“ಅಧರ್ಮ ಸ್ವರೂಪ” ನನ್ನು ಬಯಲುಮಾಡುವದು
“ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.”—ಪ್ರಕಟನೆ 18:4.
1, 2. (ಎ)ಅಧರ್ಮ ಸ್ವರೂಪನನ್ನು ಹೇಗೆ ಗುರುತಿಸ ಸಾಧ್ಯವಿದೆ? (ಬಿ) ದೇವರನ್ನು ಸೇವಿಸುತ್ತೇವೆಂದು ಹೇಳಿ ರಕ್ತಾಪರಾಧಿಗಳಾಗಿರುವವರ ಕುರಿತು ದೇವರ ವೀಕ್ಷಣೆಯೇನು? (ಮತ್ತಾಯ 7:21-23)
ದೇವರ ವಾಕ್ಯವು “ಅಧರ್ಮ ಸ್ವರೂಪ”ನ ಬರೋಣವನ್ನು ಮುಂತಿಳಿಸಿತ್ತು. ಈ ನಿಯಮರಹಿತನು ದೇವರ ಸ್ವರ್ಗೀಯ ವಧಕಾರನಾದ ಕ್ರಿಸ್ತ ಯೇಸುವಿನ ಮೂಲಕ ‘ಸಂಹರಿಸಲ್ಪಟ್ಟು ಇಲ್ಲದಂತೆ ಮಾಡಲ್ಪಡುವನು’ ಎಂದೂ ಅದು ಮುಂತಿಳಿಸಿತ್ತು. (2 ಥೆಸಲೊನೀಕ 2:3-8) ಹಿಂದಿನ ಲೇಖನಗಳು ತಿಳಿಸಿರುವಂತೆ, ಈ ಅಧರ್ಮ ಸ್ವರೂಪನು ಕ್ರೈಸ್ತ ಪ್ರಪಂಚದ ಪುರೋಹಿತ ವರ್ಗವೇ. ಬಹು ಪೂರ್ವದಲ್ಲೀ, ಇವರು ದೇವರ ವಾಕ್ಯದ ಸತ್ಯಗಳನ್ನು ತ್ಯಜಿಸಿ ವಿಧರ್ಮಿ ಬೋಧನೆಗಳಾದ ತ್ರಯೈಕ್ಯ, ನರಕಾಗ್ನಿ ಮತ್ತು ಆತ್ಮದ ಅಮರತ್ವ ಮುಂತಾದವುಗಳನ್ನು ಉಪಯೋಗಿಸಿಕೊಂಡರು. ಇದಲ್ಲದೆ, ದೇವರ ನಿಯಮಗಳಿಗೆ ವಿರುದ್ಧವಾದ ಕೆಲಸಗಳನ್ನು ಅವರು ಉತ್ಪಾದಿಸಿದರು. ಪೌಲನು ತೀತನಿಗೆ ಯಾರ ಕುರಿತು ಎಚ್ಚರಿಸಿದನೋ ಅವರಂತೆ ಇವರೂ “ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರ್ಯಗಳಿಗೆಲ್ಲಾ ಅಪ್ರಯೋಜಕರೂ ಆಗಿರುವದರಿಂದ ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.”—ತೀತ 1:16.
2 ಯೇಸು ಹೇಳಿದ್ದು: “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” ಸುಳ್ಳು ಪ್ರವಾದಿಗಳು “ಕೆಟ್ಟ ಫಲ”ವನ್ನು ಕೊಡುವರು. (ಮತ್ತಾಯ 7:15-17) ಪುರೋಹಿತರ ಕೆಟ್ಟ ಫಲದ ಒಂದು ನಿದರ್ಶನ ಅವರ ಭಾರೀ ರಕ್ತಪರಾಧವೇ. ಶತಮಾನಗಳಿಂದ ಅವರು ಕೋಟ್ಯಾಂತರ ಜನರ ರಕ್ತ ಸುರಿಸಿರುವ ಧಾರ್ಮಿಕ ಯುದ್ಧ, ಮಠೀಯ ನ್ಯಾಯಸ್ಥಾನ ಮತ್ತು ಯುದ್ಧಗಳನ್ನು ಬೆಂಬಲಿಸಿದ್ದಾರೆ. ಒಂದೇ ಧರ್ಮದ ಸದಸ್ಯರು ಒಬ್ಬರನ್ನೊಬ್ಬರು ಕೊಂದುಕೊಂಡ ಯುದ್ಧಗಳಲ್ಲಿ ಅವರು ದ್ವಿಪಕ್ಷಗಳಿಗೂ ಪ್ರಾರ್ಥಿಸಿ ಅವರನ್ನು ಆಶೀರ್ವದಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪೌಲನಾದರೋ, “ನಾನು ಸಕಲ ಜನರ ರಕ್ತಪರಾಧ ದೋಷದಿಂದ ವಿಮುಕ್ತನು” ಎಂದು ಹೇಳ ಸಾಧ್ಯವಾಯಿತು. (ಅಪೊಸ್ತಲರ ಕೃತ್ಯ 20:26) ಆದರೆ ಪುರೋಹಿತರು ಹಾಗಲ್ಲ. ಆದುದರಿಂದ ಇಂಥವರಿಗೆ ದೇವರು ಹೇಳುವುದು: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.”—ಯೆಶಾಯ 1:15.
3. ಭೂವ್ಯಾಪಕ ವಿಶಿಷ್ಟತೆಯ ಯಾವ ಸಂಭವಗಳು ಧಾವಿಸುತ್ತಾ ಬರುತ್ತಿವೆ?
3 ಈ ಅಧರ್ಮ ಸ್ವರೂಪನಿಗೆ ದೇವರು ತೀರ್ಪು ವಿಧಿಸುವ ಸಮಯ ಧಾವಿಸಿ ಬರುತ್ತಿದೆ. ಶೀಘ್ರವೇ, ಯೇಸು ಮುಂತಿಳಿಸಿದಂತೆ, “ಲೋಕಾದಿಯಿಂದ ಇಂದಿನ ವರೆಗೆ ಸಂಭವಿಸಿರದ ಅಥವಾ ಪುನಃ ಸಂಭವಿಸದ ಮಹಾ ಸಂಕಟವು ಬರುವುದು.” (ಮತ್ತಾಯ 24:21) ಈ ಅಭೂತಪೂರ್ವ ಕ್ಲೇಶಕಾಲವು ಮಿಥ್ಯಾಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ವಧೆಯೊಂದಿಗೆ ಆರಂಭಗೊಳ್ಳುವದು. ಆಗ ರಾಜಕೀಯ ಶಕ್ತಿಗಳು “ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16) ಈ ಮಹಾ ಸಂಕಟವು, ಸೈತಾನನ ಲೋಕದ ಉಳಿದ ಭಾಗವು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವಾದ ಅರ್ಮಗೆದ್ದೋನಿನಲ್ಲಿ ನಾಶವಾಗುವಾಗ ಅಂತ್ಯಗೊಳ್ಳುವದು.—ಪ್ರಕಟನೆ 16:14, 16; 19:11-21.
ಇತರರನ್ನು ಪ್ರೀತಿಸಲು ಹಂಗಿನವರು
4. ದೇವರನ್ನು “ಆತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವವರು ಏನು ಮನಸ್ಸಿನಲ್ಲಿಡತಕ್ಕದ್ದು?
4 ಈ ಲೋಕ ಅಲುಗಾಟದ ಸಂಭವಗಳು ಬೇಗನೇ ನಿವಾಸಿತ ಭೂಮಿಯಲ್ಲಿ ಬರಲಿರುವದರಿಂದ “ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವವರು” ಯಾವ ಹಂಗಿನೊಳಗಿದ್ದಾರೆ? (ಯೋಹಾನ 4:23) ಒಂದನೆಯದ್ದು, ಅವರು ಯೇಸು ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವನಂದದ್ದು: “ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. . . . ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದೇ ನಾನು ಕೊಡುವ ಆಜ್ಞೆಯಾಗಿದೆ. ಪ್ರಾಣವನ್ನೇ ಸ್ನೇಹಿತರಿಗಾಗಿ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.”—ಯೋಹಾನ 15:10-14; 1 ಯೋಹಾನ 5:3.
5, 6. (ಎ)ತಮ್ಮನ್ನು ಗುರುತಿಸುವ ಯಾವದನ್ನು ಮಾಡುವಂತೆ ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು? (ಬಿ) ಇದು ಯಾವ ವಿಧದಲ್ಲಿ ಹೊಸ ಆಜ್ಞೆಯಾಗಿದೆ?
5 ಹೀಗೆ ಸತ್ಯ ಕ್ರೈಸ್ತರು ಇತರರನ್ನು, ವಿಶೇಷವಾಗಿ, ಎಲ್ಲಾ ದೇಶಗಳ ತಮ್ಮ ಸಹೋದರ, ಸಹೋದರಿಯರನ್ನು ಪ್ರೀತಿಸುವ ಹಂಗಿಗೆ ಒಳಗಾಗಿದ್ದಾರೆ. (ಅಪೊಸ್ತಲರ ಕೃತ್ಯ 10:34; ಗಲಾತ್ಯ 6:10; 1 ಯೋಹಾನ 4:20, 21) ಹೌದು, ಜೊತೆ ಕ್ರೈಸ್ತರ ಮಧ್ಯೆ “ಯಥಾರ್ಥವಾದ ಪ್ರೀತಿ” ಇರತಕ್ಕದ್ದು. (1 ಪೇತ್ರ 4:8) ಈ ರೀತಿಯ ಭೂವ್ಯಾಪಕ ಪ್ರೀತಿ ಅವರು ಸತ್ಯಾರಾಧಕರೆಂಬದನ್ನು ಗುರುತಿಸುತ್ತದೆ, ಏಕೆಂದರೆ ಯೇಸು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ. ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹಾ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:34, 35.
6 ಈ ಆಜ್ಞೆಯಲ್ಲಿ ಹೊಸತೇನು? ಮೋಶೆಯ ಧರ್ಮಶಾಸ್ತ್ರದಲ್ಲಿ ಯೆಹೂದ್ಯರಿಗೆ, “ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ಆಜ್ಞೆ ಕೊಡಲ್ಪಟ್ಟಿರಲಿಲ್ಲವೇ? (ಯಾಜಕಕಾಂಡ 19:18) ಹೌದು, ಆದರೆ “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ” ಎಂದು ಹೇಳಿದಾಗ ಯೇಸು ಏನನ್ನೋ ಅದಕ್ಕೆ ಕೂಡಿಸಿದನು. ಅವನ ಪ್ರೀತಿಯಲ್ಲಿ ಇತರಿಗಾಗಿ ತನ್ನ ಜೀವವನ್ನು ಅರ್ಪಿಸುವುದು ಸೇರಿತ್ತಾದರ್ದಿಂದ ಅವನ ಶಿಷ್ಯರೂ ತದ್ರೀತಿ ಅರ್ಪಿಸಲು ಬಯಸತಕ್ಕದ್ದು. (ಯೋಹಾನ 15:13) ಮೋಶೆಯ ಧರ್ಮ ಶಾಸ್ತ್ರ ಅದನ್ನು ಅವಶ್ಯಪಡಿಸದರ್ದಿಂದ ಇದು ಹೆಚ್ಚು ಉನ್ನತ ಮಟ್ಟದ ಪ್ರೀತಿಯಾಗಿತ್ತು.
7. ಈ ಶತಮಾನದಲ್ಲಿ ಯಾವ ಧರ್ಮ ಪ್ರೀತಿಯ ನಿಯಮಕ್ಕೆ ವಿಧೇಯತೆ ತೋರಿಸಿದೆ?
7 ನಮ್ಮ ಶತಮಾನದಲ್ಲಿ ಯಾವ ಧರ್ಮ ಈ ಪ್ರೀತಿಯ ನಿಯಮಕ್ಕೆ ವಿಧೇಯತೆ ತೋರಿಸಿದೆ? ಕ್ರೈಸ್ತ ಪ್ರಪಂಚದ ಧರ್ಮಗಳಲ್ಲವೆಂಬದು ನಿಶ್ಚಯ. ಏಕಂದರೆ ಅವರು ಎರಡು ಲೋಕಯುದ್ಧಗಳಲ್ಲಿ ಮತ್ತು ಇತರ ಹೋರಾಟಗಳಲ್ಲಿ ಒಬ್ಬರನ್ನೊಬ್ಬರು ಕೋಟಿಗಟ್ಟಲೆಯಾಗಿ ಹತಿಸಿದ್ದಾರೆ. ಆದರೆ ಯೆಹೋವನ ಸಾಕ್ಷಿಗಳು ಭೂವ್ಯಾಪಕವಾಗಿ ಪ್ರೀತಿಯ ನಿಯಮವನ್ನು ಪಾಲಿಸಿದ್ದಾರೆ. “ಇವರು ಲೋಕದವರು ಆಗಿರಬಾರದು” ಎಂದು ಯೇಸು ತನ್ನ ಶಿಷ್ಯರ ಕುರಿತು ಹೇಳಿದ್ದರಿಂದ ಸಾಕ್ಷಿಗಳು ರಾಷ್ಟ್ರಗಳ ಯುದ್ಧದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ತೋರಿಸಿದ್ದಾರೆ. (ಯೋಹಾನ 17:16) ಹೀಗೆ, ಅವರು ಪೌಲನಂತೆ “ನಾನು ಸಕಲ ಜನರ ರಕ್ತ ದೋಷದಿಂದ ವಿಮುಕ್ತನು” ಎಂದು ಹೇಳಬಲ್ಲರು. ಇದರ ಉದಾಹರಣೆಗಾಗಿ, ಯೆಹೋವನ ಸೇವಕರು ನವಂಬರ 27, 1921ರಲ್ಲಿ ವಾಷಿಂಗ್ಟನ್ ಡಿ. ಸಿ. ಯಲ್ಲಿ ನಡೆದ ಸಮ್ಮೇಲನದಲ್ಲಿ ಆಯ್ದುಕೊಂಡ ನಿರ್ಧಾರದ ಆರಂಭದ ಭಾಗವನ್ನು ಗಮನಿಸಿರಿ:
“ನಮ್ಮ ಕರ್ತನಾದ ಯೇಸುವಿನ ಮತ್ತು ಅವನ ಅಪೊಸ್ತಲರ ಬೋಧನೆಗಳನ್ನು ಅನುಸರಿಸಲು ಯಥಾರ್ಥತೆಯಿಂದ ಪ್ರಯತ್ನಿಸುವ ಕ್ರೈಸ್ತರಾದ ನಾವು ಹೀಗೆ ನಂಬುತ್ತೇವೆ: “ಯುದ್ಧವು ಬರ್ಬರತದ್ವ ಅವಶಿಷ್ಟ, ನೀತಿ ಸ್ವಭಾವದ ನಾಶಕ ಮತ್ತು ಕ್ರೈಸ್ತರಿಗೆ ನಿಂದೆಯಾಗಿದೆ. ಕರ್ತನಾದ ಯೇಸು ಕ್ರಿಸ್ತನು ಕಲಿಸಿದ ಸೂತ್ರಗಳು ಸಮರ್ಪಿತ ಕ್ರೈಸ್ತರು ಯಾವ ರೂಪದಲ್ಲಿಯೂ ಯುದ್ಧ, ರಕ್ತಪಾತ ಅಥವಾ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗವಹಿಸುವುದನ್ನು ಪ್ರತಿಬಂಧಿಸುತ್ತದೆ.”
8. 2ನೇ ಲೋಕಯುದ್ಧ ಕಾಲದಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಐತಿಹಾಸಿಕ ದಾಖಲೆ ಏನನ್ನುತ್ತದೆ?
8 ಈ ವೀಕ್ಷಣವು 2ನೇ ಲೋಕಯುದ್ಧದಲ್ಲಿ ಹೇಗೆ ಅನ್ವಯಿಸಲ್ಪಟ್ಟಿತು? ಮಾನವ ಇತಿಹಾಸದ ಅತ್ಯಂತ ಕೆಟ್ಟದಾಗಿದ್ದ ಆ ಯುದ್ಧದಲ್ಲಿ ಸುಮಾರು 5 ಕೋಟಿ ಜನರು ಕೊಲ್ಲಲ್ಪಟ್ಟರು. ಆದರೆ ಯೆಹೋವನ ಸಾಕ್ಷಿಗಳಿಂದ ಒಬ್ಬನೂ ಕೊಲ್ಲಲ್ಪಡಲಿಲ್ಲ! ಉದಾಹರಣೆಗೆ, ಜರ್ಮನ್ ಪಾದ್ರಿವರ್ಗದಲ್ಲಿ ಹೆಚ್ಚುಕಡಿಮೆ ಎಲ್ಲರೂ ಆಸಕ್ತ ಅಥವಾ ಅನಾಸಕ್ತ ರೀತಿಯಲ್ಲಿ ನಾಝೀವಾದವನ್ನು ಬೆಂಬಲಿಸಿದರು. ಇದಕ್ಕೆ ವೈದೃಶ್ಯವಾಗಿ, ನಾಝೀ ಆಳಿಕೆಯಲ್ಲಿದ್ದ ಯೆಹೋವನ ಸಾಕ್ಷಿಗಳು ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿ ಹಿಟ್ಲರನಿಗೆ ವಂದಿಸಲು, ಅವನ ಮಿಲಿಟರಿ ಸಂಸ್ಥೆಯ ಭಾಗವಾಗಲು ನಿರಾಕರಿಸಿದರು. ಹೀಗೆ, ಅವರು, ಇತರ ದೇಶಗಳ ತಮ್ಮ ಆತ್ಮಿಕ ಸಹೋದರರನ್ನಾಗಲಿ, ಇತರ ಯಾರನ್ನಾಗಲಿ ಕೊಲ್ಲಲಿಲ್ಲ. ಮತ್ತು ಇತರ ಎಲ್ಲಾ ದೇಶಗಳ ಯೆಹೋವನ ಸಾಕ್ಷಿಗಳೂ ತಟಸ್ಥರಾಗಿದ್ದರು.
9. ನಾಝೀ ಆಳಿಕೆಯ ಕೆಳಗೆ, ಜರ್ಮನಿ ಮತ್ತು ಆಸ್ಟ್ರಿಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನು ಸಂಭವಿಸಿತು?
9 ಅನೇಕ ಯೆಹೋವನ ಸಾಕ್ಷಿಗಳು ಪ್ರೀತಿಯ ನಿಯಮವನ್ನು ಪಾಲಿಸುತ್ತಾ ತಮ್ಮ ಸ್ನೇಹಿತರ ಪರವಾಗಿ ತಮ್ಮ ಆತ್ಮಗಳನ್ನು ಅರ್ಪಿಸಿದ್ದಾರೆ. ಫ್ರೆಡರಿಕ್ ಝಿಪ್ಪೆಲ್ ಬರೆದ ಜರ್ಮನಿಯಲ್ಲಿ ಚರ್ಚುಗಳ ಹೋರಾಟ ಎಂಬ ಜರ್ಮನ್ ಪುಸ್ತಕದ ಪುನರ್ವಿಮರ್ಶೆ ಸಾಕ್ಷಿಗಳ ಕುರಿತು ಹೇಳುವುದು: “ಈ ಚಿಕ್ಕ ಧಾರ್ಮಿಕ ಗುಂಪಿನ 97 ಶೇಕಡಾ ಸದಸ್ಯರು ನ್ಯಾಷನಲ್ ಸೋಷಲಿಸ್ಟ್ [ನಾಝೀ] ಹಿಂಸೆಗೆ ಬಲಿಬಿದ್ದರು. ಇವರಲ್ಲಿ ಮೂರರಲ್ಲಿ ಒಂದಂಶ ಮರಣದಂಡನೆ, ಇತರ ಹಿಂಸಾತ್ಮಕ ಕೃತ್ಯಗಳು, ಹಸಿವೆ, ರೋಗ ಅಥವಾ ಗುಲಾಮ ವೃತ್ತಿಯಿಂದ ಕೊಲ್ಲಲ್ಪಟ್ಟರು. ಈ ದಾಸ್ಯದ ಕಾಠಿಣ್ಯವು ಅಭೂತ ಪೂರ್ವವಾಗಿತ್ತು ಮತ್ತು ನ್ಯಾಷನಲ್ ಸೋಷಲಿಸ್ಟ್ ವಿಚಾರಗಳೊಂದಿಗೆ ಹೊಂದಿಸಲಾಗದ, ಒಪ್ಪಂದ ಮಾಡಲಾಗದ ನಂಬಿಕೆಯ ಪರಿಣಾಮವಾಗಿ ಬಂತು.” ಆಸ್ಟಿಯ್ರದಲ್ಲಿ 25 ಶೇಕಡಾ ಯೆಹೋವನ ಸಾಕ್ಷಿಗಳು ಹತಿಸಲ್ಪಟ್ಟರು, ಹೊಡೆದು ಕೊಲ್ಲಲ್ಪಟ್ಟರು ಅಥವಾ ರೋಗಗಳಿಂದ ಅಥವಾ ನಾಝೀ ಶಿಬಿರಗಳಲ್ಲಿ ಬಳಲಿಕೆಯಿಂದ ಸತ್ತರು.
10. ಪ್ರೀತಿಯ ನಿಯಮಕ್ಕೆ ವಿಧೇಯತೆಯಿಂದ ಸತ್ತವರಲ್ಲಿ ಯಾವ ಭರವಸೆ ಇತ್ತು?
10. ಪ್ರೀತಿಯ ನಿಯಮಕ್ಕೆ ವಿಧೇಯರಾದ ಕಾರಣ ಹುತಾತ್ಮರಾದವರು, “ಈ ಕೆಲಸವನ್ನೂ ಇದರಲ್ಲಿ [ಅವರು] ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ [ದೇವರು] ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ಭರವಸೆಯಿಂದಿದ್ದರು. (ಇಬ್ರಿಯ 6:10) “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತದೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಅವರಿಗೆ ತಿಳಿದಿತ್ತು. (1 ಯೋಹಾನ 2:17) ಅವರಿಗೆ ಅನಂತ ಜೀವನದೊಂದಿಗೆ ಪುನರುತ್ಥಾನವಾಗುವ ನಿಶ್ಚಯ ನಿರೀಕ್ಷೆ ಇತ್ತು.—ಯೋಹಾನ 5:28, 29; ಅಪೊಸ್ತಲರ ಕೃತ್ಯ 24:15.
11. ಯೆಹೋವನ ಸಾಕ್ಷಿಗಳು ಯಾವ ವಿಧದಲ್ಲಿ ಅದ್ವಿತೀಯರು, ಮತ್ತು ಅವರಲ್ಲಿ ಯಾವ ಪ್ರವಾದನೆ ನೆರವೇರುತ್ತದೆ?
11 ಪೇತ್ರ ಮತ್ತು ಇತರ ಅಪೊಸ್ತಲರು ಒಂದು ಉಚ್ಛ ನ್ಯಾಯಾಲಯಕ್ಕೆ ಹೇಳಿದ, “ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕಲ್ಲಾ” ಎಂಬ ನಿಯಮವನ್ನು ಪಾಲಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಅದ್ವಿತೀಯರು. (ಅಪೊಸ್ತಲರ ಕೃತ್ಯ 5:29) ಯೆಹೋವನ ಸಾಕ್ಷಿಗಳು ಇದನ್ನು ಮಾಡುವದರಿಂದ, “ದೇವರು ತನಗೆ ವಿಧೇಯರಾಗಿರುವವರಿಗೆ ದಯಪಾಲಿಸಿರುವ ಪವಿತ್ರಾತ್ಮ”ದ ಬೆಂಬಲ ಅವರಿಗಿದೆ. (ಅಪೊಸ್ತಲರ ಕೃತ್ಯ 5:32) ಯೆಶಾಯ 2:2-4ರ ಪ್ರವಾದನೆಯನ್ನು ಅವರು ನೆರವೇರಿಸುವಂತೆ ಸಾಧ್ಯಮಾಡುವುದು ಈ ಶಕ್ತಿಯೇ. ಆ ಪ್ರವಾದನೆಯು, ನಮ್ಮ ಸಮಯದಲ್ಲಿ ಸತ್ಯಾರಾಧನೆ ಪುನಃಸ್ಥಾಪಿಸಲ್ಪಡುವದೆಂದೂ ಸರ್ವರಾಷ್ಟ್ರಗಳ ಮತ್ತು ಧರ್ಮಗಳ ಜನರು ಅದರ ಕಡೆಗೆ ಹರಿದು ಬರುವವೆಂದೂ ಮುಂತಿಳಿಸಿತು. ಇದರ ಒಂದು ಪರಿಣಾಮ ಹೀಗಿರುವದು: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡಿಯುವದೇ ಇಲ್ಲ.” ಯೆಹೋವನ ಸೇವಕರು ಶಾಂತಿಭರಿತ ನೂತನ ಜಗತ್ತಿನಲ್ಲಿ ಜೀವಿಸಲು ತಯಾರಿರುವದರಿಂದ ಅವರು ಇನ್ನು ಮುಂದೆ ಯುದ್ಧವನ್ನು ಕಲಿಯರು. ಅವರು ಪ್ರೀತಿಯ ನಿಯಮವನ್ನು ಕಲಿಯುತ್ತಾರೆ.—ಯೋಹಾನ 13:34, 35.
12. ಪ್ರೀತಿಯ ನಿಯಮವನ್ನು ಪಾಲಿಸುವವರು ಇತರರಿಗೆ ಏನು ಮಾಡತಕ್ಕದ್ದು?
12 ಕ್ರೈಸ್ತ ಪ್ರೇಮದಲ್ಲಿ ‘ನೆರೆಯವನನ್ನು ನಿನ್ನಂತೆಯೇ ಪ್ರೀತಿಸುವುದು’ ಸೇರಿರುವುದರಿಂದ, ದೇವರ ಸೇವಕರು ತಮಗೆ ತಿಳಿದಿರುವ ವಿಷಯಗಳ ಕುರಿತು ಸ್ವಾರ್ಥಿಗಳಾಗ ಸಾಧ್ಯವಿಲ್ಲ. (ಮತ್ತಾಯ 22:39) ದೇವರನ್ನು ಸೇವಿಸಿ, ಆತನ ನೂತನ ಜಗತ್ತಿನಲ್ಲಿ ಜೀವಿಸ ಬಯಸುವ ಇನ್ನೂ ಅನೇಕರಿದ್ದಾರೆ. ಇನ್ನೂ ಸಮಯವಿರುವಾಗಲೇ ಇವರೂ ಪ್ರೀತಿಯ ನಿಯಮದ ಮತ್ತು ವಿಶ್ವ ಸಾರ್ವಭೌಮನಾದ ಯೆಹೋವ ದೇವರಿಗೆ ಸಂಬಂಧಿಸಿರುವ ಇತರ ಅನೇಕ ಸತ್ಯಗಳ ಕುರಿತು ಕಲಿಯುವ ಅವಶ್ಯಕತೆ ಇದೆ. ಯೆಹೋವನೊಬ್ಬನೇ ಆರಾಧನೆಗೆ ಯೋಗ್ಯನು ಮತ್ತು ಆ ಆರಾಧನೆ ಹೇಗೆ ಸಲ್ಲಿಸಲ್ಪಡಬೇಕೆಂದು ಅವರಿಗೆ ಕಲಿಸಲ್ಪಡಬೇಕು. (ಮತ್ತಾಯ 4:10; ಪ್ರಕಟನೆ 4:11) ಈ ವಿಷಯಗಳನ್ನು ಆಗಲೇ ಕಲಿತಿರುವವರು, ಇತರರೂ ಯೆಹೋವನ ಅನುಗ್ರಹಕ್ಕೆ ಪಾತ್ರರಾಗುವಂತೆ, ಅವುಗಳ ಕುರಿತು ಅವರಿಗೆ ಕಲಿಸುವ ಹಂಗಿಗೊಳಗಾಗಿದ್ದಾರೆ.—ಯೆಹೆಜ್ಕೇಲ 33:7-9, 14-16.
ಅಧರ್ಮಸ್ವರೂಪನನ್ನು ಬಯಲುಮಾಡುವುದು
13. ನಮ್ಮ ಲೋಕ ವ್ಯಾಪಕ ಸಾಕ್ಷಿಯ ಭಾಗವಾಗಿ ನಾವೇನು ಪ್ರಕಟಿಸತಕ್ಕದ್ದು, ಮತ್ತು ಏಕೆ?
13 “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವುದು” ಎಂದು ಯೇಸುವು ಹೇಳಿದನು. (ಮತ್ತಾಯ 24:14) ಈ ಲೋಕವ್ಯಾಪಕ ಸಾಕ್ಷಿಕಾರ್ಯದ ಭಾಗವಾಗಿ, ಸುಳ್ಳು ಧರ್ಮದ ವಿರುದ್ಧ, ವಿಶೇಷವಾಗಿ, ಕ್ರೈಸ್ತ ಪ್ರಪಂಚದ ವೈದಿಕ ವರ್ಗದ ವಿರುದ್ಧ ದೇವರ ತೀರ್ಪನ್ನು ಪ್ರಕಟಿಸಲು ಆತನ ಸೇವಕರು ಹಂಗಿನವರಾಗಿದ್ದಾರೆ. ಇವರು ಕ್ರೈಸ್ತರೆಂದು ಹೇಳಿಕೊಳ್ಳುವದರಿಂದ ದೇವರ ದೃಷ್ಟಿಯಲ್ಲಿ ಹೆಚ್ಚು ನಿಂದಾರ್ಹರು. ದೇವರನ್ನು ಸೇವಿಸ ಬಯಸುವವರು ಅವರ ಪ್ರಭಾವದೊಳಗಿಂದ ಹೊರಗೆ ಬಂದು ಪಾರಾಗುವಿಕೆಗೆ ತಕ್ಕ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಇವರನ್ನು ಬಯಲು ಮಾಡತಕ್ಕದ್ದು. ಯೇಸು ಹೇಳಿದಂತೆ, “ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು.”—ಯೋಹಾನ 8:32.
14. ಸುಳ್ಳುಧರ್ಮದ ವಿಷಯದಲ್ಲಿ ಯಾವ ಸ್ಪಷ್ಟ ಸಂದೇಶ ಸಾರಲ್ಪಡತಕ್ಕದ್ದು?
14 ಹೀಗೆ, ಯೆಹೋವನ ಸಾಕ್ಷಿಗಳು ಮಿಥ್ಯಾಧರ್ಮದ ಕುರಿತಾದ ಈ ಕೆಳಗಿನ ಪ್ರೇರಿತ ಸಂದೇಶವನ್ನು ಪ್ರಸಿದ್ಧಿಪಡಿಸತಕ್ಕದ್ದು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು. ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು. . . . ಅವಳಿಗೆ ಕೊಲೆ, ದು:ಖ, ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು. ಅವಳಿಗೆ ದಂಡನೆ ವಿಧಿಸಿದ ದೇವರಾಗಿರುವ ಕರ್ತನು (ಯೆಹೋವನು) ಬಲಿಷ್ಟನಾಗಿದ್ದಾನೆ.”—ಪ್ರಕಟನೆ 18:4-8.
15. ಯೆಹೋವನ ಕಾಲನಿಯಾಮಕ ಪಟ್ಟಿಯಲ್ಲಿ 1914ನೇ ವರ್ಷವು ಹೇಗೆ ಪಾತ್ರ ವಹಿಸಿತು, ಮತ್ತು 1ನೇ ಲೋಕ ಯುದ್ಧಾನಂತರ ಏನು ಪರಿಣಮಿಸಿತು?
15 ಈ ವಿಷಯ ವ್ಯವಸ್ಥೆಯ “ಕಡೇ ದಿವಸಗಳು” ಆ ನಿರ್ಣಾಯಕ ವರ್ಷವಾದ 1914ರಲ್ಲಿ ಆರಂಭಗೊಂಡವೆಂದು ಬೈಬಲ್ ಭವಿಷ್ಯವಾಣಿಗಳು ತೋರಿಸುತ್ತವೆ. (2 ತಿಮೊಥಿ 3:1-5, 13; ಮತ್ತಾಯ 24:3-13) ಆ ವರ್ಷದಿಂದ ನಾವು “ಅಂತ್ಯಕಾಲ” ದಲ್ಲಿದ್ದೇವೆ. (ದಾನಿಯೇಲ 12:4) 1ನೇ ಲೋಕ ಯುದ್ಧ ಮುಗಿದ ಕೂಡಲೇ, ಯೆಹೋವನ ಸೇವಕರು ಆತನ ಕಾಲನಿಯಾಮಕ ಪಟ್ಟಿಗೆ ಹೊಂದಿಕೆಯಲ್ಲಿ, ಮತ್ತಾಯ 24:14 ಮುಂತಿಳಿಸಿದಂತೆ ದೇವರ ರಾಜ್ಯದ ಸುವಾರ್ತೆಯ ಪ್ರಕಟನೆಯನ್ನು ವಿಕಸಿಸಲು ಉತ್ಸಾಹದಿಂದ ತೊಡಗಿದರು. ಅವರು ಸುಳ್ಳು ಧರ್ಮವನ್ನು, ವಿಶೇಷವಾಗಿ, ಕ್ರೈಸ್ತ ಪ್ರಪಂಚದ ನಿಯಮರಹಿತ ಪಾದ್ರಿವರ್ಗವನ್ನು ಹೆಚ್ಚು ಬಲವಾಗಿ ಬಯಲುಮಾಡ ತೊಡಗಿದರು.
16. ಅಧರ್ಮಸ್ವರೂಪನ ಬಯಲು ಮಾಡುವಿಕೆಯು 70ಕ್ಕೂ ಹೆಚ್ಚು ವರ್ಷಗಳಲ್ಲಿ ಹೇಗೆ ಶಕ್ತಿಶಾಲಿಯಾಗಿದೆ?
16 ಈಗ 70ಕ್ಕೂ ಹೆಚ್ಚು ವರ್ಷಗಳಿಂದ, ಹೆಚ್ಚೆಚ್ಚು ಶಕ್ತಿಯಿಂದ, ದೇವರ ಸೇವಕರು ಈ ಅಧರ್ಮ ಸ್ವರೂಪನ ವಂಚನೆಯ ಕೆಲಸಗಳಿಗೆ ಜನರನ್ನು ಎಚ್ಚರಿಸುತ್ತಿದ್ದಾರೆ. 1ನೇ ಲೋಕ ಯುದ್ಧಾನಂತರ ಕೇವಲ ಕೆಲವೇ ಸಾವಿರ ಸಾಕ್ಷಿಗಳು ಈ ಕೆಲಸವನ್ನು ಮಾಡಿದರು. ಆದರೆ ಈಗ ಅವರು ಭೂಮಿಯಲ್ಲೆಲ್ಲಾ 60,000ಕ್ಕೂ ಹೆಚ್ಚು ಸಭೆಗಳಲ್ಲಿ ಸಂಘಟಿಸಲ್ಪಟ್ಟಿರುವ 35 ಲಕ್ಷಕ್ಕೂ ಹೆಚ್ಚು ಕ್ರಿಯಾಶೀಲ ಶುಶ್ರೂಷಕರಿರುವ “ಬಲವಾದ ಜನಾಂಗ”ವಾಗಿದ್ದಾರೆ. (ಯೆಶಾಯ 60:22) ಹೆಚ್ಚುತ್ತಿರುವ ಮಟ್ಟದಲ್ಲಿ ದೇವರ ಸೇವಕರು, ದೇವರ ರಾಜ್ಯವೊಂದೇ ಮಾನವಕುಲದ ಏಕ ನಿರೀಕ್ಷೆಯೆಂದು ಆಸಕ್ತಿಯಿಂದ ಸಾರುತ್ತಾ, ಅದೇ ಸಮಯದಲ್ಲಿ, ಪುರೋಹಿತ ವರ್ಗದವರ ನಿಜಗುರುತನ್ನು—ಅವರು ವಂಚಿಸುವ ಅಧರ್ಮ ಸ್ವರೂಪನೆಂದು, ಬಹಿರಂಗ ಪಡಿಸುತ್ತಿದ್ದಾರೆ.
ಅಷ್ಟು ಶಕಿಯ್ತಿಂದೇಕೆ?
17. ಅಧರ್ಮ ಸ್ವರೂಪನನ್ನು ಯೆಹೋವನ ಸೇವಕರು ಏಕೆ ಬಲಾಢ್ಯವಾಗಿ ಬಯಲು ಮಾಡಿದ್ದಾರೆ?
17 ಈ ಎಲ್ಲಾ ವರ್ಷಗಳಲ್ಲಿ ಯೆಹೋವನ ಸೇವಕರು ಈ ಅಧರ್ಮ ಸ್ವರೂಪನನ್ನು ಏಕೆ ಅಷ್ಟು ಶಕ್ತಿಯಿಂದ ಬಯಲು ಮಾಡಿದ್ದಾರೆ? ಏಕೆಂದರೆ, ಆಗಲೇ ರಕ್ಷಣಾ ಮಾರ್ಗದಲ್ಲಿರುವ ಯೆಹೋವನ ಕುರಿಗಳ ಮಹಾ ಸಮೂಹವನ್ನು ಸೈತಾನನ ಲೋಕ ಮತ್ತು ಅದರ ಸುಳ್ಳುಧರ್ಮದಿಂದ ಕಾಪಾಡುವ ಅಗತ್ಯವಿರುವದರಿಂದಲೇ. (ಯೋಹಾನ 10:16; ಪ್ರಕಟನೆ 7:9-14) ಇದಲ್ಲದೆ, ಪುರೋಹಿತ ವರ್ಗವನ್ನು ಬಯಲು ಮಾಡದಿದ್ದರೆ, ಇನ್ನೂ ದೇವರ ಮಂದೆಯ ಭಾಗವಾಗಿಲ್ಲದ ಪ್ರಾಮಾಣಿಕ ಹೃದಯಿಗಳು ತಪ್ಪು ಮಾರ್ಗದಿಂದ ಹೇಗೆ ದೂರವಿರಬೇಕೆಂದು ತಿಳಿಯದಿರುವರು. ಆದುದರಿಂದ, ಯೇಸು ತನ್ನ ದಿನಗಳ ಕಪಟಿಗಳಾದ ಧಾರ್ಮಿಕ ಮುಖಂಡರ ವಿಷಯ ಹೇಳಿದಂತೆಯೇ ಈ ಜನರಿಗೂ ಅದು ತಿಳಿಸಲ್ಪಡಬೇಕು. ಯೇಸು ಹೇಳಿದ್ದು: “ತಾವೇ ಕುರುಡರು. . . ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು.”—ಮತ್ತಾಯ 15:14; ಮತ್ತು 2 ಕೊರಿಂಥ 4:4; 11:13-15 ಸಹ ನೋಡಿ.
18. ಸತ್ಯಾನ್ವೇಷಕರು ಏನನ್ನು ತಿಳಿಯುವ ಅವಶ್ಯವಿದೆ?
18 ಈ ಪುರೋಹಿತ ವರ್ಗವು ಸೈತಾನನ ಲೋಕದ ಭಾಗ. (ಯೋಹಾನ 8:44) ದೇವರು ಬೇಗನೇ ನುಜ್ಜುಗುಜ್ಜುಮಾಡಿ ಇಲ್ಲದಂತೆ ಮಾಡುವ ಲೋಕವಿದು. (2 ಪೇತ್ರ 3:11-13; 1 ಯೋಹಾನ 2:15-17) ಆದುದರಿಂದ, ದೇವರ ವಾಕ್ಯ ಎಚ್ಚರಿಸುವುದು: “ಲೋಕಕ್ಕೆ ಸ್ನೇಹಿತನಾಗಿರ ಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ಆದರೆ ಪುರೋಹಿತರು ಈ ಎಚ್ಚರಿಕೆಯನ್ನು ಅಲಕ್ಷ್ಯಮಾಡಿ ರಾಜಕೀಯ ವಿಚಾರಗಳಲ್ಲಿ ತಲೆಹಾಕುತ್ತಾ ಇದ್ದಾರೆ. ರಾಜಕೀಯಸ್ಥರ ಪ್ರಯತ್ನದ ಮೂಲಕ ಹೆಚ್ಚು ಉತ್ತಮ ಜಗತ್ತು ಬರುತ್ತದೆಂದು ಅವರು ತಮ್ಮ ಅನುಯಾಯಿಗಳಿಗೆ ಹೇಳುತ್ತಾರೆ. ಆದರೆ ಇದು ಸುಳ್ಳು ನಿರೀಕ್ಷೆ. ಏಕೆಂದರೆ ಸೈತಾನನ ಲೋಕ ಹೊರಗೆ ಹೋಗುತ್ತಾ ಇದೆ. ಹೀಗೆ, ನಿರೀಕ್ಷೆಗಾಗಿ ಈ ಜಗತ್ತನ್ನು ನೋಡುತ್ತಿರುವವರು ವಂಚಿಸಲ್ಪಡುತ್ತಿದ್ದಾರೆ. ಆದುದರಿಂದ, ಲೋಕ ಎತ್ತ ಸಾಗುತ್ತಿದೆ, ಮತ್ತು ಅದರ ಸ್ಥಾನದಲ್ಲಿ ಏನು ಬರುವುದು ಎಂಬದು ಅವರಿಗೆ ಹೇಳಲ್ಪಡಬೇಕು.—ಜ್ಞಾನೋಕ್ತಿ 14:12; 19:21; ಮತ್ತಾಯ 6:9, 10; ಪ್ರಕಟನೆ 21:4, 5.
19. ಕೆಲವು ಪುರೋಹಿತರ ಲೌಕಿಕತೆಯನ್ನು ಇತ್ತೀಚೆಗೆ ಪತ್ರಿಕೆಗಳು ಹೇಗೆ ಬಯಲುಮಾಡಿವೆ?
19 ಕೆಲವು ಪಾದ್ರಿಗಳ ಲೌಕಿಕತೆಯನ್ನು, ಉದಾಹರಣೆಗೆ, ಕೆಲವು ಟೀವೀ ಪುರೋಹಿತರ ವಿಷಯಲಂಪಟ ಹಾಗೂ ಭೋಗಾಸಕ್ತ ಜೀವನ ರೀತಿಗಳನ್ನು ಇತ್ತೀಚೆಗೆ ಪತ್ರಿಕೆಗಳೂ ಬಯಲು ಮಾಡಿವೆ. ಒಬ್ಬ ಆಧುನಿಕ ಹಾಡು ಲೇಖಕನು, “ಯೇಸು [10 ಸಾವಿರ ಡಾಲರುಗಳ] ರೋಲೆಕ್ಸ್ ವಾಚನ್ನು ತನ್ನ ಟೆಲಿವಿಷನ್ ಪ್ರದರ್ಶನದಲ್ಲಿ ತೊಟ್ಟಾನೇ?” ಎಂಬ ಶೀರ್ಷಿಕೆಯ ಹಾಡನ್ನು ಬರೆದನು. ಆ ಹಾಡು ಹೇಳುವದು: “ಯೇಸು ಹಿಂದುರುಗಿ ಧರೆಗೆ ಬಂದರೆ, ರಾಜಕಾರಣಿಯಾದಾನೇ, ಎರಡನೆಯ ಬೀಡನ್ನು [ಸುಖಕರವಾದ] ಪಾಮ್ ಸ್ಪ್ರಿಂಗ್ಸ್ನಲ್ಲಿ ಮಾಡಿ, ಸಂಪತ್ತನ್ನು ಮುಚ್ಚಿಟ್ಟಾನೇ?” ಇಷ್ಟಲ್ಲದೆ, ಹೆಚ್ಚೆಚ್ಚು ಪಾದ್ರಿಗಳು ಸಲಿಂಗೀಕಾಮವನ್ನು ಒಪ್ಪುತ್ತಾರೆ ಅಥವಾ ತಾವೇ ಅಭ್ಯಸಿಸುತ್ತಾರೆ. ಅಮೇರಿಕದ ಕ್ಯಾಥ್ಲಿಕ್ ಚರ್ಚು ಈಗಲೂ, ಮಕ್ಕಳನ್ನು ಲೈಂಗಿಕವಾಗಿ ಅಪಪ್ರಯೋಗಿಸಿದ ಪಾದ್ರಿಗಳ ಅಪರಾಧಕ್ಕಾಗಿ ಲಕ್ಷಾಂತರ ಡಾಲರುಗಳನ್ನು ಪರಿಹಾರ ದ್ರವ್ಯವಾಗಿ ಕೊಡುತ್ತದೆ.—ರೋಮಾಪುರ 1:24-27; 1 ಕೊರಿಂಥ 6:9, 10.
20. ಅಧರ್ಮ ಸ್ವರೂಪನನ್ನು ದೇವರ ಸೇವಕರು ಏಕೆ ಬಯಲು ಮಾಡುತ್ತಾ ಹೋಗಬೇಕು?
20 ಇಂಥ ತಪ್ಪುಗಳನ್ನು ದೇವರ ಸೇವಕರು ಅಲಕ್ಷ್ಯ ಮಾಡಬಾರದು. ಇತರರ ಪ್ರಯೋಜನಕ್ಕಾಗಿ ಅವುಗಳನ್ನು ಬಯಲುಪಡಿಸಬೇಕು. ದೇವರ ನಿಯಮಗಳನ್ನು ಮುರಿಯುವಂತೆ ನಡಿಸ ಪ್ರಯತ್ನಿಸುವವರಿಂದ ಇತರ ಕುರಿಗಳ ಮಹಾ ಸಮೂಹ ಸಂರಕ್ಷಿಸಲ್ಪಡಬೇಕು. “ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ” ಜನರನ್ನು ಹುಡುಕಿ ಅವರನ್ನು ಮಹಾ ಕುರುಬನಾದ ಯೆಹೋವ ದೇವರ ಮತ್ತು “ಒಳ್ಳೇ ಕುರುಬ”ನಾದ ಯೇಸು ಕ್ರಿಸ್ತನ ಸಂರಕ್ಷಣಾತ್ಮಕ ಮಾರ್ಗದರ್ಶನಕ್ಕೆ ತರುವ ಅವಶ್ಯಕತೆ ಇದೆ.—ಯೆಹೆಜ್ಕೇಲ 9:4; ಯೋಹಾನ 10:11; ಜ್ಞಾನೋಕ್ತಿ 18:10.
21. ಯೆಹೋವನ ಸಾಕ್ಷಿಗಳು ಯಾವುದನ್ನು ಸಾರುತ್ತಾ ಹೋಗುವರು?
21 ಈ ಕಾರಣದಿಂದ, ಅಧರ್ಮ ಸ್ವರೂಪನಾದ ಕ್ರೈಸ್ತ ಪ್ರಪಂಚದ ಪುರೋಹಿತ ವರ್ಗ ಸೇರಿರುವ ಸೈತಾನನ ಲೋಕವೆಲ್ಲಾದರ ವಿರುದ್ಧ ದೇವರ ಸೇಡನ್ನು ಪ್ರಕಟಿಸಲು ದೇವಜನರು ಹಿಂಜರಿಯರು. ಅವರು ಹುರುಪಿನಿಂದ, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ. ಆತನು ನ್ಯಾಯ ತೀರ್ಪು ಮಾಡುವ ಗಳಿಗೆಯು ಬಂದಿದೆ” ಎಂಬ ಪ್ರಕಟನೆ 14:7 ರ ದೇವದೂತ ಸಂದೇಶವನ್ನು ಸಾರುವರು. ಮತ್ತು ಈ ಘೋಷಣೆಯಲ್ಲಿ ಅವರು ಸುಳ್ಳು ಧರ್ಮವನ್ನು ಕುರಿತಾದ, “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ. ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು. ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು” ಎಂಬ ಪ್ರಕಟನೆ 18:4ರ ಜರೂರಿಯ ಎಚ್ಚರಿಕೆಯನ್ನೂ ಸೇರಿಸುವರು. (w90 2/1)
ಪುನರ್ವಿಚಾರಕ್ಕಾಗಿ ಪ್ರಶ್ನೆಗಳು
◻ ಅಧರ್ಮ ಸ್ವರೂಪನ ಗತಿ ಏನು ಮತ್ತು ಏಕೆ?
◻ ಇತರರ ಕುರಿತು ಯೆಹೋವನ ಸಾಕ್ಷಿಗಳಿಗೆ ಯಾವ ಹಂಗಿದೆ?
◻ ಯೆಹೋವನ ಜನರು ಎಲ್ಲಾ ಜನರ ರಕ್ತದೋಷದಿಂದ ಹೇಗೆ ವಿಮುಕ್ತರಾಗಿದ್ದಾರೆ?
◻ ಮಹಾ ಬಾಬೆಲಿನ ಕುರಿತು ನಾವೇನು ಮಾಡತಕ್ಕದ್ದು?
◻ ಅಧರ್ಮ ಸ್ವರೂಪನ ಕುರಿತಾದ ಬಲಾಢ್ಯ ಸಂದೇಶವನ್ನು ನಾವೇಕೆ ಕೊಡುತ್ತಾ ಮುಂದರಿಯುವೆವು?
[ಪುಟ 25 ರಲ್ಲಿರುವ ಚಿತ್ರ]
ಅಪೊಸ್ತಲರು ಒಂದು ಉಚ್ಛನ್ಯಾಯಾಲಯಕ್ಕೆ ಹೇಳಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಬೇಕಲ್ಲಾ.”
[ಪುಟ 26 ರಲ್ಲಿರುವ ಚಿತ್ರ]
ಲೋಕ ಮತ್ತು ಅದರ ಧರ್ಮಗಳು ಎತ್ತ ಸಾಗುತ್ತಿವೆಂದು ಯಥಾರ್ಥ ಜನರು ತಿಳಿಯುವುದು ಅಗತ್ಯ