‘ಯೆಹೋವನು ನಾನು ಭರವಸವಿಡುವ ನನ್ನ ದೇವರು’
ವಿಲಿ ಡಿಹಲ್ರಿಂದ ಹೇಳಲ್ಪಟ್ಟದ್ದು
“ಬೆ ತೆಲಿಗೆ ನೀನೇಕೆ ಹೋಗಬಯಸುತ್ತೀ?” ಇದು ನನ್ನ ತಂದೆಯವರು ಕೇಳಿದ ಪ್ರಶ್ನೆ, 1931ರ ವಸಂತಕಾಲದಲ್ಲಿ ಬೆತೆಲ್ ಸೇವೆಯನ್ನು ಆರಂಭಿಸ ಬಯಸಿದ್ದ ನನ್ನ ಅಪೇಕ್ಷೆಯನ್ನು ನಾನು ಅವರಿಗೆ ತಿಳಿಸಿದಾಗ. ನನ್ನ ಹೆತ್ತವರು ಸಾರ್ಲ್ಯಾಂಡಲ್ಲಿ ವಾಸಿಸುತ್ತಿದ್ದರು, ಸುಮಾರು ಹತ್ತು ವರ್ಷಗಳಿಂದ ಸತ್ಯದಲ್ಲಿದ್ದವರು, ಮತ್ತು ತಮ್ಮ ಮೂವರು ಗಂಡುಮಕ್ಕಳಾದ ನಮಗೆ ಅವರು ಒಂದು ಒಳ್ಳೇ ಮಾದರಿಯನ್ನಿಟ್ಟಿದ್ದರು. ಸತ್ಯವು ಅವರ ಇಡೀ ಜೀವಿತವಾಗಿತ್ತು, ಮತ್ತು ಅದನ್ನು ನನ್ನ ಇಡೀ ಜೀವಿತವನ್ನಾಗಿಯೂ ಮಾಡಲು ನಾನು ಬಯಸಿದ್ದೆ.
ಆದರೆ ನನ್ನ ಹೆತ್ತವರು ಯೆಹೋವನ ಕುರಿತು ಮತ್ತು ಆತನ ಪವಿತ್ರ ಚಿತ್ತದ ಕುರಿತು ಕಲಿತದ್ದು ಹೇಗೆ? ವ್ಯವಸ್ಥಾಪಿತ ಧರ್ಮದಿಂದ ಅಸಂತೃಪ್ತಿಗೊಂಡಿದ್ದ ಅವರು ಸತ್ಯಕ್ಕಾಗಿ ಬಹಳ ಸಮಯದಿಂದ ಹುಡುಕಾಡಿದ್ದರು. ಹಲವಾರು ಚರ್ಚುಗಳನ್ನು ಮತ್ತು ಪಂಗಡಗಳನ್ನು ಪರೀಕ್ಷಿಸಿ ನೋಡಿದ್ದರು, ಸರದಿಯಲ್ಲಿ, ಅವುಗಳಲ್ಲಿ ಪ್ರತಿಯೊಂದೂ ಅಸತ್ಯವೆಂಬದಾಗಿ ಕಂಡುಕೊಂಡರು.
ಒಂದುದಿನ, ಚಿತ್ರಗಳೊಂದಿಗೆ ಒಂದು ಭಾಷಣವನ್ನು ಮತ್ತು “ಫೊಟೋ-ಡ್ರಾಮ ಆಫ್ ಕ್ರಿಯೇಶನ್” ಎಂಬ ದೇವರ ಉದ್ದೇಶದ ಕುರಿತಾದ ಫಿಲ್ಮನ್ನು ಪ್ರಕಟಿಸಿದ್ದ ಒಂದು ಹಸಪ್ತತ್ರಿಕೆಯು ನಮ್ಮ ಮನೆ ಬಾಗಲಲ್ಲಿ ಬಿಡಲ್ಪಟ್ಟಿತ್ತು. “ಫೋಟೊ-ಡ್ರಾಮ” ತೋರಿಸಲ್ಪಡಲಿಕ್ಕಿದ್ದ ಆ ಸಮಯದಲ್ಲಿ ತಂದೆಗೆ ಕೆಲಸಕ್ಕೆ ಹೋಗಲಿಕ್ಕಿತ್ತು, ಆದ್ದರಿಂದ ತಾಯಿಯು ಅದಕ್ಕೆ ಹಾಜರಾಗುವಂತೆ ತಂದೆ ಉತ್ತೇಜಿಸಿದ್ದರು. “ಪ್ರಾಯಶಃ” ಅವರಂದದ್ದು “ಅದರಿಂದ ಏನಾದರೂ ಪ್ರಯೋಜನ ಸಿಕ್ಕೀತು.” ಆ ಸಂಜೆ ಅದನ್ನು ನೋಡಿಬಂದಾಗ ನನ್ನ ತಾಯಿ ತುಂಬಾ ಉತ್ಸಾಹಭರಿತಳಾಗಿದ್ದಳು. “ಕೊನೆಗಾದರೂ, ಸತ್ಯವು ನನಗೆ ಸಿಕ್ಕಿತು!” ಎಂದರವರು. “ನಾಳೆ ಸಂಜೆಗೆ ಸ್ವತಾಃ ನೀವೇ ಬಂದು ಖಾತ್ರಿ ಮಾಡಿಕೊಳ್ಳಿ. ನಾವು ಹುಡುಕಾಡುತ್ತಿದ್ದದ್ದು ಇದೇ ಸತ್ಯಕ್ಕಾಗಿ.” ಅದು 1921ರ ವರ್ಷವಾಗಿತ್ತು.
ಆತ್ಮಾಭಿಷಿಕ್ತ ಕ್ರೈಸ್ತರೋಪಾದಿ ನನ್ನ ಹೆತ್ತವರು ಸಾಯುವ ತನಕ ನಂಬಿಗಸ್ತರಾಗಿ ಉಳಿದರು. ನನ್ನ ತಂದೆ ನಾಝೀಗಳಿಂದ ಹಲವಾರು ಸಲ ಬಂಧನಕ್ಕೆ ಒಳಗಾಗಿ 1944ರಲ್ಲಿ ಮೃತರಾದರು ಮತ್ತು ತಾಯಿ 1970ರಲ್ಲಿ ತೀರಿಕೊಂಡರು. ತಾಯಿ ಸಹಾ ನಾಝೀ ಆಡಳಿತದ ಕೆಳಗೆ ದೀರ್ಘಕಾಲದ ಸೆರೆವಾಸವನ್ನು ಅನುಭವಿಸಿದ್ದರು.
ನನ್ನ ಹೆತ್ತವರ ಆದರ್ಶ ಹುರುಪು
ನನ್ನ ಹೆತ್ತವರು ಸಾಯುವುದಕ್ಕೆ ಮುಂಚೆ, ಕ್ಷೇತ್ರ ಸೇವೆಯಲ್ಲಿ ಅತ್ಯಂತ ಆಸಕ್ತರಿದ್ದರು. ತಾಯಿ ವಿಶೇಷವಾಗಿ, 1922ರಿಂದ 1928ರ ತನಕ ಪ್ರಕಟಿಸಲ್ಪಟ್ಟಿದ್ದ ಅಧಿವೇಶನ ನಿರ್ಧಾರಗಳನ್ನು ಹಂಚುವುದರಲ್ಲಿ ಅತಿ ಹುರುಪಿನಿಂದಿದ್ದರು. ಎಕ್ಲೀಸಿಯಾಸ್ಟಿಕ್ಸ್ ಇಂಡಿಕ್ಟೆಡ್ ಎಂಬ 1924ರಲ್ಲಿ ಪ್ರಕಟಿತವಾದ ನಿರ್ಧಾರವು ಪಾದ್ರಿಗಳ ವಿರುದ್ಧ ಕಟು ಟೀಕೆಯನ್ನೊಳಗೊಂಡಿತ್ತು. ಅದನ್ನು ಹಂಚಲು ಧೈರ್ಯ ಬೇಕಿತ್ತು. ಪ್ರಚಾರಕರು ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ತೊಡಗಿ ಮನೆ ಬಾಗಲಡಿಯಿಂದ ಟ್ರೇಕ್ಟ್ಗಳನ್ನು ಹಾಕುತ್ತಿದ್ದರು. ನಾನು ಕೇವಲ 12 ವಯಸ್ಸಿನವನಾಗಿದ್ದಾಗ್ಯೂ ನನ್ನ ಹೆತ್ತವರು ನನ್ನನ್ನು ಅದರಲ್ಲಿ ಭಾಗವಹಿಸುವಂತೆ ಬಿಟ್ಟರು. ನಾವು ಹೆಚ್ಚಾಗಿ ಬೆಳಿಗ್ಗೆ ಐದು ಗಂಟೆಯಿಂದಲೇ ಪ್ರಾರಂಭಿಸಿ, ಮೂರು ನಾಲ್ಕು ತಾಸುಗಳ ಸೈಕಲ್ ಸವಾರಿ ಮಾಡಿ ದೂರದೂರದ ಕ್ಷೇತ್ರವನ್ನು ಮುಟ್ಟುತ್ತಿದ್ದೆವು. ಸೈಕಲುಗಳನ್ನು ಪೊದೆಗಳಲ್ಲಿ ಅಡಗಿಸಿಡುತ್ತಿದೆವ್ದು, ನಾನು ಅವಕ್ಕೆ ಕಾವಲು ನಿಂತಾಗ ಇತರರು ಹೋಗಿ ಹಳ್ಳಿಯಲ್ಲಿ ಕಾರ್ಯನಡಿಸುತ್ತಿದ್ದರು. ಅಪರಾಹ್ನ ಹಿಂದೆ ಮನೆಗೆ ಪುನಃ ಸೈಕಲ್ ಸವಾರಿ, ಅನಂತರ ಸಂಜೆ ಕೂಟಗಳಿಗೆ ಒಂದು ತಾಸು ನಡೆದು ಹೋಗುತ್ತಿದ್ದೆವು.
ಸಮಯಾನಂತರ, ನನಗಿಂತ ಚಿಕ್ಕವರು ಸೈಕಲು ಕಾಯಲು ಬಿಡಲ್ಪಡುತ್ತಿದ್ದರು ಮತ್ತು ನಾನು ಪ್ರಚಾರಕರೊಂದಿಗೆ ಹೋಗುತ್ತಿದ್ದೆ. ಆದರೆ ಯಾರೂ ನನ್ನನ್ನು ತರಬೇತು ಮಾಡುವ ಕುರಿತು ಯೋಚಿಸಲಿಲ್ಲ. ಇಂಥಿಂಥಾ ಬೀದಿಯಲ್ಲಿ ಕೆಲಸ ಮಾಡು ಅಂದರು ಅಷ್ಟೇ! ಮೊದಲನೆಯ ಮನೆಯ ಕಡೆಗೆ ನುಸುಳಿದಾಗ ನನ್ನ ಹೃದಯ ಹಾರುತ್ತಿತ್ತು, ಮನೆಯಲ್ಲಿ ಯಾರೂ ಇರಬಾರದು ಎಂದು ನಿರೀಕ್ಷಿಸುತ್ತಲೂ ಇದ್ದೆ. ದುರ್ದೈವದಿಂದ, ಒಬ್ಬ ಪುರುಷನೇ ಬಾಗಿಲು ತೆರೆದ. ನನ್ನಿಂದ ಮಾತೇ ಹಾರಿಹೋಗಿತ್ತು. ನಡುಗುವ ಕೈಯಿಂದ ನನ್ನ ಬ್ಯಾಗಲ್ಲಿದ್ದ ಪುಸ್ತಕದ ಕಡೆಗೆ ತೋರಿಸಿದೆ. “ಅದು ಜಡ್ಜ್ ರಥರ್ಫರ್ಡರದ್ದೋ” ಎಂದು ಕೇಳಿದ ಆತ. ನಾನು ತೊದಲುತ್ತಾ ಏನೋ ಹೇಳಿದೆ. “ಅದು ಹೊಸತೋ, ನನ್ನಲ್ಲಿಲ್ಲದ್ದೋ, ನೋಡೋಣ.” “ಹೌದು, ಅದು ಹೊಸತು,” ಎಂದು ದೃಢೀಕರಿಸಿದೆ ನಾನು. “ಹಾಗಾದರೆ ನನಗೆ ಅದು ಬೇಕೇಬೇಕು. ಇದಕ್ಕೆಷ್ಟು?” ಇದು ನನಗೆ ಮುಂದರಿಯಲು ಧೈರ್ಯವನ್ನು ಕೊಟ್ಟಿತು.
1924ರಲ್ಲಿ ವಯಸ್ಕರು 1925ನೇ ವರ್ಷದ ಕುರಿತು ಬಹಳಷ್ಟನ್ನು ಮಾತಾಡುತ್ತಿದ್ದರು. ಒಂದು ಸಾರಿ ನಾವು ಬೈಬಲ್ ಸ್ಟೂಡೆಂಟ್ಸ್ರ ಒಂದು ಕುಟುಂಬವನ್ನು ಸಂದರ್ಶಿಸಿದೆವು. ಆಗ ಒಬ್ಬ ಸಹೋದರನು ಹೀಗೆ ಕೇಳಿದ: “ಕರ್ತನು ನಮ್ಮನ್ನು ಪರಲೋಕಕ್ಕೆ ತಕ್ಕೊಂಡರೆ ನಮ್ಮ ಮಕ್ಕಳ ಗತಿಯೇನು?” ತಾಯಿ, ಎಂದಿನಂತೆ ಸಕಾರಾತ್ಮಕವಾಗಿ, ಉತ್ತರಿಸಿದ್ದು: “ಅವರ ಜೋಪಾಸನೆ ಮಾಡಲು ಕರ್ತನು ಬಲ್ಲನು.” ವಿಷಯವು ನನ್ನನ್ನು ತೀರಾ ಮುಗ್ಧಗೊಳಿಸಿತು. ಇದೆಲ್ಲಾದರ ಅರ್ಥವೇನು? 1925 ಬಂತು ಮತ್ತು ದಾಟಿಹೋಯಿತು, ಸಂಭವಿಸಿದ್ದು ಏನೂ ಇಲ್ಲ. ಆದರೂ ನನ್ನ ಹೆತ್ತವರು ತಮ್ಮ ಹುರುಪನ್ನೆಂದೂ ಬಿಟ್ಟಿರಲಿಲ್ಲ.
ತಂದೆಯ ಸುಜ್ಞ ಬುದ್ಧಿವಾದ
ಕೊನೆಗೆ 1931ರಲ್ಲಿ, ನನ್ನ ಜೀವಿತದೊಂದಿಗೆ ನಾನೇನು ಮಾಡಬಯಸಿದ್ದೇನೆಂದು ನನ್ನ ತಂದೆಗೆ ತಿಳಿಸಿದೆ. “ಬೆತೆಲಿಗೆ ನೀನೇಕೆ ಹೋಗಬಯಸುತ್ತೀ?” ಕೇಳಿದರು ತಂದೆ. “ಯಾಕಂದರೆ ನಾನು ಯೆಹೋವನನ್ನು ಸೇವಿಸ ಬಯಸುತ್ತೇನೆ,” ನನ್ನ ಉತ್ತರ. “ಒಂದುವೇಳೆ ಬೆತೆಲಿಗೆ ನೀನು ಸ್ವೀಕರಿಸಲ್ಪಟ್ಟಲ್ಲಿ,” ಅವರು ಮುಂದರಿಸಿದರು. “ಅಲ್ಲಿನ ಸಹೋದರರು ದೇವದೂತರಲ್ಲವೆಂಬದು ನಿನಗೆ ತಿಳಿದಿದೆಯೇ? ಅವರೂ ಅಪೂರ್ಣರು ಮತ್ತು ತಪ್ಪು ಮಾಡುವವರು. ಅದು ನಿನ್ನನ್ನು ಅಲ್ಲಿಂದ ಓಡಿಹೋಗುವಂತೆ ಮಾಡಬಹುದು ಮತ್ತು ನಂಬಿಕೆಯನ್ನು ಕಳಕೊಳ್ಳುವಂತೆಯೂ ಮಾಡೀತು. ಆದ್ದರಿಂದ ಅದರ ಕುರಿತು ಜಾಗ್ರತೆಯಿಂದ ಯೋಚಿಸಿ ಖಾತರಿ ಮಾಡಿಕೋ.”
ಅಂಥ ಒಂದು ವಿಷಯವನ್ನು ಕೇಳಿ ನನಗೆ ಧಕ್ಕೆ ತಗಲಿತು. ಆದರೂ ಕೆಲವು ದಿನಗಳ ತನಕ ವಿಷಯವನ್ನು ತೂಗಿನೋಡಿದ ಮೇಲೆ, ಬೆತೆಲಿಗೆ ಅರ್ಜಿಮಾಡುವ ನನ್ನ ಅಪೇಕ್ಷೆಯನ್ನು ಪುನಃ ತಿಳಿಸಿದೆ. “ಏಕೆ ಹೋಗ ಬಯಸುತ್ತೀ ಎಂಬದನ್ನು ಪುನಃ ಹೇಳು” ಎಂದರು ತಂದೆ. “ಏಕಂದರೆ ನಾನು ಯೆಹೋವನನ್ನು ಸೇವಿಸ ಬಯಸುವುದರಿಂದಲೇ” ಎಂದೆ ನಾನು. “ಮಗನೇ, ಅದನ್ನು ಎಂದಿಗೂ ಮರೆಯಬೇಡ. ನೀನು ಆಮಂತ್ರಿತನಾದರೆ, ಯಾಕೆ ಅಲ್ಲಿಗೆ ಹೋಗುತ್ತೀ ಎಂಬದನ್ನು ನೆನಪಿಡು. ಏನಾದರೂ ತಪ್ಪನ್ನು ನೀನಲ್ಲಿ ಕಂಡರೆ ಅತಿರೇಕ ಚಿಂತಿತನಾಗದಿರು. ನಿನಗೆ ಕೆಟ್ಟ ಉಪಚಾರವು ದೊರೆತರೆ ಸಹಾ ಓಡಿಹೋಗದಿರು. ಬೆತೆಲಿನಲ್ಲಿ ನೀನೇಕೆ ಇದ್ದೀ ಎಂಬದನ್ನು ಮರೆಯದಿರು—ಯಾಕಂದರೆ ನೀನು ಯೆಹೋವನನ್ನು ಸೇವಿಸ ಬಯಸುತ್ತೀ! ಕೇವಲ ನಿನ್ನ ಕೆಲಸದ ಕಡೆಗೆ ಗಮನ ಕೊಡು ಮತ್ತು ಆತನಲ್ಲಿ ಭರವಸವಿಡು.”
ಹೀಗೆ ನವಂಬರ 17, 1931ರ ಆ ಅಪರಾಹ್ನದ ಆರಂಭಕ್ಕೆ ನಾನು ಸ್ವಿಟ್ಸರ್ಲೆಂಡಿನ ಬರ್ನ್ನಲ್ಲಿರುವ ಬೆತೆಲಿಗೆ ಆಗಮಿಸಿದೆ. ಬೇರೆ ಮೂವರೊಂದಿಗೆ ಒಂದು ಕೋಣೆಯಲ್ಲಿ ನಾನು ಪಾಲಿಗನಾದೆ ಮತ್ತು ಕೈಯಿಂದ ಕಾಗದ-ಉಣಿಸುವ ಒಂದು ಚಿಕ್ಕ ಪ್ರಿಂಟಿಂಗ್ ಪ್ರೆಸ್ಸನ್ನು ನಡಿಸಲು ಕಲಿತೆ. ನನಗೆ ಮುದ್ರಿಸಲು ನೇಮಕವಾದ ಸಲಕರಣೆಗಳಲ್ಲಿ ಮೊದಲನೇದ್ದು ರುಮೇನಿಯನ್ ಭಾಷೆಯ ಕಾವಲಿನಬುರುಜು.
ಪರಲೋಕದಿಂದ ಒಂದು ಸಂದೇಶ!
1933ರಲ್ಲಿ ಸೊಸೈಟಿಯು, ಸಹೋದರ ರಥರ್ಫರ್ಡರು ಅಮೆರಿಕದಲ್ಲಿ ಕೊಟ್ಟಿದ್ದ ಮೂರು ರೇಡಿಯೋ ಭಾಷಣಗಳು ಅಡಕವಾಗಿದ್ದ ಒಂದು ಕಿರುಪುಸ್ತಕ ದ ಕ್ರೈಸಿಸ್ನ್ನು ಪ್ರಕಟಿಸಿತು. ಆ ಕಿರುಪುಸ್ತಕವು ಒಂದು ವಿಶೇಷ ರೀತಿಯಲ್ಲಿ ವಿತರಣೆಯಾಗಲಿದೆ ಎಂದು ಬ್ರಾಂಚ್ ಸೇವಕ ಸಹೋದರ ಹಾರ್ಬೆಕ್ ಬೆಳಿಗ್ಗಿನ ಉಪಹಾರದ ಸಮಯ ಬೆತೆಲ್ ಕುಟುಂಬಕ್ಕೆ ತಿಳಿಸಿದರು. ಬರ್ನ್ ಶಹರದ ಮೇಲೆ ಹಾರಾಡುವ ಒಂದು ಚಿಕ್ಕ ಬಾಡಿಗೆಯ ವಿಮಾನದಿಂದ ಜಾಹೀರಾತಿನ ಕರಪತ್ರಗಳು ಸುರಿಸಲ್ಪಡಲಿದ್ದವು, ಆಗ ಪ್ರಚಾರಕರು ಬೀದಿಗಳಲ್ಲಿ ನಿಂತು ಆ ಕಿರುಪುಸ್ತಕವನ್ನು ಸಾರ್ವಜನಿಕರಿಗೆ ನೀಡಬೇಕಿತ್ತು. “ಯುವ ಸಹೋದರರಾದ ನಿಮ್ಮಲ್ಲಿ ಯಾರು ಆ ವಿಮಾನದಲ್ಲಿ ಹೋಗಲು ಸಿದ್ಧರು?” ಎಂದರವರು. “ಈ ಕೂಡಲೇ ಹೆಸರು ಕೊಡಿ.” ನಾನು ಕೊಟ್ಟೆನು, ಮತ್ತು ನನ್ನನ್ನು ಆರಿಸಿದ್ದಾರೆಂದು ಸಹೋದರ ಹಾರ್ಬೆಕ್ ಅನಂತರ ಪ್ರಕಟಿಸಿದರು.
ಆ ಮಹತ್ವದ ದಿನ, ನಾವು ಕರಪತ್ರಗಳ ರಟ್ಟುಪೆಟ್ಟಿಗೆಗಳ ಸಹಿತ ವಿಮಾನ ನಿಲ್ದಾಣಕ್ಕೆ ಪಯಣಿಸಿದೆವು. ನಾನು ವಿಮಾನಚಾಲಕನ ಹಿಂದೆ ಕೂತಿದ್ದು ಕರಪತ್ರಗಳನ್ನು ಸೀಟಿನ ಮೇಲೆ ನನ್ನ ಪಕ್ಕದಲ್ಲಿ ಓರಣವಾಗಿ ಗುಡ್ಡೆಮಾಡಿಟ್ಟೆ. ನನಗೆ ಖಚಿತವಾಗಿ ಸೂಚಿಸಲ್ಪಟ್ಟದ್ದು: ಕರಪತ್ರಗಳನ್ನು ನೂರು ನೂರಾಗಿ ಸುತ್ತಿ ಪ್ರತಿ ಕಟ್ಟನ್ನು ಕಿಟಿಕಿಯಿಂದ ಹೊರಗೆ ಒಂದು ಪಕ್ಕಕ್ಕೆ ಶಕ್ಯವಾದಷ್ಟು ಬಲದಿಂದ ಬೀಸಿ ಎಸೆದು ಬಿಡು. ಅಜಾಗ್ರತೆಯಾದರೆ ಕರಪತ್ರಗಳು ವಿಮಾನದ ಬಾಲದಲ್ಲಿ ಸಿಲುಕಿಕೊಂಡು ಸಮಸ್ಯೆಗಳನ್ನು ತರಸಾಧ್ಯವಿತ್ತು. ಆದರೆ ಎಲ್ಲವೂ ಸುಗಮವಾಗಿ ಸಾಗಿತು. ಈ ‘ಪರಲೋಕದಿಂದ ಸಂದೇಶ’ವನ್ನು ಕಾಣುವುದೆಷ್ಟು ರೋಮಾಂಚಕರವಾಗಿತ್ತೆಂದು ಅನಂತರ ಸಹೋದರರು ತಿಳಿಸಿದರು. ಅಪೇಕ್ಷಿತ ಪರಿಣಾಮವನ್ನು ಅದು ತಂದಿತು; ತಮ್ಮ ಹೂತೋಟ ತುಂಬಾ ಕರಪತ್ರಗಳು ಬಿದ್ದಿವೆಂದು ಕೆಲವರು ಫೋನಿನಲ್ಲಿ ದೂರಿದರೂ, ಅನೇಕ ಕಿರುಪುಸ್ತಕಗಳು ನೀಡಲ್ಪಟ್ಟವು.
ಪ್ರತಿಯೊಂದು ಸೇವಾ ಸುಯೋಗಕ್ಕಾಗಿ ಅಭಾರಿ
ಬೆತೆಲ್ ಸೇವೆಯ ಸಂತೋಷ ಮತ್ತು ಸಂತೃಪ್ತಿಗಾಗಿ ನಾನು ದಿನದಿನವೂ ಯೆಹೋವನಿಗೆ ಉಪಕಾರ ಹೇಳಿದೆ. ಸಭೆಯಲ್ಲಿ ನನಗೆ, ರಾಜ್ಯ ಸಭಾಗೃಹದ ಬಾಗಿಲು ತೆರೆಯುವ, ಕುರ್ಚಿಗಳನ್ನು ಓರಣವಾಗಿ ಏರ್ಪಡಿಸಿಡುವ ಮತ್ತು ಭಾಷಣಗಾರನ ನಿಲುವಿನ ಮೇಲೆ ಒಂದು ಗ್ಲಾಸ್ ತಣ್ಣೀರನ್ನಿಡುವ ಕೆಲಸ ನೇಮಕವಾಗಿತ್ತು. ಅದು ಒಂದು ಮಹಾ ಗೌರವವೆಂದು ನಾನು ಪರಿಗಣಿಸಿದೆ.
ಬೆತೆಲಿನಲ್ಲಿ ಕಡೆಗೆ ನಾನು, ಪೋಲಿಶ್ ಭಾಷೆಯ ದ ಗೋಲ್ಡನ್ ಏಜ್ (ಈಗ ಅವೇಕ್!) ಪತ್ರಿಕೆಯನ್ನು ಮುದ್ರಿಸುತ್ತಿದ್ದ ದೊಡ್ಡ ಚಪ್ಪಟೆ-ತಳದ ಪ್ರಿಂಟಿಂಗ್ ಪ್ರೆಸ್ಸಲ್ಲಿ ಕೆಲಸ ಮಾಡಿದೆ. 1934ರಲ್ಲಿ ಫೊನೋಗ್ರಾಫನ್ನು ನಾವು ಉಪಯೋಗಿಸ ತೊಡಗಿದೆವು, ಮತ್ತು ಅದರ ರಚನೆಯಲ್ಲಿ ನಾನು ನೆರವಾಗಿದ್ದೆ. ರೆಕಾರ್ಡ್ ಮಾಡಿದ ಬೈಬಲ್ ಭಾಷಣಗಳೊಂದಿಗೆ ಮನೆಮನೆಗೆ ಹೋಗುವದರಲ್ಲಿ ನಾನು ಮಹಾನಂದವನ್ನು ಕಂಡುಕೊಂಡೆ. ಅನೇಕ ಮನೆಯವರು ಈ ಚಿಕ್ಕ ವಿಲಕ್ಷಣ ಯಂತ್ರವನ್ನು ನೋಡಲು ಕುತೂಹಲದಿಂದಿದ್ದರು, ಅದಕ್ಕೆ ಕಿವಿಗೊಡಲು ಕೆಲವು ಸಾರಿ ಇಡೀ ಕುಟುಂಬವೇ ಒಟ್ಟುಸೇರುತ್ತಿತ್ತು ಆದರೆ ಅನಂತರ ಒಬ್ಬೊಬ್ಬರಾಗಿಯೇ ಮೆಲ್ಲನೆ ಮಾಯವಾಗುತ್ತಿದ್ದರು. ಇಡಿ ಕುಟುಂಬವೇ ಹೋದಾಗ, ನಾನು ಎದ್ದು ಮುಂದಿನ ಸಂದರ್ಶನಕ್ಕೆ ಮುಂದುವರಿಯುತ್ತಿದ್ದೆ.
ಯುದ್ಧದ ಸಮಯದಲ್ಲಿ ಸಕ್ರಿಯರಾಗಿ ಉಳಿಯುವುದು
ಒಂದನೇ ಲೋಕ ಯುದ್ಧದ ನಂತರ ನನ್ನ ಸ್ವದೇಶವಾದ ಸಾರ್ಲ್ಯಾಂಡ್ ಜರ್ಮನಿಯಿಂದ ಪ್ರತ್ಯೇಕವಾಯಿತು ಮತ್ತು ಜನಾಂಗ ಸಂಘದ ನೇತೃತ್ವದ ಕೆಳಗೆ ಆಳಲ್ಪಟ್ಟಿತು. ಹೀಗೆ, ಸಾರ್ಲ್ಯಾಂಡ್ ತನ್ನ ಸ್ವಂತ ಅನನ್ಯತೆಯ ದಸ್ತಾವೇಜನ್ನು ಹೊರತಂದಿತು. 1935ರಲ್ಲಿ ಅದರ ನಾಗರಿಕರು ಜರ್ಮನಿಯೊಂದಿಗೆ ಪುನಃ ಸೇರಲು ಅಪೇಕ್ಷಿಸುತ್ತಾರೋ ಎಂದು ನಿರ್ಣಯಿಸಲು ಒಂದು ಸಾರ್ವಜನಿಕ ಅಭಿಮತವನ್ನು ನಡಿಸಲಾಯಿತು. ನಾನು ನನ್ನ ಕುಟುಂಬವನ್ನು ಸಂದರ್ಶಿಸಲು ಈ ಸಂದರ್ಭವನ್ನುಪಯೋಗಿಸಿದೆ ಯಾಕಂದರೆ ಸಾರ್ಲ್ಯಾಂಡ್ ನಾಝೀ ಆಡಳಿತದ ಕೆಳಗೆ ಬಂದರೆ ಹಾಗೆ ಮಾಡುವ ಶಕ್ಯತೆ ಇಲ್ಲವೆಂದು ನನಗೆ ಗೊತ್ತಿತ್ತು. ಮತ್ತು ನಿಶ್ಚಯವಾಗಿ, ಅನಂತರ ಅನೇಕ ವರ್ಷಗಳ ತನಕ, ನನ್ನ ಹೆತ್ತವರಿಂದಾಗಲಿ ಸಹೋದರರಿಂದಾಗಲಿ ಯಾವ ವರ್ತಮಾನವೂ ನನಗೆ ಸಿಗಲ್ಲಿಲ್ಲ.
ಎರಡನೆಯ ಲೋಕ ಯುದ್ಧದಲ್ಲಿ ನೇರವಾದ ಒಳಗೂಡುವಿಕೆ ತಪ್ಪಿದರೂ, ಜರ್ಮನರು ನೆರೆಕರೆಯ ದೇಶಗಳನ್ನು ಒಂದೊಂದಾಗಿ ಆಕ್ರಮಿಸಿದಂತೆ ಸ್ವಿಟ್ಸರ್ಲೆಂಡ್ ಪೂರ್ಣ ಒಂಟಿಯಾಗಿ ಪರಿಣಮಿಸಿತು. ನಾವು ಜರ್ಮನಿಯನ್ನು ಬಿಟ್ಟು ಬೇರೆ ಇಡೀ ಯೂರೋಪಿಗೆ ಸಾಹಿತ್ಯವನ್ನು ಮುದ್ರಿಸುತ್ತಿದ್ದೆವು, ಆದರೆ ಈಗ ಯಾವ ಸಾಹಿತ್ಯವನ್ನೂ ಒದಗಿಸ ಸಾಧ್ಯವಿರಲಿಲ್ಲ. ಆಗ ಬ್ರಾಂಚ್ ಸೇವಕರಾಗಿದ್ದ ಸಹೋದರ ಝರ್ಕರ್, ನಮ್ಮಲ್ಲಿ ಕಾರ್ಯತಃ ಯಾವ ಹಣವೂ ಉಳಿದಿಲ್ಲವೆಂದು ತಿಳಿಸಿದರು ಮತ್ತು ವಿಷಯಗಳು ಸುಧಾರಿಸುವ ತನಕ ಬೆತೆಲಿನ ಹೊರಗೆ ನಾವು ಕೆಲಸ ಹುಡುಕುವಂತೆ ಆಮಂತ್ರಿಸಿದರು. ಆದರೂ ನನ್ನನ್ನು ಉಳಿಯುವಂತೆ ಅನುಮತಿಸಲಾಯಿತು ಯಾಕಂದರೆ ಸುಮಾರು ಸಾವಿರ ಸಂಖ್ಯೆಯಲ್ಲಿದ್ದ ಸ್ಥಳೀಕ ಪ್ರಚಾರಕರಿಗಾಗಿ ಛಾಪಿಸಲು ಕೆಲವು ವಿಷಯಗಳು ಅಲ್ಲಿದ್ದವು.
ಬೆತೆಲ್ ಕುಟುಂಬವು ಜುಲೈ 5, 1940ನ್ನು ಮಾತ್ರ ಎಂದೂ ಮರೆಯಲಾರದು. ಮಧ್ಯಾಹ್ನದೂಟವಾದ ತುಸುವೇಳೆಯಲ್ಲಿಯೇ ಒಂದು ಮಿಲಿಟರಿ ಟ್ರಕ್ ಬಂದು ನಿಂತಿತು. ಸೈನಿಕರು ಹೊರಗೆ ಹಾರಿ ಬಂದು ಬೆತೆಲಿನೊಳಗೆ ನುಗ್ಗಿದರು. ಚಲಿಸದೆ ನಿಲ್ಲಲು ನಮಗೆ ಅಪ್ಪಣೆಯಾಯಿತು, ಮತ್ತು ಒಬ್ಬೊಬ್ಬ ಸಶಸ್ತ್ರ ಸೈನಿಕನು ನಮ್ಮಲ್ಲಿ ಪ್ರತಿಯೊಬ್ಬನಿಗೆ ವೈಯಕ್ತಿಕವಾಗಿ ಪಹರೆ ನಿಂತನು. ನಮ್ಮನ್ನು ಭೋಜನಾಲಯಕ್ಕೆ ಹಿಂಡಾಗಿ ಅಟ್ಟಿದಾಗ ಇತರರು ಕಟ್ಟಡದ ತನಿಖೆಗೆ ತೊಡಗಿದರು. ಮಿಲಿಟರಿ ಸೇವೆಯನ್ನು ನಿರಾಕರಿಸುವಂತೆ ನಾವು ಇತರರನ್ನು ಪ್ರೇರಿಸುತ್ತೇವೆಂದು ಅಧಿಕಾರಿಗಳು ಸಂಶಯಿಸಿದ್ದರು, ಆದರೆ ಯಾವ ರುಜುವಾತೂ ಅವರಿಗೆ ಸಿಗಲಿಲ್ಲ.
ಆ ಯುದ್ಧದ ವರುಷಗಳಲ್ಲಿ ನಾನು ಟೂನ್ ಮತ್ತು ಫ್ರುಟಿಗನ್ ಎರಡರಲ್ಲೂ ಸಭಾ ಸೇವಕನಾಗಿದ್ದೆ. ಆದ್ದರಿಂದ ನನ್ನ ವಾರಾಂತ್ಯದ ಕಾಲತಖ್ತೆಯು ಪೂರಾ ತುಂಬಿಹೋಗಿತ್ತು. ಪ್ರತಿ ಶನಿವಾರ, ಮಧ್ಯಾಹ್ನದೂಟದ ಕೂಡಲೇ ನಾನು ಫ್ರುಟಿಗನ್ಗೆ 50 ಕಿಲೋಮೀಟರ್ ಸೈಕಲ್ ಸವಾರಿಯನ್ನು ಮಾಡಿ ಅಲ್ಲಿ ಸಂಜೆಗೆ ಕಾವಲಿನಬುರುಜು ಅಭ್ಯಾಸವನ್ನು ನಡಿಸುತ್ತಿದ್ದೆ. ಭಾನುವಾರ ಬೆಳಿಗ್ಗೆ ಪ್ರಚಾರಕರೊಂದಿಗೆ ಕ್ಷೇತ್ರ ಸೇವೆಗೆ ಹೋಗುತ್ತಿದ್ದೆ. ಅನಂತರ ಮಧ್ಯಾಹ್ನದ ಮೇಲೆ ಒಂದು ಸಭಾ ಪುಸ್ತಕಭ್ಯಾಸ ನಡಿಸಲು ಇಂಟರ್ಲೇಕನ್ಗೆ ಹೋಗುತ್ತಿದ್ದೆ ಮತ್ತು ಆ ಮೇಲೆ ಸಂಜೆಗೆ ಸ್ಪೆಟ್ಸ್ನಲ್ಲಿ ಒಂದು ಕುಟುಂಬದೊಂದಿಗೆ ಬೈಬಲ್ ಅಧ್ಯಯನ ನಡಿಸುತ್ತಿದ್ದೆ. ಟೂನ್ನಲ್ಲಿ ಕಾವಲಿನಬರುಜು ಅಧ್ಯಯನ ನಡಿಸುವದರೊಂದಿಗೆ ನನ್ನ ದಿನವು ಕೊನೆಗೊಳ್ಳುತ್ತಿತ್ತು.
ರಾತ್ರಿ ತಡವಾಗಿ, ನನ್ನೆಲ್ಲಾ ಚಟುವಟಿಕೆ ಮುಗಿದ ಮೇಲೆ, ಹಾಡುತ್ತಾ ಸಿಳ್ಳುಹಾಕುತ್ತಾ ಆಳವಾದ ಸಂತೃಪ್ತಿಯಿಂದ ನಾನು ಬರ್ನ್ಗೆ ಹಿಂತಿರುಗಿ ಬರುತ್ತಿದ್ದೆ. ಅಗ ಹೆಚ್ಚು ವಾಹನಗಳು ಎದುರಾಗುತ್ತಿರಲಿಲ್ಲ. ಯುದ್ಧದ ಸಮಯದಲ್ಲಿ ರಾತ್ರಿ ಬೆಳಕು ಕಾಣದಂತೆ ಮರೆಮಾಡುವ ನಿಯಮವಿದದ್ದರಿಂದ, ದೂರದ ಗುಡ್ಡಗಳಿಂದಾವೃತವಾದ ರಮ್ಯನೋಟವು ಕತ್ತಲನ್ನು ಧರಿಸಿದೆಯೋ ಎಂಬಂತೆ ನೆಮ್ಮದಿಯೂ ಪ್ರಶಾಂತಿಯೂ ಉಳ್ಳದ್ದಾಗಿ ಕೆಲವೊಮ್ಮೆ ಮಾತ್ರ ಬೆಳದಿಂಗಳಲ್ಲಿ ಮಿನುಗುತ್ತಿತ್ತು. ಆ ವಾರಾಂತ್ಯಗಳು ನನ್ನ ಜೀವಿತವನ್ನೆಷ್ಟೋ ಸಂಪನ್ನಗೊಳಿಸಿದ್ದವು ಮತ್ತು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತಿದ್ದವು!
ಅನಿರೀಕ್ಷಿತ ಫಲಿತಾಂಶಗಳ ಒಂದು ಸಂದರ್ಶನೆ
1945ರ ಶರತ್ಕಾಲದೊಳಗೆ ಸಹೋದರ ನೋರ್ ನಮ್ಮನ್ನು ಸಂದರ್ಶಿಸಿದರು. ಒಂದು ದಿನ ನಾನು ರಾಟರಿ ಪ್ರೆಸ್ಸ್ನ ಮೇಲೆ ನಿಂತಿದ್ದಾಗ ಅವರು ಫ್ಯಾಕ್ಟರಿಯನ್ನು ಪ್ರವೇಶಿಸಿದರು. “ಕೆಳಗೆ ಬಾ” ಎಂದವರು ಕರೆದರು. “ಗಿಲ್ಯಾದ್ ಶಾಲೆಗೆ ಹಾಜರಾಗಲು ನಿನಗಿಷ್ಟವಿದೆಯೇ?” ನಾನು ದಂಗುಬಡಿದು ನಿಂತೆ. “ನಾನದಕ್ಕೆ ಯೋಗ್ಯನೆಂದು ನೀವು ಕಂಡರೆ, ಸಂತೋಷದಿಂದ” ಎಂದೆ ನಾನು. 1946ರ ವಸಂತಕಾಲದಲ್ಲಿ ಸಹೋದರ ಫ್ರೆಡ್ ಬಾರಿಸ್, ಸಹೋದರಿ ಆ್ಯಲಿಸ್ ಬರ್ನರ್ ಮತ್ತು ನನಗೆ ಆಮಂತ್ರಣಗಳು ದೊರೆತವು. ಆದರೆ ನಾನು ಸಾರ್ಲ್ಯಾಂಡಲ್ಲಿ ಜನಿಸಿದ್ದ ಕಾರಣ ಸಂಸ್ಥಾನರಹಿತನಾಗಿದದ್ದರಿಂದ ಒಂದು ವಿಶೇಷ ವೀಸಾಕ್ಕಾಗಿ ಅಮೆರಿಕದ ವಾಷಿಂಗ್ಟನ್ ಡಿ.ಸಿ.ಗೆ ಅರ್ಜಿಹಾಕಬೇಕಾಯಿತು.
ಇತರರು ತಕ್ಕ ಸಮಯದಲ್ಲಿ ಹೊರಟರೂ ನಾನು ಮಾತ್ರ ಅರ್ಜಿಗೆ ಉತ್ತರ ಬರುವ ತನಕ ಕಾಯಬೇಕಾಯಿತು. ಸಪ್ಟಂಬರ 4ಕ್ಕೆ ಶಾಲೆ ಪ್ರಾರಂಭಿಸಿದಾಗ ನಾನಿನ್ನೂ ಸ್ವಿಟ್ಸರ್ಲೆಂಡ್ನಲ್ಲಿದ್ದೆ, ನಿಧಾನವಾಗಿ ಆಶೆಗುಂದುತಿತ್ತು. ಆಗ ಅಮೆರಿಕದ ರಾಯಭಾರಿ ಕಚೇರಿಯಿಂದ ನನಗೆ ಕರೆಬಂತು, ನನ್ನ ವೀಸಾ ಬಂದಿದೆ ಎಂದು ತಿಳಿಸಲಾಯಿತು. ಆ ಕೂಡಲೇ ನಾನು ಪ್ರಯಾಣದ ಏರ್ಪಾಡು ಮಾಡ ತೊಡಗಿದೆ, ಮಾರ್ಸಿಲಸ್ದಿಂದ ನ್ಯೂ ಯೋರ್ಕ್ಗೆ ಹೋಗುವ ಪಡೆ-ಹಡಗದಲ್ಲಿ ನನಗೆ ಜಾಗ ಸಿಕ್ಕಿತು. ಎಂಥ ಅನುಭವವದು! ಏಥೆಸ್ II ಜನರಿಂದ ತುಂಬಿಹೋಗಿತ್ತು. ತೆರಪಿನ ಕೋಣೆಯಲ್ಲಿ ನನಗೊಂದು ಹಾಸಿಗೆ ಕೊಡಲಾಯಿತು. ಸಮುದ್ರಯಾನದ ಎರಡನೆಯ ದಿನ ಎಂಜಿನ್ ರೂಮಲ್ಲಿ ಒಂದು ಸ್ಪೋಟವುಂಟಾಗಿ ಹಡಗು ನಿಂತುಹೋಯಿತು. ಪ್ರಯಾಣಿಕರು ಮತ್ತು ನಾವಿಕರು ನಾವು ಮುಳುಗಿ ಬಿಡುತ್ತೇವೋ ಎಂದು ಹೆದರಿ ಗಾಬರಿಗೊಂಡಿದ್ದರು. ಪುನರುತ್ಥಾನದ ನಿರೀಕ್ಷೆಯ ಕುರಿತು ಸಾಕ್ಷಿಕೊಡಲು ಇದು ನನಗೆ ಒಂದು ಉತ್ತಮ ಸಂಧಿಯನ್ನಿತಿತ್ತು.
ಹಡಗನ್ನು ದುರುಸ್ತಿ ಮಾಡಲು ಎರಡು ದಿನ ತಗಲಿತು, ಆ ಮೇಲೆ ವೇಗದ-ಗತಿ ಕಡಿಮೆ ಮಾಡಿ ನಾವು ಮುಂದರಿಯಬೇಕಾಯಿತು. 18 ದಿನಗಳ ತರುವಾಯ ನ್ಯೂ ಯೋರ್ಕನ್ನು ತಲಪಿದೆವು ಆದರೆ ಹಡಗುಕಟ್ಟೆಯ ಸಂಪಿನಿಂದಾಗಿ ಹಡಗಿನೊಳಗೇ ಉಳಿಯಬೇಕಾಯಿತು. ರಾಜಿಪ್ರಸ್ತಾಪಗಳಾದ ಮೇಲೆ ಕೊನೆಗೆ ನಾವು ಹಡಗಬಿಟ್ಟು ಹೊರಡ ಶಕ್ತರಾದೆವು. ಪರಿಸ್ಥಿತಿಗಳ ಕುರಿತು ನಾನು ಸೊಸೈಟಿಗೆ ತಂತೀ ವಾರ್ತೆ ಕಳುಹಿಸಿದ್ದೆ. ಸುಂಕಕಟ್ಟೆ ಮತ್ತು ವಲಸೆ-ಕಚೇರಿಯನ್ನು ಬಿಟ್ಟು ಹೊರಗೆ ಬಂದಾಗ, ಒಬ್ಬ ಮನುಷ್ಯನು ಕೇಳಿದ್ದು: “ನೀವು ಶ್ರೀಯುತ ಡಿಹಲ್ರೋ?” ಅವರು ಸಹೋದರ ನೋರರ ಸಹಾಯಕರಲ್ಲೊಬ್ಬರಾಗಿದ್ದರು, ನನ್ನನ್ನು ಗಿಲ್ಯಾದ್ ಶಾಲೆಗೆ ಸಮೀಪದ ಇಥಾಕಕ್ಕೆ ಹೋಗುವ ರಾತ್ರಿಯ ರೈಲಿನಲ್ಲಿ ಕೂಡ್ರಿಸಿದರು ಮತ್ತು ನಾನು ಮರುದಿನ ಬೆಳಿಗ್ಗೆ ಸುಮಾರು ಎಂಟು ಗಂಟೆಯ ನಂತರ ಅಲ್ಲಿಗೆ ಆಗಮಿಸಿದೆ. ಕಟ್ಟಕಡೆಗೆ ಅಲ್ಲಿರಲು, ಮತ್ತು ಆ ಪ್ರಥಮ ಅಂತರಾಷ್ಟ್ರೀಯ ಗಿಲ್ಯಾದ್ ಕ್ಲಾಸನ್ನು ಹಾಜರಾಗಲು ಶಕ್ತನಾದದ್ದಕ್ಕಾಗಿ ನಾನೆಷ್ಟು ಸಂತೋಷಿಸಿದೆ!
ಕಷ್ಟಗಳ ನಡುವೆಯೂ ತಾಳಿಕೊಂಡಿರುವುದು
ಫೆಬ್ರವರಿ 9, 1947, ಗಿಲ್ಯಾದಿನ ಎಂಟನೆಯ ಕ್ಲಾಸಿನ ಪದವಿಪಡೆಯುವ ದಿನವಾಗಿತ್ತು ಮತ್ತು ಅನಿಶ್ಚಯತೆಯ ಚಿಂತೆ ಎಲ್ಲರನ್ನು ಬಾಧಿಸಿತ್ತು. ನಮ್ಮನ್ನು ಎಲ್ಲಿಗೆ ಕಳುಹಿಸುವರೋ ಎಂಬ ಅನುಮಾನ. ನನ್ನ “ಸ್ವಾಸ್ಥ್ಯವು,” ಸೊಸೈಟಿಯು ಹೊಸತಾಗಿ ತೆರೆದಿದ್ದ ಜರ್ಮನಿಯ ವಿಸ್ಬೇಡನ್ ಪ್ರಿಂಟರಿಗೆ ಬಿತ್ತು. (ಕೀರ್ತನೆ 16:6) ಆವಶ್ಯಕ ಅನುಮತಿ ಪತ್ರಗಳಿಗಾಗಿ ಅರ್ಜಿಮಾಡಲು ನಾನು ಬರ್ನ್ಗೆ ಹಿಂದಿರುಗಿದೆ. ಆದರೆ ಜರ್ಮನಿಯಲ್ಲಿದ್ದ ಅಮೆರಿಕದ ಆಕ್ರಮಣ ಸೈನ್ಯವು, ಯುದ್ಧಕ್ಕೆ ಮುಂಚೆ ಅಲ್ಲಿ ಜೀವಿಸಿದ್ದ ಜನರಿಗೆ ಮಾತ್ರವೇ ಪ್ರವೇಶದ ಅನುಮತಿ ಕೊಡುತ್ತಿದ್ದರು. ನಾನು ಹಾಗಿರದರ್ದಿಂದ, ಬ್ರೂಕ್ಲಿನ್ ಮುಖ್ಯ ಕಾರ್ಯಾಲಯದಿಂದ ಒಂದು ಹೊಸ ನೇಮಕವು ನನಗೆ ಬೇಕಾಯಿತು. ಅದು ಸ್ವಿಟ್ಸರ್ಲೆಂಡಿನ ಸರ್ಕಿಟ್ ಕೆಲಸವಾಗಿ ಪರಿಣಮಿಸಿತು, ಅದನ್ನು ನಾನು ಯೆಹೋವನಲ್ಲಿ ಪೂರ್ಣ ಭರವಸದಿಂದ ಸ್ವೀಕರಿಸಿದೆ. ಆದರೆ ಈ ನೇಮಕವನ್ನು ಕಾಯುತ್ತಿದ್ದಾಗ, ಒಂದು ದಿನ ಮೂವರು ಸಂದರ್ಶಕ ಸಹೋದರಿಯರಿಗೆ ಬೆತೆಲ್ ಕಟ್ಟಡಗಳನ್ನು ತೋರಿಸುವಂತೆ ನನ್ನನ್ನು ಕೇಳಲಾಯಿತು. ಅವರಲ್ಲಿ ಒಬ್ಬಳು ಮಾರ್ಟೆ ಮೆಲ್ ಎಂಬ ಹೆಸರಿನ ಪಯನೀಯರಳು.
1949ರ ಮೇ ತಿಂಗಳಲ್ಲಿ, ನಾನು ಮಾರ್ಟೆಯನ್ನು ಮದುವೆಯಾಗಲು ಯೋಜಿಸಿದ್ದೇನೆಂದೂ ಮತ್ತು ನಾವಿಬ್ಬರೂ ಪೂರ್ಣ ಸಮಯದ ಸೇವೆಯಲ್ಲಿ ಉಳಿಯ ಬಯಸುತ್ತೇವೆಂದೂ ಬರ್ನ್ನ ಮುಖ್ಯ ಕಾರ್ಯಾಲಯಕ್ಕೆ ತಿಳಿಸಿದೆ. ಪ್ರತಿಕ್ರಿಯೆ? ಕ್ರಮದ ಪಯನೀಯರ ಸೇವೆಯಲ್ಲದೆ ಬೇರೆ ಯಾವ ಸುಯೋಗಗಳೂ ಇಲ್ಲ. 1949ರ ಜೂನ್ನಲ್ಲಿ ನಮ್ಮ ವಿವಾಹವನ್ನು ಹಿಂಬಾಲಿಸಿ. ನಾವು ಅದನ್ನು ಬಾಯಲ್ನಲ್ಲಿ ಪ್ರಾರಂಭಿಸಿದೆವು, ನನಗೆ ಭಾಷಣ ಕೊಡಲು ಅನುಮತಿ ಇರಲಿಲ್ಲ, ಜರಗಲಿದ್ದ ಸಮ್ಮೇಲನದ ಪ್ರತಿನಿಧಿಗಳಿಗೆ ಸ್ಥಳ ಹುಡುಕಲೂ ನಮಗೆ ಪರವಾನಗಿ ಇರಲಿಲ್ಲ, ಆ ಸುಯೋಗಕ್ಕಾಗಿ ನಮ್ಮ ಸರ್ಕಿಟ್ ಮೇಲ್ವಿಚಾರಕರು ನಮ್ಮನ್ನು ಶಿಫಾರಸು ಮಾಡಿದ್ದರೂ ಕೂಡಾ. ಅನೇಕರು ನಮ್ಮನ್ನು ವಂದಿಸುತ್ತಲೂ ಇರಲಿಲ್ಲ; ನಾವು ಪಯನೀಯರರಾಗಿದ್ದಾಗ್ಯೂ, ಬಹಿಷ್ಕೃತ ವ್ಯಕ್ತಿಗಳಂತೆ ನಮ್ಮನ್ನು ಉಪಚರಿಸುತ್ತಿದ್ದರು.
ಆದರೂ, ವಿವಾಹವಾಗುವದೇನೂ ಆಶಾಸ್ತ್ರೀಯವಲ್ಲವೆಂದು ನಮಗೆ ತಿಳಿದಿತ್ತು. ಆದುದರಿಂದ ನಾವು ಪ್ರಾರ್ಥನೆಯ ಆಸರೆಯನ್ನು ಹೊಕ್ಕು ಯೆಹೋವನಲ್ಲಿ ನಮ್ಮ ಭರವಸವನ್ನು ಇಟ್ಟೆವು. ಕಾರ್ಯಥಾ ಈ ಉಪಚಾರವು ಸೊಸೈಟಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸಿರಲಿಲ್ಲ. ಅದು ಕೇವಲ ಸಂಸ್ಥಾಪನೆಯ ಮಾರ್ಗದರ್ಶಕಗಳ ತಪ್ಪು ಅನ್ವಯದ ಫಲಿತಾಂಶವಾಗಿತ್ತು.
ಸಹೋದರ ನೋರರ ಮರುಭೇಟಿ
1951ರಲ್ಲಿ ಸಹೋದರ ನೋರರು ಸ್ವಿಟ್ಸರ್ಲೆಂಡನ್ನು ಪುನಃ ಸಂದರ್ಶಿಸಿದರು. ಅವರು ತಮ್ಮ ಭಾಷಣವನ್ನು ಕೊಟ್ಟಾದ ಮೇಲೆ, ನನ್ನೊಂದಿಗೆ ಮಾತಾಡಲು ಬಯಸುತ್ತಾರೆಂದು ನನಗೆ ತಿಳಿಸಲಾಯಿತು. ತುಸು ಅನುಮಾನಿಸಿದರೂ, ನನ್ನನ್ನು ನೋಡಲು ಅವರು ಸಂತೋಷಿಸಿದ್ದಕ್ಕಾಗಿ ನಾನು ಹರ್ಷಗೊಂಡೆ. ಜಿನೀವದಲ್ಲಿ ಯೋಜಿತವಾದ ಒಂದು ಮಿಶನೆರಿ ಮನೆಯಲ್ಲಿ ಒಂದು ನೇಮಕವನ್ನು ಪಡೆಯಲು ನಮಗೆ ಮನಸ್ಸುಂಟೋ ಎಂದವರು ಕೇಳಿದರು. ಸಹಜವಾಗಿಯೇ ನಾವು ಸಂತಸಪಟ್ಟೆವು, ಆದರೂ ಬಾಯೆಲನ್ನು ಅಗಲುವುದೇನೂ ನಮಗೆ ದುಃಖರಹಿತವಾಗಿದ್ದಿರಲಿಲ್ಲ. ಮರುದಿನ ಇನ್ನೊಂದು ವಿನಂತಿಯು ಕೂಡಿದ್ದ ಒಂದು ಪತ್ರವು ಸಹೋದರ ನೋರರಿಂದ ನಮಗೆ ತಲಪಿತು. ಸ್ವಿಟ್ಸರ್ಲೆಂಡಿನಲ್ಲಿ ಸರ್ಕಿಟ್ ಕೆಲಸಕ್ಕೆ ಹೆಚ್ಚಿನ ಗಮನ ಬೇಕಿದದ್ದರಿಂದ ನಾವದನ್ನು ಪುನಃ ವಹಿಸಿಕೊಳ್ಳಲು ಸಿದ್ಧರೋ? ನಾವು ಕೂಡಲೇ ಒಪ್ಪಿದೆವು. ನನ್ನ ಮನೋಭಾವನೆ ಯಾವಾಗಲೂ, ನೀಡಲ್ಪಟ್ಟ ಯಾವುದೇ ನೇಮಕವನ್ನು ಸ್ವೀಕರಿಸುವದಾಗಿತ್ತು.
ಪೂರ್ವ ಸ್ವಿಟ್ಸರ್ಲೆಂಡಿನ ನಮ್ಮ ಸರ್ಕಿಟ್ ಕೆಲಸದ ಚಟುವಟಿಕೆಯು ಬಹಳವಾಗಿ ಆಶೀರ್ವದಿಸಲ್ಪಟ್ಟಿತ್ತು. ನಮ್ಮೆಲ್ಲಾ ಸ್ವತ್ತುಗಳನ್ನು ಎರಡು ಸೂಟ್ಕೇಸ್ಗಳಲ್ಲಿ ತುಂಬಿಸಿ ನಾವು ರೈಲಿನ ಮೂಲಕ ಸಭೆಗಳನ್ನು ಒಂದೊಂದಾಗಿ ಸಂದರ್ಶಿಸುತ್ತಿದ್ದೆವು. ಕೆಲವೊಮ್ಮೆ ಸಹೋದರರು ತಮ್ಮ ಸೈಕಲುಗಳೊಂದಿಗೆ ಬಂದು ನಮ್ಮನ್ನು ರೈಲು ನಿಲ್ದಾಣದಲ್ಲಿ ಭೇಟಿಯಾಗುತ್ತಿದ್ದರು, ಯಾಕಂದರೆ ಆ ಕಾಲದಲ್ಲಿ ಕಾರುಗಳಿದ್ದದ್ದು ಕೆಲವರಿಗೆ ಮಾತ್ರ. ವರ್ಷಗಳ ನಂತರ ಒಬ್ಬ ಸಹೋದರನು ನಮಗೆ ಉಪಯೋಗಿಸಲು ಒಂದು ಕಾರನ್ನು ಒದಗಿಸಿದನು, ಇದು ನಮ್ಮ ಸೇವೆಯನ್ನು ತುಸು ಸುಲಭವನ್ನಾಗಿ ಮಾಡಿತು.
ಕೆಲವು ಹೊಸ ಆಶ್ಚರ್ಯಗಳು
1964ರಲ್ಲಿ ನನ್ನ ಪತ್ನಿ ಮತ್ತು ನಾನು, ಹತ್ತು ತಿಂಗಳ ಅವಧಿಯ—ಈಗ ಎಂಟು ತಿಂಗಳಿಗೆ ಸಂಕ್ಷೇಪಿಸಿರುವ—ಒಂದು ಸವಿಸ್ತಾರ ಅಧ್ಯಯನದ ಕೊನೆಯ ವರ್ಗವಾದ, 40ನೇ ಗಿಲ್ಯಾದ್ ಕ್ಲಾಸಿಗೆ ಆಮಂತ್ರಿಸಲ್ಪಟ್ಟಾಗ ನಮಗಾದ ಆನಂದವೆಷ್ಟು. ಮಾರ್ಟೆಗೆ ಬೇಗನೇ ಇಂಗ್ಲಿಷ್ ಕಲಿಯುವ ಅಗತ್ಯವಿತ್ತು, ಆಕೆ ಇದನ್ನು ಶ್ಲಾಘನೀಯವಾಗಿ ನಿರ್ವಹಿಸಿದಳು. ನಾವು ಎಲ್ಲಿಗೆ ಕಳುಹಿಸಲ್ಪಡುವೆವೋ ಎಂಬ ಊಹಾಪೋಹಗಳು ಬಹಳವಾಗಿದ್ದವು. ನನ್ನ ಮನೋಭಾವನೆ: ‘ನನಗೆ ಯಾವದೇ ನೇಮಕಗಳು ದೊರೆತರೂ ಚಿಂತಿಲ್ಲ, ಆಫೀಸ್ ಕೆಲಸ ಬಿಟ್ಟು ಬೇರೆ ಯಾವುದಾದರೂ ಸರಿಯೇ.’
ಆದರೆ ಸರಿಯಾಗಿ ಸಂಭವಿಸಿದ್ದು ಅದೇ! ಪದವೀಧರರಾಗುವ ದಿನ, ಸಪ್ಟಂಬರ 13, 1965ರಂದು, ನಾನು ಸ್ವಿಟ್ಸರ್ಲೆಂಡಿನ ಬ್ರಾಂಚ್ ಮೇಲ್ವಿಚಾರಕನಾಗಿ ನೇಮಕಗೊಂಡೆ. ಮಾರ್ಟೆಗೆ ಬೆತೆಲ್ ಒಂದು ಹೊಸ ಅನುಭವವಾಗಲಿಕ್ಕಿದ್ದಿತ್ತು. ನನಗಾದರೆ ಅದು, 1931ರಿಂದ 1946ರ ವರೆಗೆ ನಾನೆಲ್ಲಿ ಸೇವೆ ನಡಿಸಿದ್ದೆನೋ ಆ ಪ್ರಿಂಟರಿಗಲ್ಲ, “ದೇವರ ಮನೆಗೆ,” ಆಫೀಸಿನ ಕೆಲಸಕ್ಕಾಗಿ ಹೋಗುವ ಅರ್ಥದಲ್ಲಿತ್ತು. ಅನೇಕ ಹೊಸ ವಿಷಯಗಳನ್ನು ನನಗೆ ಕಲಿಯಲಿಕ್ಕಿತ್ತು, ಆದರೆ ಯೆಹೋವನ ಸಹಾಯದಿಂದ ಹಾಗೆ ಮಾಡಲು ಶಕ್ತನಾದೆ.
ಹಿಂದಿರುಗಿ ನೋಡುವುದು
ಅರುವತ್ತು ವರುಷಗಳ ಪೂರ್ಣ ಸಮಯದ ಸೇವೆಯ ಅವಧಿಯಲ್ಲೆಲ್ಲಾ ನಾನು ಪೂರ್ಣವಾಗಿ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ, ಹಾಗೆ ಮಾಡುವಂತೆ ನನ್ನ ತಂದೆಯವರು ನನಗೆ ಹೇಳಿದ್ದ ಪ್ರಕಾರವೇ. ಮತ್ತು ಯೆಹೋವನು ಬಹುವಿಧವಾದ ಆಶೀರ್ವಾದಗಳನ್ನು ಸುರಿಸಿದ್ದಾನೆ. ನಿರಾಶೆಯ ಸಮಯದಲ್ಲಿ ಅಥವಾ ನೇಮಕಗಳು ನನ್ನ ಸಹನೆಯನ್ನು ಮೀರುವ ಬೆದರಿಕೆ ಹಾಕಿದಾಗ, ಮಾರ್ಟೆಯು ಒಂದು ಪ್ರಚಂಡ ಉತ್ತೇಜನದ ಮೂಲವಾಗಿದ್ದಳು ಮತ್ತು ಯೆಹೋವನಲ್ಲಿ ಪರಿಪೂರ್ಣವಾದ ಭರವಸೆಯುಳ್ಳ ನಿಜ ನಿಷ್ಠೆಯುಳ್ಳ ಸಹಕಾರಿಣಿ ಆಗಿದ್ದಾಳೆ.
ನಾನು ಆನಂದಿಸಿದ್ದ ಅನೇಕ ಸೇವಾ ಸುಯೋಗಗಳಿಗಾಗಿ ಯೆಹೋವನಿಗೆ ಸ್ತೋತ್ರವಾಗಲಿ! ನಾನಿನ್ನೂ ಟೂನ್ನಲ್ಲಿ ಬ್ರಾಂಚ್ ಕಮಿಟಿಯ ಕಾರ್ಡಿನೇಟರಾಗಿ ಸೇವೆ ಮಾಡುತ್ತಿದ್ದೇನೆ ಮತ್ತು ಹಲವಾರು ಸಲ ಝೋನ್ ಮೇಲ್ವಿಚಾರಕನಾಗಿಯೂ ಸಂದರ್ಶಿಸಿದ್ದೇನೆ. ಏನನ್ನೇ ಮಾಡಲು ನನಗೆ ಹೇಳಲ್ಪಡಲಿ, ನಾನು ಯಾವಾಗಲೂ ಯೆಹೋವನನ್ನೇ ಮಾರ್ಗದರ್ಶನೆಗಾಗಿ ನೋಡಿದ್ದೇನೆ. ನನ್ನ ಅನೇಕ ತಪ್ಪುಗಳು ಮತ್ತು ಕುಂದುಕೊರತೆಗಳ ನಡುವೆಯೂ, ಯೆಹೋವನು ಕ್ರಿಸ್ತನ ಮೂಲಕವಾಗಿ ನನ್ನನ್ನು ಕ್ಷಮಿಸಿದ್ದಾನೆಂದು ನಾನು ಶ್ರದ್ಧೆಯಿಂದ ನಂಬುತ್ತೇನೆ. ನಾನು ಆತನನ್ನೇ ಸದಾ ಮೆಚ್ಚಿಸುವವನಾಗಿ ಮುಂದುವರಿಯುವಂತಾಗಲಿ. ಮತ್ತು “ನಾನು ಭರವಸವಿಡುವ ನನ್ನ ದೇವರಾದ” ಆತನೆಡೆಗೆ ನಾನು ಯಾವಾಗಲೂ ನೋಡುತ್ತಿರುವಾಗ, ಆತನು ಸದಾ ನನ್ನ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತಾಗಲಿ.—ಕೀರ್ತನೆ 91:2. (w91 11/1)
[Picture of Willi and Marthe Diehl on page 25]
[ಪುಟ 27 ರಲ್ಲಿರುವ ಚಿತ್ರ]
ಸಹೋದರ ಡಿಹಲ್ ತನ್ನ ಬೆತೆಲ್ ಸೇವೆಯ ಆರಂಭದಲ್ಲಿ