ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 3/1 ಪು. 5-6
  • ಯಾರಿಗೆ ದೇವರ ಮೆಚ್ಚಿಕೆ ಇದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾರಿಗೆ ದೇವರ ಮೆಚ್ಚಿಕೆ ಇದೆ?
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಉನ್ನತ ಮಟ್ಟಗಳು
  • ನಾವು ದೇವರ ಮೆಚ್ಚಿಕೆಯನ್ನು ಗಳಿಸಬಲ್ಲೆವು
  • ಯಾವ ರೀತಿಯ ಜನರನ್ನು ನೀವು ಮೆಚ್ಚುತ್ತೀರಿ?
    ಕಾವಲಿನಬುರುಜು—1993
  • ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಯಾವುದು ಪ್ರಾಮುಖ್ಯ?
    ಮಹಾ ಬೋಧಕನಿಂದ ಕಲಿಯೋಣ
  • ವೆಚ್ಚವನ್ನು ನೀವು ಲೆಕ್ಕಿಸಿದ್ದೀರೊ?
    ಕಾವಲಿನಬುರುಜು—1992
ಕಾವಲಿನಬುರುಜು—1993
w93 3/1 ಪು. 5-6

ಯಾರಿಗೆ ದೇವರ ಮೆಚ್ಚಿಕೆ ಇದೆ?

ನಾವೆಲ್ಲರೂ ನಮ್ಮ ಸಹವಾಸಿಗಳಿಂದ ಮೆಚ್ಚಲ್ಪಡಲು ಬಯಸುತ್ತೇವೆ. ಒಬ್ಬ ಕ್ರೈಸ್ತನಿಗೆ ಒಂದು ಎಷ್ಟೋ ಹೆಚ್ಚು ಬಲವಾದ ಅಪೇಕ್ಷೆಯು ದೇವರೊಂದಿಗೆ ಮೆಚ್ಚಿಕೆಯನ್ನು ಕಂಡುಕೊಳ್ಳುವುದೇ. ಯೆಹೋವ ದೇವರ ಕುರಿತು ಕೀರ್ತನೆ 84:11 ರಲ್ಲಿ ಹೇಳಿರುವುದು: “ಕರ್ತನು ಕೃಪೆಯನ್ನೂ [ಯೆಹೋವನು ಮೆಚ್ಚಿಕೆಯನ್ನೂ, NW ] ಘನವನ್ನೂ ಅನುಗ್ರಹಿಸುವನು. ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?” ಯೇಸುವಿನ ಜನನದ ಸಮಯದಲ್ಲಿ, ಸ್ವರ್ಗೀಯ ದೇವದೂತರ ಸಂತೋಷಭರಿತ ಕೂಗು, “ಭೂಲೋಕದಲ್ಲಿ ಆತನು ಮೆಚ್ಚುವ ಮನುಷ್ಯರೊಳಗೆ ಸಮಾಧಾನ” ಎಂದು ವಾಗ್ದಾನಿಸಿತ್ತು!—ಲೂಕ 2:14, ಮೋಫೆಟ್‌.

ಆದರೆ ದೇವರು ಯಾರಿಗೆ ಮೆಚ್ಚಿಕೆಯನ್ನು ತೋರಿಸುತ್ತಾನೆ? ದೇವರ ಮಟ್ಟಗಳು ಮನುಷ್ಯನಂತಹದ್ದೇ ಆಗಿರುತ್ತವೋ? ಹಿಂದಿನ ಲೇಖನದಲ್ಲಿ ಏನು ಚರ್ಚಿಸಲ್ಪಟ್ಟಿತೋ ಅದು ಸೂಚಿಸಿದ ಪ್ರಕಾರ, ಅವು ಹಾಗಿಲ್ಲವೆಂಬದು ವ್ಯಕ್ತ. ವಾಸ್ತವದಲ್ಲಿ ಕ್ರೈಸ್ತರು, “ದೇವರನ್ನು ಅನುಸರಿಸುವವರಾಗು” ವಂತೆ ಪ್ರಬೋಧಿಸಲ್ಪಟ್ಟಿರುವುದರಿಂದ, ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಕೇಳಿಕೊಳ್ಳುವುದೊಳ್ಳೆಯದು, ಯಾರನ್ನು ದೇವರು ಮೆಚ್ಚುತ್ತಾನೋ ಅವರಿಗೆ ನಾನು ಮೆಚ್ಚಿಕೆ ತೋರಿಸುತ್ತೇನೋ, ಇಲ್ಲವೇ ಜನರ ಕುರಿತಾದ ನನ್ನ ತೀರ್ಮಾನದಲ್ಲಿ ಲೌಕಿಕ ಮಟ್ಟಗಳನ್ನು ಹಿಂಬಾಲಿಸುವ ಪ್ರವೃತ್ತಿ ನನಗಿದೆಯೇ? (ಎಫೆಸ 5:1) ಯೆಹೋವನ ಮೆಚ್ಚಿಕೆ ಮತ್ತು ಸಮ್ಮತಿಯನ್ನು ಸಂಪಾದಿಸಲು, ವಿಷಯಗಳನ್ನು ಆತನ ದೃಷ್ಟಿಕೋನದಿಂದ ನೋಡಲು ನಾವು ಜಾಗ್ರತೆ ವಹಿಸಬೇಕಾಗಿದೆ.

ದೇವರ ಉನ್ನತ ಮಟ್ಟಗಳು

“ದೇವರು ಪಕ್ಷಪಾತಿಯಲ್ಲ,” ಎಂದು ಹೇಳಿದನು ಅಪೊಸ್ತಲ ಪೇತ್ರನು, “ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” ಅದಲ್ಲದೆ ದೇವರು, “ಒಬ್ಬನಿಂದಲೇ ಎಲ್ಲಾ ಜನಾಂಗಗಳನ್ನು ಹುಟ್ಟಿಸಿದನು,” ಎಂದು ಅಪೊಸ್ತಲ ಪೌಲನು ಸಾಕ್ಷಿಕೊಟ್ಟನು. (ಅ. ಕೃತ್ಯಗಳು 10:34, 35; 17:26) ಆದುದರಿಂದ, ಅವರ ದೈಹಿಕ ಗುಣಲಕ್ಷಣಗಳು ಏನೇ ಆಗಿರಲಿ, ಎಲ್ಲಾ ಮನುಷ್ಯರು ದೇವರ ದೃಷ್ಟಿಯಲ್ಲಿ ಸಮಾನರಾಗಿರುತ್ತಾರೆ ಎಂದು ತೀರ್ಮಾನಿಸುವುದು ತೀರಾ ನ್ಯಾಯಸಮ್ಮತವಾಗಿದೆ. ವಿಷಯವು ಹೀಗಿರುವಾಗ, ಒಬ್ಬನು ಒಂದು ನಿರ್ದಿಷ್ಟ ಪ್ರದೇಶದಿಂದ ಬಂದವನು, ಅಥವಾ ವಿಶಿಷ್ಟ ಮೈಬಣ್ಣದವನು ಅಥವಾ ಇನ್ನೊಂದು ಕುಲಕ್ಕೆ ಸೇರಿದವನು ಎಂಬ ಕಾರಣ ಮಾತ್ರದಿಂದ ಯಾರಿಗಾದರೂ ಅಯುಕ್ತ ಮೆಚ್ಚಿಕೆಯನ್ನು ತೋರಿಸುವುದು ಒಬ್ಬ ಕ್ರೈಸ್ತನಿಗೆ ಉಚಿತವಲ್ಲ. ಬದಲಾಗಿ, ಯಾರ ಕುರಿತು ಅವನು ಪಕ್ಷಪಾತ ತೋರಿಸದವನು ಎಂದು ಶತ್ರುಗಳು ಸಹ ಒಪ್ಪಿದ್ದರೋ ಆ ತನ್ನ ಮಾದರಿಯಾದ ಯೇಸು ಕ್ರಿಸ್ತನನ್ನು ಅನುಸರಿಸುವದು ಅವನಿಗೆ ಒಳ್ಳೆಯದು.—ಮತ್ತಾಯ 22:16.

“ಮೇಲುಮೇಲಿನ” ಎಂಬ ಅಭಿವ್ಯಂಜಕವು ಆಳವಿಲ್ಲದ ಅಥವಾ ಅಪ್ರಾಮುಖ್ಯವಾದ ಒಂದು ವಿಷಯವನ್ನು ವರ್ಣಿಸಲು ಕೆಲವೊಮ್ಮೆ ಉಪಯೋಗಿಸಲ್ಪಡುತ್ತದೆ. ಮೈಬಣ್ಣವು ಕೇವಲ ಹಾಗೆಯೇ ಇದೆ; ಅದು ಬರೇ ಮೇಲುಮೇಲಿನದ್ದು. ಒಬ್ಬ ವ್ಯಕ್ತಿಯ ಮೈಬಣ್ಣವು ಅವನ ವ್ಯಕ್ತಿತ್ವವನ್ನು ಅಥವಾ ಅಂತರ್ಯದ ಗುಣಗಳನ್ನು ಯಾವ ರೀತಿಯಲ್ಲೂ ಪ್ರತಿಬಿಂಬಿಸುವುದಿಲ್ಲ. ಜನರೊಂದಿಗೆ ಸಹವಾಸ, ಊಟ ಅಥವಾ ಕೈಕುಲುಕುವುದನ್ನು ಆರಿಸಿಕೊಳ್ಳುವ ವಿಷಯವು ಬಂದಾಗ, ವಿಶಿಷ್ಟವಾಗಿ ಮೈಬಣ್ಣದ ಕಡೆಗೆ ನಾವು ಖಂಡಿತವಾಗಿಯೂ ನೋಡಬಾರದು. ನೆನಪಿಡಿರಿ, ಬರೆಯಲ್ಪಟ್ಟವುಗಳಲ್ಲಿ ಅತ್ಯಂತ ಸುಂದರವೂ ಪ್ರಣಯ ಪ್ರಧಾನವೂ ಆದ ಕೆಲವು ಕವಿತೆಗಳ ಪ್ರೇರೇಪಕಳಾದ ಕನ್ಯೆಯು ತನ್ನ ಕುರಿತು ಅಂದದ್ದು: “ನಾನು ಕಪ್ಪಾಗಿದ್ದರೂ . . . ಚಂದವುಳ್ಳವಳು. ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿ” ದ್ದೇನೆ. (ಪರಮ ಗೀತ 1:5, 6) ಕುಲವಾಗಲಿ ಮೈಬಣವ್ಣಾಗಲಿ ಮೆಚ್ಚಿಕೆಯನ್ನು ತೋರಿಸುವುದಕ್ಕೆ ಒಂದು ಯೋಗ್ಯ ಬುನಾದಿಯಲ್ಲ. ಒಬ್ಬ ವ್ಯಕ್ತಿಯು ದೇವರಿಗೆ ಭಯಪಟ್ಟು, ನೀತಿಯ ಕೃತ್ಯಗಳನ್ನು ನಡಿಸುತ್ತಾನೋ ಇಲ್ಲವೋ ಎಂಬದೇ ಎಷ್ಟೋ ಹೆಚ್ಚು ಮಹತ್ವದ್ದು.

ಪ್ರಾಪಂಚಿಕ ಧನವನ್ನು ಪಡೆದಿರುವ ಕುರಿತು ದೇವರ ಅನಿಸಿಕೆಯೇನು? ದೇವರು ಪ್ರೀತಿಸುವ ಮತ್ತು ಮೆಚ್ಚುವ ಎಲ್ಲಾ ವ್ಯಕ್ತಿಗಳಲ್ಲಿ, ಆತನ ಕುಮಾರನಾದ ಯೇಸು ಕ್ರಿಸ್ತನು ಅತ್ಯಂತ ಅಗ್ರಗಣ್ಯನು. ಆದರೂ, ಭೂಮಿಯಲ್ಲಿದ್ದಾಗ ಯೇಸುವಿಗೆ, “ತಲೆಯಿಡುವಷ್ಟು ಸ್ಥಳವೂ” ಇರಲಿಲ್ಲ. (ಮತ್ತಾಯ 8:20) ಅವನಿಗೆ ಯಾವುದೇ ಜಮೀನು, ಮನೆಗಳು, ಹೊಲಗಳು, ಫಲವೃಕ್ಷಗಳು, ಅಥವಾ ಪಶುಗಳು ಇರಲಿಲ್ಲ. ಆದರೂ, ಯೆಹೋವನು ಅವನನ್ನು ಗೌರವಿಸಿದನು, ಮತ್ತು ಸ್ವತಃ ದೇವರನ್ನು ಹೊರತು ವಿಶ್ವದಲ್ಲಿ ಬೇರೆ ಎಲ್ಲರಿಗಿಂತಲೂ ಉನ್ನತವಾದ ಒಂದು ಸ್ಥಾನಕ್ಕೆ ಅವನನ್ನು ಏರಿಸಿದನು.—ಫಿಲಿಪ್ಪಿ 2:9.

ಯೇಸು ಕ್ರಿಸ್ತನು ದೇವರೊಂದಿಗೆ ಮೆಚ್ಚಿಗೆಯನ್ನು ಕಂಡುಕೊಂಡನು ಯಾಕಂದರೆ ಅವನು ಐಶ್ವರ್ಯವಂತನಾಗಿದ್ದದ್ದು ಪ್ರಾಪಂಚಿಕ ಸೊತ್ತುಗಳಲ್ಲಿ ಅಲ್ಲ, ಸತ್ಕಾರ್ಯಗಳಲ್ಲಿ. (1 ತಿಮೊಥೆಯ 6:17, 18 ಹೋಲಿಸಿರಿ.) ಆತನು ತನ್ನ ಹಿಂಬಾಲಕರಿಗೆ ಬುದ್ಧಿಹೇಳಿದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಅಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ. ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ.” (ಮತ್ತಾಯ 6:19, 20) ಹೀಗೆ, ಈ ಲೋಕದ ಸೊತ್ತುಗಳಲ್ಲಿ ಧನಿಕರಾಗಿರುವವರಿಗೆ ಮಾತ್ರವೇ ಮೆಚ್ಚಿಕೆ ತೋರಿಸುವ ಬದಲಿಗೆ, ಕ್ರೈಸ್ತರು ಲೌಕಿಕ ಸೊತ್ತುಗಳ ಆಧಾರದ ಮೇಲೆ ಯಾವ ಭೇದಗಳನ್ನೂ ಮಾಡುವುದಿಲ್ಲ. ಲೌಕಿಕ ರೀತಿಯಲ್ಲಿ ಅವರು ಧನಿಕರಾಗಿರಲಿ ಅಥವಾ ಬಡವರಾಗಿರಲಿ, ದೇವರ ಕಡೆಗೆ ಐಶ್ವರ್ಯವಂತರಾಗಿರುವವರ ಸಹವಾಸ ಕೋರಲು ಅವರು ಪ್ರಯತ್ನಪಡುವರು. “ದೇವರು ಲೌಕಿಕ ವಿಷಯದಲ್ಲಿ ಬಡವರಾಗಿರುವವರನ್ನು ಆದುಕೊಂಡು ಅವರು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ . . . ರಾಜ್ಯಕ್ಕೆ ಬಾಧ್ಯರಾಗಿಯೂ ನೇಮಿಸಿ” ದನು ಎಂಬದನ್ನು ಎಂದೂ ಮರೆಯಬೇಡಿರಿ. (ಯಾಕೋಬ 2:5) ದೇವರ ದೃಷ್ಟಿಕೋನವನ್ನು ನೀವು ಕಾಪಾಡಿಕೊಳ್ಳುವುದಾದರೆ, ಲೌಕಿಕ ರೀತಿಯಲ್ಲಿ ಧನಿಕರಾಗಿರುವವರ ಮೆಚ್ಚಿಗೆಯನ್ನು ಅಥವಾ ಒಲವನ್ನು ಗಳಿಸುವ ಸಾಮಾನ್ಯ ಪದ್ಧತಿಗೆ ನೀವೆಂದೂ ಬಲಿಬೀಳಲಾರಿರಿ.

ವಿದ್ಯೆಯ ವಿಷಯದಲ್ಲಾದರೋ, ನಾವು ಜ್ಞಾನವನ್ನೂ ವಿವೇಕವನ್ನೂ ಹುಡುಕುವಂತೆ ದೇವರು ನಮ್ಮನ್ನು ಪ್ರೇರಿಸುತ್ತಾನೆಂದೂ ಮತ್ತು ಭೂಮಿಯಲ್ಲಿ ನಡೆದಾಡಿದವರಲ್ಲಿ ಯೇಸು ಕ್ರಿಸ್ತನು ಅತ್ಯಂತ ಮಹಾ ಶಿಕ್ಷಕನೆಂದೂ ಬೈಬಲ್‌ ಸ್ಪಷ್ಟವಾಗಿಗಿ ತಿಳಿಸುತ್ತದೆ. (ಜ್ಞಾನೋಕ್ತಿ 4:7; ಮತ್ತಾಯ 7:29; ಯೋಹಾನ 7:46) ಆದರೆ ದೇವರೊಂದಿಗೆ ಮೆಚ್ಚಿಗೆಯನ್ನು ಗಳಿಸುವಂಥದ್ದು ಲೌಕಿಕ ಜ್ಞಾನವಾಗಲಿ ವಿದ್ಯೆಯಾಗಲಿ ಅಲ್ಲ. ಅದಕ್ಕೆ ಬದಲಾಗಿ, “ನಿಮ್ಮಲ್ಲಿ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ. . . . ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ,” ಎಂದು ಪೌಲನು ನಮಗೆ ಹೇಳುತ್ತಾನೆ.—1 ಕೊರಿಂಥ 1:26, 27.

ಒಳ್ಳೇ ಶಿಕ್ಷಣ ಪಡೆದವರನ್ನು ದೇವರು ಮೆಚ್ಚುತ್ತಾನೆ, ಉಚ್ಚ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಸಲ್ಪಡುವ ಐಹಿಕ ವಿಷಯಗಳಲ್ಲಿ ಅಲ್ಲ, ಆತನ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯದ “ಶುದ್ಧ ಭಾಷೆ” ಯಲ್ಲಿಯೇ. (ಚೆಫನ್ಯ 3:9) ವಾಸ್ತವದಲ್ಲಿ, ಯೆಹೋವನು ತಾನೇ ತನ್ನ ಜನರಿಗೆ ಇಂದು ಭೂಮಿಯ ದೂರ ದಿಕ್ಕುಗಳ ತನಕ ವಿಸ್ತರಿಸುವ ಒಂದು ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಕಲಿಸುತ್ತಿದ್ದಾನೆ. ಪ್ರವಾದಿ ಯೆಶಾಯನ ಮೂಲಕ ಮುಂತಿಳಿಸಲ್ಪಟ್ಟಂತೆ, ಎಲ್ಲಾ ಜನಾಂಗಗಳ ಜನರು ಹೀಗೆ ಹೇಳುವ ಮೂಲಕ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” ಆದುದರಿಂದ ಐಹಿಕ ಶಿಕ್ಷಣವನ್ನು ಮಹಿಮೆಪಡಿಸುವ ಬದಲಾಗಿ, ಯಾರು ನಿಜವಾಗಿ ತಮ್ಮ ನುಡಿಗಳಿಂದಲೂ ಕ್ರಿಯೆಗಳಿಂದಲೂ “ಯೆಹೋವನಿಂದ ಶಿಕ್ಷಿತರಾಗಿರು” ವರೆಂದು ರುಜುಪಡಿಸುತ್ತಾರೋ ಅವರ ಸಹವಾಸವನ್ನು ಕ್ರೈಸ್ತರು ಹುಡುಕುವರು. ಹೀಗೆ ಮಾಡುವ ಮೂಲಕ, ಅವರು ದೇವರು ಕೊಡುವ ‘ಸಮೃದ್ಧವಾದ ಶಾಂತಿಯಲ್ಲಿ’ ಆನಂದಿಸುವರು.—ಯೆಶಾಯ 2:3; 54:13.

ನಾವು ದೇವರ ಮೆಚ್ಚಿಕೆಯನ್ನು ಗಳಿಸಬಲ್ಲೆವು

ಹೌದು, ಇತರರ ಮೇಲೆ ಮೆಚ್ಚಿಕೆಯನ್ನು ದಯಪಾಲಿಸುವುದಕ್ಕೆ ದೇವರ ಮಟ್ಟಗಳು ಮನುಷ್ಯನಿಗಿಂತ ತೀರಾ ಬೇರೆಯಾಗಿರುತ್ತವೆ. ಆದಾಗ್ಯೂ, ನಾವಾತನ ದೃಷ್ಟಿಯಲ್ಲಿ ಮೆಚ್ಚಿಕೆಯನ್ನು ಗಳಿಸಬಯಸುವುದಾದರೆ, ಆತನ ಮಾರ್ಗಗಳಿಂದ ಮಾರ್ಗದರ್ಶಿಸಲ್ಪಡಲು ಪ್ರಯತ್ನ ಮಾಡಲೇಬೇಕು. ಅಂದರೆ, ಸ್ವಾರ್ಥಪರತೆ ಮತ್ತು ದುರಭಿಮಾನದಿಂದ ಪ್ರಭಾವಿಸಲ್ಪಡಬಹುದಾದ ಮಾನವ ಮಟ್ಟಗಳಿಂದಲ್ಲ, ದೇವರ ದೃಷ್ಟಿಕೋನದಿಂದ ನಾವು ಇತರರನ್ನು ನೋಡಲು ಕಲಿಯಬೇಕು. ನಾವದನ್ನು ಮಾಡುವುದು ಹೇಗೆ?

ಯೆಹೋವ ದೇವರು ಒಬ್ಬ ವ್ಯಕ್ತಿಯ ಹೃದಯವನ್ನು ಪರೀಕ್ಷಿಸುತ್ತಾನೆ ಮತ್ತು ಪ್ರೀತಿ, ಒಳ್ಳೇತನ, ದಯೆ ಮತ್ತು ದೀರ್ಘಶಾಂತಿಗಳಂಥ ಗುಣಗಳನ್ನು ಪ್ರದರ್ಶಿಸುವವರನ್ನು ಮೆಚ್ಚುತ್ತಾನೆ. ನಾವೂ ಹಾಗೆಯೇ ಮಾಡಬೇಕು. (1 ಸಮುವೇಲ 16:7; ಗಲಾತ್ಯ 5:22, 23) ಮಾನವರಾದ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ, ನಾವು ವ್ಯಕ್ತಿಯ ಅಂತರ್ಯವನ್ನು ನೋಡುವ ಅಗತ್ಯವಿದೆ, ಅವನ ಮೈಬಣ್ಣ ಅಥವಾ ಜಾತೀಯ ಹಿನ್ನೆಲೆಯನ್ನಲ್ಲ. ಪ್ರಾಪಂಚಿಕ ವಸ್ತುಗಳಲ್ಲಿ ಧನಿಕರಾಗಿರುವವರ ಸಹವಾಸವನ್ನು ಹುಡುಕುವ ಬದಲಾಗಿ, ಐಶ್ವರ್ಯದ ಕುರಿತಾಗಿ ದೇವರ ದೃಷ್ಟಿಕೋನವನ್ನು ಮನಸ್ಸಿನಲ್ಲಿಡುವುದು ನಮಗೆ ಒಳ್ಳೆಯದು ಮತ್ತು “ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮ ಮಾಡುವವರೂ ಪರೋಪಕಾರ ಮಾಡುವವರೂ” ಆಗಿರುವಂತೆ ಪ್ರಯಾಸಪಡಬೇಕು. (1 ತಿಮೊಥೆಯ 6:18) ದೇವರ ಮೆಚ್ಚಿಕೆಯನ್ನು ಗಳಿಸುವುದಕ್ಕೆ, ದೇವರ ಮತ್ತು ಆತನ ಕುಮಾರನಾದ ಯೇಸು ಕ್ರಿಸ್ತನ ಕುರಿತ ನಿಷ್ಕೃಷ್ಟ ಜ್ಞಾನವನ್ನು ಹುಡುಕುತ್ತಾ ಮುಂದರಿದು, ಸತ್ಯದ ಶುದ್ಧ ಭಾಷೆಯಲ್ಲಿ ಚೆನ್ನಾಗಿ ಶಿಕ್ಷಿತರಾಗಬೇಕು. (ಯೋಹಾನ 17:3, 17) ಹಾಗೆ ಮಾಡಿದಲ್ಲಿ ನಾವು ಸಹ, ದೇವರು ಯಾರನ್ನು ಮೆಚ್ಚುತ್ತಾನೋ ಅವರೊಂದಿಗೆ ಸೇರಿರುವೆವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ