ಅವಶಿಷ್ಟಗಳಿಗೆ ಭಕ್ತಿಯು ದೇವರನ್ನು ಮೆಚ್ಚಿಸುತ್ತದೋ?
ವರ್ಷಕ್ಕೆ ಸಾಮಾನ್ಯವಾಗಿ ಮೂರು ಸಾರಿ ದ್ರವೀಕರಿಸುತ್ತದೆಂದು ಹೇಳಲ್ಪಡುವ “ಸಾನ್ ಜನ್ನಾರೊನ ರಕ್ತವು,” ಅನೇಕ ಧಾರ್ಮಿಕ ಅವಶೇಷಗಳಲ್ಲಿ ಒಂದಾಗಿದೆ. ಯಾವುದರಲ್ಲಿ ಯೇಸು ಕ್ರಿಸ್ತನ ಶವವು ಸುತ್ತಲ್ಪಟ್ಟಿತ್ತೆಂದು ಹೇಳಲಾಗುತ್ತದೋ ಆ ಟುರಿನ್ನ ಶವವಸ್ತ್ರವು ಇನ್ನೊಂದು ಅವಶಿಷ್ಟವು. ಯೇಸುವಿಗೆ ಸಂಬಂಧಿಸಲ್ಪಟ್ಟ ಅವಶಿಷ್ಟಗಳಲ್ಲಿ ಆತನ ತೊಟ್ಟಿಲು (ರೋಮ್ನ ಒಂದು ದೊಡ್ಡ ಬಸಿಲಿಕದಲ್ಲಿ), ಆತನ ಸ್ಪೆಲ್ಲಿಂಗ್ ಪುಸ್ತಕ ಮತ್ತು ಆತನ ಹತ್ಯೆಯಲ್ಲಿ ಉಪಯೋಗಿಸಲ್ಪಟ್ಟದೆಂದು ನೆನಸುವ ಒಂದು ಸಾವಿರಕ್ಕಿಂತಲೂ ಹೆಚ್ಚು ಮೊಳೆಗಳು ಅಲ್ಲಿವೆ! ಧಾರ್ಮಿಕ ಅವಶಿಷ್ಟಗಳಲ್ಲಿ ಸ್ನಾನಿಕನಾದ ಯೋಹಾನನ ಹಲವಾರು ಶಿರಗಳೂ ಸೇರಿವೆ, ಮತ್ತು ಯೂರೋಪಿನ ವಿವಿಧ ಸ್ಥಳಗಳಲ್ಲಿ “ಸಂತ ಲುಖಿಯ” ಯಳದೆಂದು ಹೇಳಲ್ಪಡುವ ನಾಲ್ಕು ಕಳೇಬರಗಳಿವೆ.
ಅವಶಿಷ್ಟಗಳಿಗೆ ವಿಶೇಷವಾಗಿ ಪ್ರಖ್ಯಾತವಾದ ಶಹರಗಳಲ್ಲಿ ಜರ್ಮನಿಯ ಟ್ರಾಯರ್ ಒಂದಾಗಿದೆ. ಯೇಸು ಕ್ರಿಸ್ತನಿಂದ ಧರಿಸಲ್ಪಟ್ಟ ಹೊಲಿಗೆಯಿಲ್ಲದ “ಪವಿತ್ರ ಒಳಅಂಗಿ” ಎಂದು ಹೇಳಲಾಗುವ ಅನೇಕ ಉಡುಪುಗಳಲ್ಲಿ ಒಂದನ್ನು ಅಲ್ಲಿ ಕಾಪಾಡಲಾಗಿದೆ. ವ್ಯಾಟಿಕನ್ ಸಿಟಿ ಒಂದರಲ್ಲಿಯೇ ಒಂದು ಸಾವಿರಕ್ಕಿಂತಲೂ ಹೆಚ್ಚು ಅವಶಿಷ್ಟಗಳು ವಿಶೇಷ ಪತ್ರಾಗಾರದಲ್ಲಿ ಇಡಲ್ಪಟ್ಟಿವೆ. ಜರ್ಮನಿಯ ಕಲೋನ್ನ “ಸಂತ ಅರ್ಸಲಾ” ಚರ್ಚಿನಲ್ಲಿ ಅಕ್ಷರಶಃ ಸಾವಿರಾರು ಧಾರ್ಮಿಕ ಅವಶಿಷ್ಟಗಳನ್ನು ಇಡಲಾಗಿದೆ. ಇವುಗಳ ಪಟ್ಟಿಗೆ ಮಿತಿಯಿಲ್ಲ. ಏಕೆ, ಇಟೆಲಿಯೊಂದರಲ್ಲಿಯೇ ಧಾರ್ಮಿಕ ಅವಶಿಷ್ಟಗಳಿರುವ 2,468 ಸ್ಥಳಗಳು ಪುಣ್ಯಸ್ಥಾನಗಳೆಂದು ಎಣಿಸಲ್ಪಡುತ್ತವೆ.
ಅವಶಿಷ್ಟಗಳಿಗೆ ಭಕ್ತಿಯು ನಮ್ಮ ಸಾಮಾನ್ಯ ಶಕದ ನಾಲ್ಕನೆಯ ಶತಮಾನದಿಂದ ಆರಂಭಿಸಿದೆಂದು ನಂಬಲಾಗುತ್ತದೆ, “ಸಂತರ” ಪೂಜೆಯು ಸಹಾ. ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದಾಗಿಯೂ ಅವಶಿಷ್ಟಗಳ ಸಂಖ್ಯೆಯು ಶತಮಾನಗಳಲ್ಲಿ ಕ್ರಮೇಣ ಬೆಳೆಯುತ್ತಾ ಬಂದು ಇಂದು ಸಾವಿರಾರು ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿವೆ. ದ್ವಿತೀಯ ವ್ಯಾಟಿಕನ್ ಕೌನ್ಸಿಲ್, “ಚರ್ಚು ತನ್ನ ಸಂಪ್ರದಾಯಕ್ಕನುಸಾರ ಸಂತರನ್ನು ಪೂಜಿಸುತ್ತದೆ ಮತ್ತು ಅವರ ಸಾಚ ಅವಶಿಷ್ಟಗಳನ್ನು ಮತ್ತು ಅವುಗಳ ಪ್ರತೀಕಗಳನ್ನು ಗೌರವಿಸುತ್ತದೆ,” ಎಂದು ದೃಢೀಕರಿಸಿದೆ. (ಕಾನ್ಸಿಟ್ಯೂಶನ್ “ಸರ್ಕ್ರೊಸ್ಯಾಂಕ್ಟಂ ಸುಲ್ಲಾ ಸಾಕ್ರ ಲಿಥುರ್ಗಿಯ, I ಡೊಕ್ಯುಮೆಂಟಿ ಡೆಲ್ ಕೌನ್ಸಿಲಿಯೊ ವೆಟಿಕಾನೊ II, 1980 ಎಡಿಝಿಯೊನಿ ಪೌಲಿ ನೊದಲ್ಲಿ.) “ನಾಮಾಂಕಿತ ಅವಶಿಷ್ಟಗಳು ಹಾಗೂ ಅಧಿಕ ಸಂಖ್ಯಾತ ಜನರಿಂದ ಗೌರವಿಸಲ್ಪಡುವ ಪೂಜ್ಯವಸ್ತುಗಳು” ಕೋಡೆಕ್ಸ್ ಲುರಿಸ್ ಕನೊನಿಸಿ (ಮಠೀಯ ಆಜ್ಞಾ ವಿಧಿಗಳು) ಯಲ್ಲಿ ತಿಳಿಸಲ್ಪಟ್ಟಿದ್ದು 1983ರಲ್ಲಿ ಜಾನ್ ಪೌಲ್ II ಇವರಿಂದ ಘೋಷಿಸಲ್ಪಟ್ಟಿತ್ತು. (ಕ್ಯಾನನ್ 1190) ಆ್ಯಂಗ್ಲಿಕನ್ ಮತ್ತು ಸಾಂಪ್ರದಾಯಿಕ ಚರ್ಚುಗಳು ಸಹಾ ಅವಶಿಷ್ಟಗಳನ್ನು ಗೌರವಿಸುತ್ತವೆ.
ಕ್ರಿಸ್ತನನ್ನು ಕಂಭಕ್ಕೇರಿಸಿದ ಅಷ್ಟು ಮೊಳೆಗಳು ಮತ್ತು ಸ್ನಾನಿಕನಾದ ಯೋಹಾನನ ಹಲವಾರು ತಲೆಗಳು ಅಸ್ತಿತ್ವದಲ್ಲಿರುವಾಗ, ಧಾರ್ಮಿಕ ಅವಶಿಷ್ಟಗಳು ಹೆಚ್ಚಾಗಿ ಮೋಸಕರವೆಂಬದು ವ್ಯಕ್ತ. ಉದಾಹರಣೆಗೆ, ಟುರಿನ್-ಶವವಸ್ತ್ರವು ಒಂದು ವಂಚನೆ ಎಂಬದಾಗಿ ರೇಡಿಯೋ ಕಾರ್ಬನ್ ಕಾಲಗಣನೆ ರುಜುಪಡಿಸಿ ತೋರಿಸಿದೆ. ರಸಕರವಾಗಿಯೇ, 1988ರಲ್ಲಿ ಅದರ ಮೇಲೆ ಎದ್ದ ಉಗ್ರ ವಾಗ್ವಾದದಲ್ಲಿ, ಪ್ರಖ್ಯಾತ ವ್ಯಾಟಿಕನ್ ವೀಕ್ಷಕನಾದ ಮಾರ್ಕೊ ಟೊಝಟಿ ಕೇಳಿದ್ದು: “ಶವವಸ್ತ್ರದ ಮೇಲೆ ಮಾಡಲ್ಪಟ್ಟ ಇಂಥ ವೈಜ್ಞಾನಿಕ ವಿಶೇಷ್ಲಣೆಯು ಜನಪ್ರಿಯ ಭಕ್ತಿಯ ಇತರ ಪೂಜ್ಯ ವಸ್ತುಗಳ ಮೇಲೆ ಮಾಡಲ್ಪಟ್ಟಲ್ಲಿ, ತೀರ್ಮಾನವು ಏನು ಸಿಗುವುದೋ?”
ಸುಜ್ಞ ವ್ಯಕ್ತಿಯಾದ ಯಾವನಾದರೂ ಒಂದು ಸುಳ್ಳು ಅವಶಿಷ್ಟವನ್ನು ಪೂಜಿಸ ಬಯಸಲಾರನು. ಆದರೆ ಗಮನಿಸತಕ್ಕ ಕಾರಣವು ಅದೊಂದೆಯೋ?
ಬೈಬಲ್ ಏನನ್ನುತ್ತದೆ?
ದೇವರ ಅನುಗ್ರಹಿತ ಜನರಾದ ಪುರಾತನ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಬಂಧಿವಾಸಿಗಳಾಗಿ ಇದ್ದಾಗ ಧಾರ್ಮಿಕ ಅವಶಿಷ್ಟಗಳನ್ನು ಗೌರವಿಸಿದ್ದರೆಂದು ಬೈಬಲ್ ತಿಳಿಸುವುದಿಲ್ಲ. ಮೂಲಪಿತನಾದ ಯಾಕೋಬನು ಈಜಿಪ್ಟಿನಲ್ಲಿ ಮರಣಪಟ್ಟದ್ದೂ ಮತ್ತು ಅವನ ಶವವನ್ನು ‘ಮಕ್ಪೇಲ ಬೈಲಿನ ಗವಿಯಲ್ಲಿ’ ಹೂಣಿಡುವುದಕ್ಕಾಗಿ ಕಾನಾನ್ ದೇಶಕ್ಕೆ ಒಯ್ದದ್ದೂ ನಿಜ. ಅವನ ಪುತ್ರನಾದ ಯೋಸೇಫನು ಸಹಾ ಈಜಿಪ್ಟಿನಲ್ಲೇ ತೀರಿಕೊಂಡನು, ಮತ್ತು ಅವನ ಎಲುಬುಗಳನ್ನು ಕೊನೆಗೆ ದಫನ ಮಾಡಲು ಕಾನಾನಿಗೆ ಒಯ್ಯಲಾಗಿತ್ತು. (ಆದಿಕಾಂಡ 49:29-33; 50:1-14, 22-26; ವಿಮೋಚನಕಾಂಡ 13:19) ಆದರೂ, ಯಾಕೋಬ ಮತ್ತು ಯೋಸೇಫರ ಕಳೇಬರಗಳನ್ನು ಇಸ್ರಾಯೇಲ್ಯರು ಎಂದಾದರೂ ಧಾರ್ಮಿಕ ಅವಶಿಷ್ಟಗಳಾಗಿ ಪೂಜಿಸಿದ್ದರೆಂದು ದೇವರ ವಾಕ್ಯವು ಯಾವ ಸುಳಿವನ್ನೂ ಕೊಡುವದಿಲ್ಲ.
ಪ್ರವಾದಿಯಾಗಿದ್ದ ಮೋಶೆಯ ವಿಷಯದಲ್ಲಿ ಏನು ಸಂಭವಿಸಿತ್ತೆಂಬದನ್ನು ಸಹಾ ಗಮನಿಸಿರಿ. ದೇವರ ಮಾರ್ಗದರ್ಶನೆಯ ಕೆಳಗೆ ಅವನು ಇಸ್ರಾಯೇಲ್ಯರನ್ನು ನಾಲ್ವತ್ತು ವರುಷಗಳ ತನಕ ನಡಿಸಿದನು. ಅನಂತರ ತನ್ನ 120ನೇ ವಯಸ್ಸಿನಲ್ಲಿ ಅವನು ನೆಬೋ ಬೆಟ್ಟವನ್ನೇರಿ ಅಲ್ಲಿಂದ ವಾಗ್ದತ್ತ ದೇಶವನ್ನು ವೀಕ್ಷಿಸಿದನು ಮತ್ತು ತೀರಿಕೊಂಡನು. ಪ್ರಧಾನದೂತನಾದ ಮೀಕಾಯೇಲನು ಮೋಶೆಯ ಶವದ ವಿಷಯದಲ್ಲಿ ಪಿಶಾಚನೊಂದಿಗೆ ವಾಗ್ವಾದ ಮಾಡಿದನು, ಮತ್ತು ಅವಶಿಷ್ಟಗಳ ಭಕ್ತಿಯಲ್ಲಿ ಇಸ್ರಾಯೇಲ್ಯರನ್ನು ಸಿಕ್ಕಿಸಿಹಾಕಲು ಸೈತಾನನ ಯಾವುವೇ ಸಂಭಾವ್ಯ ಪ್ರಯತ್ನಗಳನ್ನು ನಿಷ್ಫಲಗೊಳಿಸಿದನು. (ಯೂದ 9) ಮೋಶೆಯ ಮರಣಕ್ಕಾಗಿ ಅವರು ಶೋಕಿಸಿದ್ದು ಸಹಜವಾಗಿದ್ದರೂ, ಆತನ ಅವಶೇಷಗಳನ್ನು ಅವರು ಪೂಜಿಸಿರಲಿಲ್ಲ. ವಾಸ್ತವದಲ್ಲಿ, ದೇವರು ಮೋಶೆಯನ್ನು ಮಾನವರಿಗೆ ಮರೆಯಾದ ಸ್ಥಳದಲ್ಲಿ ಒಂದು ಗುರುತಿಲ್ಲದ ಗೋರಿಯಲ್ಲಿ ಸಮಾಧಿ ಮಾಡಿದ ಮೂಲಕ ಅಂಥ ವಿಷಯವನ್ನು ಅಶಕ್ಯವನ್ನಾಗಿ ಮಾಡಿದನು.—ಧರ್ಮೋಪದೇಶಕಾಂಡ 34:1-8.
ಅವಶಿಷ್ಟಗಳ ಕಡೆಗೆ ಪೂಜ್ಯಭಾವವನ್ನು ಪ್ರತಿಪಾದಿಸುವ ಕೆಲವರು 2 ಅರಸು 13:21ನ್ನು ಆಧಾರವಾಗಿ ಕೊಡುತ್ತಾರೆ, ಅದನ್ನುವುದು: “ಒಂದು ದಿವಸ ಜನರು ಒಬ್ಬ ಸತ್ತವನನ್ನು ಸಮಾಧಿ ಮಾಡುವದಕ್ಕೆ ಹೋದಾಗ ಮೋವಾಬ್ಯರ ಗುಂಪು ಬರುತ್ತಿರುವದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಸತ್ತ ಮನುಷ್ಯನು ಎಲೀಷನ ಎಲುಬುಗಳಿಗೆ ತಗಲಿದ ಕೂಡಲೇ ಉಜ್ಜೀವಿಸಿ ಎದ್ದು ನಿಂತನು.” ಇದು ದೇವರ ಪ್ರವಾದಿಗಳಲ್ಲೊಬ್ಬನ ನಿರ್ಜೀವ ಎಲುಬುಗಳನ್ನು ಒಳಗೊಂಡಿದ್ದ ಒಂದು ಅದ್ಭುತವಾಗಿತ್ತು. ಆದರೆ ಆ ಅದ್ಭುತದ ಸಮಯದಲ್ಲಿ ಎಲೀಷನು ಸತ್ತಿದ್ದನು ಮತ್ತು “ಯಾವ ತಿಳುವಳಿಕೆಯೂ” ಇಲ್ಲದವನಾಗಿದ್ದನು. (ಪ್ರಸಂಗಿ 9:5, 10) ಆದಕಾರಣ, ಈ ಪುನರುತ್ಥಾನವನ್ನು ಯೆಹೋವ ದೇವರ ಮಹತ್ಕಾರ್ಯ ಮಾಡುವ ಶಕ್ತಿಗೆ ಸೇರಿದ್ದೆಂದು ಹೇಳಬೇಕು, ದೇವರು ಅದನ್ನು ತನ್ನ ಪವಿತ್ರಾತ್ಮದ ಅಥವಾ ಕ್ರಿಯಾಶೀಲ ಶಕ್ತಿಯ ಮೂಲಕವಾಗಿ ನಡಿಸಿದ್ದನು. ಎಲೀಷನ ಎಲುಬುಗಳು ಎಂದಾದರೂ ಪೂಜ್ಯಭಾವದಿಂದ ನೋಡಲ್ಪಟ್ಟಿದ್ದವೆಂದು ಶಾಸ್ತ್ರವಚನಗಳು ತಿಳಿಸದೇ ಇದ್ದದ್ದು ಸಹಾ ಗಮನಾರ್ಹವಾಗಿದೆ.
ಅಪೊಸ್ತಲರ ಕೃತ್ಯಗಳು 19:11, 12ರಲ್ಲಿ ಏನು ಹೇಳಲ್ಪಟ್ಟಿದೆಯೇ ಆ ಕಾರಣದಿಂದಾಗಿ ಕ್ರೈಸ್ತ ಪ್ರಪಂಚದ ಕೆಲವರು ಅವಶಿಷ್ಟಗಳಿಗೆ ಭಕ್ತಿಯನ್ನು ಪ್ರತಿಪಾದಿಸುತ್ತಾರೆ, ಅದನ್ನುವುದು: “ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದದ್ದರಿಂದ ಜನರು ಅವನ ಮೈಮೇಲಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು.” ಪೌಲನ ಮೂಲಕವಾಗಿ ಆ ಅಸಾಮಾನ್ಯ ಕೃತ್ಯಗಳನ್ನು ನಡಿಸಿದವನು ದೇವರೇ ಎಂಬದನ್ನು ದಯವಿಟ್ಟು ಗಮನಿಸಿರಿ. ಅಪೊಸ್ತಲನು ತಾನೇ ಅಂಥ ಮಹತ್ಕಾರ್ಯಗಳನ್ನು ಸ್ವತಂತ್ರವಾಗಿ ನಡಿಸಿರಲಿಲ್ಲ, ಮತ್ತು ಆತನು ಯಾವನೇ ಮಾನವನಿಂದ ಪೂಜ್ಯಭಾವವನ್ನು ಎಂದೂ ಸ್ವೀಕರಿಸಿರಲಿಲ್ಲ.—ಅಪೊಸ್ತಲರ ಕೃತ್ಯಗಳು 14:8-18.
ಬೈಬಲ್ ಬೋಧನೆಗಳಿಗೆ ವಿರುದ್ಧ
ಕಾರ್ಯಥಃ, ಧಾರ್ಮಿಕ ಅವಶಿಷ್ಟಗಳಿಗೆ ಭಕ್ತಿಯು ಬೈಬಲಿನ ಹಲವಾರು ಬೋಧನೆಗಳಿಗೆ ವಿರುದ್ಧವಾಗಿದೆ. ಉದಾಹರಣೆಗೆ, ಅಂಥ ಭಕ್ತಿಯಲ್ಲಿ ಒಂದು ಆವಶ್ಯಕ ಭಾಗವು ಮಾನವಾತ್ಮದ ಅಮರತ್ವದಲ್ಲಿ ನಂಬಿಕೆಯೇ. “ಸಂತ”ರಾಗಿ ಪರಿಗಣಿಸಲ್ಪಟ್ಟ ಮತ್ತು ಸನ್ಮಾನಿಸಲ್ಪಟ್ಟವರೆಲ್ಲರ ಆತ್ಮಗಳು ಪರಲೋಕದಲ್ಲಿ ಜೀವಂತವಾಗಿ ಇವೆ ಎಂಬದಾಗಿ ಚರ್ಚ್ ಸದಸ್ಯರಾದ ಲಕ್ಷಾಂತರ ಭಕ್ತಜನರು ನಂಬುತ್ತಾರೆ. ಈ ಪ್ರಾಮಾಣಿಕ ಜನರು ಅಂಥ “ಸಂತರಿಗೆ” ಪ್ರಾರ್ಥನೆ ಮಾಡುತ್ತಾರೆ, ಅವರಿಂದ ಸುರಕ್ಷೆಯನ್ನು ಬೇಡುತ್ತಾರೆ ಮತ್ತು ವಿಜ್ಞಾಪಕನ ಪರವಾಗಿ ದೇವರಿಗೆ ಮಧ್ಯಸಿಕ್ಥೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ, ಒಂದು ಧರ್ಮೋಪದೇಶಕ ಕೃತಿಗನುಸಾರ, ಕ್ಯಾಥ್ಲಿಕರು ಅವಶಿಷ್ಟಗಳಿಗೆ “ದೇವರೊಂದಿಗೆ ಸಂತನ ಮಧ್ಯಸಿಕ್ಥೆಯನ್ನು ನಡಿಸುವ ಶಕ್ತಿಯು” ಇದೆ ಎಂದು ಹೇಳುತ್ತಾರೆ.
ಆದರೆ ಬೈಬಲಿಗನುಸಾರವಾಗಿಯಾದರೋ, ಮಾನವ ಆತ್ಮ ಅಮರವಲ್ಲ. ಮರಣಾನಂತರ ಶರೀರದಿಂದ ಪ್ರತ್ಯೇಕವಾಗಿ ಜೀವಿಸಲು ಶಕ್ತನಾದ ಮತ್ತು ಸಾಯಲಾರದ ಆತ್ಮಗಳು ಮನುಷ್ಯರ ಒಳಗೆ ಇರುವುದಿಲ್ಲ. ಬದಲಾಗಿ ದೇವರ ವಾಕ್ಯವು ಹೇಳುವುದು: “ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿ (ಆತ್ಮ, NW)ಯಾದನು.” (ಆದಿಕಾಂಡ 2:7) ಮನುಷ್ಯರಿಗೆ ಅಮರವಾದ ಆತ್ಮಗಳಿವೆಯೆಂದು ಕಲಿಸುವ ಬದಲಿಗೆ, ಬೈಬಲು ಅನ್ನುವುದು: “ಪಾಪ ಮಾಡುವ ಪ್ರಾಣಿ (ಆತ್ಮ, NW)ವೇ ಸಾಯುವನು.” (ಯೆಹೆಜ್ಕೇಲ 18:4) ಇದು ಎಲ್ಲಾ ಮಾನವರಿಗೆ ಅನ್ವಯಿಸುತ್ತದೆ—ಅನಂತರ “ಸಂತ”ರಾಗಿ ಪರಿಗಣಿಸಲ್ಪಟ್ಟವರಿಗೆ ಸಹಾ—ಯಾಕೆಂದರೆ ನಾವೆಲ್ಲರೂ ಮೊದಲನೆಯ ಮನುಷ್ಯನಾದ ಆದಾಮನಿಂದ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ.—ರೋಮಾಪುರ 5:12.
“ಸಂತರ” ಭಕ್ತಿಯನ್ನು ಮಾಡುವುದನ್ನು ವರ್ಜಿಸಬೇಕು ಯಾಕೆಂದರೆ ಅವರು ಯಾರ ಪರವಾಗಿಯಾದರೂ ದೇವರೊಂದಿಗೆ ಮಧ್ಯಸಿಕ್ಥೆ ಮಾಡುವ ಅಧಿಕಾರವನ್ನು ಎಂದೂ ಪಡೆದಿಲ್ಲ. ಅದನ್ನು ತನ್ನ ಒಬ್ಬನೇ ಕುಮಾರನಾದ ಯೇಸು ಕ್ರಿಸ್ತನು ಮಾಡಶಕ್ತನೆಂದು ಯೆಹೋವ ದೇವರು ವಿಧಿಸಿದ್ದಾನೆ. “ಕ್ರಿಸ್ತ ಯೇಸುವು ನಮಗಾಗಿ ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರವಾಗಿ ನಿಂತು, ಬೇಡುವವನಾಗಿದ್ದಾನೆ.”—ರೋಮಾಪುರ 8:34, ದಿ ಜೆರೂಸಲೇಮ್ ಬೈಬಲ್; ಯೋಹಾನ 14:6, 14ಕ್ಕೆ ಹೋಲಿಸಿ.
“ಸಂತರಿಗೆ” ಮತ್ತು ಅವರನ್ನು ಒಳಗೊಂಡಿರುವ ಧಾರ್ಮಿಕ ಅವಶಿಷ್ಟಗಳಿಗೆ ಭಕ್ತಿಯನ್ನು ವರ್ಜಿಸಲು ಇನ್ನೊಂದು ಕಾರಣ ಮೂರ್ತಿಪೂಜೆಯ ಕುರಿತು ಬೈಬಲ್ ಏನನ್ನುತ್ತದೋ ಅದೇ. ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದಶಾಜ್ಞೆಗಳಲ್ಲಿ ಒಂದು ಹೇಳುವುದು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಿಯಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಿಯಾಗಲಿ ಇರುವ ಯಾವದರ ರೂಪವನ್ನಾಗಲಿ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆ ಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.” (ವಿಮೋಚನಕಾಂಡ 20:4, 5) ಶತಮಾನಗಳ ಅನಂತರ, ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಹೇಳಿದ್ದು: “ಪ್ರಿಯ ಸಹೋದರರೇ, ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ.” (1 ಕೊರಿಂಥ 10:14) ತದ್ರೀತಿಯಲ್ಲಿ, ಅಪೊಸ್ತಲ ಯೋಹಾನನು ಬರೆದದ್ದು: “ಪ್ರಿಯರಾದ ಮಕ್ಕಳೇ, ವಿಗ್ರಹಗಳಿಗೆ ದೂರವಾಗುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.”—1 ಯೋಹಾನ 5:21.
ಹೀಗೆ “ಸಂತರು”ಗಳಾಗಿ ಮತ್ತು ಧಾರ್ಮಿಕ ಅವಶಿಷ್ಟಗಳಾಗಿ ಪರಿಗಣಿಸಲ್ಪಟ್ಟವರಿಗೆ ಪೂಜ್ಯತೆಯನ್ನು ತೋರಿಸುವುದಕ್ಕೆ ಬೈಬಲಿನಲ್ಲಿ ಯಾವ ಬೆಂಬಲವೂ ಇಲ್ಲ. ಆದರೂ ಕೆಲವು ಜನರು ಪವಿತ್ರವಾಗಿ ಪರಿಗಣಿಸಲ್ಪಡುವ ಯಾವುದಾದರೊಂದು ವಸ್ತುವನ್ನು ಇಡಲು ಬಯಸುತ್ತಾರೆ, ರಕ್ಷಿಸುವ ಶಕ್ತಿ ಇದೆಯೆಂದು ನೆನಸಿ ಅದನ್ನು ನೋಡಲು ಮತ್ತು ಸ್ಪರ್ಶಿಸಲು ಬಯಸುತ್ತಾರೆ. ನಿಶ್ಚಯವಾಗಿ ಧಾರ್ಮಿಕ ಅವಶಿಷ್ಟಗಳನ್ನು ಪರಲೋಕ ಮತ್ತು ಭೂಲೋಕದ ನಡುವಣ ಒಂದು ಸರಪಣಿಯ ಕೊಂಡಿಯಾಗಿ ಅನೇಕರು ವೀಕ್ಷಿಸುತ್ತಾರೆ. ಈ ವಿಷಯದ ಕುರಿತು ದಯವಿಟ್ಟು ತುಸು ಯೋಚಿಸಿರಿ.
ಒಬ್ಬ ವ್ಯಕ್ತಿಯು ದೇವರು ಅಪೇಕ್ಷಿಸುವ ಆರಾಧನೆಯ ಕುರಿತು ಯೇಸುವಿನ ಮಾತುಗಳಿಗೆ ಹೊಂದಿಕೆಯಲ್ಲಿ ನಡೆಯುವದು ಧಾರ್ಮಿಕ ಅವಶಿಷ್ಟಗಳನ್ನು ನೋಡುವ ಮತ್ತು ಸ್ಪರ್ಶಿಸುವ ಮೂಲಕವಾಗಿ ಅಲ್ಲ. ಯೇಸುವಂದದ್ದು: “ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುವವನಲ್ಲವೇ. ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:23, 24) ಯೆಹೋವ ದೇವರು “ಆತ್ಮಸ್ವರೂಪನು,” ಮಾನವ ನೇತ್ರಗಳಿಗೆ ಅದೃಶ್ಯನು. ಆತನನ್ನು “ಆತ್ಮದಿಂದ” ಆರಾಧಿಸುವದೆಂದರೆ ದೇವರಿಗೆ ನಮ್ಮ ಪವಿತ್ರ ಸೇವೆಯು ಹೃದಯ ಪೂರ್ಣವಾದ ಪ್ರೀತಿ ಮತ್ತು ನಂಬಿಕೆಯಿಂದ ಪ್ರೇರಿಸಲ್ಪಡುತ್ತದೆ ಎಂದರ್ಥ. (ಮತ್ತಾಯ 22:37-40; ಗಲಾತ್ಯ 2:16) ಅವಶಿಷ್ಟಗಳನ್ನು ಪೂಜಿಸುವ ಮೂಲಕ ದೇವರನ್ನು ನಾವು “ಸತ್ಯದಿಂದ” ಆರಾಧಿಸಲಾರೆವು, ಬದಲಿಗೆ ಧಾರ್ಮಿಕ ಸುಳ್ಳುಗಳನ್ನು ತಿರಸ್ಕರಿಸಿ ಬೈಬಲಿನಲ್ಲಿ ಪ್ರಕಟವಾದ ಆತನ ಚಿತ್ತವನ್ನು ಕಲಿತು ಅದನ್ನು ಮಾಡುವ ಮೂಲಕ ಮಾತ್ರವೇ.
ಆದುದರಿಂದ, ಪಂಡಿತ ಜೇಮ್ಸ್ ಬೆಂಟ್ಲಿ, “ಪುರಾತನ ಇಬ್ರಿಯರು ಅವಶಿಷ್ಟಗಳ ಪೂಜೆಯನ್ನು ಮಾಡಿರಲಿಲ್ಲ” ಎಂದು ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ. ಅವರು ಮತ್ತೂ ಹೇಳಿದ್ದೇನಂದರೆ—ಸೆಫ್ತನನ ಮರಣ ಮತ್ತು ಅವನ ಶವವು ಲುಶ್ಯನ್ನಿಂದ ಅಗೆದು ತೆಗೆಯಲ್ಪಟ್ಟ ನಡುವಣ ನಾಲ್ಕು ಶತಮಾನಗಳಲ್ಲಿ, ಅವಶಿಷ್ಟಗಳ ಕಡೆಗೆ ಕ್ರೈಸ್ತರ ಮನೋಭಾವವು ಪೂರ್ಣವಾಗಿ ಬದಲಾಗಿ ಹೋಯಿತು. ಆದರೂ ಸಾ. ಶ. ಐದನೆಯ ಶತಕದೊಳಗೆ, ಧರ್ಮಭ್ರಷ್ಟ ಕ್ರೈಸ್ತ ಪ್ರಪಂಚವು ಮೂರ್ತಿಪೂಜೆ, ಮೃತರ ಸ್ಥಿತಿ ಮತ್ತು ನಮಗಾಗಿ “ಬೇಡಿಕೊಳ್ಳುವವನಾದ” ಯೇಸು ಕ್ರಿಸ್ತನ ಪಾತ್ರ ಮುಂತಾದ ಸ್ಪಷ್ಟವಾಗಿದ ಬೈಬಲ್ ಬೋಧನೆಗಳನ್ನು ಪಾಲಿಸುವುದನ್ನು ಆವಾಗಲೇ ತ್ಯಜಿಸಿತ್ತು.—ರೋಮಾಪುರ 8:34; ಪ್ರಸಂಗಿ 9:5; ಯೋಹಾನ 11:11-14.
ನಮ್ಮ ಆರಾಧನೆಯು ದೇವರಿಗೆ ಮೆಚ್ಚಿಗೆಯಾಗಬೇಕೆಂದು ನಾವು ಬಯಸುವುದಾದರೆ, ಅದು ಯಾವುದೇ ರೀತಿಯ ಮೂರ್ತಿಪೂಜೆಯಲ್ಲಿ ಕೂಡಿರಬಾರದು ಎಂದು ನಾವು ಖಚಿತಮಾಡಿಕೊಳ್ಳಬೇಕು. ಸ್ವೀಕರಣೀಯವಾಗಿರಲು, ನಮ್ಮ ಆರಾಧನೆಯು ನಿರ್ಮಾಣಿಕನಾದ ಯೆಹೋವ ದೇವರಿಗೆ ಹೋಗಬೇಕು, ಯಾವುದೇ ಅವಶಿಷ್ಟ ಯಾ ಸೃಷ್ಟಿಜೀವಿಗಳಿಗಲ್ಲ. (ರೋಮಾಪುರ 1:24, 25; ಪ್ರಕಟನೆ 19:10) ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಸಹಾ ನಾವು ಪಡೆದುಕೊಳ್ಳಬೇಕು ಮತ್ತು ಬಲವಾದ ನಂಬಿಕೆಯನ್ನು ಕಟ್ಟಿಕೊಳ್ಳಬೇಕು. (ರೋಮಾಪುರ 10:17; ಇಬ್ರಿಯರಿಗೆ 11:6) ಮತ್ತು ನಾವು ಸತ್ಯಾರಾಧನೆಯ ದಾರಿಯಲ್ಲಿ ನಡೆಯುವುದಾದರೆ, ಅವಶಿಷ್ಟಗಳಿಗೆ ಭಕ್ತಿಯು ದೇವರನ್ನು ಮೆಚ್ಚಿಸುವುದಿಲ್ಲವೆಂಬ ಹೇರಳವಾದ ಶಾಸ್ತ್ರೀಯ ರುಜುವಾತಿಗೆ ಹೊಂದಿಕೆಯಾಗಿ ಕಾರ್ಯನಡಿಸುವೆವು. (w91 11/15)
[ಪುಟ 5 ರಲ್ಲಿರುವ ಚಿತ್ರ]
ಎಲೀಷನ ಎಲುಬುಗಳು ಒಂದು ಪುನರುತ್ಥಾನದಲ್ಲಿ ಒಳಗೊಂಡಿದ್ದರೂ ಪೂಜ್ಯವೆಂದು ಪರಿಗಣಿಸಲ್ಪಡಲಿಲ್ಲ