“ಅಧರ್ಮ ಸ್ವರೂಪ” ನನ್ನು ಗುರುತಿಸುವುದು
“ಆ ಅಧರ್ಮಸ್ವರೂಪನು ಕಾಣಬರುವನು. ಅವನನ್ನು ಯೇಸು ಕರ್ತನು ಕೊಲ್ಲುವನು.”—2 ಥೆಸಲೊನೀಕ 2:8.
1, 2. ಅಧರ್ಮ ಸ್ವರೂಪನನ್ನು ಗುರುತಿಸುವುದು ಮಹತ್ವವುಳ್ಳದ್ದೇಕೆ?
ನಾವು ನಿಯಮರಾಹಿತ್ಯದ ಯುಗದಲ್ಲಿ ಜೀವಿಸುತ್ತೇವೆ. ಇದೊಂದು ಲೋಕವ್ಯಾಪಕವಾದ ಅಸಾಧಾರಣ ಘಟನೆ. ಎಲ್ಲೆಲ್ಲಿಯೂ ನಿಯಮರಹಿತರಾದ ಕೊಳ್ಳೆಹೊಡೆಯುವವರ ಭಯ ಮತ್ತು ಅವರಿಂದ ನಮಗೂ ಸೊತ್ತಿಗೂ ಬರುವ ಬೆದರಿಕೆ ಇದೆ. ಆದರೆ ಇದಕ್ಕೂ ಹೆಚ್ಚು ವಂಚನೆಯ ನಿಯಮರಾಹಿತ್ಯ ಶಕ್ತಿಯು ಶತಮಾನಗಳಿಂದ ಕೆಲಸ ನಡಿಸುತ್ತಿದೆ. ಬೈಬಲಿನಲ್ಲಿ “ಅಧರ್ಮ ಸ್ವರೂಪನು” ಎಂದು ಇದರ ಹೆಸರು.
2. ಈ ಅಧರ್ಮ ಸ್ವರೂಪನನ್ನು ನಾವು ಗುರುತಿಸ ಬೇಕಾದದ್ದು ಮಹತ್ವದ ವಿಷಯ. ಹೀಗೇಕೆ? ಏಕೆಂದರೆ ದೇವರೊಂದಿಗೆ ನಮಗಿರುವ ಸುಸಂಬಂಧವನ್ನು ಮತ್ತು ಅನಂತ ಜೀವದ ನಿರೀಕ್ಷೆಯನ್ನು ಮುರಿಯಬೇಕೆಂಬದೇ ಅವನ ಶತಪ್ರಯತ್ನವಾಗಿದೆ. ಹೇಗೆ? ನಾವು ಸತ್ಯವನ್ನು ತ್ಯಜಿಸಿ, ಅದರ ಬದಲಿಗೆ ಸುಳ್ಳನ್ನು ನಂಬಿ ಹೀಗೆ ನಾವು ದೇವರನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸುವದರಿಂದ ತಪ್ಪಿಸುವಂತೆ ಮಾಡಿಯೇ. (ಯೋಹಾನ 4:23) ಇವನ ವರ್ತನೆಯಿಂದ, ಈ ನಿರ್ದಿಷ್ಟ ನಿಯಮರಾಹಿತ್ಯ ಶಕ್ತಿ ದೇವರನ್ನು, ಆತನ ಉದ್ದೇಶಗಳನ್ನು ಮತ್ತು ಆತನ ಸಮರ್ಪಿತ ಜನರನ್ನು ವಿರೋಧಿಸುತ್ತಾನೆಂಬದು ವ್ಯಕ್ತ.
3. ಈ ನಿಯಮರಹಿತನ ಕಡೆಗೆ ಬೈಬಲು ನಮ್ಮ ಗಮನವನ್ನು ಹೇಗೆ ಸೆಳೆಯುತ್ತದೆ?
3. ಈ ನಿಯಮರಾಹಿತ್ಯದ ಪುರುಷನ ಕುರಿತು ಬೈಬಲು 2 ಥೆಸಲೊನೀಕ 2:3 ರಲ್ಲಿ ಮಾತಾಡುತ್ತದೆ. ದೇವರಾತ್ಮ ಪ್ರೇರಿತನಾಗಿ ಅಪೊಸ್ತಲ ಪೌಲನು ಬರೆದುದು: “ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ; ಯಾಕಂದರೆ ಮೊದಲು ಮತಭ್ರಷ್ಟತೆ ಉಂಟಾಗಿ ಅಧರ್ಮ ಸ್ವರೂಪನು ಬೈಲಿಗೆ ಬಂದ ಹೊರತು [ಯೆಹೋವನು ದುಷ್ಟ ವ್ಯವಸ್ಥೆಯನ್ನು ನಾಶಮಾಡುವ] ಆ ದಿನವು ಬರುವುದಿಲ್ಲ.” ಇಲ್ಲಿ ಪೌಲನು, ಮತಭ್ರಷ್ಟತೆ ಬೆಳೆಯುವದೆಂದೂ ಈ ವ್ಯವಸ್ಥೆಯ ಅಂತ್ಯಕ್ಕೆ ಮೊದಲು ಅಧರ್ಮ ಸ್ವರೂಪನು ತೋರಿಬರುವನೆಂದೂ ಪ್ರವಾದಿಸಿದನು. ವಾಸ್ತವವೇನಂದರೆ, ಪೌಲನು ಏಳನೆಯ ವಚನದಲ್ಲಿ, “ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ” ಎಂದು ಹೇಳಿದ್ದಾನೆ. ಹೀಗೆ, ಒಂದನೆಯ ಶತಕದಲ್ಲಿಯೇ ಈ ನಿಯಮರಹಿತನು ತನ್ನನ್ನು ತೋರಿಸಿಕೊಂಡಿದ್ದನು.
ಈ ಅಧರ್ಮ ಸ್ವರೂಪನ ಮೂಲ
4. ಈ ಅಧರ್ಮ ಸ್ವರೂಪನ ಜನಕನೂ ಪೋಷಕನೂ ಯಾರು?
4. ಈ ಅಧರ್ಮ ಸ್ವರೂಪ ವ್ಯಕ್ತಿಯನ್ನು ಹುಟ್ಟಿಸಿ ಪೋಷಿಸುವುದು ಯಾರು? ಪೌಲನು ಉತ್ತರಕೊಡುವದು: “ಈ ಅಧರ್ಮ ಸ್ವರೂಪನ ಪ್ರತ್ಯಕ್ಷತೆಯು ಸೈತಾನನ ಮಾಟಕ್ಕನುಗುಣವಾಗಿರುವುದು. ಅದು ಮೋಸಗೊಳಿಸುವ ಸಕಲ ವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನ ಮಾರ್ಗದಲ್ಲಿರುವವರಿಗೋಸ್ಕರ ಸಂಭವಿಸುವದು. ಅವರು ಸತ್ಯದ ಮೇಲೆ ಪ್ರೀತಿಯನ್ನಿಡದ ಕಾರಣದಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.” (2 ಥೆಸಲೊನೀಕ 2:9, 10) ಹೀಗೆ, ಸೈತಾನನೇ ಈ ಅಧರ್ಮ ಸ್ವರೂಪನ ತಂದೆ ಮತ್ತು ಪೋಷಕ. ಮತ್ತು ಸೈತಾನನು ಯೆಹೋವನನ್ನು, ಆತನ ಉದ್ದೇಶಗಳನ್ನು ಮತ್ತು ಆತನ ಜನರನ್ನು ವಿರೋಧಿಸುವಂತೆಯೇ ಈ ಅಧರ್ಮ ಸ್ವರೂಪನೂ, ಅವನಿದನ್ನು ಗ್ರಹಿಸಲಿ, ಗ್ರಹಿಸದಿರಲಿ, ವಿರೋಧಿಸುತ್ತಾನೆ.
5. ಈ ನಿಯಮರಹಿತನಿಗೂ ಅವನನ್ನು ಅನುಸರಿಸುವರಿಗೂ ಯಾವ ಗತಿ ಸಿದ್ಧವಾಗಿದೆ?
5. ಈ ಅಧರ್ಮ ಸ್ವರೂಪನ ಪಕ್ಷ ವಹಿಸುವವರಿಗೆ ಅವನಿಗಾಗುವ ಗತಿಯೇ ಅಂದರೆ ನಾಶವೇ ಸಂಭವಿಸುವದು. “ಆ ಅಧರ್ಮ ಸ್ವರೂಪನು ಕಾಣಬರುವನು. ಅವನನ್ನು ಯೇಸು ಕರ್ತನು . . . ತನ್ನ ಪ್ರತ್ಯಕ್ಷತೆಯ ಪ್ರಭಾವದಿಂದ ಸಂಹರಿಸುವನು.” (2 ಥೆಸಲೊನೀಕ 2:8) ಈ ಅಧರ್ಮ ಸ್ವರೂಪನ ಮತ್ತು ಅವನ ಬೆಂಬಲಿಗರ (“ನಾಶನ ಮಾರ್ಗದಲ್ಲಿರುವವರ”) ನಾಶನ ಸಮಯವು, ಬೇಗನೇ, “ಯೇಸುಕ್ರಿಸ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರೊಂದಿಗೆ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ” ಬರುವುದು. “ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. . . ಅಂಥವರು ನಿತ್ಯ ನಾಶನವೆಂಬ ದಂಡನೆಯನ್ನು ಅನುಭವಿಸುವರು.”—2 ಥೆಸಲೊನೀಕ 1:6-9.
6. ಪೌಲನು ಈ ನಿಯಮರಹಿತನ ಕುರಿತು ಇನ್ನಾವ ಸಮಾಚಾರವನ್ನು ಕೊಡುತ್ತಾನೆ?
6. ಪೌಲನು ಈ ನಿಯಮರಹಿತನನ್ನು ಇನ್ನೂ ವರ್ಣಿಸುತ್ತಾ ಹೇಳುವುದು: “ಯಾವದು ದೇವರೆನಿಸಿಕೊಳ್ಳುತ್ತದೋ ಯಾವುದು ಪೂಜೆ ಹೊಂದುತ್ತದೋ ಅದನ್ನೆಲ್ಲಾ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಹೇಳಿಕೊಂಡು ದೇವರ ಗರ್ಭಗುಡಿಯಲ್ಲೀ ಕೂತುಕೊಳ್ಳುತ್ತಾನೆ.” (2 ಥೆಸಲೊನೀಕ 2:4) ಹೀಗೆ, ಸೈತಾನನು ನಿಯಮರಹಿತನೊಬ್ಬನನ್ನು, ಪೂಜೆಹೊಂದುವ ವಸ್ತುವೊಂದನ್ನು, ದೇವರ ನಿಯಮಕ್ಕೂ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವ ಒಬ್ಬನನ್ನು ಎಬ್ಬಿಸುವನೆಂದು ಪೌಲನು ಎಚ್ಚರಿಸುತ್ತಾನೆ.
ಈ ಅಧರ್ಮ ಸ್ವರೂಪನನ್ನು ಗುರುತಿಸುವುದು
7. ಪೌಲನು ಏಕವ್ಯಕ್ತಿಯ ಕುರಿತು ಹೇಳಿರುವುದಿಲ್ಲವೆಂಬ ತೀರ್ಮಾನಕ್ಕೆ ನಾವೇಕೆ ಬರುತ್ತೇವೆ, ಮತ್ತು ಈ ಅಧರ್ಮ ಸ್ವರೂಪನು ಯಾವುದಕ್ಕೆ ಸೂಚಿತನಾಗಿದ್ದಾನೆ?
7. ಪೌಲನು ಏಕವ್ಯಕ್ತಿಯ ಕುರಿತು ಮಾತಾಡಿದನೋ? ಇಲ್ಲ, ಏಕೆಂದರೆ “ಅವನು” ಪೌಲನ ದಿನಗಳಲ್ಲೂ ಇದ್ದನೆಂದೂ ಈ ವ್ಯವಸ್ಥೆಯ ಅಂತ್ಯದಲ್ಲಿ ಯೆಹೋವನು ಅವನನ್ನು ನಾಶಗೊಳಿಸುವ ತನಕವೂ ಇರುವನೆಂದೂ ಪೌಲನು ಹೇಳುತ್ತಾನೆ. ಹೀಗೆ ಅವನು ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿದ್ದಾನೆ. ಯಾವ ಅಕ್ಷರಾರ್ಥ ವ್ಯಕ್ತಿಯೂ ಅಷ್ಟು ದೀರ್ಘಕಾಲ ಬದುಕನೆಂಬದು ವ್ಯಕ್ತ. ಆದುದರಿಂದ, ಈ ಅಧರ್ಮ ಸ್ವರೂಪನೆಂಬ ಪದ ಜನರ ಒಂದು ಸಮುದಾಯಕ್ಕೆ, ಅಥವಾ ವರ್ಗಕ್ಕೆ ಸೂಚಿತವಾಗಬೇಕು.
8. ಈ ಅಧರ್ಮ ಸ್ವರೂಪನಾರು, ಮತ್ತು ಇವನನ್ನು ಗುರುತಿಸುವ ಕೆಲವು ಗುರುತುಗಳಾವುವು?
8. ಇವರು ಯಾರು? ಇವರು ಕ್ರೈಸ್ತ ಪ್ರಪಂಚದ ಹೆಮ್ಮೆ ಹಾಗೂ ಹೆಬ್ಬಯಕೆ ಇರುವ ವೈದಿಕ ವರ್ಗವೇ ಎಂದು ರುಜುವಾತುಗಳು ತೋರಿಸುತ್ತವೆ. ಇವರು ಶತಮಾನಗಳಿಂದಲೂ ತಮ್ಮದೇ ಆದ ಮಾರ್ಗ ಹಿಡಿದು, ತಮ್ಮನ್ನು ಹೆಚ್ಚಿಸಿಕೊಂಡಿದ್ದಾರೆ. ಕ್ರೈಸ್ತ ಪ್ರಪಂಚದಲ್ಲಿರುವ ಸಾವಿರಾರು ವಿಭಿನ್ನ ಧರ್ಮ ಮತ್ತು ಪಂಥಗಳಿಂದ ಇದನ್ನು ನೋಡಬಹುದು. ಇವುಗಳಲ್ಲಿ ಪ್ರತಿಯೊಂದು ಪಂಥಕ್ಕೆ ತನ್ನದೇ ಆದ ವೈದಿಕ ವರ್ಗವಿದ್ದರೂ ತತ್ವ ಹಾಗೂ ಕಾರ್ಯಾಚರಣೆಯು ಒಂದಲ್ಲ ಒಂದು ವಿಧದಲ್ಲಿ ಇನ್ನೊಂದನ್ನು ವಿರೋಧಿಸುತ್ತದೆ. ಈ ವಿಂಗಡಿತ ಸ್ಥಿತಿಗತಿ ಇವು ದೇವರ ನಿಯಮವನ್ನು ಅನುಸರಿಸುವುದಿಲ್ಲವೆಂಬದಕ್ಕೆ ಸ್ಪಷ್ಟ ನಿದರ್ಶನ. ಇವೆಲ್ಲ ದೇವರಿಂದ ಬಂದಿರ ಸಾಧ್ಯವಿಲ್ಲ. (ಮೀಕ 2:12; ಮಾರ್ಕ 3:24; ರೋಮಾಪುರ 16:17; 1 ಕೊರಿಂಥ 1:10 ಹೋಲಿಸಿ.) ಈ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಒಂದು ವಿಷಯವೇನಂದರೆ, ಅವು ಬೈಬಲಿನ ಬೋಧನೆಗೆ ಅಂಟಿಕೊಳ್ಳದಿರುವದೇ. “ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿ ಹೋಗಬಾರದು” ಎಂಬ ನಿಯಮವನ್ನು ಇವರು ಉಲ್ಲಂಘಿಸಿದ್ದಾರೆ.—1 ಕೊರಿಂಥ 4:6; ಮತ್ತಾಯ 15:3, 9, 14ನ್ನೂ ನೋಡಿ.
9. ಬೈಬಲಿನ ಸತ್ಯಗಳ ಬದಲಿಗೆ ಈ ನಿಯಮರಹಿತನು ಯಾವ ಅಶಾಸ್ತ್ರೀಯ ನಂಬಿಕೆಗಳನ್ನು ತಂದಿದ್ದಾನೆ?
9. ಹೀಗೆ ಈ ನಿಯಮರಹಿತ ವ್ಯಕ್ತಿ ಒಬ್ಬ ಸಂಘಟಿತ ವ್ಯಕ್ತಿ: ಕ್ರೈಸ್ತ ಪ್ರಪಂಚದ ಧಾರ್ಮಿಕ ವೈದಿಕರೇ ಇವರು. ಇವರೆಲ್ಲರು, ಅವರು ಪೋಪರಾಗಲಿ, ಪಾದ್ರಿಗಳಾಗಲಿ, ಕುಲಪತಿಗಳಾಗಲಿ ಅಥವಾ ಪ್ರಾಟೆಸ್ಟಾಂಟ್ ಉಪದೇಶಿಗಳೇ ಆಗಲಿ, ಕ್ರೈಸ್ತ ಪ್ರಪಂಚದ ಧಾರ್ಮಿಕ ಪಾಪಗಳ ಜವಾಬ್ದಾರಿಯಲ್ಲಿ ಪಾಲಿಗರಾಗಿದ್ದಾರೆ. ದೇವರ ಸತ್ಯಗಳ ಬದಲಿಗೆ ಅವರು ವಿಧರ್ಮಿಗಳ ಮಿಥ್ಯೆಗಳನ್ನು ಆರಿಸಿಕೊಂಡು ಮಾನವಾತ್ಮದ ಅಮರತ್ವ, ನರಕಾಗ್ನಿ, ಪರ್ಗೆಟರಿ ಮತ್ತು ತ್ರಯೈಕ್ಯವೇ ಮುಂತಾದ ಅಶಾಸ್ತ್ರೀಯ ಬೋಧನೆಗಳನ್ನು ಬೋಧಿಸಿದ್ದಾರೆ. ಯೇಸು ಯಾವ ಧರ್ಮ ನಾಯಕರನ್ನು ಸಂಬೋಧಿಸಿ, “ಸೈತಾನನು ನಿಮ್ಮ ತಂದೆ. . . ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. . . ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲ ಪುರುಷನೂ ಆಗಿದ್ದಾನೆ” ಎಂದು ಹೇಳಿದನೋ ಅವರಂತೆ ಇವರೂ ಇದ್ದಾರೆ. (ಯೋಹಾನ 8:44) ಇವರು ನಿಯಮರಹಿತರೆಂದು ಅವರ ಕಾರ್ಯಾಚರಣೆಯೇ ಅವರನ್ನು ಬೈಲಿಗೆಳೆಯುತ್ತದೆ. ಏಕೆಂದರೆ ದೇವರ ನಿಯಮೋಲ್ಲಂಘನೆಯ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಾರೆ. ಇಂಥವರಿಗೆ ಯೇಸು, “ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ದೂರ ತೊಲಗಿ ಹೋಗಿರಿ” ಎಂದು ಹೇಳುತ್ತಾನೆ.—ಮತ್ತಾಯ 7:21-23.
ತಮ್ಮನ್ನು ಹೆಚ್ಚಿಸಿಕೊಳ್ಳುವದು
10. ಈ ಅಧರ್ಮ ಸ್ವರೂಪನಿಗೂ ರಾಜಕೀಯ ಪ್ರಭುಗಳಿಗೂ ಯಾವ ಸಂಬಂಧವಿತ್ತು?
10. ಈ ಅಧರ್ಮ ಸ್ವರೂಪ ವರ್ಗದವರು ಎಷ್ಟು ಹೆಮ್ಮೆ ಮತ್ತು ದುರಹಂಕಾರವನ್ನು ತೋರಿಸಿದ್ದಾರೆಂದರೆ, ಈ ಲೋಕದ ರಾಜರುಗಳಿಗೂ ಅವರು ಆಜ್ಞೆ ವಿಧಿಸಿದ್ದಾರೆಂದು ಚರಿತ್ರೆ ತೋರಿಸುತ್ತದೆ. ‘ರಾಜರುಗಳ ದೈವಿಕ ಹಕ್ಕು’ ಎಂಬ ಬೋಧನೆಯನ್ನು ನೆಪಮಾಡಿಕೊಂಡು ರಾಜರುಗಳ ಮತ್ತು ದೇವರ ನಡುವೆ ತಾವು ಅವಶ್ಯ ಮಧ್ಯಸ್ಥರೆಂದು ಇವರು ವಾದಿಸಿದ್ದಾರೆ. ಇವರು ರಾಜರನ್ನೂ ಚಕ್ರವರ್ತಿಗಳನ್ನೂ ಪಟ್ಟಕ್ಕೆ ತಂದು, ಅವರನ್ನು ಪಟ್ಟದಿಂದ ಉರುಳಿಸಿ, ಜನರು ರಾಜರ ಪರವಾಗಿ ಅಥವಾ ವಿರೋಧವಾಗಿ ಏಳುವಂತೆ ಮಾಡಿದ್ದಾರೆ. ಕಾರ್ಯತಃ, “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಹೇಳಿ ಯೇಸುವನ್ನು ತಿರಸ್ಕರಿಸಿದ ಯೆಹೂದಿ ಮುಖ್ಯ ಯಾಜಕರಂತೆ ಇವರು ಇದ್ದಾರೆ. (ಯೋಹಾನ 19:15) ಆದರೂ ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಸ್ಪಷ್ಟವಾಗಿ ಬೋಧಿಸಿದ್ದನು.—ಯೋಹಾನ 18:36.
11. ವೈದಿಕವರ್ಗ ತಮ್ಮನ್ನು ಹೇಗೆ ಹೆಚ್ಚಿಸಿಕೊಂಡಿದ್ದಾರೆ?
11. ಜನಸಾಮಾನ್ಯರಿಂದ ತಮ್ಮನ್ನು ಇನ್ನೂ ಹೆಚ್ಚಿಸಿಕೊಳ್ಳಲಿಕ್ಕಾಗಿ ಈ ನಿಯಮರಹಿತ ವರ್ಗ, ಸಾಧಾರಣವಾಗಿ ಕಪ್ಪುಬಣ್ಣದ, ಪ್ರತ್ಯೇಕ ಉಡುಪನ್ನು ಆರಿಸಿಕೊಂಡಿದೆ. ಇದಲ್ಲದೆ, ಅವರು ತಮ್ಮನ್ನು ಕಿರೀಟ, ಶಿಲುಬೆ ಮತ್ತು ಉದ್ದ ಟೋಪಿಗಳಿರುವ ಎಲ್ಲಾ ರೀತಿಯ ಪ್ರಭಾವದ ಲಾಂಛನಗಳಿಂದ ಅಲಂಕರಿಸಿಕೊಂಡಿದ್ದಾರೆ. (ಮತ್ತಾಯ 23:5, 6 ಹೋಲಿಸಿ.) ಆದರೆ ಯೇಸು ಮತ್ತು ಅವನ ಹಿಂಬಾಲಕರಲ್ಲಿ ಇಂಥ ಉಡುಪುಗಳಿರಲಿಲ್ಲ. ಅವರು ಜನಸಾಮಾನ್ಯರಂತೆ ಬಟ್ಟೆ ತೊಡುತ್ತಿದ್ದರು. ವೈದಿಕ ವರ್ಗದವರು “ಫಾದರ್”, “ಹೋಲಿ ಫಾದರ್”, “ರೆವೆರೆಂಡ್” “ಮೋಸ್ಟ್ ರೆವೆರೆಂಡ್,” “ಹಿಸ್ ಎಕ್ಷೆಲೆನ್ಸಿ,” ಮತ್ತು “ಹಿಸ್ ಎಮಿನೆನ್ಸ್” ಎಂಬ ಬಿರುದುಗಳನ್ನು ತೆಗೆದುಕೊಂಡು ‘ತಮ್ಮನ್ನು ಎಲ್ಲರಿಗಿಂತ ಹೆಚ್ಚಿಸಿಕೊಂಡಿದ್ದಾರೆ.’ ಆದರೂ ಧಾರ್ಮಿಕ ಬಿರುದುಗಳ ವಿಷಯ ಯೇಸುವಿನ ಬೋಧನೆ ಹೀಗಿತ್ತು: “ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ.” (ಮತ್ತಾಯ 23:9) ಇದೇ ರೀತಿ, ಯೋಬನ ಕಪಟಿಗಳಾದ ದುಃಖಶಾಮಕರಿಗೆ ಪ್ರತ್ಯುತ್ತರ ಕೊಡುವಾಗ ಎಲೀಹು ಹೇಳಿದ್ದು: “ನಾನು ಯಾರಿಗೂ ಮುಖದಾಕ್ಷಿಣ್ಯ ತೋರಿಸಬಾರದು. ಯಾವ ಮನುಷ್ಯನಿಗಾದರೂ ಮುಖಸ್ತುತಿಯನ್ನು ಮಾಡಕೂಡದು.”—ಯೋಬ 32:21.
12. ವೈದಿಕ ವರ್ಗದವರು ನಿಜವಾಗಿಯೂ ಯಾರನ್ನು ಸೇವಿಸುತ್ತಾರೆಂದು ಪೌಲನು ಹೇಳಿದನು?
12. ಪೌಲನು ತನ್ನ ದಿನಗಳಲ್ಲಿ, ಅಧರ್ಮ ಸ್ವರೂಪನು ಆಗಲೇ ತನ್ನ ಕೆಲಸವನ್ನು ಆರಂಭಿಸಿದ್ದಾನೆಂದು ಹೇಳಿದಾಗ ಈ ನಿಯಮರಹಿತನ ಮನೋಭಾವವನ್ನು ಪ್ರತಿಬಿಂಬಿಸುವವರ ಕುರಿತು ಹೇಳಿದ್ದು: “ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಾಗಿ ಕಾಣಿಸಿಕೊಳ್ಳುವದಕ್ಕೆ ವೇಷ ಹಾಕಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಪವನ್ನು ಹಾಕಿಕೊಳ್ಳುವಾಗ ಅವನ ಸೇವಕರು ಸಹಾ ನೀತಿಗೆ ಸೇವಕರಾಗಿ ಕಾಣಿಸುವದಕ್ಕೆ ವೇಷಹಾಕುವದು ದೊಡ್ಡದಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.”—2 ಕೊರಿಂಥ 11:13-15.
ಸತ್ಯಾರಾಧನೆಯ ವಿರುದ್ಧ ದಂಗೆ
13. ಪೌಲನು ಮುಂತಿಳಿಸಿದ ಮತಭ್ರಷ್ಟತೆ ಏನು?
13. ಈ ನಿಯಮರಾಹಿತ್ಯದ ಪುರುಷನು ಧರ್ಮಭ್ರಷ್ಟತೆಯ ಜೊತೆಯಲ್ಲೀ ಬೆಳೆಯುವನೆಂದು ಪೌಲನಂದನು. ವಾಸ್ತವವಾಗಿ, ಈ ನಿಯಮರಹಿತ ವರ್ಗವನ್ನು ಗುರುತಿಸುವ ಪ್ರಥಮ ಸುಳಿವನ್ನು ಪೌಲನು ಹೀಗೆ ಹೇಳುತ್ತಾ ನುಡಿದನು: “ಮೊದಲು ಮತಭ್ರಷ್ಟತೆ ಉಂಟಾಗಿ ಅಧರ್ಮ ಸ್ವರೂಪನು ಬಯಲಿಗೆ ಬಂದ ಹೊರತು ಆ ದಿನವು [ಯೆಹೋವನು ಈ ದುಷ್ಟ ವ್ಯವಸ್ಥೆಯನ್ನು ನಾಶಮಾಡುವ ಸಮಯ] ಬರುವದಿಲ್ಲ.” (2 ಥೆಸಲೊನೀಕ 2:2, 3) ಆದರೆ, “ಮತಭ್ರಷ್ಟತೆ” ಎಂದರೇನು? ಈ ಪೂರ್ವಾಪರ ಸಂದರ್ಭದಲ್ಲಿ, ಇದೇನೋ ಒಂದು ಚಿಕ್ಕ ಮಾರ್ಗಚ್ಯುತಿ ಅಥವಾ ಆತ್ಮಿಕ ಬಲಹೀನತೆಯ ಕಾರಣ ಬಿದ್ದುಹೋಗುವಿಕೆಯಲ್ಲ. “ಮತಭ್ರಷ್ಟತೆ”ಗೆ ಇಲ್ಲಿ ಉಪಯೋಗಿಸಿರುವ ಗ್ರೀಕ್ ಪದದ ಅರ್ಥವು “ಪರಿತ್ಯಾಗ” ಅಥವಾ “ದಂಗೆ” ಇತ್ಯಾದಿ. ಅನೇಕ ಭಾಷಾಂತರಗಳು ಇದನ್ನು “ಬಂಡಾಯ”ವೆಂದು ಭಾಷಾಂತರಿಸುತ್ತವೆ. ವಿಲ್ಯಂ ಬಾರ್ಕ್ಲೇ ಭಾಷಾಂತರ ಹೀಗಿದೆ: “ಮಹಾ ಬಂಡಾಯ ಬರುವ ತನಕ ಆ ದಿನ ಬರಸಾಧ್ಯವಿಲ್ಲ.” ಜೆರೂಸಲೇಮ್ ಬೈಬಲ್ ಇದನ್ನು “ಮಹಾ ದಂಗೆ” ಎಂದು ಕರೆಯುತ್ತದೆ. ಹೀಗೆ, ಪೌಲನು ಚರ್ಚಿಸುವ ಸನ್ನಿವೇಶದಲ್ಲಿ “ಮತಭ್ರಷ್ಟತೆ” ಎಂದರೆ ಸತ್ಯಾರಾಧನೆಯ ವಿರುದ್ಧ ದಂಗೆ ಎಂದರ್ಥ.
14. ಈ ಧರ್ಮಭ್ರಷ್ಟತೆ ಶ್ರದ್ಧೆಯಿಂದ ಯಾವಾಗ ಬೆಳೆಯ ತೊಡಗಿತು?
14. ಈ ಮತಭ್ರಷ್ಟತೆ, ದಂಗೆ, ಹೇಗೆ ಬೆಳೆಯಿತು? 2 ಥೆಸಲೊನೀಕ 2:6ರಲ್ಲಿ ಪೌಲನು, ಅವನ ದಿನಗಳಲ್ಲಿ ಇದಕ್ಕೆ “ಅಡ್ಡಿಮಾಡುವ” ಒಂದು ವಸ್ತುವಿನ ಕುರಿತು ಬರೆದನು. ಅದು ಅಪೊಸ್ತಲರ ಅಡ್ಡಿಮಾಡುವ ಶಕ್ತಿಯೇ. ಪವಿತ್ರಾತ್ಮವು ದೊರಕಿಸಿದ ಬಲಾಢ್ಯ ವರಗಳಿದ್ದ ಅವರ ಸಾನಿಧ್ಯವು ಈ ಮತಭ್ರಷ್ಟತೆ ಸೋಂಕು ರೋಗವಾಗಿ ಪರಿಣಮಿಸದಂತೆ ಅಡ್ಡಿಮಾಡಿತು. (ಅಪೊಸ್ತಲರಕೃತ್ಯ 2:1-4; 1 ಕೊರಿಂಥ 12:28) ಆದರೆ ಒಂದನೆಯ ಶತಮಾನದ ಅಂತ್ಯ ಭಾಗದೊಳಗೆ ಅಪೊಸ್ತಲರು ಸತ್ತಾಗ, ಈ ತಡೆಯು ತೊಲಗಿಸಲ್ಪಟ್ಟಿತು.
ಅಶಾಸ್ತ್ರೀಯ ವೈದಿಕ ವರ್ಗ ಬೆಳೆಯುತ್ತದೆ
15. ಕ್ರೈಸ್ತ ಸಭೆಯಲ್ಲಿ ಯಾವ ವ್ಯವಸ್ಥೆ ಯೇಸುವಿನಿಂದ ಸ್ಥಾಪಿಸಲ್ಪಟ್ಟಿತ್ತು?
15. ಯೇಸು ಸ್ಥಾಪಿಸಿದ ಸಭೆ ಒಂದನೇ ಶತಮಾನದಲ್ಲಿ ಹಿರಿಯ (ಮೇಲ್ವಿಚಾರಕರ) ಮತ್ತು ಶುಶ್ರೂಷೆ ಸೇವಕರ ಮಾರ್ಗದರ್ಶನೆಯಲ್ಲಿ ಬೆಳೆಯಿತು. (ಮತ್ತಾಯ 20:25-27. 1 ತಿಮೊಥಿ 3:1-13; ತೀತ 1:5-9) ಇವರನ್ನು ಸಭೆಯಿಂದಲೇ ಆರಿಸಲಾಗುತ್ತಿತ್ತು. ಯೇಸುವಿನಂತೆಯೇ, ಅವರು ಪ್ರತ್ಯೇಕವಾದ ದೇವಶಾಸ್ತ್ರ ಜ್ಞಾನ ಇದ್ದಿರದ ಸಮರ್ಥರಾದ ಆತ್ಮಿಕ ಪುರುಷರಾಗಿದ್ದರು. ಈ ಕಾರಣದಿಂದಲೇ ಯೇಸುವಿನ ಕುರಿತು ಅವನ ವಿರೋಧಿಗಳು ಹೇಳಿದ್ದು: “ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರ ವಚನಗಳು ತಿಳಿದಿರುವದು ಹೇಗೆ?” (ಯೋಹಾನ 7:15) ಮತ್ತು ಅಪೊಸ್ತಲರ ಕುರಿತು ಧಾರ್ಮಿಕ ಅಧಿಕಾರಿಗಳು, “ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು. ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು.”—ಅಪೊಸ್ತಲರಕೃತ್ಯ 4:13, 14ಎ.
16. ಸಭಾ ಸಂಘಟನೆಗೆ ಒಂದನೆಯ ಶತಮಾನದಲ್ಲಿದ್ದ ಕ್ರೈಸ್ತ ಮಾದರಿಯನ್ನು ಈ ಧರ್ಮಭ್ರಷ್ಟತೆ ಹೇಗೆ ಅಡಮ್ಡಾರ್ಗಕ್ಕೆ ತಿರುಗಿಸಿತು?
16. ಆದರೆ, ಈ ಮತಭ್ರಷ್ಟತೆ ಯೆಹೂದಿ ವೈದಿಕರ ತತ್ವ ವಿಚಾರಗಳನ್ನೂ ಕ್ರಮೇಣ ವಿಧರ್ಮಿ ರೋಮಿನ ಧಾರ್ಮಿಕ ವ್ಯವಸ್ಥೆಯನ್ನೂ ಒಳತಂದಿತು. ಸಮಯ ದಾಟಿದಷ್ಟಕ್ಕೆ ಮತ್ತು ಸತ್ಯ ನಂಬಿಕೆಯಿಂದ ಕ್ರೈಸ್ತರು ತಿರುಗಿದಾಗ ಶಾಸ್ತ್ರಸಮ್ಮತವಲ್ಲದ ಒಂದು ಪಾದ್ರಿವರ್ಗ ಬೆಳೆಯಿತು. ಒಬ್ಬ ಕಿರೀಟಧಾರಿ ಪೋಪನು ಕಾರ್ಡಿನಲರ ಕಾಲೇಜನ್ನು ಆಳತೊಡಗಿದನು. ಈ ಕಾರ್ಡಿನಲರನ್ನು ಸಾವಿರಾರು ಜನ ಬಿಷಪ್ ಮತ್ತು ಆರ್ಚ್ ಬಿಷಪರಿಂದಲೂ ಮತ್ತು ಈ ಕೊನೆಯ ವರ್ಗವನ್ನು ಸೆಮಿನೆರಿಯಲ್ಲಿ ತರಬೇತು ಹೊಂದಿದ ಪಾದ್ರಿಗಳಿಂದಲೂ ಆರಿಸಲಾಯಿತು. ಹೀಗೆ, ಒಂದನೆಯ ಶತಮಾನ ಮುಗಿದು ಸ್ವಲ್ಪದರಲ್ಲಿ ಒಂದು ರಹಸ್ಯಗರ್ಭಿತ ವೈದಿಕ ವರ್ಗ ಕ್ರೈಸ್ತ ಪ್ರಪಂಚವನ್ನು ಆಳತೊಡಗಿತು. ಈ ವರ್ಗ, ಪ್ರಥಮ ಶತಕದ ಕ್ರೈಸ್ತ ಹಿರಿಯರ ಮತ್ತು ಶುಶ್ರೂಷಾ ಸೇವಕರ ಮಾದರಿಯಲ್ಲಲ್ಲ, ವಿಧರ್ಮಿ ಧಾರ್ಮಿಕ ವ್ಯವಸ್ಥೆಯ ಮಾದರಿಯಲ್ಲಿ ವ್ಯವಸ್ಥಿತವಾಯಿತು.
17. ಈ ಅಧರ್ಮ ಸ್ವರೂಪನ ಶಕ್ತಿ ವಿಶೇಷವಾಗಿ ಯಾವಾಗ ಸ್ಥಿರೀಕರಿಸಲ್ಪಟ್ಟಿತು?
17. ಸಾ.ಶ. 3ನೇ ಶತಮಾನದ ಆರಂಭದಲ್ಲಿಯೇ ಸಾಮಾನ್ಯ ವಿಶ್ವಾಸಿಗಳನ್ನು ಎರಡನೆ ದರ್ಜೆಯ ಲೌಕಿಕರಂತೆ ನೋಡಲಾಗುತ್ತಿತ್ತು. ಧರ್ಮಭ್ರಷ್ಟನಾದ ಅಧರ್ಮ ಸ್ವರೂಪನು ಕ್ರಮೇಣ ಅಧಿಕಾರ ವಹಿಸಿದನು. ರೋಮನ್ ಚಕ್ರವರ್ತಿ ಕಾನ್ಸ್ಟೆಂಟೀನನ ಆಳಿಕೆಯಲ್ಲಿ ಮತ್ತು ವಿಶೇಷವಾಗಿ ಸಾ.ಶ. 325 ರ ನೈಸೀಯ ಕೌನ್ಸಿಲ್ನ ಬಳಿಕ ಈ ಅಧಿಕಾರ ಸ್ವೀಕರಿಸಲ್ಪಟ್ಟಿತು. ಆ ಸಮಯದಲ್ಲಿ ಚರ್ಚು ಮತ್ತು ಸರಕಾರ ಒಂದಾಗಿ ಬೆಸೆಯಲ್ಪಟ್ಟಿತು. ಹೀಗೆ, ಕ್ರೈಸ್ತ ಪ್ರಪಂಚದ ವೈದಿಕ ವರ್ಗವಾದ ಅಧರ್ಮ ಸ್ವರೂಪನು ನಮ್ಮ ದೇವರಾದ ಯೆಹೋವನ ವಿರುದ್ಧ ದಂಗೆಯೆದ್ದ ಶತಮಾನ ದೀರ್ಘ ಮತಭ್ರಷ್ಟರ ವಂಶಜನಾಗಿ ಪರಿಣಮಿಸಿದನು. ಇವರು ಅನುಸರಿಸಿರುವ ನಿಯಮ ಮತ್ತು ವ್ಯವಸ್ಥೆಗಳು ದೇವರದ್ದಲ್ಲ, ಸ್ವಂತದ್ದಾಗಿದ್ದವು.
ವಿಧರ್ಮಿ ಬೋಧನೆಗಳು
18. ಈ ಅಧರ್ಮ ಸ್ವರೂಪನು ಯಾವ ದೇವದೂಷಣೆಯ ವಿಧರ್ಮಿ ಬೋಧನೆಗಳನ್ನು ಆರಿಸಿಕೊಂಡನು?
18. ಈ ವಿಕಾಸಗೊಳ್ಳುತ್ತಿದ್ದ ಅಧರ್ಮ ಸ್ವರೂಪನು ವಿಧರ್ಮಿ ಬೋಧನೆಗಳನ್ನು ಸಹ ಉಪಯೋಗಿಸಿಕೊಂಡನು. ಉದಾಹರಣೆಗೆ, ರಹಸ್ಯವಾದ, ಗ್ರಹಿಸಲಾಗದ ತ್ರಯೈಕ್ಯ ದೇವನನ್ನು, “ನಾನೇ ಯೆಹೋವನು. ಇದೇ ನನ್ನ ನಾಮವು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು” ಮತ್ತು “ನಾನೇ ಯೆಹೋವನು. ಇನ್ನು ಯಾವನೂ ಅಲ್ಲ. ನಾನು ಹೊರತು ಇನ್ನು ಯಾವ ದೇವರೂ ಇಲ್ಲ” ಎಂದು ಹೇಳಿದಾತನ ಸ್ಥಾನಕ್ಕೆ ತರಲಾಯಿತು. (ಯೆಶಾಯ 42:8; 45:5) ಈ ಮಾನವ ಅದರಲ್ಲೂ ವಿಧರ್ಮಿ ತತ್ವ ವಿಚಾರಗಳನ್ನು ದೇವರ ಸತ್ಯಗಳ ಸ್ಥಾನಕ್ಕೆ ಪಲ್ಲಟಮಾಡುವದರಲ್ಲಿ ಇನ್ನೂ ಹೆಚ್ಚು ದೇವದೂಷಣೆ ಸೇರಿಕೊಂಡಿತ್ತು: ಬೈಬಲಿನ ದೀನ ಮರಿಯಳನ್ನು ಕ್ರೈಸ್ತ ಪ್ರಪಂಚದ “ದೇವಮಾತೆ”ಯಾಗಿ ಪೂಜ್ಯಭಾವದಿಂದ ನೋಡಲಾಯಿತು. ಹೀಗೆ, ಇಂಥ ಮಿಥ್ಯಾ ಬೋಧನೆಗಳ ಪೋಷಕರಾದ ವೈದಿಕ ವರ್ಗದವರು ಕ್ರಿಸ್ತನಿಂದ ಬಿತ್ತಲ್ಪಟ್ಟ ಒಳ್ಳೆಯ ಬೀಜವನ್ನು ಅದುಮಿ ಹಿಡಿಯ ಪ್ರಯತ್ನಿಸಲಿಕ್ಕಾಗಿ ಸೈತಾನನು ಬಿತ್ತಿದ ಅತ್ಯಂತ ಕೆಡುಕಿನ “ಹಣಜಿ”ಗಳಾದರು.—ಮತ್ತಾಯ 13:36-39.
19. ಕ್ರೈಸ್ತ ಪ್ರಪಂಚ ಶತಮಾನಗಳಿಂದ ಹೇಗೆ ಛಿದ್ರವಾಗಿ ಹೋಗಿದೆ, ಆದರೆ ಯಾವುದು ಮುಂದುವರಿದು ಸ್ಥಿರವಾಗಿದೆ?
19. ಪಂಗಡ, ಪಕ್ಷಗಳು ಛಿದ್ರವಾಗಿ ಕ್ರೈಸ್ತ ಪ್ರಪಂಚವು ನೂರಾರು ಧರ್ಮ ಮತ್ತು ಪಂಥಗಳಾಗಿ ಒಡೆಯಿತು. ಆದರೆ ಪ್ರತಿಯೊಂದು ಧರ್ಮ ಮತ್ತು ಪಂಥವು, ಕೇವಲ ಕೆಲವನ್ನು ಬಿಟ್ಟು, ವೈದಿಕ-ಲೌಕಿಕ ವರ್ಗವನ್ನು ಇಟ್ಟುಕೊಂಡಿತು. ಹೀಗೆ, ಈ ಅಧರ್ಮ ಸ್ವರೂಪ ವರ್ಗ ಇಂದಿನ ತನಕವೂ ಸ್ಥಿರವಾಗುತ್ತಾ ಬಂದಿದೆ. ಮತ್ತು ಇಂದು ಸಹ, ಅದು ತನ್ನ ಪ್ರತ್ಯೇಕ ಉಡುಪು ಮತ್ತು ಶ್ರೇಷ್ಟ ಭಾಷೆಯ ಬಿರುದುಗಳ ಮೂಲಕ ಸಾಮಾನ್ಯ ಜನರಿಗಿಂತ ತನ್ನನ್ನು ಬೇರ್ಪಡಿಸಿಕೊಂಡಿದೆ. ಅಧರ್ಮ ಸ್ವರೂಪನು ತನ್ನನ್ನು ಮಹಿಮೆ ಪಡಿಸಿಕೊಂಡು ದೇವತಾ ಸ್ಥಾನಕ್ಕೆ ತನ್ನನ್ನು ಏರಿಸಿಕೊಳ್ಳುವನೆಂದು ಪೌಲನು ನುಡಿದಾಗ ಅದು ಅತಿಶಯೋಕ್ತಿಯಾಗಿರಲಿಲ್ಲ.
ಪೋಪನ ಅಧಿಕಾರ
20. ಒಂದು ಕ್ಯಾಥ್ಲಿಕ್ ಪುಸ್ತಕ ಪೋಪನನ್ನು ಹೇಗೆ ವರ್ಣಿಸುತ್ತದೆ?
20. ಇಂಥ ವೈಭವದ ಒಂದು ಉದಾಹರಣೆ ರೋಮಿನ ಪೋಪನ ಅಧಿಕಾರವೇ. ಲೂಶಿಯೊ ಫೆರಾರಿಸ್ ಬರೆದ ಇಟೆಲಿಯಲ್ಲಿ ಪ್ರಕಾಶಿತವಾದ ಕ್ರೈಸ್ತ ಧರ್ಮದ ಡಿಕ್ಷ್ನೆರಿಯೊಂದು ಪೋಪನನ್ನು “ಅವನು ಎಷ್ಟು ವೈಭವ ಮತ್ತು ಶ್ರೇಷ್ಟತೆಯವನೆಂದರೆ, ಅವನು ಕೇವಲ ಮನುಷ್ಯನಾಗಿರದೆ ದೇವರೋ ಎಂಬಂತಿದ್ದಾನೆ ಮತ್ತು ದೇವರ ಪ್ರತಿನಿಧಿಯಾಗಿದ್ದಾನೆ” ಎಂದು ವರ್ಣಿಸಿತು. ಅವನ ಕಿರೀಟ, “ಸ್ವರ್ಗ, ಭೂಮಿ ಮತ್ತು ಪಾತಾಳದ ರಾಜನ” ಮುಮ್ಮಡಿ ಕಿರೀಟ ಎಂದು ವರ್ಣಿಸಿತು. ಅದೇ ಡಿಕ್ಷ್ನೆರಿ ಮುಂದುವರಿಸುವುದು: “ಪೋಪನು ಭೂಮಿಯ ಮೇಲೆ ದೇವರೋ ಎಂಬಂತಿದ್ದಾನೆ. ಕ್ರಿಸ್ತನ ನಂಬಿಗಸ್ತರಲ್ಲಿ ಒಬ್ಬನೇ ಪ್ರಭು, ಸರ್ವ ರಾಜರುಗಳಲ್ಲಿ ಅತ್ಯಂತ ಮಹಾ ರಾಜನು ಆತನೇ.” “ಪೋಪನು ಕೆಲವು ಸಲ ದೈವಿಕ ನಿಯಮವನ್ನು ನಿಷ್ಫಲಗೊಳಿಸಬಲ್ಲನು.” ಇದಲ್ಲದೆ, ಪೋಪನ ಕುರಿತು ನ್ಯೂ ಕ್ಯಾಥ್ಲಿಕ್ ಡಿಕ್ಷ್ನೆರಿ ಹೇಳುವದು: “ಅವನ ರಾಯಭಾರಿಗಳಿಗೆ ಇತರ ರಾಯಭಾರಿ ವರ್ಗಕ್ಕಿಂತ ಹೆಚ್ಚು ಆದ್ಯತೆ ಇದೆ.”
21. ಪೇತ್ರ ಮತ್ತು ದೇವದೂತನ ವರ್ತನೆಗಳನ್ನು ಪೋಪನದಕ್ಕೆ ಹೋಲಿಸಿರಿ.
21. ಯೇಸುವಿನ ಶಿಷ್ಯರಿಗೆ ಅಸದೃಶವಾಗಿ, ಪೋಪನು ವಿಪರೀತ ಪರಿಷ್ಕೃತವಾದ ಉಡುಪುಗಳನ್ನು ತೊಟ್ಟು ಜನರಿಂದ ಮರ್ಯಾದೆಯನ್ನು ಸ್ವಾಗತಿಸುತ್ತಾನೆ. ಜನರು ಅವನ ಮುಂದೆ ತಲೆಬಗ್ಗಿಸಿ, ಅವನ ಉಂಗುರಕ್ಕೆ ಮುದ್ದಿಟ್ಟು, ತನ್ನನ್ನು ವಿಶೇಷ ಕುರ್ಚಿಯಲ್ಲಿ ಅವರ ಭುಜಗಳ ಮೇಲೆ ಹೊತ್ತುಕೊಳ್ಳುವಂತೆ ಪೋಪನು ಬಿಡುತ್ತಾನೆ. ಪೋಪರು ಶತಮಾನಗಳಲ್ಲಿ ಎಂಥ ನಿಸ್ಸಾರತೆಯನ್ನು ಪ್ರದರ್ಶಿಸಿದ್ದಾರೆ! ಪೇತ್ರನ ಸಾದಾತನಕ್ಕೆ ಇದೆಷ್ಟು ವ್ಯತಿರಿಕ್ತ. ಪೇತ್ರನ ಮುಂದೆ ಮೊಣಕಾಲೂರಿ ಪ್ರಣಾಮ ಮಾಡಿದ ರೋಮನ್ ಸೇನಾಧಿಕಾರಿ ಕೊರ್ನೇಲ್ಯನಿಗೆ ಪೇತ್ರನಂದದ್ದು: “ಏಳಪ್ಪಾ. ನಾನೂ ಮನುಷ್ಯನು.” (ಅಪೊಸ್ತಲರ ಕೃತ್ಯ 10:25, 26) ಮತ್ತು ಯೋಹಾನನಿಗೆ ಪ್ರಕಟನೆಯನ್ನು ಒದಗಿಸಿದ ದೇವದೂತನಿಗೂ ಇದೆಷ್ಟು ಭಿನ್ನ! ಯೋಹಾನನು ಉಪಾಸನಾ ರೀತಿಯಲ್ಲಿ ದೇವದೂತನ ಮುಂದೆ ಪಾದಕ್ಕೆ ಬಿದ್ದಾಗ ದೇವದೂತನಂದದ್ದು: “ಮಾಡಬೇಡ, ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ. ದೇವರಿಗೇ ನಮಸ್ಕಾರ ಮಾಡು.”—ಪ್ರಕಟನೆ 22:8, 9.
22. ಅಧರ್ಮ ಸ್ವರೂಪನನ್ನು ಯಾವ ಶಾಸ್ತ್ರೀಯ ನಿಯಮದಿಂದ ಗುರುತಿಸಬಹುದು?
22. ಪಾದ್ರಿವರ್ಗಕ್ಕೆ ಇಲ್ಲಿ ಕಟ್ಟಲ್ಪಟ್ಟ ಬೆಲೆ ತೀರಾ ಕಠಿಣತಮ ಬೆಲೆಯೋ? ಯೇಸು ಸುಳ್ಳು ಪ್ರವಾದಿಗಳನ್ನು ಗುರುತಿಸಲು ಕೊಟ್ಟ “ಆತನ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ” ಎಂಬ ನಿಯಮವನ್ನು ಅನ್ವಯಿಸಿ ನಾವಿದನ್ನು ನಿರ್ಧರಿಸಬಹುದು. (ಮತ್ತಾಯ 7:15, 16) ಹಾಗಾದರೆ ಕಳೆದ ಶತಮಾನಗಳಲ್ಲಿ ಮತ್ತು ನಮ್ಮ ಈ 20ನೇ ಶತಮಾನದಲ್ಲಿ ಈ ವೈದಿಕ ವರ್ಗ ಬಿಟ್ಟಿರುವ ಫಲವೇನು? ಈ ಅಧರ್ಮ ಸ್ವರೂಪನಿಗಾಗುವ ಗತಿ ಏನು, ಮತ್ತು ಇದರಲ್ಲಿ ಯಾರು ಭಾಗಿಗಳಾಗುವರು? ದೇವರಿಗೆ ನಿಜವಾಗಿ ಭಯಪಡುವವರಿಗೆ ಈ ನಿಯಮರಹಿತನ ಸಂಬಂಧದಲ್ಲಿ ಯಾವ ಜವಾಬ್ದಾರಿ ಇದೆ? ಈ ಮುಖ್ಯಾಂಶಗಳನ್ನು ಮುಂದಿನ ಲೇಖನ ಚರ್ಚಿಸುವುದು. (w90 2/1)
ಪುನರ್ವಿಮರ್ಶೆಯ ಪ್ರಶ್ನೆಗಳು
◻ ಅಧರ್ಮ ಸ್ವರೂಪನು ಏನಾಗಿದ್ದಾನೆ ಮತ್ತು ಅದು ಬೆಳಕಿಗೆ ಬಂದದ್ದು ಯಾವಾಗ?
◻ ಈ ನಿಯಮರಹಿತ ವರ್ಗದ ಜನಕನನ್ನು ಬೈಬಲು ಹೇಗೆ ಗುರುತಿಸುತ್ತದೆ?
◻ ವೈದಿಕ ವರ್ಗದವರು ಜನರಿಗಿಂತ ತಮ್ಮನ್ನು ಹೇಗೆ ಹೆಚ್ಚಿಸಿಕೊಂಡಿದ್ದಾರೆ?
◻ ವೈದಿಕ ವರ್ಗದವರು ಯಾವ ಧರ್ಮಭ್ರಷ್ಟ ಬೋಧನೆ ಮತ್ತು ಆಚಾರಗಳನ್ನು ಬೆಳೆಸಿದರು?
◻ ಪೋಪರುಗಳ ಮನೋಭಾವ ಪೇತ್ರನ ಮತ್ತು ಒಬ್ಬ ದೇವದೂತನದ್ದಕ್ಕೆ ಹೇಗೆ ಭಿನ್ನವಾಗಿದೆ?
[ಪುಟ 16 ರಲ್ಲಿರುವ ಚಿತ್ರಗಳು]
ಪೋಪರುಗಳಿಗೆ ಅಸದೃಶವಾಗಿ ಅಪೊಸ್ತಲ ಪೇತ್ರನು ಮಾನವರು ತನಗೆ ಪ್ರಣಾಮ ಸಲ್ಲಿಸುವಂತೆ ಬಿಡಲಿಲ್ಲ