ನನ್ನ ಜೀವಿತದಲ್ಲಿ “ಯೆಹೋವನ ಹಸ್ತ”
ಲಾರೆನ್ಸ್ ಥಾಂಪ್ಸನ್ರಿಂದ ಹೇಳಲ್ಪಟ್ಟಂತೆ
ಇಸವಿ 1946ರ ಒಂದು ರಾತ್ರಿ, ನನ್ನ ತಂದೆ ಮತ್ತು ನಾನು ಆಕಾಶದಾಚೆ ನಲಿದಾಡುವ ಉತ್ತರ ಭೂಕಾಂತ ಧ್ರುವಪ್ರಭೆಯನ್ನು ವೀಕ್ಷಿಸುತ್ತಾ, ಕಾರಿನಲ್ಲಿ ಕುಳಿತುಕೊಂಡಿದ್ದೆವು. ಯೆಹೋವನ ಮಹಾ ವೈಭವ ಮತ್ತು ನಮ್ಮ ಸಣ್ಣತನದ ಕುರಿತು ನಾವು ಮಾತಾಡಿದೆವು. ಕೆನಡದಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯವನ್ನು ನಿಷೇಧಿಸಿದಂದಿನಿಂದ ವರುಷಗಳ ಘಟನಾವಳಿಗಳನ್ನು ಮರುಕೊಳಿಸಿಕೊಂಡೆವು. ಆ ಎಲ್ಲಾ ವರುಷಗಳಲ್ಲಿ ಯೆಹೋವನು ತನ್ನ ಜನರನ್ನು ಪರಾಮರಿಸಿದ ಮತ್ತು ಮಾರ್ಗದರ್ಶಿಸಿದ ರೀತಿಯನ್ನು ತಂದೆಯವರು ನನ್ನ ಮೇಲೆ ಅಚ್ಚೊತ್ತಿದರು.
ನಾನು ಕೇವಲ 13 ವರ್ಷದವನಾಗಿದ್ದರೂ ಕೂಡ, ತಂದೆಯವರು ಹೇಳುತ್ತಿದ್ದ ಸತ್ಯವನ್ನು ನಾನು ಗಣ್ಯಮಾಡಲು ಶಕ್ತನಾಗಿದ್ದೆ. ಇನ್ನೂ ಮಾಡಲಿಕ್ಕಿರುವ ಸಾರುವ ಕಾರ್ಯದ ಜರೂರಿ ಮತ್ತು ವ್ಯಾಪ್ತಿಯ ಪ್ರಜ್ಞೆಯನ್ನು ಕೂಡ ಅವರು ನನ್ನ ಮೇಲೆ ಅಚ್ಚೊತ್ತಿದರು. ತಂದೆಯವರು ಅರಣ್ಯಕಾಂಡ 11:23 ಉಲ್ಲೇಖಿಸಿದರು ಮತ್ತು ನಿಜವಾಗಿಯೂ ಯೆಹೋವನ ಹಸ್ತವು ಎಂದೂ ಮೋಟುಗೈಯಲ್ಲ ಎಂದು ನನಗೆ ಒತ್ತಿಹೇಳಿದರು. ಕೇವಲ ಅವನಲ್ಲಿ ನಮ್ಮ ನಂಬಿಕೆ ಮತ್ತು ಭರವಸೆಯ ಕೊರತೆ, ನಮಗೇನನ್ನು ಅವನು ಮಾಡಲಿಕ್ಕಿದ್ದಾನೋ ಅದನ್ನು ಸೀಮಿತಗೊಳಿಸುತ್ತದೆ. ಅದೊಂದು ಎಂದಿಗೂ ನಾನು ಮರೆಯಲಾಗದ, ತಂದೆ ಮತ್ತು ಮಗನ ನಡುವಣ ಒಂದು ಅಮೂಲ್ಯ ಸಂಭಾಷಣೆಯಾಗಿತ್ತು.
ವಾಚ್ ಟವರ್ ಪ್ರಕಾಶನಗಳನ್ನು ಅಧ್ಯಯನಿಸುವುದು, ವಿಶೇಷವಾಗಿ 1939 ರಲ್ಲಿ ಪ್ರಕಾಶಿಸಲ್ಪಟ್ಟ ಸ್ಯಾಲೇಷ್ವನ್ ಪುಸ್ತಕವು ನನ್ನ ಬಾಲ್ಯದ ಜೀವಿತದ ಮೇಲೆ ಮಹತ್ತರವಾಗಿ ಪ್ರಭಾವಿಸಿತು. ಆ ಪುಸ್ತಕದ ನಾಟಕೀಯ ಆರಂಭದ ನಿದರ್ಶನವನ್ನು ನಾನೆಂದೂ ಮರೆಯಲಾರೆ: “ಪ್ರಯಾಣಿಕರ ಒಂದು ವೇಗದ ರೈಲುಬಂಡಿ, ಪ್ರಯಾಣಿಕರಿಂದ ಕಿಕ್ಕಿರಿದುಕೊಂಡು, ತಾಸಿಗೆ 160 ಕಿಲೋಮೀಟರು ವೇಗದಲ್ಲಿ ಧಾವಿಸುತ್ತಿತ್ತು. ಅದು 50 ಪ್ರತಿಶತದಷ್ಟು ತಿರುವು ಇರುವ ಒಂದು ಸೇತುವೆಯಿಂದ ನದಿಯೊಂದನ್ನು ದಾಟಬೇಕಿತ್ತು, ಆ ತಿರುವು ಎಷ್ಟೆಂದರೆ ರೈಲುಬಂಡಿಯ ಕೊನೆಯಲ್ಲಿರುವವನು ಎಂಜಿನ್ನನ್ನು ಕಾಣಶಕ್ತನು . . . ಈ ಕೊನೆಯ ಬಂಡಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪುರುಷರು . . . ಸೇತುವೆಯ ಆಚೇದೂರದ ಕೊನೆಯ ಕಮಾನಿಗೆ ಬೆಂಕಿಹಿಡಿದು, ನದಿಯೊಳಗೆ ಬೀಳುವುದನ್ನು ಕಾಣುತ್ತಾರೆ. ಅವರೊಂದು ಮಹಾ ಗಂಡಾಂತರವನ್ನು ಎದುರಿಸುತ್ತಿದ್ದಾರೆ ಎಂದವರು ಗ್ರಹಿಸಿದರು. ಅದೊಂದು ನಿಜವಾಗಿಯೂ ತುರ್ತಿನ ಸ್ಥಿತಿಯಾಗಿತ್ತು. ಒಳಗಿದ್ದ ಅನೇಕ ಪ್ರಯಾಣಿಕರ ಜೀವಗಳನ್ನು ಉಳಿಸಲಿಕ್ಕಾಗಿ ತಕ್ಕ ಸಮಯದೊಳಗೆ ರೈಲುಬಂಡಿಯನ್ನು ನಿಲ್ಲಿಸಸಾಧ್ಯವಿತ್ತೋ?”
ಈ ನಿದರ್ಶನವನ್ನು ಅನ್ವಯಿಸಿ, ಪುಸ್ತಕವು ಸಮಾಪ್ತಿಗೊಳಿಸಿದ್ದು: “ತದ್ರೀತಿಯಲ್ಲಿ ಇಂದು, ಭೂಮಿಯ ಎಲ್ಲಾ ಜನಾಂಗಗಳು ಮತ್ತು ಜನರು ಒಂದು ಅತಿ ಮಹತ್ತಾದ ತುರ್ತಿನ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅರ್ಮಗೆದೋನಿನ ವಿಪತ್ತು ಕೇವಲ ಎದುರಿನಲ್ಲಿ ಇದೆ ಎಂದು ದೇವರು ಆಜ್ಞಾಪಿಸಿದಂತೆ ಅವರಿಗೆ ಎಚ್ಚರಿಸಲಾಗುತ್ತಿದೆ. . . . ಎಚ್ಚರಿಕೆಯನ್ನು ಕೊಟ್ಟಾದ ನಂತರ, ಹೀಗೆ ಎಚ್ಚರಿಸಲ್ಪಟ್ಟ ಪ್ರತಿಯೊಬ್ಬನು ಅವನು ತೆಗೆದುಕೊಳ್ಳಲಿರುವ ಪಥವನ್ನು ಈಗ ಆರಿಸಬೇಕಾಗಿದೆ.”
ಧಾವಿಸುತ್ತಿರುವ ರೈಲುಬಂಡಿ, ಉರಿಯುತ್ತಿರುವ ಸೇತುವೆ, ಮತ್ತು ಸಾರುವ ಕಾರ್ಯದ ಜರೂರಿ ನನ್ನ ಮನಸ್ಸಿನಲ್ಲಿ ಅಳಿಸಲಾಗದ ರೀತಿಯಲ್ಲಿ ಕೆತ್ತಲ್ಪಟ್ಟವು.
ಆರಂಭದ ಸಾರುವ ಚಟುವಟಿಕೆ
ನಾನು 1938 ರಲ್ಲಿ, ಐದು ವರುಷದವನಾಗಿದ್ದಾಗ ಸಾರುವ ಕಾರ್ಯದಲ್ಲಿ ಪಾಲಿಗನಾಗಲು ಆರಂಭಿಸಿದೆನು. ಇಬ್ಬರು ಪಯನೀಯರರುಗಳಾದ (ಪೂರ್ಣ ಸಮಯದ ಶುಶ್ರೂಷಕರು), ಹೆನ್ರಿ ಮತ್ತು ಆಲೀಸ್ ಟೀಡ್ವ್ ನನ್ನನ್ನು ಅವರೊಂದಿಗೆ ಕರೆದೊಯ್ಯುತ್ತಿದ್ದರು, ಮತ್ತು ನಾವು ದಿನವೊಂದಕ್ಕೆ 10 ರಿಂದ 12 ತಾಸುಗಳ ತನಕ ಜನರೊಂದಿಗೆ ಮಾತಾಡುವುದರಲ್ಲಿ ಕಳೆಯುತ್ತಿದ್ದೆವು. ಯೆಹೋವನ ಸೇವೆಯಲ್ಲಿ ಆ ಪೂರ್ಣ ದಿನಗಳನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೆನು. ಆದುದರಿಂದ ಮರುವರ್ಷ ನಾನು ಪ್ರಚಾರಕನಾಗುವಂತೆ ಮತ್ತು ನಿಜಕ್ಕೂ ನನ್ನ ಚಟುವಟಿಕೆಯ ವರದಿಯನ್ನು ಮಾಡುವಂತೆ ತಂದೆ ಮತ್ತು ತಾಯಿ ಅನುಮತಿಯನ್ನಿತ್ತಾಗ ನಾನು ರೋಮಾಂಚಗೊಂಡೆನು.
ಆ ಆರಂಭಿಕ ಸಮಯಗಳಲ್ಲಿ, ನಾವು ಸುಳ್ಳು ಧರ್ಮವನ್ನು ಬಯಲುಗೊಳಿಸುವ ಮತ್ತು ದೇವರ ರಾಜ್ಯವನ್ನು ಘೋಷಿಸುವ ಗುರಿನುಡಿಗಳಿರುವ ಪ್ರಕಟನಪತ್ರಗಳನ್ನು [ಪ್ಲ್ಯಾಕಾರ್ಡ್] ತೂಗಿಸಿಕೊಂಡು ನಗರದ ಮುಖ್ಯರಸ್ತೆಗಳಲ್ಲಿ ನಡೆಯುತ್ತಾ, ಸಮಾಚಾರತಿಳಿಸುವ ನಡಗೆಗಳಲ್ಲಿ ತೊಡಗಿದ್ದೆವು. ನಾವು ಒಯ್ಯಲಾಗುವ ಫೊನೊಗ್ರಾಫ್ಗಳನ್ನು ಕೂಡ ಬಳಸಿದೆವು ಮತ್ತು ಮನೆಯವರ ಮೆಟ್ಟಲುಗಳಲ್ಲಿಯೇ ಬೈಬಲಾಧಾರಿತ ಸಂದೇಶಗಳನ್ನು ನುಡಿಸಿದೆವು. ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೆ. ಎಫ್. ರಥರ್ಫೊರ್ಡರ ಭಾಷಣಗಳನ್ನು ನಾವು ನುಡಿಸುತ್ತಿದ್ದೆವು, ಅವುಗಳಲ್ಲಿ ಕೆಲವನ್ನು ನಾನು ಕಂಠಪಾಠ ಮಾಡಿಕೊಂಡಿದ್ದೆನು. ಅವರು ಹೀಗೆಂದು ಹೇಳುವುದನ್ನು ನಾನು ಇನ್ನೂ ಕೂಡ ಕೇಳಬಲ್ಲೆನು: “ಧರ್ಮವು ಒಂದು ಉರುಲು ಮತ್ತು ಒಂದು ಮೋಸ ವಿದ್ಯೆ, ಎಂದು ಆಗಾಗ್ಗೆ ಹೇಳಲ್ಪಡುತ್ತದೆ!”
ಕೆನಡದಲ್ಲಿ ನಮ್ಮ ಕಾರ್ಯವು ನಿಷೇಧಿಸಲ್ಪಟ್ಟಿತು
ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಕಾರ್ಯವು ನಾಜಿ ಜರ್ಮನಿ ಮತ್ತು ಇನ್ನಿತರ ದೇಶಗಳಲ್ಲಿ ಮಾಡಲ್ಪಟ್ಟಂತೆಯೇ, ಕೆನಡದಲ್ಲೂ ನಿಷೇಧಿಸಲ್ಪಟ್ಟಿತು. ಆದುದರಿಂದ ನಾವು ಕೇವಲ ಬೈಬಲನ್ನು ಮಾತ್ರ ಬಳಸಿದೆವು, ಆದರೆ ನಮಗೆ ದೇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಕಾರ್ಯವನ್ನು ಬೈಬಲಿನ ಉಪದೇಶಗಳಿಗೆ ವಿಧೇಯತೆಯಲ್ಲಿ ಮಾಡುವುದನ್ನು ಮುಂದರಿಸಿದೆವು. (ಮತ್ತಾಯ 28:19, 20; ಅ. ಕೃತ್ಯಗಳು 5:29) ನಮ್ಮ ಕೂಟಗಳಲ್ಲಿ ಮತ್ತು ಮನೆಗಳಲ್ಲಿ ಪೊಲೀಸರ ದಿಢೀರ್ ದಾಳಿಗಳನ್ನು ನಿಭಾಯಿಸಲು ನಾವು ಕಲಿತೆವು. ನ್ಯಾಯಾಧೀಶರುಗಳ ಮುಂದೆ ಸಾಕ್ಷ್ಯಗಳನ್ನು ನೀಡುವುದರಲ್ಲಿ ಮತ್ತು ಪಾಟೀಸವಾಲುಗಾರರಿಗೆ ಉತ್ತರಿಸುವುದರಲ್ಲಿ ಸಹ ನಾವು ಅನುಭವಿಗಳಾದೆವು.
ನನ್ನ ಅಣ್ಣ ಜಿಮ್ ಮತ್ತು ನಾನು ಮೆಟ್ಟಲುಗಳಲ್ಲಿ ಮತ್ತು ಮೊಗಸಾಲೆ [ವ್ಯೆರಾಂಡ] ಗಳಲ್ಲಿ ಚಲಿಸುತ್ತಿರುವ ವಾಹನದಿಂದ ಪುಸ್ತಿಕೆಗಳನ್ನು ಹಾಕುವುದರಲ್ಲಿ ಪರಿಣಿತರಾದೆವು. ಇದಕ್ಕೆ ಕೂಡಿಸಿ, ತುರ್ತುಚಾರರಾಗಿ, ಮತ್ತು ಕೆಲವೊಮ್ಮೆ ಅಮೆರಿಕದಲ್ಲಿನ ಅಧಿವೇಶನಗಳಿಗೆ ಹಾಜರಾಗಲು ಗಡಿಗಳನ್ನು ದಾಟುವವರ ಕಾವಲುಗಾರರಾಗಿಯೂ ಕೆಲಸ ನಿರ್ವಹಿಸಿದೆವು.
ನಮ್ಮ ಮನೆಯು ಒಂಟಾರಿಯೊದ ಪೊರ್ಟ್ ಆರ್ಥರ್ (ಈಗ ಥಂಡರ್ ಬೇ)ಯ ಹೊರವಲಯದಲ್ಲಿದ್ದು, ಮರ, ಪೊದೆಗಳಿಂದ ಆವೃತವಾಗಿರುವ ಒಂದೆರಡು ಎಕ್ರೆ ಸ್ಥಳವಾಗಿತ್ತು. ನಮ್ಮಲ್ಲಿ ಒಂದು ದನ, ಒಂದು ಕರು, ಹಂದಿಗಳು, ಮತ್ತು ಕೋಳಿಗಳು ಇದ್ದವು—ಇವೆಲ್ಲವೂ ಜತೆ ಯುವ ಕ್ರೈಸ್ತರಿಗೆ—ಯಾರನ್ನು ದೇವರ ರಾಜ್ಯದ ಸಾರುವಿಕೆಗಾಗಿ ಸೆರೆಮನೆಗೆ ಹಾಕಲು ಬೆನ್ನಟ್ಟಿ ಬರುತ್ತಿದ್ದರೋ ಅವರಿಗೆ—ಸಹಾಯ ಮಾಡಲು ಒಳ್ಳೆಯ ವೇಷಬದಲಾವಣೆಯಾಗಿ ಕೆಲಸ ನಿರ್ವಹಿಸಿದವು.
ರಾತ್ರಿಯಲ್ಲಿ ಯುವ ಕ್ರೈಸ್ತರನ್ನು ಸಾಗಿಸುತ್ತಿದ್ದ ಕಾರುಗಳು, ಟ್ರಕ್ಗಳು, ಮತ್ತು ಟ್ರೆಯ್ಲರುಗಳು ಏಕಾಂತದಲ್ಲಿರುವ ನಮ್ಮ ಆವರಣದೊಳಗೆ ಆಗಮಿಸುತ್ತಿದ್ದವು ಮತ್ತು ನಿರ್ಗಮಿಸುತ್ತಿದ್ದವು. ನಾವು ಈ ಯುವಕರಿಗೆ ಬಿಡಾರ, ಮರೆದಾಣ, ವೇಷಮರೆ, ಮತ್ತು ಊಟವನ್ನು ನೀಡುತ್ತಿದ್ದೆವು ಮತ್ತು ತದನಂತರ ಅವರ ದಾರಿಯಲ್ಲಿ ಮುಂದರಿಯುವಂತೆ ಅವರನ್ನು ಕಳುಹಿಸುತ್ತಿದ್ದೆವು. ನನ್ನ ತಂದೆ ಮತ್ತು ತಾಯಿಯು ಇತರ ಆ ಆರಂಭಿಕ ಕೆಲಸಗಾರರೊಂದಿಗೆ ಪೂರ್ಣಾತ್ಮದ ಸೇವಕರಾಗಿದ್ದು, ಯೆಹೋವ ದೇವರನ್ನು ಸೇವಿಸಲು ಮತ್ತು ಪ್ರೀತಿಸಲು ನನ್ನ ಎಳೇ ಹೃದಯವನ್ನು ಪ್ರಭಾವಿಸಿದರು.
ಆಗಸ್ಟ್ 1941 ರಲ್ಲಿ, ಯೆಹೋವನಿಗೆ ನನ್ನ ಜೀವಿತವನ್ನು ಸಮರ್ಪಿಸಿಕೊಂಡೆನು ಮತ್ತು ದಟ್ಟವಾದ ಕಾಡುಗಳ ನಡುವೆ ಇರುವ ಒಂದು ಚಿಕ್ಕ ಸರೋವರದಲ್ಲಿ ನಾನು ದೀಕ್ಷಾಸ್ನಾನ ಹೊಂದಿದೆನು. ಒಂದು ದೀಪದ ಬೆಳಕಿನ ಕ್ಯಾಬಿನ್ನಲ್ಲಿ ರಾತ್ರಿ ತಡವಾಗಿ ಈ ಘಟನೆಗೆ ನಾವು ಅನೇಕರು ಒಟ್ಟುಗೂಡಿದ್ದೆವು. ಅನುಮಾನಗೊಂಡವರಾಗಿ, ಪೊಲೀಸರು ಗಸ್ತು ತಿರುಗುತ್ತಾ ಶೋಧನ ದೀಪಗಳೊಂದಿಗೆ ಸರೋವರವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಇದ್ದರು, ಆದರೆ ನಮ್ಮನ್ನು ಕಂಡುಹಿಡಿಯಲಾಗಲಿಲ್ಲ.
ಪೂರ್ಣ ಸಮಯ ಸೇವೆಯ ಅನೇಕ ಲಕ್ಷಣಗಳು
ನಾನು 1951 ರಲ್ಲಿ ಹೈಸ್ಕೂಲಿನಿಂದ ಪದವೀಧರನಾದೆನು ಮತ್ತು ಒಂಟಾರಿಯೊದ ಕೊಬರ್ಗ್ನಲ್ಲಿ ಒಂದು ಪಯನೀಯರ್ ನೇಮಕವನ್ನು ವಹಿಸಿಕೊಳ್ಳಲು ಸುಮಾರು 1,600 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿದೆನು. ಸಭೆಯು ಚಿಕ್ಕದಾಗಿತ್ತು, ಮತ್ತು ನನಗೆ ಪಯನೀಯರ್ ಸಹಭಾಗಿ ಇರಲಿಲ್ಲ. ಆದರೆ ಯೆಹೋವನ ಹಸ್ತವು ಮೋಟುಗೈಯಲ್ಲ ಎಂದು ನೆನಪಿಸುತ್ತಾ, ನಾನೊಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡೆನು, ಸ್ವಂತವಾಗಿ ನನ್ನ ಅಡಿಗೆ ಮಾಡಿಕೊಂಡೆನು, ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಸಂತೋಷಿತನಾಗಿದ್ದೆನು. ಮರುವರುಷ ಟೊರಾಂಟೊದಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ ಸೇವೆ ಮಾಡಲು ನನ್ನನ್ನು ಆಮಂತ್ರಿಸಲಾಯಿತು. ಮುಂದಿನ ರಾಜ್ಯ ಸೇವೆಗಾಗಿ ಅಲ್ಲಿ ನನ್ನನ್ನು ಪರಿಶೋಧಿತನಾಗಿ ಮಾಡಿದ ಅನೇಕ ಬೆಲೆಬಾಳುವ ಪಾಠಗಳನ್ನು ನಾನು ಅಲ್ಲಿ ಕಲಿತೆನು.
ಟೊರಾಂಟೊದಲ್ಲಿ ಪಯನೀಯರನಾಗಿ ಒಂದು ವರುಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಸೇವೆಮಾಡಿದ ನಂತರ, ಲೂಸಿ ಟ್ರುಡಿ ಮತ್ತು ನಾನು ವಿವಾಹಿತರಾದೆವು, ಮತ್ತು 1954ರ ಚಳಿಗಾಲದಲ್ಲಿ ಕ್ಯುಬೆಕ್ನ ಲೆವಿಸ್ಗೆ ಒಂದು ಪಯನೀಯರ್ ನೇಮಕವು ನಮಗೆ ದೊರಕಿತು. ಹವಾಮಾನವು ಕಡು ಚಳಿಯಾಗಿತ್ತು, ಗುಂಪುದೊಂಬಿ ಮತ್ತು ಪೊಲೀಸರ ಕಿರುಕುಳ ಭಯಹುಟ್ಟಿಸುವಂತಹದ್ದಾಗಿತ್ತು, ಮತ್ತು ಫ್ರೆಂಚ್ನ್ನು ಕಲಿಯುವುದು ಒಂದು ಪಂಥಾಹ್ವಾನವಾಗಿತ್ತು. ಅವೆಲ್ಲವುಗಳಲ್ಲಿ ಯೆಹೋವನ ಹಸ್ತವು ಎಂದಿಗೂ ಮೋಟಾಗಿರಲಿಲ್ಲ, ಕಷ್ಟಕರ ಸಮಯಗಳು ಅಲ್ಲಿದ್ದಾಗ್ಯೂ, ನಮಗೆ ಅನೇಕ ಆಶೀರ್ವಾದಗಳು ಸಹ ಅಲ್ಲಿದ್ದವು.
ಉದಾಹರಣೆಗೆ, 1955ರ ದೊಡ್ಡ ಅಂತಾರಾಷ್ಟ್ರೀಯ ಯೂರೋಪಿಯನ್ ಅಧಿವೇಶನಗಳಿಗಾಗಿ ಪ್ರತಿನಿಧಿಗಳನ್ನು ಕೊಂಡೊಯ್ಯಲು ಸೊಸೈಟಿಯು ಬಳಸಲು ಯೋಜಿಸಿದ ಎರಡು ಹಡಗಗಳನ್ನು (ದಿ ಆರೊಸ ಸ್ಟಾರ್ ಮತ್ತು ಆರೊಸ ಕಲ್ಮ್) ಪರೀಕ್ಷಿಸಲು ನಮ್ಮನ್ನು ಕೇಳಿಕೊಳ್ಳಲಾಯಿತು. ಸೊಸೈಟಿಯ ವ್ಯವಹಾರವನ್ನು ಪಡೆದುಕೊಳ್ಳುವ ಆತುರತೆಯಿಂದ, ಶಿಪ್ಪಿಂಗ್ ಕಂಪನಿಯ ಕಾರ್ಯನಿರ್ವಾಹಕರು ನಮಗೆ ಸಂದರ್ಭಾನುಸಾರವಾಗಿ ಆತಿಥ್ಯಾದರವನ್ನು ತೋರಿಸಿದರು, ಆ ಸಮಯದಲ್ಲಿ ಕ್ಯುಬೆಕ್ನ ಒತ್ತಡಭರಿತ ಶುಶ್ರೂಷೆಯಿಂದ ಅದೊಂದು ಆಹ್ಲಾದಕರ ಬದಲಿಯಾಗಿತ್ತು.
ಇಸವಿ 1955ರ ಶರತ್ಕಾಲದಲ್ಲಿ, ಸಂಚರಣೆ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುವಂತೆ ನನ್ನನ್ನು ಆಮಂತ್ರಿಸಲಾಯಿತು, ಮತ್ತು ಆ ಚಳಿಗಾಲವನ್ನು ನಾವು ಕೊರೆಯುವ ಚಳಿಯಿರುವ ಉತ್ತರ ಒಂಟಾರಿಯೊದಲ್ಲಿನ ದೂರಪ್ರದೇಶದ ಸಭೆಗಳನ್ನು ಸಂದರ್ಶಿಸುವುದರಲ್ಲಿ ಕಳೆದೆವು. ಮುಂದಿನ ವರ್ಷ ನಾವು ಅಮೆರಿಕದಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಹಾಜರಾದೆವು, ಮತ್ತು ಅನಂತರ ನಮ್ಮನ್ನು ಮಿಷನೆರಿಗಳಾಗಿ ದಕ್ಷಿಣ ಅಮೆರಿಕದ ಬ್ರೆಸೀಲ್ಗೆ ನೇಮಿಸಲಾಯಿತು.
ನಮ್ಮ ಹೊಸ ನೇಮಕದಲ್ಲಿ ನಾವು ನಮ್ಮ ಹೃದಯಾತ್ಮಗಳನ್ನು ಹಾಕಿದೆವು ಮತ್ತು ಬಲುಬೇಗನೆ ಪೋರ್ಟ್ಯುಗೀಸ್ ಭಾಷೆಯಲ್ಲಿ ಸಾರಲು ಮತ್ತು ಕಲಿಸಲು ನಾವು ಶಕ್ತರಾದೆವು. ಇಸವಿ 1957ರ ಆರಂಭದಲ್ಲಿ, ನನಗೆ ಪುನಃ ಸಂಚಾರ ಮೇಲ್ವಿಚಾರಕನಾಗಿ ಕೆಲಸಮಾಡಲು ನೇಮಿಸಲಾಯಿತು. ಈಗ ಉತ್ತರದ ಕೊರೆಯುವ ಚಳಿಯ ಬದಲಾಗಿ, ಬೊಕ್ಕೆಯೆಬ್ಬಿಸುವ ತಾಪದೊಂದಿಗೆ ನಾವು ಹೋರಾಡಬೇಕಿತ್ತು. ನಮ್ಮ ಪಾದರಕ್ಷೆಗಳಿಂದ ಉರಿಯುವ ಮರಳನ್ನು ತೆಗೆಯಲು ಯಾ ಕಬ್ಬನ್ನು ಕಡಿದು ಜಗಿಯುತ್ತಾ ನಮ್ಮ ಶಕ್ತಿಯನ್ನು ಪುನಃ ತುಂಬಿಸಲು ನಾವು ಹಲವು ಬಾರಿ ನಿಂತುಕೊಳ್ಳಬೇಕಾಗುತ್ತಿತ್ತು. ಆದರೆ ಅಲ್ಲಿ ಆಶೀರ್ವಾದಗಳು ಇದ್ದವು.
ರೆಸಂಟಿ ಫೆಸೂನ ನಗರದಲ್ಲಿ, ನಾನು ಪೊಲೀಸರ ಮುಖ್ಯಸ್ಥನೊಂದಿಗೆ ಮಾತಾಡಿದೆನು, ಮತ್ತು ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಅವನು ಆಜ್ಞೆಯನ್ನಿತ್ತನು ಮತ್ತು ನಗರ ಚೌಕಕ್ಕೆ ಪ್ರತಿಯೊಬ್ಬನು ಹೋಗುವಂತೆ ಹೇಳಿದನು. ಹೂಬಿಟ್ಟಿರುವ ಅಗಲ ಎಲೆಗಳ ಒಂದು ಮರದ ನೆರಳಿನ ಕೆಳಗೆ, ನಗರದ ಎಲ್ಲಾ ಜನರಿಗೆ ನಾನು ಒಂದು ಬೈಬಲ್ ಭಾಷಣವನ್ನು ನೀಡಿದೆನು. ಇಂದು ಅಲ್ಲಿ ಸಾಕ್ಷಿಗಳ ಒಂದು ಸಭೆಯಿದೆ.
ನಮ್ಮ ಮಕ್ಕಳನ್ನು ಬ್ರೆಸೀಲ್ನಲ್ಲಿ ಬೆಳಸುವುದು
ಲೂಸಿಯು 1958 ರಲ್ಲಿ ಗರ್ಭವತಿಯಾದಾಗ, ನಾವು ವಿಶೇಷ ಪಯನೀಯರರಾಗಿ ಸೇವೆ ಸಲ್ಲಿಸಿ, ಜೂಯಿಸ್ ಡಿ ಫೊರಾದಲ್ಲಿ ನೆಲೆಸಿದೆವು. ಅನಂತರದ ಎರಡು ವರ್ಷಗಳಲ್ಲಿ, ನಮ್ಮ ಪುತ್ರಿಯರಾದ ಸೂಸಾನ್ ಮತ್ತು ಕಿಮ್ ಜನಿಸಿದರು. ಶುಶ್ರೂಷೆಯಲ್ಲಿ ಅವರು ನಿಜ ಆಶೀರ್ವಾದಗಳಾಗಿ ಪರಿಣಮಿಸಿದರು, ನಗರದಲ್ಲಿ ಒಂದು ನವೀನ ವಸ್ತುವಾದರು. ಕಲ್ಲುಗುಂಡುಗಳ ರಸ್ತೆಗಳ ಮೇಲೆ ಅವರ ತಳ್ಳುಬಂಡಿಯನ್ನು ದೂಡುತ್ತಿದ್ದ ಹಾಗೆಯೇ, ಜನರು ಅವರನ್ನು ನೋಡಲು ಹೊರಗೆ ಬರುತ್ತಿದ್ದರು. ಭೂಮಧ್ಯ ರೇಖೆಯ ದಕ್ಷಿಣದಲ್ಲಿಯೇ ಇರುವ ರೆಸಿಫೆಯಲ್ಲಿ ರಾಜ್ಯ ಪ್ರಚಾರಕರ ದೊಡ್ಡ ಜರೂರಿ ಇದ್ದುದರಿಂದ, ನಾವು ಆ ಅತಿ ಉಷ್ಣದ ಸ್ಥಳಕ್ಕೆ ಹೋದೆವು.
ಇಸವಿ 1961 ರಲ್ಲಿ, ಸಾವೊ ಪೌಲೊದಲ್ಲಿನ ಅಧಿವೇಶನಕ್ಕೆ ಹೋಗಲು ವಿಮಾನ ಪ್ರಯಾಣವನ್ನು ಸಾಕ್ಷಿಗಳಿಗೆ ಏರ್ಪಡಿಸಲು ಸಹಾಯಿಸುವುದರಲ್ಲಿ ನಾನು ಶಕ್ತನಾದದ್ದು ಮಾತ್ರವಲ್ಲ, ನಾನು ಕೂಡ ಆ ಸ್ಮರಣೀಯ ಅಧಿವೇಶನಕ್ಕೆ ಸ್ವತಃ ಹಾಜರಾಗುವಂತಾಯಿತು. ಆದಾಗ್ಯೂ, ವಾಯುಯಾನದ ಸುಮಾರು 20 ನಿಮಿಷಗಳ ನಂತರ, ವಿಮಾನವು ಹಠಾತ್ತಾಗಿ ಭೂಮುಖವಾಗಿ ಕೆಳಕ್ಕೆ ಧುಮಕಿ, ಪ್ರಯಾಣಿಕರನ್ನು ಕ್ಯಾಬಿನ್ನ ಸುತ್ತಲೂ ಎಸೆಯಿತು. ವಿಮಾನದ ಒಳಭಾಗವು ಜರ್ಜರಿತಗೊಂಡಿತು; ಆಸನಗಳು ಅವುಗಳ ನೆಲೆಯಿಂದ ತಿರುಚಿ ಕೀಳಲ್ಪಟ್ಟವು, ಮತ್ತು ಪ್ರಯಾಣಿಕರಿಗೆ ಗಾಯಗಳಾದವು ಮತ್ತು ರಕ್ತ ಸುರಿಯಲಾರಂಭಿಸಿತು. ಸಂತಸಕರವಾಗಿಯೇ, ವಿಮಾನ ಚಾಲಕನು ಅದರ ಬೀಳಿಕ್ವೆಯಿಂದ ವಿಮಾನವನ್ನು ಹೊರಕ್ಕೆಳೆಯಶಕ್ತನಾದನು, ಮತ್ತು ನಾವು ಸುರಕ್ಷಿತವಾಗಿ ಇಳಿದೆವು. ಇನ್ನೊಂದು ವಿಮಾನದಲ್ಲಿ ಸಾವೊ ಪೌಲೋಗೆ ಮುಂದರಿಯಲಾಗದಷ್ಟು ಕೆಟ್ಟದ್ದಾಗಿ ನಮ್ಮಲ್ಲಿ ಯಾರೂ ಗಾಯಗೊಂಡಿರಲಿಲ್ಲ. ನಾವು ಒಂದು ಆಶ್ಚರ್ಯಭರಿತ ಅಧಿವೇಶನದಲ್ಲಿ ಆನಂದಿಸಿದೆವು, ಆದರೆ ನಾನೆಂದೂ ಪುನಃ ವಿಮಾನ ಯಾನ ಮಾಡುವುದಿಲ್ಲ ಎಂದು ಹೇಳಿದೆ!
ಆದಾಗ್ಯೂ, ಅಧಿವೇಶನದಿಂದ ಮನೆಗೆ ಬಂದಾಗ, ನನಗೆ ಇನ್ನೊಂದು ನೇಮಕವು ಕಾದಿತ್ತು. ಪೀಯಾಇ ಪ್ರಾಂತದ ಟೆರಿಸಿನದ ಒಂದು ದಟ್ಟವಾದ ಅರಣ್ಯದಲ್ಲಿ ನಡೆಯುವ ಅಧಿವೇಶನ ಉಸ್ತುವಾರಿಯನ್ನು ನಾನು ತೆಗೆದುಕೊಳ್ಳಬೇಕಿತ್ತು. ಅಲ್ಲಿಗೆ ನಾನು ವಿಮಾನದಲ್ಲಿಯೇ ಪ್ರಯಾಣಿಸಬೇಕು. ಅಂಜಿದೆನಾದರೂ, ನಾನು ಯೆಹೋವನ ಹಸ್ತದ ಮೇಲೆ ಆತುಕೊಂಡು ನೇಮಕವನ್ನು ಸ್ವೀಕರಿಸಿದೆ.
ಇಸವಿ 1962 ರಲ್ಲಿ ನಮ್ಮ ಮಗ ಗ್ರೆಗ್ ರೆಸಿಫ್ನಲ್ಲಿ ಜನಿಸಿದನು. ಒಂದು ಬೆಳೆಯುವ ಕುಟುಂಬವು ನನಗೆ ಈಗ ಇದ್ದುದರಿಂದ, ನಾನು ಇನ್ನು ಮುಂದೆ ಪಯನೀಯರಿಂಗ್ ಮಾಡಲು ಶಕ್ತನಾಗಿಲ್ಲದಿದ್ದರೂ, ಚಿಕ್ಕ ಸಭೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ನಾನು ಬೀರಲು ಶಕ್ತನಾದೆನು. ಶುಶ್ರೂಷೆಯಲ್ಲಿ ನಮ್ಮೊಂದಿಗೆ ಜತೆಗೂಡಲು ಮಕ್ಕಳು ಯಾವಾಗಲೂ ಆತುರರಾಗಿದ್ದರು, ಯಾಕಂದರೆ ಅದನ್ನು ನಾವು ಅವರಿಗೆ ಆಸಕ್ತಿಯದ್ದಾಗಿ ಮಾಡಿದೆವು. ಅವರಲ್ಲಿ ಮೂರು ವರ್ಷ ವಯಸ್ಸಿನಿಂದ ಹಿಡಿದು ಪ್ರತಿಯೊಬ್ಬನು, ಮನೆಬಾಗಲಲ್ಲಿ ಒಂದು ನೀಡುವಿಕೆಯನ್ನು ಮಾಡಲು ಶಕ್ತನಾಗಿದ್ದನು. ಕೂಟಗಳಿಗೆ ಹಾಜರಾಗುವದನ್ನು ಮತ್ತು ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗುವುದನ್ನು ನಾವೆಂದಿಗೂ ತಪ್ಪಿಸದಂತಹ ಹವ್ಯಾಸವೊಂದನ್ನು ಮಾಡಿದ್ದೆವು. ಕುಟುಂಬದಲ್ಲಿ ಒಬ್ಬನು ಅಸ್ವಸ್ಥನಾದಾಗ ಮತ್ತು ಆ ರೋಗಿಯೊಂದಿಗೆ ಒಬ್ಬನು ಮನೆಯಲ್ಲಿ ನಿಲ್ಲುತ್ತಿದ್ದರೂ, ಉಳಿದವರು ಕೂಟಕ್ಕೆ ಹಾಜರಾಗುತ್ತಿದ್ದರು ಯಾ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲಿಗರಾಗುತ್ತಿದ್ದರು.
ಗತಿಸಿದ ವರುಷಗಳಲ್ಲಿ, ಮಕ್ಕಳ ಶಾಲೆಯ ಪಾಠಗಳನ್ನು ಮತ್ತು ಜೀವಿತದಲ್ಲಿ ಅವರ ಧ್ಯೇಯಗಳನ್ನು ಕುಟುಂಬವಾಗಿ ನಾವು ಕ್ರಮವಾಗಿ ಚರ್ಚಿಸುತ್ತಾ, ಯೆಹೋವನ ಸಂಸ್ಥೆಯಲ್ಲಿ ಒಂದು ಜೀವನೋದ್ಯೋಗಕ್ಕಾಗಿ ಅವರನ್ನು ಅಣಿಗೊಳಿಸುತ್ತಿದ್ದೆವು. ಟೆಲಿವಿಷನ್ನಂತಹ ದುರ್ಬಲಗೊಳಿಸುವ ಪ್ರಭಾವಗಳಿಗೆ ಅವರನ್ನು ಒಡ್ಡದಂತೆ ನಾವು ಜಾಗರೂಕರಾಗಿರುತ್ತಿದ್ದೆವು. ನಮ್ಮ ಮಕ್ಕಳು ತಮ್ಮ ಹದಿವಯಸ್ಸಿಗೆ ಬರುವ ತನಕ ನಮ್ಮ ಮನೆಯಲ್ಲಿ ಒಂದು ಟೀವೀ ಇರಲಿಲ್ಲ. ಮತ್ತು ನಮಗೆ ಆದಾಯ ಇತ್ತಾದರೂ, ಪ್ರಾಪಂಚಿಕ ವಸ್ತುಗಳಿಂದ ನಾವು ಅವರನ್ನು ಕೆಡಿಸಲಿಲ್ಲ. ಉದಾಹರಣೆಗೆ, ಅವರು ಮೂವರಿಂದಲೂ ಬಳಸಬಹುದಾದ ಕೇವಲ ಒಂದು ಬೈಸಿಕಲನ್ನು ನಾವು ಖರೀದಿಸಿದೆವು.
ಬಾಸ್ಕೆಟ್ಬಾಲ್ ಆಡಲು, ಈಜಾಡಲು, ಮತ್ತು ಕುಟುಂಬ ಪ್ರವಾಸಗಳನ್ನು ಮಾಡಲು, ಹೀಗೆ ಸಾಧ್ಯವಾಗುವಷ್ಟು ಮಟ್ಟಿಗೆ ನಾವು ವಿಷಯಗಳನ್ನು ಒಟ್ಟಾಗಿಮಾಡಿದೆವು. ನಮ್ಮ ಪ್ರವಾಸಗಳು ಕ್ರೈಸ್ತ ಅಧಿವೇಶನಗಳ ಹಾಜರಾಗುವಿಕೆ ಯಾ ವಿವಿಧ ದೇಶಗಳ ಬೆತೆಲ್ ಮನೆಗಳನ್ನು ಸಂದರ್ಶಿಸುವಿಕೆಯ ಸಂಬಂಧದಲ್ಲಿ ಇರುತ್ತಿದ್ದವು. ಈ ಪ್ರವಾಸಗಳು ಸ್ವಚ್ಛಂದವಾಗಿ ಒಟ್ಟಿಗೆ ಮಾತಾಡಲು ನಮಗೆ ಸಮಯವನ್ನಿತ್ತವು, ಆ ಮೂಲಕ ಲೂಸಿ ಮತ್ತು ನಾನು ನಮ್ಮ ಮಕ್ಕಳ ಹೃದಯದಲ್ಲಿ ಏನಿದೆ ಎಂದು ತಿಳಿಯಶಕ್ತರಾದೆವು. ಆ ಆನಂದಮಯ ವರುಷಗಳಿಗಾಗಿ ನಾವು ಯೆಹೋವನಿಗೆ ಬಹಳಷ್ಟು ಆಭಾರಿಗಳಾಗಿದ್ದೇವೆ!
ಕ್ರಮೇಣ, ಭೂಮಧ್ಯ ರೇಖೆಯಲ್ಲಿನ ಉಷ್ಣವಲಯದ ನಮ್ಮ ಹತ್ತು ವರ್ಷಗಳು ಲೂಸಿಯ ಆರೋಗ್ಯದ ಮೇಲೆ ಹಾನಿಕರ ಪರಿಣಾಮವನ್ನು ಉಂಟುಮಾಡಿದವು. ಆದುದರಿಂದ ಪರನಾ ಪ್ರಾಂತ್ಯದ ಕುರಿಟಿಬ್ಸ್ನಲ್ಲಿ, ದಕ್ಷಿಣದ ಹೆಚ್ಚು ಸೌಮ್ಯವಾದ ಹವಾಮಾನಕ್ಕೆ ನೇಮಕದ ಬದಲಾವಣೆಯೊಂದನ್ನು ನಾವು ಸುಸ್ವಾಗತಿಸಿದೆವು.
ಕೆನಡಕ್ಕೆ ಹಿಂತೆರಳುವಿಕೆ
ಇಸವಿ 1977 ರಲ್ಲಿ, ಬ್ರೆಸೀಲಿನಲ್ಲಿ ಸುಮಾರು 20 ವರುಷಗಳಾನಂತರ, ನನ್ನ ರೋಗಗ್ರಸ್ಥ ತಂದೆಯ ಪರಾಂಬರಿಕೆಯಲ್ಲಿ ಸಹಾಯಮಾಡಲು ನಮ್ಮ ಮಕ್ಕಳೊಂದಿಗೆ ಲೂಸಿ ಮತ್ತು ನಾನು ಕೆನಡಕ್ಕೆ ಹಿಂತೆರಳಿದೆವು. ನಮ್ಮ ಕುಟುಂಬಕ್ಕೆ ಎಂತಹ ಸಾಂಸ್ಕೃತಿಕ ಧಕ್ಕೆ ಇದಾಗಿತ್ತು! ಆದರೆ ಆತ್ಮಿಕವಾಗಿ ಇದೊಂದು ಧಕ್ಕೆಯಾಗಿರಲಿಲ್ಲ, ಯಾಕಂದರೆ ನಮ್ಮ ಪ್ರೀತಿಯ ಕ್ರೈಸ್ತ ಸಹೋದರತ್ವದೊಂದಿಗೆ ನಾವು ಏಕರೀತಿಯ ದಿನಚರಿಯನ್ನು ಕಾಪಾಡಿಕೊಂಡಿದ್ದೆವು.
ಕೆನಡದಲ್ಲಿ ನಮ್ಮ ಪುತ್ರಿಯರಲ್ಲಿ ಪ್ರತಿಯೊಬ್ಬಳು ಸರದಿಗನುಸಾರ ಪೂರ್ಣ ಸಮಯದ ಪಯನೀಯರ್ ಶುಶ್ರೂಷೆಯಲ್ಲಿ ಪ್ರವೇಶಿಸಿದರ್ದಿಂದ, ಪೂರ್ಣ ಸಮಯದ ಶುಶ್ರೂಷೆಯು ಕುಟುಂಬಕ್ಕೆ ಸಂಬಂಧಿಸಿದ ಒಂದು ಸಂಗತಿಯಾಯಿತು. ನಮ್ಮ ಕುಟುಂಬದ ಪ್ರಯತ್ನಕ್ಕೆ ನಾವೆಲ್ಲರೂ ಸಹಕಾರವನ್ನಿತ್ತೆವು. ನಮ್ಮ ಮನೆಯನ್ನು ಮತ್ತು ನಮ್ಮ ಚದರಿದ ಕಾರ್ಯಕ್ಷೇತ್ರವನ್ನು ಆವರಿಸಲು ಆವಶ್ಯಕವಾದ ಮೂರು ಕಾರುಗಳನ್ನು ನೋಡಿಕೊಳ್ಳಲು ಆಂಶಿಕ ಸಮಯದ ಕೆಲಸದಿಂದ ಬಂದ ಯಾವುದೇ ಆದಾಯವನ್ನು ವೆಚ್ಚದ ನಿಧಿಗೆ ಸೇರಿಸಲಾಗುತ್ತಿತ್ತು. ಪ್ರತಿವಾರ, ನಮ್ಮ ಕುಟುಂಬದ ಬೈಬಲ್ ಅಧ್ಯಯನದ ನಂತರ, ನಮ್ಮ ಕುಟುಂಬದ ಯೋಜನೆಗಳನ್ನು ನಾವು ಚರ್ಚಿಸಿದೆವು. ನಾವು ಎಲ್ಲಿ ಹೋಗುತ್ತಾ ಇದ್ದೇವೆ ಮತ್ತು ನಮ್ಮ ಜೀವಿತಗಳೊಂದಿಗೆ ನಾವೇನು ಮಾಡುತ್ತಾ ಇದ್ದೇವೆ ಎಂದು ಪ್ರತಿಯೊಬ್ಬರು ಖಚಿತಪಡಿಸಿಕೊಳ್ಳಲು ಈ ಚರ್ಚೆಗಳು ಸಹಾಯ ಮಾಡಿದವು.
ಅವನ ಅಕ್ಕಂದಿರಂತೆ, ನಮ್ಮ ಮಗ ಗ್ರೆಗ್ನಿಗೆ ಕೂಡ ಪೂರ್ಣ ಸಮಯದ ಶುಶ್ರೂಷೆಯು ಅವನ ಧ್ಯೇಯವಾಗಿ ಇತ್ತು. ಅವನು ಐದು ವರ್ಷದವನಾಗಿದ್ದಾಗಿನಿಂದಲೂ, ಬೆತೆಲ್ ಎಂದು ಕರೆಯಲ್ಪಡುವ ಸೊಸೈಟಿಯ ಬ್ರಾಂಚ್ ಆಫೀಸ್ ಒಂದರಲ್ಲಿ ಕೆಲಸಮಾಡುವ ಆಶೆಯನ್ನು ಅವನು ವ್ಯಕ್ತಪಡಿಸಿದ್ದನು. ಆ ಗುರಿಯ ನೋಟವನ್ನು ಅವನೆಂದೂ ಕಳೆದುಕೊಳ್ಳಲಿಲ್ಲ, ಮತ್ತು ಹೈಸ್ಕೂಲಿನಿಂದ ಪದವೀಧರನಾದ ಅನಂತರ, ಅವನ ತಾಯಿಗೆ ಮತ್ತು ನನಗೆ ಆತನು ವಿಚಾರಿಸಿದ್ದು: “ಬೆತೆಲಿಗೆ ನಾನು ಅರ್ಜಿಹಾಕಬೇಕೆಂದು ನೀವು ಎಣಿಸುತ್ತೀರೋ?”
ನಮ್ಮ ಮಗನು ನಮ್ಮನ್ನು ಬಿಟ್ಟು ಹೋಗುವುದು ನಮ್ಮ ಹೃದಯಕ್ಕೆ ತಟ್ಟಿದರೂ, ಯಾವುದೇ ಶಂಕೆಯಿಲ್ಲದೆ ನಾವು ಉತ್ತರಿಸಿದ್ದು: “ಯೆಹೋವನ ಸಂಸ್ಥೆಯ ಹೃದಯವೇ ಆಗಿರುವ ಬೆತೆಲಿನಲ್ಲಿ ಯೆಹೋವನ ಹಸ್ತವನ್ನು ಅನುಭವಿಸುವಷ್ಟು ಬೇರೆಲಿಯ್ಲೂ ಎಂದಿಗೂ ನೀನು ಅನುಭವಿಸಲಿಕ್ಕಿಲ್ಲ.” ಎರಡು ತಿಂಗಳುಗಳೊಳಗೆ ಅವನು ಕೆನಡದ ಬೆತೆಲಿಗೆ ಹೋದನು. ಅದು 1980 ರಲ್ಲಿ, ಮತ್ತು ಅಂದಿನಿಂದ ಅವನು ಅಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾನೆ.
ಲೂಸಿ ಮತ್ತು ನನಗೆ 1980ರ ದಶಕವು ಹೊಸ ಪಂಥಾಹ್ವಾನಗಳನ್ನು ತಂದವು. ನಾವು ಎಲ್ಲಿ ಆರಂಭಿಸಿದ್ದೇವೋ ಅಲ್ಲಿಗೆ ಮರಳಿದೆವು—ಕೇವಲ ನಾವು ಇಬ್ಬರೇ. ಅಷ್ಟರೊಳಗೆ ಸೂಸನ್ ಮದುವೆಯಾಗಿದ್ದಳು ಮತ್ತು ಅವಳ ಗಂಡನೊಂದಿಗೆ ಪಯನೀಯರಿಂಗ್ ಮಾಡುತ್ತಿದ್ದಳು, ಮತ್ತು ಕಿಮ್ ಮತ್ತು ಗ್ರೆಗ್ ಇಬ್ಬರೂ ಬೆತೆಲಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾವೇನು ಮಾಡುವುದು? ಆ ಪ್ರಶ್ನೆಯು ಬಲುಬೇಗನೆ 1981 ರಲ್ಲಿ, ಕೆನಡದ ಸುಮಾರು 2,000 ಕಿಲೊಮೀಟರುಗಳಷ್ಟು ಚಾಚಿರುವ ಪೋರ್ಟ್ಯುಗೀಸ್ ಸರ್ಕಿಟಿನಲ್ಲಿ ಸೇವೆ ಸಲ್ಲಿಸಲು ನಮ್ಮನ್ನು ಆಮಂತ್ರಿಸಿದಾಗ, ಉತ್ತರಿಸಲ್ಪಟ್ಟಿತು. ಸಂಚರಣ ಸೇವೆಯಲ್ಲಿ ನಾವು ಇನ್ನೂ ಆನಂದಿಸುತ್ತಾ ಇದ್ದೇವೆ.
ಕಿಮ್ ಅಷ್ಟರೊಳಗೆ ಮದುವೆಯಾಗಿದ್ದಳು ಮತ್ತು ಗಿಲ್ಯಡ್ಗೆ ಹಾಜರಾಗಿದ್ದಳು, ಮತ್ತು ಈಗ ಅವಳು ತನ್ನ ಗಂಡನೊಂದಿಗೆ ಬ್ರೆಸೀಲಿನಲ್ಲಿ ಸರ್ಕಿಟ್ ಕೆಲಸದಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸೂಸನ್ ಮತ್ತು ಅವಳ ಗಂಡನು ಇನ್ನೂ ಕೆನಡದಲ್ಲಿ ಇದ್ದು, ತಮ್ಮ ಇಬ್ಬರು ಮಕ್ಕಳನ್ನು ಪಾಲಿಸುತ್ತಿದ್ದಾರೆ, ಮತ್ತು ಸೂಸನಳ ಗಂಡನು ಪಯನೀಯರಿಂಗ್ ಮಾಡುತ್ತಿದ್ದಾನೆ. ಪೂರ್ಣ ಸಮಯದ ಸೇವೆಯಲ್ಲಿ ನಮ್ಮ ವಿವಿಧ ನೇಮಕಗಳ ಕಾರಣ ಶಾರೀರಿಕವಾಗಿ ನಮ್ಮ ಕುಟುಂಬ ಇತ್ತೀಚೆಗಿನ ವರುಷಗಳಲ್ಲಿ ಬೇರ್ಪಡಿಸಲ್ಪಟ್ಟಿದ್ದರೂ, ಆತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ನಿಕಟವಾಗಿ ಉಳಿದಿದ್ದೇವೆ.
ಲೂಸಿ ಮತ್ತು ನಾನು ಶುಭ್ರಗೊಳಿಸಲ್ಪಟ್ಟ ಭೂಮಿಯ ಮೇಲೆ ನಮ್ಮ ಕುಟುಂಬದೊಂದಿಗೆ ಒಂದು ಸಂತೋಷದ ಭವಿಷ್ಯವನ್ನು ಮುನ್ನೋಡುತ್ತಿದ್ದೇವೆ. (2 ಪೇತ್ರ 3:13) ಪ್ರಾಚೀನ ಕಾಲದ ಮೋಶೆಯಂತೆ, ಅರಣ್ಯಕಾಂಡ 11:23 ರಲ್ಲಿರುವ ಭಾವೋತ್ತೇಜನದ ಪ್ರಶ್ನೆಯ ಉತ್ತರದ ಸತ್ಯತೆಯನ್ನು ನಾವು ಸಾಕ್ಷಾತ್ತಾಗಿ ಅನುಭವಿಸಿದ್ದೇವೆ: “ಯೆಹೋವನ ಕೈ ಮೋಟುಗೈಯೋ; ನನ್ನ ಮಾತು ನೆರವೇರುತ್ತದೋ ಇಲ್ಲವೋ ಈಗ ನೀನು ನೋಡುವಿ.” ಖಂಡಿತವಾಗಿಯೂ, ಅವರ ಪೂರ್ಣ ಹೃದಯದ ಸೇವೆಗಾಗಿ ತನ್ನ ಸೇವಕರನ್ನು ಆಶೀರ್ವದಿಸುವುದರಿಂದ ಯೆಹೋವನನ್ನು ಯಾರೂ ತಡೆಗಟ್ಟಶಕ್ತರಲ್ಲ.
[ಪುಟ 25 ರಲ್ಲಿರುವ ಚಿತ್ರ]
ನನ್ನ ಹೆಂಡತಿ, ಲೂಸಿಯೊಂದಿಗೆ