತನಾಗಿ ಉಳಿಯಬೇಕೆಂಬ ನನ್ನ ನಿರ್ಧಾರ ನಾಲ್ಕು ವರ್ಷದ ನಂತರ ಭಾರತದ ಅಮೂಲ್ಯ ನೇಮಕಕ್ಕೆ ನನ್ನನ್ನು ಯೋಗ್ಯನನ್ನಾಗಿ ಮಾಡಿತು.
ಮಹತ್ತರವಾದ ಒಂದು ಹೊಸಕ್ಷೇತ್ರ
ಜೋರ್ಜ್ ರೈಟ್ ಮತ್ತು ನನಗೆ ರಾಜ್ಯ ಸಾರುವಿಕೆಯ ಕೆಲ್ಸದ ಮೇಲ್ವಿಚಾರಣೆ ಭಾರತದಲ್ಲಿ ಮಾತ್ರವಲ್ಲ ಬರ್ಮಾ (ಈಗ ಮೈನ್ಮಾರ್) ಮತ್ತು ಸಿಲೋನ್ (ಈಗ ಶ್ರೀಲಂಕಾ) ದಲ್ಲೂ ಇತ್ತು. ಅನಂತರ ಪರ್ಸಿಯ (ಈಗ ಇರಾನ್) ಮತ್ತು ಅಫಘಾನಿಸ್ತಾನವನ್ನೂ ಕೂಡಿಸಲಾಯಿತು. ಭಾರತದ ವಿಸ್ತೀರ್ಣವು ಅಮೇರಿಕಕ್ಕಿಂತ ಸ್ವಲ್ಪ ಕಡಿಮೆಯಾದರೂ, ಜನಸಂಖ್ಯೆಯು ಬಹಳಪಟ್ಟು ಹೆಚ್ಚು. ಈ ದೇಶದಲ್ಲಿ ಭಿನ್ನ ರೀತಿಯ ಆಹಾರಗಳು, ಪದ್ಧತಿಗಳು ಮತ್ತು ಭಾಷೆಗಳು ಹಾಗೂ ವಿವಿಧ ಧಾರ್ಮಿಕ ನಂಬಿಕೆಗಳಿರುವ ಜನರು—ಹಿಂದುಗಳು, ಮುಸ್ಲಿಮರು, ಪಾರ್ಸಿಗಳು, ಜೈನರು, ಸಿಕ್ಕರು ಮತ್ತು ಭೌದ್ಧ ಮತೀಯರು ಹಾಗೂ ಕಥೋಲಿಕರು ಮತ್ತು ಪ್ರೊಟೆಸ್ಟಾಂಟರು ಇದ್ದರು.
1905 ರಲ್ಲಿ ಭಾರತದಲ್ಲಿ ಸಾರುವ ಕಾರ್ಯವು ಆರಂಭಗೊಂಡಿತ್ತು ಮತ್ತು ವಾಚ್ಟವರ್ ಸೊಸೈಟಿಯ ಮೊದಲ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸ್ಸೆಲ್ ಇವರು 1912 ರಲ್ಲಿ ಭೇಟಿ ನೀಡಿದಾಗ ಅದಕ್ಕೆ ಹುರುಪು ನೀಡಲಾಯಿತು. ಹುರುಪಿನ ಬೈಬಲ್ ವಿದ್ಯಾರ್ಥಿ ಎ. ಜೆ. ಜೋಸೆಫ್ ಇವರೊಂದಿಗೆ ರಸ್ಸೆಲ್ ನಡಿಸಿದ ಇಂಟರ್ವ್ಯೂ ನಿಂದಾಗಿ ಸಾರುವ ಕಾರ್ಯದ ಮುಂದುವರಿಕೆಗೆ ಒಂದು ಖಾಯಂ ಏರ್ಪಾಡು ಮಾಡಲ್ಪಟ್ಟಿತು. ಜೋಸೆಫರು ಬೈಬಲ್ ಸಾಹಿತ್ಯವನ್ನು ತನ್ನ ಮಾತೃ ಭಾಷೆ ಮಲೆಯಾಳಂಗೆ ತರ್ಜುಮಿಸಿದರು ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿಸ್ತಾರವಾಗಿ ಸಂಚರಿಸಿ, ಭಾಷಣಗಳನ್ನು ನೀಡಿದರು. ಇಂದು ಭಾರತದ ಅರ್ಧದಷ್ಟು ಪ್ರಚಾರಕರು ಮಲೆಯಾಲಂ ಮಾತಾಡುವ ದೇಶಗಳಲ್ಲಿರುತ್ತಾರೆ, ಆದರೆ, ಭಾರತದ ಜನಸಂಖ್ಯೆಯ ಕೇವಲ 3 ಶೇಕಡಾ ಮಾತ್ರ ಅಲ್ಲಿ ಜೀವಿಸುತ್ತಾರೆ. ಈ ಪ್ರದೇಶವು ಮೊದಲು ಟ್ರಾವಂಕೂರ್ ಮತ್ತು ಕೊಚ್ಚಿನ್ ಆಗಿದ್ದು, 1956 ರಲ್ಲಿ ಕೇರಳ ಪ್ರಾಂತ್ಯವಾಯಿತು.
ಜೋರ್ಜ್ ರೈಟ್ ಮತ್ತು ನಾನು ಬೊಂಬಾಯಿಯ ಆಫೀಸಿನಲ್ಲಿ ಸರದಿ ಪ್ರಕಾರ ಕೆಲಸ ಮಾಡುತ್ತಿದ್ದೆವು ಮತ್ತು ದೂರದ ಸಾರುವ ಸಂಚಾರಗಳಿಗೆ ಹೊರಗೆ ಹೋಗುತ್ತಿದ್ದೆವು. ನಾವು ರೈಲ್ಬಂಡಿಗಳನ್ನು, ಕುದುರೆಗಳನ್ನು ಮತ್ತು ಎತ್ತಿನ ಗಾಡಿಗಳನ್ನು ಪೂರ್ಣವಾಗಿ ಬಳಸುತ್ತಿದ್ದೆವು. ಅನಂತರ ಕಾರೊಂದನ್ನು ಬಳಸಿದೆವು. ಆಗ ಜನರೊಂದಿಗೆ ಬರೇ ಸಾಹಿತ್ಯ ನೀಡಿ ಬರುವದು ಮತ್ತು ಗುಂಪು ಅಭ್ಯಾಸಕ್ಕಾಗಿ ಒಂದು ಕೂಟದ ಸ್ಥಳಕ್ಕೆ ಬರುವಂತೆ ಜನರನ್ನು ಆಮಂತ್ರಿಸುವುದಷ್ಟೇ ಆಗಿತ್ತು. ನಾವು ಇಂಗ್ಲಿಷ್ ಮಾತಾಡುವ ಕ್ರೈಸ್ತರೆನಿಸುವವರ ಕಡೆಗೆ ಹೆಚ್ಚು ಗಮನಕೊಡುತ್ತಿದ್ದೆವು.
ಆರಂಭದಲ್ಲಿ ನನಗೆ ವಾಚ್ಟವರ್ ಚಂದಾದಾರರ ಎಲ್ಲಾ ಹೆಸರುಗಳೂ ವಿಳಾಸಗಳೂ ಕೊಡಲ್ಪಟ್ಟವು. ಇವರಲ್ಲಿ ಅಧಿಕಾಂಶ ಜನರು ರೈಲ್ವೆ ಯಾ ಟೆಲಿಗ್ರಾಫ್ನಲ್ಲಿ ಕೆಲಸಮಾಡುವವರು. ನಿಜಾಸಕ್ತರನ್ನು ಕಂಡುಹಿಡಿಯಲು ನಾನು ಅವರಲ್ಲಿ ಪ್ರತಿಯೊಬ್ಬರನ್ನು ಸಂದರ್ಶಿಸಿದೆನು, ಹಲವಾರು ವರ್ಷಗಳ ತನಕ ಜನವರಿಯಲ್ಲಿ ನಾನು ಉತ್ತರ ಭಾರತದ ಪಂಜಾಬಿಗೆ ಹೋಗುತ್ತಿದ್ದೆ ಮತ್ತು ಲಾಹೋರಿನಿಂದ ಕರಾಚಿಯ ತನಕ ಪ್ರಯಾಣಿಸುತ್ತಿದ್ದೆ. ಬೈಬಲೆಡೆಗೆ ಹೆಚ್ಚಿನವರು ತಿರಸ್ಕಾರದಿಂದ ನೋಡುತ್ತಿದ್ದರಿಂದ, ಹಳ್ಳಿಗಳಲ್ಲಿ ಜೀವಿಸುತ್ತಿದ್ದ ಕ್ರೈಸ್ತರೆನಿಸಿಕೊಳ್ಳುವವರು ಕೊಂಚವೇ ಮಂದಿಯಾಗಿದ್ದು, ಒಂದುಕಡೆಯಿಂದ ಇನ್ನೊಂದು ಕಡೆಯಲ್ಲಿ ದೂರ ದೂರದಲ್ಲಿರುತ್ತಿದ್ದರು.
ಸಹೋದರನೊಬ್ಬನು ನನ್ನ ತರ್ಜುಮೆಗಾಗಿ ನನ್ನೊಂದಿಗೆ ಸಂಚರಿಸುತ್ತಿದ್ದನು ಮತ್ತು ನಾವು ಜನರೊಂದಿಗೆ ಜೀವಿಸಿ, ಅವರೊಡನೆ ತಿನ್ನುತ್ತಿದ್ದೆವು. ಹಳ್ಳಿಗಳಲ್ಲಿ ಜನರು ಹುಲ್ಲು ಯಾ ಮರದ ಮಾಡುಗಳಿರುವ ಮತ್ತು ಸೂರ್ಯನ ಬಿಸಿಲಿಂದ ಸುಡಲ್ಪಟ್ಟ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದರು. ಅವರು ಚಾರ್ಪಾಯ್ ಅಂದರೆ, ನಾಲ್ಕು ಕಾಲಿನ ಮರದ ಚೌಕಟ್ಟಟನ್ನು ಹಗ್ಗದಿಂದ ನೂಲಿದ ಮಂಚದ ಮೇಲೆ ಮಲಗುತ್ತಿದ್ದರು. ಅನೇಕಬಾರಿ ರೈತರು ಬೈಬಲನ್ನು ಕೈಯಲ್ಲಿ ಹಿಡಿದು, ಚಾರ್ಪಾಯ್ ಮೇಲೆ ಕೂತು, 2-3 ಅಡಿ ಉದ್ದದ ನಳಿಗೆಯಲ್ಲಿ ನೀರಿನಿಂದ ತಣಿಸಿದ ಹೊಗೆಯನ್ನು ಸೇದುತ್ತಾ, ನಾವು ದೇವರ ಸತ್ಯತೆಯನ್ನು ತಿಳಿಸಿದಷ್ಟಕ್ಕೆ ವಚನಗಳನ್ನು ತಿರುಗಿಸುತ್ತಿದ್ದರು. ಮನೆಯ ಹೊರಗಿನ ಕೂಟಗಳು ಉತ್ತಮವಾಗಿರುತ್ತಿದ್ದವು ಯಾಕಂದರೆ ವರ್ಷದ ಹೆಚ್ಚಿನ ಸಮಯ ಮಳೆಯು ಇರುತ್ತಿರಲಿಲ್ಲ. ಹೆಚ್ಚಿನ ಯುರೋಪಿಯಾನರು ಇಂತಹ ಕೂಟಗಳಿಗೆ ಹಾಜರಾಗಲು ದೊಡ್ಡಸ್ತಿಕೆ ತೋರಿಸುತ್ತಿದ್ದರೂ, ಭಾರತೀಯರು ಎಲ್ಲಿಯೇ ಆಗಲಿ ಒಟ್ಟು ಸೇರುತ್ತಿದ್ದರು.
ಸಾಧ್ಯವಾದಷ್ಟು ಭಾಷೆಗಳಲ್ಲಿ ನಾವು ಸಾಹಿತ್ಯವನ್ನು ಪ್ರಕಟಿಸಲು ಪ್ರಯತ್ನಿಸಿದೆವು. ವರ್ಲ್ಡ್ ಡಿಸ್ಟ್ರೆಸ್ ಎಂಬ ಕನ್ನಡ ವಹಿಯು ವಿಶೇಷ ಯಶಸ್ಸನ್ನು ಪಡೆಯಿತು. ಕನ್ನಡ ಧಾರ್ಮಿಕ ವಾರಪತ್ರಿಕೆಯ ಸಂಪಾದಕನೊಬ್ಬನು ತನ್ನ ಪತ್ರಿಕೆಯಲ್ಲಿ ಲೇಖನಗಳನ್ನು ಒದಗಿಸುವಂತೆ ಕೇಳಲು ನಡಿಸಿತು. ಕೆಲವು ಸಮಯದ ತನಕ ನಾವು ಪ್ರತೀ ಎರಡು ವಾರಗಳಿಗೊಮ್ಮೆ ಡೆಲಿವರೆನ್ಸ್ ಪುಸ್ತಕವನ್ನು ಧಾರಾವಾಹಿಯಾಗಿ ಪ್ರಕಟಿಸಿದೆವು.
1926 ರಿಂದ 1938 ರ ತನಕದ ವರ್ಷಗಳಲ್ಲಿ ಸಾರುವ ಕೆಲಸದ ಪರಿಮಾಣವು ಹುರುಪಿನ ಪಯನೀಯರುಗಳಿಂದ ಏರಿಸಲ್ಪಟ್ಟಿತು. ನಾವು ಸಾವಿರಾರು ಮೈಲು ಪ್ರಯಾಣಿಸಿದೆವು ಮತ್ತು ಮಹಾ ಪ್ರಮಾಣದಲ್ಲಿ ಸಾಹಿತ್ಯಗಳು ಹಂಚಲ್ಪಟ್ಟವು. ಆದರೆ ಅಭಿವೃದ್ಧಿಯು ಸಾಧಾರಣ ಗತಿಯಲ್ಲಿತ್ತು. 1938 ರೊಳೆಗೆ ಇಡೀ ಭಾರತದಲ್ಲಿ ಕೇವಲ 18 ಪಯನೀಯರು ಮತ್ತು 24 ಸಭೆಗಳಲ್ಲಿ ಒಟ್ಟು 273 ಪ್ರಚಾರಕರು ಮಾತ್ರಇದ್ದರು.
ಎರಡನೆಯ ಲೋಕ ಯುದ್ಧದ ಸಮಯದಲ್ಲಿ
1939 ರಲ್ಲಿ ಎರಡನೆಯ ಲೋಕ ಯುದ್ಧವು ಸ್ಪೋಟಿಸಿತು, ಆದರೂ ನಮ್ಮ ಸಾರುವಿಕೆಯನ್ನು ಮುಂದುವರಿಸಿದೆವು. ವಾಸ್ತವದಲ್ಲಿ 1940 ರಲ್ಲಿ ಬೀದೀ ಬದಿಯ ಸಾಕ್ಷಿಕಾರ್ಯವು ಆರಂಭಿಸಿತು. ನಮ್ಮ ಭಾರತೀಯ ಸಹೋದರಿಯರು ಸಹಾ ಇದರಲ್ಲಿ ಭಾಗವಹಿಸಿದರು ಸ್ಥಳೀಕ ಸಂಪ್ರದಾಯಕ್ಕನುಸಾರ ಇದೊಂದು ವೈಶಿಷ್ಟ್ಯತೆಯಾಗಿತ್ತು. ಕೆಲವಾರು ವರ್ಷಗಳ ನಂತರ ಒಬ್ಬ ಬೈಬಲ್ ವಿದ್ಯಾರ್ಥಿಯು ಅಂತಹ ವಟುವಟಿಕೆಯಲ್ಲಿ ಭಾಗವಹಿಸುವಂತೆ ಕೇಳಿದ ಸಾಕ್ಷಿಯೊಬ್ಬಳಿಗೆ ಹೇಳಿದ್ದು: “ನಾನೊಬ್ಬ ಭಾರತೀಯ ಸ್ತ್ರೀ, ಮತ್ತು ರಸ್ತೆಯಲ್ಲಿ ಪುರುಷನೊಬ್ಬನೊಡನೆ ಮಾತಾಡುವದನ್ನು ಕಾಣಶಕ್ಯವಿಲ್ಲ ಯಾಕಂದರೆ ಇಡೀ ನೆರೆಕರೆಯಲ್ಲಿ ನಾನು ಅವಮಾನಿತಳಾಗುವೆನು. ಅವನು ನಮ್ಮ ಸಂಬಂಧಿಕನಾಗಿದ್ದರೂ ರಸ್ತೆಯಲ್ಲಿ ಪುರುಷನೊಬ್ಬನೊಡನೆ ನಾನು ಮಾತಾಡಲಾರೆ.” ಆದಾಗ್ಯೂ, ಭಾರತದಲ್ಲಿನ ನಮ್ಮ ಕ್ರೈಸ್ತ ಸಹೋದರಿಯರು ಉತ್ಸಾಹದ ಸಾರ್ವಜನಿಕ ಶುಶ್ರೂಷಕರಾಗಿದ್ದಾರೆ.
ಆಗಿನ ಆರಂಭದ ವರ್ಷಗಳಲ್ಲಿ ಅಧಿವೇಶನಗಳನ್ನು ಕೂಡಾ ಏರ್ಪಡಿಸಲಾಗಿತ್ತು. ಬೆಳಗಾತಗಳು ಕ್ಷೇತ್ರಸೇವೆಗಾಗಿ ಬದಿಗಿರಿಸಲ್ಪಡುತ್ತಿದ್ದವು, ಇದರಲ್ಲಿ ಮುಖ್ಯವಾಗಿ ಹಲವಾರು ಮೈಲುಗಳನ್ನು ನಡಿಯುತ್ತಾ ಅಲ್ಲಿನ ನಿವಾಸಿಗಳಿಗೆ ಮತ್ತು ದಾರಿಹೋಕರಿಗೆ ಬಹಿರಂಗ ಕೂಟಗಳ ಕುರಿತು ತಿಳಿಸುವುದು ಕೂಡಿತ್ತು. ಬಿದಿರು ಮತ್ತು ತಾಳೇಗರಿಗಳ ಮಾಡಿನ ಚಪ್ಪರದ ಕೆಳಗೆ ನಡಿಯುತ್ತಿದ್ದ ಇಂತಹ ಕಾರ್ಯಕ್ರಮಗಳ ಒಂದು ಕೂಟಕ್ಕೆ ಒಮ್ಮೆ 300 ಕ್ಕಿಂತಲೂ ಹೆಚ್ಚು ಜನರು ಹಾಜರಾದರು. ಪ್ರಾರಂಭಿಸುವ ವಿಶಿಷ್ಟ ಸಮಯ ತಿಳಿಸುವುದರಲ್ಲಿ ಅಷ್ಟೇನೂ ಪ್ರಯೋಜನವಿರಲಿಲ್ಲ ಯಾಕಂದರೆ ಗಡಿಯಾರವಿದ್ದದ್ದು ಕೇವಲ ಕೆಲವರಲ್ಲಿ ಮಾತ್ರವೇ. ಅವರಿಗೆ ಮನಸ್ಸು ಬಂದಹಾಗೆ ಬರುತ್ತಿದ್ದರು ಮತ್ತು ಸಾಕಷ್ಟು ಜನ ಕೂಡಿದಾಗ ಕೂಟ ಆರಂಭವಾಗುತಿತ್ತು. ಕೂಟ ನಡಿಯುತ್ತಾ ಇರುವಾಗಲೂ ಜನ ಸಿಕ್ಕಾಪಟ್ಟೆ ಬರುತ್ತಾ ಇರುತ್ತಿದ್ದರು.
ಕಾರ್ಯಕ್ರಮ ಸಾಮಾನ್ಯವಾಗಿ ರಾತ್ರಿ 10 ಗಂಟೆಯ ತನಕ ನಡಿಯುತ್ತಿತ್ತು ಮತ್ತು ಅನಂತರ ಮನೆಗೆ ಹೋಗಲು ಅನೇಕರಿಗೆ ಹಲವಾರು ಮೈಲು ನಡಿಯಬೇಕಿತ್ತು. ಬೆಳ್ದಿಂಗಳಿದ್ದರೆ ಉತ್ತಮವೇ, ಅದು ತಂಪೂ ಅಹ್ಲಾದಕರವೂ ಆಗಿರುತ್ತಿತ್ತು. ತಿಂಗಳ ಬೆಳಕಿಲ್ಲದಿದ್ದರೆ ಜನರು ತೆಂಗಿನೆಲೆಗಳ ಸೂಡಿಯನ್ನು ಬೆಳಕಾಗಿ ಬಳಸುತ್ತಿದ್ದರು. ಅದನ್ನು ಹೊತ್ತಿಸುವಾಗ ಈ ಸೂಡಿ ಮಂದವಾದ ಕೆಂಪು ಪ್ರಕಾಶ ನೀಡುತ್ತದೆ. ಹೆಚ್ಚು ಬೆಳಕು ಬೇಕಾದಾಗ, ಸೂಡಿಯನ್ನು ಗಾಳಿಗೆ ತೀವ್ರವಾಗಿ ಉರಿಯೇಳುವ ತನಕ ಬೀಸಬೇಕಿತ್ತು. ಉಬ್ಬುತಗ್ಗಿನ ನೆಲದಲ್ಲಿ ದಾರಿಕಾಣಲು ಇದು ಸಾಕಷ್ಟು ಬೆಳಕು ನೀಡುತಿತ್ತು.
ಅದೇ ಸಮಯದ ಸುಮಾರಿಗೆ ಸೊಸೈಟಿಯ ಸಾಹಿತ್ಯಗಳನ್ನು ಭಾರತ ಮತ್ತು ಸಿಲೋನ್ಗಳಿಗೆ ಆಮದು ಮಾಡುವದನ್ನು ಸರಕಾರ ನಿಶೇಧಿಸಿತು. ಟ್ರಾವಂಕೂರ್ನಲ್ಲಿದ್ದ ನಮ್ಮ ಚಿಕ್ಕ ಪ್ರೆಸ್ಸ್ನ್ನು ವಶಪಡಿಸಿ ಕೊಳ್ಳಲಾಯಿತು ಮತ್ತು ನಮ್ಮ ಸಾಹಿತ್ಯ ಮುದ್ರಣದ ಮೇಲೆ ಕೇಂದ್ರ ಸರಕಾರ ನಿಶೇಧ ಹಾಕಿತು. ತದನಂತರ 1944ರಲ್ಲಿ, ಶರೀರಾಂಗಗಳ ಚಿಕಿತ್ಸಕನಾದ ನಮ್ಮ ಸಹೋದರನೊಬ್ಬನು ವೈಸರಾಯರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಸರ್ ಶ್ರೀವತ್ಸವ ಎಂಬವರಿಗೆ ಔಷದೋಪಚಾರ ಮಾಡುತ್ತಿದ್ದಾಗ ಈ ನಿಶೇಧವನ್ನು ಅವರ ಗಮನಕ್ಕೆ ತಂದನು.
“ಒಳ್ಳೆದು, ಚಿಂತೆ ಮಾಡಬೇಡಿ” ಎಂದು ನಮ್ಮ ಸಹೋದರನಿಗೆ ಹೇಳಲಾಯಿತು. ಶ್ರೀ ಜೆಂಕಿನ್ಸ್ (ನಮ್ಮ ಕಾರ್ಯವನ್ನು ಮೆಚ್ಚದ ಮಂತ್ರಿ) ಬೇಗನೇ ನಿವೃತ್ತಿ ಹೊಂದಲಿದ್ದಾರೆಂದೂ, ಸರ್ ಶ್ರೀವತ್ಸವರ ಒಬ್ಬ ಒಳ್ಳೇ ಮಿತ್ರರು ಅವರ ಸ್ಥಾನಕ್ಕೆ ಬರಲಿರುವರೆಂದೂ ಅವನಿಗೆ ವಿವರಿಸಲಾಯಿತು. “ಮಿಸ್ಟರ್ ಸ್ಕಿನ್ನರನ್ನು ಮೇಲೆ ಬರಲು ಹೇಳು, ನಾನವರನ್ನು ಸರ್ ಪ್ರಾನ್ಸಿಸ್ ಮುಡೀ (ಜೆಂಕಿನ್ರ ಬದಲಿ) ಯವರಿಗೆ ಪರಿಚಯ ಮಾಡಿಸುತ್ತೇನೆ” ಎಂದು ಶ್ರೀವತ್ಸವ ಪ್ರೋತ್ಸಾಹಿಸಿದರು. ಅನಂತರ ನನ್ನನ್ನು ಕರೆಯಲಾಯಿತು. ನಾನು ಮಿಸ್ಟರ್ ಮುಡೀ ಯವರೊಂದಿಗೆ ಮಾತಾಡಿದೆ. ದಶಂಬರ 9, 1944 ರಂದು ನಿಷೇಧವು ಅಧಿಕೃತವಾಗಿ ತೆಗೆಯಲ್ಪಟ್ಟಿತು.
ಹರ್ಷಿಸಲು ಕಾರಣಗಳು
1947 ರಲ್ಲಿ ಗಿಲ್ಯಾದ್ ತರಬೇತು ಪಡೆದ ಮಿಶನೆರಿಗಳು ಭಾರತಕ್ಕೆ ಬಂದಾಗ ಸಂತೋಷಿಸಲು ಒಂದು ಮಹಾ ಕಾರಣವಾಯಿತು. ಅವರ ಆಗಮನವು ಭಾರತದ ಇತಿಹಾಸದ ಸಂದಿಗ್ದ ಸಮಯದಲ್ಲಾಯಿತು, ಯಾಕಂದರೆ ಅದೇ ವರ್ಷ, ಅಗೋಸ್ತ್ 15 ರಲ್ಲಿ, ಬ್ರಿಟಿಷ್ ಆಳಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ರಾಷ್ಟ್ರವು ಹಿಂದೂ ಭಾರತ ಮತ್ತು ಮುಸ್ಲಿಮ್ ಪಾಕಿಸ್ತಾನವಾಗಿ ಇಬ್ಭಾಗವಾದಾಗ ರಕ್ತಪಾತದ ಕಗ್ಗೊಲೆಗಳಾದವು. ಹೀಗಿದ್ದರೂ ಇಬ್ಬರು ಗಿಲ್ಯಾದ್ ಮಿಶನೆರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ಅದು ಅಗೋಸ್ತು 14 ರಂದು ಸ್ವತಂತ್ರ ರಾಷ್ಟ್ರವಾಯಿತು. ಬೇಗನೇ ಇನ್ನು ಹತ್ತುಮಿಶನೆರಿಗಳು ಭಾರತದಲ್ಲೀ ಕಾರ್ಯಪ್ರವೃತರಾದರು ಮತ್ತು ಮುಂದಿನ ವರ್ಷಗಳಲ್ಲಿ ಸಹಾಯಕ್ಕಾಗಿ ಇನ್ನೂ ಅನೇಕರು ಬಂದರು.
ಸಂಸ್ಥಾಪಿತ ಕ್ರಮ ವಿಧಾನಗಳು ವಿಧಿವತ್ತಾಗಿ ಮಾಡಿದಾಗ ನನ್ನ ಹೃದಯಕ್ಕೆ ಅದು ಇನ್ನಷ್ಟು ಹರ್ಷವನ್ನು ತಂದಿತು. 1955ರಲ್ಲಿ ಸರ್ಕೀಟ್ ಕೆಲಸ ಆರಂಭಗೊಂಡಾಗ ಗಿಲ್ಯಾದ್ ಪದವೀಧರ ಸಹೋದರ ಡಿಕ್ ಕಾಟ್ರಿಲ್ ಮೊದಲ ಸರ್ಕಿಟ್ ಮೇಲ್ವಿಚಾರಕರಾಗಿ ನೇಮಕಗೊಂಡರು. 1988 ರಲ್ಲಿ ಅವರ ಮರಣದ ತನಕ ಅವರು ನಂಬಿಗಸ್ತರಾಗಿ ಸೇವೆ ಸಲ್ಲಿಸಿದರು. ಅನಂತರ 1960 ರಲ್ಲಿ ನಮಗೆ ನಮ್ಮ ಮೊದಲ ಜಿಲ್ಲಾ ಮೇಲ್ವಿಚಾರಕರ ಏರ್ಪಾಡು ಆಯಿತು, ಇದು ಸರ್ಕಿಟುಗಳಿಗೆ ನೆರವಾಗಲು ಬಹಳಷ್ಟನ್ನು ಮಾಡಿತು. 1966 ರ ನಂತರ ವಿದೇಶಿ ಮಿಶನೆರಿಗಳು ದೇಶದೊಳಗೆ ಬರುವುದು ನಿಲ್ಲಿಸಲ್ಪಟ್ಟಿತು. ಆದರೆ ಬೇಗನೇ ವಿಶೇಷ ಪಯನೀಯರ ಸೇವೆ ತೆರೆಯಲ್ಪಟ್ಟಿತು ಮತ್ತು ಯೋಗ್ಯತೆ ಹೊಂದಿದ ಭಾರತೀಯ ಸಹೋದರರನ್ನು ಭಾರತದ ಅನೇಕ ಭಾಗಗಳಿಗೆ ಕಳುಹಿಸಲಾಯಿತು. ಇಂದು ಸುಮಾರು 300 ರಷ್ಟು ಈ ಕೆಲಸದಲ್ಲಿದ್ದಾರೆ.
1958 ರ ತನಕ ರಾಜ್ಯ ಪ್ರಚಾರಕರ ಸಂಖ್ಯೆ 1000 ಕ್ಕೆ ಮುಟ್ಟಲಿಲ್ಲ. ಆದರೆ ಅಂದಿನಿಂದ ಏರಿಕೆಯ ಗತಿಯು ಆರಂಭಗೊಂಡು ಈಗ 9,000 ಕ್ಕಿಂತಲೂ ಹೆಚ್ಚು ಇದ್ದಾರೆ. ಅಷ್ಟಲ್ಲದೇ, 1989ರ ಕರ್ತನ ಜ್ಞಾಪಕಾಚರಣೆಗೆ 24,144 ಹಾಜರಿದ್ದದ್ದು ತಾನೇ ಅನೇಕ ಅಸಕ್ತ ಜನರು ಸಹಾಯವನ್ನು ಹುಡುಕುತ್ತಿದ್ದಾರೆಂದು ಸೂಚಿಸುತ್ತದೆ. ಶ್ರೀಲಂಕಾವು ಈಗ ಒಂದು ಪ್ರತ್ಯೇಕ ಶಾಖೆಯಾಗಿದೆ. 1944 ರಲ್ಲಿ ಕೇವಲ ಇಬ್ಬರು ಪ್ರಚಾರಕರು ಇದ್ದ ಅಲ್ಲಿ, ಅವರ ದೇಶೀಯ ಹೋರಾಟದ ನಡುವೆಯೂ, ಈಗ 1,000 ಕ್ಕಿಂತಲೂ ಹೆಚ್ಚು ಸಂಖ್ಯೆಯಾಗಿ ವೃದ್ಧಿಯಾಗಿರುವುದು ಎಷ್ಟು ಸಂತೋಷ.
ಪ್ರಚಾರಕರಲ್ಲಿ ಬೆಳವಣಿಗೆಯು ನಮ್ಮ ಬ್ರಾಂಚಲ್ಲೂ ಬೆಳವಣಿಗೆ ಎಂದರ್ಥ. ಗದ್ದಲದ ಬೊಂಬಾಯಿಯಲ್ಲಿ 52 ವರ್ಷಗಳನ್ನು ಕಳೆದ ಮೇಲೆ, ನಮ್ಮ ಕೇಂದ್ರಾಲಯವು 1978 ರಲ್ಲಿ ಹತ್ತಿರದ ಲೊನಾವ್ಲಕ್ಕೆ ಸ್ಥಳಾಂತರಗೊಂಡಿತು. ಮೆಪ್ಸ್ನಂತಹ ಆಧುನಿಕ ಯಂತ್ರಗಳು ಮತ್ತು ಭಾರತದ ಅನೇಕ ಭಾಷೆಗಳಲ್ಲಿ ಸಾಹಿತ್ಯಗಳನ್ನು ಮುದ್ರಿಸಲು ಎರಡು ವರ್ಣಗಳ ಮುದ್ರಣಾಯಂತ್ರ ನಮ್ಮಲ್ಲಿರುವದೆಂದು ಹಿಂದೆ ನಾನೆಂದೂ ಊಹಿಸಿರಲಿಲ್ಲ. ಇಂದು ವಾಚ್ಟವರ್ನ್ನು 9 ಭಾಷೆಗಳಲ್ಲಿ ಮತ್ತು ಇತರ ಸಾಹಿತ್ಯಗಳನ್ನು 20 ವಿವಿಧ ಭಾಷೆಗಳಲ್ಲಿ ನಾವು ಉತ್ಪಾದಿಸುತ್ತೇವೆ.
ಇಬ್ಬರಿದ್ದ ನಮ್ಮ ದಿನಗಳ ಶಾಖೆಯು ಬಹಳ ಹಿಂದೆಯೇ ಹೋಗಿಬಿಟ್ಟಿದೆ ಎಂದು ಹೇಳುವ ಅವಶ್ಯವಿಲ್ಲ. ಈಗ 60 ಸದಸ್ಯರಿಗೂ ಮಿಕ್ಕಿರುವ ಒಂದು ಬೆತೆಲ್ ಕುಟುಂಬವು ನಮಗಿದೆ! ನನ್ನ 95ನೇ ವಯಸ್ಸಿನಲ್ಲಿ, ನಾನಿನ್ನೂ ಬ್ರಾಂಚ್ ಆಫೀಸಿನಲ್ಲಿ ಪೂರ್ಣ ಸಮಯದ ಸೇವೆಯಲ್ಲಿರಲು ಮತ್ತು ಭಾರತದ ಬ್ರಾಂಚ್ ಕಮಿಟಿಯ ಸದಸ್ಯನಾಗಿ ಸೇವೆಮಾಡಲು ಸಂತೋಷಿಸುತ್ತೇನೆ. ವಿಶೇಷವಾಗಿ ಈ ಕಡೇ ದಿನಗಳಲ್ಲಿ ಕೊಯ್ಲಿನ ಕೆಲಸವನ್ನು ಕಾಣುವುದು ನನಗೆ ಬಲು ಆನಂದವನ್ನು ಕೊಟ್ಟಿದೆ. ನಿಜವಾಗಿಯೂ ಇದು ಒಂದು ಹರ್ಷಪಡತಕ್ಕ ಸಂಗತಿಯೇ. (w90 1/1)