ರಾಜನೊಬ್ಬನು ಯೆಹೋವನ ಪವಿತ್ರಸ್ಥಾನವನ್ನು ಹೊಲೆಗೆಡಿಸುತ್ತಾನೆ
“ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.”—ದಾನಿಯೇಲ 11:32.
1, 2. ಯಾವ ನಾಟಕೀಯ ಹೋರಾಟವು 2,000 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಮಾನವ ಇತಿಹಾಸವನ್ನು ಗುರುತಿಸಿದೆ?
ಇಬ್ಬರು ಪ್ರತಿಸ್ಪರ್ಧಿ ಅರಸರು ಪರಮಾಧಿಪತ್ಯಕ್ಕಾಗಿ ಸರ್ವಶಕ್ತಿಯನ್ನುಪಯೋಗಿಸಿದ ಹೋರಾಟದಲ್ಲಿ ತೊಡರಿಕೊಂಡಿದ್ದಾರೆ. ಹೋರಾಟವು ಎರಡು ಸಾವಿರಕ್ಕಿಂತಲೂ ಹೆಚ್ಚು ವರುಷಗಳಿಂದ ನಡಿಯುತ್ತಿದೆಯಾದ್ದರಿಂದ ಮೊದಲಾಗಿ ಒಬ್ಬನು, ಅನಂತರ ಇನ್ನೊಬ್ಬನು ಪ್ರಾಬಲ್ಯಕ್ಕೆ ಬರುತ್ತಾರೆ. ನಮ್ಮ ದಿನದಲ್ಲಿ ಆ ಹೋರಾಟವು ಭೂಮಿಯ ಮೇಲಿನ ಹೆಚ್ಚಿನ ಜನರನ್ನು ಬಾಧಿಸಿದೆ ಮತ್ತು ದೇವರ ಜನರ ಸಮಗ್ರತೆಯನ್ನು ಪಂಥಾಹ್ವಾನಕ್ಕೆ ಕರೆದದೆ. ಈ ಎರಡು ಅಧಿಕಾರಗಳಲ್ಲಿ ಯಾರೂ ಮುಂಗಾಣದ ಒಂದು ಘಟನೆಯಿಂದ ಅದು ಕೊನೆಗೊಳ್ಳುತ್ತದೆ. ಈ ನಾಟಕೀಯ ಇತಿಹಾಸವು ಪುರಾತನ ಪ್ರವಾದಿಯಾದ ದಾನಿಯೇಲನಿಗೆ ಮುಂಚಿತವಾಗಿಯೇ ಪ್ರಕಟಿಸಲ್ಪಟ್ಟಿತು.—ದಾನಿಯೇಲ ಅಧ್ಯಾಯಗಳು 10 ರಿಂದ 12.
2 ಉತ್ತರದ ರಾಜನ ಮತ್ತು ದಕ್ಷಿಣದ ರಾಜನ ನಡುವೆ ಮುಂಬರಿಯುವ ವೈರತ್ವದ ವಿಷಯವಾಗಿ ಈ ಪ್ರವಾದನೆಯಿದೆ ಮತ್ತು “ಯುವರ್ ವಿಲ್ ಬಿ ಡನ್ ಆನ್ ಅರ್ಥ್”a ಪುಸ್ತಕದಲ್ಲಿ ಸವಿಸ್ತಾರವಾಗಿ ಇದು ಚರ್ಚಿಸಲ್ಪಟ್ಟಿತ್ತು. ಇಸ್ರಾಯೇಲಿನ ಉತ್ತರಕ್ಕಿದ್ದ ಸಿರಿಯವು ಮೂಲತಃ ಉತ್ತರದ ರಾಜನು ಎಂದು ಆ ಪುಸ್ತಕದಲ್ಲಿ ತೋರಿಸಲ್ಪಟ್ಟಿತ್ತು. ತದನಂತರ, ಆ ಪಾತ್ರವು ರೋಮ್ನ ಕೈಸೇರಿತು. ಆರಂಭದಲ್ಲಿ, ದಕ್ಷಿಣದ ರಾಜನು ಈಜಿಪ್ಟ್ ಆಗಿತ್ತು.
ಅಂತ್ಯಕಾಲದಲ್ಲಿ ಹೋರಾಟ
3. ದೇವದೂತನಿಗೆ ಅನುಸಾರವಾಗಿ, ಉತ್ತರದ ರಾಜ ಮತ್ತು ದಕ್ಷಿಣದ ರಾಜನ ಕುರಿತ ಪ್ರವಾದನೆಯು ಯಾವಾಗ ತಿಳಿಯಲ್ಪಡಲಿತ್ತು, ಮತ್ತು ಹೇಗೆ?
3 ಈ ವಿಷಯಗಳನ್ನು ದಾನಿಯೇಲನಿಗೆ ಪ್ರಕಟಪಡಿಸಿದ ದೇವದೂತನು ಅಂದದ್ದು: “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು, ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತು ತಿರುಗುವರು, ತಿಳುವಳಿಕೆಯು [ನಿಜ ಜ್ಞಾನವು, NW] ಹೆಚ್ಚುವದು.” (ದಾನಿಯೇಲ 12:4) ಹೌದು, ಈ ಪ್ರವಾದನೆಯು ಅಂತ್ಯಕಾಲದ—1914 ರಲ್ಲಿ ಪ್ರಾರಂಭಿಸಿದ ಒಂದು ಕಾಲಾವಧಿಯ ಸಂಬಂಧದಲ್ಲಿದೆ. ಆ ಗುರುತಿಸಲ್ಪಟ್ಟ ಸಮಯದಲ್ಲಿ, ಅನೇಕರು ಪವಿತ್ರ ಶಾಸ್ತ್ರಗ್ರಂಥದ ವಿಷಯದಲ್ಲಿ “ಅತ್ತಿತ್ತು ತಿರುಗುವರು,” ಮತ್ತು ಪವಿತ್ರ ಆತ್ಮದ ಸಹಾಯದಿಂದ, ಬೈಬಲ್ ಪ್ರವಾದನೆಯ ಒಂದು ತಿಳಿವಳಿಕೆಯ ಸಮೇತ, ನಿಜ ಜ್ಞಾನವು ಹೆಚ್ಚಾಗುವದು. (ಜ್ಞಾನೋಕ್ತಿ 4:18) ಆ ಕಾಲದೊಳಗೆ ನಾವು ಅಳವಾಗಿ ಪ್ರವೇಶಿಸಿದಂತೆ, ದಾನಿಯೇಲನ ಪ್ರವಾದನೆಗಳ ಹೆಚ್ಚೆಚ್ಚಾದ ವಿವರಗಳು ಸ್ಪಷ್ಟೀಕರಿಸಲ್ಪಟ್ಟವು. ಹಾಗಾದರೆ, “ಯುವರ್ ವಿಲ್ ಬಿ ಡನ್ ಆನ್ ಅರ್ಥ್” ಪುಸ್ತಕವು ಪ್ರಕಾಶಿಸಲ್ಪಟ್ಟು 35 ವರ್ಷಗಳು ದಾಟಿರಲಾಗಿ ಇಂದು 1993 ರಲ್ಲಿ, ಉತ್ತರದ ರಾಜ ಮತ್ತು ದಕ್ಷಿಣದ ರಾಜನ ಕುರಿತಾದ ಪ್ರವಾದನೆಯನ್ನು ನಾವು ಹೇಗೆ ಅರ್ಥೈಸಬೇಕು?
4, 5. (ಎ) ಉತ್ತರದ ರಾಜ ಮತ್ತು ದಕ್ಷಿಣದ ರಾಜನ ಕುರಿತ ದಾನಿಯೇಲನ ಪ್ರವಾದನೆಯಲ್ಲಿ 1914 ನೆಯ ವರ್ಷವು ಎಲ್ಲಿ ಕಂಡುಬರುತ್ತದೆ? (ಬಿ) ದೇವದೂತನಿಗನುಸಾರ, 1914 ರಲ್ಲಿ ಏನು ಸಂಭವಿಸಲಿಕ್ಕಿತ್ತು?
4 ಇಸವಿ 1914 ರಲ್ಲಿ ಅಂತ್ಯಕಾಲದ ಪ್ರಾರಂಭವು ಒಂದನೆಯ ಲೋಕ ಯುದ್ಧದಿಂದ ಮತ್ತು ಯೇಸು ಮುಂತಿಳಿಸಿದ ಇತರ ಜಾಗತಿಕ ಸಂಕಟಗಳಿಂದ ಗುರುತಿಸಲ್ಪಟ್ಟಿತು. (ಮತ್ತಾಯ 24:3, 7, 8) ದಾನಿಯೇಲನ ಪ್ರವಾದನೆಯಲ್ಲಿ ನಾವು ಆ ವರ್ಷವನ್ನು ಕಂಡುಹಿಡಿಯಬಲ್ಲೆವೋ? ಹೌದು. ಅಂತ್ಯ ಕಾಲದ ಪ್ರಾರಂಭವು ದಾನಿಯೇಲ 11:29 ರಲ್ಲಿ ಸೂಚಿಸಲಾದ “ಕ್ಲುಪ್ತಕಾಲ” ವಾಗಿರುತ್ತದೆ. (ನೋಡಿರಿ “ಯುವರ್ ವಿಲ್ ಬಿ ಡನ್ ಆನ್ ಅರ್ಥ್,” ಪುಟಗಳು 269-70.) ಅದು ದಾನಿಯೇಲ 4 ನೆಯ ಅಧ್ಯಾಯದ ಪ್ರವಾದನಾರೂಪದ ಗಮನಾರ್ಹ ಘಟನೆಗಳಲ್ಲಿ ಸೂಚಿತವಾದ 2,520 ವರ್ಷಗಳ ಅಂತ್ಯದಲ್ಲಿ ಬಂದದರಿಂದ, ಅದು ದಾನಿಯೇಲನ ದಿನಗಳಲ್ಲಿ ಆವಾಗಲೇ ಯೆಹೋವನಿಂದ ನಿಯಮಿತವಾದ ಒಂದು ಕಾಲವಾಗಿತ್ತು.
5 ಸಾ.ಶ.ಪೂ. 607 ರಲ್ಲಿ ದಾನಿಯೇಲನ ಯೌವನದ ಸಮಯದಲ್ಲಾದ ಯೆರೂಸಲೇಮಿನ ನಾಶನದಿಂದ ಹಿಡಿದು ಸಾ.ಶ. 1914ರ ವರೆಗಿನ ಆ 2,520 ವರ್ಷಗಳು “ಅನ್ಯಜನಾಂಗಗಳ ನಿಯಮಿತ ಸಮಯಗಳು” ಎಂದು ಕರೆಯಲ್ಪಟ್ಟವು. (ಲೂಕ 21:24) ಯಾವ ರಾಜಕೀಯ ಘಟನೆಗಳು ಅವುಗಳ ಅಂತ್ಯವನ್ನು ಗುರುತಿಸಲಿರುವವು? ಒಬ್ಬ ದೇವದೂತನು ಇದನ್ನು ದಾನಿಯೇಲನಿಗೆ ತಿಳಿಯಪಡಿಸಿದನು. ದೇವದೂತನು ಹೇಳಿದ್ದು: “ಅವನು [ಉತ್ತರದ ರಾಜನು] . . . ಸ್ವದೇಶವನ್ನು ಸೇರುವನು. ಕ್ಲುಪ್ತಕಾಲದಲ್ಲಿ ಪುನಃ ದಕ್ಷಿಣ ದೇಶದ ಮೇಲೆ ನುಗ್ಗುವನು; ಆದರೆ ಮೊದಲು ಆದಂತೆ ಎರಡನೆಯ ಸಲ ಆಗದು.”—ದಾನಿಯೇಲ 11:28, 29.
ರಾಜನು ಯುದ್ಧವೊಂದರಲ್ಲಿ ಸೋಲುತ್ತಾನೆ
6. ಇಸವಿ 1914 ರಲ್ಲಿ, ಉತ್ತರದ ರಾಜನು ಯಾರಾಗಿದ್ದನು, ಮತ್ತು ದಕ್ಷಿಣದ ರಾಜನು ಯಾರಾಗಿದ್ದನು?
6 ಇಸವಿ 1914 ರೊಳಗೆ ಉತ್ತರದ ಅರಸನ ಪಾತ್ರವು, ಯಾರ ಮುಖಂಡನು ಕೈಸರ್ ವಿಲ್ಹೆಲ್ಮ್ ಆಗಿದ್ದನೋ ಆ ಜರ್ಮನಿಯ ಕೈಸೇರಿತ್ತು. (“ಕೈಸರ್” ರೋಮನ್ ಬಿರುದಾದ “ಸೀಸರ್” ಎಂಬುದರಿಂದ ಬಂದಿದೆ.) ಯೂರೋಪಿನಲ್ಲಿ ಯುದ್ಧ ಕಾರ್ಯಾಚರಣೆಗಳ ಹೊರಉಕ್ಕುವಿಕೆಯು ಉತ್ತರದ ರಾಜ ಮತ್ತು ದಕ್ಷಿಣದ ರಾಜನ ನಡುವಣ ಹೋರಾಟಗಳ ಸರಣಿಯಲ್ಲಿ ಮತ್ತೊಂದಾಗಿತ್ತು. ಈ ಎರಡನೆಯವನ ಅಂದರೆ ದಕ್ಷಿಣದ ರಾಜನ ಪಾತ್ರವು, ಈಗ ಬ್ರಿಟನ್ನಿಂದ ಆಕ್ರಮಿಸಲ್ಪಟ್ಟಿತು, ಮೂಲದಲ್ಲಿ ದಕ್ಷಿಣ ರಾಜನ ಆಧಿಪತ್ಯವಾಗಿದ್ದ ಈಜಿಪ್ಟನ್ನು ಅದು ಥಟ್ಟನೆ ವಶಮಾಡಿಕೊಂಡಿತು. ಯುದ್ಧವು ಮುಂದುವರಿದಂತೆ, ಬ್ರಿಟನ್ ಅದರ ಮುಂಚಿನ ವಸಾಹತುವಾದ ಅಮೆರಿಕದಿಂದ ಜತೆಗೂಡಲ್ಪಟ್ಟಿತು. ದಕ್ಷಿಣದ ರಾಜನು ಇತಿಹಾಸದಲ್ಲಿ ಅತ್ಯಂತ ಬಲಾಡ್ಯ ಸಾಮ್ರಾಜ್ಯವಾದ ಆಂಗ್ಲೋ-ಅಮೆರಿಕನ್ ಲೋಕಾಧಿಕಾರವಾಗಿ ಪರಿಣಮಿಸಿದನು.
7, 8. (ಎ) ಒಂದನೆಯ ಲೋಕ ಯುದ್ಧದಲ್ಲಿ, ವಿಷಯಗಳು ಯಾವ ರೀತಿಯಲ್ಲಿ “ಮೊದಲು ಆದಂತೆ” ಆಗಲಿಲ್ಲ? (ಬಿ) ಒಂದನೆಯ ಲೋಕ ಯುದ್ಧದ ಫಲಿತಾಂಶವೇನಾಗಿತ್ತು, ಆದರೆ ಪ್ರವಾದನೆಗನುಸಾರ, ಉತ್ತರದ ರಾಜನು ಹೇಗೆ ಪ್ರತಿಕ್ರಿಯಿಸಿದನು?
7 ಈ ಎರಡು ಅರಸರುಗಳ ನಡುವಣ ಮುಂಚಿನ ಹೋರಾಟಗಳಲ್ಲಿ, ರೋಮನ್ ಸಾಮ್ರಾಜ್ಯ ಉತ್ತರದ ರಾಜನೋಪಾದಿ, ಎಡೆಬಿಡದೆ ವಿಜಯವನ್ನು ಪಡೆಯುತ್ತಿತ್ತು. ಆದರೆ, ಈ ಸಲ ‘ಮೊದಲು ಆದಂತೆ ಆಗದು.’ ಯಾಕೆ ಆಗದು? ಯಾಕಂದರೆ ಉತ್ತರದ ರಾಜನು ಯುದ್ಧದಲ್ಲಿ ಸೋತುಹೋದನು. ಅದಕ್ಕೆ ಒಂದು ಕಾರಣವೇನಂದರೆ “ಕಿತ್ತೀಮಿನ ಹಡಗುಗಳು” ಉತ್ತರದ ರಾಜನ ವಿರುದ್ಧವಾಗಿ ಬಂದವು. (ದಾನಿಯೇಲ 11:30) ಈ ಹಡಗಗಳು ಯಾವುವು? ದಾನಿಯೇಲನ ಕಾಲದಲ್ಲಿ, ಕಿತ್ತೀಮ್ ಸೈಪ್ರಸ್ ಆಗಿತ್ತು, ಮತ್ತು ಒಂದನೆಯ ಲೋಕ ಯುದ್ಧದ ಆರಂಭದಲ್ಲೇ ಬ್ರಿಟನ್ನಿಂದ ಸೈಪ್ರಸ್ ಹಸ್ತಗತ ಮಾಡಲ್ಪಟ್ಟಿತ್ತು. ಅದಲ್ಲದೆ, ಡರ್ವನ್ ಪಿಕ್ಟೋರಿಯಲ್ ಎನ್ಸೈಕ್ಲೊಪೀಡಿಯ ಆಫ್ ದ ಬೈಬಲ್ಗೆ ಅನುಸಾರವಾಗಿ, ಕಿತ್ತೀಮ್ ಹೆಸರು, “ಸಾಮಾನ್ಯವಾಗಿ ಪಶ್ಚಿಮವನ್ನು ಆದರೆ, ವಿಶೇಷವಾಗಿ ಸಮುದ್ರ ಸಂಚಾರದ ಪಶ್ಚಿಮವನ್ನು ಒಳಗೊಳ್ಳಲು ವಿಸ್ತರಿತವಾಗಿದೆ.” ನ್ಯೂ ಇಂಟರ್ನ್ಯಾಷನಲ್ ವರ್ಷನ್ “ಕಿತ್ತೀಮಿನ ಹಡಗುಗಳು” ಎಂಬ ಹೇಳಿಕೆಯನ್ನು “ಪಶ್ಚಿಮ ಕರಾವಳಿ ಪ್ರದೇಶಗಳ ಹಡಗುಗಳು” ಎಂದು ಭಾಷಾಂತರಿಸಿದೆ. ಒಂದನೆಯ ಲೋಕ ಯುದ್ಧದಲ್ಲಿ, ಕಿತ್ತೀಮಿನ ಹಡಗಗಳು, ಯೂರೋಪಿನ ಪಶ್ಚಿಮ ಕರಾವಳಿಯಲ್ಲಿ ತುಸು ದೂರ ಇಡಲ್ಪಟ್ಟಿದ್ದ ಬ್ರಿಟನ್ನ ಹಡಗಗಳಾಗಿ ರುಜುವಾದವು. ತದನಂತರ ಬ್ರಿಟಿಷ್ ಜಲಸೇನೆಯು ಉತ್ತರ ಅಮೆರಿಕದ ಪಶ್ಚಿಮ ಭೂಖಂಡದ ಹಡಗುಗಳಿಂದ ಬಲಗೊಳಿಸಲ್ಪಟ್ಟಿತು.
8 ಈ ಆಕ್ರಮಣದ ಕೆಳಗೆ, ಉತ್ತರದ ರಾಜನು “ಎದೆಗುಂದಿ” ದವನಾದನು ಮತ್ತು 1918 ರಲ್ಲಿ ಸೋಲನ್ನೊಪ್ಪಿಕೊಂಡನು. ಆದರೆ ಅವನು ಪೂರ್ತಿಯಾಗಿ ಕೊನೆಗೊಳ್ಳಲಿಲ್ಲ. “[ಅವನು] ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ಮಾಡುವಷ್ಟು ಮಾಡುವನು [ಪರಿಣಾಮಕಾರಿ ಕ್ರಿಯೆಗೈಯುವನು, NW]; ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆಯನ್ನು [ಒಡಂಬಡಿಕೆಯನ್ನು, NW] ತೊರೆದವರನ್ನು ಕಟಾಕ್ಷಿಸುವನು.” (ದಾನಿಯೇಲ 11:30) ಹಾಗೆಂದು ದೇವದೂತನು ಪ್ರವಾದಿಸಿದನು, ಮತ್ತು ಅದು ಹಾಗೆಯೇ ಆಯಿತು.
ರಾಜನು ಪರಿಣಾಮಕಾರಿಯಾಗಿ ಕ್ರಿಯೆಗೈಯುತ್ತಾನೆ
9. ಅಡಾಲ್ಫ್ ಹಿಟ್ಲರನ ಉದಯಕ್ಕೆ ನಡಿಸಿದ್ದು ಯಾವುದು, ಮತ್ತು ಅವನು “ಪರಿಣಾಮಕಾರಿಯಾಗಿ ಕ್ರಿಯೆಗೈದದ್ದು” ಹೇಗೆ?
9 ಯುದ್ಧಾನಂತರ, 1918 ರಲ್ಲಿ, ವಿಜಯಿ ಮಿತ್ರರಾಷ್ಟ್ರಗಳು ಜರ್ಮನಿಯ ಜನತೆಯನ್ನು ಅನಿರ್ದಿಷ್ಟ ಭವಿಷ್ಯದ ತನಕ ಬಹುಮಟ್ಟಿಗೆ ಉಪವಾಸವಿಡಲು ರಚಿಸಿದಂತೆ ತೋರಿದ ಶಿಕ್ಷಾರೂಪದ ಶಾಂತಿ ಸಂಧಾನವನ್ನು ಜರ್ಮನಿಯ ಮೇಲೆ ಹೊರಿಸಿದರು. ಫಲಿತಾಂಶವಾಗಿ, ಕೆಲವು ವರ್ಷಗಳ ತನಕ ಅತಿರೇಕ ಸಂಕಟದಿಂದ ತತ್ತರಿಸಿದ ಬಳಿಕ, ಜರ್ಮನಿಯು ಅಡಾಲ್ಫ್ ಹಿಟ್ಲರನ ಉದಯಕ್ಕೆ ಪಕ್ವಗೊಂಡಿತು. ಅವನು 1933 ರಲ್ಲಿ ಪರಮಾಧಿಪತ್ಯ ಪಡೆದನು ಮತ್ತು ಯೇಸು ಕ್ರಿಸ್ತನ ಅಭಿಷಿಕ್ತ ಸಹೋದರರಿಂದ ಪ್ರತಿನಿಧಿಸಲ್ಪಟ್ಟ “ಪರಿಶುದ್ಧ ಒಡಂಬಡಿಕೆಯ” ವಿರುದ್ಧ ಆ ಕೂಡಲೆ ಒಂದು ಕ್ರೂರ ಆಕ್ರಮಣವನ್ನು ಪ್ರಯೋಗಿಸಿದನು. ಇದರಲ್ಲಿ ಅವನು, ಅವರಲ್ಲನೇಕರನ್ನು ಕ್ರೂರವಾಗಿ ಹಿಂಸಿಸುತ್ತಾ, ಈ ನಿಷ್ಠಾವಂತ ಕ್ರೈಸ್ತರ ವಿರುದ್ಧವಾಗಿ ಪರಿಣಾಮಕಾರಿಯಾಗಿ ಕ್ರಿಯೆಗೈದನು.
10. ಬೆಂಬಲವನ್ನು ಹುಡುಕುತ್ತಾ, ಹಿಟ್ಲರನು ಯಾರ ಮೈತ್ರಿಯನ್ನು ಕೋರಿದನು, ಮತ್ತು ಯಾವ ಫಲಿತಾಂಶಗಳೊಂದಿಗೆ?
10 ಹಿಟ್ಲರನು ಆರ್ಥಿಕ ಮತ್ತು ರಾಯಭಾರ ನಿರ್ವಹಣದ ಸಾಫಲ್ಯದಲ್ಲೂ ಆನಂದಿಸಿ, ಆ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ಕ್ರಿಯೆಗೈದನು. ಕೆಲವೇ ವರ್ಷಗಳಲ್ಲಿ, ಅವನು ಜರ್ಮನಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಆಡಳಿತವನ್ನಾಗಿ ಮಾಡಿದನು, ಈ ಪ್ರಯತ್ನದಲ್ಲಿ ಅವನಿಗೆ “ಪರಿಶುದ್ಧ ಒಡಂಬಡಿಕೆ ತೊರೆದವರು” ನೆರವಾದರು. ಅವರು ಯಾರಾಗಿದ್ದರು? ದೇವರೊಂದಿಗೆ ಒಡಂಬಡಿಕೆಯ ಸಂಬಂಧದವರೆಂದು ವಾದಿಸಿದರೂ ಬಹಳ ಮುಂಚಿನಿಂದಲೂ ಯೇಸು ಕ್ರಿಸ್ತನ ಹಿಂಬಾಲಕರಾಗಿರುವುದನ್ನು ಬಿಟ್ಟುಬಿಟ್ಟಿದ್ದ ಕ್ರೈಸ್ತಪ್ರಪಂಚದ ಮುಖಂಡರೆಂಬದು ವ್ಯಕ್ತ. ಬೆಂಬಲಕ್ಕಾಗಿ “ಪರಿಶುದ್ಧ ಒಡಂಬಡಿಕೆ ತೊರೆದವರನ್ನು” ಹಿಟ್ಲರನು ಸಾಫಲ್ಯದಿಂದ ಕೇಳಿಕೊಂಡನು. ರೋಮ್ನ ಪೋಪ್ಗುರುವು ಅವನೊಂದಿಗೆ ಒಂದು ಕರಾರನ್ನು ಮಾಡಿಕೊಂಡರು, ಮತ್ತು ಜರ್ಮನಿಯ ರೋಮನ್ ಕ್ಯಾತೊಲಿಕ್ ಚರ್ಚ್ ಹಾಗೂ ಪ್ರಾಟೆಸ್ಟಂಟ್ ಚರ್ಚ್, ಅವನ 12-ವರ್ಷದ ಭೀಕರ ಆಳಿಕೆಯಲ್ಲೆಲ್ಲಾ ಹಿಟ್ಲರನನ್ನು ಬೆಂಬಲಿಸಿದವು.
11. ಉತ್ತರದ ರಾಜನು “ಪವಿತ್ರಸ್ಥಾನವನ್ನು ಹೊಲೆಗೆಡಿಸಿ”ದ್ದೂ “ನಿತ್ಯ ವೈಶಿಷ್ಟ್ಯವನ್ನು ನೀಗಿಸಿ”ದ್ದೂ ಹೇಗೆ?
11 ಹಿಟ್ಲರನು ಎಷ್ಟು ಯಶಸ್ವಿಯಾದನೆಂದರೆ, ದೇವದೂತನು ಸರಿಯಾಗಿಯೇ ಮುಂತಿಳಿಸಿದ ಪ್ರಕಾರ ಅವನು ಯುದ್ಧಕ್ಕೆ ಹೊರಟನು. “ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯ [ಪವಿತ್ರಸ್ಥಾನ, NW] ವನ್ನು ಹೊಲೆಗೆಡಿಸಿ ನಿತ್ಯಹೋಮವನ್ನು [ನಿತ್ಯ ವೈಶಿಷ್ಟ್ಯವನ್ನು, NW] ನೀಗಿ” ಸುವುದು. (ದಾನಿಯೇಲ 11:31ಎ) ಪುರಾತನ ಇಸ್ರಾಯೇಲಿನಲ್ಲಿ ಪವಿತ್ರಸ್ಥಾನವು ಯೆರೂಸಲೇಮಿನ ದೇವಾಲಯದ ಒಂದು ಭಾಗವಾಗಿತ್ತು. ಆದರೆ, ಯೆಹೂದ್ಯರು ಯೇಸುವನ್ನು ತಿರಸ್ಕರಿಸಿದಾಗ, ಯೆಹೋವನು ಅವರನ್ನು ಮತ್ತು ಅವರ ಆಲಯವನ್ನು ತಿರಸ್ಕರಿಸಿದನು. (ಮತ್ತಾಯ 23:37–24:2) ಒಂದನೆಯ ಶತಮಾನದಿಂದ, ಯೆಹೋವನ ಆಲಯವು ಕಾರ್ಯತಃ ಆತ್ಮಿಕ ಆಲಯವಾಗಿರುತ್ತದೆ, ಅದರ ಅತಿ ಪವಿತ್ರಸ್ಥಾನವು ಪರಲೋಕದಲ್ಲಿದೆ, ಮತ್ತು ಮಹಾ ಯಾಜಕನಾದ ಯೇಸುವಿನ ಅಭಿಷಿಕ್ತ ಸಹೋದರರು ಅದರ ಆತ್ಮಿಕ ಅಂಗಣವಾದ ಭೂಮಿಯ ಮೇಲೆ ಸೇವೆ ಸಲ್ಲಿಸುತ್ತಾರೆ. ಇಸವಿ 1930 ರುಗಳಲ್ಲಿ, ಮಹಾ ಸಮೂಹದವರು ಅಭಿಷಿಕ್ತ ಉಳಿಕೆಯವರ ಜೊತೆಯಲ್ಲಿ ಆರಾಧನೆ ನಡಿಸಿರುತ್ತಾರೆ; ಆದಕಾರಣ, ‘ದೇವರ ಆಲಯದಲ್ಲಿ’ ಅವರು ಸೇವೆಮಾಡುವವರಾಗಿದ್ದಾರೆ ಎಂದು ಹೇಳಲ್ಪಟ್ಟಿದ್ದಾರೆ. (ಪ್ರಕಟನೆ 7:9, 15; 11:1, 2; ಇಬ್ರಿಯ 9:11, 12, 24) ಉತ್ತರದ ರಾಜನು ಪ್ರಭುತ್ವ ನಡಿಸುವ ದೇಶಗಳಲ್ಲಿ ಅಭಿಷಿಕ್ತ ಉಳಿಕೆಯವರ ಮತ್ತು ಅವರ ಸಂಗಡಿಗರ ಮೇಲೆ ಪಟ್ಟುಬಿಡದ ಹಿಂಸೆಯ ಮೂಲಕ ಆಲಯದ ಐಹಿಕ ಅಂಗಣವು ಹೊಲೆಮಾಡಲ್ಪಟ್ಟಿತು. ಹಿಂಸೆಯು ಎಷ್ಟು ಉಗ್ರವಾಗಿತ್ತೆಂದರೆ ನಿತ್ಯ ವೈಶಿಷ್ಟ್ಯವಾದ—ಯೆಹೋವನ ನಾಮದ ಸ್ತುತಿಯ ಬಹಿರಂಗ ಯಜ್ಞವು—ನೀಗಿಸಲ್ಪಟ್ಟಿತು. (ಇಬ್ರಿಯ 13:15) ಆದರೂ, ಭೀಕರ ಹಿಂಸೆಯ ಮಧ್ಯೆಯೂ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು “ಬೇರೆ ಕುರಿಗಳ” ಜೊತೆಯಲ್ಲಿ, ಭೂಗತವಾಗಿ ಕಾರ್ಯನಡಿಸುವುದನ್ನು ಮುಂದುವರಿಸಿದರೆಂದು ಇತಿಹಾಸವು ತೋರಿಸುತ್ತದೆ.—ಯೋಹಾನ 10:16.
“ಅಸಹ್ಯವಸ್ತು”
12, 13. “ಅಸಹ್ಯ ವಸ್ತು” ಯಾವುದು, ಮತ್ತು—ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ ಮುನ್ನೋಡಲ್ಪಟ್ಟಂತೆ—ಅದು ಪುನರ್ಸ್ಥಾಪಿಸಲ್ಪಟ್ಟದ್ದು ಯಾವಾಗ ಮತ್ತು ಹೇಗೆ?
12 ಎರಡನೆಯ ಲೋಕ ಯುದ್ಧದ ಅಂತ್ಯವು ಸಮೀಪವಾದಾಗ, ಇನ್ನೊಂದು ವಿಕಸನವು ಉಂಟಾಯಿತು. “ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವದು.” (ದಾನಿಯೇಲ 11:31ಬಿ) ಯೇಸು ಸಹ ತಿಳಿಸಿರುವ ಈ “ಅಸಹ್ಯವಸ್ತುವು,” ಪ್ರಕಟನೆಗನುಸಾರ, ಅಧೋಲೋಕಕ್ಕಿಳಿದ ರಕ್ತವರ್ಣದ ಮೃಗವಾದ ಜನಾಂಗ ಸಂಘವಾಗಿ ಈವಾಗಲೇ ಅಂಗೀಕರಿಸಲ್ಪಟ್ಟಿತ್ತು. (ಮತ್ತಾಯ 24:15; ಪ್ರಕಟನೆ 17:8; ನೋಡಿರಿ ಲೈಟ್, ಎರಡನೆಯ ಪುಸ್ತಕ, ಪುಟ 94.) ಎರಡನೆಯ ಲೋಕ ಯುದ್ಧವು ಹೊರಹೊಮ್ಮಿದಾಗ ಅದು ಅಧೋಲೋಕಕ್ಕಿಳಿಯಿತು. ಆದರೂ, ಯೆಹೋವನ ಸಾಕ್ಷಿಗಳ 1942ರ ನ್ಯೂ ವರ್ಲ್ಡ್ ತೀಯಾಕ್ರಟಿಕ್ ಸಮ್ಮೇಳನದಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೂರನೆಯ ಅಧ್ಯಕ್ಷರಾದ ನೇತನ್ ಎಚ್. ನಾರ್ರವರು ಪ್ರಕಟನೆ 17 ನೆಯ ಪ್ರವಾದನೆಯನ್ನು ಚರ್ಚಿಸಿದರು ಮತ್ತು ಮೃಗವು ಅಧೋಲೋಕದಿಂದ ಪುನಃ ಏರಿಬರುವುದೆಂಬ ಎಚ್ಚರಿಕೆಯನ್ನು ಕೊಟ್ಟರು.
13 ಅವರ ಮಾತುಗಳ ಸತ್ಯತೆಯನ್ನು ಇತಿಹಾಸವು ದೃಢೀಕರಿಸಿತು. ಆಗಸ್ಟ್ ಮತ್ತು ಅಕ್ಟೋಬರ 1944ರ ನಡುವೆ, ಅಮೆರಿಕದ ಡಂಬರ್ಸನ್ ಓಕ್ಸ್ನಲ್ಲಿ, ಯಾವುದು ಸಂಯುಕ್ತ ರಾಷ್ಟ್ರ ಎಂದು ಕರೆಯಲ್ಪಡಲಿತ್ತೋ ಅದರ ಸಂಘಸ್ಥಾಪನೆಯ ಕಾರ್ಯವು ತೊಡಗಿತ್ತು. ಹಿಂದಿನ ಸೋವಿಯೆಟ್ ಒಕ್ಕೂಟವೂ ಸೇರಿ, 51 ಜನಾಂಗಗಳಿಂದ ಆ ಸಂಘಸ್ಥಾಪನೆಯು ಸ್ವೀಕರಿಸಲ್ಪಟ್ಟಿತು, ಮತ್ತು ಅಕ್ಟೋಬರ 24, 1945 ರಲ್ಲಿ ಅದು ಜಾರಿಗೆ ಬಂದಾಗ, ಕಾರ್ಯತಃ ಮೃತ ಜನಾಂಗ ಸಂಘವು ಅಧೋಲೋಕದಿಂದ ಏರಿಬಂತು.
14. ಉತ್ತರದ ರಾಜನ ಗುರುತು ಬದಲಾದದ್ದು ಯಾವಾಗ ಮತ್ತು ಹೇಗೆ?
14 ಎರಡೂ ಲೋಕ ಯುದ್ಧಗಳ ಸಮಯದಲ್ಲಿ ಜರ್ಮನಿಯು ದಕ್ಷಿಣದ ರಾಜನ ಮುಖ್ಯ ಶತ್ರುವಾಗಿತ್ತು. ಎರಡನೆಯ ಲೋಕ ಯುದ್ಧದ ಅನಂತರ, ಜರ್ಮನಿಯ ಭಾಗವು ದಕ್ಷಿಣದ ರಾಜನ ಸ್ನೇಹಬೆಳಸಲು ಪುನಃ ಆಲಿಪ್ತಗೊಂಡಿತು. ಆದರೆ ಜರ್ಮನಿಯ ಇನ್ನೊಂದು ಭಾಗವು ಈಗ ಇನ್ನೊಂದು ಪ್ರಬಲ ಸಾಮ್ರಾಜ್ಯದೊಂದಿಗೆ ಜತೆಗೂಡಿತು. ಈಗ ಜರ್ಮನಿಯ ಭಾಗವು ಒಳಗೂಡಿದ ಆ ಕಮ್ಯೂನಿಸ್ಟ್ ಬಣವು ಆಂಗ್ಲೋ-ಅಮೆರಿಕನ್ ಬೀಗತನಕ್ಕೆ ತೀವ್ರ ವಿರೋಧದಲ್ಲಿ ನಿಂತಿತು, ಮತ್ತು ಎರಡೂ ರಾಜರುಗಳ ನಡುವಣ ಪ್ರತಿಸ್ಪರ್ಧೆಯು ಒಂದು ಶೀತಲ ಯುದ್ಧವಾಗಿ ಪರಿಣಮಿಸಿತು.—ನೋಡಿರಿ “ಯುವರ್ ವಿಲ್ ಬಿ ಡನ್ ಆನ್ ಅರ್ಥ್,” ಪುಟಗಳು 264-84.
ರಾಜನು ಮತ್ತು ಒಡಂಬಡಿಕೆ
15. ‘ಒಡಂಬಡಿಕೆ ದ್ರೋಹಿಗಳು’ ಯಾರು, ಮತ್ತು ಉತ್ತರದ ರಾಜನೊಂದಿಗೆ ಯಾವ ಸಂಬಂಧವು ಅವರಿಗಿತ್ತು?
15 ದೇವದೂತನು ಈಗ ಹೇಳುವುದು: “ನಿಬಂಧನದ್ರೋಹಿಗಳು [ಒಡಂಬಡಿಕೆ ದ್ರೋಹಿಗಳು, NW] ಅವನ ನಯನುಡಿಗಳಿಂದ ಕೆಟ್ಟುಹೋಗುವರು.” (ದಾನಿಯೇಲ 11:32ಎ) ಈ ಒಡಂಬಡಿಕೆ ದ್ರೋಹಿಗಳು ಯಾರು? ಪುನಃ, ಕ್ರೈಸ್ತರಾಗಿದ್ದೇವೆಂದು ಹೇಳಿಕೊಂಡರೂ ತಮ್ಮ ಕ್ರಿಯೆಗಳಿಂದ ಕ್ರೈಸ್ತತ್ವದ ಹೆಸರನ್ನೇ ಹೊಲೆಮಾಡುವ ಕ್ರೈಸ್ತಪ್ರಪಂಚದ ಮುಖಂಡರೇ ಅವರಾಗಿರಬಲ್ಲರು. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, “ಸೋವಿಯೆಟ್ ಸರಕಾರವು ತಾಯಿನಾಡಿನ ರಕ್ಷಣೆಗಾಗಿ ಸಾಮಗ್ರಿಗಳನ್ನು ಮತ್ತು ಚರ್ಚುಗಳ ನೈತಿಕ ಬೆಂಬಲವನ್ನು ಪಡೆಯಲು ಪ್ರಯತ್ನವನ್ನು ಮಾಡಿತು.” (ರಿಲಿಜನ್ ಇನ್ ದ ಸೋವಿಯೆಟ್ ಯೂನಿಯನ್, ವಾಲರ್ಟ್ ಕೊಲಾರ್ಸ್ರಿಂದ.) ಯುದ್ಧದ ಅನಂತರ, ಈಗ ಉತ್ತರದ ರಾಜನ ಆಡಳಿತದ ನಾಸ್ತಿಕ ರಾಜನೀತಿಯ ನಡುವೆಯೂ, ಚರ್ಚ್ ಮುಖಂಡರು ಆ ಮಿತ್ರತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರು.b ಹೀಗೆ, ಕ್ರೈಸ್ತಪ್ರಪಂಚವು ಎಂದಿಗಿಂತಲೂ ಹೆಚ್ಚಾಗಿ ಈ ಲೋಕದ ಭಾಗವಾಗಿ ಪರಿಣಮಿಸಿತು—ಯೆಹೋವನ ದೃಷ್ಟಿಯಲ್ಲಿ ಒಂದು ಅಸಹ್ಯಕರವಾದ ಧರ್ಮಭ್ರಷ್ಟತೆಯಾಯಿತು.—ಯೋಹಾನ 17:14; ಯಾಕೋಬ 4:4.
16, 17. “ಜ್ಞಾನಿಗಳು” ಯಾರು, ಮತ್ತು ಉತ್ತರದ ರಾಜನ ಕೈಕೆಳಗೆ ಅವರು ಏನನ್ನು ಅನುಭವಿಸಿದರು?
16 ನಿಜ ಕ್ರೈಸ್ತರ ಕುರಿತಾದರೂ ಏನು? “ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು. ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ ಅವರು ಬಹು ದಿವಸ ಕತ್ತಿಬೆಂಕಿಸೆರೆಸೂರೆಗಳಿಗೆ ಸಿಕ್ಕಿಬೀಳುತ್ತಿರುವರು.” (ದಾನಿಯೇಲ 11:32ಬಿ, 33) ಉತ್ತರದ ರಾಜನ ಕೆಳಗೆ ಜೀವಿಸುವ ಕ್ರೈಸ್ತರು, ಯೋಗ್ಯವಾಗಿಯೇ ತಮ್ಮ “ಮೇಲಿರುವ ಅಧಿಕಾರಿಗಳಿಗೆ ಅಧೀನ” ರಾಗಿರುವುದಾದರೂ, ಈ ಲೋಕದ ಒಂದು ಭಾಗವಾಗಿ ಇರುವುದಿಲ್ಲ. (ರೋಮಾಪುರ 13:1; ಯೋಹಾನ 18:36) ಕೈಸರನದನ್ನು ಕೈಸರನಿಗೆ ಕೊಡಲು ಜಾಗ್ರತೆಯುಳ್ಳವರಾಗಿ, ಅವರು “ದೇವರದನ್ನು ದೇವರಿಗೆ” ಸಹ ಕೊಟ್ಟಿದ್ದಾರೆ. (ಮತ್ತಾಯ 22:21) ಇದರಿಂದಾಗಿ, ಅವರ ಸಮಗ್ರತೆಯು ಪರೀಕೆಗ್ಷೆ ಒಳಗಾಗಿತ್ತು.—2 ತಿಮೊಥೆಯ 3:12.
17 ಫಲಿತಾಂಶ? ಅವರು ‘ಕೃತಾರ್ಥರಾದರು’ ಮತ್ತು ‘ಸಿಕ್ಕಿಬಿದ್ದರು’ ಎರಡೂ. ಅವರು ಸಿಕ್ಕಿಬಿದ್ದದ್ದು ಹೇಗಂದರೆ ಹಿಂಸೆಗೊಳಗಾಗಿ ತೀವ್ರ ಕಷ್ಟವನ್ನನುಭವಿಸಿದ ವಿಷಯದಲ್ಲಿ, ಕೆಲವರು ಕೊಲ್ಲಲ್ಪಟ್ಟರು ಸಹ. ಆದರೆ ಅವರು ಕೃತಾರ್ಥರಾದದ್ದು ಹೆಚ್ಚು ಸಮಯದ ವರೆಗೆ ನಂಬಿಗಸ್ತರಾಗಿ ಉಳಿದ ಮೂಲಕವೇ. ಹೌದು, ಯೇಸು ಲೋಕವನ್ನು ಜಯಿಸಿದ ಹಾಗೆಯೇ, ಅವರು ಲೋಕವನ್ನು ಜಯಿಸಿದರು. (ಯೋಹಾನ 16:33) ಅಷ್ಟಲ್ಲದೆ, ಸೆರೆಮನೆಯಲ್ಲಿ ಅಥವಾ ಕೂಟಶಿಬಿರಗಳಲ್ಲಿ ತಾವು ಹಾಕಲ್ಪಟ್ಟರೂ ಕೂಡ, ಅವರು ಸಾರುವುದನ್ನು ಎಂದೂ ನಿಲ್ಲಿಸಲಿಲ್ಲ. ಹಾಗೆ ಮಾಡಿದುದರಲ್ಲಿ ಅವರು, ‘ಅನೇಕರಿಗೆ ವಿವೇಕ ಹೇಳಿದರು.’ ಹಿಂಸೆಯ ಮಧ್ಯೆಯೂ, ಉತ್ತರದ ರಾಜನಿಂದ ಆಳಲ್ಪಟ್ಟ ಹೆಚ್ಚಿನ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳ ಸಂಖ್ಯೆಯು ವೃದ್ಧಿಗೊಂಡಿತು. ಆ ದೇಶಗಳಲ್ಲಿ “ಮಹಾ ಸಮೂಹದ” ಒಂದು ಸದಾ ವೃದ್ಧಿಸುತ್ತಿರುವ ಭಾಗವು ತೋರಿಬಂದಿರುವುದಕ್ಕಾಗಿ, ಆ “ಜ್ಞಾನಿಗಳ” ನಂಬಿಗಸ್ತಿಕೆಗಾಗಿ ಉಪಕಾರಗಳು.—ಪ್ರಕಟನೆ 7:9-14.
18. ಉತ್ತರದ ರಾಜನ ಕೈಕೆಳಗೆ ಜೀವಿಸಿದ ಅಭಿಷಿಕ್ತ ಉಳಿಕೆಯವರಿಗೆ ದೊರೆತ “ಸ್ವಲ್ಪ ಸಹಾಯ” ಯಾವುದು?
18 ದೇವರ ಜನರ ಹಿಂಸೆಯ ಕುರಿತು ಮಾತಾಡುತ್ತಾ ದೇವದೂತನು ಅಂದದ್ದು: “ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು.” (ದಾನಿಯೇಲ 11:34ಎ) ಇದು ಸಂಭವಿಸಿದ್ದು ಹೇಗೆ? ಒಂದನೆಯದಾಗಿ, ಎರಡನೆಯ ಲೋಕ ಯುದ್ಧದಲ್ಲಿ ದಕ್ಷಿಣದ ರಾಜನ ವಿಜಯವು, ಪ್ರತಿಸ್ಪರ್ಧಿ ಉತ್ತರದ ರಾಜನ ಆಧಿಪತ್ಯದ ಕೆಳಗೆ ಜೀವಿಸುತ್ತಿದ್ದ ಕ್ರೈಸ್ತರಿಗೆ ಮಹಾ ಪರಿಹಾರವನ್ನು ಕೊಟ್ಟಿತು. (ಹೋಲಿಸಿರಿ ಪ್ರಕಟನೆ 12:15, 16.) ಅನಂತರ, ಉತ್ತರ ರಾಜನ ವಾರಸುದಾರ ರಾಜನಿಂದ ಹಿಂಸಿಸಲ್ಪಟ್ಟವರು ಸಹ ಆಗಿಂದಾಗ್ಗೆ ಉಪಶಮನವನ್ನು ಅನುಭವಿಸಿದರು, ಮತ್ತು ಶೀತಲ ಯುದ್ಧವು ಶಿಥಿಲಗೊಂಡಂತೆ, ನಂಬಿಗಸ್ತ ಕ್ರೈಸ್ತರು ಯಾವ ಬೆದರಿಕೆಯೂ ಅಲ್ಲವೆಂದು ಅನೇಕ ರಾಜಕೀಯ ಮುಖಂಡರು ಅರಿತುಕೊಂಡರು ಮತ್ತು ಹೀಗೆ ನ್ಯಾಯಬದ್ಧ ಮಾನ್ಯತೆಯನ್ನು ಅವರಿಗೆ ಅನುಗ್ರಹಿಸಿದರು.c ಮಹಾ ಸಮೂಹದ ಉಕ್ಕೇರುತ್ತಾ ಬಂದ ಸಂಖ್ಯೆಯಿಂದಲೂ ಮಹಾ ಸಹಾಯವು ಬಂದಿದೆ, ಅವರು ಅಭಿಷಿಕ್ತ ಜನರ ನಂಬಿಗಸ್ತ ಸಾರುವಿಕೆಗೆ ಪ್ರತಿಕ್ರಿಯೆ ತೋರಿಸಿ, ಮತ್ತಾಯ 25:34-40 ರಲ್ಲಿ ವರ್ಣಿಸಲಾಗಿರುವ ಪ್ರಕಾರ ಅವರಿಗೆ ಸಹಾಯ ಮಾಡಿದ್ದಾರೆ.
ದೇವರ ಜನರಿಗಾಗಿ ಒಂದು ಶುದ್ಧೀಕರಣ
19. (ಎ) ಕೆಲವರು “ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿ” ಕೊಂಡದ್ದು ಹೇಗೆ? (ಬಿ) “ಅಂತ್ಯಕಾಲದ ವರೆಗೆ” ಎಂಬ ಹೇಳಿಕೆಯ ಅರ್ಥವೇನು? (ಪಾದಟಿಪ್ಪಣಿ ನೋಡಿ.)
19 ಈ ಸಮಯದಲ್ಲಿ ದೇವರನ್ನು ಸೇವಿಸುವುದರಲ್ಲಿ ಆಸಕ್ತಿಯನ್ನು ತೋರಿಸಿದವರಲ್ಲಿ ಎಲ್ಲರೂ ಸದುದ್ದೇಶವುಳ್ಳವರಾಗಿರಲಿಲ್ಲ. ದೇವದೂತನು ಎಚ್ಚರಿಸಿದ್ದು: “ಆ ಮೇಲೆ ಬಹುಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು. ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದ ವರೆಗೆ ಬೀಳುತ್ತಿರುವರು; ಅದರಿಂದ ಜನರು ಶೋಧಿಸಲ್ಪಟ್ಟು ಶುದ್ಧಿಹೊಂದಿ ಶುಭ್ರರಾಗುವರು; ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು.”d (ದಾನಿಯೇಲ 11:34ಬಿ, 35) ಕೆಲವರು ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದರು ಆದರೆ ದೇವರಿಗೆ ನಿಜ ಸಮರ್ಪಣೆಯನ್ನು ಮಾಡಿಕೊಳ್ಳಲು ಮನಸ್ಸುಮಾಡಲಿಲ್ಲ. ಸುವಾರ್ತೆಯನ್ನು ಸ್ವೀಕರಿಸುವಂತೆ ತೋರಿಬಂದ ಇತರರು ನಿಜವಾಗಿ ಅಧಿಕಾರಿಗಳ ಬೇಹುಕಾರರಾಗಿದ್ದರು. ಒಂದು ದೇಶದಿಂದ ಬಂದ ವರದಿಯು ಓದುವುದು: “ಯಾವುದಕ್ಕೂ ಹೇಸದ ಈ ಕೆಲವು ವ್ಯಕ್ತಿಗಳು ಕರ್ತನ ಸಂಸ್ಥೆಯೊಳಗೆ ನುಸುಳಿದ ಕಂಠೋಕ್ತವಾಗಿ ಹೇಳುವ ಕಮ್ಯೂನಿಸ್ಟರಾಗಿದ್ದು, ಹುರುಪಿನ ಮಹಾ ಪ್ರದರ್ಶನವನ್ನು ತೋರಿಸಿದ್ದರು, ಉನ್ನತ ಸೇವಾ ಸ್ಥಾನಗಳಿಗೆ ನೇಮಿಸಲ್ಪಟ್ಟವರೂ ಆಗಿದ್ದರು.”
20. ನುಸುಳಿಕೊಂಡು ಬಂದ ಕಪಟಿಗಳ ಕಾರಣ ಕೆಲವು ನಂಬಿಗಸ್ತ ಕ್ರೈಸ್ತರು “ಬೀಳು” ವಂತೆ ಯೆಹೋವನು ಅನುಮತಿಸಿದ್ದೇಕೆ?
20 ಒಳಕ್ಕೆ ನುಸುಳಿಕೊಂಡು ಬಂದವರು ಕೆಲವು ನಂಬಿಗಸ್ತರನ್ನು ಅಧಿಕಾರಿಗಳ ಕೈಯೊಳಗೆ ಬೀಳುವಂತೆ ಮಾಡಿದರು. ಅಂಥ ವಿಷಯಗಳು ಸಂಭವಿಸುವಂತೆ ಯೆಹೋವನು ಬಿಟ್ಟದ್ದೇಕೆ? ಶೋಧಿಸಲ್ಪಟ್ಟು, ಶುದ್ದಿಹೊಂದುವುದಕ್ಕಾಗಿಯೇ. ಯೇಸು ಹೇಗೆ “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನೋ” ಹಾಗೆಯೇ ಈ ನಂಬಿಗಸ್ತ ಜನರು ತಮ್ಮ ನಂಬಿಕೆಯ ಪರಿಶೋಧನೆಯಿಂದ ತಾಳ್ಮೆಯನ್ನು ಕಲಿತುಕೊಂಡರು. (ಇಬ್ರಿಯ 5:8; ಯಾಕೋಬ 1:2, 3; ಹೋಲಿಸಿರಿ ಮಲಾಕಿಯ 3:3.) ಹೀಗೆ ಅವರು ‘ಶೋಧಿಸಲ್ಪಟ್ಟು ಶುದ್ಧಿಹೊಂದಿ ಶುಭ್ರರಾಗು’ ತ್ತಾರೆ. ಅವರ ತಾಳ್ಮೆಗಾಗಿ ಪ್ರತಿಫಲವನ್ನೀಯುವ ಕ್ಲುಪ್ತಕಾಲವು ಬರುವಾಗ, ಅಂತಹ ನಂಬಿಗಸ್ತರಿಗಾಗಿ ಮಹಾ ಉಲ್ಲಾಸವು ಕಾದಿರುತ್ತದೆ. ದಾನಿಯೇಲನ ಪ್ರವಾದನೆಯ ಕುರಿತಾಗಿ ಹೆಚ್ಚನ್ನು ನಾವು ಚರ್ಚಿಸುವಾಗ ಇದು ಕಂಡುಬರುವುದು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1958 ರಲ್ಲಿ ಇಂಗ್ಲಿಷಿನಲ್ಲಿ ಪ್ರಕಾಶಿಸಲ್ಪಟ್ಟು, ಯೆಹೋವನ ಸಾಕ್ಷಿಗಳ “ದೈವಿಕ ಚಿತ್ತ” ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲ್ಪಟ್ಟಿತು.
b ಟೊರಂಟೊ ಸ್ಟಾರ್ ನಿಂದ ತೆಗೆದ ಒಂದು ಲೇಖನವು ಹೀಗಂದದ್ದನ್ನು ನವಂಬರ 1992ರ ವರ್ಲ್ಡ್ ಪ್ರೆಸ್ ರಿವ್ಯೂ ಪ್ರಕಟಿಸಿತ್ತು: “ಕಳೆದ ಅನೇಕ ವರ್ಷಗಳಲ್ಲಿ ರಷ್ಯನರು, ತಮ್ಮ ದೇಶದ ಇತಿಹಾಸದ ಕುರಿತಾಗಿ ಹಿಂದೆ ಪ್ರತಿಹೇಳಲಾಗದಿದ್ದ ಕೆಲವಾರು ಭ್ರಮೆಗಳು ನಿಜತ್ವಗಳ ಮುಂದೆ ಪುಡಿಪುಡಿಯಾಗುವುದನ್ನು ಕಂಡಿದ್ದಾರೆ. ಆದರೆ, ಕಮ್ಯೂನಿಸ್ಟ್ ಆಳಿಕೆಯೊಂದಿಗೆ ಚರ್ಚ್ ಸಹಕಾರದ ಕುರಿತ ಪ್ರಕಟಗೊಳಿಸುವಿಕೆಗಳು ಅತ್ಯಂತ ಜರ್ಜರಿತಗೊಳಿಸುವ ಹೊಡೆತವನ್ನು ಹಾಕಿವೆ.”
d “ಅಂತ್ಯಕಾಲದ ವರೆಗೆ” ಎಂಬದನ್ನು “ಅಂತ್ಯಕಾಲದ ಸಮಯದಲ್ಲಿ” ಎಂದು ಅರ್ಥಮಾಡ ಸಾಧ್ಯವಿದೆ. ಇಲ್ಲಿ, “ವರೆಗೆ” ಎಂದು ಭಾಷಾಂತರವಾದ ಶಬ್ದವು ದಾನಿಯೇಲ 7:25ರ ಅರ್ಯಾಮಿಕ್ ಮೂಲಪಾಠದಲ್ಲಿ ಕಂಡುಬರುತ್ತದೆ ಮತ್ತು “ಸಮಯದಲ್ಲಿ” ಅಥವಾ “ಸಮಯಕ್ಕಾಗಿ” ಎಂಬರ್ಥವನ್ನು ಅಲ್ಲಿ ಕೊಡುತ್ತದೆ. 2 ಅರಸು 9:22, ಯೋಬ 20:5, ಮತ್ತು ನ್ಯಾಯಸ್ಥಾಪಕರು 3:26ರ ಹೀಬ್ರು ಮೂಲಪಾಠದಲ್ಲಿ ಈ ಶಬ್ದಕ್ಕೆ ಇದೇ ಅರ್ಥವಿದೆ. ಆದರೂ, ದಾನಿಯೇಲ 11:35ರ ಹೆಚ್ಚಿನ ಭಾಷಾಂತರಗಳಲ್ಲಿ ಅದು, “ವರೆಗೆ” ಎಂದು ತರ್ಜುಮೆಯಾಗಿದೆ, ಮತ್ತು ಇದು ಸರಿಯಾದ ತಿಳಿವಳಿಕೆಯಾಗಿದ್ದರೆ, ಆಗ “ಅಂತ್ಯಕಾಲದ” ಅರ್ಥವು ದೇವರ ಜನರ ತಾಳ್ಮೆಯ ಅಂತ್ಯಕಾಲವಾಗಿರಬೇಕು.—ಹೋಲಿಸಿರಿ “ಯುವರ್ ವಿಲ್ ಬಿ ಡನ್ ಆನ್ ಅರ್ಥ್,” ಪುಟ 286.
ನಿಮಗೆ ನೆನಪಿದೆಯೇ?
▫ ದಾನಿಯೇಲನ ಪ್ರವಾದನೆಯ ಹೆಚ್ಚು ಸ್ಪಷ್ಟವಾಗಿದ ತಿಳಿವಳಿಕೆಯನ್ನು ಹೊಂದುವಂತೆ ಇಂದು ನಾವೇಕೆ ನಿರೀಕ್ಷಿಸಬೇಕು?
▫ ಉತ್ತರದ ರಾಜನು ‘ಮತ್ಸರಗೊಂಡು ಪರಿಣಾಮಕಾರಿಯಾಗಿ ಕ್ರಿಯೆಗೈದದ್ದು’ ಹೇಗೆ?
▫ ಆಳು ವರ್ಗದಿಂದ “ಅಸಹ್ಯವಸ್ತು” ವಿನ ಪುನರ್ಗೋಚರವು ಮುನ್ನೋಡಲ್ಪಟ್ಟದ್ದು ಹೇಗೆ?
▫ ಅಭಿಷಿಕ್ತ ಉಳಿಕೆಯವರು ‘ಸಿಕ್ಕಿಬಿದ್ದದ್ದೂ, ಕೃತಾರ್ಥರಾದದ್ದೂ, ಮತ್ತು ಸ್ವಲ್ಪ ಸಹಾಯ ಪಡೆದದ್ದೂ’ ಹೇಗೆ?
[ಪುಟ 15 ರಲ್ಲಿರುವ ಚಿತ್ರ]
ಹಿಟ್ಲರನ ಕೈಕೆಳಗೆ, ಉತ್ತರದ ರಾಜನು ದಕ್ಷಿಣದ ರಾಜನ ಹಸ್ತದಿಂದ 1918 ರಲ್ಲಿ ಪಡೆದ ಸೋಲಿನಿಂದ ಪೂರ್ಣವಾಗಿ ಚೇತರಿಸಿಕೊಂಡನು
[ಪುಟ 16 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚದ ಮುಖಂಡರು ಉತ್ತರದ ರಾಜನೊಂದಿಗೆ ಒಂದು ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದರು
[ಕೃಪೆ]
Zoran/Sipa Press