ಮಾನವಕುಲಕ್ಕೆ ನಿಜವಾಗಿಯೂ ಒಬ್ಬ ಮೆಸ್ಸೀಯನ ಆವಶ್ಯಕತೆಯಿದೆಯೆ?
“ಲೋಕಕ್ಕೆ ಒಬ್ಬ ಮೆಸ್ಸೀಯನ ಆವಶ್ಯಕತೆಯಿದೆ, ಅಧಿಕಾರಿಯೊಬ್ಬನು ಹೇಳುತ್ತಾನೆ.”
ಆ ತಲೇಪಂಕ್ತಿಯು 1980 ರಲ್ಲಿ ಕೆನಡಾದ ಟೊರಂಟೋವಿನ ದ ಫೈನಾನ್ಸಿಯಲ್ ಪೋಸ್ಟ್ ನಲ್ಲಿ ಕಂಡುಬಂತು. ಉಲ್ಲೇಖಿಸಲ್ಪಟ್ಟ ಅಧಿಕಾರಿಯು ಅರೆಲ್ಯೊ ಪೆಶ, ಕ್ಲಬ್ ಆಫ್ ರೋಮ್ ಎಂದು ಕರೆಯಲ್ಪಡುವ ಒಂದು ಪ್ರಖ್ಯಾತ ಚಿಂತನಾ ಸಮಿತಿಯ ಅಧ್ಯಕ್ಷ ಮತ್ತು ಸ್ಥಾಪಕರಾಗಿದ್ದರು. ಪೋಸ್ಟ್ ಪತ್ರಿಕೆಗನುಸಾರವಾಗಿ, “ಒಬ್ಬ ಜನಪ್ರಿಯತೆಯ ಮುಂದಾಳು—ವೈಜ್ಞಾನಿಕ, ರಾಜಕೀಯ, ಯಾ ಧಾರ್ಮಿಕ—ನಾಗರಿಕತೆಯನ್ನು ನಾಶಗೊಳಿಸುವ ಬೆದರಿಕೆಯನ್ನೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ವಿಪ್ಲವದಿಂದ ಲೋಕದ ಏಕಮಾತ್ರ ರಕ್ಷಣೆಯಾಗಬಹುದು” ಎಂದು ಪೆಶ ಅವರ ಯೋಚನೆಯಾಗಿತ್ತು. ನೀವೇನು ಎಣಿಸುತ್ತೀರಿ? ಮಾನವ ಕುಲಕ್ಕೆ ಒಬ್ಬ ಮೆಸ್ಸೀಯನ ಆವಶ್ಯಕತೆ ಇರುವಂತಹ ವಿಪತ್ಕಾರಕ ಸಂಕಟದಲ್ಲಿ ಇಂದು ಲೋಕವು ಇದೆಯೊ? ಈ ಲೋಕವು ಎದುರಿಸುವ ಸಮಸ್ಯೆಗಳಲ್ಲೊಂದಾದ ಕೇವಲ ಹಸಿವನ್ನು ಮಾತ್ರ ಪರಿಗಣಿಸಿರಿ.
ಒಂದು ವಾರ್ತಾಪತ್ರ ಯಾ ಪತ್ರಿಕೆಯ ಚಿತ್ರವೊಂದರಿಂದ ಎರಡು ದೊಡ್ಡ, ಕಂದುಬಣ್ಣದ ಕಣ್ಣುಗಳು ನಿಮ್ಮನ್ನು ದಿಟ್ಟಿಸುನೋಡುತ್ತವೆ. ಅವು ಒಂದು ಮಗುವಿನ ಕಣ್ಣುಗಳು, ಕೇವಲ ಐದು ವರ್ಷ ವಯಸ್ಸು ಕೂಡ ಆಗದ ಒಂದು ಚಿಕ್ಕ ಹೆಣ್ಣುಮಗು. ಆದರೆ ಈ ಕಣ್ಣುಗಳು ನಿಮ್ಮನ್ನು ನಗುವಂತೆ ಮಾಡುವುದಿಲ್ಲ. ಅವುಗಳಲ್ಲಿ ಕೂಸಿನ ಕಾಂತಿಯು ಇಲ್ಲ, ಬೆರಗಿನ ಸಂತಸದ ಪ್ರಜ್ಞೆಯಿಲ್ಲ, ನಿಷ್ಕಪಟತೆಯ ಭರವಸೆಯಿಲ್ಲ. ಅದಕ್ಕೆ ಬದಲಾಗಿ, ಕಕ್ಕಾಬಿಕ್ಕಿಯಾದ ವೇದನೆ, ಮಂದವಾದ ನೋವು, ನಿರಾಶೆಯ ಹಸಿವಿನೊಂದಿಗೆ ಅವು ತುಂಬಿರುತ್ತವೆ. ಮಗುವು ಹೊಟ್ಟೆಗಿಲ್ಲದೆ ನರಳುತ್ತಿದೆ. ಎಂದೆಂದಿಗೂ ಅವಳಿಗೆ ತಿಳಿದಿರುವದು ನೋವು ಮತ್ತು ಹಸಿವೇ.
ಪ್ರಾಯಶಃ, ಇತರ ಅನೇಕರಂತೆ, ಅಂತಹ ಚಿತ್ರಗಳನ್ನು ನೀವು ನೋಡುತ್ತಾ ಇರಲು ಬಯಸುವುದಿಲ್ಲ, ಆದುದರಿಂದ ಬಲುಬೇಗನೆ ನೀವು ಪುಟವನ್ನು ತಿರುಗಿಸುವಿರಿ. ನೀವು ಆ ವಿಷಯ ಚಿಂತಿಸುವುದಿಲ್ಲವೆಂದು ಅಲ್ಲ, ಆದರೆ ನಿಮಗೆ ಹತಾಶೆಯ ಭಾವನೆಯುಂಟಾಗುತ್ತದೆ, ಕಾರಣ ಈ ಹುಡುಗಿಗೆ ಕಾಲ ತೀರಾ ಮೀರಿದೆ ಎಂದು ನೀವು ಎಣಿಸುತ್ತೀರಿ. ಬಡಕಲಾದ ಅಂಗಾಂಗಗಳು ಮತ್ತು ಊದಿರುವ ಹೊಟ್ಟೆಯು ತಾನೆ, ಅವಳ ದೇಹವು ಈಗಾಗಲೇ ಸ್ವತಃ ತನ್ನನ್ನು ಕಬಳಿಸಲು ಆರಂಭಿಸಿರುವ ಸೂಚನೆಗಳಾಗಿವೆ. ಅವಳ ಚಿತ್ರವನ್ನು ನೀವು ನೋಡುವ ಸಮಯದೊಳಗೆ, ಅವಳು ಪ್ರಾಯಶಃ ಸತ್ತಿರಲೂ ಬಹುದು. ಮತ್ತೂ ಕೆಡುಕೇನಂದರೆ, ಅವಳ ವಿದ್ಯಮಾನವು ಒಂಟಿಯಾದದೇನ್ದೂ ಅಲ್ಲವೆಂದು ನೀವು ಬಲ್ಲಿರಿ.
ಸಮಸ್ಯೆಯು ಎಷ್ಟೊಂದು ವ್ಯಾಪಕವಾಗಿದೆ? ಒಳ್ಳೇದು, 1 ಕೋಟಿ 40 ಲಕ್ಷ ಮಕ್ಕಳನ್ನು ಚಿತ್ರಿಸಿಕೊಳ್ಳಬಲ್ಲಿರೊ? ನಮ್ಮಲ್ಲಿ ಹೆಚ್ಚಿನವರಿಗೆ ಸಾಧ್ಯವಿಲ್ಲ; ಚಿತ್ರಿಸಿಕೊಳ್ಳಲು ಆ ಸಂಖ್ಯೆಯು ಕೇವಲ ಅತಿ ಉನ್ನತವಾಗಿದೆ. ಹಾಗಾದರೆ, 40,000 ಆಸನಗಳಿರುವ ಒಂದು ಕ್ರೀಡಾಂಗಣವನ್ನು ಊಹಿಸಿರಿ. ಈಗ ಅದು ತನ್ನ ಪೂರ್ಣ ಸಾಮರ್ಥ್ಯಕ್ಕನುಸಾರ ಮಕ್ಕಳಿಂದ ತುಂಬಿಕೊಂಡಿದೆ ಎಂದು ಊಹಿಸಿರಿ—ಸಾಲುಗಳ ಮೇಲೆ ಸಾಲುಗಳು, ಅಂತಸ್ತುಗಳ ಮೇಲೆ ಅಂತಸ್ತುಗಳು, ಮುಖಗಳ ಮಹಾ ಸಾಗರವೇ. ಅದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟವಾಗಿದೆ. ಆದರೂ, 1 ಕೋಟಿ 40 ಲಕ್ಷ ಮಕ್ಕಳನ್ನು ಕೂಡಿಸಲಿಕ್ಕೆ, ಮಕ್ಕಳಿಂದ ತುಂಬಿರುವ ಅಂತಹ 350 ಕ್ರೀಡಾಂಗಣಗಳು ಬೇಕಾಗುತ್ತವೆ. ಯೂನಿಸೆಫ್ (ಸಂಯುಕ್ತ ರಾಷ್ಟ್ರ ಸಂಘದ ಮಕ್ಕಳ ನಿಧಿ) ಗನುಸಾರ, ಅದು ಪ್ರತಿವರ್ಷ ಪ್ರಗತಿಶೀಲ ದೇಶಗಳಲ್ಲಿ ನ್ಯೂನ ಪೋಷಣೆಯಿಂದ ಮತ್ತು ಸುಲಭವಾಗಿ ತಡೆಗಟ್ಟಸಾಧ್ಯವಿರುವ ರೋಗಗಳಿಂದ ಸಾಯುವಂತಹ ಐದು ವರ್ಷದ ಕೆಳಗಿನ ಮಕ್ಕಳ ದಿಗಿಲುಗೊಳಿಸುವ ಸಂಖ್ಯೆಯಾಗಿದೆ. ಪ್ರತಿ ದಿನ ಅಂತಹ ಸುಮಾರು ಒಂದು ಕ್ರೀಡಾಂಗಣದಷ್ಟು ಮಕ್ಕಳು ಸಾಯುವುದಕ್ಕೆ ಅದು ಸಮಾನವಾಗಿದೆ! ಇದರೊಂದಿಗೆ ಹಸಿವೆಯಿಂದಿರುವ ಪ್ರಾಯಸರ್ಥ ಅಂಕೆಯನ್ನು ಕೂಡಿಸಿರಿ, ಮತ್ತು ಸತತ ನ್ಯೂನ ಪೋಷಣೆಯಿಂದಾಗಿ ಲೋಕಾದ್ಯಂತ ಸಾಯುವ ಸುಮಾರು 100 ಕೋಟಿ ಜನರ ಮೊತ್ತವನ್ನು ನೀವು ಪಡೆಯುವಿರಿ.
ಇಷ್ಟೆಲ್ಲಾ ಹಸಿವು ಯಾಕೆ?
ಈಗ ಮನುಷ್ಯರು ವಿನಿಯೋಗಿಸುವುದಕ್ಕಿಂತಲೂ ಅಧಿಕ ಆಹಾರವನ್ನು ಪ್ರಚಲಿತದಲ್ಲಿ ಈ ಗ್ರಹವು ಉತ್ಪಾದಿಸುತ್ತದೆ, ಮತ್ತು ಅದಕ್ಕೆ ಇನ್ನೂ ಹೆಚ್ಚನ್ನು ಉತ್ಪಾದಿಸುವ ಸಾಮರ್ಥ್ಯವು ಇದೆ. ಆದರೂ, ಪ್ರತಿ ನಿಮಿಷ, ನ್ಯೂನ ಪೋಷಣೆ ಮತ್ತು ರೋಗದಿಂದ 26 ಮಕ್ಕಳು ಸಾಯುತ್ತಾರೆ. ಅದೇ ನಿಮಿಷದಲ್ಲಿ, ಲೋಕವು ಯುದ್ಧದ ತಯಾರಿಯಲ್ಲಿ 20,00,000 ಅಮೆರಿಕನ್ ಡಾಲರುಗಳನ್ನು ವೆಚ್ಚಮಾಡುತ್ತದೆ. ಅದೆಲ್ಲ ಹಣವು—ಅದರ ಒಂದು ಅಂಶ ಮಾತ್ರವೇ—ಅಥವಾ ಆ 26 ಮಕ್ಕಳಿಗೆ ಏನೆಲ್ಲಾ ಮಾಡಬಹುದು ಎಂದು ನೀವು ಊಹಿಸಶಕ್ತರೊ?
ಸ್ಪಷ್ಟವಾಗಿಗಿಯೇ, ಲೋಕದ ಹಸಿವಿನ ಕಾರಣವನ್ನು ಕೇವಲ ಆಹಾರ ಯಾ ಹಣದ ಕೊರತೆಯ ಮೇಲೆ ಹೇರಸಾಧ್ಯವಿಲ್ಲ. ಸಮಸ್ಯೆಯು ಇನ್ನಷ್ಟು ಆಳಕ್ಕೆ ತೂರಿಹೋಗುತ್ತದೆ. ಅದು ಹೊರ್ಹ ಇ. ಹರ್ಡೊಯ್, ಆರ್ಜೆಂಟೀನದ ಒಬ್ಬ ಪ್ರೊಫೆಸರ್ ವ್ಯಕ್ತಪಡಿಸಿದಂತೆ ಇದೆ, “ಜೀವನ ಸೌಕರ್ಯ, ಶಕ್ತಿ, ಸಮಯ, ಸಾಧನ ಸಂಪತ್ತುಗಳು ಮತ್ತು ಜ್ಞಾನವು ಯಾರಿಗೆ ಅಧಿಕವಾಗಿ ಬೇಕಾಗಿವೆಯೋ ಅವರೊಂದಿಗೆ ಅವುಗಳನ್ನು ಹಂಚಿಕೊಳ್ಳುವ ಸತತವಾದ ಅಸಾಮರ್ಥ್ಯವು ಸಮಗ್ರವಾಗಿ ಈ ಲೋಕಕ್ಕೆ ಇದೆ.” ಹೌದು, ಸಮಸ್ಯೆ ಇರುವುದು, ಮಾನವ ಮೂಲಸಂಪತ್ತುಗಳೊಂದಿಗೆ ಅಲ್ಲ, ಆದರೆ ಸ್ವತಃ ಮನುಷ್ಯನೊಂದಿಗೆ ತಾನೇ. ಲೋಭ ಮತ್ತು ಸ್ವಾರ್ಥವು ಮಾನವ ಸಮಾಜದಲ್ಲಿ ಪ್ರಭುತ್ವ ನಡಿಸುವ ಶಕಿಗ್ತಳೆಂದು ಭಾಸವಾಗುತ್ತದೆ. ಭೂಮಿಯ ಜನಸಂಖ್ಯೆಯ ಐದನೆಯ ಒಂದಾಂಶ ಅತಿ ಧನಿಕರು, ಐದನೆಯ ಒಂದಾಂಶ ಅತಿ ದರಿದ್ರರಿಗಿಂತ, ಸುಮಾರು 60 ಪಟ್ಟು ಹೆಚ್ಚು ಸರಕುಗಳು ಮತ್ತು ಸೇವೆಗಳಲ್ಲಿ ಆನಂದಿಸುತ್ತಾರೆ.
ಹಸಿದವರಿಗೆ ಆಹಾರವನ್ನು ದೊರಕಿಸಿಕೊಡುವುದರಲ್ಲಿ ಕೆಲವರು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ ಎಂಬುದು ನಿಜವೇ, ಆದರೆ ಅವರ ಹೆಚ್ಚಿನ ಪ್ರಯತ್ನಗಳು ಅವರ ಹತೋಟಿಗೆ ಮೀರಿದ ವಾಸ್ತವಾಂಶಗಳಿಂದ ಕುಂಟುಗೊಳಿಸಲ್ಪಟ್ಟಿವೆ. ಆಂತರಿಕ ಯುದ್ಧ ಯಾ ದಂಗೆಯಿಂದ ಹರಿಹಂಚಾದ ದೇಶಗಳು ಅನೇಕ ವೇಳೆ ಕ್ಷಾಮದಿಂದ ಬಾಧಿತವಾಗುತ್ತವೆ, ಮತ್ತು ಜರೂರಿಯುಳ್ಳವರಿಗೆ ಪರಿಹಾರ ಒದಗಿಸುವಿಕೆಗಳು ತಲುಪುವುದನ್ನು ಪರಸ್ಪರ ವಿರೋಧಿಸುವ ಶಕ್ತಿಗಳು ತಡೆಗಟ್ಟುವುದೇನೂ ಅಸಾಮಾನ್ಯವಾಗಿರುವುದಿಲ್ಲ. ಶತ್ರು ಕ್ಷೇತ್ರಗಳಲ್ಲಿ ಹೊಟ್ಟೆಗಿಲ್ಲದೆ ಹಸಿದಿರುವ ನಾಗರಿಕರಿಗೆ ಆಹಾರವು ತಲುಪುವಂತೆ ಅನುಮತಿಸುವುದರಿಂದ, ತಮ್ಮ ಶತ್ರುಗಳನ್ನು ಅವರು ಉಣಿಸುತ್ತಾರೆ ಎಂದು ಇಬ್ಬಣದವರೂ ಹೆದರುತ್ತಾರೆ. ಹಸಿವನ್ನು ಒಂದು ರಾಜಕೀಯ ಸಾಧನವಾಗಿ ಬಳಸುವುದರಲ್ಲಿ ಸರಕಾರಗಳೇನೂ ಸ್ವತಃ ಹೊರತಾಗಿರುವುದಿಲ್ಲ.
ಪರಿಹಾರ ಇಲ್ಲವೆ?
ದೌರ್ಭಾಗ್ಯವಶಾತ್, ಲಕ್ಷಗಟ್ಟಲೆ ಹಸಿವೆಯಿಂದಿರುವ ಸಮಸ್ಯೆಯೇನೂ, ಆಧುನಿಕ ಮಾನವನನ್ನು ಬಾಧಿಸುವ ಏಕಮಾತ್ರ ಬಿಕ್ಕಟ್ಟಲ್ಲ. ಪರಿಸರದ ಹುಚ್ಚಾಬಟ್ಟೆಯಾದ ನಾಶನ ಮತ್ತು ವಿಷಗೆಡುವಿಕೆ, ಲಕ್ಷಾಂತರ ಜೀವಗಳನ್ನು ನುಂಗುತ್ತಿರುವ ಯುದ್ಧದ ಪಟ್ಟುಬಿಡದ ವ್ಯಾಧಿ, ಎಲ್ಲೆಡೆಗಳಲ್ಲಿಯೂ ಭೀತಿ ಮತ್ತು ಅಪನಂಬಿಕೆಯನ್ನು ಹರಡಿಸುತ್ತಿರುವ ಹಿಂಸಾಚಾರದ ಪಾತಕ ವ್ಯಾಧಿಗಳು, ಮತ್ತು ಇವೆಲ್ಲಾ ಹೆಚ್ಚಿನ ದುಸ್ಧಿತಿಗಳ ಮೂಲದಲ್ಲಿ ಇದೆಯೆಂದು ಭಾಸವಾಗುವ ಸರ್ವದಾ ಅವನತಿಗಿಳಿಯುತ್ತಿರುವ ನೈತಿಕ ವಾತಾವರಣ, ಇವೆಲ್ಲಾ ಭೌಗೋಲಿಕ ಸಂಕಟಗಳು ಒಟ್ಟಿಗೆ ಸೇರಿಕೊಂಡಿವೆಯೊ ಎಂಬಂತೆ ಇದ್ದು, ಮತ್ತು ಅದೇ ನಿರ್ವಿವಾದದ ಸತ್ಯವನ್ನು—ಮಾನವನು ತಾನೇ ಸ್ವತಃ ಯಶಸ್ವಿಯಾಗಿ ಆಳಿಕೊಳ್ಳಶಕ್ತನಲ್ಲವೆಂಬದನ್ನು ಸ್ಥಿರೀಕರಿಸುತ್ತವೆ.
ಈ ಕಾರಣದಿಂದಲೇ, ಲೋಕದ ಸಮಸ್ಯೆಗಳಿಗೆ ಪರಿಹಾರವೊಂದನ್ನು ಕಾಣುವುದರಲ್ಲಿ ಅನೇಕ ಜನರು ನಿರಾಶೆ ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಇಟಾಲಿಯನ್ ವಿದ್ವಾಂಸನಾದ ಅರೆಲ್ಯೊ ಪೆಶನಂತೆ, ಇತರರೂ ಭಾವಿಸುತ್ತಾರೆ. ಅವರು ವಿವೇಚಿಸುವುದು, ಪರಿಹಾರ ಒಂದು ಇರಬೇಕಾದರೆ, ಅದು ಒಂದು ಅಸಾಧಾರಣವಾದ—ಪ್ರಾಯಶಃ ಅತಿಮಾನುಷವೂ ಆದ—ಉಗಮದಿಂದ ಬರತಕ್ಕದ್ದು. ಹೀಗೆ, ಒಬ್ಬ ಮೆಸ್ಸೀಯನ [ಉದ್ಧಾರಕನ] ಕಲ್ಪನೆಯು ಮನಸ್ಸಿಗೆ ಬಲವಾಗಿ ಹಿಡಿಸುತ್ತದೆ. ಆದರೆ ಮೆಸ್ಸೀಯನೊಬ್ಬನಲ್ಲಿ ನಿರೀಕ್ಷೆಯನ್ನಿಡುವುದು ವಾಸ್ತವಿಕವಾಗಿದೆಯೊ? ಯಾ ಅಂತಹ ನಿರೀಕ್ಷೆಯು ಕೇವಲ ಶುಭಕಾಂಕ್ಷೆಯ ಒಂದು ಯೋಚನೆಯೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover photos: Top: U.S. Naval Observatory photo; Bottom: NASA photo
[ಪುಟ 3 ರಲ್ಲಿರುವ ಚಿತ್ರ ಕೃಪೆ]
WHO photo by P. Almasy
[ಪುಟ 4 ರಲ್ಲಿರುವ ಚಿತ್ರ ಕೃಪೆ]
WHO photo by P. Almasy
U.S. Navy photo