ನಾನೆಂದೂ ವಿಷಾದಪಟ್ಟಿರದ ಒಂದು ಜೀವನ
ಪೌಲ್ ಓಬ್ರಿಸ್ಟ್ ಅವರಿಂದ ಹೇಳಲ್ಪಟ್ಟಂತೆ
ಇಸವಿ 1912ರಲ್ಲಿ, ನಾನು ಆರು ವರ್ಷ ಪ್ರಾಯದವನಾಗಿದ್ದಾಗ, ತಮ್ಮ ಐದನೆಯ ಮಗುವಿಗೆ ಜನ್ಮ ಕೊಡುವಾಗ ತಾಯಿ ತೀರಿಕೊಂಡರು. ಸುಮಾರು ಎರಡು ವರ್ಷಗಳಾನಂತರ, ಗೃಹಕೃತ್ಯ ನಡೆಸುವವರಾದ ಯುವ ಬರ್ಟಾ ವೈಬಲ್, ನಮ್ಮ ಕುಟುಂಬವನ್ನು ನೋಡಿಕೊಳ್ಳಲಾರಂಭಿಸಿದರು. ಮುಂದಿನ ವರ್ಷ ತಂದೆಯು ಅವರನ್ನು ವಿವಾಹವಾದಾಗ, ಒಬ್ಬ ತಾಯಿಯನ್ನು ಪುನಃ ಪಡೆದ ಕಾರಣ, ಮಕ್ಕಳಾದ ನಾವು ಸಂತೋಷಿಸಿದೆವು.
ನಾವು, ಸ್ವಿಟ್ಸರ್ಲೆಂಡ್ನ ಜರ್ಮನ್ ಭಾಷೆಯನ್ನಾಡುವ ಭಾಗದಲ್ಲಿನ ಒಂದು ಚಿಕ್ಕ ಪಟ್ಟಣವಾದ ಬ್ರೂಗ್ನಲ್ಲಿ ವಾಸಿಸಿದೆವು. ಬರ್ಟಾ, ನಿಜವಾಗಿಯೂ ಒಬ್ಬ ಕ್ರೈಸ್ತ ವ್ಯಕ್ತಿಯಾಗಿದ್ದರು, ಮತ್ತು ನಾನು ಅವರನ್ನು ಬಹಳ ಇಷ್ಟಪಟ್ಟೆ. ಅವರು 1908ರಲ್ಲಿ ಬೈಬಲ್ ವಿದ್ಯಾರ್ಥಿಗಳ (ಯೆಹೋವನ ಸಾಕ್ಷಿಗಳು) ಪ್ರಕಾಶನಗಳನ್ನು ಅಭ್ಯಾಸಿಸತೊಡಗಿದ್ದರು, ಮತ್ತು ತಾವು ಕಲಿತಿದ್ದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಇಸವಿ 1915ರಲ್ಲಿ, ಬರ್ಟಾ ಮತ್ತು ತಂದೆಯವರು ವಿವಾಹವಾದ ಸ್ವಲ್ಪದರಲ್ಲೇ, ನಾನು ಅವರೊಂದಿಗೆ “ಸೃಷ್ಟಿಯ ಫೋಟೋ ಡ್ರಾಮ” (ಇಂಗ್ಲಿಷ್)ದ ಪ್ರದರ್ಶನಕ್ಕೆ ಹೋದೆ. ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅರ್ನೆಸ್ಟ್ ಬೈಬಲ್ ಸ್ಟೂಡೆಂಟ್ಸ್ ಇವರ ಈ ಜಾರುಚಿತ್ರ ಹಾಗೂ ಫಿಲ್ಮ್ ನಿರೂಪಣೆಯು, ನನ್ನ ಹೃದಮನಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಇತರರೂ ಪ್ರಭಾವಿಸಲ್ಪಟ್ಟರು. ಬ್ರೂಗ್ನಲ್ಲಿದ್ದ ಸಭಾಂಗಣವು ಎಷ್ಟರ ಮಟ್ಟಿಗೆ ತುಂಬಿತ್ತೆಂದರೆ, ಪೊಲೀಸರು ಬಾಗಿಲುಗಳನ್ನು ಮುಚ್ಚಿ, ಇನ್ನೂ ಬರುತ್ತಿದ್ದವರನ್ನು ಹಿಂದೆ ಕಳುಹಿಸಿದರು. ಆಗ ಅನೇಕರು, ಒಂದು ಏಣಿಯ ಮೂಲಕ, ತೆರೆದಿದ್ದ ಕಿಟಕಿಯ ಮುಖಾಂತರ ಪ್ರವೇಶವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು, ಮತ್ತು ಕೆಲವರು ಅದರಲ್ಲಿ ಸಫಲರಾದರು.
ತಾಯಿಯವರ ಉತ್ತಮ ಮಾದರಿ
ಪ್ರಥಮ ಜಾಗತಿಕ ಯುದ್ಧವು ಆಗ ಯೂರೋಪಿನಲ್ಲಿ ಅತ್ಯುಗ್ರವಾಗಿತ್ತು, ಮತ್ತು ಜನರು ಭವಿಷ್ಯತ್ತಿನ ಕುರಿತು ಭಯಭೀತರಾಗಿದ್ದರು. ಆದುದರಿಂದ, ತಾಯಿಯು ಮಾಡಿದಂತೆ, ದೇವರ ರಾಜ್ಯದ ಕುರಿತಾದ ಸಾಂತ್ವನದಾಯಕ ಸಂದೇಶದೊಂದಿಗೆ ಮನೆಯಿಂದ ಮನೆಗೆ ಭೇಟಿನೀಡುವುದು, ಒಂದು ಉದಾತ್ತ ಕೆಲಸವಾಗಿತ್ತು. ಕೆಲವೊಮ್ಮೆ ನಾನು ಅವರೊಂದಿಗೆ ಜೊತೆಗೂಡುವಂತೆ ತಾಯಿ ಅನುಮತಿಸಿದರು, ಮತ್ತು ಇದರಲ್ಲಿ ನಾನು ಮಹತ್ತರವಾಗಿ ಆನಂದಿಸಿದೆ. 1918ರಲ್ಲಿ, ತಾಯಿಯು ಕಟ್ಟಕಡೆಗೆ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ತಾವು ಮಾಡಿದ್ದ ಸಮರ್ಪಣೆಯನ್ನು ಸಂಕೇತಿಸಿಕೊಳ್ಳಲು ಶಕ್ತರಾಗಿದ್ದರು.
ತಾಯಿಯ ದೀಕ್ಷಾಸ್ನಾನದ ವರೆಗೆ ತಂದೆಯು ಅವರ ಆರಾಧನೆಯಲ್ಲಿ ತಲೆಹಾಕಿರಲಿಲ್ಲ. ಆದರೆ ತರುವಾಯ, ಅವರು ವಿರೋಧಿಸತೊಡಗಿದರು. ಒಂದು ದಿನ ಅವರು ತಾಯಿಯ ಬೈಬಲ್ ಸಾಹಿತ್ಯಗಳನ್ನು ಕಸಿದುಕೊಂಡು ಬೆಂಕಿಯಲ್ಲಿ ಎಸೆದುಬಿಟ್ಟರು. ಬೆಂಕಿಯಿಂದ ತಮ್ಮ ಬೈಬಲನ್ನು ಮಾತ್ರ ತಾಯಿಯು ಕಿತ್ತುಕೊಳ್ಳಶಕ್ತರಾಗಿದ್ದರು. ಆದರೆ ಅನಂತರ ಅವರು ಏನನ್ನು ಮಾಡಿದರೊ, ಅದು ಸ್ತಬ್ಧಗೊಳಿಸುವಂತಹದ್ದಾಗಿತ್ತು. ಅವರು ತಂದೆಯ ಬಳಿಗೆ ಹೋಗಿ, ಅವರನ್ನು ಅಪ್ಪಿಕೊಂಡರು. ತಂದೆಯ ಕಡೆಗೆ ಅವರು ಯಾವ ಅಸಮಾಧಾನವನ್ನೂ ತೋರಿಸಲಿಲ್ಲ.
ಸಂಪೂರ್ಣವಾಗಿ ಆಶ್ಚರ್ಯಚಕಿತಗೊಂಡ ತಂದೆಯವರು, ಶಾಂತರಾದರು. ಆದಾಗಲೂ, ಆಗಾಗ್ಗೆ ಅವರ ವಿರೋಧವು ಭುಗಿಲೇಳುತ್ತಿತ್ತು, ಮತ್ತು ನಾವು ಅವರ ಕೋಪದ ಕೆರಳುವಿಕೆಗಳನ್ನು ತಾಳಿಕೊಳ್ಳಬೇಕಿತ್ತು.
ಉದ್ಯೋಗ ಮತ್ತು ಆತ್ಮಿಕ ಪ್ರಗತಿ
1924ರಲ್ಲಿ, ಕ್ಷೌರಿಕನಾಗಿ ಮೂರು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ, ನಾನು ಮನೆಯನ್ನು ಬಿಟ್ಟು, ಸ್ವಿಟ್ಸರ್ಲೆಂಡ್ನ ಫ್ರೆಂಚ್ ಭಾಷೆಯನ್ನಾಡುವ ಭಾಗದಲ್ಲಿ ಉದ್ಯೋಗವನ್ನು ಕಂಡುಕೊಂಡೆ. ಇದು ಫ್ರೆಂಚ್ ಭಾಷೆಯ ಸಂಬಂಧದಲ್ಲಿ ನನ್ನ ಜ್ಞಾನವನ್ನು ಉತ್ತಮಗೊಳಿಸಿಕೊಳ್ಳುವ ಅವಕಾಶವನ್ನು ಒದಗಿಸಿತು. ಸ್ಥಳಾಂತರವು ಒಂದಿಷ್ಟರ ಮಟ್ಟಿಗೆ ನನ್ನ ಆತ್ಮಿಕ ಪ್ರಗತಿಯನ್ನು ಪ್ರತಿಬಂಧಿಸಿತ್ತಾದರೂ, ಬೈಬಲ್ ಸತ್ಯಕ್ಕಾಗಿದ್ದ ನನ್ನ ಒಲವನ್ನು ನಾನೆಂದೂ ಕಳೆದುಕೊಳ್ಳಲಿಲ್ಲ. ಆದುದರಿಂದ ಆರು ವರ್ಷಗಳಾನಂತರ ನಾನು ಮನೆಗೆ ಹಿಂದಿರುಗಿದಾಗ, ಬ್ರೂಗ್ನಲ್ಲಿದ್ದ ಕ್ರೈಸ್ತ ಸಭೆಯ ಕೂಟಗಳಿಗೆ ಹಾಜರಾಗತೊಡಗಿದೆ.
ಅನಂತರ ಸ್ವಲ್ಪಸಮಯದಲ್ಲೇ, 40 ಕಿಲೊಮೀಟರಿನಷ್ಟು ದೂರದಲ್ಲಿದ್ದ ಒಂದು ಚಿಕ್ಕ ಪಟ್ಟಣವಾದ ರೈನ್ಫೆಲ್ಡನ್ಗೆ ನಾನು ಸ್ಥಳಾಂತರಿಸಿದೆ. ಅಲ್ಲಿ ನನ್ನ ಅಕ್ಕನ ಕ್ಷೌರದಂಗಡಿಯಲ್ಲಿ ನಾನು ಕೆಲಸಮಾಡಿದೆ ಮತ್ತು ಬೈಬಲ್ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪಿನೊಂದಿಗೆ ಒಟ್ಟುಸೇರುವ ಮೂಲಕ ನನ್ನ ಆತ್ಮಿಕ ಪ್ರಗತಿಯನ್ನು ಮುಂದುವರಿಸಿದೆ. ನಮ್ಮ ವಾರಮಧ್ಯದ ಬೈಬಲ್ ಅಭ್ಯಾಸವನ್ನು ಒಂದು ದಿನ ಸಮಾಪ್ತಿಗೊಳಿಸುತ್ತಾ, ಮೇಲ್ವಿಚಾರಣೆ ಮಾಡುತ್ತಿದ್ದ ಹಿರಿಯರಾದ ಸಹೋದರ ಸೋಡರ್ ಕೇಳಿದ್ದು: “ಆದಿತ್ಯವಾರ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು ಯಾರು ಉದ್ದೇಶಿಸುತ್ತೀರಿ?” ನಾನು ಯಾರಾದರೊಬ್ಬರೊಂದಿಗೆ ಹೋಗಿ, ಕಾರ್ಯವನ್ನು ಹೇಗೆ ಮಾಡಬೇಕೆಂದು ನನಗೆ ತೋರಿಸಲಾಗುವುದೆಂದು ಊಹಿಸಿಕೊಳ್ಳುತ್ತಾ, ಹೋಗಲು ಸಿದ್ಧನಾದೆ.
ಆದರೆ, ಆದಿತ್ಯವಾರವು ಆಗಮಿಸಿ, ನಾವು ನಮ್ಮ ಟೆರಿಟೊರಿಯನ್ನು ತಲಪಿದಾಗ, ಸಹೋದರ ಸೋಡರ್ ಹೇಳಿದ್ದು, “ಮಿ. ಓಬ್ರಿಸ್ಟ್, ಅಲ್ಲಿ ಆ ಕಡೆ ಕೆಲಸಮಾಡುವರು.” ಹಿಂದೆಂದೂ ಆಗದ ರೀತಿಯಲ್ಲಿ ನನ್ನ ಹೃದಯದ ಬಡಿತವು ಹೆಚ್ಚಾದರೂ, ನಾನು ಜನರನ್ನು ತಮ್ಮ ಮನೆಗಳಲ್ಲಿ ಭೇಟಿಮಾಡಿ, ದೇವರ ರಾಜ್ಯದ ಕುರಿತು ಅವರೊಂದಿಗೆ ಮಾತಾಡತೊಡಗಿದೆ. (ಅ. ಕೃತ್ಯಗಳು 20:20) ಆ ಸಮಯದಂದಿನಿಂದ, ಈ ವಿಷಯಗಳ ವ್ಯವಸ್ಥೆಗೆ ಅಂತ್ಯವು ಬರುವ ಮೊದಲು ಪೂರೈಸಲ್ಪಡಬೇಕೆಂದು ಯೇಸು ಹೇಳಿದ ಸಾರುವ ಕೆಲಸವನ್ನು ಮಾಡುವುದರಲ್ಲಿ ನಾನೆಂದೂ ಸ್ಥೈರ್ಯಗೆಡಲಿಲ್ಲ. (ಮತ್ತಾಯ 24:14) 1934, ಮಾರ್ಚ್ 4ರಂದು, ನಾನು 28 ವರ್ಷ ಪ್ರಾಯದವನಾಗಿದ್ದಾಗ, ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿಕೊಂಡೆ.
ಎರಡು ವರ್ಷಗಳಾನಂತರ, ಸ್ವಿಟ್ಸರ್ಲೆಂಡ್ನ ಇಟ್ಯಾಲಿಯನ್ ಭಾಷೆಯನ್ನಾಡುವ ಭಾಗದಲ್ಲಿನ ಒಂದು ನಗರವಾದ ಲುಗಾನೊದಲ್ಲಿ, ಒಬ್ಬ ಕ್ಷೌರಿಕನಾಗಿ ನಾನು ಕೆಲಸ ಕಂಡುಕೊಂಡೆ. ನನಗೆ ಇಟ್ಯಾಲಿಯನ್ ಭಾಷೆ ಅಷ್ಟಾಗಿ ಗೊತ್ತಿರದಿದ್ದರೂ, ತತ್ಕ್ಷಣ ನಾನು ಅಲ್ಲಿ ಸುವಾರ್ತೆಯನ್ನು ಸಾರತೊಡಗಿದೆ. ಆದರೂ, ನಾನು ಶುಶ್ರೂಷೆಗೆ ಹೋದ ಪ್ರಥಮ ಆದಿತ್ಯವಾರದಂದು, ನನ್ನೊಂದಿಗೆ ನಾನು ತೆಗೆದುಕೊಂಡು ಹೋಗಿದ್ದ 20 ಪುಸ್ತಿಕೆಗಳನ್ನು ನಾನು ನೀಡಿದೆ. ಸಕಾಲದಲ್ಲಿ, ಕೆಲವು ಆಸಕ್ತ ಜನರನ್ನು ಒಟ್ಟುಗೂಡಿಸಿ, ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ನಡೆಸಲಿಕ್ಕಾಗಿ ಒಂದು ಗುಂಪನ್ನು ರಚಿಸಲು ನಾನು ಶಕ್ತನಾದೆ. ಕಟ್ಟಕಡೆಗೆ ಇವರಲ್ಲಿ ಹೆಚ್ಚಿನವರು ದೀಕ್ಷಾಸ್ನಾನ ಪಡೆದುಕೊಂಡರು, ಮತ್ತು ಫೆಬ್ರವರಿ 1937ರಲ್ಲಿ ನಾವು ಲುಗಾನೊದಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಭೆಯನ್ನು ರಚಿಸಿದೆವು.
ಎರಡು ತಿಂಗಳುಗಳ ಅನಂತರ, ಎಪ್ರಿಲ್ 1937ರಲ್ಲಿ, ನನ್ನ ಜೀವನವನ್ನು ನಾಟಕೀಯವಾಗಿ ಬದಲಾಯಿಸಿದ ಒಂದು ಪತ್ರವನ್ನು ನಾನು ಪಡೆದುಕೊಂಡೆ. ಅದು ಬೆತೆಲ್—ಒಂದು ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಸೌಕರ್ಯಗಳು ಹಾಗೆಂದು ಕರೆಯಲ್ಪಡುತ್ತವೆ—ನಲ್ಲಿ ಸೇವೆಸಲ್ಲಿಸುವ ಆಮಂತ್ರಣವಾಗಿತ್ತು. ನಾನು ಕೂಡಲೇ ಆ ಆಮಂತ್ರಣವನ್ನು ಸ್ವೀಕರಿಸಿದೆ—ನಾನೆಂದೂ ವಿಷಾದಪಟ್ಟಿರದ ಒಂದು ನಿರ್ಣಯ. ಹೀಗೆ, ಯಾವುದು ಪೂರ್ಣ ಸಮಯದ ಶುಶ್ರೂಷೆಯಲ್ಲಿ 60 ವರ್ಷದ ವೃತ್ತಿಯಾಗಿ ಪರಿಣಮಿಸಿತೊ, ಅದನ್ನು ನಾನು ಆರಂಭಿಸಿದೆ.
ತೊಂದರೆಯುಕ್ತ ಸಮಯಗಳಲ್ಲಿ ಬೆತೆಲ್ ಸೇವೆ
ಆ ಸಮಯದಲ್ಲಿ ಸ್ವಿಸ್ ಬೆತೆಲ್, ಸ್ವಿಟ್ಸರ್ಲೆಂಡ್ನ ರಾಜಧಾನಿಯಾದ ಬರ್ನ್ ನಗರದಲ್ಲಿತ್ತು. ಅಲ್ಲಿ ನಾವು 14 ಭಾಷೆಗಳಲ್ಲಿ ಪುಸ್ತಕಗಳು, ಪುಸ್ತಿಕೆಗಳು, ಮತ್ತು ಪತ್ರಿಕೆಗಳನ್ನು ಮುದ್ರಿಸಿದೆವು, ಮತ್ತು ಇವು ಯೂರೋಪಿನಾದ್ಯಂತ ಹಡಗಿನಲ್ಲಿ ಸಾಗಿಸಲ್ಪಟ್ಟವು. ಕೆಲವು ಸಂದರ್ಭಗಳಲ್ಲಿ, ನಾನು ಮುದ್ರಿತ ಸಾಹಿತ್ಯವನ್ನು ಚಕ್ರದ ಕೈಬಂಡಿಯಲ್ಲಿ ರೈಲು ನಿಲ್ದಾಣಕ್ಕೆ ತೆಗೆದುಕೊಂಡು ಹೋಗುತ್ತಿದ್ದೆ. ಏಕೆಂದರೆ ಆ ದಿನಗಳಲ್ಲಿ ನಮಗೆ ಬೇಕಾದ ಸಮಯದಲ್ಲಿ ವಾಹನವು ಲಭ್ಯವಾಗುತ್ತಿರಲಿಲ್ಲ. ಬೆತೆಲ್ನಲ್ಲಿ ನನ್ನ ಪ್ರಥಮ ನೇಮಕವು ಕಾಂಪಸಿಷನ್ ವಿಭಾಗದಲ್ಲಿತ್ತು. ಅಲ್ಲಿ ನಾವು, ಯಾವುದರಿಂದ ಮುದ್ರಣವನ್ನು ಮಾಡಲಾಗುತ್ತದೊ ಆ ತೆಳು ಸೀಸಪಟ್ಟಿಗಳನ್ನು ಒಟ್ಟುಸೇರಿಸಿದೆವು. ಬೇಗನೆ ನಾನು ರಿಸೆಪ್ಷನ್ ಡೆಸ್ಕ್ (ಸ್ವಾಗತ ಕಛೇರಿ)ನಲ್ಲಿ ಕೆಲಸಮಾಡತೊಡಗಿದೆ ಮತ್ತು ನಿಶ್ಚಯವಾಗಿ ನಾನು ಬೆತೆಲ್ ಕುಟುಂಬದ ಕ್ಷೌರಿಕನಾಗಿಯೂ ಸೇವೆಸಲ್ಲಿಸಿದೆ.
ಸೆಪ್ಟೆಂಬರ್ 1939ರಲ್ಲಿ IIನೆಯ ಜಾಗತಿಕ ಯುದ್ಧವು ಆರಂಭಿಸಿತು, ಮತ್ತು ನಾಸಿ ಆಕ್ರಮಣವು ಯೂರೋಪಿನ ಆದ್ಯಂತ ದಿಗಿಲನ್ನು ಹಬ್ಬಿಸಿತು. ಯುದ್ಧಮಾಡುತ್ತಿದ್ದ ರಾಷ್ಟ್ರಗಳ ಮಧ್ಯದಲ್ಲಿ ಸ್ವಿಟ್ಸರ್ಲೆಂಡ್ ಒಂದು ತಟಸ್ಥ ರಾಷ್ಟ್ರವಾಗಿತ್ತು. ಆರಂಭದಲ್ಲಿ, ನಾವು ನಮ್ಮ ಕ್ರೈಸ್ತ ಚಟುವಟಿಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದೆವು. ಅನಂತರ 1940, ಜುಲೈ 5ರಂದು, ಮಧ್ಯಾಹ್ನ ಎರಡು ಗಂಟೆಗೆ ನಾನು ಪ್ರವೇಶಾಂಗಣದಲ್ಲಿ ಕೆಲಸಮಾಡುತ್ತಿದ್ದಾಗ, ಅಲಗನ್ನು ತುದಿಗೆ ಸಿಕ್ಕಿಸಿದ್ದ ಕೋವಿಯನ್ನು ಹೊತ್ತುಕೊಂಡಿದ್ದ ಒಬ್ಬ ಸೈನಿಕನೊಂದಿಗೆ ಒಬ್ಬ ನಾಗರಿಕನು ಕಾಣಿಸಿಕೊಂಡನು.
“ಸ್ಯೂರ್ಕೆರ್ ಎಲ್ಲಿ?” ಎಂದು ಆ ನಾಗರಿಕನು ಬೊಗಳಿದನು. ಆ ಸಮಯದಲ್ಲಿ ಫ್ರಾನ್ಸ್ ಸ್ಯೂರ್ಕೆರ್, ಸ್ವಿಟ್ಸರ್ಲೆಂಡ್ನಲ್ಲಿ ನಡೆಯುತ್ತಿದ್ದ ನಮ್ಮ ಸಾರುವ ಕೆಲಸದ ಬ್ರಾಂಚ್ ಮೇಲ್ವಿಚಾರಕರಾಗಿದ್ದರು.
“ಯಾರು ಕರೆಯುತ್ತಿದ್ದಾರೆಂದು ಹೇಳಲಿ?” ಎಂದು ನಾನು ಕೇಳಿದೆ. ಆ ಕೂಡಲೇ ಅವರು ನನ್ನನ್ನು ಹಿಡಿದು, ಸ್ಯೂರ್ಕೆರ್ರ ಆಫೀಸಿಗೆ ಅವರನ್ನು ಕರೆದುಕೊಂಡು ಹೋಗುವಂತೆ ತಗಾದೆಮಾಡುತ್ತಾ, ನನ್ನನ್ನು ಮೆಟ್ಟಲುಗಳ ಮೇಲೆ ಎಳೆದುಕೊಂಡು ಹೋದರು.
ಇಡೀ ಬೆತೆಲ್ ಕುಟುಂಬಕ್ಕೆ—ಆಗ ನಾವು ಸುಮಾರು 40 ಸದಸ್ಯರಿದ್ದೆವು—ಊಟದ ಕೋಣೆಯಲ್ಲಿ ಸೇರುವಂತೆ ಆಜ್ಞೆ ನೀಡಲಾಯಿತು. ತಪ್ಪಿಸಿಕೊಳ್ಳಪ್ರಯತ್ನಿಸುವುದರಿಂದ ಯಾವನನ್ನೂ ಉತ್ತೇಜಿಸದಿರುವಂತೆ, ಕಟ್ಟಡದ ಹೊರಗೆ ನಾಲ್ಕು ಮೆಷಿನ್ ಗನ್ಗಳನ್ನು ಇಡಲಾಯಿತು. ಒಳಗೆ, ಸುಮಾರು 50 ಸೈನಿಕರು ಕಟ್ಟಡದ ಶೋಧನೆಮಾಡತೊಡಗಿದರು. ನಿರೀಕ್ಷಣೆಗಳಿಗೆ ತದ್ವಿರುದ್ಧವಾಗಿ, ಯೆಹೋವನ ಸಾಕ್ಷಿಗಳು ಮಿಲಿಟರಿ ಸೇವೆಗೆ ಪ್ರತಿರೋಧನೆಯನ್ನು ಪ್ರವರ್ಧಿಸುವುದರಲ್ಲಿ ಒಳಗೊಂಡಿದ್ದಾರೆಂಬ ಆರೋಪಕ್ಕೆ ಯಾವ ಪುರಾವೆಯೂ ಸಿಗಲಿಲ್ಲ. ಆದರೂ, ಬಹಳಷ್ಟು ಮೊತ್ತದ ಸಾಹಿತ್ಯವನ್ನು ವಶಪಡಿಸಿಕೊಂಡು, ಸೇನೆಯ ಐದು ಟ್ರಕ್ಕುಗಳಲ್ಲಿ ಕೊಂಡೊಯ್ಯಲಾಯಿತು.
ಸರಕಾರದ ಅಧಿಕಾರಿಗಳಿಂದ ಕಾವಲಿನಬುರುಜು ಪತ್ರಿಕೆಯ ಸೆನ್ಸರ್ ಮಾಡುವಿಕೆಯನ್ನು ಅನುಮತಿಸಲು ನಾವು ನಿರಾಕರಿಸಿದಾಗ, ಸ್ವಿಟ್ಸರ್ಲೆಂಡ್ನಲ್ಲಿ ಅದರ ಮುದ್ರಣವು ಸ್ಥಗಿತಗೊಂಡಿತು. ಇದರ ಅರ್ಥ, ಬೆತೆಲ್ನಲ್ಲಿ ಕೆಲಸಮಾಡಲು ಕಡಿಮೆ ಜನರ ಅಗತ್ಯವಿತ್ತು, ಮತ್ತು ಕುಟುಂಬದ ಎಳೆಯ ಸದಸ್ಯರು ಬೆತೆಲನ್ನು ಬಿಟ್ಟು, ಪಯನೀಯರರಾಗುವಂತೆ—ಪೂರ್ಣ ಸಮಯದ ಸಾರುವ ಕೆಲಸದಲ್ಲಿ ತೊಡಗುವ ಯೆಹೋವನ ಸಾಕ್ಷಿಗಳು ಕರೆಯಲ್ಪಡುವಂತೆ—ಉತ್ತೇಜಿಸಲ್ಪಟ್ಟರು.
ಯುದ್ಧದ ಸಮಯದಲ್ಲಿ ಪಯನೀಯರ್ ಸೇವೆಮಾಡುವುದು
ಜುಲೈ 1940ರಲ್ಲಿ, ನಾನು ಬೆತೆಲಿಗೆ ಬರುವ ಮೊದಲು ಎಲ್ಲಿದ್ದೆನೊ, ಆ ಲುಗಾನೊದ ಹತ್ತಿರವಿರುವ ಸ್ವಿಟ್ಸರ್ಲೆಂಡ್ನ ಇಟ್ಯಾಲಿಯನ್ ಭಾಷೆಯನ್ನಾಡುವ ಕ್ಷೇತ್ರಕ್ಕೆ ಹಿಂದಿರುಗಿದೆ. ಈಗಾಗಲೇ ಫ್ಯಾಸಿಸಮ್ನ ಬಲವಾದ ಪ್ರಭಾವಕ್ಕೂ ಒಳಗಾಗಿದ್ದ ಈ ಕಟ್ಟಾ ಕ್ಯಾತೊಲಿಕ್ ಟೆರಿಟೊರಿಯು, ನನ್ನ ಪಯನೀಯರ್ ಸೇವೆಯ ನೇಮಕವಾಯಿತು.
ಬಹುಮಟ್ಟಿಗೆ ಪ್ರತಿದಿನವೂ ಪೊಲೀಸರು ನನ್ನನ್ನು ತಡೆದು, ನನ್ನ ಸಾರುವ ಚಟುವಟಿಕೆಯನ್ನು ನಾನು ಬಿಟ್ಟುಬಿಡುವಂತೆ ತಗಾದೆಮಾಡಿದರು. ಒಂದು ದಿನ, ತೋಟದ ಬಾಗಿಲಿನ ಬಳಿ ನಾನೊಬ್ಬಾಕೆ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾಗ, ಅಸೈನಿಕ ಬಟ್ಟೆಗಳನ್ನು ಧರಿಸಿದ್ದ ಒಬ್ಬ ಮನುಷ್ಯನು ಹಿಂದಿನಿಂದ ನನ್ನನ್ನು ಹಿಡಿದು, ಪೊಲೀಸಿನವರ ಕಾರಿನ ಬಳಿಗೆ ಕರೆದೊಯ್ದು, ನನ್ನನ್ನು ಲುಗಾನೊಗೆ ಕರೆದುಕೊಂಡು ಹೋದನು. ಅಲ್ಲಿ ಅವನು ನನ್ನನ್ನು ಪೊಲೀಸರಿಗೆ ಒಪ್ಪಿಸಿದನು. ನನ್ನನ್ನು ವಿಚಾರಣೆಮಾಡಿದಾಗ, ಸಾರುವಂತೆ ಯೆಹೋವ ದೇವರು ನಮಗೆ ಆಜ್ಞೆ ನೀಡಿದ್ದಾನೆಂದು ನಾನು ವಿವರಿಸಿದೆ.
ಆ ಅಧಿಕಾರಿಯು ದುರಂಹಕಾರದಿಂದ ಉತ್ತರಿಸಿದ್ದು: “ಇಲ್ಲಿ ಭೂಮಿಯ ಮೇಲೆ ಆಜ್ಞೆಮಾಡುವವರು ನಾವು. ದೇವರು ಸ್ವರ್ಗದಲ್ಲಿ ಆಜ್ಞೆಮಾಡಬಹುದು!”
ಯುದ್ಧದ ಸಮಯದಲ್ಲಿ, “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಬೇಕೆಂಬ ಯೇಸುವಿನ ಸಲಹೆಗೆ ಕಿವಿಗೊಡಬೇಕಾದದ್ದು ವಿಶೇಷವಾಗಿ ಪ್ರಾಮುಖ್ಯವಾಗಿತ್ತು. (ಮತ್ತಾಯ 10:16) ಆದುದರಿಂದ, ನನ್ನ ಸಾಹಿತ್ಯದಲ್ಲಿ ಹೆಚ್ಚಿನದ್ದನ್ನು ನನ್ನ ಶರ್ಟಿನ ಒಳಜೇಬುಗಳಲ್ಲಿ ನಾನು ಅಡಗಿಸಿಟ್ಟುಕೊಳ್ಳುತ್ತಿದ್ದೆ. ಮತ್ತು ನಾನು ಏನನ್ನೂ ಕಳೆದುಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲು, ಮೊಣಕಾಲುಗಳ ಕೆಳಗೆ ಬಿಗಿಯಾಗಿ ನಿರಿ ಕಟ್ಟಿದ ನಿಕರ್ಬಾಕರ್ಸ್ (ಸಡಿಲವಾದ ಚಲ್ಲಣ)ಗಳನ್ನು ಧರಿಸಿದೆ.
ಸಕಾಲದಲ್ಲಿ, ಎನ್ಗಾಡೀನ್ನ ಕಣಿವೆಗೆ ಸ್ಥಳಾಂತರಿಸುವ ಆದೇಶಗಳು ನನಗೆ ಸಿಕ್ಕಿದವು. ಅಲ್ಲಿಯೂ ಪೊಲೀಸರೊಂದಿಗಿನ ಕಣ್ಣುಮುಚ್ಚಾಲೆ ಆಟವು ಮುಂದುವರಿಯಿತು. ಪೂರ್ವ ಸ್ವಿಸ್ ಆ್ಯಲ್ಪ್ಸ್ನಲ್ಲಿ ಇದೊಂದು ಸುಂದರವಾದ ಕಣಿವೆಯಾಗಿದೆ. ಇದು ಚಳಿಗಾಲದಲ್ಲಿ ಹಿಮದಲ್ಲಿ ಪೂರ್ತಿ ಮುಳುಗಿಹೋಗುವ ಕಾರಣ, ಟೆರಿಟೊರಿಯಲ್ಲಿ ಸುತ್ತಾಡಲು ಸಹಾಯವಾಗುವಂತೆ ನನಗೆ ಸ್ಕೀ (ಜಾರು ತುಂಡು)ಗಳನ್ನು ಕಳುಹಿಸಿಕೊಟ್ಟರು.
ಚಳಿಯಲ್ಲಿ ಸ್ಕೀಗಳ ಸಹಾಯದಿಂದ ಪ್ರಯಾಣ ಮಾಡುವಾಗ, ಬೆಚ್ಚನೆಯ ಕೈಗವಸುಗಳು ಅತ್ಯಾವಶ್ಯಕವಾಗಿವೆ. ಸತತವಾದ ಬಳಕೆಯಿಂದ ನನ್ನವು ಬೇಗನೆ ಸವೆಯಲಾರಂಭಿಸಿದವು. ಒಂದು ದಿನ ಬಹಳಷ್ಟು ಅನಿರೀಕ್ಷಿತವಾಗಿ, ಕೈಯಿಂದ ಹೆಣೆಯಲ್ಪಟ್ಟ ಸ್ವೆಟರ್ ಮತ್ತು ಬೆಚ್ಚನೆಯ ಕೈಗವಸುಗಳ ಒಂದು ಪಾರ್ಸಲನ್ನು ಟಪಾಲಿನ ಮೂಲಕ ನಾನು ಪಡೆದಾಗ, ನಾನು ಎಷ್ಟೊಂದು ಆಭಾರಿಯಾಗಿದ್ದೆ! ಬರ್ನ್ನ ನನ್ನ ಮಾಜಿ ಸಭೆಯಲ್ಲಿದ್ದ ಒಬ್ಬ ಕ್ರೈಸ್ತ ಸಹೋದರಿಯು ಅವುಗಳನ್ನು ನನಗಾಗಿ ಹೆಣೆದಿದ್ದಳು. ಅದರ ಬಗ್ಗೆ ನಾನು ಈಗಲೂ ನೆನಸುವಾಗ, ಕೃತಜ್ಞತೆಯಿಂದ ನನ್ನ ಮನ ಬಿರಿಯುತ್ತದೆ.
ಅನೇಕ ಆನಂದಭರಿತ ಸುಯೋಗಗಳು
1943ರಲ್ಲಿ, ಸ್ವಿಟ್ಸರ್ಲೆಂಡ್ನಲ್ಲಿನ ಪರಿಸ್ಥಿತಿಗಳು ಸ್ಥಿರವಾಗಲಾರಂಭಿಸಿದವು, ಮತ್ತು ಬೆತೆಲ್ನಲ್ಲಿ ಸೇವೆಸಲ್ಲಿಸುವಂತೆ ನನ್ನನ್ನು ಪುನಃ ಕರೆಯಲಾಯಿತು. ಸುಮಾರು 100 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಲೂಸಾನೆಯ ಫ್ರೆಂಚ್ ಭಾಷೆಯನ್ನಾಡುವ ಸಭೆಯಲ್ಲಿನ ಕೆಲವು ಸಮಸ್ಯೆಗಳಿಂದಾಗಿ, ದೇವರ ಸಂಸ್ಥೆಯ ಸರಿಯಾದ ನೋಟವನ್ನು ಪ್ರಚಾರಕರು ಪಡೆದುಕೊಳ್ಳುವಂತೆ ಸಹಾಯಮಾಡಲು, ಆ ನಗರವನ್ನು ಕ್ರಮವಾಗಿ ಸಂದರ್ಶಿಸುವಂತೆ ನಾನು ನೇಮಿಸಲ್ಪಟ್ಟೆ.
ಅನಂತರ, ಸ್ವಲ್ಪಸಮಯಕ್ಕಾಗಿ ಸ್ವಿಟ್ಸರ್ಲೆಂಡ್ನಲ್ಲಿರುವ ಎಲ್ಲ ಫ್ರೆಂಚ್ ಸಭೆಗಳಿಗೆ ಸಂಚರಣ ಮೇಲ್ವಿಚಾರಕನಾಗಿ ನಾನು ಸೇವೆಸಲ್ಲಿಸಿದೆ. ವಾರದ ಆದಿಭಾಗದಲ್ಲಿ, ನಾನು ಬೆತೆಲ್ನಲ್ಲಿ ಕೆಲಸಮಾಡಿದೆ, ಆದರೆ ಪ್ರತಿವಾರದ ಶುಕ್ರವಾರ, ಶನಿವಾರ, ಮತ್ತು ಆದಿತ್ಯವಾರಗಳಂದು ಒಂದು ವಿಭಿನ್ನ ಸಭೆಯನ್ನು ಸಂದರ್ಶಿಸುತ್ತಾ ಅವರಿಗೆ ಆತ್ಮಿಕ ನೆರವನ್ನು ನೀಡಲು ಪ್ರಯತ್ನಿಸಿದೆ. ಇದಕ್ಕೆ ಕೂಡಿಸಿ, 1960ರಲ್ಲಿ, ಬರ್ನ್ನಲ್ಲಿ, ಫ್ರೆಂಚ್ ಭಾಷೆಯನ್ನಾಡುವ ಸಭೆಯೊಂದು ರಚಿಸಲ್ಪಟ್ಟಾಗ, ನಾನು ಅದರ ಅಧ್ಯಕ್ಷ ಮೇಲ್ವಿಚಾರಕನಾದೆ. ಈ ಸ್ಥಾನದಲ್ಲಿ ನಾನು 1970ರ ವರೆಗೆ ಸೇವೆಸಲ್ಲಿಸಿದೆ. ಆ ಸಮಯದಲ್ಲಿ ಬೆತೆಲ್, ಬರ್ನ್ನಿಂದ ಟೂನ್ ಪಟ್ಟಣದಲ್ಲಿನ ಅದರ ಪ್ರಚಲಿತ ಸುಂದರ ನಿವೇಶನಕ್ಕೆ ಸ್ಥಳಾಂತರಿಸಲ್ಪಟ್ಟಿತು.
ಟೂನ್ ಪಟ್ಟಣದಲ್ಲಿ ಇಟ್ಯಾಲಿಯನ್ ಭಾಷೆಯನ್ನಾಡುವ ಸಾಕ್ಷಿಗಳ ಒಂದು ಚಿಕ್ಕ ಗುಂಪನ್ನು ಕಂಡು ನಾನು ಸಂತೋಷಿಸಿದೆ, ಮತ್ತು ಅವರೊಂದಿಗೆ ಕೆಲಸಮಾಡಲಾರಂಭಿಸಿದೆ. ಸಕಾಲದಲ್ಲಿ ಅಲ್ಲೊಂದು ಸಭೆಯು ರೂಪುಗೊಂಡಿತು. ಮತ್ತು ಅಧ್ಯಕ್ಷ ಮೇಲ್ವಿಚಾರಕರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಯುವ ಸಹೋದರರು ಅರ್ಹರಾಗುವ ತನಕ, ಹಲವಾರು ವರ್ಷಗಳ ವರೆಗೆ ನಾನು ಅದರ ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದೆ.
ಯಾವುದನ್ನು ನಾನು ವಿಶೇಷವಾಗಿ ಒಂದು ಆನಂದಭರಿತ ಸುಯೋಗವಾಗಿ ಪರಿಗಣಿಸಿದ್ದೇನೊ, ಅದು ಯೆಹೋವನ ಜನರ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಹಾಜರಾಗುವುದಾಗಿದೆ. ಉದಾಹರಣೆಗೆ, 1950ರಲ್ಲಿ, ನ್ಯೂ ಯಾರ್ಕ್ನ ಯಾಂಕಿ ಸ್ಟೇಡಿಯಮ್ನಲ್ಲಿ ನಡೆದ ಸ್ಮರಣಯೋಗ್ಯವಾದ, ದೇವಪ್ರಭುತ್ವದ ಅಭಿವೃದ್ಧಿ ಎಂಬ ಸಮ್ಮೇಳನವು ಒಂದಾಗಿತ್ತು. ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯಕ್ಕೆ ನಾನು ನೀಡಿದ ಭೇಟಿಯು, ನನ್ನ ಮೇಲೆ ನಿತ್ಯವಾದ ಪ್ರಭಾವವನ್ನು ಬೀರಿತು. ಮುಂದಿನ ವರ್ಷ ಲಂಡನ್ನಲ್ಲಿ ನಡೆದ ಶುದ್ಧವಾದ ಆರಾಧನೆ ಎಂಬ ಸಮ್ಮೇಳನದಲ್ಲಿ ಸಹೋದರ ಮಿಲ್ಟನ್ ಜಿ. ಹೆನ್ಶೆಲ್ರ ಭಾಷಣವನ್ನೂ ನಾನೆಂದಿಗೂ ಮರೆಯಲಾರೆ. ಅದು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ,” ಎಂಬ ಯೇಸುವಿನ ಮಾತುಗಳನ್ನು ಎತ್ತಿತೋರಿಸಿತು. (ಲೂಕ 19:40) ಸಹೋದರ ಹೆನ್ಶೆಲ್ ಕೇಳಿದ್ದು, “ಕಲ್ಲುಗಳು ಕೂಗಬೇಕಾಗುವುದೆಂದು ನೀವು ನೆನಸುತ್ತೀರೊ?” ಹತ್ತಾರು ಸಾವಿರ ಧ್ವನಿಗಳಿಂದ ಬಂದ, ಅಬ್ಬರದ “ಇಲ್ಲ!” ಎಂಬ ಉತ್ತರವು, ಇನ್ನೂ ನನ್ನ ಕಿವಿಗಳಲ್ಲಿ ಕೇಳಿಬರುತ್ತಿದೆ.
1937ರಲ್ಲಿ ನಾನು ಪುನಃ ಬೆತೆಲಿಗೆ ಹೋದಾಗ, ನಮಗೆ ಅತ್ಯಲ್ಪ ಭತ್ಯ ಸಿಗುತ್ತದೆಂದು ತಿಳಿದುಕೊಂಡು ನನ್ನ ತಂದೆಯವರು ಚಿಂತೆಯಿಂದ ಕೇಳಿದ್ದು: “ಮಗನೇ, ವೃದ್ಧಾಪ್ಯದಲ್ಲಿ ನೀನು ಹೇಗೆ ಬದುಕಿ ಉಳಿಯುವಿ?” ಕೀರ್ತನೆಗಾರನಾದ ದಾವೀದನ ಮಾತುಗಳನ್ನು ಉದಾಹರಿಸುವ ಮೂಲಕ ನಾನು ಉತ್ತರಿಸಿದೆ: “ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತನೆ 37:25) ಈ ಮಾತುಗಳು ನನ್ನ ವಿಷಯದಲ್ಲಿ ಖಂಡಿತವಾಗಿಯೂ ನೆರವೇರಿವೆ.
ಎಂಬತ್ತಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಬರ್ಟಾ ವೈಬಲ್ ತಂದೆಯನ್ನು ವಿವಾಹವಾಗಿ ಮತ್ತು ಅವರ ಮಾದರಿ ಮತ್ತು ಮಾರ್ಗದರ್ಶನದ ಮೂಲಕ ಯೆಹೋವನ ಮತ್ತು ಆತನ ಗುಣಗಳ ಪರಿಚಯ ನನಗಾದದ್ದಕ್ಕಾಗಿ ನಾನೆಷ್ಟು ಸಂತೋಷಿಸುತ್ತೇನೆ! ಕುಟುಂಬದ ಇತರ ಸದಸ್ಯರು ಅವರನ್ನು ಹೀಯಾಳಿಸಿದರೂ, 1983ರಲ್ಲಿ ಅವರ ಮರಣದ ಸಮಯದ ತನಕ ಅವರು ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿದರು. ತಮ್ಮ ದೇವರಾದ ಯೆಹೋವನನ್ನು ಸೇವಿಸಿದಕ್ಕಾಗಿ ಅವರೆಂದೂ ವಿಷಾದಪಡಲಿಲ್ಲ. ಹಾಗೆಯೇ ನಾನೂ ಅವಿವಾಹಿತನಾಗಿ ಉಳಿದು, ಯೆಹೋವನ ಸೇವೆಗೆ ನನ್ನ ಜೀವವನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡದ್ದಕ್ಕಾಗಿ ಎಂದಿಗೂ ವಿಷಾದಪಟ್ಟಿರುವುದಿಲ್ಲ.
[ಪುಟ 25 ರಲ್ಲಿರುವ ಚಿತ್ರ]
ಬೆತೆಲ್ನಲ್ಲಿ ಕೆಲಸಮಾಡುತ್ತಿರುವುದು