ದೇವರನ್ನು ಸೇವಿಸುವುದರಲ್ಲಿ ನಾನು ತೃಪ್ತಿಯನ್ನು ಕಂಡುಕೊಂಡೆನು
ಜೊಶುವ ಟೊನ್ವಾನರಿಂದ
ಹಿಂದೆ 1942 ರಲ್ಲಿ ನಾನು ಬಹಳ ಗೊಂದಲದಲ್ಲಿದ್ದೆ. ಸೆವ್ನ್ತ್ ಡೇ ಆ್ಯಡ್ವೆಂಟಿಸ್ಟ್ರಿಂದ ಪ್ರಕಾಶಿಸಲ್ಪಟ್ಟ ಸಾಹಿತ್ಯಗಳನ್ನು ಮತ್ತು ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಡುತ್ತಿದ್ದ ಸಾಹಿತ್ಯಗಳನ್ನು ನಾನು ಅಧ್ಯಯನಿಸುತ್ತಿದ್ದೆ. ಪ್ರಾಚೀನ ಇಸ್ರಾಯೇಲ್ಯರಂತೆ, ನಾನು “ಎರಡು ಮನಸ್ಸುಳ್ಳವ”ರಂತೆ ಇದ್ದೆನು.—1 ಅರಸುಗಳು 18:21.
ಸೆವ್ನ್ತ್ ಡೇ ಆ್ಯಡ್ವೆಂಟಿಸ್ಟರು ನನಗೆ “ವಾಯ್ಸ್ ಆಫ್ ಪ್ರಾಫೆಸಿ” ಎಂದು ಕರೆಯಲ್ಪಡುವ ಮುದ್ರಿತ ಭಾಷಣಗಳನ್ನು ಕಳುಹಿಸುತ್ತಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ನಾನು ಆನಂದಪಟ್ಟೆನು, ಮತ್ತು ನನ್ನ ಎಲ್ಲಾ ಪರೀಕ್ಷೆಗಳಲ್ಲಿ ನಾನು ತೇರ್ಗಡೆಹೊಂದಿದರೆ, ಒಂದು ಸುಂದರ ಪ್ರಶಸ್ತಿಪತ್ರವನ್ನು ನನಗೆ ಕೊಡುವರೆಂದು ಅವರು ವಚನವನ್ನಿತ್ತರು. ಆದರೆ “ವಾಯ್ಸ್ ಆಫ್ ಪ್ರಾಫೆಸಿ” ಮತ್ತು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳು ಎರಡೂ ದಕ್ಷಿಣ ಆಫ್ರಿಕದ ಕೇಪ್ ಟೌನ್ನಿಂದ ರವಾನಿಸಲ್ಪಡುತ್ತಿದ್ದವು ಎಂದು ನಾನು ಗಮನಿಸಿದೆನು. ‘ಈ ಸಂಸ್ಥೆಗಳು ಒಬ್ಬರು ಇನ್ನೊಬ್ಬರನ್ನು ತಿಳಿದಿದ್ದಾರೋ? ಅವರ ಬೋಧನೆಗಳು ಒಂದೇಯಾಗಿವೆಯೋ? ಇಲ್ಲದಿದ್ದರೆ, ಯಾರು ಸರಿ?’ ಎಂದು ನಾನು ಅಚ್ಚರಿಗೊಂಡೆ.
ವಿಷಯವನ್ನು ತೀರ್ಮಾನಿಸಲು, ಪ್ರತಿಯೊಂದು ಸಂಸ್ಥೆಗೆ ಒಂದೇ ರೀತಿಯ ಪತ್ರಗಳನ್ನು ಕಳುಹಿಸಿದೆನು. ಉದಾಹರಣೆಗೆ, ವಾಚ್ ಟವರ್ ಸೊಸೈಟಿಗೆ ನಾನು ಬರೆದದ್ದು: “‘ವಾಯ್ಸ್ ಆಫ್ ಪ್ರಾಫೆಸಿ’ಯೊಂದಿಗೆ ಜತೆಗೂಡಿರುವ ಜನರನ್ನು ನೀವು ಬಲ್ಲಿರೋ ಮತ್ತು ನೀವು ಬಲ್ಲಿರಾದರೆ, ಅವರ ಬೋಧನೆಗಳ ಕುರಿತು ನೀವೇನು ಹೇಳುತ್ತೀರಿ?” ಸಮಯಾನಂತರ, ನಾನು ಎರಡು ಗುಂಪುಗಳಿಂದಲೂ ಉತ್ತರವನ್ನು ಪಡೆದೆನು. ವಾಚ್ ಟವರ್ ಸೊಸೈಟಿಯಿಂದ ಪಡೆದ ಪತ್ರದಲ್ಲಿ, ಅವರು “ವಾಯ್ಸ್ ಆಫ್ ಪ್ರಾಫೆಸಿ” ಯನ್ನು ತಿಳಿದಿದ್ದಾರೆಂದು ತಿಳಿಸಿದರೂ, ತ್ರಯೇಕತ್ವ ಮತ್ತು ಮಾಂಸಿಕವಾಗಿ ಕ್ರಿಸ್ತನ ಪುನರಾಗಮನದಂತಹ ಅವರ ಕಲಿಸುವಿಕೆಗಳು ಅಶಾಸ್ತ್ರೀಯವಾಗಿವೆ ಎಂದು ವಿವರಿಸಿದರು. ಈ ಬೋಧನೆಗಳನ್ನು ತಪ್ಪೆಂದು ರುಜುಪಡಿಸುವ ಶಾಸ್ತ್ರವಚನಗಳು ಅವರ ಪತ್ರದಲ್ಲಿ ಒಳಗೂಡಿದ್ದವು.—ಯೋಹಾನ 14:19, 28.
“ವಾಯ್ಸ್ ಆಫ್ ಪ್ರಾಫೆಸಿ”ಯ ಉತ್ತರದಲ್ಲಿ “ವಾಚ್ ಟವರ್ ಜನರ”ನ್ನು ಅವರು ತಿಳಿದಿದ್ದಾರೆ, ಆದರೆ ಅವರ ಕಲಿಸುವಿಕೆಗಳನ್ನು ಒಪ್ಪುವುದಿಲ್ಲ ಎಂದು ಸರಳವಾಗಿ ಹೇಳಿತು. ಕಾರಣಗಳೇನೂ ಕೊಡಲ್ಪಟ್ಟಿರಲಿಲ್ಲ. ಆದುದರಿಂದ ವಾಚ್ ಟವರ್ ಸೊಸೈಟಿಯ ಪರವಾಗಿ ನಾನು ನಿರ್ಣಯಿಸಿದೆನು, ಅದು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುತ್ತಿದ್ದ ಶಾಸನಬದ್ಧ ಕಾರ್ಯಭಾರಿಯಾಗಿತ್ತು. ಸಾಕ್ಷಿಗಳೊಂದಿಗಿನ 50 ವರ್ಷಗಳ ಸಹವಾಸದ ನಂತರ, ಆ ಯೋಗ್ಯ ನಿರ್ಣಯ ಮಾಡಿದ್ದಕ್ಕಾಗಿ ಇಂದು ನಾನೆಷ್ಟು ಸಂತೋಷಿಯಾಗಿದ್ದೇನೆ!
ಧಾರ್ಮಿಕ ಹಿನ್ನೆಲೆ
ನಾನು ಮಾಕಾನ್ಯೇ ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕದ ಪೀಟರ್ಸ್ಬರ್ಗ್ನ ಪೂರ್ವದ ಗ್ರಾಮೀಣ ಪ್ರದೇಶದಲ್ಲಿ 1912 ರಲ್ಲಿ ಜನಿಸಿದೆನು. ಮಾಕಾನ್ಯೇ ಆಗ ಆಂಗ್ಲಿಕಾನ್ ಚರ್ಚ್ನ ಧಾರ್ಮಿಕ ಹತೋಟಿಯ ಕೆಳಗೆ ಇತ್ತು, ಆದುದರಿಂದ ನಾನು ಆ ಚರ್ಚಿನ ಸದಸ್ಯನಾದೆ. ನಾನು ಹತ್ತು ವರ್ಷದವನಾದಾಗ, ನಮ್ಮ ಕುಟುಂಬವು ಲ್ಯೂತರನ್ ಬರ್ಲಿನ್ ಮಿಶನ್ ಚರ್ಚಿನಿಂದ ಆಳಲ್ಪಡುತ್ತಿದ್ದ ಸ್ಥಳವೊಂದಕ್ಕೆ ಸ್ಥಾನಾಂತರಗೊಂಡಿತು, ಮತ್ತು ನನ್ನ ಹೆತ್ತವರು ಆ ಚರ್ಚನ್ನು ಸೇರಿದರು. ಬಲುಬೇಗನೇ ನಾನು ಪ್ರಭುಭೋಜನ ಸಂಸ್ಕಾರ ಸೇವೆಯಲ್ಲಿ ಹಾಜರಾಗಲು ಮತ್ತು ರೊಟ್ಟಿಯ ತುಣುಕು ತಕ್ಕೊಳ್ಳಲು ಮತ್ತು ದ್ರಾಕ್ಷಾಮದ್ಯದ ಒಂದು ಗುಟುಕನ್ನು ಹೀರಲು ಯೋಗ್ಯತೆ ಹೊಂದಿದೆನು, ಆದರೆ ಅದು ನನ್ನ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಗೊಳಿಸಲಿಲ್ಲ.
ಎಂಟು ವರ್ಷಗಳ ಶಾಲೆಯನ್ನು ಮುಗಿಸಿದ ನಂತರ, ನನ್ನ ತಂದೆಯಿಂದ ನಾನು ಕೇಲ್ನರ್ಟನ್ ತರಬೇತಿ ಸಂಸ್ಥೆಗೆ ಕಳುಹಿಸಲ್ಪಟ್ಟೆನು, ಮತ್ತು 1935 ರಲ್ಲಿ, ನಾನು ಮೂರು ವರ್ಷಗಳ ಅಧ್ಯಾಪಕ ಪ್ರಮಾಣಪತ್ರವನ್ನು ಪಡೆದನು. ನಾನು ಕೆಲಸಮಾಡಿದ ಶಿಕ್ಷಕರುಗಳಲ್ಲಿ ಒಬ್ಬಳು ಎಳೇ ಸ್ತ್ರೀ ಕರೆಲಿನ್ ಆಗಿದ್ದಳು. ನಾವು ಮದುವೆಯಾದೆವು, ಮತ್ತು ಅನಂತರ ಕರೆಲಿನ್ ಒಬ್ಬ ಹೆಣ್ಣು ಮಗುವಿಗೆ ಜನನವನ್ನಿತಳ್ತು, ಅವಳಿಗೆ ನಾವು ದಮಾರಿಸ್ ಎಂದು ನಾಮಕರಣಮಾಡಿದೆವು. ಕೆಲವು ವರ್ಷಗಳ ನಂತರ ನಾನು ಮಾಮಾಟ್ಸ ಗ್ರಾಮದ ಸೆಹ್ಲಾಲ ಶಾಲೆಯ ಮುಖ್ಯೋಪಾಧ್ಯಾಯನಾದೆನು. ಈ ಶಾಲೆಯು ಡಚ್ ರಿಫಾರ್ಮ್ಡ್ ಚರ್ಚ್ನಿಂದ ನಡಿಸಲ್ಪಡುತ್ತಿದ್ದುದರಿಂದ, ನಾವು ಆ ಚರ್ಚನ್ನು ಸೇರಿ, ಅದರ ಪೂಜೆಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದೆವು. ಹಾಗೆ ಮಾಡುವುದು ಒಂದು ನೀಟುತನದ ಸಂಗತಿಯಾಗಿದ್ದುದರಿಂದ ನಾವಿದನ್ನು ಮಾಡಿದೆವು, ಆದರೆ ಅದು ನನಗೆ ತೃಪ್ತಿಯನ್ನು ತರಲಿಲ್ಲ.
ಒಂದು ತಿರುಗುಬಿಂದು
ಒಂದು ಆದಿತ್ಯವಾರ 1942 ರಲ್ಲಿ, ನಾವು ಚರ್ಚಿನಲ್ಲಿ ರಾಗಗಳ ಅಭ್ಯಾಸ ಮಾಡುತ್ತಿದ್ದಾಗ, ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಮೂರು ಪುಸ್ತಕಗಳನ್ನು—ಕ್ರಿಯೇಶನ್, ವಿಂಡಿಕೇಶನ್, ಮತ್ತು ಪ್ರೆಪರೇಷನ್—ಹಿಡಿದುಕೊಂಡು ಒಬ್ಬ ಯುವ ಬಿಳಿ ಮನುಷ್ಯನು ಬಾಗಲಿನ ಬಳಿ ಕಾಣಿಸಿಕೊಂಡನು. ನನ್ನ ಪುಸ್ತಕಾಲಯದ ಕವಾಟಿನಲ್ಲಿ ಈ ಪುಸ್ತಕಗಳು ಚಲೋದಾಗಿ ಕಾಣಿಸುವವು ಎಂದು ನಾನು ಯೋಚಿಸಿದೆ, ಆದುದರಿಂದ ಮೂರು ಷಿಲಿಂಗ್ಗಳಿಗಾಗಿ ಅವುಗಳನ್ನು ಸ್ವೀಕರಿಸಿದೆ. ತದನಂತರ, ಆ ಮನುಷ್ಯ, ಟೀನೀ ಬಸಾಡನ್ಹೊಟ್, ಯೆಹೋವನ ಸಾಕ್ಷಿಗಳಲ್ಲೊಬ್ಬನಾಗಿದ್ದು, ಆ ಪ್ರದೇಶದಲ್ಲಿರುವ ಏಕಮಾತ್ರ ಸಾಕ್ಷಿಯೆಂದು ನಾನು ಕಲಿತೆನು. ಟೀನೀಯ ಮುಂದಿನ ಸಂದರ್ಶನದಲ್ಲಿ, ಅವನು ಒಂದು ಫೋನೊಗ್ರಾಫ್ ತಂದನು ಮತ್ತು ಜಡ್ಜ್ ರಥರ್ಫರ್ಡ್ರ ಕೆಲವು ಭಾಷಣಗಳನ್ನು ನುಡಿಸಿದನು. “ಪಾಶ ಮತ್ತು ಹೂಟ” ಎಂದು ಪ್ರಖ್ಯಾತವಾಗಿರುವ ಒಂದರಲ್ಲಿ ನಾನು ಸಂಪೂರ್ಣವಾಗಿ ಆನಂದಿಸಿದೆನು, ಆದರೆ ಕರೆಲಿನ್ ಮತ್ತು ನಮ್ಮೊಂದಿಗೆ ವಾಸಿಸುತ್ತಿದ್ದ ನನ್ನ ತಂಗಿ ಪ್ರಿಸಿಲ್ಲ ಆನಂದಿಸಲಿಲ್ಲ. ಟೀನೀಯ ಮೂರನೆಯ ಸಂದರ್ಶನದಲ್ಲಿ, ನನ್ನ ಮಿತ್ರರಿಗೆ ರೆಕಾರ್ಡ್ಸ್ಗಳನ್ನು ನುಡಿಸಲಾಗುವಂತೆ ಅವನು ಫೋನೊಗ್ರಾಫ್ನ್ನು ನನಗೆ ಕೊಟ್ಟನು.
ಒಂದು ದಿನ ನಾನು ಕ್ರಿಯೇಶನ್ ಪುಸ್ತಕದ ಪುಟಗಳಲ್ಲಿ ಕಣ್ಣಾಡಿಸಿದೆನು ಮತ್ತು “ಸತ್ತವರು ಎಲ್ಲಿದ್ದಾರೆ?” ಎಂಬ ಅಧ್ಯಾಯಕ್ಕೆ ಬಂದೆನು. ಸ್ವರ್ಗದಲ್ಲಿ ಅಗಲಿಹೋದ ಆತ್ಮಗಳು ಅನುಭವಿಸಿದ ಆನಂದದ ಕುರಿತು ಕಲಿಯುವ ನಿರೀಕ್ಷೆಯಿಂದ ನಾನು ಓದಲು ಆರಂಭಿಸಿದೆ. ನನ್ನ ನಿರೀಕ್ಷಣೆಗೆ ವ್ಯತಿರಿಕ್ತವಾಗಿ, ಸತ್ತವರು ಅವರ ಸಮಾಧಿಗಳಲ್ಲಿದ್ದಾರೆ ಮತ್ತು ಅವರಿಗೆ ಏನು ತಿಳಿದಿರುವದಿಲ್ಲ ಎಂದು ಪುಸ್ತಕ ಹೇಳಿತು. ಪ್ರಸಂಗಿ 9:5, 10 ರಂತಹ ಬೈಬಲಿನ ವಚನಗಳು ಬೆಂಬಲವಾಗಿ ಉಲ್ಲೇಖಿಸಲ್ಪಟ್ಟಿದ್ದವು. “ಸತ್ತವರನ್ನು ಎಬ್ಬಿಸುವುದು” ಎಂಬ ಶಿರೋನಾಮ ಇನ್ನೊಂದು ಅಧ್ಯಾಯದ್ದಾಗಿತ್ತು ಮತ್ತು ಸತ್ತವರು ಯಾವುದೇ ಅರಿವು ಇಲ್ಲದವರಾಗಿದ್ದಾರೆ ಮತ್ತು ಪುನರುತ್ಥಾನವೊಂದನ್ನು ಕಾದುಕೊಂಡಿರುತ್ತಾರೆ ಎಂಬುದಕ್ಕೆ ರುಜುವಾತಾಗಿ ಯೋಹಾನ 5:28, 29 ನ್ನು ಉಲ್ಲೇಖಿಸಲಾಗಿತ್ತು. ಇದು ಅರ್ಥಭರಿತವಾಗಿತ್ತು. ಅದು ತೃಪ್ತಿದಾಯಕವಾಗಿತ್ತು.
ಆ ಸಮಯದಲ್ಲಿ, 1942 ರಲ್ಲಿ, ನಾನು “ವಾಯ್ಸ್ ಆಫ್ ಪ್ರಾಫೆಸಿ” ಯೊಂದಿಗಿನ ನನ್ನ ಸಂಬಂಧವನ್ನು ಕಡಿದುಕೊಂಡೆ ಮತ್ತು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಿಂದ ನಾನು ಕಲಿಯುತ್ತಿರುವ ಸಂಗತಿಗಳನ್ನು ಇತರರಿಗೆ ಹೇಳಲಾರಂಭಿಸಿದೆ. ಪ್ರತಿವರ್ತಿಸಿದವರಲ್ಲಿ ಮೊತ್ತ ಮೊದಲಿಗನು ನನ್ನ ಒಬ್ಬ ಮಿತ್ರ, ಜೂಡ ಲೆಟ್ಸಲ್ವೋ, ಕೇಲ್ನರ್ಟನ್ ತರಬೇತಿ ಸಂಸ್ಥೆಯಲ್ಲಿ ನನ್ನ ತರಗತಿಯ ಸಂಗಾತಿಗಳಲ್ಲಿ ಒಬ್ಬನಾಗಿದ್ದನು.
ಪೀಟರ್ಸ್ಬರ್ಗ್ನಲ್ಲಿ ಆಫ್ರಿಕನ್ ಸಾಕ್ಷಿಗಳ ಸಮ್ಮೇಳನವೊಂದಕ್ಕೆ ಹಾಜರಾಗಲು, ಜೂಡ ಮತ್ತು ನಾನು ಸೈಕಲನ್ನು 51 ಕಿಲೊಮೀಟರ್ ತುಳಿದುಕೊಂಡು ಹೋದೆವು. ತದನಂತರ, ರಾಜ್ಯ ಸಂದೇಶವನ್ನು ನನ್ನ ನೆರೆಹೊರೆಯವರಿಗೆ ಸಾದರಪಡಿಸುವಂತೆ ನನಗೆ ಸಹಾಯ ಕೊಡಲು ಪೀಟರ್ಸ್ಬರ್ಗ್ನಿಂದ ಮಿತ್ರರು ಮಾಮಾಟ್ಸದಷ್ಟೂ ದೂರ ಆಗಾಗ್ಗೆ ಬಂದರು. ಕಟ್ಟಕಡೆಗೆ, 1944 ರ ದಶಂಬರದಲ್ಲಿ ಪೀಟರ್ಸ್ಬರ್ಗ್ನ ಇನ್ನೊಂದು ಸಮ್ಮೇಳನದಲ್ಲಿ, ಯೆಹೋವನಿಗೆ ನನ್ನ ಸಮರ್ಪಣೆಯ ಸಂಕೇತವಾಗಿ ನಾನು ದೀಕ್ಷಾಸ್ನಾನ ಪಡೆದನು.
ನನ್ನ ಕುಟುಂಬ ಮತ್ತು ಇತರರು ಪ್ರತಿವರ್ತಿಸುತ್ತಾರೆ
ಕರೆಲಿನ್, ಪ್ರಿಸಿಲ್ಲ, ಮತ್ತು ನನ್ನ ಮಗಳು ದಮಾರಿಸ್ ಡಚ್ ರಿಫಾರ್ಮ್ಡ್ ಚರ್ಚ್ಗೆ ಹೋಗುವುದನ್ನು ಮುಂದರಿಸಿದರು. ಅನಂತರ ವಿಪತ್ತು ಬಡಿಯಿತು. ಕರೆಲಿನ್ ನಮ್ಮ ಎರಡನೆಯ ಮಗುವಿಗೆ—ಸಮುವೇಲ್ ಎಂದು ನಾವು ಹೆಸರಿಟ್ಟ, ಆರೋಗ್ಯದಲ್ಲಿರುವಂತೆ ಭಾಸವಾಗುತ್ತಿದ್ದ ಗಂಡುಕೂಸಿಗೆ—ಜನನವಿತ್ತಳು. ಆದರೆ ಅವನು ಫಕ್ಕನೆ ಅಸ್ವಸ್ಥನಾದನು ಮತ್ತು ಮೃತನಾದನು. ಕರೆಲಿನ್ನ ಚರ್ಚಿನ ಸ್ನೇಹಿತರು, ಸ್ವರ್ಗದಲ್ಲಿ ಅವನೊಡನೆ ಇರುವಂತೆ ನಮ್ಮ ಮಗನನ್ನು ದೇವರು ಆಶಿಸಿದನು ಎಂದು ಹೇಳುವುದರ ಮೂಲಕ ಯಾವ ಸಂತೈಸುವಿಕೆಯನ್ನು ಕೊಡಲಿಲ್ಲ. ಸಂಕಟದಿಂದ, ಕರೆಲಿನ್ ಹೀಗೆ ಪ್ರಶ್ನಿಸುವುದನ್ನು ಮುಂದರಿಸಿದಳು: “ದೇವರು ನಮ್ಮ ಮಗನನ್ನು ಯಾಕೆ ಕೊಂಡೊಯ್ಯುವನು?”
ನಮ್ಮ ವಿಪತ್ತಿನ ಸುದ್ದಿಯು ಪೀಟರ್ಸ್ಬರ್ಗ್ನಲ್ಲಿರುವ ನಮ್ಮ ಸ್ನೇಹಿತರುಗಳಿಗೆ ತಲುಪಿದಾಗ, ಅವರು ಬಂದರು ಮತ್ತು ದೇವರ ವಾಕ್ಯದ ಮೇಲೆ ಆಧಾರಿತವಾದ ಸಾಚ ಆದರಣೆಯನ್ನು ನಮಗೆ ನೀಡಿದರು. ಕರೆಲಿನ್ ನಂತರ ಹೇಳಿದ್ದು: “ಮರಣದ ಕಾರಣ, ಮೃತರ ಸ್ಥಿತಿ, ಮತ್ತು ಪುನರುತ್ಥಾನದ ಒಂದು ನಿರೀಕ್ಷೆಯ ಕುರಿತು ಬೈಬಲ್ ಏನು ಹೇಳುತ್ತದೋ ಅದು ನಿಜವಾಗಿ ಒಂದು ಅರ್ಥವುಳ್ಳದ್ದಾಗಿತ್ತು, ಮತ್ತು ನಾನು ಬಹಳಷ್ಟು ಸಂತೈಸಲ್ಪಟ್ಟೆನು. ನಾನು ನೂತನ ಲೋಕದಲ್ಲಿರಲು ಮತ್ತು ನನ್ನ ಮಗನನ್ನು ಸಮಾಧಿಯಿಂದ ಪುನಃ ಪಡೆಯಲು ಬಯಸಿದೆನು.”
ಕರೆಲಿನ್ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದಳು, ಮತ್ತು 1946 ರಲ್ಲಿ ಅವಳು, ಪ್ರಿಸಿಲ್ಲ, ಮತ್ತು ಜೂಡ ದೀಕ್ಷಾಸ್ನಾನ ಹೊಂದಿದರು. ಅವನ ದೀಕ್ಷಾಸ್ನಾನದ ನಂತರ ಶೀಘ್ರದಲ್ಲಿಯೇ, ಮಾಮಾತ್ಲೊಲ ಎಂಬ ಗ್ರಾಮ್ಯ ಪ್ರದೇಶದಲ್ಲಿ ಸಾರುವ ಕೆಲಸವನ್ನು ಪ್ರಾರಂಭಿಸಲು ಜೂಡ ಹೋದನು ಮತ್ತು ಈ ದಿನದ ತನಕ ಒಬ್ಬ ಪೂರ್ಣ ಸಮಯದ ಪಯನೀಯರ್ ಶುಶ್ರೂಷಕನಾಗಿ ಅವನು ಸೇವೆ ಸಲ್ಲಿಸುತ್ತಾ ಇದ್ದಾನೆ.
ಜೂಡನು ಬಿಟ್ಟು ಹೋದ ನಂತರ, ಬೊಯ್ನೆ ಎಂಬ ಹೆಸರಿನ ನಮ್ಮ ಸಭೆಯನ್ನು ನೋಡಿಕೊಳ್ಳಲು ಉಳಿದಿರುವ ಪುರುಷನು ನಾನೊಬ್ಬನೇ ಆಗಿದ್ದೆ. ಅನಂತರ ಗ್ರಾಸ್ಲೆ ಮಾತ್ಲಟ್ಯ ನಮ್ಮ ಟೆರಿಟೊರಿಗೆ ಬಂದನು, ಮತ್ತು ಕೊನೆಗೆ ಪ್ರಿಸಿಲ್ಲಳನ್ನು ಮದುವೆಯಾದನು. ಪ್ರತಿವಾರ ಗ್ರಾಸ್ಲೆ ಮತ್ತು ನಾನು ಸ್ಥಳೀಕ ಆಫ್ರಿಕನ್ ಭಾಷೆಯಾದ ಸಿಪೆಡಿಯಲ್ಲಿ ಸಾರ್ವಜನಿಕ ಭಾಷಣಗಳನ್ನು ಕೊಡಲು ಸರದಿಗಳನ್ನು ತಕ್ಕೊಳ್ಳುತಿದ್ದೆವು. ಜನರಿಗೆ ಬೈಬಲ್ ಸಾಹಿತ್ಯಗಳು ದೊರೆಯಲ್ಪಡುವಂತೆ, ಸಿಪೆಡಿ ಭಾಷೆಯಲ್ಲಿ ಸಾಹಿತ್ಯಗಳನ್ನು ಭಾಷಾಂತರಿಸಲು ಸೊಸೈಟಿಯು ನನ್ನನ್ನು ಕೇಳಿಕೊಂಡಿತು. ಈ ಸಾಹಿತ್ಯದಿಂದ ಜನರು ಪ್ರಯೋಜನ ಪಡೆಯುವುದನ್ನು ನೋಡುವುದು ನನಗೆ ಮಹಾ ಸಂತೋಷವನ್ನು ತಂದಿತು.
ನಮ್ಮ ಸಾರ್ವಜನಿಕ ಕೂಟಗಳ ಚಟುವಟಿಕೆಯನ್ನು ವರ್ಧಿಸಲು, ನಮ್ಮ ಟೆರಿಟೊರಿಯಲ್ಲೆಲ್ಲಾ ಬೈಬಲ್ ಭಾಷಣಗಳನ್ನು ನುಡಿಸಲು ಸಾಧ್ಯವಾಗುವಂತೆ ದೊಡ್ಡ ಧ್ವನಿವರ್ಧಕವಿರುವ ಒಂದು ಫೋನೊಗ್ರಾಫ್ ಯಂತ್ರವನ್ನು ನಾವು ಖರೀದಿಸಿದೆವು. ಸ್ಥಳದಿಂದ ಸ್ಥಳಕ್ಕೆ ಈ ಭಾರವಾದ ಸಲಕರಣೆಗಳನ್ನು ಕೊಂಡೊಯ್ಯಲು, ಕತ್ತೆಗಳಿಂದ ಎಳೆಯಲ್ಪಡುವ ಒಂದು ಗಾಡಿಯನ್ನು ನಾವು ಎರವಲು ಪಡೆದವು. ಇದರ ಫಲಿತಾಂಶವಾಗಿ, ನಮ್ಮ ನೆರೆಹೊರೆಯವರು “ಕತ್ತೆ ಚರ್ಚಿನ ಜನರು” ಎಂದು ನಮಗೆ ಅಡಹ್ಡೆಸರು ಇಟ್ಟರು.
ತನ್ಮಧ್ಯೆ ನಮ್ಮ ಚಿಕ್ಕ ಸಭೆಯು ಬೆಳೆಯುತ್ತಾ ಹೋಯಿತು. ಕಟ್ಟಕಡೆಗೆ, ನನ್ನ ಇಬ್ಬರು ಅಕ್ಕಂದಿರು ಮತ್ತು ಅವರ ಗಂಡಂದಿರು ಸಾಕ್ಷಿಗಳಾದರು ಮತ್ತು ಅವರ ಮರಣದ ತನಕ ಅವರು ನಂಬಿಗಸ್ತರಾಗಿ ಉಳಿದರು. ಬೊಯ್ನೆ ಸಭೆಯ (ಈಗ ಮೊಕೊಡೆಬ ಎಂದು ಕರೆಯಲ್ಪಡುತ್ತದೆ) ಇತರ ಅನೇಕರು ಕೂಡ ಪೂರ್ಣಸಮಯ ಸಾರುವಿಕೆಯ ಕೆಲಸವನ್ನು ನಿರ್ವಹಿಸಿದರು, ಮತ್ತು ಅವರಲ್ಲಿ ಕೆಲವರು ಇನ್ನೂ ಆ ಸೇವೆಯಲ್ಲಿ ಇದ್ದಾರೆ. ಈಗ ಚದರಿರುವ ಗ್ರಾಮ್ಯಗಳ ಈ ವಿಸ್ತಾರ ಪ್ರದೇಶದಲ್ಲಿ ಎರಡು ಸಭೆಗಳಿವೆ, ಮತ್ತು ಸಾರುವ ಕೆಲಸದಲ್ಲಿ 70 ಕ್ಕಿಂತಲೂ ಹೆಚ್ಚು ಮೊತ್ತದ ಪ್ರಚಾರಕರು ಕ್ರಿಯಾಶೀಲರಾಗಿದ್ದಾರೆ.
ಒಂದು ಹೊಸ ಜೀವನೋದ್ಯೋಗ
ನಾನು 1949 ರಲ್ಲಿ ಶಾಲೆಯಲ್ಲಿ ಕಲಿಸುವುದನ್ನು ನಿಲ್ಲಿಸಿದೆನು ಮತ್ತು ಕ್ರಮದ ಪ್ರಯನೀಯರ್ ಶುಶ್ರೂಷಕನಾದೆನು. ಟ್ರಾನ್ಸ್ವಾಲ್ನಲ್ಲಿ ವಾಲ್ವಾಟರ್ನ ಸುತ್ತಲೂ ಬಿಳಿಜನರ ಒಡೆತನದ ಹೊಲಗಳಲ್ಲಿ ಜೀವಿಸುತ್ತಿದ್ದ ಕಪ್ಪುಜನರಿಗೆ ಭೇಟಿಕೊಡುವುದು ನನ್ನ ಮೊದಲ ನೇಮಕವಾಗಿತ್ತು. ಹೊಲಗಳ ಕೆಲವು ಧಣಿಗಳು ಇತ್ತೀಚೆಗೆ ಸ್ವೀಕೃತವಾದ ವರ್ಣಭೇದ ಧೋರಣೆಯನ್ನು ಸಮರ್ಥಿಸಿದ್ದರು ಮತ್ತು ಬಿಳಿಯರಿಗೆ ಅವರು ಕಡಮೆ ಅಂತಸ್ತಿನವರೆಂದೆಣಿಕೆಯನ್ನು ಕಪ್ಪು ಜನರು ಒಪ್ಪಿಕೊಳ್ಳಬೇಕು ಮತ್ತು ಅವರ ಬಿಳಿ ಧಣಿಗಳ ಸೇವೆ ಮಾಡತಕ್ಕದ್ದು ಎಂಬ ದೃಢನಿಶ್ಚಯ ಮಾಡಿದ್ದರು. ಆದುದರಿಂದ ನಾನು ಕಪ್ಪು ಕಾರ್ಮಿಕರಿಗೆ ಸಾರಿದಾಗ, ಕೆಲವು ಬಿಳಿಯರು ನನ್ನನ್ನು ಅಧೀನನಾಗಬಾರದೆಂದು ಪ್ರಚಾರ ಮಾಡುವವನು ಎಂದು ತಪ್ಪಾಗಿ ಎಣಿಸಿದರು. ಕೆಲವರು ನಾನೊಬ್ಬ ಕಮ್ಯೂನಿಸ್ಟ್ ಎಂದು ಕೂಡ ಆಪಾದಿಸಿದರು ಮತ್ತು ನನಗೆ ಗುಂಡುಹೊಡೆಯುವ ಬೆದರಿಕೆಯನ್ನೊಡ್ಡಿದರು.
ಪರಿಸ್ಥಿತಿಯನ್ನು ನಾನು ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ವರದಿ ಮಾಡಿದೆನು, ಮತ್ತು ನನ್ನನ್ನು ಬೇಗನೆ ಡಾವಲ್ಸ್ಕ್ಲುಫ್ ಎಂದು ಕರೆಯಲ್ಪಡುವ ಇನ್ನೊಂದು ಗ್ರಾಮೀಣ ಪ್ರದೇಶಕ್ಕೆ ನೇಮಕಮಾಡಿ ವರ್ಗಾಯಿಸಿದರು. ಅಷ್ಟರೊಳಗೆ ನನ್ನ ಹೆಂಡತಿಯು ಸಹ ಅವಳ ಕಲಿಸುವ ಕೆಲಸವನ್ನು ತೊರೆದು, ಪಯನೀಯರ್ ಸೇವೆಯಲ್ಲಿ ನನ್ನೊಂದಿಗೆ ಜತೆಗೂಡಿದಳ್ದು. ಒಂದು ಅಪರಾಹ್ನ 1950 ರಲ್ಲಿ, ನಾವು ಕ್ಷೇತ್ರ ಸೇವೆಯಿಂದ ಹಿಂದಿರುಗಿ ಬಂದಾಗ ಸೊಸೈಟಿಯಿಂದ ಒಂದು ದೊಡ್ಡ ಲಕೋಟೆಯನ್ನು ಕಂಡೆವು. ನಮಗೆ ಆಶ್ಚರ್ಯವಾಗುವಂತೆ, ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ ತರಬೇತಿಯನ್ನು ಪಡೆಯಲು ನನಗಾಗಿ ಒಂದು ಆಮಂತ್ರಣವು ಅದರಲ್ಲಿ ಇತ್ತು. ಮೂರು ವರ್ಷಗಳ ತನಕ ನಾವು ದಕ್ಷಿಣ ಆಫ್ರಿಕದಲ್ಲಿರುವ ಸಭೆಗಳನ್ನು ಸಂದರ್ಶಿಸಿದೆವು, ಮತ್ತು ಅನಂತರ 1953 ರಲ್ಲಿ ನಮ್ಮನ್ನು ದಕ್ಷಿಣ ಆಫ್ರಿಕದ ಮಧ್ಯದಲ್ಲಿ ಭೂ ವೇಷ್ಟಿತ ಲೆಸೊತೊಗೆ ನೇಮಕಮಾಡಲಾಯಿತು.
ಲೆಸೊತೊ ಮತ್ತು ಬೊಟ್ಸವಾನದಲ್ಲಿ ಶುಶ್ರೂಷೆ
ಲೆಸೊತೊವಿನಲ್ಲಿ ನಾವು ಸೇವೆ ಮಾಡಲು ಆರಂಭಿಸಿದಾಗ, ಮತಸಂಸ್ಕಾರದ ಕೊಲೆಗಳಲ್ಲಿ ಆಗಾಗ್ಗೆ ಅಪರಿಚಿತರು ಗುರಿಗಳಾಗಿದ್ದಾರೆ ಎಂಬ ಅನೇಕ ಗಾಳಿಸುದ್ದಿಗಳು ಇದ್ದವು. ನನ್ನ ಹೆಂಡತಿ ಮತ್ತು ನಾನು ಇಬ್ಬರೂ ಚಿಂತಿತರಾದೆವು, ಆದರೆ ನಮ್ಮ ಸೊತೊ ಸಹೋದರರ ಪ್ರೀತಿ ಮತ್ತು ಅವರ ಅತಿಥಿಸತ್ಕಾರವು ಅಂತಹ ಭಯವನ್ನು ನಾವು ಬೇಗನೆ ಮರೆಯುವಂತೆ ಮಾಡಿತು.
ಲೆಸೊತೊವಿನ ಮಾಲಟೆ ಪರ್ವತಗಳಲ್ಲಿ ಸಭೆಗಳನ್ನು ಸಂದರ್ಶಿಸಲು, ನನ್ನ ಹೆಂಡತಿಯನ್ನು ತಗ್ಗುಪ್ರದೇಶದಲ್ಲಿ ಬಿಟ್ಟು, ನಾನು ವಿಮಾನದಲ್ಲಿ ಸಂಚರಿಸುತ್ತಿದ್ದೆ, ಅವಳು ನನ್ನ ಹಿಂತೆರಳುವಿಕೆಯ ತನಕ ಪಯನೀಯರ್ ಸೇವೆಯನ್ನು ಮುಂದರಿಸುತ್ತಿದ್ದಳು. ಪರ್ವತಗಳಲ್ಲಿ ನಾನು ದಾರಿತಪ್ಪಿಹೋಗುವುದನ್ನು ಹೋಗಲಾಡಿಸಲು, ಒಂದು ಸಭೆಯಿಂದ ಇನ್ನೊಂದಕ್ಕೆ ನನ್ನ ಮಿತ್ರರು ದಯಾಪೂರಿತವಾಗಿ ನನ್ನೊಂದಿಗೆ ಬರುತ್ತಿದ್ದರು.
ಒಮ್ಮೆ ನನಗೆ ಇನ್ನೊಂದು ಸಭೆಗೆ ತಲುಪುವಂತೆ, ನಾವು ಆರೆಂಜ್ ನದಿಯನ್ನು ಕುದುರೆಗಳ ಬೆನ್ನ ಮೇಲೆ ದಾಟಬೇಕೆಂದು ಹೇಳಲಾಯಿತು. ನನ್ನ ಕುದುರೆಯು ಸಾಧುವಾಗಿದೆ ಎಂದು ನನಗೆ ಹೇಳಲಾಗಿತ್ತಾದರೂ, ನೀರಿನ ರಭಸವು ಏರಿದಾಗ, ಕುದುರೆಗಳು ತಮ್ಮ ಬೆನ್ನ ಮೇಲಿದ್ದ ಹೊರೆಗಳನ್ನು ತೊಲಗಿಸಿ ಬಿಡಲು ಆಗಾಗ್ಗೆ ಪ್ರಯತ್ನಿಸುತ್ತವೆ ಎಂಬ ಎಚ್ಚರಿಕೆಯನ್ನೂ ಕೊಡಲಾಗಿತ್ತು. ನನಗೆ ಚಿಂತೆಯಾಗಿತ್ತು, ಯಾಕಂದರೆ ನಾನು ಒಳ್ಳೆಯ ಕುದುರೆ ಸವಾರನೂ ಆಗಿರಲಿಲ್ಲ, ಯಾ ಒಳ್ಳೆಯ ಈಜುಗಾರನೂ ಅಲ್ಲ. ಶೀಘ್ರವೇ ನಾವು ನದಿಯಲ್ಲಿದ್ದೆವು, ಮತ್ತು ನೀರು ಜೀನುಗಳಷ್ಟು ಎತ್ತರಕ್ಕೆ ಬಂತು. ನಾನು ಎಷ್ಟೊಂದು ಹೆದರಿದ್ದೇನಂದರೆ ನಾನು ಲಗಾಮುಗಳನ್ನು ಬಿಟ್ಟುಬಿಟ್ಟೆ ಮತ್ತು ಕುದುರೆಯ ಕೇಸರವನ್ನು ಹಿಡಿದುಕೊಂಡೆ. ಆಚೇ ತಡಿಗೆ ಸುರಕ್ಷಿತವಾಗಿ ನಾವು ಬಂದಾಗ ಎಂತಹ ಒಂದು ಬಿಡುಗಡೆ ಅದಾಗಿತ್ತು!
ಕುದುರೆ ಸವಾರಿಯಿಂದ ನನ್ನ ದೇಹವು ಎಷ್ಟು ಬೇನೆಗೊಂಡಿತ್ತೆಂದರೆ ಆ ರಾತ್ರಿ ನನಗೆ ನಿದ್ರಿಸಲು ಆಗಲೇ ಇಲ್ಲ. ಆದರೆ ಎಲ್ಲಾ ಅನಾನುಕೂಲತೆಗಳಿಗೆ ಅದು ಅರ್ಹವಾಗಿತ್ತು ಯಾಕಂದರೆ ಸಂದರ್ಶನಕ್ಕಾಗಿ ಮಿತ್ರರು ಮಹಾ ಗಣ್ಯತೆಯನ್ನು ತೋರಿಸಿದರು. ಲೆಸೊತೊವಿನಲ್ಲಿ ಸರ್ಕಿಟ್ ಕಾರ್ಯವನ್ನು ನಾನು ಆರಂಭಿಸಿದಾಗ, ಅಲ್ಲಿ 113 ಪ್ರಚಾರಕರ ಉಚ್ಚಾಂಕವಿತ್ತು. ಇಂದು, ಆ ಸಂಖ್ಯೆಯು 1,649 ಕ್ಕೇರಿದೆ.
ನಮ್ಮ ಸಾರುವ ನೇಮಕವು 1956 ರಲ್ಲಿ, ಈಗ ಬೊಟ್ಸವಾನವೆಂದು ಕರೆಯಲ್ಪಡುವ ಬೆಶೌನಾಲೆಂಡ್ ಪ್ರೊಟೆಕ್ಟೊರೆಟ್ಗೆ ಬದಲಾಯಿಸಲ್ಪಟ್ಟಿತು. ಬೊಟ್ಸವಾನ ಬಹಳ ವಿಸ್ತಾರವಾದ ದೇಶ, ಮತ್ತು ಎಲ್ಲಾ ಪ್ರಚಾರಕರನ್ನು ತಲುಪಬೇಕಾದರೆ ಬಹಳ ದೂರದ ತನಕ ಹೋಗಬೇಕಾಗುತ್ತದೆ. ನಾವು ಟ್ರೆಯ್ನ್ನಲ್ಲಾಗಲಿ, ತೆರೆದ ಟ್ರಕ್ನಲ್ಲಾಗಲಿ ಪಯಣಿಸುತ್ತಿದ್ದೆವು. ಅಲ್ಲಿ ಆಸನಗಳಿರಲಿಲ್ಲ, ಆದುದರಿಂದ, ನಮ್ಮ ಸಾಮಾನುಗಳೊಂದಿಗೆ ನಾವು ನೆಲಗಟ್ಟುಗಳ ಮೇಲೆ ಕುಳಿತುಕೊಳ್ಳಬೇಕಾಗಿತ್ತು. ಆಗಾಗ್ಗೆ ನಾವು ನಮ್ಮ ಗಮ್ಯಸ್ಥಾನಕ್ಕೆ ಧೂಳುತುಂಬಿದವರೂ, ಆಯಾಸಗೊಂಡವರೂ ಆಗಿ ತಲುಪುತ್ತಿದ್ದೆವು. ನಮ್ಮ ಕ್ರೈಸ್ತ ಸಹೋದರರು ನಮ್ಮನ್ನು ಯಾವಾಗಲೂ ಸುಸ್ವಾಗತಿಸಿದರು, ಮತ್ತು ಅವರ ಸಂತಸದ ಮುಖಗಳು ನಮ್ಮನ್ನು ಉಲ್ಲಾಸಗೊಳಿಸಿದವು.
ಆ ಸಮಯದಲ್ಲಿ, ಸೊಸೈಟಿಯ ಪ್ರಕಾಶನಗಳು ಬೊಟ್ಸವಾನದಲ್ಲಿ ನಿಷೇಧಿಸಲ್ಪಟ್ಟಿದ್ದವು, ಆದುದರಿಂದ, ಸೊಸೈಟಿಯ ಸಾಹಿತ್ಯಗಳನ್ನು ಬಳಸದೆ, ನಮ್ಮ ಮನೆ-ಮನೆಯ ಸಾರುವಿಕೆಯು ಜಾಗರೂಕತೆಯಿಂದ ಮಾಡಲಾಗುತ್ತಿತ್ತು. ಒಮ್ಮೆ ಮಾಫಾಶಾಲೆಲ ಹಳ್ಳಿಯ ಬಳಿಯಲ್ಲಿ ಕೆಲಸಮಾಡುತ್ತಿದ್ದಾಗ ನಾವು ಹಿಡಿಯಲ್ಪಟ್ಟೆವು ಮತ್ತು ಬಂಧಿಸಲ್ಪಟ್ಟೆವು. ನಮ್ಮ ಸಮರ್ಥನೆಯಲ್ಲಿ, ಮತ್ತಾಯ 28:19, 20 ರಲ್ಲಿ ದಾಖಲಿಸಲ್ಪಟ್ಟ ಪ್ರಕಾರ ನಮ್ಮ ನಿಯೋಗವನ್ನು ಸೂಚಿಸುತ್ತಾ ನಾವು ಬೈಬಲಿನಿಂದ ಓದಿದೆವು. ಸಲಹೆಗಾರರಲ್ಲಿ ಕೆಲವರು ಪ್ರಭಾವಿತರಾದರೂ, ಮುಖ್ಯಸ್ಥನು ಸ್ಥಳೀಕ ಸಾಕ್ಷಿಗಳಿಗೆ ಚಾಟಿಯೇಟುಕೊಡುವಂತೆ ಆಜ್ಞಾಪಿಸಿದನು. ಅನಂತರ, ನಮಗೆ ಬೆರಗಾಗುವಂತೆ, ವೈದಿಕನು ಮುಖ್ಯಸ್ಥನಿಗೆ ದಯಾಪರನಾಗಿರುವಂತೆ ಮತ್ತು ನಮ್ಮನ್ನು ಕ್ಷಮಿಸುವಂತೆ ವಿನಂತಿಸಿದನು. ಮುಖ್ಯಸ್ಥನು ಸಮ್ಮತಿಸಿದನು, ಮತ್ತು ನಾವು ಬಿಡಲ್ಪಟ್ಟೆವು.
ಹಿಂಸೆಯ ಮತ್ತು ನಮ್ಮ ಸಾಹಿತ್ಯದ ನಿಷೇಧದ ನಡುವಿನಲ್ಲೂ, ರಾಜ್ಯ ಕಾರ್ಯವು ವೃದ್ಧಿಯಾಗುವುದು ಮುಂದುವರಿಯಿತು. ಬೊಟ್ಸವಾನಕ್ಕೆ ನಾವು ಬಂದಾಗ, 154 ಪ್ರಚಾರಕರ ಉಚ್ಚಾಂಕವಿತ್ತು. ಮೂರು ವರ್ಷಗಳ ನಂತರ ನಿಷೇಧವು ತೆಗೆಯಲ್ಪಟ್ಟಾಗ, ಆ ಸಂಖ್ಯೆಯು 192 ಕ್ಕೆ ಬೆಳೆದಿತ್ತು. ಇಂದು ಆ ದೇಶದಲ್ಲಿ ಯೆಹೋವನ 777 ಸಾಕ್ಷಿಗಳು ಸಾರುತ್ತಾ ಇದ್ದಾರೆ.
ಕಲಿಸುವುದು ಮತ್ತು ಭಾಷಾಂತರಿಸುವುದು
ಸಮಯಾನಂತರ, ಕ್ರೈಸ್ತ ಹಿರಿಯರಿಗಾಗಿರುವ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಶಿಕ್ಷಕನಾಗಿ ನನ್ನನ್ನು ಉಪಯೋಗಿಸಲಾಯಿತು. ತದನಂತರ, ಪಯನೀಯರ್ ಸೇವಾ ಶಾಲೆಯಲ್ಲಿ ಶಿಕ್ಷಕನಾಗಿರುವ ಸುಯೋಗವನ್ನು ನಾನು ಆನಂದಿಸಿದೆನು. ನನ್ನ ಹೆಂಡತಿಯು ಮತ್ತು ನಾನು ನಿಯತಕಾಲಿಕವಾಗಿ ದಕ್ಷಿಣ ಆಫ್ರಿಕದ ಬ್ರಾಂಚಿನಲ್ಲಿ ಕೂಡ ಸೇವೆ ಸಲ್ಲಿಸುತ್ತಿದ್ದೆವು. ಅಂತಹ ಸಂದರ್ಭಗಳಲ್ಲಿ ನಾನು ಭಾಷಾಂತರಿಸುವುದರಲ್ಲಿ ಸಹಾಯ ಮಾಡುತ್ತಿದ್ದೆ, ಮತ್ತು ಕರೆಲಿನ್ಳು ಪಾಕಶಾಲೆಯಲ್ಲಿ ಕೆಲಸಮಾಡುತ್ತಿದ್ದಳು.
ಒಂದು ದಿವಸ 1969 ರಲ್ಲಿ ಬ್ರಾಂಚ್ ಮೇಲ್ವಿಚಾರಕರಾದ ಫ್ರಾನ್ಸ್ ಮೆಲರ್ ನನ್ನನ್ನು ಸಮೀಪಿಸಿ, ಹೇಳಿದ್ದು: “ಸಹೋದರ ಟೊನ್ವಾನ್, ನಿಮ್ಮನ್ನು ಮತ್ತು ನಿಮ್ಮ ಹೆಂಡತಿಯನ್ನು ನನ್ನ ಆಫೀಸಿನಲ್ಲಿ ಕಾಣಲು ನಾನು ಬಯಸುತ್ತೇನೆ.” ಲಂಡನಿನ 1969 ರ “ಭೂಮಿಯ ಮೇಲೆ ಶಾಂತಿ” ಅಧಿವೇಶನಕ್ಕೆ ಪ್ರತಿನಿಧಿಗಳಾಗಿ ಆರಿಸಲ್ಪಟ್ಟವರಲ್ಲಿ ನಾವಿಬ್ಬರು ಇದ್ದೇವೆ ಎಂದವರು ವಿವರಿಸಿದರು. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ನ ನಮ್ಮ ಸಹೋದರರ ಪ್ರೀತಿಪೂರಕ ಅತಿಥಿಸತ್ಕಾರದಲ್ಲಿ ನಾವು ಆನಂದಿಸಿದೆವು, ಮತ್ತು ಲೋಕವ್ಯಾಪಕ ಭ್ರಾತೃತ್ವಕ್ಕಾಗಿ ನಮ್ಮ ಗಣ್ಯತೆಯನ್ನು ಇದು ಬಹಳವಾಗಿ ಹೆಚ್ಚಿಸಿತು.
ಕಳೆದ ನಾಲ್ಕು ದಶಕಗಳಿಂದ, ಕರೆಲಿನ್ ಪೂರ್ಣ ಸಮಯದ ಸುವಾರ್ತಿಕರೋಪಾದಿ ನಮ್ಮ ಜೀವನೋದ್ಯೋಗದಲ್ಲಿ ಒಬ್ಬ ನಿಷ್ಠಾವಂತೆ ಸಂಗಾತಿಯಾಗಿದ್ದಾಳೆ. ನಾವು ಅನೇಕ ಸಂತೋಷಗಳಲ್ಲಿ ಮತ್ತು ಕೆಲವು ದುಃಖಗಳಲ್ಲಿ ಒಟ್ಟಾಗಿ ಪಾಲಿಗರಾದೆವು. ಮರಣದಲ್ಲಿ ನಮ್ಮ ಮಕ್ಕಳಲ್ಲಿ ಇಬ್ಬರನ್ನು ನಾವು ಕಳೆದುಕೊಂಡರೂ, ನಮ್ಮ ಮಗಳು ದಮಾರಿಸ್ ಒಬ್ಬ ಉತ್ತಮ ಸಾಕ್ಷಿಯಾಗಿ ಬೆಳೆದಳು ಮತ್ತು ದಕ್ಷಿಣ ಆಫ್ರಿಕದ ಬ್ರಾಂಚ್ನಲ್ಲಿ ಭಾಷಾಂತರದ ಕಾರ್ಯದಲ್ಲಿ ಕೂಡ ಪಾಲಿಗಳಾದಳು.
ಸರ್ಕಿಟ್ ಕೆಲಸದಲ್ಲಿ ಪಾಲಿಗರಾಗಲು ನಮ್ಮ ಆರೋಗ್ಯ ನಮ್ಮನ್ನು ಇನ್ನೂ ಅನುಮತಿಸುವುದಿಲ್ಲವಾದುದರಿಂದ, ಪೀಟರ್ಸ್ಬರ್ಗ್ನ ಹತ್ತಿರದ ಆಫ್ರಿಕನ್ ನಗರವಲಯದಲ್ಲಿ ಸೆಶೆಕೊ ಸಭೆಯಲ್ಲಿ ವಿಶೇಷ ಪಯನೀಯರರುಗಳಾಗಿ ನಾವು ಕಳೆದ ಕೆಲವು ವರ್ಷಗಳಿಂದ ಇದ್ದೇವೆ. ನಾನು ಅಧ್ಯಕ್ಷ ಮೇಲ್ವಿಚಾರಕನೋಪಾದಿ ಸೇವೆ ಸಲ್ಲಿಸುತ್ತಿದ್ದೇನೆ. “[ಯೆಹೋವನ] ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ” ಎಂದು ಬೈಬಲ್ ಹೇಳುತ್ತದೆ, ಮತ್ತು ದಕ್ಷಿಣ ಆಪ್ರಿಕದಲ್ಲಿ ದೇವರನ್ನು ಸೇವಿಸುವುದರಲ್ಲಿ ನಾನು ಖಂಡಿತವಾಗಿಯೂ ಸಂತೋಷವನ್ನು ಮತ್ತು ತೃಪ್ತಿಯನ್ನು ಕಂಡುಕೊಂಡಿದ್ದೇನೆ.—ಕೀರ್ತನೆ 16:11.
[ಪುಟ 26 ರಲ್ಲಿರುವ ಚಿತ್ರ]
ದಕ್ಷಿಣ ಆಫ್ರಿಕದ ಸೆಶೆಗೊ ನಗರವಲಯದಲ್ಲಿ ಸಾಕ್ಷಿನೀಡುವುದು