ನಾವು ಭಾರತವನ್ನು ನಮ್ಮ ಮನೆಯಾಗಿ ಮಾಡಿದೆವು
ಸಾಧ್ಯವಾಗುವಷ್ಟು ನಯದಿಂದ ನನ್ನ ಅಕ್ಕ ಲಿಯೋನ ಮತ್ತು ನಾನು ನಮ್ಮನ್ನು ಕೆಳಗಿಳಿಸಿಕೊಂಡು ನೆಲದ ಮೇಲೆ ನಿರಾತಂಕವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿದೆವು. ಎರಡು ಹೊಳೆಯುವ ಬಾಳೆ ಎಲೆಗಳನ್ನು ನಮ್ಮ ಮುಂದೆ ನೆಲದ ಮೇಲೆ ಆವಿ ಏಳುತ್ತಿರುವ ಅನ್ನ, ವಿವಿಧ ಪಲ್ಯಗಳು, ಚಟ್ನಿ, ಮತ್ತು ಸಿಹಿ ತಿಂಡಿಗಳನ್ನು ಸೇರಿಸಿ ಇಡಲಾಯಿತು. ಭಾರತಕ್ಕೆ ಬಂದು ಇನ್ನೂ ಒಂದು ವಾರವೂ ಆಗಿಲ್ಲದ ಹೆಂಗಸರಾದ ನಮ್ಮಿಬ್ಬರನ್ನು ಒಂದು ಮದುವೆಯೂಟಕ್ಕೆ ಆಮಂತ್ರಿಸಲಾಗಿತ್ತು.
ನಾವು ಸ್ಥಳೀಕ ಜನರು ಊಟ ಮಾಡುವುದನ್ನು ನೋಡುತ್ತಾ, ಅವರು ಮಾಡುತ್ತಿದ್ದಂತೆಯೇ ಬಲಗೈಯ ಬೆರಳುಗಳಿಂದ, ಆಹಾರವನ್ನು ಎತ್ತಿ ತಿನ್ನತೊಡಗಿದೆವು. ಆ ದಿನ ಬಹಳ ಬಿಸಿಯಾದ ತೇವದ ದಿನವಾಗಿತ್ತು ಮತ್ತು ನಾವು ಆ ಊಟದ ಚಪ್ಪರದಡಿ ಕುಳಿತು ಖಾರದ ಮಸಾಲೆಯ ಪಲ್ಯಗಳನ್ನು ಸವಿಯುತ್ತಿದ್ದಾಗ, ಬೆವರು ಮುಖದಿಂದಿಳಿದು ಕೆಳಗೆ ಹರಿಯುತ್ತಿತ್ತು. ಮೆಣಸಿನಿಂದಾಗಿ ನಮ್ಮ ಮೂಗಿನಿಂದ ನೀರು ಸುರಿಯುತ್ತಿತ್ತು. ಆಗ ನಮ್ಮ ತೋರಿಕೆ ರಸಕರವಾಗಿದ್ದಿರಬೇಕು! ಆದರೆ, 38 ವರ್ಷಗಳ ಹಿಂದೆ ನಮ್ಮ ಭಾರತ ಪರಿಚಯದ ಭಾಗವಾಗಿದ್ದ ಈ ಸಂಭವವನ್ನು ನಾವೆಂದಿಗೂ ಮರೆಯಲಾರೆವು.
ಅಂದಿನಿಂದ ಈ ದೇಶವನ್ನು ನಮ್ಮ ಬೀಡಾಗಿ ಮಾಡಪ್ರಯತ್ನಿಸಿರುವ ನಮಗೆ ಭಾರತದೊಂದಿಗೆ ಮತ್ತು ಅದರ ಅನೇಕ ಜನರೊಂದಿಗೆ ಹೆಚ್ಚಿನ ಪರಿಚಯವಾಗಿಯದೆ. ನಮ್ಮ ಬೀಡಾಗಿ ಏಕೆ? ಸಾಹಸ ಮನೋಭಾವಕ್ಕಾಗಿ ಅಲ್ಲ; ನಮಗೊಂದು ನಿರ್ದಿಷ್ಟ ಉದ್ದೇಶವಿತ್ತು. ಆದರೆ, ಪ್ರಥಮವಾಗಿ ನಾವು ಹೇಗೆ ಭಾರತಕ್ಕೆ ಬಂದೆವೆಂದೂ, ಹೊಂದಿಕೊಳ್ಳುವಂತೆ ನಮಗೆ ಯಾವುದು ಸಹಾಯ ಮಾಡಿತೆಂದೂ ಹೇಳುತ್ತೇವೆ.
ಕೆನಡದಲ್ಲಿ ಆದಿ ಜೀವನ
ಕೆನಡದ ಸಸ್ಕ್ಯಾಚುವಾನಿನ ಹಂಬೋಲ್ಟ್ ಎಂಬ ಚಿಕ್ಕ ರೈತ ಸಮಾಜದಲ್ಲಿ ನಾವು ಹುಟ್ಟಿದೆವು. 1930ಗಳಲ್ಲಿ ವ್ಯಾಪಾರದ ಕುಸಿತವಾದಾಗ ಮನೆ ಸಹಾಯಕ್ಕಾಗಿ ಶಾಲೆ ಬಿಟ್ಟು ಕೆಲಸ ಹಿಡಿಯಬೇಕೆಂದು ತಂದೆ ಹೇಳಿದರು. ನಾವು ವಾಸ್ತವವಾಗಿ ಅತ್ತೆವು. ಹೈಸ್ಕೂಲಿಗೆ ಹೋಗುವುದು ನಮ್ಮ ಗುರಿಯಾಗಿತ್ತು, ಆದರೆ ಹಣದ ಆವಶ್ಯಕತೆ ಪ್ರಥಮವಾಯಿತು.
ಎರಡನೆಯ ಲೋಕಯುದ್ಧ ಸಮಯದಲ್ಲಿ, ನಾನು ಮನೆಯಲ್ಲೇ ಉಳಿದು ಕೆಲಸ ಮಾಡುತ್ತಿದ್ದಾಗ ನನ್ನ ಅಕ್ಕ ಲಿಯೋನ ಕೆನಡದ ವಾಯು ಸೇನೆ ಸೇರಿದಳು. ನಾನು ಕ್ರಮವಾಗಿ ಕ್ಯಾಥಲಿಕ್ ಚರ್ಚಿಗೆ ಹೋಗಿ ಕೈರ್ ಗಾಯಕವೃಂದದಲ್ಲಿ ಹಾಡುತ್ತಿದ್ದೆ. ಆದರೆ ಒಮ್ಮೆ ಪೆಂಟಕೋಸ್ಟ್ ಪಂಗಡದವರು ಬಂದಿದ್ದಾಗ ಅವರು ನನಗೆ ಒಂದು ಬೈಬಲನ್ನು ಕೊಟ್ಟರು. ನಾನು ಅದನ್ನು ಕೈರ್ ಕಾರ್ಯಕ್ರಮಗಳಿಗೆ ತೆಗೆದುಕೊಂಡು ಹೋಗಲು ಆರಂಭಿಸಿದೆ. ಹಾಡದೆ ಇರುತ್ತಿದ್ದಾಗ ನಾನು ಅದನ್ನು ಓದುತ್ತಿದ್ದೆ. ನಮ್ಮ ಪ್ಯಾರಿಷ್ ಪಾದ್ರಿಗೆ ಇದು ತಿಳಿದು ಬರಲಾಗಿ ಅವರು ನಮ್ಮ ಮನೆಗೆ ಬಂದರು. ನಾನು ಕೆಟ್ಟ ಪ್ರಭಾವಕ್ಕೆ ಕಾರಣಳೆಂದೂ ಇನ್ನು ಮುಂದೆ ಕೈರಿಗೆ ಬರಬಾರದೆಂದೂ ಅವರು ಹೇಳಿದರು. ವಾಸ್ತವವಾಗಿ, ನನ್ನನ್ನು ಬಹಿಷ್ಕರಿಸಬೇಕೆಂದು ಅವರು ಹೇಳಿದರು. ಅಂದಿನಿಂದ ನಾನು ಚರ್ಚಿಗೆ ಹೋಗಲಿಲ್ಲ.
ಈ ಮಧ್ಯೆ, ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಭೇಟಿಕೊಟ್ಟು ವಿವಿಧ ಬೈಬಲಾಧಾರಿತ ಪುಸ್ತಕಗಳನ್ನು ಕುಟುಂಬಕ್ಕೆ ಕೊಟ್ಟು ಹೋಗುತ್ತಿದ್ದರು. ಕ್ರಮೇಣ ನಾನು ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದೆ. ಲಿಯೋನ ರಜೆಯಲ್ಲಿ ಮನೆಗೆ ಬಂದಾಗ ನಾನು ಕಲಿಯುತ್ತಿದ್ದ ವಿಷಯಗಳನ್ನು ಅವಳಿಗೆ ಹೇಳಿದೆ. ಅವಳು ನನ್ನ ಅಧ್ಯಯನದ ಸಮಯ ಒಟ್ಟಿಗೆ ಕುಳಿತಾಗ ಕಲಿಯುವ ವಿಷಯಗಳು ಅವಳಿಗೂ ಇಷ್ಟವಾಯಿತು. ಆಟವ ನಗರಕ್ಕೆ ಹಿಂದೆ ಹೋದ ಅವಳು, 1945 ರಲ್ಲಿ ಮಿಲಿಟರಿಯಿಂದ ಡಿಸ್ಚಾರ್ಜ್ ಆಗುವ ತನಕ ತನ್ನ ಅಧ್ಯಯನವನ್ನು ಮುಂದುವರಿಸಿದಳು. 1946 ರಲ್ಲಿ ಒಹಾಯೊದ ಕ್ಲೀವ್ಲೆಂಡಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಗ್ಲ್ಯಾಡ್ ನೇಶನ್ಸ್ ಥಿಯೊಕ್ರ್ಯಾಟಿಕ್ ಎಸೆಂಬಿಯ್ಲಲ್ಲಿ ದೀಕ್ಷಾಸ್ನಾನ ಹೊಂದಿದ 2,602 ಮಂದಿಯಲ್ಲಿ ಅವಳು ಮತ್ತು ನಾನು ಸೇರಿದ್ದೆವು.
ನಮ್ಮ ಜೀವನೋದ್ದೇಶವನ್ನು ನಿರ್ಧರಿಸಿದ್ದು
ಲಿಯೋನ ಮತ್ತು ನಾನು 1949 ರಲ್ಲಿ ಆಲ್ಬರ್ಟದ ಕ್ಯಾಲ್ಗರಿಗೆ ಹೋದಾಗ ಅಲ್ಲಿ ಭೇಟಿಯಾದ ಪಯನೀಯರರೆಂದು ಕರೆಯಲ್ಪಡುವ ಅನೇಕ ಪೂರ್ಣ ಸಮಯದ ಶುಶ್ರೂಷಕರು ನಾವು ಪಯನೀಯರ್ ಶುಶ್ರೂಷೆಯಲ್ಲಿ ಸೇರುವರೇ ಪ್ರೋತ್ಸಾಹಿಸಿದರು. ಮೊದಲಾಗಿ ನಾವು ಹಿಂಜರಿದೆವು. ಬ್ಯಾಂಕಿನಲ್ಲಿ ಸ್ವಲ್ಪ ಹಣವನ್ನು ಶೇಖರಿಸುವುದು ಅಗತ್ಯವೆಂದು ನಾವೆಣಿಸಿದೆವು. ಆದರೆ, ಆ ಪ್ರದೇಶದ ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರು ನಮ್ಮನ್ನು ಪ್ರೋತ್ಸಾಹಿಸಲಾಗಿ ಬ್ಯಾಂಕಿನಲ್ಲಿ ಹಣವಿಲ್ಲದೆನೇ ಪಯನೀಯರ್ ಸೇವೆಯನ್ನು ಆರಂಭಿಸಿದೆವು. ಆಗ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧವಿದ್ದ ಕ್ವಿಬೆಕ್ ಪ್ರಾಂತ್ಯದಲ್ಲಿ ಪಯನೀಯರ್ ಸೇವೆ ಮಾಡುವ ಆಮಂತ್ರಣಕ್ಕೆ ನಾವು ಓಗೊಟೆವ್ಟು.
ರೇಲು ಟಿಕೆಟಿಗೆ ಹಣವಿಲ್ಲದ ಲಿಯೋನ, ನಾನು, ಮತ್ತು ಇನ್ನಿಬ್ಬರು ಹುಡುಗಿಯರು, ಕೆನಡದ ಉದ್ದಕ್ಕೂ ಹೋಗುತ್ತಿದ್ದ ವಾಹನಗಳಲ್ಲಿ ಸ್ಥಳ ಪಡೆದು ಪ್ರಯಾಣಿಸಿ ಕಿಬ್ವೆಕಿನ ಮೊಂಟ್ರಿಯಲ್ ನಗರ ಸೇರಿದೆವು. ಸ್ವಲ್ಪದರಲ್ಲಿ, ಅಮೆರಿಕದಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದಿನ ಪದವಿ ವಿತರಣೆಗೆ ಹೋಗುವ ಸಂದರ್ಭ ದೊರೆಯಿತು. ಅಷ್ಟೊಂದು ಜನ ಯುವಕ, ಯುವತಿಯರು ವಿದೇಶದ ಮಿಶನೆರಿ ಸೇವೆಗೆ ಸಿದ್ಧವಾಗಿರುವುದನ್ನು ಕಂಡು ನಾವು ಉತ್ತೇಜಿಸಲ್ಪಟ್ಟೆವು. ಆ ಶಾಲೆಗೆ ಹಾಜರಾಗಲು ನಾವು ಒಡನೆಯೇ ಅರ್ಜಿ ಹಾಕಿದೆವು.
ನಮಗೆ ಕರೆ ಬರುತ್ತದೆಂದು ಸ್ವಪ್ನದಲ್ಲಿಯೂ ಎಣಿಸಿರದ ನಮಗೆ, 1952 ರ ಶರತ್ಕಾಲದಲ್ಲಿ 20 ನೆಯ ಕ್ಲಾಸಿಗೆ ಬರಲು ಕರೆಬಂದಾಗ ನಿಜವಾಗಿಯೂ ಆಶ್ಚರ್ಯವಾಯಿತು. ನಮ್ಮ ಮುಂದಿನ ನೇಮಕ ದೇಶ ಭಾರತವೆಂದು ಹೇಳಲಾದ ನಾವು, ಭಾರತದ ಸಹಪಾಠಿಯೊಬ್ಬಳಿಂದ ಮಲೆಯಾಳ ಭಾಷೆಯಲ್ಲಿ ತುಸು ಮುನ್ಶಿಕ್ಷಣವನ್ನು ಪಡೆಯಲಾರಂಭಿಸಿದೆವು. ಭಾರತದಲ್ಲಿ ಸಾಧ್ಯವಾಗುವಷ್ಟು ಮಂದಿ ಪ್ರಾಮಾಣಿಕ ಹೃದಯಿಗಳಿಗೆ ಬೈಬಲಿನ ಸತ್ಯಜ್ಞಾನವನ್ನು ಕೊಡಲು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿತ್ತು.
ಭಾರತವನ್ನು ನಮ್ಮ ಮನೆಯಾಗಿ ಮಾಡಿಕೊಳ್ಳುವುದು
ಪದವಿ ಪಡೆದ ಮೇಲೆ, 1953 ರಲ್ಲಿ ನಾವು 13 ಮಂದಿ, ಹಡಗಿನಲ್ಲಿ ಹೊರಟೆವು. ಬೊಂಬಾಯಿಗೆ ತಲುಪಲು ನಮಗೆ ಒಂದು ತಿಂಗಳು ಹಿಡಿಯಿತು. ಜನಸಮೂಹ ಮತ್ತು ಭಿಕ್ಷುಕರನ್ನು ನೋಡಿ ನಾವು ಆಶ್ಚರ್ಯ ಪಟ್ಟರೂ ನಮಗೆ ಕ್ರಮೇಣ ಈ ವಿಭಿನ್ನ ಪರಿಸ್ಥಿತಿಗಳು ರೂಢಿಯಾದವು.
ಬೊಂಬಾಯಿಯಿಂದ ನಾವು ರೇಲು ಮೂಲಕ ಕೇರಳಕ್ಕೆ ಹೊರಟೆವು. ನಮ್ಮಲ್ಲಿ ಏಳು ಮಂದಿಯನ್ನು, ಆಗ ಯೆಹೋವನ ಸಾಕ್ಷಿಗಳ ಸಭೆಯೇ ಇಲ್ಲದಿದ್ದ ತ್ರಿಶ್ಯೂರು ಪಟ್ಟಣಕ್ಕೆ ಕಳುಹಿಸಲಾಯಿತು. ನಮಗೆ ಒಂದು ಮಿಶನೆರಿ ಗೃಹ ದೊರೆತರೂ ಅಲ್ಲಿ ಯಾವ ಪೀಠೋಪಕರಣಗಳೂ ಇಲ್ಲದಿದ್ದುದರಿಂದ ಸ್ವಲ್ಪ ಸಮಯ ನೆಲದ ಮೇಲೆ ಚಾಪೆಗಳಲ್ಲಿ ಮಲಗಿದೆವು. ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಾವಿಯ ನೀರನ್ನು ಕುಡಿಯಲಿಕ್ಕಾಗಿ ಕುದಿಸುವುದು, ಸ್ನಾನಕ್ಕಾಗಿ ಹೆಚ್ಚು ನೀರನ್ನು ಬಿಸಿ ಮಾಡುವುದು ಸೇರಿದ್ದವು. ಅಡುಗೆ ಸೇರಿ, ಈ ಎಲ್ಲಾ ಕೆಲಸ ಒಂದು ಬರ್ನರಿನ ಸೀಮೆಯೆಣ್ಣೆಯ ಸ್ಟೋವಿನಲ್ಲಿ ಮಾಡಲ್ಪಡುತ್ತಿತ್ತು.
ಮನೆಯಿಂದ ದೂರದಲ್ಲಿ, ನಾಗ ಮತ್ತು ಇತರ ಹಾವುಗಳಿದ್ದ ಪ್ರದೇಶದಲ್ಲಿ ಪಾಯಿಖಾನೆಯಿತ್ತು. ನಮಗೆ ಹುಡುಗಿಯರಿಗೆ ಹೇಗೆನಿಸುತ್ತಿತ್ತೆಂದು ನೀವು ಭಾವಿಸಬಹುದು. ಅಲ್ಲದೇ, ಆಗಾಗ ಮರದಿಂದ ತೂಗುತ್ತಾ ಮರದಡಿಯಲ್ಲಿ ಅಜಾಗರೂಕರಾಗಿ ದಾಟಿ ಹೋಗುತ್ತಿರುವವರನ್ನು ಕಡಿಯುವ ಹಸುರು ಹಾವುಗಳ ವಿಷಯವೂ ನಮಗೆ ಎಚ್ಚರಿಕೆ ಸಿಕ್ಕಿತು. ನಾವು ರಾತ್ರಿ ವೇಳೆ ಆ ಕಡೆ ಹೋದದ್ದೇ ವಿರಳ ಎಂದು ಹೇಳುವ ಅಗತ್ಯವಿಲ್ಲ. ಹೋಗಲೇ ಬೇಕಾಗಿದ್ದಾಗ, ನೆಲವನ್ನು ತುಂಬಾ ಸದ್ದು ಮಾಡಿ ತುಳಿದು, ಮರಗಳಿಂದ ದೂರವಿರುತ್ತಾ ಹೋಗುತ್ತಿದ್ದೆವು. ಹೌದು, ಸಂಗತಿಗಳು ವ್ಯತ್ಯಾಸವಾಗಿದ್ದವು, ಆದರೆ ನಾವು ನಮ್ಮ ಉದ್ದೇಶವನ್ನು ಮನಸ್ಸಲ್ಲಿ ಇಟ್ಟುಕೊಂಡದರ್ದಿಂದ ಕ್ರಮೇಣ ಸರಿಹೊಂದಿಸಿಕೊಂಡೆವು. ಪರಿಸ್ಥಿತಿಗಳು ಕಷ್ಟಕರವೆಂದು ಹೇಳಿ ನಾವು ನಮ್ಮ ನೇಮಕವನ್ನು ಬಿಟ್ಟು ಹೋಗಬೇಕೆಂಬುದನ್ನು ನಾವೆಂದಿಗೂ ಯೋಚಿಸಲೇ ಇಲ್ಲ.
ಮೊದಲನೆಯ ದಿನವೇ ನಾವು ಸಾರುವ ಕೆಲಸದಲ್ಲಿ ಭಾಗವಹಿಸಲಾರಂಭಿಸಿದೆವು. ಒಡನೆಯೇ ನಮ್ಮ ಸುತ್ತಲೂ ಜನಸಂದಣಿ ಸೇರಿತು. ಅವರ ಕುತೂಹಲ ನಮ್ಮನ್ನು ಎಷ್ಟು ಬೆಚ್ಚಿ ಬೀಳಿಸಿತೆಂದರೆ ನಾವು ಮಿಶನೆರಿ ಗೃಹದ ಭದ್ರತೆಗೆ ಹಿಂದೆ ಓಡಿದೆವು. ಆದರೆ, ಸ್ವಲ್ಪ ಸಮಯಾನಂತರ, ಜನರಿಗೆ ಇತರರಲ್ಲಿದ್ದ ಶುದ್ಧಾಸಕ್ತಿಯನ್ನು ನಾವು ಮಾನ್ಯ ಮಾಡಿದೆವು.
ನಾವು ಬೈಬಲಿನ ವಿಷಯ ಮಾತಾಡುವ ಮೊದಲೇ, ನಿಮ್ಮ ತಂದೆ ತಾಯಿ ಯಾರು? ನೀವೇಕೆ ಇಲ್ಲಿ ಬಂದಿದ್ದೀರಿ? ನಿಮಗೆಷ್ಟು ವಯಸ್ಸು? ನಿಮಗೆ ಸಂಬಳ ಕೊಡುವುದು ಯಾರು? ನಿಮ್ಮ ಆಹಾರ ಏನು? ನಿಮಗೆ ಮದುವೆ ಏಕೆ ಆಗಿಲ್ಲ? ನಿಮಗೆ ಮಕ್ಕಳು ಬೇಡವೇ? ಇವೇ ಮೊದಲಾದ ಪ್ರಶ್ನೆಗಳು ಕೇಳಲ್ಪಡುತ್ತಿದ್ದವು. ನಮ್ಮ ವಿಷಯ ಇಂಥ ವಿವರಗಳನ್ನು ಪಡೆದ ಮೇಲೆ, ಜನರು ಸಾಮಾನ್ಯವಾಗಿ ನಮ್ಮ ಸಂದೇಶವನ್ನು ಕೇಳುತ್ತಿದ್ದರು. ಜನರ ತಿಳಿವಳಿಕೆ ನಮಗೆ ಹೆಚ್ಚಾದಂತೆ ನಾವು ನಮ್ಮ ಹೊಸ ಸುತ್ತುಗಟ್ಟಿನಲ್ಲಿ ಹೆಚ್ಚು ಹಾಯಾಗಿರುವಂತಾಯಿತು.
ಕೇರಳವು ಅತಿ ಸುಂದರ ಸ್ಥಳ. ಅದು ಹಸುರಾಗಿದ್ದು ಅಲ್ಲಿ ತೆಂಗು ಮತ್ತು ಇತರ ತಾಳೆ ಮರಗಳು ತುಂಬಾ. ಅಲ್ಲಿ ಅನೇಕ ವಿಶಾಲ ಬಯಲುಗಳಿದ್ದವು, ಮತ್ತು ಮನೆಮನೆಗಳಿಗೆ ಹೋಗುವಾಗ ಭತ್ತದ ಗದ್ದೆಗಳ ಮಾರ್ಗವಾಗಿ ನಡೆದಾಡುವುದು ತುಂಬ ಶಾಂತಿದಾಯಕವಾಗಿತ್ತು. ಕೆಲವು ಸಲ ಹಳ್ಳಿಗಳನ್ನು ತಲುಪಲು ನಾವು ದೋಣಿಯಲ್ಲಿ ಹಿನ್ನೀರು ಮಾರ್ಗವಾಗಿ ಹೋಗುತ್ತಿದ್ದೆವು. ಅಲ್ಲಿಯ ವಾತಾವರಣ ತೀರಾ ಬಿಗಿತ ಕಡಮೆಯದ್ದಾಗಿತ್ತು. ಹೌದು, ಜನರು ಕೆಲಸಮಗ್ನರಾಗಿದ್ದರೂ ನಮ್ಮನ್ನು ಆಲಿಸಲು ಸಮಯ ತಕ್ಕೊಂಡರು.
ನಮ್ಮ ಪ್ರದೇಶದಲ್ಲಿ ಕ್ರೈಸ್ತಪ್ರಪಂಚದ ಮಿಶನೆರಿಗಳೂ ಇದ್ದರು, ಆದರೆ ಸ್ಥಳೀಕರು ನಮ್ಮ ಮತ್ತು ಅವರ ಮಧ್ಯೆ ಇದ್ದ ವ್ಯತ್ಯಾಸವನ್ನು ಕೂಡಲೇ ನೋಡಲಾರಂಭಿಸಿದರು. ಅವರು ಸಮಾಜಸೇವೆಯ ವಿವಿಧ ರೂಪಗಳಲ್ಲಿ ಭಾಗವಹಿಸಿದರೂ ಬೈಬಲ್ ಕಲಿಸುವಿಕೆಯಲ್ಲಿ ಕೇವಲ ಕೊಂಚವನ್ನೇ ಮಾಡಿದರು. ಮತ್ತು ಅವರಿಗೆ ಅಸದೃಶವಾಗಿ, ನಾವು ದೊಡ್ಡ ಬಂಗೆಗ್ಲಳಲ್ಲಿ ಜೀವಿಸಲೂ ಇಲ್ಲ, ಸೆಕೆಕಾಲದಲ್ಲಿ ಗಿರಿ ವಸತಿಗಳಿಗೆ ಹೋಗಲೂ ಇಲ್ಲ. ವಾಸ್ತವವೇನಂದರೆ, ಕ್ರೈಸ್ತ ಪ್ರಪಂಚದ ಮಿಶನೆರಿಗಳು ಕ್ರೈಸ್ತ ಪ್ರಪಂಚಕ್ಕೆ ಕೆಟ್ಟ ಹೆಸರನ್ನು ತಂದರು.
ನಾವು ಕೇರಳದಲ್ಲಿ ಸುಮಾರು ಎಂಟು ವರ್ಷ ಕಳೆದೆವು. ಆ ಬಳಿಕ ನಮ್ಮನ್ನು, ನಾವು ಈಗಲೂ ಎಲ್ಲಿ ಸೇವೆ ಮಾಡುತ್ತೇವೋ ಆ ಬೊಂಬಾಯಿಗೆ ವರ್ಗಾಯಿಸಲಾಯಿತು. ಈ ದೊಡ್ಡ ಜನನಿಬಿಡವಾದ ಸ್ಥಳಕ್ಕೆ ನಮ್ಮ ವರ್ಗಾವಣೆ ಕೆಲವು ಸರಿಹೊಂದಿಸಿಕೊಳ್ಳುವಿಕೆಯನ್ನು ಕೇಳಿಕೊಂಡದ್ದು ನಿಜ. ಆದರೆ ಈ ನೇಮಕವು ನಮ್ಮನ್ನು ಭಾರತದ ವಿಭಿನ್ನ ಜನತೆಯೊಂದಿಗೆ ಸಂಪರ್ಕಕ್ಕೆ ತಂದಿರುತ್ತದೆ.
ಮೊದಲಿನಿಂದಲೇ, ನಮ್ಮ ಭಾರತದ ಸಹೋದರ, ಸಹೋದರಿಯರ ಉತ್ತಮ ಪರಿಚಯವನ್ನು ನಾವು ಮಾಡಿಕೊಳ್ಳಶಕ್ತರಾದೆವು. ಅವರು ತುಂಬ ಆತಿಥ್ಯ ಮಾಡುವವರಾಗಿದ್ದು ನಮ್ಮನ್ನು ಸದಾ ಅವರೊಂದಿಗೆ ಉಳುಕೊಳ್ಳಲು ಕರೆಯುತ್ತಿದ್ದರು. ಅವರ ಮನೆಗಳು ಸಾಮಾನ್ಯವಾಗಿ ತೀರಾ ಚಿಕ್ಕವು ಮತ್ತು ನಮಗೆ ರೂಢಿಯಾಗಿದ್ದ ಏಕಾಂತತೆ ಅಲ್ಲಿರಲಿಲ್ಲ. ಇದ್ದ ಒಂದೇ ಮಲಗುವ ಕೋಣೆಯಲ್ಲಿ, ಒಂದು ಮೂಲೆಯಲ್ಲಿ ಅಜ್ಜ ಮತ್ತು ನಮ್ಮ ಸುತ್ತಲೂ ನೆಲದ ಮೇಲೆ ಅನೇಕ ಮಕ್ಕಳು ಮಲಗುತ್ತಿದ್ದ ಕೋಣೆಯಲ್ಲಿ ನಾವು ಮಲಗಬೇಕಾಗಿತ್ತು. ಆದರೆ ನಮಗೆ ತೋರಿಸಲ್ಪಟ್ಟ ಪ್ರೀತಿಯಿಂದಾಗಿ ಹೊಂದಾಣಿಕೆ ಸಾಧ್ಯವಾಯಿತು.
ಅನೇಕ ವರ್ಷಗಳಿಂದ, ನಾವು ಎಲ್ಲಿಂದ ಬಂದಿದ್ದೇವೋ ಅದನ್ನು “ಮನೆ” ಎಂದು ಕರೆಯಲೇ ಬಾರದೆಂದು ನಾವು ಕಲಿತಿದಿದ್ದೇವೆ. ನಾವು ಸೇವೆ ಮಾಡುವಂತೆ ನೇಮಿಸಲ್ಪಟಿರುವ ಸ್ಥಳವೇ ನಮ್ಮ ಮನೆ. ವ್ಯತ್ಯಾಸಗಳನ್ನು ಎತ್ತಿ ಹೇಳುವ ಬದಲು ನಮ್ಮ ಅಭಿರುಚಿ ಮತ್ತು ಕಾರ್ಯವಿಧಾನಗಳಲ್ಲಿ ನಾವು ಹೆಚ್ಚಾಗಿ ನಮ್ಮ ಸುತ್ತಲಿನ ಜನರಂತೆ ಇರಲು ಕಲಿತಿದ್ದೇವೆ.
ಇತ್ತೀಚೆಗೆ ನಾವು ಬೊಂಬಾಯಿಯಿಂದ ನಮ್ಮ ಮೊದಲನೆಯ ಸೇವಾಸ್ಥಳವಾದ ಕೇರಳಕ್ಕೆ ಪ್ರಯಾಣ ಬೆಳೆಸಿದೆವು. ಅಲ್ಲಿ ಸ್ಥಿತಿ ಬದಲಾವಣೆಯಾಗಿತ್ತೋ? ನಾವು ಮೊದಲು ಕೇರಳಕ್ಕೆ ಹೋಗಿದ್ದಾಗ ಇಡೀ ರಾಜ್ಯದಲ್ಲಿ 300 ಕ್ಕೂ ಕಡಮೆ ಸಾಕ್ಷಿಗಳಿದ್ದರು. ಆದರೆ ಈಗ ನಾವು ಉಪಸ್ಥಿತರಾಗಿದ್ದ ಡಿಸ್ಟ್ರಿಕ್ಟ್ ಸಮ್ಮೇಳನದಲ್ಲಿ 4,000 ಕ್ಕೂ ಹೆಚ್ಚು ಜನರಿದ್ದರು. ನಾವು 30 ವರ್ಷಗಳ ಹಿಂದೆ ಬೈಬಲ್ ಅಧ್ಯಯನ ನಡೆಸಿದ್ದ ಕೆಲವರು ಇನ್ನೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವುದನ್ನು ನೋಡುವುದು ಎಷ್ಟು ಹರ್ಷದಾಯಕ!
ನಾವು 1953 ರಲ್ಲಿ ಮಿಶನೆರಿ ಸೇವೆಯನ್ನು ಆರಂಭಿಸಿದಾಗ ಕೆನಡದಲ್ಲಿ ಅನೇಕ ಪ್ರಿಯರನ್ನು ಬಿಟ್ಟು ಬಂದೆವು. ಆದರೆ, ಯೇಸುವಿನ ಮಾತುಗಳಿಗನುಸಾರವಾಗಿ, ನಾವು ಅನೇಕರನ್ನು, ತಂದೆ ತಾಯಿಗಳನ್ನು, ಸೋದರ ಸೋದರಿಯರನ್ನು ಸಂಪಾದಿಸಿದೆವು. (ಮಾರ್ಕ 10:28-30) ಮತ್ತು, ಕುರಿಸದೃಶರು ದೇವರ ವಾಕ್ಯದ ಸತ್ಯವನ್ನು ಕಲಿಯಲು ಸಹಾಯ ಮಾಡಿದಷ್ಟಕ್ಕೆ ನಮಗೆ ಆತ್ಮಿಕ ಮಕ್ಕಳನ್ನು ಪಡೆಯುವ ಆಶೀರ್ವಾದವೂ ದೊರೆಯಿತು. ನಮ್ಮ ಉದ್ದೇಶಕ್ಕೆ ಕುರುಡಾಗದೆ ಇದ್ದದ್ದು ನಮಗೆ ಅನೇಕ ಪ್ರತಿಫಲಗಳನ್ನು ನಿಶ್ಚಯವಾಗಿ ತಂದಿದೆ. ಹೀಗೆ, ಯಾವ ವಿಷಾದವೂ ಇಲ್ಲದೇ, ಭಾರತವನ್ನು ನಮ್ಮ ಬೀಡಾಗಿ ಮಾಡಿದ ವಿಷಯವನ್ನು ನಾವು ಸಂತೃಪ್ತಿಯಿಂದ ಹಿಂದೆ ನೋಡುತ್ತೇವೆ!—ಟಿಲಿ ಲ್ಯಾಕ್ಮುತ್ ಹೇಳಿರುವಂತೆ. (g91 2/22)
[ಪುಟ 27 ರಲ್ಲಿರುವಚಿತ್ರ]
ಕೇರಳದಲ್ಲಿ ಒಂದು ಕಾಲುವೆ
ರಬ್ಬರ್ ಮಾಡುವುದು
[Picture of Tillie and Leona Lachmuth]