ಬನ್ನಿರಿ, “ದಿವ್ಯ ಭಯ” ಜಿಲ್ಲಾ ಅಧಿವೇಶನಕ್ಕೆ
ಮೋಶೆಯ ನಿಯಮದ ಕೆಳಗೆ, ಪುರಾತನ ಕಾಲದ ಯೆಹೋವನ ಸೇವಕರು ನಿರ್ದಿಷ್ಟ ಹಬ್ಬಗಳಿಗಾಗಿ ಪ್ರತಿ ವರ್ಷ ಮೂರಾವರ್ತಿ ಕೂಡಿಬರುವಂತೆ ಆವಶ್ಯಪಡಿಸಲ್ಪಟ್ಟಿದ್ದರು. ಇವು ಸಂತೋಷದ ಮತ್ತು ಆತ್ಮಿಕವಾಗಿ ಭಕ್ತಿವೃದ್ಧಿಪಡಿಸುವ ಸಂದರ್ಭಗಳಾಗಿದ್ದವು.—ಧರ್ಮೋಪದೇಶಕಾಂಡ 16:16.
ಅಂತೆಯೇ ಆಧುನಿಕ ಕಾಲದಲ್ಲಿ, ಯೆಹೋವನ ಸೇವಕರು ಪ್ರತಿ ವರ್ಷ ಮೂರು ಬಾರಿ ಕೂಡಿಬರುತ್ತಾರೆ: ವಿಶೇಷ ಸಮ್ಮೇಲನ ದಿನಕ್ಕಾಗಿ, ಎರಡು ದಿನಗಳ ಸರ್ಕಿಟ್ ಸಮ್ಮೇಲನಕ್ಕಾಗಿ, ಮತ್ತು ಮೂರು ಅಥವಾ ನಾಲ್ಕು ದಿನಗಳ ಜಿಲ್ಲಾ ಅಧಿವೇಶನಕ್ಕಾಗಿ. ಇಸವಿ 1994 ರ ಸೇವಾ ವರ್ಷದಲ್ಲಿ, ಯೆಹೋವನ ಸಾಕ್ಷಿಗಳು “ದಿವ್ಯ ಭಯ” ಜಿಲ್ಲಾ ಅಧಿವೇಶನಕ್ಕಾಗಿ ಕೂಡಿಬರಲಿದ್ದಾರೆ.
ದಿವ್ಯ ಭಯದ ಮಹತ್ವದ ಕುರಿತು ದೇವರ ವಾಕ್ಯವು ಯಾವ ಸಂದೇಹವನ್ನೂ ಇಟ್ಟಿರುವುದಿಲ್ಲ. ಆ ರೀತಿಯ ಭಯವು ಅದರಲ್ಲಿ ಸುಮಾರು 200 ಬಾರಿ ತಿಳಿಸಲ್ಪಟ್ಟಿದೆ. ಜ್ಞಾನೋಕ್ತಿ 16:6 (NW) ರಿಂದ ತಿಳಿಯುವ ಪ್ರಕಾರ, ದೇವ ಭಯವು ಒಂದು ಭದ್ರತೆಯಾಗಿದೆ: “ಯೆಹೋವನ ಭಯದಲ್ಲಿ ಒಬ್ಬನು ಕೆಟ್ಟದರಿಂದ ದೂರವಿರುವನು.” ಯಾಕೆ, ದೇವರ ಭಯವೇ ಜ್ಞಾನದ ಆರಂಭವೆಂದು ಕೀರ್ತನೆ 111:10 ರಲ್ಲಿ ನಮಗೆ ಹೇಳಿದೆಯಲ್ಲಾ!
ದಿವ್ಯ ಭಯದ ಎರಡು ರೂಪಗಳಿವೆಯೆಂದು ಹೇಳಬಹುದಾಗಿದೆ. ಒಂದು ವಿಷಯವೇನಂದರೆ, ಅಂಥ ಭಯವು ಪ್ರೀತಿಯಿಂದ ಪ್ರೇರೇಪಿಸಲ್ಪಡುತ್ತದೆ. ದೇವರಿಗಾಗಿ ನಮ್ಮ ಮಹಾ ಪ್ರೀತಿಯ ಕಾರಣ ನಾವು ಆತನನ್ನು ಅಪ್ರಸನ್ನಗೊಳಿಸಲು ಭಯಪಡುತ್ತೇವೆ. (ಜ್ಞಾನೋಕ್ತಿ 27:11) ಮತ್ತು ಪುನಃ, ನಮ್ಮ ಪಾಲಿನ ವಿವೇಕವು ನಮ್ಮಲ್ಲಿ ದೇವ ಭಯವನ್ನು ತುಂಬಿಸಲು ಸಹಾಯ ಮಾಡುವುದು, ಯಾಕಂದರೆ ಕೆಟ್ಟತನವನ್ನು ಅಭ್ಯಾಸಿಸುವವರೆಲ್ಲರಿಗೆ ದೇವರು “ದಹಿಸುವ ಅಗ್ನಿಯಾಗಿದ್ದಾನೆ” ಎಂದೂ ನಮಗೆ ಗೊತ್ತಿದೆ.—ಇಬ್ರಿಯ 12:29.
ನಮ್ಮ “ದಿವ್ಯ ಭಯ” ಜಿಲ್ಲಾ ಅಧಿವೇಶನದಲ್ಲಿ, ದೇವ ಭಯದಲ್ಲಿ ಬೆಳೆಯಲು ಬಹಳಷ್ಟು ಹಿತೋಪದೇಶ ಮತ್ತು ಪ್ರೋತ್ಸಾಹನೆಯನ್ನು ನಾವು ಪಡೆಯಲಿದ್ದೇವೆ. ಅಂಥ ಬೋಧನೆಯು ಭಾಷಣಗಳು, ಪ್ರತ್ಯಕ್ಷಾಭಿನಯಗಳು ಮತ್ತು ಒಂದು ಡ್ರಾಮದ ಮೂಲಕ ಹಾಗೂ ಅನುಭವಗಳನ್ನು ತಿಳಿಸುವ ಮೂಲಕ ನೀಡಲ್ಪಡಲಿದೆ.
ಪುರಾತನ ಇಸ್ರಾಯೇಲ್ಯರು ಸಹ ತಮ್ಮ ಸಮ್ಮೇಲನಗಳಿಗೆ ಬರಿಗೈಯಲ್ಲಿ ಬರಬಾರದೆಂದು ಆಜ್ಞಾಪಿಸಲ್ಪಟ್ಟಂತೆ, ನಾವು ನಮ್ಮ ಅಧಿವೇಶನಗಳ ಆನಂದ ಮತ್ತು ಯಶಸ್ಸಿಗಾಗಿ ನಮ್ಮ ಪಾಲನ್ನು ದಾನಮಾಡಲು ಬಯಸಬೇಕು. (ಧರ್ಮೋಪದೇಶಕಾಂಡ 16:17) ಯೆಹೋವನ ಮೇಜಿಗೆ ಗೌರವವನ್ನು ಪ್ರದರ್ಶಿಸುವ ಮೂಲಕ ನಾವಿದನ್ನು ಮಾಡಶಕ್ತರಾಗಿದ್ದೇವೆ. ಹೇಗೆ? ಸಮಯಕ್ಕೆ ಸರಿಯಾಗಿ ಬರುವ ಮೂಲಕ, ವೇದಿಕೆಯಿಂದ ಹೇಳಲ್ಪಡುವ ವಿಷಯಗಳಿಗೆ ಏಕಾಗ್ರ ಗಮನವನ್ನು ಕೊಡುವ ಮೂಲಕ, ಸಂಗೀತಗಳನ್ನು ಹಾಡುವುದರಲ್ಲಿ ಹೃದಯಪೂರ್ವಕವಾಗಿ ಜತೆಗೂಡುವ ಮೂಲಕ, ಮತ್ತು ಕಾರ್ಯಕ್ರಮದ ಸಮಯದಲ್ಲಿ ಸಂಭಾಷಣೆಯಲ್ಲಿ ತೊಡಗದೆ ಅಥವಾ ಆಚೀಚೆ ಅಡ್ಡಾಡದೆ ಇರುವ ಮೂಲಕ. ನಮ್ಮ ಸ್ವಯಂ ಸೇವೆಗಳನ್ನು ನೀಡಿಕೊಳ್ಳುವ ಮೂಲಕವೂ ನಾವು ನಮ್ಮಿಂದಾದಷ್ಟು ನೆರವನ್ನು ನೀಡಲು ಬಯಸುವೆವು. ಅಧಿವೇಶನ ಸಂಸ್ಥಾಪನೆಯಲ್ಲಿ ಅನೇಕ ವಿಭಾಗಗಳು ಸೇರಿರುತ್ತವೆ, ಅವೆಲ್ಲವುಗಳ ಕೆಲಸಕ್ಕೆ ಸಿಬ್ಬಂದಿಗಳ ಆವಶ್ಯಕತೆ ಇದೆ. ಯೆಹೋವನು ನಮ್ಮನ್ನು ಆಶೀರ್ವದಿಸಿರುವಷ್ಟರ ಮಟ್ಟಿಗೆ, ಆರ್ಥಿಕ ಕಾಣಿಕೆಗಳನ್ನು ಕೊಡಲು ಸಹ ನಾವು ಬಯಸುವೆವು.
ಯೆಹೋವನ ಪ್ರತಿಯೊಬ್ಬ ಸೇವಕನು ಶುಕ್ರವಾರ ಬೆಳಿಗ್ಗಿನ ಆರಂಭದ ಸಂಗೀತದಿಂದ ಆದಿತ್ಯವಾರ ಅಪರಾಹ್ನದ ಸಮಾಪ್ತಿ ಪ್ರಾರ್ಥನೆಯ ತನಕ, “ದಿವ್ಯ ಭಯ” ಜಿಲ್ಲಾ ಅಧಿವೇಶನದ ಎಲ್ಲಾ ಮೂರು ದಿನಗಳಿಗೆ ಹಾಜರಿರುವುದಕ್ಕೆ ಈಗಲೇ ಯೋಜನೆಗಳನ್ನು ಮಾಡಲಿ.